Tag: ರಾಜಕೀಯ ನಾಯಕರು

  • ಡ್ರಗ್ ಪ್ರಕರಣದಲ್ಲಿ ಯಾರೇ ರಾಜಕೀಯ ನಾಯಕರು ಇದ್ದರೂ ಕ್ರಮ ಕೈಗೊಳ್ಳಲಿ: ಸಿದ್ದರಾಮಯ್ಯ

    ಡ್ರಗ್ ಪ್ರಕರಣದಲ್ಲಿ ಯಾರೇ ರಾಜಕೀಯ ನಾಯಕರು ಇದ್ದರೂ ಕ್ರಮ ಕೈಗೊಳ್ಳಲಿ: ಸಿದ್ದರಾಮಯ್ಯ

    – ರಾಜ್ಯ ಅಂತೂ ದಿವಾಳಿಯಾಗಿ ಹೋಗಿದೆ

    ಹುಬ್ಬಳ್ಳಿ: ಡ್ರಗ್ ಪ್ರಕರಣದಲ್ಲಿ ಯಾರೇ ರಾಜಕೀಯ ನಾಯಕರು ಇದ್ದರೂ ಕ್ರಮ ಕೈಗೊಳ್ಳಲಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

    ಇಂದು ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಡ್ರಗ್ಸ್ ಜಾಲದಲ್ಲಿ ಯಾರೇ ಇದ್ದರೂ ಕಠಿಣ ಕ್ರಮ ಕೈಗೊಳ್ಳಬೇಕು. ಡ್ರಗ್ಸ್ ಜಾಲದಲ್ಲಿ ದೊಡ್ಡವರು ಸಣ್ಣವರು ಅನ್ನೋದು ಬೇಡ. ಯಾರೇ ರಾಜಕೀಯ ನಾಯಕರು ಇದ್ದರೂ ಕ್ರಮ ಕೈಗೊಳ್ಳಲಿ ಎಂದು ಆಗ್ರಹ ಮಾಡಿದರು.

    ಶಾಸಕ ಜಮೀರ್ ಅಹಮದ್ ವಿರುದ್ಧ ಸಾಕ್ಷ್ಯ ಇದ್ದರೆ ಗಲ್ಲಿಗೆ ಹಾಕಲಿ ಎಂದು ಅವರೇ ಹೇಳಿದ್ದಾರೆ. ಜೊತೆಗೆ ಅವರು ಆಸ್ತಿಯೆಲ್ಲಾ ಮುಟ್ಟುಗೋಲು ಹಾಕಿಕೊಳ್ಳಲಿ ಅಂತಾ ಹೇಳಿದ್ದಾರೆ. ಸಾಕ್ಷ್ಯ ಸಿಕ್ಕರೆ ತನಿಖೆ ಮಾಡಲಿ ಅದನ್ನು ಬಿಟ್ಟು ರಾಜಕೀಯವಾಗಿ ಮುಗಿಸಲು ಆರೋಪ ಮಾಡಬಾರದು. ಪ್ರಶಾಂತ್ ಸಂಬರಗಿ ಹೇಳಿದರು ಎಂದು ತನಿಖೆ ಮಾಡೋಕೆ ಆಗುತ್ತಾ? ಸಾಕ್ಷ್ಯ ಇದ್ದರೆ ಯಾರನ್ನಾದರೂ ತನಿಖೆ ಮಾಡಲಿ ಎಂದು ತಿಳಿಸಿದರು.

    ಇದೇ ವೇಳೆ ಯೋಗೀಶ್ ಗೌಡ ಕೊಲೆ ಪ್ರಕರಣದಲ್ಲಿ ಮಾಜಿ ಸಚಿವ ವಿನಯ್ ಕುಲಕರ್ಣಿ ಸಹೋದರನಿಗೆ ನೋಟಿಸ್ ಜಾರಿ ವಿಚಾರವಾಗಿ ಮಾತನಾಡಿ, ಅನಗತ್ಯವಾಗಿ ಸಿಬಿಐ ವಿಚಾರಣೆ ಮಾಡುತ್ತಿದ್ದಾರೆ. 25 ಬಿಜೆಪಿ ಸಂಸದರು ಇದ್ದರೂ ಬರ-ನೆರೆ ಪ್ರವಾಹ ಇನ್ನೂ ಕೊಟ್ಟಿಲ್ಲ. ಕಳೆದ ವರ್ಷ ಲಕ್ಷ ಕೋಟಿ ರೂಪಾಯಿ ನಷ್ಟವಾಗಿದೆ. ಆದರೆ ಇಲ್ಲಿಯವರೆಗೂ ಪರಿಹಾರ ನೀಡಿಲ್ಲ. ಮನೆ ಬಿದ್ದವರಿಗೆ ಪರಿಹಾರ ಇನ್ನೂ ಸಿಕ್ಕಿಲ್ಲ. ಆನೆ ಹೊಟ್ಟೆಗೆ ಮೂರು ಕಾಸು ಅಲ್ಲ ಆರು ಕಾಸಿನ ಮಜ್ಜಿಗೆ ನೀಡಿದಂತೆ ಪರಿಹಾರ ನೀಡಿದ್ದಾರೆ ಎಂದು ಕಿಡಿಕಾರಿದರು.

    ಅಧಿವೇಶನದಲ್ಲಿ ರಾಜ್ಯ ಸರ್ಕಾರದ ವೈಫಲ್ಯ, ಕಾನೂನು ಸುವ್ಯವಸ್ಥೆ ಹದಗೆಟ್ಟಿರುವ ಬಗ್ಗೆ ಚರ್ಚೆ ನಡೆಸುತ್ತೇವೆ. ಮೂರು ವಾರಗಳ ಕಾಲ ಅಧಿವೇಶನ ನಡೆಸಲಿ ಎಂದು ನಾನು ಸಿಎಂ ಬಿಎಸ್‍ವೈಗೆ ಪತ್ರ ಬರೆದಿದ್ದೇನೆ. ನಾಲ್ಕು ಜನರ ವಿರುದ್ಧ ಗೋಲಿಬಾರ್ ಮಾಡಿದ್ದು, ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಅನ್ನೋದು ಸತ್ಯ. ಡಿಜೆ ಹಳ್ಳಿ, ಕೆಜೆ ಹಳ್ಳಿ ಪ್ರಕರಣದಲ್ಲಿ ನವೀನನನ್ನು ತಕ್ಷಣ ಬಂಧನ ಮಾಡಿದ್ದರೆ ಬೆಂಕಿ ಹಚ್ಚುತ್ತಿರಲಿಲ್ಲ. ಬೆಂಕಿ ಹಚ್ಚುವುದು ಕಾನೂನುಬಾಹಿರ. ನಾನು ಸಹ ಬೆಂಕಿ ಹಾಕಿರುವುದನ್ನು ಖಂಡಿಸುತ್ತೇನೆ ಎಂದರು.

    ಸಿಎಂ ಬದಲಾವಣೆ ಬಗ್ಗೆ ನಾನು ಮಾತನಾಡಲ್ಲ. ಅವರು ಯಾರನಾದರೂ ಮಾಡಿಕೊಳ್ಳಲಿ. ಸಿಎಂ ಮತ್ತು ಕುಮಾರಸ್ವಾಮಿ ಏನೂ ಮಾತನಾಡಿಕೊಂಡಿದ್ದಾರೆ ಎಂದು ನನಗೆ ಗೊತ್ತಿಲ್ಲ. ಜೆಡಿಎಸ್‍ನವರಿಗೆ ಸ್ಪಷ್ಟವಾದ ನಿಲುವಿಲ್ಲ. ಅವರು ಯಾವಾಗ ಬೇಕೋ ಅವಾಗ ಅವರನ್ನು ತಬ್ಬಿಕೊಳ್ಳುತ್ತಾರೆ. ಆದರೆ ಇದರ ಮಧ್ಯೆ ರಾಜ್ಯ ಅಂತೂ ದಿವಾಳಿ ಆಗಿ ಹೋಗಿದೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.

  • 100 ರೂ. ಲಂಚಕ್ಕಾಗಿ ಮೊಟ್ಟೆ ಬಂಡಿ ಪಲ್ಟಿ – ಬಾಲಕನಿಗೆ ಉಚಿತ ಶಿಕ್ಷಣ, ಮನೆ

    100 ರೂ. ಲಂಚಕ್ಕಾಗಿ ಮೊಟ್ಟೆ ಬಂಡಿ ಪಲ್ಟಿ – ಬಾಲಕನಿಗೆ ಉಚಿತ ಶಿಕ್ಷಣ, ಮನೆ

    – ಸಹಾಯಕ್ಕೆ ಬಂದ ರಾಜಕೀಯ ನಾಯಕರು

    ಭೋಪಾಲ್: 100 ರೂ. ಲಂಚಕ್ಕಾಗಿ ಮೊಟ್ಟೆ ಮಾರುವ ಬಾಲಕನ ಮೊಟ್ಟೆ ಗಾಡಿಯನ್ನು ಪಾಲಿಕೆ ಅಧಿಕಾರಿಗಳು ಪಲ್ಟಿ ಮಾಡಿದ್ದ ಅಮಾನವೀಯ ಘಟನೆ ಮಧ್ಯ ಪ್ರದೇಶದ ಇಂದೋರ್ ನಲ್ಲಿ ನಡೆದಿತ್ತು. ಈಗ ಈ ಬಾಲಕನಿಗೆ ಇಡೀ ದೇಶದ ಜನರ ಸಹಾಯ ಹಸ್ತ ಚಾಚುತ್ತಿದ್ದಾರೆ.

    ವ್ಯಾಪಾರ ಮಾಡಲು ಮೊಟ್ಟೆಯನ್ನು ತೆಗೆದುಕೊಂಡು ಹೋಗುತ್ತಿದ್ದ ಬಾಲಕನ ಬಳಿ ಸ್ಥಳೀಯ ಪಾಲಿಕೆ ಅಧಿಕಾರಿ 100 ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದ. ಇಲ್ಲ ಎಂದರೇ ಬಂಡಿಯನ್ನು ಸ್ಥಳದಿಂದ ತೆಗೆಯುವಂತೆ ಎಚ್ಚರಿಕೆ ನೀಡಿದ್ದ. ಆದರೆ ಲಾಕ್‍ಡೌನ್ ಕಾರಣದಿಂದ ವ್ಯಾಪಾರ ಕಡಿಮೆಯಾಗಿದ್ದರಿಂದ ಬಾಲಕ ಹಣ ನೀಡಲು ನಿರಾಕರಿಸಿದ್ದ. ಇದರಿಂದ ಕುಪಿತಗೊಂಡ ಅಧಿಕಾರಿ ನಡುರಸ್ತೆಯಲ್ಲಿ ಬಾಲಕನ ಬಂಡಿಯನ್ನು ಪಲ್ಟಿ ಮಾಡಿ ಮೊಟ್ಟೆಗಳನ್ನು ನಾಶ ಮಾಡಿದ್ದನು. ಇದನ್ನು ಓದಿ: 100 ರೂ. ಲಂಚ ನೀಡಲು ನಿರಾಕರಿಸಿದ ಬಾಲಕ- ಮೊಟ್ಟೆ ಬಂಡಿ ಪಲ್ಟಿ ಮಾಡಿದ ಪಾಲಿಕೆ ಅಧಿಕಾರಿ

    ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿತ್ತು. ಇದನ್ನು ಕಂಡು ಇಡೀ ದೇಶದ್ಯಾಂತ ಜನರು ಬಾಲಕನ ನೆರವಿಗೆ ಬಂದಿದ್ದಾರೆ. ಜೊತೆಗೆ ಆತನಿಗೆ ಇರಲು ಒಂದು ಮನೆ ಮತ್ತು ಉಚಿತ ಶಿಕ್ಷಣ ಕೊಡಿಸುವ ವ್ಯವಸ್ಥೆ ಮಾಡಲಾಗಿದೆ. ಈ ವಿಚಾರವಾಗಿ ಮಾತನಾಡಿರುವ ಬಾಲಕನ ಮನೆಯವರು, ಘಟನೆ ನಡೆದ ನಂತರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ದೆಹಲಿಯ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಕೂಡ ಕರೆ ಮಾಡಿ ಮಾತನಾಡಿದ್ದಾರೆ. ಬಾಲಕನ ಭವಿಷ್ಯಕ್ಕೆ ನೆರೆವು ನೀಡುವುದಾಗಿ ಹೇಳಿದ್ದಾರೆ ಎಂದು ತಿಳಿಸಿದ್ದಾರೆ.

    ಬಾಲಕ ವಿಡಿಯೋ ವೈರಲ್ ಆದ ನಂತರ ಆತನ ಸಹಾಯಕ್ಕೆ ಸ್ಥಳೀಯರು ಕೂಡ ಆಗಮಿಸಿದ್ದಾರೆ. ಜೊತೆಗೆ ಮಾಜಿ ಮುಖ್ಯಮಂತ್ರಿ ದಿಗ್ವಿಜಯ್ ಸಿಂಗ್ ಅವರು ಬಾಲಕನಿಗೆ ಉಚಿತ ಶಿಕ್ಷಣ ಕೊಡಿಸುವುದಾಗಿ ಹೇಳಿದ್ದು, ಆರ್ಥಿಕ ನೆರವು ಮತ್ತು ಸಹಾಯವನ್ನು ನೀಡಿದ್ದಾರೆ. ಇಂದೋರ್ ನ ಬಿಜೆಪಿ ಶಾಸಕ ರಮೇಶ್ ಮೆಂಡೋಲಾ ಅವರು ಪ್ರಧಾನ ಆವಾಸ್ ಯೋಜನೆಯಡಿ ಆತನಿಗೆ ಉಚಿತ ಮನೆಯನ್ನು ನೀಡುವುದಾಗಿ ಹೇಳಿದ್ದಾರೆ. ಇಂದೋರ್ ಪ್ರೆಸ್ ಕ್ಲಬ್ ಕೂಡ ಹುಡುಗನಿಗೆ ಪಡಿತರ ಮತ್ತು ಹಣವನ್ನು ಒದಗಿಸಿದೆ.

    ಈ ವಿಚಾರವಾಗಿ ಮಾತನಾಡಿರುವ ಬಾಲಕ ಅಜ್ಜ, ದೇಶಾದ್ಯಂತದ ಜನರ ಬೆಂಬಲ ನಮಗೆ ಸಿಕ್ಕಿದೆ. ಬಿಜೆಪಿ ಶಾಸಕ ರಮೇಶ್ ಮೆಂಡೋಲಾ ಅವರು ಪ್ರಧಾನ್ ಮಂತ್ರಿ ಆವಾಸ್ ಯೋಜನೆಯಡಿ ಮನೆ ನೀಡುವುದಾಗಿ ಭರವಸೆ ನೀಡಿದ್ದಾರೆ. ಜೊತೆಗೆ ಬಾಲಕನಿಗೆ ಸೈಕಲ್ ಮತ್ತು 2,500 ರೂ. ಧನಸಹಾಯ ಮಾಡಿದ್ದಾರೆ. ದಿಗ್ವಿಜಯ್ ಸಿಂಗ್ ಅವರು 10,000 ರೂ ನೀಡಿ ಜೊತೆಗೆ ಇಬ್ಬರು ಮಕ್ಕಳ ಶಿಕ್ಷಣವನ್ನು ನೋಡಿಕೊಳ್ಳುವ ಭರವಸೆ ನೀಡಿದ್ದಾರೆ. ರಾಹುಲ್ ಗಾಂಧಿ, ಅರವಿಂದ್ ಕೇಜ್ರಿವಾಲ್ ಎಲ್ಲರೂ ಕರೆ ಮಾಡಿ ಬೆಂಬಲ ನೀಡುವುದಾಗಿ ಹೇಳಿದ್ದಾರೆ ಎಂದು ತಿಳಿಸಿದ್ದಾರೆ.