Tag: ರಾಮಲಲ್ಲಾ ಮೂರ್ತಿ

  • PublicTV Explainer: ‘ದಶಾವತಾರಿ ರಾಮ’ನೂರಿನ ಅಯೋಧ್ಯೆ ರಾಮಮಂದಿರದ 10 ವಿಶೇಷತೆಗಳು..

    PublicTV Explainer: ‘ದಶಾವತಾರಿ ರಾಮ’ನೂರಿನ ಅಯೋಧ್ಯೆ ರಾಮಮಂದಿರದ 10 ವಿಶೇಷತೆಗಳು..

    -ಅಯೋಧ್ಯೆಗೆ ಹೋಗುವಾಗ ಈ 10 ಅಂಶಗಳು ನಿಮಗೆ ತಿಳಿದಿರಲಿ..

    ಅಯೋಧ್ಯೆ (ಉತ್ತರ ಪ್ರದೇಶ): ಅಯೋಧ್ಯೆ ರಾಮಮಂದಿರದಲ್ಲಿ (Ayodhya Ram Mandir) ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆಗೆ ಕ್ಷಣಗಣನೆ ಶುರುವಾಗಿದೆ. ದೇಶದೆಲ್ಲೆಡೆ ರಾಮಭಕ್ತರಲ್ಲಿ ಸಂಭ್ರಮ-ಸಡಗರ ಮನೆ ಮಾಡಿದೆ. 500 ವರ್ಷಗಳ ನಂತರ ಶ್ರೀರಾಮ ಮತ್ತೆ ಪಟ್ಟಕ್ಕೇರಲು ಸಿದ್ಧನಾಗಿದ್ದಾನೆ. ಸೋಮವಾರ ಪ್ರಾಣ ಪ್ರತಿಷ್ಠೆಗಾಗಿ ಅಯೋಧ್ಯೆ ಕಂಗೊಳಿಸುತ್ತಿದೆ.

    ವಾಲ್ಮೀಕಿ ರಾಮಾಯಣದ ಕೇಂದ್ರಬಿಂದು, ಪುಣ್ಯಪುರುಷ ಭಗವಾನ್‌ ರಾಮನ (Lord Rama) ಜೀವನ ಚರಿತ್ರೆಯೇ ರೋಚಕ. ಅಂತೆಯೇ ಅಯೋಧ್ಯೆ ನಗರ, ಸರಯೂ ನದಿ, ಭವ್ಯ ರಾಮಮಂದಿರ, ಅದರ ಶಿಲ್ಪಿ, ಗರ್ಭಗುಡಿಯಲ್ಲಿ ಪ್ರತಿಷ್ಠಾಪನೆಯಾಗಲಿರುವ ಬಾಲರಾಮನ ವಿಗ್ರಹವೂ ತನ್ನದೇ ಆದ ವಿಶೇಷತೆ ಹೊಂದಿದೆ. ಅಯೋಧ್ಯೆಗೆ ಹೋಗುವಾಗ ಈ 10 ಅಂಶಗಳ ವಿಚಾರ ನಿಮಗೆ ತಿಳಿದಿರಲಿ. ಇದನ್ನೂ ಓದಿ: ಬಾಲರಾಮನ ಪ್ರಾಣಪ್ರತಿಷ್ಠಾಪನೆ; ವಿವಿಧ ರಾಜ್ಯಗಳ 50 ವಾದ್ಯಗಳಿಂದ ಹೊಮ್ಮಲಿದೆ ಮಂಗಳ ನಾದ

    1. ಅಯೋಧ್ಯೆ ಯಾವ ನದಿಯ ದಡದ ಮೇಲಿದೆ?
    ಹಿಂದೂಗಳ ಏಳು ಪವಿತ್ರ ಕ್ಷೇತ್ರಗಳಲ್ಲಿ ಅಯೋಧ್ಯೆಯೂ ಒಂದು. ಆದಿ ಮಹಾಕಾವ್ಯ ರಾಮಾಯಣದಲ್ಲಿ ಉಲ್ಲೇಖಿಸಿದಂತೆ ಅಯೋಧ್ಯೆಯು ಕೋಸಲ ದೇಶದ ರಾಜಧಾನಿ. ಈಗ ಉತ್ತರ ಪ್ರದೇಶ ರಾಜ್ಯದ ನಗರವಾಗಿದೆ. ಅಯೋಧ್ಯೆಯು ಸರಯೂ ನದಿಯ ದಡದ ಮೇಲಿರುವ ನಗರ. 234 ಕಿಮೀ ಸುತ್ತಳತೆ ಭೂಪ್ರದೇಶ ಹೊಂದಿದೆ. ಸರಯೂ ಭಾರತದ ಒಂದು ಪುರಾತನ ನದಿ. ರಾಮಾಯಣದ ಶ್ರೀರಾಮ ರಾಜ್ಯವಾಳಿದ್ದು, ಇದೇ ಸರಯೂ ತೀರದ ಅಯೋಧ್ಯೆಯಲ್ಲಿ. ಇದು ಹಿಮಾಲಯ ಪರ್ವತದ ಒಂದು ಸರೋವರದಲ್ಲಿ ಹುಟ್ಟಿ, ಪ್ರವಹಿಸುವುದರಿಂದ ಇದಕ್ಕೆ ಸರಯೂ ಎಂಬ ಹೆಸರು ಬಂದಿದೆ. ಶ್ರೀರಾಮ ತನ್ನ ಅವತಾರವನ್ನು ಸಮಾಪ್ತಿಗೊಳಿಸುವಾಗ, ತನ್ನ ಪರಿವಾರದೊಂದಿಗೆ ಸರಯೂ ನದಿಯಲ್ಲಿ ಮುಳುಗಿದನೆಂಬ ವಿವರಣೆ ಉತ್ತರ ರಾಮಾಯಣದಲ್ಲಿ ಬರುತ್ತದೆ.

    2. ಅಯೋಧ್ಯೆ ರಾಮಮಂದಿರ ಯಾವ ಶೈಲಿಯಲ್ಲಿದೆ?
    ರಾಮಮಂದಿರ ಭಾರತೀಯ ನಾಗರ ಶೈಲಿಯಲ್ಲಿದೆ. ಸಾಮಾನ್ಯವಾಗಿ ಉತ್ತರ ಭಾರತದ ಪುರಾತನ ದೇವಾಲಯಗಳೆಲ್ಲವೂ ನಾಗರ ಶೈಲಿಯಲ್ಲಿವೆ. ಗುಪ್ತರ ಕಾಲದ ದೇವಾಲಯಗಳು ಈ ಶೈಲಿಯಲ್ಲಿದ್ದವು. ನಾಗರ ಶೈಲಿಯ ವಿಶೇಷವೆಂದರೆ, ಕಲ್ಲುಗಳಿಂದ ವಿಶಾಲವಾದ ಮತ್ತು ಎತ್ತರವಾದ ವೇದಿಕೆ ನಿರ್ಮಿಸಿ ಅದರ ಮೇಲೆ ಮಂದಿರ ಕಟ್ಟಲಾಗುತ್ತದೆ. ದೊಡ್ಡ ಗೋಪುರದ ಕೆಳಗೆ ಗರ್ಭ ಗೃಹ ಇರುತ್ತದೆ. ಇದರ ಸುತ್ತ ಕೆಲವು ಮಂಟಗಳಿರುತ್ತವೆ. ಉಳಿದಂತೆ ಗೋಪುರ, ಕಳಸ ಮತ್ತು ಅದರ ಮೇಲಿನ ಧ್ವಜ ದಕ್ಷಿಣ ಭಾರತದ ದೇವಾಲಯಗಳ ಶೈಲಿಯಲ್ಲೇ ಇರುತ್ತವೆ. ಕೋನಾರ್ಕದ ಸೂರ್ಯ ದೇವಾಲಯ, ಒಡಿಶಾದ ಜಗನ್ನಾಥ ಮಂದಿರ, ಖಜುರಾಹೋದ ಲಕ್ಷ್ಮಣ ದೇವಾಲಯಗಳು ನಾಗರ ಶೈಲಿಯಲ್ಲೇ ಇವೆ. ಇದನ್ನೂ ಓದಿ: ರಾಮಲಲ್ಲಾನ ಪ್ರಾಣಪ್ರತಿಷ್ಠಾಪನೆಗೆ ಸಜ್ಜಾದ ರಾಮಮಂದಿರ- ಫೋಟೋಗಳಲ್ಲಿ ನೋಡಿ..

    3. ರಾಮಮಂದಿರ ನಿರ್ಮಾಣಕ್ಕೆ ಶಂಕುಸ್ಥಾಪನೆ ಮಾಡಿದವರು ಯಾರು?
    ಅಯೋಧ್ಯೆ ರಾಮಮಂದಿರಕ್ಕೆ 2020 ರ ಆಗಸ್ಟ್ 5 ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಶಂಕುಸ್ಥಾಪನೆ ನೆರವೇರಿಸಿದರು. ಅಲ್ಲಿಂದ ರಾಮಮಂದಿರ ನಿರ್ಮಾಣ ಪ್ರಾರಂಭವಾಯಿತು. ಭೂಮಿಪೂಜೆ ಕಾರ್ಯಕ್ರಮಕ್ಕೂ ಮುನ್ನ ಮೂರು ದಿನಗಳ ಕಾಲ ವೈದಿಕ ವಿಧಿವಿಧಾನಗಳನ್ನು ನೆರವೇರಿಸಲಾಗಿತ್ತು. ಆಗಸ್ಟ್ 5 ರಂದು ಪ್ರಧಾನಿ ಮೋದಿ ಅವರು ರಾಮಮಂದಿರದ ಶಂಕುಸ್ಥಾಪನೆಯಾಗಿ 40 ಕೆಜಿ ತೂಕದ ಬೆಳ್ಳಿಯ ಇಟ್ಟಿಗೆಯನ್ನು ಅಡಿಗಲ್ಲು ಹಾಕಿದರು. ಭೂಮಿಪೂಜೆಗೆ ಭಾರತದ ಹಲವಾರು ಪುಣ್ಯ ದೇವಾಲಯಗಳಿಂದ ಮಣ್ಣು ಮತ್ತು ಅನೇಕ ಪವಿತ್ರ ನದಿಗಳ ನೀರನ್ನು ಅಯೋಧ್ಯೆಗೆ ಕಳುಹಿಸಲಾಗಿತ್ತು. ಜೊತೆಗೆ ಬೇರೆ ಬೇರೆ ಧರ್ಮದ ಗುರುಗಳನ್ನೂ ಈ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿತ್ತು.

    4. ರಾಮಮಂದಿರದಲ್ಲಿರುವ ಕಂಬಗಳು ಮತ್ತು ಬಾಗಿಲುಗಳ ಸಂಖ್ಯೆ ಎಷ್ಟು?
    ಅಯೋಧ್ಯೆ ರಾಮಮಂದಿರವು ನಾಗರ ವಾಸ್ತುಶಿಲ್ಪದ ಶೈಲಿಯಾಗಿದೆ. ಮಂದಿರವು ಮೂರು ಅಂತಸ್ತಿನದ್ದಾಗಿದ್ದು, ಪ್ರತಿ ಮಹಡಿಯು 20 ಅಡಿ ಎತ್ತರವಿದೆ. ಇದು ಒಟ್ಟು 392 ಕಂಬಗಳು ಮತ್ತು 44 ಬಾಗಿಲುಗಳನ್ನು ಹೊಂದಿದೆ. ಮಂದಿರದ ಪ್ರವೇಶವು ಪೂರ್ವದಿಂದ, ಸಿಂಗ್ ದ್ವಾರದ ಮೂಲಕ 32 ಮೆಟ್ಟಿಲುಗಳನ್ನು ಏರುತ್ತದೆ. ಮಂದಿರದ ಒಟ್ಟು ಬಾಗಿಲುಗಳ ಪೈಕಿ 42 ಚಿನ್ನ ಲೇಪಿತ ಬಾಗಿಲುಗಳನ್ನು ಅಳವಡಿಸಲಾಗುವುದು. ಈಗಾಗಲೇ 13 ಚಿನ್ನದ ಬಾಗಿಲುಗಳನ್ನು ಅಳವಡಿಸಲಾಗಿದೆ. ಇದನ್ನೂ ಓದಿ: ರಾಮಲಲ್ಲಾ ವಿಗ್ರಹದ ಫೋಟೋ ವೈರಲ್‌ ಮಾಡಿದವ್ರ ವಿರುದ್ಧ ಕಠಿಣ ಕ್ರಮಕ್ಕೆ ಪ್ರಧಾನ ಅರ್ಚಕ ಒತ್ತಾಯ

    5. ರಾಮಮಂದಿರ ನಿರ್ಮಾಣ ಕಂಪನಿ ಯಾವುದು?
    ರಾಮಮಂದಿರ ನಿರ್ಮಾಣ ಮತ್ತು ವಿನ್ಯಾಸವನ್ನು ಎಲ್ & ಟಿ (ಅಂದರೆ, ಲಾರ್ಸೆನ್ ಮತ್ತು ಟುಬ್ರೋ) ಕಂಪನಿಗಳು ಮಾಡಲಿವೆ. ಇದರ ಮೇಲ್ವಿಚಾರಣೆ ಜವಾಬ್ದಾರಿಯನ್ನು ಕನ್ಸಲ್ಟಿಂಗ್ ಎಂಜಿನಿಯರ್ಸ್ ವಹಿಸಿಕೊಂಡಿದೆ. ಭಾರತೀಯ ತಂತ್ರಜ್ಞಾನ ಸಂಸ್ಥೆ ಐಐಟಿಯು ತಾಂತ್ರಿಕ ನೆರವು ಒದಗಿಸಲಿದೆ.

    6. ರಾಮಮಂದಿರ ಎತ್ತರ ಎಷ್ಟು?
    ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮಮಂದಿರ ಜಗತ್ತಿನಲ್ಲಿಯೇ ಅತ್ಯಂತ ದೊಡ್ಡ ಮಂದಿರಗಳಲ್ಲಿ ಒಂದು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ರಾಮಮಂದಿರದ ಎತ್ತರ 161 ಅಡಿ. 380 ಅಡಿ ಈ ದೇವಾಲಯದ ಉದ್ದ. 250 ಅಡಿ ಅಗಲ. 84,000 ಚದರ ಅಡಿ ದೇವಾಲಯದ ವಿಸ್ತೀರ್ಣ. ದೇವಾಲಯ ಮೂರು ಅಂತಸ್ತಿನದ್ದಾಗಿದ್ದು, ಪ್ರತಿ ಮಹಡಿ 20 ಅಡಿ ಎತ್ತರವಿದೆ. ಇದನ್ನೂ ಓದಿ: ರಾಮಮಂದಿರ ವಿಚಾರದಲ್ಲಿ ಕಾಂಗ್ರೆಸ್ ನಿಲುವಿನಿಂದ ಅಸಮಾಧಾನ; ಗುಜರಾತ್‌ನ ‘ಕೈ’ ಶಾಸಕ ರಾಜೀನಾಮೆ

    7. ರಾಮಮಂದಿರ ವಾಸ್ತುಶಿಲ್ಪಿ ಯಾರು?
    ರಾಮಮಂದಿರದ ವಾಸ್ತುಶಿಲ್ಪಿ ಚಂದ್ರಕಾಂತ್ ಸೋಂಪುರ. ಇವರು ಗುಜರಾತ್‌ನ ಅಹಮದಾಬಾದ್‌ನ ಕರ್ಣಾವತಿಯವರು. ಚಂದ್ರಕಾಂತ್ ಅವರ ಅಜ್ಜ ಪ್ರಭಾಕರ್ ಸೋಂಪುರ ಗುಜರಾತ್‌ನ ಸೋಮನಾಥ ಮಂದಿರವನ್ನು ಕಟ್ಟಿದವರು. ನಾಗರ ಶೈಲಿಯಲ್ಲಿ ಮಂದಿರ ನಿರ್ಮಿಸಿದ ಶಿಲ್ಪಿ. ಗುಜರಾತ್‌ನ ಪ್ರಸಿದ್ಧ ಅಕ್ಷರಧಾಮ ದೇವಾಲಯದ ವಿನ್ಯಾಸವೂ ಇವರದೇ. ಅಂತೆಯೇ ರಾಮಮಂದಿರ ದೇವಾಲಯವು ಅತ್ಯುತ್ತಮ ಎಂಜಿನಿಯರಿಂಗ್ ಮತ್ತು ವಾಸ್ತುಶಿಲ್ಪಕ್ಕೆ ವಿಶಿಷ್ಟ ಉದಾಹರಣೆಯಾಗಿದೆ.

    8. ರಾಮಮಂದಿರದಲ್ಲಿರುವ ಮಂಟಪಗಳ ಸಂಖ್ಯೆ ಎಷ್ಟು?
    ದೇವಾಲಯವು ಐದು ಮಂಟಪಗಳನ್ನು (ಸಭಾಂಗಣ) ಒಳಗೊಂಡಿದೆ. ಅವುಗಳೆಂದರೆ ನೃತ್ಯ ಮಂಟಪ, ರಂಗ ಮಂಟಪ, ಸಭಾ ಮಂಟಪ, ಪ್ರಾರ್ಥನೆ ಮತ್ತು ಕೀರ್ತನ ಮಂಟಪ. ದೇವಾನುದೇವತೆಗಳ ಮೂರ್ತಿ ಕೆತ್ತನೆಗಳು ಕಂಬಗಳು ಮತ್ತು ಗೋಡೆಗಳನ್ನು ಅಲಂಕರಿಸಿವೆ. ಇದನ್ನೂ ಓದಿ: ಶ್ರೀರಾಮನ ಪ್ರಾಣಪ್ರತಿಷ್ಠೆಗೆ ಮೋದಿ ಕಠಿಣ ವ್ರತ – ಪ್ರತಿದಿನ 1 ಗಂಟೆ ವಿಶೇಷ ಮಂತ್ರ ಪಠಣ

    9. ದೇವಾಲಯದ ಪ್ರದೇಶದ ಬಗ್ಗೆ ನಿಮಗೆಷ್ಟು ಗೊತ್ತು?
    ಭಾರತೀಯ ಸಂಪ್ರದಾಯವನ್ನು ಅನುಸರಿಸಿ ಮತ್ತು ಸ್ಥಳೀಯ ತಂತ್ರಜ್ಞಾನವನ್ನು ಬಳಸಿಕೊಂಡು ಪರಿಸರ ಸಂರಕ್ಷಣೆಯ ಮೇಲೆ ಕೇಂದ್ರೀಕರಿಸಿ ಒಟ್ಟು 70 ಎಕರೆ ಪ್ರದೇಶದಲ್ಲಿ ಈ ದೇವಾಲಯ ನಿರ್ಮಿಸಲಾಗಿದೆ. 70% ಹಸಿರು ಪ್ರದೇಶ ಇದೆ. ದೇವಾಲಯದಲ್ಲಿ ಮಣ್ಣಿನ ತೇವಾಂಶ ತಪ್ಪಿಸಲು ೨೧ ಅಡಿ ಗ್ರಾನೈಟ್ ಅಡಿಪಾಯ ನಿರ್ಮಿಸಲಾಗಿದೆ.

    10. ಅಯೋಧ್ಯೆಯ ರಾಮಲಲ್ಲಾ ವಿಗ್ರಹ ನಿರ್ಮಿಸಿದವರು ಯಾರು?
    ಅಯೋಧ್ಯೆಯ ರಾಮಮಂದಿರದ ಗರ್ಭಗುಡಿಯಲ್ಲಿ ಪ್ರತಿಷ್ಠಾಪನೆಯಾಗಲಿರುವ ರಾಮಲಲ್ಲಾನ ವಿಗ್ರಹವನ್ನು ಕೆತ್ತಿದವರು ಶಿಲ್ಪಿ ಅರುಣ್ ಯೋಗಿರಾಜ್. ಇವರು ಕರ್ನಾಟಕದ ಮೈಸೂರು ಮೂಲದ ಶಿಲ್ಪಿ. ಮಕ್ಕಳ ಮುಖಭಾವನೆ ಕಲ್ಪಿಸಿಕೊಂಡು ರಾಮಲಲ್ಲಾ ಮೂರ್ತಿ ಕೆತ್ತನೆ ಮಾಡಿದ್ದೇನೆ ಎಂದು ತಿಳಿಸಿದ್ದಾರೆ. ಮೂರ್ತಿ ಕೆತ್ತನೆ ವೇಳೆ ಕಟ್ಟುನಿಟ್ಟಿನ ಸಾತ್ವಿಕ ಆಹಾರ ಸೇವನೆ ಮಾಡುತ್ತಿದ್ದರು. ಮೂರ್ತಿ ಕೆತ್ತನೆ ವೇಳೆ ಅವರ ಕಣ್ಣಿಗೆ ತೊಂದರೆಯಾಗಿತ್ತು. ವಿಗ್ರಹ ಕೆತ್ತನೆ ಕೆಲಸ ಪೂರ್ಣಗೊಳಿಸುವವರೆಗೆ (ಸುಮಾರು 6 ತಿಂಗಳು) ತಮ್ಮ ಕುಟುಂಬದ ಸದಸ್ಯರನ್ನು ಭೇಟಿ ಮಾಡಿರಲಿಲ್ಲ. ಎಲ್ಲಾ ಅಡೆತಡೆ, ಸವಾಲುಗಳನ್ನು ಎದುರಿಸಿ ರಾಮಲಲ್ಲಾ ಮೂರ್ತಿ ಕೆತ್ತನೆ ಮಾಡಿದ್ದಾರೆ. ಇದನ್ನೂ ಓದಿ: ತಲೆಗೂದಲಿಗೆ ಹಗ್ಗ ಕಟ್ಟಿಕೊಂಡೇ ರಾಮರಥ ಎಳೆದ ಸ್ವಾಮೀಜಿ; ಅಯೋಧ್ಯೆ ಕಡೆಗೆ 566 ಕಿಮೀ ಯಾತ್ರೆ

  • Ayodhya Ram Mandir: ಗರ್ಭಗುಡಿ ಪ್ರವೇಶಿಸಿದ ರಾಮಲಲ್ಲಾ ವಿಗ್ರಹ – ಇಂದು ಮೂರ್ತಿ ಪ್ರತಿಷ್ಠಾಪನೆ

    Ayodhya Ram Mandir: ಗರ್ಭಗುಡಿ ಪ್ರವೇಶಿಸಿದ ರಾಮಲಲ್ಲಾ ವಿಗ್ರಹ – ಇಂದು ಮೂರ್ತಿ ಪ್ರತಿಷ್ಠಾಪನೆ

    ಅಯೋಧ್ಯೆ (ರಾಮಮಂದಿರ): ರಾಮಮಂದಿರದಲ್ಲಿ (Ram Mandir) ರಾಮಲಲ್ಲಾ (Ram Lalla) ಪ್ರಾಣ ಪ್ರತಿಷ್ಠಾಪನೆ ವಿಧಿವಿಧಾನಗಳು ನಡೆಯುತ್ತಿವೆ. ಇಂದು (ಗುರುವಾರ) ಅಯೋಧ್ಯೆಯ ರಾಮಮಂದಿರದ ಗರ್ಭಗುಡಿಯೊಳಗೆ ರಾಮನ ವಿಗ್ರಹವನ್ನು ತರಲಾಗಿದೆ.

    150-200 ಕೆಜಿ ತೂಕದ ವಿಗ್ರಹವನ್ನು ಕ್ರೇನ್ ಸಹಾಯದಿಂದ ಒಳಗೆ ತರುವ ಮುನ್ನ ಗರ್ಭಗುಡಿಯಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಇದನ್ನೂ ಓದಿ: ರಾಮಮಂದಿರ ಪ್ರವೇಶಿಸಿದ ರಾಮಲಲ್ಲಾ ಮೂರ್ತಿ

    ರಾಮಲಲ್ಲಾನ ವಿಗ್ರಹವನ್ನು ಬುಧವಾರ ಸಂಜೆ ಅಯೋಧ್ಯೆ ದೇವಸ್ಥಾನಕ್ಕೆ ತರಲಾಗಿತ್ತು. ಅದನ್ನು ಗರ್ಭಗುಡಿಯಲ್ಲಿ ಇರಿಸಲು ಕ್ರೇನ್ ಬಳಸಿ ಮೇಲೆತ್ತಲಾಯಿತು. ‘ಪ್ರಾಣ ಪ್ರತಿಷ್ಠೆ’ ಸಮಾರಂಭಕ್ಕೂ ಮೊದಲು ಗರ್ಭಗುಡಿಯಲ್ಲಿ ವಿಗ್ರಹವನ್ನು ಸ್ಥಾಪಿಸಲಾಗುವುದು.

    ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಅವರು ಕಪ್ಪು ಕಲ್ಲಿನಲ್ಲಿ ಕೆತ್ತಿದ ಸುಮಾರು 150-200 ಕೆಜಿ ತೂಕದ ವಿಗ್ರಹವನ್ನು ಬುಧವಾರ ಸಂಜೆ ಮೆರವಣಿಗೆಯೊಂದಿಗೆ ದೇವಸ್ಥಾನಕ್ಕೆ ತರಲಾಗಿತ್ತು. ಮೂರ್ತಿಯನ್ನು ಒಳಗೆ ತರುವ ಮುನ್ನ ಗರ್ಭಗುಡಿಯಲ್ಲಿ ವಿಶೇಷ ಪೂಜೆ ನಡೆಯಿತು. ಇದನ್ನೂ ಓದಿ: ಮೈಸೂರಿನ ಶಿಲ್ಪಿ ಕೆತ್ತಿರುವ ರಾಮಲಲ್ಲಾ ಮೂರ್ತಿ ಇಂದು ರಾಮಮಂದಿರ ಪ್ರವೇಶ – ದೇವಾಲಯದ ಸುತ್ತ ಪ್ರದಕ್ಷಿಣೆ

    ನಿನ್ನೆ ಸಂಜೆ ರಾಮಲಲ್ಲಾ ಅವರ ಬೆಳ್ಳಿಯ ವಿಗ್ರಹವನ್ನು ಗುಲಾಬಿ ಮತ್ತು ಚೆಂಡು ಹೂಗಳಿಂದ ಅಲಂಕರಿಸಲಾಗಿತ್ತು. ಸಂಜೆ ರಾಮಮಂದಿರದ ಆವರಣದಲ್ಲಿ ಪ್ರದಕ್ಷಿಣೆ ಹಾಕಲಾಯಿತು. ಜನವರಿ 22 ರ ಕಾರ್ಯಕ್ರಮದ ಪೂರ್ವಭಾವಿಯಾಗಿ ಆಚರಣೆಯ ಅಂಗವಾಗಿ ‘ಕಲಶ ಪೂಜೆ’ ನಡೆಯಿತು.

  • ರಾಮಮಂದಿರ ಪ್ರವೇಶಿಸಿದ ರಾಮಲಲ್ಲಾ ಮೂರ್ತಿ

    ರಾಮಮಂದಿರ ಪ್ರವೇಶಿಸಿದ ರಾಮಲಲ್ಲಾ ಮೂರ್ತಿ

    ಅಯೋಧ್ಯೆ: ಜನವರಿ 22 ರಂದು ರಾಮಮಂದಿರದಲ್ಲಿ (Ayodhya Ram Mandir) ನಡೆಯುವ ಬಾಲರಾಮನ ಪ್ರಾಣ ಪ್ರತಿಷ್ಠೆಗೆ (Pran Prathistha Ceremony) ಸಕಲ ಸಿದ್ಧತೆಗಳು ನಡೆಯುತ್ತಿದ್ದು, ಇದೀಗ ರಾಮಲಲ್ಲಾ ಮೂರ್ತಿಯು (Lord Rama Idol) ರಾಮಮಂದಿರವನ್ನು ಪ್ರವೇಶಿಸಿದೆ.

    ಹೌದು. ಇಂದು ಸಂಜೆ ಭಗವಾನ್ ರಾಮನ ವಿಗ್ರಹವನ್ನು ಹೊತ್ತ ಟ್ರಕ್ ಅನ್ನು ‘ಜೈ ಶ್ರೀ ರಾಮ್’ ಘೋಷಣೆಗಳೊಂದಿಗೆ ರಾಮ ಮಂದಿರದ ಆವರಣಕ್ಕೆ ತರಲಾಯಿತು. ಈ ಮೂರ್ತಿಯನ್ನು ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಕೆತ್ತಿದ್ದಾರೆ . ಇದನ್ನೂ ಓದಿ: ಮೈಸೂರಿನ ಶಿಲ್ಪಿ ಕೆತ್ತಿರುವ ರಾಮಲಲ್ಲಾ ಮೂರ್ತಿ ಇಂದು ರಾಮಮಂದಿರ ಪ್ರವೇಶ – ದೇವಾಲಯದ ಸುತ್ತ ಪ್ರದಕ್ಷಿಣೆ

    ಇದಕ್ಕೂ ಮುನ್ನ ಜಲಯಾತ್ರೆ, ತೀರ್ಥಯಾತ್ರೆ, ಕುಮಾರಿ ಸುವಾಸಿನಿ ಪೂಜೆ, ವರ್ಧಿನಿ ಪೂಜೆಗಳು ನೆರವೇರಿದವು. ನಿನ್ನೆಯೇ ರಾಮಲಲ್ಲಾ ಮೂರ್ತಿಯನ್ನು ಕೆತ್ತಿದ ಸ್ಥಳವನ್ನು ಶುದ್ದೀಕರಿಸಿ. ವಿಶೇಷ ಪೂಜೆ ಮಾಡಲಾಗಿತ್ತು. ಅಲ್ಲದೇ ರಾಮಲಲ್ಲಾ ಮೂರ್ತಿಗೆ ವಿಶೇಷ ಸ್ನಾನಾದಿಗಳನ್ನು ಮಾಡಿಸಿ, ಮೂರ್ತಿಯ ಕಣ್ಣುಗಳಿಗೆ ಪಟ್ಟಿ ಕಟ್ಟಲಾಯ್ತು. ಈ ರಾಮ್‍ಲಲ್ಲಾ ಮೂರ್ತಿಯನ್ನು ನಾಳೆ ಗರ್ಭಗುಡಿಯೊಳಕ್ಕೆ ತೆಗೆದುಕೊಂಡು ಹೋಗಲಾಗುತ್ತದೆ. ಬಾಲರಾಮನ ಕಣ್ಣುಗಳಿಗೆ ಕಟ್ಟಿರುವ ಪಟ್ಟಿಯನ್ನು ಜನವರಿ 22ರಂದು ಪ್ರಾಣಪ್ರತಿಷ್ಠಾಪನೆಯ ಸಂದರ್ಭದಲ್ಲಿ ತೆರೆಯಲಾಗುತ್ತದೆ.

    ಇಂದು ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಮತ್ತು ನಿರ್ಮೋಹಿ ಅಖಾಡದ ಮಹಾಂತ ದೀನೇಂದ್ರ ದಾಸ್ ಮತ್ತು ರಾಮಮಂದಿರದ ಅರ್ಚಕ ಸುನೀಲ್ ದಾಸ್ ಗರ್ಭಗುಡಿಯಲ್ಲಿರುವ ಪ್ರಾಣಪ್ರತಿಷ್ಠಾಪನೆಯ ಪೀಠಕ್ಕೆ ವಿಶೇಷ ಪೂಜೆಗಳನ್ನು ನೆರವೇರಿಸಿದರು. ಈ ಮಧ್ಯೆ ರಾಮಮಂದಿರದ ಆಮಂತ್ರಣ ಪತ್ರಿಕೆಯಲ್ಲಿ ರಾಮ್‍ಲಲ್ಲಾ ಮೂರ್ತಿ ಮಾದರಿಯ ಫೋಟೋ ಮುದ್ರಿಸಲಾಗಿದೆ. ಇದು ರಾಮಜನ್ಮಭೂಮಿ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ವರ್ಣಿಸಿದ ಮಾದರಿಯಲ್ಲಿಯೇ ರಾಮ್‍ಲಲ್ಲಾ ಫೋಟೋ ಇದೆ. ಶಿಲ್ಪಿ ಅರುಣ್ ಯೋಗಿರಾಜ್ ಕಲ್ಪನೆಯಲ್ಲಿ ಮೂಡಿದ ರಾಮಲಲ್ಲಾ ಮೂರ್ತಿ ಇದೇನಾ ಎಂಬ ಪ್ರಶ್ನೆ ಎದ್ದಿದೆ. ಇದಕ್ಕೆ ರಾಮಲಲ್ಲಾ ಮೂರ್ತಿಯ ಕೆತ್ತನೆಯನ್ನು ಕಣ್ಣಾರೆ ಕಂಡಿರುವ ಆಚಾರ್ಯ ಕರುಣಾನಿಧಾನ್ ಉತ್ತರ ನೀಡಿದ್ದಾರೆ.

  • ಮೈಸೂರಿನ ಶಿಲ್ಪಿ ಕೆತ್ತಿರುವ ರಾಮಲಲ್ಲಾ ಮೂರ್ತಿ ಇಂದು ರಾಮಮಂದಿರ ಪ್ರವೇಶ – ದೇವಾಲಯದ ಸುತ್ತ ಪ್ರದಕ್ಷಿಣೆ

    ಮೈಸೂರಿನ ಶಿಲ್ಪಿ ಕೆತ್ತಿರುವ ರಾಮಲಲ್ಲಾ ಮೂರ್ತಿ ಇಂದು ರಾಮಮಂದಿರ ಪ್ರವೇಶ – ದೇವಾಲಯದ ಸುತ್ತ ಪ್ರದಕ್ಷಿಣೆ

    ಅಯೋಧ್ಯೆ (ರಾಮಮಂದಿರ): ಅಯೋಧ್ಯೆ ರಾಮಮಂದಿರದಲ್ಲಿ (Ram Mandir) ಪ್ರಾಣ ಪ್ರತಿಷ್ಠೆ ವಿಧಿವಿಧಾನಗಳು ಆರಂಭವಾಗಿದ್ದು, ಎರಡನೇ ದಿನಕ್ಕೆ ಕಾಲಿಟ್ಟಿದೆ. ಭಗವಾನ್‌ ರಾಮಲಲ್ಲಾ (Ram Lalla) ವಿಗ್ರಹವನ್ನು ಇಂದು (ಬುಧವಾರ) ರಾಮಮಂದಿರಕ್ಕೆ ತರಲಾಗುವುದು. ನಂತರ ದೇವಾಲಯದ ಸುತ್ತ ಪ್ರದಕ್ಷಿಣೆ ಹಾಕಲಾಗುವುದು.

    ಮೈಸೂರು ಶಿಲ್ಪಿ ಅರುಣ್ ಯೋಗಿರಾಜ್ ಅವರು ಕಪ್ಪು ಕಲ್ಲಿನಲ್ಲಿ ಕೆತ್ತಿದ ರಾಮಲಲ್ಲಾ ಅಥವಾ ಶಿಶು ರಾಮನ ವಿಗ್ರಹವನ್ನು ಹೊತ್ತ ಮೆರವಣಿಗೆ ಇಂದು ‘ಪರಿಸರ ಪ್ರವೇಶ’ ಅಥವಾ ‘ಪ್ರವೇಶ’ಕ್ಕಾಗಿ ದೇವಸ್ಥಾನವನ್ನು ತಲುಪಲಿದೆ. ಭಕ್ತರು ಪವಿತ್ರ ಸರಯೂ ನದಿಯಿಂದ ನೀರನ್ನು ಮಡಕೆಗಳಲ್ಲಿ ಅಥವಾ ‘ಕಲಶ’ದಲ್ಲಿ ದೇವಸ್ಥಾನಕ್ಕೆ ಒಯ್ಯುತ್ತಾರೆ. ಇದನ್ನೂ ಓದಿ: ಶ್ರೀರಾಮನ ಕಟೌಟ್‌ಗೆ ಬ್ಲೇಡ್‌ನಿಂದ ಹಾನಿ – ಕಿಡಿಗೇಡಿಗಳ ವಿರುದ್ಧ ಕ್ರಮಕ್ಕೆ ಆಗ್ರಹ

    ರಾಮಲಲ್ಲಾ ವಿಗ್ರಹ ಮೆರವಣಿಗೆ
    ಭವ್ಯ ರಾಮಮಂದಿರದ ಸಂಕೀರ್ಣಕ್ಕೆ ವಿಗ್ರಹವನ್ನು ಕೊಂಡೊಯ್ಯಲು ನಿನ್ನೆ (ಮಂಗಳವಾರ) ರಾತ್ರಿಯಿಂದಲೇ ಸಿದ್ಧತೆ ನಡೆದಿದೆ. 150-200 ಕೆಜಿ ತೂಕದ ವಿಗ್ರಹವನ್ನು ಕ್ರೇನ್ ಸಹಾಯದಿಂದ ಮೆರವಣಿಗೆಗಾಗಿ ತಡರಾತ್ರಿ ಹೂವಿನಿಂದ ಅಲಂಕರಿಸಿದ ಟ್ರಕ್ ಮೇಲೆ ಇರಿಸಲಾಯಿತು.

    ಇಂದು ದೇವಸ್ಥಾನ ಆವರಣ ಪ್ರವೇಶ
    ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಪ್ರಕಾರ, ಮಧ್ಯಾಹ್ನ 1:20 ರ ಸುಮಾರಿಗೆ ವಿಗ್ರಹವು ದೇವಾಲಯದ ಆವರಣವನ್ನು ಪ್ರವೇಶಿಸುವ ಮೊದಲು ಹಲವಾರು ವಿಧಿವಿಧಾನಗಳನ್ನು ನಡೆಸಲಾಗುತ್ತದೆ. ರಾಮಲಲ್ಲಾನ ವಿಗ್ರಹವನ್ನು ದೇವಾಲಯದ ಸಂಕೀರ್ಣಕ್ಕೆ ತರುವ ಮೊದಲು ಜಲ ಯಾತ್ರೆ, ತೀರ್ಥಪೂಜೆ, ಬ್ರಾಹ್ಮಣ-ಬಟುಕ್-ಕುಮಾರಿ-ಸುವಾಸಿನಿ ಪೂಜೆ, ವರ್ಧಿನಿ ಪೂಜೆ, ಕಲಾಯಾತ್ರೆ ನಡೆಸಲಾಗುವುದು ಎಂದು ತಿಳಿಸಿದೆ. ಇದನ್ನೂ ಓದಿ: ಪ್ರತಿದಿನ ಒಂದೊಂದು ಕೆಜಿ ಮೀಸಲು – ಶ್ರೀರಾಮನ ನೈವೇದ್ಯಕ್ಕೆ 1,265 KG ತೂಕದ ಲಡ್ಡು ಅರ್ಪಿಸಿದ ರಾಮಭಕ್ತ

    ಮಧ್ಯಾಹ್ನ 1:20 ರ ನಂತರ ಜಲಯಾತ್ರೆ, ತೀರ್ಥ ಪೂಜೆ, ಬ್ರಾಹ್ಮಣ-ಬಟುಕ್-ಕುಮಾರಿ-ಸುವಾಸಿನಿ ಪೂಜೆ, ವರ್ಧಿನಿ ಪೂಜೆ, ಕಲಶಯಾತ್ರೆ ನಂತರ ಆವರಣದಲ್ಲಿ ಭಗವಾನ್ ಶ್ರೀರಾಮಲಲ್ಲಾನ ವಿಗ್ರಹದ ಪ್ರದಕ್ಷಿಣೆ ನಡೆಯಲಿದೆ.

    ರಾಮಮಂದಿರ ಪ್ರದಕ್ಷಿಣೆ
    ವಿಗ್ರಹ ಹೊತ್ತು ದೇವಾಲಯದ ಸುತ್ತ ಪ್ರದಕ್ಷಿಣೆ ಹಾಕಲಾಗುವುದು. ನಂತರ ವಿಗ್ರಹವನ್ನು ಒಳಗೆ ಇಡಲಾಗುತ್ತದೆ. ಮುಂದಿನ ದಿನಗಳಲ್ಲಿ ಅಧಿಕೃತವಾಗಿ ಗರ್ಭಗುಡಿಯಲ್ಲಿ ಮೂರ್ತಿ ಪ್ರತಿಷ್ಠಾಪನೆ ನಡೆಯಲಿದೆ. ಆರು ದಿನಗಳ ಕಾಲ ನಡೆಯುವ ಧಾರ್ಮಿಕ ವಿಧಿವಿಧಾನಗಳು ಜನವರಿ 22 ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರೊಂದಿಗೆ ಇತರ ಗಣ್ಯರು ಭಾಗವಹಿಸುವ ಮಹಾ ಸಮರ್ಪಣೆ ಅಥವಾ ಪ್ರಾಣ ಪ್ರತಿಷ್ಠೆ ಸಮಾರಂಭದಲ್ಲಿ ಮುಕ್ತಾಯಗೊಳ್ಳುತ್ತವೆ. ಇದನ್ನೂ ಓದಿ: ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣಪ್ರತಿಷ್ಠಾಪನೆ- ಹುಬ್ಬಳ್ಳಿಯ ಕರಸೇವಕರ ಸಂಭ್ರಮ

    ಜನವರಿ 23 ರಿಂದ ರಾಮಜನ್ಮಭೂಮಿ ದೇಗುಲ ಸಾರ್ವಜನಿಕರಿಗೆ ದರ್ಶನಕ್ಕೆ ಮುಕ್ತವಾಗಲಿದೆ ಎಂದು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರೈ ತಿಳಿಸಿದ್ದಾರೆ. ಕಾರ್ಯಕ್ರಮಕ್ಕೆ ಭರದ ಸಿದ್ಧತೆಗಳು ನಡೆಯುತ್ತಿವೆ.