Tag: ರಾಜೀನಾಮೆ ಚುನಾವಣೆ

  • ಮತ್ತೊಂದು ವಿಕೆಟ್‌ ಪತನ – 4 ಶಾಸಕರ ರಾಜೀನಾಮೆ, ಪುದುಚೇರಿ ಕೈ ಸರ್ಕಾರಕ್ಕೆ ಸಂಕಷ್ಟ

    ಮತ್ತೊಂದು ವಿಕೆಟ್‌ ಪತನ – 4 ಶಾಸಕರ ರಾಜೀನಾಮೆ, ಪುದುಚೇರಿ ಕೈ ಸರ್ಕಾರಕ್ಕೆ ಸಂಕಷ್ಟ

    ಪುದುಚೇರಿ: ವಿಧಾನಸಭಾ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇರುವಂತೆ ದಿಢೀರ್‌ ರಾಜಕೀಯ ಬೆಳವಣಿಗೆ ನಡೆಯುತ್ತಿದ್ದು ಪುದುಚೇರಿ ಕಾಂಗ್ರೆಸ್‌ ಸರ್ಕಾರದ ಮತ್ತೊಬ್ಬ ಶಾಸಕ ರಾಜೀನಾಮೆ ನೀಡಿದ್ದು, ರಾಜೀನಾಮೆ ನೀಡಿದ ಶಾಸಕರ ಸಂಖ್ಯೆ 4ಕ್ಕೆ ಏರಿಕೆಯಾಗಿದೆ.

    ಬುಧವಾರ ಕಾಂಗ್ರೆಸ್‌ ಪ್ರಚಾರ ಕಾರ್ಯಕ್ರಮಕ್ಕೆ ರಾಹುಲ್‌ ಗಾಂಧಿ ಆಗಮಿಸಿ ಚಾಲನೆ ನೀಡುವ  ಮುನ್ನ ದಿನವೇ ಶಾಸಕರು ರಾಜೀನಾಮೆ ನೀಡಿ ಮುಖ್ಯಮಂತ್ರಿ ನಾರಾಯಣಸ್ವಾಮಿ ಸರ್ಕಾರಕ್ಕೆ ಶಾಕ್‌ ನೀಡಿದ್ದಾರೆ.

    ಕಾಮರಾಜ ನಗರ‌ ಕ್ಷೇತ್ರದ ಶಾಸಕ ಜಾನ್‌ ಕುಮಾರ್‌ ಇಂದು ರಾಜೀನಾಮೆ ಸಲ್ಲಿಸಿದ್ದಾರೆ. ರಾಜ್ಯ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ ರಾಜೀನಾಮೆ ನೀಡಿದ್ದಾರೆ.

    ಸೋಮವಾರ ಶಾಸಕ ಮಲ್ಲಾಡಿ ಕೃಷ್ಣ ರಾವ್ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಮುಖ್ಯಮಂತ್ರಿ ವಿ. ನರಸಿಂಹಸ್ವಾಮಿ ಸಂಪುಟದಲ್ಲಿ ಆರೋಗ್ಯ ಸಚಿವರಾಗಿದ್ದ ಇವರು, ಇತ್ತೀಚಿಗಷ್ಟೇ ಸಚಿವ ಸ್ಥಾನಕ್ಕೂ ರಾಜೀನಾಮೆ ನೀಡಿದ್ದರು.

    ಇದಕ್ಕೂ ಮೊದಲು ಸಚಿವ ಎ ನಮಸ್ಸಿವಾಯಮ್ ಮತ್ತು ಕಾಂಗ್ರೆಸ್ ಶಾಸಕ ಇ ಥಿಪ್ಪಾಇಂಥನ್ ರಾಜೀನಾಮೆ ನೀಡಿದ್ದರು. ಕಾಂಗ್ರೆಸ್ ಶಾಸಕರು ನೀಡಿದ ರಾಜೀನಾಮೆಯಿಂದ ಚುನಾವಣೆ ಹೊಸ್ತಿಲಿನಲ್ಲೇ ಸರ್ಕಾರಕ್ಕೆ ಮತ್ತೊಂದು ಆಘಾತ ನೀಡಿದಂತಾಗಿದೆ.

    ಸದ್ಯ ಸರ್ಕಾರಕ್ಕೆ ಕಾಂಗ್ರೆಸ್ 10, ಡಿಎಂಕೆ 3 ಮತ್ತು ಒಬ್ಬ ಪಕ್ಷೇತರ ಶಾಸಕನ ಬೆಂಬಲವಿದೆ.  ವಿರೋಧ ಪಕ್ಷವಾಗಿ ಎನ್ ಆರ್ ಕಾಂಗ್ರೆಸ್ 7, ಎಐಎಡಿಎಂಕೆ 4 ಮತ್ತು ಬಿಜೆಪಿಯ ಮೂವರು ನಾಮನಿರ್ದೇಶಿತ ಶಾಸಕರಿದ್ದು, 14 ಸದಸ್ಯರ ಬಲವನ್ನು ಹೊಂದಿದೆ.

    2016ರಲ್ಲಿ ನಡೆದ ಪುದುಚೇರಿ ವಿಧಾನಸಭಾ ಚುನಾವಣೆ ನಂತರದಲ್ಲಿ ಕಾಂಗ್ರೆಸ್ 15 ಶಾಸಕರ ಪೈಕಿ ಜನವರಿ 25ರಂದು ಶಾಸಕ ಎ. ನಮಸ್ಸಿವಾಯಮ್ ಅವರು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಅಂದೇ ಮತ್ತೊಬ್ಬ ಕಾಂಗ್ರೆಸ್ ಶಾಸಕ ಇ ಥಿಪ್ಪಾಇಂಥನ್ ಕೂಡಾ ಶಾಸಕ ಸ್ಥಾನವನ್ನು ತೊರೆದಿದ್ದರು. ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆಯಲ್ಲಿ ಕೈ ಶಾಸಕ ಧನವೇಲುರನ್ನು ಕಳೆದ ವರ್ಷ ಜುಲೈ ತಿಂಗಳಿನಲ್ಲಿ ಅನರ್ಹಗೊಳಿಸಿ ಸ್ಪೀಕರ್ ಆದೇಶ ಹೊರಡಿಸಿದ್ದರು.