Tag: ರಾಜೇಂದ್ರ ಕುಮಾರ್‌

  • ಸಹಕಾರಿ ಬಂಧುಗಳಿಂದ ಧರ್ಮಸ್ಥಳಕ್ಕೆ ಯಾತ್ರೆ – ಧರ್ಮಜಾಗೃತಿ ಸಮಾವೇಶ

    ಸಹಕಾರಿ ಬಂಧುಗಳಿಂದ ಧರ್ಮಸ್ಥಳಕ್ಕೆ ಯಾತ್ರೆ – ಧರ್ಮಜಾಗೃತಿ ಸಮಾವೇಶ

    ಮಂಗಳೂರು: ನಾಡಿನ ಪವಿತ್ರ ಕ್ಷೇತ್ರ ಧರ್ಮಸ್ಥಳದ (Dharmasthala) ಬಗ್ಯೆ ಆಗುತ್ತಿರುವ ಅಪಪ್ರಚಾರ ಹಾಗೂ ಸುಳ್ಳು ವದಂತಿಯನ್ನು ಖಂಡಿಸಿ, ಜಾತಿ-ಮತ, ಪಕ್ಷ ಬೇಧ ಮರೆತು ಸರ್ವಸಹಕಾರಿಗಳೂ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರ ಸಂಪೂರ್ಣ ಬೆಂಬಲಕ್ಕೆ ಹಾಗೂ ಧರ್ಮಸ್ಥಳದ ಪಾವಿತ್ರ ರಕ್ಷಣೆಗೆ ಸದಾ ಸಿದ್ಧರೂ, ಬದ್ಧರೂ ಆಗಿದ್ದು, ಧರ್ಮಸ್ಥಳದ ಜೊತೆ ಸದಾ ಇರುತ್ತೇವೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ಅಧ್ಯಕ್ಷ ಎಂ.ಎನ್. ರಾಜೇಂದ್ರ ಕುಮಾರ್ (Rajendra Kumar) ಭರವಸೆ ನೀಡಿದರು.

    ದಕ್ಷಿಣ ಕನ್ನಡ (Dakshina Kannada) ಮತ್ತು ಉಡುಪಿ (Udupi) ಜಿಲ್ಲೆಯ ಸಮಸ್ತ ಸಹಕಾರಿಗಳು ಭಾನುವಾರ ಧರ್ಮಸ್ಥಳಕ್ಕೆ ಧರ್ಮಜಾಗೃತಿ ಯಾತ್ರೆಯಲ್ಲಿ ಮೂರು ಸಾವಿರಕ್ಕೂ ಮಿಕ್ಕಿ ವಾಹನಗಳ ಜಾಥಾದಲ್ಲಿ ಬಂದು ಅಮೃತವರ್ಷಿಣಿ ಸಭಾಭವನದಲ್ಲಿ ನಡೆದ ಧರ್ಮಜಾಗೃತಿ ಸಮಾವೇಶದಲ್ಲಿ ಅವರು ಮಾತನಾಡಿದರು.

    ಎಲ್ಲರೂ ಸದಾ ಪೂಜ್ಯ ಹೆಗ್ಗಡೆಯವರ ಜೊತೆಗಿದ್ದು, ಯಾರಿಗೂ ಅನ್ಯಾಯವಾಗದ ರೀತಿಯಲ್ಲಿ ಧರ್ಮಸ್ಥಳ ಕ್ಷೇತ್ರದ ರಕ್ಷಣೆ ಎಲ್ಲಾ ಭಕ್ತರು ಹಾಗೂ ಅಭಿಮಾನಿಗಳ ಕರ್ತವ್ಯವೂ, ಹೊಣೆಗಾರಿಕೆಯೂ ಆಗಿದ್ದು, ಇಂತಹ ಪವಿತ್ರ ಸೇವೆಯಿಂದ ಭಕ್ತರ ಮನಸ್ಸಿಗೂ ಶಾಂತಿ, ನೆಮ್ಮದಿ ದೊರಕುತ್ತದೆ ಎಂದು ಹೇಳಿದರು.

    ಸತ್ಯದ ಜೊತೆಗೆ ನಾವಿದ್ದೇವೆ: ಮೂಡಬಿದ್ರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಮಾತನಾಡಿ, ಸತ್ಯ, ಧರ್ಮ, ನ್ಯಾಯ, ನೀತಿ ಸದಾ ನೆಲೆ ನಿಂತಿರುವ ಧರ್ಮಸ್ಥಳದ ರಕ್ಷಣೆಗೆ ಎಲ್ಲರೂ ಕಟಿಬದ್ಧರಾಗಿದ್ದೇವೆ. ಸತ್ಯಮೇವ ಜಯತೇ ಎಂಬಂತೆ ಸತ್ಯಕ್ಕೆ ಸದಾ ಜಯವಿದೆ. ಸತ್ಯದ ಜೊತೆಗೆ ನಾವಿದ್ದೇವೆ ಎಂದು ಡಾ. ಮೋಹನ ಆಳ್ವ (Mohan Alva) ಭರವಸೆ ನೀಡಿದರು. ಹೆಗ್ಗಡೆಯವರ ನೇತೃತ್ವದಲ್ಲಿ ಹಲವು ಸಮಾಜಮುಖಿ ಸೇವಾಕಾರ್ಯಗಳ ಮೂಲಕ ಧರ್ಮಸ್ಥಳ ಇಂದು ಇಡೀ ದೇಶಕ್ಕೆ ಮಾದರಿ ಸಂಸ್ಥೆಯಾಗಿದೆ ಎಂದು ಅವರು ಶ್ಲಾಘಿಸಿದರು.

    ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು (Veerendra Heggade) ಮಾತನಾಡಿ ಭಕ್ತರು ಹಾಗೂ ಅಭಿಮಾನಿಗಳ ಪ್ರೀತಿ-ವಿಶ್ವಾಸ, ಗೌರವ ಮತ್ತು ಅಭಿಮಾನ ತಮಗೆ ಹೆಚ್ಚಿನ ಉತ್ಸಾಹ ಮತ್ತು ಭರವಸೆ ಮೂಡಿಸಿದೆ.

    ಸಹಕಾರಿ ಕ್ಷೇತ್ರವನ್ನು ತಮ್ಮ ಮಾರ್ಗದರ್ಶಿತ್ವ ಮತ್ತು ನಾಯಕತ್ವದೊಂದಿಗೆ ಜನಪ್ರಿಯಗೊಳಿಸಿದ ರಾಜೇಂದ್ರ ಕುಮಾರ್ ಅವರ ಸೇವೆ, ಸಾಧನೆಯನ್ನು ಶ್ಲಾಘಿಸಿ ಸಮಾಜಕ್ಕೆ ಇಂದು ಎಲ್ಲಾ ಕ್ಷೇತ್ರಗಳಲ್ಲಿ ಇಂತಹ ದಕ್ಷ, ಪ್ರಾಮಾಣಿಕ ಹಾಗೂ ನಿಷ್ವಾರ್ಥ ನಾಯಕರ ಅಗತ್ಯವಿದೆ. ಸಹಕಾರಿರಂಗವನ್ನು ರಾಜ್ಯಮಟ್ಟದ ಖ್ಯಾತಿಗೆ ಬೆಳೆಸಿರುವುದಕ್ಕೆ ಹೆಗ್ಗಡೆಯವರು ಮೆಚ್ಚುಗೆ ವ್ಯಕ್ತಪಡಿಸಿದರು.

    ತಮ್ಮ ಸಂಸದರ ನಿಧಿಯಿಂದ ಬೀದರ್ ಜಿಲ್ಲೆಯಲ್ಲಿ ಹೈನುಗಾರಿಕೆ ಅಭಿವೃದ್ಧಿಗೆ 5 ಕೋಟಿ ರೂ. ಅನುದಾನ ನೀಡಲಾಗಿದೆ. ಅಲ್ಲದೆ ಧರ್ಮಸ್ಥಳದಿಂದ ಎಲ್ಲಾ ಸಹಕಾರಿ ಸಂಘಗಳಿಗೂ ಸಕಾಲಿಕ ನೆರವು, ಪ್ರೋತ್ಸಾಹ ನೀಡಲಾಗುತ್ತದೆ ಎಂದರು. ಮಾಧ್ಯಮಗಳಲ್ಲಿ ಅಪಪ್ರಚಾರ ಹಾಗೂ ಸುಳ್ಳು ವದಂತಿ ಪ್ರಸಾರದಿಂದ ತಮಗೆ ಆಘಾತಕರವಾದ ನೋವು ಉಂಟಾಗಿದೆ. ಆದರೆ ಧಮಸ್ಥಳದ ಮಂಜುನಾಥ ಸ್ವಾಮಿ ಹಾಗೂ ಭಗವಾನ್ ಚಂದ್ರನಾಥ ಸ್ವಾಮಿ ಇಬ್ಬರೂ ಶಾಂತ ಸ್ವಭಾವದವರಾಗಿದ್ದು, ದೇವರ ಅನುಗ್ರಹ, ಧರ್ಮದೇವತೆಗಳು ಮತ್ತು ಅಣ್ಣಪ್ಪ ಸ್ವಾಮಿಯ ಅಭಯದಿಂದ ನೋವು ಮರೆಯಲು ಸಾಧ್ಯವಾಗಿದೆ. ಅಪವಾದ, ಅಪಪ್ರಚಾರ ಮಾಡಿದವರಿಗೂ ಅಭಿನಂದನೆ ಹೇಳಿದ ಹೆಗ್ಗಡೆಯವರು ಅವರಿಂದಾಗಿ ಪ್ರತಿದಿನ ಸಾವಿರಾರು ಮಂದಿ ಧರ್ಮಸ್ಥಳಕ್ಕೆ ಬಂದು ತಮ್ಮ ಪ್ರೀತಿ-ವಿಶ್ವಾಸ, ಗೌರವ ಅಭಿಮಾನ ವ್ಯಕ್ತಪಡಿಸುತ್ತಿದ್ದಾರೆ ಎಂದು ಹೇಳಿದರು.

    ಮಾಣಿಲದ ಮೋಹನದಾಸ ಸ್ವಾಮೀಜಿ, ಕ್ಯಾಂಪ್ಕೋ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ, ದ.ಕ. ಹಾಲು ಒಕ್ಕೂಟದ ಅಧ್ಯಕ್ಷ ರವಿರಾಜ ಹೆಗ್ಡೆ, ಬೆಳಪು ದೇವಿಪ್ರಸಾದ್ ಶೆಟ್ಟಿ ಉಪಸ್ಥಿತರಿದ್ದರು. ಸುಮಾರು ಹತ್ತು ಸಾವಿರ ಮಂದಿ ಜಾಥಾದಲ್ಲಿ ಬಂದಿದ್ದರು.

    ದ.ಕ. ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಶಶಿಕುಮಾರ್ ರೈ ಸ್ವಾಗತಿಸಿದರು. ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಧನ್ಯವಾದವಿತ್ತರು.

  • ನವೋದಯ ಸ್ವಸಹಾಯ ಗುಂಪುಗಳ ರಜತ ಸಂಭ್ರಮದ ಸಮಾವೇಶಕ್ಕೆ ಸಿದ್ಧತೆ ಪೂರ್ಣ: ಡಾ. ಎಂ.ಎನ್.ರಾಜೇಂದ್ರ ಕುಮಾರ್

    ನವೋದಯ ಸ್ವಸಹಾಯ ಗುಂಪುಗಳ ರಜತ ಸಂಭ್ರಮದ ಸಮಾವೇಶಕ್ಕೆ ಸಿದ್ಧತೆ ಪೂರ್ಣ: ಡಾ. ಎಂ.ಎನ್.ರಾಜೇಂದ್ರ ಕುಮಾರ್

    – ಒಂದೂವರೆ ಲಕ್ಷ ಪ್ರತಿನಿಧಿಗಳ ಭಾಗಿ ನಿರೀಕ್ಷೆ

    ಮಂಗಳೂರು: ನಗರದ ಬಂಗ್ರಕೂಳೂರಿನ ಗೋಲ್ಡ್ ಫಿಂಚ್ ಸಿಟಿಯಲ್ಲಿ ಮೇ 10 ರಂದು ನಡೆಯಲಿರುವ ನವೋದಯ ಸ್ವಸಹಾಯ ಗುಂಪುಗಳ 25 ನೇ ವರ್ಷದ ಅಂಗವಾಗಿ ನಡೆಯುವ ಸಮಾವೇಶ ‘ರಜತ ಸಂಭ್ರಮ’ ರಾಜ್ಯದ ಐತಿಹಾಸಿಕ ಸಮಾವೇಶವಾಗಲಿದೆ. ಸಮಾವೇಶದಲ್ಲಿ ಸುಮಾರು 1.5 ಲಕ್ಷಕ್ಕೂ ಮಿಕ್ಕಿ ಮಹಿಳೆಯರು ನೀಲಿ ಬಣ್ಣದ ಸಮವಸ್ತ್ರದಲ್ಲಿ ಭಾಗವಹಿಸಲಿರುವುದು ರಾಜ್ಯದಲ್ಲಿಯೇ ಪ್ರಥಮ. ಈ ಹಿನ್ನೆಲೆಯಲ್ಲಿ ಸಿದ್ಧತೆಗಳು ಪೂರ್ಣಗೊಂಡಿದೆ ಎಂದು ನವೋದಯ ಗ್ರಾಮ ವಿಕಾಸ ಚಾರಿಟೆಬಲ್ ಟ್ರಸ್ಟ್ ಸಂಸ್ಥಾಪಕ ಡಾ. ಎಂ.ಎನ್. ರಾಜೇಂದ್ರ ಕುಮಾರ್ ತಿಳಿಸಿದ್ದಾರೆ.

    ಮಂಗಳೂರಿನ ಬಂಗ್ರಕೂಳೂರಿನ ಗೋಲ್ಡ್ ಪಿಂಚ್ ಸಿಟಿಯಲ್ಲಿ ನವೋದಯ ಗ್ರಾಮ ವಿಕಾಸ ಚಾರಿಟೆಬಲ್ ಟ್ರಸ್ಟ್ ವತಿಯಿಂದ ಹಮ್ಮಿಕೊಂಡ ಸುದ್ದಿಗೋಷ್ಠಿಯನ್ನುದ್ದೇಶಿಸಿ ಡಾ.ಎಂ.ಎನ್ ರಾಜೇಂದ್ರ ಕುಮಾರ್ ಮಾತನಾಡಿ, ಈ ಸಮಾವೇಶ ಮಹಿಳಾ ಸಬಲೀಕರಣ, ಸಶಕ್ತತೆಯ ಹಿನ್ನೆಲೆಯಲ್ಲಿ ಇತರರಿಗೂ ಮಾದರಿ ಸಮಾವೇಶ ಆಗಬೇಕು ಎನ್ನುವುದು ನಮ್ಮ ಆಶಯ. ಈ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ವಿಧಾನಸಭೆಯ ಸಭಾಧ್ಯಕ್ಷರು ಹಾಗೂ ಮಂಗಳೂರು ವಿಧಾನಸಭಾ ಕ್ಷೇತ್ರದ ಶಾಸಕ ಯು.ಟಿ. ಖಾದರ್, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮೊದಲಾದವರು ಆಗಮಿಸಲಿದ್ದಾರೆ. ಇದನ್ನೂ ಓದಿ: ನವೋದಯ ರಜತ ಸಂಭ್ರಮ – ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವಿಸ್ ಭಾಗಿ: ರಾಜೇಂದ್ರ ಕುಮಾರ್

    ನವೋದಯ ಸ್ವಸಹಾಯ ಗುಂಪುಗಳು ಗ್ರಾಮೀಣ ಜನರ ಬದುಕಿನಲ್ಲಿ ಆರ್ಥಿಕ ಸ್ವಾವಲಂಬನೆಯನ್ನು ಮೂಡಿಸಿ ಪ್ರಜಾಪ್ರಭುತ್ವದ ತಳಹದಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಗ್ರಾಮಾಂತರ ಪ್ರದೇಶಗಳಲ್ಲಿ ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಅಭಿವೃದ್ಧಿಯ ಜೊತೆಗೆ ಸಬಲೀಕರಣದ ಹಾದಿಯಲ್ಲಿ ಸಾಗುತ್ತಿದೆ. ಈ ಒಂದು ಉದಾತ್ತವಾದ ಉದ್ದೇಶವನ್ನಿಟ್ಟುಕೊಂಡು ನವೋದಯ ಸ್ವಸಹಾಯ ಗುಂಪುಗಳ ರಜತ ಸಂಭ್ರಮ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

    ಎಲ್ಲರನ್ನೂ ಒಳಗೊಳ್ಳುವ ಸಮಾವೇಶ- ನವೋದಯ ಸ್ವಸಹಾಯ ಸಂಘದಲ್ಲಿ ಜಾತಿ, ಮತ ಭೇದವಿಲ್ಲದೆ ಎಲ್ಲಾ ಜನರನ್ನು ಒಳಗೊಂಡ ಸಮಾವೇಶ ಎಂದು ಸಮಾವೇಶದ ಸಂಘಟಕರಾದ ದೇವಿ ಪ್ರಸಾದ್ ಶೆಟ್ಟಿ ತಿಳಿಸಿದ್ದಾರೆ. ಇದನ್ನೂ ಓದಿ: ಆಪರೇಷನ್ ಸಿಂಧೂರ ಇನ್ನೂ ಮುಗಿದಿಲ್ಲ – ರಾಜನಾಥ್ ಸಿಂಗ್ ಮಹತ್ವದ ಸುಳಿವು

    2000ನೇ ಇಸವಿಯ ಜನವರಿ 29ರಂದು ಕಾರ್ಕಳದಲ್ಲಿ ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಹಾಗೂ ಆಗಿನ ಸಹಕಾರ ಸಚಿವ ಡಿ.ಕೆ.ಶಿವಕುಮಾರ್ ಅವರಿಂದ ಉದ್ಘಾಟಿಸಲ್ಪಟ್ಟ ನವೋದಯ ಸ್ವಸಹಾಯ ಗುಂಪುಗಳ ಕಾರ್ಯ ವಿಸ್ತಾರವು ಇಂದು ರಾಜ್ಯದ 8 ಜಿಲ್ಲೆಗಳಿಗೆ ಪಸರಿಸಿದೆ. ಇದರಲ್ಲಿ ಸುಮಾರು 5ಲಕ್ಷಕ್ಕೂ ಹೆಚ್ಚು ಸದಸ್ಯರಿದ್ದು, ಮುಖ್ಯವಾಗಿ ಮಹಿಳೆಯರಿಗೆ ಸ್ವಾವಲಂಬಿ ಬದುಕು ಕಲ್ಪಿಸಿಕೊಟ್ಟಿದೆ. ನವೋದಯದ ರಜತ ಸಂಭ್ರಮವನ್ನು ದೇಶಕ್ಕೆ ಮಾದರಿಯಾಗಿ ಹಮ್ಮಿಕೊಳ್ಳುವ ಯೋಜನೆ ರೂಪಿಸಿ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ನಿ. ಬೆಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿ., ಮಂಗಳೂರು ಇದರ ಅಧ್ಯಕ್ಷರು ಹಾಗೂ ನವೋದಯ ಗ್ರಾಮ ವಿಕಾಸ ಟ್ರಸ್ಟ್(ರಿ.) ಮಂಗಳೂರು ಇದರ ಸಂಸ್ಥಾಪಕರಾದ ಡಾ.ಎಂ.ಎನ್ ರಾಜೇಂದ್ರ ಕುಮಾರ್ ಸಮಾರಂಭದ ಅಧ್ಯಕ್ಷತೆ ವಹಿಸಲಿರುವರು.

    ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳು ಹಾಗೂ ರಾಜ್ಯಸಭಾ ಸದಸ್ಯರಾದ ಡಾ. ಡಿ.ವೀರೇಂದ್ರ ಹೆಗ್ಗಡೆ ಹಾಗೂ ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಸಚಿವ ಕೆ.ಎನ್.ರಾಜಣ್ಣ, ಮಾಜಿ ಸಿಎಂ ಎಂ.ವೀರಪ್ಪ ಮೊಯ್ಲಿ, ಸಚಿವರಾದ ದಿನೇಶ್ ಗುಂಡೂರಾವ್, ಲಕ್ಷ್ಮೀ ಹೆಬ್ಬಾಳ್ಕರ್‌, ಶಿವಾನಂದ ಪಾಟೀಲ, ಆರ್.ಬಿ.ತಿಮ್ಮಾಪುರ ಅವರು ಭಾಗವಹಿಸಲಿದ್ದಾರೆ ಎಂದು ದೇವಿಪ್ರಸಾದ್ ತಿಳಿಸಿದ್ದಾರೆ.

    ಸುದ್ದಿಗೋಷ್ಠಿಯಲ್ಲಿ ಎಸ್‌ಸಿಡಿಸಿಸಿ ಬ್ಯಾಂಕ್‌ನ ಉಪಾಧ್ಯಕ್ಷ ವಿನಯ ಕುಮಾರ್ ಸೂರಿಂಜೆ, ಬ್ಯಾಂಕ್ ನಿರ್ದೇಶಕರಾದ ಭಾಸ್ಕರ್.ಎಸ್. ಕೋಟ್ಯಾನ್, ಶಶಿಕುಮಾರ್ ರೈ ಬಿ.ದೇವಿ ಪ್ರಸಾದ್ ಶೆಟ್ಟಿ ಬೆಳಪು, ಎಂ. ವಾದಿರಾಜ ಶೆಟ್ಟಿ, ಎಸ್.ಬಿ.ರಾಜೇಶ್ ರಾವ್, ಕುಶಾಲಪ್ಪ ಗೌಡ, ಬ್ಯಾಂಕಿನ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಗೋಪಾಲಕೃಷ್ಣ ಭಟ್ ಕೆ, ಜನವೋದಯ ಟ್ರಸ್ಟಿಗಳಾದ ಮೇಘರಾಜ್ ಆರ್. ಜೈನ್, ಸುನಿಲ್ ಕುಮಾರ್ ಬಜಗೋಳಿ, ಸ್ಕ್ಯಾಡ್ಸ್ ಅಧ್ಯಕ್ಷ ರವೀಂದ್ರ ಕಂಬಳಿ, ಉದ್ಯಮಿ ಪುಷ್ಪರಾಜ್ ಜೈನ್, ನವೋದಯ ಚ್ಯಾರಿಟಬಲ್ ಟ್ರಸ್ಟ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪೂರ್ಣಿಮಾ ಶೆಟ್ಟಿ ಉಪಸ್ಥಿತರಿದ್ದರು. ಇದನ್ನೂ ಓದಿ: ರಾಜ್ಯದ 17 ಅಣೆಕಟ್ಟುಗಳಲ್ಲಿ ಅಲರ್ಟ್ – ನಾರಾಯಣಪುರ ಡ್ಯಾಂಗೆ 42 ಪೊಲೀಸ್ ಸಿಬ್ಬಂದಿ ನಿಯೋಜನೆ

    * ಬಂಗ್ರಕೂಳೂರಿನ ಗೋಲ್ಡ್ ಪಿಂಚ್ ಸಿಟಿಯಲ್ಲಿ ಒಂದೂವರೆ ಲಕ್ಷ ಜನರು ಭಾಗವಹಿಸಬಹುದಾದ ಬೃಹತ್ ಸಭಾಂಗಣ ನಿರ್ಮಿಸಲಾಗಿದೆ.
    * 3 ಸಾವಿರ ಬಸ್ ಹಾಗೂ 750 ಕಾರ್‌ಗಳನ್ನು ವ್ಯವಸ್ಥೆ ಮಾಡಲಾಗಿದೆ.
    * ಊಟದ ವ್ಯವಸ್ಥೆಗಾಗಿ ಸ್ಥಳದಲ್ಲಿ 160 ಕೌಂಟರ್ ನಿರ್ಮಿಸಲಾಗಿದೆ.
    * ನವೋದಯ ಸ್ವ ಸಹಾಯ ಗುಂಪುಗಳ ವಸ್ತು ಪ್ರದರ್ಶನದ ವ್ಯವಸ್ಥೆ ಇರುತ್ತದೆ.
    * ಪಡುಬಿದ್ರೆ ಬಂಟರ ಸಭಾಂಗಣ, ವಾಮಂ ಜೂರು, ಬಂಟ್ವಾಳ ಬಂಟರ ಭವನ, ಯಶಸ್ವಿ ಹಾಲ್ ಪರಂಗಿಪೇಟೆಯಲ್ಲಿ ಸಮಾವೇಶಕ್ಕೆ ಆಗಮಿಸುವವರಿಗೆ ಆಹಾರದ ಪೊಟ್ಟಣ ನೀಡಲಾಗುವುದು ಎಂದು ದೇವಿ ಪ್ರಸಾದ್ ಶೆಟ್ಟಿ ಸಮಾವೇಶದ ಸಿದ್ಧತೆಯ ಬಗ್ಗೆ ವಿವರಿಸಿದರು.
    * ಬಂಗ್ರಕೂಳೂರಿನಲ್ಲಿ ಎಂ.ಎನ್.ಆರ್ ಪ್ರೊಡಕ್ಷನ್ಸ್ ಸಂಸ್ಥೆಯ ವತಿಯಿಂದ ಡಾ.ಎಂ.ಎನ್.ರಾಜೇಂದ್ರ ಕುಮಾರ್ ನಿರ್ಮಾಪಕರಾಗಿರುವ ವಿಜಯ ಕುಮಾರ್ ಕೊಡಿಯಾಲ ಬೈಲ್ ಅವರ ನಿರ್ದೇಶನದ ‘ಡಾಕ್ಟ್ರಾ ಭಟ್ರಾ’ ಹೆಸರಿನ ತುಳು ಚಲನಚಿತ್ರದ ಪೋಸ್ಟರನ್ನು ಡಾ‌.ಎಂ.ಎನ್.ರಾಜೇಂದ್ರ ಕುಮಾರ್ ಗುರುವಾರ ಬಿಡುಗಡೆ ಗೊಳಿಸಿದರು. ಈ ಸಂದರ್ಭದಲ್ಲಿ ನಿರ್ದೇಶಕ ವಿಜಯ ಕುಮಾರ್ ಕೊಡಿಯಾಲ ಬೈಲ್ ಉಪಸ್ಥಿತರಿದ್ದರು.