Tag: ರಾಜಕೀಯ ಮೀಸಲಾತಿ

  • ಹಿಂದುಳಿದ ವರ್ಗಗಳ ರಾಜಕೀಯ ಮೀಸಲಾತಿಗಾಗಿ ಎಲ್ಲ ಕಾನೂನಾತ್ಮಕ ಪ್ರಯತ್ನ: ಬೊಮ್ಮಾಯಿ

    ಹಿಂದುಳಿದ ವರ್ಗಗಳ ರಾಜಕೀಯ ಮೀಸಲಾತಿಗಾಗಿ ಎಲ್ಲ ಕಾನೂನಾತ್ಮಕ ಪ್ರಯತ್ನ: ಬೊಮ್ಮಾಯಿ

    ಬೆಂಗಳೂರು: ಹಿಂದುಳಿದ ವರ್ಗಗಳ ರಾಜಕೀಯ ಮೀಸಲಾತಿಗಾಗಿ ಎಲ್ಲ ಕಾನೂನಾತ್ಮಕ ಪ್ರಯತ್ನ ಮಾಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

    ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಒದಗಿಸಲು ಕಾನೂನಾತ್ಮಕವಾಗಿ ಎಲ್ಲ ಪ್ರಯತ್ನಗಳನ್ನು ಮಾಡಲು ತೀರ್ಮಾನಿಸಲಾಗಿದೆ. ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸಂಬಂಧಪಟ್ಟಂತೆ ಕಾನೂನು ಸಚಿವರು, ಅಡ್ವೊಕೇಟ್ ಜನರಲ್ ಹಾಗೂ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಸುಪ್ರೀಂ ಕೋರ್ಟ್‍ನ ಎರಡು ತೀರ್ಪುಗಳ ಸಂಪೂರ್ಣ ವಿಶ್ಲೇಷಣೆ ಮಾಡಲಾಗುತ್ತಿದೆ. ಹಿಂದುಳಿದ ವರ್ಗಗಳಿಗೆ ರಾಜಕೀಯ ಪ್ರಾತಿನಿಧ್ಯ ನೀಡಲು ಆಯೋಗವನ್ನು ರಚಿಸಲಾಗಿದೆ. ವಿರೋಧಪಕ್ಷದ ನಾಯಕರು ಈ ಬಗ್ಗೆ ಪತ್ರ ಬರೆದಿದ್ದಾರೆ. ಈ ಎಲ್ಲ ವಿಷಯಗಳ ಬಗ್ಗೆ ಚರ್ಚೆ ನಡೆಸಲಾಗುವುದು ಎಂದರು. ಇದನ್ನೂ ಓದಿ: ಯಾರ್ಯಾರಿಗೆ ಏನು ನೋವಿದೆಯೋ ಗೊತ್ತಿಲ್ಲ: ರಮ್ಯಾ ಟ್ವೀಟ್‍ಗೆ ಉತ್ತರ ಕೊಟ್ಟ ಡಿಕೆಶಿ

    court order law

    ಮೀಸಲಾತಿ ವಿಚಾರದಲ್ಲಿ ತೆಗೆದುಕೊಳ್ಳಬೇಕಾದ ನಿಲುವು ಹಾಗೂ ಸಾಧಕ ಬಾಧಕಗಳ ಬಗ್ಗೆ ಕಾನೂನು ತಜ್ಞರೊಂದಿಗೆ ಚರ್ಚಿಸಿ ತೀರ್ಮಾನಿಸಲಾಗುವುದು. ಇದುವರೆಗೂ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಸಂವಿಧಾನಾತ್ಮಕವಾಗಿ ಹಿಂದುಳಿದ ವರ್ಗಗಳಿಗೆ ಕಾನೂನು ರೀತ್ಯ ಪ್ರಾತಿನಿಧ್ಯ ನೀಡಲಾಗುತ್ತಿದೆ. ಹಿಂದುಳಿದ ವರ್ಗಗಳ ರಾಜಕೀಯ ಪ್ರಾತಿನಿಧ್ಯ ನೀಡಿಯೇ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಮಾಡಬೇಕೆಂಬುದು ಸರ್ಕಾರ ಹಾಗೂ ಎಲ್ಲ ಪಕ್ಷಗಳ ಅಭಿಪ್ರಾಯವಾಗಿದ್ದು, ಈ ನಿಟ್ಟಿನಲ್ಲಿ ಚುನಾವಣೆ ಪ್ರಕ್ರಿಯೆಗಳ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ ಎಂದರು. ಇದನ್ನೂ ಓದಿ: ಕಾಂಗ್ರೆಸ್‍ನಿಂದಲೇ ಟ್ರೋಲ್‍ಗೆ ಕರೆ – ನನ್ನನ್ನು ನಾನೇ ಟ್ರೋಲ್ ಮಾಡ್ಕೋತಿನಿ ಎಂದ ರಮ್ಯಾ

    ಓಬಿಸಿಯನ್ನು ಪರಿಗಣಿಸುವ ಪ್ರಕ್ರಿಯೆ ಸಮಯ ತೆಗೆದುಕೊಳ್ಳಲಿದೆಯೇ ಎಂಬ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಮಧ್ಯಪ್ರದೇಶ ರಾಜ್ಯದವರು ಒಂದು ಆಯೋಗವನ್ನು ರಚಿಸಿ ವರದಿ ತರಿಸಿ ಸುಪ್ರೀಂ ಕೋರ್ಟ್‍ಗೆ ನೀಡಿತ್ತು. ಈ ಸಂದರ್ಭದಲ್ಲಿ ಬಂದ ತೀರ್ಪಿನ ಬಗ್ಗೆ ರೀವ್ಯೂ ಪಿಟಿಷನ್ ಹಾಕಿಕೊಂಡಿದ್ದಾರೆ. ರಾಜ್ಯದಲ್ಲಿ ಮೀಸಲಾತಿ ಬಗ್ಗೆ ಹಲವಾರು ವರದಿಗಳಿದ್ದು, ಅವುಗಳನ್ನು ಬಳಸಿಕೊಳ್ಳುವ ಬಗ್ಗೆಯೂ ಚಿಂತನೆ ನಡೆಯುತ್ತಿದೆ ಎಂದು ತಿಳಿಸಿದರು.

    ಸುಪ್ರೀಂ ಕೋರ್ಟ್‍ನ ಸೂಚನೆಯಂತೆ ಹಿಂದುಳಿದ ವರ್ಗಗಳ ರಾಜಕೀಯ ಮೀಸಲಾತಿಯ ಬಗ್ಗೆ ನಿಖರವಾದ ಅಂಕಿಅಂಶಗಳುಳ್ಳ ವರದಿಯನ್ನು ಸಿದ್ಧಪಡಿಸಲು ಆಯೋಗವನ್ನು ರಚಿಸಲಾಗಿದೆ. ಯಾವೆಲ್ಲ ಸಮುದಾಯಗಳಿಗೆ ಎಷ್ಟು ರಾಜಕೀಯ ಪ್ರಾತಿನಿಧ್ಯ ದೊರಕುತ್ತಿದೆ ಎಂಬ ನಿಖರ ಅಂಕಿಅಂಶಗಳ ಆಧಾರದ ಮೇಲೆ ಹಿಂದುಳಿದ ವರ್ಗಗಳ ಮೀಸಲಾತಿ ನೀಡುವ ಬಗ್ಗೆ ಸುಪ್ರೀಂಕೋರ್ಟಿಗೆ ವರದಿ ಸಲ್ಲಿಸಲಾಗುತ್ತದೆ. ಹಿಂದಿನ ಸುಪ್ರೀಂ ಕೋರ್ಟ್ ಆದೇಶವನ್ನು ಈಗಾಗಲೇ ಪಾಲಿಸಲಾಗುತ್ತಿದೆ. ಪ್ರಸ್ತುತ ಇನ್ನೊಂದು ಆದೇಶ ಬಂದಿದೆ. ಇದರ ಪರಿಣಾಮಗಳ ಬಗ್ಗೆ ಕಾನೂನು ತಜ್ಞರೊಂದಿಗೆ ಚರ್ಚಿಸಲಾಗುವುದು ಎಂದರು.

  • ಅತಿ ಹಿಂದುಳಿದ ವರ್ಗಗಳಿಗೂ ರಾಜಕೀಯ ಮೀಸಲಾತಿ ನೀಡಲು ಆಯೋಗ ರಚಿಸಬೇಕು – ರಾಜ್ಯಪಾಲರಿಗೆ ಮನವಿ

    ಅತಿ ಹಿಂದುಳಿದ ವರ್ಗಗಳಿಗೂ ರಾಜಕೀಯ ಮೀಸಲಾತಿ ನೀಡಲು ಆಯೋಗ ರಚಿಸಬೇಕು – ರಾಜ್ಯಪಾಲರಿಗೆ ಮನವಿ

    ಬೆಂಗಳೂರು: ಸ್ಥಳೀಯ ಸಂಸ್ಥೆಗಳ ಆಡಳಿತದಲ್ಲಿ ಅತಿ ಹಿಂದುಳಿದ ವರ್ಗಗಳಿಗೆ ರಾಜಕೀಯ ಮೀಸಲಾತಿ ಕಲ್ಪಿಸಿಕೊಡಬೇಕು ಮತ್ತು ಕಾಂತರಾಜು ವರದಿಯನ್ನು ತಕ್ಷಣ ಸರ್ಕಾರ ಜಾರಿಗೊಳಿಸಬೇಕು ಎಂದು ಕರ್ನಾಟಕ ರಾಜ್ಯ ಅತಿ ಹಿಂದುಳಿದ ವರ್ಗಗಳ ಜಾಗೃತಿ ವೇದಿಕೆ ಅಧ್ಯಕ್ಷರಾದ ಎಮ್.ಸಿ.ವೇಣುಗೋಪಾಲ್ ನೇತೃತ್ವದ ನಿಯೋಗ ನಿನ್ನೆ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗಿದೆ.

    ಮನವಿ ಸಲ್ಲಿಸಿದ ನಂತರ ಈ ಕುರಿತು ಎಮ್.ಸಿ.ವೇಣುಗೋಪಾಲ್ ಅವರು ಮಾಧ್ಯಮಗಳೊಂದಿಗೆ ಮಾತನಾಡಿದ್ದು, ರಾಜ್ಯಪಾಲರು ನಮ್ಮ ಮನವಿಗೆ ಧನಾತ್ಮಕವಾಗಿ ಸ್ಪಂದಿಸಿದ್ದಾರೆ. ರಾಜ್ಯದ ಅತಿ ಹಿಂದುಳಿದ ವರ್ಗಗಳಿಗೆ ರಾಜಕೀಯ ಮೀಸಲಾತಿ ಕಲ್ಪಿಸಿ ಅವರನ್ನು ಮುಖ್ಯವಾಹಿನಿಗೆ ತರುವ ಕುರಿತಾಗಿ ಘನತೆವೆತ್ತ ಉಚ್ಚ ನ್ಯಾಯಾಲಯ ಮತ್ತು ಸರ್ವೋಚ್ಛ ನ್ಯಾಯಾಲಯ ಅನೇಕ ಬಾರಿ ಉಲ್ಲೇಖಿಸಿದೆ. ಆದರೂ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ, ಶಾಸನಸಭೆ ಮತ್ತು ಸಂಸತ್ತಿನಲ್ಲಿ ಅತಿ ಹಿಂದುಳಿದ ಸಮುದಾಯಗಳಿಗೆ ಮೀಸಲಾತಿಯಲ್ಲಿ ಅನ್ಯಾಯವಾಗುತ್ತಿದೆ ಎಂದು ಅಸಮಾಧಾನ ಹೊರಹಾಕಿದರು. ಇದನ್ನೂ ಓದಿ:  ನಮ್ಮ ಮನೆಯ ಮಕ್ಕಳು ಅಮಾಯಕರು – ಬಂಧಿತರ ಕುಟುಂಬದವರ ಅಳಲು

    thawar chand gehlot

    ಸ್ಥಳೀಯ ಸಂಸ್ಥೆಗಳ ಚುನಾವಣೆಯ ಸಂಬಂಧ ಕರ್ನಾಟಕ ಸರ್ಕಾರ ಉದ್ಯೋಗ ಮತ್ತು ಶಿಕ್ಷಣಕ್ಕಾಗಿ ಮಾಡಿರುವ ಪಟ್ಟಿಯಲ್ಲಿರುವ ಜಾತಿ ಮತ್ತು ಉಪಜಾತಿಗಳನ್ನು ಸ್ಥಳೀಯ ಸಂಸ್ಥೆಗಳಿಗೂ ಸಹ ಅಳವಡಿಸಿಕೊಂಡಿರುವುದು ಸರಿಯಲ್ಲ. ಸರ್ಕಾರ ಆಯೋಗವೊಂದನ್ನು ರಚಿಸಿ ರಾಜಕೀಯವಾಗಿ ಹಿಂದುಳಿದ ಜಾತಿಗಳನ್ನು ಗುರುತಿಸಿ, ಅಂತಹವುಗಳನ್ನು ಪಟ್ಟಿಮಾಡಿ ರಾಜಕೀಯ ಮೀಸಲಾತಿ ನೀಡಬೇಕು. ಸ್ಥಳೀಯ ಸಂಸ್ಥೆಗಳ ಮೀಸಲಾತಿಯಂತೆಯೇ ಶಾಸನಸಭೆ ಮತ್ತು ಸಂಸತ್ತಿನಲ್ಲಿ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಕಲ್ಪಿಸಬೇಕು ಎಂದು ಆಗ್ರಹಿಸಿದರು.

    ಹೆಚ್.ಕಾಂತರಾಜು ಹಿಂದುಳಿದ ವರ್ಗಗಳ ಆಯೋಗ 2015ರಲ್ಲಿ ನಡೆಸಿರುವ ಸಾಮಾಜಿಕ – ಶೈಕ್ಷಣಿಕ ಸಮೀಕ್ಷೆಯ ವರದಿಯನ್ನು ಕೂಡಲೇ ಸ್ವೀಕರಿಸಿ ಬಹಿರಂಗ ಪಡಿಸಬೇಕು ಎಂದು ಒತ್ತಾಯಿಸಿದರು.

    ಕರ್ನಾಟಕ ಸರ್ಕಾರ 2015ರಲ್ಲಿ ಅಂದಾಜು 162 ಕೋಟಿ ರೂಪಾಯಿ ಖರ್ಚು ಮಾಡಿ, ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮೂಲಕ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಕೈಗೊಂಡಿದೆ. ಆಯೋಗವು ವಿಷಯ ತಜ್ಞರ ಸಲಹೆ ಮತ್ತು ಬಿಇಎಲ್ ಸಂಸ್ಥೆಯ ಸಹಯೋಗದೊಂದಿಗೆ ವೈಜ್ಞಾನಿಕವಾಗಿ ಸಮೀಕ್ಷೆ ನಡೆಸಿದೆ. ಸಮೀಕ್ಷೆಯಲ್ಲಿ ಕರ್ನಾಟಕದಲ್ಲಿ ಅಸ್ಥಿತ್ವದಲ್ಲಿರುವ ಎಲ್ಲ ಜಾತಿ ಸಮುದಾಯಗಳ ದತ್ತಾಂಶಗಳನ್ನು ಸಂಗ್ರಹಿಸಲಾಗಿದೆ ಎಂದು ವಿವರಿಸಿದರು.

    ಆಯೋಗ ಸಂಗ್ರಹಿಸಿರುವ ದತ್ತಾಂಶಗಳನ್ನು ಪಡೆದು ಎಲ್ಲ ಸಮುದಾಯಗಳ ಆರ್ಥಿಕ ಅಭಿವೃದ್ಧಿ ಕಾರ್ಯಕ್ರಮ ಹಮ್ಮಿಕೊಳ್ಳಲು ಅನುಕೂಲವಾಗುತ್ತದೆ. ಆದ್ದರಿಂದ ಸಮೀಕ್ಷೆ ದತ್ತಾಂಶವನ್ನು ಸರ್ಕಾರ ಕೂಡಲೇ ಸ್ವೀಕರಿಸಿ ಸಾರ್ವಜನಿಕರ ಅವಗಾಹನೆಗೆ ತರಬೇಕು. ಈಗಾಗಲೇ ಸಮೀಕ್ಷೆ ವರದಿ ಸ್ವೀಕರಿಸಿ ಬಹಿರಂಗಪಡಿಸಲು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಹೈಕೋರ್ಟ್‍ನಲ್ಲಿ ರಿಟ್ ಅರ್ಜಿ ಸಲ್ಲಿಸಲಾಗಿದೆ. ಉಚ್ಚ ನ್ಯಾಯಾಲಯ ರಿಟ್ ಅರ್ಜಿ ಸ್ವೀಕರಿಸಿ ವಿಚಾರಣೆ ಇಟ್ಟುಕೊಂಡಿದೆ ಎಂದು ತಿಳಿಸಿದರು. ಇದನ್ನೂ ಓದಿ:  ಉಕ್ರೇನ್ ವಿರುದ್ಧ ರಷ್ಯಾ ಯುದ್ಧ ಕಹಳೆ – ರಷ್ಯಾ ಮೇಲೆ ಹಣಕಾಸು ಸೇರಿ ವಿವಿಧ ನಿರ್ಬಂಧ ಹೇರಿದ ಅಮೆರಿಕ!

    ಪಂಚಮಸಾಲಿ ಸಮುದಾಯವನ್ನು ಪ್ರವರ್ಗ 2 ಎ ಗೆ ಸೇರಿಸಬಾರದು. ಕೇಂದ್ರದ ಹಿಂದುಳಿದ ವರ್ಗಗಳ ಪಟ್ಟಿಗೆ ರಾಜ್ಯದ ಸುಮಾರು 73 ಜಾತಿ-ಉಪಜಾತಿಗಳನ್ನು ಸೇರಿಸಬೇಕು. ನ್ಯಾ. ಸುಭಾಷ್ ಆಡಿ ಸಮಿತಿಯನ್ನು ರದ್ದುಗೊಳಿಸಬೇಕು ಎಂಬುದರ ಬಗ್ಗೆ ಈಗಾಗಲೇ ಸಿಎಂ ಸೇರಿದಂತೆ ಸಂಬಂಧ ಪಟ್ಟ ಇಲಾಖೆಯವರಿಗೆ ಮನವಿ ಸಲ್ಲಿಸಿದ್ದೇವೆ ಎಂದರು.

    ಇದೇ ವೇಳೆ ಕರ್ನಾಟಕ ಅತಿ ಹಿಂದುಳಿದ ವರ್ಗಗಳ ಜಾಗೃತ ವೇದಿಕೆಯ ಕಾರ್ಯದರ್ಶಿ ನಾಗರಾಜ್, ಖಜಾಂಚಿ ಮಂಜುನಾಥ್ ಸೇರಿದಂತೆ ನಿವೃತ್ತ ಅಧಿಕಾರಿಗಳು ಹಾಜರಿದ್ದರು.