Tag: ರಾಜಕೀಯ ತಂತ್ರಗಾರಿಕೆ

  • ನರೇಂದ್ರ ಮೋದಿ ಗೆಲುವಿನ ರೂವಾರಿ ಪ್ರಶಾಂತ್ ಕಿಶೋರ್ ಜೆಡಿಯುಗೆ ಸೇರ್ಪಡೆ

    ನರೇಂದ್ರ ಮೋದಿ ಗೆಲುವಿನ ರೂವಾರಿ ಪ್ರಶಾಂತ್ ಕಿಶೋರ್ ಜೆಡಿಯುಗೆ ಸೇರ್ಪಡೆ

    ನವದೆಹಲಿ: 2019ರ ಚುನಾವಣೆಯಲ್ಲಿ ನಾನು ಯಾರ ಪರವೂ ಕೆಲಸ ಮಾಡುವುದಿಲ್ಲ ಎಂದು ಹೇಳಿದ್ದ ರಾಜಕೀಯ ತಂತ್ರಗಾರ ಪ್ರಶಾಂತ್ ಕಿಶೋರ್ ಬಿಹಾರದ ಸಿಎಂ ನಿತೀಶ್ ಕುಮಾರ್ ಅವರ ಜೆಡಿಯು ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಯಾಗಿದ್ದಾರೆ.

    ಭಾನುವಾರ ಪಾಟ್ನಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜೆಡಿಯು ವರಿಷ್ಠ ಹಾಗೂ ಬಿಹಾರದ ಸಿಎಂ ನಿತೀಶ್ ಕುಮಾರ್ ಅವರ ನೇತೃತ್ವದಲ್ಲಿ ಪ್ರಶಾಂತ್ ಕಿಶೋರ್ ಸೇರಿಕೊಂಡಿದ್ದಾರೆ. ಬಿಜೆಪಿ, ಜೆಡಿಯು ಮತ್ತು ಕಾಂಗ್ರೆಸ್ ಪಕ್ಷದಲ್ಲಿ ಚುನಾವಣಾ ತಂತ್ರಗಾರರಾಗಿ ಕಾರ್ಯನಿರ್ವಹಿಸಿದ್ದ ಕಿಶೋರ್ ರಾಜಕೀಯ ಪ್ರವೇಶ ಮಾಡಿದ್ದು, ರಾಷ್ಟ್ರ ರಾಜಕಾರಣದಲ್ಲಿ ಭಾರೀ ಚರ್ಚೆಯಾಗುತ್ತಿದೆ.

    ಹಿಂದೆ ಕಿಶೋರ್ ಹೇಳಿದ್ದು ಏನು?
    ಹೈದರಾಬಾದ್‍ನ ಇಂಡಿಯನ್ ಸ್ಕೂಲ್ ಆಫ್ ಬಿಸಿನೆಸ್‍ನಲ್ಲಿ ವಿದ್ಯಾರ್ಥಿಗಳ ನಡೆದ ಸಂವಾದದ ವೇಳೆ, 2 ವರ್ಷಗಳ ಹಿಂದೆ ನಾನು ಈ ಕ್ಷೇತ್ರವನ್ನು ತೊರೆಯಬೇಕೆಂದುಕೊಂಡಿದ್ದೆ. ತೊರೆಯುವ ಮುನ್ನ ನನ್ನ ಐಪ್ಯಾಕ್ ಸಂಸ್ಥೆಯನ್ನು ಒಬ್ಬರ ಕೈಗೆ ನೀಡುವ ಜವಾಬ್ದಾರಿ ಇತ್ತು ಎಂದು ತಿಳಿಸಿದ್ದರು.

    ರಾಜಕೀಯಕ್ಕೆ ಬರುತ್ತೀರಾ ಎನ್ನುವ ಪ್ರಶ್ನೆಗೆ, ನಾನು ಯಾವುದೇ ರಾಜಕೀಯ ಪಕ್ಷಕ್ಕೆ ಸೇರ್ಪಡೆಯಾಗುವುದಿಲ್ಲ. ಗುಜರಾತ್ ಅಥವಾ ಬಿಹಾರಕ್ಕೆ ನಾನು ಹೋಗಿ ಕೆಲಸ ಮಾಡುತ್ತೇನೆ. ಪ್ರಧಾನಿ ಮೋದಿ ಬಿಜೆಪಿ ಪರ ಕೆಲಸ ಮಾಡುವಂತೆ ಹೇಳಿದ್ದರು. ಆದರೆ ನಾನು ಇದೂವರೆಗೂ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ ಎಂದಿದ್ದರು.

    ಕಾಂಗ್ರೆಸ್, ರಾಹುಲ್ ಗಾಂಧಿ ಜೊತೆಗಿನ ಸಂಬಂಧದ ಬಗ್ಗೆ ಕೇಳಲಾದ ಪ್ರಶ್ನೆಗೆ, ನಾನು ಮತ್ತು ರಾಹುಲ್ ಸ್ನೇಹಿತರು. ರಾಹುಲ್ ಗಾಂಧಿ ಅವರಿಗೆ ಅವರದ್ದೇ ಆದ ಕಲ್ಪನೆ ಮತ್ತು ದೃಷ್ಟಿಗಳಿವೆ. ಆದರೆ ಈ ಕಲ್ಪನೆಗಳು ನನಗೆ ಮನವರಿಕೆಯಾಗದ ಹಿನ್ನೆಲೆಯಲ್ಲಿ ನಾನು ಅವರ ಜೊತೆ ಕೆಲಸ ಮಾಡುತ್ತಿಲ್ಲ ಎಂದು ತಿಸಿದ್ದರು.

    ಪ್ರಶಾಂತ್ ಹೆಜ್ಜೆ ಗುರುತು:
    2014ರ ಲೋಕಸಭಾ ಚುನಾವಣೆಯಲ್ಲಿ ಮೋದಿ ಕ್ಯಾಂಪ್‍ನಲ್ಲಿ ಗುರುತಿಸಿಕೊಂಡಿದ್ದ ಪ್ರಶಾಂತ್ ಕಿಶೋರ್ ನಂತರ ಬಿಹಾರ ಚುನಾವಣೆಯಲ್ಲಿ ನಿತೀಶ್ ಕುಮಾರ್ ಕ್ಯಾಂಪ್‍ನಲ್ಲಿ ಗುರುತಿಸಿಕೊಂಡು ಗೆಲುವಿನ ರೂವಾರಿಯಾಗಿದ್ದರು. ಈ ಕಾರಣಕ್ಕಾಗಿ ಪ್ರಶಾಂತ್ ಕಿಶೋರ್ ಅವರಿಗೆ ರಾಹುಲ್ ಗಾಂಧಿ ಉತ್ತರ ಪ್ರದೇಶ ಚುನಾವಣೆ ಉಸ್ತುವಾರಿ ವಹಿಸಿದ್ದರು. ಆದರೆ ಉತ್ತರ ಪ್ರದೇಶದಲ್ಲಿ ಪ್ರಶಾಂತ್ ಕಿಶೋರ್ ತಂತ್ರಗಾರಿಕೆಗೆ ಸೋಲಾಗಿತ್ತು. ಮೇಲ್ವರ್ಗದ ಮತಗಳನ್ನು ಸೆಳೆಯುವ ಉದ್ದೇಶ ಮತ್ತು ಕಾಂಗ್ರೆಸ್ ಯಾವಾಗಲೂ ಅಲ್ಪಸಂಖ್ಯಾತ ಮತ್ತು ಹಿಂದುಳಿದ ವರ್ಗಗಳ ಪಕ್ಷ ಎನ್ನುವ ಕಲ್ಪನೆಯಿಂದ ಹೊರಬರಲು ಪ್ರಶಾಂತ್ ಕಿಶೋರ್ ಅವರು ಈ ಬಾರಿ ಬ್ರಾಹ್ಮಣ ಸಮುದಾಯ ವ್ಯಕ್ತಿಯನ್ನು ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಕಣಕ್ಕೆ ಇಳಿಸಲು ಶೀಲಾ ದೀಕ್ಷಿತ್ ಅವರನ್ನು ಸಿಎಂ ಅಭ್ಯರ್ಥಿಯನ್ನಾಗಿ ಘೋಷಿಸುವಂತೆ ಸಲಹೆ ನೀಡಿದ್ದರು. ಈ ಸಲಹೆಗೆ ಕಾಂಗ್ರೆಸ್ ವಲಯದಲ್ಲಿ ವಿರೋಧ ವ್ಯಕ್ತವಾಗಿತ್ತು.

    2014ರ ಚುನಾವಣೆಯ ವೇಳೆ ಪ್ರಶಾಂತ್ ಕಿಶೋರ್ ಸಲಹೆಯಂತೆ ಚಾಯ್‍ಪೇ ಚರ್ಚಾ ಬಿಜೆಪಿಗೆ ಭಾರೀ ಯಶಸ್ಸನ್ನು ತಂದುಕೊಟ್ಟಿತ್ತು. ಇದಾದ ಬಳಿಕ ಅಮಿತ್ ಶಾ ಜೊತೆಗಿನ ಭಿನ್ನಾಭಿಪ್ರಾಯದಿಂದಾಗಿ ಪ್ರಶಾಂತ್ ಕಿಶೋರ್ ಬಿಜೆಪಿ ಪಾಳೆಯವನ್ನು ತೊರೆದಿದ್ದರು. ಬಿಹಾರದಲ್ಲಿ ಮಹಾಘಟ್‍ಬಂಧನ್ ಮೈತ್ರಿಕೂಟ ನಡೆಸಿ ನಿತೀಶ್ ಕುಮಾರ್ ಅವರನ್ನು ಪ್ರಶಾಂತ್ ಕಿಶೋರ್ ಗೆಲ್ಲಿಸಿದ್ದರು. 2017ರ ಪಂಜಾಬ್ ವಿಧಾನಸಭಾ ಚುನಾವಣೆ ವೇಳೆ ಪ್ರಶಾಂತ್ ಕಿಶೋರ್ ತಂಡ ಕಾಂಗ್ರೆಸ್‍ನೊಂದಿಗೆ ಕೈಜೋಡಿಸಿತ್ತು. ಆಗಲೂ ಕ್ಯಾಪ್ಟನ್ ಅಮರೀಂದರ್ ಸಿಂಗ್ ಎದುರಾಳಿಯನ್ನ ಮಣಿಸಿ ಅಧಿಕಾರ ಹಿಡಿದರು. ಹಲವು ವರ್ಷಗಳಿಂದ ಚುನಾವಣೆಯಲ್ಲಿ ಸತತ ಸೋಲು ಕಂಡಿದ್ದ ಕಾಂಗ್ರೆಸ್‍ಗೆ ಈ ಗೆಲುವು ಸಮಾಧಾನ ತಂದುಕೊಟ್ಟಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv