Tag: ರಾಮಲಲ್ಲಾ

  • ಈ ಬಾರಿ ಅಯೋಧ್ಯೆಯಲ್ಲಿ ರಾಮನವಮಿ ಅದ್ಧೂರಿ ಆಚರಣೆ- ಸೂರ್ಯ ತಿಲಕಕ್ಕೆ ಸಿದ್ಧತೆ

    ಈ ಬಾರಿ ಅಯೋಧ್ಯೆಯಲ್ಲಿ ರಾಮನವಮಿ ಅದ್ಧೂರಿ ಆಚರಣೆ- ಸೂರ್ಯ ತಿಲಕಕ್ಕೆ ಸಿದ್ಧತೆ

    ಅಯೋಧ್ಯೆ: ಈ ಬಾರಿಯ ರಾಮನವಮಿ ಅಯೋಧ್ಯೆಯಲ್ಲಿ (Ayodhya) ವಿಶೇಷವಾಗಿರಲಿದೆ. ರಾಮ ಮಂದಿರ ನಿರ್ಮಾಣದ ನಂತರ ಇದು ಮೊದಲ ರಾಮನವಮಿ. ಹೀಗಾಗಿ ರಾಮಲಲ್ಲಾನ ಜನ್ಮ ದಿನಾಚರಣೆಯನ್ನು ಅದ್ಧೂರಿಯಾಗಿ ಆಚರಿಸಲು ಸಿದ್ಧತೆ ನಡೆಸಲಾಗುತ್ತಿದೆ. ರಾಮನವಮಿಯಂದು ರಾಮಮಂದಿರದಲ್ಲಿರುವ ಶ್ರೀರಾಮನ ಹಣೆಗೆ ಸೂರ್ಯ ತಿಲಕವಿಡಲು ಸಿದ್ಧತೆಗಳು ನಡೆಯುತ್ತಿವೆ. ರೂರ್ಕಿಯ ವಿಜ್ಞಾನಿಗಳು ಹಗಲಿರುಳು ಈ ಕೆಲಸದಲ್ಲಿ ನಿರತರಾಗಿದ್ದಾರೆ.

    500 ವರ್ಷಗಳ ಸುದೀರ್ಘ ಕಾಯುವಿಕೆಯ ನಂತರ ಶ್ರೀರಾಮನು ಗರ್ಭಗುಡಿಯಲ್ಲಿ ಕುಳಿತಿದ್ದಾನೆ. ರಾಮನವಮಿಯ ದಿನದಂದು ಸೂರ್ಯನ ಕಿರಣಗಳು ರಾಮಲಲ್ಲಾನ ಹಣೆಯ ಮೇಲೆ ಬೀಳುವ ರೀತಿಯಲ್ಲಿ ರಾಮಮಂದಿರದ ಗರ್ಭಗುಡಿಯನ್ನು ನಿರ್ಮಿಸಲಾಗಿದೆ. ರಾಮ ಮಂದಿರದ (Rama Mandir) ಕೆಳ ಅಂತಸ್ತಿನ ಕಾಮಗಾರಿ ಪೂರ್ಣಗೊಂಡಿದ್ದು, ಮೊದಲ ಮಹಡಿಯ ಕಾಮಗಾರಿ ನಡೆಯುತ್ತಿದ್ದು, ಶಿಖರದ ಕಾಮಗಾರಿ ಇನ್ನೂ ಬಾಕಿ ಇದೆ. ಇದನ್ನೂ ಓದಿ: ಇದುವರೆಗೆ 1.5 ಕೋಟಿ ಭಕ್ತರು ರಾಮಮಂದಿರಕ್ಕೆ ಭೇಟಿ- ವಿದೇಶಿಗರೇ ಹೆಚ್ಚು

    ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಪ್ರಕಾರ, ದೇವಾಲಯವು ಪೂರ್ಣಗೊಂಡು ಶಿಖರವನ್ನು ನಿರ್ಮಿಸಿದಾಗ, ಶಿಖರದ ಮೇಲೆ ಸಾಧನವನ್ನು ಸ್ಥಾಪಿಸಿ, ಪ್ರತಿ ರಾಮನವಮಿಯಂದು ಭಗವಾನ್ ರಾಮನ ಹಣೆಗೆ ಸೂರ್ಯ ತಿಲಕವನ್ನು ಇರಿಸಲಾಗುತ್ತದೆ. ಆದರೆ ಇದಕ್ಕಾಗಿ ಭಕ್ತರು ತುಂಬಾ ಸಮಯ ಕಾಯಬೇಕಾಗಿದೆ. ಹೀಗಾಗಿ ಈ ರಾಮನವಮಿಯಂದೇ ಸೂರ್ಯ ತಿಲಕವನ್ನಿಡಲು ಪ್ರಯತ್ನಿಸಲಾಗುತ್ತಿದೆ. ಗೋಪುರವನ್ನು ಇನ್ನೂ ನಿರ್ಮಿಸಲಾಗಿಲ್ಲ, ಈ ಸಾಧನವನ್ನು ದೇವಾಲಯದ ಮೊದಲ ಮಹಡಿಯಲ್ಲಿ ಇರಿಸಲಾಗಿದ್ದು, ರಾಮನವಮಿಯಂದು ಮಧ್ಯಾಹ್ನ 12 ಗಂಟೆಗೆ ಶ್ರೀರಾಮನ ವಿಗ್ರಹದ ಹಣೆಗೆ ಇಡಲು ಸೂರ್ಯ ತಿಲಕದ ಸಿದ್ಧತೆಗಳು ನಡೆಯುತ್ತಿವೆ. ರೂರ್ಕಿಯ ವಿಜ್ಞಾನಿಗಳು ಈ ಕೆಲಸದಲ್ಲಿ ತೊಡಗಿದ್ದಾರೆ.

    20 ಗಂಟೆ ದರ್ಶನ: ರಾಮನವಮಿಯ ಸಂದರ್ಭದಲ್ಲಿ ಅಯೋಧ್ಯೆಯ ರಾಮಮಂದಿರದಲ್ಲಿ 20 ಗಂಟೆಗಳ ಕಾಲ ಭಕ್ತರಿಗೆ ರಾಮಲಲ್ಲಾನ ದರ್ಶನ ಮಾಡುವ ಅವಕಾಶವಿದೆ. ಈ ವ್ಯವಸ್ಥೆಯು ಏಪ್ರಿಲ್ 15 ರಿಂದ 17 ರವರೆಗೆ ಜಾರಿಯಲ್ಲಿರುತ್ತದೆ. ರಾಮನವಮಿಯಂದು ಅಯೋಧ್ಯೆಯ 100 ಸ್ಥಳಗಳಲ್ಲಿ ಎಲ್ಇಡಿ ಪರದೆಗಳಲ್ಲಿ ನೇರ ಪ್ರಸಾರವಾಗಲಿದೆ.

    ಭಕ್ತರು ತಮ್ಮ ಮೊಬೈಲ್ ಫೋನ್, ಶೂ ಮತ್ತು ಇತರ ವಸ್ತುಗಳನ್ನು ಮಂದಿರದೊಳಗೆ ತರದಂತೆ ಸೂಚಿಸಲಾಗಿದೆ. ರಾಮಜನ್ಮಭೂಮಿ ಪಥದಿಂದ ದೇವಸ್ಥಾನದ ಆವರಣದವರೆಗೆ ಭಕ್ತರಿಗೆ 50 ಸ್ಥಳಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗುವುದು. ಸೆಣಬಿನ ಕಂಬಳಿ ಹಾಸಲಾಗುವುದು. ನೆರಳಿಗಾಗಿ ಜರ್ಮನ್ ಹ್ಯಾಂಗರ್‌ ಗಳನ್ನು ಸ್ಥಾಪಿಸಲಾಗುತ್ತಿದೆ. ಪ್ರಸಾದದ ಜೊತೆಗೆ ಒಆರ್‌ಎಸ್ ಅನ್ನು ಸಹ ಭಕ್ತರಿಗೆ ನೀಡಲಾಗುವುದು. ಇದರಿಂದ ಅವರಿಗೆ ಬೇಸಿಗೆಯಲ್ಲಿ ಶಕ್ತಿ ಸಿಗುತ್ತದೆ. ರಾಮ ನವಮಿಯ ಸಂದರ್ಭದಲ್ಲಿ ಪಾಸ್ ವ್ಯವಸ್ಥೆಯು ಏಪ್ರಿಲ್ 15 ರಿಂದ 18 ರವರೆಗೆ ರದ್ದಾಗಿರುತ್ತದೆ.

  • ಅಯೋಧ್ಯೆಯಲ್ಲಿ ಅಜ್ಜನ ಜೊತೆ ಉಪಾಸನಾ

    ಅಯೋಧ್ಯೆಯಲ್ಲಿ ಅಜ್ಜನ ಜೊತೆ ಉಪಾಸನಾ

    ತೆಲುಗಿನ ಹೆಸರಾಂತ ನಟ ರಾಮ್ ಚರಣ್ ಪತ್ನಿ ಉಪಾಸನಾ (Upasana) ತಮ್ಮ ತಾತನ ಜೊತೆ ಅಯೋಧ್ಯೆಗೆ (Ayodhya) ತೆರಳಿ ರಾಮಲಲ್ಲಾ (Ramlalla) ದರ್ಶನ ಪಡೆದಿದ್ದಾರೆ. ರಾಮಲಲ್ಲಾ ಪ್ರತಿಷ್ಠಾಪನೆ ದಿನ ಪತಿ ರಾಮ್ ಚರಣ್ ಮತ್ತು ಮಾವ ಚಿರಂಜೀವಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಆಗ ಉಪಾಸನಾ ಹೋಗಿರಲಿಲ್ಲ.

    ಇಂದು ತಾತ ಮತ್ತು ಕುಟುಂಬದ ಕೆಲ ಸದಸ್ಯರ ಜೊತೆ ಅಯೋಧ್ಯೆಗೆ ಬಂದಿದ್ದ ಉಪಾಸನಾ, ದೇವರ ದರ್ಶನ ಪಡೆದಿದ್ದಾರೆ. ನಂತರ ಕೆಲವು ವಿಷಯಗಳನ್ನೂ ಅವರು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರೊಂದಿಗೆ ಹಂಚಿಕೊಂಡಿದ್ದಾರೆ.

     

    ಅಯೋಧ್ಯೆಯಲ್ಲಿ ಸುಸಜ್ಜಿತ ಆಸ್ಪತ್ರೆ ನಿರ್ಮಾಣ ಮಾಡಬೇಕು ಎನ್ನುವುದು ಉಪಾಸನಾ ಕನಸಂತೆ. ಅದಕ್ಕಾಗಿ ಅವರು ಯೋಗಿ ಆದಿತ್ಯನಾಥ್ ಅವರನ್ನು ಭೇಟಿ ಮಾಡಿದ್ದಾರೆ. ತಮ್ಮ ಕನಸಿನ ಪ್ರಾಜೆಕ್ಟ್ ಬಗ್ಗೆ ಅವರ ಗಮನಕ್ಕೂ ತಂದಿದ್ದಾರೆ. ಸದ್ಯದಲ್ಲೇ ಆಸ್ಪತ್ರೆಯ ಕೆಲಸವನ್ನು ಶುರು ಕೂಡ ಮಾಡಲಿದ್ದಾರಂತೆ.

  • ಅಯೋಧ್ಯೆಯಲ್ಲಿ ನಟ ರಕ್ಷಿತ್ ಶೆಟ್ಟಿ

    ಅಯೋಧ್ಯೆಯಲ್ಲಿ ನಟ ರಕ್ಷಿತ್ ಶೆಟ್ಟಿ

    ಕ್ಷಿತ್ ಶೆಟ್ಟಿ (Ayodhya) ಹೊಸ ಸಿನಿಮಾದ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಈ ನಡುವೆ ಅವರು ಟೆಂಪಲ್ ರನ್ ಕೂಡ ಮಾಡುತ್ತಿದ್ದಾರೆ. ಮೊನ್ನೆಯಷ್ಟೇ ಅಲೆವೂರು ಜೋಡು ರಸ್ತೆಯಲ್ಲಿ ನಡೆದ 118ನೇ ನೇಮೋತ್ಸವದಲ್ಲಿ ಪಾಲ್ಗೊಂಡಿದ್ದರು.

    ಜೊತೆಗೆ ಅವರು ತಮ್ಮ ಮನೆಯಲ್ಲಿ ನಡೆದ ಕೋಲದಲ್ಲೂ ಭಾಗಿಯಾಗಿದ್ದರು. ಇದೀಗ ಅಯೋಧ್ಯೆಯಲ್ಲಿ (Ayodhya) ಕಾಣಿಸಿಕೊಂಡಿದ್ದಾರೆ ರಕ್ಷಿತ್.

    ಸ್ನೇಹಿತರ ಜೊತೆಗೆ ಅಯೋಧ್ಯೆಗೆ ತೆರಳಿರುವ ರಕ್ಷಿತ್, ಅಲ್ಲಿನ ರಾಮನ ದರ್ಶನ ಪಡೆದಿದ್ದಾರೆ. ಜೊತೆಗೆ ರಾಮಲಲ್ಲಾ ಮತ್ತು ಅಯೋಧ್ಯೆಯ ಕುರಿತಂತೆ ಮೆಚ್ಚುಗೆಯನ್ನೂ ವ್ಯಕ್ತ ಪಡಿಸಿದ್ದಾರೆ. ಅವರು ಅಯೋಧ್ಯೆಯಲ್ಲಿ ಇರುವ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ.

    ರಕ್ಷಿತ್ ಶೆಟ್ಟಿ ಹೊಸ ಸಿನಿಮಾದ ಕೆಲಸದಲ್ಲಿ ತೊಡಗಿದ್ದಾರೆ. ಇದೇ ತಿಂಗಳು ಚಿತ್ರಕ್ಕೆ ಮುಹೂರ್ತ ಎಂದು ಹೇಳಲಾಗುತ್ತಿದೆ. ಹೊಂಬಾಳೆ ಬ್ಯಾನರ್ ನಲ್ಲಿ ಈ ಸಿನಿಮಾ ಮೂಡಿ ಬರಲಿದ್ದು, ಈಗಾಗಲೇ ಸ್ಕ್ರಿಪ್ಟ್ ಕೆಲಸ ಮುಗಿದಿದೆ.

     

    ಜೊತೆಗೆ ಕಲಾವಿದರ ಆಯ್ಕೆಯಲ್ಲೂ ಅವರು ತೊಡಗಿದ್ದಾರೆ ಎಂದು ಹೇಳಲಾಗುತ್ತಿದೆ.

  • ರಾಮಲಲ್ಲಾನಿಗೆ 27 ಕಿಲೋ ತೂಗುವ ಬೆಳ್ಳಿದೀಪ ನೀಡಿದ ಆಚಾರ್ಯ ದಂಪತಿ

    ರಾಮಲಲ್ಲಾನಿಗೆ 27 ಕಿಲೋ ತೂಗುವ ಬೆಳ್ಳಿದೀಪ ನೀಡಿದ ಆಚಾರ್ಯ ದಂಪತಿ

    – ಗರ್ಭಗುಡಿಯಲ್ಲಿ ದೀಪ ಬೆಳಗಿದ ಪೇಜಾವರ ಸ್ವಾಮೀಜಿ

    ಉಡುಪಿ: ಪೇಜಾವರ ಮಠದ ಭಕ್ತ, ಮುಂಬೈ ಉದ್ಯಮಿ ನಾಗೇಂದ್ರ ಆಚಾರ್ಯ-ಅರುಣಾ ಆಚಾರ್ಯ ದಂಪತಿ ಅಯೋಧ್ಯೆ ರಾಮನಿಗೆ (Ayodhya Ram Mandir) ವಿಶಿಷ್ಟ ದೀಪಸೇವೆ ಸಲ್ಲಿಕೆ ಮಾಡಿದ್ದಾರೆ.

    ಬೆಳ್ಳಿಯ ಎರಡು ಬೃಹತ್ ಕಾಲುದೀಪಗಳನ್ನು ಅಯೋಧ್ಯೆಗೆ ಅರ್ಪಿಸಿದ್ದಾರೆ. ಪೇಜಾವರ ಮಠದ ಶಿಷ್ಯರಾಗಿರುವ ದಂಪತಿ ರಾಮಸೇವೆ ಮಾಡುವ ಸಂಕಲ್ಪ ಮಾಡಿದ್ದು, ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಗಳ ಮೂಲಕ ಅವರು ದೊಡ್ಡ ದೊಡ್ಡ ದೀಪಗಳನ್ನು ಅರ್ಪಿಸಿದ್ದಾರೆ.

    ಎರಡು ದೀಪಗಳು ತಲಾ ಮೂರೂವರೆ ಅಡಿ ಎತ್ತರವಿದ್ದು, ತಲಾ 13.5 ಕೆ.ಜಿ.ತೂಕವಿವೆ. ಉದ್ಯಮಿ ಆಚಾರ್ಯ ದಂಪತಿ, ಎ.ಕೆ. ಆರ್. ಟ್ರಸ್ಟ್‌ನ ವಿಶ್ವಸ್ಥರೂ ಆಗಿದ್ದು ಉಡುಪಿಯ ಕೃಷ್ಣಮಠ, ಅಷ್ಟ ಮಠಗಳ ಭಕ್ತರಾಗಿ ಸೇವೆ ಸಲ್ಲಿಸಿದ್ದಾರೆ. ಹೊಸ ದೀಪಗಳನ್ನು ರಾಮಮಂದಿರದ ಗರ್ಭಗುಡಿಯ ಮುಂಭಾಗದಲ್ಲಿ ಪೇಜಾವರ ಸ್ವಾಮೀಜಿ ಬೆಳಗಿದರು. ಇದನ್ನೂ ಓದಿ: ಕೋಟಿ ಕೋಟಿ ಒಡೆಯ ಅಯೋಧ್ಯೆ ಬಾಲರಾಮ – ಒಂದು ತಿಂಗಳಲ್ಲಿ 25 ಕೋಟಿ ಸಂಗ್ರಹ

  • ಅಯೋಧ್ಯೆ ರಾಮಮಂದಿರದಲ್ಲಿ ರಾಜರಾಮ ‘ದರ್ಬಾರ್’ ಈ ವರ್ಷದ ಅಂತ್ಯದಲ್ಲಿ ಪೂರ್ಣ

    ಅಯೋಧ್ಯೆ ರಾಮಮಂದಿರದಲ್ಲಿ ರಾಜರಾಮ ‘ದರ್ಬಾರ್’ ಈ ವರ್ಷದ ಅಂತ್ಯದಲ್ಲಿ ಪೂರ್ಣ

    ಅಯೋಧ್ಯೆ (ಉತ್ತರ ಪ್ರದೇಶ): ರಾಮಲಲ್ಲಾನ (Ram Lalla) ಪ್ರಾಣ ಪ್ರತಿಷ್ಠಾಪನೆ ನೆರವೇರಿದ ಬಳಿಕ ಈಗ ರಾಮಮಂದಿರ (Ram Mandir) ನಿರ್ಮಾಣ ಕಾಮಗಾರಿ ಕಾರ್ಯ ಪುನರ್‌ ಆರಂಭಗೊಂಡಿದೆ.

    ಅಯೋಧ್ಯೆ (Ayodhya) ರಾಮಮಂದಿರ ನಿರ್ಮಾಣ ಸಮಿತಿ ಅಧ್ಯಕ್ಷ ನೃಪೇಂದ್ರ ಮಿಶ್ರಾ ಮಾತನಾಡಿ, ದೇವಾಲಯದಲ್ಲಿ ಮತ್ತೊಮ್ಮೆ ನಿರ್ಮಾಣ ಕಾರ್ಯ ಆರಂಭವಾಗಿದೆ. ‘ಪಾರ್ಕೋಟ’ ಕಾಮಗಾರಿ ಪೂರ್ಣಗೊಳ್ಳಬೇಕಿದೆ. 795 ಮೀಟರ್‌ನ ‘ಪರಿಕ್ರಮ’ ಗೋಡೆಯ ಕಾಮಗಾರಿ ಪೂರ್ಣಗೊಳ್ಳಲಿದೆ. ಇದಲ್ಲದೆ, ದೇವಾಲಯದ ಕೆಳಗಿನ ಸ್ತಂಭದ ಮೇಲೆ ಪ್ರತಿಮಾಶಾಸ್ತ್ರದ ಕಾರ್ಯವನ್ನು ಸಹ ಪ್ರಾರಂಭಿಸಲಾಗುವುದು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: 25 ಲಕ್ಷ ಜನರಿಂದ ಬಾಲಕ ರಾಮನ ದರ್ಶನ – 11 ಕೋಟಿ ರೂ. ಕಾಣಿಕೆ ಸಂಗ್ರಹ

    ಮೊದಲ ಮತ್ತು ಎರಡನೇ ಮಹಡಿಯಲ್ಲಿ ರಾಜಾರಾಮನ ‘ದರ್ಬಾರ್’ ಕೆಲಸವು ಈಗ ಏಕಕಾಲದಲ್ಲಿ ಪ್ರಾರಂಭವಾಗಲಿದೆ. ಇದು ಡಿಸೆಂಬರ್ 2024 ರಲ್ಲಿ ಅದು ಪೂರ್ಣಗೊಳ್ಳಲಿದೆ ಎಂದು ಮಾಹಿತಿ ನೀಡಿದ್ದಾರೆ.

    ಜ.22 ರಂದು ಅಯೋಧ್ಯೆ ರಾಮಮಂದಿರದ ಗರ್ಭಗುಡಿಯಲ್ಲಿ ರಾಮಲಲ್ಲಾನ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮ ಜರುಗಿತು. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಶಾಸ್ತ್ರೋಸ್ತವಾಗಿ ಬಾಲಕ ರಾಮ ಮೂರ್ತಿಯನ್ನು ಪ್ರತಿಷ್ಠಾಪಿಸಲಾಯಿತು. ಇದನ್ನೂ ಓದಿ: ರಾಮಲಲ್ಲಾ ಮೂರ್ತಿಯ ಕಣ್ಣುಗಳನ್ನ ಕೇವಲ 20 ನಿಮಿಷದಲ್ಲಿ ಕೆತ್ತಿದ್ರಂತೆ ಶಿಲ್ಪಿ ಯೋಗಿರಾಜ್‌

    ಈಗಾಗಲೇ ರಾಮಮಂದಿರದ 1ನೇ ಮಹಡಿ ಕಾಮಗಾರಿ ಪೂರ್ಣಗೊಂಡಿದೆ. ಉಳಿದ ಎರಡು ಮಹಡಿ ಕಾಮಗಾರಿ ನಡೆಯಬೇಕಿದೆ. 2025 ರ ವೇಳೆಗೆ ರಾಮಮಂದಿರ ನಿರ್ಮಾಣ ಕಾರ್ಯ ಪೂರ್ಣಗೊಳ್ಳಲಿದೆ.

  • ರಾಮಲಲ್ಲಾ ಮೂರ್ತಿಯ ಕಣ್ಣುಗಳನ್ನ ಕೇವಲ 20 ನಿಮಿಷದಲ್ಲಿ ಕೆತ್ತಿದ್ರಂತೆ ಶಿಲ್ಪಿ ಯೋಗಿರಾಜ್‌

    ರಾಮಲಲ್ಲಾ ಮೂರ್ತಿಯ ಕಣ್ಣುಗಳನ್ನ ಕೇವಲ 20 ನಿಮಿಷದಲ್ಲಿ ಕೆತ್ತಿದ್ರಂತೆ ಶಿಲ್ಪಿ ಯೋಗಿರಾಜ್‌

    – ‘ಬಾಲಕ ರಾಮ’ ಕೆತ್ತನೆಯ ಕುತೂಹಲಕಾರಿ ವಿಚಾರ ಹಂಚಿಕೊಂಡ ಮೈಸೂರಿನ ಶಿಲ್ಪಿ

    ಅಯೋಧ್ಯೆ (ಉತ್ತರ ಪ್ರದೇಶ): ಮುಗ್ಧತೆ ಮತ್ತು ದೈವತ್ವವನ್ನು ಹೊರಸೂಸುವ ಸುಂದರ ಕಣ್ಣುಗಳ ‘ಬಾಲಕ ರಾಮ’ ಅಯೋಧ್ಯೆ ರಾಮಮಂದಿರದ (Ayodhya Ram Mandir) ಗರ್ಭಗುಡಿಯಲ್ಲಿ ವಿರಾಜಮಾನನಾಗಿದ್ದಾನೆ. ರಾಮಲಲ್ಲಾ (Ram Lalla) ನೋಡಲು ಲಕ್ಷಾಂತರ ಭಕ್ತರು ಅಯೋಧ್ಯೆಗೆ ಯಾತ್ರೆ ಮಾಡುತ್ತಿದ್ದಾರೆ. ರಾಮಲಲ್ಲಾ ವಿಗ್ರಹದ ಆಕರ್ಷಣೆಯ ಕೇಂದ್ರಬಿಂದು ಸುಂದರ ಕಣ್ಣುಗಳು. ಈ ಕಣ್ಣುಗಳ ಬಗ್ಗೆ ಕುತೂಹಲಕಾರಿ ಅಂಶವೊಂದನ್ನು ದೇವಶಿಲ್ಪಿ ಅರುಣ್‌ ಯೋಗಿರಾಜ್‌ ಹಂಚಿಕೊಂಡಿದ್ದಾರೆ.

    ಜನಪ್ರಿಯ ಶಿಲ್ಪಿ ಅರುಣ್ ಯೋಗಿರಾಜ್ (Arun Yogiraj), ರಾಮಲಲ್ಲಾ ವಿಗ್ರಹ ಕೆತ್ತನೆಯ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. ಒಂದು ಮಂಗಳಕರ ಸಮಯದಲ್ಲಿ ಕಣ್ಣುಗಳನ್ನು ಪೂರ್ಣಗೊಳಿಸಲು ಕೇವಲ 20 ನಿಮಿಷ ತೆಗೆದುಕೊಂಡೆ. ಕಣ್ಣು ಕೆತ್ತನೆಗೆ ಚಿನ್ನದ ಉಳಿ ಮತ್ತು ಬೆಳ್ಳಿಯ ಸುತ್ತಿಗೆ ಬಳಸಿದ್ದೇನೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಲಕ್ನೋದಿಂದ 6 ದಿನ ಕಾಲ್ನಡಿಗೆಯಲ್ಲಿ ತೆರಳಿ ರಾಮಲಲ್ಲಾಗೆ ನಮಿಸಿದ 350 ಮಂದಿ ಮುಸ್ಲಿಮರು!

    ರಾಮಲಲ್ಲಾ ವಿಗ್ರಹದ ಕಣ್ಣುಗಳನ್ನು ಕೆತ್ತುವ ಮೊದಲು ಸರಯು ನದಿಯಲ್ಲಿ ಸ್ನಾನ ಮಾಡಿದೆ. ಹನುಮಾನ್‌ ಗರ್ಹಿ ಮತ್ತು ಕನಕ ಭವನದಲ್ಲಿ ಪೂಜೆ ಸಲ್ಲಿಸಿದೆ ಎಂದು ಶಿಲ್ಪಿ ಅರುಣ್‌ ಯೋಗಿರಾಜ್‌ ಹೇಳಿಕೊಂಡಿದ್ದಾರೆ. ಕೆತ್ತನೆ ಬಳಿಕ, ‘ಕಣ್ಣುಗಳು ಚೆನ್ನಾಗಿ ಕಾಣುತ್ತಿವೆಯೇ’ ಎಂದು ತಮ್ಮ ಸ್ನೇಹಿತರನ್ನು ಕೇಳುತ್ತಿದ್ದರಂತೆ.

    ವಿಗ್ರಹ ಕೆತ್ತನೆಗೂ ಮೊದಲು ಕಲ್ಲನ್ನು ಸೂಕ್ಷ್ಮವಾಗಿ ಗಮನಿಸಲು ಶಿಲ್ಪಿ ಸಾಕಷ್ಟು ಸಮಯ ತೆಗೆದುಕೊಳ್ಳಲು ನಿರ್ಧರಿಸಿದ್ದರಂತೆ. ಬಾಲಕ ರಾಮ ಮೂರ್ತಿ ಮೂಡಿಸುವುದಕ್ಕಾಗಿ, ಮಕ್ಕಳ ಜೊತೆಗೂ ಹೆಚ್ಚು ಸಮಯ ಕಳೆದಿದ್ದಾರೆ. ರಾಮಲಲ್ಲಾ ವಿಗ್ರಹದ ಮುಖ ಕೆತ್ತನೆ ಮಾಡಲು ಬರೋಬ್ಬರಿ 2 ತಿಂಗಳ ಸಮಯ ತೆಗೆದುಕೊಂಡರಂತೆ. ತಮಗೆ ಐಡಿಯಾ ಹೊಳೆದ ತಕ್ಷಣ ಮುಖ ಕೆತ್ತನೆ ಕಾರ್ಯ ಶುರು ಮಾಡಿದ್ದರಂತೆ. ಇದನ್ನೂ ಓದಿ: ಅಯೋಧ್ಯೆಯಲ್ಲಿ ವಿಶೇಷ ಮಂಡಲೋತ್ಸವ- ಸಿಎಂ ಯೋಗಿ ಭಾಗಿ

    ರಾಮಲಲ್ಲಾನ ವಿಗ್ರಹ ಕೆತ್ತನೆಗಾಗಿ ಶಿಲ್ಪಿ ಯೋಗಿರಾಜ್ ಹಲವಾರು ಸವಾಲುಗಳನ್ನು ಎದುರಿಸಿದ್ದಾರೆ. ಆರಂಭದಲ್ಲಿ ಆಯ್ಕೆ ಪ್ರಕ್ರಿಯೆಯಲ್ಲಿ ಅವರನ್ನು ಕಡೆಗಣಿಸಲಾಗಿತ್ತು. ಅಂತಿಮ ದಿನದಂದು ಅವರನ್ನು ಕರೆಸಲಾಯಿತು. ಮತ್ತೆ ಮೂವರು ಶಿಲ್ಪಿಗಳ ಪೈಕಿ ಆಯ್ಕೆಯಾದವರಲ್ಲಿ ಇವರೂ ಒಬ್ಬರಾದರು. ಅವರ ಮೊದಲ ವಿಗ್ರಹವನ್ನು ಮೂರು ತಿಂಗಳ ನಂತರ ಕಲ್ಲು ಸಂಬಂಧಿತ ತಾಂತ್ರಿಕ ಸಮಸ್ಯೆಗಳಿಂದ ತಿರಸ್ಕರಿಸಲಾಯಿತು. ಇದು ಅವರಿಗೆ ತೊಂದರೆ ಉಂಟುಮಾಡಿತ್ತು.

    ಮತ್ತೆ ಅವರು ವಿಗ್ರಹ ಕೆತ್ತನೆ ಮಾಡುವಾಗ ಕಲ್ಲಿನ ಸಣ್ಣ ಚೂರು ಅವರ ಕಣ್ಣಿನ ರೆಟಿನಾಗೆ ತಾಗಿ ಸಮಸ್ಯೆ ಉಂಟುಮಾಡಿತ್ತು. ಕಣ್ಣಿನ ಗಾಯದಿಂದ ಅವರನ್ನು ಆಸ್ಪತ್ರೆಗೆ ಸೇರಿಸಲಾಯಿತು. ಮತ್ತೆ ಅವರು ಕೆತ್ತನೆ ಕಾರ್ಯ ಮುನರಾರಂಭಿಸಲು 7 ದಿನಗಳ ಸಮಯ ತೆಗೆದುಕೊಳ್ಳಬೇಕಾಯಿತು. ಇದನ್ನೂ ಓದಿ: ರಾಮಲಲ್ಲಾ ಪ್ರಾಣ ಪ್ರತಿಷ್ಠಾ ಸಮಾರಂಭದಲ್ಲಿ ಭಾಗವಹಿಸಿದ್ದ ಮುಖ್ಯ ಇಮಾಮ್ ವಿರುದ್ಧ ಫತ್ವಾ

  • ಲಕ್ನೋದಿಂದ 6 ದಿನ ಕಾಲ್ನಡಿಗೆಯಲ್ಲಿ ತೆರಳಿ ರಾಮಲಲ್ಲಾಗೆ ನಮಿಸಿದ 350 ಮಂದಿ ಮುಸ್ಲಿಮರು!

    ಲಕ್ನೋದಿಂದ 6 ದಿನ ಕಾಲ್ನಡಿಗೆಯಲ್ಲಿ ತೆರಳಿ ರಾಮಲಲ್ಲಾಗೆ ನಮಿಸಿದ 350 ಮಂದಿ ಮುಸ್ಲಿಮರು!

    ಅಯೋಧ್ಯೆ: 350 ಮಂದಿ ಮುಸ್ಲಿಂ ಭಕ್ತರು ಲಕ್ನೋದಿಂದ 6 ದಿನಗಳ ಕಾಲ ಪಾದಯಾತ್ರೆಯ ಮೂಲಕ ಅಯೋಧ್ಯೆಗೆ ತಲುಪಿ ರಾಮಮಂದಿರದಲ್ಲಿರುವ (Ayodhya Ram Mandir) ಬಾಲಕ ರಾಮನಿಗೆ ಪೂಜೆ ಸಲ್ಲಿಸಿದ್ದಾರೆ.

    ರಾಷ್ಟ್ರೀಯ ಸ್ವಯಂ ಸೇವಕ ಸಂಘ (RSS)  ಬೆಂಬಲಿತ ಮುಸ್ಲಿಂ ಸಂಘಟನೆಯಾದ ಮುಸ್ಲಿಂ ರಾಷ್ಟ್ರೀಯ ಮಂಚ್ (MRM) ನೇತೃತ್ವದ ಗುಂಪು ಜನವರಿ 25 ರಂದು ಲಕ್ನೋದಿಂದ ತಮ್ಮ ಪ್ರಯಾಣವನ್ನು ಪ್ರಾರಂಭಿಸಿತು ಎಂದು MRM ನ ಮಾಧ್ಯಮ ಉಸ್ತುವಾರಿ ಶಾಹಿದ್ ಸಯೀದ್ ಬುಧವಾರ ಹೇಳಿದ್ದಾರೆ.

    350 ಮಂದಿ ಮುಸ್ಲಿಂ ಭಕ್ತರ ಗುಂಪು ‘ಜೈ ಶ್ರೀ ರಾಮ್’ ಎಂದು ಘೋಷಣೆ ಕೂಗುತ್ತಾ ಕೊರೆಯುವ ಚಳಿಯ ನಡುವೆಯೇ ಸುಮಾರು 150 ಕಿ.ಮೀ ಕಾಲ್ನಡಿಗೆಯಲ್ಲಿ ಸಾಗಿ ಅಯೋಧ್ಯೆಗೆ ತಲುಪಿದೆ. ಈ 6 ದಿನಗಳಲ್ಲಿ ಪ್ರತಿ 25 ಕಿ.ಮೀ ಬಳಿಕ ರಾತ್ರಿ ವೇಳೆ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದರು. ಮರುದಿನ ಬೆಳಗ್ಗೆ ತಮ್ಮ ಪ್ರಯಾಣವನ್ನು ಮುಂದುವರಿಸುತ್ತಿದ್ದರು ಎಂದು ಅವರು ವಿವರಿಸಿದ್ದಾರೆ. ಇದನ್ನೂ ಓದಿ: ರಾಮಲಲ್ಲಾ ಪ್ರಾಣ ಪ್ರತಿಷ್ಠಾ ಸಮಾರಂಭದಲ್ಲಿ ಭಾಗವಹಿಸಿದ್ದ ಮುಖ್ಯ ಇಮಾಮ್ ವಿರುದ್ಧ ಫತ್ವಾ

    ಸವೆದ ಬೂಟುಗಳು ಮತ್ತು ದಣಿದ ಪಾದಗಳೊಂದಿಗೆ 6 ದಿನಗಳ ಬಳಿಕ ಭಕ್ತರು ಅಯೋಧ್ಯೆಯನ್ನು ತಲುಪಿದರು. ನಂತರ ರಾಮಮಂದಿರಕ್ಕೆ ತೆರಳಿ ಹೊಸದಾಗಿ ಪ್ರತಿಷ್ಠಾಪಿಸಲಾದ ರಾಮಲಲ್ಲಾ ವಿಗ್ರಹಕ್ಕೆ ಪೂಜೆ ಸಲ್ಲಿಸಿದರು. ಮುಸ್ಲಿಂ ಆರಾಧಕರ ಈ ಕಾರ್ಯವು ಏಕತೆ, ಸಮಗ್ರತೆ, ಸಾರ್ವಭೌಮತೆ ಮತ್ತು ಸಾಮರಸ್ಯದ ಸಂದೇಶವನ್ನು ರವಾನಿಸುತ್ತದೆ ಎಂದು ಸಯೀದ್ ಹೇಳಿದರು.

    ರಾಮಲಲ್ಲಾನ ದರ್ಶನ ಪಡೆದ ಬಳಿಕ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ MRM ಸಂಚಾಲಕ ರಾಜಾ ರಯೀಸ್ ಮತ್ತು ಗುಂಪಿನ ನೇತೃತ್ವ ವಹಿಸಿದ್ದ ಪ್ರಾಂತೀಯ ಸಂಯೋಜಕ ಶೇರ್ ಅಲಿ ಖಾನ್ ಅವರು, ಭಗವಾನ್ ರಾಮನು ಎಲ್ಲರಿಗೂ ಪೂರ್ವಜ ಎಂದು ಬಣ್ಣಿಸಿದರು. ಅಲ್ಲದೇ ಯಾವುದೇ ಧರ್ಮವು ಇತರರಿಗೆ ಟೀಕೆ, ಅಪಹಾಸ್ಯ ಅಥವಾ ತಿರಸ್ಕಾರವನ್ನು ಕಲಿಸುವುದಿಲ್ಲ ಎಂದು ಅವರು ಒತ್ತಿ ಹೇಳಿದರು.

  • ರಾಮಲಲ್ಲಾ ಪ್ರಾಣ ಪ್ರತಿಷ್ಠಾ ಸಮಾರಂಭದಲ್ಲಿ ಭಾಗವಹಿಸಿದ್ದ ಮುಖ್ಯ ಇಮಾಮ್ ವಿರುದ್ಧ ಫತ್ವಾ

    ರಾಮಲಲ್ಲಾ ಪ್ರಾಣ ಪ್ರತಿಷ್ಠಾ ಸಮಾರಂಭದಲ್ಲಿ ಭಾಗವಹಿಸಿದ್ದ ಮುಖ್ಯ ಇಮಾಮ್ ವಿರುದ್ಧ ಫತ್ವಾ

    – ನನ್ನನ್ನು ದ್ವೇಷಿಸುವವರು ಪಾಕಿಸ್ತಾನಕ್ಕೆ ಹೋಗಲಿ ಅಂದ್ರು ಉಮರ್‌ ಅಹ್ಮದ್‌

    ಅಯೋಧ್ಯೆ: ಜನವರಿ 22 ರಂದು ನಡೆದ ರಾಮಮಂದಿರ ‘ಪ್ರಾಣ ಪ್ರತಿಷ್ಠಾ’ ಸಮಾರಂಭದಲ್ಲಿ ಭಾಗವಹಿಸಿದ್ದ ಆಲ್ ಇಂಡಿಯಾ ಇಮಾಮ್ ಸಂಘಟನೆಯ ಮುಖ್ಯ ಇಮಾಮ್ ವಿರುದ್ಧ ಫತ್ವಾ (Fatwa) ಹೊರಡಿಸಲಾಗಿದೆ.

    ಡಾ. ಇಮಾಮ್ ಉಮರ್ ಅಹ್ಮದ್ ಇಲ್ಯಾಸಿ (Dr Imam Umer Ahmed Ilyasi) ಅವರಿಗೆ ಫತ್ವಾ ಹೊರಡಿಸಲಾಗಿದೆ. ಈ ವಿಚಾರವನ್ನು ಸ್ವತಃ ಉಮರ್‌ ಅಹ್ಮದ್‌ ಅವರೇ ತಿಳಿಸಿದ್ದಾರೆ. ಮುಖ್ಯ ಇಮಾಮ್ ಆಗಿ ನಾನು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರದಿಂದ ಆಹ್ವಾನವನ್ನು ಸ್ವೀಕರಿಸಿದ್ದೇನೆ. ನಾನು ಎರಡು ದಿನ ಆಲೋಚಿಸಿ ನಂತರ ದೇಶಕ್ಕಾಗಿ ಸೌಹಾರ್ದತೆಗಾಗಿ ಅಯೋಧ್ಯೆಗೆ (Ayodhya Ram Mandir) ಹೋಗಲು ನಿರ್ಧರಿಸಿದೆ ಎಂದು ಅವರು ಮಾಧ್ಯಮಕ್ಕೆ ತಿಳಿಸಿದ್ದಾರೆ. ಇದನ್ನೂ ಓದಿ: ಶೆಟ್ಟರ್ ಡೀಸೆಂಟ್ ಜಂಟಲ್‍ ಮ್ಯಾನ್, ಕಾಂಗ್ರೆಸ್ಸಿಗರು ಉಳಿಸಿಕೊಳ್ಳಬೇಕಾಗಿತ್ತು: ಹರಿಪ್ರಸಾದ್

    ಕ್ಷಮೆ ಕೇಳಲ್ಲ: ಭಾನುವಾರ ಫತ್ವಾ ಹೊರಡಿಸಲಾಗಿದೆ. ಜನವರಿ 22 ರ ಸಂಜೆಯಿಂದ ನನಗೆ ಸಾಕಷ್ಟು ಬೆದರಿಕೆ ಕರೆಗಳು ಬರುತ್ತಿವೆ. ನಾನು ಕೆಲವು ಕರೆಗಳನ್ನು ರೆಕಾರ್ಡ್ ಮಾಡಿದ್ದೇನೆ, ಅದರಲ್ಲಿ ಕರೆ ಮಾಡಿದವರು ನನಗೆ ಜೀವ ಬೆದರಿಕೆ ಹಾಕಿದ್ದಾರೆ. ನನ್ನನ್ನು ಪ್ರೀತಿಸುವವರು ಹಾಗೂ ರಾಷ್ಟ್ರವನ್ನು ಪ್ರೀತಿಸುವವರು ನನ್ನನ್ನು ಬೆಂಬಲಿಸುತ್ತಾರೆ. ಪ್ರಾಣಪ್ರತಿಷ್ಠಾ ಸಮಾರಂಭದಲ್ಲಿ ಭಾಗವಹಿಸಿದ್ದಕ್ಕಾಗಿ ನನ್ನನ್ನು ದ್ವೇಷಿಸುವವರು ಬಹುಶಃ ಪಾಕಿಸ್ತಾನಕ್ಕೆ ಹೋಗಲಿ. ನಾನು ಪ್ರೀತಿಯ ಸಂದೇಶವನ್ನು ನೀಡಿದ್ದೇನೆ, ನಾನು ಯಾವುದೇ ಅಪರಾಧ ಮಾಡಿಲ್ಲ. ಈ ಸಂಬಂಧ ನಾನು ಕ್ಷಮೆಯಾಚಿಸುವುದಿಲ್ಲ ಅಥವಾ ರಾಜೀನಾಮೆ ನೀಡುವುದಿಲ್ಲ. ಅವರು ಏನು ಬೇಕಾದರೂ ಮಾಡಬಹುದು ಎಂದು ಅವರು ಹೇಳಿದ್ದಾರೆ.

    ಈ ಕುರಿತು ಮುಖ್ಯ ಇಮಾಮ್ ಅವರು ಕೇಂದ್ರ ಗೃಹ ಸಚಿವಾಲಯ ಮತ್ತು ದೆಹಲಿ ಪೊಲೀಸರಿಗೆ ದೂರು ನೀಡಿದ್ದಾರೆ. ಮತ್ತೊಂದೆಡೆ ಅವರ ವಿರುದ್ಧದ ಫತ್ವಾ ದುರದೃಷ್ಟಕರ ಮತ್ತು ಖಂಡನೀಯ ಕೃತ್ಯ ಎಂದು ವಿಎಚ್‌ಪಿ ಬಣ್ಣಿಸಿದೆ. ಕೆಲವು ಮೂಲಭೂತವಾದಿಗಳು ಇಸ್ಲಾಂ ಅನ್ನು ತಮ್ಮ ಆಸ್ತಿ ಎಂದು ಪರಿಗಣಿಸುತ್ತಾರೆ ಎಂದು ಕಿಡಿಕಾರಿದೆ.

  • ರಾಮಲಲ್ಲಾ ಕೆತ್ತಿದ ಗಣೇಶ್ ಭಟ್‍ರಿಗೆ ಬರ್ತಿದೆ ಬೇರೆ ಬೇರೆ ರಾಜ್ಯಗಳಿಂದ ಕರೆ!

    ರಾಮಲಲ್ಲಾ ಕೆತ್ತಿದ ಗಣೇಶ್ ಭಟ್‍ರಿಗೆ ಬರ್ತಿದೆ ಬೇರೆ ಬೇರೆ ರಾಜ್ಯಗಳಿಂದ ಕರೆ!

    ಬೆಂಗಳೂರು: ಅಯೋಧ್ಯೆಯಲ್ಲಿ (Ayodhya Ram Mandir) ರಾಮಲಲ್ಲಾನ ಕೆತ್ತಿದ ಗಣೇಶ್ ಭಟ್‍ರಿಗೆ (Ganesh Bhat) ಈಗ ಬೇರೆ ಬೇರೆ ರಾಜ್ಯಗಳಿಂದ ಕರೆ ಬರುತ್ತಿದೆ.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಅಸ್ಸಾಂ, ಛತ್ತೀಸ್‍ಗಢ್ ಹಾಗೂ ಜಮ್ಮುಕಾಶ್ಮೀರ ಸೇರಿದಂತೆ ಅನೇಕ ರಾಜ್ಯಗಳಿಂದ ಅಯೋಧ್ಯೆಯಲ್ಲಿ ಕೆತ್ತಿದ ರಾಮಲಲ್ಲಾನ ಪ್ರತಿಮೆ ಕೊಡುವಂತೆ ಕರೆಗಳು ಬರುತ್ತಿದೆ. ಕೆಲವರು ಅದೇ ವಿಗ್ರಹ ನೀಡುವಂತೆ ಕೇಳುತ್ತಿದ್ದಾರೆ, ಇನ್ನೂ ಕೆಲವರು ಹೊಸ ವಿಗ್ರಹ ಕೆತ್ತನೆಗೆ ಹೇಳಿದ್ದಾರೆ ಎಂದರು. ಇದನ್ನೂ ಓದಿ: Loksabha Elections: ಬಿಜೆಪಿ ರಾಜ್ಯವಾರು ಚುನಾವಣಾ ಉಸ್ತುವಾರಿಗಳ ಪಟ್ಟಿ ಪ್ರಕಟ

    ಅಯೋಧ್ಯೆಯಲ್ಲಿ ನಾನು ಕೆತ್ತಿದ ವಿಗ್ರಹ ಅದು ಅಯೋಧ್ಯೆಯ (Ayodhya) ಟ್ರಸ್ಟ್ ಸ್ವತ್ತಾಗಿದೆ. ಅವರು ರಾಮಮಂದಿರದಲ್ಲಿಯೇ ಇಡೋದಾಗಿ ಹೇಳಿದ್ದಾರೆ. ನಾನು ಕೆತ್ತಿದ ವಿಗ್ರಹವನ್ನು ಆಲಯ ಗರ್ಭಗುಡಿಯೊಳಗೆ ಇಟ್ಟರೆ ಸೂಕ್ತ ಅನ್ನೋದು ನನ್ನ ಅಭಿಪ್ರಾಯವಾಗಿದೆ. ಹೀಗಾಗಿ ಅದನ್ನು ಕರುನಾಡಿನ ಪ್ರಸಿದ್ಧ ಸ್ಥಳದಲ್ಲಿ ಪ್ರತಿಷ್ಟಾಪಿಸಿದ್ರೂ ನನಗೆ ಬಹಳ ಸಂತಸ. ಯಾಕೆಂದರೆ ಕಂಕಣ ಕಟ್ಟಿ ಸಾಕಷ್ಟು ವಿಧಿ-ವಿಧಾನ ಪೂಜೆ ಮಾಡಿ ಶಾಸ್ತ್ರೋಕ್ತವಾಗಿ ಕೆತ್ತಿರೋದು ಮ್ಯೂಸಿಯಂ ಅಥವಾ ಸರ್ಕಲ್ ನಲ್ಲಿ ಇಡೋದು ಸೂಕ್ತವು ಅಲ್ಲ. ತೀರ್ಥ ಭೂಮಿ ಟ್ರಸ್ಟ್ ನವರ ನಿರ್ಧಾರ ಏನು ಅನ್ನೋದರ ಬಗ್ಗೆ ನಾನು ಕಾಯುತ್ತಿದ್ದೇನೆ ಎಂದು ಹೇಳಿದರು.

    ಈಗಾಗಲೇ ಕರ್ನಾಟಕದಲ್ಲಿಯೂ ಈ ವಿಗ್ರಹವನ್ನು ಟ್ರಸ್ಟ್ ನವರು ನೀಡಲು ಒಪ್ಪಿದ್ರೆ ರಾಮದೇವರ ಬೆಟ್ಟ ಅಥವಾ ಕಲ್ಲು ಸಿಕ್ಕ ಜಮೀನಿನಲ್ಲಿ ಪ್ರತಿಷ್ಠಾಪನೆಯ ಬಗ್ಗೆಯೂ ಜನಪ್ರತಿನಿಧಿನಿಧಿಗಳಿಗೆ ಆಸಕ್ತಿ ಇದೆ ಎಂದರು. ಇದನ್ನೂ ಓದಿ: 7 ಶಾಸಕರನ್ನ ಖರೀದಿಸಲು ಬಿಜೆಪಿಯಿಂದ ತಲಾ 25 ಕೋಟಿ ರೂ. ಆಫರ್‌ – ಕೇಜ್ರಿವಾಲ್‌ ಹೊಸ ಬಾಂಬ್‌

  • ಬಾಲರಾಮನ ಮೂರು ಮೂರ್ತಿಗಳೂ ಮಂದಿರದೊಳಗೆ ಪ್ರತಿಷ್ಠಾಪನೆ; ‘ಪಬ್ಲಿಕ್‌ ಟಿವಿ’ಗೆ ಟ್ರಸ್ಟ್‌ ಆಪ್ತರ ಮಾಹಿತಿ

    ಬಾಲರಾಮನ ಮೂರು ಮೂರ್ತಿಗಳೂ ಮಂದಿರದೊಳಗೆ ಪ್ರತಿಷ್ಠಾಪನೆ; ‘ಪಬ್ಲಿಕ್‌ ಟಿವಿ’ಗೆ ಟ್ರಸ್ಟ್‌ ಆಪ್ತರ ಮಾಹಿತಿ

    – ಮೂರೂ ಮೂರ್ತಿಗಳಿಗೂ ಪೂಜೆ, ಆರಾಧನೆ, ಸೇವೆ

    ಉಡುಪಿ: ಅಯೋಧ್ಯೆ ರಾಮಮಂದಿರದಲ್ಲಿ (Ayodhya Ram Mandir) ಪ್ರತಿಷ್ಠಾಪನೆ ಮಾಡಲು ಬಾಲರಾಮನ ಮೂರು ಮೂರ್ತಿಗಳನ್ನು ಕೆತ್ತಲಾಗಿತ್ತು. ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ (Arun Yogiraj) ಕೆತ್ತಿದ ಮೂರ್ತಿಗೆ ಪ್ರಾಣ ಪ್ರತಿಷ್ಠೆ ಭಾಗ್ಯ ಸಿಕ್ಕಿತ್ತು.

    ಉತ್ತರ ಕನ್ನಡ ಜಿಲ್ಲೆಯ ಶಿಲ್ಪಿ ಗಣೇಶ್ ಭಟ್ ಮತ್ತು ರಾಜಸ್ಥಾನದ ಶಿಲ್ಪಿ ಸತ್ಯ ನಾರಾಯಣ ಪಾಂಡೆ ಕೆತ್ತಿದ ಬಾಲರಾಮನ ಮೂರ್ತಿಗಳನ್ನು ಏನು ಮಾಡುತ್ತಾರೆ ಎಂಬ ಪ್ರಶ್ನೆ ಎಲ್ಲರಲ್ಲಿದೆ. ಈ ಎರಡು ಮೂರ್ತಿಗಳ ಬಗ್ಗೆ ಟ್ರಸ್ಟ್ ಶೀಘ್ರ ತೀರ್ಮಾನ ತೆಗೆದುಗೊಳ್ಳಲಿದೆ ಎಂದು ಬಲ್ಲ ಮೂಲಗಳಿಂದ ತಿಳಿದುಬಂದಿದೆ. ಇದನ್ನೂ ಓದಿ: ಕರ್ತವ್ಯ ಪಥದ ಪರೇಡ್‍ನಲ್ಲಿ ಮಿಂಚಿದ ಬಾಲಕರಾಮ!

    ರಾಮಮಂದಿರದ ಮೊದಲ ಮತ್ತು ಎರಡನೇ ಮಹಡಿಯಲ್ಲಿ ನಿರ್ಮಾಣವಾಗಲಿರುವ ಗುಡಿಯಲ್ಲಿ ಎರಡು ಮೂರ್ತಿಗಳನ್ನು ಇರಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಈ ಮೂಲಕ ಮೂರು ಮೂರ್ತಿಗಳಿಗೂ ಅಯೋಧ್ಯೆ ರಾಮಮಂದಿರದಲ್ಲಿ ಪೂಜೆ, ಆರಾಧನೆ ನಡೆಯಲಿದೆ. ಭಕ್ತರಿಗೆ ದರ್ಶನ ಮಾಡುವ ಅವಕಾಶ ಸಿಗುತ್ತದೆ ಎಂಬ ಮಾಹಿತಿ ಲಭ್ಯವಾಗಿದೆ.

    ಜ.22 ರಂದು ರಾಮಮಂದಿರದಲ್ಲಿ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ಸಮಾರಂಭ ನಡೆಯಿತು. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಶಾಸ್ತ್ರೋಕ್ತವಾಗಿ ಗರ್ಭಗುಡಿಯಲ್ಲಿ ರಾಮಲಲ್ಲಾ ಪ್ರತಿಷ್ಠಾಪನೆ ಜರುಗಿತು. ಇದನ್ನೂ ಓದಿ: ಅಯೋಧ್ಯೆಗೆ ಮೊದಲ ದಿನದ ಆನ್ಲೈನ್ ಕಾಣಿಕೆ 3.17 ಕೋಟಿ