Tag: ರಾಜೇಶ್ ಮಿಶ್ರಾ

  • ದಲಿತ ಯುವಕನನ್ನು ಮದುವೆಯಾಗಿದ್ದಕ್ಕೆ ಗೂಂಡಾಗಳನ್ನು ಛೂಬಿಟ್ಟ ಬಿಜೆಪಿ ಶಾಸಕ: ಪುತ್ರಿ ಆರೋಪ

    ದಲಿತ ಯುವಕನನ್ನು ಮದುವೆಯಾಗಿದ್ದಕ್ಕೆ ಗೂಂಡಾಗಳನ್ನು ಛೂಬಿಟ್ಟ ಬಿಜೆಪಿ ಶಾಸಕ: ಪುತ್ರಿ ಆರೋಪ

    – ಗೂಂಡಾಗಳು ನಮ್ಮನ್ನು ಖಂಡಿತ ಕೊಲೆ ಮಾಡ್ತಾರೆ
    – ಬಿಜೆಪಿ ಶಾಸಕನ ಮಗಳ ವಿಡಿಯೋ ವೈರಲ್

    ಲಕ್ನೋ: ದಲಿತ ಯುವಕನನ್ನು ಮದುವೆಯಾಗಿದ್ದಕ್ಕೆ ಮಗಳು-ಅಳಿಯನ ಮೇಲೆ ಗೂಂಡಾಗಳನ್ನು ಛೂಬಿಟ್ಟ ಆರೋಪ ಬಿಜೆಪಿ ಶಾಸಕರ ಮೇಲೆ ಕೇಳಿ ಬಂದಿದೆ.

    ‘ಪೋಷಕರಿಗೆ ಇಷ್ಟವಿಲ್ಲದ ಮದುವೆ ಮಾಡಿಕೊಂಡಿದ್ದೇನೆ. ಹೀಗಾಗಿ ಗೂಂಡಾಗಳು ನಮ್ಮನ್ನು ಖಂಡಿತ ಕೊಲೆ ಮಾಡುತ್ತಾರೆ ಎಂದು ಉತ್ತರ ಪ್ರದೇಶದ ಶಾಸಕ ರಾಜೇಶ್ ಮಿಶ್ರಾ ಪುತ್ರಿ ಸಾಕ್ಷಿ ಆತಂಕ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದು, ವೈರಲ್ ಆಗಿದೆ.

    23 ವರ್ಷದ ಸಾಕ್ಷಿ ಮಿಶ್ರಾ ವಿಡಿಯೋದಲ್ಲಿ ತಂದೆ ಹಾಗೂ ಸಹೋದರನನ್ನು ಅಡ್ಡ ಹೆಸರಿನಿಂದ ಪಪ್ಪು ಭರ್ತೌಲ್ ಮತ್ತು ವಿಕ್ಕಿ ಭರ್ತೌಲ್ ಎಂದು ಉಲ್ಲೇಖಿಸಿದ್ದಾರೆ.

    ವಿಡಿಯೋದಲ್ಲಿ ಏನಿದೆ?:
    ಪಪ್ಪು ಭರ್ತೌಲ್ ಜಿ ಹಾಗೂ ವಿಕ್ಕಿ ಭರ್ತೌಲ್ ಜಿ, ದಯವಿಟ್ಟು ನೀವೂ ಬದುಕಿ. ನಮ್ಮನ್ನೂ ಶಾಂತಿಯಿಂದ ಬದುಕಲು ಬಿಡಿ. ನನಗೆ ನಿಜವಾಗಿಯೂ ಮದುವೆಯಾಗಿದೆ. ಫ್ಯಾಶನ್‍ಗಾಗಿ ನಾನು ಸಿಂಧೂರ (ಕುಂಕುಮ) ಹಚ್ಚಿಕೊಂಡಿಲ್ಲ ಎಂದು ಸಾಕ್ಷಿ ತಂದೆಗೆ ಮನವಿ ಮಾಡಿಕೊಂಡಿದ್ದಾರೆ.

    ಪಾಪಾ, ನೀವು ರಾಜೀವ್ ರಾಣಾ ಅವರಂತಯೇ ನಮ್ಮ ಹಿಂದೆ ನಿಮ್ಮ ನಾಯಿ (ಗೂಂಡಾಗಳನ್ನು) ಕಳುಹಿಸಿದ್ದೀರಿ. ನಿಮ್ಮ ಈ ವರ್ತನೆಯಿಂದ ಬೇಸತ್ತು ಹೋಗಿದ್ದೇನೆ. ನನಗೆ ಏನದರೂ ಆದರೆ ನಿಮ್ಮ ಕುಟುಂಬದ ಪ್ರತಿಯೊಬ್ಬರೂ ಜೈಲಿಗೆ ಹೋಗಬೇಕಾಗುತ್ತದೆ. ಅಡಗಿ ಕುಳಿತು ಕಾಲ ಕಳೆಯಲು ನನ್ನಿಂದ ಆಗುತ್ತಿಲ್ಲ ಎಂದು ಹೇಳಿದ್ದಾರೆ.

    ಪತಿ ಅಭಿತೇಜ್ ಕುಟುಂಬದವರ ತಪ್ಪು ಏನೂ ಇಲ್ಲ. ಅವರಿಗೆ ಕಿರುಕುಳ ಕೊಡಬೇಡಿ. ನೀವು ಶಾಂತಿಯಿಂದ ಬದುಕಿದರೆ ನಾನು ಖುಷಿಯಿಂದ ಬದುಕಲು ಸಾಧ್ಯವಾಗುತ್ತದೆ. ನನಗೆ ಹಾಗೂ ಪತಿ ಅಭಿಗೆ ಏನಾದರೂ ಆದರೆ ಅದಕ್ಕೆ ಸಂಪೂರ್ಣ ಕಾರಣ ಪಾಪಾ ಮತ್ತು ವಿಕ್ಕಿ ಅಂತ ಈ ವಿಡಿಯೋ ಮೂಲಕ ಹೇಳುತ್ತಿರುವೆ ಎಂದು ತಿಳಿಸಿದ್ದಾರೆ.

    ನಮ್ಮ ತಂದೆ ರಾಜೇಶ್ ಮಿಶ್ರಾ ಅವರಿಗೆ ಯಾವುದೇ ರೀತಿಯ ಸಹಕಾರ ನೀಡಬೇಡಿ. ಅವರು ಅಧಿಕಾರ ದುರುಪಯೋಗಪಡಿಸಿಕೊಂಡು ನಮಗೆ ಕಿರುಕುಳ ನೀಡುತ್ತಿದ್ದಾರೆ. ದಯವಿಟ್ಟು ನಮಗೆ ರಕ್ಷಣೆ ಒದಗಿಸಿ ಎಂದು ಸಾಕ್ಷಿ, ಪೊಲೀಸರಿಗೆ ಮನವಿ ಮಾಡಿಕೊಂಡಿದ್ದಾರೆ.

    ಈ ಕುರಿತು ಪ್ರತಿಕ್ರಿಯೆ ನೀಡಿರುವ ಶಾಸಕ ರಾಜೇಶ್ ಮಿಶ್ರಾ ಅವರು ಪುತ್ರಿಯ ಆರೋಪವನ್ನು ತಳ್ಳಿ ಹಾಕಿದ್ದಾರೆ. ನನ್ನ ಪುತ್ರಿ ಸ್ವತಂತ್ರಳಾಗಿದ್ದಾಳೆ. ಅವಳು ತನ್ನ ತೀರ್ಮಾನವನ್ನು ತೆಗೆದುಕೊಳ್ಳಬಹುದು. ನಾನು ಯಾವುದೇ ರೀತಿಯ ಬೆದರಿಕೆ ಹಾಕಿಲ್ಲ. ಪುತ್ರಿಯನ್ನು ಕೊಲೆ ಮಾಡಲು, ಬೆದರಿಕೆ ಹಾಕಲು ಯಾರನ್ನೂ ಕಳುಹಿಸಿಲ್ಲ ಎಂದು ಹೇಳಿದ್ದಾರೆ.

    ಪ್ರೇಮಿಗಳು ಎಲ್ಲಿದ್ದಾರೆ ಎನ್ನುವುದು ನಮಗೆ ತಿಳಿದುಬಂದಿಲ್ಲ. ಅವರಿಗೆ ರಕ್ಷಣೆ ಒದಗಿಸುತ್ತೇವೆ. ಈಗಾಗಲೇ ಅಭಿತೇಜ್ ನಿವಾಸಕ್ಕೆ ಭದ್ರತೆ ಒದಗಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಮುನಿರಾಜ್ ಜಿ ತಿಳಿಸಿದ್ದಾರೆ.

  • RSS ಕಾರ್ಯಕರ್ತನನ್ನು ಗುಂಡಿಕ್ಕಿ ಕೊಲೆಗೈದ ದುಷ್ಕರ್ಮಿಗಳು

    RSS ಕಾರ್ಯಕರ್ತನನ್ನು ಗುಂಡಿಕ್ಕಿ ಕೊಲೆಗೈದ ದುಷ್ಕರ್ಮಿಗಳು

    ಲಕ್ನೋ: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತರೊಬ್ಬರನ್ನು ದುಷ್ಕರ್ಮಿಗಳು ಗುಂಡಿಟ್ಟು ಕೊಲೆಗೈದಿರುವ ಘಟನೆ ಉತ್ತರಪ್ರದೇಶದ ಘಾಜಿಪುರ ಜಿಲ್ಲೆಯ ಕರಂದಾ ಎಂಬಲ್ಲಿ ನಡೆದಿದೆ.

    ರಾಜೇಶ್ ಮಿಶ್ರಾ ಕೊಲೆಯಾದ ಆರ್‍ಎಸ್‍ಎಸ್ ಕಾರ್ಯಕರ್ತ. ರಾಜೇಶ್ ಪತ್ರಕರ್ತರೂ ಆಗಿದ್ದು, ಕರಂದ ಪಟ್ಟಣದಲ್ಲಿ ಸಣ್ಣದಾದ ದಿನಸಿ ಅಂಗಡಿಯನ್ನು ಹೊಂದಿದ್ದರು. ಮುಖವನ್ನು ಮುಚ್ಚಿಕೊಂಡು ಬೈಕ್ ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ರಾಜೇಶ್‍ಗೆ ಹತ್ತಿರದಿಂದಲೇ ಗುಂಡು ಹಾರಿಸಿ ಕೊಲೆ ಮಾಡಿದ್ದಾರೆ. ಈ ವೇಳೆ ರಾಜೇಶ್ ಪಕ್ಕದಲ್ಲಿದ್ದ ಅವರ ಸಹೋದರ ಕೂಡ ಗಂಭೀರವಾಗಿ ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಗುಂಡು ಬಿದ್ದ ತಕ್ಷಣವೇ ರಾಜೇಶ್ ಸ್ಥಳದಲ್ಲೇ ಕುಸಿದುಬಿದ್ದು ಸಾವನ್ನಪ್ಪಿದ್ದಾರೆ.

    ರಾಜೇಶ್ ಈ ಪ್ರದೇಶದಲ್ಲಿ ಆರ್‍ಎಸ್‍ಎಸ್ ನ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಕಳೆದ ವಾರವಷ್ಟೇ ಪಂಜಾಬ್‍ನ ಲೂಧಿಯಾನದಲ್ಲಿ ಆರ್‍ಎಸ್‍ಎಸ್ ಮುಖ್ಯ ಶಿಕ್ಷಕ ರವೀಂದರ್ ಗೋಸಿಯಾನ್ ಎಂಬವರನ್ನು ದುಷ್ಕರ್ಮಿಗಳು ಗುಂಡಿಟ್ಟು ಕೊಲೆಗೈದಿದ್ದರು. ರವೀಂದರ್ ಹತ್ಯೆಯ ಪ್ರಕರಣವನ್ನ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‍ಐಎ) ತನಿಖೆ ಮಾಡುತ್ತಿದೆ.