Tag: ರಾಜಕೀಯ ದ್ವೇಷ

  • ರಾಜಕೀಯ ದ್ವೇಷ – ಶಾಸಕರ ಸೂಚನೆಯಂತೆ ಕೋಳಿ ಫಾರಂ ನೆಲಸಮ

    ರಾಜಕೀಯ ದ್ವೇಷ – ಶಾಸಕರ ಸೂಚನೆಯಂತೆ ಕೋಳಿ ಫಾರಂ ನೆಲಸಮ

    – ದೇವರ ಬಳಿ ಪ್ರಮಾಣ ಮಾಡಲು ಕೈ ಮುಖಂಡರ ಪಟ್ಟು
    – ಎಸ್‍ವಿ ರಾಮಚಂದ್ರಪ್ಪ ಸೂಚನೆಯಂತೆ ನೆಲಸಮ

    ದಾವಣಗೆರೆ: ರಾಜಕೀಯ ದುರುದ್ದೇಶದಿಂದ ಬಿಜೆಪಿ ಶಾಸಕರೊಬ್ಬರು ಕೋಳಿ ಫಾರಂನನ್ನು ಅಕ್ರಮವಾಗಿ ನೆಲಸಮ ಮಾಡಿಸಿದ್ದಾರೆ ಎಂಬ ಗಂಭೀರ ಆರೋಪ ದಾವಣಗೆರೆಯಲ್ಲಿ ಕೇಳಿ ಬಂದಿದೆ.

    ಜಿಲ್ಲೆಯ ಜಗಳೂರು ತಾಲೂಕಿನ ಹೀರೇ ಅರಕೆರೆ ಗ್ರಾಮದ ನಿವಾಸಿ ಗುರುಸ್ವಾಮಿ ರಸ್ತೆಗೆ ಹಾಗೂ ಬಸ್ ನಿಲ್ದಾಣಕ್ಕೆ ಜಮೀನು ಬಿಟ್ಟುಕೊಟ್ಟಿದ್ದರು. ಹೀಗಾಗಿ ಅಲ್ಲೇ ಪಕ್ಕದಲ್ಲಿ 2015ರಲ್ಲಿ ತಹಶೀಲ್ದಾರ್ ಅವರ ಅನುಮತಿ ಮೇರೆಗೆ ಕೋಳಿ ಫಾರಂ ಶೆಡ್ ನಿರ್ಮಾಣ ಮಾಡಿದ್ದರು. ಆದರೆ ಈಗ ಶಾಸಕ ಎಸ್‍ವಿ ರಾಮಚಂದ್ರಪ್ಪ ರಾಜಕೀಯ ದ್ವೇಷದ ಮೇಲೆ ಈ ಶೆಡ್ ಅನ್ನು ಒಡೆಸಿಹಾಕಿದ್ದಾರೆ ಎಂದು ಗುರುಸ್ವಾಮಿ ಆರೋಪ ಮಾಡಿದ್ದಾರೆ.

    ಈ ಹಿಂದೆ ಗುರುಸ್ವಾಮಿ ಹಾಗೂ ಎಸ್‍ವಿ ರಾಮಚಂದ್ರಪ್ಪ ಇಬ್ಬರು ಕಾಂಗ್ರೆಸ್ ಪಕ್ಷದಲ್ಲಿ ಇದ್ದರು. ಈ ಮಧ್ಯೆ ಕಾಂಗ್ರೆಸ್ ಬಿಟ್ಟು ಬಂದ ರಾಮಚಂದ್ರಪ್ಪ ಬಿಜೆಪಿಯಿಂದ ಎಂಎಲ್‍ಎ ಚುನಾವಣೆಯಲ್ಲಿ ಸ್ಪರ್ಧೆ ಮಾಡಿ ಗೆದ್ದು ಶಾಸಕರಾದರು. ಇದಾದ ನಂತರ ರಾಮಚಂದ್ರಪ್ಪ ಗುರುಸ್ವಾಮಿಯನ್ನು ನಮ್ಮ ಪಕ್ಷಕ್ಕೆ ಬಾ ಎಂದು ಹೇಳುತ್ತಿದ್ದರಂತೆ. ಇದಕ್ಕೆ ಗುರುಸ್ವಾಮಿ ನಾನು ಬರುವುದಿಲ್ಲ ಎಂದು ಹೇಳಿದ್ದಾರೆ. ಪಕ್ಷ ಸೇರದಿದ್ದಕ್ಕೆ ಕೋಪಗೊಂಡ ಶಾಸಕ ಈ ರೀತಿ ಮಾಡಿದ್ದಾರೆ ಎಂದು ಗುರುಸ್ವಾಮಿ ದೂರಿದ್ದಾರೆ.

    ನೋಟಿಸ್ ಕೂಡ ನೀಡದೇ, ಏಕಾಏಕಿ ಜೆಸಿಬಿಯಿಂದ ಶೆಡ್ ಅನ್ನು ತಹಶೀಲ್ದಾರ್ ತಿಮ್ಮಪ್ಪ ನೆಲಸಮ ಮಾಡಿದ್ದಾರೆ. ಈ ವೇಳೆ ಶೆಡ್ ಒಳಗೆ ಇದ್ದ ಮನೆಯ ಸಾಮಗ್ರಿಗಳನ್ನು ತೆಗೆದುಕೊಳ್ಳುತ್ತೇವೆ ಎಂದರೂ ಬಿಡದೇ ಶಾಸಕರಿಂದ ಕರೆ ಮಾಡಿಸಿ ನಾವು ಹಾಗೇ ಬಿಟ್ಟು ಹೋಗುತ್ತೇವೆ ಎಂದು ತಹಶೀಲ್ದಾರ್ ತಿಮ್ಮಪ್ಪ ಹೇಳಿದರು ಎಂದು ಗುರುಸ್ವಾಮಿ ತಮ್ಮ ನೋವನ್ನು ಹೇಳಿಕೊಂಡಿದ್ದಾರೆ.

    ರಾಜಕೀಯ ದ್ವೇಶದಿಂದಲೇ ಈ ರೀತಿ ಮಾಡಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ಮುಖಂಡರು ಶಾಸಕ ರಾಮಚಂದ್ರಪ್ಪ ವಿರುದ್ಧ ತಿರುಗಿ ಬಿದ್ದಿದ್ದಾರೆ. ಜೊತೆಗೆ ಈ ಕೃತ್ಯದಲ್ಲಿ ಶಾಸಕರ ಪಾತ್ರವಿಲ್ಲದಿದ್ದರೆ ಮಾಯಮ್ಮ ದೇವಸ್ಥಾನಕ್ಕೆ ಬಂದು ಪ್ರಮಾಣ ಮಾಡಲಿ ಎಂದು ಸವಾಲ್ ಹಾಕಿದ್ದಾರೆ ಹಾಗೂ ಮಂಗಳವಾರ ಮಾಯಮ್ಮ ದೇವಿ ದೇವಸ್ಥಾನಕ್ಕೆ ಬಂದು ಪ್ರಮಾಣ ಮಾಡುವಂತೆ ಕಾಂಗ್ರೆಸ್ ನಾಯಕರು ಪಟ್ಟು ಹಿಡಿದಿದ್ದಾರೆ.

  • ಹಳೆ ದ್ವೇಷ – ಗ್ರಾ.ಪಂ ಮಾಜಿ ಉಪಾಧ್ಯಕ್ಷನ ಕತ್ತು ಕಡಿದು ಹತ್ಯೆ

    ಹಳೆ ದ್ವೇಷ – ಗ್ರಾ.ಪಂ ಮಾಜಿ ಉಪಾಧ್ಯಕ್ಷನ ಕತ್ತು ಕಡಿದು ಹತ್ಯೆ

    ರಾಮನಗರ: ಬೈಕ್‍ನಲ್ಲಿ ತೆರಳುತ್ತಿದ್ದ ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷನ ಬೈಕಿಗೆ ಕಾರಿನಿಂದ ಡಿಕ್ಕಿ ಹೊಡೆದು, ಬಳಿಕ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ರಾಮನಗರ ತಾಲೂಕಿನ ಜಾಲಮಂಗಲ ಸಮೀಪದ ನಾಗರಕಲ್ಲುದೊಡ್ಡಿ ಗ್ರಾಮದ ಬಳಿ ನಡೆದಿದೆ.

    ರಾಮನಗರ ತಾಲೂಕಿನ ಜಾಲಮಂಗಲ ಗ್ರಾಮದ ನಿವಾಸಿ ಮಾಜಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಶ್ರೀಧರ್ (37) ಕೊಲೆಯಾದ ದುರ್ದೈವಿ. ಕೊಲೆಯಾದ ಶ್ರೀಧರ್ ತನ್ನ ಸ್ನೇಹಿತ ಮಧು ಜೊತೆ ಬೈಕ್‍ನಲ್ಲಿ ರಾಮನಗರಕ್ಕೆ ತೆರಳುತ್ತಿದ್ದ ಈ ವೇಳೆ ಹಿಂಬದಿಯಿಂದ ಬಂದ ಇಂಡಿಕಾ ಕಾರ್ ಡಿಕ್ಕಿ ಹೊಡೆದಿದೆ. ಬೈಕ್‍ನಿಂದ ಕೆಳಗೆ ಬಿದ್ದ ಶ್ರೀಧರ್ ಅನ್ನು ಇಂಡಿಕಾ ಕಾರಿನಲ್ಲಿದ್ದ ನಾಲ್ಕೈದು ಜನ ದುಷ್ಕರ್ಮಿಗಳು ಅಟ್ಟಾಡಿಸಿಕೊಂಡು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ. ಶ್ರೀಧರ್ ನ ಜೊತೆಗಿದ್ದ ಮಧು ಎಂಬಾತ ದುಷ್ಕರ್ಮಿಗಳಿಂದ ಪರಾರಿಯಾಗಿ ಗಾಯಗೊಂಡಿದ್ದಾನೆ.

    ಜೆಡಿಎಸ್ ಪಕ್ಷದಲ್ಲಿದ್ದ ಶ್ರೀಧರ್ ಕಳೆದ 2016 ರಲ್ಲಿ ಜಾಲಮಂಗಲ ಗ್ರಾಮ ಪಂಚಾಯಿತಿಯ ಸದಸ್ಯನಾಗಿದ್ದ. ಜೊತೆಗೆ ಕಾಂಗ್ರೆಸ್‍ನ ದತ್ತಾತ್ರೇಯ ಎಂಬಾತನನ್ನು ತನ್ನ ಸಂಗಡಿಗರ ಜೊತೆ ಸೇರಿ ಕೊಲೆ ಮಾಡಿದ್ದ. ಈ ಸಂಬಂಧ ರಾಮನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ಜೈಲಿಗೆ ಹೋಗಿ 3 ತಿಂಗಳ ಹಿಂದೆ ಜೈಲಿನಿಂದ ಹೊರಗೆ ಬಂದಿದ್ದ.

    ಗ್ರಾಮ ಪಂಚಾಯತ್‍ನ ಉಪಾಧ್ಯಕ್ಷನಾದ ಬಳಿಕ ಮಾಜಿ ಶಾಸಕ ಎಚ್‍ಸಿ ಬಾಲಕೃಷ್ಣ ಜೊತೆಗೆ ಜೆಡಿಎಸ್ ತೊರೆದು ಕಾಂಗ್ರೆಸ್‍ಗೆ ಸೇರ್ಪಡೆಯಾಗಿದ್ದ. ಗ್ರಾಮ ಪಂಚಾಯತ್‍ನ ಅನುದಾನಗಳನ್ನು ಬಳಸಿಕೊಂಡು ಪಂಚಾಯಿತಿ ವ್ಯಾಪ್ತಿಯಲ್ಲಿ ಅನೇಕ ನರೇಗಾ ಕಾಮಗಾರಿಗಳನ್ನು ಮಾಡಿಸುತ್ತಿದ್ದ. ದತ್ತಾತ್ರೇಯ ಕೊಲೆಯ ಹಳೆಯ ದ್ವೇಷ ಹಾಗೂ ರಾಜಕೀಯ ವೈಷಮ್ಯದಿಂದಲೇ ಶ್ರೀಧರ್ ನನ್ನ ಕೊಲೆ ಮಾಡಲಾಗಿದೆ ಎನ್ನಲಾಗಿದೆ.

    ಅಲ್ಲದೇ ಘಟನೆ ನಡೆದ ವೇಳೆ ಶ್ರೀಧರ್ ನ ಜೊತೆಗಿದ್ದ ಮಧು ಸಹ ಕೊಲೆಯಲ್ಲಿ ಭಾಗಿಯಾಗಿದ್ದು, ಶ್ರೀಧರ್‍ನ ಚಲನವಲನಗಳನ್ನ ದುಷ್ಕರ್ಮಿಗಳಿಗೆ ನೀಡಿದ್ದಾನೆ. ಕೊಲೆಗೆ ಸ್ಕೆಚ್ ಹಾಕಿರುವುದು ಎರಡು ದಿನಗಳ ಹಿಂದೆಯೇ ತಿಳಿದಿತ್ತು, ಆದರೆ ಶ್ರೀಧರ್ ಗೆ ತಿಳಿಸುವ ವೇಳೆಗೆ ಆತನನ್ನ ಕೊಲೆ ಮಾಡಲಾಗಿದೆ ಎಂದು ಶ್ರೀಧರ್ ನ ಸೋದರ ರಾಜು ಆರೋಪಿಸಿದ್ದಾರೆ.

    ಈ ಸಂಬಂಧ ರಾಮನಗರ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದು, ಕೊಲೆಗಾರರಿಗಾಗಿ ಬಲೆ ಬೀಸಿದ್ದಾರೆ.

  • ರಾಜಕೀಯ ದ್ವೇಷಕ್ಕೆ ಗುಂಡಿಕ್ಕಿ ಕೊಂದವರು ಅರೆಸ್ಟ್

    ರಾಜಕೀಯ ದ್ವೇಷಕ್ಕೆ ಗುಂಡಿಕ್ಕಿ ಕೊಂದವರು ಅರೆಸ್ಟ್

    ಧಾರವಾಡ: ಕಳೆದ ಸೆಪ್ಟಂಬರ್ 25ರಂದು ನಡೆದಿದ್ದ ದಾಂಡೇಲಿ ವ್ಯಕ್ತಿಯ ಶೂಟೌಟ್ ಪ್ರಕರಣವನ್ನು ಬೇಧಿಸುವಲ್ಲಿ ಧಾರವಾಡ ಪೊಲೀಸರು ಯಶಸ್ವಿಯಾಗಿದ್ದಾರೆ.

    ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ನಗರಸಭೆ ಚುನಾವಣೆಯಲ್ಲಿ ಉಂಟಾಗಿದ್ದ ರಾಜಕೀಯ ವೈಷ್ಯಮ್ಯವೇ ಈ ಕೊಲೆಗೆ ಕಾರಣ ಎನ್ನುವುದು ಬಹಿರಂಗಗೊಂಡಿದೆ. ದಾಂಡೇಲಿಯ ಶ್ಯಾಮಸುಂದರ ದೆಹಲಿಗೆ ಹೊರಡಲು ಕಾರಿನಲ್ಲಿ ಬರುತ್ತಿದ್ದಾಗ, ಧಾರವಾಡ ಹೊರವಲಯದ ಹಳಿಯಾಳ ರಸ್ತೆಯಲ್ಲಿ ಕಾರು ಹಿಂಬಾಲಿಸಿಕೊಂಡು ಬಂದಿದ್ದ ಬೈಕ್ ಸವಾರರು, ಕಾರ್ ಅಡ್ಡಗಟ್ಟಿ ಗುಂಡಿಕ್ಕಿ ಪರಾರಿಯಾಗಿದ್ದರು.

    ಘಟನೆ ನಡೆದ 72 ಗಂಟೆಗಳಲ್ಲಿಯೇ ಪ್ರಕರಣ ಬೇಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು, ಒಟ್ಟು 70 ಜನರ 7 ತಂಡಗಳಲ್ಲಿ ತನಿಖೆ ಕೈಗೊಂಡಿದ್ದರು. ಕೊಲೆಗೆ ರಾಜಕೀಯ ವೈಷ್ಯಮ್ಯವೇ ಕಾರಣ ಎಂದು ಉತ್ತರ ವಲಯ ಐಜಿಪಿ ರಾಘವೇಂದ್ರ ಸುಹಾಸ ಮಾಹಿತಿ ನೀಡಿದ್ದಾರೆ. ದಾಂಡೇಲಿಯ ಸುಬ್ರಮಣ್ಯ ಸಮರು, ರಾಜೇಶ ರುದ್ರಪಾಟಿ, ಗೌರೀಶ ಸುಳ್ಳದ ಹಾಗೂ ಉಮೇಶ ಕೊಲೆ ಮಾಡಿರುವ ಆರೋಪಿಗಳು. ಇವರು ದಾಂಡೇಲಿಯವರೇ ಆಗಿದ್ದು, ಸುಬ್ರಮಣ್ಯನೇ ಶ್ಯಾಮಸುಂದರನ ಮೇಲೆ ಗುಂಡು ಹಾರಿಸಿದ್ದು ಎಂದು ಒಪ್ಪಿಕೊಂಡಿದ್ದಾನೆ.

    ಈ ಕೊಲೆಗೆ ರಾಜೇಶ ರುದ್ರಪಾಟಿ ಸುಪಾರಿ ನೀಡಿದ್ದು, ಕಳೆದ ವರ್ಷ ನಡೆದಿದ್ದ ನಗರ ಸಭೆ ಚುನಾವಣೆಯಲ್ಲಿ ಶ್ಯಾಮಸುಂದರ ತನ್ನ ಅತ್ತಿಗೆಯನ್ನು ಚುನಾವಣೆಗೆ ನಿಲ್ಲಿಸಿ ರಾಜೇಶ ರುದ್ರಪಾಟಿಯನ್ನು ಎದುರು ಹಾಕಿಕೊಂಡಿದ್ದ. ಈ ಹಿನ್ನೆಲೆಯಲ್ಲಿ ರಾಜೇಶ ಮೂವರು ಯುವಕರಿಗ ಕಂಟ್ರಿ ಪಿಸ್ತೂಲ್ ತಂದುಕೊಟ್ಟು, ಕೃತ್ಯಕ್ಕೆ ಪ್ಲ್ಯಾನ್ ರೂಪಿಸಿದ್ದ ಎಂದು ಪೊಲೀಸರು ಹೇಳಿದ್ದಾರೆ.