Tag: ರಾಜ್ಯಪಾಲರು

  • ಹೈವೇಯಿಂದ ಜಾರಿದ ಕಾರು – ಪ್ರಾಣಾಪಾಯದಿಂದ ರಾಜ್ಯಪಾಲ ಬಂಡಾರು ಪಾರು

    ಹೈವೇಯಿಂದ ಜಾರಿದ ಕಾರು – ಪ್ರಾಣಾಪಾಯದಿಂದ ರಾಜ್ಯಪಾಲ ಬಂಡಾರು ಪಾರು

    ಹೈದರಾಬಾದ್: ಹಿಮಾಚಲ ಪ್ರದೇಶ ರಾಜ್ಯಪಾಲ ಬಂಡಾರು ದತ್ತಾತ್ರೇಯ ಅವರು ಪ್ರಯಾಣಿಸುತ್ತಿದ್ದ ಕಾರು ತೆಲಂಗಾಣದಲ್ಲಿ ಅಪಘಾತಕ್ಕಿಡಾಗಿದೆ. ತೆಲಂಗಾಣದ ಯಾದದ್ರಿ ಭುವನಗಿರಿ ಜಿಲ್ಲೆಯ ಚೌತುಪ್ಪಲ್ ಪಟ್ಟಣದ ಬಳಿ ಈ ಅಪಘಾತ ಸಂಭವಿಸಿದೆ.

    ಬಂಡಾರು ದತ್ತಾತ್ರೇಯ ಅವರು ಚೌತುಪ್ಪಲ್ ಬ್ಲಾಕ್‍ನ ಕೈತಪುರಂ ಗ್ರಾಮದಲ್ಲಿ ನಲ್‍ಗೊಂಡ ಜಿಲ್ಲೆಯ ಕಾರ್ಯಕ್ರಮವೊಂದಕ್ಕಾಗಿ ಪ್ರಯಾಣಿಸುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಯಾವುದೇ ರೀತಿಯ ಪ್ರಾಣಾಪಾಯ ಸಂಭವಿಸಿಲ್ಲ. ಘಟನೆಯ ನಂತರ ರಾಜ್ಯಪಾಲರು ತಮ್ಮ ವಾಹನವನ್ನು ಬದಲಾಯಿಸಿ ನಲ್ಗೊಂಡ ಜಿಲ್ಲೆಯತ್ತ ಹೊರಟಿದ್ದಾರೆ.

    ಪ್ರಾಥಮಿಕ ವರದಿಗಳ ಪ್ರಕಾರ ಮರ್ಸಿಡಿಸ್ ಬೆಂಜ್ ಕಾರಿನ (ಎಪಿ 9-ಎಎಸ್ -6666) ಸ್ಟೇರಿಂಗ್ ಇದ್ದಕ್ಕಿದ್ದಂತೆ ಲಾಕ್ ಆಗಿದೆ. ಇದರ ಪರಿಣಾಮವಾಗಿ ಚಾಲಕನು ಕಾರಿನ ಮೇಲಿನ ನಿಯಂತ್ರಣವನ್ನು ಕಳೆದುಕೊಂಂಡು ಅಪಘಾತ ಸಂಭವಿಸಿದೆ. ಬೆಂಗಾವಲಿನಲ್ಲಿ ಇತರ ವಾಹನಗಳಲ್ಲಿ ಪ್ರಯಾಣಿಸುತ್ತಿದ್ದ ಭದ್ರತಾ ಸಿಬ್ಬಂದಿ ಕಾರಿನತ್ತ ಧಾವಿಸಿ ದತ್ತಾತ್ರೇಯ ಅವರನ್ನು ರಕ್ಷಿಸಿದ್ದಾರೆ.

    ಅದೃಷ್ಟವಶಾತ್ ವಾಹನವು ಪಲ್ಟಿಯಾಗಲಿಲ್ಲ ಮತ್ತು ಯಾರಿಗೂ ಗಾಯವಾಗಲಿಲ್ಲ. ಕಾರು ಭಾಗಶಃ ಹಾನಿಗೊಳಗಾಗಿದೆ. ಅಪಘಾತಕ್ಕೆ ಕಾರಣವನ್ನು ನಾವು ಪರಿಶೀಲಿಸುತ್ತಿದ್ದೇವೆ ಎಂದು ಡಿಸಿಪಿ ಭೋಂಗೀರ್ ಕೆ ನಾರಾಯಣ ರೆಡ್ಡಿ ತಿಳಿಸಿದ್ದಾರೆ.

  • ಸೋನು ಸೂದ್ ಸೇವೆ ಮೆಚ್ಚಿ ರಾಜಭವನಕ್ಕೆ ರಾಜ್ಯಪಾಲರು ಆಹ್ವಾನ – ಶ್ಲಾಘನೆ

    ಸೋನು ಸೂದ್ ಸೇವೆ ಮೆಚ್ಚಿ ರಾಜಭವನಕ್ಕೆ ರಾಜ್ಯಪಾಲರು ಆಹ್ವಾನ – ಶ್ಲಾಘನೆ

    ಮುಂಬೈ: ಬಾಲಿವುಡ್ ನಟ ಸೋನು ಸೂದ್ ಅವರ ಸಾಮಾಜಿಕ ಕಾರ್ಯಗಳನ್ನು ಮೆಚ್ಚಿ ಮಹಾರಾಷ್ಟ್ರ ರಾಜ್ಯಪಾಲರು ರಾಜಭವನಕ್ಕೆ ಆಹ್ವಾನ ನೀಡಿ ಅಭಿನಂದನೆ ತಿಳಿಸಿದ್ದಾರೆ.

    ನಟ ಸೋನು ಸೂದ್ ಕೊರೊನಾ ಲಾಕ್‍ಡೌನ್‍ನಿಂದಾಗಿ ಮಹಾರಾಷ್ಟ್ರದಲ್ಲಿ ಸಿಲುಕಿದ್ದ ಕರ್ನಾಟಕದ ನೂರಾರು ವಲಸೆ ಕಾರ್ಮಿಕರಿಗೆ ಅವರ ಊರುಗಳಿಗೆ ತೆರಳಲು ಬಸ್ ವ್ಯವಸ್ಥೆ ಕಲ್ಪಿಸಿ ಮಾನವೀಯತೆ ಮೆರೆದಿದ್ದರು. ನಂತರ ನೂರಾರು ಯುವತಿಯರನ್ನು ಅವರ ತವರು ರಾಜ್ಯ ಒಡಿಶಾಕ್ಕೆ ಕಳುಹಿಸಲು ಸಹಾಯ ಮಾಡಿದ್ದರು. ಅವರ ಕಾರ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ. ಇದನ್ನೂ ಓದಿ: 177 ಯುವತಿಯರನ್ನು ತವರು ರಾಜ್ಯಕ್ಕೆ ಕಳುಹಿಸಿ ಮತ್ತೆ ಮಾನವೀಯತೆ ಮೆರೆದ ಸೋನು ಸೂದ್

    ಅಷ್ಟೇ ಅಲ್ಲದೇ ಸೋನು ಸೂದ್ ಅವರ ಉತ್ತಮ ಕಾರ್ಯವನ್ನು ಸರ್ಕಾರ ಕೂಡ ಮೆಚ್ಚಿದೆ. ಹೀಗಾಗಿ ಮಹಾರಾಷ್ಟ್ರದ ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ಅವರು ನಟ ಸೋನು ಸೂದ್‍ಗೆ ರಾಜಭವನಕ್ಕೆ ಆಹ್ವಾನ ನೀಡಿದ್ದರು. ಅದರಂತೆಯೇ ಸೋನು ಸೂದ್ ರಾಜ್ಯಪಾಲರನ್ನು ಭೇಟಿ ಮಾಡಿ, ತಾವು ಮಾಡುತ್ತಿರುವ, ಮಾಡಿರುವ ಕಾರ್ಯವನ್ನು ತಿಳಿಸಿದ್ದಾರೆ.

    ಈ ಬಗ್ಗೆ ಸ್ವತಃ ರಾಜ್ಯಪಾಲರು ಟ್ವೀಟ್ ಮಾಡಿ ತಿಳಿಸಿದ್ದಾರೆ. “ನಟ ಸೋನು ಸೂದ್ ಅವರನ್ನು ಮುಂಬೈ ರಾಜಭವನದಲ್ಲಿ ಭೇಟಿಯಾಗಿದ್ದೆ. ಅವರು ಕೊರೊನಾ ಸಂಕಷ್ಟದ ಸಮಯದಲ್ಲಿ ವಲಸೆ ಕಾರ್ಮಿಕರಿಗೆ ತಮ್ಮ ನಿವಾಸಕ್ಕೆ ತಲುಪಲು ಮಾಡಿರುವ ಸಹಾಯ ಹಾಗೂ ಅವರಿಗೆ ಆಹಾರ ವ್ಯವಸ್ಥೆ ಮಾಡಿದ ಬಗ್ಗೆ ವಿವರಿಸಿದರು. ಅವರ ಮಹತ್ಕಾರ್ಯವನ್ನು ಶ್ಲಾಘಿಸಿದ್ದೇನೆ. ಅಲ್ಲದೇ ಅವರ ಸಾಮಾಜಿಕ ಕಾರ್ಯಕ್ಕೆ ಸಂಪೂರ್ಣ ಬೆಂಬಲ ನೀಡುವುದಾಗಿ ಭರವಸೆ ನೀಡಲಾಗಿದೆ” ಎಂದು ಬರೆದುಕೊಂಡಿದ್ದಾರೆ.

    ಸೋನು ಸೂದ್ ಅವರು ಕರ್ನಾಟಕ ಮತ್ತು ಮಹಾರಾಷ್ಟ್ರ ಸರ್ಕಾರಗಳ ಜೊತೆಗೆ ಚರ್ಚಿಸಿ ಕಲಬುರಗಿಯಿಂದ ಮಹಾರಾಷ್ಟ್ರದ ಥಾಣೆಗೆ ಬಂದಿದ್ದ ವಲಸೆ ಕಾರ್ಮಿಕರನ್ನು ಅವರ ಊರುಗಳಿಗೆ ಕಳುಹಿಸಲು ಅನುಮತಿ ಪಡೆದಿದ್ದರು. ಈ ಮೂಲಕ ತಮ್ಮ ಸ್ವಂತ ಖರ್ಚಿನಲ್ಲಿ ಒಟ್ಟು ಹತ್ತು ಬಸ್‍ಗಳ ವ್ಯವಸ್ಥೆ ಮಾಡಿ ಥಾಣೆಯಿಂದ ಕಲಬುರಗಿಗೆ ತಾವೇ ಮುಂದೆ ನಿಂತು ಕಳುಹಿಸಿಕೊಟ್ಟಿದ್ದಾರೆ. ಅಷ್ಟೇ ಅಲ್ಲದೆ ವಲಸೆ ಕಾರ್ಮಿಕರಿಗೆ ಊಟದ ಕಿಟ್‍ಗಳನ್ನು ನೀಡಿ ಕನ್ನಡಿಗರ ಬಗ್ಗೆ ಕಾಳಜಿ ತೋರಿದ್ದರು.

    ಕೊರೊನಾ ಹಿನ್ನೆಲೆಯಲ್ಲಿ ಲಾಕ್‍ಡೌನ್ ಶುರುವಾದಾಗಿನಿಂದ ಸುಮಾರು ಒಡಿಶಾದ 177 ಯುವತಿಯರು ಕೇರಳದಲ್ಲಿ ಸಿಲುಕಿಕೊಂಡಿದ್ದರು. ಅಂದಿನಿಂದ ಯುವತಿಯರು ತಮ್ಮ ಊರಿಗೆ ಹೋಗಲು ಯಾವುದೇ ವ್ಯವಸ್ಥೆ ಇಲ್ಲದೆ ಪರದಾಡುತ್ತಿದ್ದರು. ಈ ಯುವತಿಯರ ಬಗ್ಗೆ ಭುವನೇಶ್ವರದಲ್ಲಿರುವ ಸ್ನೇಹಿತರೊಬ್ಬರ ಮೂಲಕ ಸೋನು ಸೂದ್ ತಿಳಿದುಕೊಂಡಿದ್ದರು.

    ತಕ್ಷಣ ಯುವತಿಯರಿಗೆ ಸಹಾಯ ಮಾಡಲು ಮುಂದಾಗಿದ್ದು, ಮೊದಲಿಗೆ ಸೋನು ಸೂದ್ ಕೇರಳದ ಕೊಚ್ಚಿ ಮತ್ತು ಒಡಿಶಾದ ಭುವನೇಶ್ವರ ವಿಮಾನ ನಿಲ್ದಾಣಗಳನ್ನು ತೆರೆಯುವಂತೆ ಆಯಾ ಸರ್ಕಾರಗಳಿಗೆ ಮನವಿ ಮಾಡಿಕೊಂಡಿದ್ದರು. ಅಲ್ಲಿಂದ ಅನೇಕ ಬಗೆಯ ಅನುಮತಿಗಳನ್ನು ಪಡೆದುಕೊಂಡಿದ್ದರು. ನಂತರ ಬೆಂಗಳೂರಿನಿಂದ ಕೊಚ್ಚಿಗೆ ವಿಶೇಷ ವಿಮಾನ ರವಾನಿಸಲು ವ್ಯವಸ್ಥೆ ಮಾಡಿದ್ದರು. ಈ ವಿಮಾನದ ಮೂಲಕ 177 ಯುವತಿಯರನ್ನು ಒಡಿಶಾಕ್ಕೆ ಕಳುಹಿಸಿದ್ದಾರೆ. ಈ ಮೂಲಕ ಯುವತಿಯರು ಅವರ ಕುಟುಂಬವನ್ನು ಸೇರಲು ಸೋನು ಸೂದ್ ನೆರವಾಗಿದ್ದರು.

  • ರಾಜಭವನದ ಬಾಗಿಲು ತಟ್ಟಿದ ಕಾಂಗ್ರೆಸ್

    ರಾಜಭವನದ ಬಾಗಿಲು ತಟ್ಟಿದ ಕಾಂಗ್ರೆಸ್

    ಬೆಂಗಳೂರು: ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಸದನದಲ್ಲಿ ಹೋರಾಟ ನಡೆಸಿದ್ದ ಕಾಂಗ್ರೆಸ್ ನಾಯಕರು, ಇಂದು ರಾಜ್ಯಪಾಲರಿಗೆ ದೂರು ನೀಡಿದ್ದಾರೆ. ಜೊತೆಗೆ ಸದನದಲ್ಲಿ ಚರ್ಚೆಗೆ ಅವಕಾಶ ಮಾಡಿ ಕೊಡದ ಸ್ಪೀಕರ್ ವಿರುದ್ಧವೂ ರಾಜ್ಯಪಾಲರಿಗೆ ದೂರು ನೀಡಿದ್ದಾರೆ.

    ವಿಪಕ್ಷ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ರಾಜ್ಯಪಾಲರ ಭೇಟಿಯಾದ ಕಾಂಗ್ರೆಸ್ ನಿಯೋಗ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ವಿರುದ್ಧ ರಾಜ್ಯಪಾಲ ವಿ.ಆರ್.ವಾಲಾಗೆ ದೂರು ಸಲ್ಲಿಸಿತು.

    ಸದನದ ಕಲಾಪದ ವೇಳೆ ಸ್ಪೀಕರ್ ವಿಪಕ್ಷಗಳ ಚರ್ಚೆಗೆ ಅವಕಾಶ ನೀಡುತ್ತಿಲ್ಲ. ವಿಧಾನಸಭೆಯಲ್ಲಿ ಪ್ರಮುಖ ವಿಷಯಗಳ ಬಗ್ಗೆ ಚರ್ಚೆ ನಡೆಸಲು ಅವಕಾಶ ನೀಡಬೇಕು ಎಂದು ಮನವಿ ಮಾಡಿದ್ದಾರೆ.

    ಸಂವಿಧಾನದ 175ನೇ ಪರಿಚ್ಛೇದಡಿ ಸ್ಪೀಕರ್ ಗೆ ನಿರ್ದೇಶನ ನೀಡಲು ಘನತೆವೆತ್ತ ರಾಜ್ಯಪಾಲರಿಗೆ ಅಧಿಕಾರವಿದೆ. ರಾಜ್ಯಪಾಲರು ಮಧ್ಯ ಪ್ರವೇಶಿಸಿ ಸ್ಪೀಕರ್ ಗೆ ನಿರ್ದೇಶನ ನೀಡಬೇಕು. ಶಾಸಕ ಯತ್ನಾಳ್ ಹೇಳಿಕೆ ವಿರುದ್ಧ ಚರ್ಚೆ ನಡೆಸಲು ಅವಕಾಶ ನೀಡಬೇಕು ಎಂದು ರಾಜ್ಯಪಾಲರಿಗೆ ಕಾಂಗ್ರೆಸ್ ನಿಯೋಗ ದೂರು ಸಲ್ಲಿಕೆ ಮಾಡಿತು. ಅಲ್ಲದೆ ಯತ್ನಾಳ್ ವಿರುದ್ಧವು ದೂರು ಸಲ್ಲಿಕೆ ಮಾಡಿ ಅವರ ವಿರುದ್ಧವೂ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

    ಸ್ಪೀಕರ್ ಹಾಗೂ ಯತ್ನಾಳ್ ಇಬ್ಬರೂ ಸಂವಿಧಾನಕ್ಕೆ ವಿರೋದ್ಧವಾಗಿ ನೆಡೆದುಕೊಳ್ಳುತ್ತಿದ್ದಾರೆ ಎಂದು ದೂರಿದ್ದಾರೆ. ಇದಕ್ಕೆ ಉತ್ತರಿಸಿರುವ ರಾಜ್ಯಪಾಲರು, ಸಂವಿಧಾನದ ನಿಯಮಗಳನ್ನು ನೋಡಿ ಪರಿಶೀಲನೆ ಮಾಡುತ್ತೇನೆ ಎಂದು ಕಾಂಗ್ರೆಸ್ ನಿಯೋಗಕ್ಕೆ ಭರವಸೆ ನೀಡಿದ್ದಾರೆ.

  • ಫ್ರೀ ಕಾಶ್ಮೀರ್ ಪ್ಲೇ ಕಾರ್ಡ್ ಪ್ರಕರಣದ ವರದಿ ಕೇಳಿದ ರಾಜ್ಯಪಾಲರು

    ಫ್ರೀ ಕಾಶ್ಮೀರ್ ಪ್ಲೇ ಕಾರ್ಡ್ ಪ್ರಕರಣದ ವರದಿ ಕೇಳಿದ ರಾಜ್ಯಪಾಲರು

    ಮೈಸೂರು: ಫ್ರೀ ಕಾಶ್ಮಿರ ಪ್ಲೇ ಕಾರ್ಡ್ ಪ್ರದರ್ಶನ ಪ್ರಕರಣಕ್ಕೆ ರಾಜ್ಯಪಾಲರ ಭವನ ಕೂಡ ಎಂಟ್ರಿ ಕೊಟ್ಟಿದೆ. ಪ್ರಕರಣದ ಬಗ್ಗೆ ಸವಿಸ್ತಾರ ನೀಡುವಂತೆ ರಾಜ್ಯಪಾಲರು ವಿಶ್ವವಿದ್ಯಾಲಯದ ರಿಜಿಸ್ಟರ್ ಅವರಿಗೆ ಆದೇಶಿಸಿದ್ದಾರೆ. ಪ್ರಕರಣಕ್ಕೆ ಕಾರಣ ಏನು? ಇದಕ್ಕೆ ಹೊಣೆಗಾರರು ಯಾರು ಎಂಬುದನ್ನು ವಿವರವಾಗಿ ವರದಿ ನೀಡುವಂತೆ ಆದೇಶಿಸಿದ್ದಾರೆ.

    ಮೈಸೂರು ವಿಶ್ವವಿದ್ಯಾಲಯದ ಕ್ಯಾಂಪಸ್‍ನಲ್ಲಿ ನಡೆದ ಪ್ರತಿಭಟನಾ ವೇಳೆ ಫ್ರೀ ಕಾಶ್ಮಿರ ಪ್ಲೇ ಕಾರ್ಡ್ ಪ್ರದರ್ಶನ ಮಾಡಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಮೈಸೂರು ವಿಶ್ವವಿದ್ಯಾಲಯದ ರಿಜಿಸ್ಟರ್ ಆರ್.ಶಿವಪ್ಪ ಅವರು ಪ್ರತಿಭಟನಾ ಆಯೋಜಕರಿಗೆ ನೋಟಿಸ್ ಜಾರಿ ಮಾಡಿದ್ದಾರೆ. ಅಷ್ಟೇ ಅಲ್ಲದೆ ಮೈಸೂರು ವಿಶ್ವವಿದ್ಯಾಲಯದಿಂದ ಜಯಲಕ್ಷೀಪುರಂ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರತ್ಯೇಕ ದೂರು ದಾಖಲಾಗಿದೆ. ಇದನ್ನೂ ಓದಿ: ಪಬ್ಲಿಕ್ ಟಿವಿ ಇಂಪ್ಯಾಕ್ಟ್ – ಫ್ರೀ ಕಾಶ್ಮೀರ ಪ್ಲೇಕಾರ್ಡ್ ಪ್ರದರ್ಶಿಸಿದವರ ಮೇಲೆ ದೂರು ದಾಖಲು

    ಮಾನಸ ಗಂಗೋತ್ರಿಯ ಭದ್ರತಾ ಸಿಬ್ಬಂದಿಗೂ ನೋಟಿಸ್ ಜಾರಿಯಾಗಿದೆ. ಅನುಮತಿ ಇಲ್ಲದ ವ್ಯಕ್ತಿಗಳಿಗೆ ಪ್ರತಿಭಟನೆ ನಡೆಸಲು ಹೇಗೆ ಅವಕಾಶ ಕೊಟ್ಟಿದ್ದೀರಿ? ಇದು ಭದ್ರತಾ ಲೋಪ. ಇದಕ್ಕೆ ಕಾರಣ ನೀಡಿ ಎಂದು ನೋಟಿಸ್ ಜಾರಿಯಾಗಿದೆ.

  • ಕೆಲವರು ಬಿಜೆಪಿ ಮುಖವಾಣಿಯಂತೆ ಕೆಲಸ ಮಾಡ್ತಿದ್ದಾರೆ: ಮಮತಾ ಬ್ಯಾನರ್ಜಿ

    ಕೆಲವರು ಬಿಜೆಪಿ ಮುಖವಾಣಿಯಂತೆ ಕೆಲಸ ಮಾಡ್ತಿದ್ದಾರೆ: ಮಮತಾ ಬ್ಯಾನರ್ಜಿ

    – ‘ಮಹಾ’ ರಾಜ್ಯಪಾಲರ ವಿರುದ್ಧ ದೀದಿ ಕಿಡಿ

    ಕೋಲತ್ತಾ: ಕೆಲವರು ಬಿಜೆಪಿ ಮುಖವಾಣಿಯಂತೆ ಕೆಲಸ ಮಾಡುತ್ತಿದ್ದಾರೆ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಪರೋಕ್ಷವಾಗಿ ಮಹಾರಾಷ್ಟ್ರ ರಾಜ್ಯಪಾಲರ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ.

    ಕೋಲ್ಕತ್ತಾದಲ್ಲಿ ಮಾತನಾಡಿದ ಮಮತಾ ಬ್ಯಾನರ್ಜಿ, ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿ ಆಡಳಿತ ಜಾರಿ ಸಂಬಂಧ ಅಲ್ಲಿನ ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ  ಅವರ ಬಗ್ಗೆ ಕಿಡಿಕಾರಿದ್ದಾರೆ. ‘ಕೆಲವು ನಾಮನಿರ್ದೇಶಿತ ವ್ಯಕ್ತಿಗಳು ತಮ್ಮ ಗಡಿಯನ್ನು ಮೀರಿದ್ದಾರೆ. ಅವರ ನಡೆ ಕೇಂದ್ರ ಸರ್ಕಾರವನ್ನು ಮೀರಿಸಬಾರದು. ಈ ಬಗ್ಗೆ ಕೇಂದ್ರ ಎಚ್ಚರವಹಿಸಬೇಕು’ ಎಂದು ಹೇಳಿದ್ದಾರೆ.

    ಸಾಮಾನ್ಯವಾಗಿ ನಾನು ಸಾಂವಿಧಾನಿಕ ಹುದ್ದೆಗಳ ಬಗ್ಗೆ ಪ್ರತಿಕ್ರಿಯಿಸುವುದಿಲ್ಲ. ಆದರೆ ಕೆಲವು ಜನರು (ರಾಜ್ಯಪಾಲರು) ಬಿಜೆಪಿ ಮುಖವಾಣಿಗಳಂತೆ ವರ್ತಿಸುತ್ತಿದ್ದಾರೆ. ನನ್ನ ರಾಜ್ಯದಲ್ಲೂ ಏನು ನಡೆಯುತ್ತಿದೆ ಎಂಬುದನ್ನು ನೀವು ನೋಡಿದ್ದೀರಿ. ಅವರು ಸಂಯುಕ್ತ ಆಡಳಿತವನ್ನು ನಡೆಸಲು ಬಯಸುತ್ತಾರೆ ಎಂದು ಮಮತಾ ಬ್ಯಾನರ್ಜಿ ಆರೋಪಿಸಿದರು.

    ಮಹಾರಾಷ್ಟ್ರಾದ ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ   ಅವರು ಕೇಂದ್ರ ಸರ್ಕಾರಕ್ಕೆ ಮಂಗಳವಾರ ನೀಡಿದ್ದ ವರದಿ ಹಿನ್ನೆಲೆಯಲ್ಲಿ ರಾಷ್ಟ್ರಪತಿಗಳ ಆಡಳಿತ ಹೇರಲಾಯಿತು. ಇತ್ತ 2019ರ ಜುಲೈ ಅಂತ್ಯದಲ್ಲಿ ಅಧಿಕಾರ ವಹಿಸಿಕೊಂಡಾಗಿನಿಂದ ಪಶ್ಚಿಮ ಬಂಗಾಳ ರಾಜ್ಯಪಾಲ ಜಗದೀಪ್ ಧಂಖರ್ ಅವರು ಆಡಳಿತರೂಢ ತೃಣಮೂಲ ಕಾಂಗ್ರೆಸ್ ಜೊತೆ ವಿವಿಧ ವಿಷಯಗಳ ಬಗ್ಗೆ ಭಿನ್ನಾಭಿಪ್ರಾಯ ಹೊಂದಿದ್ದಾರೆ. ಈ ವಿಚಾರವಾಗಿ ಮಮತಾ ಬ್ಯಾನರ್ಜಿ ಅಸಮಾಧಾನ ಹೊರಹಾಕಿದ್ದಾರೆ.

    ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಗೆ ತಂದ ವಿಚಾರವಾಗಿ ಬುಧವಾರ ಪ್ರತಿಕ್ರಿಯೆ ನೀಡಿದ್ದ ಗೃಹ ಸಚಿವ ಅಮಿತ್ ಶಾ, ವಿಧಾನಸಭಾ ಚುನಾವಣೆ ಫಲಿತಾಂಶದ ಬಳಿಕ ರಾಜ್ಯಪಾಲರು ಎಲ್ಲ ಪಕ್ಷಗಳಿಗೂ 18 ದಿನದ ಅವಕಾಶ ನೀಡಿದ್ದರು. ಆದರೆ ಯಾವ ಪಕ್ಷವೂ ಸರ್ಕಾರ ರಚನೆಗೆ ಮುಂದಾಗಲಿಲ್ಲ. ವಿಧಾನಸಭಾ ಅವಧಿ ಅಂತ್ಯವಾಗಲು ಬಂದಾಗ ರಾಜ್ಯಪಾಲರು ಪಕ್ಷಗಳಿಗೆ ಸರ್ಕಾರ ರಚಿಸುವಂತೆ ಪ್ರತಿ ಪಕ್ಷಗಳಿಗೆ ಪತ್ರ ಬರೆದು ಆಹ್ವಾನಿಸಿದರು. ಬಿಜೆಪಿ, ಶಿವಸೇನೆ, ಎನ್‍ಸಿಪಿ ಮತ್ತು ಕಾಂಗ್ರೆಸ್ ಯಾರು ಸರ್ಕಾರ ರಚನೆ ಮಾಡದಿದ್ದಾಗ ರಾಜ್ಯಪಾಲರು ರಾಷ್ಟ್ರಪತಿ ಆಳ್ವಿಕೆ ಶಿಫಾರಸ್ಸು ಮಾಡಿದ್ದಾರೆ. ಇವಾಗಲೂ ಸಹ ಯಾರ ಬಳಿ ಬಹುಮತವಿದ್ದರೆ ರಾಜ್ಯಪಾಲರನ್ನು ಸಂಪರ್ಕಿಸಿ ಸರ್ಕಾರ ರಚಿಸುವ ಅವಕಾಶಗಳಿವೆ ಎಂದು ತಿಳಿಸಿದ್ದರು.

    ರಾಜ್ಯಪಾಲರು ಎಲ್ಲರಿಗೂ ಸಮಾನ ಅವಕಾಶ ನೀಡಿದ್ದಾರೆ. ವಿಪಕ್ಷಗಳು ಸರ್ಕಾರ ರಚಿಸುವದರಲ್ಲಿ ರಾಜಕೀಯ ಮಾಡುತ್ತಿದ್ದು, ಜನರಿಗೆ ತಪ್ಪು ಸಂದೇಶವನ್ನ ರವಾನಿಸುವ ಕೆಲಸ ಮಾಡುತ್ತಿವೆ. ರಾಷ್ಟ್ರಪತಿ ಆಳ್ವಿಕೆ ಜಾರಿಗೆ ತರುವ ಮೂಲಕ ರಾಜ್ಯಪಾಲರು ಸರ್ಕಾರ ರಚನೆ ಮಾಡುವವರಿಗೆ ಆರು ತಿಂಗಳ ಅವಕಾಶ ನೀಡಿದ್ದಾರೆ. ಸಂಖ್ಯೆ ತೋರಿಸಲು ಇವತ್ತು ಸಹ ಅವಕಾಶಗಳು ನಮ್ಮೆಲ್ಲರ ಮುಂದಿವೆ. ರಾಜ್ಯಪಾಲರು ಏಕಪಕ್ಷೀಯ ನಿರ್ಣಯ ತೆಗೆದುಕೊಂಡಿಲ್ಲ ಎಂದು ಶಿವಸೇನೆ ಆರೋಪಕ್ಕೆ ತಿರುಗೇಟು ನೀಡಿದ್ದರು.

  • ನಾಡಿನ ರೈತರ ಭೇಟಿ ಮಾಡದ ರಾಜ್ಯಪಾಲರು ಗುಜರಾತಿ ಕಾರ್ಯಕ್ರಮದಲ್ಲಿ ಭಾಗಿ

    ನಾಡಿನ ರೈತರ ಭೇಟಿ ಮಾಡದ ರಾಜ್ಯಪಾಲರು ಗುಜರಾತಿ ಕಾರ್ಯಕ್ರಮದಲ್ಲಿ ಭಾಗಿ

    ಬೆಂಗಳೂರು: ಮಹದಾಯಿ ಹೋರಾಟಗಾರರನ್ನು ಭೇಟಿ ಮಾಡದ ರಾಜ್ಯಪಾಲರು ಇಂದು ಗುಜರಾತಿಯ ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ.

    ಮಹದಾಯಿ ವಿಚಾರವಾಗಿ ಮನವಿ ಸಲ್ಲಿಸಲು ರೈತರು ರಾಜ್ಯಪಾಲರನ್ನು ಭೇಟಿಗೆ ಕಾಲಾವಕಾಶ ಕೇಳಿದ್ದರು. ಆದರೆ ರಾಜ್ಯಪಾಲರು ಅನುಮತಿಯನ್ನು ನೀಡಿರಲಿಲ್ಲ. ಇಂದು ವಜುಬಾಯಿ ವಾಲಾ ಸಿಲಿಕಾನ್ ಸಿಟಿಯ ವೆಸ್ಟ್ ಆಫ್ ಕಾರ್ಡ್ ರೋಡ್ ಬಳಿ ನೆಡೆಯುತ್ತಿರುವ ಗುಜರಾತ್‍ನ ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ.

    2 ದಿನದಿಂದ ಮಳೆ, ಗಾಳಿ, ಬಿಸಿಲಿನಲ್ಲಿ ಆಹೋರಾತ್ರಿ ಧರಣಿ ಮಾಡಿದ್ದ ರೈತರು ರಾಜ್ಯಪಾಲರನ್ನು ಭೇಟಿ ಮಾಡಲು ಶುಕ್ರವಾರದಿಂದ ಎರಡು ದಿನವು ರಾಜಭವನದ ಬಳಿ ತೆರಳಿದ್ದರು. ಆದರೆ ಹೋರಾಟಗಾರರನ್ನು ಕ್ಯಾರೆ ಅನ್ನದ ರಾಜ್ಯಪಾಲರು ಭೇಟಿ ಮಾಡಲು ಅವಕಾಶ ನೀಡಿರಲಿಲ್ಲ. ಆದರೆ ಇಂದು ಸಂಜೆ ಗುಜರಾತಿಗರ ಖಾಸಗಿ ಕಾರ್ಯಕ್ರಮದಲ್ಲಿ ರಾಜ್ಯಪಾಲ ವಜುಬಾಯ್ ವಾಲ ಭಾಗವಹಿಸಿದ್ದಾರೆ.

  • ಮಾಜಿ ರಾಜ್ಯಪಾಲರು, ಮಾಜಿ ಸಿಎಂ, ಅಧಿಕಾರಿಗಳ ಸ್ಕ್ಯಾಂಡಲ್ – 40 ಕಾಲ್ ಗರ್ಲ್ಸ್‌ಗಳಿಂದ ಹನಿಟ್ರ್ಯಾಪ್

    ಮಾಜಿ ರಾಜ್ಯಪಾಲರು, ಮಾಜಿ ಸಿಎಂ, ಅಧಿಕಾರಿಗಳ ಸ್ಕ್ಯಾಂಡಲ್ – 40 ಕಾಲ್ ಗರ್ಲ್ಸ್‌ಗಳಿಂದ ಹನಿಟ್ರ್ಯಾಪ್

    – ಕೃತ್ಯದಲ್ಲಿ ಬಿ ಗ್ರೇಡ್ ಬಾಲಿವುಡ್ ನಟಿಯರೂ ಭಾಗಿ
    – ಸಹಕರಿಸಿದ್ದಕ್ಕೆ ಎನ್‍ಜಿಒಗಳಿಗೆ ಸರ್ಕಾರದ ಗುತ್ತಿಗೆ

    ಭೋಪಾಲ್: ಮಧ್ಯಪ್ರದೇಶದ ಮಾಜಿ ರಾಜ್ಯಪಾಲರು, ರಾಜಕಾರಣಿಗಳು ಹಾಗೂ ಉನ್ನತ ಅಧಿಕಾರಿಗಳು, ಗಣ್ಯ ವ್ಯಕ್ತಿಗಳನ್ನು ಬಾಲಿವುಡ್‍ನ ಕೆಲವು ಬಿ-ಗ್ರೇಡ್ ನಟಿಯರು ಸೇರಿದಂತೆ 40ಕ್ಕೂ ಅಧಿಕ ಕಾಲ್ ಗರ್ಲ್ಸ್‌ ಸೇರಿ ಹನಿಟ್ರ್ಯಾಪ್ ಎಸಗಿದ ಗಂಭೀರ ಪ್ರಕರಣ ಬೆಳಕಿಗೆ ಬಂದಿದೆ.

    ಈ ಕೃತ್ಯಕ್ಕೆ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ, ರಾಜ್ಯ ರಾಜ್ಯಪಾಲರು ಸೇರಿದಂತೆ ಹಲವು ಅಧಿಕಾರಿಗಳು ಗಣ್ಯ ವ್ಯಕ್ತಿಗಳು ಬಲಿಪಶುಗಳಾಗಿದ್ದಾರೆ. ಅಧಿಕಾರಿಗಳು ಹಾಗೂ ರಾಜಕಾರಣಿಗಳು ರಾಜಿ ಮಾಡಿಕೊಳ್ಳುವ ವೇಳೆ ಹಾಗೂ ಸೆಕ್ಸ್ ನಡೆಸುವ ವೇಳೆ ಚಿತ್ರೀಕರಿಸಿರುವ 92 ಎಚ್‍ಡಿ ವಿಡಿಯೋಗಳನ್ನು ವಶಪಡಿಸಿಕೊಳ್ಳಲಾಗಿದೆ. ಅಲ್ಲದೆ, ಈವರೆಗೆ ಎರಡು ಲ್ಯಾಪ್‍ಟಾಪ್‍ಗಳು ಮತ್ತು ಹಲವಾರು ಮೊಬೈಲ್‍ಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಬ್ಲ್ಯಾಕ್‍ಮೇಲ್ ಹಾಗೂ ಸುಲಿಗೆ ದಂಧೆ ಆರೋಪದ ಮೇಲೆ ಐವರು ಮಹಿಳೆಯರನ್ನು ಬಂಧಿಸಲಾಗಿದೆ.

    ಮಧ್ಯಪ್ರದೇಶದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ(ಎಡಿಜಿಪಿ) ಸಂಜೀವ್ ಶಮಿ ನೇತೃತ್ವದ ಪೊಲೀಸರ ವಿಶೇಷ ತನಿಖಾ ತಂಡ(ಎಸ್‍ಐಟಿ)ವು ಕಾಲ್ ಗರ್ಲ್ಸ್‌ ಚಿತ್ರೀಕರಿಸಿದ ಸ್ಥಳದಲ್ಲಿ ವಿಡಿಯೋಗಳನ್ನು ಹೊಂದಿರುವ ಸಾಕ್ಷ್ಯಗಳನ್ನು ಸಂಗ್ರಹಿಸುತ್ತಿದೆ. ಈ ಪ್ರಕರಣದ ತನಿಖೆ ನಡೆಸಲು ಡಿ.ಶ್ರೀನಿವಾಸ್ ಅವರ ಜಾಗಕ್ಕೆ ಸಂಜೀವ್ ಶಮಿಯವರನ್ನು ನೇಮಿಸಲಾಗಿದೆ. ಈ ಕುರಿತು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯ್‍ವರ್ಗಿಯಾ ಅವರು ಆಕ್ರೋಶ ವ್ಯಕ್ತಪಡಿಸಿದ್ದು, ಕಾಂಗ್ರೆಸ್ ಸರ್ಕಾರವು ಬಿಜೆಪಿ ನಾಯಕರನ್ನು ಗುರಿಯಾಗಿಸಿಕೊಂಡು ತನಿಖೆ ನಡೆಸುತ್ತಿದೆ. ಈ ಕುರಿತು ಸಿಬಿಐನಂತಹ ಸ್ವತಂತ್ರ ಸಂಸ್ಥೆಯಿಂದ ತನಿಖೆ ನಡೆಯಲಿ ಎಂದು ಒತ್ತಾಯಿಸಿದ್ದಾರೆ.

    ಹನಿಟ್ರ್ಯಾಪ್ ಹೇಗೆ?
    ಈ ಹನಿಟ್ರ್ಯಾಪ್ ಕಿಂಗ್‍ಪಿನ್ ಶ್ವೇತಾ ಸ್ವಾಪ್ನಿಲ್ ಜೈನ್ ಆಗಿದ್ದು, ಈಕೆ ಉನ್ನತ ಅಧಿಕಾರಿಗಳು, ಮಂತ್ರಿಗಳು ಹಾಗೂ ರಾಜಕಾರಣಿಗಳನ್ನು ಟಾರ್ಗೆಟ್ ಮಾಡಿ, ಆರಂಭದ ಸಂವಾದದ ನಂತರ ಅವರನ್ನು ಲೈಂಗಿಕತೆಗೆ ಆಹ್ವಾನಿಸುತ್ತಿದ್ದಳು. ಇದಕ್ಕಾಗಿ ಅಥಿತಿ ಗೃಹ ಅಥವಾ 5 ಸ್ಟಾರ್ ಹೋಟೆಲ್‍ಗಳಿಗೆ ಆಹ್ವಾನಿಸುತ್ತಾಳೆ. ವ್ಯಕ್ತಿಯು ಒಂದು ಬಾರಿ ಲೈಂಗಿಕತೆ ನಡೆಸಿದ ನಂತರ ಆ ವಿಡಿಯೋವನ್ನು ಮೊಬೈಲ್ ಅಥವಾ ಸೀಕ್ರೆಟ್ ಕ್ಯಾಮರಾ ಮೂಲಕ ಚಿತ್ರೀಕರಿಸಲಾಗುತ್ತದೆ. ಈ ಕುರಿತು ಶ್ವೇತಾಳ ಪತಿ ಸ್ವಾಪ್ನಿಲ್ ಜೈನ್ ನಿಂದ 6 ಹಾರ್ಡ್ ಡಿಸ್ಕ್ ಗಳನ್ನುವಶಪಡಿಸಿಕೊಳ್ಳಲಾಗಿದೆ ಎಂದು ಎಸ್‍ಐಟಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

    ಅಲ್ಲದೆ, ಕೆಲವು ಬಾರಿ ಅಧಿಕಾರಿಗಳು ಹಾಗೂ ರಾಜಕಾರಣಿಗಳು ಮುಂಬೈ ಅಥವಾ ದೆಹಲಿಗೆ ಅಧಿಕೃತ ಪ್ರವಾಸಕ್ಕೆಂದು ತೆರಳಿದಾಗ ಅವರನ್ನು ಟಾರ್ಗೆಟ್ ಮಾಡಿ ಅವರ ಬೇಡಿಕೆಗೆ ಅನುಗುಣವಾಗಿ ಕೆಲ ಮಾಡೆಲ್ ಹುಡುಗಿಯರು ಹಾಗೂ ಬಾಲಿವುಡ್ ನಟಿಯರನ್ನು ಕಳುಹಿಸಲಾಗಿದೆ ಎಂದು ತಿಳಿದು ಬಂದಿದೆ. ಈ ಕುರಿತು ಎಸ್‍ಐಟಿ ಅಧಿಕಾರಿಗಳು ಇಂತಹ ವಿಡಿಯೋಗಳನ್ನು ವಶಪಡಿಸಿಕೊಂಡ ನಂತರ ಯಾವ ನಟಿ ಎಂದು ಬಹಿರಂಗವಾಗಲಿದೆ.

    ವಿಚಾರಣೆಯ ಸಮಯದಲ್ಲಿ ಶ್ವೇತಾ ಈ ಕುರಿತು ಮಾಹಿತಿ ನೀಡಿ, ಒಮ್ಮೆ ಮಂತ್ರಿ ಅಥವಾ ಕಾರ್ಯದರ್ಶಿ ಹನಿ ಟ್ರ್ಯಾಪ್‍ನಲ್ಲಿ ಸಿಕ್ಕಿಬಿದ್ದಾಗ ನಾನು ನಡೆಸುತ್ತಿರುವ ಎನ್‍ಜಿಓಗೆ ಸರ್ಕಾರದ ಕಾಂಟ್ರ್ಯಾಕ್ಟ್ ಕೊಡಿಸುವ ಪ್ರಯತ್ನ ನಡೆಸಿದ್ದೆ. ಪತಿ ನಡೆಸುತ್ತಿರುವ ಎನ್‍ಜಿಓಗೆ ಭೋಪಾಲ್ ಮುನ್ಸಿಪಲ್ ಕಾರ್ಪೋರೇಶನ್‍ನಿಂದ 8 ಕೋಟಿ ರೂ.ಗಳ ಗುತ್ತಿಗೆ ನೀಡಲಾಗಿದೆ ಎಂದು ಶ್ವೇತಾ ಒಪ್ಪಿಕೊಂಡಿದ್ದಾಳೆ. ಪಿಡಬ್ಲ್ಯೂಡಿ, ವಸತಿ, ಸಮಾಜ ಕಲ್ಯಾಣ ಸೇರಿದಂತೆ ಸರ್ಕಾರದ ಇತರೆ ಇಲಾಖೆಗಳ ಗುತ್ತಿಗೆಗಳನ್ನು ನೀಡಲಾಗಿದೆ. ಅಲ್ಲದೆ, ಮಾಜಿ ಮುಖ್ಯಮಂತ್ರಿಯೊಬ್ಬರು ಪೋಶ್ ಭೋಪಾಲ್‍ನ ಮಿನಾಲ್ ರೆಸಿಡೆನ್ಸಿಯಲ್ಲಿ ಒಂದು ಬಂಗಲೆಯನ್ನು ಉಡುಗೊರೆಯಾಗಿ ನೀಡಿದ್ದಾರೆ ಎಂದು ತಿಳಿಸಿದ್ದಾಳೆ.

    ಶ್ವೇತಾ ಜೈನ್ ಜೊತೆಗೆ ಎಸ್‍ಐಟಿ ಬಂಧಿಸಲ್ಪಟ್ಟ ಮತ್ತೊಬ್ಬ ಮಹಿಳೆ ಆರತಿ ದಯಾಳ್ ವಿಚಾರಣೆ ವೇಳೆ ಇನ್ನಷ್ಟು ಮಾಹಿತಿ ಬಹಿರಂಗಪಡಿಸಿದ್ದು, ನಾನೂ ಸಹ ಹಿರಿಯ ಐಎಎಸ್ ಅಧಿಕಾರಿಯೊಬ್ಬರ ಸಂಪರ್ಕದಲ್ಲಿದ್ದೆ ಎಂದು ಒಪ್ಪಿಕೊಂಡಿದ್ದಾಳೆ. ಈ ಅಧಿಕಾರಿಗಳು ನನಗೆ ಒಂದು ಫ್ಲ್ಯಾಟ್‍ನ ವ್ಯವಸ್ಥೆ ಸಹ ಮಾಡಿದ್ದರು ಎಂದು ಸಹ ಒಪ್ಪಿಕೊಂಡಿದ್ದಾಳೆ. ಆರತಿ ಈ ಫ್ಲ್ಯಾಟ್ ಆಕ್ರಮಿಸಿಕೊಂಡ ನಂತರ ಅದನ್ನೇ ಅಕ್ರಮಗಳ ಅಡ್ಡ ಮಾಡಿಕೊಂಡಿದ್ದಳು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ರಾಜಕಾರಣಿಗಳು, ಅಧಿಕಾರಿಗಳು ಮತ್ತು ಸರ್ಕಾರದ ಉನ್ನತ ಎಂಜಿನಿಯರ್‍ಗಳು ರಾಜಿ ಮಾಡಿಕೊಳ್ಳುತ್ತಿದ್ದ ಸಂದರ್ಭದಲ್ಲಿನ ಫ್ಲ್ಯಾಟ್‍ನ ಕೋಣೆಗಳಲ್ಲಿ ಸಹ ರಹಸ್ಯ ಕ್ಯಾಮರಾಗಳನ್ನು ಅಳವಡಿಸುತ್ತಿದ್ದೆವು. ಸ್ಟಿಂಗ್ ಆಪರೇಷನ್ ನಡೆಸಲು ಕಾಲ್ ಗಲ್ರ್ಸ್ ನೇಮಿಸಿಕೊಳ್ಳುತ್ತಿದ್ದೆವು. ಮಂತ್ರಿಗಳನ್ನು ಸೆಳೆಯಲು ಕೆಲವು ಸಂದರ್ಭಗಳಲ್ಲಿ ಬಿ ಗ್ರೇಡ್ ಬಾಲಿವುಡ್ ನಾಯಕಿಯರು ಹಾಗೂ ಮಾಡೆಲ್‍ಗಳನ್ನು ತೊಡಗಿಸಿಕೊಳ್ಳುತ್ತಿದ್ದೆವು ಎಂದು ಮಾಹಿತಿ ಬಹಿರಂಗಪಡಿಸಿದ್ದಾರೆ.

    ದಂಧೆಯ ಮಾಸ್ಟರ್ ಮೈಂಡ್ ಶ್ವೇತಾಳಂತೆಯೇ ಆರತಿ ಸಹ ಅಧಿಕಾರಿಗಳು ಹಾಗೂ ಸಂಬಂಧಪಟ್ಟ ಮಂತ್ರಿಗಳಿಂದ ಹೆಚ್ಚು ಹಣ ಪಡೆಯಲು ಎನ್‍ಜಿಓವನ್ನು ಸ್ಥಾಪಿಸಿದ್ದಳು. ವಿರಳ ಸಂದರ್ಭಗಳಲ್ಲಿ ಮಾತ್ರ ಸ್ಪೈ ಕ್ಯಾಮರಾ ಬಳಸುತ್ತಿದ್ದೆವು, ಹೆಚ್ಚಿನ ಸಂದರ್ಭಗಳಲ್ಲಿ ಎನ್‍ಜಿಓ ಮೂಲಕ ಸರ್ಕಾರದ ಹಣವನ್ನು ಸುಲಭವಾಗಿ ವರ್ಗಾಯಿಸುವಾಗ ಕ್ಯಾಮರಾ ಬಳಸುತ್ತಿದ್ದೆವು ಎಂದು ಇಬ್ಬರು ತಿಳಿಸಿದ್ದಾರೆ.

    ಲ್ಯಾಬ್‍ಗಳಲ್ಲಿ ವಿಡಿಯೋಗಳನ್ನು ಪರೀಕ್ಷಿಸಿದ ನಂತರ, ಬ್ಲ್ಯಾಕ್‍ಮೇಲ್ ಮಾಡಿದ ವ್ಯಕ್ತಿಗಳನ್ನು ಗುರುತಿಸಲಾಗಿದೆ. ಗಣ್ಯ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಬಹುದಾಗಿದೆ. ಈ ಪ್ರಕರಣವೀಗ ರಾಜಕೀಯ ತಿರುವು ಪಡೆದುಕೊಂಡಿದ್ದು, ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರಲ್ಲಿ ಪರ ವಿರೋಧದ ಚರ್ಚೆಗಳು ನಡೆಯುತ್ತಿವೆ. ಅಚ್ಚರಿಯ ಸಂಗತಿ ಎಂದರೆ ಈ ಹನಿ ಟ್ರ್ಯಾಪ್ ಪ್ರಕರಣದ ಸೂತ್ರಧಾರೆ ಶ್ವೇತಾ ಜೈನ್ 2013 ಮತ್ತು 2018ರ ಚುನಾವಣೆಯಲ್ಲಿ ಬಿಜೆಪಿ ಪರ ಪ್ರಚಾರ ನಡೆಸಿದ್ದಳು.

  • ನಾನು ಬಳ್ಳಾರಿ ಉಸ್ತುವಾರಿ ಕೇಳಿರುವೆ, ಹೊಸ ರಾಜ್ಯಪಾಲರು ಬಂದ್ಮೇಲೆ ನೇಮಕಾತಿ: ಶ್ರೀರಾಮುಲು

    ನಾನು ಬಳ್ಳಾರಿ ಉಸ್ತುವಾರಿ ಕೇಳಿರುವೆ, ಹೊಸ ರಾಜ್ಯಪಾಲರು ಬಂದ್ಮೇಲೆ ನೇಮಕಾತಿ: ಶ್ರೀರಾಮುಲು

    – ರಾಮ ಇದ್ದ ಕಡೆ ಲಕ್ಷ್ಮಣ ಬರುತ್ತಿದ್ದಾರೆ

    ಬಳ್ಳಾರಿ: ಜಿಲ್ಲಾ ಉಸ್ತುವಾರಿ ಸಚಿವರನ್ನು ನೇಮಿಸಿ ಪಟ್ಟಿಯನ್ನು ರಾಜ್ಯಪಾಲರ ಅಂಕಿತಕ್ಕೆ ಕಳುಹಿಸಿ ಕೊಡಲಾಗಿದೆ. ಆದರೆ ಹೊಸ ರಾಜ್ಯಪಾಲರ ಆಗಮನವಾಗದ ಹಿನ್ನೆಲೆಯಲ್ಲಿ ಉಸ್ತುವಾರಿ ಸಚಿವರ ನೇಮಕಾತಿಯಾಗಿಲ್ಲವೆಂದು ಆರೋಗ್ಯ ಸಚಿವ ಶ್ರೀರಾಮುಲು ಹೇಳಿದ್ದಾರೆ.

    ಬಳ್ಳಾರಿಯಲ್ಲಿಂದು ಪ್ರಧಾನಿ ನರೇಂದ್ರ ಮೋದಿ ಹುಟ್ಟುಹಬ್ಬದ ಅಂಗವಾಗಿ ವಿಮ್ಸ್ ಆಸ್ಪತ್ರೆಯಲ್ಲಿ ಸ್ವಚ್ಛತಾ ಕಾರ್ಯ ನಡೆಸಿ ಮಾತನಾಡಿದ ಆರೋಗ್ಯ ಸಚಿವ ಶ್ರೀರಾಮುಲು, ನಾನು ಬಳ್ಳಾರಿ ಉಸ್ತುವಾರಿ ಕೇಳಿರುವೆ. ಆದರೆ ಪಕ್ಷದ ತೀರ್ಮಾನಕ್ಕೆ ಬದ್ಧನಾಗಿರುವೆ. ನಾನು ಪಕ್ಷದ ನಿಷ್ಠಾವಂತ ಕಾರ್ಯಕರ್ತ. ಪಕ್ಷ ತಗೆದುಕೊಳ್ಳುವ ತೀರ್ಮಾನಕ್ಕೆ ಬದ್ಧ ಎಂದು ಹೇಳಿದರು.

    ನಾನು ಬಳ್ಳಾರಿಯಿಂದ ಯಾವತ್ತೂ ದೂರವಾಗಿಲ್ಲ. ನಾನು ಯಾದಗಿರಿಯಲ್ಲಿ ಹೈದ್ರಾಬಾದ್ ಕರ್ನಾಟಕ ವಿಮೋಚನಾ ದಿನಾಚರಣೆ ಧ್ವಜಾರೋಹಣ ಮಾಡುತ್ತಿರುವೆ, ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಬಳ್ಳಾರಿಯಲ್ಲಿ ಧ್ವಜಾರೋಹಣ ಮಾಡುತ್ತಿದ್ದಾರೆ. ರಾಮ ಇದ್ದ ಕಡೆ ಲಕ್ಷ್ಮಣ ಬರುತ್ತಿದ್ದಾರೆ. ಇದಕ್ಕೆ ಬೇರೆಯ ಅರ್ಥ ಕಲ್ಪಿಸಬೇಕಾಗಿಲ್ಲವೆಂದು ಆರೋಗ್ಯ ಸಚಿವ ಶ್ರೀರಾಮುಲು ಹೇಳಿದರು. ಅಲ್ಲದೇ ಪ್ರವಾಹ ಪರಿಸ್ಥಿತಿ ನಿರ್ವಹಿಸುವಲ್ಲಿ ಸರ್ಕಾರ ವಿಫಲವಾಗಿಲ್ಲ. ಅಭಿವೃದ್ಧಿ ವಿಷಯದಲ್ಲಿ ಕುಂಠಿತ ಆಗಿಲ್ಲವೆಂದು ಶ್ರೀರಾಮುಲು ಹೇಳಿದರು.

  • ಇಂದು ಸಂಜೆ 6.15ರೊಳಗೆ ಬಿಎಸ್‍ವೈ ಪ್ರಮಾಣವಚನ ಸ್ವೀಕಾರ

    ಇಂದು ಸಂಜೆ 6.15ರೊಳಗೆ ಬಿಎಸ್‍ವೈ ಪ್ರಮಾಣವಚನ ಸ್ವೀಕಾರ

    ಬೆಂಗಳೂರು: ದಿಢೀರ್ ರಾಜಕೀಯ ಬೆಳವಣಿಗೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರು ರಾಜ್ಯಪಾಲ ವಜೂಭಾಯ್ ವಾಲಾ ಅವರಿಗೆ ಸರ್ಕಾರ ರಚನೆ ಮಾಡಲು ಹಕ್ಕು ಪ್ರತಿಪಾದನೆ ಮಾಡಿದ್ದಾರೆ. ಇಂದು ಸಂಜೆ 6 ರಿಂದ 6.15ರೊಳಗೆ ಪ್ರಮಾಣ ವಚನ ಸ್ವೀಕಾರ ಮಾಡಲು ರಾಜ್ಯಪಾಲರು ಅವಕಾಶ ನೀಡಿದ್ದಾರೆ.

    ರಾಜಭವನದಲ್ಲಿ ನಡೆಯಲಿರುವ ಸರಳ ಸಮಾರಂಭದಲ್ಲಿ ಬಿಎಸ್‍ವೈ ಪ್ರಮಾಣ ಸ್ವೀಕಾರ ಮಾಡಲಿದ್ದು, ಏಕಾಂಗಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ ಎಂಬ ಮಾಹಿತಿ ಲಭಿಸಿದೆ. ಈ ಮೂಲಕ ಬಿಎಸ್‍ವೈ ಅವರು 4ನೇ ಬಾರಿಗೆ ಸಿಎಂ ಆಗಿ ಪ್ರಮಾಣ ಸ್ವೀಕಾರ ಮಾಡಲಿದ್ದಾರೆ. ಈ ಹಿಂದೆ ಮೂರು ಬಾರಿ ಪ್ರಮಾಣ ಸ್ವೀಕಾರ ಮಾಡಿದ್ದರು ಕೂಡ 5 ವರ್ಷ ಪೂರ್ಣಾವಧಿ ಮಾಡಿರಲಿಲ್ಲ.

    ಇಂದು ಬೆಳಗ್ಗೆ ತಮ್ಮ ನಿವಾಸದ ಎದುರು ಮಾತನಾಡಿದ್ದ ಬಿಎಸ್‍ವೈ, ಈಗಾಗಲೇ ನಾನು ವಿರೋಧ ಪಕ್ಷದ ನಾಯಕನಾಗಿರುವುದರಿಂದ ಮತ್ತೊಮ್ಮೆ ಶಾಸಕಾಂಗದ ಸಭೆ ಅಗತ್ಯವಿಲ್ಲ. ಹೀಗಾಗಿ ನಾನು ಇಂದು ರಾಜ್ಯಪಾಲರನ್ನು ಭೇಟಿಯಾಗಿ ಸರ್ಕಾರ ರಚನೆ ಮಾಡಲು ಹಕ್ಕು ಮಂಡನೆ ಮಾಡಲಿದ್ದೇನೆ. ಅಲ್ಲದೆ ಇವತ್ತೇ ರಾಜಭವನದಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡಲು ಅವಕಾಶ ಮಾಡಿಕೊಡಿ ಎಂದು ರಾಜ್ಯಪಾಲ ಬಳಿ ಮನವಿ ಮಾಡಿಕೊಳ್ಳುತ್ತೇನೆ ಎಂದು ಹೇಳಿದ್ದರು. ಆ ಬಳಿಕ ಸಂಜಯನಗರದ ಆಂಜನೇಯ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.

    ಮೈತ್ರಿ ಸರ್ಕಾರ ಪತನಗೊಂಡು ಇಂದಿಗೆ 4 ದಿನಗಳು ಆಗಿದ್ದು, ದಿಢೀರ್ ಬೆಳವಣಿಗೆ ಎಂಬಂತೆ ಹೈಕಮಾಂಡ್ ಬಿಎಸ್‍ವೈ ಅವರಿಗೆ ಸೂಚನೆ ನೀಡಿದೆ. ಸರ್ಕಾರ ರಚನೆ ತಡವಾದ ಹಿನ್ನೆಲೆಯಲ್ಲಿ ರಾಜ್ಯ ರಾಜಕೀಯದಲ್ಲಿ ಹಲವು ಅನುಮಾನಗಳು ಮೂಡಿತ್ತು. ಆದರೆ ಈ ಎಲ್ಲಾ ಗಾಳಿ ಸುದ್ದಿಗಳಿಗೆ ತೆರೆ ಎಳೆದಿರುವ ಹೈಕಮಾಂಡ್ ಸ್ಪಷ್ಟ ಸಂದೇಶ ರವಾನೆ ಮಾಡಿದೆ. ತುರ್ತು ಪ್ರಮಾಣ ವಚನ ಸ್ವೀಕಾರ ಹಿನ್ನೆಲೆಯಲ್ಲಿ ಕೇಂದ್ರ ನಾಯಕರು ಗೈರಾಗಲಿದ್ದಾರೆ ಎಂಬ ಮಾಹಿತಿ ಲಭಿಸಿದೆ.

  • ಇಂದೇ ಯಡಿಯೂರಪ್ಪ ಪ್ರಮಾಣ ವಚನ ಸ್ವೀಕಾರ

    ಇಂದೇ ಯಡಿಯೂರಪ್ಪ ಪ್ರಮಾಣ ವಚನ ಸ್ವೀಕಾರ

    ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಇಂದೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ.

    ಇಂದು ಮಧ್ಯಾಹ್ನ ಸುಮಾರು 12.30ಕ್ಕೆ ಯಡಿಯೂರಪ್ಪ ಅವರು ಪ್ರಮಾಣವಚನವನ್ನು ಸ್ವೀಕಾರ ಮಾಡುವ ಸಾಧ್ಯತೆ ಇದೆ. ಈ ಬಗ್ಗೆ ಬಿಎಸ್‍ವೈ ತಮ್ಮ ಧವಳಗಿರಿ ನಿವಾಸದಲ್ಲಿ ಮಾತನಾಡಿ ಮಾಹಿತಿ ನೀಡಿದ್ದು, ಈಗಾಗಲೇ ನಾನು ವಿರೋಧ ಪಕ್ಷದ ನಾಯಕನಾಗಿರುವುದರಿಂದ ಮತ್ತೊಮ್ಮೆ ಶಾಸಕಾಂಗದ ಸಭೆ ಅಗತ್ಯವಿಲ್ಲ. ನಾನು ಇಂದು ರಾಜ್ಯಪಾಲರನ್ನು ಭೇಟಿಯಾಗುತ್ತಿದ್ದೇನೆ ಎಂದರು.

    ಅಷ್ಟೇ ಅಲ್ಲದೆ ಇವತ್ತೇ ರಾಜಭವನದಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡಲು ಅವಕಾಶ ಮಾಡಿಕೊಡಿ ಎಂದು ರಾಜ್ಯಪಾಲ ಬಳಿ ಮನವಿ ಮಾಡಿಕೊಳ್ಳುತ್ತೇನೆ ಎಂದು ಹೇಳಿದರು. ರಾಜ್ಯಪಾಲರು ಪ್ರಮಾಣ ವಚನ ಸ್ವೀಕಾರ ಮಾಡಲು ಒಪ್ಪಿಗೆ ಸೂಚಿಸಿದರೆ ಇಂದೇ ಯಡಿಯೂರಪ್ಪ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ. ಈಗಾಗಲೇ ರಾಜಪಾಲರ ಭೇಟಿಗೆ ಬಿಎಸ್‍ವೈ ನಿವಾಸದಿಂದ ತೆರಳಿದ್ದಾರೆ.