Tag: ರಾಜುಗೌಡ

  • ರಾಜುಗೌಡ ಹುಟ್ಟುಹಬ್ಬದ ಬ್ಯಾನರ್, ಪೋಸ್ಟರ್ ಹರಿದ ಕಿಡಿಗೇಡಿಗಳು

    ರಾಜುಗೌಡ ಹುಟ್ಟುಹಬ್ಬದ ಬ್ಯಾನರ್, ಪೋಸ್ಟರ್ ಹರಿದ ಕಿಡಿಗೇಡಿಗಳು

    ಯಾದಗಿರಿ: ಶಾಸಕ ರಾಜುಗೌಡ ಹುಟ್ಟುಹಬ್ಬದ ನಿಮಿತ್ತ ಬ್ಯಾನರ್ ಮತ್ತು ಪೋಸ್ಟರ್ ಹಾಕಲು ತೆರಳುತ್ತಿದ್ದ ವಾಹನದ ಮೇಲೆ ಕೆಲ ಕಿಡಿಗೇಡಿಗಳು ಕಲ್ಲುಗಳಿಂದ ಹಲ್ಲೆ ನಡೆಸುವ ಮೂಲಕ ರಾಜುಗೌಡರ ಭಾವಚಿತ್ರವುಳ್ಳ ಬ್ಯಾನರ್ ಗಳನ್ನು ಹರಿದು, ವಾಹನವನ್ನು ಜಖಂಗೊಳಿಸಿದ ಘಟನೆ ಜಿಲ್ಲೆಯ ಸುರಪುರ ನಗರದಲ್ಲಿ ನಡೆದಿದೆ.

    ಕಳೆದ ರಾತ್ರಿ ಶಾಸಕರಿಗೆ ಶುಭ ಕೋರಿದ ಪೋಸ್ಟರ್ ಮತ್ತು ಬ್ಯಾನರ್ ಗಳನ್ನ ನಗರದ ಹಲವೆಡೆ ಹಚ್ಚಲು ಗಾಂಧಿ ವೃತ್ತದ ಬಳಿ ತೆರಳುತ್ತಿದ್ದ ವಾಹನದ ಮೇಲೆ ಕಲ್ಲು ತೂರಾಟ ಮಾಡಲಾಯಿತು. ಕೆಲ ಕಾಂಗ್ರೆಸ್ ಕಾರ್ಯಕರ್ತರೇ ಈ ಕೆಲಸ ಮಾಡಿದ್ದಾರೆ ಅನ್ನೋ ಮಾತು ಕೂಡ ಕೇಳಿ ಬಂದಿವೆ. ಏಕಾಏಕಿ ಕಲ್ಲು ತೂರಾಟ ಮಾಡಿದ್ದರಿಂದ ವಾಹನದ ಗ್ಲಾಸ್ ಪುಡಿಪುಡಿಯಾಗಿದ್ದು, ಪೋಸ್ಟರ್ ಮತ್ತು ಬ್ಯಾನರ್ ಗಳು ಚೆಲ್ಲಾಪಿಲ್ಲಿಯಾಗಿದೆ. ಸದ್ಯಕ್ಕೆ ಸ್ಥಳದಲ್ಲಿ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಾಗಿದೆ.

    ಕಳೆದ ತಿಂಗಳಷ್ಟೇ ಕ್ಷೇತ್ರದ ಕೊಡೆಕಲ್ ಗ್ರಾಮದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ ಅವರ ಭಾವಚಿತ್ರ ಲಗತ್ತಿಸಲು ತೆರಳುತ್ತಿದ್ದ ಸಂದರ್ಭದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಬಿಜೆಪಿ ಕಾರ್ಯಕರ್ತರು ಹಲ್ಲೆ ನಡೆಸಿದ್ದರು. ಹಲ್ಲೆಗೆ ಪ್ರತೀಕಾರ ತೆಗೆದುಕೊಳ್ಳುವ ದೃಷ್ಟಿಯಿಂದ ಕಾಂಗ್ರೆಸ್ ಕಾರ್ಯಕರ್ತರು ಈ ಹಲ್ಲೆ ಮಾಡಿದ್ದಾರೆ ಎನ್ನಲಾಗುತ್ತಿದೆ.

    ಹಾಲಿ ಶಾಸಕ ರಾಜುಗೌಡ ಮತ್ತು ರಾಜಾ ವೆಂಕಟಪ್ಪ ನಾಯಕ ದ್ವೇಷ ಮುಂದುವರಿದಿದ್ದು, ಶಾಸಕರುಗಳ ಕಿತ್ತಾಟಕ್ಕೆ ಕೈ ಮತ್ತು ಕಮಲದ ಕಾರ್ಯಕರ್ತರ ಮಧ್ಯ ದ್ವೇಷ ಮತ್ತಷ್ಟು ಹೆಚ್ಚಾಗಿದೆ. ಬ್ಯಾನರ್ ಮತ್ತು ಪೋಸ್ಟರ್ ವಿಚಾರಕ್ಕೆ ಈ ಕಾರ್ಯಕರ್ತರ ಮಧ್ಯ ಗಲಾಟೆ ನಡೆಯುವ ಸಾಧ್ಯತೆ ಹೆಚ್ಚಿರುವುದರಿಂದ ನಗರಾದ್ಯಂತ ಬಿಗಿ ಪೋಲಿಸ್ ಬಂದೋಬಸ್ತ್ ಕಲ್ಪಿಸಲಾಗಿದೆ. ಸುರಪುರ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

  • ಯಾರಿಗೂ ಪ್ರೈವಸಿ ಇಲ್ಲ, ಹೆಂಡತಿ ಜೊತೆ ಮಾತಾಡ್ಬೇಕಾದ್ರೂ ಎಚ್ಚರಿಕೆಯಿಂದಿರಬೇಕು: ರಾಜುಗೌಡ

    ಯಾರಿಗೂ ಪ್ರೈವಸಿ ಇಲ್ಲ, ಹೆಂಡತಿ ಜೊತೆ ಮಾತಾಡ್ಬೇಕಾದ್ರೂ ಎಚ್ಚರಿಕೆಯಿಂದಿರಬೇಕು: ರಾಜುಗೌಡ

    – ಜನಪ್ರಿಯತೆಗೆ ಎಲ್ಲಿ, ಏನು ಬೇಕಾದ್ರೂ ರೆಕಾರ್ಡ್ ಮಾಡಿ ಲೀಕ್ ಮಾಡ್ತಾರೆ

    ಯಾದಗಿರಿ: ವಾಟ್ಸಪ್, ಫೇಸ್‌ಬುಕ್ ಬಂದಮೇಲೆ ಯಾರಿಗೂ ಪ್ರೈವಸಿ ಇಲ್ಲ. ಹೆಂಡತಿ ಜೊತೆ ಮಾತನಾಡಬೇಕಾದರೂ ಎಚ್ಚರಿಕೆಯಿಂದ ಮಾತನಾಡಬೇಕಾದ ಪರಿಸ್ಥಿತಿ ಇದೆ. ನಮ್ಮವರೇ ಆಡಿಯೋ ರಿಲೀಸ್ ಮಾಡಿದ್ದಾರೆ ಎಂದು ಬಿಎಸ್‌ವೈ ಆಡಿಯೋ ಪ್ರಕರಣದ ಬಗ್ಗೆ ಸುರಪುರ ಬಿಜೆಪಿ ಶಾಸಕ ರಾಜುಗೌಡ ಪ್ರತಿಕ್ರಿಯಿಸಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ರಾಜುಗೌಡ ಸಿಎಂ ಯಡಿಯೂರಪ್ಪ ಆಡಿಯೋ ಪ್ರಕರಣದ ಬಗ್ಗೆ ಪ್ರತಿಕ್ರಿಸಿದರು. ಈಗ ಹೆಂಡತಿ ಜೊತೆ ಮಾತನಾಡುವಾಗಲು ಎಚ್ಚರಿಕೆಯಿಂದ ಇರಬೇಕಾಗಿದೆ. ವಾಟ್ಸಪ್, ಫೇಸ್‌ಬುಕ್ ಬಂದಮೇಲೆ ಯಾರಿಗೂ ಪ್ರೈವಸಿ ಇಲ್ಲ. ಹಾಗೆಯೇ ರಾಜಕೀಯ ಪಕ್ಷದ ನಾಯಕರಿಗೆ ಅವರ ಮನದಾಳದ ಮಾತು ಹೇಳಲು ಪ್ರೈವಸಿ ಇಲ್ಲ. ಸ್ವಲ್ಪ ಜನಪ್ರಿಯತೆ ಗಳಿಸಲು ಎಲ್ಲಿಬೇಕಾದರೂ, ಏನು ಬೇಕಾದರೂ ರೆಕಾರ್ಡ್ ಮಾಡಿ ಲೀಕ್ ಮಾಡುತ್ತಾರೆ. ಬಿಜೆಪಿ ಅವರು ಮಾತ್ರ ಸಭೆಯಲ್ಲಿದ್ದಿದ್ದು, ಹೀಗಾಗಿ ನಮ್ಮವರೇ ಯಾರೋ ಬಿಎಸ್‌ವೈ ಆಡಿಯೋ ಲೀಕ್ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ:ಮಧ್ಯರಾತ್ರಿ ಯುವಕರೊಂದಿಗೆ ಕಬಡ್ಡಿ ಆಡಿದ ಬಿಜೆಪಿ ಶಾಸಕ ರಾಜುಗೌಡ

    ಮೈತ್ರಿ ಸರ್ಕಾರದ ಅವಧಿಯಲ್ಲಿ ಪ್ರಸನ್ನಾನಂದಪುರಿ ಸ್ವಾಮಿಜಿ ಫೋನ್ ಕದ್ದಾಲಿಕೆ ನಡೆದಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದರು. ಭಯೋತ್ಪಾದಕರು, ನಕ್ಸಲರ ಫೋನ್ ಟ್ಯಾಪ್ ಮಾಡಬೇಕು. ಆದರೆ ಎಚ್‌ಡಿಕೆ ಸ್ವಾಮೀಜಿಗಳ ಫೋನ್ ಕದ್ದಾಲಿಕೆ ಮಾಡಿಸಿದ್ದಾರೆ. ಸರ್ಕಾರ ಉಳಿಸಿಕೊಳ್ಳಲು ಕುಮಾರಸ್ವಾಮಿ ಫೋನ್ ಕದ್ದಾಲಿಕೆ ಮಾಡಿದ್ದಾರೆ. ರಾಜಕೀಯ, ಸ್ವಾರ್ಥಕ್ಕಾಗಿ ಸ್ವಾಮೀಜಿಗಳ ಫೋನ್ ಕದ್ದಾಲಿಕೆ ಮಾಡಿದ್ದು ಸರಿಯಲ್ಲ ಎಂದು ಕಿಡಿಕಾರಿದರು.

    ಉಪ್ಪು ತಿಂದವರು ನೀರು ಕುಡಿಯಲೇ ಬೇಕು. ಸಿಬಿಐ ತನೆಖೆಯಿಂದ ಸತ್ಯ ಬೆಳಕಿಗೆ ಬರುತ್ತದೆ. ಕುಮಾರಸ್ವಾಮಿ ಅವರು ತಮ್ಮ ಸಮುದಾಯದ ಗುರುಗಳ ಫೋನನ್ನೇ ಕದ್ದಾಲಿಕೆ ಮಾಡಿದ್ದಾರೆ. ಇನ್ನು ಬೇರೆ ಸಮುದಾಯದ ಸ್ವಾಮಿಗಳ ಫೋನ್ ಟ್ಯಾಪ್ ಮಾಡದೆ ಇರುತ್ತಾರಾ ಎಂದು ಪ್ರಶ್ನೆ ಹಾಕಿದ್ದಾರೆ. ಹಾಗೆಯೇ ಕುಮಾರಸ್ವಾಮಿ ರಾಜಕೀಯ ಮಾಡಲಿ, ಆದರೆ ಕದ್ದಾಲಿಕೆ ಮಾಡಿದ್ದು ಸರಿಯಲ್ಲ. ಫೋನ್ ಕದ್ದಾಲಿಕೆ ಮಾಡಿದರೂ ಕುಮಾರಸ್ವಾಮಿ ಸರ್ಕಾರ ಉಳಿಯಲಿಲ್ಲ. ಅವರು ಜನರ ಹೃದಯ, ಶಾಸಕರ ಹೃದಯ ಗೆದ್ದಿದ್ದರೆ ಅಧಿಕಾರ ಕಳೆದುಕೊಳ್ಳುತ್ತಿರಲಿಲ್ಲ. ಫೋನ್ ಟ್ಯಾಪ್ ಮಾಡುವ ಬದಲು ಜನರ ಸಮಸ್ಯೆಗಳನ್ನ ಟ್ಯಾಪ್ ಮಾಡಬೇಕಿತ್ತು ಎಂದು ಕಾಲೆಳೆದಿದರು.

  • ಬಿಜೆಪಿ ಬಿಡುವ ಬಗ್ಗೆ ಶಾಸಕ ರಾಜುಗೌಡ ಸ್ಪಷ್ಟನೆ

    ಬಿಜೆಪಿ ಬಿಡುವ ಬಗ್ಗೆ ಶಾಸಕ ರಾಜುಗೌಡ ಸ್ಪಷ್ಟನೆ

    ಯಾದಗಿರಿ: ಸುರಪುರ ಶಾಸಕ ರಾಜುಗೌಡ ಆಪರೇಷನ್ ಹಸ್ತಕ್ಕೆ ಒಳಗಾಗುತ್ತಾರೆಂಬ ಮಾತುಗಳು ಕೇಳಿಬರುತ್ತಿದ್ದು, ಈ ಬಗ್ಗೆ ಇದೀಗ ಅವರೇ ಸ್ಪಷ್ಟನೆ ನೀಡುವ ಮೂಲಕ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.

    ಬಿಜೆಪಿ ತೊರೆಯುವ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಶಾಸಕರು, ನಾನು ಯಾವುದೇ ಕಾರಣಕ್ಕೂ ಬಿಜೆಪಿ ಬಿಡುವ ಪ್ರಶ್ನೆಯೆ ಇಲ್ಲ. ನಾನು ಎಂದಿಗೂ ಬಿಜೆಪಿ ಪಕ್ಷದಲ್ಲೇ ಇರುವುದಾಗಿ ಸ್ಪಷ್ಟನೆ ನೀಡಿದ್ದಾರೆ.

    ತಾಯಿಯ ಅನಾರೋಗ್ಯದ ಹಿನ್ನೆಲೆಯಲ್ಲಿ ನಾನು ಕಳೆದ ಮೂರು ದಿನಗಳಿಂದ ಬೆಂಗಳೂರಿನಲ್ಲಿ ಇದ್ದೇನೆ. ತಾಯಿ ಜೊತೆ ಆಸ್ಪತ್ರೆಯಲ್ಲಿ ಇರುವ ಕಾರಣ ನನ್ನ ಮೊಬೈಲ್ ಸ್ವಿಚ್ಛ್ ಆಫ್ ಮಾಡಿದ್ದೇನೆ. ಇದಕ್ಕೆ ಆಪರೇಷನ್ ಹಸ್ತ ಎಂದು ಹೇಳುವುದು ಬೇಡ ಎಂದು ತಿಳಿಸಿದ್ದಾರೆ.

    ನಾನು ಯಾವತ್ತೂ ಬಿಜೆಪಿಯಲ್ಲಿ ಇರುತ್ತೇನೆ. ಕಾಂಗ್ರೆಸ್ ನಾಯಕರ ಸಂಪರ್ಕದಲ್ಲಿ ಇಲ್ಲ. ನಮ್ಮ ಕ್ಷೇತ್ರದ ಕಾರ್ಯಕರ್ತರು ಗೊಂದಲ ಮಾಡಿಕೊಳ್ಳಬಾರದು ಎಂದು ಮನವಿ ಮಾಡಿಕೊಂಡಿದ್ದಾರೆ. ತಾಯಿ ಅನಾರೋಗ್ಯಕ್ಕೀಡಾದ ಹಿನ್ನೆಲೆಯಲ್ಲಿ ಸದ್ಯ ಶಾಸಕರು ಬೆಂಗಳೂರಿನಲ್ಲಿದ್ದಾರೆ.

  • ಮೇ 23ರ ನಂತ್ರ ಕಾಂಗ್ರೆಸ್, ಜೆಡಿಎಸ್ ವಿಚ್ಛೇದನ ತೆಗೆದುಕೊಳ್ಳುತ್ತೆ – ರಾಜುಗೌಡ

    ಮೇ 23ರ ನಂತ್ರ ಕಾಂಗ್ರೆಸ್, ಜೆಡಿಎಸ್ ವಿಚ್ಛೇದನ ತೆಗೆದುಕೊಳ್ಳುತ್ತೆ – ರಾಜುಗೌಡ

    ದಾವಣಗೆರೆ: ಕಾಂಗ್ರೆಸ್- ಜೆಡಿಎಸ್ ನವರ ಒಪ್ಪಂದ ಇರುವುದು ಮೇ 23 ರವರೆಗೆ ಮಾತ್ರ. ನಂತರ ಅವರೇ ವಿಚ್ಛೇದನ ತೆಗೆದುಕೊಳುತ್ತಾರೆ ಎಂದು ವೈತ್ರಿ ಸರ್ಕಾರದ ವಿರುದ್ಧ ಮಾಜಿ ಸಚಿವ, ಶಾಸಕ ರಾಜುಗೌಡ ವ್ಯಂಗ್ಯವಾಡಿದ್ದಾರೆ.

    ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಮಂಡ್ಯದಲ್ಲಿ ಇಷ್ಟು ದಿನ ನಿಖಿಲ್ ಎಲ್ಲಿದ್ದೀಯಪ್ಪಾ ಎಂದರೆ, ಜನರ ಮಧ್ಯೆ ಇದ್ದೇನೆ ಎಂದು ಟ್ರೋಲ್ ಆಗಿತ್ತು. ಈಗ ನಿಖಿಲ್ ಎಲ್ಲಿದ್ದೀಯಪ್ಪಾ ಅಂದರೆ ಮಂಡ್ಯ ಜನ ಸೋಲಿಸುತ್ತಾರೆಂದು ಬೆಂಗಳೂರು ಮನೆಯಲ್ಲಿದ್ದೀನಪ್ಪಾ ಎಂದು ಟ್ರೋಲ್ ಆಗುತ್ತಿದೆ. ಮಂಡ್ಯದಲ್ಲಿ ನಿಖಿಲ್ ಸೋಲುವುದು ಪಕ್ಕಾ ಆಗಿದೆ. ನಿಖಿಲ್ ಜೊತೆ ದೇವೇಗೌಡ, ಪ್ರಜ್ವಲ್ ರೇವಣ್ಣ ಕೂಡ ಸೋಲ್ತಾರೆ ಎಂದು ಭವಿಷ್ಯ ನುಡಿದಿದ್ದಾರೆ.

    ಮುಖ್ಯಮಂತ್ರಿಗಳು ನಮಗೆ ಗೋಡೆಯ ಮೇಲಿನ ಸುಣ್ಣವನ್ನು ತೋರಿಸಿ ಹಾಲು ಎಂದು ಹೇಳುತ್ತಿದ್ದಾರೆ. ಕುಮಾರಸ್ವಾಮಿಯವರು ರಾಜ್ಯದ ಸಿಎಂ ಆಗಿ ಮಾತನಾಡುತ್ತಾ ಇದ್ದಾರೋ ಅಥವಾ ನಿಖಿಲ್ ತಂದೆಯಾಗಿ ಮಾತನಾಡುತ್ತಾ ಇದ್ದಾರಾ ಎಂದು ಪ್ರಶ್ನಿಸಿದರು.

    ಇದೇ ವೇಳೆ ಚುನಾವಣೆ ಮುಗಿದ ಮೇಲೆ ಯಡಿಯೂರಪ್ಪ ರಾಜ್ಯಾಧ್ಯಕ್ಷರಾಗಿ ಇರುವುದಿಲ್ಲ ಎಂಬ ಕಾಂಗ್ರೆಸ್ ಹಿರಿಯ ಮುಖಂಡ ಶಾಮನೂರು ಶಿವಶಂಕರಪ್ಪ ಹೇಳಿಕೆಗೆ ಪ್ರತಿಕ್ರಿಯಿಸಿದ ರಾಜುಗೌಡ ಅದು ಸತ್ಯ. ಯಡಿಯೂರಪ್ಪ ಸಿಎಂ ಆದ ಮೇಲೆ ಎರಡು ಹುದ್ದೆಯಲ್ಲಿ ಇರುವುದು ಕಷ್ಟ. ಹಾಗಾಗಿ ಶಾಮನೂರು ಶಿವಶಂಕರಪ್ಪ ಈ ರೀತಿ ಹೇಳಿದ್ದಾರೆ ಎಂದರು.

    ಈ ಬಾರಿ ನಾವು 20, 22 ಸ್ಥಾನ ಗೆಲ್ಲುತ್ತೇವೆ. ಮೇ 23ರ ನಂತರ ಮೈತ್ರಿ ಸರ್ಕಾರ ಬೀಳುವುದು ಸತ್ಯ. ನಾವು ಯಾವುದೇ ಆಪರೇಷನ್ ಮಾಡುವುದಿಲ್ಲ. ರೋಗಿಗಳು ಜಾಸ್ತಿಯಾಗಿದ್ದಾರೆ, ಡಾಕ್ಟರ್ ಕಡಿಮೆಯಾಗಿದ್ದಾರೆ. ಹೀಗಾಗಿ ನಾವು ಆಸ್ಪತ್ರೆ ಬಂದ್ ಮಾಡಿದ್ದೇವೆ ಎಂದು ತಮಾಷೆಯಾಡಿದರು.

    ಸರ್ಕಾರದ ಒಪ್ಪಂದ ಮೇ 23ರ ವರೆಗೆ ಮಾತ್ರ. ಆಮೇಲೆ ಅವರು ವಿಚ್ಛೇದನ ತೆಗೆದುಕೊಳ್ಳುತ್ತಾರೆ. ರಮೇಶ್ ಜಾರಕಿಹೊಳಿ ಬಂದ ಮೇಲೆ ಮಾತಾಡುತ್ತೇನೆ. ಬಳ್ಳಾರಿ ಶಾಸಕರು ಸೇರಿದಂತೆ ಸಾಕಷ್ಟು ಜನರು ಮಾತನಾಡುತ್ತಿದ್ದಾರೆ. ಚುನಾವಣೆ ಮುಗಿದ ನಂತರ ಏನಾಗುತ್ತದೆ ಎನ್ನುವುದನ್ನು ಕಾದು ನೋಡಿ ಎಂದು ತಿಳಿಸಿದ್ದಾರೆ.

  • ಹೆಚ್‍ಡಿಡಿಯಂತೆ ತಂದೆ, ಸೋನಿಯಾ ರೀತಿ ತಾಯಿ, ಮೋದಿಯಂತಹ ನಾಯಕ ಇರಬೇಕು: ರಾಜುಗೌಡ

    ಹೆಚ್‍ಡಿಡಿಯಂತೆ ತಂದೆ, ಸೋನಿಯಾ ರೀತಿ ತಾಯಿ, ಮೋದಿಯಂತಹ ನಾಯಕ ಇರಬೇಕು: ರಾಜುಗೌಡ

    ಯಾದಗಿರಿ: ತಂದೆ ಇದ್ದರೆ ಮಾಜಿ ಪ್ರಧಾನಿ ದೇವೇಗೌಡ ರೀತಿ ಇರಬೇಕು, ತಾಯಿ ಇದ್ದರೆ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ರೀತಿ ಇರಬೇಕು ಹಾಗೆಯೇ ನಾಯಕ ಇದ್ದರೆ ಪ್ರಧಾನಿ ನರೇಂದ್ರ ಮೋದಿ ರೀತಿ ಇರಬೇಕು ಅಂತ ಬಿಜೆಪಿ ಶಾಸಕ ರಾಜುಗೌಡ ಹೇಳಿದ್ದಾರೆ.

    ಜಿಲ್ಲೆಯ ಶಹಪುರದ ಸಗರ ಗ್ರಾಮದಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು ದೇವೇಗೌಡರ ರೀತಿ ತಂದೆ ಇರಬೇಕು, ಯಾಕೆಂದರೆ ಅವರು ತಮ್ಮ ಪುತ್ರರರು, ಸೊಸೆ, ಮೊಮ್ಮಕ್ಕಳು ಹಾಗೂ ಸಂಬಂಧಿಕರಿಗೆ ರಾಜಕೀಯ ಸ್ಥಾನಮಾನ ಕಲ್ಪಿಸಿದ್ದಾರೆ. ಆದ್ರೆ ತಮ್ಮ ಪತ್ನಿ ಚನ್ನಮ್ಮ ಅವರಿಗೆ ಯಾವ ಸ್ಥಾನಮಾನ ನೀಡಿಲ್ಲ, ತಮ್ಮ ಧರ್ಮಪತ್ನಿಯ ಮೇಲೆ ದೇವೇಗೌಡರಿಗೆ ಯಾಕೆ ಅಷ್ಟು ಸಿಟ್ಟು ಗೊತ್ತಿಲ್ಲ ಎಂದು ವ್ಯಂಗ್ಯವಾಡಿದರು. ಬಳಿಕ ತಾಯಿ ಇದ್ದರೆ ಸೋನಿಯಾ ಗಾಂಧಿ ರೀತಿ ಇರಬೇಕು. ಯಾಕೆಂದರೆ ತಮ್ಮ ಮಗ ದಡ್ಡ ಎಂದು ಗೊತ್ತಿದ್ದರೂ ಅವರು ಅವನನ್ನ ಪ್ರಧಾನಿ ಮಾಡಲು ಹೊರಟಿದ್ದಾರೆ ಎಂದು ಟೀಕಿಸಿದರು.

    ಸೋನಿಯಾ ಗಾಂಧಿ ಮತ್ತು ದೇವೇಗೌಡರ ಕುಟುಂಬ ರಾಜಕೀಯದ ಬಗ್ಗೆ ಲೇವಡಿ ಮಾಡಿದ ರಾಜುಗೌಡ ಅವರು, ಸೋನಿಯಾ ಗಾಂಧಿ ಹಾಗೂ ದೇವೇಗೌಡ ಅವರಿಗೆ ತಮ್ಮ ಕುಟುಂಬದ ಅಭಿವೃದ್ಧಿಯೇ ಮುಖ್ಯವಾಗಿದೆ. ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಒಬ್ಬ ದಡ್ಡ. 5ನೇ ತರಗತಿ ಮೂರು ಬಾರಿ ಪರೀಕ್ಷೆ ಬರೆದರೂ ಫೇಲಾಗುತ್ತಾನೆ. ಇಂತಹ ದಡ್ಡನನ್ನು ಪ್ರಧಾನಮಂತ್ರಿ ಮಾಡಲು ಸೋನಿಯಾ ಗಾಂಧಿ ಮುಂದಾಗಿದ್ದಾರೆ ಎಂದು ಮಾತಿನ ಚಾಟಿ ಬಿಸಿದರು.

    ಬರೀ ಕುಟುಂಬ ರಾಜಕಾರಣ ಮಾಡುವ ನಾಯಕರ ಮಧ್ಯೆ ಜನರಿಗಾಗಿ, ಸೈನಿಕರಿಗಾಗಿ ಕೆಲಸ ಮಾಡಲು ನರೇಂದ್ರ ಮೋದಿಯಂತಹ ನಾಯಕ ಬೇಕು. ಆದ್ದರಿಂದ ಈ ಬಾರಿ ಬಿಜೆಪಿಗೆ ಮತ ಹಾಕಿ ಮೋದಿಯನ್ನು ಗೆಲ್ಲಿಸಿ ಎಂದು ಅವರು ಮನವಿ ಮಾಡಿಕೊಂಡರು.

    https://www.youtube.com/watch?v=6uai3LL2pBk

  • ಸತೀಶ್ ಜಾರಕಿಹೊಳಿ ಇಲ್ಲವೆ ಶ್ರೀರಾಮುಲು ಸಿಎಂ ಆಗ್ಲೇಬೇಕು: ಬಿಜೆಪಿ ಶಾಸಕ ರಾಜುಗೌಡ

    ಸತೀಶ್ ಜಾರಕಿಹೊಳಿ ಇಲ್ಲವೆ ಶ್ರೀರಾಮುಲು ಸಿಎಂ ಆಗ್ಲೇಬೇಕು: ಬಿಜೆಪಿ ಶಾಸಕ ರಾಜುಗೌಡ

    ದಾವಣಗೆರೆ: ಅರಣ್ಯ ಸಚಿವ ಸತೀಶ್ ಜಾರಕಿಹೊಳಿ ಇಲ್ಲವೇ ಶಾಸಕ ಶ್ರೀರಾಮುಲು ಅವರು ಮುಖ್ಯಮಂತ್ರಿ ಆಗಲೆಬೇಕು ಎಂದು ಬಿಜೆಪಿ ಶಾಸಕ ರಾಜುಗೌಡ ಒತ್ತಾಯಿಸಿದ್ದಾರೆ.

    ಜಿಲ್ಲೆಯ ಹರಿಹರ ತಾಲೂಕಿನ ಸಮೀಪದ ವಾಲ್ಮೀಕಿ ಮಠದಲ್ಲಿ ನಡೆದ ಜಾತ್ರೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ವಾಲ್ಮೀಕಿ ಸಮಾಜದ ಕೂಗು ವಿಧಾನಸೌಧಕ್ಕೆ ತಲುಪುತ್ತಿಲ್ಲ. 17 ಜನ ಶಾಸಕರು, ಇಬ್ಬರು ಸಂಸದರು ಇದ್ದರೂ ಕೂಗು ಕೇಳುತ್ತಿಲ್ಲ. ಸಮಾಜದಿಂದ ಸಚಿವ ಸತೀಶ್ ಜಾರಕಿಹೊಳಿ ಇಲ್ಲವೇ ಶ್ರೀರಾಮುಲು ಮುಖ್ಯಮಂತ್ರಿ ಆಗಲೆಬೇಕು ಅಂತ ವಾಲ್ಮೀಕಿ ಶ್ರೀಗಳು ಆಶೀರ್ವಾದ ಮಾಡಿದ್ದಾರೆ ಎಂದು ಶಾಸಕರು ಹೇಳಿದರು.

    ಕುರುಬರ ಕೈಯಿಂದ ಬೋಣಿಗೆಯಾದರೆ ಒಳ್ಳೆಯದು ಎನ್ನುತ್ತಾರೆ. ಸತೀಶ್ ಜಾರಕಿಹೊಳಿ ಅವರಿಗೆ ಮಾಜಿ ಸಿಎಂ ಸಿದ್ದರಾಮಯ್ಯನವರ ಆಶೀರ್ವಾದವಿದೆ. ಹೀಗಾಗಿ ಮುಖ್ಯಮಂತ್ರಿ ಸ್ಥಾನಕ್ಕೆ ಅವಕಾಶ ಸಿಗಲಿದೆ. ನಿಮ್ಮ ಇಬ್ಬರಲ್ಲಿ ಯಾರೇ ಮುಖ್ಯಮಂತ್ರಿಯಾದರೂ ಸಮಾಜಕ್ಕೆ 7.1 ಮಿಸಲಾತಿ ಮಾಡಲೇಬೇಕು ಎಂದು ಸತೀಶ್ ಜಾರಕಿಹೊಳಿ ಹಾಗೂ ಶ್ರೀರಾಮುಲು ಅವರನ್ನು ಕೇಳಿಕೊಂಡರು.

    ಆಪರೇಷನ್ ಕಮಲದ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಶಾಸಕರು, ಯಾವುದೇ ಆಪರೇಷನ್ ನಡೆಯುತ್ತಿಲ್ಲ. ಲೋಕಸಭಾ ಚುನಾವಣೆ ಬಗ್ಗೆ ಹೆಚ್ಚು ಗಮನ ಹರಿಸುವಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ. ಕಾಂಗ್ರೆಸ್ ಶಾಸಕ ಉಮೇಶ್ ಜಾಧವ್ ಅವರಿಗೆ ವೈಯಕ್ತಿಕ ಸಮಸ್ಯೆ ಇದೆ. ಅವರಿಗೆ ಕಾಂಗ್ರೆಸ್‍ನಲ್ಲಿ ಉಸಿರುಗಟ್ಟುವ ವಾತಾವರಣ ನಿರ್ಮಾಣವಾಗಿದೆ. ಅವರು ವೈಯಕ್ತಿಕವಾಗಿ ನಿರ್ಧಾರ ತೆಗೆದುಕೊಂಡೇ ಹೊರ ಬರುತ್ತಿದ್ದಾರೆ ಎಂದು ಹೇಳಿದರು.

    ಆಡಿಯೋ ಪ್ರಕರಣ ಆರೋಪವನ್ನು ಸಾಬೀತು ಮಾಡಿ ಅಂತ ಬಿ.ಎಸ್.ಯಡಿಯೂರಪ್ಪ ಅವರೇ ಹೇಳಿದ್ದಾರೆ. ಎಸಿಬಿ, ಸಿಬಿಐ ಮೈತ್ರಿ ಸರ್ಕಾರದ ಕೈಯಲ್ಲಿದೆ. ತನಿಖೆ ನಡೆಸಿ ಆರೋಪ ಸಾಬೀತು ಮಾಡಿದರೆ ಬಿ.ಎಸ್.ಯಡಿಯೂರಪ್ಪ ಅವರನ್ನು ಬಂಧಿಸಲಿ ಎಂದ ಅವರು, ಸಮ್ಮಿಶ್ರ ಸರ್ಕಾರದಲ್ಲಿ ಶಾಸಕರು ಪರಸ್ಪರ ಹೊಡೆದಾಡಿಕೊಳ್ಳುತ್ತಿದ್ದಾರೆ. ವೈಯಕ್ತಿಕ ಲಾಭಕ್ಕಾಗಿ ಬಿಜೆಪಿ ಪಕ್ಷದ ಹೆಸರು ಬಳಸಿಕೊಳ್ಳುತ್ತಿದ್ದಾರೆ. ಅಸಮಾಧಾನದಿಂದ ಬಾಂಬೆ ಟಿಕೆಟ್ ತೆಗೆಸಿದರೆ ನಿಗಮ ಮಂಡಳಿ ಅಧ್ಯಕ್ಷರನ್ನಾಗಿ ಮಾಡುತ್ತಾರೆ ಎನ್ನುವುದು ಕಾಂಗ್ರೆಸ್ ಶಾಸಕರ ತಂತ್ರ ಎಂದು ಪರೋಕ್ಷವಾಗಿ ಡಾ.ಸುಧಾಕರ್ ಅವರಿಗೆ ಟಾಂಗ್ ಕೊಟ್ಟರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv