Tag: ರಾಜ್ ಭವನ್

  • ಪೆಟ್ರೋಲ್ ಬಂಕ್ ಬ್ಲಾಸ್ಟ್ – ಮುಗಿಲೆತ್ತರಕ್ಕೆ ಚಿಮ್ಮಿದ ಬೆಂಕಿ, 7 ಮಂದಿಗೆ ಗಾಯ

    ಪೆಟ್ರೋಲ್ ಬಂಕ್ ಬ್ಲಾಸ್ಟ್ – ಮುಗಿಲೆತ್ತರಕ್ಕೆ ಚಿಮ್ಮಿದ ಬೆಂಕಿ, 7 ಮಂದಿಗೆ ಗಾಯ

    ಭುವನೇಶ್ವರ್: ಓಡಿಶಾದ ಭುವನೇಶ್ವರ್ ನಲ್ಲಿ ಎಲ್‍ಪಿಜಿಯನ್ನು ಸ್ಟೋರ್ ಮಾಡಿದ್ದ ಪೆಟ್ರೋಲ್ ಬಂಕ್ ಬ್ಲಾಸ್ಟ್ ಆಗಿದ್ದು, ಏಳು ಮಂದಿ ಗಾಯಗೊಂಡಿದ್ದಾರೆ.

    ಬ್ಲಾಸ್ಟ್ ನಂತರ ಪೆಟ್ರೋಲ್ ಬಂಕಿನಲ್ಲಿ ದೊಡ್ಡ ಮಟ್ಟದ ಬೆಂಕಿ ಕಾಣಿಸಿಕೊಂಡಿದ್ದು, ಸ್ಥಳದಲ್ಲಿ ಇದ್ದ ಏಳು ಮಂದಿಗೆ ಗಾಯವಾಗಿದೆ. ಜೊತೆಗೆ ಇಬ್ಬರ ಪರಿಸ್ಥಿತಿ ತೀರ ಗಂಭೀರವಾಗಿದ್ದು, ಅವರನ್ನು ಎಸ್‍ಸಿಬಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಬಂದಿದ್ದು, ಅಗ್ನಿ ನಂದಿಸುವಲ್ಲಿ ಕೊನೆಗೂ ಯಶಸ್ವಿಯಾಗಿದ್ದಾರೆ.

    ಈ ಘಟನೆ ಭುವನೇಶ್ವರ್ ನಲ್ಲಿರುವ ರಾಜ್ ಭವನ್ ಹತ್ತಿರದಲ್ಲಿ ನಡೆದಿದೆ. ಸ್ಫೋಟದ ತೀವ್ರತೆಗೆ ಸರ್ಕಾರಿ ಕ್ವಾರ್ಟರ್ಸ್ ನಲ್ಲಿರುವ ಮನೆಗಳ ಕಿಟಕಿಯ ಗಾಜುಗಳು ಪುಡಿಪುಡಿಯಾಗಿವೆ. ಜೊತೆಗೆ ಬೆಂಕಿ ಮುಗಿಲೆತ್ತರಕ್ಕೆ ಚಿಮ್ಮಿದೆ. ಈ ದೃಶ್ಯವನ್ನು ಸ್ಥಳೀಯರು ತಮ್ಮ ಮೊಬೈಲಿನಲ್ಲಿ ಸೆರೆ ಹಿಡಿದಿದ್ದಾರೆ. ಜೊತೆಗೆ ಪೆಟ್ರೋಲ್ ಬಂಕ್‍ನಲ್ಲಿ ಇದ್ದ ಕಾರು ಮತ್ತು ಬೈಕುಗಳು ಸುಟ್ಟು ಕರಕಲಾಗಿವೆ. ಬಂಕ್ ಸುತ್ತಲಿನ 100 ಮೀಟರ್ ಜಾಗ ಸುಟ್ಟು ಹೋಗಿದೆ.

    ಈ ವಿಚಾರದ ಬಗ್ಗೆ ಮಾತನಾಡಿರುವ ಡಿಸಿಪಿ ಉಮಾ ಶಂಕರ್ ದಾಸ್ ಅವರು, ಈ ಘಟನೆ ಮಧ್ಯಾಹ್ನ ಸುಮಾರು 1.25ಕ್ಕೆ ನಡೆದಿದೆ. ಈ ಅಗ್ನಿ ಅವಘಡದಲ್ಲಿ ಯಾವುದೇ ಸಾವು ಸಂಭವಿಸಿಲ್ಲ. ಜೊತೆಗೆ ಪೆಟ್ರೋಲ್ ಬಂಕ್ ಬ್ಲಾಸ್ಟ್ ಆಗಲು ಕಾರಣವೇನು ಎಂಬುದು ಇನ್ನೂ ತಿಳಿದು ಬಂದಿಲ್ಲ. ಆದರ ಬಗ್ಗೆ ತನಿಖೆ ಮಾಡುತ್ತಿದ್ದೇವೆ. ಘಟನೆ ನಡೆದ ಬಳಿಕ ಬಂಕ್ ರಸ್ತೆಯನ್ನು ಬಂದ್ ಮಾಡಿದ್ದೇವೆ. ಸ್ಫೋಟದ ಸದ್ದು 1 ಕಿ.ಮೀವರೆಗೂ ಕೇಳಿಸಿದೆ ಎಂದು ತಿಳಿಸಿದ್ದಾರೆ.

    ನಡೆದ ಘಟನೆಯನ್ನು ಖಂಡಿಸಿ ಟ್ವೀಟ್ ಮಾಡಿರುವ ಓಡಿಶಾದ ಮುಖ್ಯಮಂತ್ರಿ ನವೀನ್ ಪಟ್ನಾಯಕ್, ಭುವನೇಶ್ವರದ ರಾಜ್ ಭವನ್ ಬಳಿಯ ಪೆಟ್ರೋಲ್ ಬಂಕ್‍ನಲ್ಲಿ ಸಂಭವಿಸಿದ ಅಗ್ನಿ ಅಪಘಾತದಲ್ಲಿ ಗಾಯಗೊಂಡ ಜನರಿಗೆ ಉಚಿತ ವೈದ್ಯಕೀಯ ಚಿಕಿತ್ಸೆ ನೀಡುವುದಾಗಿ ಘೋಷಿಸಲಾಗಿದೆ ಮತ್ತು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸುತ್ತೇನೆ. ಬೆಂಕಿಯನ್ನು ನಂದಿಸಲಾಗಿದೆ ಮತ್ತು ಈಗ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದಿದ್ದಾರೆ.