ಬಾಗಲಕೋಟೆ : ಜಿಲ್ಲೆಯ ಹುನಗುಂದ ತಾಲೂಕಿನ ಕೂಡಲಸಂಗಮದಲ್ಲಿ ಇಂದು `ನಮ್ಮ ಕಾಂಗ್ರೆಸ್ ಪಕ್ಷ’ ಉದಯವಾಯಿತು. ಮಾಜಿ ಸಚಿವ ವರ್ತೂರು ಪ್ರಕಾಶ್ ಇಂದು ನಮ್ಮ ಕಾಂಗ್ರೆಸ್ ಪಕ್ಷಕ್ಕೆ ಚಾಲನೆ ನೀಡಿದರು.
ಆದರೆ ಜಿಲ್ಲೆಯ ಕೂಡಲಸಂಗಮದಲ್ಲಿ ಬಸ್ ನಿಲ್ದಾಣದ ಬಳಿ ಆಯೋಜಿಸಲಾಗಿದ್ದ ಉದ್ಘಾಟನಾ ಸಮಾರಂಭಕ್ಕೆ ಹೆಚ್ಚಿನ ಜನ ಬಾರದ ಕಾರಣ ಕಾರ್ಯಕ್ರಮದ ಆಯೋಜಕರು ಜನರನ್ನು ಸೆಳೆಯಲು ವೇದಿಕೆ ಮೇಲೆ ಯುವತಿಯರಿಂದ ನೃತ್ಯ ಕಾರ್ಯಕ್ರಮ ನಡೆಸಿದ್ದಾರೆ. ಈ ವೇಳೆ ಪಕ್ಷದ ಉದ್ಘಾಟನಾ ಸಮಾರಂಭ ನೋಡಲು ಬಂದ ಹಲವರು ಯುವತಿಯರ ನೃತ್ಯ ನೋಡುವ ಮೂಲಕ ಮುಜುಗರಕ್ಕೆ ಒಳಗಾಗಿದ್ದಾರೆ.

ನಮ್ಮ ಕಾಂಗ್ರೆಸ್ ಪಕ್ಷದ ಹೊಲಿಗೆ ಯಂತ್ರದ ಚಿಹ್ನೆ ಇರುವ ಪಕ್ಷದ ಧ್ವಜವನ್ನ ಶಾಸಕ ವರ್ತೂರ್ ಪ್ರಕಾಶ್ ಅವರು ತಮ್ಮ ತಂದೆಗೆ ಹಸ್ತಾಂತರಿಸುವ ಮೂಲಕ ಪಕ್ಷದ ಲಾಂಛನವನ್ನ ಬಿಡುಗಡೆಗೊಳಿಸಿ ಪಕ್ಷವನ್ನು ಅಧಿಕೃತವಾಗಿ ಉದ್ಘಾಟನೆ ಮಾಡಿದರು. ಈ ವೇಳೆ ಸಮಾವೇಶಕ್ಕೆ ಸೇರಿದ್ದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ನೇರವಾಗಿ ಸಿಎಂ ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದರು. ವಿರೋಧ ಪಕ್ಷದ ಸ್ಥಾನ ಸಿಗದಿದ್ದಾಗ, 2008ರಲ್ಲಿ ಯಡಿಯೂರಪ್ಪ ಅವರಿಂದ 8 ಕೋಟಿ ದುಡ್ಡು ಪಡೆದು ಬಿಜೆಪಿಯೊಂದಿಗೆ ಸಹಕರಿಸಿದ್ದ ನೀವು ಬಿಜೆಪಿ ಏಜೆಂಟ್ ಎಂದು ಗಂಭೀರ ಆರೋಪ ಮಾಡಿದರು. ಈ ಕುರಿತು ಬೆಂಗಳೂರಿನಲ್ಲಿ ವೇದಿಕೆ ಸಿದ್ಧಗೊಳಿಸಿ, ಯಾರು ಬಿಜೆಪಿ ಏಜೆಂಟ್ ಅಂತಾ ಸಾಬೀತು ಪಡಿಸುತ್ತೇನೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅಧಿಕಾರದ ಆಸೆಗಾಗಿ ನಾನು ಪಕ್ಷ ಕಟ್ಟಿಲ್ಲ, ಆದರೆ ಸಿಎಂ ಸಿದ್ದರಾಮಯ್ಯನವರು ಹೊಗಳು ಭಟ್ಟರಿಗೆ ಒಳ್ಳೆಯ ಸ್ಥಾನ ಕೊಟ್ಟಿದ್ದಾರೆ. ಯಾರು ಅವರ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಾರೆ ಅವರಿಗೆ ಒಂದು ಪಟ್ಟ ಕಟ್ಟುತ್ತಾರೆ. ಅನ್ನ ಹಾಕಿದ ಸತೀಶ್ ಜಾರಕಿಹೊಳಿ ಅವರನ್ನು ಹೊರಕಿದ್ದಾರೆ ಎಂದು ಲೇವಡಿ ಮಾಡಿದರು. ಅಲ್ಲದೇ ಸಿದ್ದರಾಮಯ್ಯ ಅವರು ತಮ್ಮ ಏಜೆಂಟ್ ರ ಮೂಲಕ ವೀರಶೈವ ಲಿಂಗಾಯತ ಸಮಾಜವನ್ನ ಒಡೆದು ಹಾಕಿದ್ದಾರೆ, ವೀರಶೈವ ಸಮಾಜವನ್ನು ಒಡೆದಂತಹ ಕೀರ್ತಿ ಸಿಎಂ ಅವರಿಗೆ ಸಲ್ಲುತ್ತೆ ಎಂದರು.
ಕಾಂಗ್ರೆಸ್ ಪಕ್ಷವನ್ನು ಕಟ್ಟಿದ ಮೂಲ ನಾಯಕರನ್ನು ಹೊರಹಾಕುವ ಕಾರ್ಯವನ್ನು ಸಿಎಂ ಸಿದ್ದರಾಮಯ್ಯ ಮಾಡುತ್ತಿದ್ದಾರೆ. ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳು ಗೋಮುಖ ವ್ಯಾಗ್ರಹಗಳಿದ್ದಂತೆ. ಮಹದಾಯಿ ವಿಚಾರದಲ್ಲಿ ರಾಷ್ಟ್ರೀಯ ಪಕ್ಷಗಳು ರಾಜಕೀಯ ಮಾಡುತ್ತಿವೆ. ಈ ಪಕ್ಷಗಳು ದುಡ್ಡು ಲೂಟಿ ಹೊಡೆಯಲು ಅಧಿಕಾರಕ್ಕೆ ಬರುತ್ತಿವೆ. ನಾನು ಯಾರಿಗೂ ದುಡ್ಡು ಕೊಟ್ಟು ಸಮಾವೇಶಕ್ಕೆ ಬರ ಹೇಳಿಲ್ಲ, ಆದರೂ ಇಷ್ಟು ಜನ ಬಂದಿದ್ದರೆ ಎಲ್ಲರಿಗೂ ಧಾನ್ಯವಾದ ಎಂದು ಹೇಳಿದರು.
https://www.youtube.com/watch?v=3i8JNu_r7pI
































