Tag: ರಾಜೇಶ್‍ಟೋಪೆ

  • XE ರೂಪಾಂತರಿ ಮುಂಬೈನಲ್ಲಿ ಪತ್ತೆಯಾಗಿಲ್ಲ: ಮಹಾರಾಷ್ಟ್ರ ಸ್ಪಷ್ಟನೆ

    ಮುಂಬೈ: ಕೊರೊನಾ ಸೋಂಕಿನ ಹೊಸ ರೂಪಾಂತರಿಯಾಗಿರುವ ಎಕ್ಸ್‍ಇ ತಳಿ ಪತ್ತೆಯಾಗಿದೆ ಎಂದು ಬೃಹನ್ ಮುಂಬೈ ಮಹಾನಗರಪಾಲಿಕೆ (BMC) ವರದಿ ಮಾಡಿದ ಒಂದು ದಿನದ ಬಳಿಕ, ಎಕ್ಸ್‍ಇ ವೇರಿಯಂಟ್ ಪತ್ತೆಯಾಗಿಲ್ಲವೆಂದು ಮಹಾರಾಷ್ಟ್ರ ಆರೋಗ್ಯ ಸಚಿವ ರಾಜೇಶ್ ಟೋಪೆ ಸ್ಪಷ್ಟಪಡಿಸಿದ್ದಾರೆ.

    ಆರೋಗ್ಯ ಇಲಾಖೆಯ ಹೊಸ ತಳಿ ಪತ್ತೆಯಾಗಿರುವ ಬಗ್ಗೆ ಯಾವುದೇ ದೃಢೀಕರಣವನ್ನು ಸ್ವೀಕರಿಸಿಲ್ಲ. ಆದ್ದರಿಂದ ಎಕ್ಸ್‍ಇ ಪತ್ತೆಯಾಗಿರುವುದು ಕಂಡುಬಂದಿಲ್ಲ. ಮಾಹಿತಿ ಪ್ರಕಾರ ಎಕ್ಸ್‍ಇ ತಳಿಯು ಕೊರೊನಾ ರೂಪಾಂತರಿ ಓಮಿಕ್ರಾನ್‍ಗಿಂತಲೂ ಶೇ.10 ರಷ್ಟು ಹೆಚ್ಚು ಸೋಂಕನ್ನು ಹರಡುತ್ತದೆ. ಹಾಗಾಗಿ ನಾವು ಎನ್‍ಐಬಿ ಯಿಂದ ಮಹಾರಾಷ್ಟ್ರ ವರದಿ ಪಡೆದ ನಂತರ ಈ ಬಗ್ಗೆ ಮಾಹಿತಿ ನೀಡಲಾಗುವುದು ಎಂದು ರಾಜೇಶ್ ಟೋಪೆ ಹೇಳಿದ್ದಾರೆ. ಇದನ್ನೂ ಓದಿ: ಭಾರತಕ್ಕೆ ಕಾಲಿಟ್ಟ ಹೊಸ ರೂಪಾಂತರಿ ʼXEʼ – ಮುಂಬೈನಲ್ಲಿ ಮೊದಲ ಪ್ರಕರಣ ಪತ್ತೆ

    corona

    ವೈಜ್ಞಾನಿಕ ಪುರಾವೆ ಇಲ್ಲವೆಂದ ಕೇಂದ್ರ: ಮುಂಬೈನಲ್ಲಿ XE ಕೊರೊನಾ ತಳಿ ಪತ್ತೆಯಾಗಿದೆ ಎಂದು ಹೇಳಿದ್ದ ವರದಿಯನ್ನು ಕೇಂದ್ರ ಸರ್ಕಾರದ ಅಧಿಕಾರಿಗಳು ಅಲ್ಲಗಳೆದಿದ್ದಾರೆ. ಎಕ್ಸ್‍ಇ ತಳಿ ಪತ್ತೆಯಾಗಿರುವುದಕ್ಕೆ ವೈಜ್ಞಾನಿಕ ಪುರಾವೆಗಳಿಲ್ಲ ಎಂದಿದ್ದಾರೆ. ಭಾರತದ ಸಾರ್ಸ್ ಕೋವ್-2 ಜೆನೆಟಿಕ್ಸ್ ಕಾನ್ಸೊರ್ಟಿಯಮ್‍ನ (INSACOG) ಜಿನೋಮ್ ಸೀಕ್ವೆನ್ಸಿಂಗ್ ತಜ್ಞರು ವಿವರವಾಗಿ ಪರಿಶೀಲನೆ ನಡೆಸಿದ್ದು, ಮಾದರಿಯಲ್ಲಿ ಪತ್ತೆಯಾಗಿರುವ ತಳಿಯ ಜಿನೋಮ್ ರಚನೆಗಳಿಗೂ ಎಕ್ಸ್‍ಇ ತಳಿಯ ರಚನೆಗಳೂ ಹೋಲಿಕೆಯಾಗಿಲ್ಲ ಎಂದು ಅಧಿಕೃತ ಮೂಲಗಳಿಂದ ತಿಳಿದು ಬಂದಿದೆ. ಇದನ್ನೂ ಓದಿ: ಮತ್ತೆ ಶಾಕ್‌ ಕೊಟ್ಟ ಕೋವಿಡ್-‌ ಇಂಗ್ಲೆಂಡ್‌ನಲ್ಲಿ ʻXEʼ ಹೊಸ ರೂಪಾಂತರಿ ಪತ್ತೆ

    XE ವರ್ಗೀಕರಿಸುವುದು ಹೇಗೆ?: ತಳಿಯ ಗುರುತಿಸುವಿಕೆಯಲ್ಲಿ ಬಳಕೆಯಾಗಿರುವ ಸ್ವಯಂ ಚಾಲಿತ ಸಾಫ್ಟ್‍ವೇರ್ ವ್ಯವಸ್ಥೆಯಲ್ಲಿನ ಪ್ರಮಾದದಿಂದಾಗಿ ಈ ಗೊಂದಲ ಸೃಷ್ಟಿಯಾಗಿದೆ ಎಂದು ಐಎನ್‍ಎಸ್‍ಎಸಿಒಜಿ ಮೂಲಗಳು ತಿಳಿಸಿವೆ. ನಿರ್ದಿಷ್ಟ ಡೆಲ್ಟಾ ಮಾದರಿಗಳ ಜೊತೆಗೆ ಓಮಿಕ್ರಾನ್ ತಳಿ ಇದ್ದರೆ, ಸಾಫ್ಟ್‍ವೇರ್ ಅದನ್ನು XE ಎಂದು ವರ್ಗೀಕರಿಸುತ್ತಿದೆ. ಸ್ವಯಂ ಚಾಲಿತ ವಿಶ್ಲೇಷಣೆಯಲ್ಲಿ ಎದುರಾಗಿರುವ ಈ ದೋಷವನ್ನು ಪರಿಶೀಲಿಸಲು ತಜ್ಞರು ನೇರವಾಗಿ ವಿಶ್ಲೇಷಣೆ ನಡೆಸುವುದು ಅಗತ್ಯವಾಗಿದೆ’ ಎಂದು ಮೂಲಗಳು ಹೇಳಿವೆ.

    covid

    ಹಿನ್ನೆಲೆ ಏನು?: ಹಿಂದಿ ಸಿನಿಮಾ ಕ್ಷೇತ್ರದಲ್ಲಿ ವಸ್ತ್ರ ವಿನ್ಯಾಸಕಿಯಾಗಿ ಕಾರ್ಯನಿರ್ವಹಿಸುತ್ತಿರುವ 50 ವರ್ಷ ವಯಸ್ಸಿನ ಮಹಿಳೆಯಲ್ಲಿ `XE’ ತಳಿ ಸೋಂಕು ಪತ್ತೆಯಾದ ಬಗ್ಗೆ ವರದಿ ಪ್ರಕಟವಾಗಿತ್ತು. ಸೋಂಕಿನಿಂದ ಗುಣಮುಖರಾಗಿರುವ ಅವರು ಫೆಬ್ರವರಿಯಲ್ಲಿ ದಕ್ಷಿಣ ಆಫ್ರಿಕಾದಿಂದ ವಾಪಸಾಗಿದ್ದರು. ಮಹಾರಾಷ್ಟ್ರದ ಸಾರ್ವಜನಿಕ ಆರೋಗ್ಯ ಇಲಾಖೆಯ ಪ್ರಕಟಣೆಯ ಪ್ರಕಾರ, ಕಸ್ತೂರ್ಬಾ ಆಸ್ಪತ್ರೆಯ ಪ್ರಯೋಗಾಲಯದಲ್ಲಿ ಜಿನೋಮ್ ಸೀಕ್ವೆನ್ಸಿಂಗ್ ವಿಶ್ಲೇಷಣೆಗಾಗಿ ರೋಗಿಯಿಂದ ಸಂಗ್ರಹಿಸಲಾಗಿರುವ ಮಾದರಿಯನ್ನು ಕಳುಹಿಸಲಾಗಿತ್ತು. ಪ್ರಾಥಮಿಕ ವಿಶ್ಲೇಷಣೆಯಲ್ಲಿ `XE’ ತಳಿ ಇರುವುದು ಪತ್ತೆಯಾಗಿತ್ತು.