ಯಾದಗಿರಿ: ಸಿಎಂ ಮಾಡುತ್ತಿರುವ ಗ್ರಾಮ ವಾಸ್ತವ್ಯ ದುಂದು ವೆಚ್ಚವಾಗಿದ್ದು, ಜನರ ಗಮನವನ್ನು ತಮ್ಮತ್ತ ಸೆಳೆಯಲು ಮುಖ್ಯಮಂತ್ರಿಗಳು ಗ್ರಾಮ ವಾಸ್ತವ್ಯಕ್ಕೆ ಮುಂದಾಗಿದ್ದಾರೆಂದು ರೈತ ಸಂಘದ ರಾಜ್ಯಾಧ್ಯಕ್ಷ ಕೊಡಿಹಳ್ಳಿ ಚಂದ್ರಶೇಖರ್ ಟೀಕಿಸಿದ್ದಾರೆ.
ಜಿಲ್ಲೆಯಲ್ಲಿ ರೈತ ಸಂಘದ ಕಚೇರಿ ಉದ್ಘಾಟನೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸದ್ಯ ಮೈತ್ರಿ ಸರ್ಕಾರ ರಾಜ್ಯದ ಜನರ ಮನಸ್ಸಿನಲ್ಲಿ ಅಸ್ಥಿರಗೊಂಡಿದೆ. ಹೀಗಾಗಿ ಜನರ ಗಮನ ಸೆಳೆಯಲು ಸಿಎಂ ಈ ಗ್ರಾಮ ವಾಸ್ತವ್ಯಕ್ಕೆ ಮುಂದಾಗಿದ್ದಾರೆ ಎಂದು ಮುಖ್ಯಮಂತ್ರಿಗಳನ್ನು ತರಾಟೆಗೆ ತೆಗೆದುಕೊಂಡರು.
ಸಿಎಂ ವಿಧಾನಸೌಧಲ್ಲಿಯೇ ಕುಳಿತು ಗ್ರಾಮಗಳ ಅಭಿವೃದ್ಧಿಗೆ ಸೂಕ್ತ ಕಾನೂನು ತಂದು ಹಳ್ಳಿಗಳನ್ನು ಅಭಿವೃದ್ಧಿಪಡಿಸಬಹುದು. ಆದರೆ ಗ್ರಾಮ ವಾಸ್ತವ್ಯ ಮಾಡಿ ಜನರ ಮನಸ್ಸು ಬೇರೆ ರೀತಿಗೆ ತಿರುಗಿಸಲು ಸಿಎಂ ಮುಂದಾಗಿದ್ದಾರೆ. ಇನ್ನೂ ರೈತರ ಸಂಪೂರ್ಣ ಸಾಲ ಮನ್ನಾ ಮಾಡದೆ, ಸಿಎಂ ಗ್ರಾಮ ವಾಸ್ತವ್ಯ ಮಾಡುತ್ತಿರುವುದಕ್ಕೆ ನಮ್ಮ ವಿರೋಧವಿದೆ ಎಂದು ಗುಡುಗಿದರು.
ಸಿಎಂ ಜಿಲ್ಲೆಗೆ ಗ್ರಾಮ ವಾಸ್ತವ್ಯಕ್ಕೆ ಬರುವ ದಿನ ರೈತ ಸಂಘದಿಂದ ಉಗ್ರ ಹೋರಾಟ ಮಾಡುತ್ತೇವೆ ಎಂದು ಮುಖ್ಯಮಂತ್ರಿಗಳಿಗೆ ಎಚ್ಚರಿಕೆ ನೀಡಿದರು.
ಬೆಂಗಳೂರು: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ಮುಂದುವರಿಯಲಿದ್ದಾರೆ. ನಾಲ್ಕು ರಾಜ್ಯಗಳ ಚುನಾವಣೆ ಹಾಗೂ ಸಂಘಟನಾತ್ಮಕ ನೋಂದಣಿ ಕಾರ್ಯಗಳ ಹಿನ್ನೆಲೆ ಅಮಿತ್ ಶಾ ಅವರನ್ನೇ ಮುಂದಿನ ಆರು ತಿಂಗಳವರೆಗೆ ಮುಂದುವರಿಸಲು ಬಿಜೆಪಿ ನಾಯಕರು ನಿರ್ಧರಿಸಿದ್ದಾರೆ ಎನ್ನಲಾಗಿದೆ.
ಬಿಜೆಪಿ ಅಧ್ಯಕ್ಷರ ಬದಲಾವಣೆ ಹಿನ್ನೆಲೆ ಇಂದು ಎಲ್ಲ ರಾಜ್ಯಗಳ ಪದಾಧಿಕಾರಿಗಳ ಸಭೆ ಕರೆಯಲಾಗಿತ್ತು. ನವದೆಹಲಿಯ ಕೇಂದ್ರ ಬಿಜೆಪಿ ಕಚೇರಿಯಲ್ಲಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಎಲ್ಲ ರಾಜ್ಯಗಳ ರಾಜ್ಯಾಧ್ಯಕ್ಷರು, ರಾಷ್ಟ್ರೀಯ, ರಾಜ್ಯ ಕಾರ್ಯದರ್ಶಿಗಳು, ರಾಜ್ಯ ಉಸ್ತುವಾರಿಗಳು ಭಾಗಿಯಾಗಿದ್ದರು.
ಬೆಳಗ್ಗೆ 11 ಗಂಟೆಗೆ ಆರಂಭವಾದ ಸಭೆ ಮೂರು ಹಂತದಲ್ಲಿ ಸರಣಿ ಸಭೆಗಳು ನಡೆದವು. ಮೊದಲ ಸಭೆಯಲ್ಲಿ ರಾಷ್ಟ್ರೀಯ ಅಧ್ಯಕ್ಷರ ಬದಲಾವಣೆ ಸಂಬಂಧ ಚರ್ಚೆ ಮಾಡಲಾಯಿತು. ಮುಂದಿನ ಆರು ತಿಂಗಳಲ್ಲಿ ಜಮ್ಮು ಕಾಶ್ಮೀರ, ಮಹಾರಾಷ್ಟ್ರ, ಹರಿಯಾಣ, ಜಾರ್ಖಂಡ್ ನಲ್ಲಿ ವಿಧಾನಸಭೆ ಚುನಾವಣೆ ಹಿನ್ನೆಲೆ ಅಮಿತ್ ಶಾ ಅವರನ್ನೇ ಮುಂದುವರಿಸಲು ತಿರ್ಮಾನಿಸಲಾಯಿತು ಎಂದು ಪಕ್ಷದ ಮೂಲಗಳು ತಿಳಿಸಿವೆ.
ಈ ಸಭೆಗೆ ರಾಜ್ಯದಿಂದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ, ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ ಬಿ.ಎಲ್ ಸಂತೋಷ್, ಶಾಸಕರಾದ ಅರವಿಂದ್ ಲಿಂಬಾವಳಿ, ಸಿ.ಟಿ ರವಿ ಭಾಗಿಯಾಗಿದ್ದರು. ಈ ವೇಳೆ ಲೋಕಸಭೆ ಚುನಾವಣಾ ಸಂಬಂಧಿಸಿದಂತೆ ರಾಜ್ಯದ ವರದಿಯನ್ನು ಅಮಿತ್ ಶಾ ಗೆ ಬಿಎಸ್‍ವೈ ನೀಡಿದರು. ಮೈತ್ರಿ ಅಭ್ಯರ್ಥಿಗಳು ಕಣಕ್ಕಿಳಿದ್ದರಿಂದ ಬಿಜೆಪಿಗೆ ಹೆಚ್ಚಿನ ಲಾಭ ಆಗಿದೆ. ಮೈತ್ರಿ ನಾಯಕರ ಒಳ ಜಗಳ ಹಾಗೂ ಸರ್ಕಾರದ ವೈಫಲ್ಯಗಳನ್ನು ಬಿಜೆಪಿ ನಾಯಕರು ಸಂಘಟನಾತ್ಮಕ ಬಳಸಿಕೊಂಡಿದ್ದು ದೊಡ್ಡಮಟ್ಟದ ಗೆಲುವಿಗೆ ಸಹಕಾರಿಯಾಗಿದೆ. ಅದರಲ್ಲೂ ದಕ್ಷಿಣ ಕರ್ನಾಟಕದಲ್ಲಿ ಬಿಜೆಪಿ ಉತ್ತಮ ಸಾಧನೆ ಮಾಡಿದೆ ಎಂದು ಬಿಎಸ್‍ವೈ ವರದಿಯಲ್ಲಿ ಉಲ್ಲೇಖಿಸಿದ್ದಾರೆ ಎನ್ನಲಾಗಿದೆ.
ಇನ್ನು ರಾಜ್ಯಾಧ್ಯಕ್ಷರ ಬದಲಾವಣೆ ಯಾವುದೇ ಚರ್ಚೆ ನಡೆದಿಲ್ಲ ಎನ್ನಲಾಗಿದ್ದು, ಸರಣಿ ಸಭೆ ಹಿನ್ನೆಲೆ ಯಡಿಯೂರಪ್ಪ ಅವರೊಂದಿಗೆ ಪ್ರತ್ಯೇಕ ಸಭೆಗೆ ಅಮಿತ್ ಶಾ ಸಮಯ ನೀಡಲಿಲ್ಲ. ಎರಡನೇ ಸಭೆಯಲ್ಲಿ ಪಕ್ಷದ ಮುಂದಿನ ಬೆಳಗಣಿಗೆ ನಿಟ್ಟಿನಲ್ಲಿ ಅಮಿತ್ ಶಾ ಬಿಜೆಪಿ ನಾಯಕರಿಗೆ ಸಲಹೆಗಳನ್ನು ನೀಡಿದ್ದು, ಮುಂದಿನ ಆರು ತಿಂಗಳಲ್ಲಿ 15% ಪಕ್ಷದ ಸದಸ್ಯತ್ವ ಹೆಚ್ಚಿಸುವಂತೆ ಸೂಚನೆ ನೀಡಿದ್ದಾರೆ ಮೂಲಗಳು ತಿಳಿಸಿವೆ.
ಹುಬ್ಬಳ್ಳಿ: ಜೆಡಿಸ್‍ನ ರಾಜ್ಯಾಧ್ಯಕ್ಷ ಎಚ್. ವಿಶ್ವನಾಥ್ ಅವರನ್ನು ಸಮನ್ವಯ ಸಮಿತಿಗೆ ತೆಗೆದುಕೊಳ್ಳಲು ಮಾಜಿ ಸಿಎಂ ಸಿದ್ದರಾಮಯ್ಯನವರಿಗೆ ಇಷ್ಟವಿರಲಿಲ್ಲ. ಇದರ ಬಗ್ಗೆ ವಿಶ್ವನಾಥ್ ಅವರಿಗೆ ಬೇಸರವಿತ್ತು. ಅದಕ್ಕೆ ಅವರು ರಾಜೀನಾಮೆ ನೀಡಿರಬಹುದು ಎಂದು ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಹೇಳಿದ್ದಾರೆ.
ಜಿಲ್ಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಶ್ವನಾಥ್ ಈ ವಿಚಾರದ ಬಗ್ಗೆ ಜೆಡಿಸ್ ವರಿಷ್ಠ ದೇವೇಗೌಡರ ಗಮನಕ್ಕೆ ತಂದಿದ್ದರು. ಆದರೆ ಅವರು ಸರಿಯಾಗಿ ಸ್ಪಂದಿಸಿಲ್ಲ ಎಂಬ ಬೇಸರ ವಿಶ್ವನಾಥ್ ಅವರಿಗಿತ್ತು. ಅದ್ದರಿಂದ ರಾಜೀನಾಮೆ ನೀಡಿರಬಹುದು. ಎಚ್.ವಿಶ್ವನಾಥ್ ರಾಜೀನಾಮೆ ನೀಡಿದ್ದು ಸರಿಯಲ್ಲ ಎಂದು ಹೇಳಿದರು.
ವಿಶ್ವನಾಥ್ ನನ್ನ ಬಳಿಯೂ ಸಿದ್ದರಾಮಯ್ಯನ ಬಗ್ಗೆ ಇದ್ದ ಅಸಮಾಧಾನ ವ್ಯಕ್ತಪಡಿಸಿದ್ದರು. ಅವರು ಇನ್ನು ಸ್ವಲ್ಪ ದಿನ ಜೆಡಿಎಸ್‍ನ ರಾಜ್ಯಾಧ್ಯಕ್ಷರಾಗಿ ಮುಂದುವರೆಯಬೇಕಿತ್ತು. ನಿನ್ನೆ ವಿಶ್ವನಾಥ್‍ಗೆ ಕರೆ ಮಾಡಿ ಮನವೊಲಿಸಲು ಯತ್ನಿಸಿದ್ದೆ. ಆದರೆ ವಿಶ್ವನಾಥ್ ಸಂಪರ್ಕಕ್ಕೆ ಸಿಗಲಿಲ್ಲ. ಅವರು ರಾಜೀನಾಮೆ ನೀಡಿದ್ದು ಸರಿಯಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಇದೇ ವೇಳೆ ಮೈತ್ರಿ ಸರ್ಕಾರದ ಬಗ್ಗೆ ಮಾತನಾಡಿದ ಬಸವರಾಜ್ ಹೊರಟ್ಟಿ, ಸರ್ಕಾರದ ರಚನೆ ವೇಳೆ ಹೇಳಿದಂತೆ ಕಾಂಗ್ರೆಸ್ ನಡೆದುಕೊಂಡಿಲ್ಲ. ವಿಧಾನಪರಿಷತ್ ಸಭಾಪತಿ ಸ್ಥಾನ ಜೆಡಿಎಸ್‍ಗೆ ನೀಡುವುದಾಗಿ ಹೇಳಿದ್ದರು. ಆದರೆ ಅಂತಿಮ ಕ್ಷಣದಲ್ಲಿ ಕಾಂಗ್ರೆಸ್ ಸಭಾಪತಿ ಸ್ಥಾನ ತೆಗೆದುಕೊಂಡಿತು. ಅಷ್ಟೇ ಅಲ್ಲದೇ ಸಮನ್ವಯದ ಸಮಿತಿಯಲ್ಲಿ ಎರಡು ಪಕ್ಷದ ರಾಜ್ಯಾಧ್ಯಕ್ಷರು ಇರಬೇಕಿತ್ತು. ಎಲ್ಲ ಹಂತದಲ್ಲೂ ಸಿದ್ದರಾಮಯ್ಯ ಸರ್ಕಾರದ ಮೇಲೆ ಹಿಡಿತ ಸಾಧಿಸುತ್ತಿದ್ದಾರೆ ಅದು ಮೈತ್ರಿ ಸರ್ಕಾರಕ್ಕೆ ಒಳ್ಳೆಯದಲ್ಲ ಎಂದರು.
ನೀವು ರಾಜ್ಯಾಧ್ಯಕ್ಷರು ಆಗುತ್ತಿರಾ ಎಂದು ಕೇಳಿದಾಗ, ನಾನು ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಲ್ಲ. ಅಧ್ಯಕ್ಷ ಸ್ಥಾನ ನಿರ್ವಹಿಸುವ ಶಕ್ತಿಯು ನನಲಿಲ್ಲ. ಬಂಡೆಪ್ಪ ಕಾಶೆಂಪೂರ್ ಅಂತವರು ಆ ಸ್ಥಾನಕ್ಕೆ ಸೂಕ್ತ ಎಂದು ಅವರು ಆಶಯ ವ್ಯಕ್ತಪಡಿಸಿದರು.
ಬೆಂಗಳೂರು: ಆಪರೇಷನ್ ಕಮಲವನ್ನು ಬಿಜೆಪಿ ಮಾಡುತ್ತಿರುವುದು ಸತ್ಯ. ಈ ಬಗ್ಗೆ ಸಮಯ ಸಂದರ್ಭ ಬಂದಾಗ ರಿವೀಲ್ ಮಾಡ್ತೀನಿ ಅಂದಿದ್ದ ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ಅವರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರ ಕಿರಿಯ ಪುತ್ರ ಬಿ.ವೈ ವಿಜಯೇಂದ್ರ ಸವಾಲು ಹಾಕಿದ್ದಾರೆ.
ಈ ಕುರಿತು ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಏನಿದೆಯೋ ಅದನ್ನು ಬಿಡುಗಡೆ ಮಾಡಲಿ. ತುಂಬಾ ಸಂತೋಷ. ಅದನ್ನು ಯಾರೂ ಆಕ್ಷೇಪಣೆ ಮಾಡುತ್ತಿಲ್ಲ. ಸಮಯ ಸಂದರ್ಭ ಯಾಕೆ ಕಾಯ್ತಾರೆ. ಅವರು ಈಗಲೇ ಬಿಡುಗಡೆ ಮಾಡಲಿ. ನಮ್ಮದು ಯಾವುದೇ ರೀತಿಯ ಅಭ್ಯಂತರವಿಲ್ಲ ಅಂತ ಹೇಳಿದ್ರು.
ವಿನಾಕರಾಣ ಯಡಿಯೂರಪ್ಪ, ಬಿಜೆಪಿ ಶಾಸಕರ ವಿರುದ್ಧ ಆರೋಪ ಮಾಡುವುದು ಸರಿಯಲ್ಲ. ನಿಮ್ಮ ಸರ್ಕಾರವನ್ನು ನೀವು ಸರಿಯಾದ ದಾರಿಯಲ್ಲಿ ತಗೆದುಕೊಂಡು ಹೋಗಿದ್ದೆ ಆದ್ರೆ ಸರ್ಕಾರವನ್ನು ಬೀಳಿಸುವಂತಹ ಕೆಲಸ ಬರುವುದಿಲ್ಲ ಅಂದ್ರು. ಇದನ್ನೂ ಓದಿ: ಬಿಜೆಪಿಯವರ ಆಪರೇಷನ್ ಕಮಲಕ್ಕೆ ಔಷಧಿ ನಮ್ಮ ಬಳಿಯಿದೆ – ಡಿಕೆಶಿ
ಸಮ್ಮಿಶ್ರ ಸರ್ಕಾರ ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರೋದು ಸಂತಸದ ವಿಚಾರ. ಗುಪ್ತಚರ ಇಲಾಖೆ ಅವರ ಹತ್ತಿರವೇ ಇದೆ ಅನ್ನೋದು ಇಡೀ ರಾಜ್ಯ ಹಾಗೂ ದೇಶಕ್ಕೆ ಗೊತ್ತಿದೆ. ಯಡಿಯೂರಪ್ಪ ಅವರಾಗಲಿ ಅಥವಾ ಭಾರತೀಯ ಜನತಾ ಪಕ್ಷದ ಯಾರನ್ನೇ ಆಗಲಿ ಈ ಸಮ್ಮಿಶ್ರ ಸರ್ಕಾರವನ್ನು ಅಸ್ಥಿರಗೊಳಿಸುವ ಕೆಲಸವನ್ನು ನಾವ್ಯಾರು ಮಾಡುತ್ತಿಲ್ಲ. ಅವರ ಪಕ್ಷದಲ್ಲಿರುವ ಅತೃಪ್ತ ಶಾಸಕರು, ರಾಜ್ಯದಲ್ಲಿ ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ. ತಮ್ಮ ಸ್ವ-ಕ್ಷೇತ್ರದಲ್ಲಿ ಯಾವುದೇ ಕೆಲಸಗಳು ಆಗುತ್ತಿಲ್ಲ ಅಂತ ಹೇಳುತ್ತಿದ್ದಾರೆ. ಆದ್ರೆ ಇವರುಗಳಿಗೂ ಭಾರತೀಯ ಜನತಾ ಪಾರ್ಟಿಗೂ ಯಾವುದೇ ಸಂಬಂಧವಿಲ್ಲ ಅಂತ ಸ್ಪಷ್ಟಪಡಿಸಿದ್ರು.
ಕಾಂಗ್ರೆಸ್, ಜೆಡಿಎಸ್‍ನ ಹಿರಿಯ ಸಚಿವರು ಬಿಜೆಪಿ ಪಿತೂರಿ ನಡೆಸುತ್ತಿದೆ ಅಂತ ಹೇಳುತ್ತಿದ್ದಾರೆ. ಇವೆಲ್ಲವೂ ಸತ್ಯಕ್ಕೆ ದೂರವಾದುದ್ದಾಗಿದೆ. 2 ಪಕ್ಷದವರು ಕಟ್ಟು ಕತೆಗಳನ್ನು ಸೃಷ್ಟಿಸಿ ರಾಜ್ಯದ ಜನರಿಗೆ ತಪ್ಪು ಸಂದೇಶವನ್ನು ನೀಡುವ ಪ್ರಯತ್ನವನ್ನು ಮಾಡುತ್ತಿದೆ ಅಂತ ರಾಜ್ಯ ಸರ್ಕಾರದ ವಿರುದ್ಧ ಗರಂ ಆದ್ರು.
ಚಿತ್ರದುರ್ಗ: ಕಾಂಗ್ರೆಸ್ ಹಾಗೂ ಜೆಡಿಎಸ್ ಅಧ್ಯಕ್ಷರು ಸಮಿತಿಯಲ್ಲಿದ್ದರೆ ಮಾತ್ರ ಸಮನ್ವಯ ಸಮಿತಿ ಪರಿಪೂರ್ಣ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ವಿಶ್ವನಾಥ್ ಹೇಳಿದ್ದಾರೆ.
ನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಒಬ್ಬೊಬ್ಬರ ಜಾಯಮಾನ ಒಂದೊಂದು ಥರ ಇರುತ್ತೆ. ಸಿದ್ದರಾಮಯ್ಯ ಸಿದ್ದರಾಮಯ್ಯನೇ, ವಿಶ್ವನಾಥ ವಿಶ್ವನಾಥನೇ. ಎರಡೂ ಪಕ್ಷದ ಅಧ್ಯಕ್ಷರು ಸಮಿತಿಯಲ್ಲಿ ಇಲ್ಲ ಅಂದರೆ ಏನು? ಸಿದ್ದರಾಮಯ್ಯನವರೇ ಸಮನ್ವಯ ಸಮಿತಿ ಅಧ್ಯಕ್ಷರು. ಅವರೇ ಸಮ್ಮಿಶ್ರ ಸರ್ಕಾರ ಅಸ್ಥಿರಗೊಳಿಸುತ್ತಾರೆ ಅನ್ನುವುದು ಅಸಾಧ್ಯ ಎಂದು ಸ್ಪಷ್ಟನೆ ನೀಡಿದರು.
ಬಿಜೆಪಿಯವರು ಜೆಡಿಎಸ್ ಹಾಗೂ ಕಾಂಗ್ರೆಸ್ಸಿನ ಮೈತ್ರಿ ಸರ್ಕಾರವನ್ನು ಅಪವಿತ್ರ ಮೈತ್ರಿ ಎಂಬಂತೆ ಬಿಂಬಿಸುತ್ತಿದ್ದಾರೆ. ಈ ಹಿಂದೆ ಬಿಜೆಪಿಯವರು ಸಹ ಅಪವಿತ್ರ ಮೈತ್ರಿ ಮಾಡಿಕೊಂಡಿರಲಿಲ್ಲವೇ? ಬಿಜೆಪಿಯವರು ವಿರೋಧ ಪಕ್ಷದ ಜವಾಬ್ದಾರಿ ನಿಭಾಯಿಸುವಲ್ಲಿ ವಿಫಲರಾಗಿದ್ದಾರೆ. ಪ್ರವಾಹ ಪೀಡಿತ ಕೊಡಗಿಗೆ ಅವರು ಏಕೆ ಹೋಗಿಲ್ಲ. ಕೇವಲ ರಾಜಕೀಯ ಗೊಂದಲವನ್ನು ಸೃಷ್ಟಿಸುತ್ತಿದ್ದಾರೆ. ಬಿಜೆಪಿಯವರು ಸುಳ್ಳಿನ ಸೃಷ್ಟಿಕರ್ತರು. ಇದನ್ನೇ ಕೆಲವು ಮಾಧ್ಯಮಗಳು ದೊಡ್ಡದಾಗಿ ತೋರಿಸುತ್ತಿವೆ ಎಂದರು.
ರಾಷ್ಟ್ರೀಯ ಪಕ್ಷಗಳಿಂದ ಸಾಲಮನ್ನಾದಂತಹ ತೀರ್ಮಾನ ಅಸಾಧ್ಯ. ಪ್ರಾದೇಶಿಕ ಪಕ್ಷವಾದ್ದರಿಂದ ಜನರ ಸಮಸ್ಯೆಯನ್ನು ಆಲಿಸಿ ಸಾಲಮನ್ನಾ ನಿರ್ಧಾರ ಮಾಡಿದ್ದೇವೆ. ರಾಜ್ಯದಲ್ಲಿ ಪ್ರಾದೇಶಿಕ ಪಕ್ಷದ ಅಗತ್ಯತೆ ತುಂಬಾ ಇದೆ. ಯಾವುದೇ ರಾಷ್ಟ್ರೀಯ ಪಕ್ಷಗಳು ಏನೇ ನಿರ್ಧಾರ ತೆಗೆದುಕೊಳ್ಳಬೇಕೆಂದರೂ ಹೈಕಮಾಂಡ್ ಮುಖ ನೋಡಬೇಕಾಗುತ್ತದೆ. ಕಾಂಗ್ರೆಸ್ ಬೆಂಬಲಿತ ಜೆಡಿಎಸ್ ಆಡಳಿತದ ಸಮ್ಮಿಶ್ರ ಸರ್ಕಾರ ಸಾಲಮನ್ನಾ ಘೋಷಣೆಮಾಡಿದೆ. ಈ ಮೊದಲು ರಾಜಕೀಯ ಗೊಂದಲಗಳು ಇದ್ದದ್ದು ನಿಜ. ಆದರೆ ಈಗ ರಾಜಕೀಯ ಗೊಂದಲಗಳ ಮೋಡ ಸರಿದಿದೆ. ಇನ್ನು ಹತ್ತು ದಿನಗಳಲ್ಲಿ ಜೆಡಿಎಸ್ ರಾಜ್ಯ, ಜಿಲ್ಲಾ ಮತ್ತು ಬ್ಲಾಕ್ ಸಮಿತಿಗಳನ್ನು ಪುನರ್ ರಚನೆ ಮಾಡುವುದಾಗಿ ತಿಳಿಸಿದರು.
ಶಾಸಕ ಸುಧಾಕರ್ ಹಾಗೂ ನಾಗರಾಜ್ ಎಲ್ಲೂ ಹೋಗಲ್ಲ. ಬಿಜೆಪಿ ನಾಯಕರು ತುಂಬಾ ಅವಸರದಲ್ಲಿದ್ದು, ಅವರಿಗೆ ಲೋಕಸಭಾ ಚುನಾವಣೆಯೊಳಗೆ ಈ ಸರ್ಕಾರ ಪತನ ಮಾಡಬೇಕೆಂದು ತಂತ್ರ ರೂಪಿಸುತ್ತಿದ್ದಾರೆ ಎಂದು ಹೇಳಿದರು.
ನವದೆಹಲಿ: ಎಚ್ ಡಿ ಕುಮಾರಸ್ವಾಮಿ ಸರ್ಕಾರ’ ಬೀಳಿಸಲು ಬಿಜೆಪಿಯಿಂದ ಮತ್ತೊಂದು ಪ್ಲಾನ್ ಮಾಡ್ತಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರಿಗೆ ಕರೆ ಮಾಡಿ ಕೆಲವೊಂದು ಸೂಚನೆಗಳನ್ನು ನೀಡಿದ್ದಾರೆ ಎನ್ನಲಾಗಿದೆ.
ಬಿಎಸ್‍ವೈ ಅವರಿಗೆ ದೂರವಾಣಿ ಕರೆಮಾಡಿರುವ ಶಾ, ಆಪರೇಷನ್ ಕಮಲದ ಬಗ್ಗೆ ಮಾತುಕತೆ ನಡೆಸಿದ್ದಾರೆ. ಕುಮಾರಸ್ವಾಮಿ ಸರ್ಕಾರ ಬೀಳಿಸಲು ಶಾಸಕರನ್ನು ಸೆಳೆಯೋ ಬಗ್ಗೆ ನಾಲ್ಕೂವರೆ ನಿಮಿಷ ಚರ್ಚೆ ಮಾಡಿದ್ದಾರೆ. `ಆಪರೇಷನ್ ಕಮಲ’ ಬಗ್ಗೆ ಯಾವ ಬಿಜೆಪಿ ಮುಖಂಡರೂ ಬಹಿರಂಗ ಹೇಳಿಕೆ ಕೊಡಬಾರದು. ಏನೇ ತಂತ್ರಗಾರಿಕೆ ಇದ್ದರೂ ಎಲ್ಲವೂ ಒಳಗೊಳಗೇ ನಡೆಯಬೇಕು ಅಂತ ಅಮಿತ್ ಶಾ ಅವರು ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ನಾಲ್ಕು ಹಂತಗಳಲ್ಲಿ ನಡೆಯಲಿದೆ ಆಪರೇಷನ್ ಕಮಲ..?
`ಆಪರೇಷನ್ ಕಮಲ’ವನ್ನು ನಾನು, ರಾಮುಲು ಇಬ್ಬರೂ ಸೇರಿ ಆಪರೇಟ್ ಮಾಡುತ್ತಿದ್ದೇವೆ. ಆದ್ರೆ ಆಪರೇಷನ್ ಕಮಲ ಮಾಡ್ತಿಲ್ಲ ಅಂತ ಬಹಿರಂಗವಾಗಿ ಬಿಂಬಿಸಿಕೊಳ್ತಿದ್ದೇವೆ. ಮಾಜಿ ಸಿಎಂ ಸಿದ್ದರಾಮಯ್ಯ ವಿದೇಶ ಪ್ರವಾಸದಿಂದ ವಾಪಸ್ ಬರಲಿ. ಪ್ರವಾಸದಿಂದ ಸಿದ್ದರಾಮಯ್ಯ ವಾಪಸ್ ಆದ ಬಳಿಕ ಸೋಮವಾರದಷ್ಟೊತ್ತಿಗೆ ಎಲ್ಲವೂ ಸ್ಪಷ್ಟ ಆಗುತ್ತದೆ. `ಆಪರೇಷನ್ ಕಮಲ’ದ ಪ್ರತಿ ಮಾಹಿತಿಯನ್ನು ನಾವು ನಿಮಗೆ ಕೊಡ್ತಾ ಇರುತ್ತೇವೆ ಅಂತ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಶಾಗೆ ಮಾಜಿ ಸಿಎಂ ಯಡಿಯೂರಪ್ಪ ಉತ್ತರಿಸಿದ್ದಾರೆ ಅಂತ ಪಕ್ಷದ ಮೂಲಗಳಿಂದ ಪಬ್ಲಿಕ್ ಟಿವಿಗೆ ಮಾಹಿತಿ ಲಭ್ಯವಾಗಿದೆ. ಇದನ್ನು ಓದಿ: ಆಪರೇಷನ್ ಕಮಲಕ್ಕೆ ಗಣಿ ಧನಿ ರೆಡ್ಡಿಯಿಂದ 300 ಕೋಟಿ ಬಂಡವಾಳ-ಹೈಕಮಾಂಡ್ ಮುಂದಿಟ್ರು ಒಂದು ಷರತ್ತು!!
ಮೈಸೂರು: ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ಹುಣಸೂರು ಕ್ಷೇತ್ರದ ಶಾಸಕ ಎಚ್.ವಿಶ್ವನಾಥ್ ಕೆಎಸ್‌ಆರ್‌ಟಿಸಿಯ ಸುವರ್ಣ ಸಾರಿಗೆ ಬಸ್ಸಿನಲ್ಲಿ ಪ್ರಯಾಣಿಸುವ ಮೂಲಕ ಸರಳತೆ ಮೆರೆದಿದ್ದಾರೆ.
ಹುಣಸೂರು ತಾಲೂಕು ಪ್ರವಾಸದಲ್ಲಿರುವ ಅವರು, ಕಾರ್ಯನಿಮಿತ್ತ ಹುಣಸೂರಿನ ಮುಳ್ಳೂರಿನಿಂದ ರಾಯನಹಳ್ಳಿಗೆ ತೆರಳುವ ಸಂದರ್ಭದಲ್ಲಿ ತಮ್ಮ ಐಶಾರಾಮಿ ಕಾರಿನ ಬದಲಿಗೆ ಕೆಎಸ್‌ಆರ್‌ಟಿಸಿಯ ಸುವರ್ಣ ಸಾರಿಗೆ ಬಸ್ಸಿನಲ್ಲೇ ಪ್ರಯಾಣ ಮಾಡಿದರು. ಪ್ರಯಾಣದ ವೇಳೆ ಸ್ವತಃ ಟಿಕೆಟ್ ಪಡೆದು ಸಾಮಾನ್ಯರಂತೆ ಪ್ರಯಾಣ ಬೆಳೆಸಿದ್ದರು.
ಈ ವೇಳೆ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರ ಕುಂದು-ಕೊರತೆಗಳನ್ನು ಆಲಿಸಿದರು. ಶಾಸಕರ ಸರಳತೆಗೆ ಸಂತೋಷ ವ್ಯಕ್ತಪಡಿಸಿದ ಪ್ರಯಾಣಿಕರು, ಎಲ್ಲಾ ಶಾಸಕರು ಎಚ್.ವಿಶ್ವನಾಥ್ ಹಾಗೆ ಜನಸಾಮಾನ್ಯರೊಂದಿಗೆ ಬೆರೆತರೆ ಸಮಸ್ಯೆಗಳನ್ನು ಬಗೆಹರಿಸುವುದು ಸುಲಭವಾಗುತ್ತದೆ ಎಂದು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.
ಅಧಿಕಾರ ಸಿಕ್ಕ ಕೂಡಲೇ ರಾಜಕಾರಣಿಗಳು ಯಾವ ರೀತಿ ತಮ್ಮ ದರ್ಪ ತೋರುತ್ತಾರೆ ಎನ್ನುವುದನ್ನು ಎಲ್ಲರೂ ನೋಡಿರುತ್ತಾರೆ. ಆದರೆ ಜನಸಾಮಾನ್ಯರಂತೆ ಸರ್ಕಾರಿ ಬಸ್ಸಿನಲ್ಲಿ ಪ್ರಯಾಣಿಸಿ ತಮ್ಮ ಸರಳೆಯನ್ನು ಎಚ್.ವಿಶ್ವನಾಥ್ ತೋರಿಸಿಕೊಟ್ಟಿದ್ದಾರೆ ಎಂದು ಜನ ಶ್ಲಾಘಿಸಿದ್ದಾರೆ.
ಬಾಗಲಕೋಟೆ: ಸಮ್ಮಿಶ್ರ ಸರ್ಕಾರ ನೂರು ದಿನಗಳಲ್ಲಿ ವರ್ಗಾವಣೆ ದಂಧೆಯನ್ನು ಬಿಟ್ಟು ಬೇರೆ ಯಾವುದೇ ಅಭಿವೃದ್ಧಿ ಕೆಲಸಗಳನ್ನು ಮಾಡಿಲ್ಲವೆಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ವಿರೋಧ ಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ಮುಧೋಳ ಪಟ್ಟಣದಲ್ಲಿ ಶಾಸಕ ಮುರುಗೇಶ್ ನಿರಾಣಿಯವರ 53 ನೇ ಹುಟ್ಟುಹಬ್ಬ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರಿಗೆ ಶುಭಾಶಯ ಕೋರಿ ಮಾತನಾಡಿದ ಅವರು, ನನ್ನ ಪ್ರಕಾರ ಜೆಡಿಎಸ್ ಹಾಗೂ ಕಾಂಗ್ರೆಸ್ಸಿನ ಸಮ್ಮಿಶ್ರ ಸರ್ಕಾರ ಬಹಳ ದಿನ ಉಳಿಯೋದಿಲ್ಲ. ಸರ್ಕಾರ ಕೇವಲ ವರ್ಗಾವಣೆಯ ದಂಧೆಯಲ್ಲಿ ತೊಡಗಿಕೊಂಡಿದೆ. ಯಾವುದೇ ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಿಲ್ಲ. ಸರ್ಕಾರ ಅಧಿಕಾರಕ್ಕೆ ಬಂದು ನೂರು ದಿನ ಪೂರೈಸಿದ್ದರು ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಮಾಡಿಲ್ಲವೆಂದು ಕಿಡಿಕಾರಿದರು.
ಕುಮಾರಸ್ವಾಮಿ ಸರ್ಕಾರ ಬದುಕಿದ್ದು ಸತ್ತಾಂತಾಗಿದೆ. ಸರ್ಕಾರದಲ್ಲಿ ವಸೂಲಿ ಬಾಜಿ ದಂಧೆ ನಡೆಯುತ್ತಿದೆ. ಸಾಲಮನ್ನಾ ಬಗ್ಗೆ ಸಿಎಂಗೆ ಸ್ಪಷ್ಟತೆ ಇಲ್ಲ. ಅವರು ದಿನಕ್ಕೊಂದು ಹೇಳಿಕೆ ನೀಡುತ್ತಾ ಪ್ರಚಾರದಲ್ಲಿದ್ದಾರೆ ಹೊರತು, ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಮಾಡಲು ಯತ್ನಿಸುತ್ತಿಲ್ಲ. ಅಧಿಕಾರಕ್ಕೆ ಬಂದು ನೂರು ದಿನವಾದರೂ, ಒಂದು ದಿನ ಸಹ ಉತ್ತರ ಕರ್ನಾಟಕದ ಭಾಗದಲ್ಲಿ ಪ್ರವಾಸ ಮಾಡಿದ್ದಾರಾ ಎಂದು ಪ್ರಶ್ನಿಸಿದರು.
ಯಡಿಯೂರಪ್ಪ ಸಿಎಂ ಆಗುತ್ತಾರೆ ಅಂತ ಕನಸು ಕಾಣುತ್ತಿದ್ದಾರೆ ಎನ್ನುವ ಸಿದ್ದರಾಮಯ್ಯನವರ ಹೇಳಿಕೆಗೆ ತಿರುಗೇಟು ನೀಡಿದ ಅವರು, ಸಿದ್ದರಾಮಯ್ಯನವರು ಹಗಲುಗನಸು ಕಾಣುತ್ತಿದ್ದಾರೋ, ಇಲ್ಲ ಯಡಿಯೂರಪ್ಪ ಹಗಲುಗನಸು ಕಾಣುತ್ತಿದ್ದಾರೋ ಎಂಬುದು ಸದ್ಯದಲ್ಲೇ ಗೊತ್ತಾಗಲಿದೆ. ಅಲ್ಲದೇ ನಮ್ಮ ಪಕ್ಷದ ಯಾವುದೇ ಮುಖಂಡರು ಯಡಿಯೂರಪ್ಪ ಮತ್ತೆ ಮುಖ್ಯಮಂತ್ರಿಯಾಗುತ್ತಾರೆ ಎನ್ನುವ ಹೇಳಿಕೆಗಳನ್ನು ಹೇಳಬೇಡಿ ಎಂದು ವಿನಂತಿಸಿಕೊಂಡರು.
ಸಿಎಂ ಕುಮಾರಸ್ವಾಮಿಯವರು ದೇವಸ್ಥಾನಗಳಿಗೆ ತೆರಳುತ್ತಿರುವುದಕ್ಕೆ ನನ್ನ ಅಭ್ಯಂತರವಿಲ್ಲ. ಆದರೆ ಸಂಕಷ್ಟದಲ್ಲಿರುವ ರೈತರ ಹಾಗೂ ಸಂತ್ರಸ್ತರ ನೋವುಗಳನ್ನು ಕೇಳಬೇಕು. ಇವರ ಸರ್ಕಾರದಲ್ಲಿ ಯಾವುದೂ ಸರಿಯಿಲ್ಲ. ಪರಸ್ಪರ ಕಚ್ಚಾಟ ಶುರವಾಗಿದೆ. ಹೀಗಾಗಿ ಸಿದ್ದರಾಮಯ್ಯನವರು ಕಾಂಗ್ರೆಸ್ಸಿನ ಕೆಲವು ಶಾಸಕರಿಂದ ತಾವೇ ಮುಂದಿನ ಸಿಎಂ ಎಂಬ ಹೇಳಿಕೆಗಳನ್ನು ಹೇಳಿಸುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು. ಇದನ್ನೂ ಓದಿ: ಸಮ್ಮಿಶ್ರ ಸರ್ಕಾರ ನೀರಿನ ಮೇಲೆ ಗುಳ್ಳೆ ಇದ್ದಂತೆ: ಜಗದೀಶ್ ಶೆಟ್ಟರ್
ಸರ್ಕಾರದಲ್ಲಿ ಕಚ್ಚಾಟ ಇಲ್ಲದಿದ್ದರೆ, ಪುನಃ ಸಂಪುಟ ವಿಸ್ತರಣೆ ಯಾಕೆ ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದ ಅವರು, ಈ ಸರ್ಕಾರ ಬಹಳ ದಿನ ಉಳಿಯಲ್ಲ ಅಂತ ನಾನು ಹೇಳುತ್ತಿಲ್ಲ. ಕಾಂಗ್ರೆಸ್ ಹಾಗೂ ಜೆಡಿಎಸ್‍ನ ಶಾಸಕರೇ ಹೇಳುತ್ತಿದ್ದಾರೆ. ಅಲ್ಲದೇ ಇವರ ಸರ್ಕಾರವು ಪ್ರಮುಖ ನಾಯಕರ ಫೋನ್ ಕದ್ದಾಲಿಕೆ ನಡೆಸುತ್ತಿರುವುದು ನೂರಕ್ಕೆ ನೂರರಷ್ಟು ಸತ್ಯವಾಗಿದೆ. ಈ ವಿಚಾರದ ಬಗ್ಗೆ ಗಂಭೀರವಾಗಿ ಚರ್ಚೆ ನಡೆಯುತ್ತಿದೆ ಎಂದು ತಿಳಿಸಿದರು.
ಲೋಕಸಭಾ ಚುನಾವಣೆಯಲ್ಲಿ ಕೊಪ್ಪಳದಿಂದ ಸಿದ್ದರಾಮಯ್ಯ ಸ್ಪರ್ಧೆವಿಚಾರ ಪ್ರಸ್ತಾಪಿಸಿದಾಗ, ಅವರು ಎಲ್ಲಿಂದಲಾದರೂ ಸ್ಪರ್ಧಿಸಲಿ, ನಮಗೇನು ವ್ಯತ್ಯಾಸವಾಗಲ್ಲ. ಎಲ್ಲಾ ಕಡೆ ಪ್ರಧಾನಿ ನರೇಂದ್ರ ಮೋದಿಯವರ ವರ್ಚಸ್ಸು ಇನ್ನೂ ಹೆಚ್ಚಾಗಿದೆ. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಹೆಚ್ಚು ಸ್ಥಾನ ಗೆಲ್ಲಲಿದೆ. ಅಲ್ಲದೇ ಈಗ ನಡೆದಿರುವ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ರಾಜ್ಯದ ಶೇ 50 ಕ್ಕೂ ಹೆಚ್ಚು ಕಡೆ ನಮ್ಮ ಪಕ್ಷ ಅಧಿಕಾರ ಹಿಡಿಯಲಿದೆ ಎಂದು ಭವಿಷ್ಯ ನುಡಿದರು.
ಮೈಸೂರು: ಜೆಡಿಎಸ್ ಹಾಗೂ ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿಗೆ ಬರಬೇಡಿ ಎನ್ನಲು ಯಾರಿಂದಲೂ ಸಾಧ್ಯವಿಲ್ಲವೆಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈತ್ರಿ ಸರ್ಕಾರದಲ್ಲಿ ಇರುವುದು ಎರಡು ಪಕ್ಷಗಳು, ಒಂದು ಜೆಡಿಎಸ್ ಮತ್ತೊಂದು ಕಾಂಗ್ರೆಸ್. ಎರಡೂ ಪಕ್ಷಗಳ ಸಾಮಾನ್ಯ ಕಾರ್ಯಕ್ರಮಗಳನ್ನು ಸಮನ್ವಯಮಾಡುವ ಸಲುವಾಗಿಯೇ ಸಮಿತಿ ರಚನೆಯಾಗಿದೆ. ಈ ಸಭೆಗೆ ಎರಡೂ ಪಕ್ಷಗಳ ರಾಜ್ಯಾಧ್ಯಕ್ಷರು ಇರಲೇಬೇಕು. ಸಭೆಯಲ್ಲಿ ಪ್ರಮುಖವಾಗಿ ನಾನು ಹಾಗೂ ಗುಂಡುರಾವ್ ಇದ್ದರೆ ಮಾತ್ರ ಸಮನ್ವಯ ಸಮಿತಿ ಪೂರ್ಣವಾಗೋದು. ನನ್ನನ್ನು ಸಮಿತಿಗೆ ಬರಬೇಡಿ ಎನ್ನುವುದಕ್ಕೆ ಯಾರಿಂದಲೂ ಸಾಧ್ಯವಿಲ್ಲ ಎಂದು ತಿಳಿಸಿದರು.
ರಾಜ್ಯದಲ್ಲಿ ಅತಿವೃಷ್ಟಿ ಹಾಗೂ ಅನಾವೃಷ್ಟಿ ಸೃಷ್ಟಿಯಾಗಿರುವ ಕಾರಣ ಕೂಡಲೇ ಸಮನ್ವಯ ಸಮಿತಿ ಸಭೆಯನ್ನು ಕರೆಯಬೇಕು. ಸಭೆಯಲ್ಲಿ ಪ್ರಮುಖವಾಗಿ ಕೊಡಗು ಜಿಲ್ಲೆಯ ಪ್ರವಾಹ ಪರಿಸ್ಥಿತಿಯ ಬಗ್ಗೆ ಚರ್ಚೆ ನಡೆಸಬೇಕು. ಹೀಗಾಗಿ ಸಿದ್ದರಾಮಯ್ಯನವರಿಗೆ ಸಭೆ ಕರೆಯುವಂತೆ ಕೇಳುತ್ತಿದ್ದೇನೆ. ಆದರೆ ಅವರು ಬ್ಯುಸಿಯಾಗಿರುವ ಕಾರಣ ಸಮನ್ವಯ ಸಮಿತಿ ಸಭೆಯನ್ನು ಕರೆಯುತ್ತಿಲ್ಲ ಎಂದು ಹೇಳಿದರು.
ಇದೇ ವೇಳೆ ಮೈತ್ರಿ ಸರ್ಕಾರದ ಬಗ್ಗೆ ಮಾತನಾಡಿದ ಅವರು, ಸತ್ಯವಾಗಿ ಹೇಳಬೇಕೆಂದರೆ ಮೈತ್ರಿ ಸರ್ಕಾರಗಳಲ್ಲಿ ಅಭಿವೃದ್ಧಿ ಕಷ್ಟ. ಎಂದಿದ್ದರೂ ಮೈತ್ರಿ ಸರ್ಕಾರ ಮೈತ್ರಿ ಸರ್ಕಾರವೇ, ಸ್ವತಂತ್ರ ಸರ್ಕಾರ ಸ್ವತಂತ್ರ ಸರ್ಕಾರವೇ ಆಗಿದೆ. ಮೈತ್ರಿ ಸರ್ಕಾರದಲ್ಲಿ ಯಾವಾಗಲೂ ವ್ಯತ್ಯಾಸ ಇದ್ದೇ ಇರುತ್ತದೆ. ಹೀಗಾಗಿ ಅಭಿವೃದ್ಧಿ ಅಸಾಧ್ಯ ಎಂದು ಪ್ರತಿಕ್ರಿಯಿಸಿದರು.
ಮೈಸೂರು ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಜೆಡಿಎಸ್ ಸ್ವತಂತ್ರವಾಗಿ ಅಧಿಕಾರಕ್ಕೆ ಬರಲ್ಲ ಎಂಬ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಮಾತನಾಡಿದ ಅವರು, ನೋಡಿ ಈಗಾಗಲೇ ಕಾಂಗ್ರೆಸ್ ಹಾಗೂ ಜೆಡಿಎಸ್ ಮದುವೆ ಆಗಿದೆ. ಹೀಗಾಗಿ ಅವರ ಹೇಳಿಕೆಗಳ ಬಗ್ಗೆ ಹೆಚ್ಚಾಗಿ ಮಾತನಾಡಲು ಆಗುವುದಿಲ್ಲ. ಈ ಮೊದಲು ಮಹಾನಗರ ಪಾಲಿಕೆಯಲ್ಲಿ ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿಯೊಂದಿಗೆ ಅಧಿಕಾರ ನಡೆಸಿದ್ದವು. ಆದರೆ ನಿರೀಕ್ಷೆಗೆ ಮೀರಿದ ಯಾವುದೇ ಕೆಲಸಗಳು ಮೈತ್ರಿ ಕೂಟದಿಂದ ನೆರವೇರಲಿಲ್ಲ. ಮುಂದಿನ ಚುನಾವಣೆಯಲ್ಲಿ ಮೈಸೂರಿನಲ್ಲಿ ಜೆಡಿಎಸ್ ಮಹಾನಗರದ ಚುಕ್ಕಾಣಿಯನ್ನು ಹಿಡಿದೇ ಹಿಡಿಯುತ್ತದೆ. ಆಗ ಮೈಸೂರಿನ ಅಭಿವೃದ್ಧಿಯನ್ನು ಮಾಡಿ ತೋರಿಸುತ್ತೇವೆಂದು ವಿಶ್ವಾಸ ವ್ಯಕ್ತಪಡಿಸಿದರು.
ಹುಬ್ಬಳ್ಳಿ: ದೇಶದಲ್ಲಿರುವ ಎಲ್ಲಾ ಪ್ರಾದೇಶಿಕ ಪಕ್ಷಗಳ ಜೊತೆಗೆ ಚರ್ಚಿಸಿದ್ದು, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ದೇಶದಲ್ಲಿರುವ ಭ್ರಷ್ಟ ಸರ್ಕಾರವನ್ನು ಕಿತ್ತು ಹಾಕುತ್ತೇವೆ ಎಂದು ಕೆಪಿಸಿಸಿ ರಾಜ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿಕೆ ನೀಡಿದ್ದಾರೆ.
ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರವು ಜನರು ನಂಬಿದ್ದ ರೀತಿಯಲ್ಲಿ ಆಡಳಿತ ನಡೆಸುತ್ತಿಲ್ಲ. ದೇಶದ ಆಸ್ತಿಯನ್ನು ಹಗಲು ದರೋಡೆ ನಡೆಸುತ್ತಿದ್ದಾರೆ. ಲೋಕಪಾಲ್ ಬಿಲ್ ಪಾಸ್ ಮಾಡದ ಪ್ರಧಾನಿ ನರೇಂದ್ರ ಮೋದಿಯವರು ಭ್ರಷ್ಟಾಚಾರದ ಬಗ್ಗೆ ಮಾತನಾಡುವ ಹಕ್ಕು ಇಲ್ಲವೆಂದು ಗುಡುಗಿದರು.
ರಫೆಲ್ ಯುದ್ದ ವಿಮಾನ ಖರೀದಿಯಲ್ಲಿ 40 ಸಾವಿರ ಕೋಟಿ ರೂಪಾಯಿ ಡೀಲ್ ನಡೆದಿದೆ. ಈ ಬಗ್ಗೆ ಯಾರು ಕೂಡಾ ಸ್ಪಷ್ಟನೆ ನೀಡುತ್ತಿಲ್ಲ. ಅಲ್ಲದೇ ಮೋದಿ ಹಾಗೂ ಅಮಿತ್ ಶಾ ವಿರುದ್ಧ ಯಾವ ಮಾಧ್ಯಮದವರು ಬರೆಯದ ಹಾಗೆ ಮಾಡಿದ್ದಾರೆ. ಒಂದು ವೇಳೆ ಅವರ ವಿರುದ್ಧ ಧ್ವನಿ ಎತ್ತುವ ಪತ್ರಕರ್ತರನ್ನು ಕೆಲಸದಿಂದ ತೆಗೆಸಿ ಹಾಕುವ ಹಾಗೆ ಮಾಡುತ್ತಿದ್ದಾರೆ. ಇದು ಶುದ್ಧ ಸುಳ್ಳಿನ ಸರ್ಕಾರ ಎಂದು ಕಿಡಿಕಾರಿದರು.
ಈಗಾಗಲೇ ದೇಶದ ಎಲ್ಲಾ ಪ್ರಾದೇಶಿಕ ಪಕ್ಷಗಳ ಜೊತೆ ಮಾತುಕತೆ ನಡೆಸಿದ್ದೇವೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕೇಂದ್ರದಲ್ಲಿರುವ ಭ್ರಷ್ಟ ಸರ್ಕಾರವನ್ನು ಕಿತ್ತೊಗೆಯುತ್ತೇವೆ. ಅಲ್ಲದೇ ರಾಜ್ಯದಲ್ಲಿ ನಡೆಯಲಿರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ನಮ್ಮ ಗೆಲುವು ಶತಸಿದ್ದ. ನಮ್ಮ ಹಿಂದಿನ ಸರ್ಕಾರ ಕೊಟ್ಟ ಜನಪರ ಯೋಜನೆಗಳು ನಮ್ಮ ಕೈ ಹಿಡಿಯಲಿವೆ. ಹೀಗಾಗಿ ಚುನಾವಣೆಯಲ್ಲಿ ಜಯಭೇರಿಗಳಿಸುತ್ತೇವೆ ಎಂದು ಹೇಳಿದರು.