Tag: ರಾಜೇಂದ್ರ ಸಿಂಗ್ ಧಮಿ

  • ಕೊರೊನಾ ಲಾಕ್‍ಡೌನ್ – ಕಲ್ಲು ಒಡೆಯುವ ಕೂಲಿ ಕೆಲಸ ಮಾಡುತ್ತಿರುವ ವೀಲ್‍ಚೇರ್ ಕ್ರಿಕೆಟರ್

    ಕೊರೊನಾ ಲಾಕ್‍ಡೌನ್ – ಕಲ್ಲು ಒಡೆಯುವ ಕೂಲಿ ಕೆಲಸ ಮಾಡುತ್ತಿರುವ ವೀಲ್‍ಚೇರ್ ಕ್ರಿಕೆಟರ್

    ನವದೆಹಲಿ: ಕೊರೊನಾ ಲಾಕ್‍ಡೌನ್‍ನಿಂದ ಇಂಡಿಯಾದ ವೀಲ್‍ಚೇರ್ ಕ್ರಿಕೆಟರ್ ಒಬ್ಬರು ಕಲ್ಲು ಒಡೆಯುವ ಕೂಲಿ ಕೆಲಸ ಮಾಡುವ ಸಂದರ್ಭ ಬಂದಿದೆ.

    ಕೊರೊನಾ ಮಹಾಮಾರಿಯಿಂದ ದೇಶದ ಜನರು ಆರ್ಥಿಕ ಸಂಕಷ್ಟ ಸಿಲುಕಿದ್ದಾರೆ. ಎಷ್ಟೋ ಜನ ಇದ್ದ ಕೆಲಸವನ್ನು ಕಳೆದುಕೊಂಡು ಜೀವನಕ್ಕಾಗಿ ಕೂಲಿ ಕೆಲಸ ಮಾಡುತ್ತಿದ್ದಾರೆ. ಅಂತೆಯೇ ಒಂದು ಕಾಲದಲ್ಲಿ ಇಂಡಿಯಾ ವೀಲ್‍ಚೇರ್ ಕ್ರಿಕೆಟ್ ತಂಡದ ಆಟಗಾರ ಮತ್ತು ಪ್ರಸ್ತುತ ಇಂಡಿಯಾ ವೀಲ್‍ಚೇರ್ ಕ್ರಿಕೆಟ್ ತಂಡದ ಕೋಚ್ ಆಗಿರುವ ರಾಜೇಂದ್ರ ಸಿಂಗ್ ಧಮಿ ಕೂಲಿ ಕೆಲಸ ಮಾಡುತ್ತಿದ್ದಾರೆ.

    ವೀಲ್‍ಚೇರ್ ಕ್ರಿಕೆಟ್ ಆಟ ಭಾರತದಲ್ಲಿ ವೃತ್ತಿಪರ ಮತ್ತು ಅಧಿಕೃತವಾಗಿಲ್ಲ. ಆದರೂ ಪಂದ್ಯಗಳು ಆಗಾಗ ನಡೆಯುತ್ತವೆ. ಹೀಗಾಗಿ ಇದರಿಂದ ಬಹುಮಾನದ ಹಣದಿಂದ ರಾಜೇಂದ್ರ ಸಿಂಗ್ ಜೀವನ ನಡೆಸುತ್ತಿದ್ದರು. ಆದರೆ ಕೊರೊನಾ ಲಾಕ್‍ಡೌನ್ ನಂತರ ಯಾವುದೇ ಪಂದ್ಯಗಳು ನಡೆದಿಲ್ಲ. ಆ ನಂತರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ರಾಜೇಂದ್ರ ಅವರು ತನ್ನ ಊರು ಉತ್ತರಖಂಡ ರಾಯ್ಕೊನಲ್ಲಿ ಕಲ್ಲು ಒಡೆಯುವ ದಿನಗೂಲಿ ಕೆಲಸ ಮಾಡುತ್ತಿದ್ದಾರೆ. ಈ ಮೂಲಕ ತನ್ನ ಪೋಷಕರು ಮತ್ತು ಒಡಹುಟ್ಟಿದವರನ್ನು ಸಾಕುತ್ತಿದ್ದಾರೆ.

    ರಾಜೇಂದ್ರ ಅವರು ಎರಡು ವರ್ಷದ ಮಗುವಾಗಿದ್ದಾಗ ಅವರ ದೇಹದ ಕೆಳಭಾಗ ಪಾಶ್ರ್ವವಾಯುವಿಗೆ ಒಳಗಾಗಿತ್ತು. ಆದರೆ ಅದನ್ನು ಲೆಕ್ಕಿಸದೇ ಕ್ರೀಡಾಪಟುವಾದ ಅವರು, ನ್ಯಾಷನಲ್ ಮಟ್ಟದಲ್ಲಿ ಭಾರತಕ್ಕಾಗಿ ಶಾಟ್‍ಪುಟ್ ಮತ್ತು ಡಿಸ್ಕಸ್ ಥ್ರೋನಲ್ಲಿ ಪದಕವನ್ನು ಗೆದ್ದು ತಂದಿದ್ದಾರೆ. ಆ ನಂತರ ಅವರು ಚೆನ್ನಾಗಿ ಬ್ಯಾಟಿಂಗ್ ಮಾಡುತ್ತಿದ್ದ ಕಾರಣ, ವೀಲ್‍ಚೇರ್ ಕ್ರಿಕೆಟರ್ ಆಗಿದ್ದರು. ನಂತರ ಅದೇ ತಂಡಕ್ಕೆ ಕೋಚ್ ಕೂಡ ಆದರು. ಕಳೆದ ಮಾರ್ಚ್‍ನಲ್ಲಿ ಕ್ರಿಕೆಟ್ ಆಡಲು ಬೆಂಗಳೂರಿಗೆ ಬರಬೇಕಿತ್ತು. ಆದರೆ ಕೊರೊನಾ ಲಾಕ್‍ಡೌನ್‍ನಿಂದ ಅದು ಸಾಧ್ಯವಾಗಲಿಲ್ಲ.

    ಈ ವಿಚಾರದ ಬಗ್ಗೆ ಮಾತನಾಡಿರುವ ಧಮಿ, ಒಬ್ಬ ನ್ಯಾಷನಲ್ ಕ್ರೀಡಾಪಟುವಾಗಿ ನನಗೆ ಈ ಕೆಲಸ ಮಾಡುತ್ತಿರುವುದಕ್ಕೆ ಬೇಜಾರಿಲ್ಲ. ಭಿಕ್ಷೆ ಬೇಡುವುದಕ್ಕಿಂತ ಕಷ್ಟು ಪಟ್ಟ ಕೆಲಸ ಮಾಡುವುದು ಒಳ್ಳೆಯದು. ದಿನಗೂಲಿ ಕೆಲಸ ಮಾಡಿ ದಿಕ್ಕೆ 400 ರೂ. ದುಡಿಯುತ್ತಿದ್ದೇನೆ. ಇದರಿಂದ ನನ್ನ ಮನೆಗೂ ಸಹಾಯವಾಗಿದೆ. ಇದು ಕೇವಲ ನನ್ನ ಪರಿಸ್ಥಿತಿಯಲ್ಲ. ನನ್ನಂತ ಸಾವಿರಾರು ಜನ ಕ್ರೀಡಾಪಟುಗಳು ಇಂದು ಇದೇ ಪರಿಸ್ಥಿತಿಯಲ್ಲಿ ಇದ್ದಾರೆ. ಅವರಿಗೂ ಕೂಡ ಸಹಾಯವಾಗಬೇಕಿದೆ ಎಂದು ಹೇಳಿದ್ದಾರೆ.

    ರಾಜೇಂದ್ರ ಸಿಂಗ್ ಧಮಿ ಅವರು ಮಾಡುತ್ತಿರುವ ಕೆಲಸ ರಾಷ್ಟ್ರೀಯ ಸುದ್ದಿಯಾದ ನಂತರ ಭಾರತೀಯ ಒಲಿಂಪಿಕ್ ಅಸೋಸಿಯೇಷನ್ 50,000 ರೂಪಾಯಿಗಳನ್ನು ಅನುದಾನವನ್ನು ಧಮಿಗೆ ನೀಡಿದೆ. ಆದರೆ ಉತ್ತರಖಂಡದ ರಾಜ್ಯ ಸರ್ಕಾರವು ಯಾವುದೇ ನೆರವು ನೀಡಿಲ್ಲ. ಕೇವಲ ನನಗೆ ಸಹಾಯ ಮಾಡಿದರೆ ಆಗುವುದಿಲ್ಲ. ನನ್ನ ಹಾಗೇ ಕಷ್ಟದಲ್ಲಿ ಇರುವ ಕ್ರೀಡಾಪಟುಗಳಿಗೆ ಸಹಾಯ ಮಾಡಬೇಕಿದೆ ಎಂದು ಧಮಿ ಸರ್ಕಾರಗಳಿಗೆ ಮನವಿ ಮಾಡಿದ್ದಾರೆ.