Tag: ರಾಜೇಶ್ ಕುಮಾರ್ ಝಾ

  • ಚುನಾವಣಾ ದಿನಾಂಕ ಘೋಷಣೆ ಬೆನ್ನಲ್ಲೇ ಬಿಜೆಪಿ ನಾಯಕನ ಬರ್ಬರ ಹತ್ಯೆ

    ಚುನಾವಣಾ ದಿನಾಂಕ ಘೋಷಣೆ ಬೆನ್ನಲ್ಲೇ ಬಿಜೆಪಿ ನಾಯಕನ ಬರ್ಬರ ಹತ್ಯೆ

    – ಬೈಕಲ್ಲಿ ಬಂದು ಗುಂಡು ಹಾರಿಸಿ ಕೊಲೆಗೈದ್ರು
    – ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆ

    ಪಾಟ್ನಾ: ಬಿಹಾರ ವಿಧಾನಸಭಾ ಚುನಾವಣಾ ದಿನಾಂಕ ಘೋಷಣೆಯಾದ ಬೆನ್ನಲ್ಲೇ ಇದೀಗ ಬಿಜೆಪಿ ನಾಯಕರೊಬ್ಬರ ಬರ್ಬರ ಹತ್ಯೆಯಾಗಿದೆ.

    ಮೃತ ದುರ್ದೈವಿ ನಾಯಕನನ್ನು ರಾಜೇಶ್ ಕುಮಾರ್ ಝಾ ಎಂದು ಗುರುತಿಸಲಾಗಿದೆ. ಹಾಡಹಗಲೇ ಬೈಕಲ್ಲಿ ಬಂದ ದುಷ್ಕರ್ಮಿಗಳು ರಾಜೇಶ್ ಮೇಲೆ ಗುಂಡು ಹಾರಿಸಿದ್ದಾರೆ. ಪರಿಣಾಮ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

    ಈ ಪ್ರಕರಣ ನಗರದ ತೇಜ್‍ಪ್ರತಾಪ್ ನಗರ ಪ್ರದೇಶದ ಸೀತಾರಾಮ್ ಎಂಟರ್ ಟೈನ್ಮೆಂಟ್ ಹಾಲ್ ಬಳಿ ನಡೆದಿದೆ. ಘಟನೆಯ ಸಂಪೂರ್ಣ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಘಟನೆ ನಡೆದ ಕೂಡಲೇ ಮಾಹಿತಿ ಅರಿತ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ತನಿಖೆ ಮುಂದುವರಿಸಿದರು. ಅಲ್ಲದೆ ಘಟನೆ ನಡೆದ ಸ್ಥಳೀಯ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲನೆ ನಡೆಸಿದ್ದಾರೆ.

    ಪ್ರಕರಣ ಸಂಬಂಧ ಕೆಲವು ಅನುಮಾನಾಸ್ಪದ ವ್ಯಕ್ತಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಿಜೆಪಿಯ ನಾಯಕನ ಆಪ್ತನೇ ಈ ಕೊಲೆಯಲ್ಲಿ ಭಾಗಿಯಾಗಿರುವ ಶಂಕೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಬಿಹಾರ ವಿಧಾನಸಭೆ ಚುನಾವಣೆ ದಿನಾಂಕ ಪ್ರಕಟ- ಅ.28ರಿಂದ ಮೂರು ಹಂತದಲ್ಲಿ ಮತದಾನ

    ರಾಜೇಶ್ ಅವರು ಇತ್ತೀಚೆಗಷ್ಟೇ ಬಿಜೆಪಿಗೆ ಸೇರಿದ್ದರು. ಇಂದು ಬೆಳಗ್ಗೆ ವಾಕಿಂಗ್ ಹೋಗುತ್ತಿದ್ದ ಸಂದರ್ಭದಲ್ಲಿ ಬೈಕಿನಲ್ಲಿ ಬಂದ ಇಬ್ಬರು ರಾಜೇಶ್ ಮೇಲೆ ಗುಂಡು ಹಾರಿಸಿ ಕೊಲೆ ಮಾಡಿದ್ದಾರೆ. ರಾಜೇಶ್ ನನ್ನು ಯಾರೋ ಒಬ್ಬರು ಟಾರ್ಗೆಟ್ ಮಾಡಿದ್ದಾರೆ ಎಂದು ಭಾವಿಸುತ್ತೇನೆ. ವೈಯಕ್ತಿಕ ದ್ವೇಷದಿಂದ್ಲೇ ಈ ಕೊಲೆ ನಡೆದಿದೆ ಎಂದು ರಾಜೇಶ್ ಬಾಮೈದ ತಿಳಿಸಿದ್ದಾರೆ.