Tag: ರಾಜ್ಯಪಾಲರು

  • ಸಿಎಂ ಖುರ್ಚಿಯ ಡೆಡ್ ಲೈನ್ ಸೋಮವಾರನಾ? ಮಂಗಳವಾರನಾ?

    ಸಿಎಂ ಖುರ್ಚಿಯ ಡೆಡ್ ಲೈನ್ ಸೋಮವಾರನಾ? ಮಂಗಳವಾರನಾ?

    ಬೆಂಗಳೂರು: ಸಿಎಂಗೆ ರಾಜ್ಯಪಾಲರು ವಿಧಿಸಿದ್ದ ಎರಡು ಡೆಡ್ ಲೈನ್‍ಗಳನ್ನು ದಾಟಿದ್ದು, ಸೋಮವಾರ ಸರ್ಕಾರ ಪತನವಾಗುತ್ತಾ? ಸೇಫ್ ಆಗುತ್ತಾ ಎನ್ನುವ ಪ್ರಶ್ನೆ ಎದ್ದಿದೆ.

    ರಾಜ್ಯಪಾಲರು ನೀಡಿದ ಎರಡು ಡೆಡ್‍ಲೈನ್ ಗಳಿಗೆ ರಾಜ್ಯ ಸರ್ಕಾರ ಡೋಂಟ್‍ಕೇರ್ ಎದ್ದಿದ್ದು ಈಗ ಸ್ಪೀಕರ್ ಅವರೇ ಸೋಮವಾರ ಎಲ್ಲದ್ದಕ್ಕೂ ಇತಿಶ್ರೀ ಹಾಡಲಾಗುವುದು ಎಂದು ಹೇಳಿದ್ದಾರೆ. ಆದರೆ ಸೋಮವಾರವೂ ವಿಶ್ವಾಸಮತಯಾಚನೆ ಮಾಡುವುದು ಅನುಮಾನ ಎನ್ನುವ ಮಾತು ಕೇಳಿ ಬಂದಿದೆ.

    ಕಳೆದ ಬುಧವಾರ ವಿಶ್ವಾಸ ಮತ ಯಾಚನೆ ಮಾಡಿರುವ ಮುಖ್ಯಮಂತ್ರಿಗಳು ಇನ್ನು ಚರ್ಚೆ ನಡೆಸುತ್ತಿದ್ದಾರೆ. ಈ ಮಧ್ಯೆ ಕಲಾಪಕ್ಕೆ ಗೈರಾಗಿರುವ ಶಾಸಕರಿಗೆ ವಿಪ್ ಅನ್ವಯವಾಗುತ್ತೋ ಇಲ್ಲವೋ ಎನ್ನುವ ಗೊಂದಲ ಪರಿಹಾರಕ್ಕೆ ಎರಡು ಪಕ್ಷ ಸುಪ್ರೀಂ ಕೋರ್ಟ್ ಕದ ತಟ್ಟಿದೆ. ಈ ಅರ್ಜಿಯನ್ನು ಪುರಸ್ಕರಿಸಿ ವಿಚಾರಣೆಗೆ ಮಾನ್ಯ ಮಾಡಿದ್ದಲ್ಲಿ ಕೋರ್ಟ್ ಆದೇಶ ಬರುವವರೆಗೂ ವಿಶ್ವಾಸ ಮತಯಾಚನೆ ನಡೆಯುವುದು ಅನುಮಾನ.

    ಮೈತ್ರಿ ಪಕ್ಷಗಳ ನಾಯಕರು ಹೇಳಿಕೊಂಡಂತೆ ಸೋಮವಾರವೇ ವಿಶ್ವಾಸಮತ ಸಾಬೀತು ಮಾಡಲು ಹೋದರೆ ದೋಸ್ತಿಗಳಿಗೆ ಸಂಖ್ಯಾಬಲದ ಕೊರತೆ ಇದೆ. ಒಂದು ವೇಳೆ ವೋಟ್ ನಡೆದರೆ ಸರ್ಕಾರ ಪತನವಾಗಲಿದೆ.

    ಸೋಮವಾರವು ಚರ್ಚೆ ಮುಂದುವರಿದು ಸುಪ್ರೀಂ ಆದೇಶದ ನಂತರ ಮತಯಾಚನೆ ಮಾಡಲಾಗುವುದು ಎಂದು ಹೇಳಿದರೆ ರಾಜ್ಯಪಾಲರು ಸರ್ಕಾರವನ್ನು ವಜಾಗೊಳಿಸುವ ನಿರ್ಧಾರ ತೆಗೆದುಕೊಂಡರೆ ಸಿಎಂ ಮಂಗಳವಾರ ಮಾಜಿ ಆಗಬಹುದು. ಆದರೆ ವಿಪ್ ಪ್ರಕರಣ ಸುಪ್ರೀಂ ಅಂಗಳದಲ್ಲಿ ಇರುವ ಕಾರಣ ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಬರುವುದು ಅಷ್ಟು ಸುಲಬ ಅಲ್ಲ ಎನ್ನುವ ವಿಶ್ಲೇಷಣೆ ಕೇಳಿ ಬಂದಿದೆ.

  • ಇನ್ನೂ ಕೆಲ ಶಾಸಕರ ರಾಜೀನಾಮೆ ಮಾಡಿಸೋ ಪ್ರಯತ್ನ ನಡೆದಿದೆ: ಈಶ್ವರ್ ಖಂಡ್ರೆ

    ಇನ್ನೂ ಕೆಲ ಶಾಸಕರ ರಾಜೀನಾಮೆ ಮಾಡಿಸೋ ಪ್ರಯತ್ನ ನಡೆದಿದೆ: ಈಶ್ವರ್ ಖಂಡ್ರೆ

    ಬೆಂಗಳೂರು: ಕಾಂಗ್ರೆಸ್ ಪಕ್ಷದ ಇನ್ನೂ ಕೆಲ ಶಾಸಕರಿಗೆ ಬಿಜೆಪಿಯವರು ಆಮಿಷ ಒಡ್ಡುತ್ತಲೇ ಇದ್ದು, ಹೆದರಿಸಿ, ಬೆದರಿಸಿ ಶಾಸಕರ ರಾಜೀನಾಮೆ ಕೊಡಿಸುವ ಪ್ರಯತ್ನ ಮುಂದುವರಿದಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಹೇಳಿದ್ದಾರೆ.

    ಕಾಂಗ್ರೆಸ್ ಶಾಸಕರು ತಂಗಿರುವ ಹೋಟೆಲ್ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಮ್ಮ ಶಾಸಕರು ಅವರ ಕಡೆ ಹೋಗುವುದಿಲ್ಲ. ಆದರೆ ಪುನಃ ಬಿಜೆಪಿಯಿಂದ ಶಾಸಕರ ಮೇಲೆ ಒತ್ತಡ ಹೇರುತ್ತಲೇ ಇದ್ದಾರೆ. ನಮ್ಮ ಶಾಸಕರನ್ನ ಒತ್ತೆಯಾಳುಗಳ ರೀತಿ ನಡೆಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.

    ಸರ್ಕಾರ ಆಸ್ಥಿಗೊಳಿಸುವ ಪ್ರಯತ್ನ ನಡೆದಿದೆ. ಆದರೆ ನಮ್ಮ ಶಾಸಕರು ಅಂಜಿಕೆ, ಹೆದರಿಕೆ ಒಳಗಾಗಬಾರದು. ಕ್ಷೇತ್ರದ ಜನತೆ ವಿಶ್ವಾಸ ಇಟ್ಟು ಗೆಲ್ಲಿಸಿದ್ದಾರೆ, ಅತೃಪ್ತ ಶಾಸಕರು ಕೂಡ ವಾಪಸ್ ಬಂದು ಕೈಜೋಡಿಸಬೇಕು. ನಮ್ಮ ಶಾಸಕ ರಹೀಂಖಾನ್‍ಗೂ ಆಮಿಷ ನೀಡಿದ್ದಾರೆ. ಕುದುರೆ ವ್ಯಾಪಾರದ ಬಗ್ಗೆ ಮಾತನಾಡುವ ರಾಜ್ಯಪಾಲರು ಇದರ ಬಗ್ಗೆ ಯಾಕೆ ಗಮನ ಹರಿಸಬಾರದು. ರಾಜ್ಯಪಾಲರನ್ನೂ ಬಿಜೆಪಿ ದುರ್ಬಳಕೆ ಮಾಡಿಕೊಂಡಿದೆ ಎಂದರು.

  • ರಾಜ್ಯಪಾಲರು, ಕೇಂದ್ರ ಸರ್ಕಾರ ಮುಂದೇನು ಮಾಡಬಹುದು?

    ರಾಜ್ಯಪಾಲರು, ಕೇಂದ್ರ ಸರ್ಕಾರ ಮುಂದೇನು ಮಾಡಬಹುದು?

    ಬೆಂಗಳೂರು: ರಾಜ್ಯದಲ್ಲಿ ಮತ್ತೆ ಕಾನೂನು ಸಂಘರ್ಷ ಉಂಟಾಗುವ ಸಾಧ್ಯತೆ ಇದೆ. ಅಲ್ಪಮತಕ್ಕೆ ಕುಸಿದಿರುವ ದೋಸ್ತಿ ಸರ್ಕಾರದ ವಿರುದ್ಧ ಕ್ರಮಕ್ಕೆ ಖುದ್ದು ರಾಜ್ಯಪಾಲರೇ ಅಖಾಡಕ್ಕಿಳಿಯುವ ಸಾಧ್ಯತೆಗಳಿವೆ.

    ವಿಶ್ವಾಸಮತಕ್ಕೆ 2 ಬಾರಿ ಸೂಚನೆ ರವಾನಿಸಿದ್ದರೂ, ಮುಂದಾಗದಿರುವುದನ್ನು ರಾಜ್ಯಪಾಲರು ಗಂಭೀರವಾಗಿ ಪರಿಗಣಿಸಿದ್ದು, ಈಗಾಗಲೇ ಕೇಂದ್ರಕ್ಕೆ ಒಂದು ವರದಿಯನ್ನೂ ಕೂಡ ರಾಜ್ಯಪಾಲ ವಜೂಭಾಯ್ ವಾಲಾ ರವಾನಿಸಿದ್ದಾರೆ.

    ರಾಜ್ಯಪಾಲರು ಏನ್ ಮಾಡಬಹುದು?
    ಆಯ್ಕೆ 1- ರಾಜಕೀಯ ಬಿಕ್ಕಟ್ಟು ಕೇಂದ್ರಕ್ಕೆ 2ನೇ ವರದಿ ಸಲ್ಲಿಸಬಹುದು
    ಆಯ್ಕೆ 2- ಮತ್ತೆ 3ನೇ ಬಾರಿಗೆ ವಿಶ್ವಾಸಮತಕ್ಕೆ ಸೂಚಿಸಬಹುದು
    ಆಯ್ಕೆ 3- ವಿಧಾನಸಭೆ ಅಮಾನತ್ತಿನಲ್ಲಿಟ್ಟು ರಾಷ್ಟ್ರಪತಿ ಆಳ್ವಿಕೆಗೆ ಶಿಫಾರಸು ಮಾಡಬಹುದು
    ಆಯ್ಕೆ 4- ಸಂಖ್ಯಾಬಲ ಆಧರಿಸಿ ಅತಿದೊಡ್ಡ ಪಕ್ಷ ಬಿಜೆಪಿಯನ್ನು ಸರ್ಕಾರ ರಚನೆಗೆ ಆಹ್ವಾನಿಸಬಹುದು

    ಕೇಂದ್ರ ಸರ್ಕಾರ ಏನ್ ಮಾಡಬಹುದು?
    ಆಯ್ಕೆ 1- ರಾಜ್ಯಪಾಲರ ಶಿಫಾರಸ್ಸನ್ನು ಗಂಭೀರವಾಗಿ ಪರಿಗಣಿಸುವುದು
    ಆಯ್ಕೆ 2- ಕೇಂದ್ರ ಸಂಪುಟ ವ್ಯವಹಾರಗಳ ಸಭೆಯಲ್ಲಿ ಚರ್ಚಿಸಿ ಸಂಪುಟ ಸಭೆಗೆ ವರ್ಗಾಯಿಸಬಹುದು
    ಆಯ್ಕೆ 3- ಸಂಪುಟ ಸಭೆ ಕರೆದು ರಾಷ್ಟ್ರಪತಿ ಆಳ್ವಿಕೆ ಶಿಫಾರಸ್ಸಿಗೆ ಒಪ್ಪಿಗೆ ಸೂಚಿಸುವುದು
    ಆಯ್ಕೆ 4- ರಾಷ್ಟ್ರಪತಿಗಳಿಂದ ಅಂಕಿತ ಪಡೆದುಕೊಳ್ಳಬಹುದು
    ಆಯ್ಕೆ 5- ಅಲ್ಪಕಾಲ ರಾಷ್ಟ್ರಪತಿ ಆಡಳಿತವನ್ನು ಹೇರಬಹುದು
    ಆಯ್ಕೆ 6- ಎಷ್ಟು ದಿನ ವಿಶ್ವಾಸ ವಿಳಂಬ ಮಾಡಬಹುದು ಅಂತ ಕಾದು ನೋಡಬಹುದು

  • ಸಿಎಂಗೆ ರಾಜ್ಯಪಾಲರ 2ನೇ ಡೆಡ್ ಲೈನ್

    ಸಿಎಂಗೆ ರಾಜ್ಯಪಾಲರ 2ನೇ ಡೆಡ್ ಲೈನ್

    ಬೆಂಗಳೂರು: ರಾಜ್ಯಪಾಲರು ಮುಖ್ಯಮಂತ್ರಿಗಳಿಗೆ ವಿಶ್ವಾಸಮತ ಸಾಬೀತು ಪಡಿಸಲು ಮತ್ತೊಮ್ಮೆ ಸಮಯಾವಕಾಶವನ್ನು ನಿಗದಿ ಮಾಡಿದ್ದು, ಇಂದು ವಿಧಾನಸಭೆಯ ಕಲಾಪ ಪೂರ್ಣಗೊಳ್ಳುವ ಮುನ್ನ ವಿಶ್ವಾಸ ಮತಸಾಬೀತು ಪಡಿಸುವಂತೆ ಆದೇಶ ನೀಡಿದ್ದಾರೆ.

    ರಾಜ್ಯಪಾಲರು ಸಿಎಂ ಅವರಿಗೆ ನೀಡುತ್ತಿರುವ 2ನೇ ಆದೇಶ ಇದಾಗಿದ್ದು, ಇಂದು ಮಧ್ಯಾಹ್ನ 1.30ರ ಒಳಗಡೆ ವಿಶ್ವಾಸ ಮತ ಸಾಬೀತು ಪಡಿಸಲು ನಿನ್ನೆ ಆದೇಶ ನೀಡಿದ್ದರು. ಆದರೆ ಈ ಆದೇಶವನ್ನು ಸರ್ಕಾರ ಪಾಲನೆ ಮಾಡಿರಲಿಲ್ಲ. ಈ ಹಿನ್ನೆಲೆಯಲ್ಲಿ ರಾಜ್ಯಪಾಲರಿಗೆ ಸಿಎಂ ಪತ್ರವನ್ನು ಬರೆದು ವಿವರಣೆ ನೀಡಿದ್ದರು.

    ಸಿಎಂ ಅವರ ಪತ್ರಕ್ಕೆ ಪ್ರತಿಕ್ರಿಯೆ ನೀಡಿ ಮತ್ತೊಂದು ಡೆಡ್‍ಲೈನ್ ನೀಡಿರುವ ರಾಜ್ಯಪಾಲರು 2ನೇ ಬಾರಿಗೆ ಸಮಯಾವಕಾಶವನ್ನು ನೀಡಿದ್ದಾರೆ. ಈ ಬಾರಿಯೂ ನಿಯಮಗಳ ಕಾರಣ ಹೇಳಿ ಸಿಎಂ ಅವರು ಇದನ್ನು ನಿರಾಕರಿಸುತ್ತರಾ ಅಥವಾ ಪಾಲನೆ ಮಾಡುತ್ತರಾ ಎಂಬ ಕುತೂಹಲ ಮೂಡಿದೆ.

    ಈಗಾಗಲೇ ಸದನದ ಮಧ್ಯಂತರ ವರದಿಯನ್ನು ರಾಜ್ಯಪಾಲರು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದ್ದಾರೆ ಎಂಬ ಮಾಹಿತಿ ಲಭಿಸಿದ್ದು, ಈ ಬಾರಿಯೂ ಆದೇಶ ಉಲ್ಲಂಘನೆ ಆದರೆ ರಾಷ್ಟ್ರಪತಿ ಆಡಳಿತಕ್ಕೆ ಶಿಫಾರಸ್ಸು ಮಾಡುವ ಸಾಧ್ಯತೆ ಹೆಚ್ಚಿದೆ.

    ಈ ಎಲ್ಲಾ ಬೆಳವಣಿಗೆಗಳ ನಡುವೆ ಸಿಎಂ ಹಾಗೂ ಕಾಂಗ್ರೆಸ್ ಪಕ್ಷದ ನಾಯಕರು ಸುಪ್ರೀಂ ಕೋರ್ಟಿಗೆ ಅರ್ಜಿ ಸಲ್ಲಿಸಿ ವಿಪ್ ಜಾರಿ ಕುರಿತು ಸ್ಪಷ್ಟನೆ ಕೇಳಿದ್ದಾರೆ.

    ಬುಧವಾರ ನೀಡಿದ ಆದೇಶದಲ್ಲಿ ಸದನಕ್ಕೆ ಬರಬೇಕೋ? ಬೇಡವೋ ಎನ್ನುವುದು ಶಾಸಕರ ವಿವೇಚನೆಗೆ ಬಿಟ್ಟ ವಿಚಾರ. ಅವರನ್ನು ಬಲವಂತವಾಗಿ ಸದನಕ್ಕೆ ಬರುವಂತೆ ಒತ್ತಡ ಹಾಕುವಂತಿಲ್ಲ ಎಂದು ಸುಪ್ರೀಂ ಹೇಳಿತ್ತು.

    ದೋಸ್ತಿ ನಾಯಕರು ವಿಪ್ ಜಾರಿಗೊಳಿಸುವ ಮೂಲಕ ಶಾಸಕರನ್ನು ಸದನಕ್ಕೆ ಬರುವಂತೆ ಮಾಡಬಹುದು ಎನ್ನುವ ಲೆಕ್ಕಾಚಾರ ಹಾಕಿಕೊಂಡಿದ್ದರು. ಆದರೆ ಸುಪ್ರೀಂ ತನ್ನ ಮಧ್ಯಂತರ ಆದೇಶದಲ್ಲಿ ವಿಪ್ ಬಗ್ಗೆ ಯಾವುದೇ ಸ್ಪಷ್ಟವಾದ ಅಂಶವನ್ನು ತಿಳಿಸದ ಕಾರಣ ಈಗ ಕಾಂಗ್ರೆಸ್ ಮತ್ತೊಮ್ಮೆ ಕೋರ್ಟ್ ಮೆಟ್ಟಿಲೇರಿ ಈ ವಿಚಾರದ ಬಗ್ಗೆ ಸ್ಪಷ್ಟನೆ ನೀಡಬೇಕೆಂದು ಮನವಿ ಸಲ್ಲಿಸಿದೆ.

    ವಿಪ್ ಜಾರಿ ವಿಚಾರದಲ್ಲಿ ಕೆಲ ಗೊಂದಲಗಳಿವೆ. ಅತೃಪ್ತರು ಸದನಕ್ಕೆ ಹಾಜರಾಗಬೇಕಿಲ್ಲ ಎಂಬ ಆದೇಶದಿಂದ ನಮ್ಮ ಸಾಂವಿಧಾನಿಕ ಹಕ್ಕಿಗೆ ಧಕ್ಕೆಯಾಗಿದೆ. ಈ ಆದೇಶ 10ನೇ ಷೆಡ್ಯೂಲ್ ಅಡಿಯಲ್ಲಿ ಪಕ್ಷಕ್ಕೆ ನೀಡಲಾದ ಅಧಿಕಾರವನ್ನು ಕಿತ್ತುಕೊಂಡಿದೆ. ಹೀಗಾಗಿ ಈ ವಿಚಾರದ ಬಗ್ಗೆ ಸ್ಪಷ್ಟನೆ ನೀಡಿ ಎಂದು ಕೋರಿ ಅರ್ಜಿಯಲ್ಲಿ ಸಿಎಂ ಮತ್ತು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮನವಿ ಮಾಡಿಕೊಂಡಿದ್ದಾರೆ.

  • ಡೆಡ್‍ಲೈನ್ ಉಲ್ಲಂಘಿಸಿದ್ರೆ ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ

    ಡೆಡ್‍ಲೈನ್ ಉಲ್ಲಂಘಿಸಿದ್ರೆ ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ

    ಬೆಂಗಳೂರು: ರಾಜ್ಯಪಾಲರು ಬಹುಮತ ಸಾಬೀತಿಗೆ ವಿಧಿಸಿದ್ದ ಗಡುವನ್ನು ದೋಸ್ತಿ ಸರ್ಕಾರ ಮೀರಿದೆ. ಈಗ ಇಂದು ಕಲಾಪ ಮುಗಿಯುವುದರ ಒಳಗಡೆ ಬಹುಮತ ಸಾಬೀತು ಪಡಿಸುವಂತೆ ಮತ್ತೊಂದು ಡೆಡ್‍ಲೈನ್ ನೀಡಿದ್ದಾರೆ. ಒಂದು ವೇಳೆ ಈ ಡೆಡ್‍ಲೈನ್ ಒಳಗಡೆ ಬಹುಮತ ಸಾಬೀತು ಆಗದೇ ಇದ್ದರೆ ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಯಾಗುವ ಸಾಧ್ಯತೆಯಿದೆ.

    ಬಿಜೆಪಿ ನಿಯೋಗ ಸರ್ಕಾರದ ವಿರುದ್ಧ ದೂರು ನೀಡಿದ ಬಳಿಕ ರಾಜ್ಯಪಾಲರು ಕಲಾಪಕ್ಕೆ ವಿಶೇಷ ಅಧಿಕಾರಿಯನ್ನು ಕಳುಹಿಸಿಕೊಟ್ಟಿದ್ದರು. ಇದಾದ ಬಳಿಕ ಗುರುವಾರ ರಾತ್ರಿ ಶುಕ್ರವಾರ ಮಧ್ಯಾಹ್ನ 1:30ರ ಒಳಗಡೆ ಬಹುಮತ ಸಾಬೀತು ಪಡಿಸುವಂತೆ ಆದೇಶಿಸಿದ್ದರು. ಇಷ್ಟಾಗಿಯೂ ಸರ್ಕಾರ ಈ ಆದೇಶವನ್ನು ಪಾಲಿಸಿರಲಿಲ್ಲ.

    ಇಂದು ರಾಜ್ಯಪಾಲರು ಎರಡನೇ ಡೆಡ್‍ಲೈನ್ ನೀಡಿದ್ದಾರೆ. ಈ ಗಡುವು ಮೀರಿದರೆ ರಾಜ್ಯಪಾಲರು ಕೇಂದ್ರ ಗೃಹ ಸಚಿವಾಲಯಕ್ಕೆ ವರದಿ ಸಲ್ಲಿಸುತ್ತಾರೆ. ಈ ವರದಿ ಆಧಾರಿಸಿ ಅಮಿತ್ ಶಾ ನೇತೃತ್ವದ ಗೃಹ ಇಲಾಖೆ ರಾಷ್ಟ್ರಪತಿ ಆಡಳಿತ ಹೇರಬೇಕೋ? ಬೇಡವೋ ಎನ್ನುವ ನಿರ್ಧಾರವನ್ನು ಕೈಗೊಳ್ಳಲಿದೆ.

    ಆರ್ಟಿಕಲ್ 175(2) ರಡಿ ವಿಶ್ವಾಸ ಮತಯಾಚಿಸಿ ಎಂದು ರಾಜ್ಯಪಾಲರೂ ಸಿಎಂಗೆ ಎರಡು ಬಾರಿ ಸೂಚಿಸಿದರೂ ಪಾಲನೆ ಆಗಿಲ್ಲ. ಈಗಾಗಲೇ ಎರಡು ಪಕ್ಷದ 15 ಮಂದಿ ಶಾಸಕರು ರಾಜೀನಾಮೆ ನೀಡಿದ್ದರಿಂದ ಸರ್ಕಾರ ಅಲ್ಪಮತಕ್ಕೆ ಕುಸಿದಿದೆ. ಹೀಗಾಗಿ ವಿಶ್ವಾಸಮತ ಯಾಚಿಸಬೇಕಿತ್ತು. ಆದರೆ ರಾಜ್ಯಪಾಲರು ಬಹುಮತ ಸಾಬೀತಿಗೆ ವಿಧಿಸಿದ್ದ ಗಡುವನ್ನು ದೋಸ್ತಿ ಸರ್ಕಾರ ಮೀರಿದೆ. ಹೀಗಾಗಿ ರಾಷ್ಟ್ರಪತಿ ಆಡಳಿತಕ್ಕೆ ಶಿಫಾರಸು ಮಾಡಬಹುದು.

  • ರಾಜ್ಯಪಾಲರಿಗೆ ಆದೇಶ ನೀಡೋ ಅಧಿಕಾರ ಇದೆಯೋ – ಕೃಷ್ಣಬೈರೇಗೌಡ Vs ಮಾಧುಸ್ವಾಮಿ

    ರಾಜ್ಯಪಾಲರಿಗೆ ಆದೇಶ ನೀಡೋ ಅಧಿಕಾರ ಇದೆಯೋ – ಕೃಷ್ಣಬೈರೇಗೌಡ Vs ಮಾಧುಸ್ವಾಮಿ

    ಬೆಂಗಳೂರು: ಶುಕ್ರವಾರ ಮಧ್ಯಾಹ್ನ 1:30ರ ಒಳಗಡೆ ಬಹುಮತ ಸಾಬೀತು ಪಡಿಸಬೇಕೆಂದು ಸಿಎಂಗೆ ರಾಜ್ಯಪಾಲ ವಿ.ಆರ್.ವಾಲಾ ನೀಡಿರುವ ಆದೇಶದ ಬಗ್ಗೆ ವಿಧಾನ ಸಭೆಯಲ್ಲಿ ಬಹಳ ಗಂಭೀರ ಚರ್ಚೆ ನಡೆಯಿತು.

    ಸಚಿವ ಕೃಷ್ಣಬೈರೇಗೌಡರು ವಿಶ್ವಾಸ ಮತಯಾಚನೆ ಪ್ರಕ್ರಿಯೆ ಆರಂಭಗೊಂಡ ಬಳಿಕ ಸಿಎಂ ಅವರಿಗೆ ರಾಜ್ಯಪಾಲರು ಆದೇಶ ನೀಡಲು ಬರುವುದಿಲ್ಲ ಎಂದು ವಾದಿಸಿದರೆ ಬಿಜೆಪಿಯ ಮಾಧುಸ್ವಾಮಿಯವರು ರಾಜ್ಯಪಾಲರಿಗೆ ಆದೇಶ ನೀಡಲು ಬರುತ್ತದೆ ಎಂದು ಹೇಳಿದರು.

    ಆರಂಭದಲ್ಲಿ ಕೃಷ್ಣಬೈರೇಗೌಡರು ಈ ವಿಚಾರವನ್ನು ಪ್ರಸ್ತಾಪಿಸಿ, ಎಸ್.ಆರ್.ಬೊಮ್ಮಯಿ ಅವರು ಮುಖ್ಯಮಂತ್ರಿಯಾಗಿದ್ದಾಗ ಸರ್ಕಾರ ವಜಾಗೊಳಿಸುವ ವಿಚಾರ ಸುಪ್ರೀಂಕೋರ್ಟ್ ಮೆಟ್ಟಿಲೇರಿತ್ತು. ಈ ವೇಳೆ ಸುಪ್ರೀಂಕೋರ್ಟ್ ನೀಡಿದ ತೀರ್ಪಿನ ಪ್ರಕಾರ, ರಾಜ್ಯಪಾಲರು ಆಡಳಿತ ಪಕ್ಷಕ್ಕೆ ಬಹುಮತ ಸಾಬೀತು ಪಡಿಸಲು ಸೂಚನೆ ನೀಡಬಹುದು. ಜೊತಗೆ ಅದಕ್ಕೆ ಒಂದು ವಾರ ಕಾಲ ನಿಗದಿ ಮಾಡಬಹುದು ಎಂದು ಆದೇಶ ನೀಡಲಾಗಿತ್ತು. ಆದರೆ ಇಂದಿನ ಪರಿಸ್ಥಿತಿ ಬೇರೆ ಇದೆ ಎಂದು ತಿಳಿಸಿದರು.

    ವಿಶ್ವಾಸಮತ ನಿರ್ಣಯವನ್ನು ಸ್ವತಃ ಸಭಾ ನಾಯಕ (ಸಿಎಂ) ಮಂಡಿಸುವುದಾಗಿ ಸದನಕ್ಕೆ ತಿಳಿಸಿದ್ದಾರೆ. ಸಿಎಂ ಅವರೇ ಹೇಳಿರುವಾಗ ಆದೇಶವನ್ನು ಹೇಗೆ ನೀಡುತ್ತಾರೆ. ಈ ವಿಚಾರವನ್ನು ಸದನದಲ್ಲಿ ಚರ್ಚೆ ಮಾಡಲಾಗುತ್ತಿದೆ. ಅದನ್ನು ನಡೆಸುವವರು ಸ್ಪೀಕರ್ ಸ್ಥಾನದಲ್ಲಿರುವ ನೀವು ಎಂದು ರಮೇಶ್ ಕುಮಾರ್ ಅವರಿಗೆ ಮನವಿ ಮಾಡಿಕೊಂಡರು.

    ನಮ್ಮ ಸಂವಿಧಾನದಲ್ಲಿ ಯಾರಿಗೂ ಸರ್ವಾಧಿಕಾರಿಯಂತೆ ನಡೆದುಕೊಳ್ಳುವ ಅಧಿಕಾರವನ್ನು ಕೊಟ್ಟಿಲ್ಲ. ಸಿಎಂ, ಸ್ಪೀಕರ್, ರಾಜ್ಯಪಾಲರು, ನ್ಯಾಯಾಧೀಶರು ಯಾರಿಗೂ ಸರ್ವಾಧಿಕಾರವಿಲ್ಲ. ವಿಶ್ವಾಸಮತ ನಿರ್ಣಯ ಸದನದ ಸ್ವತ್ತು ಹಾಗೂ ನೀವು ಇದನ್ನು ನಡೆಸುತ್ತಿರುವಾಗ ರಾಜ್ಯಪಾಲ ಪ್ರವೇಶ ಎಷ್ಟು ಸರಿ ಎಂದು ಪ್ರಶ್ನಿಸಿದರು.

    ಅಧಿಕಾರ ಹಪಹಪಿಗಾಗಿ ಸಂವಿಧಾನಿಕ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ರಾಜ್ಯಪಾಲ ವ್ಯಾಪ್ತಿಯನ್ನು ಸಂವಿಧಾನಿಕ ಪೀಠ ತಿಳಿಸಿರುವ ಮಾಹಿತಿಯನ್ನು ಮತ್ತೊಮ್ಮೆ ಓದಿ ಹೇಳಬೇಕೇ? ಇಂದಿನ ಪರಿಸ್ಥಿತಿ ನೋಡಿದರೆ ಇದು ಪ್ರಜಾಪ್ರಭುತ್ವವೇ ಎನ್ನುವ ಅನುಮಾನ ಜನರಲ್ಲಿ ಮೂಡುತ್ತಿದೆ ಎಂದು ಕಿಡಿಕಾರಿದರು. ಈ ವೇಳೆ ನಾಗಲ್ಯಾಂಡ್ ಸರ್ಕಾರಕ್ಕೆ ರಾಜ್ಯಪಾಲರು ನೀಡಿದ ಆದೇಶವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ನೀಡಿದ ಆದೇಶವನ್ನು ಓದಿ ತಮ್ಮ ವಾದವನ್ನು ಸಮರ್ಥಿಸಿಕೊಂಡರು.

    2018ರಲ್ಲಿ ಯಡಿಯೂರಪ್ಪನವರಿಗೆ 15 ದಿನಗಳ ಕಾಲ ಬಹುಮತ ಸಾಬೀತು ಪಡಿಸಲು ಅವಕಾಶವನ್ನು ರಾಜ್ಯಪಾಲರು ನೀಡುತ್ತಾರೆ. ಆದರೆ ಇಲ್ಲಿ ಈಗ 15 ಗಂಟೆಗಳ ಕಾಲ ಅವಕಾಶವನ್ನು ನೀಡುತ್ತಾರೆ. ಇದರಲ್ಲೇ ರಾಜ್ಯಪಾಲರು ಹೇಗೆ ನಡೆದುಕೊಳ್ಳುತ್ತಿದ್ದಾರೆ ಎನ್ನುವುದು ಗೊತ್ತಾಗುತ್ತದೆ ಎಂದರು. ಈ ವೇಳೆ ಕಾಂಗ್ರೆಸ್ ಶಾಸಕರು ರಾಜ್ಯಪಾಲರ ವಿರುದ್ಧವೇ ಘೋಷಣೆ ಕೂಗಿದರು.

    ಈ ವೇಳೆ ಬಿಜೆಪಿ ಶಾಸಕ ಮಾಧುಸ್ವಾಮಿ ಅವರು ಮಧ್ಯಪ್ರವೇಶ ಮಾಡುತ್ತಿದ್ದಂತೆ ಗುಡುಗಿದ ಸಚಿವರು, ನೀವು 3 ಕೋಟಿ ರೂ. ನೀಡಿ ಶಾಸಕರನ್ನು ಖರೀದಿ ಮಾಡುತ್ತೀರಿ. ಇರುವ ವಿಚಾರವನ್ನು ಹೇಳಲು ನಾನೇಕೆ ಹಿಂಜರಿಯಬೇಕು. ನಾನು ಅಂತಹ ಅನ್ಯಾಯದ ಕೆಲಸ ಮಾಡಿಲ್ಲ. ನೀವು ನನಗೆ ಪಾಠ ಹೇಳಬೇಡಿ ಎಂದು ಹೇಳಿದರು.

    ನಮಗೆ ಮಾತಾನಾಡಲು ಅನುಮತಿಯ ಜೊತೆಗೆ ರಕ್ಷಣೆಯೂ ಕೊಡಿ. ರಾಜ್ಯಪಾಲರು ಬಹುಮತ ಸಾಬೀತು ಮಾಡಿ ಅಂತ ಹೇಳುವುದು ಹೇಗೆ ತಪ್ಪಾಗುತ್ತೆ ಎಂದು ಮಾಧುಸ್ವಾಮಿ ಮಾತನಾಡುತ್ತಿದ್ದಂತೆ ಪ್ರತಿಪಕ್ಷದ ನಾಯಕರು ಗದ್ದಲ ಎಬ್ಬಿಸಿದರು. ಈ ವೇಳೆ ಸ್ಪೀಕರ್ ಮಧ್ಯಪ್ರವೇಶಿಸಿ ಸಿಎಂ ಮತ್ತು ಕೃಷ್ಣಬೈರೇಗೌಡರು ಮಾತನಾಡುವಾಗ ವಿರೋಧ ಪಕ್ಷದ ಸದಸ್ಯರು ಅಡ್ಡಿ ಪಡಿಸಲಿಲ್ಲ. ಹೀಗಾಗಿ ನೀವು ಅಡ್ಡಿಪಡಿಸುವುದು ಸರಿಯಲ್ಲ ಎಂದು ಮನವಿ ಮಾಡಿಕೊಂಡರು.

    ಮಾತು ಮುಂದುವರಿಸಿದ ಮಾಧುಸ್ವಾಮಿ ಅವರು, ಸರ್ಕಾರದ ಮೇಲೆ ಅನುಮಾನ ಬಂದರೆ ಬಹುಮತ ಸಾಬೀತು ಪಡೆಸುವಂತೆ ಕೇಳುವ ಅಧಿಕಾರ ರಾಜ್ಯಪಾಲರಿಗೆ ಇದೆ. ಇದು ಸಂವಿಧಾನಾತ್ಮಕ ಹಕ್ಕು. ಸರ್ಕಾರವನ್ನು ರಾಜ್ಯಪಾಲರು ಬಹುಮತ ಸಾಬೀತು ಮಾಡುವಂತೆ ಕೇಳುವುದು ತಪ್ಪು ಅಂತ ಎಲ್ಲಿಯೂ ವ್ಯಾಖ್ಯಾನ ಮಾಡಿಲ್ಲ ಎಂದರು.

    ನಾವು ಯಾರೂ ನಿಮಗೆ ಅಡಚಣೆ ಮಾಡಿಲ್ಲ. ರಾಜ್ಯಪಾಲರು ಸರ್ಕಾರಕ್ಕೆ ಪತ್ರದ ಬರೆದು, ನನಗೆ ಇಂತಹ ಕಾರಣಗಳಿಂದ ಬಹುಮತದ ಮೇಲೆ ಅನುಮಾನ ಬಂದಿದೆ. ನೀವು ಬಹುಮತ ಸಾಬೀತು ಮಾಡಿ ಎಂದು ಆದೇಶ ನೀಡಿದ್ದಾರೆ. ಸಂವಿಧಾನದತ್ತವಾಗಿ ಅವರಿಗೆ ಆದೇಶ ನೀಡುವ ಅಧಿಕಾರವಿದೆ. ಈಗ ಅಧಿವೇಶ ನಡೆಯುತ್ತಿರುವ ಕಾರಣದಿಂದಾಗಿ ರಾಜ್ಯಪಾಲರು ಹೀಗೆ ನಿರ್ದೇಶನ ನೀಡಿದ್ದಾರೆ. ಗುರುವಾರ ನಡೆದ ಅಧಿವೇಶನವನನು ರಾಜ್ಯಪಾಲರು ನೋಡಿದ್ದಾರೆ ಎಂದು ತಿಳಿಸಿದರು.

    ರಾಜ್ಯಪಾಲರ ಆದೇಶವನ್ನು ಪಾಲಿಸುವವರೆಗೂ ನಾವು ಇಲ್ಲಿಯೇ ಇರುತ್ತೇವೆ. ಬಿಜೆಪಿ ಎಲ್ಲ ಸದಸ್ಯರು ಇದಕ್ಕೆ ಬದ್ಧವಾಗಿದ್ದೇವೆ ಎಂದು ಹೇಳಿದರು.

  • ರಾಜ್ಯಪಾಲರ ಆದೇಶಕ್ಕೆ ದೋಸ್ತಿಗಳು ಡೋಂಟ್‍ಕೇರ್

    ರಾಜ್ಯಪಾಲರ ಆದೇಶಕ್ಕೆ ದೋಸ್ತಿಗಳು ಡೋಂಟ್‍ಕೇರ್

    ಬೆಂಗಳೂರು: ಇಂದೇ ವಿಶ್ವಾಸಮತಯಾಚನೆ ಮಾಡಬೇಕೆಂದು ಆದೇಶ ಕೊಟ್ಟಿರುವ ರಾಜ್ಯಪಾಲರ ಆದೇಶಕ್ಕೆ ದೋಸ್ತಿಗಳು ಡೋಂಟ್‍ ಕೇರ್ ಎಂದಿದ್ದಾರೆ.

    ಬೆಳಗ್ಗೆ ಸಿಎಂ ಮಾತು ಆರಂಭಿಸುವಾಗ ಇಂದು ವಿಶ್ವಾಸಮತ ನಡೆಯಬಹುದು ಎನ್ನುವ ಲೆಕ್ಕಾಚಾರ ಇತ್ತು. ಆದರೆ ಕೃಷ್ಣಬೈರೇಗೌಡರು ಎಂದು ನಿಂತು ರಾಜ್ಯಪಾಲರಿಗೆ ವಿಶ್ವಾಸ ಮತಯಾಚನೆ ಮಾಡುವಂತೆ ಹೇಳುವ ಯಾವುದೇ ಅಧಿಕಾರ ಇಲ್ಲ ಎಂದು ಹೇಳಿ ಸರ್ಕಾರದ ಪರ ಮಾತನಾಡಿದರು.

    ಮಧ್ಯಾಹ್ನ 1:30 ಆದರೂ ವೋಟ್ ಮಾತ್ರ ನಡೆಯಲೇ ಇಲ್ಲ. ಈ ವೇಳೆ ಯಡಿಯೂರಪ್ಪನವರು ಎದ್ದು ನಿಂತು ಸ್ಪೀಕರ್ ಅವರಲ್ಲಿ ಈ ಪ್ರಕ್ರಿಯೆ ಕೂಡಲೇ ಮುಗಿಸಿಕೊಡಿ ಎಂದು ಮನವಿ ಮಾಡಿದರು.

    ಯಡಿಯೂರಪ್ಪ ಮನವಿಗೆ ಸ್ಪೀಕರ್, ನನಗೆ ಯಾವುದೇ ಆದೇಶ ಬಂದಿಲ್ಲ. ಆದೇಶ ಬಂದಿರುವುದು ಸಿಎಂ ಅವರಿಗೆ. ಕಲಾಪ ಹೇಗೆ ನಡೆಯಬೇಕೋ ಹಾಗೆ ನಡೆಸುತ್ತೇನೆ. ಚರ್ಚೆಯಾದ ಬಳಿಕ ಮತಕ್ಕೆ ಹಾಕಲಾಗುವುದು ಎಂದು ತಿಳಿಸಿದರು. ಈ ವೇಳೆ ಆಡಳಿತ ಪಕ್ಷ ಮತ್ತು ಪ್ರತಿಪಕ್ಷಗಳ ಸದಸ್ಯರ ನಡುವೆ ಗದ್ದಲ ನಡೆದ ಪರಿಣಾಮ ಕಲಾಪವನ್ನು ಸ್ಪೀಕರ್ ಮುಂದಕ್ಕೆ ಹಾಕಿದರು.

    ರಾಜ್ಯಪಾಲರು ಸಿಎಂಗೆ ಶುಕ್ರವಾರ ಮಧ್ಯಾಹ್ನ 1:30ರ ಒಳಗಡೆ ವಿಶ್ವಾಸಮತಯಾಚನೆ ಮಾಡುವಂತೆ ಆದೇಶಿಸಿದ್ದರು. ಈಗ ಈ ಆದೇಶದ ಉಲ್ಲಂಘನೆಯಾದ ಹಿನ್ನೆಲೆಯಲ್ಲಿ ಕಾರ್ಯಾಂಗ ಮತ್ತು ಶಾಸಕಾಂಗದ ಮಧ್ಯೆ ಸಂಘರ್ಷ ಎದುರಾಗುವ ಸಾಧ್ಯತೆಯಿದೆ. ಸದನದಲ್ಲಿ ರಾಜ್ಯಪಾಲರ ಕಚೇರಿಯ ವಿಶೇಷ ಅಧಿಕಾರಿ ಉಪಸ್ಥಿತರಿದ್ದರು. ಈಗ ಇಂದು ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 1:40ರವರೆಗೆ ಕಲಾಪದ ನಡೆದ ವಿವರವನ್ನು ರಾಜ್ಯಪಾಲರಿಗೆ ತಿಳಿಸಲು ರಾಜಭವನಕ್ಕೆ ತೆರಳಿದ್ದಾರೆ.

  • ರಾಜ್ಯಪಾಲರ ಸೂಚನೆ ಹೊರತಾಗಿಯೂ ದೋಸ್ತಿಗಳು ಬಚಾವಾಗ್ತಾರಾ?

    ರಾಜ್ಯಪಾಲರ ಸೂಚನೆ ಹೊರತಾಗಿಯೂ ದೋಸ್ತಿಗಳು ಬಚಾವಾಗ್ತಾರಾ?

    ಬೆಂಗಳೂರು: ಇಂದು ಮಧ್ಯಾಹ್ನ 1.30ರೊಳಗೆ ವಿಶ್ವಾಸಮತ ಯಾಚನೆ ಮಾಡಬೇಕು ಎಂದು ಸಿಎಂಗೆ ರಾಜ್ಯಪಾಲರು ಸೂಚನೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ದೋಸ್ತಿಗಳು ಇಂದು ತಮ್ಮದೇ ತಂತ್ರಗಾರಿಕೆ ಮೂಲಕ ಬಹುಮತ ಸಾಬೀತು ತಡೀತಾರಾ, ರಾಜ್ಯಪಾಲರ ಸೂಚನೆಯನ್ನೇ ಧಿಕ್ಕರಿಸೋ ಅಸ್ತ್ರ ದೋಸ್ತಿಗಳ ಬಳಿ ಇದೆಯಾ ಅನ್ನೋ ಕತೂಹಲ ಹುಟ್ಟಿದೆ.

    ಹೌದು. ಇಂದಿನ ಸದನದ ಬೆಳವಣಿಗೆಗಳು ಏನಾಗಬಹುದು ಎಂಬ ಕುತೂಹಲ ಮೂಡಿಸಿದ್ದು, ಸಾಕಷ್ಟು ರೋಚಕ ತಿರುವು ಪಡೆಯಬಹುದು. ಇಂದಿನ ಬೆಳವಣಿಗೆಯಲ್ಲಿ ಸಿಎಂ ಅವರು ರಾಜ್ಯಪಾಲರ ಸೂಚನೆಯಂತೆ ಮಧ್ಯಾಹ್ನದೊಳಗೆ ಬಹುಮತ ಸಾಬೀತು ಮಾಡ್ತಾರಾ. ಆಕಸ್ಮಾತ್ ಮಾಡದಿದ್ದರೆ ಏನಾಗುತ್ತೆ, ಮಾಡದಿರಲು ಏನೆಲ್ಲಾ ಅಂಶಗಳನ್ನ ಕಾರಣವಾಗಿಸಿಕೊಳ್ಳಬಹುದು ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ಮಾಸ್ಟರ್ ಪ್ಲಾನ್ ಏನು?
    ರಾಜ್ಯಪಾಲರ ಸೂಚನೆಯ ವಿರುದ್ಧ ಸುಪ್ರೀಂಕೋರ್ಟ್ ಮೆಟ್ಟಿಲೇರಿ ಅದನ್ನ ಪ್ರಶ್ನಿಸಬಹುದು. ಬಹುಮತ ಸಾಬೀತಿಗೆ ನಾವೇ ಮುಂದಾಗಿದ್ದು ಚರ್ಚೆಗೆ ಅವಕಾಶ ಬೇಕು. ಇಂದೇ ಬಹುಮತ ಸಾಬೀತು ಮಾಡೋ ಬದಲು ಚರ್ಚೆಗೆ ಅವಕಾಶ ಕೊಡಿ ಎಂದು ಮನವಿ ಮಾಡಬಹುದು. ವಿಪ್ ಗೊಂದಲದ ಬಗ್ಗೆ ಕೂಡ ಸುಪ್ರೀಂಕೋರ್ಟ್ ಮೆಟ್ಟಿಲೇರಿ ಆ ಗೊಂದಲ ಪರಿಹಾರದವರೆಗೆ ಬಹುಮತ ಸಾಬೀತಿಗೆ ತಡೆ ಕೋರಬಹುದು.

    ಶಾಸಕರ ರಾಜೀನಾಮೆ ಅಂಗೀಕಾರ ಅಥವಾ ಅನರ್ಹತೆ ಪ್ರಕ್ರಿಯೆ ಮುಗಿಯುವವರೆಗೆ ಬಹುಮತ ಸಾಬೀತಿಗೆ ತಡೆಕೋರಬಹುದು. ರಾಜ್ಯಪಾಲರು ಅನಗತ್ಯ ಮಧ್ಯ ಪ್ರವೇಶ ಮಾಡಿದ್ದಾರೆ ಎಂದು ಪ್ರತಿಭಟಿಸಬಹುದು. ರಾಜ್ಯಪಾಲರ ವರ್ತನೆ ಖಂಡಿಸಿ ರಾಜಕೀಯ ಒತ್ತಡ ಹೆಚ್ಚುವಂತೆ ಮಾಡಬಹುದು.

    ಇಲ್ಲಾ ನಾಳೆ ರಾಜ್ಯಪಾಲರ ಸೂಚನೆ ಮೀರಿ ವರ್ತಿಸಿದರೆ ರಾಜ್ಯದಲ್ಲಿ ಸಾಂವಿಧಾನಿಕ ಬಿಕ್ಕಟ್ಟು ಉದ್ಭವಿಸಬಹುದು. ಸಾಂವಿಧಾನಿಕ ಬಿಕ್ಕಟ್ಟು ನಿವಾರಣೆ ಆಗಲು ರಾಜ್ಯಪಾಲರು ಸರ್ಕಾರದ ವಜಾಕ್ಕೆ ಶಿಫಾರಸ್ಸು ಮಾಡಬಹುದು. ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಯಾಗಬಹುದು. ಹೀಗೆ ಸಾಧ್ಯ ಅಸಾಧ್ಯತೆ ಏನು ಬೇಕಾದರು ಆಗಬಹುದು.

    ದೋಸ್ತಿ ಸರ್ಕಾರ ಸೇಫ್ ಆಗಲು ನಾನಾ ತಂತ್ರಗಾರಿಕೆ ಮಾಡುತ್ತಿದ್ದಾರೆ. ಇದರ ಮಧ್ಯೆ ರಾಜ್ಯಪಾಲರ ಸೂಚನೆಯ ಸಂಕಷ್ಟವು ದೋಸ್ತಿಗಳಿಗೆ ಸವಾಲಾಗಿದೆ. ಇಂದಿನ ಅಗ್ನಿ ಪರೀಕ್ಷೆಯಲ್ಲಿ ಯಾರ ಕೈ ಮೇಲಾಗಬಹುದು ಯಾರಿಗೆ ಸೋಲಾಗಬಹುದು ಎಂಬುದೆ ಸದ್ಯದ ಕುತೂಹಲವಾಗಿದೆ.

  • ಶುಕ್ರವಾರವೇ ದೋಸ್ತಿ ಸರ್ಕಾರ ಭವಿಷ್ಯ – ಸಿಎಂಗೆ ರಾಜ್ಯಪಾಲರ ಖಡಕ್ ಆದೇಶ

    ಶುಕ್ರವಾರವೇ ದೋಸ್ತಿ ಸರ್ಕಾರ ಭವಿಷ್ಯ – ಸಿಎಂಗೆ ರಾಜ್ಯಪಾಲರ ಖಡಕ್ ಆದೇಶ

    ಬೆಂಗಳೂರು: ಸಿಎಂ ಕುಮಾರಸ್ವಾಮಿ ಅವರು ಮೈತ್ರಿ ಸರ್ಕಾರ ಬಹುಮತ ಸಾಬೀತು ಪಡಿಸುವ ಬಗ್ಗೆ ಸದನದಲ್ಲಿ ಚರ್ಚೆ ಆರಂಭಿಸಿದ್ದು, ಈ ನಡುವೆಯೇ ರಾಜ್ಯಪಾಲರು ಶುಕ್ರವಾರ ಮಧ್ಯಾಹ್ನ 1.30ರ ವೇಳೆಗೆ ವಿಶ್ವಾಸ ಮತ ಸಾಬೀತು ಪಡಿಸುವಂತೆ ಆದೇಶ ನೀಡಿದ್ದಾರೆ.

    ರಾಜ್ಯಪಾಲ ವಾಜೂಬಾಯ್ ವಾಲಾ ಅವರು 175 (2) ವಿಧಿಯ ಅನ್ವಯ ರಾಜ್ಯಪಾಲರು ಆದೇಶವನ್ನು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು ಬಹುಮತ ಸಾಬೀತು ಪಡಿಸುವುದು ಅನಿವಾರ್ಯವಾಗಿದೆ. ಇಂದು ಸದನದ ಸಮಯದಲ್ಲಿ ಸ್ಪೀಕರ್ ರಮೇಶ್ ಕುಮಾರ್ ಅವರಿಗೆ ಸಂದೇಶ ನೀಡಿದ್ದ ರಾಜ್ಯಪಾಲರು ಇಂದೇ ಬಹುಮತ ಸಾಬೀತು ಪರಿಶೀಲನೆ ನಡೆಸಿ ಎಂದು ತಿಳಿಸಿದ್ದರು. ಆದರೆ ಇದನ್ನು ಸ್ವೀಕರಿಸುತ್ತೇನೆ ಎಂದು ತಿಳಿಸಿದ್ದ ಸ್ಪೀಕರ್ ಇದನ್ನು ಕಾನೂನಿನ ತಜ್ಞರ ಮೊರೆ ಹೋಗಿದ್ದರು.

    ಸ್ಪೀಕರ್ ಅವರ ನಡೆಯ ಬೆನ್ನಲ್ಲೇ ರಾಜ್ಯಪಾಲರು ಖಡಕ್ ಆದೇಶ ನೀಡಿದ್ದು, ಒಂದೊಮ್ಮೆ ರಾಜ್ಯಪಾಲರ ಆದೇಶವನ್ನು ಉಲ್ಲಂಘಿಸಿದರೆ ರಾಜ್ಯಪಾಲರು ರಾಷ್ಟ್ರಪತಿಗಳ ಆಡಳಿತ ಹೇರಲು ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಬಹುದು. ಈ ಹಿನ್ನೆಲೆಯಲ್ಲಿ ರಾಜ್ಯಪಾಲರ ಆದೇಶ ಮಹತ್ವವನ್ನು ಪಡೆದುಕೊಂಡಿದೆ.

    ಸ್ಪೀಕರ್ ಅವರ ವಿಳಂಬ ದೋರಣೆ ಹಿನ್ನೆಲೆಯಲ್ಲಿ ರಾಜ್ಯಪಾಲರು ಈ ಆದೇಶ ನೀಡಿದ್ದಾರೆ. ಮುಂದಿನ 17 ಗಂಟೆಗಳ ಅವಧಿಯಲ್ಲಿ ಮೈತ್ರಿ ಸರ್ಕಾರ ಭವಿಷ್ಯ ನಿರ್ಧಾರ ಆಗುವುದು ಬಹುತೇಕ ಖಚಿತ ಎಂಬ ಅಭಿಪ್ರಾಯ ಕಾನೂನು ತಜ್ಞರ ವಲಯದಿಂದ ಕೇಳಿ ಬಂದಿದೆ. ಇತ್ತ ಮೈತ್ರಿ ಸರ್ಕಾರ ರಾಜ್ಯಪಾಲರ ಆದೇಶದ ವಿರುದ್ಧ ನ್ಯಾಯಾಲಯಕ್ಕೂ ಮೊರೆ ಹೋಗುವ ಸಾಧ್ಯತೆ ಇದೆ.

  • ಇಂದೇ ವಿಶ್ವಾಸಮತ ಪೂರ್ಣಗೊಳಿಸಿ – ಸ್ಪೀಕರ್‌ಗೆ ರಾಜ್ಯಪಾಲರ ಖಡಕ್ ಸಂದೇಶ

    ಇಂದೇ ವಿಶ್ವಾಸಮತ ಪೂರ್ಣಗೊಳಿಸಿ – ಸ್ಪೀಕರ್‌ಗೆ ರಾಜ್ಯಪಾಲರ ಖಡಕ್ ಸಂದೇಶ

    ಬೆಂಗಳೂರು: ಸಿಎಂ ಕುಮಾರಸ್ವಾಮಿ ಅವರು ಇಂದು ಸದನದಲ್ಲಿ ಮಂಡನೆ ಮಾಡಿದ್ದ ವಿಶ್ವಾಸ ಮತಯಾಚನೆ ಪ್ರಕ್ರಿಯೆಯನ್ನು ಇಂದೇ ಪೂರ್ಣಗೊಳಿಸುವಂತೆ ಸ್ಪೀಕರ್ ಅವರಿಗೆ ರಾಜ್ಯಪಾಲರು ಖಡಕ್ ಸಂದೇಶ ನೀಡಿದ್ದಾರೆ.

    ಭೋಜನ ವಿರಾಮದ ವೇಳೆ ಜಗದೀಶ್ ಶೆಟ್ಟರ್ ಸೇರಿದಂತೆ ಹಲವು ಶಾಸಕರು ಸ್ಪೀಕರ್ ನಡೆಯ ವಿರುದ್ಧ ರಾಜ್ಯಪಾಲರಿಗೆ ದೂರು ನೀಡಿದ್ದರು. ಇದರ ಬೆನ್ನಲ್ಲೇ ರಾಜ್ಯಪಾಲರು ಅಧಿಕಾರಿಗಳಿಂದ ವರದಿ ಪಡೆದಿದ್ದರು. ವರದಿ ಪಡೆದ ಬಳಿಕ ಸ್ಪೀಕರ್ ಅವರಿಗೆ ಸೂಚನೆ ನೀಡಿರುವ ರಾಜ್ಯಪಾಲರು ಇಂದೇ ವಿಶ್ವಾಸಮತಯಾಚನೆಯನ್ನು ಮುಗಿಸಿ ಎಂದು ಸೂಚನೆ ನೀಡಿದ್ದಾರೆ. ರಾಜ್ಯಪಾಲರ ಪತ್ರವನ್ನು ಸ್ಪೀಕರ್ ರಮೇಶ್ ಕುಮಾರ್ ಅವರು ಸದನದಲ್ಲಿ ಓದಿ ವಿವರಣೆ ನೀಡಿದ್ದು, ಸದನ ಸದಸ್ಯರ ಗಮನಕ್ಕೆ ತಂದಿದ್ದಾರೆ.

    ಇತ್ತ ರಾಜ್ಯಪಾಲರ ಪತ್ರಕ್ಕೆ ಕಾಂಗ್ರೆಸ್ ನಾಯಕರು ಆಕ್ಷೇಪ ವ್ಯಕ್ತಪಡಿಸಿದ್ದು, ಈ ಬಗ್ಗೆ ಮಾತನಾಡಿದ ಕೃಷ್ಣಬೈರೇಗೌಡ ಅವರು, ಇಂದು ಸದನದಲ್ಲಿ ವಿಶ್ವಾಸಮತ ಬಗ್ಗೆ ಚರ್ಚೆ ಆರಂಭವಾಗಿದೆ. ಈ ಸಂದರ್ಭದಲ್ಲಿ ಕೆಲ ಕಾನೂನಿನ ಗೊಂದಲಗಳು ಆರಂಭವಾಗಿದೆ. ಆದ್ದರಿಂದ ಇದನ್ನು ಅಷ್ಟು ಬೇಗ ತೀರ್ಮಾನ ಮಾಡಲು ಸಾಧ್ಯವಿಲ್ಲ. ಸಂಪೂರ್ಣ ಚರ್ಚೆ ನಡೆಯಬೇಕಿದೆ ಎಂದು ಸ್ಪೀಕರ್ ಅವರಿಗೆ ತಿಳಿಸಿದರು. ಈ ಮಾತಿಗೆ ಪ್ರತಿಕ್ರಿಯೆ ನೀಡಿದ ಸ್ಪೀಕರ್ ಅವರು, ನಾನು ಯಾರ ಒತ್ತಡಕ್ಕೂ ಮಣಿಯುವುದಿಲ್ಲ. ಈ ಬಗ್ಗೆ ನಾನು ಕಾನೂನು ತಜ್ಞರ ಸಲಹೆ ಪಡೆಯುತ್ತೇನೆ ಎಂದರು.

    ಕಾಂಗ್ರೆಸ್ ಸದಸ್ಯರ ಮಾತಿಗೆ ಅಸಮಾಧಾನ ವ್ಯಕ್ತಪಡಿಸಿರುವ ಬಿಎಸ್ ಯಡಿಯೂರಪ್ಪ ಅವರು, ನಮಗೆ ಚರ್ಚೆ ನಡೆಸುವ ಬಗ್ಗೆ ಯಾವುದೇ ಆಕ್ಷೇಪ ಇಲ್ಲ. ಇಂದು ಮಧ್ಯರಾತ್ರಿ 12 ಗಂಟೆಯವರೆಗೆ ಚರ್ಚೆ ನಡೆಯಲಿ ಎಂದರು. ಆದರೆ ಇಂದೇ ವಿಶ್ವಾಸ ಮತಯಾಚನೆ ಪ್ರಕ್ರಿಯೆ ಪೂರ್ಣಗೊಳ್ಳಲಿ. ಆಡಳಿತ ಪಕ್ಷದ ಎಲ್ಲಾ ನಾಯಕರಿಗೆ ಮಾತನಾಡಲು ಅವಕಾಶ ನೀಡಿ, ನಮಗೆ ಕೇವಲ 5 ನಿಮಿಷ ಅವಕಾಶ ನೀಡಿದರೆ ಸಾಕು ಒಬ್ಬರೋ ಇಬ್ಬರೋ ಮಾತನಾಡುತ್ತಾರೆ ಎಂದು ತಿಳಿಸಿದರು.

    ಈ ವೇಳೆ ಕೃಷ್ಣಬೈರೇಗೌಡರು ಮಾತನಾಡಿ ಸದನದಲ್ಲಿ ಚರ್ಚೆ ನಡೆಯುತ್ತಿರುವಾಗ ಬಿಜೆಪಿ ಸದಸ್ಯರು ಹಿಂದಿನ ಬಾಗಿಲಿನಿಂದ ಹೋಗಿ ರಾಜ್ಯಪಾಲರ ಮೂಲಕ ಸೂಚನೆ ತರುವುದಿಲ್ಲ ಸರಿಯಲ್ಲ. ಇಲ್ಲೇ ಚರ್ಚೆ ಮಾಡಬಹುದು ಎಂದಾಗ ಈಶ್ವರಪ್ಪ ಇಡಿ ರಾಜ್ಯದ ಜನತೆ ನೋಡುತ್ತಿದ್ದಾರೆ. ಹೀಗಾಗಿ ನಾವು ರಾಜ್ಯಪಾಲರಲ್ಲಿ ಹೋಗಿ ದೂರು ನೀಡಿದ್ದೇವೆ ಎಂದರು. ಸ್ಪೀಕರ್ ರಮೇಶ್ ಕುಮಾರ್ ಮಾತನಾಡಿ ಇಲ್ಲಿ ಅನಾವಶ್ಯಕವಾಗಿ ರಾಜ್ಯಪಾಲರನ್ನು ಎಳೆ ತರುವುದು ಬೇಡ. ನಾವು ಹೋಗಿ ಮನವಿ ನೀಡಿದ್ದೇವೆ ಎಂದು ಬಿಜೆಪಿ ಸದಸ್ಯರೇ ಒಪ್ಪಿಕೊಂಡಿದ್ದಾರೆ. ಒಂದು ವೇಳೆ ಬಿಜೆಪಿ ನಾಯಕರು ಹೋಗದೇ ರಾಜ್ಯಪಾಲರು ಸೂಚನೆ ನೀಡಿದ್ದರೆ ಆಗ ಪ್ರಶ್ನಿಸಬಹುದಿತ್ತು. ದಯವಿಟ್ಟು ರಾಜ್ಯಪಾಲರನ್ನು ಈ ಚರ್ಚೆಗೆ ಎಳೆದು ತರಬೇಡಿ ಎಂದು ಮನವಿ ಮಾಡಿದರು.