Tag: ರಾಜಕೀಯ

  • ನಿಖಿಲ್ ಪಟ್ಟಾಭಿಷೇಕಕ್ಕೂ ಮುನ್ನ ರಾಜ್ಯ ಪ್ರವಾಸದ ಪರೀಕ್ಷೆ – ನಾಳೆಯಿಂದ ಮೊದಲ ಹಂತದ ಟೂರ್

    ನಿಖಿಲ್ ಪಟ್ಟಾಭಿಷೇಕಕ್ಕೂ ಮುನ್ನ ರಾಜ್ಯ ಪ್ರವಾಸದ ಪರೀಕ್ಷೆ – ನಾಳೆಯಿಂದ ಮೊದಲ ಹಂತದ ಟೂರ್

    – ಹಳೇ ಮೈಸೂರಿನ‌ 80 ಕ್ಷೇತ್ರಗಳ ಮೇಲೆ ಫೋಕಸ್

    ಬೆಂಗಳೂರು: ಜೆಡಿಎಸ್‌ನಲ್ಲಿ (JDS) ಯುವ ನಾಯಕ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಪಟ್ಟಾಭಿಷೇಕಕ್ಕೆ ಪೂರ್ವ ತಯಾರಿ ಜೋರಾಗಿ ಶುರುವಾಗಿದೆ. ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ ಪಕ್ಷ ಸಂಘಟನೆಗೆ ದಳಪತಿಗಳು ಮುಂದಾಗಿದ್ದಾರೆ. ನಾಳೆಯಿಂದ ನಿಖಿಲ್ ಕುಮಾರಸ್ವಾಮಿ ರಾಜ್ಯಪ್ರವಾಸ ಹೊರಡಲಿದ್ದಾರೆ.

    ಇಂದು ಬೆಂಗಳೂರಿನ ಜೆಪಿ ಭವನದಲ್ಲಿ ನಿಖಿಲ್ ರಾಜ್ಯ ಪ್ರವಾಸಕ್ಕೆ ಮಾಜಿ ಪ್ರಧಾನಿ ಹೆಚ್‌ಡಿ ದೇವೇಗೌಡ (HD Devegowda) ಹಾಗೂ ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ ಚಾಲನೆ ನೀಡಿದರು. ಕಾರ್ಯಕ್ರಮದ ಆರಂಭಕ್ಕೂ ಮುನ್ನ ಕಾಲ್ತುಳಿತ ಹಾಗೂ ವಿಮಾನ ಪತನ ದುರ್ಘಟನೆಗಳಲ್ಲಿ ಮೃತರಾದವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯ್ತು. ಆದಿಚುಂಚನಗಿರಿ ಮಠದಲ್ಲಿ ಸ್ವಾಮೀಜಿ ಆಶೀರ್ವಾದ ಪಡೆದು ನಿಖಿಲ್ ಆಗಮಿಸಿದರು. ಇದನ್ನೂ ಓದಿ: Ghaziabad| ಏರ್‌ ಇಂಡಿಯಾ ಟೇಕಾಫ್‌ ವೇಳೆ ತಾಂತ್ರಿಕ ದೋಷ – ತಪ್ಪಿದ ಅನಾಹುತ

    ಈ ವೇಳೆ ಮಾತಾಡಿದ ನಿಖಿಲ್ ಕುಮಾರಸ್ವಾಮಿ, ನಾಳೆಯಿಂದ ಜೆಡಿಎಸ್ ಪಕ್ಷಕ್ಕೆ ಹೊಸ ಯುಗ ಆರಂಭ. ಒಂದು ಛಲದೊಂದಿಗೆ ಪಕ್ಷ ಕಟ್ಟುವ ಕೆಲಸ ಕಾರ್ಯಕರ್ತರ ಜೊತೆಗೂಡಿ ಮಾಡುತ್ತೇನೆ. 58 ದಿನಗಳ ಕಾಲ ರಾಜ್ಯಾದ್ಯಂತ ಕಾರ್ಯಕರ್ತರ ಜತೆ ಹೆಜ್ಜೆ ಹಾಕುತ್ತೇನೆ. ಈ 58 ದಿನ ನಾನು ಬೆಂಗಳೂರಿಗೆ ಬರಲ್ಲ, ಕಾರ್ಯಕರ್ತರ ಜೊತೆ ಇರುತ್ತೇನೆ ಎಂದು ತಿಳಿಸಿದರು.

    ವಿಧಾನಸಭೆ ಕ್ಚೇತ್ರಗಳಲ್ಲಿ ಸ್ಥಳೀಯವಾಗಿ ಏನು ಸಮಸ್ಯೆ ಇದೆ ಎಂಬುದನ್ನು ತಿಳಿದುಕೊಂಡು ಪಕ್ಷ ಅಧಿಕಾರಕ್ಕೆ ತರಲು ಪಕ್ಷದ ನಾಯಕರು, ಕಾರ್ಯಕರ್ತರ ಜತೆಗೂಡಿ ಶ್ರಮಿಸ್ತೇನೆ ಎಂದರು.

    ಚಿತ್ರರಂಗದಲ್ಲಿ ವಿಷ್ಣುವರ್ಧನ್ ಅವರಿಗೆ ಅಣ್ಣನ ಸ್ಥಾನ ಕೊಟ್ಟಿದ್ದರು. ರಾಜಕೀಯದಲ್ಲಿ ಕುಮಾರಸ್ವಾಮಿ ಅವರಿಗೆ ಜನ ಅಣ್ಣನ ಸ್ಥಾನ‌ ನೀಡಿದ್ದಾರೆ. ಕುಮಾರಸ್ವಾಮಿ ಅವರು ಮತ್ತೊಮ್ಮೆ ಮೂರನೇ ಬಾರಿಗೆ ಮುಖ್ಯಮಂತ್ರಿ ಆಗಬೇಕೆಂದು ರಾಜ್ಯದ ಜನ ಬಯಸಿದ್ದಾರೆ. ಕುಮಾರಣ್ಣ ಅವರ ಆರೋಗ್ಯ ಬಗ್ಗೆ ಕಾರ್ಯಕರ್ತರು, ಜನತೆ ಪ್ರಾರ್ಥನೆ ಮಾಡಿದ್ದಾರೆ. ಕುಮಾರಣ್ಣ ಅವರಿಗೆ ದೇವೇಗೌಡರು, ಚನ್ನಮ್ಮ ಆಶೀರ್ವಾದ ಇದೆ. ರಾಜ್ಯದ ಜನರ ಆಶೀರ್ವಾದ ಇದೆ, ಈಶ್ವರನ ಕೃಪೆ ಇದೆ. ಕುಮಾರಣ್ಣ ಆರೋಗ್ಯವಾಗಿದ್ದಾರೆ ಎನ್ನುವುದು ಈ ವೇದಿಕೆ ಮೇಲೆ ಅವರನ್ನು ನೋಡಿದರೆ ಗೊತ್ತಾಗುತ್ತದೆ ಎಂದು ನಿಖಿಲ್ ಹೇಳಿದರು.

    ಒಬ್ಬ ರೈತನ ಮಗನಾಗಿ ದೇಶದ ಉನ್ನತ ಹುದ್ದೆ ಅಲಂಕರಿಸಿದ ದೇವೇಗೌಡರನ್ನ ಈಶ್ವರನ ಪುತ್ರ ಎಂದೇ ಹೇಳಬಹುದು.‌ ಅವರಿಗೆ ರಾಜ್ಯದ ಬಗ್ಗೆ ಇರೋ ಬದ್ಧತೆ ಹಲವು ಜನರಿಗೆ ಮಾರ್ಗದರ್ಶನ ಆಗಿದೆ ಎಂದು ಹೆಚ್‌ಡಿಡಿ ಬಗ್ಗೆ ನಿಖಿಲ್ ಗುಣಗಾನ ಮಾಡಿದರು. ಇದನ್ನೂ ಓದಿ: ದೂಡಿದ್ದಕ್ಕೆ ಬಿತ್ತು ಪೆಟ್ಟು – ಸೀಟಿಗಾಗಿ ಅಲ್ಲ ಈಗ ಬಸ್ಸು ಹತ್ತಲು ಮಹಿಳೆಯರ ಜಗಳ!

    ಇದೇ ವೇಳೆ ತಾವೇ ಮಿಸ್ಡ್‌ಕಾಲ್ ನೀಡುವ ಮೂಲಕ ಜೆಡಿಎಸ್ ಸದಸ್ಯತ್ವ ಅಭಿಯಾನಕ್ಕೆ ದೇವೇಗೌಡರು ಹಾಗೂ ಕುಮಾರಸ್ವಾಮಿ (HD Kumaraswamy) ಚಾಲನೆ ನೀಡಿದರು.

  • ಹಕ್ಕು ಪತ್ರ ನೀಡುವ ಮೂಲಕ ಆರನೇ ಗ್ಯಾರಂಟಿ ಜಾರಿ: ರಾಹುಲ್‌ ಗಾಂಧಿ

    ಹಕ್ಕು ಪತ್ರ ನೀಡುವ ಮೂಲಕ ಆರನೇ ಗ್ಯಾರಂಟಿ ಜಾರಿ: ರಾಹುಲ್‌ ಗಾಂಧಿ

    ವಿಜಯನಗರ: ಹಕ್ಕು ಪತ್ರ ನೀಡುವುದರಲ್ಲಿ ಕರ್ನಾಟಕ (Karnataka) ದೇಶದ ಮೊದಲ ರಾಜ್ಯವಾಗಬೇಕು. ಹಕ್ಕು ಪತ್ರ ನೀಡುವ ಮೂಲಕ ಆರನೇ ಗ್ಯಾರಂಟಿ ಜಾರಿ ಮಾಡಿದ್ದೇವೆ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ (Rahul Gandhi) ಹೇಳಿದ್ದಾರೆ.

    ಕಾಂಗ್ರೆಸ್‌ ಸರ್ಕಾರಕ್ಕೆ 2 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಹೊಸಪೇಟೆಯಲ್ಲಿ ನಡೆದ ಕಾಂಗ್ರೆಸ್‌ ಸಾಧನಾ ಸಮಾವೇಶದಲ್ಲಿ (Sadhana Samavesha) ಮಾತನಾಡಿದ ಅವರು, ನಾವು ಐದು ಗ್ಯಾರಂಟಿಗಳ ಜೊತೆಗೆ ಬಡ ಜನರಿಗೆ ಹಕ್ಕು ಪತ್ರ ಕೊಡಬೇಕು ಎಂದುಕೊಂಡಿದ್ದೆವೆ. ಇಲ್ಲಿ ಎಲ್ಲಾ ಜಾತಿ ಧರ್ಮದವರಿದ್ದಾರೆ. ಇವರಿಗೆ ಹತ್ತಾರು ವರ್ಷದಿಂದ ಆಸ್ತಿಗಳ ಪತ್ರ ಇರಲಿಲ್ಲ. ಈ ವಿಷಯದ ಬಗ್ಗೆ ನಮ್ಮ ಕಾಂಗ್ರೆಸ್ ನಾಯಕರ ಜೊತೆ ಮಾತನಾಡಿದೆ. ಇಂದು ಅತ್ಯಂತ ಸಂತಸದಿಂದ ಹೇಳುತ್ತಿದ್ದೇನೆ. ಇವತ್ತು ನಾವು ಅವರಿಗೆ ಹಕ್ಕು ಪತ್ರ ಕೊಟ್ಟಿದ್ದೇವೆ. ಒಂದು ಲಕ್ಷ ಕುಟುಂಬಕ್ಕೆ ನಾವು ಅವರ ಆಸ್ತಿಗಳ ಹಕ್ಕು ವರ್ಗಾವಣೆ ಮಾಡಿದ್ದೇವೆ. ಇಂದಿರಾಗಾಂಧಿ ಅವರು ಕನಸು ಕೂಡಾ ಇದಾಗಿತ್ತು. ಅದನ್ನ ಇವತ್ತು ನನಸು ಮಾಡಿದ್ದೇವೆ ಎಂದು ಹೇಳಿದರು.

    ಇನ್ನಷ್ಟು ಪ್ರದೇಶಗಳನ್ನು ಕಂದಾಯ ಗ್ರಾಮ ಮಾಡುವ ಉದ್ದೇಶವಿದೆ. ಯಾರೊಬ್ಬರೂ ಹಕ್ಕು ಪತ್ರ ಇಲ್ಲದೇ ಇರಬಾರದು. ಗ್ಯಾರಂಟಿ ಸಮಿತಿಗಳು ಹಕ್ಕು ಪತ್ರ ಪರಿಶೀಲಿಸುವ ಕೆಲಸ ಮಾಡಬೇಕು. ನಾವು ಕೊಟ್ಟ ಯೋಜನೆ, ಹಣ ಬಡ ಜನರಿಗೆ ಅನುಕೂಲ ಆಗುತ್ತಿದೆ ಎಂದರು. ಇದನ್ನೂ ಓದಿ: ಲಿಫ್ಟ್‌ನಲ್ಲಿ ಹಠ ಹಿಡಿದು ದರ್ಶನ್ ನಂಬರ್ ಪಡೆದ ಪವಿತ್ರಾಗೌಡ

    ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರಕ್ಕೆ ಎರಡು ವರ್ಷ ಪೂರ್ಣವಾಗಿದೆ. ನಾವು ಚುನಾವಣೆ ಸಮಯದಲ್ಲಿ ಕೆಲವೊಂದು ಆಶ್ವಾಸನೆ ನೀಡಿದ್ದೆವು. ನಾವು ಕೊಟ್ಟ ಗ್ಯಾರಂಟಿಯನ್ನು (Congress Guarantee) ಪುರ್ಣ ಮಾಡುವುದಿಲ್ಲ ಎಂದು ಬಿಜೆಪಿ ಜರಿದಿತ್ತು. ಪ್ರಧಾನಿ ಕೂಡಾ ಟೀಕಿಸಿದ್ದರು. ಆದರೆ ನಮ್ಮ ಸರ್ಕಾರ ಗ್ಯಾರಂಟಿಯನ್ನು ಈಡೇರಿಸಿದೆ ಎಂದು ತಿಳಿಸಿದರು.

     

    ಗೃಹಲಕ್ಷ್ಮಿ ಮೂಲಕ ಪ್ರತೀ ಮಹಿಳೆಗೆ ಎರಡು ಸಾವಿರ ರೂ. ನೀಡಲಾಗುತ್ತದೆ. ಗೃಹ ಜ್ಯೋತಿ ಅಡಿ ಕೋಟ್ಯಂತರ ಬಡ ಕುಟುಂಬಕ್ಕೆ ವಿದ್ಯುತ್‌ ಕೊಟ್ಟಿದ್ದೇವೆ. ಅನ್ನ ಭಾಗ್ಯ ಯೋಜನೆ ಅಡಿ ನಾಲ್ಕು ಕೋಟಿ ಜನಕ್ಕೆ ಅಕ್ಕಿ ಕೊಟ್ಟಿದ್ದೇವೆ. ಶಕ್ತಿ ಯೋಜನೆ ಮೂಲಕ ಮಹಿಳೆಯರು ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದಾರೆ. ಯುವ ನಿಧಿ ಮೂರು ಕೋಟಿ ಯುವಕರಿಗೆ ಪ್ರತೀ ತಿಂಗಳು ಮೂರು ಸಾವಿರ ಕೊಡುತ್ತಿದ್ದೇವೆ ಎಂದು ಹೇಳುವ ಮೂಲಕ ಗ್ಯಾರಂಟಿ ಯೋಜನೆಯ ಗುಣಗಾನ ಮಾಡಿದರು.  ಇದನ್ನೂ ಓದಿ: 7 ತಿಂಗಳಲ್ಲಿ 25 ಮದುವೆ; ಅಮಾಯಕರಿಗೆ ಲಕ್ಷಾಂತರ ಹಣ ವಂಚಿಸಿದ್ದ ಖತರ್ನಾಕ್‌ ಲೇಡಿ ಅರೆಸ್ಟ್‌

    ನೀವು ಕೊಟ್ಟ ತೆರಿಗೆಯನ್ನು ನಿಮಗೆ ಮರಳಿಸುತ್ತಿದ್ದೇವೆ. ಈ ದೇಶದ ಕೆಲವೇ ಕುಟುಂಬಕ್ಕೆ ಆದಾಯ ಹೋಗಬೇಕು ಎನ್ನುವುದು ಬಿಜೆಪಿ ಉದ್ದೇಶ. ಬಡ ಜನರಿಗೆ ಹಣ ಹೋಗಬೇಕು ಎನ್ನುವುದು ನಮ್ಮ ಉದ್ದೇಶ ಎಂದು ಹೇಳಿದರು.

  • ಖರ್ಗೆ ಕಾರ್ಯಕ್ರಮಕ್ಕೆ ಬಾರದ ಜನ – ಪಕ್ಷದಿಂದಲೇ ಜಿಲ್ಲಾಧ್ಯಕ್ಷ ಅಮಾನತು

    ಖರ್ಗೆ ಕಾರ್ಯಕ್ರಮಕ್ಕೆ ಬಾರದ ಜನ – ಪಕ್ಷದಿಂದಲೇ ಜಿಲ್ಲಾಧ್ಯಕ್ಷ ಅಮಾನತು

    ಪಾಟ್ನಾ: ಕಾಂಗ್ರೆಸ್ (Congress) ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅವರ ಬಿಹಾರ ಕಾರ್ಯಕ್ರಮದಲ್ಲಿ ಕಡಿಮೆ ಸಂಖ್ಯೆಯಲ್ಲಿ ಜನರು ಭಾಗವಹಿಸಿದ್ದಕ್ಕೆ ಬಕ್ಸಾರ್ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮನೋಜ್ ಕುಮಾರ್ ಪಾಂಡೆಯನ್ನು ಪಕ್ಷದಿಂದ ಅಮಾನತು ಮಾಡಲಾಗಿದೆ.

    ಮನೋಜ್ ಕುಮಾರ್ ಪಾಂಡೆ (Manoj Kumar Pandey) ಅವರನ್ನು ಅನಿರ್ದಿಷ್ಟಾವಧಿಗೆ ಅಮಾನತು ಮಾಡಲಾಗಿದೆ ಮತ್ತು ಪಕ್ಷದ ಎಲ್ಲಾ ಹುದ್ದೆಗಳಿಂದ ತೆಗೆದುಹಾಕಲಾಗಿದೆ ಎಂದು ಬಿಹಾರ ಪ್ರದೇಶ ಕಾಂಗ್ರೆಸ್ ಸಮಿತಿಯ (ಬಿಪಿಸಿಸಿ) ಮಾಧ್ಯಮ ಕೋಶದ ಅಧ್ಯಕ್ಷ ರಾಜೇಶ್ ರಾಥೋಡ್ ಮಾಧ್ಯಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

    ಭಾನುವಾರ ಬಕ್ಸಾರ್‌ನ ದಲ್ಸಾಗರ್ ಕ್ರೀಡಾಂಗಣದಲ್ಲಿ ‘ಜೈ ಬಾಪು, ಜೈ ಭೀಮ್, ಜೈ ಸಂವಿಧಾನ್’ ಕಾರ್ಯಕ್ರಮ ಆಯೋಜನೆಯಾಗಿತ್ತು. ಕಾರ್ಯಕ್ರಮಕ್ಕೆ ಮಲ್ಲಿಕಾರ್ಜುನ ಖರ್ಗೆ ಬರುವ ವಿಚಾರ ತಿಳಿದಿದ್ದರೂ ಬಹಳಷ್ಟು ಕುರ್ಚಿಗಳು ಖಾಲಿ ಇದ್ದವು.


    ಬಕ್ಸಾರ್‌ನ ಕಾಂಗ್ರೆಸ್ ಶಾಸಕ ಸಂಜಯ್ ಕುಮಾರ್ ತಿವಾರಿ ಮುಂದೆ ಬಂದು ಕುರ್ಚಿಯಲ್ಲಿ ಕುಳಿತುಕೊಳ್ಳುವಂತೆ ಜನರಲ್ಲಿ ಕೇಳಿಕೊಳ್ಳುತ್ತಿದ್ದರು. ಖಾಲಿ ಕುರ್ಚಿಗಳು ಇರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿತ್ತು.

    ಬಿಹಾರದ ಕಾಂಗ್ರೆಸ್ ಉಸ್ತುವಾರಿ ಕೃಷ್ಣ ಅಲ್ಲವರು, ರಾಜ್ಯಾಧ್ಯಕ್ಷ ಅಖಿಲೇಶ್ ಪ್ರಸಾದ್ ಸಿಂಗ್, ಬಕ್ಸಾರ್‌ನ ಆರ್‌ಜೆಡಿ ಸಂಸದ ಸುಧಾಕರ್ ಸಿಂಗ್, ಸಸಾರಂನ ಕಾಂಗ್ರೆಸ್ ಸಂಸದ ಮನೋಜ್ ಕುಮಾರ್ ರಾಮ್ ಸೇರಿದಂತೆ ಪಕ್ಷದ ಹಿರಿಯ ನಾಯಕರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

    ಕಡಿಮೆ ಸಂಖ್ಯೆಯಲ್ಲಿ ಜನರ ಭಾಗಿ ಮತ್ತು ಖಾಲಿ ಕುರ್ಚಿಗಳು ಹಿರಿಯ ನಾಯಕರಿಗೆ ಮುಜುಗರವನ್ನು ಉಂಟು ಮಾಡಿತ್ತು. ಈ ಕಾರಣಕ್ಕೆ ಶಿಸ್ತು ಕ್ರಮ ಕೈಗೊಳ್ಳಲಾಗಿದೆ ಎಂದು ಕಾಂಗ್ರೆಸ್‌ ಮೂಲಗಳನ್ನು ಆಧಾರಿಸಿ ವರದಿಯಾಗಿದೆ.

    ಈ ವರ್ಷದ ಅಕ್ಟೋಬರ್‌ – ನವೆಂಬರ್‌ ಅವಧಿಯಲ್ಲಿ ಬಿಹಾರ ವಿಧಾನಸಭೆಗೆ ಚುನಾವಣೆ ನಡೆಯಲಿದೆ. ಕಾಂಗ್ರೆಸ್‌ ಮತ್ತು ಆರ್‌ಜೆಡಿ ಮೈತ್ರಿ ಮಾಡಿಕೊಂಡಿದ್ದರೆ ಬಿಜೆಪಿ, ಜೆಡಿಯು, ಎಲ್‌ಜೆಪಿ ಮೈತ್ರಿ ಮಾಡಿಕೊಂಡಿವೆ.

  • ಕ್ಲೈಮ್ಯಾಕ್ಸ್ ಹಂತಕ್ಕೆ ಬಂದ ಜಾತಿ ಜಿದ್ದಾಜಿದ್ದಿ – ಸಿಎಂ ಮುಂದಿರುವ ಆಯ್ಕೆ ಏನು?

    ಕ್ಲೈಮ್ಯಾಕ್ಸ್ ಹಂತಕ್ಕೆ ಬಂದ ಜಾತಿ ಜಿದ್ದಾಜಿದ್ದಿ – ಸಿಎಂ ಮುಂದಿರುವ ಆಯ್ಕೆ ಏನು?

    ಬೆಂಗಳೂರು: ಜಾತಿ ಗಣತಿ (Caste Survey) ವರದಿ ರಾಜ್ಯ ರಾಜಕೀಯದಲ್ಲಿ ಭಾರೀ ಸದ್ದು ಗದ್ದಲ ಎಬ್ಬಿಸಿದ್ದು, ಜಾತಿಗಣತಿಯ ಜ್ವಾಲೆ ಕ್ಷಣಕ್ಷಣಕ್ಕೂ ಹೆಚ್ಚಾಗ್ತಿದೆ. ಭಾರೀ ಕೋಲಾಹಲ, ಸಾಕಷ್ಟು ಚರ್ಚೆಗೆ ಎಡೆ ಮಾಡಿಕೊಟ್ಟಿರುವ ಜಾತಿ ಜನಗಣತಿ ಇದೀಗ ಕ್ಲೈಮ್ಯಾಕ್ಸ್‌ ಹಂತಕ್ಕೆ ಬಂದು ನಿಂತಿದೆ. ವಿವಾದದ ಸುಳಿಗೆ ಸಿಲುಕಿ ಪ್ರಬಲ ಸಮುದಾಯಗಳ ಆಕ್ರೋಶದ ಕಿಚ್ಚಿಗೆ ಕಾರಣವಾಗಿರುವ ಜಾತಿ ಗಣತಿ ವರದಿಯ ಭವಿಷ್ಯ ಶುಕ್ರವಾರ ನಿರ್ಧಾರವಾಗಲಿದೆ.

    ಜಾತಿ ಗಣತಿ ವರದಿ ಚರ್ಚೆಗಾಗಿಯೇ ಸಿಎಂ ಸಿದ್ದರಾಮಯ್ಯ(CM Siddaramaiah) ನೇತೃತ್ವದಲ್ಲಿ ನಾಳೆ ಸಂಜೆ ವಿಶೇಷ ಸಚಿವ ಸಂಪುಟ ಸಭೆ (Cabinet Meeting) ಕರೆಯಲಾಗಿದೆ. ಹಿಂದುಳಿದ ವರ್ಗಗಳ ಶಾಶ್ವತ ಆಯೋಗ ಸಲ್ಲಿಸಿರುವ ಸಾಮಾಜಿಕ, ಆರ್ಥಿಕ ಸಮೀಕ್ಷಾ ವರದಿಯ ಬಗ್ಗೆ ಚರ್ಚೆ ನಡೆಸಿ ರಾಜ್ಯ ಸರ್ಕಾರ ತನ್ನ ನಿಲುವು ಪ್ರಕಟಿಸಲಿದೆ. ಇದನ್ನೂ ಓದಿ: ನಮ್ಮ ಸರ್ಕಾರ ತೆಗೆಯಲು ಪ್ಲ್ಯಾನ್‌ ನಡೆದಿದೆ ಒಗ್ಗಟ್ಟಾಗಿ ಇರಿ: ಖರ್ಗೆ ಶಾಕಿಂಗ್ ಹೇಳಿಕೆ

     

    ಕಳೆದ ಸಚಿವ ಸಂಪುಟ ಸಭೆಯಲ್ಲಿ ಜಾತಿ ಗಣತಿ ವರದಿ ಮಂಡನೆ ಮಾಡಲಾಗಿತ್ತಾದರೂ ಯಾವುದೇ ನಿರ್ಧಾರಕ್ಕೆ ಬಂದಿರಲಿಲ್ಲ. ಸಂಪುಟದ ಸಚಿವರಿಗೆ ವರದಿಯ ಪ್ರತಿಯನ್ನು ಅಧ್ಯಯನಕ್ಕಾಗಿ ನೀಡಿದ್ದರು. ನಾಳೆ ನಡೆಯುವ ವಿಶೇಷ ಸಂಪುಟ ಸಭೆ ಮೇಲೆ ಎಲ್ಲರ ಚಿತ್ತ ನೆಟ್ಟಿದೆ.  ಇದನ್ನೂ ಓದಿ: ಜಾತಿಗಣತಿ ಸುನಾಮಿಯಲ್ಲಿ ಸಿದ್ದರಾಮಯ್ಯ ಕೊಚ್ಚಿ ಹೋಗ್ತಾರೆ: ಕುಮಾರಸ್ವಾಮಿ ಆಕ್ರೋಶ

    ಸದ್ಯ ಬಹಿರಂಗಗೊಳ್ಳುತ್ತಿರುವ ಜಾತಿ ಗಣತಿ ವರದಿಯ ಅಂಕಿ-ಸಂಖ್ಯೆಗಳು ಪ್ರಭಾವಿ ಸಮುದಾಯಗಳ ವಿರೋಧಕ್ಕೆ ಕಾರಣವಾಗುತ್ತಿದೆ. ಅಷ್ಟೇ ಅಲ್ಲದೆ ಸ್ವಪಕ್ಷದಲ್ಲೂ ಜಾತಿ ಗಣತಿ ವರದಿಗೆ ವಿರೋಧ ವ್ಯಕ್ತವಾಗಿದೆ. ವಿರೋಧವನ್ನೂ ಲೆಕ್ಕಿಸದೆ ಸಿಎಂ ಸಿದ್ದರಾಮಯ್ಯ ನಾಳೆ ಏನ್ ನಿರ್ಧಾರ ಕೈಗೊಳ್ಳಲಿದ್ದಾರೆ ಎನ್ನುವುದು ಕುತೂಹಲ ಕೆರಳಿಸಿದೆ.

    ಸಿಎಂ ಮುಂದಿರುವ ಆಯ್ಕೆ ಏನು?
    – ಜಾತಿಗಣತಿ ವರದಿ ಬಿಡುಗಡೆ ಮಾಡುವುದು
    – ಜಾತಿಗಣತಿ ವರದಿ ಬಿಡುಗಡೆ ಮಾಡದಿರುವುದು
    – ಅಧ್ಯಯನಕ್ಕೆ ತಜ್ಞರ ಸಮಿತಿ ರಚಿಸುವುದು
    – ಸಚಿವ ಸಂಪುಟ ಉಪಸಮಿತಿ ರಚನೆ ಮಾಡುವುದು
    – ವಿಶೇಷ ಅಧಿವೇಶನ ಕರೆಯುವುದು

     

  • ವಕ್ಫ್‌ ತಿದ್ದುಪಡಿ ಮಸೂದೆಯಲ್ಲಿ ಏನು ಬದಲಾವಣೆಯಾಗಿದೆ? ಹಿಂದೆ ಏನಿತ್ತು?

    ವಕ್ಫ್‌ ತಿದ್ದುಪಡಿ ಮಸೂದೆಯಲ್ಲಿ ಏನು ಬದಲಾವಣೆಯಾಗಿದೆ? ಹಿಂದೆ ಏನಿತ್ತು?

    ನವದೆಹಲಿ: ವಿಪಕ್ಷಗಳು ಮತ್ತು ಮುಸ್ಲಿಮರ (Muslims) ವಿರೋಧದ ನಡುವೆ ಲೋಕಸಭೆಯಲ್ಲಿ (Lokasabha) ಇಂದು ವಕ್ಫ್ ತಿದ್ದುಪಡಿ ಮಸೂದೆ (Waqf Act Amendment Bill ಮಂಡನೆ ಆಗಲಿದೆ. ಮಧ್ಯಾಹ್ನ ಕೇಂದ್ರ  ಸಂಸದೀಯ ವ್ಯವಹಾರಗಳ ಖಾತೆಯ  ಸಚಿವ ಕಿರಣ್ ರಿಜಿಜು ಮಸೂದೆ ಮಂಡಿಸಲಿದ್ದಾರೆ.

    ಮಸೂದೆಯನ್ನು ಎನ್‌ಡಿಎ (NDA) ಒಕ್ಕೂಟದ 298 ಸಂಸದರು ಬೆಂಬಲಿಸಿದ್ದಾರೆ. ಇಂದೆ ವೋಟಿಂಗ್ ನಡೆಯೋ ಸಾಧ್ಯತೆ ಹೆಚ್ಚಿರುವ ಕಾರಣ ಎನ್‌ಡಿಎಯ ಎಲ್ಲಾ ಸಂಸದರು ಕಡ್ಡಾಯವಾಗಿ ಕಲಾಪಕ್ಕೆ ಬರಬೇಕೆಂದು ಆಯಾ ಪಕ್ಷಗಳು ವಿಪ್‌ ಜಾರಿ ಮಾಡಿದೆ. ಇದೇ ರೀತಿ ಕಾಂಗ್ರೆಸ್‌ ಸದಸ್ಯರು ಕಡ್ಡಾಯವಾಗಿ ಹಾಜರಾಗಬೇಕೆಂದು ವಿಪ್‌ ಜಾರಿ ಮಾಡಲಾಗಿದೆ. ಇದನ್ನೂ ಓದಿ: ಇಡೀ ‘ಇಂಡಿಯಾ ಒಕ್ಕೂಟ’ ವಕ್ಫ್‌ ಮಸೂದೆ ವಿರುದ್ಧ ಮತ ಚಲಾಯಿಸುತ್ತೆ: ಸಂಸದ ಪ್ರೇಮಚಂದ್ರನ್‌

    ವಕ್ಫ್ ತಿದ್ದುಪಡಿ ಬಿಲ್‌ನಲ್ಲೇನಿದೆ?
    ವಕ್ಫ್ ಆಸ್ತಿಗಳ ಸರ್ವೆ ಮತ್ತು ನಿಯಂತ್ರಣ
    * ಹಿಂದಿನ ಕಾನೂನು : ಸರ್ವೆಯನ್ನು ರಾಜ್ಯ ಸರ್ಕಾರ ನೇಮಿಸಿದ ಸರ್ವೆ ಆಯುಕ್ತರು ನಡೆಸ್ತಿದ್ದರು. ಈ ಪ್ರಕ್ರಿಯೆಯಲ್ಲಿ ಸರ್ಕಾರದ ನೇರ ಹಸ್ತಕ್ಷೇಪ ಕಡಿಮೆ ಇತ್ತು.
    * ಹೊಸ ತಿದ್ದುಪಡಿ : ಸರ್ವೆಗಳನ್ನು ಡಿಸಿಗಳಿಗೆ ವರ್ಗಾಯಿಸಲಾಗಿದೆ. ಡಿಸಿಗಳ ಮೇಲ್ವಿಚಾರಣೆಯಲ್ಲಿ ರಾಜ್ಯದ ಕಂದಾಯ ಕಾನೂನುಗಳಿಗೆ ಅನುಗುಣವಾಗಿ ಸರ್ವೆ ನಡೆಯಲಿದೆ. ಇದರಿಂದ ಸರ್ಕಾರಕ್ಕೆ ವಕ್ಫ್ ಆಸ್ತಿಗಳ ಮೇಲೆ ಹೆಚ್ಚಿನ ನಿಯಂತ್ರಣ ಸಿಗಲಿದೆ. ಇದನ್ನೂ ಓದಿ: ವಕ್ಫ್‌ ಬಿಲ್‌ ಮಂಡನೆ – ಬಿಲ್‌ ಪಾಸ್‌ ಆಗುತ್ತಾ? ಲೋಕಸಭೆಯಲ್ಲಿ ಬಲಾಬಲ ಹೇಗಿದೆ?

    ವಕ್ಫ್ ಘೋಷಣೆಗೆ ಷರತ್ತುಗಳು
    * ಹಿಂದಿನ ಕಾನೂನು: ವಕ್ಫ್ ಘೋಷಿಸಲು ಯಾವುದೇ ನಿರ್ದಿಷ್ಟ ಅವಧಿಯ ಷರತ್ತು ಇರಲಿಲ್ಲ. ಯಾರಾದರೂ ಮುಸ್ಲಿಂ ವ್ಯಕ್ತಿ ತಮ್ಮ ಆಸ್ತಿಯನ್ನು ವಕ್ಫ್ ಆಗಿ ಘೋಷಿಸಬಹುದಿತ್ತು.
    * ಹೊಸ ತಿದ್ದುಪಡಿ: ಇಸ್ಲಾಂ ಧರ್ಮವನ್ನು ಕನಿಷ್ಠ 5 ವರ್ಷ ಪಾಲಿಸಿದ ವ್ಯಕ್ತಿಯೊಬ್ಬರಿಗೆ ಮಾತ್ರ ವಕ್ಫ್ ಘೋಷಿಸುವ ಅಧಿಕಾರ ನೀಡಲಾಗಿದೆ. ಇದರಿಂದ ದುರುಪಯೋಗ ತಡೆಗಟ್ಟುವ ಉದ್ದೇಶವಿದೆ.

     

    ಮಹಿಳೆಯರಿಗೆ ಆಸ್ತಿ ಹಕ್ಕು
    * ಹಿಂದಿನ ಕಾನೂನು: ಮಹಿಳೆಯರಿಗೆ ಹಕ್ಕುಗಳನ್ನು ಸ್ಪಷ್ಟವಾಗಿ ಖಾತ್ರಿಪಡಿಸುವ ನಿರ್ದಿಷ್ಟ ಉಲ್ಲೇಖ ಇರಲಿಲ್ಲ.
    * ಹೊಸ ತಿದ್ದುಪಡಿ: ಮಹಿಳೆಯರಿಗೆ ಸಮಾನ ಹಕ್ಕುಗಳನ್ನು ಖಾತ್ರಿಪಡಿಸುವ ನಿಬಂಧನೆ ಸೇರಿಸಲಾಗಿದೆ. ಇದು ಲಿಂಗ ಸಮಾನತೆಯತ್ತ ಒಂದು ಹೆಜ್ಜೆ ಎಂದು ಪರಿಗಣನೆ.

    ವಕ್ಫ್ ಮಂಡಳಿಯ ರಚನೆ
    * ಹಿಂದಿನ ಕಾನೂನು: ಕೇಂದ್ರ, ರಾಜ್ಯ ವಕ್ಫ್ ಮಂಡಳಿಗಳಲ್ಲಿ ಮಹಿಳೆಯರು ಅಥವಾ ಮುಸ್ಲಿಮೇತರ ಸದಸ್ಯರನ್ನು ಸೇರಿಸುವ ಕಡ್ಡಾಯ ನಿಯಮ ಇರಲಿಲ್ಲ.
    * ಹೊಸ ತಿದ್ದುಪಡಿ: ಕೇಂದ್ರ ವಕ್ಫ್ ಮಂಡಳಿಯಲ್ಲಿ ಕನಿಷ್ಠ ಇಬ್ಬರು ಮಹಿಳೆಯರು, ಇಬ್ಬರು ಮುಸ್ಲಿಮೇತರ ಸದಸ್ಯರನ್ನು ನೇಮಿಸುವುದು ಕಡ್ಡಾಯ. ಇದೇ ರೀತಿ ರಾಜ್ಯ ವಕ್ಫ್ ಮಂಡಳಿಗಳಲ್ಲಿಯೂ ಈ ಬದಲಾವಣೆ ತರಲಾಗಿದೆ. ಇದನ್ನೂ ಓದಿ: ವಕ್ಫ್ ಮಸೂದೆಯ ಪರ ಮತ ಹಾಕಿ – ಸಂಸದರಿಗೆ ಕೇರಳ ಕ್ಯಾಥೋಲಿಕ್ ಬಿಷಪ್ ಸಂಘಟನೆ ಕರೆ

    ಲೆಕ್ಕಪರಿಶೋಧನೆ
    * ಹಿಂದಿನ ಕಾನೂನು: ವಕ್ಫ್ ಮಂಡಳಿಗಳ ಖಾತೆಗಳ ಲೆಕ್ಕಪರಿಶೋಧನೆಯನ್ನು ಮಂಡಳಿಯೇ ನೇಮಿಸಿದ ಲೆಕ್ಕಪರಿಶೋಧಕರು ಮಾಡುತ್ತಿದ್ದರು. ರಾಜ್ಯ ಸರ್ಕಾರಕ್ಕೂ ಆಡಿಟ್ ಮಾಡುವ ಅವಕಾಶ ಇತ್ತು.
    * ಹೊಸ ತಿದ್ದುಪಡಿ: ರಾಜ್ಯ ಸರ್ಕಾರವು ರಚಿಸುವ ಲೆಕ್ಕಪರಿಶೋಧಕರ ಸಮಿತಿಯೇ ಆಡಿಟ್ ನಡೆಸಬೇಕು. ಇದರಿಂದ ಸರ್ಕಾರದ ಮೇಲ್ವಿಚಾರಣೆ ಹೆಚ್ಚಾಗಲಿದೆ.

    ಆಸ್ತಿ ನೋಂದಣಿ ಮತ್ತು ಪಾರದರ್ಶಕತೆ
    * ಹಿಂದಿನ ಕಾನೂನು: ವಕ್ಫ್ ಆಸ್ತಿಗಳ ನೋಂದಣಿ ಮತ್ತು ವಿವರಗಳ ಸಲ್ಲಿಕೆಗೆ ಕಡ್ಡಾಯ ಸಮಯ ಮಿತಿ ಇರಲಿಲ್ಲ.
    * ಹೊಸ ತಿದ್ದುಪಡಿ: ಎಲ್ಲ ವಕ್ಫ್ ಆಸ್ತಿಗಳನ್ನು ಕಾಯಿದೆಯಡಿ ನೋಂದಾಯಿಸುವುದು ಕಡ್ಡಾಯ. 6 ತಿಂಗಳೊಳಗೆ ವಿವರ ಸಲ್ಲಿಸಬೇಕು. ಪ್ರತಿ 5 ವರ್ಷಕ್ಕೊಮ್ಮೆ ಸರ್ವೆ ನಡೆಸಬೇಕು.

  • ಯತ್ನಾಳ್‌ ಉಚ್ಚಾಟನೆ | ಸುದೀರ್ಘ ಅವಧಿಯಿಂದ ಸ್ಥಿತಿ-ಗತಿಗಳನ್ನು ಅವಲೋಕಿಸಿ ತೆಗೆದುಕೊಂಡ ಕ್ರಮ – ವಿಜಯೇಂದ್ರ

    ಯತ್ನಾಳ್‌ ಉಚ್ಚಾಟನೆ | ಸುದೀರ್ಘ ಅವಧಿಯಿಂದ ಸ್ಥಿತಿ-ಗತಿಗಳನ್ನು ಅವಲೋಕಿಸಿ ತೆಗೆದುಕೊಂಡ ಕ್ರಮ – ವಿಜಯೇಂದ್ರ

    ಬೆಂಗಳೂರು:  ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ (Basanagouda Patil Yatnal) ವಿರುದ್ಧದ ಶಿಸ್ತುಕ್ರಮ ವರಿಷ್ಠರು ಸುದೀರ್ಘ ಅವಧಿಯಿಂದ ಸ್ಥಿತಿ-ಗತಿಗಳನ್ನು ಅವಲೋಕಿಸಿ ಅನಿವಾರ್ಯವಾಗಿ ತೆಗೆದುಕೊಂಡಿರುವ ಕ್ರಮವಾಗಿರುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ( BY Vijayendra) ಹೇಳಿದ್ದಾರೆ.

    ಯತ್ನಾಳ್‌ವರನ್ನು ಬಿಜೆಪಿ 6 ವರ್ಷಗಳ ಉಚ್ಛಾಟನೆ ಮಾಡಿದ ಬೆನ್ನಲ್ಲೇ ವಿಜಯೇಂದ್ರ ಅವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಪ್ರಕಟಿಸಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಪೋಸ್ಟ್‌ನಲ್ಲಿ ಏನಿದೆ?
    ಭಾರತೀಯ ಜನತಾ ಪಾರ್ಟಿ (BJP) ಲಕ್ಷಾಂತರ ಕಾರ್ಯಕರ್ತರನ್ನು ಹೊಂದುವ ಮೂಲಕ ವಿಶ್ವದಲ್ಲಿ ಅಗ್ರಮಾನ್ಯತೆ ಪಡೆದಿರುವ ರಾಜಕೀಯ ಪಕ್ಷ, ಸಂಘ ಸಂಸ್ಕಾರ ಪಡೆದಿರುವ ಸಮರ್ಪಣಾ ಮನೋಭಾವದ ಕಾರ್ಯಕರ್ತರ ಬೆವರ ಪರಿಶ್ರಮದಿಂದ ಸಮೃದ್ಧ ವೃಕ್ಷದಂತೆ ಬೆಳೆದಿರುವ ಪಕ್ಷದಲ್ಲಿ ಶಿಸ್ತು-ತ್ಯಾಗಕ್ಕೆ ಮೊದಲ ಆದ್ಯತೆ. ಇದನ್ನೂ ಓದಿ: ಬಿಜೆಪಿಯಿಂದ ಬಸನಗೌಡ ಪಾಟೀಲ್‌ ಯತ್ನಾಳ್‌ ಉಚ್ಛಾಟನೆ

     

    ಪಕ್ಷದ ಹಿರಿಯರು ಹಾಗೂ ವರಿಷ್ಠರು ಈ ವಿಷಯದಲ್ಲಿ ಎಂದಿಗೂ ರಾಜಿ ಮಾಡಿಕೊಂಡಿರುವ ಉದಾಹರಣೆ ನಮ್ಮ ಮುಂದಿಲ್ಲ, ಸದ್ಯ ಬಸನಗೌಡ ಪಾಟೀಲ್‌ ಯತ್ನಾಳ್‌ ಅವರ ವಿರುದ್ಧದ ಶಿಸ್ತುಕ್ರಮ ವರಿಷ್ಠರು ಸುದೀರ್ಘ ಅವಧಿಯಿಂದ ಸ್ಥಿತಿ-ಗತಿಗಳನ್ನು ಅವಲೋಕಿಸಿ ಅನಿವಾರ್ಯವಾಗಿ ತೆಗೆದುಕೊಂಡಿರುವ ಕ್ರಮವಾಗಿರುತ್ತದೆ. ಪಕ್ಷದ ಬೆಳವಣಿಗೆಯಲ್ಲಿನ ಕಹಿ ಘಟನೆಗಳನ್ನು ಉಲ್ಲೇಖಿಸಿ ಪಕ್ಷದ ವರಿಷ್ಠರಿಗೆ ನಾನು ಎಂದೂ ದೂರುಗಳನ್ನು ಹೇಳಿಕೊಂಡಿಲ್ಲ, ದಾಖಲಿಸಿಯೂ ಇಲ್ಲ. ಪೂಜ್ಯ ತಂದೆ ಯಡಿಯೂರಪ್ಪನವರು ಎಲ್ಲರನ್ನೂ ಸಮಚಿತ್ತ ಭಾವದಿಂದ ನೋಡಿ, ಪಕ್ಷವನ್ನು ಕುಟುಂಬದಂತೆ ಬೆಳೆಸಿದ ಮಾದರಿಯಲ್ಲಿಯೇ ನಡೆಯಬೇಕೆಂಬ ಸಂಕಲ್ಪ ಹೊತ್ತು, ಸಂಘದ ಹಿರಿಯರು ಮತ್ತು ಪಕ್ಷದ ಹಿರಿಯರ ಮಾರ್ಗದರ್ಶನದಲ್ಲಿ ಮುನ್ನಡೆಯುತ್ತಿದ್ದೇನೆ.

    ಕೆಲ ದಿನಗಳ ಹಿಂದೆ ನಡೆದ ಕಹಿ ಪ್ರಸಂಗಗಳಿಂದ ಎಂದಿಗೂ ನಾನು ಉದ್ವೇಗಗೊಳ್ಳಲಿಲ್ಲ, ಯಾರೊಂದಿಗೂ ದುಃಖ ತೋಡಿಕೊಂಡಿಲ್ಲ, ಸಮರ್ಪಣೆ-ತ್ಯಾಗದ ಪಾಠವನ್ನು ಹೇಳಿಕೊಡುವ ಸಂಸ್ಕಾರವಂತ ಸಂಘಟನೆಯ ವ್ಯವಸ್ಥೆಯಲ್ಲಿ ಬೆಳೆದು ಬಂದ ನಾನು ಸಹನೆ-ತಾಳ್ಮೆಯನ್ನು ಜವಾಬ್ದಾರಿ ನಿರ್ವಹಿಸುವ ನಿಟ್ಟಿನಲ್ಲಿ ಆಧಾರ ಸ್ಥಂಭವೆಂದು ಪರಿಗಣಿಸಿ ಮುನ್ನಡಿದಿದ್ದೇನೆ. ಈ ನಿಟ್ಟಿನಲ್ಲಿ ವರಿಷ್ಠರು ತೆಗೆದುಕೊಂಡಿರುವ ಶಿಸ್ತು ಕ್ರಮವನ್ನು ನಾನು ಸಂಭ್ರಮಿಸಲಾರೆ ಬದಲಾಗಿ ಈ ಬೆಳವಣಿಗೆಯನ್ನು ದುರದೃಷ್ಟಕರವೆಂದು ದುಃಖಿಸುತ್ತೇನೆ. ವಿಶ್ವಾಸ ರಾಜಕಾರಣವನ್ನು ಎಲ್ಲರೊಡಗೂಡಿ ಮುಂದುವರೆಸಿ ಪಕ್ಷ ಸಂಘಟನೆಗೆ ಕಟ್ಟಕಡೆಯ ಕಾರ್ಯಕರ್ತರನ್ನೂ ಅಣಿಗೊಳಿಸುವ ನಿಟ್ಟಿನಲ್ಲಿ ಮುನ್ನಡೆಯಲಿದ್ದೇನೆ. ಭವಿಷ್ಯದಲ್ಲಿಯೂ ನಾನು ನಡೆಯುವ ಹಾದಿಯಲ್ಲಿ ಎಲ್ಲಾದರೂ ಎಡವಿದರೆ, ಅದನ್ನು ತಿದ್ದಿ ತೀಡುವ ಅಧಿಕಾರ ಪಕ್ಷದ ಹಿರಿಯರೆಲ್ಲರಿಗೂ ಇದ್ದೇ ಇದೆ.

    ಎಲ್ಲರೂ ಸೇರಿ ರಚನಾತ್ಮಕ ಸಲಹೆಗಳನ್ನು ಸ್ವೀಕರಿಸಿ ಪಕ್ಷವನ್ನು ಮುನ್ನಡೆಸೋಣ, ಭ್ರಷ್ಟಾಚಾರ ಹಾಗೂ ಸ್ವಜನ ಪಕ್ಷಪಾತದಲ್ಲಿ ಮುಳುಗಿರುವ ಜನವಿರೋಧಿ ಕಾಂಗ್ರೆಸ್ ಸರ್ಕಾರವನ್ನು ಅಧಿಕಾರದಿಂದ ಕೆಳಗಿಳಿಸಿ, ಸಮೃದ್ಧ ಕರ್ನಾಟಕವನ್ನು ಕಟ್ಟುವ ನಿಟ್ಟಿನಲ್ಲಿ ವಿಕಸಿತ ಭಾರತದ ಸಂಕಲ್ಪ ಹೊತ್ತ ಮಾನ್ಯ ಪ್ರಧಾನಿ ನರೇಂದ್ರ ಮೋದಿ ಜೀ ಅವರಿಗೆ ಹೆಗಲು ಕೊಡೋಣ, ಪಕ್ಷದ ವರಿಷ್ಟರ ನಿರೀಕ್ಷೆಯ ಗುರಿ ತಲುಪೋಣ.

  • ಒಳಮೀಸಲಾತಿ, ವಾರದೊಳಗೆ ನಾಗಮೋಹನ್ ದಾಸ್ ಮಧ್ಯಂತರ ವರದಿ: ಮಹದೇವಪ್ಪ

    ಒಳಮೀಸಲಾತಿ, ವಾರದೊಳಗೆ ನಾಗಮೋಹನ್ ದಾಸ್ ಮಧ್ಯಂತರ ವರದಿ: ಮಹದೇವಪ್ಪ

    ಬೆಂಗಳೂರು: ಪರಿಶಿಷ್ಠ ಜಾತಿಗಳಲ್ಲಿ ಒಳಮೀಸಲಾತಿ (Internal Reservation) ಕಲ್ಪಿಸುವ ವಿಚಾರವಾಗಿ ಇಂದು‌‌ ಮಹತ್ವದ ಸಭೆ ನಡೆಯಿತು. ‌ಕಾವೇರಿ ನಿವಾಸದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ನೇತೃತ್ವದಲ್ಲಿ ನಡೆದ ಸಭೆಯಲ್ಲಿ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ (Nagamohan Das) ಹಾಜರಿದ್ದರು.

    ಸಚಿವರಾದ ಜಿ.ಪರಮೇಶ್ವರ್, ಹೆಚ್.ಸಿ.ಮಹದೇವಪ್ಪ, ಕೆ.ಹೆಚ್.ಮುನಿಯಪ್ಪ, ಆರ್.ಬಿ.ತಿಮ್ಮಾಪುರ್, ಪ್ರಿಯಾಂಕ್ ಖರ್ಗೆ, ಶಿವರಾಜ್ ತಂಗಡಗಿ ಭಾಗಿಯಾಗಿದರು. ಒಳ ಮೀಸಲಾತಿ ಸಂಬಂಧ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಸಮಿತಿ ಮಧ್ಯಂತರ ವರದಿ ನೀಡುವ ಬಗ್ಗೆ ಚರ್ಚೆ ನಡೆಯಿತು. ಸಭೆ ಬಳಿಕ‌ ದಲಿತ ಸಮುದಾಯದ ಪಂಚ ಸಚಿವರು ಸುದ್ದಿಗೋಷ್ಠಿ ನಡೆಸಿ‌ ಒಳ ಮೀಸಲಾತಿ ನೀಡಲು ಸರ್ಕಾರ ಬದ್ಧವಾಗಿದೆ ಎಂದು ಒಗ್ಗಟ್ಟು ಪ್ರದರ್ಶಿಸಿದರು. ಇದನ್ನೂ ಓದಿ: ರೀಲ್ಸ್ ತಂದ ಸಂಕಷ್ಟ: ರಜತ್ ಬದಲು ವಿಚಾರಣೆಗೆ ಹಾಜರಾದ ಪತ್ನಿ ಅಕ್ಷಿತಾ

     

    ಸಚಿವ ಹೆಚ್.ಸಿ.ಮಹದೇವಪ್ಪ‌ (Mahadevappa) ಮಾತನಾಡಿ, ಒಳ‌ಮೀಸಲಾತಿ ಬಗ್ಗೆ ವಾರದಲ್ಲಿ ನಾಗಮೋಹನ್ ದಾಸ್ ಆಯೋಗ ಮಧ್ಯಂತರ ವರದಿ ಕೊಡುತ್ತಾರೆ. ಮಧ್ಯಂತರ ವರದಿ ಬಳಿಕ ಒಳಮೀಸಲಾತಿ ಜಾರಿ ತೀರ್ಮಾನ ಮಾಡುವುದಾಗಿ ಹೇಳಿದರು.

    ಒಳಮೀಸಲಾತಿಯಾಗುವ ತನಕ ಯಾವುದೇ ಹೊಸ ನೇಮಕ, ಬಡ್ತಿ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಸಚಿವ ಕೆ.ಎಚ್.ಮುನಿಯಪ್ಪ ಮಾತನಾಡಿ, ಸರ್ಕಾರ ಒಳ ಮೀಸಲಾತಿ ಜಾರಿಗೆ ಬದ್ಧವಾಗಿದೆ, ಮಧ್ಯಂತರ ವರದಿ ಕೊಟ್ಟ ಬಳಿಕ‌ ಮತ್ತೆ ಸಿಎಂ ‌ಜೊತೆ ಸಭೆ ಸೇರಿ ತೀರ್ಮಾನ ಮಾಡುವುದಾಗಿ ಹೇಳಿದರು.

     

  • ಕುಮಾರಸ್ವಾಮಿ ಮರ್ಯಾದೆಯಿಂದ ಇದ್ರೆ ಕ್ಷೇಮ: ಡಿಕೆಶಿ ವಾರ್ನಿಂಗ್

    ಕುಮಾರಸ್ವಾಮಿ ಮರ್ಯಾದೆಯಿಂದ ಇದ್ರೆ ಕ್ಷೇಮ: ಡಿಕೆಶಿ ವಾರ್ನಿಂಗ್

    ಬೆಂಗಳೂರು: ಇಷ್ಟು ದಿನ ಕದನವಿರಾಮ ಘೋಷಣೆ ಮಾಡಿದ್ದ ಡಿಸಿಎಂ ಡಿಕೆ ಶಿವಕುಮಾರ್‌ (DK Shivakumar) ಮತ್ತೆ ಹೆಚ್‌ಡಿ ಕುಮಾರಸ್ವಾಮಿ (HD Kumaraswamy) ವಿರುದ್ಧ ರಣರಣ ಅಂದಿದ್ದಾರೆ. ಸುಮ್ನೆ ಮರ್ಯಾದೆಯಾಗಿದ್ದರೆ ಅವರಿಗೂ ಕ್ಷೇಮ ಎಂದು ಹೆಚ್ ಡಿಕೆಗೆ ಡಿಕೆಶಿ ವಾರ್ನ್ ಮಾಡಿದ್ದಾರೆ.

    ಹೆಚ್‌‌ಡಿಕೆ ಭೂಮಿ ಒತ್ತುವರಿ ತೆರವು ದ್ವೇಷದ ರಾಜಕಾರಣ ಎಂಬ ಹೇಳಿಕೆ ಡಿಕೆಶಿ ಗರಂ ಆಗಿದ್ದಾರೆ. ವಿಧಾನಸೌಧದಲ್ಲಿ ಮಾತನಾಡಿದ ಅವರು, ನೋಡ್ರಿ ಇಡಿ ದೇಶಕ್ಕೆ ಗೊತ್ತು, ನಾವ್ಯಾರಾದರೂ ಕೇಸ್ ಹಾಕಿದ್ದೇವಾ? ಹದಿನೈದು- ಇಪತ್ತು ವರ್ಷದಿಂದ ಆ ಹಿರೇಮಠ ನನ್ಮೇಲೂ ಕೇಸ್ ಹಾಕಿದ್ದಾರೆ. ಅವರ ಮೇಲೆಯೂ ಕೇಸ್ ಹಾಕಿದ್ದಾರೆ. ಕುಮಾರಸ್ವಾಮಿ ಯಾಕೆ ಗಾಬರಿ ಮಾಡ್ಕೋಬೇಕು ಅಂತಾ ತಿರುಗೇಟು ನೀಡಿದರು.

     

    ಏನ್ ದ್ವೇಷದ ರಾಜಕಾರಣ ಮಾಡುತ್ತಾರೆ? ಕೋರ್ಟ್ ಆಫೀಸರ್‌ಗೆ ನಿರ್ದೇಶನ ನೀಡಿದೆ. ಈ ಹಿಂದೆಯೂ ಲೋಕಾಯುಕ್ತದಲ್ಲಿ ಎಲ್ಲಾ ಕೇಸ್ ನಡೆದಿರೋದು ನೆನಪಿದೆ. ಸಿದ್ದರಾಮಯ್ಯ ಏನ್ ದ್ವೇಷ ಮಾಡ್ತಾರೆ. ನಾವೇನ್ ಮಾಡ್ತೀವಿ ಅಂತಾ ಕಿಡಿಕಾರಿದ್ರು.

    ಅವರ ಡಿಎನ್‌ಎನಲ್ಲಿ ದ್ವೇಷ ರಾಜಕಾರಣ ಇದೆ. ಮೈಸೂರಲ್ಲಿ ಏನ್ ಏನ್ ಮಾತಾಡಿದ್ರು. ಅವರ ತಂದೆ ಏನ್ ಏನ್ ಮಾತಾಡಿದ್ರು. ನನ್ಮೇಲೆ ಏನ್ ಏನ್ ಕೇಸ್ ಹಾಕಿಸಿದ್ರು ಗೊತ್ತಿದೆ. ನನ್ನ ತಂಗಿ, ನನ್ ಹೆಂಡ್ತಿ , ನನ್ನ ತಮ್ಮ ಮೇಲೆ ಅದಿರು ಕಳ್ಳತನ ಮಾಡಿದ್ದೇವೆ ಎಂದು ಕೇಸ್ ಹಾಕಿಸಿದ್ರು. ನಮಗೂ ಬಳ್ಳಾರಿಗೂ ಸಂಬಂಧವೇ ಇಲ್ಲ, ಆಗ ಹಾಕಿಸಿದ್ದು ದ್ವೇಷ ಅಲ್ವಾ? ಸುಮ್ಮನೆ ಆಯ್ತು ಎಂದು ಜೊತೆಗೆ ಸರ್ಕಾರ ಮಾಡಿದ್ದೆವು. ಕುಮಾರಸ್ವಾಮಿ ಮರ್ಯಾದೆಯಿಂದ ಇದ್ರೆ ಅವರಿಗೂ ಕ್ಷೇಮ ಎಂದು ಎಚ್ಚರಿಕೆ ನೀಡಿದರು.

     

  • ಬೆಂಗಳೂರಿನಲ್ಲೇ ಪ್ರಭಾವಿ ಸಚಿವರ ಹನಿ ಟ್ರ್ಯಾಪ್‌ಗೆ ಮತ್ತೊಬ್ಬ ನಾಯಕನಿಂದ ಯತ್ನ!

    ಬೆಂಗಳೂರಿನಲ್ಲೇ ಪ್ರಭಾವಿ ಸಚಿವರ ಹನಿ ಟ್ರ್ಯಾಪ್‌ಗೆ ಮತ್ತೊಬ್ಬ ನಾಯಕನಿಂದ ಯತ್ನ!

    ಬೆಂಗಳೂರು: ರಾಜ್ಯದ ಪ್ರಭಾವಿ ಸಚಿವರೊಬ್ಬರು ಹನಿಟ್ರ್ಯಾಪ್‌ (Honey Trap) ಖೆಡ್ಡಾದಲ್ಲಿ ಸಿಲುಕಿದ್ದಾರೆ ಎಂಬ ವಿಚಾರ ರಾಜ್ಯ ರಾಜಕೀಯದ ಪಡಸಾಲೆಯಲ್ಲಿ ಭಾರೀ ಸಂಚಲನ ಮೂಡಿಸಿದೆ. ತುಮಕೂರು (Tumakuru) ಭಾಗದ ಸಚಿವರನ್ನು ಮಟ್ಟ ಹಾಕಲು ಮತ್ತೊಬ್ಬ ಪ್ರಭಾವಿ ನಾಯಕರೊಬ್ಬರು, ಹನಿಟ್ರ್ಯಾಪ್‌ ಬಲೆಗೆ ಬೀಳಿಸಿರುವ ಆರೋಪ ಕೇಳಿ ಬಂದಿದೆ.

    ಪಬ್ಲಿಕ್‌ ಟಿವಿಗೆ ಸಿಕ್ಕಿದ ಮಾಹಿತಿ ಪ್ರಕಾರ ಆ ನಾಯಕನಿಗೆ ಎರಡು ಸಲ ಬೆಮಗಳೂರಿನಲ್ಲಿ ಹನಿಟ್ರ‍್ಯಾಪ್ ಯತ್ನದ ಪ್ಲ್ಯಾನ್‌ ಮಾಡಲಾಗಿತ್ತು. ಆದರೆ ಆ ನಾಯಕ ಹನಿ ಜಾಲದ ಟ್ರ್ಯಾಪ್‌ ಬೀಳಲಿಲ್ಲ

    2 ಬಾರಿ ಹನಿಟ್ರ್ಯಾಪ್‌ ಯತ್ನ ನಡೆದ ಬೆನ್ನಲ್ಲೇ ಆ ನಾಯಕ ಇದರ ಹಿಂದೆ ಯಾರಿದ್ದಾರೆ ಎಂದು ತಿಳಿಯಲು ಅವರದ್ದೇ ತಂಡದಿಂದ ಮಾಹಿತಿ ಕಲೆ ಹಾಕಿದ್ದಾರೆ. ಆ ಬಳಿಕ ಆ ನಾಯಕನಿಗೆ ದದು ಪೊಲಿಟಿಕಲ್ ಹನಿ ಗೇಮ್ ಎನ್ನುವ ವಿಚಾರ ಗೊತ್ತಾಗಿದೆ.

     

    ರಾಜಕೀಯ ಭವಿಷ್ಯಕ್ಕೆ (Political Life) ಕಲ್ಲುಹಾಕಲೆಂದು ಹನಿಟ್ರ್ಯಾಪ್‌ ಯತ್ನ ಮಾಡಲಾಗುತ್ತಿದೆ ಎಂಬುದನ್ನು ಅರಿತ ನಾಯಕ ಆಲರ್ಟ್ ಆಗಿ ಸಂಬಂಧಪಟ್ಟವರ ಗಮನಕ್ಕೆ ತಂದಿದ್ದಾರೆ. ಇಬ್ಬರು ಒಂದೇ ಪಕ್ಷದಲ್ಲಿರುವ ಕಾರಣ ಇಲ್ಲಿಯವರೆಗೆ ದೂರು ಕೊಟ್ಟಿಲ್ಲ. ಆದರೆ ದೂರು ನೀಡಲು ಮುಂದಾಗಿದ್ದಾರೆ ಎನ್ನಲಾಗುತ್ತಿದೆ.

    ಈ ವಿಚಾರದ ಬಗ್ಗೆ ಕಾಂಗ್ರೆಸ್‌ ನಾಯಕರೇ ಆಕ್ರೋಶ ಹೊರಹಾಕಿದ್ದಾರೆ. ಸುಸಂಸ್ಕೃತ ರಾಜ್ಯಕ್ಕೆ ಸಿಡಿ ಯೂನಿಟ್‌ನಿಂದ ಕೆಟ್ಟ ಹೆಸರು ಬಂದಿದೆ. ಸಿಡಿ ರಾಜಕಾರಣ ಮಾಡೋರಿಗೆ ಛೀಮಾರಿ ಹಾಕಬೇಕು ಎಂದು ಕಾಂಗ್ರೆಸ್ ಹಿರಿಯ ನಾಯಕ ಬಿಕೆ ಹರಿಪ್ರಸಾದ್ ಅಕ್ರೋಶ ಹೊರಹಾಕಿದ್ದಾರೆ.

    ಇದು ದುರ್ದೈವದ ಸಂಗತಿ. ಕೆಲವರಿಗೆ ಇದುವೇ ಉದ್ಯೋಗ ಆಗಿದ್ದು ಇದು ಸರಿ ಅಲ್ಲ ಎಂದು ಸಚಿವ ಆರ್‌ಬಿ ತಿಮ್ಮಾಪುರ ಬೇಸರಿಸಿಕೊಂಡಿದ್ದಾರೆ. ಹನಿಟ್ರ್ಯಾಪ್‌ ಮಾಡುವವರಿಗೆ ಕ್ಷಮೆ ಇಲ್ಲ ಎಂದು ಸಚಿವ ಬೈರತಿ ಸುರೇಶ್ ಎಚ್ಚರಿಸಿದ್ದಾರೆ.

     

  • ಗ್ಯಾರಂಟಿಗೆ ಅನುದಾನ ಕಳೆದ ಬಾರಿ ಎಷ್ಟಿತ್ತು? ಈ ಬಾರಿ ಎಷ್ಟು ಹಂಚಿಕೆಯಾಗಿದೆ? ಸಾಲ ಎಷ್ಟು?

    ಗ್ಯಾರಂಟಿಗೆ ಅನುದಾನ ಕಳೆದ ಬಾರಿ ಎಷ್ಟಿತ್ತು? ಈ ಬಾರಿ ಎಷ್ಟು ಹಂಚಿಕೆಯಾಗಿದೆ? ಸಾಲ ಎಷ್ಟು?

    ಬೆಂಗಳೂರು: ಪಂಚ ಗ್ಯಾರಂಟಿಗಳು ಸೇರಿ ಕಲ್ಯಾಣ ಕಾರ್ಯಕ್ರಮಗಳು ಉಚಿತ ಕೊಡುಗೆಗಳಲ್ಲ.. ಇವು ಆರ್ಥಿಕ, ಸಾಮಾಜಿಕ ತತ್ವದಡಿ ಮಾಡಿರುವ ಹೂಡಿಕೆ ಎಂದು ಬಜೆಟ್‌ನಲ್ಲಿ ಸಿಎಂ ಸಿದ್ದರಾಮಯ್ಯ ವ್ಯಾಖ್ಯಾನಿಸಿದ್ದಾರೆ. ಈ ಮೂಲಕ ಗ್ಯಾರಂಟಿಗಳನ್ನು ಸಮರ್ಥಿಸಿದ್ದಾರೆ.

    ಪಂಚ ಗ್ಯಾರಂಟಿಗಳಿಗಾಗಿ 51,034 ಕೋಟಿ ರೂ. ಅನುದಾನ ಮೀಸಲಿಟ್ಟಿದ್ದಾರೆ. ಇದು ಕಳೆದ ಬಾರಿಗಿಂತ 975 ಕೋಟಿ ಕಡಿಮೆ ಎಂಬುದು ಗಮನಾರ್ಹ. ಗೃಹಲಕ್ಷ್ಮಿ ಹಣವನ್ನು ಹೂಡಿಕೆ ಮಾಡಲು ಮಹಿಳೆಯರಿಗೆ ಉತ್ತೇಜನ ನೀಡುವ ಸಲುವಾಗಿ, ಸಿಎಂ ವಿಶೇಷ ಯೋಜನೆ ಪ್ರಕಟಿಸಿದ್ದಾರೆ.

    ಗೃಹಲಕ್ಷ್ಮಿ ದುಡ್ಡನ್ನು ಸ್ವಸಹಾಯ ಗುಂಪುಗಳ ಮೂಲಕ ಹೂಡಿಕೆ ಮಾಡಲು ಅಕ್ಕ ಸಹಕಾರಿ ಸಂಘ ಸ್ಥಾಪನೆಯ ಘೋಷಣೆ ಮಾಡಿದ್ದಾರೆ. ಉಳಿತಾಯ, ಉದ್ಯಮಶೀಲತೆ ಮತ್ತು ತ್ವರಿತ ಸಾಲ ಸೌಲಭ್ಯಕ್ಕಾಗಿ ಈ ಯೋಜನೆ ಎಂದು ಸಿಎಂ ಹೇಳಕೊಂಡಿದ್ದಾರೆ. ಈ ಮೂಲಕ ಪರೋಕ್ಷವಾಗಿ ಮೈಕ್ರೋಫೈನಾನ್ಸ್ ವ್ಯವಸ್ಥೆಗೆ ಸರ್ಕಾರ ಗುದ್ದು ನೀಡಿದೆ.  ಇದನ್ನೂ ಓದಿ: Karnataka Budget 2025: ಯಾವ ಇಲಾಖೆಗೆ ಎಷ್ಟು ಹಣ ಹಂಚಿಕೆ?

    ಸಿದ್ದು ಬಜೆಟ್ ಲೆಕ್ಕಾಚಾರ
    ಗಾತ್ರ – 4,09,549 ಕೋಟಿ ರೂ. (ಕಳೆದ ಬಾರಿ: 3,71,121 ಕೋಟಿ  ರೂ.  ಜಾಸ್ತಿ: 38,166 ಕೋಟಿ ರೂ.)
    ಸಾಲ – 1,16,000 ಕೋಟಿ ರೂ. (ಕಳೆದ ಬಾರಿ: 1,10,000 ಕೋಟಿ ರೂ.  ಜಾಸ್ತಿ: 10,000 ಕೋಟಿ ರೂ.)

    ಗ್ಯಾರಂಟಿ ಅನುದಾನ
    ಗೃಹಲಕ್ಷ್ಮಿ:
    28,608 ಕೋಟಿ ರೂ. ಮೀಸಲಿಡಲಾಗಿದೆ ಕಳೆದ ಬಜೆಟ್‌ನಲ್ಲಿ 28,608.40 ಕೋಟಿರೂ. ಅನುದಾನ ನೀಡಲಾಗಿತ್ತು. ಈ ಬಾರಿ 40 ಲಕ್ಷ ರೂ. ಕಡಿಮೆ ಹಣವನ್ನು ಹಂಚಲಾಗಿದೆ.

    ಶಕ್ತಿ:
    5,300 ಕೋಟಿ ರೂ. ಮೀಸಲಿಡಲಾಗಿದೆ. ಕಳೆದ ಬಾರಿ 5,015 ಕೋಟಿ ರೂ. ಮೀಸಲಿಡಲಾಗಿತ್ತು. ಹಾಗೆ ನೋಡಿದರೆ ಈ ಬಾರಿ 285 ಕೋಟಿ ರೂ. ಜಾಸ್ತಿ ಹಣ ಹಂಚಿಕೆ ಮಾಡಲಾಗಿದೆ.

    ಗೃಹಜ್ಯೋತಿ:
    10,100 ಕೋಟಿ ರೂ. ಹಣವನ್ನು ಹಂಚಲಾಗಿದೆ. ಕಳೆದ ಬಾರಿ 9,657 ಕೋಟಿ ರೂ. ಮೀಸಲಿಡಲಾಗಿತ್ತು. ಈ ಬಜೆಟ್‌ನಲ್ಲಿ 443 ಕೋಟಿ ರೂ. ಹೆಚ್ಚು ಅನುದಾನ ನೀಡಲಾಗಿದೆ.

    ಅನ್ನಭಾಗ್ಯ:
    6,426 ಕೋಟಿ ರೂ. ಅನುದಾನ ಹಂಚಿಕೆ ಮಾಡಲಾಗಿದೆ. ಕಳೆದ ಬಾರಿ 8,079 ಕೋಟಿ ರೂ. ಮೀಸಲಿಡಲಾಗಿತ್ತು. ಕಳೆದ ಬಾರಿಗೆ ಹೋಲಿಕೆ ಮಾಡಿದರೆ 1,653 ಕೋಟಿ ರೂ. ಅನುದಾನ ಕಡಿಮೆಯಾಗಿದೆ. ಇದನ್ನೂ ಓದಿ: Karnataka Budget: ಒಂದು ರೂಪಾಯಿ ಬಂದಿದ್ದು ಎಲ್ಲಿಂದ? ಹೋಗಿದ್ದು ಎಲ್ಲಿಗೆ?

    ಯುವನಿಧಿ:
    600 ಕೋಟಿ ರೂ. ಮೀಸಲಿಡಲಾಗಿದೆ. ಕಳೆದ ಬಜೆಟ್‌ನಲ್ಲಿ 650 ಕೋಟಿ ರೂ. ಮೀಸಲಿಡಲಾಗಿತ್ತು. ಈ ಬಾರಿ 50 ಕೋಟಿ ರೂ. ಅನುದಾನ ಕಡಿಮೆಯಾಗಿದೆ.

    ಗ್ಯಾರಂಟಿ ಯೋಜನೆಗಳು ಯಾವುದು?
    ಗೃಹಜ್ಯೋತಿ : ಎಲ್ಲಾ ಮನೆಗಳಿಗೂ 200 ಯೂನಿಟ್‌ ಉಚಿತ ವಿದ್ಯುತ್‌
    ಗೃಹಲಕ್ಷ್ಮಿ : ಪ್ರತಿ ಮನೆ ಯಜಮಾನಿಗೆ ಪ್ರತಿ ತಿಂಗಳು 2,000 ರೂ.
    ಅನ್ನಭಾಗ್ಯ : ಬಿಪಿಎಲ್‌ ಕುಟುಂಬಗಳಿಗೆ 10 ಕೆಜಿ ಆಹಾರ ಧಾನ್ಯ
    ಯುವನಿಧಿ : ಎರಡು ವರ್ಷಗಳ ಕಾಲಕ್ಕೆ ನಿರುದ್ಯೋಗಿ ಭತ್ಯೆ – ಪದವೀಧರರಿಗೆ ತಿಂಗಳಿಗೆ 3,000 ರೂ. ಮತ್ತು ಡಿಪ್ಲೋಮಾ ಮಾಡಿದವರಿಗೆ ತಿಂಗಳಿಗೆ 1,500 ರೂ.
    ಶಕ್ತಿ: ಸರ್ಕಾರಿ ಬಸ್ಸುಗಳಲ್ಲಿ ಎಲ್ಲಾ ಮಹಿಳೆಯರಿಗೂ ಉಚಿತ ಪ್ರಯಾಣ