Tag: ರಾಜು ಕಾಗೆ

  • ಬಿಜೆಪಿಗೆ ಕಬ್ಬಿಣದ ಕಡಲೆಯಾಗುತ್ತಾ ಕಾಗವಾಡ ಕ್ಷೇತ್ರ?

    ಬಿಜೆಪಿಗೆ ಕಬ್ಬಿಣದ ಕಡಲೆಯಾಗುತ್ತಾ ಕಾಗವಾಡ ಕ್ಷೇತ್ರ?

    ಬೆಳಗಾವಿ/ಚಿಕ್ಕೋಡಿ: ಕಾಗವಾಡ ವಿಧಾನಸಭಾ ಕ್ಷೇತ್ರ ಬಿಜೆಪಿಗೆ ಕಬ್ಬಿಣದ ಕಡಲೆಯಾಗುತ್ತಾ ಎಂಬ ಪ್ರಶ್ನೆಯೊಂದು ಕಮಲ ಅಂಗಳದಲ್ಲಿ ಹರಿದಾಡುತ್ತಿದೆ.

    ಕೆಲ ದಿನಗಳ ಹಿಂದೆ ಮಹಾರಾಷ್ಟ್ರದ ಚುನಾವಣೆಯಲ್ಲಿ ಅಧಿಕಾರದಲ್ಲಿದ್ದ ಬಿಜೆಪಿ ಪಕ್ಷದ ಅಭ್ಯರ್ಥಿಗಳು ನೆರೆಪೀಡಿತ ಪ್ರದೇಶಗಳಲ್ಲಿ ಹೀನಾಯವಾಗಿ ಸೋತು ಮನೆ ಸೇರಿದ್ದರು. ಅದೇ ಪರಿಸ್ಥಿತಿ ಈಗ ಬಿಜೆಪಿ ಪಕ್ಷಕ್ಕೆ ಅದರಲ್ಲೂ ಕಾಗವಾಡ ಮತಕ್ಷೇತ್ರಕ್ಕೆ ಎದುರಾಗಲಿದೆ ಎನ್ನುವ ವಾತಾವರಣ ನಿರ್ಮಾಣವಾಗಿದೆ. ನೆರೆ ಸಂದರ್ಭದಲ್ಲಿ ಜನರ ಕಷ್ಟಕ್ಕೆ ಸ್ಪಂದಿಸಬೇಕಿದ್ದ ಕಾಂಗ್ರೆಸ್ ಶಾಸಕ ಶ್ರೀಮಂತ ಪಾಟೀಲ್, ಮುಂಬೈನಲ್ಲಿ ಬೀಡುಬಿಟ್ಟಿದ್ದರು. ಈಗ ಮತ್ತೆ ಚುನಾವಣೆಗೆ ಸ್ಪರ್ಧಿಸಿದ್ದಾರೆ.

    ಲಿಂಗಾಯತರ ಪ್ರಾಬಲ್ಯ ಇರುವ ಕ್ಷೇತ್ರದಲ್ಲಿ ಬದಲಾವಣೆ ಬಯಸಿ ಬಿಜೆಪಿಯ ಅಭ್ಯರ್ಥಿ ರಾಜುಕಾಗೆ ಅವರನ್ನ ಸೋಲಿಸಿ ಮರಾಠಾ ಸಮುದಾಯದ ಶ್ರೀಮಂತ್ ಪಾಟೀಲ್ ಅವರನ್ನ ಕ್ಷೇತ್ರದ ಜನ ಕಾಂಗ್ರೆಸ್ ಪಕ್ಷದಿಂದ ವಿಧಾನ ಸಭೆಗೆ ಗೆಲ್ಲಿಸಿದ್ದರು. ಇದೀಗ ಬಿಜೆಪಿಯಿಂದ ಶ್ರೀಮಂತ್ ಪಾಟೀಲ್ ಸ್ಪರ್ಧಿಸಿದ್ರೆ, ರಾಜು ಕಾಗೆ ಕಾಂಗ್ರೆಸ್ ನಿಂದ ಸ್ಪರ್ಧಿಸೋದು ಬಹುತೇಕ ಖಚಿತವಾಗಿದೆ. ಉಪಚುನಾವಣೆಯಲ್ಲಿ ನೆರೆಪೀಡಿತ ಕಾಗವಾಡ ಮತ ಕ್ಷೇತ್ರದಲ್ಲಿ ಬಿಜೆಪಿ ಪಕ್ಷಕ್ಕೆ ಗೆಲುವು ಅಷ್ಟು ಸರಳವಾಗಿಲ್ಲ ಎಂಬ ಚರ್ಚೆಗಳು ನಡೆದಿವೆ.

  • ಪಕ್ಷ ನಿಷ್ಠರಿಗೆ ಒಳ್ಳೆಯ ಅವಕಾಶವಿದೆ, ಕಾಯಬೇಕು – ಜಗದೀಶ್ ಶೆಟ್ಟರ್

    ಪಕ್ಷ ನಿಷ್ಠರಿಗೆ ಒಳ್ಳೆಯ ಅವಕಾಶವಿದೆ, ಕಾಯಬೇಕು – ಜಗದೀಶ್ ಶೆಟ್ಟರ್

    ಹುಬ್ಬಳ್ಳಿ: ಪಕ್ಷದಲ್ಲಿ ನಿಷ್ಠೆಯಿಂದಿರುವವರಿಗೆ ಖಂಡಿತ ಒಳ್ಳೆಯ ಅವಕಾಶವಿದೆ. ಆತುರದ ನಿರ್ಧಾರ ತಗೆದುಕೊಳ್ಳುವವರಿಗೆ ಒಳ್ಳೆಯದಾಗುವುದಿಲ್ಲ ಎಂದು ಬಿಜೆಪಿ ಅತೃಪ್ತರ ಕುರಿತು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಜಗದೀಶ್ ಶೆಟ್ಟರ್ ಸಲಹೆ ನೀಡಿದ್ದಾರೆ.

    ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಳೆ ಅನರ್ಹ ಶಾಸಕರ ಕುರಿತು ಮಹತ್ವದ ತೀರ್ಪು ಬರಲಿದೆ. ಅದರ ಮೇಲೆ ಮುಂದಿನ ರಾಜ್ಯದ ರಾಜಕಾರಣ ನಿರ್ಧಾರವಾಗಲಿದೆ. ತೀರ್ಪು ಬರುವವರೆಗೂ ಕಾದುನೋಡಬೇಕಿದೆ ಎಂದರು.

    ಬಿಜೆಪಿಯ ಅತೃಪ್ತ ನಾಯಕರು ಸಿದ್ದರಾಮಯ್ಯ ಭೇಟಿ ಮಾಡಿದ ಬಗ್ಗೆ ನಾನು ಏನು ಹೇಳುವುದಿಲ್ಲ. ಸಿದ್ದರಾಮಯ್ಯ ಅವರು ಸರ್ಕಾರ ಅತಂತ್ರ ಮಾಡುವ ಕೆಲಸ ಮಾಡುತ್ತಿದ್ದಾರೆ. ಸ್ಥಳೀಯ ಸಂಸ್ಥೆ ಚುನಾವಣೆಗಳು ಉಪಚುನಾವಣೆ ಮೇಲೆ ಪ್ರಭಾವ ಬೀರುವುದಿಲ್ಲ. ಸ್ಥಳೀಯ ಸಂಸ್ಥೆಯ ಚುನಾವಣೆ ಬೇರೆ, ಉಪಚುನಾವಣೆ ಬೇರೆ. ಒಂದು ಚುನಾವಣೆ ಮತ್ತೊಂದು ಚುನಾವಣೆ ಮೇಲೆ ಪ್ರಭಾವ ಬೀರುವುದಿಲ್ಲ ಎಂದು ಅಭಿಪ್ರಾಯಪಟ್ಟರು.

    ಶಿವಸೇನೆಯ ಪರಿಸ್ಥಿತಿಯೂ ಕಾಂಗ್ರೆಸ್ ಜೆಡಿಎಸ್ ಸಮಿಶ್ರ ಸರ್ಕಾರದ ಪರಿಸ್ಥಿತಿ ಆಗಲಿದೆ. ಮಹಾರಾಷ್ಟ್ರದಲ್ಲಿ ಬಿಜೆಪಿ ದೊಡ್ಡ ಪಕ್ಷ. ಅಧಿಕಾರದ ಆಸೆಯ ಸಲುವಾಗಿ ಶಿವಸೇನೆ ಬೇರೆ ಪಕ್ಷಗಳೊಂದಿಗೆ ಹೋಗುತ್ತಿದೆ. 104 ಸ್ಥಾನ ಪಡೆದವರು ಮುಖ್ಯಮಂತ್ರಿ ಆಗಬೇಕೋ ಅಥವಾ 54 ಸ್ಥಾನಗಳನ್ನು ಪಡೆದವರು ಮುಖ್ಯಮಂತ್ರಿ ಆಗಬೇಕೋ, 3-4 ಸ್ಥಾನಗಳು ಅದಲು ಬದಲಾಗಿದ್ದರೆ 50:50 ಅನ್ನಬಹುದಿತ್ತು. ಆದರೆ ಶಿವಸೇನೆ ಬಿಜೆಪಿ ಗೆದ್ದ ಅರ್ಧದಷ್ಟು ಸ್ಥಾನಗಳನ್ನು ಸಹ ಗೆದ್ದಿಲ್ಲ. ತಾತ್ವಿಕವಾಗಿ ವಿರೋಧಿಗಳ ಜೊತೆ ಕೈ ಜೋಡಿಸಿದರೆ ಕರ್ನಾಟಕದಲ್ಲಿ ಆದ ಪರಿಸ್ಥಿತಿ ಮಹಾರಾಷ್ಟ್ರದಲ್ಲಿ ಶಿವಸೇನೆಗೂ ಆಗಲಿದೆ ಎಂದರು.

  • ಪಕ್ಷ ಬಿಟ್ಟು ಹೋದವರು ವಾಪಸ್ ಬರ್ತಾರೆ- ಬಿಜೆಪಿ ಬಂಡಾಯ ನಾಯಕರಿಗೆ ಸಿಟಿ ರವಿ ತಿರುಗೇಟು

    ಪಕ್ಷ ಬಿಟ್ಟು ಹೋದವರು ವಾಪಸ್ ಬರ್ತಾರೆ- ಬಿಜೆಪಿ ಬಂಡಾಯ ನಾಯಕರಿಗೆ ಸಿಟಿ ರವಿ ತಿರುಗೇಟು

    ಬೆಂಗಳೂರು: ಉಪಚುನಾವಣೆ ಹಿನ್ನೆಲೆಯಲ್ಲಿ ಪಕ್ಷ ಬಿಟ್ಟು ಹೋಗುವ ನಾಯಕರು ಮತ್ತೆ ವಾಪಸ್ ಬರುತ್ತಾರೆ ಎಂದು ಸಚಿವ ಸಿಟಿ ರವಿ ಅವರು ಹೇಳಿದ್ದು, ಪಕ್ಷ ಬಿಟ್ಟು ಹೋದವರಿಗೆ ಕೆಟ್ಟ ಅನುಭವವಾಗಿ ವಾಪಸ್ ಬಂದಿರುವ ಹಲವು ಉದಾಹರಣೆಗಳು ನಮ್ಮ ಮುಂದಿದೆ ಎಂದು ಹೇಳಿದ್ದಾರೆ.

    ಪಕ್ಷದ ವಿರುದ್ಧ ಬಂಡಾಯ ಎದ್ದಿರುವ ನಾಯಕರ ಕುರಿತು ಪ್ರತಿಕ್ರಿಯೆ ನೀಡಿದ ಸಿಟಿ ರವಿ ಅವರು, ದೇಶದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಭವಿಷ್ಯವಿಲ್ಲ ಎಂದು ಆ ಪಕ್ಷದ ನಾಯಕರೇ ಬಿಟ್ಟು ಹೊರಬರುತ್ತಿದ್ದಾರೆ. ಆದರೆ ಇಂದು ಕೆಲವರು ರಾತ್ರಿ ಕಂಡ ಬಾವಿಗೆ ಹಗಲು ಬೀಳಲು ಹೋಗುತ್ತಿದ್ದಾರೆ. ನಮ್ಮ ಪಕ್ಷ ಸಿದ್ಧಾಂತ ಮೇಲೆ ನಿಂತಿದ್ದು, ಎಲ್ಲರಿಗೂ ಸಮಾನ ಅವಕಾಶ ಲಭಿಸುತ್ತದೆ ಎಂದು ಪರೋಕ್ಷವಾಗಿ ರಾಜು ಕಾಗೆ ಅವರಿಗೆ ಟಾಂಗ್ ನೀಡಿದರು.

    ಇದೇ ವೇಳೆ ಹೊಸಕೋಟೆ ಕ್ಷೇತ್ರದಲ್ಲಿ ಶರತ್ ಬಚ್ಚೇಗೌಡ ಅವರು ಪಕ್ಷೇತರರಾಗಿ ಸ್ಪರ್ಧೆ ಮಾಡುವ ವಿಚಾರವಾಗಿ ಪ್ರತಿಕ್ರಿಯೆ ನೀಡಿ, ಬುಧವಾರ ಸುಪ್ರೀಂಕೋರ್ಟ್ ತೀರ್ಪು ನೋಡಿಕೊಂಡು ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಆರಂಭ ಮಾಡುತ್ತೇವೆ. ಕೋರ್ಟ್ ತೀರ್ಪಿನ ಮೇಲೆ ಚುನಾವಣೆ ನಡೆಯುವುದು ನಿರ್ಧಾರವಾಗುತ್ತೆ. ಶರತ್ ಬಚ್ಚೇಗೌಡ ಮತ್ತು ಅವರ ಕುಟುಂಬಕ್ಕೆ ಪಕ್ಷ ಸಾಕಷ್ಟು ಅನುಕೂಲ ಮಾಡಿಕೊಟ್ಟಿದೆ. ಇದನ್ನು ನನ್ನ ಕಿರಿಯ ಸಹೋದರನಂತಿರುವ ಶರತ್ ಅವರು ಚಿಂತಿಸಬೇಕಿದೆ. ಇಂದು ವೈಯಕ್ತಿಕ ಹಿನ್ನೆಲೆಯಲ್ಲಿ ಮಾಡಿದಂತಹ ತೀರ್ಮಾನ ಇರಬಾರದು. ಮುಂದಿನ 40 ವರ್ಷಗಳ ರಾಜಕೀಯ ಬದುಕಿನ ಬಗ್ಗೆಯೂ ಯೋಚನೆ ಮಾಡಬೇಕು. ಅವರು ಪಕ್ಷದ ನಿರ್ಧಾರ ಒಪ್ಪಬೇಕು ಎಂದು ಹಿರಿಯನಾಗಿ ಸಲಹೆ ನೀಡುತ್ತೇನೆ ಎಂದರು. ಇದನ್ನು ಓದಿ: ಆಪರೇಷನ್ ಸಕ್ಸಸ್ – ‘ಕೈ’ ಹಿಡಿದು ನಾನು ಚಿಕ್ಕಮಗುವಲ್ಲ, ಸ್ಪರ್ಧಿಸುತ್ತೇನೆ ಎಂದ ರಾಜು ಕಾಗೆ

    ನಮ್ಮ ಸರ್ಕಾರ ಬಂದು 100 ದಿನಗಳು ಮಾತ್ರ ಆಗಿದ್ದು, ಪೂರ್ಣ ಬಹುಮತ ಪಡೆದು ನಾವು ಅಧಿಕಾರಕ್ಕೆ ಬಂದಿಲ್ಲ. ಆದ್ದರಿಂದ ಪ್ರಣಾಳಿಕೆಯಲ್ಲಿ ನಾವು ನೀಡಿರುವ ಮಾತನ್ನು ಈಡೇರಿಸಲೇಬೇಕು. ಇದರಲ್ಲಿ ಯಾವುದೇ ಬದಲಾವಣೆ ಆಗಲ್ಲ. ಎಸಿಬಿ ವಿಚಾರವನ್ನೂ ನಾವು ಚರ್ಚಿಸಿ ನಿರ್ಧಾರ ಕೈಗೊಳ್ಳುತ್ತೇವೆ ಎಂದರು.

  • ರಾಜು ಕಾಗೆ ಕಾಂಗ್ರೆಸ್ ಸೇರ್ಪಡೆ – ಚಿಕ್ಕೋಡಿಯಲ್ಲಿ ಕೈ ಅಸಮಾಧಾನ ಸ್ಫೋಟ

    ರಾಜು ಕಾಗೆ ಕಾಂಗ್ರೆಸ್ ಸೇರ್ಪಡೆ – ಚಿಕ್ಕೋಡಿಯಲ್ಲಿ ಕೈ ಅಸಮಾಧಾನ ಸ್ಫೋಟ

    ಚಿಕ್ಕೋಡಿ: ಬಿಜೆಪಿ ನಾಯಕ ರಾಜು ಕಾಗೆ ಕಾಂಗ್ರೆಸ್ ಸೇರ್ಪಡೆ ವಿಚಾರ ತಿಳಿಯುತ್ತಿದ್ದಂತೆ ಚಿಕ್ಕೋಡಿಯ ಕಾಂಗ್ರೆಸ್‍ನಲ್ಲಿ ಅಸಮಾಧಾನ ಸ್ಫೋಟಗೊಂಡಿದೆ.

    ಇಂದು ಪಬ್ಲಿಕ್ ಟಿವಿ ಜೊತೆ ಮಾತನಾಡಿದ್ದ ರಾಜು ಕಾಗೆ, ನನಗೆ ಬಿಜೆಪಿಯಲ್ಲಿ ಸಾಕಷ್ಟು ಅವಮಾನಗಳಾಗಿವೆ. ನನಗೆ ಹೇಳದೆ ನನ್ನ ಕ್ಷೇತ್ರದಲ್ಲಿ ಅನರ್ಹ ಶಾಸಕರಿಗೆ ಟಿಕೆಟ್ ನೀಡುತ್ತಿರುವುದು ನೋವಾಗಿದೆ. ಆದ್ದರಿಂದ ನಾನು ಬುಧವಾರ ಕಾಂಗ್ರೆಸ್ ಸೇರ್ಪಡೆ ಆಗುತ್ತಿದ್ದೇನೆ ಮತ್ತು 18 ರಂದು ಕಾಗವಾಡ ಕ್ಷೇತ್ರದಿಂದ ಕೈ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುತ್ತೇನೆ ಎಂದು ಹೇಳಿದ್ದರು.

    ರಾಜು ಕಾಗೆ ಕಾಂಗ್ರೆಸ್ ಸೇರ್ಪಡೆಯಾಗುವ ಮುಹೂರ್ತ ಫಿಕ್ಸ್ ಆದ ಬೆನ್ನಲ್ಲೇ ಚಿಕ್ಕೋಡಿ ಕಾಂಗ್ರೆಸ್ಸಿನಲ್ಲಿ ಅಸಮಾಧಾನ ಸ್ಫೋಟಗೊಂಡಿದೆ. ಕಾಗವಾಡ ಮತಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿರುವ ಪ್ರಕಾಶ ಹುಕ್ಕೇರಿ ಟಿಕೆಟ್ ಕೈ ತಪ್ಪಿತು ಎನ್ನುವ ಅಸಮಾಧಾನದಿಂದ ಅವರು ಹಾಗೂ ಅವರ ಪುತ್ರ ಶಾಸಕ ಗಣೇಶ ಹುಕ್ಕೇರಿ ಇಂದು ಚಿಕ್ಕೋಡಿಯಲ್ಲಿ ಕಾಂಗ್ರೆಸ್ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿರಲಿಲ್ಲ.

    ರಾಜು ಕಾಗೆ ಕಾಂಗ್ರೆಸ್ ಸೇರ್ಪಡೆ ವಿಚಾರ ನನಗೆ ಗೊತ್ತೇ ಇಲ್ಲ ಎಂದು ಚಿಕ್ಕೋಡಿ ಕಾಂಗ್ರೆಸ್ ಅಧ್ಯಕ್ಷರು ಹೇಳಿದರೆ ಮಾಜಿ ಸಚಿವ ವೀರಕುಮಾರ ಪಾಟೀಲ್ ಉಪಚುನಾವಣೆಯಲ್ಲಿ ಮೂಲ ಕಾಂಗ್ರೆಸ್ಸಿಗರಿಗೆ ಟಿಕೆಟ್ ನೀಡುವುದು ಒಳ್ಳೆಯದು ಎಂದು ಹೇಳಿದ್ದಾರೆ.

    ಕೇಂದ್ರ ಸರ್ಕಾರದ ಆರ್ಥಿಕ ಹಾಗೂ ಜನ ವಿರೋಧಿ ನೀತಿಗಳನ್ನು ಖಂಡಿಸಿ ಚಿಕ್ಕೋಡಿ ಪಟ್ಟಣದಲ್ಲಿ ಚಿಕ್ಕೋಡಿ ಜಿಲ್ಲಾ ಕಾಂಗ್ರೆಸ್ ಘಟಕದ ವತಿಯಿಂದ ಪ್ರತಿಭಟನೆ ಮಾಡಲಾಯಿತು. ಸರ್ಕಾರಿ ಪ್ರವಾಸಿ ಮಂದಿರದಲ್ಲಿ ರಾಜಕೀಯ ಸಭೆ ನಿಷೇಧವಿದ್ದರೂ ಚಿಕ್ಕೋಡಿ ಪ್ರವಾಸಿ ಮಂದಿರದಲ್ಲೇ ಕೈ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಬಳಿಕ ತಹಶೀಲ್ದಾರ್ ಕಚೇರಿಗೆ ತೆರಳಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ತಹಶೀಲ್ದಾರ್ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು.

  • ಆಪರೇಷನ್ ಸಕ್ಸಸ್ – ‘ಕೈ’ ಹಿಡಿದು ನಾನು ಚಿಕ್ಕಮಗುವಲ್ಲ, ಸ್ಪರ್ಧಿಸುತ್ತೇನೆ ಎಂದ ರಾಜು ಕಾಗೆ

    ಆಪರೇಷನ್ ಸಕ್ಸಸ್ – ‘ಕೈ’ ಹಿಡಿದು ನಾನು ಚಿಕ್ಕಮಗುವಲ್ಲ, ಸ್ಪರ್ಧಿಸುತ್ತೇನೆ ಎಂದ ರಾಜು ಕಾಗೆ

    ಬೆಂಗಳೂರು: ಉಪ ಚುನಾವಣೆ ಹೊತ್ತಲ್ಲೇ ಆಪರೇಷನ್ ಯಶಸ್ವಿಯಾಗಿದ್ದು ರಾಜು ಕಾಗೆ(ಭರಮ ಗೌಡ ಕಾಗೆ) ಬಿಜೆಪಿ ತೊರೆದು ಕಾಂಗ್ರೆಸ್ಸಿಗೆ ಸೇರ್ಪಡೆಯಾಗಿ ಕಾಗವಾಡ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ.

    ಬಿಜೆಪಿಯಲ್ಲಿನ ಬೆಳವಣಿಗೆ ನನಗೆ ನೋವು ತಂದಿದ್ದು, ಶ್ರೀಮಂತ ಪಾಟೀಲ್‍ಗೆ ಟಿಕೆಟ್ ನೀಡುತ್ತಿರುವುದು ಬೇಸರ ತಂದಿದೆ. ಹೀಗಾಗಿ ನ.18ಕ್ಕೆ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ ಮಾಡುತ್ತೇನೆ ಎಂದು ರಾಜು ಕಾಗೆ ತಿಳಿಸಿದ್ದಾರೆ.

    ಇಂದು ಬಿಜೆಪಿ ತೊರೆಯುವ ಬಗ್ಗೆ ಪಬ್ಲಿಕ್ ಟಿವಿಯ ಜೊತೆ ಮಾತನಾಡಿದ ಅವರು, ಇದೇ ತಿಂಗಳು 13 ರಂದು ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ಪಕ್ಷವನ್ನು ಸೇರುತ್ತೇನೆ ಮತ್ತು ಇದೇ ತಿಂಗಳ 18 ರಂದು ಕಾಗವಾಡ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾನು ನಾಮಪತ್ರ ಸಲ್ಲಿಕೆ ಮಾಡುತ್ತೇನೆ ಎಂದು ತಿಳಿಸಿದ್ದಾರೆ.

    ಇದೇ ವೇಳೆ ಬಿಜೆಪಿಯವರು ಬೇರೆ ಅಧಿಕಾರ ನೀಡುತ್ತೇವೆ ಎಂದು ಹೇಳಿದರು ಯಾಕೆ ಈ ತೀರ್ಮಾನ ತೆಗೆದುಕೊಂಡಿದ್ದೀರಾ ಎಂದು ಕೇಳಿದಾಗ, ತುಂಗಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಮಂಡಳಿ (ಕಾಡಾ) ಅಧಿಕಾರವನ್ನು ತೆಗೆದುಕೊಳ್ಳಲು ನಾನು ಚಿಕ್ಕ ಮಗು ಅಲ್ಲ. ಚಿಕ್ಕಮಕ್ಕಳು ಅತ್ತಾಗ ಚಾಕ್ಲೇಟ್ ಕೊಡುವ ರೀತಿಯಲ್ಲಿ ನನಗೆ ಅದನ್ನು ಅವರು ಕೊಡಲು ಬಂದಿದ್ದಾರೆ. ನಾನು 15 ವರ್ಷದಿಂದ ಬಿಜೆಪಿಯಲ್ಲಿ ಇದ್ದೇನೆ ಮೂರು ಬಾರಿ ಶಾಸಕ ಆಗಿದ್ದೇನೆ. ಶಾಸಕನಾದ ಸಮಯದಲ್ಲೂ ಬಿಜೆಪಿಯಲ್ಲಿ ನನಗೆ ಬಹಳ ನೋವು ನೀಡಿದ್ದರು ಎಂದು ತಮ್ಮ ಬೇಸರವನ್ನು ವ್ಯಕ್ತಪಡಿಸಿದರು.

    ಅನರ್ಹ ಶಾಸಕರಿಂದ ಬಿಜೆಪಿ ಸರ್ಕಾರ ರಚನೆಯಾಗಿರಬಹುದು ಆದರೆ ಅದಕ್ಕೂ ನನಗೂ ಸಂಬಂಧವಿಲ್ಲ. ನಮ್ಮ ಕ್ಷೇತ್ರದ ಅನರ್ಹ ಶಾಸಕರಾದ ಶ್ರೀಮಂತ ಪಾಟೀಲರನ್ನು ನಾನು ಹಿಂದಿನಿಂದಲೂ ವಿರೋಧ ಮಾಡುತ್ತಾ ಬಂದಿದ್ದೇನೆ. ಆದರೆ ಇವರು ನನಗೆ ಹೇಳದೆ ಅವರನ್ನು ಪಕ್ಷಕ್ಕೆ ಸೇರಿಸಿಕೊಂಡು ಅನರ್ಹ ಮಾಡಿಸಿ ಈಗ ನನ್ನ ಕ್ಷೇತ್ರದಿಂದಲೇ ಅವರಿಗೆ ಟಿಕೆಟ್ ನೀಡುತ್ತಿರುವುದು ನನಗೆ ಬಹಳ ಬೇಸರವಾಗಿದೆ. ನಾನು ಕಾಂಗ್ರೆಸ್ ಸೇರುವ ಬಗ್ಗೆ ಕಾಂಗ್ರೆಸ್ ನಾಯಕರ ಜೊತೆ ಮಾತನಾಡಿದ್ದೇನೆ ಅವರು ಬನ್ನಿ ಎಂದು ಹೇಳಿದ್ದಾರೆ. ನಾನು ಕಾಂಗ್ರೆಸ್ ಪಕ್ಷ ಸೇರುತ್ತೇನೆ ಎಂದು ಸ್ಪಷ್ಟಪಡಿಸಿದರು.

    ನನ್ನ 20 ವರ್ಷದ ರಾಜಕೀಯ ಜೀವನದಲ್ಲಿ ಯಾವ ಕಾಂಗ್ರೆಸ್ ನಾಯಕರ ಜೊತೆ ವಿರೋಧ ಕಟ್ಟಿಕೊಂಡಿಲ್ಲ. ಈಗ ನಾನು ಒಬ್ಬನೇ ಕಾಂಗ್ರೆಸ್ ಸೇರುತ್ತೇನೆ ನಂತರ ಊರಿಗೆ ಹೋಗಿ ಬೇರೆಯದನ್ನು ತೀರ್ಮಾನ ಮಾಡುತ್ತೇನೆ. ಬಿಎಸ್‍ವೈ ಅವರು ಕಳೆದ ಒಂದೂವರೆ ತಿಂಗಳಿಂದ ನನ್ನ ಸಂಪರ್ಕ ಮಾಡಿಲ್ಲ. ಬಿಜೆಪಿ ನಾಯಕರು ನನಗೆ ತುಂಬ ಅವಮಾನ ಮಾಡಿದ್ದಾರೆ ಎಂದು ಕಮಲ ನಾಯಕರ ಮೇಲೆ ಕಿಡಿಕಾರಿದರು.

  • ಬಿಎಸ್‍ವೈ ಟಿಕೆಟ್ ಕೊಡಲ್ಲ, ನನ್ನ ದಾರಿ ನನಗೆ: ರಾಜು ಕಾಗೆ

    ಬಿಎಸ್‍ವೈ ಟಿಕೆಟ್ ಕೊಡಲ್ಲ, ನನ್ನ ದಾರಿ ನನಗೆ: ರಾಜು ಕಾಗೆ

    – ಕಾಂಗ್ರೆಸ್ ನಾಯಕರು ನನ್ನ ಜೊತೆ ಸಂಪರ್ಕದಲ್ಲಿದ್ದಾರೆ

    ಬೆಳಗಾವಿ(ಚಿಕ್ಕೋಡಿ): ಕಾಗವಾಡ ಮತ್ತು ಅಥಣಿ ಎರಡು ಮತಕ್ಷೇತ್ರದ ಮೇಲೆ ಕಣ್ಣಿಟ್ಟಿರುವ ಬಿಜೆಪಿಯ ಹಿರಿಯ ಮುಖಂಡ ರಾಜು ಕಾಗೆ ಅವರು ನೇರವಾಗಿಯೇ ಪಕ್ಷದ ವಿರುದ್ಧ ಕಿಡಿಕಾರಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಬಿಜೆಪಿ ನಾಯಕರ ವಿರುದ್ಧ ಬಹಿರಂಗವಾಗಿ ಹರಿಹಾಯ್ದಿದ್ದಾರೆ. ಸಿಎಂ ಯಡಿಯೂರಪ್ಪನವರು ನನಗೆ ಟಿಕೆಟ್ ಕೊಡುವದಿಲ್ಲ ಎಂದು ನೇರವಾಗಿ ಹೇಳಿದ್ದಾರೆ. ಹೀಗಾಗಿ ನನ್ನ ದಾರಿ ನಾನು ನೋಡಿಕೊಳ್ಳುತ್ತೇನೆ ಎಂದು ತಮ್ಮ ನಿರ್ಧಾರವನ್ನು ಸ್ಪಷ್ಟಪಡಿಸಿದರು.

    ಹುಬ್ಬಳ್ಳಿಯಲ್ಲಿ ನಡೆದ ಬಿಜೆಪಿ ಸಭೆಯಲ್ಲಿ ಬಿಎಸ್‍ವೈ ನನಗೆ ಬಿಜೆಪಿ ಟಿಕೆಟ್ ಕೊಡಲ್ಲ ಎಂದು ಹೇಳಿದ್ದಾರೆ. ಹೀಗಾಗಿ ಕಾಂಗ್ರೆಸ್ ನಾಯಕರು ನನ್ನ ಜೊತೆಯಲ್ಲಿ ನಿರಂತರ ಸಂಪರ್ಕದಲ್ಲಿದ್ದಾರೆ. ಆದರೆ ಸುಪ್ರೀಂ ಕೋರ್ಟ್ ತೀರ್ಪನ್ನು ಗಮನದಲ್ಲಿಟ್ಟುಕೊಂಡು ನಾನು ಮುಂದುವರಿಯುತ್ತೇನೆ. ಕೋರ್ಟ್ ತೀರ್ಪು ಅನರ್ಹರ ಪರವಾಗಿ ಬಂದರೆ, ನಾನು ಅಥಣಿಗೆ ಹೋಗಿ ಸ್ಪರ್ಧೆ ಮಾಡುತ್ತೇನೆ. ಅವರ ವಿರೋಧವಾಗಿ ಬಂದರೆ ನಾನು ಕಾಗವಾಡದಿಂದಲೇ ಸ್ಪರ್ಧೆ ಮಾಡುತ್ತೇನೆ ಎಂದು ರಾಜು ಕಾಗೆ ತಿಳಿಸಿದರು.

    ಡಿಸಿಎಂ ಲಕ್ಷ್ಮಣ ಸವದಿಯವರು ನಿಮಗೆ ಅಥಣಿ ಪ್ರವೇಶಕ್ಕೆ ಅವಕಾಶ ನೀಡ್ತಾರಾ ಎಂಬ ಪ್ರಶ್ನೆಗೆ ಉತ್ತರಿಸಿದ ರಾಜು ಕಾಗೆ, ರಾಜಕಾರಣದಲ್ಲಿ ಸ್ನೇಹಿತ, ಅಣ್ಣ, ತಮ್ಮ, ಮಾವ, ಅಳಿಯ ಯಾವುದು ಲೆಕ್ಕಕ್ಕೆ ಬರೋದಿಲ್ಲ. ನನ್ನ ಸ್ವಂತ ಸಹೋದರನೇ ನನ್ನ ವಿರುದ್ಧ ಒಂದು ಬಾರಿ ಚುಣಾವಣೆಯಲ್ಲಿ ಕೆಲಸ ಮಾಡಿದ್ದನು. ಹೀಗಾಗಿ ರಾಜಕಾರಣದಲ್ಲಿ ಯಾವುದೇ ಸಂಬಂಧ ಲೆಕ್ಕಕ್ಕೆ ಬರೋದಿಲ್ಲ. ಹೀಗಾಗಿ ಶ್ರೀಮಂತ ಪಾಟೀಲ್ ಅನರ್ಹರಾದರೆ ಕಾಗವಾಡದಲ್ಲಿ ಚುನಾವಣೆಗೆ ನಿಲ್ಲುತ್ತೇನೆ ಎಂದರು.

  • ಬಿಜೆಪಿ ಅಭ್ಯರ್ಥಿ ಭಾಷಣದ ಮಧ್ಯೆ ‘ಕಾಂಗ್ರೆಸ್‍ಗೆ ಜೈ’ ಅಂದ ಗ್ರಾಮಸ್ಥರು-ವಿಡಿಯೋ ನೋಡಿ

    ಬಿಜೆಪಿ ಅಭ್ಯರ್ಥಿ ಭಾಷಣದ ಮಧ್ಯೆ ‘ಕಾಂಗ್ರೆಸ್‍ಗೆ ಜೈ’ ಅಂದ ಗ್ರಾಮಸ್ಥರು-ವಿಡಿಯೋ ನೋಡಿ

    ಬೆಳಗಾವಿ: ಜಿಲ್ಲೆಯ ಕಾಗವಾಡ ವಿಧಾನಸಭಾ ಕ್ಷೇತ್ರದ ಹಾಲಿ ಶಾಸಕ ಮತ್ತು ಬಿಜೆಪಿ ಅಭ್ಯರ್ಥಿಯಾಗಿರುವ ರಾಜು ಕಾಗೆ ಅವರ ಭಾಷಣದ ಮಧ್ಯೆ ಗ್ರಾಮಸ್ಥರು ಕಾಂಗ್ರೆಸ್‍ಗೆ ಜೈ ಅಂತಾ ಘೋಷಣೆ ಕೂಗಿದ್ದಾರೆ.

    ರಾಜು ಕಾಗೆ ಅವರು ಜಿಲ್ಲೆಯ ಅಥಣಿ ತಾಲೂಕಿನ ಶಿರೂರು ಗ್ರಾಮಕ್ಕೆ ಚುನಾವಣೆ ಪ್ರಚಾರಕ್ಕೆ ತೆರಳಿದ ವೇಳೆ ಮುಜುಗರಕ್ಕೆ ಒಳಗಾಗಿದ್ದಾರೆ. ಶಾಸಕರು ಭಾಷಣ ಮಾಡುತ್ತಿದ್ದಂತೆ ಕೆಲ ಗ್ರಾಮುಸ್ಥರು ಅಡ್ಡಿಪಡಿಸಿದ್ರು. ನಮ್ಮ ಊರಿಗೆ ಯಾಕೆ ಬಂದಿದ್ದೀರಿ? 15 ವರ್ಷಗಳಲ್ಲಿ ನಮ್ಮೂರಲ್ಲಿ ಏನು ಮಾಡಿದ್ರಿ ಅಂತಾ ರಾಜು ಕಾಗ ಅವ್ರಿಗೆ ಸಾಲು ಸಾಲು ಪ್ರಶ್ನೆಗಳನ್ನು ಕೇಳಿದ್ರು.

    ಒಂದು ಕಡೆ ಗ್ರಾಮಸ್ಥರು ಪ್ರಶ್ನೆ ಮಾಡುತ್ತಿದ್ದರೆ, ಕೆಲ ಬಿಜೆಪಿಗೆ ಜೈ, ಭಾರತ್ ಮಾತಾ ಕೀ ಜೈ ಎಂಬ ಘೋಷಣೆಗಳನ್ನು ಕೂಗಲು ಆರಂಭಿಸಿದ್ರು. ಕೂಡಲೇ ಪ್ರಶ್ನೆ ಕೇಳುತ್ತಿದ್ದ ಗ್ರಾಮಸ್ಥರು ಅವರ ವಿರುದ್ಧವಾಗಿ ಕಾಂಗ್ರೆಸ್‍ಗೆ ಜೈ ಅಂತಾ ಕೂಗುವ ಮೂಲಕ ತಿರುಗೇಟು ನೀಡಿದ್ರು.

    ಇದೇ ಮೊದಲೇನಲ್ಲ: ನಾಲ್ಕು ದಿನಗಳ ಹಿಂದೆ ಚಮಕೇರಿ ಗ್ರಾಮಕ್ಕೆ ತೆರಳಿದಾಗಲೂ ರಾಜು ಕಾಗೆ ಅವರನ್ನು ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡಿದ್ದರು. ನಾಲ್ಕು ಬಾರಿ ಕಾಗವಾಡ ಕ್ಷೇತ್ರದಿಂದ ಶಾಸಕರಾದ್ರೂ ಗ್ರಾಮಗಳ ಅಭಿವೃದ್ಧಿ ಆಗಿಲ್ಲ ಅಂತಾ ಗ್ರಾಮಸ್ಥರು ಆರೋಪಿಸಿದ್ದಾರೆ.

    ರಾಜು ಕಾಗೆ ಒಟ್ಟು ನಾಲ್ಕು ಬಾರಿ ಕಾಗವಾಡ ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದಾರೆ. 2000ರಲ್ಲಿ ನಡೆದ ಉಪಚುನಾವಣೆಯಲ್ಲಿ ಜೆಡಿಯು ನಿಂದ ಸ್ಪರ್ಧಿಸಿ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ರು. ನಂತರದ ದಿನಗಳಲ್ಲಿ ಬಿಜೆಪಿ ಸೇರ್ಪಡೆಯಾದ ರಾಜು ಕಾಗೆ ಸತತವಾಗಿ ಮೂರು ಬಾರಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಸೋಲಿಸುವ ಮೂಲಕ ಶಾಸಕರಾಗಿದ್ದಾರೆ.

  • ಮೂರು ಬಾರಿ ಗೆದ್ದು ಏನ್ ಮಾಡಿದ್ರಿ- ಗ್ರಾಮಸ್ಥರ ಪ್ರಶ್ನೆಗಳಿಂದ ಬೇಸತ್ತು ನಿಮ್ಮ ಮತವೇ ಬೇಡವಂದ್ರು ಶಾಸಕ ರಾಜು ಕಾಗೆ

    ಮೂರು ಬಾರಿ ಗೆದ್ದು ಏನ್ ಮಾಡಿದ್ರಿ- ಗ್ರಾಮಸ್ಥರ ಪ್ರಶ್ನೆಗಳಿಂದ ಬೇಸತ್ತು ನಿಮ್ಮ ಮತವೇ ಬೇಡವಂದ್ರು ಶಾಸಕ ರಾಜು ಕಾಗೆ

    ಬೆಳಗಾವಿ: ನಮ್ಮ ಗ್ರಾಮಕ್ಕೆ ಯಾಕೆ ಬಂದಿದ್ದೀರಿ? ಎರಡು ಅವಧಿಯಲ್ಲಿ ನಮ್ಮ ಗ್ರಾಮಕ್ಕೆ ಏನ್ ಅಭಿವೃದ್ಧಿ ಮಾಡಿದ್ದೀರಿ? ಲೆಕ್ಕ ಕೊಡಿ ಎಂದು ಕಾಗವಾಡ ಕ್ಷೇತ್ರದ ಬಿಜೆಪಿ ಶಾಸಕ ರಾಜು ಕಾಗೆಯನ್ನು ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ.

    ಜಿಲ್ಲೆಯ ಅಥಣಿ ತಾಲೂಕಿನ ಚಮಕೇರಿ ಗ್ರಾಮದಲ್ಲಿ ಹಾಲಿ ಬಿಜೆಪಿ ಶಾಸಕ ರಾಜೂ ಕಾಗೆಯನ್ನು ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡಿದ್ದು, ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿ ನಮ್ಮ ಗ್ರಾಮಕ್ಕೆ ಏನ್ ಅಭಿವೃದ್ಧಿ ಮಾಡಿದ್ದೀರಿ ಎಂದು ಪ್ರಶ್ನೆಗಳ ಸುರಿಮಳೆ ಸುರಿಸಿದ್ದಾರೆ.

    ಗ್ರಾಮಸ್ಥರ ಆಕ್ರೋಶಕ್ಕೆ ರಾಜು ಕಾಗೆ ಬೇಸತ್ತು ನಿಮ್ಮ ಮತ ನನಗೆ ಬೇಡ ಎಂದು ಮತ್ತೊಮ್ಮೆ ಗೂಂಡಾಗಿರಿ ಪ್ರದರ್ಶನ ಮಾಡಿದ್ದಾರೆ. ಇದರಿಂದ ವಿಚಲಿತಗೊಂಡ ಗ್ರಾಮಸ್ಥರು ನಮ್ಮ ಗ್ರಾಮಕ್ಕೆ ನೀವು ಕಾಲು ಇಡಬೇಡಿ. ನಿಮ್ಮಿಂದ ಅಭಿವೃದ್ಧಿ ಸಾಧ್ಯವಿಲ್ಲ. ನಾವು ನಿಮಗೆ ಮತ ಹಾಕುವುದಿಲ್ಲ ಎಂದು ಫುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ. ಇದಕ್ಕೆ ಗರಂ ಆದ ರಾಜು ಕಾಗೆ ನೀವೇನ್ ಓಟ್ ಹಾಕ್ ಬೇಡಿ ಹೋಗ್ರಿ ಅಂತ ಸಿಡಿಮಿಡಿಗೊಂಡ್ರು.

    ಈ ವೇಳೆ ಸ್ವಲ್ಪ ಕಾಲ ಮಾತಿನ ಚಕಮಕಿ ನಡೆಯಿತು. ಬಳಿಕ ಮರು ಉತ್ತರ ನೀಡದೆ ತಲೆ ತಗ್ಗಿಸಿದ ಹಾಲಿ ಶಾಸಕ ರಾಜೂ ಕಾಗೆ ಅಲ್ಲಿಂದ ಕಾಲ್ಕಿತ್ತಿದ್ದಾರೆ. ಸತತ 4 ಬಾರಿ ಶಾಸಕರಾಗಿರುವ ಶಾಸಕ ರಾಜು, ಕ್ಷೇತ್ರದ ಅಭಿವೃದ್ಧಿ ಮಾಡಿಲ್ಲ ಎಂಬ ಆರೋಪ ಇದೀಗ ಮುಳುವಾಗುವ ಎಲ್ಲ ಸಾಧ್ಯತೆಗಳು ಕಂಡುಬರುತ್ತಿವೆ.