Tag: ರಾಜೇಶ್ ಬಿ ಶೆಟ್ಟಿ

  • ಕಥಾ ಸಂಗಮದಲ್ಲಿದೆ ಕಾಡುವ ಕಥೆಗಳ ಗುಚ್ಛ!

    ಕಥಾ ಸಂಗಮದಲ್ಲಿದೆ ಕಾಡುವ ಕಥೆಗಳ ಗುಚ್ಛ!

    ಸಿದ್ಧ ಸೂತ್ರದ ಸಿನಿಮಾಗಳ ಸದ್ದಿನ ಸರಹದ್ದಿನೊಳಗೇ ಭಿನ್ನ ಪ್ರಯೋಗಗಳು ಅಬ್ಬರಿಸದಿದ್ದರೆ ಯಾವುದೇ ಭಾಷೆಯ ಚಿತ್ರರಂಗವಾದರೂ ನಿಂತ ನೀರಿನಂತಾಗಿ ಬಿಡುತ್ತದೆ. ಈ ಕಾರಣದಿಂದಲೇ ಹೊಸ ಅಲೆಯ ಚಿತ್ರಗಳು, ಹೊಸ ಪ್ರಯೋಗಗಳ ಮೂಸೆಯಲ್ಲರಳಿಕೊಂಡ ಸಿನಿಮಾಗಳು ಮುಖ್ಯವಾಗಿ ಪರಿಗಣಿಸಲ್ಪಡುತ್ತವೆ. ಈ ನಿಟ್ಟಿನಲ್ಲಿ ರಿಷಬ್ ಶೆಟ್ಟಿ ಸೂತ್ರದಾರಿಕೆಯ ಕಥಾ ಸಂಗಮ ಒಂದು ಪರಿಣಾಮಕಾರಿ ಪ್ರಯತ್ನ. ಈ ಕಾರಣದಿಂದಲೇ ಈ ಸಿನಿಮಾ ಬಗ್ಗೆ ಪ್ರೇಕ್ಷಕರೆಲ್ಲರೂ ತುದಿಗಾಲಲ್ಲಿ ಕಾಯಲಾರಂಭಿಸಿದ್ದರು. ಇದೀಗ ಕಥಾ ಸಂಗಮ ತೆರೆ ಕಂಡಿದೆ. ಒಂದಕ್ಕಿಂತ ಒಂದು ಭಿನ್ನವಾಗಿರುವ, ರುಚಿಕಟ್ಟಾಗಿರುವ ಏಳು ಕಥೆಗಳೊಂದಿಗೆ ತೆರೆಕಂಡಿರುವ ಈ ಚಿತ್ರ ನೋಡುಗರನ್ನೆಲ್ಲ ತೃಪ್ತವಾಗಿಸುವಲ್ಲಿ ಯಶ ಕಂಡಿದೆ.

    ಈ ಸಿನಿಮಾದಲ್ಲಿ ಮೊದಲೇ ಹೇಳಿದಂತೆ ಏಳು ಕಥೆಗಳಿವೆ. ಆ ಪ್ರತೀ ಕಥೆಯನ್ನೂ ಕೂಡಾ ಕಾಡುವಂತೆ, ನೋಡುಗರ ಮನಸುಗಳಿಗೆ ನಾಟುವಂತೆ ಕಟ್ಟಿ ಕೊಟ್ಟಿರೋದು ಈ ಸಿನಿಮಾದ ಪ್ರಧಾನ ಪ್ಲಸ್ ಪಾಯಿಂಟುಗಳು. ಈ ಸಿನಿಮಾ ಆರಂಭವಾಗುವುದು ರೈನ್‍ಬೋ ಲ್ಯಾಂಡ್ ಎಂಬ ಕಥಾನಕದ ಮೂಲಕ. ಅಪ್ಪ ಮಗಳ ಬಾಂಧವ್ಯದ ಹಿತವಾದ ಕಥೆಯೊಂದಿಗೆ ತೆರೆದುಕೊಳ್ಳುವ ಈ ಸಿನಿಮಾದಲ್ಲಿ   ಸತ್ಯಕಥಾ ಪ್ರಸಂಗ, ಗಿರ್‍ಗಿಟ್ಲೆ, ಉತ್ತರ, ಪಡುವಾರಹಳ್ಳಿ, ಸಾಗರ ಸಂಗಮ್ಮ ಮತ್ತು ಲಚ್ಚವ್ವ ಎಂಬ ಕಥೆಗೂ ಸೇರಿಕೊಳ್ಳುತ್ತವೆ. ವಿಶೇಷವೆಂದರೆ ಇವೆಲ್ಲವೂ ಒಂದಕ್ಕೊಂದು ಸೂತ್ರ ಸಂಬಂಧವಿಲ್ಲದ ಕಥೆಗಳು. ಅವೆಲ್ಲವೂ ಪರಿಪೂರ್ಣ ಅನುಭೂತಿ ನೀಡುವಂತೆ ತೆರೆದುಕೊಂಡಿರೋದೇ ಕಥಾ ಸಂಗಮದ ನಿಜವಾದ ಸ್ಪೆಷಾಲಿಟಿ.

    ಈ ಏಳು ಕಥೆಗಳನ್ನು ಏಳು ಮಂದಿ ನಿರ್ದೇಶಕರು ರೂಪಿಸಿದ್ದಾರೆ. ಇವೆಲ್ಲವೂ ಸಹ ಯಾವುದು ಹೆಚ್ಚು ಯಾವುದು ಕಡಿಮೆ ಎಂಬ ಅಂದಾಜೇ ಸಿಗದಷ್ಟು ಚೆಂದಗೆ ಮೂಡಿ ಬಂದಿವೆ. ಪ್ರೇಕ್ಷಕರ ಗಮನ ಆಚೀಚೆ ಚದುರದಂತೆ ಈ ಏಳು ಕಥೆಗಳನ್ನು ನಿರೂಪಿಸಿರುವ ರೀತಿಯೇ ಯಾರನ್ನಾದರೂ ಸೆಳೆಯುವಂತಿದೆ. ಈ ಏಳು ಕಥೆಗಳಲ್ಲಿನ ದೃಷ್ಯಾವಳಿಗಳು, ಪಾತ್ರಗಳು ಪ್ರೇಕ್ಷಕರ ಮನಸಲ್ಲುಳಿಯುವಂತೆ ಮೂಡಿ ಬಂದಿವೆ. ರಿಷಬ್ ಶೆಟ್ಟಿ, ಪ್ರಕಾಶ್ ಬೆಳವಾಡಿ, ಯಜ್ಞಾ ಶೆಟ್ಟಿ, ಹರಿ ಸಮಷ್ಠಿ, ಅವಿನಾಶ್, ಪ್ರಮೋದ್ ಶೆಟ್ಟಿ, ಬಾಲಾಜಿ ಮನೋಹರ್ ಅವರ ಅಭಿನಯವೇ ಕಥಾ ಸಂಗಮಕ್ಕೆ ಮತ್ತಷ್ಟು ಕಸುವು ತುಂಬುವಂತೆ ಮೂಡಿ ಬಂದಿದೆ. ಅವರೆಲ್ಲರೂ ತಂತಮ್ಮ ಪಾತ್ರಗಳನ್ನು ಒಳಗಿಳಿಸಿಕೊಂಡು ನಟಿಸಿದ್ದಾರೆ. ಇದರೊಂದಿಗೆ ಪ್ರತೀ ಸನ್ನಿವೇಶಗಳೂ ಶಕ್ತವಾಗುವಂತೆ ನೋಡಿಕೊಂಡಿದ್ದಾರೆ.

    ಇದು ಕನ್ನಡ ಚಿತ್ರರಂಗದ ಇತಿಹಾಸದ ಪುಟಗಳಲ್ಲಿ ದಾಖಲಾಗುವಂಥಾ ಪ್ರಯತ್ನ. ಅದು ನಿಜಕ್ಕೂ ಫಲ ಕೊಡುವಂತೆಯೇ ಮೂಡಿ ಬಂದಿದೆ. ಈಗ್ಗೆ ನಾಲಕ್ಕು ದಶಕಗಳ ಹಿಂದೆ ಪುಟ್ಟಣ್ಣ ಕಣಗಾಲ್ ಕಥಾ ಸಂಗಮ ಎಂಬ ಸಿನಿಮಾದ ಮೂಕಕ ನಾಲಕ್ಕು ಕಥೆಗಳನ್ನು ಹೇಳಿದ್ದರು. ಅದು ಕನ್ನಡ ಚಿತ್ರರಂಗದ ಹೆಮ್ಮೆಯಂಥಾ ಚಿತ್ರ. ಇದೀಗ ರಿಷಬ್ ಶೆಟ್ಟಿ ಸೂತ್ರಧಾರಿಕೆಯ ಈ ಚಿತ್ರದಲ್ಲಿ ಏಳು ಸಮೃದ್ಧವಾದ ಕಥೆಗಳನ್ನು ಹೇಳಲಾಗಿದೆ. ಈ ಚಿತ್ರವನ್ನು ರಿಷಬ್ ಮತ್ತು ಅವರ ತಂಡ ಪುಣ್ಣ ಕಣಗಾಲರಿಗೆ ಅರ್ಪಿಸಿದೆ. ಒಂದು ವೇಳೆ ಕಣಗಾಲರು ಈಗೇನಾದರೂ ಬದುಕಿದ್ದರೆ ಖಂಡಿತಾ ಈ ಚಿತ್ರವನ್ನು, ಅದರ ಸೂತ್ರಧಾರರನ್ನು ಮೆಚ್ಚಿ ಕೊಂಡಾಡುತ್ತಿದ್ದರು. ಅಷ್ಟೊಂದು ಚೆಂದಗೆ ಮೂಡಿ ಬಂದಿರೋ ಈ ಸಿನಿಮಾವನ್ನು ಸಾಕಾರಗೊಳಿಸಿದ ರಿಷಬ್ ಶೆಟ್ಟಿ ಮತ್ತವರ ತಂಡ ಪ್ರೇಕ್ಷಕರ ಮೆಚ್ಚುಗೆ ಗಳಿಸಿಕೊಂಡಿದೆ.

    ರೇಟಿಂಗ್: 4/5

  • ‘ಕಥಾ ಸಂಗಮ’ ಡಿಸೆಂಬರ್ 6ರಂದು ರಿಲೀಸ್

    ‘ಕಥಾ ಸಂಗಮ’ ಡಿಸೆಂಬರ್ 6ರಂದು ರಿಲೀಸ್

    ರಿಷಬ್ ಶೆಟ್ಟಿ ಫಿಲಂಸ್ ಹಾಗೂ ಶ್ರೀದೇವಿ ಎಂಟರ್ ಟೈನರ್ಸ್ ಲಾಂಛನದಲ್ಲಿ ರಿಷಬ್ ಶೆಟ್ಟಿ, ಕೆ.ಹೆಚ್ ಪ್ರಕಾಶ್ ಹಾಗೂ ಪ್ರದೀಪ್ ಎನ್.ಆರ್ ಅವರು ನಿರ್ಮಿಸಿರುವ ‘ಕಥಾ ಸಂಗಮ’ ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

    ಏಳು ಕಥೆಗಳ ಸಂಗಮವಾಗಿರುವ ಈ ಚಿತ್ರವನ್ನು ಏಳು ಜನ ನಿರ್ದೇಶಕರು ನಿರ್ದೇಶಿಸಿದ್ದಾರೆ. ಮೊದಲ ಕಥೆಯನ್ನು ಶಶಿಕುಮಾರ್ ನಿರ್ದೇಶಿಸಿದ್ದಾರೆ. ಜಯಂತ್ ಸೀಗೆ ಕಥೆ, ಚಿತ್ರಕಥೆ ಬರೆದಿದ್ದು, ಸಂಭಾಷಣೆಯನ್ನು ರಾಜ್ ಬಿ ಶೆಟ್ಟಿ, ಅನಿರುದ್ಧ್ ಮಹೇಶ್ ಬರೆದಿದ್ದಾರೆ. ಗೊಮಟೇಶ್ ಉಪಾಧ್ಯೆ ಛಾಯಾಗ್ರಹಣ, ದಾಸ್ ಮೊಡ್ ಸಂಗೀತ ನಿರ್ದೇಶನ ಹಾಗೂ ಆರ್ಯ ಅವರ ಸಂಕಲನವಿದೆ. ರಾಜ್.ಬಿ.ಶೆಟ್ಟಿ, ಅಮೃತ ನಾಯಕ್, ಜೆ.ಪಿ ತುಮ್ಮಿನಾಡ್ ತಾರಾಬಳಗದಲ್ಲಿದ್ದಾರೆ.

    ಎರಡನೇ ಕಥೆಯನ್ನು ಚಂದ್ರಜಿತ್ ಬೆಳ್ಳಿಯಪ್ಪ ನಿರ್ದೇಶಿಸಿದ್ದಾರೆ. ಕಿಶೊರ್, ಯಜ್ಞ ಶೆಟ್ಟಿ, ಬಾಬು ಮೃದುನಿಕ ನಟಿಸಿರುವ ಈ ಕಥೆಗೆ ಗಗನ್ ಬಡೇರಿಯ ಸಂಗೀತ ನೀಡಿದ್ದಾರೆ. ಅರವಿಂದ್ ಕಶ್ಯಪ್ ಛಾಯಾಗ್ರಹಣ ಹಾಗೂ ರಿತ್ವಿಕ್ ರಾವ್ ಸಂಕಲನ ಈ ಚಿತ್ರಕ್ಕಿದೆ.

    ಮೂರನೇ ಕಥೆಗೆ ಮಾಧುರಿ ಎನ್ ರಾವ್ ಹಾಗೂ ಕರಣ್ ಅನಂತ್ ಕಥೆ, ಚಿತ್ರಕಥೆ ಬರೆದಿದ್ದು, ಕರಣ್ ಅನಂತ್ ನಿರ್ದೇಶಿಸಿದ್ದಾರೆ. ಪ್ರಕಾಶ್ ಬೆಳವಾಡಿ, ಸೌಮ್ಯ, ಜಗನ್‍ಮೂರ್ತಿ, ವಸು ದೀಕ್ಷಿತ್ ಅಭಿನಯಿಸಿದ್ದಾರೆ. ದೀಪಕ್ ಛಾಯಾಗ್ರಹಣ, ವಸು ದೀಕ್ಷಿತ್ ಸಂಗೀತ ನಿರ್ದೇಶನ ಹಾಗೂ ಭರತ್ ಎಂ.ಸಿ ಅವರ ಸಂಕಲನ ಈ ಚಿತ್ರಕ್ಕಿದೆ.

    ನಾಲ್ಕನೇ ಕಥೆಯ ತಾರಾಬಳಗದಲ್ಲಿ ಪ್ರಮೋದ್ ಶೆಟ್ಟಿ ಹಾಗೂ ಬಾಲಾಜಿ ಮನೋಹರ್ ಇದ್ದಾರೆ. ರಾಹುಲ್ ಪಿ.ಕೆ ರಚನೆ ಹಾಗೂ ನಿರ್ದೇಶನದ ಈ ಚಿತ್ರಕ್ಕೆ ಸಂದೀಪ್ ಅವರ ಛಾಯಾಗ್ರಹಣ, ಅಜ್ಞಾತ್ ಅವರ ಸಂಗೀತ ನಿರ್ದೇಶನ, ವಿನಾಯಕ್ ಗುರುನಾರಾಯಣ್ ಅವರ ಸಂಕಲನವಿದೆ.

    ಐದನೇ ಕಥೆಯನ್ನು ಜಮದಗ್ನಿ ಮನೋಜ್ ನಿರ್ದೇಶಿಸಿದ್ದಾರೆ. ಅವಿನಾಶ್, ಹರಿ ಸಮಶ್ಟಿ ಅಭಿನಯಿಸಿದ್ದಾರೆ. ರಘುನಾಥ್ ಛಾಯಾಗ್ರಹಣ, ಅಭಿಷೇಕ್ ಅವರ ಸಂಕಲನ ಹಾಗೂ ಗಿರೀಶ್ ಹಾತೂರ್ ಅವರ ಸಂಗೀತ ನಿರ್ದೇಶನವಿದೆ.

    ರಿಷಬ್ ಶೆಟ್ಟಿ ಹಾಗೂ ಹರಿಪ್ರಿಯ ನಟನೆಯ ಆರನೇ ಕಥೆಯನ್ನು ಕಿರಣ್ ರಾಜ್ ನಿರ್ದೇಶನ ಮಾಡಿದ್ದಾರೆ. ಇದರಲ್ಲಿ ರೂಬಿ (ನಾಯಿ) ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದೆ. ವೆಂಕಟೇಶ್ ಅಂಗುರಾಜ್ ಛಾಯಾಗ್ರಹಣ, ರಿತ್ವಿಕ್ ರಾವ್ ಅವರ ಸಂಕಲನ ಹಾಗೂ ನೊಬಿನ್ ಪಾಲ್ ಅವರ ಸಂಗೀತ ನಿರ್ದೇಶನವಿದೆ.

    ಏಳನೇ ಕಥೆಯಲ್ಲಿ ಪ್ರಣವ್, ರಾಘವೇಂದ್ರ, ಬೀರೇಶ್ ಪಿ ಬಂಡೆ, ನಿಧಿ ಹೆಗ್ಡೆ ಅಭಿನಯಿಸಿದ್ದು, ಜೈ ಶಂಕರ್ ಅವರ ರಚನೆ ಹಾಗೂ ನಿರ್ದೇಶನವಿದೆ. ಸೌರವ್ ಪ್ರತೀಕ್ ಸನ್ಯಾಲ್ ಛಾಯಾಗ್ರಹಣ, ಚಂದನ್ ಸಂಕಲನ ಹಾಗೂ ವಾಸುಕಿ ವೈಭವ್ ಸಂಗೀತ ನಿರ್ದೇಶನವಿದೆ.