Tag: ರಾಮಲಾಲ್

  • ರಾಮಲಾಲ್ ಜಾಗಕ್ಕೆ ಬಿಎಲ್ ಸಂತೋಷ್ ನೇಮಕ

    ರಾಮಲಾಲ್ ಜಾಗಕ್ಕೆ ಬಿಎಲ್ ಸಂತೋಷ್ ನೇಮಕ

    ಬೆಂಗಳೂರು: ರಾಮಲಾಲ್ ಅವರ ರಾಜೀನಾಮೆಯಿಂದ ತೆರವಾದ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರನ್ನು ನೇಮಿಸಲಾಗಿದೆ.

    ಬಿಜೆಪಿ ರಾಷ್ಟ್ರಾಧ್ಯಕ್ಷ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಬಿ.ಎಲ್.ಸಂತೋಷ್ ಅವರನ್ನು ಬಿಜೆಪಿ ಪ್ರಧಾನ ಕಾರ್ಯದರ್ಶಿಯಾಗಿ ನೇಮಕ ಮಾಡಿದ್ದಾರೆ. ಈ ನೇಮಕವು ತಕ್ಷಣದಿಂದ ಜಾರಿಗೆ ಬರುತ್ತದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ಮಾಧ್ಯಮ ಹೇಳೆಕೆಯ ಮೂಲಕ ತಿಳಿಸಿದ್ದಾರೆ.

    ಬಿಜೆಪಿ ರಾಷ್ಟ್ರಧ್ಯಕ್ಷ ಅಮಿತ್ ಶಾ ಅವರಿಗೆ ಪತ್ರ ಬರೆದಿದ್ದ ರಾಮಲಾಲ್ ಅವರು, ನನ್ನನ್ನು ಆರ್‌ಎಸ್‌ಎಸ್‌ಗೆ ಕಳುಹಿಸಿ, ಬಿಜೆಪಿ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ಬಿಡುಗಡೆಗೊಳಿಸಿ ಎಂದು ಮನವಿ ಮಾಡಿಕೊಂಡಿದ್ದರು. ಈ ನಿಟ್ಟಿನಲ್ಲಿ ರಾಮ್‍ಲಾಲ್ ಅವರ ಮನವಿಯನ್ನು ಆಲಿಸಿದ ಹೈಕಮಾಂಡ್ ಬಿಡುಗಡೆ ನೀಡಿದೆ. ಹೀಗಾಗಿ ರಾಮಲಾಲ್ ಅವರು 10 ವರ್ಷಗಳ ನಂತರ ಆರ್‌ಎಸ್‌ಎಸ್‌ಗೆ ವಾಪಸಾಗಿದ್ದಾರೆ.

    ರಾಮಲಾಲ್ ಅವರು ಬಿಜೆಪಿ ಮತ್ತು ಆರ್‌ಎಸ್‌ಎಸ್‌ ಮಧ್ಯೆ ಪ್ರಮುಖ ಸಂವಹನ ಕೊಂಡಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಸಾಮಾನ್ಯವಾಗಿ ಸಂಘಟನೆಯಲ್ಲಿ ಹಲವು ವರ್ಷಗಳ ದುಡಿದವರನ್ನು ಬಿಜೆಪಿ ಪ್ರಧಾನ ಕಾರ್ಯದರ್ಶಿಯನ್ನಾಗಿ ನೇಮಿಸಲಾಗುತ್ತದೆ. ಪ್ರಧಾನಿ ನರೇಂದ್ರ ಮೋದಿ ಅವರು ಕೂಡ ಈ ಹುದ್ದೆಯನ್ನು ನಿರ್ವಹಿಸಿದ್ದರು.

    ರಾಮಲಾಲ್ ಅಡಿಯಲ್ಲಿ ಜಂಟಿ ಪ್ರಧಾನ ಕಾರ್ಯದರ್ಶಿಯಾಗಿದ್ದ ವಿ.ಸತೀಶ್ ಈಗ ಅವರ ಸ್ಥಾನ ತುಂಬಲಿದ್ದಾರೆ ಎನ್ನಲಾಗಿತ್ತು. ಆದರೆ ಈಗ ಬಿಜೆಪಿ ಹೈಕಮಾಂಡ್ ಬಿ.ಎಲ್.ಸಂತೋಷ್ ಅವರಿಗೆ ಮಣೆ ಹಾಕಿದೆ.

    ದಕ್ಷಿಣ ಭಾರತದಲ್ಲಿ ಬಿಜೆಪಿಯನ್ನು ಸಂಘಟಿಸುವ ಉದ್ದೇಶದಿಂದ ಬಿ.ಎಲ್.ಸಂತೋಷ್ ಅವರನ್ನು ನೇಮಕ ಮಾಡಲಾಗಿದೆ ಎನ್ನಲಾಗುತ್ತಿದೆ.

  • ತುರ್ತು ಶಾಸಕಾಂಗ ಸಭೆ, ಶಾ ಆಪ್ತ ರಾಮ್‍ಲಾಲ್ ಬೆಂಗಳೂರಿಗೆ: ಕುತೂಹಲ ಮೂಡಿಸಿದ ಬಿಜೆಪಿ ನಡೆ

    ತುರ್ತು ಶಾಸಕಾಂಗ ಸಭೆ, ಶಾ ಆಪ್ತ ರಾಮ್‍ಲಾಲ್ ಬೆಂಗಳೂರಿಗೆ: ಕುತೂಹಲ ಮೂಡಿಸಿದ ಬಿಜೆಪಿ ನಡೆ

    ಬೆಂಗಳೂರು: ಆಪರೇಷನ್ ಲೋಟಸ್ ರಾಕೆಟ್ ನಡೆಯಲು ಸಿದ್ಧತೆ ನಡೆದಿದೆ ಎನ್ನುವಾಗಲೇ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ತುರ್ತು ಶಾಸಕಾಂಗ ಪಕ್ಷದ ಸಭೆಯನ್ನು ಕರೆದಿದ್ದಾರೆ. ಮಂಗಳವಾರ ಎಲ್ಲ ಶಾಸಕರು ಬೆಂಗಳೂರಿಗೆ ಬರುವಂತೆ ಬಿಎಸ್‍ವೈ ಬುಲಾವ್ ನೀಡಿದ್ದು, ಮಧ್ಯಾಹ್ನ 3.30ಕ್ಕೆ ಮಲ್ಲೇಶ್ವರದಲ್ಲಿರುವ ಬಿಜೆಪಿ ಕಚೇರಿಯಲ್ಲಿ ಸಭೆ ನಡೆಯಲಿದೆ.

    ಫೆ.6 ರಿಂದ ಬಜೆಟ್ ಅಧಿವೇಶನ ಆರಂಭವಾಗಲಿರುವ ಬೆನ್ನಲ್ಲೇ ರಾಜ್ಯಕ್ಕೆ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ರಾಮ್ ಲಾಲ್ ಆಗಮಿಸಲಿದ್ದಾರೆ. ರಾಜ್ಯದಲ್ಲಿ ಕ್ಷಿಪ್ರ ಬೆಳವಣಿಗೆಗಳು ನಡೆಯುತ್ತಿರುವ ಸಂದರ್ಭದಲ್ಲಿಯೇ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಆಪ್ತ ರಾಮಲಾಲ್ ರಾಜ್ಯಕ್ಕೆ ಭೇಟಿ ನೀಡುತ್ತಿದ್ದಾರೆ. ಮಂಗಳವಾರ ಸಂಜೆ 6 ಗಂಟೆಗೆ ಬಿಜೆಪಿ ಕಚೇರಿಯಲ್ಲಿ ಮಹತ್ವದ ಕೋರ್ ಕಮಿಟಿ ಸಭೆ ನಡೆಯಲಿದ್ದು, ರಾಮಲಾಲ್ ಜೊತೆ ರಾಜ್ಯ ನಾಯಕರು ಚರ್ಚಿಸಲಿದ್ದಾರೆ.

    ಈ ಬೆಳವಣಿಗೆಗಳ ಮಧ್ಯೆ ಯಡಿಯೂರಪ್ಪ ಅವರ ಮೈಸೂರು ಪ್ರವಾಸ ದಿಢೀರ್ ರದ್ದಾಗಿದೆ. ನಿಗದಿ ಪ್ರಕಾರ ಬಿಎಸ್‍ವೈ ಸುತ್ತೂರು ಜಾತ್ರೆಗೆ ತೆರಳಬೇಕಿತ್ತು. ಆದರೆ ಆಪರೇಷನ್ ಲೋಟಸ್ ರಾಕೆಟ್ ಅಂತಿಮ ಹಂತ ತಲುಪಿರುವ ಹಿನ್ನೆಲೆಯಲ್ಲಿ ಮೈಸೂರು ಪ್ರವಾಸ ರದ್ದು ಮಾಡಿದ್ದಾರೆ ಎನ್ನಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv