ತುಮಕೂರು: ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ದೇವೇಗೌಡರ ಸೋಲಿನ ಬಳಿಕ ತುಮಕೂರು ಜಿಲ್ಲೆಯ ಮೈತ್ರಿ ಮುಖಂಡರ ಕಲಹ ಅತಿರೇಕಕ್ಕೆ ತಲುಪುತ್ತಿದೆ.
ಕಾಂಗ್ರೆಸ್ ಮಾಜಿ ಶಾಸಕ ಕೆ.ಎನ್ ರಾಜಣ್ಣ ಹಾಗೂ ತುಮಕೂರು ಗ್ರಾಮಾಂತರ ಜೆಡಿಎಸ್ ಶಾಸಕ ಗೌರಿಶಂಕರ್ ರ ನಡುವಿನ ಕಿತ್ತಾಟ ಜೋರಾಗಿದೆ. ಗ್ರಾಮಾಂತರದಲ್ಲಿ ಬಿಜೆಪಿ ಲೀಡ್ ಬರಲು ರಾಜಣ್ಣರ ಕುತಂತ್ರವೇ ಕಾರಣ ಎಂದು ಶಾಸಕ ಗೌರಿಶಂಕರ್ ಆರೋಪಿಸಿದರು. ಅಲ್ಲದೆ ರಾಜಣ್ಣರೇ ಈಗಾಗಲೇ ನೀವು ಸೇರಿದ್ದು, ಮತ್ತೇ ಮತ್ತೇ ನಿಮ್ಮನ್ನ ಮಧುಗಿರಿ ಕ್ಷೇತ್ರದಿಂದ ಸೋಲಿಸುವ ತಾಕತ್ತು ನಮಗಿದೆ ಎಂದು ಗೌರಿಶಂಕರ್ ಸವಾಲು ಹಾಕಿದರು.
ಈ ಹಿನ್ನೆಲೆಯಲ್ಲಿ ಗೌರಿಶಂಕರ್ ಮಧುಗಿರಿ ದಂಡಿನ ಮಾರಮ್ಮಗೆ ಪೂಜೆ ಸಲ್ಲಿಸುವ ನೆಪದಲ್ಲಿ ಮಧುಗಿರಿಗೆ ಎಂಟ್ರಿ ಕೊಟ್ಟಿದ್ದಾರೆ. ರಾಜಣ್ಣರನ್ನ ಮುಂದಿನ ಚುನಾವಣೆಯಲ್ಲಿ ಮತ್ತೆ ಸೋಲಿಸಲು ಈಗಿನಿಂದಲೇ ರಣತಂತ್ರ ರೂಪಿಸುತ್ತಿದ್ದಾರೆ.
ನೂರಾರು ಜನ ಬೆಂಬಲಿಗರು, ಸಾವಿರಾರು ಜನ ಕಾರ್ಯಕರ್ತರೊಂದಿಗೆ ಮಧುಗಿರಿಗೆ ಭೇಟಿ ಕೊಟ್ಟು ಶಾಸಕ ಗೌರಿ ಶಂಕರ್ ಶಕ್ತಿಪ್ರದರ್ಶನ ಮಾಡಿದ್ದಾರೆ. ಗೌರಿಶಂಕರ್ ಅವರ ಈ ನಡೆ ಮತ್ತಷ್ಟು ರಾಜಕೀಯ ಬೆಳವಣಿಗೆಗೆ ಕಾರಣವಾಗಲಿದೆ.
ಚಿಕ್ಕಮಗಳೂರು: ಜಿಲ್ಲಾ ನಾಯಕರಿಗೆ ಕೋಟಿ-ಕೋಟಿ ಕೊಟ್ಟು ಸೆಟ್ಲ್ ಮಾಡಿದ್ದಾರಂದರೆ, ರಾಜ್ಯ ಮಟ್ಟದ ನಾಯಕರಿಗೆ ಇನ್ನು ಹೆಚ್ಚಾಗಿ ಕೊಟ್ಟಿರಬಹುದು. ಈ ಬಗ್ಗೆ ಸಮಗ್ರ ತನಿಖೆಯಾಗಬೇಕೆಂದು ಶಾಸಕ ಸಿ.ಟಿ ರವಿ ಆಗ್ರಹಿಸಿದ್ದಾರೆ.
ನಾಮಪತ್ರ ಹಿಂಪಡೆಯಲು ರಾಜಣ್ಣ ಹಾಗೂ ಮುದ್ದುಹನುಮೇಗೌಡ ಮೂರುವರೆ ಕೋಟಿ ಹಣ ಪಡೆದಿದ್ದಾರೆಂಬ ಆಡಿಯೋ ವೈರಲ್‍ಗೆ ಪ್ರತಿಕ್ರಿಯೆ ನೀಡಿದ ಅವರು, ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಸ್ಪರ್ಧಿಸಿರುವ ಕ್ಷೇತ್ರದಲ್ಲಿ ಈ ಪ್ರಮಾಣದಲ್ಲಿ ಹಣದ ಅವ್ಯವಹಾರ ನಡೆಯುತ್ತದೆ ಅಂದರೆ, ಪಾರದರ್ಶಕ ಚುನಾವಣೆ ಎಲ್ಲಿ ನಡೆದಿದೆ ಎಂದು ಮೈತ್ರಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಯಾರು ಯಾರು ಯಾವಯಾವ ಹೇಳಿಕೆಗಳನ್ನು ಕೊಡೋದಕ್ಕೆ ಎಷ್ಟೆಷ್ಟು ಹಣ ಪಡೆದಿದ್ದಾರೆ ಅನ್ನೋದು ಹೊರಬರಬೇಕಿದೆ. ದೇವೇಗೌಡರು ಜಾತಿ, ಹಣ ಹಾಗೂ ಅಧಿಕಾರದ ಬಲದ ಮೇಲೆ ಎಲ್ಲವನ್ನೂ ಮ್ಯಾನೇಜ್ ಮಾಡಬಹುದು ಎಂದು ಹೊರಟಿದ್ದಾರೆಂಬುದು ಇದರಿಂದ ಸ್ಪಷ್ಟವಾಗುತ್ತದೆ ಎಂದು ಹೇಳಿದರು.
ಹಾಸನ, ತುಮಕೂರು, ಮಂಡ್ಯ ಸೇರಿ ಬೇರೆ ಕಡೆಯೂ ದೊಡ್ಡ ಪ್ರಮಾಣದ ಹಣದ ವ್ಯವಹಾರ ನಡೆದಿದೆ ಅನ್ನಿಸುತ್ತದೆ. ರಾಜ್ಯ ಸಮ್ಮಿಶ್ರ ಸರ್ಕಾರ ವಿಶ್ವಾಸ ಹಾಗೂ ಅಜೆಂಡಾ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿಲ್ಲ. ಹಣ ಮತ್ತು ಅಧಿಕಾರದ ದುರ್ಬಳಕೆಗೆ ಕಾರ್ಯನಿರ್ವಹಿಸುತ್ತಿದೆ ಅನ್ನೋದು ಕಾಂಗ್ರೆಸ್‍ನ ಸೋಶಿಯಲ್ ಮಿಡಿಯಾ ಇನ್‍ಚಾರ್ಜ್ ಮಾತನಾಡಿರುವ ಮಾತಿನಿಂದ ವ್ಯಕ್ತವಾಗ್ತಿದೆ ಎಂದರು.
ಈ ಆಡಿಯೋ ಸಂಬಂಧ ಸಮಗ್ರ ತನಿಖೆಯಾಗಿ ಹಣ ಎಲ್ಲಿಂದ ಬಂತು, ಯಾರ್ಯಾರು ತೆಗೆದುಕೊಂಡರು, ಕೊಟ್ಟೋರು ಯಾರು ಅನ್ನೋದು ಸಮಗ್ರ ತನಿಕೆಯಾಗಬೇಕು. ಕಾಂಗ್ರೆಸ್‍ನೊಳಗೆ ವಿಚಾರಿಸುತ್ತೇನೆ. ನೋಡುತ್ತೇನೆ, ನೋಟಿಸ್ ಕೊಡುತ್ತೇನೆ ಅನ್ನೋದಕ್ಕೆ ಇದು ಕಾಂಗ್ರೆಸ್‍ನೊಳಗಿನದ್ದಲ್ಲ. ಪ್ರಜಾಪ್ರಭುತ್ವವನ್ನ ಕಗ್ಗೊಲೆ ಮಾಡುವಂತ ಕೃತ್ಯ ಇದಾಗಿದೆ. ಹೀಗಾಗಿ ಈ ಬಗ್ಗೆ ರಾಜ್ಯದ ಜನಕ್ಕೆ ಉತ್ತರಿಸಬೇಕಾಗಿದೆ. ಹಣ ಕೊಡೋದು ತೆಗೆದುಕೊಳ್ಳೋದು ಎರಡೂ ಲಂಚದ ವ್ಯಾಪ್ತಿಯಲ್ಲಿ ಬರುತ್ತದೆ. ಆ ಇಬ್ಬರ ಮೇಲೂ ಲಂಚ ನಿಗ್ರಹ ಕಾಯ್ದೆ ಮೂಲಕ ಕ್ರಮ ಕೈಗೊಳ್ಳಬೇಕು ಎಂದು ಶಾಸಕರು ಇದೇ ವೇಳೆ ಆಗ್ರಹಿಸಿದರು.
ತಮ್ಮ ನಾಮಪತ್ರವನ್ನು ರಾಜಣ್ಣ ಅವರೇ ವಾಪಸ್ ಪಡೆದುಕೊಂಡರೆ ಮುದ್ದಹನುಮೇಗೌಡ ಪರವಾಗಿ ಏಜೆಂಟ್ ರಾಯಸಂದ್ರ ರವಿಕುಮಾರ್ ಆಗಮಿಸಿ ನಾಮಪತ್ರವನ್ನು ವಾಪಸ್ ಪಡೆದುಕೊಂಡರು.
ಇಬ್ಬರು ನಾಮಪತ್ರವನ್ನು ಹಿಂಪಡೆದ ಪರಿಣಾಮ ತುಮಕೂರಿನಲ್ಲಿ ಬಂಡಾಯ ಶಮನವಾಗಿದ್ದು, ಮಾಜಿ ಪ್ರಧಾನಿ ದೇವೇಗೌಡರ ಹಾದಿ ಸುಗಮಕ್ಕೆ ರಾಜ್ಯ ನಾಯಕರು ನಡೆಸಿದ ತಂತ್ರ ಯಶಸ್ವಿಯಾಗಿದೆ.
ನಾಮಪತ್ರ ವಾಪಸ್ ಪಡೆದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಕೆ.ಎನ್ ರಾಜಣ್ಣ, ನಾನು ನಾಮಪತ್ರ ಹಿಂಪಡೆದಿದ್ದೇನೆ. ನನಗೆ ಯಾವುದೇ ಬೇಡಿಕೆಗಳಿಲ್ಲ. ಪಕ್ಷದ ಹೈಕಮಾಂಡ್ ಸೂಚನೆ ಮೇರೆಗೆ ಕೆಲಸ ಮಾಡುತ್ತೇನೆ. ಮುದ್ದಹನುಮೇಗೌಡರಿಗೆ ನನ್ನ ಬೆಂಬಲವಿದೆ. ಹೀಗಾಗಿ ಪಕ್ಷದ ಹೈಕಮಾಂಡ್ ನಿರ್ದೇಶನದಂತೆ ಕೆಲಸ ಮಾಡುತ್ತೇವೆ. ಹೈಕಮಾಂಡ್ ಆದೇಶದಂತೆ ಇಡೀ ಜಿಲ್ಲೆಯಲ್ಲಿ ದೇವೇಗೌಡರ ಪರವಾಗಿ ಕೆಲಸ ಮಾಡುತ್ತೇವೆ. ತುಮಕೂರು ಜಿಲ್ಲೆಯನ್ನು ‘ದೇವೇಗೌಡರಮಯ’ ಜಿಲ್ಲೆಯನ್ನಾಗಿ ಮಾಡುತ್ತೇವೆ ಎಂದು ವ್ಯಂಗ್ಯವಾಗಿ ಹೇಳುವ ಮೂಲಕ ತಮ್ಮ ಅಸಮಾಧನವನ್ನು ಬಹಿರಂಗಪಡಿಸಿದರು.
ಜಿಲ್ಲಾ ಕಾಂಗ್ರೆಸ್ ನಲ್ಲಿ ಎರಡು ಬಣ ಇದೆ. ಒಂದು ಬಣ ಜಿ.ಪರಮೇಶ್ವರ್ ಅವರನ್ನು ಮುಖ್ಯಮಂತ್ರಿ ಮಾಡಲು ಹೊರಟಿದೆ. ಇನ್ನೊಂದು ಬಣ ಸಿದ್ದರಾಮಯ್ಯನವರನ್ನು ಮುಖ್ಯಮಂತ್ರಿ ಮಾಡಿ ರಾಹುಲ್ ಗಾಂಧಿಯನ್ನು ಪ್ರಧಾನಿ ಮಾಡಲು ಹೊರಟಿದೆ. ನಾನು ಸಿದ್ದರಾಮಯ್ಯರನ್ನ ಮುಖ್ಯಮಂತ್ರಿ ಮತ್ತು ರಾಹುಲ್ ಗಾಂಧಿ ಪ್ರಧಾನಿ ಮಾಡುವ ಬಣವಾಗಿದ್ದೇನೆ ಎಂದು ತಿಳಿಸಿದರು.
ಸಿದ್ದರಾಮಯ್ಯರ ಅವರು ಬಡವರ ಪರ ಕೆಲಸ ಮಾಡುತ್ತಾರೆ. ಜಿ.ಪರಮೇಶ್ವರ್ ಬಡವರ ಪರ ಕೆಲಸ ಮಾಡಲ್ಲ. ರಾಜ್ಯದಲ್ಲಿ ಯಾರು ರೈತರ ಪರ ಕೆಲಸ ಮಾಡುತ್ತಾರೋ ಅವರೇ ನಮ್ಮ ನಾಯಕರು. ಡಿಸಿಎಂ ಆಗಿ ಆರು ತಿಂಗಳಾದರೂ ಬಡವರ ಪರ ಏನ್ ಮಾಡಿದ್ದಾರೆ ಎಂದು ರಾಜಣ್ಣ ಪ್ರಶ್ನೆ ಮಾಡುವ ಮೂಲಕ ಡಿಸಿಎಂ ಪರಂ ವಿರುದ್ಧ ನೇರವಾಗಿ ಅಸಮಾಧಾನ ವ್ಯಕ್ತಪಡಿಸಿದರು.
ಹೈಕಮಾಂಡ್ ನಿರ್ದೇಶನದಂತೆ ನಾಮಪತ್ರ ವಾಪಸ್ ಪಡೆಯಲಾಗಿದೆ. ಪಕ್ಷದ ಉಳಿವಿಗಾಗಿ, ಪಕ್ಷವನ್ನ ನಂಬಿ ನಾಮಪತ್ರ ವಾಪಸ್ಸು ಹಿಂಪಡೆದಿದ್ದಾರೆ. ಮುದ್ದಹನುಮೇಗೌಡರನ್ನ ಚುನಾವಣೆಯಲ್ಲಿ ಮುಂಚೂಣಿಯಲ್ಲಿಟ್ಟುಕೊಂಡು ಸ್ಥಾನಮಾನ ನೀಡಬೇಕು. ಹಾಗಾದರೆ ಮಾತ್ರ ಕಾರ್ಯಕರ್ತರು ಮತ್ತು ನಾಯಕರು ಶ್ರಮಿಸುತ್ತಾರೆ. ಇಲ್ಲವಾದರೆ ಫಲಿತಾಂಶದ ಮೇಲೆ ಪರಿಣಾಮ ಬೀಳಲಿದೆ ಎಂದು ಮುದ್ದಹನುಮೇಗೌಡ ಬೆಂಬಲಿಗ ರಾಯಸಂಧ್ರ ರವಿ ಎಚ್ಚರಿಕೆ ಕೊಟ್ಟಿದ್ದಾರೆ.
ತುಮಕೂರು: ಇಂದು ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನವಾಗಿದ್ದು, ಡಿ.ಸಿ.ಎಂ ಜಿ.ಪರಮೇಶ್ವರ್, ದಿನೇಶ್ ಗುಂಡೂರಾವ್, ಸಚಿವ ಎಸ್.ಆರ್.ಶ್ರೀನಿವಾಸ್ ಸೇರಿದಂತೆ ಜೆ.ಡಿ.ಎಸ್. ಮುಖಂಡರು ನಾಮಪತ್ರ ವಾಪಸ್ ತೆಗೆದುಕೊಳ್ಳುವಂತೆ ಮುದ್ದಹನುಮೇಗೌಡರ ಮನವೊಲಿಸುವ ಪ್ರಯತ್ನ ಮಾಡಿದ್ದರು.
ಮುದ್ದಹನುಮೇಗೌರ ಜೊತೆ ಚರ್ಚೆ ಮಾಡಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ದಿನೇಶ್ ಗುಂಡೂರಾವ್, ನಮ್ಮ ಅಧ್ಯಕ್ಷರು ನಿರ್ದೇಶನ ನೀಡಿದ್ದರು. ಅದರ ಪ್ರಯುಕ್ತ ನಾವು ಬಂದು ಇವತ್ತು ಮುದ್ದಹನುಮೇಗೌಡ ಅವರಿಗೆ ಮನವರಿಕೆ ಮಾಡಿಕೊಟ್ಟಿದ್ದೇವೆ. ಅವರು ಪಾರ್ಲಿಮೆಂಟ್ ಸದಸ್ಯರಾಗಿ ಪಕ್ಷದ ಒಬ್ಬ ಪ್ರಾಮಾಣಿಕ ಸದಸ್ಯರಾಗಿ ಕೆಲಸ ಮಾಡಿದ್ದಾರೆ. ಕಾಂಗ್ರೆಸ್ ಪಕ್ಷದ ಕೆಲಸವನ್ನು ನಿಷ್ಠೆಯಿಂದ ಮಾಡುವಂತಹ ಜನಪರ ನಾಯಕರಾಗಿದ್ದಾರೆ. ಮೈತ್ರಿ ಸರ್ಕಾರದಿಂದ, ನಮ್ಮ ಪಕ್ಷದ ನಾಯಕರಿಂದಲೇ ಅವರಿಗೆ ಅನ್ಯಾಯವಾಗಿದೆ ಎಂದು ನಾನೇ ಹೇಳಿದ್ದೇನೆ ಎಂದರು.
ಇಂತಹ ತೀರ್ಮಾನವಾದಾಗ ನಮ್ಮೆಲ್ಲರಿಗೂ ನೋವಾಗುತ್ತದೆ. ರಾಜಕೀಯ ಬೆಳವಣಿಗೆಯಲ್ಲಿ ಇಂತಹ ಘಟನೆಗಳು ಆಗುವುದನ್ನು ಇತಿಹಾಸದಲ್ಲಿ ನೋಡಿದ್ದೇವೆ. ಪಕ್ಷದ ನಾಯಕರೆಲ್ಲರೂ ಸೇರಿ ಚರ್ಚೆ ಮಾಡಿ ಅವರನ್ನು ಗೌರವಯುತವಾಗಿ ನೋಡಿಕೊಳ್ಳುತ್ತೇವೆ ಎಂಬ ಭರವಸೆ ಕೊಟ್ಟಿದ್ದೇನೆ. ಕಾಂಗ್ರೆಸ್ ಪಕ್ಷದ ಪರವಾಗಿ ಕೆಲಸ ಮಾಡೋಣ ಎಂದು ಪಕ್ಷದ ಪರವಾಗಿ ನಾವು ಮನವಿ ಮಾಡಿಕೊಂಡಿದ್ದೇವೆ. ಅವರಿಗೆ ಎಷ್ಟೆ ನೋವಿದ್ದರೂ ನಮ್ಮನ್ನು ಚೆನ್ನಾಗಿ ನೋಡಿಕೊಂಡಿದ್ದಾರೆ. ಹೀಗಾಗಿ ಒಳ್ಳೆಯ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮೈತ್ರಿಯಿಂದ ಈ ಚುನಾವಣೆಯನ್ನು ಎದುರಿಸುತ್ತಿದ್ದೇವೆ. ತುಮಕೂರು ಕ್ಷೇತ್ರವನ್ನು ಜೆಡಿಎಸ್ ಪಕ್ಷಕ್ಕೆ ಬಿಟ್ಟುಕೊಡಬೇಕಿತ್ತು. ಆಗ ಮುದ್ದೆಹನುಮೇಗೌಡರು ಸಾಮಾನ್ಯ ಶಾಸಕರಾಗಿ ಸತತ 5 ವರ್ಷ ಸೇವೆ ಮಾಡಿಕೊಂಡು ಬಂದಿದ್ದರು. ಈಗ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ಅವರುಕಾರ್ಯಕರ್ತರ ಮಾತಿಗೆ ಮಣಿದು ನಾಮಪತ್ರ ಸಲ್ಲಿಸಿದ್ದರು. ನಾವು ಮನವೊಲಿಸುವ ಪ್ರಯತ್ನ ಮಾಡಿದ್ದೇವೆ. ಇಂದು ನಾವು ಅವರ ಮನೆಗೆ ಬಂದಾಗ ಪ್ರೀತಿ-ಗೌರವದಿಂದ ಕಂಡಿದ್ದಾರೆ. ನೀವು ಪಕ್ಷಕ್ಕಾಗಿ ನಾಮಪತ್ರ ವಾಪಸ್ ತೆಗೆದುಕೊಳ್ಳಿ ಎಂದು ಅವರಲ್ಲಿ ಮನವಿ ಮಾಡಿಕೊಂಡಿದ್ದೇವೆ. ಅದಕ್ಕೆ ಅವರು ನಮ್ಮ ಕಾರ್ಯಕರ್ತರ ಜೊತೆ ಮಾತನಾಡಿ ತೀರ್ಮಾನ ಕೈಗೊಳ್ಳುತ್ತೇನೆ ಎಂದು ಹೇಳಿದ್ದಾರೆ. ಜೊತೆಗೆ ನಾನು ಯಾವುದೇ ಕಾರಣಕ್ಕೂ ಕಾಂಗ್ರೆಸ್ ಪಕ್ಷಕ್ಕೆ ಮುಜುಗರವುಂಟು ಮಾಡುವುದಿಲ್ಲ ಎಂದು ಹೇಳಿದ್ದಾರೆ. ನನಗೆ ಅವರ ಮೇಲೆ ವಿಶ್ವಾಸ ಇದೆ ಎಂದು ಡಿಸಿಎಂ ಪರಮೇಶ್ವರ್ ತಿಳಿಸಿದರು.
ತುಮಕೂರು: ಇಂದು ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನವಾಗಿದೆ. ಆದರೆ ಲೋಕಸಭಾ ಕ್ಷೇತ್ರದ ಮೈತ್ರಿ ಪಕ್ಷದ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಸಂಸದ ಮುದ್ದಹನುಮೇಗೌಡ ನಾಮಪತ್ರ ವಾಪಸ್ ತೆಗೆದುಕೊಳ್ಳುತ್ತಾರಾ ಎಂಬುದು ಇನ್ನೂ ನಿಗೂಢವಾಗಿ ಉಳಿದಿದೆ.
ಮುದ್ದಹನುಮೇಗೌಡರು ತಮ್ಮ ಬೆಂಬಲಿಗರ ಜೊತೆ ಕೊನೆ ಸುತ್ತಿನ ಸಭೆ ಕರೆದಿದ್ದಾರೆ. ಬೆಂಗಳೂರಿನ ಸಂಜಯ ನಗರದಲ್ಲಿರುವ ನಿವಾಸದಲ್ಲಿ ಸಭೆ ನಡೆಯಲಿದ್ದು, ಸಭೆಯಲ್ಲಿನ ನಿರ್ಣಯದಂತೆ ಮುದ್ದಹನುಮೇಗೌಡರು ತಮ್ಮ ಮುಂದಿನ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ಈ ಮಧ್ಯೆ ರೆಬೆಲ್ ಮುದ್ದಹನುಮೇಗೌಡರ ಮನವೊಲಿಸುವ ಕಸರತ್ತು ಮುಂದುವರಿದಿದೆ. ಡಿ.ಸಿ.ಎಂ ಜಿ.ಪರಮೇಶ್ವರ್, ಮಾಜಿ ಸಿಎಂ ಸಿದ್ದರಾಮಯ್ಯ, ಸಚಿವ ಎಸ್.ಆರ್.ಶ್ರೀನಿವಾಸ್ ಸೇರಿದಂತೆ ಜೆ.ಡಿ.ಎಸ್. ಮುಖಂಡರು ನಾಮಪತ್ರ ವಾಪಸ್ ತೆಗೆದುಕೊಳ್ಳುವಂತೆ ಮುದ್ದಹನುಮೇಗೌಡರ ಮನವೊಲಿಸುವ ಪ್ರಯತ್ನ ಮಾಡಿದ್ದಾರೆ. ಆದರೆ ಮುದ್ದಹನುಮೇಗೌಡರು ಕಣದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದಾರೆ ಎನ್ನಲಾಗಿದೆ.
ಮುದ್ದೆಹನುಮೇಗೌಡ ಜೊತೆಗೆ ಇನ್ನೋರ್ವ ಬಂಡಾಯ ಅಭ್ಯರ್ಥಿ ಮಾಜಿ ಶಾಸಕ ಕೆ.ಎನ್.ರಾಜಣ್ಣ ನಾಮಪತ್ರ ವಾಪಸ್ ತೆಗೆದುಕೊಳ್ಳುವುದು ಖಚಿತವಾಗಿದೆ. ಒಂದು ವೇಳೆ ರಾಜಣ್ಣ ಮತ್ತು ಮುದ್ದಹನುಮೇಗೌಡರು ನಾಮಪತ್ರವನ್ನು ವಾಪಸ್ ಪಡೆದುಕೊಂಡರೆ ಮಾಜಿ ಪ್ರಧಾನಿ ದೇವೇಗೌಡರ ಗೆಲುವಿನ ದಾರಿ ಸುಲಭವಾಗುತ್ತದೆ ಎಂದು ಹೇಳಲಾಗುತ್ತಿದೆ.
ತುಮಕೂರು: ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡು ಅಳೆದು ತೂಗಿ ಕೊನೆಗೆ ತುಮಕೂರು ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡಿದ್ದರು. ಆದರೆ ಈಗ ಅದೇ ಕ್ಷೇತ್ರದಿಂದ ದೇವೇಗೌಡರಿಗೆ ಮತ್ತೊಂದು ಬಿಗ್ ಶಾಕ್ ಆಗಿದೆ.
ಒಂದು ಕಡೆ ಮುದ್ದಹನುಮೇಗೌಡರ ಬಂಡಾಯ ನಡೆಸುತ್ತಿದ್ದಾರೆ. ಇತ್ತ ಸಂಸದರ ಬಂಡಾಯದ ಜೊತೆಗೆ ಕೆ.ಎನ್ ರಾಜಣ್ಣನೂ ರೆಬಲ್ ಆಗಿದ್ದು, ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ರಾಜಣ್ಣ ನಿರ್ಧಾರ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಸೋಮವಾರ ಕೈ ಬಂಡಾಯ ಅಭ್ಯರ್ಥಿಯಾಗಿ ಕೆ.ಎನ್ ರಾಜಣ್ಣ ನಾಮಪತ್ರ ಸಲ್ಲಿಸಲಿದ್ದಾರೆ. ಒಂದು ವೇಳೆ ಮುದ್ದಹನುಮೇಗೌಡರು ನಾಮಪತ್ರ ವಾಪಸ್ ಪಡೆದರೆ, ದೇವೇಗೌಡರ ವಿರುದ್ಧ ಗುಟುರು ಹಾಕಲು ರಾಜಣ್ಣ ಸಿದ್ಧವಾಗುತ್ತಿದ್ದಾರೆ.
ಕಾಂಗ್ರೆಸ್ಸಿನ ಹಾಲಿ ಸಂಸದರಾದ ಮುದ್ದೆಹನುಮೇಗೌಡರಿಗೆ ಲೋಕಸಭಾ ಚುನವಣಾ ಟಿಕೆಟ್ ಕೈ ತಪ್ಪಿದೆ. ಇದರಿಂದ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ಅಸಮಾಧಾನಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಮುದ್ದೆಹನುಮೇಗೌಡರು ತಾನು ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುತ್ತೇನೆ ಎಂದು ಹೇಳಿದ್ದರು. ನಾಳೆ ನಾಮಪತ್ರ ಸಲ್ಲಿಸಲು ಈಗಾಗಲೇ ಸಿದ್ಧತೆ ಮಾಡಿಕೊಂಡಿದ್ದಾರೆ.
ಇತ್ತ ಡಿಸಿಎಂ ಪರಮೇಶ್ವರ್ ಅವರು ಕಾಂಗ್ರೆಸ್ ನಾಯಕರನ್ನು ಕರೆದು ಖಾಸಗಿ ಹೋಟೆಲಿನಲ್ಲಿ ಸಭೆ ನಡೆಸುತ್ತಿದ್ದಾರೆ. ಆದರೆ ಈ ಸಭೆಗೆ ಬಂಡಾಯ ಅಭ್ಯರ್ಥಿಗಳಾದ ಮುದ್ದೆಹನುಮೇಗೌಡ ಮತ್ತು ರಾಜಣ್ಣ ಇಬ್ಬರು ಗೈರಾಗಿದ್ದಾರೆ. ಅಷ್ಟೇ ಅಲ್ಲದೇ ಮುದ್ದಹನುಮೇಗೌಡ ತುಮಕೂರಿನ ಕೊರಟಗೆರೆ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಜೊತೆ ತಮ್ಮ ಸಭೆಯನ್ನು ಮುಂದುವರಿಸಿದ್ದಾರೆ. ಕೊರಟಗೆರೆ ಕಾಂಗ್ರೆಸ್ ಮುಖಂಡ ಎ.ಡಿ.ಬಲರಾಮಯ್ಯ ಮನೆಯಲ್ಲಿ ಸಭೆಯನ್ನು ಆಯೋಜನೆ ಮಾಡಲಾಗಿದ್ದು, ಕಾರ್ಯಕರ್ತರ ಜೊತೆ ಚುನಾವಣಾ ಸಮಾಲೋಚನೆ ನಡೆಸುತ್ತಿದ್ದಾರೆ.
ತುಮಕೂರು: ಮಧುಗಿರಿ ಕಾಂಗ್ರೆಸ್ ಶಾಸಕ ಕೆ.ಎನ್.ರಾಜಣ್ಣ ಮತದಾರರಿಗೆ ಧಮ್ಕಿ ಹಾಕುವ ತಮ್ಮ ಚಾಳಿಯನ್ನು ಮುಂದುವರೆಸಿದ್ದಾರೆ.
ಮಧುಗಿರಿ ಪಟ್ಟಣದ 14 ನೇ ವಾರ್ಡ್ ನಲ್ಲಿರುವ ಮಂಡ್ರ ಕಾಲೋನಿಯ ಪ್ರಚಾರ ಕಾರ್ಯಕ್ರಮದಲ್ಲಿ ಮತದಾರರಿಗೆ ಬಹಿರಂಗವಾಗಿ ಧಮ್ಕಿ ಹಾಕಿರುವ ಪ್ರಕರಣ ಬೆಳಕಿಗೆ ಬಂದಿದೆ. ಈ ವಿಡಿಯೋ ಇದೀಗ ಪಬ್ಲಿಕ್ ಟಿವಿಗೆ ಲಭಿಸಿದೆ.
ಕಾಂಗ್ರೆಸ್ ಬಿಟ್ಟು ಬೇರೆ ಪಕ್ಷಕ್ಕೆ ಮತಹಾಕಿದ್ರೆ ನಿಮ್ಮ ಗ್ರಹಚಾರ ಸರಿಯಿರಲ್ಲ ಎಂದು ಬೆದರಿಕೆ ಹಾಕಿದ್ದಾರೆ. ಇಲ್ಲಿ ಯಾವ ಪಕ್ಷದವರು ಅಭಿವೃದ್ಧಿ ಮಾಡಿಲ್ಲ. ನಾನೇ ಅಭಿವೃದ್ಧಿ ಮಾಡಿದ್ದು. ಹಾಗಾಗಿ ಕಾಂಗ್ರೆಸ್ ಗೆ ಮತ ಹಾಕಬೇಕು. ಬೇರೆ ಯಾವ ಪಕ್ಷದವರನ್ನೂ ಊರ ಒಳಗಡೆ ಸೇರಿಸ್ಕೋ ಬೇಡಿ. ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕದೇ ಇದ್ದರೆ ನಿಮ್ಮ ಗ್ರಹಚಾರ ಕೆಡ್ತು ಅಂತಾನೇ ತಿಳ್ಕೊಳ್ಳಿ ಎಂದು ಧಮ್ಕಿ ಹಾಕಿದ್ದಾರೆ.
ತುಮಕೂರು: ಕಾರ್ಯಕ್ರಮವೊಂದರಲ್ಲಿ ಸಚಿವ ಡಿಕೆಶಿ ಎದುರೇ ಮಧುಗಿರಿ ಕಾಂಗ್ರೆಸ್ ಶಾಸಕ ಕೆ.ಎನ್. ರಾಜಣ್ಣ ಅವರು ರಹಸ್ಯವೊಂದನ್ನು ಬಿಚ್ಚಿಟ್ಟಿದ್ದಾರೆ.
ಮಧುಗಿರಿಯ ಬಡವನಹಳ್ಳಿಯಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ಶಾಸಕರು, ನಮ್ಮ ಕ್ಷೇತ್ರದಲ್ಲಿ ಸುಮಾರು 15-20 ದಿವಸದ ಹಿಂದೆಯೇ ಹೇಳಿದ್ದೆ. ಸಾಲ ಮನ್ನಾ ಆಗ್ತದೆ. ಹೀಗಾಗಿ ಎಲ್ಲರೂ ಸಾಲ ತಗೊಳ್ಳಿ. ಸಿಎಂ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಈ ಬಾರಿ ಸಾಲ ಮನ್ನಾ ಮಾಡೇ ಮಾಡುತ್ತದೆ ಅಂತ ಹೇಳಿದ್ದೆನು.
ಇನ್ನು ಸಾಲ ಮನ್ನಾ ಮಾಡಿದ ಹಿನ್ನೆಲೆಯಲ್ಲಿ ನಮ್ಮ ತಾಲೂಕು, ನಮ್ಮ ಕ್ಷೇತ್ರಕ್ಕೆ 74 ಕೋಟಿ ರೂ. ಸಾಲ ಮನ್ನಾ ಆಗಿದೆ. ಸುಮಾರು 25,526 ಕುಟುಂಬದ ಸಾಲ ಮನ್ನಾ ಆಗಿದೆ. ಸಾಲ ಕೊಡುವ ಸಮಯದಲ್ಲಿ ನಾವೇನು ನಮ್ಮ ಪಾರ್ಟಿಯವನಾ ಅಂತ ಕೇಳ್ತಾ ಇರಲಿಲ್ಲ. ಅಥವಾ ನಮ್ಮ ಪಾರ್ಟಿಯವರಿಗೆ ಮಾತ್ರ ಸಾಲ ಕೊಡಿ ಅಂತಾನೂ ಹೇಳಿಲ್ಲ. ನಮ್ಮ ಜಾತಿಯವರು ಅಂತ ಕೇಳಿಯೂ ಸಾಲ ಕೊಟ್ಟಿಲ್ಲ. ರೈತಾಪಿ ಕುಟುಂಬದ ಜನ ಕಷ್ಟದಲ್ಲಿದ್ದಾರೆ ಅಂತ ಸಾಲ ಕೊಟ್ಟಿದ್ದೇವೆ ಅಂತ ಹೇಳಿಕೆ ನೀಡಿದ್ದಾರೆ.
ಒಟ್ಟಿನಲ್ಲಿ ಇದೀಗ ಸಚಿವ ಡಿಕೆ ಶಿವಕುಮಾರ್ ಸಮ್ಮುಖದಲ್ಲೇ ರಾಜಣ್ಣ ಗಂಟಾಘೋಷವಾಗಿ ಸಾಲ ಮನ್ನಾ ರಹಸ್ಯವನ್ನ ಬಿಚ್ಚಿಟ್ಟಿರುವುದು ಚರ್ಚೆಗೆ ಗ್ರಾಸವಾಗಿದೆ.