Tag: ರಾಜ್ ಸೂರ್ಯ

  • ಲಂಡನ್ ನಲ್ಲಿ ಲಂಬೋದರ: ವಿದೇಶಿ ವ್ಯಾಮೋಹದಿಂದ ದೇಶ ಮರೆತವರ ಮರ್ಮರ!

    ಲಂಡನ್ ನಲ್ಲಿ ಲಂಬೋದರ: ವಿದೇಶಿ ವ್ಯಾಮೋಹದಿಂದ ದೇಶ ಮರೆತವರ ಮರ್ಮರ!

    ಬೆಂಗಳೂರು: ಯಾವುದೇ ಸಿನಿಮಾ ರೂಪಿಸಿದವರೂ ತಮ್ಮ ಚಿತ್ರವನ್ನು ಯಾಕೆ ಜನ ನೋಡಲೇ ಬೇಕು ಅನ್ನೋದಕ್ಕೆ ಬೇಕಾದಷ್ಟು ಕಾರಣಗಳನ್ನ ಕೊಡುತ್ತಾರೆ. ಆದರೆ ಲಂಡನ್ ನಲ್ಲಿ ಲಂಬೋದರ ಚಿತ್ರದ ನಿರ್ದೇಶಕ ರಾಜ್ ಸೂರ್ಯ ಕೊಡೋ ಕಾರಣ ಮಾತ್ರ ತುಸು ಭಿನ್ನ. ಇನ್ನೇನು ಇದೇ ತಿಂಗಳ ಇಪ್ಪತ್ತೊಂಬತ್ತರಂದು ಬಿಡುಗಡೆಗೊಳ್ಳಲಿರೋ ಈ ಚಿತ್ರದ ವಿಶೇಷತೆಗಳು ಎಲ್ಲ ವರ್ಗದ ಪ್ರೇಕ್ಷಕರನ್ನೂ ಸೆಳೆಯುವಂತಿದೆ.

    ಈಗ ಹೇಳಿಕೇಳಿ ಥಳುಕು ಬಳುಕಿಗೆ ಬೇಗನೆ ಮಾರು ಹೋಗುವ ಕಾಲ. ಹುಟ್ಟಿದ ನೆಲವನ್ನು ಹಳಹಳಿಸುತ್ತಾ ಹೇಗಾದರೂ ಮಾಡಿ ವಿದೇಶಕ್ಕೆ ಹಾರಿ ಸೆಟಲ್ ಆಗಬೇಕೆಂಬ ಮನಸ್ಥಿತಿಯೇ ಬಹುತೇಕರನ್ನು ಆಳುತ್ತಿದೆ. ಹೀಗೆ ಹುಟ್ಟಿದೂರನ್ನು ತೊರೆದು ವಿದೇಶದಲ್ಲಿ ಬೇರಿಳಿಸಿಕೊಂಡು ತಾಯಿ ಬೇರನ್ನು ಸಂಪೂರ್ಣವಾಗಿ ಮರೆತರೆ ಏನಾಗುತ್ತೆ ಅನ್ನೋದಕ್ಕೆ ಖಂಡಿತವಾಗಿಯೂ ಈ ಚಿತ್ರದಲ್ಲಿ ವಿಶೇಷವಾದ ಉತ್ತರಗಳು ಜಾಹೀರಾಗಲಿವೆ!

    ಇನ್ನು ಪಾತ್ರಗಳ ಬಗ್ಗೆ ಹೇಳೋದಾದರೆ ನಿರ್ದೇಶಕರು ಪ್ರತೀ ಪಾತ್ರವನ್ನೂ ಕೂಡಾ ಟ್ರೆಂಡ್ ಸೆಟ್ ಮಾಡುವಂಥಾ ರೀತಿಯಲ್ಲಿ ರೂಪಿಸಿದ್ದಾರಂತೆ. ಸಂಪತ್ ರಾಜ್ ಅವರದ್ದಿಲ್ಲಿ ವಿಶಿಷ್ಟವಾದ ಪಾತ್ರ. ಸಾಧು ಕೋಕಿಲಾ ಕೂಡಾ ಈವರೆಗಿನದಕ್ಕಿಂತಲೂ ಪಕ್ಕಾ ವಿಶೇಷವಾದ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರಂತೆ. ನಮ್ಮ ನಡುವೆಯೇ ಇರುವಂತೆ ಭಾಸವಾಗೋ ಈ ಪಾತ್ರಗಳೆಲ್ಲವೂ ತಮ್ಮದೇ ರೀತಿಯಲ್ಲಿ ಕಚಗುಳಿ ಇಡಲಿವೆ ಅನ್ನೋದು ಚಿತ್ರತಂಡದ ಭರವಸೆ.

    ಈಗಾಗಲೇ ಲಂಡನ್ ನಲ್ಲಿ ಲಂಬೋದರ ಚಿತ್ರ ಬಹು ನಿರೀಕ್ಷಿತ ಸಿನಿಮಾವಾಗಿ ಹೊರಹೊಮ್ಮಿದೆ. ತಾಂತ್ರಿಕವಾಗಿಯೂ ಶ್ರೀಮಂತಿಕೆಯಿಂದ ಕೂಡಿರೋ ಈ ಸಿನಿಮಾದಲ್ಲಿ ಸ್ಕ್ರೀನ್ ಪ್ಲೇ, ಎಡಿಟಿಂಗ್, ಹಾಡುಗಳು, ಛಾಯಾಗ್ರಹಣ ಸೇರಿದಂತೆ ಎಲ್ಲದರಲ್ಲಿಯೂ ಹೊಸಾ ಪ್ರಯೋಗಗಳನ್ನು ಮಾಡಲಾಗಿದೆ. ಅದರ ಮುದ ಏನೆಂಬುದು ಈ ತಿಂಗಳ ಇಪ್ಪತ್ತೊಂಬತ್ತರಂದು ಜಾಹೀರಾಗಲಿದೆ.

  • ಲಂಡನ್‍ನಲ್ಲಿ ಲಂಬೋದರನ ಬಗ್ಗೆ ಶ್ರುತಿ ಪ್ರಕಾಶ್ ಹೇಳಿದ್ದೇನು?

    ಲಂಡನ್‍ನಲ್ಲಿ ಲಂಬೋದರನ ಬಗ್ಗೆ ಶ್ರುತಿ ಪ್ರಕಾಶ್ ಹೇಳಿದ್ದೇನು?

    ಬೆಂಗಳೂರು: ಶ್ರುತಿ ಪ್ರಕಾಶ್ ಮೂಲತಃ ಕನ್ನಡತಿಯೇ ಆಗಿದ್ದರೂ ಈ ಬಿಗ್ ಬಾಸ್ ಶೋ ಮೂಲಕವೇ ಕನ್ನಡಿಗರಿಗೆ ಪರಿಚಯವಾದ ಹುಡುಗಿ. ಕಳೆದ ಸೀಸನ್ನಿನ ಈ ಶೋನಲ್ಲಿ ಮುಖ ಮುಖವಾಡಗಳ ಸಂತೆಯ ನಡುವೆಯೂ ನೈಜ ವ್ಯಕ್ತಿತ್ವ ಮರೆಮಾಚದೆ ಕನ್ನಡಿಗರ ಮನ ಗೆದ್ದಿದ್ದವರು ಶ್ರುತಿ. ಈ ಶೋ ಮುಗಿದ ನಂತರ ತನ್ನೆದುರು ಅವಕಾಶಗಳ ಮೆರವಣಿಗೆಯೇ ನೆರೆದಿದ್ದರೂ ಕೂಡಾ ಅವರು ಪ್ರೀತಿಯಿಂದ ಆರಿಸಿಕೊಂಡಿದ್ದು ಲಂಡನ್ ನಲ್ಲಿ ಲಂಬೋದರ ಚಿತ್ರವನ್ನು. ಈ ಬಗ್ಗೆ ಒಂದಷ್ಟು ಮಜವಾದ ವಿಚಾರಗಳನ್ನ ಶ್ರುತಿ ಪಬ್ಲಿಕ್ ಟಿವಿಯ ಜೊತೆ ಹಂಚಿಕೊಂಡಿದ್ದಾರೆ.

    ಶ್ರುತಿ ಪ್ರಕಾಶ್ ಮೂಲತಃ ಕರ್ನಾಟಕದ ಗಡಿ ಪ್ರದೇಶವಾದ ಬೆಳಗಾವಿಯವರು. ಹಿಂದಿ ಭಾಷೆಯಲ್ಲಿ ನಾನಾ ಹಿಟ್ ಧಾರಾವಾಹಿಗಳ ಮೂಲಕ, ಮ್ಯೂಸಿಕ್ ಆಲ್ಬಂಗಳ ಮೂಲಕ ಪ್ರಸಿದ್ಧಿ ಹೊಂದಿದ್ದರೂ ಈ ಕನ್ನಡತಿಯ ಪರಿಚಯ ಕನ್ನಡಿಗರಿಗೇ ಇರಲಿಲ್ಲ. ಬೆಳಗಾವಿಯ ಕನ್ನಡತನದ ಕುಟುಂಬದಲ್ಲಿಯೇ ಹುಟ್ಟಿ ಬೆಳೆದು ಮುಂಬೈನಲ್ಲಿ ತಮ್ಮ ಕನಸಿನ ಆರಂಭ ಮಾಡಿದ್ದ ಶ್ರುತಿಗೆ ಅಲ್ಲಿ ಅಗಾಧವಾದ ಪ್ರಸಿದ್ಧಿ ಸಿಕ್ಕರೂ ಕೂಡಾ ಅದೊಂದು ಕೊರಗು ಮಾತ್ರ ಅವರನ್ನು ಬೆಂಬಿಡದೆ ಕಾಡುತ್ತಿತ್ತಂತೆ. ಅದು ತಮ್ಮ ತಾಯಿಭಾಷೆಯಾದ ಕನ್ನಡ ಚಿತ್ರದ ಮೂಲಕ ನಾಯಕಿಯಾಗಿ ಅಡಿಯಿರಿಸಿ ಕನ್ನಡಿಗರನ್ನೆಲ್ಲ ತಲುಪಿಕೊಳ್ಳುವ ಹಂಬಲ!

    ಮೊದಲು ತನ್ನನ್ನು ತಾನು ಕನ್ನಡಿಗರೆಂದು ಪರಿಚಯ ಮಾಡಿಕೊಂಡು ಮತ್ತೆ ಮುಂದುವರೆಯಬೇಕು ಅಂದುಕೊಂಡಿದ್ದ ಶ್ರುತಿ ಅವರಿಗೆ ಬಿಗ್ ಬಾಸ್ ಶೋ ವರದಾನವಾಗಿದೆ. ಈ ಮೂಲಕ ಕನ್ನಡಿಗರ ಮನೆಮಗಳಂತೆ ಆಗಿಹೋಗಿರೋ ಶ್ರುತಿ ಅವರು ರಾಜ್ ಸೂರ್ಯ ಹೇಳಿದ ಲಂಡನ್ ನಲ್ಲಿ ಲಂಬೋದರ ಚಿತ್ರವನ್ನು ಪ್ರೀತಿಯಿಂದಲೇ ಒಪ್ಪಿಕೊಂಡಿದ್ದಾರಂತೆ. ಅದಕ್ಕೆ ಕಾರಣ ಗಂಭೀರವಾದ ಕಥೆ ಮತ್ತು ಮಜವಾದ ನಿರೂಪಣೆ.

    ಈ ಚಿತ್ರದ ಮೂಲಕವೇ ಶ್ರುತಿ ನಾಯಕಿಯಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ಶ್ರುತಿ ಅವರದ್ದು ನಾನಾ ಶೇಡುಗಳಿರೋ ಪಾತ್ರವಂತೆ. ಇಲ್ಲವರು ಪ್ರತಿಯೊಂದು ವಿಚಾರವನ್ನೂ ಕೂಡಾ ಅಳೆದೂ ತೂಗಿ ಆಲೋಚಿಸಿಯೇ ಮುಂದಡಿ ಇಡುವ ಪ್ರಾಕ್ಟಿಕಲ್ ಹುಡುಗಿಯಾಗಿ ಮಿಂಚಿದ್ದಾರಂತೆ. ಇವರ ಜೋಡಿ ಲಂಬೋದರ ಪ್ರತೀ ನಿತ್ಯ ಎದ್ದೇಟಿಗೆ ದಿನಭವಿಷ್ಯ ನೋಡಿ ಅದರಂತೆಯೇ ಮುಂದುವರೆಯುವಾತ. ಅಂಥಾ ಕ್ಯಾರೆಕ್ಟರ್ ಮತ್ತು ಈ ಪ್ರಾಕ್ಟಿಕಲ್ ಹುಡುಗಿಯ ಕಾಂಬಿನೇಷನ್ನೇ ಈ ಸಿನಿಮಾದ ಪ್ರಧಾನ ಆಕರ್ಷಣೆ.

    ಈ ಚಿತ್ರದ ಮೂಲಕವೇ ತಮಗೆ ಕನ್ನಡದಲ್ಲಿ ನಾಯಕಿಯಾಗಿ ಗಟ್ಟಿ ನೆಲೆ ಕೊಡಲಿದೆ ಅನ್ನೋ ಭರವಸೆ ಶ್ರುತಿ ಪ್ರಕಾಶ್ ಅವರಿಗಿದೆ. ಲಂಬೋದರನ ಕಾರಣದಿಂದಲೇ ಇನ್ನೂ ಒಂದಷ್ಟು ಅವಕಾಶಗಳು ಅವರ ಮುಂದಿವೆ. ಆದರೆ ಈ ಚಿತ್ರ ಬಿಡುಗಡೆಯಾದ ನಂತರವೇ ಆ ಬಗ್ಗೆ ಆಲೋಚಿಸುವ ನಿರ್ಧಾರ ಶ್ರುತಿ ಅವರದ್ದು. ಈ ನಡುವೆ ಹಿಂದಿ ಸೀರಿಯಲ್ಲುಗಳ ಅವಕಾಶ ಬಂದರೂ ನಿರಾಕರಿಸುತ್ತಿರೋ ಅವರ ಪಾಲಿಗೆ ಕನ್ನಡದಲ್ಲಿಯೇ ನೆಲೆಗೊಳ್ಳೋ ಆಸೆಯಿದೆ. ಲಂಡನ್ ನಲ್ಲಿ ಲಂಬೋದರ ಸೃಷ್ಟಿಸಿರೋ ಕ್ರೇಜ್ ನೋಡಿದರೆ ಅದು ಸಾಧ್ಯವಾಗೋ ಎಲ್ಲ ಲಕ್ಷಣಗಳೂ ದಟ್ಟವಾಗಿವೆ.

  • ಇನ್ಫೆಕ್ಷನ್ ಎರಡನೇ ಹಂತ ಪ್ರಾರಂಭ

    ಇನ್ಫೆಕ್ಷನ್ ಎರಡನೇ ಹಂತ ಪ್ರಾರಂಭ

    ಬೆಂಗಳೂರು: ಇನ್ಫೆಕ್ಷನ್ ಚಿತ್ರ ಮೊದಲ ಹಂತದ 15 ದಿವಸಗಳ ಚಿತ್ರೀಕರಣವನ್ನು ಮುಗಿಸಿಕೊಂಡಿದೆ. ಕಾಸರಗೋಡು, ಬೇಕಲಕೋಟೆ ಸುತ್ತ ಮುತ್ತ ಚಿತ್ರೀಕರಣ ನಡೆಸಿಕೊಂಡಿರುವ ಚಿತ್ರ ತಂಡ ಇದೀಗ ಮೈಸೂರು ಹಾಗೂ ಬೆಂಗಳೂರು ಸುತ್ತ ಎರಡನೇ ಹಂತದ ಚಿತ್ರೀಕರಣಕ್ಕೆ ಸಜ್ಜಾಗಿದೆ.

    ಸಮಾಜದಲ್ಲಿ ಆಗುವ ಇನ್ಫೆಕ್ಷನ್ ಅನ್ನು ಹೇಗೆ ಬೇರು ಸಮೇತ ನಿವಾರಿಸಬೇಕೋ ಹಾಗೆ ಈ ಚಿತ್ರದಲ್ಲಿ ನಾಯಕ ಅನೇಕ ಇನ್ಫೆಕ್ಷನ್‍ಗಳನ್ನು ನಿವಾರಣೆ ಮಾಡಲು ಸಜ್ಜಾಗುತ್ತಾನೆ. ಅಮೋಘ್ ಎಂಟರ್ ಪ್ರೈಸಸ್ ಅಡಿಯಲ್ಲಿ ಈ ಹಿಂದೆ ಸಂಚಾರಿ ಹಾಗೂ ಜಟಾಯು ಸಿನಿಮಾಗಳನ್ನು ನಿರ್ಮಾಣ ಮಾಡಿದ್ದ ಪ್ರಭಾಕರ್ ಹಾಗೂ ಕಿರಣ್ ಈ ಇನ್ಫೆಕ್ಷನ್ ಚಿತ್ರಕ್ಕೆ ಹಣ ಹೂಡಿದ್ದಾರೆ. ಉಪೇಂದ್ರ, ಸಂತು ಹಾಗೂ ಮುರಳಿ ಮೋಹನ್ ಅವರ ಬಳಿ ಸಹಾಯಕರಾಗಿ ಕೆಲಸ ಮಾಡಿದ ಅಶ್ವಿನಿ ಸ್ವತಂತ್ರವಾಗಿ ನಿರ್ದೇಶಕರಾಗುತ್ತಿದ್ದಾರೆ.

    ಈ ಚಿತ್ರದ ಕಥಾ ನಾಯಕ ರಾಜ್ ಸೂರ್ಯ. ಇವರ ಎರಡು ಚಿತ್ರಗಳು ಸಂಚಾರಿ ಹಾಗೂ ಜಟಾಯು ಪಾತ್ರಕ್ಕೆ ವಿರುದ್ಧವಾದ ಪಾತ್ರವನ್ನು ಈ ಚಿತ್ರದಲ್ಲಿ ನಿರ್ವಹಿಸುತ್ತಿದ್ದಾರೆ. ನಾಯಕಿಯಾಗಿ ದೆಹಲಿಯಿಂದ ಆಕರ್ಷಿಕ ಆಯ್ಕೆ ಆಗಿದ್ದಾರೆ.