Tag: ರಾಜಸ್ತಾನ

  • 8 ಬಾರಿ ಟ್ರ್ಯಾಕ್ಟರ್‌ ಹರಿಸಿ ಸಹೋದರನನ್ನು ಕೊಂದೇ ಬಿಟ್ಟ

    8 ಬಾರಿ ಟ್ರ್ಯಾಕ್ಟರ್‌ ಹರಿಸಿ ಸಹೋದರನನ್ನು ಕೊಂದೇ ಬಿಟ್ಟ

    ಜೈಪುರ: ಜಮೀನು ವಿಚಾರವಾಗಿ ಎರಡು ಕುಟುಂಬಗಳ (Family) ನಡುವೆ ನಡೆದ ಗಲಾಟೆಯಲ್ಲಿ ವ್ಯಕ್ತಿಯೊಬ್ಬನನ್ನು ಆತನ ಸಹೋದರ ಟ್ರ್ಯಾಕ್ಟರ್‌ (Tractor) ಹರಿಸಿ ಬರ್ಬರವಾಗಿ ಕೊಂದಿರುವ ಘಟನೆ ರಾಜಸ್ಥಾನದ ಭರತ್‌ಪುರದಲ್ಲಿ (Rajasthan’s Bharatpur) ನಡೆದಿದೆ.

    ಸಹೋದರ ನಿರ್ಪತ್ ಮೇಲೆ ಆರೋಪಿ ದಾಮೋದರ್‌ ಎಂಟು ಬಾರಿ ಟ್ರ್ಯಾಕ್ಟರ್ ಅನ್ನು ಹಿಂದಕ್ಕೆ ಮತ್ತು ಮುಂದಕ್ಕೆ ಓಡಿಸಿದ್ದಾನೆ. ಈಗ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

    ಟ್ರ್ಯಾಕ್ಟರ್‌ ಓಡಿಸುತ್ತಿದ್ದಾಗ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದರೆ ಗ್ರಾಮದ ಇತರ ಜನರು ವಿಡಿಯೋ ಮಾಡುವುದರಲ್ಲಿ ಬ್ಯುಸಿಯಾಗಿದ್ದರು. ಘಟನೆಯ ನಂತರ ಗ್ರಾಮದಲ್ಲಿ ಉದ್ವಿಗ್ನತೆ ಉಂಟಾಗಿದ್ದು, ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.  ಇದನ್ನೂ ಓದಿ: ನಾಡಹಬ್ಬ ಮೈಸೂರು ದಸರಾಗೆ ಮನಸೋತ ಕ್ರಿಕೆಟ್ ದೈತ್ಯ ಮ್ಯಾಥ್ಯೂ ಹೇಡನ್ ಪುತ್ರಿ

    ಬಹದ್ದೂರ್ ಸಿಂಗ್ ಮತ್ತು ಅಥರ್ ಸಿಂಗ್ ಅವರ ಕುಟುಂಬಗಳು ಭರತ್‌ಪುರದ ತುಂಡು ಭೂಮಿಗೆ ಸಂಬಂಧಿಸಿದಂತೆ ದೀರ್ಘಕಾಲ ಜಗಳ ನಡೆಯುತ್ತಿತ್ತು. ಬುಧವಾರ ಬೆಳಗ್ಗೆ ಬಹದ್ದೂರ್ ಸಿಂಗ್ ಅವರ ಕುಟುಂಬ ಸದಸ್ಯರು ವಿವಾದಿತ ಜಾಗಕ್ಕೆ ಟ್ರ್ಯಾಕ್ಟರ್‌ನಲ್ಲಿ ಬಂದಿದ್ದಾರೆ. ಕೆಲಸ ಸಮಯದಲ್ಲಿ ಅಥರ್ ಸಿಂಗ್ ಅವರ ಕುಟುಂಬ ಸ್ಥಳಕ್ಕೆ ಬಂದಿದೆ.

    ಎರಡು ಕುಟುಂಬಗಳು ಮುಖಾಮುಖಿಯಾದ ನಂತರ ಪರಸ್ಪರ ಘರ್ಷಣೆಗಿಳಿದು ಮತ್ತೊಬ್ಬರ ಮೇಲೆ ದೊಣ್ಣೆ, ಕಲ್ಲುಗಳಿಂದ ಹಲ್ಲೆ ನಡೆಸಿದ್ದಾರೆ. ಈ ವೇಳೆ ಅಥರ್ ಸಿಂಗ್ ಅವರ ಪುತ್ರ ನಿರ್ಪತ್ ನೆಲಕ್ಕೆ ಬಿದ್ದಿದ್ದಾರೆ. ಈ ವೇಳೆ ಆರೋಪಿ ದಾಮೋದರ್‌ ನಿರ್ಪತ್‌ ಪ್ರಾಣ ಹೋಗುವವರೆಗೂ 8 ಬಾರಿ ಟ್ರ್ಯಾಕ್ಟರ್‌ ಓಡಿಸಿದ್ದಾನೆ.

    ಈ ಸಂದರ್ಭದಲ್ಲಿ ಕುಟುಂಬ ಸದಸ್ಯರು ಮಧ್ಯಪ್ರವೇಶಿಸಿದರೂ ದಾಮೋದರ್‌ ತಲೆ ಕೆಡಿಸಿಕೊಳ್ಳದೇ ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಘರ್ಷಣೆಯಲ್ಲಿ ಸುಮಾರು 10 ಮಂದಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ನಾಲ್ವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

     

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಹನಿಮೂನ್‍ಗೆ ಬಂದು ಪತಿಯನ್ನು ಹೋಟೆಲ್‍ನಲ್ಲೇ ಬಿಟ್ಟು ಹೋದ ಪತ್ನಿ!

    ಹನಿಮೂನ್‍ಗೆ ಬಂದು ಪತಿಯನ್ನು ಹೋಟೆಲ್‍ನಲ್ಲೇ ಬಿಟ್ಟು ಹೋದ ಪತ್ನಿ!

    ಜೈಪುರ: ಹೊಸದಾಗಿ ಮದುವೆಯಾದ ಜೋಡಿಯೊಂದು ಹನಿಮೂನ್ (Honeymoon) ಬಂದು, ಪತಿಯನ್ನು ಹೋಟೆಲ್‍ನಲ್ಲಿಯೇ ಪತ್ನಿ ಬಿಟ್ಟು ಹೋಗಿರುವ ಅಚ್ಚರಿಯ ಪ್ರಕರಣವೊಂದು ರಾಜಸ್ಥಾನದ ಜೈಪುರದಿಂದ ಬೆಳಕಿಗೆ ಬಂದಿದೆ.

    ಪತಿಯೊಂದಿಗೆ ಹೋಟೆಲ್ (Hotel) ವಿಚಾರವಾಗಿ ಈಕೆ ಪತಿ ಜೊತೆ ಮುನಿಸಿಕೊಂಡಿದ್ದೇ ಈ ಘಟನೆಗೆ ಕಾರಣ ಎನ್ನಲಾಗಿದೆ. ರಿಂಗಾಸ್‍ನಲ್ಲಿರುವ ಬಾಬಾ ಖತುಶ್ಯಾಮ್ ಜಿ ದೇವಸ್ಥಾನಕ್ಕೆ ಭೇಟಿ ನೀಡಲೆಂದು ವಾಹನ ಬುಕ್ ಮಾಡಲು ಪತಿ ಹೋದಾಗ ಆತನನ್ನು ಕೋಪದಿಂದ ಪತ್ನಿ ಬಿಟ್ಟು ಹೋಗಿದ್ದಾಳೆ.

    ಮಧ್ಯಪ್ರದೇಶದ (Madhyapradesh) ಭೋಪಾಲ್ ಮೂಲದ ದಂಪತಿ ಜುಲೈ 29 ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಮದುವೆಯ ಬಳಿಕ ಹನುಮೂನಿಗೆಂದು ಆಗಸ್ಟ್ 5 ರಂದು ಜೈಪುರಕ್ಕೆ ಬಂದಿದ್ದು, ಚೌಮು ಪುಲಿಯಾ ಸಮೀಪದ ಹೋಟೆಲ್‍ನಲ್ಲಿ ತಂಗಿದ್ದರು. ಮರುದಿನ ಬೆಳಗ್ಗೆ ದಂಪತಿ ಜೈಪುರ ಸುತ್ತಾಡಿ ನಂತರ ಅಮೇರ್ ಫೋರ್ಟ್‍ಗೆ ಭೇಟಿ ನೀಡಿದರು.

    ಸಂಜೆ 3 ಗಂಟೆ ಸುಮಾರಿಗೆ ಹೋಟೆಲ್‍ಗೆ ಹಿಂದಿರುಗಿದರು. ಇದಾದ ಬಳಿಕ ಅವರು ಬಾಬಾ ಖತುಶ್ಯಾಮ್ ಜಿ ದೇವಸ್ಥಾನಕ್ಕೆ ಭೇಟಿ ನೀಡಲು ಯೋಜಿಸಿದ್ದರು. ಅಂತೆಯೇ ಪತಿ ವಾಹನ ಬುಕ್ ಮಾಡಲು ತೆರಳಿದರು. ಹೀಗೆ ಹೋದವನು ವಾಪಸ್ ರೂಮಿಗೆ ಬರುವಾಗ ಪತ್ನಿ ತನ್ನ ಲಗೇಜ್‍ನೊಂದಿಗೆ ಕಾಣೆಯಾಗಿದ್ದಳು. ಇದನ್ನು ಕಂಡ ಪತಿ ದಿಗ್ಭ್ರಮೆಗೊಂಡನು. ಇದನ್ನೂ ಓದಿ: ಪೈಗಂಬರ್ ಬಗ್ಗೆ ಅವಹೇಳನ ಮಾಡಿದವರ ತಲೆ ತೆಗೆಯಿರಿ – ಪೋಸ್ಟ್ ಹಾಕಿದ ಯುವಕರು ಅರೆಸ್ಟ್

    ಆಕೆಗಾಗಿ ಇಡೀ ಹೋಟೆಲ್‍ನಲ್ಲಿ ಹುಡುಕಾಟ ನಡೆಸಿದನು. ಎಲ್ಲಯೂ ಸಿಗದೇ ಇದ್ದಾಗ ಆಕೆಯ ಮೊಬೈಲ್ ನಂಬರಿಗೆ ಕರೆ ಮಾಡಿದ್ದಾನೆ. ಆದರೆ ಆಕೆ ಕರೆ ಸ್ವೀಕರಿಸುತ್ತಿರಲಿಲ್ಲ. ಬಳಿಕ ಅವರು ಹೋಟೆಲ್‍ನ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದರು. ಈ ವೇಳೆ ಆಕೆ ಫೋನ್‍ನಲ್ಲಿ ಮಾತನಾಡುತ್ತಾ ಹೋಟೆಲ್‍ನಿಂದ ಹೊರಟು ಹೋಗಿರುವುದು ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಪತಿ ಝೋತ್ವಾರಾ ಪೊಲೀಸ್ ಠಾಣೆಯಲ್ಲಿ ಪತ್ನಿ ನಾಪತ್ತೆಯಗಿದ್ದಾರೆ ಎಂದು ದೂರು ದಾಖಲಿಸಿದ್ದಾರೆ.

    ಈ ಸಂಬಂಧ ಅಲ್ಲಿನ ಎಎಸ್‍ಐ ಬಜರಂಗಲಾಲ್ ಶರ್ಮಾ ಮಾತನಾಡಿ, ಹನಿಮೂನ್‍ಗೆ ಭೋಪಾಲ್ ಮೂಲದ ದಂಪತಿ ಆಗಸ್ಟ್ 5ರಂದು ಬಂದಿದ್ದರು. ಕೆಲ ವಿಚಾರಗಳಿಗೆ ಹೊಟೇಲ್‍ನಲ್ಲಿ ಪತಿ-ಪತ್ನಿ ನಡುವೆ ವಾಗ್ವಾದ ನಡೆದಿದೆ. ಬಳಿಕ ಪತಿ ಕ್ಯಾಬ್ ಬುಕ್ ಮಾಡಲು ಕೆಳಗಿಳಿದಿದ್ದು, ಕೋಪಗೊಂಡ ಪತ್ನಿ ಹೋಟೆಲ್‍ನಿಂದ ಹೊರಟು ಹೋಗಿದ್ದಾರೆ.

    ಸದ್ಯ ಕಾಣೆಯಾದ ಪತ್ನಿಯನ್ನು ಸಂಪರ್ಕಿಸಲು ಯತ್ನಿಸುತ್ತಿದ್ದಾರೆ. ಪತಿ-ಪತ್ನಿಯರ ನಡುವೆ ಜಗಳ ನಡೆದ ಬಳಿಕವೇ ಪತ್ನಿ ಕೋಪಗೊಂಡು ಹೋಟೆಲ್ ತೊರೆದಿದ್ದು, ನಾವು ಅವರನ್ನು ಪತ್ತೆ ಮಾಡಲು ಪ್ರಯತ್ನಿಸುತ್ತಿದ್ದು, ಮತ್ತು ಶೀಘ್ರದಲ್ಲೇ ಹುಡಕುತ್ತೇವೆ ಎಂದು ತಿಳಿಸಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಪ್ರತಿದಿನ ಸಾಯೋದಕ್ಕಿಂತ ಒಂದೇ ದಿನ ಸಾಯೋದು ಒಳಿತು – ಮೂವರು ಸಹೋದರಿಯರು ಮಕ್ಕಳೊಂದಿಗೆ ಆತ್ಮಹತ್ಯೆ

    ಜೈಪುರ: ಮೂವರು ಸಹೋದರಿಯರು ಹಾಗೂ ಇಬ್ಬರು ಮಕ್ಕಳ ಶವ ಶನಿವಾರ ರಾಜಸ್ಥಾನದ ಜೈಪುರ ಜಿಲ್ಲೆ, ದುಡು ಪಟ್ಟಣದ ಬಾವಿಯೊಂದರಲ್ಲಿ ಅನುಮಾನಾಸ್ಪದವಾಗಿ ಪತ್ತೆಯಾಗಿದೆ. ಸಹೋದರಿಯರು ತಮ್ಮ ಮಕ್ಕಳೊಂದಿಗೆ ಸಾಮೂಹಿಕವಾಗಿ ಆತ್ಮಹತ್ಯೆ ಮಾಡಿಕೊಳ್ಳಲು ಕಾರಣವೇನು ಎಂದು ಜನರಲ್ಲಿ ಪ್ರಶ್ನೆ ಮೂಡಿದೆ.

    ಕಲು ದೇವಿ(27), ಮಮತಾ(23) ಹಾಗೂ ಕಮಲೇಶ್(20) ಸಹೋದರಿಯರು ತಮ್ಮ ಇಬ್ಬರು ಮಕ್ಕಳೊಂದಿಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಲು ದೇವಿಯ ಇಬ್ಬರು ಮಕ್ಕಳಲ್ಲಿ ಓರ್ವನಿಗೆ 4 ವರ್ಷ ಹಾಗೂ ಇನ್ನೊಂದು ಕೇವಲ 27 ದಿನದ ಹಸುಗೂಸು. ಅಲ್ಲದೇ ಮಮತಾ ಹಾಗೂ ಕಮಲೇಶ್ ಇಬ್ಬರೂ ತುಂಬು ಗರ್ಭಿಣಿಯರಾಗಿದ್ದರು.

    ಈ ಮೂವರು ಸಹೋದರಿಯರು ಹಾಗೂ ಮಕ್ಕಳು ಬುಧವಾರ ನಾಪತ್ತೆಯಾಗಿದ್ದರು. ಶನಿವಾರದವರೆಗೂ ಪೊಲೀಸರು ಹುಡುಕಾಟ ನಡೆಸುತ್ತಿದ್ದರು. ಇದೀಗ ಅವರ ಶವ ಬಾವಿಯಲ್ಲಿ ಪತ್ತೆಯಾಗಿದೆ. ಘಟನೆಗೂ ಒಂದು ದಿನ ಮುನ್ನ ಮಮತಾ ತನ್ನ ವಾಟ್ಸಪ್ ಸ್ಟೇಟಸ್‌ನಲ್ಲಿ ಪ್ರತಿದಿನ ಸಾಯುವುದಕ್ಕಿಂತ ಒಮ್ಮೆ ಸಾಯುವುದೇ ಉತ್ತಮ ಎಂದು ಬರೆದಿದ್ದಳು. ಇದನ್ನೂ ಓದಿ: ಕೇರಳದಲ್ಲಿ ವ್ಯಾಪಕವಾಗಿ ಹರಡುತ್ತಿದೆ ದೇಶ ವಿರೋಧಿ ಚಿಂತನೆ – ಬಿಜೆಪಿ ಸಂಸದ ಅಲ್ಫೋನ್ಸ್ ಹೇಳಿಕೆ

    ಮೂವರು ಮಹಿಳೆಯರು ಕೌಟುಂಬಿಕ ದೌರ್ಜನ್ಯಕ್ಕೆ ಬಲಿಯಾಗಿದ್ದಾರೆ ಎಂದು ವರದಿಯಾಗಿದೆ. ಸಹೋದರಿಯರು ಒಂದೇ ಕುಟುಂಬದ ಮೂವರನ್ನು 2003ರಲ್ಲಿಯೇ ಬಾಲ್ಯ ವಿವಾಹವಾಗಿದ್ದರು. ಅವರ ಪತಿಯರು ಪ್ರತಿ ದಿನ ಕುಡಿದು ಬಂದು, ಅಮಲಿನಲ್ಲಿ ಪತ್ನಿಯರಿಗೆ ಚಿತ್ರಹಿಂಸೆ ನೀಡುತ್ತಿದ್ದರು. ಇತ್ತೀಚೆಗೆ ಕಲು ದೇವಿಗೆ ತನ್ನ ಅತ್ತಿಗೆ ಥಳಿಸಿದ್ದು, 15 ದಿನಗಳ ಕಾಲ ಆಸ್ಪತ್ರೆಯಲ್ಲಿದ್ದರು. ಆಕೆಯ ಕಣ್ಣಿಗೆ ಗಾಯಗಳಾಗಿತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ. ಕಿರಿಯ ಸಹೋದರಿ ಕಮಲೇಶ್‌ಗೂ ಇತ್ತೀಚೆಗೆ ತನ್ನ ಫೋನ್‌ನಲ್ಲಿ ಯಾರೊಂದಿಗೋ ಮಾತನಾಡಿದ ಬಳಿಕ ಥಳಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಮೂವರಿಗೂ ವಿದ್ಯಾಭ್ಯಾಸದಲ್ಲಿ ಆಸಕ್ತಿ ಇದ್ದು, ಓದಿ, ಸಂಪಾದಿಸಬೇಕು ಅಂದುಕೊಂಡಿದ್ದರು. ಮಮತಾ ಪೊಲೀಸ್ ಕಾನ್ಸ್ಟೇಬಲ್ ಪರೀಕ್ಷೆಯಲ್ಲಿ ಆಯ್ಕೆಯಾಗಿದ್ದು, ಕಲು ಅಂತಿಮ ವರ್ಷದ ಬಿಎ ಓದುತ್ತಿದ್ದಳು ಹಾಗೂ ಕಮಲೇಶ್ ವಿಶ್ವವಿದ್ಯಾಲಯಕ್ಕೆ ದಾಖಲಾಗಿದ್ದಳು. ಆದರೆ ಕೇವಲ 5-6ನೇ ತರಗತಿ ಓದಿದ್ದ ಪತಿಯರಿಗೆ ಮಹಿಳೆಯರು ವಿದ್ಯಾಭ್ಯಾಸ ಮಾಡುವುದು ಇಷ್ಟವಿರಲಿಲ್ಲ. ಇದನ್ನೂ ಓದಿ: ಎರಡು ವರ್ಷಗಳ ನಂತರ ಭಾರತ- ಬಾಂಗ್ಲಾ ರೈಲು ಸಂಚಾರ ಪುನಾರಂಭ

    ಸಹೋದರಿಯರ ಶವಗಳು ತಮ್ಮ ಮನೆಯಿಂದ 2 ಕಿಮೀ ದೂರದ ಬಾವಿಯಲ್ಲಿ ಪತ್ತೆಯಾಗಿದ್ದು, ಅದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಮಹಿಳೆಯರ ಪತಿಯರಾದ ನರ್ಸಿ, ಗೊರಿಯೊ ಹಾಗೂ ಮುಖೇಶ್‌ನನ್ನು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ. ವರದಕ್ಷಿಣೆ ವಿಚಾರದ ಬಗೆಗೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

  • ಗ್ಯಾಂಗ್ ನೋಡಿ ಸ್ಥಳದಿಂದ ಕಾಲ್ಕಿತ್ತ ಪತಿ- ಮಕ್ಕಳ ಮುಂದೆಯೇ ದಲಿತ ಮಹಿಳೆ ಮೇಲೆ ಸಾಮೂಹಿಕ ರೇಪ್

    ಜೈಪುರ: ಕಿಡಿಕೇಡಿಗಳ ಗುಂಪೊಂದು ತಮ್ಮ ಬಳಿ ಬರುತ್ತಿರುವುದನ್ನು ತಿಳಿದುಕೊಂಡ ಪತಿ ಭಯಗೊಂಡು ಸ್ಥಳದಿಂದ ಪರಾರಿಯಾಗಿದ್ದಾನೆ. ಇದನ್ನೆ ಕಾಯುತ್ತಿದ್ದ ಕಿಡಿಕೇಡಿಗಳು ಮಕ್ಕಳ ಮುಂದೆಯೇ ತಾಯಿಯನ್ನು ಅತ್ಯಾಚಾರ ಮಾಡಿರುವ ಭಯಾನಕ ಘಟನೆ ರಾಜಸ್ಥಾನದಲ್ಲಿ ನಡೆದಿದೆ.

    ಮಾರ್ಚ್ 17 ರಂದು ಧೋಲ್‍ಪುರ ಜಿಲ್ಲೆಯಲ್ಲಿ ದಲಿತ ಮಹಿಳೆಯೊಬ್ಬರು ಜಮೀನಿನಿಂದ ತನ್ನ ನಿವಾಸಕ್ಕೆ ಮರಳುತ್ತಿದ್ದಾಗ ಸಾಮೂಹಿಕ ಅತ್ಯಾಚಾರವೆಸಗಲಾಗಿದೆ. 26 ವರ್ಷದ ಸಂತ್ರಸ್ತೆ ತನ್ನ ಪತಿ ಮತ್ತು ಮಕ್ಕಳೊಂದಿಗೆ ತಮ್ಮ ಮನೆಗೆ ತೆರಳುತ್ತಿದ್ದಾಗ ಆರೋಪಿಗಳು ದಂಪತಿಯನ್ನು ತಡೆದು ಥಳಿಸಿದ್ದಾರೆ. ತನ್ನನ್ನು ಉಳಿಸಿಕೊಳ್ಳುವ ಪ್ರಯತ್ನದಲ್ಲಿ, ಪತಿ ಕಂಟ್ರಿಮೇಡ್ ಪಿಸ್ತೂಲ್‍ನಿಂದ ಹೊಡೆದ ಸ್ಥಳದಿಂದ ಪರಾರಿಯಾಗಿದ್ದಾನೆ. ಇದನ್ನೂ ಓದಿ: ದತ್ತು ಪುತ್ರಿ ನಿರ್ಲಕ್ಷ್ಯ – ಟ್ರೋಲಿಗರ ಕಣ್ಣಿಗೆ ಗುರಿಯಾದ ಸನ್ನಿ ಉತ್ತರವೇನು?

    ಪತ್ನಿ ಮತ್ತು ಮಕ್ಕಳು ಸ್ಥಳದಲ್ಲೇ ಇರುವುದನ್ನು ಗಮನಿಸಿದ ಆರೋಪಿಗಳು ಮಕ್ಕಳಿಗೆ ಬಂದೂಕು ತೋರಿಸಿ ಮಹಿಳೆ ಮೇಲೆ ಅತ್ಯಾಚಾರವೆಸಗಿದ್ದಾರೆ ಎಂದು ಪೊಲೀಸರು ತನಿಖೆ ಬಳಿಕ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಆರೋಪಿಗಳನ್ನು ಲಾಲು ಠಾಕೂರ್, ಧನ್ ಸಿಂಗ್ ಠಾಕೂರ್, ವಿಪಿನ್ ಠಾಕೂರ್, ಮೋಹಿತ್ ಠಾಕೂರ್, ಸಚಿನ್ ಠಾಕೂರ್ ಮತ್ತು ಲೋಕೇಂದ್ರ ಸಿಂಗ್ ಠಾಕೂರ್ ಎಂದು ಅಧಿಕಾರಿಗಳು ಗುರುತಿಸಿದ್ದಾರೆ.

    ಈ ಪ್ರಕರಣ ತಿಳಿದ ತಕ್ಷಣ ರಾಷ್ಟ್ರೀಯ ಮಹಿಳಾ ಆಯೋಗವು(NCW) ಅಪರಿಚಿತ ಆರೋಪಿಗಳ ವಿರುದ್ಧ ಎಫ್‍ಐಆರ್ ದಾಖಲಿಸುವಂತೆ ಎನ್‍ಸಿಡಬ್ಲ್ಯು ರಾಜಸ್ಥಾನದ ಡಿಜಿಪಿಗೆ ಪತ್ರ ಬರೆದಿತ್ತು.

    ಈ ಮನವಿಯ ಮೇರೆಗೆ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 376-ಡಿ(ಗ್ಯಾಂಗ್ ರೇಪ್) ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ(ದೌರ್ಜನ್ಯ ತಡೆ) ಕಾಯ್ದೆ, 1989ರ ಅಡಿಯಲ್ಲಿ ಕಾಂಚನ್‍ಪುರ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಿಸಲಾಗಿದೆ. ಘಟನೆಯಲ್ಲಿ ಬದುಕುಳಿದಿರುವವರು ಮತ್ತು ಪ್ರಕರಣದ ಆರೋಪಿಗಳು ಅದೇ ಗ್ರಾಮದವರು. ಪ್ರಕರಣದ ತನಿಖೆ ನಡೆಯುತ್ತಿದೆ. ಇಲ್ಲಿಯವರೆಗೆ ಯಾರನ್ನೂ ಬಂಧಿಸಲಾಗಿಲ್ಲ ಎಂದು ಧೋಲ್‍ಪುರದ ಸರ್ಕಲ್ ಅಧಿಕಾರಿ ವಿಜಯ್ ಕುಮಾರ್ ಸಿಂಗ್ ಹೇಳಿದ್ದಾರೆ. ಇದನ್ನೂ ಓದಿ: ಲೈಂಗಿಕ ಆಸೆ ತೀರಿಸಿಕೊಳ್ಳಲು ಹೋಗಿ ಮಹಿಳೆ ಎಡವಟ್ಟು- ಎಕ್ಸ್‌ರೇ ನೋಡಿ ದಂಗಾದ ವೈದ್ಯರು!

  • ಆನ್‍ಲೈನ್‍ನಲ್ಲಿ ಪರಿಚಯವಾದ ಮಹಿಳೆಗಾಗಿ ಗಡಿ ದಾಟಿದ ಪಾಕ್ ಯುವಕ

    ಆನ್‍ಲೈನ್‍ನಲ್ಲಿ ಪರಿಚಯವಾದ ಮಹಿಳೆಗಾಗಿ ಗಡಿ ದಾಟಿದ ಪಾಕ್ ಯುವಕ

    ಜೈಪುರ: ಭಾರತ-ಪಾಕಿಸ್ತಾನ ಅಂತರಾಷ್ಟ್ರೀಯ ಗಡಿಯನ್ನು ದಾಟಿ ಬಂದ 21 ವರ್ಷದ ಪಾಕಿಸ್ತಾನ ಯುವಕನನ್ನು ಭಾರತದ ಗಡಿ ಭದ್ರತಾ ಪಡೆ (ಬಿಎಸ್‍ಎಫ್) ವಶಕ್ಕೆ ಪಡೆದುಕೊಂಡಿರುವುದಾಗಿ ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.

    ರಾಜಸ್ಥಾನದ ಶ್ರೀಗಂಗಾನಗರ ಜಿಲ್ಲೆಯ ಮೂಲಕ ಯುವಕ ಭಾರತಕ್ಕೆ ಆಗಮಿಸಿರುವ ಯುವಕ ಸೋಶಿಯಲ್ ಮೀಡಿಯಾ ಮೂಲಕ ಸ್ನೇಹ ಹೊಂದಿದ್ದ ಮುಂಬೈನ ಮಹಿಳೆಯನ್ನು ಭೇಟಿಯಾಗುವ ಸಲುವಾಗಿ ಗಡಿ ದಾಟಿರುವುದಾಗಿ ತಿಳಿಸಿದ್ದಾನೆ. ಯುವಕ ಪಾಕಿಸ್ತಾನದ ಪಂಜಾಬ್‍ನ ಬಹವಾಲ್‍ಪುರ ಜಿಲ್ಲೆಯ ನಿವಾಸಿಯಾಗಿರುವುದಾಗಿ ಶ್ರೀಗಂಗಾನಗರದ ಅನುಪ್‍ಗಢ ಪೊಲೀಸ್ ಠಾಣೆಯ ಠಾಣಾಧಿಕಾರಿ ಫೂಲ್ ಚಂದ್ ತಿಳಿಸಿದ್ದಾರೆ. ಇದನ್ನೂ ಓದಿ:  ಸರ್ಕಾರಿ ಉದ್ಯೋಗ ಇಲ್ಲದೆ ಯುವಕರಲ್ಲಿ ಹತಾಶೆ: ವರುಣ್ ಗಾಂಧಿ

    ಯುವಕನ ನಿವಾಸ ಪಾಕಿಸ್ತಾನದ ಗಡಿ ಸಮೀಪದಲ್ಲಿದ್ದು, ಮುಂಬೈನಲ್ಲಿ ಮಹಿಳೆಯನ್ನು ಭೇಟಿಯಾಗಲು ಆಗಮಿಸಿರುವುದಾಗಿ ತಿಳಿಸಿದ್ದಾನೆ. ಸದ್ಯ ವಿವಿಧ ಭದ್ರತಾ ಏಜೆನ್ಸಿಗಳ ಪ್ರತಿನಿಧಿಗಳನ್ನು ಒಳಗೊಂಡ ಜಂಟಿ ವಿಚಾರಣೆ ಸಮಿತಿ (ಜೆಐಸಿ)ಯಿಂದ ಯುವಕನನ್ನು ಪ್ರಶ್ನಿಸಲಾಗುವುದು ಎಂದು ಶ್ರೀಗಂಗಾನಗರದ ಪೊಲೀಸ್ ವರಿಷ್ಠಾಧಿಕಾರಿ(ಎಸ್‍ಪಿ) ಶರ್ಮಾ ಹೇಳಿದ್ದಾರೆ.

    ಗಡಿ ಭದ್ರತಾ ಪಡೆ (ಬಿಎಸ್‍ಎಫ್) ಆತನನ್ನು ವಶಕ್ಕೆ ಮುನ್ನ ಅನುಪ್‍ಗಢ್ ಸೆಕ್ಟರ್‌ನಲ್ಲಿ ಗಡಿ ಬೇಲಿಯನ್ನು ದಾಟಿ ಯುವಕ ಭಾರತಕ್ಕೆ ಆಗಮಿಸಿದ್ದನು. ಪ್ರಾಥಮಿಕ ತನಿಖೆಯ ನಂತರ ಬಿಎಸ್‍ಎಫ್ ಆತನನ್ನು ಅನುಪ್‍ಗಢ್ ಪೊಲೀಸರ ಕಸ್ಟಡಿಗೆ ಹಸ್ತಾಂತರಿಸಿರುವುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ: ಅನೈತಿಕ ಸಂಬಂಧ ಶಂಕೆ – ಪತ್ನಿಯ ಕತ್ತು ಸೀಳಿ ಕೊಂದ ಪತಿ

    ಪ್ರಸ್ತುತ ಯುವಕನನ್ನು ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದ್ದು, ಜೆಐಸಿ ವಿಚಾರಣೆಗೆ ಒಳಪಡಿಸಿದ ನಂತರ, ಆತ ಭಾರತದ ವಿರುದ್ಧ ಯಾವುದೇ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾನೆಯೇ ಮತ್ತು ಆತನನ್ನು ಬಂಧಿಸುವ ಅಗತ್ಯವಿದೆಯೇ ಎಂದು ಖಚಿತಪಡಿಸಿಕೊಳ್ಳಲಾಗುವುದು. ಆತನ ಮೇಲೆ ಯಾವುದೇ ಅನುಮಾನ ಇಲ್ಲದಿದ್ದರೆ ಪಾಕಿಸ್ತಾನದ ರೇಂಜರ್‌ಗಳೊಂದಿಗೆ ಸಮಸ್ಯೆ ಕುರಿತಂತೆ ಮಾತನಾಡಿ ನಂತರ ಬಿಎಸ್‍ಎಫ್ ಸೂಚಿಸುವ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

  • ಹಿಂದೂ ದೇವಾಲಯಗಳಿಗೆ ಭೇಟಿ ಕೊಟ್ಟ ಸಾರಾ ಅಲಿಖಾನ್

    ಹಿಂದೂ ದೇವಾಲಯಗಳಿಗೆ ಭೇಟಿ ಕೊಟ್ಟ ಸಾರಾ ಅಲಿಖಾನ್

    ಜೈಪುರ: ಬಾಲಿವುಡ್ ನಟ ಸೈಫ್ ಅಲಿಖಾನ್ ಪುತ್ರಿ ನಟಿ ಸಾರಾ ಅಲಿ ಖಾನ್ ರಾಜಸ್ಥಾನದ ಉದಯಪುರಕ್ಕೆ ಪ್ರವಾಸ ಹೋಗಿದ್ದು, ಈ ವೇಳೆ ಕ್ಲಿಕ್ಕಿಸಿಕೊಂಡ ಕೆಲವು ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ.

    sara ali khan

    ಬಾಲಿವುಡ್‍ನ ಯುವ ನಟಿಯರಲ್ಲಿ ಸಾರಾ ಅಲಿಖಾನ್ ಕೂಡ ಒಬ್ಬರಾಗಿದ್ದು, ಸದ್ಯ ಹಲವು ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದಾರೆ. ಇಷ್ಟು ದಿನ ಮಾಲ್ಡೀವ್ಸ್ ಮತ್ತು ಕಾಶ್ಮೀರಕ್ಕೆ ಭೇಟಿ ನೀಡಿದ್ದ ಸಾರಾ ಇದೀಗ ರಾಜಸ್ಥಾನದ ಉದಯಪುರಕ್ಕೆ ಪ್ರವಾಸ ಕೈಗೊಂಡಿದ್ದಾರೆ. ಅಲ್ಲಿನ ಪ್ರಕೃತಿ ಸೌಂದರ್ಯದ ಮಧ್ಯೆ ನೆಮ್ಮದಿಯಿಂದ ಕಾಲ ಕಳೆಯುತ್ತಿರುವ ಸಾರಾ ಅಲಿ ಖಾನ್ ಕೆಲವು ಫೋಟೋಗಳನ್ನು ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಫೋಟೋದಲ್ಲಿ ಸಾರಾ ವಿವಿಧ ದೇವಾಲಯಗಳಿಗೆ ಭೇಟಿ ನೀಡಿರುವುದನ್ನು ಕಾಣಬಹುದಾಗಿದೆ. ಇದನ್ನೂ ಓದಿ: ಶಾರೂಖ್, ಗೌರಿ ಖಾನ್ ಬೆಂಬಲಕ್ಕೆ ನಿಂತ ಹೃತಿಕ್ ಮಾಜಿ ಪತ್ನಿ, ಮಿಕಾ ಸಿಂಗ್!

    sara ali khan

    ಕೆಲವು ದಿನಗಳ ಹಿಂದೆಯಷ್ಟೇ ಕಾಶ್ಮೀರಕ್ಕೆ ಭೇಟಿ ನೀಡಿದಾಗ ಭಾರತೀಯ ಸೈನಿಕರನ್ನು ಭೇಟಿಯಾಗಿದ್ದ ಸಾರಾ ಅಲಿ ಖಾನ್ ಇದೀಗ ಉದಯಪುರದಲ್ಲಿರುವ ವಿವಿಧ ದೇವಾಲಯಗಳಿಗೆ ಭೇಟಿ ನೀಡಿದ್ದಾರೆ ಮತ್ತು ಸರೋವರವೊಂದರ ಬಳಿ ಕುಳಿತುಕೊಂಡು ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಸದ್ಯ ಈ ಫೋಟೋಗಳನು ಸಾರಾ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಕೋರ್ಟ್ ಆದೇಶಕ್ಕೆ ತಲೆ ಬಾಗಿ ಬಂದಿದ್ದೇನೆ – ಸುಳ್ಯ ನ್ಯಾಯಾಲಯಕ್ಕೆ ಇಂದು ಡಿಕೆಶಿ ಹಾಜರು

    ಇತ್ತೀಚೆಗಷ್ಟೇ ಸಾರಾ ಅಲಿ ಖಾನ್ ಮಾಲ್ಡೀವ್ಸ್ ಭೇಟಿ ನೀಡಿದ್ದ ಹಳೆಯ ವೀಡಿಯೋವನ್ನು ಪೋಸ್ಟ್ ಮಾಡಿದ್ದು, ವೀಡಿಯೋದಲ್ಲಿ ಸಾರಾ ನೀಲಿ ಬಣ್ಣದ ಸ್ವಿಮ್ಮಿಂಗ್ ಡ್ರೆಸ್ ತೊಟ್ಟು ತಂಪಾದ ಗಾಳಿ ಸ್ವೀಕರಿಸುತ್ತಿರುವುದನ್ನು ಕಾಣಬಹುದಾಗಿದೆ.

     

    View this post on Instagram

     

    A post shared by Sara Ali Khan (@saraalikhan95)

    ಇದೀಗ ಬಾಲಿವುಡ್ ನಟ ಅಕ್ಷಯ್ ಕುಮಾರ್ ಹಾಗೂ ಕಾಲಿವುಡ್ ನಟ ಧನುಷ್ ಜೊತೆ ಅತ್ರಂಗಿ ರೇ ಎಂಬ ಸಿನಿಮಾದಲ್ಲಿ ಸಾರಾ ಅಲಿಖಾನ್ ಕಾಣಿಸಿಕೊಳ್ಳುತ್ತಿದ್ದು, ಇತ್ತೀಚೆಗಷ್ಟೇ ಈ ಸಿನಿಮಾಕ್ಕಾಗಿ ಡಬ್ ಮಾಡಿದ್ದಾರೆ. ಈ ಮುನ್ನ ರಣ್‍ವೀರ್ ಸಿಂಗ್ ಜೊತೆ ಸಿಂಬಾ, ನಟ ಕಾರ್ತಿಕ್ ಲವ್ ಆಜ್ ಕಲ್-2, ದಿವಗಂತ ನಟ ಸುಸಾಂತ್ ಸಿಂಗ್ ಜೊತೆ ಕೇದರನಾಥ್ ಸಿನಿಮಾದಲ್ಲಿ ಅಭಿನಯಿಸಿದ್ದರು.

  • ರಾಜಸ್ಥಾನದಿಂದ ಬರ್ತಿದ್ದ  ಡ್ರಗ್ಸ್ ಗೆ ಎಂಜಿನಿಯರಿಂಗ್ ವಿದ್ಯಾರ್ಥಿಗಳೇ ಕಸ್ಟಮರ್ಸ್!

    ರಾಜಸ್ಥಾನದಿಂದ ಬರ್ತಿದ್ದ ಡ್ರಗ್ಸ್ ಗೆ ಎಂಜಿನಿಯರಿಂಗ್ ವಿದ್ಯಾರ್ಥಿಗಳೇ ಕಸ್ಟಮರ್ಸ್!

    ಬೆಂಗಳೂರು: ರಾಜಸ್ಥಾನ ಮತ್ತು ಗುಜರಾತ್ ನಿಂದ ಡ್ರಗ್ಸ್ ತರಿಸಿ ವಿದ್ಯಾರ್ಥಿಗಳನ್ನು ಟಾರ್ಗೆಟ್ ಮಾಡಿಕೊಂಡು ಮಾರಾಟ ಮಾಡುತ್ತಿದ್ದ ಉತ್ತರ ಭಾರತ ಮೂಲದ ಇಬ್ಬರು ಪೆಡ್ಲರ್ ಗಳನ್ನ ಸಿಟಿ ಮಾರ್ಕೆಟ್ ಪೊಲೀಸರು ಬಂಧಿಸಿದ್ದಾರೆ.

    ಪಪ್ಪುರಾಮ್ ಹಾಗೂ ಚುನ್ನಿಲಾಲ್ ಬಂಧಿತ ಆರೋಪಿಗಳಾಗಿದ್ದಾರೆ. ಇವರು ರಾಜಸ್ಥಾನ ಮೂಲದವರಾಗಿದ್ದಾರೆ. ಬಂಧಿತರಿಂದ 1.6 ಕೆ.ಜಿ ಗ್ರಾಂ. ಬ್ರೌನ್ ಶುಗರ್, 800ಗ್ರಾಂ ಎಂಡಿಎಂ, 1.7 ಕೆ.ಜಿ. ಗಾಂಜಾ, ಕೃತ್ಯಕ್ಕೆ ಬಳಸಿದ್ದ ಸ್ವಿಫ್ಟ್ ಡಿಜೈರ್ ಕಾರ್, ಎರಡು ಹುಕ್ಕಾ ಸೇದುವ ಸಾಧನ ಸೇರಿದಂತೆ 2 ಕೋಟಿ ರೂ.ಮೌಲ್ಯದ ಮಾದಕ ವಸ್ತುಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ.

    ಪ್ರಮುಖ ಆರೋಪಿ ಪಪ್ಪುರಾಮ್ ಕೆಲ ವರ್ಷಗಳ ಹಿಂದೆ ಬೆಂಗಳೂರಿಗೆ ಬಂದು ಮಾದಕವಸ್ತು ಮಾರಾಟ ಜಾಲದಲ್ಲಿ ತೊಡಗಿಸಿಕೊಂಡಿದ್ದ. ರಾಜಸ್ತಾನ, ಗುಜರಾತ್‍ನಲ್ಲಿ ಓಪಿಯಂ ಸೇರಿದಂತೆ ಕೆಲ ಮಾದಕ ವಸ್ತುಗಳನ್ನು ಕೃಷಿ ಚಟುವಟಿಕೆಗೆ ಮಾತ್ರ ಬಳಸಲು ಅಲ್ಲಿನ ಸರ್ಕಾರಗಳು ಅನುಮತಿ ನೀಡಿವೆ. ಇದನ್ನೇ ದುರ್ಬಳಕೆ ಮಾಡಿಕೊಂಡ ಆರೋಪಿಗಳು ವ್ಯವಸ್ಥಿತ ಜಾಲದ ಮುಖಾಂತರ ಡ್ರಗ್ಸ್‍ಗಳನ್ನು ನಗರಕ್ಕೆ ಆಮದು ಮಾಡಿಕೊಳ್ಳುತ್ತಿದ್ದ. ಇದಕ್ಕೆ ಮತ್ತೊಬ್ಬ ಆರೋಪಿ ಕೈ ಜೋಡಿಸಿದ್ದ.

    ದಂಧೆಯಲ್ಲಿ ಮುಳುಗಿದ್ದ ಆರೋಪಿಗಳು ರಾಜಸ್ಥಾನದಿಂದ ಬೆಂಗಳೂರಿಗೆ ಬರುವ ಗೂಡ್ಸ್ ವಾಹನಗಳ ಮುಖಾಂತರ ಡ್ರಗ್ಸ್‍ಗಳನ್ನು ನಗರಕ್ಕೆ ಸಾಗಾಟಕ್ಕೆ ಮಾಡುತ್ತಿದ್ದರು. ಯಾರಿಗೂ ಗುಮಾನಿ ಬರದಿರಲು ಪ್ಯಾಕಿಂಗ್ ಮಾಡಿದ ಡ್ರಗ್ಸ್ ಮೇಲೆ ಮಸಾಲ ಪದಾರ್ಥವಾದ ಚಕ್ಕೆಯನ್ನು ಪುಡಿ ಮಾಡಿ ಸಿಂಪಡಿಸುತ್ತಿದ್ದರು. ಇದರಿಂದ ಡ್ರಗ್ಸ್ ವಾಸನೆ ಬರುತ್ತಿರಲ್ಲ. ಅಲ್ಲದೆ ಈ ಬಗ್ಗೆ ಪೊಲೀಸರಿಗೆ ಗೊತ್ತಾಗುವುದಿಲ್ಲ ಎಂದು ಭಾವಿಸಿ ನಗರ ಅತ್ತಿಬೆಲೆ ಬಳಿ ಡ್ರಗ್ಸ್ ಪ್ಯಾಕೇಟ್‍ಗಳನ್ನು ಸ್ವೀಕರಿಸುತ್ತಿದ್ದರು. ಡ್ರಗ್ಸ್ ಅವ್ಯವಹಾರ ನಡೆಸುತ್ತಿದ್ದ ಪಪ್ಪುರಾಮ್ ನಗರದ ಹೊರ ವಲಯದಲ್ಲಿ ಪ್ರತ್ಯೇಕ ಮೂರು ಮನೆ ಮಾಡಿಕೊಂಡಿದ್ದ. ಅತ್ತಿಬೆಲೆಯಲ್ಲಿ ಈತನ ಕುಟುಂಬ ವಾಸ್ತವ್ಯ ಹೂಡಿದರೆ ಚಂದಾಪುರ ಬಳಿ ಡ್ರಗ್ಸ್ ಶೇಖರಿಸಲು ಪ್ರತ್ಯೇಕ ಮನೆ ಮಾಡಿದ್ದ.

    ಪಪ್ಪುರಾಮ್ ಸಹಚರ ಚುನ್ನಿಲಾಲ್ ಇಬ್ಬರು ಉಳಿದುಕೊಳ್ಳಲು ಮತ್ತೊಂದು ಮನೆ ಮಾಡಿಕೊಂಡಿದ್ದ. ಗಿರಿನಗರ, ಹನುಮಂತನಗರ ಹಾಗೂ ಸಿಟಿ ಮಾರ್ಕೆಟ್ ಸೇರಿದಂತೆ ವಿವಿಧ ಕಡೆ ಎಂಜಿನಿಯರಿಂಗ್ ವಿದ್ಯಾರ್ಥಿಗಳನ್ನು ಟಾರ್ಗೆಟ್ ಮಾಡಿ ಮಾರಾಟ ಜಾಲದಲ್ಲಿ ತೊಡಗಿಸಿಕೊಂಡಿದ್ದರು. ನಿರಂತರವಾಗಿ ಡ್ರಗ್ಸ್ ಮಾರಾಟ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದ ಆರೋಪಿಗಳು ಪೊಲೀಸರ ಭೀತಿಯಿಂದ ಮೂರು ತಿಂಗಳಿಗೊಮ್ಮೆ ಮನೆ ಬದಲಾವಣೆ ಜೊತೆಗೆ ಮೊಬೈಲ್ ಚೇಂಜ್ ಮಾಡುತ್ತಿದ್ದರು.

    ಪೊಲೀಸರು ಆರೋಪಿಗಳನ್ನು ಹಿಡಿಯಲು ಕಷ್ಟಸಾಧ್ಯವಾಗಿತ್ತು. ಅಲ್ಲದೆ ಹಳೆಯ ಹಾಗೂ ನಂಬಿಕಸ್ಥ ಗ್ರಾಹಕರನ್ನು ಹೊರತುಪಡಿಸಿದರೆ ಅಪರಿಚಿತರಿಗೆ ಮಾದಕ ವಸ್ತು ಮಾರಾಟ ಮಾಡುತ್ತಿರಲಿಲ್ಲ. ಕಳೆದ ಹತ್ತು ತಿಂಗಳಿಂದ ಆರೋಪಿಗಳ ಬೆನ್ನು ಬಿದ್ದಿದ್ದ ಇನ್ಸ್‌ಪೆಕ್ಟರ್‌ ಕುಮಾರಸ್ವಾಮಿ ನೇತೃತ್ವದ ತಂಡ ಆರೋಪಿಗಳ ಹಳೆ ಗ್ರಾಹಕನೊಬ್ಬನ ಮುಖಾಂತರ ಸಿಟಿ ಮಾರ್ಕೆಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಾರಾಟ ಮಾಡುವಾಗ ದಂಧೆಕೋರರು ಸಿಕ್ಕಿಬಿದ್ದಿದ್ದಾರೆ. ಪ್ರಮುಖ ಆರೋಪಿ ಪಪ್ಪುರಾಮ್ 2019ರಲ್ಲಿ ಡ್ರಗ್ಸ್ ಪ್ರಕರಣದಲ್ಲಿ ಹನುಮಂತನಗರ ಪೊಲೀಸರಿಂದ ಬಂಧನಕ್ಕೆ ಒಳಗಾಗಿ ಜೈಲು ಸೇರಿದ್ದ. ಜಾಮೀನನ ಮೇಲೆ ಹೊರಬಂದ ಮತ್ತೋರ್ವ ಆರೋಪಿ ಜೊತೆಗೂಡಿ ದಂಧೆಯಲ್ಲಿ ಭಾಗಿಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

  • ಹ್ಯಾಂಡ್ ಬ್ರೇಕ್ ಹಾಕದ್ದರಿಂದ ಕಾಲುವೆಗೆ ಬಿತ್ತು ಕಾರು – ನಾಲ್ವರ ಸಾವು

    ಹ್ಯಾಂಡ್ ಬ್ರೇಕ್ ಹಾಕದ್ದರಿಂದ ಕಾಲುವೆಗೆ ಬಿತ್ತು ಕಾರು – ನಾಲ್ವರ ಸಾವು

    ಜೈಪುರ: ಹ್ಯಾಂಡ್ ಬ್ರೇಕ್ ಹಾಕದ ಪರಿಣಾಮ ಕಾರೊಂದು ಕಾಲುವೆಗೆ ಮುಳುಗಿ ನಾಲ್ವರು ಮೃತಪಟ್ಟಿರುವ ಘಟನೆ ಬುಧವಾರ ರಾಜಸ್ಥಾನ ಹನುಮನ್‍ಗರ್ ಜಿಲ್ಲೆಯಲ್ಲಿ ನಡೆದಿದೆ.

    ಕಾರಿನಲ್ಲಿ ದಂಪತಿ ಸೇರಿದಂತೆ ಅವರ ಮಗಳು ಮತ್ತು ಸಂಬಂಧಿಕರು ಸಿಕಾರ್‍ನಿಂದ ರಾವತ್ಸರ್‍ಗೆ ತೆರಳುತ್ತಿದ್ದ ವೇಳೆ ಘಟನೆ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಮೃತಪಟ್ಟವರ ಕುಟುಂಬ ಸ್ನೇಹಿತ ರಮೇಶ್ ಕುಮಾರ್ ಎಂಬವರು ಕಾರು ಚಲಾಯಿಸುತ್ತಿದ್ದರು. ಈ ವೇಳೆ ರಸ್ತೆ ಮಧ್ಯೆ ಮೂತ್ರ ವಿಸರ್ಜನೆಗೆಂದು ಕಾರು ನಿಲ್ಲಿಸಿದ್ದಾರೆ. ಆದರೆ ಹ್ಯಾಂಡ್ ಬ್ರೇಕ್ ಹಾಕುವುದನ್ನು ಮರೆತು ಕಾರನ್ನು ಹಾಗೇ ಬಿಟ್ಟು ಹೋದ ಪರಿಣಾಮ ಕಾರು ಉರುಳಿ ಇಂದಿರಾಗಾಂಧಿ ಕಾಲುವೆಗೆ ಬಿದ್ದಿದೆ ಎಂದು ಹುಮನ್‍ಗರ್ ಪಟ್ಟಣದ ಪೊಲೀಸ್ ಠಾಣೆ ಇನ್‍ಚಾರ್ಜ್ ಲಕ್ಷ್ಮಣ್ ಸಿಂಗ್ ಹೇಳಿದ್ದಾರೆ.

    ಘಟನೆಯಲ್ಲಿ ಮೃತಪಟ್ಟವರನ್ನು ವಿನೋದ್ ಕುಮಾರ್(45), ಪತ್ನಿ ರೇಣು(42) ಹಾಗೂ 15 ವರ್ಷದ ಮಗಳು ಮತ್ತು ಅವರ ಸಂಬಂಧಿಕರಾದ ಸುನೀತ ಭತಿ(40) ಎಂದು ಪೊಲೀಸರು ಗುರುತಿಸಿದ್ದಾರೆ. ಇದೀಗ ಮೀನು ಹಿಡಿಯುವವರ ಸಹಾಯದಿಂದ ಮೃತಪಟ್ಟವರ ದೇಹವನ್ನು ಕಾಲುವೆಯಿಂದ ಹೊರತೆಗೆಯಲಾಗಿದ್ದು, ಮರಣೋತ್ತರ ಪರೀಕ್ಷೆ ನಂತರ ಶವಗಳನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

  • ಸಲಾಡ್ ವಾಸನೆ ಬರ್ತಿದೆ ಎಂದಿದ್ದಕ್ಕೆ ಗ್ರಾಹಕನ ತಲೆಗೆ ಹೊಡೆದ ಹೋಟೆಲ್ ಸಿಬ್ಬಂದಿ

    ಸಲಾಡ್ ವಾಸನೆ ಬರ್ತಿದೆ ಎಂದಿದ್ದಕ್ಕೆ ಗ್ರಾಹಕನ ತಲೆಗೆ ಹೊಡೆದ ಹೋಟೆಲ್ ಸಿಬ್ಬಂದಿ

    ಜೈಪುರ: ಹಳೆಯ ಸಲಾಡ್‍ನನ್ನು ಸರ್ವ್ ಮಾಡಿದ್ದೀರಾ ಎಂದು ಆರೋಪಿಸಿದ ಗ್ರಾಹಕನಿಗೆ ಹೋಟೆಲ್ ಮಾಲೀಕ ಮತ್ತು ಸಿಬ್ಬಂದಿ ತೀವ್ರವಾಗಿ ಹಲ್ಲೆ ನಡೆಸಿರುವ ಘಟನೆ ರಾಜಸ್ಥಾನದ ಜೋಧ್ ಪುರ್‍ನಲ್ಲಿ ನಡೆದಿದೆ.

    ಹಲ್ಲೆಗೊಳಗಾಗಿರುವ ವ್ಯಕ್ತಿಯನ್ನು ಮಹೇಂದ್ರ ಸಿಂಗ್ ಎಂದು ಗುರುತಿಸಲಾಗಿದೆ. ಈತ ತಡರಾತ್ರಿ ಹೋಟೆಲ್ ವೊಂದರಲ್ಲಿ ಸಲಾಡ್ ಆರ್ಡರ್ ಮಾಡಿದ್ದಾನೆ. ಅಂತೆಯೇ ಸರ್ವರ್ ಸಲಾಡ್ ತಂದುಕೊಟ್ಟಿದ್ದಾನೆ. ಆದರೆ ಅದು ವಾಸನೆ ಬಂದಿದೆ. ಹೀಗಾಗಿ ಸಿಂಗ್, ಸಿಬ್ಬಂದಿ ಹಳೆಯ ಸಲಾಡ್ ನೀಡಿದ್ದಾನೆ ಎಂದು ಹೋಟೆಲ್ ಮಾಲೀಕನಿಗೆ ಕಂಪ್ಲೇಟ್ ಮಾಡಿದ್ದಾರೆ. ಬಳಿಕ ಹೋಟೆಲ್‍ನಲ್ಲಿ ಕೆಲಸ ಮಾಡುವವರಿಗೆ ನಿಂದಿಸಲು ಆರಂಭಿಸಿದ್ದಾರೆ. ಈ ವಿಚಾರವಾಗಿ ಆತ ಮತ್ತು ಹೋಟೆಲ್ ಸಿಬ್ಬಂದಿ ನಡುವೆ ವಾದ-ವಿವಾದ ಆರಂಭವಾಗಿದೆ. ಕೊನೆಗೆ ಜಗಳ ವಿಕೋಪಕ್ಕೆ ತಿರುಗಿ ಹೋಟೆಲ್ ನೌಕರರು ಮಹೇಂದ್ರ ಸಿಂಗ್ ತಲೆಗೆ ಕೋಲಿನಿಂದ ಹಲ್ಲೆ ಮಾಡಿದ್ದಾರೆ.

    ಕೂಡಲೇ ಮಹೆಂದ್ರ ಸಿಂಗ್ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮಹಾಮಂದಿರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಮಹೇಂದ್ರ ಸಿಂಗ್ ಊಟ ಮಾಡಲು ಹೋಟೆಲ್ ಗೆ ತೆರಳಿದ್ದಾಗ ಹಳೆಯ ಸಲಾಡ್ ನೀಡಿದ್ದಕ್ಕೆ ದೂರು ನೀಡಿದ್ದಾರೆ. ಇದರಿಂದ ಕೋಪಗೊಂಡ ಹೋಟೆಲ್ ಸಿಬ್ಬಂದಿ ಶ್ರವಣ್ ಸಿಂಗ್ ಎಂಬಾತ ಕೆಟ್ಟ ರೀತಿಯಲ್ಲಿ ಮಹೇಂದ್ರ ಸಿಂಗ್‍ರನ್ನು ಹೊಡೆದಿದ್ದಾರೆ ಎಂದು ಆರೋಪಿಸಿದ್ದಾರೆ.

  • ದೇಶದ 7 ರಾಜ್ಯಗಳಲ್ಲಿ ಪಕ್ಷಿ ಜ್ವರ ದೃಢ – ಕೇಂದ್ರದಿಂದ ರಾಜ್ಯಗಳಿಗೆ ಸೂಚನೆ

    ದೇಶದ 7 ರಾಜ್ಯಗಳಲ್ಲಿ ಪಕ್ಷಿ ಜ್ವರ ದೃಢ – ಕೇಂದ್ರದಿಂದ ರಾಜ್ಯಗಳಿಗೆ ಸೂಚನೆ

    ನವದೆಹಲಿ: ಹರ್ಯಾಣ ಪಂಚಕುಲ ಜಿಲ್ಲೆಯ ಎರಡು ಕೋಳಿ ಸಾಕಾಣಿಕೆ ಕೇಂದ್ರಗಳಲ್ಲಿ ಪಕ್ಷಿ ಜ್ವರ ಬಂದಿರುವುದು ಖಚಿತಪಟ್ಟಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಸೋಂಕು ನಿಯಂತ್ರಣ ಮತ್ತು ತಡೆಗಟ್ಟುವ ಉದ್ದೇಶದಿಂದ 9 ತ್ವರಿತ ಪ್ರತಿಕ್ರಿಯಾ ತಂಡಗಳನ್ನು ನಿಯೋಜಿಸಿದೆ.

    ಗುಜರಾತ್‍ನ ಸೂರತ್ ಮತ್ತು ರಾಜಸ್ಥಾನದ ಸಿರೋಹಿ ಜಿಲ್ಲೆಗಳಲ್ಲಿ ಕಾಗೆ ಮತ್ತು ಕಾಡು ಹಕ್ಕಿಗಳ ಮಾದರಿಗಳಲ್ಲೂ ಸಹ ಪಕ್ಷಿಜ್ವರ (ಎಚ್-5) ಸೋಂಕು ಪತ್ತೆಯಾಗಿದೆ. ಈ ಎರಡೂ ರಾಜ್ಯಗಳಲ್ಲೂ ಸೋಂಕು ನಿಯಂತ್ರಣ ಕ್ರಮಗಳು ಪ್ರಗತಿಯಲ್ಲಿದೆ.

    ಹಿಮಾಚಲ ಪ್ರದೇಶದ ಕಂಗ್ರಾ ಜಿಲ್ಲೆಯಲ್ಲಿ 86 ಕಾಗೆಗಳು ಮತ್ತು ಎರಡು ಬಾತು ಕೋಳಿಗಳು ಕೂಡ ಅಸಹಜ ಸಾವಿಗೀಡಾಗಿವೆ. ನಹಾನ್, ಬಿಲಾಸ್ ಪುರ್ ಮತ್ತು ಮಂಡಿಯಲ್ಲಿ ಕಾಡು ಹಕ್ಕಿಗಳ ಅಸಹಜ ಸಾವು ಸಂಭವಿಸಿದೆ. ಇವುಗಳ ಮಾದರಿಗಳನ್ನು ಪರೀಕ್ಷೆಗಾಗಿ ನಿಯೋಜಿತ ಪ್ರಯೋಗಾಲಯಗಳಿಗೆ ಕಳುಹಿಸಲಾಗಿದೆ.

    ಸೋಂಕು ಮತ್ತಷ್ಟು ಹರಡುವುದನ್ನು ತಡೆಗಟ್ಟಲು ಬಾಧಿತ ರಾಜ್ಯಗಳಿಗೆ ಈಗಾಗಲೇ ಕೇಂದ್ರದಿಂದ ಸೂಚನೆಗಳನ್ನು ನೀಡಲಾಗಿದೆ. ಈ ವರೆಗೆ ಪಕ್ಷಿ ಜ್ವರದ ಸೋಂಕು ಏಳು ರಾಜ್ಯಗಳಾದ ಕೇರಳ, ರಾಜಸ್ಥಾನ, ಮಧ್ಯಪ್ರದೇಶ, ಹಿಮಾಚಲ ಪ್ರದೇಶ, ಹರಿಯಾಣ, ಗುಜರಾತ್ ಮತ್ತು ಉತ್ತರ ಪ್ರದೇಶಗಳಲ್ಲಿ ಖಚಿತಪಟ್ಟಿದೆ. ಪಕ್ಷಿಗಳ ಮಾದರಿಗಳ ಪರೀಕ್ಷಾ ವರದಿಗಳನ್ನು ದೆಹಲಿ ಮತ್ತು ಮಹಾರಾಷ್ಟ್ರದ ನಿಯೋಜಿತ ಪ್ರಯೋಗಾಲಯಗಳಿಗೆ ರವಾನಿಸಿದ್ದು, ವರದಿಯನ್ನು ನಿರೀಕ್ಷಿಸಲಾಗಿದೆ.

    ಚತ್ತೀಸ್‍ಗಡದ ಬಲೋದ್ ಜಿಲ್ಲೆಯಲ್ಲಿ ಕಾಡು ಹಕ್ಕಿಗಳ ಮಾದರಿಯಲ್ಲಿ ಯಾವುದೇ ಸೋಂಕು ದೃಢಪಟ್ಟಿಲ್ಲ. ಕೇರಳದಲ್ಲಿ ಪಕ್ಷಿ ಜ್ವರ ದೃಢಪಟ್ಟು ಬಾಧಿತವಾಗಿರುವ ಎರಡು ಜಿಲ್ಲೆಗಳಲ್ಲಿ ನಿಯಂತ್ರಣ ಮತ್ತು ತಡೆಗಟ್ಟುವ ಕಾರ್ಯ ಪೂರ್ಣಗೊಂಡಿದೆ ಮತ್ತು ಕೇರಳದಲ್ಲಿ ಕಾರ್ಯಾಚರಣೆಯ ನಂತರದ ಕಣ್ಗಾವಲು ಕಾರ್ಯಕ್ರಮದ ಮಾರ್ಗಸೂಚಿ ಹೊರಡಿಸಲಾಗಿದೆ.

    ದೇಶದಲ್ಲಿ ಪಕ್ಷಿ ಜ್ವರ ಬಾಧಿತ ಪ್ರದೇಶಗಳಲ್ಲಿ ಇರುವ ಪರಿಸ್ಥಿತಿ ಅವಲೋಕಿಸಲು ಕೇಂದ್ರ ತಂಡಗಳು ಸಮಸ್ಯೆ ಇರುವ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿವೆ. ಮತ್ತೊಂದೆಡೆ ಕೇಂದ್ರ ತಂಡಗಳು ಜನವರಿ 9 ರಂದು ಕೇರಳ ತಲುಪಿವೆ ಮತ್ತು ಸಂಕ್ರಾಮಿಕ ರೋಗ ಕಂಡು ಬಂದಿರುವ ಪ್ರದೇಶಗಳಲ್ಲಿ ಪರೀಕ್ಷಿಸುತ್ತಿದೆ. ಇನ್ನೊಂದು ಕೇಂದ್ರ ತಂಡ ಜನವರಿ 10 ರಂದು ಹಿಮಾಚಲ ಪ್ರದೇಶಕ್ಕೆ ತಲುಪಿದೆ ಮತ್ತು ಅಲ್ಲಿನ ರೋಗ ಬಾಧಿತ ಪ್ರದೇಶಗಳಲ್ಲಿ ಸಮೀಕ್ಷೆಯಲ್ಲಿ ನಿರತವಾಗಿದೆ.

    ಪಕ್ಷಿ ಜ್ವರದ ಬಗ್ಗೆ ತಪ್ಪು ಮಾಹಿತಿ ಹರಡದಂತೆ ನೋಡಿಕೊಳ್ಳಬೇಕು ಮತ್ತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು ಎಂದು ರಾಜ್ಯ ಸರ್ಕಾರಗಳಿಗೆ ಕೇಂದ್ರ ಸರ್ಕಾರ ಮನವಿ ಮಾಡಿದೆ. ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಜಲ ಮೂಲಗಳು, ಜೀವಂತ ಹಕ್ಕಿಗಳಿರುವ ಮಾರುಕಟ್ಟೆಗಳು, ಮೃಗಾಲಯ, ಕೋಳಿಸಾಕಾಣಿಕೆ ಕೇಂದ್ರಗಳು, ಮತ್ತಿತರ ಪ್ರದೇಶಗಳ ಆಸು ಪಾಸಿನಲ್ಲಿ ಕಣ್ಗಾವಲು ಹೆಚ್ಚಿಸಬೇಕು. ಕೋಳಿ ಸಾಕಾಣಿಕೆ ಕೇಂದ್ರಗಳಲ್ಲಿ ಸೂಕ್ತ ರೀತಿಯಲ್ಲಿ ವಿಲೇವಾರಿ ವ್ಯವಸ್ಥೆ ಮಾಡುವ ಜತೆಗೆ ಜೈವಿಕ ಸುರಕ್ಷತೆಯನ್ನು ಬಲಗೊಳಿಸಬೇಕೆಂದು ಕೇಂದ್ರ ಸರ್ಕಾರ ಎಲ್ಲಾ ರಾಜ್ಯ ಸರ್ಕಾರಗಳಿಗೆ ಸೂಚಿಸಿದೆ.