Tag: ರಾಜ್ಯ ಸರ್ಕಾರ

  • ಹೊಸ ಕಟ್ಟಡಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ಬಗ್ಗೆ ನಾಳೆ ನಿರ್ಧಾರ – ಕಾನೂನು ಇಲಾಖೆ ವರದಿಗೆ ಸೂಚನೆ

    ಹೊಸ ಕಟ್ಟಡಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ಬಗ್ಗೆ ನಾಳೆ ನಿರ್ಧಾರ – ಕಾನೂನು ಇಲಾಖೆ ವರದಿಗೆ ಸೂಚನೆ

    – ಎಲ್ಲ ಮಾರ್ಗಗಳ ಪರಿಶೀಲನೆಗೆ ಸಿಎಂ ಆದೇಶ

    ಬೆಂಗಳೂರು: ಗ್ರೇಟರ್ ಬೆಂಗಳೂರು (GBA) ವ್ಯಾಪ್ತಿ ಹಾಗೂ ರಾಜ್ಯದ ಇತರೆಡೆ ನಿರ್ಮಾಣ ಹಂತದ ಕಟ್ಟಡಗಳಿಗೆ ವಿದ್ಯುತ್ ಹಾಗೂ ನೀರು ಸಂಪರ್ಕ ಕಲ್ಪಿಸುವ ವಿಚಾರದಲ್ಲಿ ಯಾವುದೇ ತೀರ್ಮಾನ ಕೈಗೊಳ್ಳುವಲ್ಲಿ ರಾಜ್ಯ ಸರ್ಕಾರ (Karnaraka Government) ವಿಫಲವಾಗಿದೆ.

    ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಚರ್ಚೆ ನಡೆಸಲಾಯಿತಾದರೂ ಯಾವುದೇ ತೀರ್ಮಾನ ಕೈಗೊಂಡಿಲ್ಲ. ಸುಪ್ರೀಂ ಕೋರ್ಟ್ ಆದೇಶ ಉಲ್ಲಂಘನೆ ಆಗದೇ ಹೇಗೆ ಅನುಕೂಲ ಮಾಡಿಕೊಡಬಹುದು ಎಂಬುದರ ಕುರಿತು ಮಾಹಿತಿ ನೀಡುವಂತೆ ಕಾನೂನು ಇಲಾಖೆಗೆ ಸಿಎಂ ಸೂಚನೆ ನೀಡಿದ್ದಾರೆ. ನಾಳಿನ ಸಭೆಯಲ್ಲಿ ಕಾನೂನು ಇಲಾಖೆಯ ಸಲಹೆ ಆಧರಿಸಿ ಅಂತಿಮ ನಿರ್ಧಾರ ಕೈಗೊಳ್ಳೋ ಸಾಧ್ಯತೆಗಳಿವೆ. ಇದನ್ನೂ ಓದಿ: ರಾಜ್ಯ, ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಶೀಘ್ರ ಮುಕ್ತಾಯಗೊಳಿಸಿ: ಎನ್. ಚಲುವರಾಯಸ್ವಾಮಿ

    ಸಭೆಯ ಬಳಿಕ ಮಾತನಾಡಿರುವ ಡಿಸಿಎಂ ಡಿ.ಕೆ ಶಿವಕುಮಾರ್ (DK Shivakumar), ಜಿಬಿಎಯಿಂದ ನಾವು ಪ್ರಪೋಸಲ್ ಕೊಟ್ಟಿದ್ವಿ. ಆದ್ರೆ ಇದು ಪಂಚಾಯತ್, ಮುನಿಸಿಪಾಲಿಟಿಗೂ ಎಲ್ಲದ್ದಕ್ಕೂ ಬೇಕು. ತಮಿಳುನಾಡು ಸೇರಿ ಬೇರೆ ಬೇರೆ ರಾಜ್ಯದ ಮಾಹಿತಿ ಪಡೆದಿದ್ದೇವೆ. ಕಾನೂನು ಚೌಕಟ್ಟಿನಲ್ಲಿ ಏನಾದ್ರು ಮಾರ್ಗ ಇದೆಯಾ ಅಂತ ಪರಿಶೀಲನೆ ಮಾಡಲು ಕಾನೂನು ಇಲಾಖೆಗೆ ಹೇಳಿದ್ದೇವೆ ಎಂದು ಡಿಸಿಎಂ ಡಿಕೆಶಿ ಹೇಳಿದ್ದಾರೆ. ಇದನ್ನೂ ಓದಿ: ವಾಹನ ಸವಾರರ ಗಮನಕ್ಕೆ – ಬೆಂಗಳೂರಿನ ಈ ರಸ್ತೆಯಲ್ಲಿ 45 ದಿನ ಸಂಚಾರ ಬಂದ್

    ಅನುಮತಿ ಪಡೆಯದ ಕಟ್ಟಡಗಳಿಗೆ ನೀರು, ವಿದ್ಯುತ್‌ ಸಂಪರ್ಕ ಕೊಡಬಾರದು ಅಂತ ಸುಪ್ರೀಂ ಕೋರ್ಟ್ ಆದೇಶ ಇದೆ. ಹೀಗಾಗಿ ಸಿಎಂ ಅವರ ನೇತೃತ್ವದಲ್ಲಿ ಸಭೆ ಆಗಿದೆ. ಎಲ್ಲಾ ಇಲಾಖೆ ಸಚಿವರು ಭಾಗಿಯಾಗಿದ್ದರು, ಎಜಿ ಕೂಡಾ ಇದ್ದರು. ಇವತ್ತಿನ ಸಭೆಯಲ್ಲಿ ಅನೇಕ ಅಭಿಪ್ರಾಯಗಳು ಬಂದಿವೆ. ಅವಕಾಶ ಕೊಡೋಕೆ ಕಾನೂನಿನಲ್ಲಿ ಅನೇಕ ಅಡೆತಡೆಗಳು ಇವೆ. ಈಗಾಗಲೇ ಕ್ಯಾಬಿನೆಟ್‌ನಲ್ಲಿ 30*40 ಸೈಟ್ ಗೆ ಅನುಮತಿ ಕೊಡೋ ತೀರ್ಮಾನ ಮಾಡಿದ್ದೇವೆ. ಇದರ ಮೇಲೆ ಜಾಸ್ತಿ ಅಳತೆಯಲ್ಲಿ ಇರೋ ಕಟ್ಟಡಗಳಿಗೆ ಕೊಡೋದು ಹೇಗೆ ಅಂತ ಚರ್ಚೆ ಆಗಿದೆ. ನಾಳೆಯ (ಗುರುವಾರ) ಕ್ಯಾಬಿನೆಟ್‌ನಲ್ಲಿ ಈ ಬಗ್ಗೆ ಚರ್ಚೆ ಮಾಡ್ತೀವಿ. ಹೊಸ ಕಟ್ಟಡ ಕಟ್ಟಲು ಇನ್ನು ಮುಂದೆ ಬಿಡೊಲ್ಲ. ಈಗ ಕಟ್ಟಿರೋರಿಗೆ ಸಹಾಯ ಮಾಡೋದಕ್ಕೆ ದಾರಿ ಇದೆಯಾ ನೋಡ್ತಾ ಇದ್ದೇವೆ ಎಂದು ತಿಳಿಸಿದರು. ಇದನ್ನೂ ಓದಿ: ಧರ್ಮಸ್ಥಳ ಕೇಸ್‌ ಕ್ಲೈಮ್ಯಾಕ್ಸ್‌ ಹಂತಕ್ಕೆ – ಅಂತಿಮ ವರದಿ ಸಲ್ಲಿಸಲು SIT ತಯಾರಿ

    ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಸಚಿವ ಕೆಜೆ ಜಾರ್ಜ್, ಪ್ರಿಯಾಂಕ್ ಖರ್ಗೆ, ಕೃಷ್ಣಭೈರೇಗೌಡ, ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಜಲಮಂಡಳಿ ಇಲಾಖೆ, ವಿದ್ಯುತ್ ಇಲಾಖೆ ಅಧಿಕಾರಿಗಳು ಭಾಗಿಯಾಗಿದ್ದರು.

  • ರಾಯಚೂರು | ಮೂರೇ ದಿನದಲ್ಲಿ ಜಾತಿಗಣತಿ ಸಮೀಕ್ಷೆ ಪೂರ್ಣಗೊಳಿಸಿದ ಶಿಕ್ಷಕ

    ರಾಯಚೂರು | ಮೂರೇ ದಿನದಲ್ಲಿ ಜಾತಿಗಣತಿ ಸಮೀಕ್ಷೆ ಪೂರ್ಣಗೊಳಿಸಿದ ಶಿಕ್ಷಕ

    – ಜಿಲ್ಲಾಡಳಿತ, ತಾಲೂಕಾಡಳಿತದಿಂದ ಸನ್ಮಾನ

    ರಾಯಚೂರು: ರಾಜ್ಯ ಸರ್ಕಾರ ಕೈಗೊಂಡಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ಸರ್ವರ್ (Caste Census Survey) ಸೇರಿ ನಾನಾ ಸಮಸ್ಯೆಗಳಿಂದ ಗಣತಿದಾರರು ಪರದಾಡುತ್ತಿದ್ದಾರೆ. ಇದೆಲ್ಲದರ ನಡುವೆ ರಾಯಚೂರಿನ (Raichuru) ಶಿಕ್ಷಕರೊಬ್ಬರು ಮೂರೇ ದಿನದಲ್ಲಿ ಜಾತಿಗಣತಿ ಸಮೀಕ್ಷೆಯನ್ನು ಪೂರ್ಣಗೊಳಿಸಿದ್ದಾರೆ.

    ಜಿಲ್ಲೆಯ ಕಟ್ಲಾಟಕೂರು ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಕೃಷ್ಣಮೂರ್ತಿ ಅವರು ಕಳೆದ ಮೂರು ದಿನಗಳಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ಮುಗಿಸಿದ್ದಾರೆ. ಶಿಕ್ಷಕನ ಕಾರ್ಯ ಮೆಚ್ಚಿ ರಾಯಚೂರು ಜಿಲ್ಲಾಡಳಿತ ಹಾಗೂ ತಾಲೂಕಾಡಳಿತ ಸನ್ಮಾನಿಸಿ ಅಭಿನಂದನಾ ಪತ್ರ ನೀಡಿ ಗೌರವಿಸಿದೆ.ಇದನ್ನೂ ಓದಿ: ಕಾಲ್ತುಳಿತಕ್ಕೆ ಪೊಲೀಸರು ಹೊಣೆ – ಪತ್ರ ಬರೆದು ವಿಜಯ್‌ ಅಭಿಮಾನಿ, ಟಿವಿಕೆ ಕಾರ್ಯಕರ್ತ ಆತ್ಮಹತ್ಯೆ

    ಸೆ.22ರಿಂದ 26ರವರೆಗೆ ಸರ್ವರ್ ಸಮಸ್ಯೆಯಿಂದ ಕಷ್ಟಪಟ್ಟಿದ್ದರು. ನೆಟ್ವರ್ಕ್, ಸರ್ವರ್ ಸಮಸ್ಯೆಗಳ ನಡುವೆ ಸಹಾಯವಾಣಿಗೆ ನಿರಂತರ ಸಂಪರ್ಕಿಸಿ, ಬಳಿಕ ನಿಗದಿ ಮಾಡಿದ್ದ ಬ್ಲಾಕ್‌ನ 86 ಮನೆಗಳ ಸಮೀಕ್ಷೆಯನ್ನು ಮೂರೇ ದಿನಗಳಲ್ಲಿ ಮುಗಿಸಿದ್ದಾರೆ. ಜೊತೆಗೆ ಮನೆಯಲ್ಲಿ ಇಲ್ಲದವರನ್ನ ಪುನಃ ಸಂಪರ್ಕಿಸಿ ಸಮೀಕ್ಷೆ ಪೂರ್ಣ ಮಾಡಿದ್ದಾರೆ. ಅದಲ್ಲದೇ ಗೂಗಲ್ ಮ್ಯಾಪ್ ಸಮಸ್ಯೆ ನಡುವೆ ಬ್ಲಾಕ್ ಐಡಿ ಆಧಾರದ ಮೇಲೆ ಸಮೀಕ್ಷೆ ಪೂರ್ಣಗೊಳಿಸಿರುವುದಾಗಿ ತಿಳಿಸಿದ್ದಾರೆ.

  • ಕರ್ನಾಟಕ ಕೌಶಲ್ಯ ಅಭಿವೃದ್ಧಿ ನೀತಿ 2025-2032ಕ್ಕೆ ಸಂಪುಟ ಅನುಮೋದನೆ

    ಕರ್ನಾಟಕ ಕೌಶಲ್ಯ ಅಭಿವೃದ್ಧಿ ನೀತಿ 2025-2032ಕ್ಕೆ ಸಂಪುಟ ಅನುಮೋದನೆ

    ಬೆಂಗಳೂರು: ಕರ್ನಾಟಕದಲ್ಲಿ ಕೌಶಲ್ಯ ಅಭಿವೃದ್ಧಿಗೆ ಹೆಚ್ಚು ಆದ್ಯತೆ ನೀಡಬೇಕು, ಯುವ ಸಮೂಹ ಜಾಗತಿಕ ಮಟ್ಟದಲ್ಲಿ ಉದ್ಯೋಗ ಗಿಟ್ಟಿಸುವ ಸಾಮರ್ಥ್ಯ ಬೆಳೆಸಿಕೊಳ್ಳಬೇಕೆಂಬ ಉದ್ದೇಶ ಹೊಂದಿರುವ ರಾಜ್ಯ ಸರ್ಕಾರ ಕರ್ನಾಟಕ ಕೌಶಲ್ಯ ಅಭಿವೃದ್ಧಿ ನೀತಿ (Skill Development Policy) 2025-2032 ಜಾರಿಗೆ ತರಲು ಕ್ರಮಕೈಗೊಂಡಿದೆ.

    ಈ ಕುರಿತು ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಜೀವನೋಪಾಯ ಮತ್ತು ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಶರಣ ಪ್ರಕಾಶ್ ಆರ್.ಪಾಟೀಲ್ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಕೌಶಲ್ಯ ನೀತಿಗೆ ಅನುಮೋದನೆ ನೀಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.ಇದನ್ನೂ ಓದಿ: ಕಲಬುರಗಿ | ಭೀಮಾ ನದಿಗೆ 3.40 ಲಕ್ಷ ಕ್ಯೂಸೆಕ್ ನೀರು ಬಿಡುಗಡೆ

    ಈ ಅಭಿವೃದ್ಧಿ ನೀತಿಯಿಂದ ರಾಜ್ಯದ ಪ್ರಗತಿಗೆ ಅತ್ಯಂತ ಪೂರಕವಾದ ಯೋಜನೆಗಳನ್ನು ಜಾರಿಗೆ ತರಲು ರಾಜ್ಯ ಸರ್ಕಾರ ಮುಂದಾಗಿದ್ದು, 2032ರ ವೇಳೆಗೆ 1 ಟ್ರಿಲಿಯನ್ ಡಾಲರ್ ಆರ್ಥಿಕತೆ ಗುರಿಯನ್ನು ಹೊಂದಿದೆ. ಇದನ್ನು ಸಾಕಾರಗೊಳಿಸಲು ನಾವು ಬದ್ಧವಾಗಿದ್ದೇವೆ ಎಂದು ಸ್ಪಷ್ಟಪಡಿಸಿದ್ದಾರೆ.

    ಕೌಶಲ್ಯ ನೀತಿಯ ಪ್ರಮುಖ ಅಂಶಗಳು:
    – ಕಲಿಕೆ ಜೊತೆಗೆ ಕೌಶಲ್ಯ, ನನ್ನ ವೃತ್ತಿ ನನ್ನ ಆಯ್ಕೆ ಯೋಜನೆಗೆ ಆದ್ಯತೆ
    – ಅಪ್ರೆಂಟಿಸ್‌ಶಿಪ್, ಐಟಿಐ ತರಬೇತಿ ಮೂಲಕ ವಿಶೇಷ ಸಹಯೋಗ
    – ತಾಂತ್ರಿಕ ಮತ್ತು ಕೈಗಾರಿಕಾ ಬದಲಾವಣೆಗಳಿಗೆ ನಿರಂತರ ಕಲಿಕೆಗೆ ಗಮನ
    – ಮಹಿಳೆಯರು, ಅಂಗವಿಕಲರು, ನಗರ ಬಡವರು, ದಮನಿತ ಸಮುದಾಯಗಳಿಗೆ ತರಬೇತಿ
    – ಐಟಿಐ ಆಧುನೀಕರಣ, ಜಿಟಿಟಿಸಿ ವಿಸ್ತರಣೆ, ಗ್ರಾಮೀಣ ಮತ್ತು ನಗರ ಕೌಶಲ್ಯ ಕೇಂದ್ರಗಳ ಸ್ಥಾಪನೆ, ಮೂಲಸೌಕರ್ಯ ಹೆಚ್ಚಳಕ್ಕೆ ಕ್ರಮ. ಇದನ್ನೂ ಓದಿ: ಬೆಂಗಳೂರಿನ ಈ ಭಾಗದಲ್ಲಿ ನಾಳೆ, ನಾಡಿದ್ದು ವಿದ್ಯುತ್ ವ್ಯತ್ಯಯ

  • ರಾಜ್ಯದ 1,275 ಹೊಸ ಪ್ರವಾಸಿ ತಾಣಗಳ ಪಟ್ಟಿಯಲ್ಲಿ `ಗದಗ’ದ 48 ತಾಣಗಳು ಆಯ್ಕೆ

    ರಾಜ್ಯದ 1,275 ಹೊಸ ಪ್ರವಾಸಿ ತಾಣಗಳ ಪಟ್ಟಿಯಲ್ಲಿ `ಗದಗ’ದ 48 ತಾಣಗಳು ಆಯ್ಕೆ

    ಗದಗ: ಪ್ರವಾಸೋದ್ಯಮ ಕ್ಷೇತ್ರಕ್ಕೆ ಹೊಸ ಆಯಾಮ ನೀಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಮಹತ್ವದ ಹೆಜ್ಜೆ ಇಟ್ಟಿದೆ. ಕರ್ನಾಟಕ ಪ್ರವಾಸೋದ್ಯಮ ನೀತಿ 2024-29ರ ಅಡಿಯಲ್ಲಿ ರಾಜ್ಯಾದ್ಯಂತ ಒಟ್ಟು 1,275 ಹೊಸ ಪ್ರವಾಸಿ ತಾಣಗಳನ್ನು ಗುರುತಿಸಿದೆ. ಅದರಲ್ಲಿ ಗದಗ ಜಿಲ್ಲೆಯ 48 ತಾಣಗಳು ಮಹತ್ವದ ಸ್ಥಾನ ಪಡೆಕೊಂಡಿವೆ.

    ಸಂಗೀತ, ಸಾಹಿತ್ಯ, ಕಲೆಗಳ ತವರೂರಾಗಿರುವ ಗದಗ ಜಿಲ್ಲೆಯು ಇತ್ತೀಚಿನ ದಿನಗಳಲ್ಲಿ ಪ್ರವಾಸೋದ್ಯಮ ತಾಣವಾಗಿಯೂ ಗಮನ ಸೆಳೆಯುತ್ತಿದೆ. ಇದೀಗ ರಾಜ್ಯ ಸರ್ಕಾರ ಗುರುತು ಮಾಡಿರುವ 1,275 ಹೊಸ ಪ್ರವಾಸಿ ತಾಣಗಳ ಪೈಕಿ ಗದಗ-ಬೆಟಗೇರಿ ಅವಳಿ ನಗರದಲ್ಲಿರುವ ವೀರೇಶ್ವರ ಪುಣ್ಯಾಶ್ರಮ, ವೀರಗಲ್ಲು, ಸಬರಮತಿ ಆಶ್ರಮದ ಪ್ರತಿರೂಪ ಸೇರಿದಂತೆ ಒಟ್ಟು 45 ತಾಣಗಳು ಸೇರಿಕೊಂಡಿವೆ. ಇದನ್ನೂ ಓದಿ: ಜಾತಿಗಣತಿಗೆ ಡಿಕೆಶಿ ಸೇರಿ ಹಲವು ಸಚಿವರ ಆಕ್ಷೇಪ, ನನಗೆ ಮೇಲ್ವರ್ಗದ ವಿರೋಧಿ ಅಂತಾ ಪಟ್ಟ ಕಟ್ಟುತ್ತಾರೆ: ಸಿಎಂ

    ಐತಿಹಾಸಿಕ, ಧಾರ್ಮಿಕ, ನೈಸರ್ಗಿಕ ಹಾಗೂ ಹೆಚ್ಚು ಪ್ರವಾಸಿಗರು ಭೇಟಿ ನೀಡುವ ಅಂಕಿ ಅಂಶಗಳನ್ನು ಆಧರಿಸಿ, ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪ್ರವಾಸೋದ್ಯಮ ಸಮಿತಿಯಿಂದ ಸ್ವೀಕರಿಸಿದ ಆಧಾರದ ಮೇಲೆ ಹೊಸ ಪ್ರವಾಸಿ ತಾಣಗಳನ್ನು ಗುರುತಿಸಲಾಗಿದೆ. ಈ ಕುರಿತು ಪ್ರವಾಸೋದ್ಯಮ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಮುಹಮ್ಮದ್ ಇಬ್ರಾಹಿಂ ಅಧಿಕೃತ ಆದೇಶ ಹೊರಡಿಸಿದ್ದಾರೆ.

    ಹೊಸದಾಗಿ ಗುರುತಿಸಲಾದ ತಾಣಗಳ ಅಭಿವೃದ್ಧಿಗೆ ಅಗತ್ಯವಾದ ಕ್ರಿಯಾ ಯೋಜನೆಗಳು ಮತ್ತು ಅಂದಾಜು ವೆಚ್ಚಗಳನ್ನು ಸಿದ್ಧಪಡಿಸಿ, ಸಂಬಂಧಪಟ್ಟ ಪ್ರಾಧಿಕಾರಗಳಿಂದ ಅನುಮೋದನೆ ಪಡೆದ ನಂತರ ಕಾಮಗಾರಿಗಳನ್ನು ಆರಂಭಿಸಲು ಸೂಚಿಸಲಾಗಿದೆ. ಹೊಸ ಪ್ರವಾಸಿ ತಾಣಗಳ ಗುರುತಿಸುವಿಕೆಯಿಂದಾಗಿ ಪ್ರವಾಸಿ ತಾಣಗಳ ಮೂಲಸೌಕರ್ಯ ಅಭಿವೃದ್ಧಿಯ ನಿರೀಕ್ಷೆ ಗರಿಗೆದರಿದೆ. ವಿಶೇಷವಾಗಿ ರಾಜ್ಯ ಪುರಾತತ್ವ ಇಲಾಖೆ ಅಧೀನದಲ್ಲಿರುವ ಮತ್ತು ನಿರ್ಲಕ್ಷ್ಯಕ್ಕೆ ಒಳಗಾಗಿರುವ ಅನೇಕ ಧಾರ್ಮಿಕ ತಾಣಗಳು, ಐತಿಹಾಸಿಕ ದೇವಸ್ಥಾನಗಳು ಅಭಿವೃದ್ಧಿ ಕಂಡು ಪ್ರವಾಸಿಗರನ್ನು ಆಕರ್ಷಿಸಲಿವೆ ಎಂದು ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

    ಜಿಲ್ಲೆಯ ಪ್ರವಾಸಿ ತಾಣಗಳ ವಿವರ:
    ಗದಗ ತಾಲೂಕು:
    * ಭೀಷ್ಮ ಕೆರೆ (116 ಅಡಿ ಎತ್ತರದ ಬಸವೇಶ್ವರ ಮೂರ್ತಿ)
    * ಶ್ರೀ ವೀರನಾರಾಯಣ ದೇವಸ್ಥಾನ
    * ಶ್ರೀ ತ್ರಿಕೂಟೇಶ್ವರ ದೇವಸ್ಥಾನ
    * ಶ್ರೀ ಸೋಮೇಶ್ವರ ದೇವಸ್ಥಾನ
    * ಶ್ರೀ ರಾಮೇಶ್ವರ ದೇವಸ್ಥಾನ
    * ಶ್ರೀ ತೋಂಟದಾರ್ಯ ಮಠ
    * ಶ್ರೀ ವೀರೇಶ್ವರ ಪುಣ್ಯಾಶ್ರಮ
    * ಜಾಮಿಯಾ ಮಸೀದಿ
    * ಬೆಟಗೇರಿ ಚರ್ಚ್
    * ಸಬರಮತಿ ಆಶ್ರಮ
    * ಶ್ರೀರಾಮಕೃಷ್ಣ ಆಶ್ರಮ
    * ಶ್ರೀ ವೆಂಕಟೇಶ್ವರ ದೇವಸ್ಥಾನ, ವೆಂಕಟಾಪುರ
    * ದಾವಲಮಲಿಕ ದರ್ಗಾ, ಮುಳಗುಂದ
    * ಶ್ರೀ ಸಿದ್ದೇಶ್ವರ ದೇವಸ್ಥಾನ, ಮುಳಗುಂದ
    * ಚಂದ್ರನಾಥ ಬಸದಿ, ಮುಳಗುಂದ
    * ಶ್ರೀ ಪಾರ್ವತಿ-ಪರಮೇಶ್ವರ ದೇವಸ್ಥಾನ, ಹರ್ತಿ
    * ಬಿಂಕದಕಟ್ಟಿ ಪ್ರಾಣಿ ಸಂಗ್ರಹಾಲಯ
    * ಸಾಲುಮರದ ತಿಮ್ಮಕ್ಕ ಸಸ್ಯೋದ್ಯಾನ
    * ಬೆಟಗೇರಿಯ ವೀರಗಲ್ಲುಗಳು
    * ಸರ್ಕಾರಿ ವಸ್ತು ಸಂಗ್ರಹಾಲಯ
    * ಬ್ರಹ್ಮ, ಜೀನಾಲಯ ದೇವಸ್ಥಾನ, ಲಕ್ಕುಂಡಿ
    * ಶ್ರೀ ನನ್ನೇಶ್ವರ ದೇವಸ್ಥಾನ, ಲಕ್ಕುಂಡಿ
    * ಮುಸಕಿನ ಭಾವಿ, ಲಕ್ಕುಂಡಿ
    * ಶ್ರೀ ಕಾಶಿವಿಶ್ವೇಶ್ವರ ದೇವಸ್ಥಾನ, ಲಕ್ಕುಂಡಿ
    * ಶ್ರೀ ಹಾಲಗುಂಡಿ ಬಸವೇಶ್ವರ ದೇವಸ್ಥಾನ, ಲಕ್ಕುಂಡಿ
    * ವಸ್ತು ಸಂಗ್ರಹಾಲಯ, ಲಕ್ಕುಂಡಿ

    ಮುಂಡರಗಿ ತಾಲೂಕು:
    * ಶ್ರೀ ವೀರಭದ್ರೇಶ್ವರ ದೇವಸ್ಥಾನ, ಸಿಂಗಟಾಲೂರು
    * ಹಮ್ಮಿಗಿ ಬ್ಯಾರೇಜ್, ಹಮ್ಮಿಗಿ.
    * ಶ್ರೀ ಅನ್ನದಾನೇಶ್ವರ ಮಠ, ಮುಂಡರಗಿ.
    * ಕಪ್ಪತ್ತಗುಡ್ಡ.
    * ಶ್ರೀ ದೊಡ್ಡಬಸಪ್ಪ ದೇವಸ್ಥಾನ, ಡಂಬಳ.
    * ಶ್ರೀ ಸೋಮೇಶ್ವರ ದೇವಸ್ಥಾನ, ಡಂಬಳ.
    * ವಿಕ್ಟೋರಿಯಾ ರಾಣಿ ಕೆರೆ, ಡಂಬಳ.
    * ಜಪದ ಬಾವಿ, ಡಂಬಳ

    ರೋಣ ಹಾಗೂ ಗಜೇಂದ್ರಗಡ:
    * ಶ್ರೀ ಕಲ್ಲೇಶ್ವರ ದೇವಸ್ಥಾನ, ರೋಣ
    * ಗಜೇಂದ್ರಗಡ ಕೋಟೆ, ಗಜೇಂದ್ರಗಡ
    * ಶ್ರೀ ಕಾಲಕಾಲೇಶ್ವರ ಕ್ಷೇತ್ರ, ಗಜೇಂದ್ರಗಡ
    * ಶ್ರೀ ನಾಗೇಶ್ವರ ದೇವಸ್ಥಾನ (ಜೋಡು ಕಳಸ), ಸೂಡಿ
    * ರಸದ ಬಾವಿ ನಾಗನ ಹೊಂಡ, ಗಜೇಂದ್ರಗಡ
    * ಶ್ರೀ ಭೀಮಾಂಬಿಕ ದೇವಸ್ಥಾನ, ಇಟಗಿ
    * ಶ್ರೀ ಶಂಭುಲಿಂಗ ದೇವಸ್ಥಾನ, ಇಟಗಿ

    ಶಿರಹಟ್ಟಿ ತಾಲೂಕು:
    * ಶ್ರೀ ಫಕೀರೇಶ್ವರ ಮಠ. ಶಿರಹಟ್ಟಿ
    * ಶ್ರೀ ಹೊಳಲಮ್ಮದೇವಿ ದೇವಸ್ಥಾನ, ಶ್ರೀಮಂತಗಡ
    * ಕೋಟೆ, ಶಿರಹಟ್ಟಿ
    * ಶ್ರೀ ವರವಿ ಮೌನೇಶ್ವರ ದೇವಸ್ಥಾನ, ಶಿರಹಟ್ಟಿ
    * ಮಾಗಡಿ ಕೆರೆ (ಪಕ್ಷಿ ಧಾಮ) ಶಿರಹಟ್ಟಿ

    ಲಕ್ಷ್ಮೇಶ್ವರ ತಾಲೂಕು:
    * ಶ್ರೀ ಸೋಮೇಶ್ವರ ದೇವಸ್ಥಾನ, ಲಕ್ಷ್ಮೇಶ್ವರ.
    * ಶಂಖ ಬಸದಿ, ಲಕ್ಷ್ಮೇಶ್ವರ

    ನರಗುಂದ ತಾಲೂಕು:
    * ಶ್ರೀ ವೆಂಕಟೇಶ್ವರ ದೇವಸ್ಥಾನ.

    ಪ್ರವಾಸೋದ್ಯಮ ಸಚಿವ ಹೆಚ್.ಕೆ.ಪಾಟೀಲ್ ವಿಶೇಷ ಪ್ರಯತ್ನದಿಂದ ನೂತನ ಪ್ರವಾಸೋದ್ಯಮ ನೀತಿಯಡಿ ಗುರುತಿಸಲಾದ ಪ್ರವಾಸಿ ತಾಣಗಳ ಪಟ್ಟಿಯಲ್ಲಿ ಗದಗ ಜಿಲ್ಲೆಯ 48 ತಾಣಗಳು ಸ್ಥಾನ ಪಡೆದಿರುವುದು ಹೆಮ್ಮೆಯ ಸಂಗತಿ. ರಾಜ್ಯದ ಪ್ರವಾಸೋದ್ಯಮಕ್ಕೆ ಹೊಸ ರೂಪ ಕೊಡುವ ಉದ್ದೇಶದಿಂದ ನೂತನ ಪ್ರವಾಸೋದ್ಯಮ ನೀತಿಯಡಿ ರಾಜ್ಯದ 1,275 ತಾಣಗಳನ್ನು ಗುರುತಿಸಲಾಗಿದ್ದು, ಅವುಗಳ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ. ಇದನ್ನೂ ಓದಿ: ಮತಗಳ್ಳತನ ಸಂಬಂಧ ತೀರ್ಪಿನ ಬಳಿಕವೇ ತುರ್ತು ಪರಿಸ್ಥಿತಿ ಹೇರಿದ್ದ ಇಂದಿರಾ ಗಾಂಧಿ: ಛಲವಾದಿ ನಾರಾಯಣಸ್ವಾಮಿ

  • ದಿ ಬಿ.ಸರೋಜಾದೇವಿ ಹೆಸರಿನಲ್ಲಿ `ಅಭಿನಯ ಸರಸ್ವತಿ’ ಪ್ರಶಸ್ತಿ ಘೋಷಿಸಿದ ರಾಜ್ಯ ಸರ್ಕಾರ

    ದಿ ಬಿ.ಸರೋಜಾದೇವಿ ಹೆಸರಿನಲ್ಲಿ `ಅಭಿನಯ ಸರಸ್ವತಿ’ ಪ್ರಶಸ್ತಿ ಘೋಷಿಸಿದ ರಾಜ್ಯ ಸರ್ಕಾರ

    • ಕನ್ನಡ ಚಿತ್ರರಂಗಕ್ಕೆ ಕನಿಷ್ಠ 25 ವರ್ಷಗಳ ಸೇವೆ ಸಲ್ಲಿಸಿರುವ ಸಾಧಕಿಯರಿಗೆ ಪ್ರಶಸ್ತಿ

    ಬೆಂಗಳೂರು: ಹಿರಿಯ ನಟಿ, ಪಂಚಭಾಷಾ ತಾರೆ ದಿವಂಗತ ಬಿ.ಸರೋಜಾದೇವಿ (B.Sarojadevi) ಅವರ ಹೆಸರಿನಲ್ಲಿ `ಅಭಿನಯ ಸರಸ್ವತಿ’ (Abhinaya Saraswati) ಪ್ರಶಸ್ತಿ ನೀಡುವುದಾಗಿ ರಾಜ್ಯ ಸರ್ಕಾರ (State Govt) ಘೋಷಿಸಿದೆ.

    ಕನ್ನಡ ಚಲನಚಿತ್ರ ನಟಿ, ಪಂಚಭಾಷಾ ತಾರೆ, ಪದ್ಮಶ್ರೀ ಹಾಗೂ ಪದ್ಮಭೂಷಣ ವಿಜೇತೆ ದಿವಂಗತ ಬಿ.ಸರೋಜಾದೇವಿ ಅವರು ಪಂಚಭಾಷಾ ತಾರೆಯಾಗಿದ್ದು, ಭಾರತೀಯ ಹಾಗೂ ಕನ್ನಡ ಚಿತ್ರರಂಗಕ್ಕೆ ನೀಡಿರುವ ಕೊಡುಗೆ ಅಪಾರವಾಗಿದೆ. ಅದನ್ನು ಪರಿಗಣಿಸಿ ಅವರು ಪಡೆದಿದ್ದ “ಅಭಿನಯ ಸರಸ್ಕೃತಿ” ಬಿರುದಿನ ಹೆಸರಿನಲ್ಲಿ ಕನ್ನಡ ಚಿತ್ರರಂಗಕ್ಕೆ ಕನಿಷ್ಠ 25 ವರ್ಷಗಳ ಅವಿಸ್ಮರಣೀಯ ಸೇವೆ ಸಲ್ಲಿಸಿರುವ ಮಹಿಳೆಯರಿಗೆ ಜೀವಮಾನ ಸಾಧನೆ ಪ್ರಶಸ್ತಿಯನ್ನು ನೀಡಲಾಗುವುದು. ಪ್ರಸ್ತುತ ಜಾರಿಯಲ್ಲಿರುವ ಕನ್ನಡ ಚಲನಚಿತ್ರ ನೀತಿ-2011ರಲ್ಲಿನ ವಾರ್ಷಿಕ ರಾಜ್ಯ ಚಲನಚಿತ್ರ ಪ್ರಶಸ್ತಿಗಳ ಪಟ್ಟಿ ಅನುಬಂಧ-1ರಡಿ ಜಾರಿಗೆ ತರಲಾಗಿದೆ.ಇದನ್ನೂ ಓದಿ: ಸಾಹಸಸಿಂಹ ವಿಷ್ಣುವರ್ಧನ್‌, ಬಿ.ಸರೋಜಾದೇವಿಗೆ ಮರಣೋತ್ತರ ‘ಕರ್ನಾಟಕ ರತ್ನ’ ಪ್ರಶಸ್ತಿ ಘೋಷಣೆ

    ಈ ಪ್ರಶಸ್ತಿಯಡಿಯಲ್ಲಿ 1 ಲಕ್ಷ ರೂ. ನಗದು ಹಾಗೂ 100 ಗ್ರಾಂ ಬೆಳ್ಳಿ ಪದಕ ನೀಡಲಾಗುವುದು ಎಂದು ರಾಜ್ಯ ಸರ್ಕಾರ ಪ್ರಕಟಣೆಯಲ್ಲಿ ತಿಳಿಸಿದೆ.

  • ರಸ್ತೆ ಅಪಘಾತ ಸಂತ್ರಸ್ತರ ಚಿಕಿತ್ಸಾ ವೆಚ್ಚ 2.5 ಲಕ್ಷಕ್ಕೆ ಹೆಚ್ಚಿಸಿದ ರಾಜ್ಯ ಸರ್ಕಾರ

    ರಸ್ತೆ ಅಪಘಾತ ಸಂತ್ರಸ್ತರ ಚಿಕಿತ್ಸಾ ವೆಚ್ಚ 2.5 ಲಕ್ಷಕ್ಕೆ ಹೆಚ್ಚಿಸಿದ ರಾಜ್ಯ ಸರ್ಕಾರ

    ಬೆಂಗಳೂರು: ರಸ್ತೆ ಅಪಘಾತ ಸಂತ್ರಸ್ತರಿಗೆ ನೀಡುತ್ತಿದ್ದ ನಗದು ರಹಿತ ಚಿಕಿತ್ಸೆ ವೆಚ್ಚವನ್ನು ರಾಜ್ಯ ಸರ್ಕಾರ (State Govt) ಇದೀಗ 2.5 ಲಕ್ಷ ರೂ.ಗೆ ಏರಿಕೆ ಮಾಡಿದೆ.

    ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡವರಿಗೆ ಕೇಂದ್ರ ಸರ್ಕಾರ (Central Govt) 1.5 ಲಕ್ಷ ರೂ.ವರೆಗೂ ನಗದು ರಹಿತ ಚಿಕಿತ್ಸೆಯನ್ನು ನೀಡುತ್ತಿತ್ತು. ಅಪಘಾತ ಸಂಭವಿಸಿದ ಏಳು ದಿನಗಳವರೆಗೂ ಈ ಸೌಲಭ್ಯ ಇತ್ತು. ಈಗ ರಾಜ್ಯ ಸರ್ಕಾರ ಅಪಘಾತ ಆಗಿ ಬಹುಅಂಗಾಂಗಗಳ ವೈಫಲ್ಯ ಆದರೆ ಚಿಕಿತ್ಸೆಗಾಗಿ 1 ಲಕ್ಷ ರೂ. ಟಾಪ್ ಅಪ್‌ ನೀಡೋದಾಗಿ ಘೋಷಣೆ ಮಾಡಿದೆ.ಇದನ್ನೂ ಓದಿ: 4.8 ಕೋಟಿ ಪತ್ತೆ ಕೇಸ್‌ – ಸುಧಾಕರ್‌ಗೆ ಹೈಕೋರ್ಟ್‌ನಿಂದ ಬಿಗ್‌ ರಿಲೀಫ್‌, FIR ರದ್ದು

    ಕೇಂದ್ರ ಮತ್ತು ರಾಜ್ಯ ಸರ್ಕಾರದ ಅಪಘಾತ ಸಂತ್ರಸ್ತ ಯೋಜನೆ ಅಡಿ ಸಂತ್ರಸ್ತರಿಗೆ 2.5 ಲಕ್ಷ ರೂ.ವರೆಗೂ ಚಿಕಿತ್ಸಾ ನೆರವು ಸಿಗಲಿದೆ. ರಸ್ತೆ ಅಪಘಾತದಿಂದ ಆಗುವ ಸಾವುಗಳನ್ನ ತಡೆಗಟ್ಟಲು ಚಿಕಿತ್ಸಾ ವೆಚ್ಚದ ಅನುದಾನ ಹೆಚ್ಚಳ ಮಾಡಲಾಗಿದೆ.

    ಕರ್ನಾಟಕ ರಾಜ್ಯದಲ್ಲಿ ಪ್ರತಿ ವರ್ಷಕ್ಕೆ ಸುಮಾರು 40 ಸಾವಿರ ರಸ್ತೆ ಅಪಘಾಗಳು ದಾಖಲಾಗ್ತಿವೆ. ಪ್ರತಿ ವರ್ಷ ಸುಮಾರು 11 ಸಾವಿರ ಜನರು ರಸ್ತೆ ಅಪಘಾತದಿಂದ ಸಾವನ್ನಪ್ಪುತ್ತಿದ್ದಾರೆ. ಪ್ರತಿ ಗಂಟೆಗೆ 4 ರಿಂದ 5 ರಸ್ತೆ ಅಪಘಾತಗಳು ದಾಖಲಾಗ್ತಿವೆ ಎಂದು ತಿಳಿದುಬಂದಿದೆ.ಇದನ್ನೂ ಓದಿ: ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಐದು ಪಾಲಿಕೆಗಳಿಗೆ 125 ಕೋಟಿ ಅನುದಾನ

  • ಬಾಂಕೆ ಬಿಹಾರಿ ದೇವಾಲಯ ಕೇಸ್ – ಯುಪಿ ಸರ್ಕಾರಕ್ಕೆ ಸುಪ್ರೀಂ ತೀವ್ರ ತರಾಟೆ

    ಬಾಂಕೆ ಬಿಹಾರಿ ದೇವಾಲಯ ಕೇಸ್ – ಯುಪಿ ಸರ್ಕಾರಕ್ಕೆ ಸುಪ್ರೀಂ ತೀವ್ರ ತರಾಟೆ

    ನವದೆಹಲಿ: ಉತ್ತರ ಪ್ರದೇಶದಲ್ಲಿರುವ (Uttar Pradesh) ವೃಂದಾವನದ ಬಾಂಕೆ ಬಿಹಾರಿ ದೇವಾಲಯದ (Banke Bihari Temple) ಕಾರಿಡಾರ್ ಯೋಜನೆಗೆ ಸಂಬಂಧಿಸಿದ ಪ್ರಕರಣದಲ್ಲಿ ರಾಜ್ಯ ಸರ್ಕಾರ ತೀವ್ರ ಆತುರದ ನಡವಳಿಕೆಯನ್ನು ತೋರಿದೆ ಎಂದು ಸುಪ್ರೀಂ ಕೋರ್ಟ್ (Supreme Court) ತರಾಟೆಗೆ ತೆಗೆದುಕೊಂಡಿದೆ.

    ನ್ಯಾಯಮೂರ್ತಿಗಳಾದ ಬಿ.ಆರ್.ಗವಾಯಿ ಮತ್ತು ಕೆ.ವಿ.ವಿಶ್ವನಾಥ್ ಅವರನ್ನೊಳಗೊಂಡ ಸುಪ್ರೀಂ ಕೋರ್ಟ್ನ ದ್ವಿಸದಸ್ಯ ಪೀಠವು ಈ ಯೋಜನೆಯ ವಿರುದ್ಧ ದಾಖಲಾದ ಅರ್ಜಿಯ ವಿಚಾರಣೆಯ ವೇಳೆ, ರಾಜ್ಯ ಸರ್ಕಾರವು ಹೆಚ್ಚಿನ ಚರ್ಚೆಯಿಲ್ಲದೆ ಮತ್ತು ಸ್ಥಳೀಯರ ಹಿತಾಸಕ್ತಿಗಳನ್ನು ಕಡೆಗಣಿಸಿ ಕಾರ್ಯನಿರ್ವಹಿಸುತ್ತಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದೆ. ಈ ಯೋಜನೆಯು ದೇವಾಲಯದ ಸಾಂಸ್ಕೃತಿಕ ಮತ್ತು ಐತಿಹಾಸಿಕ ಮೌಲ್ಯವನ್ನು ಹಾನಿಗೊಳಿಸಬಹುದು ಎಂದು ಆತಂಕ ವ್ಯಕ್ತಪಡಿಸಿದೆ. ನೀವು ಏಕೆ ಇಷ್ಟು ಆತುರದಲ್ಲಿದ್ದೀರಿ? ಯಾವುದೇ ಸ್ಪಷ್ಟ ಯೋಜನೆಯಿಲ್ಲದೆ, ಅಗತ್ಯವಾದಷ್ಟು ಚರ್ಚೆಯಿಲ್ಲದೆ ಈ ರೀತಿಯ ಯೋಜನೆಯನ್ನು ಜಾರಿಗೆ ತರಲು ಯತ್ನಿಸುತ್ತಿರುವುದು ಸರಿಯಲ್ಲ ಎಂದು ಉತ್ತರ ಪ್ರದೇಶ ಸರ್ಕಾರದ ಪರ ವಕೀಲರನ್ನು ಪ್ರಶ್ನಿಸಿದೆ.ಇದನ್ನೂ ಓದಿ: Dharmasthala | 13 ವರ್ಷದ ಹಿಂದಿನ ಕೇಸ್ ಬಗ್ಗೆ ಮತ್ತೊಂದು ದೂರು – ದೂರುದಾರ ಹೇಳಿದ್ದೇನು?

    ಈ ಪ್ರಕರಣದಲ್ಲಿ, ವೃಂದಾವನದ ಬಾಂಕೆ ಬಿಹಾರಿ ದೇವಾಲಯದ ಸುತ್ತಲಿನ ಪ್ರದೇಶದಲ್ಲಿ ಕಾರಿಡಾರ್ ನಿರ್ಮಾಣಕ್ಕೆ ಸಂಬಂಧಿಸಿದಂತೆ ಸ್ಥಳೀಯ ನಿವಾಸಿಗಳು ಮತ್ತು ಭಕ್ತಾದಿಗಳಿಂದ ಆಕ್ಷೇಪಣೆಗಳು ಕೇಳಿಬಂದಿವೆ. ಈ ಯೋಜನೆಯಿಂದ ದೇವಾಲಯದ ಸುತ್ತಮುತ್ತಲಿನ ಸಾಂಪ್ರದಾಯಿಕ ವಾಸ್ತುಶಿಲ್ಪ ಮತ್ತು ಸಾಂಸ್ಕೃತಿಕ ವಾತಾವರಣಕ್ಕೆ ಧಕ್ಕೆಯಾಗುವ ಸಾಧ್ಯತೆ ಇದೆ ಎಂದು ಅರ್ಜಿದಾರರು ವಾದಿಸಿದ್ದಾರೆ. ಇದರ ಜೊತೆಗೆ, ಸ್ಥಳೀಯರೊಂದಿಗೆ ಸಮಾಲೋಚನೆ ನಡೆಸದೆ ಯೋಜನೆಯನ್ನು ಮುಂದುವರಿಸಲಾಗುತ್ತಿದೆ ಎಂಬ ಆರೋಪವೂ ಕೇಳಿಬಂದಿದೆ.

    ನ್ಯಾಯಾಲಯವು ಈ ಯೋಜನೆಗೆ ಸಂಬಂಧಿಸಿದ ಸಂಪೂರ್ಣ ವಿವರಗಳನ್ನು ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ ಮತ್ತು ಯಾವುದೇ ಆತುರದ ನಿರ್ಧಾರಗಳನ್ನು ತೆಗೆದುಕೊಳ್ಳದಂತೆ ಎಚ್ಚರಿಕೆ ನೀಡಿದೆ. ಸದ್ಯ ಈ ಪ್ರಕರಣದ ವಿಚಾರಣೆಯನ್ನು ಮುಂದೂಡಲಾಗಿದ್ದು, ದೇವಾಲಯದ ಐತಿಹಾಸಿಕ ಮಹತ್ವವನ್ನು ಗಮನದಲ್ಲಿಟ್ಟುಕೊಂಡು ಯಾವುದೇ ಕ್ರಮಕೈಗೊಳ್ಳುವಂತೆ ಸರ್ಕಾರಕ್ಕೆ ಸೂಚಿಸಲಾಗಿದೆ.ಇದನ್ನೂ ಓದಿ:

  • 111.8 ಕೋಟಿ ಅನುದಾನದ ಬಳಿಕವೂ ಶಾಲಾ ಮಕ್ಕಳ ಶೂ-ಸಾಕ್ಸ್‌ಗಾಗಿ ದಾನಿಗಳ ಮೊರೆಹೋದ ಸರ್ಕಾರ

    111.8 ಕೋಟಿ ಅನುದಾನದ ಬಳಿಕವೂ ಶಾಲಾ ಮಕ್ಕಳ ಶೂ-ಸಾಕ್ಸ್‌ಗಾಗಿ ದಾನಿಗಳ ಮೊರೆಹೋದ ಸರ್ಕಾರ

    -ಶೂ ಮೇಲೆ `ಬೂಟ್ ಪೇ’ ಎಂದು ಬರೆದು `ಕ್ಯೂಆರ್ ಸ್ಕ್ಯಾನ್‌ʼ ಪೋಸ್ಟರ್ ಅಂಟಿಸಿ ಬಿಜೆಪಿ ಟಕ್ಕರ್

    ಬೆಂಗಳೂರು: ಶಾಲಾ ಮಕ್ಕಳ ಶೂ-ಸಾಕ್ಸ್‌ಗಾಗಿ ದಾನಿಗಳ ಮೊರೆಹೋದ ರಾಜ್ಯ ಸರ್ಕಾರದ (State Govt) ವಿರುದ್ಧ ಬಿಜೆಪಿ (BJP) ಹೊಸ ಕ್ಯಾಂಪೇನ್ ಆರಂಭಿಸಿದೆ.

    ಮಕ್ಕಳ ಶೂ ಮೇಲೆ `ಬೂಟ್ ಪೇ’ ಎಂದು ಬರೆದು `ಕ್ಯೂಆರ್ ಸ್ಕ್ಯಾನ್‌’ ಪೋಸ್ಟರ್ ಮೂಲಕ ಬಿಜೆಪಿ ಟಕ್ಕರ್ ಕೊಟ್ಟಿದೆ. ಕಾಂಗ್ರೆಸ್‌ನ 40% ಫೋನ್ ಪೇ ಮಾದರಿಯಲ್ಲೇ `ಬೂಟ್ ಪೇ’ ಸ್ಕ್ಯಾನ್‌ ಮಾಡಿ ಎಂದು ಸರ್ಕಾರವನ್ನು ಅಣಕಿಸಿದೆ.ಇದನ್ನೂ ಓದಿ: ಜನೌಷಧಿ ಕೇಂದ್ರಗಳನ್ನು ಮುಚ್ಚುವ ರಾಜ್ಯ ಸರ್ಕಾರದ ನಿರ್ಧಾರಕ್ಕೆ ಹೈಕೋರ್ಟ್ ತಾತ್ಕಾಲಿಕ ತಡೆ

    ಸಂಪೂರ್ಣ ದಿವಾಳಿಯಾಗಿರುವ ಕಾಂಗ್ರೆಸ್ ಸರ್ಕಾರದಲ್ಲಿ ಶಾಲಾ ಮಕ್ಕಳಿಗೆ ಶೂ ನೀಡಲು ಸಹ ಹಣವಿಲ್ಲ. ಹೀಗಾಗಿ ಶಾಲಾ ಮಕ್ಕಳಿಗೆ ಶೂ ದಾನ ಮಾಡಲು ಬೂಟ್ ಪೇ ಸ್ಕ್ಯಾನ್‌ ಮಾಡಿ ಅಂತ ಟ್ವೀಟ್‌ನಲ್ಲಿ ಸರ್ಕಾರಕ್ಕೆ ಬಿಜೆಪಿ ಮುಖಭಂಗ ಮಾಡಿದೆ.

    ಮಕ್ಕಳ ಶೂ-ಸಾಕ್ಸ್ ಖರೀದಿಗೆ ಬಿಡುಗಡೆಯಾಗಿದ್ದ 111.88 ಕೋಟಿ ರೂ. ಅನುದಾನ ಯಾವ ರಾಜ್ಯದ ಕಾಂಗ್ರೆಸ್ ಚುನಾವಣಾ ಫಂಡ್‌ಗೆ ಬಳಕೆ ಆಯ್ತಾ? ಹಣ ಬಿಡುಗಡೆಯಾದರೂ ದಾನಿಗಳನ್ನು ಹುಡುಕುತ್ತಿದ್ದರೆ ಅನುದಾನ ಯಾರ ಜೇಬು ಸೇರಿರಬಹುದು? ಅಂತ ಬಿಜೆಪಿ ಪ್ರಶ್ನಿಸಿದೆ.ಇದನ್ನೂ ಓದಿ: 15 ಏಷ್ಯನ್ ರಾಷ್ಟ್ರಗಳ ಎದುರು ವಿಜಯಪುರದ ಇತಿಹಾಸ ಅನಾವರಣಗೊಳಿಸಿದ ಡಿಸಿ

  • ಎಂಎಲ್‌ಸಿ ರವಿಕುಮಾರ್ ಮೇಲೆ ನಿಯಮಾವಳಿಗಳ ಪ್ರಕಾರ ಕ್ರಮ – ಹೊರಟ್ಟಿ

    ಎಂಎಲ್‌ಸಿ ರವಿಕುಮಾರ್ ಮೇಲೆ ನಿಯಮಾವಳಿಗಳ ಪ್ರಕಾರ ಕ್ರಮ – ಹೊರಟ್ಟಿ

    ಬೆಂಗಳೂರು: ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ (Shalini Rajneesh) ಬಗ್ಗೆ ಅವಹೇಳನಕಾರಿ ಮಾತಾಡಿರೋ ಬಿಜೆಪಿ MLC ರವಿಕುಮಾರ್ ವಿರುದ್ಧ ಕ್ರಮಕ್ಕೆ ಪ್ರದೇಶ ಕಾಂಗ್ರೆಸ್ ಕಮಿಟಿಯಿಂದ ದೂರು ಬಂದಿದೆ ಅಂತ ಸಭಾಪತಿ ಬಸವರಾಜ ಹೊರಟ್ಟಿ (Basavaraj Horatti) ತಿಳಿಸಿದ್ದಾರೆ.

    ವಿಧಾನಸೌಧದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ನಿಂದ (Congress) ನನಗೆ ದೂರು ಕೊಟ್ಟಿದ್ದಾರೆ. ರವಿಕುಮಾರ್ (N Ravikumar) ಅವರು ಸಿಎಸ್‌ಗೆ ಅಸಂಬದ್ಧ ಪದ ಬಳಕೆ ಮಾಡಿದ್ದಾರೆ. ಅವರ ಮೇಲೆ ಕ್ರಮಕ್ಕೆ ಮನವಿ ಮಾಡಿದ್ದಾರೆ. MLC ಸ್ಥಾನದಿಂದ ಅಮಾನತು ಮಾಡಬೇಕು ಅಂತ ಕೇಳಿದ್ದಾರೆ. ರವಿಕುಮಾರ್‌ಗೆ ನಾನು ಪತ್ರ ಬರೆದಿದ್ದೇನೆ. ಹೀಗೆ ದೂರು ಬಂದಿದೆ. ನಿಮ್ಮ ಅಭಿಪ್ರಾಯ ‌ಕೊಡಿ ಅಂತ ಕೇಳಿದ್ದೀನಿ. ಅವರು ಅಭಿಪ್ರಾಯ ಕೊಟ್ಟ ಮೇಲೆ ಮುಂದಿನ ತೀರ್ಮಾನ ಮಾಡ್ತೀನಿ ಎಂದಿದ್ದಾರೆ. ಇದನ್ನೂ ಓದಿ: ಸಿಎಸ್‌ ವಿರುದ್ಧ ರವಿಕುಮಾರ್ ಅವಹೇಳನಕಾರಿ ಹೇಳಿಕೆ – ನಾಳೆ ಜೋಷಿಗೆ ಸ್ಪಷ್ಟನೆ

    ರವಿಕುಮಾರ್ ಅವರ ಸದಸ್ಯತ್ವ ರದ್ದು ಮಾಡೋ ಅಧಿಕಾರ ನನಗೆ ಇಲ್ಲ. ಕಾನೂನು ತಜ್ಞರ ಅಭಿಪ್ರಾಯ ಪಡೆದು ಮುಂದಿನ ತೀರ್ಮಾನ ಮಾಡ್ತೀವಿ. ವಿಧಾನ ಪರಿಷತ್ ನಿಯಮದ ಪ್ರಕಾರ ಮುಂದಿನ ಕ್ರಮ ತೆಗೆದುಕೊಳ್ತೀವಿ. ರವಿಕುಮಾರ್ ಅಭಿಪ್ರಾಯ ಪಡೆಯದೇ ನಾನೇನು ಕ್ರಮ ತೆಗೆದುಕೊಳ್ಳಲು ಆಗಲ್ಲ ಅಂತ ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಚಾಮುಂಡಿ ಬೆಟ್ಟದಲ್ಲಿ ವಸ್ತ್ರ ಸಂಹಿತೆ ಜಾರಿ ಆಗಲಿ: ಸಂಸದ ಯದುವೀರ್

    ಇದು ವಿಧಾನಸೌಧದ ಪರಿಮಿತಿಯಲ್ಲಿ ನಡೆದಿದೆ. ಅದಕ್ಕೆ ನಾನು ರವಿಕುಮಾರ್‌ಗೆ ಪತ್ರ ಬರೆದಿದ್ದೇನೆ. ಪತ್ರಕ್ಕೆ ಅವರ ಅಭಿಪ್ರಾಯ ಬರಲಿ, ರಾಜ್ಯಸಭೆ ಸೆಕ್ರೆಟರಿ ಜನರಲ್ ಅವರ ಅಭಿಪ್ರಾಯ ಪಡೆಯುತ್ತೇನೆ. ಪೊಲೀಸ್ ಕೇಸ್ ಬಗ್ಗೆ ನನಗೆ ಗೊತ್ತಿಲ್ಲ. ಶಾಸಕರನ್ನ ಅರೆಸ್ಟ್ ಮಾಡಿದ್ರೆ ನಮಗೆ ಮಾಹಿತಿ ಕೊಡಬೇಕು ಅಷ್ಟೆ. ನಾವು ರವಿಕುಮಾರ್ ಅಭಿಪ್ರಾಯ ಪಡೆದು ನಿಯಮದ ಪ್ರಕಾರ ಕ್ರಮ ತೆಗೆದುಕೊಳ್ತೀನಿ ಅಂತ ತಿಳಿಸಿದ್ದಾರೆ. ಇದನ್ನೂ ಓದಿ:  SKSSF ಅಬುಧಾಬಿ ಕರ್ನಾಟಕ & ಬ್ಲಡ್ ಹೆಲ್ಪ್‌ಲೈನ್ ಕರ್ನಾಟಕ ಆಶ್ರಯದಲ್ಲಿ 4ನೇ ಯಶಸ್ವಿ ರಕ್ತದಾನ ಶಿಬಿರ

  • ಸಿದ್ದರಾಮಯ್ಯನವರೇ ತಪ್ಪಿಯೂ ಕರ್ನಾಟಕವನ್ನು ಡಿಕೆಶಿ ಕೈಗೆ ಕೊಡಬೇಡಿ, ಮಾರಿಕೊಂಡು ಹೋಗ್ತಾರೆ – ಯತ್ನಾಳ್

    ಸಿದ್ದರಾಮಯ್ಯನವರೇ ತಪ್ಪಿಯೂ ಕರ್ನಾಟಕವನ್ನು ಡಿಕೆಶಿ ಕೈಗೆ ಕೊಡಬೇಡಿ, ಮಾರಿಕೊಂಡು ಹೋಗ್ತಾರೆ – ಯತ್ನಾಳ್

    ವಿಜಯಪುರ: ಸಿದ್ದರಾಮಯ್ಯನವರೇ (Siddaramaiah) ನಿಮಗೆ ನಿಭಾಯಿಸಲು ಸಾಧ್ಯವಾಗದಿದ್ದರೆ, ವಿಧಾನಸಭೆ ವಿಸರ್ಜನೆ ಮಾಡಿ. ತಪ್ಪಿಯೂ ಕರ್ನಾಟಕವನ್ನ ಡಿಕೆಶಿ (DK Shivakumar) ಕೈಗೆ ಕೊಡಬೇಡಿ. ಮಾರಿಕೊಂಡು ಹೋಗ್ತಾರೆ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ (Basanagouda Patil Yatnal) ಯತ್ನಾಳ್ ತಿಳಿಸಿದರು.

    ಜಿಲ್ಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ನಲ್ಲಿ ಎಲ್ಲ ಶಾಸಕರು ರೊಚ್ಚಿಗೆದ್ದಿದ್ದಾರೆ. ಸದ್ಯ ರಾಜ್ಯದ ಮಂತ್ರಿಗಳು ಲೂಟಿಗೆ ಇಳಿದಿದ್ದಾರೆ. ಸಿಎಂ ಡೀಲಿಂಗ್‌ನ್ನು ಅವರ ಮಗ ಮಾಡ್ತಿದ್ದಾನೆ, ಬೈರತಿ ಸುರೇಶ್ (Byrathi Suresh) ಅವರು ಡೀಲಿಂಗ್ ಮಾಡುತ್ತಾರೆ. ಡಿಕೆಶಿ ಇಬ್ಬರು ಅಣ್ಣ, ತಮ್ಮ ಸೇರಿಕೊಂಡು ಲೂಟಿ ಮಾಡುತ್ತಿದ್ದಾರೆ. ಸರ್ಕಾರ ಯಾವಾಗ ಹೋಗುತ್ತೆ ಗೊತ್ತಿಲ್ಲ, ಅಷ್ಟರಲ್ಲಿ ನಾವು ಹಣ ಮಾಡಿಕೊಂಡು ಪಾರಾಗಬೇಕು ಎಂದು ಎಲ್ಲ ಮಂತ್ರಿಗಳಿಗೂ ಲೂಟಿ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.ಇದನ್ನೂ ಓದಿ: ರೋಡ್ ರೇಜ್ ಕೇಸ್ – ಮಾಜಿ ಎಂಪಿ ಅನಂತಕುಮಾರ್ ಹೆಗಡೆ ಗನ್‌ಮ್ಯಾನ್, ಡ್ರೈವರ್‌ಗೆ ಜಾಮೀನು

    ಇನ್ನು ಗ್ಯಾರಂಟಿಗಳ ಬಗ್ಗೆ ಗೃಹ ಸಚಿವ ಜಿ.ಪರಮೇಶ್ವರ್ ಬಾದಾಮಿಯಲ್ಲಿ, ನಾವು ಬಾದಾಮಿಯ ಸಂಪೂರ್ಣ ಅಭಿವೃದ್ದಿಗಾಗಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೇವೆ. ಯಾಕೆಂದರೆ ನಮ್ಮ ಹತ್ತಿರ ದುಡ್ಡಿಲ್ಲ, ಅದಕ್ಕೆ ನರೇಂದ್ರ ಮೋದಿ ಅವರು ಕೊಡಬೇಕು ಎಂದಿದ್ದಾರೆ. ಕಾಂಗ್ರೆಸ್‌ನವರು ಗ್ಯಾರಂಟಿ ಹೆಸರಲ್ಲಿ ಪುಕ್ಕಟೆ ಹಂಚುತ್ತಾ ಹೋಗುತ್ತಾರೆ. ಗ್ಯಾರಂಟಿ ಒಂದು ನೆಪ ಅಷ್ಟೇ, ಇವರು ಲೂಟಿ ಮಾಡುತ್ತಿದ್ದಾರೆ. ಬಡವರಿಗೆ ಅಷ್ಟು ಕೊಟ್ಟಿದ್ದೇವೆ, ಇಷ್ಟು ಕೊಟ್ಟಿದ್ದೇವೆ ಎಂದು ಹೇಳುತ್ತಾರೆ. ಗ್ಯಾರಂಟಿ ಬಿಟ್ಟು ಅಭಿವೃದ್ಧಿ ಮಾಡಬಹುದು. ಕರ್ನಾಟಕದಲ್ಲಿ ಸಾಕಷ್ಟು ಸಂಪನ್ಮೂಲ ಇದೆ. ಬಡವರಿಗೆ ಕೊಡುವುದನ್ನು ಕೊಟ್ಟು, ಬಳಿಕ ಬೇರೆ ಅಭಿವೃದ್ಧಿ ಕೆಲಸ ಮಾಡಬಹುದು ಎಂದರು.

    ಇನ್ನೂ ಸಿದ್ದರಾಮಯ್ಯ ಅವರಿಗೆ ಗುರಿ ಇಲ್ಲ, ದಿನೇ ದಿನೇ ಕಾಂಗ್ರೆಸ್‌ನ ಶಾಸಕರು ಜಾಗೃತರಾಗುತ್ತಿದ್ದಾರೆ. ಎಲ್ಲವನ್ನು ಅಲ್ಪಸಂಖ್ಯಾತರಿಗೆ ಕೊಟ್ಟರೆ ಹೇಗೆ ಎನ್ನುತ್ತಿದ್ದಾರೆ. ಇದರಿಂದ ಸಿಎಂಗೆ ತಲೆನೋವಾಗಿದೆ. ನಿಮಗೆ ನಿಭಾಯಿಸಲು ಸಾಧ್ಯವಾಗದಿದ್ದರೆ, ವಿಧಾನಸಭೆ ವಿಸರ್ಜನೆ ಮಾಡಿ. ತಪ್ಪಿಯೂ ಕರ್ನಾಟಕವನ್ನ ಡಿಕೆಶಿ ಕೈಗೆ ಕೊಡಬೇಡಿ. ನೀವು ಸ್ವಲ್ಪ ಲೂಟಿ ಮಾಡಿದ್ದೀರಾ, ಡಿಕೆಶಿ ಕೈಯಲ್ಲಿ ಕೊಟ್ರೆ ಇಡೀ ಕರ್ನಾಟಕವನ್ನೇ ಮಾರಾಟ ಮಾಡಿಕೊಂಡು ಹೋಗುತ್ತಾರೆ. ಹೀಗಾಗಿ ರಾಜ್ಯ ಸರ್ಕಾರ ವಿಸರ್ಜನೆಯಾಗಬೇಕು, ರಾಜ್ಯಪಾಲರು ಮಧ್ಯಸ್ಥಿಕೆ ವಹಿಸಬೇಕು ಎಂದು ಆಗ್ರಹಿಸಿದರು.ಇದನ್ನೂ ಓದಿ: ಶಾಲೆಯಲ್ಲಿ ಆಟವಾಡುತ್ತಿದ್ದ ವೇಳೆ ಹೃದಯಾಘಾತ – ವಿದ್ಯಾರ್ಥಿನಿ ಸಾವು