Tag: ರಾಮಮಂದಿರ ವಿವಾದ

  • ಒಂದೂವರೆ ಶತಮಾನದ ಅಯೋಧ್ಯೆ ವ್ಯಾಜ್ಯ ಇಂದು ಇತ್ಯರ್ಥ – ಯಾರ ವಾದ ಏನು? ಯಾವ ವರ್ಷ ಏನಾಯ್ತು?

    ಒಂದೂವರೆ ಶತಮಾನದ ಅಯೋಧ್ಯೆ ವ್ಯಾಜ್ಯ ಇಂದು ಇತ್ಯರ್ಥ – ಯಾರ ವಾದ ಏನು? ಯಾವ ವರ್ಷ ಏನಾಯ್ತು?

    ನವದೆಹಲಿ: ಅಯೋಧ್ಯೆ ತೀರ್ಪಿಗೆ ಕ್ಷಣಗಣನೆ ಆರಂಭವಾಗಿದೆ. ಒಂದೂವರೆ ಶತಮಾನಗಳಿಂದ ವ್ಯಾಜ್ಯಕ್ಕೆ ಮೂಲವಾಗಿದ್ದ, ಏನಾಗುತ್ತೆ ಅಂತ ನಿರೀಕ್ಷೆ ಭಾರಗಳಿಂದ ಇಡೀ ದೇಶವೇ ಕಾಯುತ್ತಿದ್ದ ಐತಿಹಾಸಿಕ ರಾಮಜನ್ಮಭೂಮಿ ವಿವಾದ ಸಂಬಂಧ ಸುಪ್ರೀಂಕೋರ್ಟ್‌ನ ಸಂವಿಧಾನಿಕ ಪೀಠ ಇಂದು ಬೆಳಗ್ಗೆ ಐತಿಹಾಸಿಕ ತೀರ್ಪು ನೀಡಲಿದೆ.

    ಮುಖ್ಯ ನ್ಯಾಯಮೂರ್ತಿ ರಂಜನ್ ಗೋಗೋಯ್, ನ್ಯಾಯಮೂರ್ತಿ ಎಸ್‍ಎ ಬೋಬ್ಡೆ, ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್, ಕರ್ನಾಟಕ ಮೂಲದ ನ್ಯಾಯಮೂರ್ತಿ ಅಬ್ದುಲ್ ನಜೀರ್ ಮತ್ತು ನ್ಯಾಯಮೂರ್ತಿ ಅಶೋಕ್ ಭೂಷಣ್ ಪೀಠ ಬೆಳಗ್ಗೆ 10.30ಕ್ಕೆ ತನ್ನ ತೀರ್ಪನ್ನು ಪ್ರಕಟಿಸಲಿದೆ.

    ನವೆಂಬರ್ 17ರಂದು ಮುಖ್ಯ ನ್ಯಾಯಮೂರ್ತಿ ಗೋಗೋಯ್ ನಿವೃತ್ತಿ ಆಗಲಿದ್ದು, ಅದಕ್ಕೂ ಮೊದಲೇ ಪೀಠ ತೀರ್ಪು ಪ್ರಕಟಿಸುವುದು ಅನಿವಾರ್ಯ ಆಗಿತ್ತು. ಇವತ್ತು ಸುಪ್ರೀಂಕೋರ್ಟ್‍ಗೆ ರಜೆ ಇದ್ದರೂ ತೀರ್ಪು ಪ್ರಕಟಿಸುತ್ತಿರುವುದು ವಿಶೇಷ. ನಮ್ಮ ನ್ಯಾಯಾಂಗ ಇತಿಹಾಸದಲ್ಲಿ ಕೇಶವಾನಂದ ಭಾರತಿ ಪ್ರಕರಣದ ಬಳಿಕ ಸುಪ್ರೀಂಕೋರ್ಟಿನಲ್ಲಿ ಅತೀ ದೀರ್ಘಾವಧಿಗೆ ನಡೆದ ವಿಚಾರಣೆ ಅಂದ್ರೆ ಅದು ಅಯೋಧ್ಯೆ ವಿವಾದ.

    1972-73ರಲ್ಲಿ ಕೇಶವಾನಂದ ಭಾರತಿ ಪ್ರಕರಣ ಸಂಬಂಧ 62 ದಿನಗಳ ಕಾಲ ವಾದ-ಪ್ರತಿವಾದ ನಡೆದಿದ್ರೆ, ಅಯೋಧ್ಯೆ ವಿಚಾರಣೆ 40 ದಿನಗಳ ಕಾಲ ನಡೆದು, ಅಕ್ಟೋಬರ್ 16ರಂದು ಕೊನೆ ಆಗಿತ್ತು. ಉತ್ತರ ಪ್ರದೇಶ ಸರ್ಕಾರ 54 ಸಂಪುಟಗಳಲ್ಲಿ 11, 426 ಪುಟಗಳಷ್ಟು ಬೃಹತ್ ದಾಖಲೆಗಳ ಭಾಷಾಂತರ ಮತ್ತು ಶಿಲಾಶಾಸನಗಳು, ಪುರಾಣಗಳು ಸೇರಿದಂತೆ 533 ಸಾಕ್ಷ್ಯಗಳನ್ನು ವಾದದಲ್ಲಿ ಸಲ್ಲಿಸಿತ್ತು.

     

    ಅಯೋಧ್ಯೆ ಟೈಮ್‍ಲೈನ್:
    * 1528 – ಮೊಘಲ್ ಸಾಮ್ರಾಟ್ ಬಾಬರ್ ಕಮಾಂಡರ್ ಮಿರ್ ಬಾಕಿಯಿಂದ ಅಯೋಧ್ಯೆಯಲ್ಲಿ ಬಾಬ್ರಿ ಮಸೀದಿ ನಿರ್ಮಾಣ
    * 1885 – ವಿವಾದಗ್ರಸ್ತ ಜಾಗದಲ್ಲಿ ಗೋಪುರ ನಿರ್ಮಾಣಕ್ಕೆ ಅವಕಾಶ ಕೋರಿ ಮಹಾಂತ ರಘುಬೀರ್ ದಾಸ್‍ರಿಂದ ಫೈಜಾಬಾದ್ ಜಿಲ್ಲಾ ನ್ಯಾಯಾಲಯಕ್ಕೆ ಅರ್ಜಿ, ಅದು ತಿರಸ್ಕೃತ
    * 1949 – ವಿವಾದಗ್ರಸ್ತ ಮಸೀದಿಯ ಕೇಂದ್ರ ಗುಮ್ಮಟದೊಳಗೆ ರಾಮಲಲ್ಲಾ ವಿಗ್ರಹಗಳ ಪ್ರತಿಷ್ಠಾಪನೆ
    * 1950 – ಈ ವಿಗ್ರಹಗಳ ಪೂಜೆಗೆ ಅನುಮತಿ ಕೋರಿ ಗೋಪಾಲ್ ಶೀಮ್ಲಾ, ರಾಮಚಂದ್ರ ದಾಸ್‍ರಿಂದ ಫೈಜಾಬಾದ್ ಕೋರ್ಟ್‍ಗೆ ಅರ್ಜಿ.
    * 1959 – ಜಾಗದ ಸ್ವಾಧೀನ ಕೋರಿ ನಿರ್ಮೋಹಿ ಅಖಾರದಿಂದ ಅರ್ಜಿ

    * 1981 – ಸುನ್ನಿ ವಕ್ಫ್ ಮಂಡಳಿಯಿಂದಲೂ ಜಾಗದ ಒಡೆತನಕ್ಕಾಗಿ ಮನವಿ
    * 1986 – ವಿವಾದಗ್ರಸ್ತ ಜಾಗದಲ್ಲಿ ಹಿಂದೂಗಳ ಪೂಜೆಗೆ ಅನುವು ಮಾಡಿಕೊಡುವಂತೆ ಕೋರ್ಟ್ ಆದೇಶ
    * 1989 – ವಿವಾದಗ್ರಸ್ತ ಜಾಗದ ವಿಷಯದಲ್ಲಿ ಯಥಾಸ್ಥಿತಿ ಕಾಯ್ದುಕೊಂಡು ಹೋಗುವಂತೆ ಅಲಹಬಾದ್ ಹೈಕೋರ್ಟ್ ಆದೇಶ
    * 1990 – ದೇಶಾದ್ಯಂತ ಅಯೋಧ್ಯೆ ರಥ ಯಾತ್ರೆ ನಡೆಸಿದ ಎಲ್‍ಕೆ ಅಡ್ವಾಣಿ(1990ರ ಸೆಪ್ಟೆಂಬರ್‍ನಲ್ಲಿ ಎಲ್‍ಕೆ ಅಡ್ವಾಣಿ ರಥಯಾತ್ರೆ ಆರಂಭಿಸಿದರು. ದೇಶದ ಹಿಂದೂಗಳನ್ನು ಭಾವನಾತ್ಮಕವಾಗಿ, ರಾಜಕೀಯ ಒಗ್ಗೂಡಿಸಿದ್ರು.)

    * 1992 – ಡಿಸೆಂಬರ್ 6 – ಬಾಬ್ರಿ ಮಸೀದಿ ಧ್ವಂಸ
    (1992ರ ಡಿಸೆಂಬರ್ 6ರಂದು ಬಿಜೆಪಿ ನಾಯಕರನ್ನು ಒಳಗೊಂಡ ಒಂದೂವರೆ ಲಕ್ಷ ಕರಸೇವಕರು ಅಯೋಧ್ಯೆಯಲ್ಲಿ ರ‍್ಯಾಲಿ ನಡೆಸಿದ್ರು. ಅಂದೇ, ಬಾಬ್ರಿ ಮಸೀದಿ ಕೂಡ ಧ್ವಂಸವಾಯ್ತು. ಈ ವೇಳೆ ಎಲ್‍ಕೆ ಅಡ್ವಾಣಿ, ಮುರಳಿ ಮನೋಹರ್ ಜೋಷಿ, ಉಮಾಭಾರತಿ ಸೇರಿ ಹಲವರ ಇದ್ದರು. ಮೊದಲು ಕೇವಲ 2 ಲೋಕಸಭೆ ಸೀಟು ಗೆದ್ದಿದ್ದ ಬಿಜೆಪಿ ಮುಂದೆ ಹಂತ ಹಂತವಾಗಿ ಬೆಳೆದು ಅಟಲ್ ನೇತೃತ್ವದಲ್ಲಿ ಕೇಂದ್ರದಲ್ಲಿ ಅಧಿಕಾರಕ್ಕೆ ಕೂಡ ಬಂತು.)

    * 2002 – ಜಾಗದ ಒಡೆತನ ಯಾರಿಗೆ ಸೇರಿದ್ದು ಎನ್ನುವ ವ್ಯಾಜ್ಯ ಕುರಿತು ಅಲಹಬಾದ್ ಹೈಕೋರ್ಟ್‍ನಲ್ಲಿ ವಿಚಾರಣೆ
    * 2010 – ಸುನ್ನಿ ವಕ್ಫ್ ಮಂಡಳಿ, ನಿರ್ಮೋಹಿ ಅಖಾರ ಮತ್ತು ರಾಮ್ ಲಲ್ಲಾ ಮೂರು ವಾರಸುದಾರರಿಗೆ ವಿವಾದಿತ ಜಾಗದ ಸಮಾನ ಹಂಚಿಕೆ ಮಾಡಿ ತೀರ್ಪು
    (2010ರಲ್ಲಿ ಅಲಹಾಬಾದ್ ನ್ಯಾಯಾಲಯ 2.77 ಎಕರೆಗಳ ರಾಮ ಜನ್ಮಭೂಮಿ-ಬಾಬ್ರಿ ಮಸೀದಿ ಜಾಗವನ್ನು ಮೂರು ಭಾಗಗಳಾಗಿ ವಿಭಾಗಿಸಬೇಕು ಎಂಬ ಆದೇಶ ನೀಡಿತ್ತು. ಸುನ್ನಿ ವಕ್ಫ್ ಮಂಡಳಿ, ನಿರ್ಮೋಹಿ ಅಖಾರಾ ಮತ್ತು ರಾಮ್ ಲಲ್ಲಾಗೆ ಸಮಾನವಾಗಿ ಈ ಭೂಮಿಯನ್ನು ಹಂಚಿಕೆ ಮಾಡುವಂತೆ 2:1 ಬಹುಮತದ ಆದೇಶವನ್ನು ನೀಡಿತ್ತು.)

    * 2011 – ಅಯೋಧ್ಯೆ ಭೂ ವಿವಾದ ಕುರಿತ ಹೈಕೋರ್ಟ್ ತೀರ್ಪಿಗೆ ಸುಪ್ರೀಂ ತಡೆ
    * 2017 – ಪರಸ್ಪರ ಸಂಧಾನ ಸಮ್ಮತಿ ಮೂಲಕ ವ್ಯಾಜ್ಯ ಇತ್ಯರ್ಥ ಪಡಿಸಿಕೊಳ್ಳಲು ಸಿಜೆಐ ಜೆ.ಎಸ್ ಖೇಹರ್ ಸಲಹೆ
    * 2017 – ಅಲಹಾಬಾದ್ ಹೈಕೋರ್ಟ್‍ನ 1994ರ ತೀರ್ಪಿನ ವಿರುದ್ಧ ಸಲ್ಲಿಕೆಯಾದ ಅರ್ಜಿಗಳ ವಿಚಾರಣೆಗೆ ಸುಪ್ರೀಂಕೋರ್ಟ್‍ನಲ್ಲಿ ತ್ರಿಸದಸ್ಯ ಪೀಠ ರಚನೆ

    ಡಿ.6, 1992 ನಡೆದಿದ್ದೇನು?
    ಬಿಜೆಪಿ ಕರ ಸೇವಕರಿಂದ ಅಯೋಧ್ಯೆ ರ್ಯಾಲಿ ನಡೆದಿದ್ದು ಒಂದೂವರೆ ಲಕ್ಷ ಕರ ಸೇವಕರ ಭಾಗಿಯಾಗಿದ್ದರು. ಬಿಜೆಪಿ ಹಿರಿಯ ಮುಖಂಡ ಎಲ್.ಕೆ. ಆಡ್ವಾಣಿ ನೇತೃತ್ವದಲ್ಲಿ ನಡೆದ ರ್ಯಾಲಿಯಲ್ಲಿ ಭಾಗವಹಿಸಿದ್ದ ಕರಸೇವಕರು ಬಾಬ್ರಿ ಮಸೀದಿಯನ್ನು ಧ್ವಂಸ ಮಾಡಿದ್ದರು.

    2010ರಲ್ಲಿ ಅಲಹಾಬಾದ್ ಕೋರ್ಟ್ ತೀರ್ಪೆನು?
    ರಾಮ ಜನ್ಮಭೂಮಿ-ಬಾಬ್ರಿ ಮಸೀದಿ ಜಾಗ ಸಮಾನ ಹಂಚಿಕೆ ಮಾಡಿತ್ತು. ವಿವಾದಿತ 2.77 ಎಕರೆಗ ಭೂಮಿ 3 ಭಾಗಗಳಾಗಿ ಸುನ್ನಿ ವಕ್ಫ್ ಮಂಡಳಿ, ನಿರ್ಮೋಹಿ ಅಖಾರಾ, ರಾಮ್‍ಲಲ್ಲಾಗೆ ಸಮಾನ ಹಂಚಿಕೆ ಮಾಡಿತ್ತು.

    ರಾಮ್ ಲಲ್ಲಾದ ವಾದ ಏನು..?
    ವಾದ 1 – ಅಯೋಧ್ಯೆಯಲ್ಲಿ ಅನಾದಿ ಕಾಲದಿಂದಲೂ ರಾಮಮಂದಿರ ಇತ್ತು.
    (ವಿವಾದಿತ ಭೂಮಿಯಲ್ಲಿ 12ನೇ ಶತಮಾನಕ್ಕೆ ಸೇರಿದ ಸಂಸ್ಕøತ ಭಾಷೆಯಲ್ಲಿದ್ದ ಶಿಲಾಶಾಸನ ಸಿಕ್ಕಿದೆ. )
    ವಾದ 2 – ಸಾಕೇತ ಮಂಡಲದ ರಾಜಧಾನಿ ಆಗಿದ್ದ ಆಯೋಧ್ಯೆಯ ಈ ವಿವಾದಿತ ಸ್ಥಳದಲ್ಲಿ ವಿಷ್ಣುವಿನ ದೇವಸ್ಥಾನ ಇತ್ತು.
    (ಪ್ರತ್ಯಕ್ಷದರ್ಶಿಗಳು, ಪುರಾತತ್ವ ಉತ್ಖನನಗಳಲ್ಲಿ ಸಿಕ್ಕ ದಾಖಲೆಗಳ ಪ್ರಕಾರ ಸಾಕೇತ ಮಂಡಲದ ರಾಜನಾಗಿದ್ದ ಗೋವಿಂದ ಚಂದ್ರನ ಕಾಲದಲ್ಲಿ ಈ ಸ್ಥಳದಲ್ಲಿ ವಿಷ್ಣುವಿನ ದೇವಸ್ಥಾನ ಇತ್ತು.)
    ವಾದ 3 – ಶಿಲಾಶಾಸನದ ಸತ್ಯಾಸತ್ಯತೆ ಬಗ್ಗೆ ಯಾರೂ ಇಲ್ಲಿವರೆಗೂ ತಕರಾರು ಎತ್ತಿಲ್ಲ. ರಾಮಜನ್ಮಸ್ಥಾನದಲ್ಲಿ ವಿವಾದಿತ ದೇವಸ್ಥಾನವನ್ನು ಕೆಡವಿ ಬಾಬ್ರಿ ಮಸೀದಿ ಕಟ್ಟಲಾಗಿತ್ತು.
    (ರಾಮಮಂದಿರವನ್ನು ಕೆಡವಿದ ಬಳಿಕವೂ ಆ ಸ್ಥಳಕ್ಕೆ ಯಾತ್ರಾರ್ಥಿಗಳು ಬಂದು ಪೂಜೆ ಸಲ್ಲಿಸುತ್ತಿದ್ದಾರೆ. )
    ವಾದ 4 – ಬಾಬರ್ ರಾಮಮಂದಿರವನ್ನು ಕೆಡವಿ ಬಾಬ್ರಿ ಮಸೀದಿಯನ್ನು ನಿರ್ಮಿಸಿದ್ದ. ಇದು ಐತಿಹಾಸಿಕ ಪ್ರಮಾದ
    ವಾದ 5 – ಅಯೋಧ್ಯೆಯಲ್ಲಿ ಸಾಕಷ್ಟು ಮಸೀದಿಗಳಿವೆ, ಮುಸ್ಲಿಮರು ಅಲ್ಲೂ ನಮಾಜ್ ಮಾಡಬಹುದು. ಆದ್ರೆ ರಾಮನ ಜನ್ಮಸ್ಥಳ ಒಂದೇ ಅದು ಅಯೋಧ್ಯೆ
    ವಾದ 6 – ಕಾನೂನಿನ ಪ್ರಕಾರ ದೇವರು ಅಪ್ರಾಪ್ತ
    (ದೇವರಿಗೆ ತಾವಾಗಿಯೇ ವರ್ತಿಸಲು ಆಗುವುದಿಲ್ಲ. ಹೀಗಾಗಿ ಅವರಿಗೊಬ್ಬರು ಪೋಷಕರು ಬೇಕಾಗುತ್ತದೆ. ಹೀಗಾಗಿ ದೇವರನ್ನು ಕಾನೂನಿನಲ್ಲಿ ಅಪ್ರಾಪ್ತ ಎಂದು ಪರಿಗಣಿಸಲಾಗುತ್ತದೆ. ದೇವರು ಮತ್ತು ಆತನ ಸೇವಕನ ನಡುವಿನ ಸಂಬಂಧ ಅಪ್ರಾಪ್ತರು ಮತ್ತು ಅವರ ಪೋಷಕರ ನಡುವಿನ ಸಂಬಂಧದಂತೆ. )
    ವಾದ 7 –ನಿರ್ಮೋಹಿ ಅಖಾರದವರು ದೇವರ ಪ್ರತಿನಿಧಿಗಳಲ್ಲ, ಹೀಗಾಗಿ ಅವರಿಗೆ ಈ ಭೂಮಿ ಮೇಲೆ ಹಕ್ಕಿಲ್ಲ.

    ನಿರ್ಮೋಹಿ ಅಖಾರದ ವಾದ ಏನು?
    ವಾದ 1 – ಅಯೋಧ್ಯೆಯ ವಿವಾದಿತ ಸ್ಥಳದಲ್ಲಿ 1934ರಿಂದ ಮುಸ್ಲಿಮರು ಪ್ರಾರ್ಥನೆ ಸಲ್ಲಿಸುತ್ತಿಲ್ಲ
    ವಾದ 2 – ಅರ್ಚಕರಿಗೆ ದೇವರ ಭೂಮಿಯ ಮೇಲೆ ಹಕ್ಕಿರುತ್ತದೆ
    (ಹಿಂದೂ ಸಂಪ್ರದಾಯದಲ್ಲಿ ದೇವಸ್ಥಾನದ ಆಸ್ತಿ ದೇವರ ಹೆಸರಲ್ಲಿದ್ದರೂ ಅದರ ನಿರ್ವಹಣೆ ಅರ್ಚಕರದ್ದು. ವಂಶಪಾರಂಪರ್ಯ ಆಸ್ತಿಗಳ ಮೇಲೆ ಹಕ್ಕಿರುವಂತೆ ದೇವಸ್ಥಾನದ ಭೂಮಿ ಮೇಲೂ ಅವರಿಗೆ ಹಕ್ಕಿರುತ್ತದೆ.)


    ವಾದ 3 – 1934ರ ಬಳಿಕ ವಿವಾದಿತ ಭೂಮಿ 2.77 ಎಕರೆಯಲ್ಲಿ ಮುಸ್ಲಿಮರ ಪ್ರವೇಶಕ್ಕೆ ಅವಕಾಶ ಕೊಟ್ಟಿಲ್ಲ.
    (ಹೀಗಾಗಿ ಇಡೀ ಭೂಮಿ ಸಂಪೂರ್ಣವಾಗಿ ನಿರ್ಮೋಹಿ ಅಖಾರದ ಒಡೆತನದಲ್ಲಿದೆ.)
    ವಾದ 4 – ನಮ್ಮ ಮೂಲ ವಾದ ಭೂಮಿ ಒಡೆತನ, ನಿರ್ವಹಣೆಯ ಹಕ್ಕಿಗೆ ಸಂಬಂಧಿಸಿದ್ದು.
    ವಾದ 5 – 1850ರಿಂದಲೇ ನಾವು ಈ ಭೂಮಿಯ ಮೇಲೆ ಹಕ್ಕು ಹೊಂದಿದ್ದೇವೆ. (ಸೀತಾ ರಸೋಯಿ, ಚಬುತರ್, ರಾಮ್ ಭಂಡಾರ್ ಕೂಡಾ ನಮ್ಮ ಹಿಡಿತದಲ್ಲೇ ಇತ್ತು. ಅಲ್ಲದೇ ಈ ಮೂರು ಜಾಗಗಳ ಮೇಲೆ ಯಾವುದೇ ವ್ಯಾಜ್ಯಗಳು ಇರಲಿಲ್ಲ.)

    ಸುನ್ನಿ ವಕ್ಫ್ ಬೋರ್ಡ್ ವಾದ ಏನು.?
    ವಾದ 1 – ಅಯೋಧ್ಯೆಯಲ್ಲಿ ಬಾಬ್ರಿ ಮಸೀದಿ ಇತ್ತು
    ವಾದ 2 – 1949ರ ಬಳಿಕವಷ್ಟೇ ಅಲ್ಲಿ ರಾಮನ ಮೂರ್ತಿಯನ್ನು ತಂದಿಡಲಾಯ್ತು. ಇದೊಂದು ಪಿತೂರಿ
    ವಾದ 3 – 1949ರ ಡಿಸೆಂಬರ್ 22-23ರ ರಾತ್ರಿ ಮಸೀದಿ ಕೆಳಗೆ ರಾಮನ ಮೂರ್ತಿಗಳನ್ನು ತಂದಿಡಲಾಯ್ತು
    ವಾದ 4 – 1934ರ ಬಳಿಕ ಮುಸ್ಲಿಮರು ಪ್ರಾರ್ಥನೆ ಸಲ್ಲಿಸದಂತೆ ಬೀಗ ಹಾಕಲಾಯ್ತು
    ವಾದ 5 – ಸ್ಥಳೀಯ ಆಡಳಿತ ಮಂಡಳಿಯೊಂದಿಗೆ ಅತಿಕ್ರಮಣ
    ವಾದ 6 – ದೇವರು ಸರ್ವಯಾಂರ್ತಯಾಮಿ ಎಂದ ಮಾತ್ರಕ್ಕೆ ದೇವರ ಹೆಸರಲ್ಲಿ ಭೂಮಿಯ ಹಕ್ಕಿನ ವಾದ ಒಪ್ಪಲು ಸಾಧ್ಯವಿಲ್ಲ.
    ವಾದ 7 – ಭಕ್ತರಿಗೆ ದೇವರ ಹೆಸರಲ್ಲಿ ಭೂಮಿಯ ನಿರ್ವಹಣೆಯ ಹಕ್ಕಿರುತ್ತದೆ
    ವಾದ 8 – ದೇವರ ಪ್ರತಿನಿಧಿ ಆಗಿ ರಾಮ್ ಚಬುತರ್ (ರಾಮ ಹುಟ್ಟಿ ಬೆಳದ ಸ್ಥಳ)ದ ಮೇಲೆ ನಿರ್ಮೋಹಿ ಅಖಾರವನ್ನು ಒಪ್ಪಿಕೊಳ್ತೇವೆ, ಆದ್ರೆ ಮಾಲೀಕರಾಗಿ ಅಲ್ಲ
    ವಾದ 9 – ಬಾಬ್ರಿ ಮಸೀದಿಗಿಂತ 80 ಅಡಿ ದೂರದಲ್ಲಿ ರಾಮಜನ್ಮಭೂಮಿ ಇದ್ದಿದ್ದು ನಿಜ. ಆದ್ರೆ ಬಾಬ್ರಿ ಮಸೀದಿಯಿದ್ದ ಜಾಗದಲ್ಲಿ ರಾಮನ ಜನ್ಮ ಆಗಿರಲಿಲ್ಲ

    ರಾಮಜನ್ಮಭೂಮಿಯ ಇತಿಹಾಸವೇನು?
    > ಸೀತಾ ರಸೋಯಿ
    ಮೊದಲ ಬಾರಿಗೆ ಸೀತೆ ಅಡುಗೆ ಮಾಡಿದ್ದ ಸ್ಥಳ
    ಕುಟುಂಬ ಸದಸ್ಯರಿಗಾಗಿ ಸಿಹಿ ಅಡುಗೆ ತಯಾರಿಸಿದ್ದ ಸೀತೆ

    > ರಾಮ್ ಭಂಡಾರ್
    ಭಗವಾನ್ ಶ್ರೀರಾಮನ ಭೋಜನ ಗೃಹ
    ಸೀತಾ ರಸೋಯಿಯಲ್ಲಿ ಅಡುಗೆ ಮಾಡಿ ಇಲ್ಲಿ ಭೋಜನ

    > ರಾಮ್ ಚಬೂತರ್
    ಇದು ಭಗವಾನ್ ಶ್ರೀರಾಮ ಹುಟ್ಟಿದ ಸ್ಥಳ
    ಇದೇ ಜಾಗದಲ್ಲಿ ಶ್ರೀರಾಮ ಬೆಳೆದ ಜಾಗ

    * ಅಯೋಧ್ಯೆ ಭೂಮಿಗೆ ವಾರಸುದಾರರು ಯಾರು?
    ವಾರಸುದಾರರು 1
    > ರಾಮ್ ಲಲ್ಲಾ
    ವಿಹೆಚ್‍ಪಿ, ಹಿಂದೂ ಮಹಾಸಭಾ ಸದಸ್ಯರನ್ನು ಒಳಗೊಂಡ ಸಂಸ್ಥೆ

    ವಾರಸುದಾರರು 2
    > ನಿರ್ಮೋಹಿ ಅಖಾರ
    ರಾಮನ ಪೂಜಿಸುವ ಸನ್ಯಾಸಿಗಳ ಸಂಘಟನೆ
    ಮೊದಲಿನಿಂದಲೂ ಪೂಜೆಯ ಹಕ್ಕು ಪ್ರತಿಪಾದನೆ

    ವಾರಸುದಾರರು 3
    > ಸುನ್ನಿ ವಕ್ಫ್ ಬೋರ್ಡ್
    ಬಾಬ್ರಿ ಮಸೀದಿ ಸ್ಥಳ ತಮ್ಮದೇ ಎನ್ನುತ್ತಿರುವ ಮುಸ್ಲಿಂ ಸಂಸ್ಥೆ

  • ಅಯೋಧ್ಯೆ ರಾಮಮಂದಿರ ವಿವಾದವನ್ನು ಕೋರ್ಟ್ ಹೊರಗಡೆ ಬಗೆಹರಿಸಲು ನಾವು ಸಿದ್ಧ:ಎಐಎಂಪಿಎಲ್‍ಬಿ

    ಅಯೋಧ್ಯೆ ರಾಮಮಂದಿರ ವಿವಾದವನ್ನು ಕೋರ್ಟ್ ಹೊರಗಡೆ ಬಗೆಹರಿಸಲು ನಾವು ಸಿದ್ಧ:ಎಐಎಂಪಿಎಲ್‍ಬಿ

    ಲಕ್ನೋ: ಆಯೋಧ್ಯೆ ರಾಮಮಂದಿರ- ಬಾಬ್ರಿ ಮಸೀದಿ ವಿವಾದವನ್ನು ನ್ಯಾಯಾಲಯದ ಹೊರಗಡೆ ಬಗೆಹರಿಸಿಕೊಳ್ಳಲು ನಾವು ಸಿದ್ಧರಿದ್ದೇವೆ ಎಂದು ಅಖಿಲ ಭಾರತ ಮುಸ್ಲಿಮ್ ವೈಯಕ್ತಿಕ ಕಾನೂನು ಮಂಡಳಿ(ಎಐಎಂಪಿಎಲ್‍ಬಿ) ಹೇಳಿದೆ.

    ನಾವು ಸುಪ್ರೀಂ ಕೋರ್ಟ್ ಸಲಹೆಯನ್ನು ಸ್ವಾಗತಿಸಿದ್ದು, ಕೋರ್ಟ್ ಹೊರಗಡೆ ವಿವಾದವನ್ನು ಬಗೆ ಹರಿಸಲು ಸಿದ್ಧರಿದ್ದೇವೆ ಎಂದು ಎಐಎಂಪಿಎಲ್‍ಬಿಯ ಮೌಲನಾ ಖಲೀದ್ ರಶೀದ್ ಮಾಧ್ಯಮವೊಂದಕ್ಕೆ ಪ್ರತಿಕ್ರಿಯಿಸಿದ್ದಾರೆ. ಮಂಗಳವಾರ ಸುಪ್ರೀಂ ಸಲಹೆಯನ್ನು ಆರ್‍ಎಸ್‍ಎಸ್ ಸ್ವಾಗತಿಸಿತ್ತು. ಆದರೆ ವಕ್ಫ್ ಬೋರ್ಡ್ ಸುಪ್ರೀಂ ಸಲಹೆಯನ್ನು ತಿರಸ್ಕರಿಸಿತ್ತು.

    ನ್ಯಾಯಾಲಯದ ಹೊರಗಡೆ ಈ ವಿವಾದವನ್ನು ಬಗೆಹರಿಸಿಕೊಳ್ಳಲು ಸಾಧ್ಯವಿಲ್ಲ. ನ್ಯಾಯಾಲಯ ವ್ಯಾಪ್ತಿಯಲ್ಲೇ ಈ ವಿವಾದ ಪರಿಹಾರವಾಗಬೇಕು ಎಂದು ಬಾಬ್ರಿ ಮಸೀದಿ ಕಾರ್ಯಕಾರಿ ಸಮಿತಿ(ಬಿಎಂಎಸಿ) ಸಮನ್ವಯಕಾರ ಜಿಲಾನಿ ತಿಳಿಸಿದ್ದಾರೆ.

    2010ರ ಅಲಹಾಬಾದ್ ಹೈಕೋರ್ಟ್ ಆದೇಶವನ್ನು ಸಲ್ಲಿಸಿ ಪ್ರಶ್ನಿಸಲಾಗಿದ್ದ ಅರ್ಜಿ ವಿಚಾರಣೆ ನಡೆಸಲು ಪ್ರತ್ಯೇಕ ಪೀಠವನ್ನು ಸ್ಥಾಪಿಸುವಂತೆ ಬಿಜೆಪಿಯ ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ಮಂಗಳವಾರ ಸುಪ್ರೀಂ ನಲ್ಲಿ ನಡೆಯಿತು. ಈ ವೇಳೆ ಆಯೋಧ್ಯೆ ರಾಮ ಜನ್ಮಭೂಮಿ ಮತ್ತು ಬಾಬ್ರಿ ಮಸೀದಿ ವಿವಾದ ಸಂಬಂಧ ನ್ಯಾಯಾಲಯ ನೀಡುವ ತೀರ್ಪಿಗಿಂತಲೂ ಹೊರಗಡೆ ಬಗೆಹರಿಸಿಕೊಳ್ಳುವುದು ಸೂಕ್ತ ಎಂದು ಮುಖ್ಯ ನ್ಯಾ.ಜಗದೀಶ್ ಸಿಂಗ್ ಖೇಹರ್, ನ್ಯಾ. ಡಿವೈ ಚಂದ್ರಚೂಡ್, ನ್ಯಾ. ಸಂಜಯ್ ಕಿಶನ್ ಕೌಲ್ ಅವರನ್ನು ಒಳಗೊಂಡ ಪೀಠ ಅಭಿಪ್ರಾಯಪಟ್ಟಿತ್ತು,

    ರಾಮ ಮಂದಿರ ಮತ್ತು ಬಾಬ್ರಿ ಮಸೀದಿ ಸೂಕ್ಷ್ಮ ಮತ್ತು ಭಾವನಾತ್ಮಕ ವಿಚಾರವಾಗಿರುವುದರಿಂದ ಎರಡೂ ಪಂಗಡದ ನಾಯಕರು ಸಭೆ ನಡೆಸಿ ಬಗೆಹರಿಸಿಕೊಳ್ಳುವುದು ಉತ್ತಮ ಎಂದು ಕೋರ್ಟ್ ಸಲಹೆ ನೀಡಿತ್ತು.

  • ರಾಮಮಂದಿರ ವಿವಾದವನ್ನು ನ್ಯಾಯಾಲಯದ ಹೊರಗಡೆ ಬಗೆಹರಿಸಿಕೊಳ್ಳುವುದು ಉತ್ತಮ: ಸುಪ್ರೀಂ

    ರಾಮಮಂದಿರ ವಿವಾದವನ್ನು ನ್ಯಾಯಾಲಯದ ಹೊರಗಡೆ ಬಗೆಹರಿಸಿಕೊಳ್ಳುವುದು ಉತ್ತಮ: ಸುಪ್ರೀಂ

    ನವದೆಹಲಿ: ಆಯೋಧ್ಯೆ ರಾಮಮಂದಿರ ಭೂಮಿ ವಿವಾದವನ್ನು ನ್ಯಾಯಾಲಯದ ಹೊರಗಡೆ ಬಗೆಹರಿಸಿಕೊಳ್ಳುವುದು ಉತ್ತಮ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ.

    2010ರ ಅಲಹಾಬಾದ್ ಹೈಕೋರ್ಟ್ ಆದೇಶವನ್ನು ಸಲ್ಲಿಸಿ ಪ್ರಶ್ನಿಸಲಾಗಿದ್ದ ಅರ್ಜಿ ವಿಚಾರಣೆ ನಡೆಸಲು ಪ್ರತ್ಯೇಕ ಪೀಠವನ್ನು ಸ್ಥಾಪಿಸುವಂತೆ ಬಿಜೆಪಿಯ ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ, ಆಯೋಧ್ಯೆ ರಾಮ ಜನ್ಮಭೂಮಿ ಮತ್ತು ಬಾಬ್ರಿ ಮಸೀದಿ ವಿವಾದ ಸಂಬಂಧ ನ್ಯಾಯಾಲಯ ನೀಡುವ ತೀರ್ಪಿಗಿಂತಲೂ ಹೊರಗಡೆ ಬಗೆಹರಿಸಿಕೊಳ್ಳುವುದು ಸೂಕ್ತ ಎಂದು ಮುಖ್ಯ ನ್ಯಾ.ಜಗದೀಶ್ ಸಿಂಗ್ ಖೇಹರ್, ನ್ಯಾ. ಡಿವೈ ಚಂದ್ರಚೂಡ್, ನ್ಯಾ. ಸಂಜಯ್ ಕಿಶನ್ ಕೌಲ್ ಅವರನ್ನು ಒಳಗೊಂಡ ಪೀಠ ಅಭಿಪ್ರಾಯಪಟ್ಟಿದೆ.

    ರಾಮ ಮಂದಿರ ಮತ್ತು ಬಾಬ್ರಿ ಮಸೀದಿ ಸೂಕ್ಷ್ಮ ಮತ್ತು ಭಾವನಾತ್ಮಕ ವಿಚಾರವಾಗಿರುವುದರಿಂದ ಎರಡೂ ಪಂಗಡದ ನಾಯಕರು ಸಭೆ ನಡೆಸಿ ಬಗೆಹರಿಸಿಕೊಳ್ಳುವುದು ಉತ್ತಮ ಎಂದು ಕೋರ್ಟ್ ಸೂಚಿಸಿದೆ.

    ಈ ಪ್ರಕರಣದ ಸಮಸ್ಯೆ ಬಗೆ ಹರಿಸಲು ನೀವು ಯಾರನ್ನು ಬೇಕಾದರು ಆರಿಸಿಕೊಳ್ಳಬಹುದು. ನಾನು ಮಧ್ಯಸ್ಥಿಕೆ ವಹಿಸಬೇಕು ಎಂದು ನೀವು ಬಯಸಿದ್ದಲ್ಲಿ ನಾನು ಮಧ್ಯಸ್ಥಿಕೆ ವಹಿಸಲು ಸಿದ್ಧ. ನಿಮಗೆ ಬೇರೆ ನ್ಯಾಯಾಧೀಶರು ಬೇಕಾದರೆ ಅವರನ್ನು ನೀವು ಆಯ್ಕೆ ಮಾಡಿಕೊಳ್ಳಬಹುದು ಎಂದು ಮುಖ್ಯ, ನ್ಯಾ. ಖೇಹರ್ ದೂರುದಾರ ಸುಬ್ರಮಣಿಯನ್ ಸ್ವಾಮಿ ಅವರಿಗೆ ತಿಳಿಸಿದರು.

    ಎರಡು ಪಂಗಡದ ನಾಯಕರ ಜೊತೆ ಮಾತುಕತೆ ನಡೆಸಿ ಮಾರ್ಚ್ 31ರಂದು ನಿರ್ಧಾರವನ್ನು ತಿಳಿಸುವಂತೆ ಕೋರ್ಟ್ ಸುಬ್ರಮಣಿಯನ್ ಸ್ವಾಮಿ ಅವರಿಗೆ ಸೂಚಿಸಿದೆ.

    ಕೋರ್ಟ್ ಹೊರಗಡೆ ಎರಡೂ ಪಂಗಡಗಳು ಮಾತುಕತಡೆ ನಡೆಸಿ ಈ ವಿಚಾರವನ್ನು ಬಗೆಹರಿಸಿಕೊಳ್ಳುವುದು ಬಹಳ ಕಷ್ಟ. ಈ ಪ್ರಕರಣ ನ್ಯಾಯಾಲಯದಲ್ಲೇ ಇತ್ಯರ್ಥವಾಗಬೇಕಿದೆ ಎಂದು ಸುಬ್ರಮಣಿಯನ್ ಸ್ವಾಮಿ ಹೇಳಿದ್ದಾರೆ. ನ್ಯಾಯಾಲಯದ ಹೊರಗಡೆ ವಿವಾದವನ್ನು ಬಗೆಹರಿಸಿಕೊಳ್ಳಿ ಎನ್ನುವ ಸುಪ್ರೀಂ ಅಭಿಪ್ರಾಯವನ್ನು ಪ್ರಕರಣದ ದೂರುದಾರ ವಕ್ಫ್ ಬೋರ್ಡ್‍ನ ಜಿಲಾನಿ ತಿರಸ್ಕರಿಸಿದ್ದಾರೆ.