Tag: ರಾಬರಿ

  • ಅಮೇಜಾನ್‌ಗೆ ಸೇರಿದ ಕಂಟೇನರ್‌ನಿಂದ ಲಕ್ಷಾಂತರ ರೂ.ಮೌಲ್ಯದ ವಸ್ತುಗಳು ರಾಬರಿ

    ಅಮೇಜಾನ್‌ಗೆ ಸೇರಿದ ಕಂಟೇನರ್‌ನಿಂದ ಲಕ್ಷಾಂತರ ರೂ.ಮೌಲ್ಯದ ವಸ್ತುಗಳು ರಾಬರಿ

    – ಚಾಲಕನ ಮೊಬೈಲ್‌ ಸ್ವಿಚ್‌ ಆಫ್‌
    – ಕೋಲಾರದ ಹೈವೇಯಲ್ಲಿ ಹೆಚ್ಚಾಯ್ತು ರಾಬರಿ

    ಕೋಲಾರ: ಏಳು ಕೋಟಿ ರೂಪಾಯಿ ಮೌಲ್ಯದ ಮೊಬೈಲ್ ರಾಬರಿ ಪ್ರಕರಣ ಬೇಧಿಸುವ ಮೊದಲೇ ಈಗ ಅಮೆಜಾನ್‌ ಸೇರಿದ ಕಂಟೇನರ್‌ ಟ್ರಕ್‌ನಿಂದ ಲಕ್ಷಾಂತರ ರೂ. ಮೌಲ್ಯದ ವಸ್ತುಗಳನ್ನು ಕಳ್ಳತನ ಮಾಡಲಾಗಿದೆ.

    ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಕಳೆದ ಆಗಸ್ಟ್ 6 ರಂದು ಚೆನ್ನೈನಿಂದ ಬೆಂಗಳೂರಿಗೆ ಬರುತ್ತಿದ್ದ ಎಂಐ ಕಂಪನಿಗೆ ಸೇರಿದ್ದ ಸುಮಾರು 7.3 ಕೋಟಿ ರೂ. ಮೌಲ್ಯದ ಮೊಬೈಲ್‌ಗಳನ್ನು ದರೋಡೆ ಮಾಡಲಾಗಿತ್ತು. ಈ ಘಟನೆ ನಡೆದು ಎರಡು ತಿಂಗಳು ಕಳೆಯುವ ಮುನ್ನವೇ ಮತ್ತೊಂದು ದೊಡ್ಡ ಮಟ್ಟದ ರಾಬರಿ ನಡೆದಿದೆ.

    ಹೌದು ಅಮೆಜಾನ್ ಕಂಪನಿಗೆ ಸೇರಿದ ವಸ್ತುಗಳನ್ನು ಸಾಗಿಸುತ್ತಿದ್ದ ನಿಕೋ ಲಾಜಿಸ್ಟಿಕ್ ಕಂಪನಿಯ ಕಂಟೇನರ್‌ನಲ್ಲಿ ಕಳ್ಳತನ ನಡೆದಿದೆ. ದೇವನಹಳ್ಳಿ ವಿಮಾನ ನಿಲ್ದಾಣದಿಂದ ಅನುಗೊಂಡಹಳ್ಳಿ ಬಳಿಯ ಗೋಡೌನ್‌ಗೆ ಸುಮಾರು 1.64 ಕೋಟಿ ರೂಪಾಯಿಯ ವಸ್ತುಗಳನ್ನು ಸಾಗಿಸುತ್ತಿದ್ದ ವಾಹನದಲ್ಲಿದ್ದ ವಸ್ತುಗಳು ಕಳ್ಳತನವಾಗಿದೆ. ಜಿಪಿಎಸ್ ಆಧಾರದಲ್ಲಿ ಪತ್ತೆ ಹಚ್ಚಿದ ನಿಕೋ ಲಾಜಿಸ್ಟಿಕ್ ಕಂಪನಿಯವರು ಪತ್ತೆ ಮಾಡಿದಾಗ ಹೊಸಕೋಟೆ ಬಳಿ ಜಿಪಿಎಸ್ ಡಿವೈಸ್‌ನ್ನು ಕಿತ್ತು ಬಿಸಾಡಿ, ಲಾರಿಯನ್ನು ಕೋಲಾರ ತಾಲ್ಲೂಕು ಚುಂಚದೇನಹಳ್ಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿಲ್ಲಿಸಲಾಗಿದೆ. ಇದನ್ನೂ ಓದಿ: ಸಂಪತ್ತು ಭಾರೀ ಏರಿಕೆ – ಪಾಕಿಸ್ತಾನದ GDP ಮೀರಿಸಿದ ಎಲೋನ್ ಮಸ್ಕ್

    ಶನಿವಾರ ರಾತ್ರಿ ವೇಳೆಗೆ ಲಾರಿ ಪತ್ತೆಯಾಗಿದ್ದು ಈ ಸಂಬಂಧ ಕೋಲಾರ ಗ್ರಾಮಾಂತರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಅಷ್ಟಕ್ಕೂ ನಿಕೋ ಲಾಜಿಸ್ಟಿಕ್ ಕಂಪನಿಗೆ ಸೇರಿದ ಲಾರಿಯಲ್ಲಿ ಪ್ರತಿನಿತ್ಯ ದೇವನಹಳ್ಳಿ ಏರ್‌ಪೋರ್ಟ್‌ನಿಂದ ಅನುಗೊಂಡನಹಳ್ಳಿ ಅಮೆಜಾನ್ ಕಂಪನಿಯ ವಸ್ತುಗಳನ್ನು ಸಾಗಿಸಲಾಗುತ್ತಿತ್ತು.

    ಮುರುಡೇಶ್ವರ ಮೂಲದ ಮಂಜುನಾಥ್ ಈ ಲಾರಿಯನ್ನು ಚಲಾಯಿಸುತ್ತಿದ್ದರು. ಅವರು ಅನಾರೋಗ್ಯದ ಹಿನ್ನೆಲೆಯಲ್ಲಿ ಕಳೆದ ಐದು ದಿನಗಳ ಕಾಲ ರಜೆ ಪಡೆದು ಬೇರೊಬ್ಬ ಅಸ್ಸಾಂ ಮೂಲದ ಚಾಲಕ ಅಜಯ್ ಮೋರಾ ಎಂಬಾತನನ್ನು ತನ್ನ ಬದಲಿಗೆ ಕಳುಸಿದ್ದರು. ನಾಲ್ಕು ದಿನಗಳ ಕಾಲ ಸರಿಯಾಗಿಯೇ ವಸ್ತುಗಳನ್ನು ತಲುಪಿಸಿದ್ದ ಅಜಯ್ ಮೋರಾ ನಿನ್ನೆ ಕೊನೆಯ ದಿನ ಬೆಳಗಿನ ಜಾವದ ಹೊತ್ತಿಗೆ ಲೋಡ್ ತೆಗೆದುಕೊಂಡು ಹೊರಟಿದ್ದ. ಹೊರಟವನು ಹೊಸಕೋಟೆ ನಂತರ ದಾರಿ ಬದಲಿಸಿದ್ದ ವಿಷಯ ಗೊತ್ತಾಗುತ್ತಿದ್ದಂತೆ ಕಂಪನಿಯವರು ಆತನ ಪತ್ತೆ ಕಾರ್ಯಕ್ಕೆ ಮುಂದಾಗಿದ್ದಾರೆ. ಇದನ್ನೂ ಓದಿ: ಪುನೀತ್ ಓದಿಸುತ್ತಿದ್ದ 1,800 ಮಕ್ಕಳ ಜವಾಬ್ದಾರಿ ಹೊತ್ತ ನಟ ವಿಶಾಲ್

    ಡ್ರೈವರ್ ಅಜಯ್ ಮೋರಾ ಮೊಬೈಲ್ ಸ್ವಿಚ್ ಆಫ್ ಮಾಡಿ ಡಿವೈಸ್‌ನ್ನು ಹೊಸಕೋಟೆ ಬಳಿಯ ವೋಲ್ವೋ ಕಂಪನಿ ಬಳಿ ಎಸೆದು ಹೋಗಿದ್ದಾನೆ. ಸದ್ಯ ಹೊಸ ಡ್ರೈವರ್ ಅಜಯ್ ಮೋರಾ ಪ್ಲಾನ್ ಮಾಡಿ ಈ ಕೆಲಸ ಮಾಡಿರುವ ಬಗ್ಗೆ ಅನುಮಾನವಿದ್ದು, ವಾಹನದಲ್ಲಿ 1.64 ಕೋಟಿ ರೂ. ಮೌಲ್ಯದ ವಸ್ತುಗಳ ಪೈಕಿ ಎಷ್ಟು ಕಳುವಾಗಿದೆ ಎಷ್ಟು ವಾಹನದಲ್ಲಿ ಇದೆ ಎಂಬುದರ ಬಗ್ಗೆ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.

  • ಗುಂಡು ಹಾರಿಸಿ, ಕಾಲು ಸೀಳಿ ಕೊಲೆಗಡುಕನ ಬಂಧನ

    ಗುಂಡು ಹಾರಿಸಿ, ಕಾಲು ಸೀಳಿ ಕೊಲೆಗಡುಕನ ಬಂಧನ

    ಬೆಂಗಳೂರು: ಬಂಧಿಸಲು ಯತ್ನಿಸಿದ ಪೊಲೀಸರ ಮೇಲೆಯೇ ಕೊಲೆಗಾರ ರಾಡ್‍ನಿಂದ ಹಲ್ಲೆ ಮಾಡಲು ಯತ್ನಿಸಿದ್ದು, ಕಾಲಿಗೆ ಗುಂಡು ಹಾರಿಸಿ ಆರೋಪಿಯನ್ನು ಬಂಧಿಸುವಲ್ಲಿ ಪೀಣ್ಯ ಪೊಲೀಸರು ಯಶಸ್ವಿಯಾಗಿದ್ದಾರೆ.

    ಪೊಲೀಸರು ಬಂಧಿಸಲು ಆಗಮಿಸಿದ ವೇಳೆ ಕೊಲೆಗಾರ ತಪ್ಪಿಸಿಕೊಳ್ಳಲು ಯತ್ನಿಸಿದ್ದು ಮಾತ್ರವಲ್ಲದೆ, ರಾಡ್‍ನಿಂದ ಪೊಲೀಸರ ಮೇಲೆಯೇ ಹಲ್ಲೆ ಮಾಡಲು ಮುಂದಾಗಿದ್ದಾನೆ. ಸಿಟ್ಟಿಗೆದ್ದ ಪೊಲೀಸರು ಆರೋಪಿಯ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ.

    ಪೀಣ್ಯ ಪ್ರದೇಶದ ಗಾಣಿಗರಹಳ್ಳಿ ಬಳಿ ಆರೋಪಿ ಸಂದೀಪ್ ಕುಮಾರ್ ಕಾಲಿಗೆ ಗುಂಡು ಹೊಡೆದು ಬಂಧಿಸಿದ್ದಾರೆ. ಬಂಧಿಸಲು ತೆರಳಿದಾಗ ಪೊಲೀಸರ ಮೇಲೆಯೇ ಕಬ್ಬಿಣದ ರಾಡ್ ನಿಂದ ಹಲ್ಲೆಗೆ ಮುಂದಾಗಿದ್ದಾನೆ. ಆತ್ಮರಕ್ಷಣೆಗಾಗಿ ಪೊಲೀಸರು ಆರೋಪಿ ಸಂದೀಪ್ ಕುಮಾರ್ ಕಾಲಿಗೆ ಗುಂಡು ಹೊಡೆದಿದ್ದಾರೆ.

    ಆರೋಪಿ ಸಂದೀಪ್ ಪೀಣ್ಯಾ ಪೊಲೀಸ್ ಠಾಣಾ ವ್ಯಾಪ್ತಿಯ ರೌಡಿಶೀಟರ್ ಆಗಿದ್ದು, ಡಕಾಯಿತಿ, ರಾಬರಿ ಸೇರಿ ಹಲವು ಪ್ರಕರಣಗಳು ಈತನ ಮೇಲಿವೆ. ಇತ್ತೀಚಿಗೆ ಕಿರಣ್ ಕುಮಾರ್ ಎಂಬುವರನ್ನು ಕೊಲೆ ಮಾಡಿ ತಲೆ ಮರೆಸಿಕೊಂಡಿದ್ದ ಆರೋಪಿ ಸಂದೀಪ್ ಕುಮಾರ್ ಇದೀಗ ಪೊಲೀಸರ ಬಲೆಗೆ ಬಿದ್ದಿದ್ದಾನೆ.

  • ಹೈವೇಯಲ್ಲಿ ವಾಹನಗಳನ್ನ ಅಡ್ಡಗಟ್ಟಿ ಸುಲಿಗೆ ಮಾಡ್ತಿದ್ದ ಗ್ಯಾಂಗ್ ಅರೆಸ್ಟ್

    ಹೈವೇಯಲ್ಲಿ ವಾಹನಗಳನ್ನ ಅಡ್ಡಗಟ್ಟಿ ಸುಲಿಗೆ ಮಾಡ್ತಿದ್ದ ಗ್ಯಾಂಗ್ ಅರೆಸ್ಟ್

    ಬೆಂಗಳೂರು: ಹೆದ್ದಾರಿಯಲ್ಲಿ ವಾಹನಗಳನ್ನು ಅಡ್ಡಗಟ್ಟಿ ಸುಲಿಗೆ ಮಾಡುತ್ತಿದ್ದ ಗ್ಯಾಂಗ್ ಸದಸ್ಯರನ್ನು ನಂದಗುಡಿ ಪೊಲೀಸರು ಬಂಧಿಸಿದ್ದಾರೆ.

    ಮಂಜೇಶ್ (24), ಆಫ್ರಿದ್ ಖಾನ್ (22), ಬಾಬು (21) ಮತ್ತು ಸಂತೋಷ್ (21), ಬಂಧಿತ ಆರೋಪಿಗಳು. ಆರೋಪಿಗಳು ಬೆಳಗಿನ ಜಾವ ಸುಮಾರು 4 ಗಂಟೆಗೆ ವಾಹನಗಳನ್ನು ಅಡ್ಡಗಟ್ಟಿ ಸುಲಿಗೆ ಮಾಡುತ್ತಿದ್ದರು. ಮೊದಲಿಗೆ ಹಾಕಿ ಸ್ಟಿಕ್ ಹಿಡಿದು ವಾಹನಗಳನ್ನು ಅಡ್ಡ ಹಾಕುತ್ತಿದ್ದರು. ಬಳಿಕ ಜನರನ್ನು ಬೆದರಿಸಿ ಸುಲಿಗೆ ಮಾಡುತ್ತಿದ್ದರು.

    ಇಂದು ಕೋಲಾರ ರಸ್ತೆ ತಾವರೆಕೆರೆ ಫ್ಲೈ ಓವರ್ ಬಳಿ ವಾಹನಗಳನ್ನ ಅಡ್ಡಗಟ್ಟಿ ಸುಲಿಗೆ ಮಾಡುತ್ತಿದ್ದರು. ಈ ವೇಳೆ ಸ್ಥಳಕ್ಕೆ ಬಂದ ರಾಷ್ಟ್ರೀಯ ಹೆದ್ದಾರಿ ಪೆಟ್ರೋಲ್ ಸಿಬ್ಬಂದಿ ಆರೋಪಿಗಳನ್ನು ಸುತ್ತುವರಿದಿದ್ದರು. ಈ ವೇಳೆ ಆರೋಪಿಗಳು ಅವರಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆ.

    ಈ ವೇಳೆ ಮಾಹಿತಿ ತಿಳಿದು ನಂದಗುಡಿ ಪಿಎಸ್‍ಐ ಲಕ್ಷ್ಮೀನಾರಾಯಣ ಹಾಗೂ ಸಿಬ್ಬಂದಿ ಕಾರ್ಯಾಚರಣೆ ಮಾಡಿ ನಾಲ್ವರನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳಿಂದ ಆಟೋ, ಸುತ್ತಿಗೆ, ಹಾಕಿ ಸ್ಟಿಕ್, ಮಾಸ್ಕ್, ಒಂದು ಕೆಜಿಯಷ್ಟು ಖಾರದ ಪುಡಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

    ಈ ಮೊದಲು ಹಲವಾರು ರಾಷ್ಟ್ರೀಯ ಹೆದ್ದಾರಿಯ ರಾಬರಿಗಳಲ್ಲಿ ಈ ಗ್ಯಾಂಗ್ ಭಾಗಿಯಾಗಿತ್ತು. ನಂದಗುಡಿ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.

  • ಗಣ್ಯ ವ್ಯಕ್ತಿಗಳೊಂದಿಗೆ ಫೋಟೋ, ಪೊಲೀಸ್ ಅಧಿಕಾರಿ ಎಂದು ಹೇಳ್ಕೊಂಡು ಜನರನ್ನು ವಂಚಿಸುತ್ತಿದ್ದವನ ಬಂಧನ

    ಗಣ್ಯ ವ್ಯಕ್ತಿಗಳೊಂದಿಗೆ ಫೋಟೋ, ಪೊಲೀಸ್ ಅಧಿಕಾರಿ ಎಂದು ಹೇಳ್ಕೊಂಡು ಜನರನ್ನು ವಂಚಿಸುತ್ತಿದ್ದವನ ಬಂಧನ

    ಕೋಲಾರ: ತಾನೊಬ್ಬ ಪೊಲೀಸ್ ಅಧಿಕಾರಿ ಎಂದು ಜನರನ್ನು ವಂಚಿಸುತ್ತಿದ್ದ ಹಾಗೂ ಹಲವಾರು ರಾಬರಿ ಪ್ರಕರಣಗಳಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಬೆಂಗಳೂರಿನ ಪ್ರಖ್ಯಾತ ಸೆಕ್ಯೂರಿಟಿ ಏಜೆನ್ಸಿ ಮಾಲೀಕನನ್ನ ಕೋಲಾರ ಜಿಲ್ಲೆ ಬಂಗಾರಪೇಟೆ ಪೊಲೀಸರು ಬಂಧಿಸಿದ್ದಾರೆ.

    ಬಂಧಿತ ಆರೋಪಿಯನ್ನು ಬೆಂಗಳೂರಿನ ಫ್ರೇಜರ್ ಟೌನ್ ನಲ್ಲಿರುವ ಡ್ಯಾನ್ ಡಿಟೆಕ್ಟೀವ್ ಅಂಡ್ ಸೆಕ್ಯೂರಿಟಿ ಏಜೆನ್ಸಿ ಮಾಲೀಕ ಡ್ಯಾನಿಯಲ್ ಎಂದು ಗುರುತಿಸಲಾಗಿದೆ. ಆರೋಪಿ ಹಲವೆಡೆ ತಾನೊಬ್ಬ ನಿವೃತ್ತ ಸೇನಾಧಿಕಾರಿ ಹಾಗೂ ಪೊಲೀಸ್ ಅಧಿಕಾರಿ ಎಂದು ಹೇಳಿಕೊಳ್ಳುತ್ತಿದ್ದ. ಅಲ್ಲದೆ ಡಬ್ಲಿಂಗ್ ವ್ಯವಹಾರ ಸೇರಿದಂತೆ ಹಲವಾರು ವಂಚನೆ ಪ್ರಕರಣಗಳಲ್ಲಿ ಭಾಗಿಯಾಗಿರುವುದಾಗಿ ತಿಳಿದುಬಂದಿದೆ.

    ಕೆಲ ತಿಂಗಳ ಹಿಂದೆ ಬಂಗಾರಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಹಿಳೆಯೊಬ್ಬರಿಗೆ ಐದು ಲಕ್ಷ ರೂಪಾಯಿ ವಂಚನೆ ಮಾಡಿದ್ದ ಪ್ರಕರಣದಡಿಯಲ್ಲಿ ಸದ್ಯ ಬಂಗಾರಪೇಟೆ ಪೊಲೀಸರು ಆರೋಪಿಯನ್ನ ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಬಂಧಿತನಿಂದ ಒಂದು ನಕಲಿ ಪೊಲೀಸ್ ಜೀಪ್ ಹಾಗೂ ಲಕ್ಷಾಂತರ ರೂಪಾಯಿ ಹಣ ವಶಪಡಿಸಿಕೊಂಡಿದ್ದಾರೆ.

    ಬಂಧಿತ ಆರೋಪಿ ರಾಜ್ಯದ ಹಾಗೂ ದೇಶದ ಪ್ರಮುಖ ಗಣ್ಯ ವ್ಯಕ್ತಿಗಳ ಜೊತೆಗೆ ಫೋಟೋ ತೆಗೆಸಿಕೊಂಡು ವೆಬ್ ಸೈಟ್ ನಲ್ಲಿ ಹಾಕಿಕೊಂಡಿದ್ದಾನೆ. ಅಲ್ಲದೆ ತನಗೆ ರಾಜ್ಯದ ಹಿರಿಯ ರಾಜಕಾರಣಿಗಳ ಪರಿಚಯವಿದೆ ಎಂದು ಹೇಳಿಕೊಂಡು ಬೆದರಿಸುತ್ತಿದ್ದ ಎಂದು ತಿಳಿದುಬಂದಿದೆ.

    ಗಣ್ಯರೊಂದಿಗಿನ ತನ್ನ ಫೋಟೋ ತೋರಿಸಿ ವಂಚಿಸುತ್ತಿದ್ದ ಎನ್ನಲಾಗಿದ್ದು, ನಗರಾಭಿವೃದ್ದಿ ಸಚಿವ ಜಾರ್ಜ್ ಆಪ್ತ ಎಂದು ಕೂಡ ಪೊಲೀಸರ ಬಳಿ ಹೇಳಿಕೊಂಡಿದ್ದಾನೆ ಎನ್ನಲಾಗಿದೆ. ಸದ್ಯ ಆರೋಪಿ ಡ್ಯಾನಿಯಲ್ ನನ್ನು ಬಂಗಾರಪೇಟೆ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.