Tag: ರಾಜಕೀಯ ಪ್ರವೇಶ

  • ರಜನಿಕಾಂತ್ ರಾಜಕೀಯಕ್ಕೆ ವಿದಾಯ, ಪತ್ರ ವೈರಲ್- ಸ್ಪಷ್ಟನೆ ನೀಡಿದ ತಲೈವಾ

    ರಜನಿಕಾಂತ್ ರಾಜಕೀಯಕ್ಕೆ ವಿದಾಯ, ಪತ್ರ ವೈರಲ್- ಸ್ಪಷ್ಟನೆ ನೀಡಿದ ತಲೈವಾ

    ಚೆನ್ನೈ: ಖ್ಯಾತ ನಟ ರಜನಿಕಾಂತ್ ರಾಜಕೀಯ ಪ್ರವೇಶಿಸುವ ಕುರಿತು ಹಲವು ವರ್ಷಗಳಿಂದ ಚರ್ಚೆ ನಡೆಯುತ್ತಲೇ ಇದೆ. ಇದೆಲ್ಲದರ ನಡುವೆ ಹಲವು ಊಹಾಪೋಹಗಳು ಸಹ ಹಬ್ಬುತ್ತಿದ್ದು, ರಜನಿ ರಾಜಕೀಯ ತೊರೆಯುವ ಪತ್ರವೊಂದು ವೈರಲ್ ಆಗಿದೆ. ಇದಕ್ಕೆ ಸ್ವತಃ ರಜನಿಕಾಂತ್ ಅವರೇ ಸ್ಪಷ್ಟನೆ ನೀಡಿದ್ದಾರೆ.

    ಈ ಕುರಿತು ಟ್ವೀಟ್ ಮಾಡಿರುವ ಅವರು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಪತ್ರ ನಕಲಿ. ಅದರಲ್ಲಿರುವುದು ನಿಜವಾದ ಅಂಶವಲ್ಲ, ಆರೋಗ್ಯ ಕುರಿತು ನೀಡಿರುವ ಮಾಹಿತಿ ಮಾತ್ರ ನಿಜ ಎಂದಿದ್ದಾರೆ. ಈ ಮೂಲಕ ರಜನಿ ರಾಜಕೀಯದಿಂದ ದೂರವಾಗಲಿದ್ದಾರೆ ಎಂಬ ಪತ್ರದ ಕುರಿತು ಸ್ಪಷ್ಟನೆ ನೀಡಿದ್ದಾರೆ. ಸಕ್ರಿಯ ರಾಜಕೀಯದ ಕುರಿತು ಮುಂದಿನ ದಿನಗಳಲ್ಲಿ ಸ್ಪಷ್ಟಪಡಿಸುತ್ತೇನೆ ಎಂದಿದ್ದಾರೆ.

    ರಜನಿ ಟ್ವೀಟ್‍ನಲ್ಲೇನಿದೆ?
    ನನ್ನ ಹೇಳಿಕೆಯಂತೆಯೇ ಇರುವ ಪತ್ರ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಅದು ನನ್ನ ಹೇಳಿಕೆಯಲ್ಲ, ನನ್ನ ಆರೋಗ್ಯ ಮತ್ತು ವೈದ್ಯರು ಸಲಹೆ ನೀಡಿರುವ ಕುರಿತ ಅಂಶಗಳು ಮಾತ್ರ ಸತ್ಯ. ರಾಜಕೀಯದ ಕುರಿತ ಮಾಹಿತಿ ಸುಳ್ಳು. ನನ್ನ ರಜಿನಿ ಮಕ್ಕಳ್ ಮಂದಿರದ ಸದಸ್ಯರೊಂದಿಗೆ ಸಮಾಲೋಚಿಸಿದ ನಂತರ ನನ್ನ ರಾಜಕೀಯ ನಿಲುವಿನ ಬಗ್ಗೆ ಪ್ರಕಟಣೆ ನೀಡುತ್ತೇನೆ ಎಂದು ಸ್ಪಷ್ಟಪಡಿಸಿದ್ದಾರೆ.

    ವೈರಲ್ ಆದ ಪತ್ರದಲ್ಲೇನಿದೆ?
    ಜೀವನಕ್ಕೆ ಹೆದರುವುದಿಲ್ಲ, ಜನರ ಏಳಿಗೆ ಬಗ್ಗೆ ಹೆಚ್ಚು ಕಾಳಜಿ ಇದೆ. ಭರವಸೆ ನೀಡಿದಂತೆ ರಾಜಕೀಯ ಬದಲಾವಣೆಗಾಗಿ, ರಾಜಕೀಯದಲ್ಲಿ ಸಕ್ರಿಯವಾಗಿ ತೊಡಗಿಕೊಳ್ಳಬೇಕಿದೆ. ನನ್ನ ಆರೋಗ್ಯ ಹದಗೆಟ್ಟರೆ, ರಾಜಕೀಯ ನನಗೆ ಸವಾಲು ಎನಿಸಬಹುದು. ಜನವರಿ 15ರೊಳಗೆ ಪಕ್ಷ ಪ್ರಾರಂಭಿಸಬೇಕು. ಹೀಗಾಗಿ ಡಿಸೆಂಬರ್‍ನಲ್ಲಿಯೇ ನನ್ನ ನಿರ್ಧಾರ ಘೋಷಿಸಬೇಕಿದೆ. ಇಂತಹ ಪರಿಸ್ಥಿತಿಯಲ್ಲಿ ನಾನು ಏನು ಮಾಡಬೇಕೆಂಬ ನಿರ್ಧಾರ ಕೈಗೊಳ್ಳಲು ಅಭಿಮಾನಿಗಳಿಗೆ ಮತ್ತು ಜನರಿಗೆ ಬಿಡುತ್ತೇನೆ. ಜನರ ತೀರ್ಪು ದೇವರ ತೀರ್ಪು, ಜೈ ಹಿಂದ್ ಎಂದು ಪತ್ರದಲ್ಲಿ ಬರೆಯಲಾಗಿದೆ.

    ರಜನಿಕಾಂತ್ ರಾಜಕೀಯಕ್ಕೆ ಆಗಮಿಸುವ ಕುರಿತು 2017ರಲ್ಲೇ ಘೋಷಣೆ ಮಾಡಿದ್ದಾರೆ. ಅಲ್ಲದೆ ತಮ್ಮದೇ ಸ್ವಂತ ಪಕ್ಷ ಕಟ್ಟಿ ರಾಜಕೀಯದಲ್ಲಿ ಬದಲಾವಣೆ ತರುವುದಾಗಿ ಸಹ ತಿಳಿಸಿದ್ದರು. ಆದರೆ ನಂತರ ಈ ಬಗ್ಗೆ ಹೆಚ್ಚು ಅಪ್‍ಡೇಟ್ ಸಿಕ್ಕಿಲ್ಲ. ಲೋಕಸಭಾ ಚುನಾವಣೆ ವೇಳೆ ಸಹ ರಾಜಕೀಯದ ಕುರಿತು ತಮ್ಮ ನಿರ್ಧಾರ ಘೋಷಿಸಲಿದ್ದಾರೆ ಎಂದು ಸುದ್ದಿಯಾಗಿತ್ತು. ಆದರೆ ರಜನಿಕಾಂತ್ ಇನ್ನೂ ಸಮಯ ಬೇಕು ಎಂದರು. ಇದೆಲ್ಲದರ ಮಧ್ಯೆ ಬಿಜೆಪಿ ಸೇರಲಿದ್ದಾರೆ ಎಂಬ ಅಂಶ ಸಹ ಚರ್ಚೆಗೆ ಬಂದಿತ್ತು. ಆದರೆ ರಾಜಕೀಯಕ್ಕೆ ಆಗಮಿಸುವ ಕುರಿತು ಘೋಷಣೆ ಮಾಡಿ ಮೂರು ವರ್ಷದ ಕಳೆದರೂ ಈ ವರೆಗೆ ಯಾವುದೇ ಬೆಳವಣಿಗೆ ಕಂಡುಬಂದಿಲ್ಲ. ಹೀಗಾಗಿ ರಜನಿ ರಾಜಕೀಯದಿಂದ ಹಿಂದೆ ಸರಿಯಲಿದ್ದಾರೆ ಎಂಬ ಚರ್ಚೆ ನಡೆಯುತ್ತಿದೆ.

  • ನಾನು ರಾಜಕೀಯ ಸೇರಿದ್ರೆ ಮೂರನೇ ಮಹಾಯುದ್ಧ ಆಗುತ್ತೆ: ಇಂದ್ರಾ ನೂಯಿ

    ನಾನು ರಾಜಕೀಯ ಸೇರಿದ್ರೆ ಮೂರನೇ ಮಹಾಯುದ್ಧ ಆಗುತ್ತೆ: ಇಂದ್ರಾ ನೂಯಿ

    ನವದೆಹಲಿ: ನಾನು ಏನಾದರೂ ರಾಜಕೀಯ ಪ್ರವೇಶ ಮಾಡಿದರೆ, ನನ್ನ ನೇರ ಮಾತುಗಳಿಂದಲೇ ಮೂರನೇ ಮಹಾಯುದ್ಧ ನಡೆಯೋದು ಗ್ಯಾರೆಂಟಿ ಎಂದು ಪೆಪ್ಸಿಕೋ ಕಂಪನಿಯ ಮಾಜಿ ಸಿಇಒ ಇಂದ್ರಾ ನೂಯಿ ಹೇಳಿದ್ದಾರೆ.

    ಮಾನವೀಯತೆ, ಉದ್ಯಮದಲ್ಲಿ ಸಾಧನೆ ಮತ್ತು ಮಹಿಳಾ ಪರ ನಿಲುವಿಗಾಗಿ ಏಷ್ಯಾ ಸೊಸೈಟಿ ಸಂಸ್ಥೆ 62 ವರ್ಷದ ಇಂದ್ರಾ ನೂಯಿ ಅವರಿಗೆ “ಗೇಮ್ ಚೇಂಜರ್ ಅವಾರ್ಡ್ ಆಫ್ ದಿ ಇಯರ್” ಪ್ರಶಸ್ತಿಯನ್ನು ನೀಡಿ ಗೌರವಿಸಿತು.

    ಈ ಸಮಾರಂಭದಲ್ಲಿ ನಡೆದ ಮಾತುಕತೆಯಲ್ಲಿ, ಅಮೇರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮಂತ್ರಿಮಂಡಲವನ್ನ ಸೇರಲು ಇಚ್ಛಿಸುತ್ತೀರ ಎಂಬ ಪ್ರಶ್ನೆಗೆ ಉತ್ತರಿಸಿದ ನೂಯಿ, “ನನಗೂ ಮತ್ತು ರಾಜಕೀಯಕ್ಕೂ ಹೊಂದಿಕೊಳ್ಳಲು ಅಸಾಧ್ಯ. ಏಕೆಂದರೆ ನಾನು ಎಲ್ಲವನ್ನ ನೇರವಾಗಿ ಹೇಳಿಕೊಳ್ಳುತ್ತೇನೆ. ನಾನು ರಾಜತಾಂತ್ರಿಕಳಲ್ಲ. ಯಾವ ರಾಜತಾಂತ್ರಿಕತೆಯ ಬಗ್ಗೆಯೂ ನನಗೆ ಗೊತ್ತಿಲ್ಲ. ನಾನೇನಾದರೂ ರಾಜಕೀಯ ಪ್ರವೇಶ ಮಾಡಿದರೆ ನನ್ನಿಂದಲೇ ಮೂರನೇ ಮಹಾಯುದ್ಧ ಉಂಟಾಗುವುದು ಖಚಿತ. ರಾಜಕೀಯಕ್ಕೆ ನನ್ನನ್ನು ದೂಡುವ ಕೆಲಸವನ್ನ ಮಾಡಬೇಡಿ” ಎಂದರು.

    ನೂಯಿಯವರ 40 ವರ್ಷದ ಉದ್ಯಮದ ಕಾರ್ಯ ವೈಖರಿಯ ಬಗ್ಗೆ ಕೇಳಿದಾಗ,”ನಾನು ದಿನದಲ್ಲಿ ಸುಮಾರು 18-20 ತಾಸಿನವರೆಗೆ ಕೆಲಸ ಮಾಡುತ್ತಿದ್ದೆ. ಇಡೀ ದಿನ ಆಫೀಸಿನಲ್ಲಿ ಕೆಲಸ ಮಾಡುವ ನನಗೆ ಈಗ ಹುದ್ದೆಯಿಂದ ಕೆಳಗಿಳಿದ ನಂತರ ಏನು ಮಾಡಬೇಕೆಂದು ಗೊತ್ತಾಗುತ್ತಿಲ್ಲ. ಬೆಳಗ್ಗೆ 4 ಘಂಟೆಗೆ ಶುರುವಾಗುತ್ತಿದ್ದ ನನ್ನ ದಿನಚರಿಯಿಂದ ಈಗ ನನಗೆ ಮುಕ್ತಿ ದೊರೆತಿದೆ ಎಂದು ಹೇಳಿದರು.

    ವಿಶ್ವದ ಎರಡನೇ ತಂಪು ಪಾನೀಯದ ಪೆಪ್ಸಿಕೋ ಕಂಪೆನಿಯಲ್ಲಿ ಸಿಇಒ ಆಗಿ ಕಾರ್ಯನಿರ್ವಹಿಸಿದ್ದ ನೂಯಿ 12 ವರ್ಷಗಳ ನಂತರ ಕಂಪೆನಿಯಿಂದ ಹೊರಬರುತ್ತಿದ್ದಾರೆ. ಅಕ್ಟೋಬರ್ 3ಕ್ಕೆ ಅವರ ಅವಧಿ ಮುಕ್ತಾಯವಾಗಿದ್ದು, 2019 ರವರೆಗೂ ಕಾರ್ಯನಿರ್ವಹಿಸುವುದಾಗಿ ಹೇಳಿದ್ದಾರೆ. ಇಂದ್ರಾ ನೂಯಿರವರು 1980 ರಲ್ಲಿ ರಾಜ್ ನೂಯಿ ಎಂಬವರನ್ನು ವಿವಾಹವಾಗಿದ್ದು, ಇಬ್ಬರು ಮಕ್ಕಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ರಾಜಕೀಯ ಪ್ರವೇಶದ ಕುರಿತು ಮನದಾಳದ ಇಂಗಿತ ವ್ಯಕ್ತಪಡಿಸಿದ ಪ್ರಕಾಶ ರೈ

    ರಾಜಕೀಯ ಪ್ರವೇಶದ ಕುರಿತು ಮನದಾಳದ ಇಂಗಿತ ವ್ಯಕ್ತಪಡಿಸಿದ ಪ್ರಕಾಶ ರೈ

    ಬೆಂಗಳೂರು: ಕೆಳ ದಿನಗಳಿಂದ ಹೆಚ್ಚು ವಿವಾದಾತ್ಮಕ ಹೇಳಿಕೆಗಳಿಂದ ಸುದ್ದಿಯಾಗುತ್ತಿರುವ ಖ್ಯಾತ ನಟ ಪ್ರಕಾಶ್ ರೈ ಅವರು ಇಂದು ಸ್ವತಃ ತಮ್ಮ ರಾಜಕೀಯ ಪ್ರವೇಶದ ಕುರಿತು ತಮ್ಮ ಮನದಾಳದ ಇಂಗಿತವನ್ನ ಹೊರ ಹಾಕಿದ್ದಾರೆ.

    ಪ್ರೆಸ್‍ಕ್ಲಬ್ ವತಿಯಿಂದ ನೀಡಲಾಗುವ ವರ್ಷದ ವ್ಯಕ್ತಿ ಪ್ರಶಸ್ತಿ ಸ್ವೀಕಾರ ಬಳಿಕ ಮಾತನಾಡಿದ ಅವರು, ಇಂದು ದೇಶದಲ್ಲಿ ಮತೀಯ ರಾಜಕೀಯ ನಡೆಯುತ್ತಿದೆ. ಒಂದೇ ಧರ್ಮದವರು ಬಾಳಬೇಕು ಎನ್ನುವ ಹಿಟ್ಲರ್ ಸಂಸ್ಕೃತಿ ನಮ್ಮಲ್ಲಿದೆ. ನನಗೆ ರಾಜಕೀಯಕ್ಕೆ ಬರುವ ಆಸೆಯಿಲ್ಲ. ಹಾಗಂತ ಹೆಚ್ಚು ಒತ್ತಾಯ ಮಾಡಿದರೆ ರಾಜಕೀಯ ಪ್ರವೇಶ ಮಾಡುತ್ತೇನೆ. ತೊಡೆ ತಟ್ಟಿ ಬನ್ನಿ ಅಂದರೆ ಅದೇನು ದೊಡ್ಡ ವಿಷಯ ಅಲ್ಲ ಎಂದು ಮೂಲಕ ಪರೋಕ್ಷವಾಗಿ ರಾಜಕೀಯ ಪ್ರವೇಶ ಮಾಡುವ ಬಗ್ಗೆ ಹೇಳಿದರು.

    ಲಂಕೇಶ್ ಅವರಿಂದ ನಾನು ಹೆಚ್ಚು ಪ್ರಭಾವಿತನಾದವನು. ನನ್ನ ಸ್ವಭಾವ ಗುರುಗಳಾದ ಲಂಕೇಶ್ ಹೇಳಿಕೊಟ್ಟ ಪಾಠ. ನಟ ಅಂತ ಇಂದು ನೀವು ನನಗೆ ಪ್ರಶಸ್ತಿ ನೀಡಿಲ್ಲ. ರಾಜಕೀಯ, ಸಮಾಜದ ಪರಿಸ್ಥಿತಿ ವಿರುದ್ಧ ಹೋರಾಟದ ಹಾದಿಗೆ ಧೈರ್ಯ ತುಂಬಲು ಈ ಪ್ರಶಸ್ತಿ ನೀಡಿದ್ದಿರಿ ಎಂದರು.

    ಇದೇ ವೇಳೆ ಗೌರಿ ಹತ್ಯೆಯ ವಿಚಾರದಲ್ಲಿ ನಾನು ಧ್ವನಿ ಎತ್ತಿದ್ದೇನೆ. ಇಂತಹ ಹತ್ಯೆಗಳ ವಿರುದ್ಧ ಎಲ್ಲರೂ ಗಟ್ಟಿ ಧ್ವನಿ ಎತ್ತಬೇಕು. ಪತ್ರಕರ್ತರ ಧ್ವನಿ ಅಡಗಿಸುವ ಕೆಲಸ ಇಂದು ನಡೆಯುತ್ತಿದೆ. ಇದರ ವಿರುದ್ಧ ಗಟ್ಟಿ ಧ್ವನಿ ಎತ್ತಬೇಕು. ಏನೇನೊ ಮಾತಾಡಿ ಮತ್ತೆ ಕ್ಷಮೆ ಕೇಳುವ ಕೆಲಸ ಇಂದು ಮಾಡುತ್ತಿದ್ದಾರೆ. ಕ್ಷಮೆ ಕೇಳಿದವರನ್ನು ಕ್ಷಮಿಸೋಣ ಆದರೆ ಅವರು ಆಡಿದ ಮಾತು ಮರೆಯೋದು ಬೇಡ ಎಂದು ಆರೋಪಿಸಿದರು.

    ಇನ್ನು ಬೆಂದಕಾಳೂರಿನ ಈ ರಾಜ್ಯದಲ್ಲಿ ಇಂತಹವರ ಬೇಳೆ ಬೇಯಲು ಬಿಡಬಾರದು ಅಂತ ಪರೋಕ್ಷವಾಗಿ ಬಿಜೆಪಿಯನ್ನ ಅಧಿಕಾರ ತರಬೇಡಿ ಅಂತ ಕರೆಕೊಟ್ಟರು. ಏನೇ ಆದರು ನನ್ನ ಧ್ವನಿ ನಿಲ್ಲೋದಿಲ್ಲ. ಯಾರಿಗೂ ಹೆದರದೆ ಇನ್ನು ಗಟ್ಟಿಯಾಗಿ ಧ್ವನಿ ಎತ್ತುತ್ತೇನೆ ಎಂದು ವಿರೋಧಿಗಳಿಗೆ ಟಾಂಗ್ ನೀಡಿದರು.

    ಇನ್ನು ನಟ ಪ್ರಕಾಶ್ ರೈ ಅವರಿಗೆ ಸಿಎಂ ಸಿದ್ದರಾಮಯ್ಯ ಬೆಂಬಲ ಸೂಚಿಸಿದ್ದು, ಸಮಾರಂಭದಲ್ಲಿ ಮಾತನಾಡಿದ ಸಿಎಂ ಅವರು, ಪ್ರಕಾಶ್ ರೈ ಏನು ತಪ್ಪು ಮಾತಾಡಿಲ್ಲ. ಆದರೂ ಅವರಿಗೆ ಬೆದರಿಕೆ ವಿರೋಧಗಳು ಬರುತ್ತಿವೆ. ಸಂವಿಧಾನದಲ್ಲಿ ಇರುವ ಅಂಶಗಳನ್ನು ಇವರು ಮಾತನಾಡುತ್ತಿದ್ದಾರೆ. ನಿಮ್ಮ ಕೆಲಸ ಉತ್ತಮವಾಗಿದೆ ಮುಂದುವರಿಸಿ. ನಿಮ್ಮ ಜೊತೆ ನಮ್ಮ ಸರ್ಕಾರ ಇರುತ್ತೆ ಎಂದು ಪ್ರಕಾಶ್ ರೈ ಹೋರಾಟಕ್ಕೆ ಬಹಿರಂಗವಾಗಿ ಸಿಎಂ ಬೆಂಬಲ ಸೂಚಿಸಿದರು.

    https://www.youtube.com/watch?v=fVF7178-tHA

  • ನಟ ಅಲ್ಲು ಅರ್ಜುನ್ ರಾಜಕೀಯಕ್ಕೆ ಎಂಟ್ರಿ?

    ನಟ ಅಲ್ಲು ಅರ್ಜುನ್ ರಾಜಕೀಯಕ್ಕೆ ಎಂಟ್ರಿ?

    ಹೈದರಾಬಾದ್: ಟಾಲಿವುಡ್ ನ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ರಾಜಕೀಯಕ್ಕೆ ಬರುತ್ತಾರೆ ಎಂಬ ಪ್ರಶ್ನೆ ಹಲವು ದಿನಗಳಿಂದ ಅಭಿಮಾನಿಗಳಲ್ಲಿ ಕಾಡುತ್ತಿತ್ತು.  ಆದರೆ ಈಗ ನಟ ಅಲ್ಲು ಅರ್ಜುನ್ ಇತ್ತೀಚೆಗೆ ಭಾಗವಹಿಸಿದ್ದ ಪಾರ್ಟಿಯಲ್ಲಿ ತಮ್ಮ ರಾಜಕೀಯ ಪ್ರವೇಶದ ಕುರಿತು ಮಾತನಾಡಿದ್ದಾರೆ.

    ಸಾಮಾನ್ಯವಾಗಿ ಅಲ್ಲು ಅರ್ಜುನ್ ಅವರು ಹೆಚ್ಚು ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸಿಕೊಳ್ಳುವುದಿಲ್ಲ. ಕುಟುಂಬದ ಸದಸ್ಯರ ಜೊತೆ ಕೆಲವು ಖಾಸಗಿ ಕಾರ್ಯಕ್ರಮಗಳಲ್ಲಿ ಮಾತ್ರವೇ ಭಾಗವಹಿಸುತ್ತಾರೆ. ಇತ್ತೀಚೆಗೆ ಇಂತಹ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಅವರು ತಮ್ಮ ಮುಂದಿನ ಸಿನಿಮಾ ವೃತ್ತಿ ಜೀವನ ಹಾಗೂ ರಾಜಕೀಯ ಪ್ರವೇಶದ ಕುರಿತು ಮಾತನಾಡಿ ಎಲ್ಲರನ್ನು ಶಾಕ್ ಒಳಪಡಿಸಿದ್ದರು ಎಂದು ಸ್ಥಳೀಯ ಮಾಧ್ಯಮವೊಂದು ವರದಿ ಮಾಡಿದೆ.

    ಪ್ರಸ್ತುತ ಆಂಧ್ರ ಪ್ರದೇಶ ಹಾಗೂ ತೆಲಂಗಾಣ ಎರಡು ರಾಜ್ಯಗಳಲ್ಲಿನ ರಾಜಕೀಯ ಪರಿಸ್ಥಿತಿಗಳನ್ನು ಗಮನಿಸುತ್ತಿರುವ ಅವರು ಸೂಕ್ತ ಸಂದರ್ಭದಲ್ಲಿ ರಾಜಕೀಯಕ್ಕೆ ಪ್ರವೇಶ ನೀಡುವ ಕುರಿತು ಚಿಂತನೆ ನಡೆಸಿದ್ದಾರೆ, ಆದರೆ ಅದು ಅರ್ಜುನ್‍ರ 40 ನೇ ವಯಸ್ಸಿನ ನಂತರವೇ ಎಂದು  ಮೂಲಗಳು ತಿಳಿಸಿವೆ.

    ಟಾಲಿವುಡ್‍ನಲ್ಲಿ ಅಲ್ಪ ಸಮಯದಲ್ಲಿಯೇ ತಮ್ಮ ವಿಶಿಷ್ಟ ನಟನೆಯ ಮೂಲಕ ಕೋಟ್ಯಂತರ ಅಭಿಮಾನಿಗಳನ್ನು ಹೊಂದಿದ್ದಾರೆ. ಇನ್ನು ಹಲವು ಅಭಿಮಾನಿಗಳು ತಮ್ಮ ಪ್ರೀತಿಯ ನಟನ ರಾಜಕೀಯ ಪ್ರವೇಶ ಮಾಡುವ ಕುರಿತು ಸುದ್ದಿ ಕೇಳಿ ಅಚ್ಚರಿಗೊಂಡಿದ್ದಾರೆ.

  • ಕೆಲ್ಸ ಮಾಡದೇ ಇದ್ರೆ ನನ್ನನ್ನು ಕಿತ್ತೊಗೆಯಿರಿ: ಕಮಲ್ ಹಾಸನ್

    ಕೆಲ್ಸ ಮಾಡದೇ ಇದ್ರೆ ನನ್ನನ್ನು ಕಿತ್ತೊಗೆಯಿರಿ: ಕಮಲ್ ಹಾಸನ್

    ಚೆನ್ನೈ: ತಮಿಳು ರಾಜಕೀಯ ಪರಿಸ್ಥಿತಿಗಳು ದಿನನಿತ್ಯ ಹೊಸ ತಿರುವುಗಳು ಪಡೆದುಕೊಳ್ಳುತ್ತಿವೆ. ಈ ಸಂದರ್ಭದಲ್ಲಿ ತಮಿಳು ರಾಜಕೀಯ ರಂಗಕ್ಕೆ ಕಾಲಿವುಡ್ ಮೆಗಾ ಸ್ಟಾರ್ ಖ್ಯಾತ ನಟ ಕಮಲ್ ಹಾಸನ್ ಪ್ರವೇಶಿಸುವುದು ಖಚಿತವಾಗಿದೆ.

    ತಮಿಳು ರಾಜಕೀಯದಲ್ಲಿ ಕೆಲವು ಬದಲಾವಣೆಗಳನ್ನು ತರುವ ಅಗತ್ಯವಿದ್ದು, ಈ ಬದಲಾವಣೆಗಳನ್ನು ನಾನು ತರಲು ನಿರ್ಧರಿಸಿದ್ದೇನೆ. ಆದರೆ ಇದು ಎಷ್ಟು ಸಮಯವನ್ನು ತೆಗೆದುಕೊಳ್ಳಲಿದೆ ಎನ್ನುವುದನ್ನು ತಿಳಿಸುವುದು ಕಷ್ಟಸಾಧ್ಯ ಎಂದು ತಮ್ಮ ರಾಜಕೀಯ ಪ್ರವೇಶವನ್ನು ವಿಷಯದ ಬಗ್ಗೆ ಕಮಲ್ ಹಾಸನ್ ಸ್ಪಷ್ಟಪಡಿಸಿದರು.

    ರಾಜಕೀಯದಲ್ಲಿ ತೀವ್ರ ಬದಲಾವಣೆಯನ್ನು ತರುವುದು ಸತ್ಯ ಸಂಗತಿಯಾಗಿದ್ದು, ಆದರೆ ಈ ಪ್ರಕ್ರಿಯೆಯನ್ನು ಯಾವಾಗ ಆರಂಭಿಸುತ್ತೇನೆ ಎಂದು ಭರವಸೆ ನೀಡುವುದು ಕಷ್ಟಸಾಧ್ಯ ಎಂದು ತಿಳಿಸಿದರು.

    ಚುನಾವಣೆ ಭರವಸೆಗಳ ಬಗ್ಗೆ ನನಗೆ ಯಾವುದೇ ನಂಬಿಕೆ ಇಲ್ಲ. ಭರವಸೆಗಳನ್ನು ಆಧರಿಸಿ ನನಗೆ ಮತವನ್ನು ನೀಡಬೇಡಿ, ನಾನು ಸರಿಯಾಗಿ ಕೆಲಸ ನಿರ್ವಹಿಸದಿದ್ದಾರೆ ತಕ್ಷಣ ನನ್ನನ್ನು ಕಿತ್ತೊಗೆಯಿರಿ ಎಂದಿದ್ದಾರೆ.

    ಪ್ರಸ್ತುತ ರಾಜಕೀಯದಲ್ಲಿ ಭ್ರಷ್ಟಚಾರ ಪ್ರಮುಖ ಸಮಸ್ಯೆಯಾಗಿದೆ. ಭ್ರಚ್ಟಚಾರವನ್ನು ರಾಜಕೀಯದಿಂದ ನಿರ್ಮೂಲನೆ ಮಾಡುತ್ತೇನೆ, ಇಲ್ಲವಾದಲ್ಲಿ ನಾನು ಹೊರ ನಡೆಯುತ್ತೇನೆ. ಪ್ರತಿ ರಾಜಕೀಯ ಪಕ್ಷವು ಒಂದು ಸಿದ್ಧಾಂತವನ್ನು ಹೊಂದಿರುತ್ತದೆ. ಆದರೆ ನನ್ನ ಯಾವುದೇ ಸಿದ್ಧಾಂತಗಳು, ಗುರಿಗಳು ಯಾವುದೇ ರಾಜಕೀಯ ಪಕ್ಷಕ್ಕೆ ಹೊಂದಿಕೆ ಯಾಗುವುದಿಲ್ಲ ಎಂದರು.

    ಮಾಧ್ಯಮದವರ ಕೆಲವು ಪ್ರಶ್ನೆಗಳಿಗೆ ಉತ್ತರಿಸಿದ ಅವರು ನಾನು ಪ್ರಸ್ತುತ ತಮಿಳುನಾಡಿನಲ್ಲಿರುವ ಯಾವುದೇ ಪಕ್ಷವನ್ನು ಸೇರುವುದಿಲ್ಲ, ಕೆಲವು ದಿನಗಳಲ್ಲಿ ಹೊಸ ಪಕ್ಷವನ್ನು ಘೋಷಿಸುವುದಾಗಿ ಉತ್ತರಿಸಿದರು.

    ಪ್ರಸ್ತುತ ಕಮಲ್ ಹಾಸನ್ ಸಿಪಿಎಂ ಪಕ್ಷದ ಕಾರ್ಯದರ್ಶಿಗಳಾದ ಸೀತಾರಾಮ್ ಯಚೂರಿ ಜೊತೆ ಸಂಪರ್ಕದಲ್ಲಿದ್ದಾರೆ. ಇದಕ್ಕೆ ಪೂರಕ ಎಂಬಂತೆ ಕೇರಳ ರಾಜ್ಯ ಸಿಎಂ ಪಿಣರಾಯಿ ವಿಜಯನ್ ಅವರ ಜೊತೆ ಕಳೆದ ತಿಂಗಳು ಮಾತುಕತೆ ನಡೆಸಿದ್ದರು.

    ಕೆಲ ದಿನಗಳ ಹಿಂದೆ ತಮ್ಮ ರಾಜಕೀಯ ಪ್ರವೇಶದ ಕುರಿತು ಮಾತಾನಾಡಿದ್ದ ಕಮಲ್ ಹಾಸನ್, ನನ್ನ ಬಣ್ಣವು ಎಂದು ಕೇಸರಿ ಬಣ್ಣದೊಂದಿಗೆ ಗುರುತಿಸಿಕೊಂಡಿಲ್ಲ ಎಂದು ಮಾರ್ಮಿಕವಾಗಿ ಹೇಳಿದ್ದರು.