Tag: ರಾಜಶೇಖರ್

  • ನಾನು ತಪ್ಪೇ ಮಾಡಿಲ್ಲ, ಅಭಿಮಾನಿಗಳಿಗೆ ಮಾತ್ರ ಕ್ಷಮೆ ಕೇಳ್ತೀನಿ – ನಾಗಶೇಖರ್‌ ವಿರುದ್ಧ ರಚಿತಾ ಕಿಡಿ

    ನಾನು ತಪ್ಪೇ ಮಾಡಿಲ್ಲ, ಅಭಿಮಾನಿಗಳಿಗೆ ಮಾತ್ರ ಕ್ಷಮೆ ಕೇಳ್ತೀನಿ – ನಾಗಶೇಖರ್‌ ವಿರುದ್ಧ ರಚಿತಾ ಕಿಡಿ

    ಬೆಂಗಳೂರು: ತನ್ನ ವಿರುದ್ಧ ಕೇಳಿ ಬಂದ ಆರೋಪಗಳಿಗೆ ನಟಿ ರಚಿತಾ ರಾಮ್ ಮೌನ ಮುರಿದಿದ್ದು ಸಂಜು ವೆಡ್ಸ್‌ ಗೀತಾ 2 ನಿರ್ದೇಶಕ ರಾಜಶೇಖರ್‌ ಅವರದ್ದೇ ತಪ್ಪು ಎಂದು ಕಿಡಿಕಾರಿದ್ದಾರೆ.

    ಕಳೆದ ಮೂರು ದಿನಗಳಿಂದ ಬರುತ್ತಿರುವ ಆರೋಪಗಳಿಗೆ ರಚಿತಾ ರಾಮ್‌ ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋ ಅಪ್ಲೋಡ್‌ ಮಾಡುವ ಮೂಲಕ ಸ್ಪಷ್ಟನೆ ನೀಡಿದ್ದಾರೆ.

    ರಚಿತಾ ರಾಮ್‌ ಹೇಳಿದ್ದೇನು?
    ನಾಗಶೇಖರ್‌ ಈಗ ನನ್ನ ವಿರುದ್ಧ ಮಾಡುತ್ತಿರುವ ಎಲ್ಲಾ ಆರೋಪಗಳು ಸುಳ್ಳು. ಜನವರಿ 17 ರಂದು ಸಂಜು ವೆಡ್ಸ್‌ ಗೀತಾ 2 ಮೊದಲ ಬಾರಿ ಬಿಡುಗಡೆಯಾಗಿತ್ತು. ಮೊದಲ ಬಾರಿ ಸಿನಿಮಾ ಬಿಡುಗಡೆಯಾದಾಗ ನಾನು ಎಲ್ಲಾ ಪ್ರಚಾರಕ್ಕೆ ಹೋಗಿದ್ದೇನೆ. ಈ ಸಂದರ್ಭದಲ್ಲಿ ಇಡೀ ಸಿನಿಮಾ ತಂಡ ನನಗೆ ಮೆಚ್ಚುಗೆ ಸೂಚಿಸಿತ್ತು. ಈಗ ಯಾಕೆ ನನ್ನ ಅನುಪಸ್ಥಿತಿಯಲ್ಲಿ ಆ ರೀತಿ ಮಾತಾನಾಡುತ್ತಿದ್ದಾರೋ ಗೊತ್ತಿಲ್ಲ. ಇದನ್ನೂ ಓದಿ: ರಚಿತಾ ರಾಮ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ : ನಿರ್ದೇಶಕ ನಾಗಶೇಖರ್ ಒತ್ತಾಯ

    ಈಗ ನಾನು ಬೇರೊಂದು ಸಿನಿಮಾದಲ್ಲಿ ಅಭಿನಯಿಸುತ್ತಿದ್ದು ಅವರಿಗೆ ಡೇಟ್‌ ನೀಡಿದ್ದೇನೆ. ಈ ಸಂದರ್ಭದಲ್ಲಿ ಎರಡನೇ ಬಾರಿ ಸಿನಿಮಾ ರಿಲೀಸ್‌ ಆಗುತ್ತಿದ್ದು ಈಗ ಪ್ರಚಾರಕ್ಕೆ ಬರಬೇಕು ಎಂದು ಹೇಳಿದರೆ ಹೇಗೆ? ಇದೇ ಸಂಜು ವೆಡ್ಸ್ ಗೀತಾ ತಂಡ ಶೂಟಿಂಗ್ ಕಾರಣವೊಡ್ಡಿ ಬೇರೊಂದು ಸಿನಿಮಾ ಪ್ರಚಾರಕ್ಕೆ ಅವಕಾಶ ಮಾಡಿಕೊಡಲಿಲ್ಲ. ಆ ಸಿನಿಮಾವನ್ನು ಮಹಿಳಾ ನಿರ್ಮಾಪಕಿ ನಿರ್ಮಾಣ ಮಾಡಿದ್ದರು. ಅವರು ದುಡ್ಡು ಹಾಕಿರ್ಲಿಲ್ವಾ? ಅವಾಗ ಆ ನಿರ್ಮಾಪಕರಿಗೆ ಕಷ್ಟ ಆಗಿಲ್ವಾ?

     

    View this post on Instagram

     

    A post shared by R R (@rachita_instaofficial)

    ನಾನು ಪ್ರಚಾರಕ್ಕೆ ಹೋಗದೇ ಇದ್ರೂ ನಾನು ಸಾಮಾಜಿಕ ಜಾಲತಾಣದಲ್ಲಿ ಚಿತ್ರದ ಬಗ್ಗೆ ಪೋಸ್ಟ್‌, ಸ್ಟೋರಿ ಹಾಕಿದ್ದೇನೆ. ಈ ಹಿಂದೆ ಪ್ರಚಾರದ ಸಮಯದಲ್ಲಿ ಸರಿಯಾದ ಪ್ಲ್ಯಾನಿಂಗ್‌ ಮಾಡಿರಲಿಲ್ಲ. ಒಂದೊಂದು ದಿನ ಒಂದೊಂದು ಶೆಡ್ಯೂಲ್‌ ಹೇಳುತ್ತಿದ್ದರು. ಇಂದು ಕಾರ್ಯಕ್ರಮ ಎಂದು ಹೇಳಿ ಮುಂದೂಡುತ್ತಿದ್ದರು. ಹೀಗಾಗಿ ನನಗೆ ಎರಡನೇ ಬಾರಿ ಪ್ರಚಾರದಲ್ಲಿ ಭಾಗಿಯಾಗಲು ಸಾಧ್ಯವಾಗಿಲ್ಲ. ಇದೆಲ್ಲಾ ನನ್ನ ಮೇಲೆ ಉದ್ದೇಶಪೂರ್ವಕವಾಗಿಯೇ ಮಾಡಿರುವ ಆರೋಪ.

    ಇನ್ನೊಂದು ಸಿನಿಮಾದ ಅಡ್ವಾನ್ಸ್ ಪಡೆದು ವಾಪಸ್ ಮಾಡಿಲ್ಲ ಎಂಬ ಮತ್ತೊಂದು ಆರೋಪ ನನ್ನ ಮೇಲೆ ಬಂದಿದೆ. ಈ ಆರೋಪದ ಬಗ್ಗೆ ಸಾರಾ ಗೋವಿಂದು ಅವರ ನೇತೃತ್ವದಲ್ಲಿ ಮಾತುಕತೆ ನಡೆಯುತ್ತಿದೆ. ಅವರು ನನ್ನ ಬಳಿ ಈ ಬಗ್ಗೆ ಏನು ಮಾತನಾಡಬೇಡ ಎಂದು ಹೇಳಿದ್ದಾರೆ. ಹೀಗಾಗಿ ನಾನು ಈ ಆರೋಪದ ಬಗ್ಗೆ ಈಗ ಮಾತನಾಡುತ್ತಿಲ್ಲ. ಇದನ್ನೂ ಓದಿ: ಅಡ್ವಾನ್ಸ್‌ ಹಣ ವಾಪಸ್‌ ಕೊಡದ ಆರೋಪ – ರಚಿತಾ ರಾಮ್‌ ವಿರುದ್ಧ ಮತ್ತೊಂದು ದೂರು

    ನಾನು ಸಂಜು ವೆಡ್ಸ್‌ ಗೀತಾ 2 ಚಿತ್ರತಂಡದ ಜೊತೆ ಯಾವುದೇ ತಪ್ಪು ಮಾಡಿಲ್ಲ. ತಪ್ಪು ಮಾಡದೇ ಇರುವಾಗ ನಾನು ಯಾಕೆ ಕ್ಷಮೆ ಕೇಳಬೇಕು? ಈಗಾಗಲೇ ನಾನು ಈ ವಿಚಾರದ ಬಗ್ಗೆ ಅಭಿಮಾನಿಗಳಿಗೆ ಸ್ಪಷ್ಟನೆ ನೀಡಿದ್ದೇನೆ. ಈ ಎಲ್ಲಾ ವಿಚಾರ ತಿಳಿದುಕೊಂಡು ನಾನು ತಪ್ಪು ಮಾಡಿದ್ದೇನೆ ಎಂದು ಅಭಿಮಾನಿಗಳು ಭಾವಿಸಿದರೆ ಅಭಿಮಾನಿಗಳ ಜೊತೆ ಮಾತ್ರ ಕ್ಷಮೆ ಕೇಳುತ್ತೇನೆ ಹೊರತು ಬೇರೆ ಯಾರ ಬಳಿಯೂ ಕ್ಷಮೆ ಕೇಳುವುದಿಲ್ಲ ಎಂದು ರಚಿತಾ ರಾಮ್‌ ಹೇಳಿದ್ದಾರೆ.

  • ಹೋಳಿ ಹಬ್ಬಕ್ಕೆ ‘ಬ್ಯಾಕ್ ಬೆಂಚರ್ಸ್’ ಚಿತ್ರದ ಹಾಡು

    ಹೋಳಿ ಹಬ್ಬಕ್ಕೆ ‘ಬ್ಯಾಕ್ ಬೆಂಚರ್ಸ್’ ಚಿತ್ರದ ಹಾಡು

    ಪಿ.ಪಿ.ಪ್ರೊಡಕ್ಷನ್ಸ್ ಲಾಂಛನದಲ್ಲಿ ರಮ್ಯ ಅವರು ನಿರ್ಮಿಸಿರುವ, ಬಿ.ಆರ್ ರಾಜಶೇಖರ್ (Rajashekhar) ನಿರ್ದೇಶನದಲ್ಲಿ ನೂತನ ಪ್ರತಿಭೆಗಳ ನಟಿಸಿರುವ ‘ಬ್ಯಾಕ್ ಬೆಂಚರ್ಸ್’ (Back Benchers) ಚಿತ್ರದಿಂದ ಹೋಳಿ ಹಬ್ಬಕ್ಕಾಗಿ ಸುಮಧುರ ಹಾಡೊಂದು (Song) ಬಿಡುಗಡೆಯಾಗಿದೆ. ಹೃದಯಶಿವ ಅವರು ಬರೆದಿರುವ ಈ ಹಾಡನ್ನು ಭಾರತದ ಹೆಸರಾಂತ ಗಾಯಕ ಶಂಕರ್ ಮಹದೇವನ್ ಹಾಡಿದ್ದಾರೆ. ನಕುಲ್ ಅಭಯಂಕರ್ ಸಂಗೀತ ನೀಡಿದ್ದಾರೆ. ಹೋಳಿಹಬ್ಬದ ಸಂದರ್ಭದಲ್ಲಿ ಬಿಡುಗಡೆಯಾಗಿರುವ ಈ ಹಾಡಿಗೆ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ.

    ಬ್ಯಾಕ್ ಬೆಂಚರ್ಸ್ ಚಿತ್ರ ನಮ್ಮ ಕಾಲೇಜು ದಿನಗಳನ್ನು ನೆನಪಿಸುತ್ತದೆ. ಈ ಚಿತ್ರದಲ್ಲಿ ಬಹುತೇಕ ಹೊಸಪ್ರತಿಭೆಗಳು ಅಭಿನಯಿಸಿದ್ದಾರೆ.‌ ಆಡಿಷನ್ ಮೂಲಕ ಆಯ್ಕೆಯಾದ ಈ ಕಲಾವಿದರಿಗೆ ಸುಮಾರು ಒಂದು ವರ್ಷಗಳ ಕಾಲ ವರ್ಕ್ ಶಾಪ್ ನಡೆಸಿ ಆನಂತರ ಚಿತ್ರೀಕರಣ ಮಾಡಲಾಗಿದೆ. ಚಿತ್ರ ತೆರೆಗೆ ಬರಲು ಸಿದ್ದವಾಗಿದೆ. ಸದ್ಯದಲ್ಲೇ ಚಿತ್ರ ತೆರೆಗೆ ಬರಲಿದೆ ಎಂದು ನಿರ್ದೇಶಕ ಬಿ.ಆರ್ ರಾಜಶೇಖರ್ ತಿಳಿಸಿದ್ದಾರೆ.

    ಮನೊಹರ್ ಜೋಶಿ ಅವರ ಛಾಯಾಗ್ರಹಣವಿರುವ ಈ ಚಿತ್ರದ ತಾರಾಬಳಗದಲ್ಲಿ ರಂಜನ್ ನರಸಿಂಹಮೂರ್ತಿ, ಜಿತಿನ್ ಆರ್ಯನ್, ಆಕಾಶ್, ಶಶಾಂಕ್ ಸಿಂಹ, ಸುಚೇಂದ್ರ ಪ್ರಸಾದ್, ಅರವಿಂದ್ ಕುಪ್ಳಿಕರ್, ಮಾನ್ಯ ಗೌಡ, ಕುಂಕುಮ್, ಅನುಷ ಸುರೇಶ್ ಮುಂತಾದವರಿದ್ದಾರೆ.

  • ನಟ ರಾಜಶೇಖರ್ ಮತ್ತು ಪತ್ನಿಗೆ 1 ವರ್ಷ ಜೈಲು ಶಿಕ್ಷೆ ಪ್ರಕಟ: ಏನಿದು ಪ್ರಕರಣ?

    ನಟ ರಾಜಶೇಖರ್ ಮತ್ತು ಪತ್ನಿಗೆ 1 ವರ್ಷ ಜೈಲು ಶಿಕ್ಷೆ ಪ್ರಕಟ: ಏನಿದು ಪ್ರಕರಣ?

    ತೆಲುಗಿನ ಹೆಸರಾಂತ ನಟ ರಾಜಶೇಖರ್ (Rajasekhar) ಮತ್ತು ಅವರ ಪತ್ನಿ ಜೀವಿತಾಗೆ (Jeevita) ನಾಂಪಲ್ಲಿ ಕೋರ್ಟ್ ನ ಮುಖ್ಯ ಮ್ಯಾಜಿಸ್ಟ್ರೇಟ್ ಒಂದು ವರ್ಷ ಜೈಲು ಶಿಕ್ಷೆ (Jail sentence) ಮತ್ತು ಐದು ಲಕ್ಷ ರೂಪಾಯಿ ನೀಡುವಂತೆ ಆದೇಶ ಹೊರಡಿಸಿದ್ದಾರೆ. ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿದ ಪ್ರಕರಣ ಇದಾಗಿದ್ದು, ರಾಜಶೇಖರ್ ಮತ್ತು ಪತ್ನಿ ಜೀವಿತಾ ಮಾಡಿರುವ ಆರೋಪ ಸುಳ್ಳು ಎಂದು ಸಾಬೀತಾಗಿದೆ.

    2011ರಲ್ಲಿ ನಟ ರಾಜಶೇಖರ್ ಮತ್ತು ಅವರ ಪತ್ನಿ ಒಟ್ಟಾಗಿ ಚಿರಂಜೀವಿ (Chiranjeevi) ಬ್ಲಡ್ ಬ್ಯಾಂಕ್ ನಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿದ್ದರು. ಇಲ್ಲಿಗೆ ಬರುವ ರಕ್ತವನ್ನು ಅಕ್ರಮವಾಗಿ ಮಾರಾಟ ಮಾಡಲಾಗುತ್ತಿದೆ ಎಂದು ಬಹಿರಂಗವಾಗಿ ಹೇಳಿಕೊಂಡಿದ್ದರು. ಈ ಕುರಿತು  ಚಿರಂಜೀವಿ ಅವರ ಭಾವ ಅಲ್ಲು ಅರವಿಂದ್ (Allu Arvind) ಕೋರ್ಟ್ ನಲ್ಲಿ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು. ಇದನ್ನೂ ಓದಿ:ಸರ್ಕಾರದಿಂದ ವೆಬ್ ಸೀರೀಸ್ ಪ್ರಶಸ್ತಿ ಘೋಷಿಸಿದ ಸಚಿವ ಅನುರಾಗ್ ಠಾಕೂರ್

    ನಟ ಚಿರಂಜೀವಿ ಕಂಡರೆ ನಟ ರಾಜಶೇಖರ್ ಅವರಿಗೆ ಆಗುವುದಿಲ್ಲ. ಕಾರಣ ಸಿಕ್ಕಾಗೆಲ್ಲ ಚಿರಂಜೀವಿಯನ್ನು ಟೀಕಿಸುತ್ತಲೇ ಇರುತ್ತಾರೆ ರಾಜಶೇಖರ್. ಇದಕ್ಕೆ ವೃತ್ತಿ ವೈಷಮ್ಯ ಕೂಡ ಕಾರಣ ಎಂದು ಹೇಳಲಾಗುತ್ತಿದೆ. ತೆಲುಗು ಚಿತ್ರೋದ್ಯಮದ ಕಲಾವಿದರ ಸಂಘದಲ್ಲೂ ಈ ಇಬ್ಬರೂ ಬಹಿರಂಗವಾಗಿ ಕಿತ್ತಾಡಿಕೊಂಡಿದ್ದರು.

     

    ಅದರ ಮುಂದುವರೆಕೆಗಾಗಿ ಚಿರಂಜೀವಿ ಹೆಸರಿನ ಬ್ಲಡ್ ಬ್ಯಾಂಕ್ ನಲ್ಲಿ ರಕ್ತವನ್ನು ಅಕ್ರಮವಾಗಿ ಮಾರಾಟ ಮಾಡಲಾಗುತ್ತಿದೆ ಎಂದಿದ್ದರು ರಾಜಶೇಖರ್. ಈ ಮಾತಿನ ವಿರುದ್ದ ಅಲ್ಲು ಅರವಿಂದ್ ದೂರು ನೀಡಿದ್ದರು. ನಿನ್ನೆ ತೀರ್ಪು ಹೊರಬಂದಿದೆ. ಕೂಡಲೇ ದಂಪತಿ ಜಾಮೀನು ಪಡೆದುಕೊಂಡು ಹೊರ ಬಂದಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕೋಮಲ್ ನಟನೆಯ ‘ಉಂಡೆನಾಮ’ ಚಿತ್ರದ ಟ್ರೈಲರ್ ರಿಲೀಸ್ ಮಾಡಿದ ಜಗ್ಗೇಶ್

    ಕೋಮಲ್ ನಟನೆಯ ‘ಉಂಡೆನಾಮ’ ಚಿತ್ರದ ಟ್ರೈಲರ್ ರಿಲೀಸ್ ಮಾಡಿದ ಜಗ್ಗೇಶ್

    ಹಳ ವರ್ಷಗಳ ನಂತರ ಕೋಮಲ್ ಕುಮಾರ್ (Komal) ನಾಯಕರಾಗಿ ನಟಿಸಿರುವ ‘ಉಂಡೆನಾಮ’ (Undenaama) ಚಿತ್ರದ ಟ್ರೇಲರ್  (Trailer)ಇತ್ತೀಚೆಗೆ ಬಿಡುಗಡೆಯಾಯಿತು. ನವರಸ ನಾಯಕ ಜಗ್ಗೇಶ್ (Jaggesh) ಟ್ರೇಲರ್ ಬಿಡುಗಡೆ ಮಾಡಿದರು. ಕರ್ನಾಟಕ ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷರಾದ ಉಮೇಶ್ ಬಣಕಾರ್ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.

    ಟ್ರೇಲರ್ ಚೆನ್ನಾಗಿದೆ. ನನ್ನ ತಮ್ಮ ಕೋಮಲ್ , ಬಹಳವರ್ಷಗಳ ನಂತರ ನಟಿಸಿರುವ ಚಿತ್ರವಿದು. “ಕೋಮಲ್ ಕಾಮಿಡಿ ಪಾತ್ರಗಳನ್ನು ನೋಡಿದಾಗ, ಎಷ್ಟೋ ಸಲ ನಾನು ಅಂದುಕೊಂಡಿದ್ದೀನಿ ಇವನ ಹಾಗೆ ನಾನು ಕಾಮಿಡಿ ಕಲಿಯಬೇಕು” ಅಂತ. ಅಷ್ಟು ಉತ್ತಮ ಕಲಾವಿದ ಕೋಮಲ್. ನಿರ್ದೇಶಕರು ಲಾಕ್ ಡೌನ್ ಸನ್ನಿವೇಶವನ್ನಿಟ್ಟುಕೊಂಡು ಹಾಸ್ಯ ಚಿತ್ರ ಮಾಡಿದ್ದಾರೆ. ನಿರ್ಮಾಪಕರು ಸೇರಿದಂತೆ ಇಡೀ ತಂಡಕ್ಕೆ ಒಳ್ಳೆಯದಾಗಲಿ. ಚಿತ್ರ ಯಶಸ್ವಿಯಾಗಲಿ ಎಂದು ಜಗ್ಗೇಶ್ ಹಾರೈಸಿದರು.

    ಬಹಳ ದಿನಗಳ ನಂತರ ಈ ಚಿತ್ರದಲ್ಲಿ ಅಭಿನಯಿಸಿದ್ದೇನೆ. ನಿರ್ದೇಶಕ ರಾಜಶೇಖರ್ ಅವರು ಹೇಳಿದ ಕಥೆ ಇಷ್ಟವಾಯಿತು. ನನ್ನ ಜೊತೆ ನಟಿಸಿರುವ ತಬಲನಾಣಿ, ಹರೀಶ್ ರಾಜ್ ಸೇರಿದಂತೆ ಎಲ್ಲಾ ಕಲಾವಿದರ ಅಭಿನಯ ಚೆನ್ನಾಗಿದೆ. ನೋಡಿ ಹಾರೈಸಿ ಎಂದರು ನಾಯಕ ಕೋಮಲ್ ಕುಮಾರ್. ಇದನ್ನೂ ಓದಿ: ಕರಣ್ ಜೋಹಾರ್ ವಿರುದ್ಧ ಮತ್ತೆ ಕೆಂಡಕಾರಿದ ಕಂಗನಾ ರಣಾವತ್

    ಮೊದಲ ಲಾಕ್ ಡೌನ್ ನಲ್ಲಿ ಕಥೆ ಬರೆದೆ. ಆನಂತರ ನಿರ್ಮಾಪಕ ನಂದಕಿಶೋರ್ ಅವರ ಬಳಿ ಕಥೆ ಹೇಳಿದಾಗ, ಅವರು ಈ ಚಿತ್ರವನ್ನು ಕೋಮಲ್ ಅವರು ಮಾಡಬೇಕು ಎಂದರು. ನಾನು ಕೋಮಲ್ ಅವರಿಗಾಗಿಯೇ ಈ ಕಥೆ ಮಾಡಿದೆ. ಆದರೆ ಅವರು ನಟಿಸಲು ಒಪ್ಪುತ್ತಾರೊ? ಇಲ್ಲವೊ? ಎಂಬ ಆತಂಕವಿತ್ತು. ಕಥೆ ಕೇಳಿದ ಕೋಮಲ್ ಅವರು, ಈ ಕಥೆ ಚೆನ್ನಾಗಿದೆ. ನಾನಲ್ಲ. ಯಾರು ಮಾಡಿದರೂ ಈ ಚಿತ್ರ ಯಶಸ್ವಿಯಾಗುತ್ತದೆ ಎಂದರು. ಅದು ಅವರ ದೊಡ್ಡ ಗುಣ. ಸಹಕಾರ ನೀಡಿದ ನಿರ್ಮಾಪಕರಿಗೆ, ತಂತ್ರಜ್ಞರಿಗೆ ಹಾಗೂ ಕಲಾವಿದರಿಗೆ ನನ್ನ ಅಭಿನಂದನೆ ಎಂದರು ನಿರ್ದೇಶಕ ಕೆ.ಎಲ್ ರಾಜಶೇಖರ್.

    ಟ್ರೇಲರ್ ಬಿಡುಗಡೆ ಮಾಡಿಕೊಟ್ಟ ಜಗ್ಗೇಶ್ ಅವರಿಗೆ ಧನ್ಯವಾದ. ಇಡೀ ತಂಡದ ಶ್ರಮದಿಂದ ‘ಉಂಡೆನಾಮ’ ಚಿತ್ರ ಚೆನ್ನಾಗಿ ಬಂದಿದೆ. ನೋಡಿ ಪ್ರೋತ್ಸಾಹಿಸಿ ಎಂದರು ನಿರ್ಮಾಪಕರಾದ ಟಿ.ಆರ್ ಚಂದ್ರಶೇಖರ್ ಹಾಗೂ ಸಿ.ನಂದಕಿಶೋರ್. ಚಿತ್ರದಲ್ಲಿ ನಟಿಸಿರುವ ಹರೀಶ್ ರಾಜ್, ತಬಲನಾಣಿ, ಅಪೂರ್ವ ಹಾಗೂ ಸಂಗೀತ ನಿರ್ದೇಶಕ ಶ್ರೀಧರ್ ವಿ ಸಂಭ್ರಮ್ ಚಿತ್ರದ ಕುರಿತು ಮಾತನಾಡಿದರು.

  • ಬೇಲೂರು ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ರಾಜಶೇಖರ ಪರ ಮಠಾಧೀಶರ ಲಾಬಿ

    ಬೇಲೂರು ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ರಾಜಶೇಖರ ಪರ ಮಠಾಧೀಶರ ಲಾಬಿ

    ನವದೆಹಲಿ: ಹಾಸನದ (Hassan) ಬೇಲೂರು (Belur) ವಿಧಾನಸಭಾ ಕ್ಷೇತ್ರದಲ್ಲಿ ರಾಜಶೇಖರ್ (S.H.Rajshekar) ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಬೇಕು ಎಂದು ಲಿಂಗಾಯತ ಸ್ವಾಮೀಜಿಗಳು ಲಾಬಿ ಆರಂಭಿಸಿದ್ದಾರೆ. ದೆಹಲಿಯಲ್ಲಿ (New Delhi) ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಸೇರಿದಂತೆ ಹಲವು ಪ್ರಮುಖ ನಾಯಕರನ್ನು ಭೇಟಿ ಮಾಡಿರುವ ಸ್ವಾಮೀಜಿಗಳ ನಿಯೋಗ ರಾಜಶೇಖರ್ ಪರ ಬ್ಯಾಟಿಂಗ್ ಮಾಡಿದ್ದಾರೆ.

    ನಿಯೋಗದಲ್ಲಿ ವಿಶ್ವಧರ್ಮ ಮಠ ಜಯಬಸವಾನಂದ ಸ್ವಾಮೀಜಿ ನೇತೃತ್ವದಲ್ಲಿ ಹಾಸನದ ವಿವಿಧ ತಾಲೂಕುಗಳ ವೀರಶೈವ ಲಿಂಗಾಯತ ಸ್ವಾಮೀಗಳು, ಬೌದ್ಧ ಬಿಕ್ಕು ಭಂತೆ ಭೋದಿ ಪ್ರಗ್ಯಾನಂದ, ಮುಸ್ಲಿಂ‌ ಸಮುದಾಯದ ಸೋಯೇಲ್ ಭಾಗಿಯಾಗಿದ್ದರು. ಇದನ್ನೂ ಓದಿ: 4ನೇ ಬಾರಿ ಗೆಲ್ತಾರಾ ಸುಧಾಕರ್‌? – ಬ್ರೇಕ್ ಹಾಕಲು ಜೆಡಿಎಸ್, ಕಾಂಗ್ರೆಸ್ ಪೈಪೋಟಿ

    ಕಾಂಗ್ರೆಸ್ ನಾಯಕರ ಭೇಟಿ ಬಳಿಕ ಮಾತನಾಡಿದ ವಿಶ್ವಧರ್ಮ ಮಠ ಜಯಬಸವಾನಂದ ಸ್ವಾಮಿಗಳು, ಹಾಸನದಲ್ಲಿ ಲಿಂಗಾಯತ ಸಮುದಾಯ ಮತದಾರರು ಹೆಚ್ಚಿದ್ದಾರೆ. ಬೇಲೂರು ಕ್ಷೇತ್ರದಲ್ಲಿ ರಾಜಶೇಖರ್ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಗೆಲ್ಲುವ ಭರವಸೆ ಮೂಡಿಸಿದ್ದಾರೆ. ಸರ್ವಧರ್ಮದ ಜನರನ್ನು ಸಮಾನ ರೀತಿಯಲ್ಲಿ ಕೊಂಡೊಯ್ಯುತ್ತಾರೆ. ರಾಜಶೇಖರ್ ಅವರಿಗೆ ಟಿಕೆಟ್ ನೀಡುವಂತೆ ಮನವಿ ಮಾಡಿದ್ದೇವೆ. ಲಿಂಗಾಯತರಿಗೆ ಅವಕಾಶ ನೀಡಿದರೆ ಹಾಸನದ ಎಲ್ಲಾ ಕ್ಷೇತ್ರಗಳಲ್ಲೂ ಪರಿಣಾಮ ಬೀರಲಿದೆ ಎಂದು ಹೇಳಿದರು‌.

    ಬೌದ್ಧ ಬಿಕ್ಕು ಭಂತೆ ಭೋದಿ ಪ್ರಗ್ಯಾನಂದ ಮಾತನಾಡಿ, ಎರಡು ಬಾರಿ ಬಿಜೆಪಿಗೆ ಮತ ಚಲಾಯಿಸಿದೆ. ಮಠ-ಮಾನ್ಯಗಳಿಗೆ ಸರಿಯಾದ ರಾಜಾಶ್ರಯ ಸಿಗುತ್ತಿಲ್ಲ. ಹೀಗಾಗಿ ವ್ಯವಸ್ಥೆ ಬದಲಾಗಬೇಕಿದೆ. ರಾಜಶೇಖರ್ ಸಾಕಷ್ಟು ಕೆಲಸ ಮಾಡಿದ್ದಾರೆ. ನಮಗೂ ಸಾಕಷ್ಟು ದಾನ ನೀಡಿದ್ದಾರೆ. ಅವರ ಪರವಾಗಿ ಜನಾಭಿಪ್ರಾಯ ಇದೆ. ಹೀಗಾಗಿ ಕಾಂಗ್ರೆಸ್ ಅವರನ್ನು ಪರಿಗಣಿಸಬೇಕು ಎಂದರು. ಇದನ್ನೂ ಓದಿ: ಮೋದಿಯನ್ನು ಪ್ರಕರಣದಲ್ಲಿ ಸಿಲುಕಿಸುವಂತೆ ನನ್ನ ಮೇಲೆ ಸಿಬಿಐ ಒತ್ತಡ ಹೇರಿತ್ತು: ಅಮಿತ್ ಶಾ

    ಮುಸ್ಲಿಂ‌ ಸಮುದಾಯದ ಸೋಯೇಲ್ ಮಾತನಾಡಿ, ನಾವು ರಾಜಶೇಖರ್ ಅವರಿಗೆ ಟಿಕೆಟ್ ಕೇಳಲು ಬಂದಿದ್ದು ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿಯಾಗಿ ಮನವಿ ಮಾಡಿದ್ದೇವೆ. ಅವರು ಪರಿಶೀಲಿಸಿ ನಿರ್ಧಾರ ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ. ಅವರಿಗೆ ಟಿಕೆಟ್ ಸಿಗಬಹುದು ಎನ್ನುವ ನಿರೀಕ್ಷೆಯಲ್ಲಿದ್ದೇವೆ ಎಂದು ತಿಳಿಸಿದರು.

  • ‘ಉಂಡೆನಾಮ’ ಹಾಕೋಕೆ ಬರ್ತಿದ್ದಾರೆ ನಟ ಕೋಮಲ್

    ‘ಉಂಡೆನಾಮ’ ಹಾಕೋಕೆ ಬರ್ತಿದ್ದಾರೆ ನಟ ಕೋಮಲ್

    ಕೋಮಲ್ (Komal) ಮತ್ತೆ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟ ಬೆನ್ನಲ್ಲೇ ಈಗಾಗಲೇ ಎರಡು ಚಿತ್ರಗಳು ಮುಹೂರ್ತವಾಗಿ ಚಿತ್ರೀಕರಣ ಆರಂಭಿಸಿವೆ. ಮತ್ತೊಂದು ಸಿನಿಮಾ ‘ಉಂಡೆನಾಮ’ ರಿಲೀಸ್ ಗೆ ರೆಡಿಯಾಗಿದೆ. ಖ್ಯಾತ ಸಂಭಾಷಣೆಗಾರ, ರಾಬರ್ಟ್ ಖ್ಯಾತಿಯ ರಾಜಶೇಖರ್ (Rajasekhar) ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದು, ಪಕ್ಕಾ ಕಾಮಿಡಿ ಚಿತ್ರ ಇದಾಗಿದೆ.

    ತುಂಬಾ ದಿನಗಳ ನಂತರ ನಗುವಿನ ಕಚುಗುಳಿ ಇಡುವುದಕ್ಕೆ ನಟ ಕೋಮಲ್ ಕುಮಾರ್ ಉಂಡೆನಾಮ (Undenaama) ಹಾಕ್ಕೊಂಡು ಬರ್ತಾ ಇದಾರೆ. ಈ ಚಿತ್ರದ ಶೀರ್ಷಿಕೆ ಯನ್ನು ಸ್ಯಾಂಡಲ್ ವುಡ್ ನ ಸೆಲೆಬ್ರಿಟಿಗಳು ಚಿತ್ರದ ಶೀರ್ಷಿಕೆ ಹೇಳುವುದರ ಮುಖಾಂತರ ವಿನೂತನವಾಗಿ ಅನಾವರಣ ಮಾಡಿದ್ದಾರೆ. ಇದನ್ನೂ ಓದಿ: ರಜನಿಕಾಂತ್ ಪುತ್ರಿ ಮನೆಯಲ್ಲಿ ಕಳ್ಳತನ: ಅಪಾರ ಚಿನ್ನಾಭರಣ ದೋಚಿದ ಕಳ್ಳರು

    ಹೆಸರಿನಲ್ಲೇ ಹಾಸ್ಯ ಹೊಂದಿರುವ ಉಂಡೆನಾಮ ಸಿನಿಮಾ ಮುಂದಿನ ತಿಂಗಳು ರಾಜ್ಯಾದ್ಯಂತ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ. ಮುಖ್ಯ ಭೂಮಿಕೆಯಲ್ಲಿ ಕೋಮಲ್ ಅವರ ಜೊತೆ ಹರೀಶ್ ರಾಜ್ (Harish Raj) , ಧನ್ಯ ಬಾಲಕೃಷ್ಣ (Dhanya Balakrishna), ತಬಲಾನಾಣಿ, ಅಪೂರ್ವ, ವೈಷ್ಣವಿ, ತನಿಷ ಕುಪ್ಪಂಡ, ಬ್ಯಾಕ್ ಜನಾರ್ಧನ್ ಸೇರಿದಂತೆ ಹಲವು ಕಲಾವಿದರು ತಾರಾಗಣದಲ್ಲಿ ಇದ್ದಾರೆ.

    ಈ ಚಿತ್ರವು ಎನ್.ಕೆ. ಸ್ಟುಡಿಯೋಸ್ ನ ಅಡಿಯಲ್ಲಿ ಸಿ.ನಂದ ಕಿಶೋರ್ ಅವರು ನಿರ್ಮಿಸಿದ್ದಾರೆ. ಮಜಾಟಾಕೀಸ್, ರಾಬರ್ಟ, ಖ್ಯಾತಿಯ ಸಂಭಾಷಾಣೆಗಾರ ಕೆ.ಎಲ್.ರಾಜಶೇಖರ್ ಈ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ಶ್ರೀಧರ್ ಸಂಭ್ರಮ ಅವರ ಸಂಗೀತ, ನವೀನ್ ಕುಮಾರ್ ಛಾಯಾಗ್ರಾಹಣ ಹಾಗೂ ಕೆ.ಎಮ್.ಪ್ರಕಾಶ್ ಸಂಕಲನದಲ್ಲಿ ಚಿತ್ರ ಮೂಡಿ ಬಂದಿದೆ.

  • ‘ಕಾಂತಾರ’ ವೀಕ್ಷಿಸಿ, ಆಚೆ ಬರುತ್ತಿದ್ದ ವ್ಯಕ್ತಿ ಹೃದಯಾಘಾತದಿಂದ ನಿಧನ

    ‘ಕಾಂತಾರ’ ವೀಕ್ಷಿಸಿ, ಆಚೆ ಬರುತ್ತಿದ್ದ ವ್ಯಕ್ತಿ ಹೃದಯಾಘಾತದಿಂದ ನಿಧನ

    ಕಾಂತಾರ (Kantara) ಸಿನಿಮಾ ವೀಕ್ಷಿಸಿ, ಚಿತ್ರಮಂದಿರದಿಂದ (Theater) ಹೊರಗೆ ಬರುತ್ತಿದ್ದ ವ್ಯಕ್ತಿಯೊಬ್ಬ ಹೃದಯಾಘಾತದಿಂದ ನಿಧನರಾದ ಘಟನೆ ಮಂಡ್ಯ (Mandya) ಜಿಲ್ಲೆ ನಾಗಮಂಗಲದ ವೆಂಕಟೇಶ್ವರ ಚಿತ್ರಮಂದಿರದಲ್ಲಿ ನಡೆದಿದೆ. ನಾಗಮಂಗಲ ತಾಲ್ಲೂಕಿನ ಸಾರೆಮೇಗಲಕೊಪ್ಪ ನಿವಾಸಿ, ರಾಜಶೇಖರ್ (Rajashekhar ಕಾಂತಾರ ಸಿನಿಮಾ ವೀಕ್ಷಿಸಲು ವೆಂಕಟೇಶ್ವರ ಚಿತ್ರಮಂದಿರಕ್ಕೆ ಆಗಮಿಸಿದ್ದರು.

    ಖುಷಿಯಾಗಿಯೇ ಕಾಂತಾರ ಸಿನಿಮಾವನ್ನು ವೀಕ್ಷಿಸಿದ್ದ 45ರ ವಯಸ್ಸಿನ ರಾಜಶೇಖರ್, ಥಿಯೇಟರ್ ನಿಂದ ಆಚೆ ಬರುವಾಗ ಎದೆನೋವು ಕಾಣಿಸಿಕೊಂಡಿದೆ. ಅಲ್ಲಿಯೇ ಕುಸಿದು ಕೂತಿದ್ದಾರೆ. ತೀವ್ರ ಹೃದಯಾಘಾತವಾಗಿ (Heart Attack) ನಿಧನರಾಗಿದ್ದಾರೆ (Death) ಎನ್ನಲಾಗುತ್ತಿದೆ. ಈ ಕುರಿತಂತೆ ನಾಗಮಂಗಲ (Nagamangala) ಪಟ್ಟಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ:ದೇಶ-ವಿದೇಶದಲ್ಲಿ ಮಾರ್ದನಿಸ್ತಿರೋ ಗಗ್ಗರ ಶಬ್ಧ- ಅಮೆರಿಕಾದಲ್ಲಿ ಎಂಟೂವರೆ ಕೋಟಿ ಬಾಚಿದ ಕಾಂತಾರ

    ರಾಜಶೇಖರ್ ಸಾವಿನ ಸುದ್ದಿ ತಿಳಿಯುತ್ತಿದ್ದಂತೆಯೇ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ. ಖುಷಿಯಿಂದಲೇ ಸಿನಿಮಾ ನೋಡಲು ಹೋಗಿದ್ದ ಕುಟುಂಬದ ಸದಸ್ಯನನ್ನು ಈ ರೀತಿ ಕಳೆದುಕೊಳ್ಳುತ್ತೇವೆ ಎಂದು ಅಂದುಕೊಂಡಿರಲಿಲ್ಲ ಎಂದು ಸದಸ್ಯರು ಗೋಳಾಡುತ್ತಿದ್ದ ಸನ್ನಿವೇಶ, ಹೃದಯ ಹಿಂಡುವಂತಿತ್ತು.

    Live Tv
    [brid partner=56869869 player=32851 video=960834 autoplay=true]

  • ಸ್ಟಾರ್ ಹೀರೋಗಳ ನಡುವೆ ಬಹಿರಂಗ ವಾರ್- ಚಿರಂಜೀವಿಗೆ ಗರುಡವೇಗದಲ್ಲಿ ರಾಜಶೇಖರ್ ಸವಾಲ್

    ಸ್ಟಾರ್ ಹೀರೋಗಳ ನಡುವೆ ಬಹಿರಂಗ ವಾರ್- ಚಿರಂಜೀವಿಗೆ ಗರುಡವೇಗದಲ್ಲಿ ರಾಜಶೇಖರ್ ಸವಾಲ್

    ಹೈದರಾಬಾದ್: ಇಷ್ಟು ದಿನ ತೆಲುಗು ನಟರ ನಡುವೆ ಸಾಮರಸ್ಯವಿದೆ. ಆಂತರಿಕವಾಗಿ ಯಾವುದೇ ಭಿನ್ನಾಭಿಪ್ರಾಯಗಳು ಇದ್ದರೂ, ಅದನ್ನು ತೋರ್ಪಡಿಸಿಕೊಳ್ಳದೇ ಎಲ್ಲರೂ ಕಾರ್ಯಕ್ರಮದಲ್ಲಿ ಭಾಗಿಯಾಗಿ ನಕ್ಕು ನಲಿಯುತ್ತಾರೆ ಎಂಬ ಮಾತಿತ್ತು. ಆದರೆ ಅದು ಈಗ ಸುಳ್ಳಾಗಿದೆ. ಮೂವಿ ಆರ್ಟಿಸ್ಟ್ ಅಸೋಸಿಯೇಷನ್(ಮಾ)ನ ಡೈರಿ ರಿಲೀಸ್ ಕಾರ್ಯಕ್ರಮದಲ್ಲಿ ಸ್ಟಾರ್ ನಟರ ನಡುವಿನ ಅಂತರ್ಯುದ್ಧ ಬೀದಿಗೆ ಬಂದಿದೆ.

    ಟಾಲಿವುಡ್‍ನ ಮೆಗಾ ಸ್ಟಾರ್ ಚಿರಂಜೀವಿ ಮತ್ತು ನಾಯಕ ನಟ ರಾಜಶೇಖರ್ ನಡುವೆ ನೇರಾನೇರ ಕಿತ್ತಾಟ ನಡೆದಿದೆ. ನಾನಾ ನೀನಾ ಎನ್ನುವಷ್ಟರ ಮಟ್ಟಿಗೆ ಜೋರಾಗಿ ಗಲಾಟೆ ಆಗಿದೆ. ‘ಮಾ’ ಸಂಸ್ಥೆಯ ಡೈರಿ ರಿಲೀಸ್ ಕಾರ್ಯಕ್ರಮದಲ್ಲಿ ಹಿರಿಯ ನಟ ಮತ್ತು ಸ್ಕ್ರಿಪ್ಟ್ ರೈಟರ್ ಪರಚೂರಿ ಗೋಪಾಲಕೃಷ್ಣ ಮಾತನಾಡುವ ವೇಳೆ ವೇದಿಕೆ ಹತ್ತಿದ ‘ಮಾ’ ಉಪಾಧ್ಯಕ್ಷ ರಾಜಶೇಖರ್ ಬಲವಂತವಾಗಿ ಮೈಕ್ ಕಿತ್ತುಕೊಂಡರು. ಫಿಲಂ ಸ್ಟೈಲಲ್ಲಿ ವೇದಿಕೆ ಮೇಲೆ ಕುಳಿತಿದ್ದ ಮೆಗಾ ಸ್ಟಾರ್ ಚಿರಂಜೀವಿ, ಡೈಲಾಗ್ ಕಿಂಗ್ ಮೋಹನ್ ಬಾಬು, ರೆಬೆಲ್ ಸ್ಟಾರ್ ಕೃಷ್ಣಂರಾಜು ಕಾಲಿಗೆ ನಮಸ್ಕರಿಸಿದರು.

    ‘ಮಾ’ನಲ್ಲಿ ಎಲ್ಲವೂ ಸರಿ ಇಲ್ಲ. ಗಲಾಟೆಗಳು ನಡೆಯುತ್ತಿವೆ. ಓಪನ್ ಆಗಿ ಮಾತನಾಡಲು ಯಾರಿಗೂ ಅವಕಾಶವೇ ಕೊಡುತ್ತಿಲ್ಲ. ಎಲ್ಲರೂ ಜೊತೆ ಜೊತೆಯಲ್ಲೇ ನಡೆಯಬೇಕೆಂದು ಮೆಗಾ ಸ್ಟಾರ್ ಚಿರಂಜೀವಿ ಅವರು ಹೇಳುತ್ತಾರೆ. ಆದರೆ, ಕೆಂಡವನ್ನು ಮುಚ್ಚಿಟ್ಟರೆ ಏನಾಗುತ್ತೆ? ಹೊಗೆ ಬಾರದೇ ಇರುತ್ತಾ ಎಂದು ರಾಜಶೇಖರ್ ಪ್ರಶ್ನೆ ಮಾಡಿ, ತಮ್ಮ ಅಸಮಾಧಾನ ಹೊರ ಹಾಕಿದರು.

    ಈ ವೇಳೆ ಮಧ್ಯೆ ಮಾತನಾಡಲು ಚಿರಂಜೀವಿ ಪ್ರಯತ್ನ ಮಾಡಿದರೂ, ನಟ ರಾಜಶೇಖರ್ ಅವಕಾಶ ಕೊಡಲಿಲ್ಲ. ಮತ್ತೋರ್ವ ಹಿರಿಯ ನಟ ಮೋಹನ್ ಬಾಬು, ಮಾತು ನಿಲ್ಲಿಸಿ ಎಂದರೂ ನಟ ರಾಜಶೇಖರ್ ಸುಮ್ಮನಾಗಲಿಲ್ಲ. ಕಳೆದ ಮಾರ್ಚ್ ನಲ್ಲಿ ‘ಮಾ’ ಸಂಸ್ಥೆಗೆ ಹೊಸ ಆಡಳಿತ ಮಂಡಳಿ ರಚನೆ ಆದ ಕ್ಷಣದಿಂದ ನನಗೆ ಒಂದೇ ಒಂದು ಸಿನಿಮಾ ಮಾಡಲು ಆಗಿಲ್ಲ. ಇತ್ತೀಚೆಗೆ ನನ್ನ ಆಡಿ ಕಾರು ಅಪಘಾತಕ್ಕೂ ಇದೇ ಕಾರಣ. ನಿತ್ಯ ನನ್ನ ಮನೆಯಲ್ಲಿ ಗಲಾಟೆಗಳು ನಡೆಯುತ್ತಿವೆ. `ಮಾ’ಗಾಗಿ ಯಾಕೆ ಅಷ್ಟೊಂದು ದುಡಿಯುತ್ತಿದ್ದೀಯಾ..? ಅಂತ ಬೈಯ್ತಿದ್ದಾರೆ. ರಿಯಲ್ ಲೈಫ್‍ನಲ್ಲಿಯೂ ಹೀರೋ ಆಗಿ ಕೆಲಸ ಮಾಡುತ್ತಿರುವ ತಮ್ಮನ್ನು ತುಳಿಯಲಾಗುತ್ತಿದೆ ಎಂದು ಎಲ್ಲರ ಮುಂದೆಯೇ ನೇರವಾಗಿ ವಾಗ್ದಾಳಿ ನಡೆಸಿದರು. ಈ ಮೂಲಕ ಚಿರಂಜೀವಿಗೆ ನೇರವಾಗಿ ಡಿಚ್ಚಿಕೊಟ್ಟರು.

    ಇದರಿಂದ ಚಿರಂಜೀವಿ ತೀವ್ರ ಮುಜುಗರಕ್ಕೆ ಒಳಗಾದರು. ಆದರೂ ಸಾವರಿಸಿಕೊಂಡು ಮಾತನಾಡಿದ ಮೆಗಾಸ್ಟಾರ್ ಚಿರಂಜೀವಿ, ನನ್ನ ಮಾತಿಗೆ ಯಾರು ಬೆಲೆ ಕೊಡುತ್ತಿಲ್ಲ. ನಮ್ಮ ಮಾತಿಗೆ, ತಮ್ಮ ಹಿರಿತನಕ್ಕೆ ಬೆಲೆ ಇಲ್ಲ ಎಂದರೇ ನಾವೇಕೆ ಇಲ್ಲಿ ಇರಬೇಕು. ಸಭೆಗೆ ಗೌರವ ಕೊಡದೇ ರಾಜಶೇಖರ್ ಮೈಕ್ ಎಳೆದುಕೊಂಡು ಮಾತನಾಡಿದ್ದು ಸರಿಯಲ್ಲ. ಈಗಲೂ ನಾವು ಸ್ಪಂದಿಸದಿದ್ದರೆ ನಮ್ಮ ಹಿರಿತನಕ್ಕೆ ಬೆಲೆ ಇರಲ್ಲ. ರಾಜಶೇಖರ್ ವಿರುದ್ಧ ‘ಮಾ’ ಶಿಸ್ತು ಸಮಿತಿ ಕ್ರಮ ಕೈಗೊಳ್ಳಲೇಬೇಕು ಎಂದು ಚಿರಂಜೀವಿ ಆಗ್ರಹಿಸಿದರು.

    ಈ ಬೆನ್ನಲ್ಲೇ ರಾಜಶೇಖರ್ ಕಾರ್ಯಕ್ರಮ ಸ್ಥಳದಿಂದ ನಿರ್ಗಮಿಸಿದರು. ಕೊನೆಗೆ ಮಾ ಉಪಾಧ್ಯಕ್ಷ ಸ್ಥಾನಕ್ಕೂ ರಾಜೀನಾಮೆ ನೀಡಿದರು. ತಮಗೆ ಚಿರಂಜೀವಿ ಮೇಲೆ ಕೋಪ ಇಲ್ಲ. ಅಧ್ಯಕ್ಷ ನರೇಶ್ ಕಾರ್ಯವೈಖರಿ ಬಗ್ಗೆ ಅಸಮಾಧಾನ ಇದೆ ಎಂದು ಟ್ವೀಟ್ ಮಾಡಿದ ರಾಜಶೇಖರ್, ಚಿರಂಜೀವಿ ಅವರಲ್ಲಿ ಕ್ಷಮೆ ಕೂಡ ಕೇಳಿದರು. ಆದರೆ ಅಷ್ಟೊತ್ತಿಗೆ ಆಗಬೇಕಾದ ಡ್ಯಾಮೇಜ್ ಆಗಿ ಹೋಗಿತ್ತು. ಟಾಲಿವುಡ್‍ನಲ್ಲಿ ಎಲ್ಲವೂ ಸರಿಯಿಲ್ಲ ಅನ್ನೋದು ಬಟಾಬಯಲಾಯ್ತು.

  • ಸರ್ಕಾರಿ ಹುದ್ದೆಗೆ ಗುಡ್‍ಬೈ, ಪ್ರಕೃತಿ ಮಾತೆಗೆ ಜೈ ಅಂದ್ರು ಕೋಲಾರದ ರಾಜಶೇಖರ್

    ಸರ್ಕಾರಿ ಹುದ್ದೆಗೆ ಗುಡ್‍ಬೈ, ಪ್ರಕೃತಿ ಮಾತೆಗೆ ಜೈ ಅಂದ್ರು ಕೋಲಾರದ ರಾಜಶೇಖರ್

    ಕೋಲಾರ: ಕೈ ಕೆಸರಾದರೆ ಬಾಯಿ ಮೊಸರು. ಈ ಗಾದೆಗೆ ಇಂದಿನ ಪಬ್ಲಿಕ್ ಹೀರೋ ಕೋಲಾರದ ರಾಜಶೇಖರ್ ಅವರು ನಿದರ್ಶನವಾಗಿದ್ದಾರೆ. ರ‍್ಯಾಂಕ್ ಪಡೆದ ಎಂಜಿನಿಯರ್ ಪದವೀಧರರಾಗಿದ್ದರೂ, ಆರೋಗ್ಯ ಕೈಕೊಟ್ಟಿತ್ತು. ಆದರೆ, ಭೂಮಾತೆಯನ್ನು ನಂಬಿದ ರಾಜಶೇಖರ್‍ಗೆ ಆರೋಗ್ಯ-ಐಶ್ವರ್ಯ ಎಲ್ಲವೂ ಸಿಕ್ಕಿದೆ.

    ಹೌದು. ಕೋಲಾರದ ಚಾಮರಹಳ್ಳಿಯ ರಾಜಶೇಖರ್ ಅವರು ತಮ್ಮ 40 ಎಕರೆಯಲ್ಲಿ ಮರಗಳನ್ನು ಬೆಳೆದಿದ್ದಾರೆ. ಸಾರಿಗೆ ಇಲಾಖೆಯಲ್ಲಿ 19 ವರ್ಷ ಸೇವೆ ಸಲ್ಲಿಸಿದ್ದ ರಾಜಶೇಖರ್ ಅವರಿಗೆ ಹಲವು ಬಗೆಯ ಕಾಯಿಲೆಗಳು ಬಾಧಿಸುತ್ತಿದ್ದವು. ಇದರಿಂದ ನೊಂದು ಜೀವನವೇ ಬೇಡ ಅಂತಿದ್ದವರು, ಸ್ನೇಹಿತರ ಮಾತಿನಂತೆ ನಿಸರ್ಗ ಜೀವನ ನಡೆಸಿ ಈಗ ಆರೋಗ್ಯಯುತರಾಗಿದ್ದಾರೆ. ತಮ್ಮ ಜಮೀನಿನಲ್ಲಿ ಮಾವು, ಬೇವು, ಹಲಸು, ಸೀತಾಫಲ, ಸಪೋಟ, ಸೀಬೆ, ನೇರಳೆ, ನೆಲ್ಲಿಕಾಯಿ ಸೇರಿದಂತೆ ಅರಳಿ ಹೀಗೆ ಹತ್ತಾರು ಬಗೆಯ ಔಷಧೀಯ ಹಾಗೂ ಅಪರೂಪದ ಸುಮಾರು 4,500ಕ್ಕೂ ಹೆಚ್ಚು ಮರಗಳನ್ನು ಬೆಳೆಸಿದ್ದಾರೆ.

    ಜಿಲ್ಲೆಯಲ್ಲಿ ಸಾವಿರ ಅಡಿಗೂ ನೀರು ಸಿಗದ ಹೊತ್ತಲ್ಲಿ ತಮ್ಮ ಜಮೀನಿನಲ್ಲಿ ಮಳೆ ಕೊಯ್ಲು, ಹಿಂಗುಗುಂಡಿ, ಕೃಷಿ ಹೊಂಡಗಳ ಮೂಲಕ ಕೇವಲ 350 ಅಡಿಗೇ ನೀರು ಸಿಗುವಂತೆ ಅಂತರ್ಜಲ ಮಟ್ಟ ಏರಿಸಿದ್ದಾರೆ. ಹನಿ ನೀರಾವರಿ, ಇಂಗು-ಗುಂಡಿಗಳ ಮೂಲಕ ತೇವಾಂಶ ಕಾಯ್ದುಕೊಳ್ಳುವಂತೆ ಮಾಡಿ, ಸಾವಿರಾರು ಸಸಿಗಳನ್ನು ಕಾಪಾಡಿಕೊಂಡಿದ್ದಾರೆ. ಜೈವಿಕ ಆಹಾರ ಮತ್ತು ಆರೋಗ್ಯ ಕೇಂದ್ರವನ್ನಾಗಿ ಮಾರ್ಪಡಿಸಿದ್ದಾರೆ ಎಂದು ರಾಜಶೇಖರ್ ಸ್ನೇಹಿತ ಪದ್ಮನಾಭ್ ಹೇಳುತ್ತಾರೆ.

    ಒಳ್ಳೆಯ ಗಾಳಿ, ನೀರು, ಸೇರಿದಂತೆ ಔಷಧೀಯ ಗಿಡಗಳಿಂದ ಆರೋಗ್ಯದ ಜೊತೆಗೆ ಲಕ್ಷಾಂತರ ರೂಪಾಯಿ ಲಾಭವನ್ನೂ ಪಡೆಯುತ್ತಿದ್ದಾರೆ.

  • ಪರದೇಸಿ ಕೇರಾಫ್ ಲಂಡನ್: ಮಾಸ್ ಲುಕ್ಕಿನಲ್ಲಿ ಲಕಲಕಿಸಿದ್ದಾರೆ ವಿಜಯ್ ರಾಘವೇಂದ್ರ!

    ಪರದೇಸಿ ಕೇರಾಫ್ ಲಂಡನ್: ಮಾಸ್ ಲುಕ್ಕಿನಲ್ಲಿ ಲಕಲಕಿಸಿದ್ದಾರೆ ವಿಜಯ್ ರಾಘವೇಂದ್ರ!

    ಬೆಂಗಳೂರು: ವಿಜಯ್ ರಾಘವೇಂದ್ರ ಎಂಥಾ ಪಾತ್ರಕ್ಕಾದರೂ ಒಗ್ಗಿಕೊಂಡು ಜೀವ ತುಂಬೋ ಅಪರೂಪದ ನಟ. ಅವರ ನಟನಾ ಚಾತುರ್ಯಕ್ಕೆ ಸಾಣೆ ಹಿಡಿಯುವಂಥಾ ನವೀನ ಕಥೆಯೊಂದರ ಮೂಲಕ ನಿರ್ದೇಶಕ ರಾಜಶೇಖರ್ ಪರದೇಸಿ ಕೇರಾಫ್ ಲಂಡನ್ ಚಿತ್ರವನ್ನು ರೂಪಿಸಿದ್ದಾರೆ. ಈ ಚಿತ್ರ ಈ ವಾರವೇ ರಾಜ್ಯಾದ್ಯಂತ ತೆರೆ ಕಾಣಲಿದೆ.

    ರಾಜಶೇಖರ್ ಅವರು ಆರಂಭದಿಂದಲೇ ಈ ಚಿತ್ರದಲ್ಲಿ ಈ ಹಿಂದೆ ಎಂದೂ ಕಾಣದಿರೋ ವಿಜಯ್ ರಾಘವೇಂದ್ರರನ್ನು ಕಾಣಲಿದ್ದೀರೆಂಬ ಸೂಚನೆ ನೀಡಿದ್ದರು. ಪರದೇಸಿ ಕೇರಾಫ್ ಲಂಡನ್ನಿನ ಮೇಕಿಂಗ್ ನುದ್ದಕ್ಕೂ ಅದಕ್ಕೆ ಪೂರಕವಾದ ಮಾಹಿತಿಗಳೇ ಹೊರ ಬಿದ್ದಿದ್ದವು. ಈವತ್ತಿಗೆ ಈ ಚಿತ್ರದ ಬಗ್ಗೆ ಇಂಥಾದ್ದೊಂದು ಕ್ಯೂರಿಯಾಸಿಟಿ ನಿಗಿ ನಿಗಿಸುತ್ತಿದೆಯೆಂದರೆ ಅದಕ್ಕೆ ಅಂಥಾ ವಿಚಾರಗಳೇ ಕಾರಣ.

     

    ಹೆಸರಲ್ಲಿಯೇ ಪರದೇಸಿ ಅಂತಿದ್ದರೂ ಈ ಚಿತ್ರದ್ದು ಅಪ್ಪಟ ದೇಸೀ ಕಥೆ. ಈ ಶೀರ್ಷಿಕೆಯಲ್ಲಿಯೇ ಪ್ರೇಕ್ಷಕರಿಗೆ ಸರ್‍ಪ್ರೈಸೊಂದು ಕಾದಿದೆ. ಇನ್ನುಳಿದಂತೆ ಇವತ್ತಿನ ಕಾಲಮಾನಕ್ಕೆ ಒಗ್ಗುವಂಥಾ ಅಪರೂಪದ ಕಥೆಯೊಂದನ್ನು ಈ ಚಿತ್ರ ಹೊಂದಿದೆ. ವಿಜಯ್ ರಾಘವೇಂದ್ರ ಪಕ್ಕಾ ಮಾಸ್ ಸನ್ನಿವೇಶಗಳಲ್ಲಿಯೂ ಮಿಂಚಿದ್ದಾರೆ. ಅದುವೇ ಒಟ್ಟಾರೆ ಚಿತ್ರದ ಆಕರ್ಷಣೆಗಳಲ್ಲೊಂದಾಗಿರೋದು ಸುಳ್ಳಲ್ಲ. ಸ್ನೇಹಾ ಮತ್ತು ಪೂಜಾ ನಾಯಕಿಯರಾಗಿ ವಿಶಿಷ್ಟವಾದ ಪಾತ್ರಗಳಿಗೆ ಜೀವ ತುಂಬಿದ್ದಾರೆ.

    ಪರದೇಸಿ ಕೇರಾಫ್ ಲಂಡನ್ ಚಿತ್ರದ ಬಗ್ಗೆ ಪ್ರೇಕ್ಷಕರು ಹಲವಾರು ಪ್ರಶ್ನೆಗಳು ಮತ್ತು ಭರಪೂರವಾದ ಕುತೂಹಲದಿಂದ ಕಾಯುತ್ತಿದ್ದಾರೆ. ಇದೇ ಶುಕ್ರವಾರ ಅದೆಲ್ಲದಕ್ಕೂ ಅಂತಿಮ ಉತ್ತರ ಸಿಗಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv