Tag: ರಾಮೇಶ್ವರಂ ಕೆಫೆ ಬ್ಲಾಸ್ಟ್‌

  • ರಾಮಮಂದಿರ ಉದ್ಘಾಟನೆ ದಿನ ಮಲ್ಲೇಶ್ವರಂನ ಬಿಜೆಪಿ ಕಚೇರಿ ಸ್ಫೋಟಕ್ಕೆ ಸಂಚು – ರಾಮೇಶ್ವರಂ ಕೆಫೆ ಬ್ಲಾಸ್ಟ್ ಪ್ರಕರಣಕ್ಕೆ ಟ್ವಿಸ್ಟ್

    ರಾಮಮಂದಿರ ಉದ್ಘಾಟನೆ ದಿನ ಮಲ್ಲೇಶ್ವರಂನ ಬಿಜೆಪಿ ಕಚೇರಿ ಸ್ಫೋಟಕ್ಕೆ ಸಂಚು – ರಾಮೇಶ್ವರಂ ಕೆಫೆ ಬ್ಲಾಸ್ಟ್ ಪ್ರಕರಣಕ್ಕೆ ಟ್ವಿಸ್ಟ್

    – ಎನ್‌ಐಎ ಚಾರ್ಜ್‌ಶೀಟ್‌ನಲ್ಲಿ ಸ್ಫೋಟಕ ಅಂಶ ಬಯಲು

    ಬೆಂಗಳೂರು: ರಾಮೇಶ್ವರಂ ಕೆಫೆ ಸ್ಫೋಟ (Rameshwaram Cafe Blast) ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಸೋಮವಾರ ನಾಲ್ವರು ಆರೋಪಿಗಳ ವಿರುದ್ಧ ಚಾರ್ಜ್‌ಶೀಟ್‌ ಸಲ್ಲಿಸಿದೆ.

    ಆರೋಪಿಗಳನ್ನು ಮುಸ್ಸಾವಿರ್ ಹುಸೇನ್ ಶಾಜಿಬ್, ಅಬ್ದುಲ್ ಮಥೀನ್ ಅಹ್ಮದ್ ತಾಹಾ, ಮಾಜ್ ಮುನೀರ್ ಅಹ್ಮದ್ ಮತ್ತು ಮುಝಮ್ಮಿಲ್ ಷರೀಫ್ ಎಂದು ಗುರುತಿಸಲಾಗಿದ್ದು, ಐಪಿಸಿ, ಯುಎ (ಪಿ) ಆಕ್ಟ್, ಸ್ಫೋಟಕ ವಸ್ತುಗಳ ಕಾಯ್ದೆ ಮತ್ತು ಪಿಡಿಎಲ್‌ಪಿ ಕಾಯ್ದೆಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಚಾರ್ಜ್‌ಶೀಟ್‌ ಮಾಡಲಾಗಿದೆ. ಎಲ್ಲಾ ನಾಲ್ವರನ್ನು ಮೊದಲು ಬಂಧಿಸಲಾಗಿತ್ತು. ಈಗ ನ್ಯಾಯಾಂಗ ಬಂಧನದಲ್ಲಿದ್ದಾರೆ. ಇದನ್ನೂ ಓದಿ: ರಾಜ್ಯಕ್ಕೆ ಕೇಂದ್ರದಿಂದ ಮತ್ತೊಂದು ಗಿಫ್ಟ್; ಹುಬ್ಬಳ್ಳಿ-ಪುಣೆ ವಂದೇ ಭಾರತ್ ರೈಲು ಸಂಚಾರಕ್ಕೆ ಅಸ್ತು

    ಐಟಿಪಿಎಲ್ ಬೆಂಗಳೂರಿನ ಬ್ರೂಕ್‌ಫೀಲ್ಡ್‌ನ ರಾಮೇಶ್ವರಂ ಕೆಫೆಯಲ್ಲಿ ಈ ವರ್ಷ ಮಾ.1 ರಂದು ಸಂಭವಿಸಿದ ಐಇಡಿ ಸ್ಫೋಟದಲ್ಲಿ ಒಂಬತ್ತು ಜನರು ಗಾಯಗೊಂಡಿದ್ದಾರೆ. ಹೋಟೆಲ್ ಆಸ್ತಿಗೆ ವ್ಯಾಪಕವಾಗಿ ಹಾನಿಯಾಗಿದೆ.

    ಮಾ.3 ರಂದು ಪ್ರಕರಣದ ತನಿಖೆಯನ್ನು ಆರಂಭಿಸಿದ ಎನ್‌ಐಎ, ವಿವಿಧ ರಾಜ್ಯ ಪೊಲೀಸ್ ಪಡೆಗಳು ಮತ್ತು ಇತರ ಏಜೆನ್ಸಿಗಳ ಸಮನ್ವಯದಲ್ಲಿ ಹಲವಾರು ತಾಂತ್ರಿಕ ಮತ್ತು ಕ್ಷೇತ್ರ ತನಿಖೆಯನ್ನು ನಡೆಸಿತು. ಶಜೀಬ್ ಬಾಂಬ್ ಇಟ್ಟಿದ್ದ ವ್ಯಕ್ತಿ ಎಂಬುದು ತನಿಖೆಯಿಂದ ತಿಳಿದುಬಂದಿದೆ. ಆತ ತಾಹಾ ಜೊತೆಗೆ, ಈ ಹಿಂದೆ ಅಲ್-ಹಿಂದ್ ಮಾಡ್ಯೂಲ್ ಅನ್ನು ಸ್ಫೋಟಿಸಿದ ನಂತರ 2020 ರಿಂದ ತಲೆಮರೆಸಿಕೊಂಡಿದ್ದ. ರಾಮೇಶ್ವರಂ ಕೆಫೆ ಸ್ಫೋಟದ 42 ದಿನಗಳ ನಂತರ ಪಶ್ಚಿಮ ಬಂಗಾಳದ ಅವರ ಅಡಗುತಾಣದಿಂದ ಎನ್‌ಐಎ ನಡೆಸಿದ ವ್ಯಾಪಕ ಶೋಧನೆಗಳು ಅವರನ್ನು ಬಂಧಿಸಲು ಕಾರಣವಾಗಿವೆ. ಇದನ್ನೂ ಓದಿ: ಪ್ರಜ್ವಲ್ ರೇವಣ್ಣ ವಿರುದ್ಧ ಮತ್ತೊಂದು ಚಾರ್ಜ್‌ಶೀಟ್‌ ಸಲ್ಲಿಕೆ – ಗನ್ನಿಕಡ ತೋಟದ ಮನೆ ರಹಸ್ಯದ ಬಗ್ಗೆಯೂ ಉಲ್ಲೇಖ!

    ಕರ್ನಾಟಕದ ಶಿವಮೊಗ್ಗ ಜಿಲ್ಲೆಯವರಾದ ಇಬ್ಬರು ವ್ಯಕ್ತಿಗಳು ಐಸಿಸ್ ಮೂಲಭೂತವಾದಿಗಳಾಗಿದ್ದು, ಈ ಹಿಂದೆ ಸಿರಿಯಾದ ಐಸಿಸ್ ಪ್ರಾಂತ್ಯಗಳಿಗೆ ಹಿಜ್ರಾ ಮಾಡಲು ಸಂಚು ರೂಪಿಸಿದ್ದರು. ಅವರು ಇತರ ಮೋಸಗಾರ ಮುಸ್ಲಿಂ ಯುವಕರನ್ನು ಐಸಿಸ್ ಸಿದ್ಧಾಂತಕ್ಕೆ ತೀವ್ರಗಾಮಿಗೊಳಿಸುವಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಮಾಜ್ ಮುನೀರ್ ಅಹ್ಮದ್ ಮತ್ತು ಮುಝಮ್ಮಿಲ್ ಶರೀಫ್ ಅಂತಹ ಯುವಕರಲ್ಲಿ ಸೇರಿದ್ದಾರೆ.

    ತಾಹಾ ಮತ್ತು ಶಾಜಿಬ್ ಮೋಸದಿಂದ ಪಡೆದ ಭಾರತೀಯ ಸಿಮ್ ಕಾರ್ಡ್‌ಗಳು ಮತ್ತು ಭಾರತೀಯ ಬ್ಯಾಂಕ್ ಖಾತೆಗಳನ್ನು ಬಳಸಿದ್ದರು. ಡಾರ್ಕ್ ವೆಬ್‌ನಿಂದ ಡೌನ್‌ಲೋಡ್ ಮಾಡಿದ ವಿವಿಧ ಭಾರತೀಯ ಮತ್ತು ಬಾಂಗ್ಲಾದೇಶದ ಗುರುತಿನ ದಾಖಲೆಗಳನ್ನು ಸಹ ಬಳಸಿದ್ದಾರೆ. ಎಲ್‌ಇಟಿ ಬೆಂಗಳೂರು ಪಿತೂರಿ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಮೊಹಮ್ಮದ್ ಶಹೀದ್ ಫೈಸಲ್‌ಗೆ ಮಾಜಿ ಅಪರಾಧಿ ಶೋಯೆಬ್ ಅಹ್ಮದ್ ಮಿರ್ಜಾ ಎಂಬಾತ ತಾಹಾಳನ್ನು ಪರಿಚಯಿಸಿದ್ದ ಎಂಬುದು ತನಿಖೆಯಿಂದ ತಿಳಿದುಬಂದಿದೆ. ತಾಹಾ ನಂತರ ತನ್ನ ಹ್ಯಾಂಡ್ಲರ್ ಆಗಿರುವ ಫೈಸಲ್‌ನನ್ನು ಅಲ್-ಹಿಂದ್ ಐಸಿಸ್ ಮಾಡ್ಯೂಲ್ ಪ್ರಕರಣದ ಆರೋಪಿ ಮೆಹಬೂಬ್ ಪಾಷಾಗೆ ಮತ್ತು ಐಸಿಸ್ ದಕ್ಷಿಣ ಭಾರತದ ಅಮೀರ್ ಖಾಜಾ ಮೊಹಿದೀನ್‌ಗೆ ಮತ್ತು ನಂತರ ಮಾಜ್ ಮುನೀರ್ ಅಹ್ಮದ್‌ಗೆ ಪರಿಚಯಿಸಿದನು.

    ತಾಹಾ ಮತ್ತು ಶಾಜಿಬ್ ಕ್ರಿಪ್ಟೋ ಕರೆನ್ಸಿಗಳ ಮೂಲಕ ಅವರ ಹ್ಯಾಂಡ್ಲರ್‌ನಿಂದ ಹಣವನ್ನು ನೀಡಲಾಯಿತು. ಇದನ್ನು ತಾಹಾ ವಿವಿಧ ಟೆಲಿಗ್ರಾಮ್ ಆಧಾರಿತ ಪ್ಲಾಟ್‌ಫಾರ್ಮ್ಗಳ ಸಹಾಯದಿಂದ ಫಿಯೆಟ್‌ಗೆ ಪರಿವರ್ತಿಸಿತು. ಈ ಹಣವನ್ನು ಆರೋಪಿಗಳು ಬೆಂಗಳೂರಿನಲ್ಲಿ ವಿವಿಧ ಹಿಂಸಾಚಾರಗಳನ್ನು ನಡೆಸಲು ಬಳಸುತ್ತಿದ್ದರು ಎಂದು ತನಿಖೆಯಲ್ಲಿ ಮತ್ತಷ್ಟು ತಿಳಿದುಬಂದಿದೆ. 2024 ರ ಜನವರಿ 22 ರಂದು ಅಯೋಧ್ಯೆಯಲ್ಲಿ ಪ್ರಾಣ ಪ್ರತಿಷ್ಠಾ ಸಮಾರಂಭದ ದಿನದಂದು ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ರಾಜ್ಯ ಬಿಜೆಪಿ ಕಚೇರಿಯಲ್ಲಿ ವಿಫಲವಾದ ಐಇಡಿ ದಾಳಿಯು ಇದರಲ್ಲಿ ಸೇರಿದೆ. ನಂತರ ಇಬ್ಬರು ಪ್ರಮುಖ ಆರೋಪಿಗಳು ರಾಮೇಶ್ವರಂ ಕೆಫೆ ಸ್ಫೋಟವನ್ನು ಯೋಜಿಸಿದ್ದರು. ಈ ಪ್ರಕರಣದ ತನಿಖೆ ಮುಂದುವರಿದಿದೆ. ಇದನ್ನೂ ಓದಿ: ದರ್ಶನ್‌ ಜೊತೆಗೆ ಸಂಪರ್ಕ ಬೆಳೆದಿದ್ದು ಹೇಗೆ? – ಎಳೆಎಳೆಯಾಗಿ ಬಿಚ್ಚಿಟ್ಟ ಪವಿತ್ರಾಗೌಡ

  • ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣ – ಸಚಿವೆ ಶೋಭಾ ಕರಂದ್ಲಾಜೆಗೆ ಮದ್ರಾಸ್ ಹೈಕೋರ್ಟ್ ತರಾಟೆ

    ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣ – ಸಚಿವೆ ಶೋಭಾ ಕರಂದ್ಲಾಜೆಗೆ ಮದ್ರಾಸ್ ಹೈಕೋರ್ಟ್ ತರಾಟೆ

    – ಬಾಂಬರ್‌ಗಳಿಗೆ ತಮಿಳುನಾಡಿನಲ್ಲಿ ತರಬೇತಿ ನೀಡಿದೆ ಎಂದು ನಿಮಗೆ ಹೇಳಿದ್ಯಾರು? – ಹೈಕೋರ್ಟ್‌ ಕ್ಲಾಸ್‌

    ಚೈನೈ: ಬೆಂಗಳೂರಿನ ರಾಮೇಶ್ವರ ಕೆಫೆಯಲ್ಲಿ (Rameswaram Cafe Blast) ಬಾಂಬ್ ಸ್ಫೋಟಿಸಿದ ಆರೋಪಿಗಳು ತಮಿಳುನಾಡಿನಲ್ಲಿ ತರಬೇತಿ ಪಡೆದಿದ್ದರು ಎಂದು ಹೇಳಿಕೆ ನೀಡಿದ್ದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ವಿರುದ್ಧ ಮುದ್ರಾಸ್ ಹೈಕೋರ್ಟ್ (Madras High Court) ತೀವ್ರ ಅಸಮಧಾನ ವ್ಯಕ್ತಪಡಿಸಿದೆ. ಜವಾಬ್ದಾರಿಯುತ ಸ್ಥಾನದಲ್ಲಿದ್ದು, ಅಸಂಬದ್ಧ ಹೇಳಿಕೆ ನೀಡುವುದು ಸರಿಯಲ್ಲ ಎಂದು ಕೋರ್ಟ್ ಹೇಳಿದೆ.

    ಬಾಂಬರ್‌ಗಳು ತಮಿಳುನಾಡಿನಲ್ಲಿ ತರಬೇತಿ ಪಡೆದಿದ್ದರು ಎನ್ನುವ ಹೇಳಿಕೆ ವಿರುದ್ಧ ಸ್ಥಳೀಯ ನಿವಾಸಿಯೊಬ್ಬರು ಮಧುರೈ ಸಿಟಿ ಸೈಬರ್ ಕ್ರೈಂ ಠಾಣೆಗೆ ದೂರು ನೀಡಿದ್ದರು. ಎಫ್‌ಐಆರ್ ರದ್ದು ಕೋರಿ ಶೋಭಾ ಕರಂದ್ಲಾಜೆ (Shobha Karandlaje) ಮದ್ರಾಸ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಗುರುವಾರ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಜಿ.ಜಯಚಂದ್ರನ್ ಸರಣಿ ಪ್ರಶ್ನೆಗಳ ಮೂಲಕ ಶೋಭಾ ಕರಂದ್ಲಾಜೆ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಕೇವಲ ನಾಮ್‌ಕಾವಸ್ತೆ ಹೋರಾಟ – ರಾಜ್ಯ ಬಿಜೆಪಿ ವಿರುದ್ಧ ಹೈಕಮಾಂಡ್‌ ಗರಂ

    ಬಾಂಬರ್‌ಗಳಿಗೆ ತಮಿಳುನಾಡಿನಲ್ಲಿ ತರಬೇತಿ ನೀಡಲಾಗಿದೆ ಎಂದು ಸಾರ್ವಜನಿಕವಾಗಿ ಏಕೆ ಹೇಳಿದ್ದೀರಿ? ಎನ್‌ಐಎ ಚೆನ್ನೈನಲ್ಲಿ ಶೋಧ ನಡೆಸುವ ಮುನ್ನವೇ ನೀವು ಹೇಳಿಕೆ ನೀಡಿದ್ದೀರಿ. ಇದರರ್ಥ ನೀವು ಸತ್ಯಗಳ ಬಗ್ಗೆ ತಿಳಿದಿರುತ್ತೀರಿ. ತರಬೇತಿ ಪಡೆದ ವ್ಯಕ್ತಿಗಳು ಯಾರು? ಅವರಿಗೆ ತರಬೇತಿ ನೀಡಿದವರು ಮತ್ತು ಅವರು ಏನು ಮಾಡಿದ್ದಾರೆಂದು ನಿಮಗೆ ತಿಳಿದಿದೆ. ಅಪರಾಧದ ಬಗ್ಗೆ ನಿಮಗೆ ಸ್ವಲ್ಪ ಮಾಹಿತಿ ಸಿಕ್ಕಿದ್ದರೆ, ನೀವು ಅದನ್ನು ಪೊಲೀಸರಿಗೆ ಬಹಿರಂಗಪಡಿಸಬೇಕು. ಒಬ್ಬ ಜವಾಬ್ದಾರಿಯುತ ನಾಗರಿಕನಾಗಿ ಸಚಿವರು ಅದನ್ನು ಮಾಡಿಲ್ಲ ಎಂದು ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದೆ.

    ಈ ವೇಳೆ ವಾದ ಮಂಡಿಸಿದ ಸರ್ಕಾರಿ ವಕೀಲ ಕೆಎಂಡಿ ಮುಹಿಲನ್, ಕರಂದ್ಲಾಜೆ ಅವರು ನೀಡಿರುವ ಸಂದರ್ಶನದ ವೀಡಿಯೋ ತುಣುಕನ್ನು ವೀಕ್ಷಿಸುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿದರು. ಪ್ರಕರಣದಲ್ಲಿ ತಮಿಳುನಾಡು ಭಾಗಿಯಾದ ಬಗ್ಗೆ ಎನ್‌ಐಎ ಇಲ್ಲಿಯವರೆಗೆ ಏನನ್ನೂ ಉಲ್ಲೇಖಿಸಿಲ್ಲ. ಆದರೆ ಯಾವುದೇ ಆಧಾರವಿಲ್ಲದೆ ಸಚಿವರು ಸಾರ್ವಜನಿಕವಾಗಿ ಇಂತಹ ಹೇಳಿಕೆಗಳನ್ನು ನೀಡಲು ಮುಂದಾಗಿದ್ದಾರೆ ಎಂದು ಟೀಕಿಸಿದರು‌. ಇದನ್ನೂ ಓದಿ: ಹಿಂದುಳಿದ ವರ್ಗದ ನಾನು ಎರಡನೇ ಬಾರಿ ಸಿಎಂ ಆಗಿದ್ದನ್ನು ಸಹಿಸಲು ಕೆಲವರಿಗೆ ಆಗ್ತಿಲ್ಲ: ಸಿದ್ದರಾಮಯ್ಯ

    ಶೋಭಾ ಕರಂದ್ಲಾಜೆ ಪರ ವಾದ ಮಂಡಿಸಿದ ವಕೀಲರು, ಪ್ರಕರಣ ರಾಜಕೀಯ ಪ್ರೇರಿತ. ದುರುದ್ದೇಶದಿಂದ ದೂರು ದಾಖಲಿಸಿದೆ. ಎಫ್‌ಐಆರ್ ರದ್ದು ಮಾಡುಬೇಕು ಎಂದು ಮನವಿ ಮಾಡಿದರು. ಬಳಿಕ ನ್ಯಾಯಧೀಶರು ಪ್ರಕರಣದ ವಿಚಾರಣೆಯನ್ನು ಜು.12 ಕ್ಕೆ ಮುಂದೂಡಿಕೆ ಮಾಡಿದರು.

  • ರಾಮೇಶ್ವರಂ ಕೆಫೆ ಬ್ಲಾಸ್ಟ್ ಪ್ರಕರಣ- ಕಲಬುರಗಿಯಲ್ಲೇ ಬೀಡುಬಿಟ್ಟಿರೋ NIA

    ರಾಮೇಶ್ವರಂ ಕೆಫೆ ಬ್ಲಾಸ್ಟ್ ಪ್ರಕರಣ- ಕಲಬುರಗಿಯಲ್ಲೇ ಬೀಡುಬಿಟ್ಟಿರೋ NIA

    ಕಲಬುರಗಿ: ಬೆಂಗಳೂರಿನ ರಾಮೇಶ್ವರಂ ಕಫೆ ಬ್ಲಾಸ್ಟ್ (Rameshwaram Cafe Blast) ಪ್ರಕರಣದ ತನಿಖೆ ಚುರುಕುಗೊಂಡಿದೆ. ಘಟನೆ ನಡೆದು 10 ದಿನಗಳು ಕಳೆದರೂ ಆರೋಪಿಯ ಸುಳಿವು ಸಿಕ್ಕಿಲ್ಲ.

    ರಾಮೇಶ್ವರಂ ಕಫೆ ಬ್ಲಾಸ್ಟ್ ಬಳಿಕ ಕಲಬುರಗಿಗೆ ಬಂದಿರುವ ಬಗ್ಗೆ ಪಕ್ಕಾ ಮಾಹಿತಿ ಸಿಕ್ಕಿದ್ದರಿಂದ ಇದೀಗ ರಾಷ್ಟ್ರೀಯ ತನಿಖಾ ಸಂಸ್ಥೆ (NIA)ಯ ಅಧಿಕಾರಿಗಳು ಕಲಬುರಗಿಯಲ್ಲಿ ಬೀಡು ಬಿಟ್ಟಿದ್ದಾರೆ. ಶನಿವಾರದಿಂದಲೂ ಎನ್‍ಐಎ ತಂಡ ಕಲಬುರಗಿಯಲ್ಲಿ ಬಾಂಬರ್ ನ ಬಗ್ಗೆ ಮಾಹಿತಿ ಕಲೆ ಹಾಕುತ್ತಿದೆ.

    ಕಲಬುರಗಿಯ ರಾಮ ಮಂದಿರ ಸರ್ಕಲ್ ಬಳಿ ಬಾಂಬರ್ ಬಸ್ಸಿನಿಂದ ಇಳಿದಿರುವ ಬಗ್ಗೆ ತಂಡ ಮಾಹಿತಿ ಪಡೆದಿದೆ. ಹೀಗಾಗಿ ರಾಮ ಮಂದಿರ ಸರ್ಕಲ್ ನಿಂದ ಬಾಂಬರ್ ಎಲ್ಲಿ ಹೋಗಿದ್ದಾನೆ ಅನ್ನೋ ಮಾಹಿತಿಯನ್ನು ಅಧಿಕಾರಿಗಳು ಕಲೆ ಹಾಕುತ್ತಿದ್ದಾರೆ. ಕಲಬುರಗಿಯ ರೋಜಾ ಪ್ರದೇಶದಲ್ಲೇ ನಿನ್ನೆ ಅಧಿಕಾರಿಗಳು ಅರ್ಧ ದಿನ ಕಳೆದಿದ್ದಾರೆ. ರೋಜಾ ಪ್ರದೇಶದ ಹಲವು ಏರಿಯಾಗಳಲ್ಲಿ ಪಿಎಫ್‍ಐ, ಎಸ್‍ಡಿಪಿಐ ಜೊತೆ ಸಂಪರ್ಕ ಹೊಂದಿರುವ ಶಂಕೆಯ ಮೇಲೆ ತಲಾಶ್ ನಡೆಸಿದ್ದಾರೆ. ಇದನ್ನೂ ಓದಿ: ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ – ಕಲಬುರಗಿಗೆ ಆಗಮಿಸಿದ ಎನ್‌ಐಎ ತಂಡ

    ಈ ಹಿಂದೆ ಎನ್‍ಐಎ ಅಧಿಕಾರಿಗಳಿಂದ ಪಿಎಫ್‍ಐ, ಎಸ್‍ಡಿಪಿಐ ಕಾರ್ಯಕರ್ತರ ಬಂಧನವಾಗಿತ್ತು. ಹೀಗಾಗಿ ಕಲಬುರಗಿಯ ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ (PFI) ಮತ್ತು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ, ಕರ್ನಾಟಕ (SDPI) ಸದಸ್ಯರ ಮೇಲೆ ನಿಗಾ ಇಟ್ಟಿದ್ದಾರೆ. ಪಿಎಫ್‍ಐ ಸದಸ್ಯರ ಜೊತೆ ಸಂಪರ್ಕಕ್ಕೆ ಬಂದಿರುವ ಶಂಕೆಯ ಮೇಲೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಇಂದು ಕೂಡ ಕಲಬುರಗಿಯಲ್ಲೇ ಅಧಿಕಾರಿಗಳು ತನಿಖೆ ಮುಂದುವರಿಸಲಿದ್ದಾರೆ.

    ಮತ್ತೆ ಫೋಟೋ ಬಿಡುಗಡೆ: ಬಾಂಬರ್‌ ಫೋಟೋಗಳನ್ನು ಶನಿವಾರ ಎನ್‌ಐಎ ಮತ್ತೆ ಬಿಡುಗಡೆ ಮಾಡಿದೆ. ರಾಮೇಶ್ವರಂ ಕಫೆ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿದ ಶಂಕಿತರನ್ನು ಗುರುತಿಸುವಲ್ಲಿ ಎನ್‌ಐಎಯು ನಾಗರಿಕರ ಸಹಕಾರವನ್ನು ಕೋರುತ್ತದೆ. ಆರೋಪಿಯ ಸುಳಿವು ಸಿಕ್ಕಲ್ಲಿ 08029510900, 8904241100 ಗೆ ಕರೆ ಮಾಡಿ ಅಥವಾ ಯಾವುದೇ ಮಾಹಿತಿಯೊಂದಿಗೆ info.blr.nia@gov.in ಗೆ ಇಮೇಲ್ ಮಾಡಿ. ನಿಮ್ಮ ಗುರುತು ಗೌಪ್ಯವಾಗಿ ಉಳಿಯುತ್ತದೆ ಎಂದು NIA ತನ್ನ ಎಕ್ಸ್‌ ಖಾತೆಯಲ್ಲಿ ತಿಳಿಸಿದೆ.

  • ರಾಮೇಶ್ವರಂ ಕೆಫೆ ಸಾರ್ವಜನಿಕ ಸೇವೆಗೆ ಮುಕ್ತ – ಮಾಲೀಕರು ಹೇಳಿದ್ದೇನು?

    ರಾಮೇಶ್ವರಂ ಕೆಫೆ ಸಾರ್ವಜನಿಕ ಸೇವೆಗೆ ಮುಕ್ತ – ಮಾಲೀಕರು ಹೇಳಿದ್ದೇನು?

    – ಈ ಪ್ರಕರಣದಿಂದ ಹೋಟೆಲ್‌ಗೆ ಸಾವಿರಪಟ್ಟು ಸಹಾಯವಾಗಿದೆ: ದಿವ್ಯಾ ರಾಘವೇಂದ್ರ ರಾವ್

    ಬೆಂಗಳೂರು: ಬಾಂಬ್‌ ಸ್ಫೋಟ ಸಂಭವಿಸಿದ ನಂತರ ಸ್ಥಗಿತಗೊಂಡಿದ್ದ ರಾಮೇಶ್ವರಂ ಕೆಫೆ ಹೋಟೆಲ್‌ ಪುನರಾರಂಭ ಆಗಿದ್ದು, ಎಂದಿನಂತೆ ಹೋಟೆಲ್‌ ಸಾರ್ವಜನಿಕರ ಸೇವೆ ಮುಕ್ತವಾಗಿದೆ. ಶನಿವಾರ ಬೆಳಗ್ಗೆ 6 ಗಂಟೆಗೆ ಆರಂಭವಾಗಲಿದ್ದು ಎಂದಿನಂತೆ ಕೆಲಸ ನಿರ್ವಹಿಸಲಿದೆ.

    ಈ ಬಗ್ಗೆ ರಾಮೇಶ್ವರಂ ಕೆಫೆ ಮಾಲೀಕರಾದ ರಾಘವೇಂದ್ರ ರಾವ್ ಹಾಗೂ ದಿವ್ಯಾ ರಾಘವೇಂದ್ರ ರಾವ್ ಅವರಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ಇದನ್ನೂ ಓದಿ: ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಪ್ರಕರಣ- ನಾಲ್ವರನ್ನು ವಶಕ್ಕೆ ಪಡೆದ NIA

    ದಿವ್ಯಾ ರಾಘವೇಂದ್ರ ರಾವ್ ಮಾತನಾಡಿ, ನಮ್ಮ ಗ್ರಾಹಕರಿಗೆ, ಸರ್ಕಾರ ಹಾಗೂ ಪೋಲಿಸ್ ಇಲಾಖೆಗೆ ಧನ್ಯವಾದ ತಿಳಿಸುತ್ತೇನೆ. ಮಾರ್ಚ್ 8ರಂದು ಕೆಫೆ ಪುನರಾರಂಭಿಸಲು ಅವಕಾಶ ಕಲ್ಪಿಸಿದ ಪೋಲಿಸ್ ಇಲಾಖೆಗೆ ಧನ್ಯವಾದಗಳು. ಶನಿವಾರದಿಂದ ಎಂದಿನಂತೆ ಬೆಳಗ್ಗೆ 6 ಗಂಟೆಯಿಂದ ಹೋಟೆಲ್‌ ಸಾರ್ವಜನಿಕ ಸೇವೆಗೆ ಮುಕ್ತವಾಗಿರಲಿದೆ. ನಮ್ಮ ಈ ಯಶಸ್ಸಿನ ಹಿಂದೆ ಲಕ್ಷಾಂತರ ಜನ ಇದ್ದಾರೆ ಎಂದು ಶ್ಲಾಘಿಸಿದರು.

    ಈ ತರಹ ಬಾಂಬ್‌ ಕೃತ್ಯದಿಂದ ಸಾವಿರಾರು ಪಟ್ಟು ನಮ್ಮ ಹೋಟೆಲ್‌ಗೆ ಸಹಾಯವಾಗಿದೆ. ಇನ್ಮುಂದೆ ಮೆಟಲ್‌ ಡಿಕೆಕ್ಟರ್‌, ಆರ್ಮಿ ಆಫೀಸರ್‌ಗಳ ನೇತೃತ್ವದಲ್ಲಿ ಸರ್ವೈಲೆನ್ಸ್‌ ನಡೆಯುತ್ತೆ. ರಾಮೇಶ್ವರಂ ಕೆಫೆಗೆ ಯಾರು ಏನೂ ಮಾಡೋಕೆ ಆಗಲ್ಲ ಎಂದು ಹೇಳಿದರು. ಇದನ್ನೂ ಓದಿ:  ಬಳ್ಳಾರಿ ಬಸ್‌ ನಿಲ್ದಾಣದಲ್ಲಿ ಬಾಂಬರ್ ಓಡಾಟ- NIAಯಿಂದ ಮತ್ತೆರಡು CCTV ದೃಶ್ಯ ಬಿಡುಗಡೆ

    ರಾಮೇಶ್ವರಂ ಕೆಫೆ ಮಾಲೀಕ ರಾಘವೇಂದ್ರ ರಾವ್ ಮಾತನಾಡಿ, ಇವತ್ತು ನಮ್ಮ ‌ಜವಾಬ್ದಾರಿ ಮತ್ತಷ್ಟು ಹೆಚ್ಚಿದೆ. ಪ್ರತಿಯೊಬ್ಬರೂ ನಮ್ಮ ಜೊತೆ ಇದ್ದಾರೆ. 2012 ರಲ್ಲಿ ಮರಳುಗಾಡಿನಿಂದ ಆರಂಭವಾದ ಜರ್ನಿ, ಇಲ್ಲಿಗೆ ತಂದು ನಿಲ್ಲಿಸಿದೆ. ಒಬ್ಬರಿಗೊಬ್ಬರು ಕೈ ಜೋಡಿಸೋಣ. ನಿಜವಾದ ಭಾರತೀಯರು ಈ ತರಹ ಕೃತ್ಯ ಮಾಡಲ್ಲ. ನಿಮ್ಮೆಲ್ಲರ ಆರ್ಶೀವಾದ ಇಲ್ಲ ಅಂದ್ರೇ ನಾವು ಇರೋದಕ್ಕೆ ಆಗುತ್ತಿರಲಿಲ್ಲ ಎಂದು ಭಾವುಕರಾದರು.

    ನಾವು ಭಾರತೀಯರು ಅನ್ನೋಕೆ ಹೆಮ್ಮೆ ಇದೆ. ನಮ್ಮ ಆತ್ಮಸಂತೃಪ್ತಿಗೆ ಕೆಲಸ ಮಾಡ್ತಾ ಇದ್ದೇವೆ. ನಮ್ಮ ಭಾರತೀಯ ಸಂಸ್ಕೃತಿಯನ್ನು ಊಟದಲ್ಲಿ ತೋರಿಸಲು ಈ ಕೆಫೆ ಆರಂಭಿಸಿದ್ದೇವೆ. ಯಾವುದೇ ಲಾಭದ ಉದ್ದೇಶಕ್ಕಾಗಿ ಅಲ್ಲ ಎಂದು ತಿಳಿಸಿದ್ದಾರೆ.

  • ಬಾಂಬ್ ಸ್ಫೋಟ ಕೇಸ್; ಬಂಡೆಗಳನ್ನು ಸಿಡಿಸಲು ಬಳಸುವ ಪೌಡರ್ ಬಳಸಿದ್ದ ಶಂಕಿತ ಉಗ್ರ!

    ಬಾಂಬ್ ಸ್ಫೋಟ ಕೇಸ್; ಬಂಡೆಗಳನ್ನು ಸಿಡಿಸಲು ಬಳಸುವ ಪೌಡರ್ ಬಳಸಿದ್ದ ಶಂಕಿತ ಉಗ್ರ!

    – ಅಮೋನಿಯಂ ನೈಟ್ರೇಟ್ ಪೌಡರ್ ಸಾರ್ವಜನಿಕ ಮಾರಾಟಕ್ಕೆ ನಿಷೇಧ
    – ರಾಮೇಶ್ವರಂ ಕೆಫೆ ಬ್ಲಾಸ್ಟ್ ಕೇಸ್ – ಬಗೆದಷ್ಟು ರಹಸ್ಯ ಬಯಲು

    ಬೆಂಗಳೂರು: ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ (Rameshwaram Cafe Blast) ಪ್ರಕರಣದಲ್ಲಿ ಬಗೆದಷ್ಟು ರಹಸ್ಯಗಳು ಬಯಲಾಗುತ್ತಿದ್ದು, ಎನ್‌ಐಎ ತನಿಖೆಯಲ್ಲಿ ಮತ್ತೊಂದು ಸ್ಫೋಟಕ ಸತ್ಯ ಬೆಳಕಿಗೆ ಬಂದಿದೆ.

    ಕೆಫೆಯಲ್ಲಿ ಸ್ಫೋಟಿಸಿದ್ದ ಬಾಂಬ್‌ಗೆ ಅಮೋನಿಯಂ ನೈಟ್ರೇಟ್ (Ammonium Nitrate Powder) ಬಳಸಿದ್ದಾನೆ ಅನ್ನೋದು ತನಿಖೆಯಲ್ಲಿ ದೃಢಪಟ್ಟಿರುವುದಾಗಿ NIA ಅಧಿಕಾರಿಗಳು ತಿಳಿಸಿದ್ದಾರೆ. ಅಮೋನಿಯಂ ನೈಟ್ರೇಟ್ ಅನ್ನು ಹೆಚ್ಚಾಗಿ ಕಲ್ಲು ಗಣಿಗಾರಿಕೆಯಲ್ಲಿ ಬಂಡೆಗಳನ್ನು ಸಿಡಿಸಲು ಬಳಸಲಾಗುತ್ತದೆ. ಇದೇ ಶಂಕಿತ ಉಗ್ರ ಬಳಸಿದ್ದ ಬಾಂಬ್‌ಗೆ ಇದೇ ಪೌಡರ್ ಅನ್ನು ಬಳಸಿದ್ದಾನೆ. ಆದ್ದರಿಂದ ಸದ್ಯಕ್ಕೆ ಅಮೋನಿಯಂ ನೈಟ್ರೇಟ್ ಸಾರ್ವಜನಿಕವಾಗಿ ಮಾರಟ ಮಾಡಲು ನಿಷೇಧಿಸಲಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ. ಇದನ್ನೂ ಓದಿ: ಹೂಡಿಯ ಪ್ರಾರ್ಥನಾ ಮಂದಿರದ ಬಳಿ ಬಟ್ಟೆ ಬದಲಾಯಿಸಿ ಟೋಪಿ ಬಿಟ್ಟು ಹೋದ ಬಾಂಬರ್‌

    ಈ ಹಿಂದೆ ಮಂಗಳೂರು ಮತ್ತು ಶಿವಮೊಗ್ಗದಲ್ಲಿ ನಡೆದಿದ್ದ ಬಾಂಬ್ ಸ್ಫೋಟ (Mangaluru, Shivamogga Blast) ಪ್ರಕರಣಗಳಲ್ಲಿ ಸಲ್ಫರಿಕ್ ಗನ್‌ ಪೌಡರ್ ಮತ್ತು ಪೊಟ್ಯಾಶಿಯಂ ನೈಟ್ರೇಟ್ ಕೆಮಿಕಲ್‌ಗಳನ್ನು ಬಳಸಿರುವುದು ಕಂಡುಬಂದಿತ್ತು. ಹಾಗಾಗಿ ಶಂಕಿತ ಉಗ್ರನನ್ನು ಪತ್ತಹೆಚ್ಚಲು ತನಿಖೆ ಚುರುಕುಗೊಳಿಸಿರುವ ಎನ್‌ಐಎ ಹೊರ ರಾಜ್ಯಗಳಿಂದ ಅಮೋನಿಯಂ ನೈಟ್ರೇಟ್ ಪೂರೈಕೆದಾರರ ಬಗ್ಗೆಯೂ ಮಾಹಿತಿ ಕಲೆಹಾಕುತ್ತಿದೆ ಎಂದು ಅಧಿಕಾರಿಗಳು ಮೂಲಗಳು ತಿಳಿಸಿವೆ. ಇದನ್ನೂ ಓದಿ: ಸಿಸಿಬಿಯಿಂದ ರಾಮೇಶ್ವರಂ ಕೆಫೆ ಬಾಂಬರ್ ರೇಖಾಚಿತ್ರ ಬಿಡುಗಡೆ

    ಕ್ಷಣಕ್ಕೊಂದು ಬಸ್ ಬದಲಿದ್ದಾನೆ:
    ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣದ ತನಿಖೆ ಚುರುಕು ಪಡೆದಿದ್ದು, ಬಾಂಬರ್ ಚಲನವಲನದ ಬಗ್ಗೆ ಮತ್ತಷ್ಟು ದೃಶ್ಯಸಾಕ್ಷ್ಯ ಸಿಕ್ಕಿದೆ. ಇದನ್ನು ಆಧರಿಸಿ ತನಿಖಾಧಿಕಾರಿಗಳು ಕಾರ್ಯಚರಣೆ ನಡೆಸಿದ್ದಾರೆ. ಕೆಫೆಯಲ್ಲಿ ಬಾಂಬ್ ಇದ್ದ ಬ್ಯಾಗ್ ಇರಿಸಿದ್ದ ಬಾಂಬರ್ ಅಲ್ಲಿಂದ ಹಲವು ಬಸ್ ಬದಲಿಸಿದ್ದಾನೆ. ಸಮೀಪದ ಪ್ರಾರ್ಥನಾ ಮಂದಿರ ಬಳಿ ಹೋಗಿ ಅಲ್ಲಿ ಬಟ್ಟೆ ಬದಲಿಸಿದ್ದ. ಈ ಮೊದಲು ಬಳಸಿದ್ದ ಟೋಪಿ ಬಿಸಾಡಿ ಬೇರೊಂದು ಟೋಪಿ ಧರಿಸಿದ್ದ. ಮತ್ತೆ ಬಿಎಂಟಿಸಿ ಬಸ್ ಹತ್ತಿದ ಬಾಂಬರ್ ನೇರವಾಗಿ ಮಧ್ಯಾಹ್ನ 3 ಗಂಟೆಗೆ ಓಕಳಿಪುರಂನ ಸುಜಾತಾ ಬಸ್ ನಿಲ್ದಾಣದ ಬಳಿ ಬಂದಿದ್ದ. ಅಲ್ಲಿ ಬೀದರ್‌ಗೆ ತೆರಳುವ ಕೆಎಸ್‌ಆರ್‌ಟಿಸಿ ಬಸ್ ಹತ್ತಿ ರಾತ್ರಿ 8.58ರ ಹೊತ್ತಿಗೆ ಬಳ್ಳಾರಿಯಲ್ಲಿ ಇಳಿದಿದ್ದ. ಇಲ್ಲಿಯವರೆಗಿನ ಬಾಂಬರ್ ಚಲನವಲನಗಳು ಹಲವೆಡೆ ಸಿಸಿಟಿವಿಯಲ್ಲಿ ಸೆರೆಯಾಗಿವೆ. ಬಿಎಂಟಿಸಿಯ ವೋಲ್ವೋ ಬಸ್‌ನಲ್ಲಿ ಓಡಾಡುವ, ಬಸ್ಸಲ್ಲಿ ಕುಳಿತು ಸಾಗಿರುವ ಮತ್ತು ಬಳ್ಳಾರಿ ಬಸ್ ನಿಲ್ದಾಣದಲ್ಲಿ ಓಡಾಡೋದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಆದ್ರೆ ಮುಂದೆ ಎಲ್ಲಿ ಹೋದ ಎಂಬ ಸುಳಿವು ಸಿಕ್ಕಿಲ್ಲ. ಬಳ್ಳಾರಿಯಲ್ಲಿಯೇ ತಲೆ ಮರೆಸಿಕೊಂಡಿದ್ದಾನಾ? ಅಥವಾ ಬೇರೆ ರಾಜ್ಯಕ್ಕೆ ಹೋಗಿದ್ದಾನಾ ಎಂಬ ಬಗ್ಗೆ ಇದೀಗ ತನಿಖೆ ನಡೆಯುತ್ತಿದೆ.

  • ಸರ್ಕಾರದ FSL ವರದಿಯನ್ನ ನಾನು ನೋಡಿಯೇ ಇಲ್ಲ: ಪ್ರಿಯಾಂಕ್ ಖರ್ಗೆ

    ಸರ್ಕಾರದ FSL ವರದಿಯನ್ನ ನಾನು ನೋಡಿಯೇ ಇಲ್ಲ: ಪ್ರಿಯಾಂಕ್ ಖರ್ಗೆ

    ಗದಗ: ವಿಧಾನಸೌಧದಲ್ಲಿ `ಪಾಕಿಸ್ತಾನ ಜಿಂದಾಬಾದ್’ ಘೋಷಣೆ ಕೂಗಿದ ಆರೋಪಕ್ಕೆ ಸಂಬಂಧಿಸಿದಂತೆ ಮೂವರನ್ನ ಬಂಧಿಸಿರುವ ವಿಚಾರಕ್ಕೆ ಪ್ರತಿಕ್ರಿಯಿಸಿರುವ ಸಚಿವ ಪ್ರಿಯಾಂಕ್ ಖರ್ಗೆ (Priyank Kharge), ಸರ್ಕಾರ ಬಿಡುಗಡೆ ಮಾಡಿರುವ ವಿಧಿವಿಜ್ಞಾನ ಪ್ರಯೋಗಾಲಯ ವರದಿಯನ್ನ ನಾನು ನೋಡಿಯೇ ಇಲ್ಲ ಎಂದು ಜಾರಿಕೊಂಡಿದ್ದಾರೆ.

    ವಿಧಾನಸೌಧದಲ್ಲಿ (Vidhana Soudha) ಪಾಕ್ ಪರ ಘೋಷಣೆ ಕೂಗಿರುವುದು ಸತ್ಯ ಇದು, ವಿಧಿವಿಜ್ಞಾನ ಪ್ರಯೋಗಾಲಯದ ವರದಿಯಲ್ಲಿ ದೃಢಪಟ್ಟಿದೆ ಎಂದು ಗೃಹಸಚಿವ ಪರಮೇಶ್ವರ್‌ (G Parameshwar) ಮಂಗಳವಾರ ತಿಳಿಸಿದ್ದಾರೆ. ಈ ಕುರಿತು ಗದಗದಲ್ಲಿ ಮಾಧ್ಯಮಗಳೊಂದಿಗೆ ಮಾನತಾಡಿದ ಅವರು, ಮೂವರನ್ನು ಅರೆಸ್ಟ್ ಮಾಡಲಾಗಿದೆ, ಇಷ್ಟಕ್ಕೆ ಕೇಸ್ ಮುಗಿಯಲ್ಲ. ಇನ್ನೂ ಅವರ ಧ್ವನಿ ಹೋಲಿಕೆಯ ಬಗ್ಗೆ ಪರಿಶೀಲಿಸಬೇಕು. ಆ ಸಂದರ್ಭದಲ್ಲಿ ಅವರು ಅಲ್ಲಿದ್ರಾ ಅನ್ನೋದನ್ನ ದೃಢಪಡಿಸಬೇಕು. ನಂತರ ಮುಂದಿನ ತನಿಖೆಯಾಗುತ್ತದೆ ಎಂದು ತಿಳಿಸಿದ್ದಾರೆ.

    ನನಗೆ ಸಿಕ್ಕ ಫೂಟೆಜ್ ಅನ್ನು ಖಾಸಗಿ ಫೋರೆನ್ಸಿಕ್‌ನಲ್ಲಿ ಪರಿಶೀಲಿಸಿದ್ದೆವು. ನಾನು ಸರ್ಕಾರದ ವರದಿ ಫೈನಲ್ ಅಂತ ಹೇಳಿದ್ದೆ. ಬಿಜೆಪಿಯವರು ಖಾಸಗಿ ವರದಿಯನ್ನ ಖಾಸಗಿ ವರದಿಯನ್ನು ಸರ್ಕಾರಿ ವರದಿಯಾಗಿ ಬಿಂಬಿಸುವುದು ತಪ್ಪು. ಈಗಲೂ ನಾನು ಅದನ್ನೇ ಹೇಳುತ್ತೇನೆ ಸರ್ಕಾರದ ವರದಿಯನ್ನ ನಾನು ನೋಡಿಯೇ ಇಲ್ಲ ಎಂದು ಉಲ್ಟಾ ಹೊಡೆದಿದ್ದಾರೆ. ಇದನ್ನೂ ಓದಿ: ಕರ್ನಾಟಕ ದೇವಾಲಯಗಳ ಮಸೂದೆ ವಿವಾದ; ‘ಕೈ’ ಸರ್ಕಾರದ ಪ್ರಸ್ತಾವನೆಯಲ್ಲೇನಿದೆ? – ಬೇರೆ ರಾಜ್ಯಗಳಲ್ಲಿ ಆದಾಯ ನಿರ್ವಹಣೆ ಹೇಗೆ?

    ಆರ್‌ಎಸ್‌ಎಸ್ ವರದಿಗಳನ್ನ ಒಪ್ಪಲ್ಲ:
    ಇನ್ನೂ ಮಂಡ್ಯದಲ್ಲಿ ಬಿಜೆಪಿ ಕಾರ್ಯಕರ್ತರು ಕೂಗಿದ್ದಾಗ ನಾವು ಮುಚ್ಚಿ ಹಾಕಿದ್ವಾ? ಇನ್ನೂ ತನಿಖೆ ನಡೀತಿದೆ ಅಲ್ವಾ? ಈಗ ಸಿಕ್ಕಿರುವ ಮಾದರಿಯಲ್ಲಿ ಧ್ವನಿ ಇವರದ್ದೇ ಅಂತ ಸ್ಪಷ್ಟವಾಗಿ ಹೇಳಿಲ್ಲ. ಸರ್ಕಾರದ ನಿಲುವು ಅಂತಿಮ ನಿಲುವು. ಆರ್‌ಎಸ್‌ಎಸ್ ವರದಿಗಳನ್ನ ನಾವು ಒಪ್ಪೋಕೆ ಆಗಲ್ಲ ಎಂದಿದ್ದಾರೆ. ಇದನ್ನೂ ಓದಿ: ಪಾಕ್ ಪರ ಘೋಷಣೆ; ವಿತಂಡವಾದಿ ಕಾಂಗ್ರೆಸಿಗರಿಗೆ ತೀವ್ರ ಮುಖಭಂಗ: ಅಶ್ವಥ‌ ನಾರಾಯಣ್

    ಕುಕ್ಕರ್ ಬ್ಲಾಸ್ ಆರೋಪಿ ತರಬೇತಿ ಪಡೆದಿದ್ದೆಲ್ಲಿ?
    ಇದೇ ವಳೆ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ವಿಚಾರಕ್ಕೆ ಪ್ರತಿಕ್ರಿಯಿಸಿ, ಬಿಜೆಪಿನವರಿಗೆ ನಿಜವಾಗಿಯೂ ನೈತಿಕತೆ ಇದೆಯಾ? ರಾಮೇಶ್ವರಂ ಕೆಫೆ ಬ್ಲಾಸ್ಟ್ ಬಗ್ಗೆ ಬಿಜೆಪಿ ನಾಯಕರು ಯಾಕೆ ಇಷ್ಟೊಂದು ಮಾತಾಡ್ತಿದ್ದಾರೆ. ಮಂಗಳೂರು ಕುಕ್ಕರ್ ಬ್ಲಾಸ್ಟ್ ಯಾರ ಅವಧಿಯಲ್ಲಿ ಆಯ್ತು? ಕುಕ್ಕರ್ ಬ್ಲಾಸ್ಟ್ ಆರೋಪಿ ತರಬೇತಿ ಪಡೆದಿದ್ದು ಎಲ್ಲಿ ಗೋತ್ತಾ? ಅಂದಿನ ಬಿಜೆಪಿ ಸರ್ಕಾರದ ಗೃಹಸಚಿವರಾಗಿದ್ದ ಆರಗ ಜ್ಞಾನೇಂದ್ರ ಅವರ ಕ್ಷೇತ್ರ ತೀರ್ಥಹಳ್ಳಿಯಲ್ಲಿ. ಅಲ್ಲಿ ತರಬೇತಿ ಪಡೆದು ಮಂಗಳೂರು ಆರ್‌ಎಸ್‌ಎಸ್ ಪ್ರಯೋಗಾಲಯದಲ್ಲಿ ಬ್ಲಾಸ್ಟ್ ಮಾಡಿದ್ದ. ಆಗ ಇವ್ರು ರಾಜಿನಾಮೆ ಕೊಟ್ಟಿದ್ರಾ? ಉಸಿರಾದ್ರೂ ಬಿಟ್ಟಿದ್ರಾ ಅಂತ ಆಕ್ರೋಶ ವ್ಯಕ್ತಪಡಿಸಿದ್ದಾರೆ.

  • ಬಾಂಬ್‌ ಸ್ಫೋಟ ಪ್ರಕರಣದ ಪೂರ್ಣ ಸತ್ಯ ಹೊರಬರಲಿ – ಸಿಎಂ ಸೂಚನೆ

    ಬಾಂಬ್‌ ಸ್ಫೋಟ ಪ್ರಕರಣದ ಪೂರ್ಣ ಸತ್ಯ ಹೊರಬರಲಿ – ಸಿಎಂ ಸೂಚನೆ

    – ಜನನಿಬಿಡ ಸ್ಥಳಗಳಲ್ಲಿ ಪೊಲೀಸ್ ಗಸ್ತು ಹೆಚ್ಚಿಸಿ
    – ತನಿಖೆಯಲ್ಲಿ ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸಿ
    – ಉನ್ನತಮಟ್ಟದ ಸಭೆಯಲ್ಲಿ ಪೊಲೀಸ್‌ ಅಧಿಕಾರಿಗಳಿಗೆ ಸಿದ್ದರಾಮಯ್ಯ ತಾಕೀತು

    ಬೆಂಗಳೂರು: ರಾಮೇಶ್ವರಂ ಕೆಫೆ ಬಾಂಬ್‌ ಸ್ಫೋಟ ಪ್ರಕರಣದ ಸಂಪೂರ್ಣ ಸತ್ಯ ಹೊರಗೆ ಬರಲಿ. ತಂತ್ರಜ್ಞಾನದ ಸಾಧ್ಯತೆಗಳನ್ನು ತನಿಖೆಯಲ್ಲಿ ಪರಿಣಾಮಕಾರಿಯಾಗಿ ಬಳಸಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಿದರು.

    ಗೃಹ ಇಲಾಖೆಯ ಅಧಿಕಾರಿಗಳೊಂದಿಗೆ ಅವರಿಂದು ಉನ್ನತಮಟ್ಟದ ಸಭೆ ನಡೆಸಿ ಮಾತನಾಡಿದರು. ಜನನಿಬಿಡ ಸ್ಥಳಗಳನ್ನು ಗುರುತಿಸಿ ಅಂತಹ ಪ್ರದೇಶಗಳಲ್ಲಿ ಪೊಲೀಸ್ ಗಸ್ತು ಹೆಚ್ಚಿಸಿ, ಜನರಿಗೆ ರಕ್ಷಣೆ ಒದಗಿಸಬೇಕು ಎಂದು ಸೂಚಿಸಿದರು. ಇದನ್ನೂ ಓದಿ: ಆರೋಗ್ಯ ಸುಧಾರಣೆ – ಮಾವಿನಕೆರೆ ರಂಗನಾಥಸ್ವಾಮಿಗೆ ಹರಕೆ ತೀರಿಸಿದ ದೊಡ್ಡಗೌಡ್ರು

    ಇಂತಹ ಪ್ರಕರಣಗಳು ಮರುಕಳಿಸದಂತೆ ಎಚ್ಚರ ವಹಿಸಬೇಕು. ಪೊಲೀಸರು ಇಂತಹ ಘಟನೆ ನಡೆದಾಗ ಎಚ್ಚರಿಕೆ ವಹಿಸಿ ನಂತರ ಮರೆಯುವಂತಾಗಬಾರದು. ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿಗಳನ್ನು ಹಬ್ಬಿಸಿ ಜನರ ದಾರಿ ತಪ್ಪಿಸುವ ಕೆಲಸವನ್ನು ಮಟ್ಟ ಹಾಕಬೇಕು ಎಂದು ತಾಕೀತು ಮಾಡಿದರು.

    ಸಮಾಜ ದ್ರೋಹಿಗಳ ಬಗ್ಗೆ ಯಾವುದೇ ಸಹಾನುಭೂತಿ ಇಲ್ಲದೇ ಕ್ರಮ ಜರುಗಿಸಿ, ಗುಪ್ತಚರ ಇಲಾಖೆ ಹೆಚ್ಚು ಜಾಗೃತವಾಗಿರಬೇಕು. ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹರಡುವ ಸಮಾಜ ದ್ರೋಹಿಗಳ ಬಗ್ಗೆ ಯಾವುದೇ ಸಹಾನುಭೂತಿ ಇಲ್ಲದೇ ಕ್ರಮ ಜರುಗಿಸಬೇಕು ಎಂದು ಹೇಳಿದರು. ಇದನ್ನೂ ಓದಿ: ಲೋಕಸಭೆಗೆ ಬಿಜೆಪಿ ಅಭ್ಯರ್ಥಿಗಳ ಫಸ್ಟ್‌ ಲಿಸ್ಟ್‌ ಔಟ್‌ – ಮಥುರಾದಿಂದ ಹೇಮಾ ಮಾಲಿನಿ ಕಣಕ್ಕೆ

    ಸಭೆಯಲ್ಲಿ ಸಚಿವರಾದ ಪ್ರಿಯಾಂಕ್ ಖರ್ಗೆ, ಜಿ. ಪರಮೇಶ್ವರ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಲ್.ಕೆ ಅತೀಕ್, ಕಾರ್ಯದರ್ಶಿ ಡಾ.ತ್ರಿಲೋಕ್ ಚಂದ್ರ, ಗೃಹ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಎಸ್.ಆರ್ ಉಮಾಶಂಕರ್, ಪೊಲೀಸ್ ಮಹಾನಿರ್ದೇಶಕ ಅಲೋಕ್ ಮೋಹನ್, ಬೆಂಗಳೂರು ಪೊಲೀಸ್ ಆಯುಕ್ತ ಬಿ. ದಯಾನಂದ್, ಮೊದಲಾದವರು ಉಪಸ್ಥಿತರಿದ್ದರು.

  • ರಾಮನ ಹೆಸರು ಇರೋದಕ್ಕೆ ರಾಮೇಶ್ವರಂ ಹೋಟೆಲ್ ಟಾರ್ಗೆಟ್ ಮಾಡಿದ್ದಾರೆ: ಯತ್ನಾಳ್

    ರಾಮನ ಹೆಸರು ಇರೋದಕ್ಕೆ ರಾಮೇಶ್ವರಂ ಹೋಟೆಲ್ ಟಾರ್ಗೆಟ್ ಮಾಡಿದ್ದಾರೆ: ಯತ್ನಾಳ್

    – ಭಯೋತ್ಪಾದಕರಿಗೆ ಕರ್ನಾಟಕ ಸುರಕ್ಷಿತ ತಾಣ ಅನ್ನಿಸಿದೆ ಎಂದ ಶಾಸಕ

    ವಿಜಯಪುರ: ರಾಮನ (Lard Rama) ಹೆಸರು ಇರೋದಕ್ಕೆ ರಾಮೇಶ್ವರಂ ಹೋಟೆಲ್‌ನ ಟಾರ್ಗೆಟ್ ಮಾಡಿದ್ದಾರೆ, ಅದು ಶುಕ್ರವಾರವೇ ಬಾಂಬ್ ಸ್ಫೋಟ ಮಾಡಿದ್ದಾರೆ. ಇದೆಲ್ಲವನ್ನ ಗಮನಿಸಿದ್ರೆ ಉದ್ದೇಶಪೂರ್ವಕವಾಗಿಯೇ ನಡೆಸಿರುವ ಕೃತ್ಯ ಅನ್ನಿಸುತ್ತೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ್ (Basanagouda Patil Yatnal) ವಾಗ್ದಾಳಿ ನಡೆಸಿದ್ದಾರೆ.

    ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ (Rameshwaram Cafe Blast) ಪ್ರಕರಣಕ್ಕೆ ಸಂಬಂಧಿಸಿದಂತೆ ವಿಜಯಪುರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಮನ ಹೆಸರು ಇರುವ ರಾಮೇಶ್ವರಂ ಹೋಟೆಲ್‌ನ ಟಾರ್ಗೆಟ್ ಮಾಡಿದ್ದಾರೆ. ಶುಕ್ರವಾರವೇ ಈ ಕೃತ್ಯ ಎಸಗಿದ್ದಾರೆ. ರಾಮಮಂದಿರ ನಿರ್ಮಾಣ ಆದ ಮೇಲೆ ಎಲ್ಲಾದರೂ ತಮ್ಮ ಅಸ್ತಿತ್ವ ತೋರಿಸಬೇಕು ಅಂತ ಕೆಲ ಸಂಘಟನೆಗಳು ಉದ್ದೇಶಪೂರ್ವಕವಾಗಿ ಇಂತಹ ಕೆಲಸ ಮಾಡ್ತಿದ್ದಾರೆ. ಅವರೆಲ್ಲರಿಗೂ ವಿನಾಶ ಕಾಲ ಬಂದಿದೆ ಎಂದು ಎಚ್ಚರಿಸಿದ್ದಾರೆ. ಇದನ್ನೂ ಓದಿ: ಸಾರ್ವಜನಿಕರ ದರ್ಶನಕ್ಕೆ ತೆರೆದ ಅಬುಧಾಬಿ ಹಿಂದೂ ದೇವಾಲಯ- ಡ್ರೆಸ್‌ ಕೋಡ್‌, ಟೈಮಿಂಗ್ಸ್‌ ವಿವರ ಇಲ್ಲಿದೆ 

    ಸಿಎಂ ರಾಜೀನಾಮೆಗೆ ಆಗ್ರಹ:
    ಈ ಹಿಂದೆ ಯಾರೋ ಒಬ್ಬರು ಬ್ರ್ಯಾಡ್‌ ಬೆಂಗಳೂರು ಮಾಡ್ತೀನಿ ಅಂತ ಹೇಳ್ದಾಗ, ಬಾಂಬ್ ಬೆಂಗಳೂರು ಮಾಡ್ತಾರೆ ಅಂತ ಹೇಳಿದ್ದೆ. ಈಗ ಅದು ನಿಜವಾಗುತ್ತಿದೆ. ಸಿದ್ದರಾಮಯ್ಯ (Siddaramaiah) ಅವರೇ ಭಯೋತ್ಪಾದನೆ ನಿಲ್ಲಿಸಲು ಆಗದಿದ್ದರೆ, ರಾಜೀನಾಮೆ ಕೊಟ್ಟು ಮನೆಗೆ ಹೋಗಿ. ಕೇವಲ ಗ್ಯಾರಂಟಿ, ಗ್ಯಾರಂಟಿ ಅಂದು, ಜನರ ಜೀವಕ್ಕೆ ಗ್ಯಾರಂಟಿ ಇಲ್ಲದಂತಾಗಿದೆ ಎಂದು ಕಿಡಿ ಕಾರಿದ್ದಾರೆ. ಇದನ್ನೂ ಓದಿ: ಪಾಕಿಸ್ತಾನ ಭಯೋತ್ಪಾದಕರು ಇಲ್ಲಿ ಮಾಡೋದೇನಿಲ್ಲ, ಇಲ್ಲೇ ಭಯೋತ್ಪಾದರನ್ನ ಸೃಷ್ಟಿಸಿದ್ದಾರೆ: ಸೂಲಿಬೆಲೆ

    ಇನ್ನೂ ವಿಧಾನಸೌಧದಲ್ಲಿ ಪಾಕ್ ಪರ ಘೋಷಣೆ ಕೂಗಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಮಾತನಾಡಿ, ಭಯೋತ್ಪಾದಕರಿಗೆ ಕರ್ನಾಟಕ ಅತ್ಯಂತ ಸುರಕ್ಷಿತ ತಾಣ ಅಂತ ಅನ್ನಿಸಿದೆ. ಘೋಷಣೆ ಕೂಗಿದ್ದವನ ಪರೀಕ್ಷೆಗೆ ಕಳುಹಿಸುವ ಅವಶ್ಯಕತೆಯಿಲ್ಲ ಅಂತ ಆವಾಗಲೆ ಹೇಳಿದ್ದೆ. ಏಕೆಂದರೆ ಮಾಧ್ಯಮಗಳಲ್ಲಿ ಸ್ಪಷ್ಟವಾಗಿ ಬಿತ್ತರಿಸಿದ್ದರು. ಈಗ ವಿಧಿವಿಜ್ಞಾನ ಪ್ರಯೋಗಾಲಯದ ವರದಿ ಬಂದಿದ್ದರೂ ಬಹಿರಂಗಪಡಿಸಿಲ್ಲ. ಈಗ ಬಾಂಬ್ ಬ್ಲಾಸ್ಟ್ ಪ್ರಕರಣ ನೋಡಿದ್ರೆ ಈ ರಾಜ್ಯದಲ್ಲಿ ಭಯೋತ್ಪಾದನೆ ಚಟುವಟಿಗೆ ಇಂಬು ಕೊಡ್ತಾ ಇದೆ ಅನ್ನೋದು ಸ್ಪಷ್ಟವಾಗ್ತಿದೆ. ಇದನ್ನ ಮಾಡಿದ್ದು ಯಾರೋ ಹಿಂದೂ ಅಲ್ಲ, ಮುಸ್ಲಿಂ ವ್ಯಕ್ತಿಯೇ ಮಾಡಿದ್ದಾನೆ ಎಂದು ಆರೋಪಿಸಿದ್ದಾರೆ.

  • ರವೆ ಇಡ್ಲಿ ತಿಂದು ಬಾಂಬ್‌ ಇಟ್ಟ ಬಾಂಬರ್‌ – ಡಿಕೆಶಿ

    ರವೆ ಇಡ್ಲಿ ತಿಂದು ಬಾಂಬ್‌ ಇಟ್ಟ ಬಾಂಬರ್‌ – ಡಿಕೆಶಿ

    – ಬಾಂಬ್‌ ಸ್ಫೋಟ ಸ್ಥಳಕ್ಕೆ ಡಿಕೆಶಿ, ಪರಮೇಶ್ವರ್‌ ಭೇಟಿ

    ಬೆಂಗಳೂರು: ವೈಟ್ ಫೀಲ್ಡ್ ಬಳಿ ಬ್ರೂಕ್ ಫೀಲ್ಡ್‌ನ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟಗೊಂಡಿದ್ದು, (Rameshwaram Cafe Blast) ಘಟನಾ ಸ್ಥಳಕ್ಕೆ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ (DK Shivakumar), ಗೃಹಸಚಿವ ಜಿ.ಪರಮೇಶ್ವರ್‌ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಅಲ್ಲದೇ ಅಧಿಕಾರಿಗಳಿಂದ ಘಟನೆಯ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ.

    ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ಡಿಸಿಎಂ ಡಿ.ಕೆ ಶಿವಕುಮಾರ್, ಸಿಸಿಬಿ ಪೊಲೀಸರು (CCB Police) ಬಾಂಬ್ ಇಟ್ಟ ಆರೋಪಿ ಬಗ್ಗೆ ಮಾಹಿತಿ ಕಲೆ ಹಾಕೋದಕ್ಕೆ ಶುರು ಮಾಡಿದ್ದಾರೆ. ಆರೋಪಿ ಯಾರು ಏನು ಎಂಬುದು ಬಹುತೇಕ ಗೊತ್ತಾಗಿದೆ. ಆರೋಪಿ ಬಸ್‌ನಲ್ಲಿ ಬಂದು, ಹೋಟೆಲ್‌ನಲ್ಲಿ ರವೆ ಇಡ್ಲಿ ತಿಂದು ಆಮೇಲೆ ಬಾಂಬ್ ಇಟ್ಟು ಹೋಗಿದ್ದಾನೆ. ಬರುವಾಗ ಮಾಸ್ಕ್‌ ಧರಿಸಿ ಬಂದಿದ್ದಾನೆ ಎಂದು ತಿಳಿಸಿದ್ದಾರೆ. ಅಲ್ಲದೇ ಆರೋಪಿಗೆ ಸುಮಾರು 35 ವರ್ಷ ವಯಸ್ಸಿರಬೇಕು ಎಂಬ ಶಂಕೆ ವ್ಯಕ್ತವಾಗಿದೆ.

    ಬಾಂಬ್ ಬ್ಲಾಸ್ಟ್ ಟೈಮಿಂಗ್
    11:35 – ಹೋಟೆಲ್‌ಗೆ ಬಾಂಬರ್‌ ಆಗಮನ
    11:35 – ಕ್ಯಾಶ್ ಕೌಂಟರ್ ಅಲ್ಲಿ ರವೆ ಇಡ್ಲಿ ಟೋಕನ್‌ ಖರೀದಿ
    11:42 – ಇಡ್ಲಿ ತಿಂದು ಕೈ ತೊಳೆಯುವ ಜಾಗಕ್ಕೆ ಬಂದ ವ್ಯಕ್ತಿ
    11:44 – ಕೈತೊಳೆಯುವ ಜಾಗದಲ್ಲೇ ಬ್ಯಾಗ್ ಇರಿಸಿ ಪರಾರಿ
    12:55 – ಬಾಂಬ್‌ ಸ್ಫೋಟ

    ಹೋಟೆಲ್‌ನಲ್ಲಿ ಬ್ಯಾಗ್ ಇಟ್ಟು ಹೋದ 1 ಗಂಟೆ ಬಳಿಕ ಬಾಂಬ್ ಬ್ಲಾಸ್ಟ್ ಆಗಿದೆ. ಘಟನಾ ಸ್ಥಳದಲ್ಲಿ ಟೈಮರ್ ಸಹ ಪತ್ತೆಯಾಗಿದೆ. ವ್ಯಕ್ತಿಯ ಎಲ್ಲಾ ಚಟುವಟಿಕೆಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಶೀಘ್ರದಲ್ಲೇ ಸಿಕ್ಕಿಬಿಳುತ್ತಾನೆ ಎಂದು ಎಂದು ಹೇಳಿದ್ದಾರೆ. ಇದನ್ನೂ ಓದಿ: ಐದನೇ ಬಾರಿಗೆ ಬೆಂಗಳೂರಿನಲ್ಲಿ ಬಾಂಬ್‌ ಸ್ಟೋಟ: ಹಿಂದೆ ಎಲ್ಲೆಲ್ಲಿ ಸಂಭವಿಸಿತ್ತು?

    ಘಟನೆ ಕುರಿತು ಮಾಹಿತಿ ಪಡೆದಿದ್ದೇನೆ. ಸಮಗ್ರ ತನಿಖೆ ನಡೆಸಲು 8 ಪೊಲೀಸ್ ಅಧಿಕಾರಿಗಳ ವಿಶೇಷ ತಂಡ ರಚಿಸಲಾಗಿದೆ. ವಿಧಿ ವಿಜ್ಞಾನ ಪ್ರಯೋಗಾಲಯ ತಂಡ, ಬಾಂಬ್‌ ನಿಷ್ಕ್ರಿಯ ದಳ ಪರಿಶೀಲನೆ ನಡೆಸುತ್ತಿದೆ. ಶೀಘ್ರದಲ್ಲೇ ಪೊಲೀಸರು ಆರೋಪಿಗೆ ಹೆಡೆಮುರಿ ಕಟ್ಟುತ್ತಾರೆ ಎಂದು ಹೇಳಿದ್ದಾರೆ.

    ಘಟನೆ ಸಂಬಂಧ ಸಿಎಂ ರಾಜೀನಾಮೆಗೆ ಬಿಜೆಪಿ ಆಗ್ರಹಿಸುತ್ತಿರುವ ವಿಚಾರಕ್ಕೆ ಪ್ರತಿಕ್ರಿಯಿಸಿ, ರಾಜೀನಾಮೆ ಕೊಡೋಣ… ಕೊಡೋಣ.. ಎಂದು ವ್ಯಂಗ್ಯವಾಡಿದ್ದಾರೆ. ಅವರು ರಾಜಕಾರಣ ಮಾಡಲಿ ನಾವು ಜನರ ಸೇವೆ ಮಾಡ್ತೀವಿ ಎಂದು ಹೇಳಿದ್ದಾರೆ. ಇದನ್ನೂ ಓದಿ: Exclusive: ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ – ಎದೆ ಝಲ್ ಎನಿಸುವಂತಿದೆ ಸಿಸಿಟಿವಿ ದೃಶ್ಯಗಳು

  • ಬೆಂಗಳೂರು ಬಾಂಬ್‌ ಸ್ಫೋಟ – ಶಂಕಿತನ ಬಗ್ಗೆ ಸ್ಫೋಟಕ ಮಾಹಿತಿ ಕೊಟ್ಟ ಸಿಎಂ

    ಬೆಂಗಳೂರು ಬಾಂಬ್‌ ಸ್ಫೋಟ – ಶಂಕಿತನ ಬಗ್ಗೆ ಸ್ಫೋಟಕ ಮಾಹಿತಿ ಕೊಟ್ಟ ಸಿಎಂ

     – ಟೋಕನ್ ಪಡೆದು ತಿಂಡಿ ತಿಂದ ವ್ಯಕ್ತಿ ಬ್ಯಾಗ್ ಇಟ್ಟು ಬಂದಿದ್ದಾನೆ – ಸಿದ್ದರಾಮಯ್ಯ

    ಬೆಂಗಳೂರು: ವೈಟ್ ಫೀಲ್ಡ್ ಬಳಿ ಬ್ರೂಕ್ ಫೀಲ್ಡ್‌ನ ರಾಮೇಶ್ವರ ಕೆಫೆಯಲ್ಲಿ ಸಂಭವಿಸಿದ ಬಾಂಬ್‌ ಸ್ಫೋಟ (Rameshwaram Cafe Blast) ಪ್ರಕರಣ ಸಂಬಂಧ ಸಿಎಂ ಸಿದ್ದರಾಮಯ್ಯ (Siddaramaiah) ಪ್ರತಿಕ್ರಿಯೆ ನೀಡಿದ್ದಾರೆ.

    ಈ ಕುರಿತು ಸೋಷಿಯಲ್‌ ಮೀಡಿಯಾ X ಖಾತೆಯಲ್ಲಿ ಪ್ರತಿಕ್ರಿಯಿಸಿರುವ ಸಿಎಂ, ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ನಡೆದಿರುವ ಸ್ಪೋಟದ ತನಿಖೆ ತೀವ್ರಗತಿಯಲ್ಲಿ ನಡೆಯುತ್ತಿದೆ. ತಪ್ಪಿತಸ್ಥರ ವಿರುದ್ಧ ಖಚಿತವಾಗಿ ಕಠಿಣ ಕ್ರಮ ಕೈಗೊಳ್ಳಲಾಗುವುದು. ಪ್ರಾಥಮಿಕ ತನಿಖೆಯಲ್ಲಿ ಸಣ್ಣ ಪ್ರಮಾಣದ ಸುಧಾರಿತ ಸ್ಫೋಟಕವಾಗಿದೆ ಎಂದು ತಿಳಿದುಬಂದಿದೆ, ಪೂರ್ಣ ವರದಿ ಬಂದ ನಂತರ ಇನ್ನಷ್ಟು ಮಾಹಿತಿ ಸಿಗಲಿದೆ.

    ಕ್ಯಾಶಿಯರ್ ಬಳಿ ಟೋಕನ್ ಪಡೆದು ಅಲ್ಲಿ ತಿಂಡಿ ತಿಂದಿರುವ ವ್ಯಕ್ತಿ, ಬ್ಯಾಗ್ ಇಟ್ಟು ಬಂದಿದ್ದಾನೆ ಎಂಬ ಮಾಹಿತಿ ದೊರೆತಿದೆ. ಘಟನೆಯಲ್ಲಿ ಸುಮಾರು ಎಂಟು ಜನರಿಗೆ ಗಾಯಗಳಾಗಿವೆ. ಅದೃಷ್ಟವಶಾತ್ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸಿಸಿಟಿವಿ ಕ್ಯಾಮರಾ ಪರೀಕ್ಷಿಸಲಾಗುತ್ತಿದೆ. ಈ ಬಗ್ಗೆ ತನಿಖೆ ನಡೆಯುತ್ತಿದ್ದು ಗೃಹ ಸಚಿವರಿಗೆ ಸ್ಥಳಕ್ಕೆ ಭೇಟಿ ನೀಡುವಂತೆ ತಿಳಿಸಲಾಗಿದೆ. ಇನ್ನು ಸ್ವಲ್ಪ ಹೊತ್ತಿನಲ್ಲಿಯೇ ಸ್ಪಷ್ಟ ಮಾಹಿತಿ ದೊರೆಯಲಿದೆ.

    ರಾಜ್ಯದಲ್ಲಿ ಇಂಥ ಘಟನೆ ನಡೆಯಬಾರದಿತ್ತು. ಮಂಗಳೂರಿನಲ್ಲಿ ಆಗಿದ್ದು ಬಿಟ್ಟರೆ ಪುನಃ ಅಂತಹ ಘಟನೆ ಸಂಭವಿಸಿದೆ. ಯಾರು ಇದನ್ನು ಮಾಡಿದ್ದಾರೆ ಎಂದು ಪತ್ತೆ ಹಚ್ಚಿ ಅವರ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ವಿರೋಧ ಪಕ್ಷಗಳು ಇಂತಹ ವಿಷಯದಲ್ಲಿ ರಾಜಕಾರಣ ಮಾಡಬಾರದು. ಎಲ್ಲರೂ ಈಗ ಸರ್ಕಾರದ ಜೊತೆ ಸಹಕರಿಸಬೇಕು ಎಂದು ಮನವಿ ಮಾಡಿದ್ದಾರೆ.

    ಡಿಜಿಪಿ ಅಲೋಕ್‌ ಮೋಹನ್‌ ಹೇಳಿದ್ದೇನು?
    ವೈಟ್‌ಫೀಲ್ಡ್‌ ಬಳಿಯ ಬ್ರೂಕ್‌ಫೀಲ್ಡ್‌ ಕುಂದಲನಹಳ್ಳಿ ಮುಖ್ಯರಸ್ತೆಯಲ್ಲಿರುವ ದಿ ರಾಮೇಶ್ವರಂ ಕೆಫೆಯಲ್ಲಿ ಬಾಂಬ್‌ ಸ್ಫೋಟವಾಗಿದೆ. ಪೊಲೀಸರು ತನಿಖೆ ಆರಂಭಿಸಿದ್ದು, ಕೆಲ ಅನುಮಾನಾಸ್ಪದ ವಸ್ತುಗಳು ಸ್ಥಳದಲ್ಲಿ ಪತ್ತೆಯಾಗಿವೆ. ಶುಕ್ರವಾರ ಮಧ್ಯಾಹ್ನ ಸುಮಾರು 1 ಗಂಟೆಗೆ ಬಾಂಬ್ ಸ್ಫೋಟಗೊಂಡಿದೆ. ವಿಧಿ ವಿಜ್ಞಾನ ತಂಡ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಗೃಹ ಸಚಿವ ಪರಮೇಶ್ವರ್‌ ಅವರು ಮಾಹಿತಿ ಪಡೆದಿದ್ದಾರೆ. ಎಫ್‌ಎಸ್‌ಎಲ್‌ ತಂಡದ ಪರಿಶೀಲನೆ ಬಳಿಕಪೂರ್ಣ ಮಾಹಿತಿ ನೀಡುತ್ತೇವೆ ಎಂದು ಡಿಜಿಪಿ ಅಲೋಕ್‌ ಮೋಹನ್‌ ಹೇಳಿದ್ದಾರೆ.

    ರಾಮೇಶ್ವರ ಕೆಫೆ ಎಂ.ಡಿ. ಸ್ಫೋಟಕ ಮಾಹಿತಿ:
    ಬಾಂಬ್ ಸ್ಫೋಟಕ್ಕೆ ಸಂಬಂಧಿಸಿದ ಸಿಸಿಟಿವಿ ದೃಶ್ಯಗಳನ್ನು ಗಮನಿಸಿದ್ದೇನೆ. 10 ಸೆಕೆಂಡುಗಳಲ್ಲಿ ಎರಡು ಬಾರಿ ಸ್ಫೋಟ ಸಂಭವಿಸಿದೆ. ಕೈತೊಳೆಯುವ ಜಾಗದಲ್ಲಿ ಸ್ಫೋಟ ಸಂಭವಿಸಿದೆ. ಅಲ್ಲಿ ಯಾವುದೇ ಸಿಲಿಂಡರ್ ಇಟ್ಟಿರಲಿಲ್ಲ. ಅಲ್ಲದೇ ಕೆಫೆಯಲ್ಲಿಟ್ಟಿದ್ದ ಸಿಲಿಂಡರ್‌ಗಳು ಸೇಫ್ ಆಗಿದೆ. ಸ್ಫೋಟ ಸಂಭವಿಸಿದ ಜಾಗದಲ್ಲಿ ಉದ್ಯೋಗಿಯೊಬ್ಬರ ಐಡಿ ಕಾರ್ಡ್ ಪತ್ತೆಯಾಗಿದೆ. ಬ್ಯಾಟರಿ ಬೋಲ್ಟ್‌ಗಳು ಸಿಕ್ಕಿರೋದನ್ನ ಗಮನಿಸಿದ್ದೇನೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಪಡೆಯುತ್ತಿದ್ದೇನೆ ಎಂದು ರಾಮೇಶ್ವರ ಕೆಫೆ ವ್ಯವಸ್ಥಾಪಕ ನಿರ್ದೇಶಕಿ ದಿವ್ಯಾ ಹೇಳಿದ್ದಾರೆ.