Tag: ರಾಗಿ ಮುದ್ದೆ

  • ವಿಭಿನ್ನವಾಗಿ ಮಾಡಿ ರಾಗಿ ಒತ್ತು ಶ್ಯಾವಿಗೆ ಇಡ್ಲಿ

    ವಿಭಿನ್ನವಾಗಿ ಮಾಡಿ ರಾಗಿ ಒತ್ತು ಶ್ಯಾವಿಗೆ ಇಡ್ಲಿ

    ರಾಗಿ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ರಾಗಿ ಮುದ್ದೆ, ರಾಗಿ ದೋಸೆ, ರಾಗಿ ರೊಟ್ಟಿ ಸೇರಿದಂತೆ ವಿಭಿನ್ನವಾದ ತಿಂಡಿಗಳನ್ನು ತಯಾರಿಸುತ್ತಾರೆ. ಅದೇ ರೀತಿ ವಿಭಿನ್ನವಾಗಿ ರಾಗಿ ಒತ್ತು ಶ್ಯಾವಿಗೆ ಮಾಡಿ ಸವಿಯಿರಿ.

    ಸಾಮಾನ್ಯವಾಗಿ ಇದನ್ನು ರಾಗಿ ಮುದ್ದೆ ಮಾಡಿದ ಹಾಗೆಯೇ ಮಾಡಲಾಗುತ್ತದೆ. ಮೊದಲಿಗೆ ರಾಗಿಯನ್ನು ಚೆನ್ನಾಗಿ ಹುರಿದುಕೊಳ್ಳಬೇಕು. ಬಳಿಕ ಅದಕ್ಕೆ ಸ್ವಲ್ಪ ಸ್ವಲ್ಪ ನೀರು ಹಾಕಿ ಗಂಟು ಆಗದಂತೆ ಕಲಸಿಕೊಳ್ಳಬೇಕು. ಬಳಿಕ ಇಡ್ಲಿ ಪಾತ್ರೆಗೆ ನೀರು ಹಾಕಿ ಕುದಿಯಲು ಬಿಡಬೇಕು. ಶ್ಯಾವಿಗೆ ಮಣೆಗೆ ಕಲಸಿದ ರಾಗಿ ಹಾಕಿ ಒತ್ತಬೇಕು. ಶ್ಯಾವಿಗೆಯನ್ನು ನೇರವಾಗಿ ಕಾದ ಇಡ್ಲಿ ಹಂಚಿಗೆ ಹಾಕಬೇಕು. ಮುಚ್ಚಳ ಮುಚ್ಚಿ ಸ್ವಲ್ಪ ಹೊತ್ತು ಬಿಡಬೇಕು. ಆಗ ರಾಗಿ ಒತ್ತು ಶ್ಯಾವಿಗೆ ತಯಾರಾಗುತ್ತದೆ.

    ಅದನ್ನು ಚಟ್ನಿ ಅಥವಾ ಸಾಂಬಾರ್ ಜೊತೆಗೆ ಸವಿಯಬೇಕು.

    ರಾಗಿ ಒಂದು ಪೌಷ್ಟಿಕಾಂಶಭರಿತ ಆಹಾರವಾಗಿದ್ದು, ಆರೋಗ್ಯಕ್ಕೆ ಹಲವಾರು ಪ್ರಯೋಜನಗಳನ್ನು ನೀಡುತ್ತದೆ. ಇದರಲ್ಲಿ ಕ್ಯಾಲ್ಸಿಯಂ, ಕಬ್ಬಿಣ ಮತ್ತು ನಾರಿನಾಂಶ ಹೇರಳವಾಗಿದ್ದು, ಮೂಳೆಗಳನ್ನು ಬಲಪಡಿಸಲು, ಮಧುಮೇಹವನ್ನು ನಿಯಂತ್ರಿಸಲು ಮತ್ತು ತೂಕ ಇಳಿಕೆಗೆ ಸಹಾಯ ಮಾಡುತ್ತದೆ. 

  • ‘ಆನೆಬಲ’ಕ್ಕೆ ಸಿಕ್ತು ಕಾಲೇಜು ವಿದ್ಯಾರ್ಥಿಗಳ ಬಲ!

    ‘ಆನೆಬಲ’ಕ್ಕೆ ಸಿಕ್ತು ಕಾಲೇಜು ವಿದ್ಯಾರ್ಥಿಗಳ ಬಲ!

    ಮಂಡ್ಯ, ಅಲ್ಲಿನ ಪರಿಸರ, ಅದರ ಸೌಂದರ್ಯ, ಮಾತು, ಜನ, ಬದುಕಿನ ಶೈಲಿ ಎಲ್ಲವೂ ‘ಆನೆಬಲ’ ಸಿನಿಮಾದಲ್ಲಿ ಕಣ್ಣಿಗೆ ಕಟ್ಟುವಂತೆ ರೂಪುಗೊಂಡಿದೆ. ರಾಗಿಮುದ್ದೆ ಸ್ಪರ್ಧೆ, ಸ್ಪರ್ಧಿಗಳು, ಅದರ ಸುತ್ತ ಒಂದಷ್ಟು ಕ್ಯಾರೆಕ್ಟರುಗಳು, ಇವುಗಳ ಜೊತೆಗೆ ತೆರೆದುಕೊಳ್ಳುವ ‘ಆನೆಬಲ’ ಸಿನಿಮಾ ಈಗಾಗಲೇ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಸಿನಿಮಾದಲ್ಲಿರುವ ಗ್ರಾಮೀಣ ಸೊಗಡಿನ ಕಥೆಗೆ ಜನ ಫಿದಾ ಆಗಿದ್ದಾರೆ. ಅಷ್ಟೇ ಅಲ್ಲ ವಿದ್ಯಾರ್ಥಿಗಳು ಕೂಡ ಸಿನಿಮಾವನ್ನು ನೋಡಿ ಕೊಂಡಾಡಿದ್ದಾರೆ.

    ಸಿನಿಮಾಗಳಿಗೆ ಪ್ರಮೋಷನ್ ತುಂಬಾ ಮುಖ್ಯವಾಗುತ್ತೆ. ಒಂದು ಸಿನಿಮಾ ರಿಲೀಸ್ ಆಗುವುದಕ್ಕೂ ಮುನ್ನ ಅದರ ಜವಾಬ್ದಾರಿ ಚಿತ್ರತಂಡದ ಮೇಲಿರುತ್ತೆ. ನಂತರ ಆ ಸಿನಿಮಾ ರಿಲೀಸ್ ಆಗಿ, ಕಥೆ ಪ್ರೇಕ್ಷಕರಿಗೆ ಇಷ್ಟವಾದ್ರೆ ಪ್ರಮೋಷನ್ ಅಗತ್ಯವೇ ಇರುವುದಿಲ್ಲ. ಯಾಕಂದ್ರೆ ನಮ್ಮ ಕನ್ನಡಿಗರು ಯಾವತ್ತಿಗೂ ಉತ್ತಮವಾದ ಸಿನಿಮಾವನ್ನ ಕೈಬಿಟ್ಟ ಉದಾಹರಣೆಯೇ ಇಲ್ಲ. ಒಬ್ಬ ನೋಡಿದ ಸಿನಿಮಾ ಕಥೆಯನ್ನ ಹತ್ತು ಜನಕ್ಕೆ ಹಂಚಿ ಅವರು ಕೂಡ ಆ ಸಿನಿಮಾವನ್ನು ನೋಡುವಂತೆ ಮಾಡುವುದು ನಮ್ಮ ಕನ್ನಡಿಗರ ಗುಣ. ಇದೀಗ ಅಂತದ್ದೇ ಒಂದು ಸನ್ನಿವೇಶ ಮುಂದುವರೆದಿದೆ. ಅದು ‘ಆನೆಬಲ’ ಸಿನಿಮಾಗೆ. ಹೌದು ವಿದ್ಯಾರ್ಥಿಗಳು ಈ ಸಿನಿಮಾವನ್ನು ನೋಡಿ, ಪ್ರಚಾರ ಕೂಡ ಆರಂಭಿಸಿದ್ದಾರೆ. ಎಲ್ಲಿ ಅಂತೀರಾ..? ಮುಂದೆ ಓದಿ.

    ನಾಗಮಂಗಲ ಸೇರಿದಂತೆ ಅನೇಕ ಕಾಲೇಜುಗಳಲ್ಲಿ ಈ ರೀತಿ ವಿದ್ಯಾರ್ಥಿಗಳ ಸಪೋರ್ಟ್ ಸಿನಿಮಾಗೆ ಸಿಕ್ಕಿದೆ. ತಾವೂ ನೋಡಿದ್ದಲ್ಲದೇ, ಸ್ನೇಹಿತರಿಗೂ ಈ ಸಿನಿಮಾ ನೋಡಿ, ಇಲ್ಲಂದ್ರೆ ಒಂದೊಳ್ಳೆ ಕನ್ನಡ ಸಿನಿಮಾವನ್ನು ಮಿಸ್ ಮಾಡಿಕೊಳ್ತೀರಾ ಅಂತ ಸಲಹೆ ನೀಡುತ್ತಿದ್ದಾರೆ. ಈ ಸಿನೆಮಾದಲ್ಲಿರುವ ಹಾಡು ಮತ್ತು ಕಾಮಿಡಿಗೆ ಫಿದಾ ಆಗಿರುವ ವಿದ್ಯಾರ್ಥಿಗಳು ವಾಲಂಟರಿಯಾಗಿ ಸಿನೆಮಾ ಪ್ರಮೋಷನ್ ಮಾಡುತ್ತಿದ್ದಾರೆ. ಇದರಿಂದ ಚಿತ್ರತಂಡಕ್ಕೆ ಮತ್ತಷ್ಟು ಹೊಸ ಹುರುಪು ಸಿಕ್ಕಂತಾಗಿದೆ.

    ಪದವಿ ತರಗತಿಯ ಪರೀಕ್ಷೆಗಳು ಇನ್ನೂ ಎರಡು ತಿಂಗಳಿರುವ ಕಾರಣ ವಿದ್ಯಾರ್ಥಿಗಳು ‘ಆನೆಬಲ’ ಸಿನೆಮಾ ನೋಡಿ ಮೆಚ್ಚಿಕೊಂಡಿದ್ದಾರೆ. ತಮ್ಮ ಸಹಪಾಠಿಗಳಿಗೆ, ಸಿಕ್ಕವರಿಗೆಲ್ಲ ‘ಆನೆಬಲ’ ಸಿನಿಮಾ ನೋಡಲು ಹೇಳುತ್ತಿದ್ದಾರೆ. ವಿದ್ಯಾರ್ಥಿಗಳ ಈ ಪ್ರೀತಿಗೆ ಚಿತ್ರತಂಡ ಕೃತಜ್ಞತೆ ಸಲ್ಲಿಸಿದ್ದು, ಅವರ ಪ್ರೀತಿ ಸಹಕಾರಕ್ಕೆ ಅಪಾರ ಸಂತಸ ವ್ಯಕ್ತಪಡಿಸಿದೆ.

  • ರೆಗ್ಯೂಲರ್ ಮೂವಿ ಅಲ್ಲ ‘ಆನೆಬಲ’

    ರೆಗ್ಯೂಲರ್ ಮೂವಿ ಅಲ್ಲ ‘ಆನೆಬಲ’

    ಸಿದ್ಧ ಸೂತ್ರವ ಬಿಟ್ಟು ಮಾಡಿದ ಆನೆಬಲ ಈ ವರ್ಷಗಳನ್ನ ಬಂದಿರುವ ಕಲ್ಟ್ ಚಿತ್ರ. ಯಾವುದೇ ಸಿನಿಮಾ ಆಗ್ಲಿ ಕಂಪ್ಲೀಟ್ ಸಿನಿಮಾ ಮುಗಿಯುವವರೆಗೂ ಎಲ್ಲಿಯೂ ಬೋರ್ ಆಗದಂತೆ ನೋಡಿಕೊಂಡರೆ ಪ್ರೇಕ್ಷಕನಿಗೆ ಬಹಳ ಹತ್ತಿರವಾಗಿಬಿಡುತ್ತೆ. ಅದೇ ಸಾಲಿಗೆ ಸೇರಿರುವಂತ ಸಿನಿಮಾ ಅಂದ್ರೆ ಅದು ‘ಆನೆ ಬಲ’. ಸಿನಿಮಾ ಕಂಪ್ಲಿಟ್ ಆಗುವವರೆಗೂ ಬಹಳ ಕ್ಯೂರಿಯಾಸಿಟಿ ಮತ್ತು ಇಂಟ್ರೆಸ್ಟ್ ಕ್ರಿಯೇಟ್ ಮಾಡೋ ಶಕ್ತಿಯನ್ನ ಆನೆಬಲ ಸಿನಿಮಾ ಹೊಂದಿದೆ.

    ಇದೊಂದು ವಿಭಿನ್ನ ಕಥೆಯನ್ನ ಹೊಂದಿರುವ ಸಿನಿಮಾ. ಊರಿನ ಬಗ್ಗೆ ಅಪಾರ ಗೌರವ ಹೊಂದಿರುವ ಯುವಕರ ತಂಡದ ಸಿನಿಮಾ. ಕಾಮಿಡಿ ಜೊತೆಯಲ್ಲಿ ಊರಿನ ಹೆಸರನ್ನು ಉಳಿಸಲು ಸ್ನೇಹಿತರನ್ನ ಬಿಡದೇ ಜೊತೆಯಲ್ಲೇ ಸಾಗುತ್ತಾನೆ. ಸಿನಿಮಾದಲ್ಲಿ ದೋಷಗಳು ಇಲ್ಲವೆಂದೆನಿಲ್ಲ. ಆದರೆ ಅದಕ್ಕೂ ಮೀರಿ ಒಳ್ಳೆಯ ಅಂಶಗಳೇ ಹೆಚ್ಚಾಗಿ ಚಿತ್ರದುದ್ದಕ್ಕೂ ಸಿಗುತ್ತವೆ.

    ಸಿನಿಮಾದಲ್ಲಿ ಕೇಳ ಸಿಗುವ ‘ನಾವು ಚೆಂಗ್ಲು ಹುಡುಗರೇ ಇರಬಹುದು ಆದ್ರೆ ಊರಿನ ವಿಷಯಕ್ಕೆ ಬಂದರೇ ನಾವು ಒಳ್ಳೆಯವರೇ’ ಎಂಬ ಡೈಲಾಗ್ ಇಡೀ ಸಿನಿಮಾದ ಕಥೆಯನ್ನು ಸಾರುತ್ತಿದೆ. ಹಾಗೇ ಸಿನಿಮಾದುದ್ದಕ್ಕೂ ಹೆಣ್ಣಿನ ಮಹತ್ವವನ್ನು ಸಾರಲಾಗಿದೆ. ಜಿಲ್ಲಾ ಮಟ್ಟದ ರಾಗಿ ಮುದ್ದೆ ಸ್ವರ್ಧೆ ಮಾಡಬೇಕೆನ್ನುವ ಶಿವನ ಮಾತಿನಿಂದ ಇಡೀ ಸಿನೆಮಾ ಬೇರೊಂದು ತಿರುವು ಪಡೆದುಕೊಂಡು ಚಿತ್ರಕ್ಕೆ ಒಂದು ಶಕ್ತಿಯನ್ನ ತುಂಬುತ್ತದೆ.

    ಸಿನಿಮಾದಲ್ಲಿ ಪ್ರೀತಿ ವಿಚಾರವನ್ನು ಎಷ್ಟು ಬೇಕು ಅಷ್ಟನ್ನ ಹೇಳಿರುವ ನಿರ್ದೇಶಕ ರಾಜು, ಚಿತ್ರದುದ್ದಕ್ಕೂ ಹಳ್ಳಿಯ ಹುಡುಗರಿಗೆ ಇರಬೇಕಾದ ಜವಾಬ್ದಾರಿಯನ್ನ ಅದ್ಭುತವಾಗಿ ಕಟ್ಟಿಕೊಟ್ಟಿದ್ದಾರೆ. ಗ್ರಾಮೀಣ ಬದುಕಿನ ಒಟ್ಟು ಹೂರಣವನ್ನ ಕಟ್ಟಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ. ಅದಕ್ಕೆ ತಕ್ಕಂತೆ ಬೆಟ್ಟೆಗೌಡ ಅದ್ಧೂರಿಯಾಗಿ ದೃಶ್ಯ ಸೆರೆ ಹಿಡಿದಿದ್ದಾರೆ. ಪೂರ್ಣ ಚಂದ್ರ ತೇಜಸ್ವಿ ಅವರ ಸಂಗೀತ ಮತ್ತು ಹಿನ್ನೆಲೆ ಸಂಗೀತ ಸೂಪರ್ ಆಗಿದ್ದು ಹಾಡುಗಳು ಇಂಪಾಗಿವೆ. ಸಾಗರ್ ಸೇರಿದಂತೆ ಬಹುತೇಕ ನಟರು ಸಹಜವಾಗಿ ಅಭಿನಯಿಸಿದ್ದಾರೆ, ಅದು ಇಡೀ ಸಿನೆಮಾದ ಪ್ಲಸ್ ಪಾಯಿಂಟ್. ಸಂಭಾಷಣೆ ಚುರುಕಾಗಿದೆ ಹೆಚ್ಚಾಗಿ ಸಂದರ್ಭೋಚಿತವಾಗಿವೆ. ಆನೆಬಲ ಎಲ್ಲರೂ ಕುಳಿತು ನೋಡಬಹುದಾದ ಚಿತ್ರ.

  • ಹೊಸತು ಬೇಕು, ಹಳತು ಇರಲಿ- ಎರಡು ಬೆರತಾಗಲೇ ಹಳ್ಳಿಗಳಿಗೆ ಆನೆಬಲ

    ಹೊಸತು ಬೇಕು, ಹಳತು ಇರಲಿ- ಎರಡು ಬೆರತಾಗಲೇ ಹಳ್ಳಿಗಳಿಗೆ ಆನೆಬಲ

    ನೆಬಲ ಸಂಪೂರ್ಣ ಚಿತ್ರ ಹಳ್ಳಿ ಹಿನ್ನೆಲೆಯಲ್ಲೇ ನಡೆಯುತ್ತೆ. ಹಳ್ಳಿಯ ಆಚರಣೆ, ಸಂಪ್ರದಾಯ, ಕಟ್ಟುಪಾಡು, ಹಬ್ಬ, ಹೀಗೆ ಎಲ್ಲವನ್ನು ತೋರಿಸುತ್ತ ಸಂದೇಶವನ್ನು ನೀಡಿದ್ದಾರೆ ನಿರ್ದೇಶಕರು. ಮಹಾತ್ಮ ಗಾಂಧೀಜಿ ಹೇಳಿದ ಹಳ್ಳಿಗಳೇ ದೇಶದ ಅಭಿವೃದ್ಧಿಯ ಜೀವಾಳ ಅನ್ನೋದನ್ನ ಮತ್ತೆ ಮತ್ತೆ ನೆನಪಿಸಿದ್ದಾರೆ. ತ್ರಂತ್ರಜ್ಞಾನದ ಜೊತೆ ಹಳ್ಳಿಯ ಆಚರಣೆಗಳು, ಸಂಪ್ರದಾಯಗಳು ಕಳೆದು ಹೋಗ್ಬಾರ್ದು ಎರಡು ಒಟ್ಟೊಟ್ಟಿಗೆ ಸಾಗಬೇಕು ಎಂದು ಎಚ್ಚರಿಸುತ್ತಾ ಭರಪೂರ ಮನರಂಜನೆಯನ್ನು ನೀಡುತ್ತೆ.

    ಮಂಡ್ಯದಲ್ಲಿ ಹಿಂದಿನಿಂದಲೂ ಆಚರಣೆಯಲ್ಲಿರುವ ಮುದ್ದೆ ತಿನ್ನುವ ಸ್ಪರ್ಧೆಯೇ ಈ ಚಿತ್ರದ ಕಥಾವಸ್ತು. ಮುದ್ದೆ ತಿನ್ನುವ ಸ್ಪರ್ಧೆಯ ಸುತ್ತವೇ ಇಡೀ ಚಿತ್ರ ಸುತ್ತುತ್ತದೆ. ಎಲ್ಲಾ ಹಳ್ಳಿಗಳಲ್ಲೂ ಇರುವಂತೆ ಈ ಹಳ್ಳಿಯ ಬಗ್ಗೆ ಸದಾ ಆಲೋಚಿಸುವ ಶಿವು ಎಂಬ ಹುಡುಗ ಈ ಚಿತ್ರದ ಕಥಾ ನಾಯಕ. ಯಾವಾಗಲು ಸಕಾರಾತ್ಮಕ ಯೋಚನೆ ಜೊತೆಗೆ ಜಾಲಿಯಾಗಿರುವ ಹುಡುಗ ಶಿವು. ಹಳ್ಳಿಯ ಬಗ್ಗೆ, ಜನ್ರ ಬಗ್ಗೆ ಅಪಾರ ಅಭಿಮಾನ ಇಟ್ಟುಕೊಂಡಿರುತ್ತಾನೆ. ಜೊತೆಗೆ ಆತನ ಪ್ರೇಮ ಪುರಾಣವೂ ಚಿತ್ರದಲ್ಲಿ ಅಷ್ಟೇ ಇಂಟ್ರಸ್ಟಿಂಗ್ ಆಗಿದೆ. ಕೃಷಿಯೇ ಉಸಿರಾಗಿಸಿಕೊಂಡಿರುವ ಹಳ್ಳಿ ಜನ್ರು ಕೃಷಿಯಲ್ಲಿ ಆಧುನಿಕ ತಂತ್ರಜ್ಞಾನ ಬಳಸಬೇಕು ಆಗ ಜನ್ರ ಬದುಕು ಹಸನಾಗುತ್ತೆ, ಸುಧಾರಿಸುತ್ತೆ ಅನ್ನೋದು ಶಿವು ಆಲೋಚನೆ ಒಂದು ಕಡೆ ಆದ್ರೆ, ಹಿಂದಿನಿಂದ ನಡೆದುಬಂದ ಮುದ್ದೆ ತಿನ್ನುವ ಸ್ಪರ್ಧೆ ಇನ್ನೊಂದು ಕಡೆ. ಶಿವು ಕನಸು ಈಡೇರುತ್ತಾ? ಮುದ್ದೆ ತಿನ್ನುವ ಸ್ಪರ್ಧೆ ಹೇಗಿತ್ತು ಅನ್ನೋದಕ್ಕೆ ಆನೆಬಲ ಚಿತ್ರ ನೋಡಿಯೇ ತಿಳಿಯಬೇಕು.

    ನೈಜತೆಗೆ ಹತ್ತಿರವಾಗಿ ಸಾಗೋ ಆನೆಬಲ ಚಿತ್ರ ನೋಡುಗರನ್ನು ಸೆಳೆಯುತ್ತೆ. ಮಂಡ್ಯ ಆಡು ಭಾಷೆಯ ಸೊಗಡನ್ನು ತೆರೆ ಮೇಲೆ ಸವಿಯೋ ಆನಂದ ಚಿತ್ರದ ಮೇಲೆ ಇನ್ನಷ್ಟು ಸೆಳೆತ ಉಂಟು ಮಾಡುತ್ತೆ. ಸಿಲ್ವರ್ ಸ್ಕ್ರೀನ್ ಮೇಲೆ ಆಡಂಬರ ಅಬ್ಬರ ನೋಡಿ ಬೋರಾಗಿದ್ದ ಪ್ರೇಕ್ಷಕನಿಗೆ ಹಳ್ಳಿ ಸೊಬಗು, ಸೊಗಡು ಸವಿಯೋ ಅವಕಾಶವನ್ನು ಆನೆಬಲ ಚಿತ್ರ ತಂದಿದೆ. ನಿರ್ದೇಶಕರ ಈ ಪ್ರಯತ್ನಕ್ಕೆ ನಾವು ಶಬ್ಬಾಶ್ ಹೇಳಲೇಬೇಕು. ಒಟ್ಟಿನಲ್ಲಿ ಮುದ್ದೆ ಉಂಡಷ್ಟೇ ಖುಷಿಯನ್ನು ಆನೆಬಲ ಚಿತ್ರ ನೀಡುತ್ತೆ.

    ಚಿತ್ರ: ಆನೆಬಲ
    ನಿರ್ದೇಶನ: ಸೂನಗಹಳ್ಳಿ ರಾಜು
    ನಿರ್ಮಾಪಕ: ಎ.ವಿ.ವೇಣುಗೋಪಾಲ್ ಅಡಕಮಾರನಹಳ್ಳಿ
    ಸಂಗೀತ ನಿರ್ದೇಶನ: ಪೂರ್ಣಚಂದ್ರ ತೇಜಸ್ವಿ
    ಛಾಯಾಗ್ರಾಹಕ: ಜಿ.ಟಿ. ಬೆಟ್ಟೇಗೌಡ
    ತಾರಾಬಳಗ: ಸಾಗರ್, ರಕ್ಷಿತ, ಇತರರು

    ರೇಟಿಂಗ್-3.5/4

  • ‘ಚಂದದ ಭಾವನೆ, ತುಂಬಿದೆ ಘಮ್ಮನೆ’ ಹಾಡು ಹುಡುಗರ ಹೃದಯ ಕುಣಿಸುತ್ತಿದೆ!

    ‘ಚಂದದ ಭಾವನೆ, ತುಂಬಿದೆ ಘಮ್ಮನೆ’ ಹಾಡು ಹುಡುಗರ ಹೃದಯ ಕುಣಿಸುತ್ತಿದೆ!

    ಯೋಗರಾಜ್ ಭಟ್ಟರ ಸಾಹಿತ್ಯ ಅಂದ್ರೇನೆ ಹಾಗೆ. ಕಾಮನ್ ಪೀಪಲ್ ಗೂ ಆ ಸಾಹಿತ್ಯ ಮನದೊಳಗೆ ಕೂತು ತೇಲಾಡಿಸುವಂತಿರುತ್ತದೆ. ನಮ್ಮ ನಮ್ಮ ನಡುವಿನ ಕೆಲವು ಸಂಭಾಷಣೆಗಳೇ ಸಾಹಿತ್ಯವಾಗಿ ಹೊರಹೊಮ್ಮುತ್ತದೆ. ಸಂಗೀತದ ಜ್ಞಾನ ಇಲ್ಲದವರಿಗೂ ಯೋಗರಾಜ್ ಭಟ್ಟರ ಸಾಹಿತ್ಯ ಮನಸ್ಸಿಗೆ ನಾಟುವಂತಿರುತ್ತದೆ. ಹಾಗಾಗಿಯೇ ಅವರ ಸಾಹಿತ್ಯಕ್ಕೆ ಹುಡುಗರು ಹುಚ್ಚೆದ್ದು ಕುಣಿಯುವುದು. ಅವರ ಕುಂಚದಿಂದ ಮೂಡಿದ ಹಾಡಿಗೆ ಅಷ್ಟು ಡಿಮ್ಯಾಂಡ್ ಕ್ರಿಯೇಟ್ ಆಗೋದು. ಇದೀಗ ಅಂತದ್ದೆ ಒಂದು ಹಾಡು ಭಟ್ಟರ ಭತ್ತಳಿಕೆಯಿಂದ ಹೊರ ಬಂದಿದ್ದು, ಹಳ್ಳಿ ಹೈದರ ಹೃದಯವನ್ನ ಕುಣಿಸುತ್ತಿದೆ.

    ಮೊದಲ ಬಾರಿಗೆ ರಾಗಿ ಮುದ್ದೆ ಎಂಬ ವಿಷಯಾಧಾರಿತದ ಮೇಲೆ ಸೂನಗಹಳ್ಳಿ ರಾಜು ‘ಆನೆ ಬಲ’ ಸಿನಿಮಾವನ್ನ ನಿರ್ದೇಶನ ಮಾಡಿದ್ದಾರೆ. ಇದೇ 28 ರಂದು ತೆರೆಗೆ ಬರಲು ಸಿದ್ಧವಾಗಿರುವ ಸಿನಿಮಾದ ಹಾಡೊಂದು ರಿಲೀಸ್ ಆಗಿದ್ದು, ಸೌಂಡ್ ಮಾಡ್ತಾ ಇದೆ. ಯೋಗರಾಜ್ ಭಟ್ ಸಾಹಿತ್ಯ ಬರೆದೊರುವ ‘ಚಂದದ ಭಾವನೆ’ ಎಂಬ ಹಾಡನ್ನು ಪೂರ್ಣಚಂದ್ರ ತೇಜಸ್ವಿ ಕಂಪೋಸ್ ಮಾಡಿದ್ದಾರೆ. ಅಷ್ಟೇ ಸೊಗಸಾಗಿ ಅನನ್ಯ ಭಟ್ ಹಾಡಿಗೆ ಕಂಠ ನೀಡಿದ್ದಾರೆ.

    ಹಳ್ಳಿ ಹೈಕ್ಳ ಪ್ರೀತಿ ಆ ಹಾಡಿನಲ್ಲಿ ಸೊಗಸಾಗಿ ಕಾಣುತ್ತಿದೆ. ಪ್ರೀತಿ ಮಾಡುವವರ ಆಸೆ, ಪ್ರಿಯತಮನ ಹೊಗಳಿಕೆ ಎಲ್ಲವನ್ನು ಹಾಡಿನಲ್ಲೇ ಮೈರೋಮಾಂಚನಗೊಳ್ಳುವಂತೆ ಹೇಳಲಾಗಿದೆ. ಹಳ್ಳಿ ಕಡೆ ಪ್ರೀತ ಆದ್ರೂ ಅದನ್ನ ಕೊಂಚ ಭಯದಲ್ಲೇ ವ್ಯಕ್ತಪಡಿಸಲಾಗುತ್ತೆ. ಮನಸ್ಸಲ್ಲಿ ಆಸೆ ಇದ್ರು ಕದ್ದು ಮುಚ್ಚಿ ಪಡೆದುಕೊಳ್ಳಬೇಕಾಗುತ್ತದೆ. ಈ ಎಲ್ಲಾ ಅಂಶಗಳು ಆ ಹಾಡಿನಲ್ಲಿ ಅಡಕವಾಗಿರುವುದು ನೋಡುವಾಗ ಫೀಲ್ ಆಗುತ್ತೆ. ಒಮ್ಮೆ ತಮ್ಮ ಪ್ರಿಯತಮ ಅಥವಾ ಪ್ರಿಯತಮೆಯ ಕನಸಿಗೆ ಜಾರುವಂತೆ ಈ ಹಾಡು ಎಲ್ಲರನ್ನು ಮೈ ಮರೆಸಿದೆ.

    ಜನತಾ ಟಾಕೀಸ್ ಬ್ಯಾನರ್ ಸಂಸ್ಥೆಯಡಿ ಎ.ವಿ ವೇಣುಗೋಪಾಲ್ (ಅಡಕಿಮಾರನಹಳ್ಳಿ) ನಿರ್ಮಿಸಿರುವ ‘ಆನೆ ಬಲ’ ಸಿನಿಮಾ ಇದೇ 28 ರಂದು ರಿಲೀಸ್ ಆಗ್ತಾ ಇದೆ. ಈಗಾಗಲೇ ಪೋಸ್ಟರ್, ಟ್ರೇಲರ್ ಗಳಿಂದಲೇ ಸಖತ್ ಸುದ್ದಿಯಲ್ಲಿದ್ದ ಸಿನಿಮಾ ಇದೀಗ ಹಾಡೊಂದು ರಿಲೀಸ್ ಆಗಿದ್ದು ಎಲ್ಲರ ಮನಸ್ಸಿಗೆ ನಾಟುವಂತಿದೆ. ಸೂನಗಹಳ್ಳಿ ರಾಜು ನಿರ್ದೆಶನ ಮಾಡಿದ್ದು, ಜೆ.ಟಿ ಬೆಟ್ಟೆಗೌಡ ಛಾಯಾಗ್ರಹಣ, ಬಿ.ಎಸ್ ಕೆಂಪರಾಜು ಸಂಕಲನ, ಈಶ್ವರಿ ಕುಮಾರ್ ಕಲಾನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ.

  • ನೈಜ ಘಟನೆಗೆ ಹಾಸ್ಯದ ಟಚ್ ನೀಡಿರುವ ‘ಆನೆ ಬಲ’

    ನೈಜ ಘಟನೆಗೆ ಹಾಸ್ಯದ ಟಚ್ ನೀಡಿರುವ ‘ಆನೆ ಬಲ’

    ಮುದ್ದೆ ತಿನ್ನುವ ಸ್ಪರ್ಧೆ ಒಂದು ಜಾನಪದ ಕಲೆ. ಮಂಡ್ಯ ಜಿಲ್ಲೆ ಕಡೆ ಈಗಲೂ ಜಾತ್ರೆಗಳಲ್ಲಿ ಈ ಸ್ಪರ್ಧೆ ನಡೆಯಲಿದೆ. ಇದೆ ವಿಚಾರವನ್ನಿಟ್ಟುಕೊಂಡು ಸೊನಗಹಳ್ಳಿ ರಾಜು ಸಿನಿಮಾವೊಂದನ್ನ ಸಿದ್ಧ ಮಾಡಿದ್ದಾರೆ. ಹಳ್ಳಿ ಸೊಗಡನ್ನ ಸಾರುವ ‘ಆನೆ ಬಲ’ ಈಗಾಗಲೇ ಎಲ್ಲೆಡೆ ಟಾಕ್ ಕ್ರಿಯೇಟ್ ಮಾಡಿದೆ. ಇದೇ ತಿಂಗಳ 28ರಂದು ಸಿನಿಮಾ ತೆರೆಗೆ ಬರಲು ಸಜ್ಜಾಗಿದೆ.

    ‘ಆನೆ ಬಲ’ ರೂರಲ್ ಬ್ಯಾಕ್ ಡ್ರಾಪ್ ನಲ್ಲಿ ನಡೆಯುವ ಕಥೆ. ಜಾನಪದ ಅಂಶಗಳು ಸಿನಿಮಾದಲ್ಲಿ ಬಹಳಷ್ಟಿದೆ. ರಾಗಿ ಮುದ್ದೆ ತಿನ್ನೋ ಸ್ಪರ್ಧೆಯ ಸುತ್ತ ಈ ಕಥೆಯನ್ನು ತೆಗೆಯಲಾಗಿದೆ. ಇದರ ಜೊತೆಯಲ್ಲಿ ಹಳ್ಳಿಯಲ್ಲಿ ನಡೆಯುವ ಸಾಮಾಜಿಕ ಕೆಲಸಗಳಿಗೆ ನಾಯಕ ಮತ್ತವರ ತಂಡ ಹೇಗೆ ಕೆಲಸ ಮಾಡುತ್ತದೆ ಎಂಬುದು ಸಿನಿಮಾದಲ್ಲಿದೆ. ಈಗಾಗಲೇ ಟ್ರೇಲರ್ ರಿಲೀಸ್ ಆಗಿದ್ದು ಸಖತ್ ಸದ್ದು ಮಾಡುತ್ತಿದೆ.

    ನೆಲ, ಜಲ, ತನ್ನೂರು, ತನ್ನ ಜನ ಅಂತ ನಾಯಕ ಹೆಚ್ಚು ಅದಕ್ಕೆ ಒತ್ತು ಕೊಡುತ್ತಾನೆ. ಜಾನಪದ, ಹಳ್ಳಿ ಜೀವನ, ಸಂಸ್ಕೃತಿಗೆ ಅಲ್ಲಿ ಹೆಚ್ಚು ಪ್ರಾಮುಖ್ಯತೆ ಅಲ್ಲಿ ಎದ್ದು ಕಾಣುತ್ತದೆ. ಗ್ರಾಮೀಣ ಭಾಗದಲ್ಲಿನ ಒಳ ನೋಟಗಳಿಗೆ ಹೆಚ್ಚು ಫೋಕಸ್ ಮಾಡಿರುವ ಸೂನಗನಹಳ್ಳಿ ರಾಜು, ಮೊದಲ ಬಾರಿಗೆ ರಾಗಿ ಮುದ್ದೆ ಮೇಲೆ ಸಿನಿಮಾ ಮಾಡಿರುವ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ. ಎಲ್ಲೂ ವೈಭೋಪೇತ, ಆಡಂಬರ ಎನಿಸದೆ ಕ್ಯಾಂಡಿಡ್ ರೀತಿಯಲ್ಲಿ ಸಿನಿಮಾ ಚಿತ್ರೀಕರಿಸಲಾಗಿದೆ. ಇದೇ ತಿಂಗಳ 28 ಕ್ಕೆ ರಿಲೀಸ್ ಆಗುತ್ತಿದ್ದು ಎಲ್ಲರೂ ಕಾತರದಿಂದ ಕಾಯುತ್ತಿದ್ದಾರೆ.

    ಛಾಯಾಗ್ರಹಣ ಜೆ.ಟಿ. ಬೆಟ್ಟೇಗೌಡ ಕೀಲಾರ ಅವರದು. ಗೌತಂ, ಚಿರಂಜೀವಿ, ಹರೀಶ್ ಶೆಟ್ಟಿ, ಕೀಲಾರ ಉದಯ್, ಸುಮಾ, ರೂಪಾ, ಮುತ್ತುರಾಜು ತಾರಾಗಣದಲ್ಲಿ ಇದ್ದಾರೆ.

  • ಹಳ್ಳಿ ಹೈಕ್ಳ ನಿದ್ದೆ ಕೆಡಿಸುತ್ತಿದೆ ‘ಆನೆ ಬಲ’ ಹಾಡುಗಳು..!

    ಹಳ್ಳಿ ಹೈಕ್ಳ ನಿದ್ದೆ ಕೆಡಿಸುತ್ತಿದೆ ‘ಆನೆ ಬಲ’ ಹಾಡುಗಳು..!

    ಮುದ್ದೆ ತಿಂದು ಒಳ್ಳೆ ನಿದ್ದೆ ಮಾಡು ಅನ್ನೋ ಮಾತಿದೆ. ಅದ್ರಲ್ಲೂ ನಾಟಿ ಕೋಳಿ ಸಾರು ಮಾಡಿದಾಗ ರಾಗಿ ಮುದ್ದೆ ಇಲ್ಲಂದ್ರೆ ಊಟದ ರುಚಿ ಗೊತ್ತಾಗೋದೆ ಇಲ್ಲ. ಇಂತ ರಾಗಿ ಮುದ್ದೆಯನ್ನೇ ಆಧಾರವಾಗಿಟ್ಟುಕೊಂಡು ಸೂನಗಹಳ್ಳಿ ರಾಜು ‘ಆನೆ ಬಲ’ ಎಂಬ ಸಿನಿಮಾವನ್ನು ಸಿದ್ಧ ಮಾಡಿದ್ದಾರೆ. ಇದೇ 28 ರಂದು ಸಿನಿಮಾ ತೆರೆ ಮೇಲೆ ರಾರಾಜಿಸಲಿದೆ. ಸಿನಿಮಾ ಈಗಾಗಲೇ ಟ್ರೇಲರ್ ನಿಂದಲೇ ಸದ್ದು ಮಾಡಿರುವ ‘ಆನೆ ಬಲ’ದಲ್ಲಿ ಮತ್ತಷ್ಟು ವಿಶೇಷತೆಗಳಿವೆ. ಯೋಗರಾಜ್ ಭಟ್ಟರ ಸಾಹಿತ್ಯ ಈ ಸಿನಿಮಾದಲ್ಲಿದೆ.

    ಯೋಗರಾಜ್ ಭಟ್ಟರ ಸಾಹಿತ್ಯ ಅಂದ್ರೆ ಯುವಕರಿಗೆ ಎಲ್ಲಿಲ್ಲದ ಕ್ರೇಜು. ಅವರ ಹಾಡುಗಳು ಅಂದ್ರೆ ಯುವಕರಿಗೆ ಮತ್ತೇರಿಸುವಂತಿರುತ್ತದೆ. ಈ ಸಿನಿಮಾದಲ್ಲೂ ಯೋಗರಾಜ ಭಟ್ಟರ ಸಾಹಿತ್ಯವಿದ್ದು ಇನ್ನಷ್ಟು ನಿರೀಕ್ಷೆಯನ್ನ ಹುಟ್ಟಿಸಿದೆ. ಜಾನಪದ ಶೈಲಿಗೆ, ಯೋಗರಾಜ ಭಟ್ಟರ ಸಾಹಿತ್ಯ ಬೆರೆತರೆ ಅಲ್ಲೊಂದು ಹುಚ್ಚೆಬ್ಬಿಸುವ ಹಾಡುಗಳು ಕಿವಿಗೆ ಬೀಳದೆ ಇರಲು ಸಾಧ್ಯವೇ ಇಲ್ಲ. ಯೋಗರಾಜ್ ಭಟ್ಟರ ಸಾಹಿತ್ಯಕ್ಕೆ ಪೂರ್ಣಚಂದ್ರ ತೇಜಸ್ವಿಯವರ ಸಂಗೀತವಿದೆ.

    ಪೂರ್ಣಚಂದ್ರ ತೇಜಸ್ವಿಯವರ ಹಾಡುಗಳಿಗೆ ಫಿದಾ ಆಗದವರೇ ಇಲ್ಲ. ಹಳ್ಳಿ ಸೊಗಡಿನ ಕಥೆಗೆ ಅದ್ಭುತವಾದ ಸಾಹಿತ್ಯ ನೀಡಿರುವ ಯೋಗರಾಜ್ ಭಟ್ಟರು ಒಂದು ಕಡೆಯಾದ್ರೆ, ಯುವಕರ ಹೃದಯ ತಟ್ಟುವಂತ, ವಾವ್ ಎನ್ನಿಸುವಂತ ಸಂಗೀತ ನೀಡುವ ಪೂರ್ಣಚಂದ್ರ ತೇಜಸ್ವಿಯವರು ಇನ್ನೊಂದು ಕಡೆ. ಹೀಗಾಗಿ ಒಂದೊಳ್ಳೆ ಹಾಡುಗಳು ಸಿನಿಮಾದಲ್ಲಿ ಮೂಡಿ ಬಂದಿವೆ. ಈಗಾಗಲೇ ರಿಲೀಸ್ ಆಗಿರುವ ‘ಮಳವಳ್ಳಿ ಜಾತ್ರೆಲಿ, ರಾಗಿ ಮುದ್ದೆ’ ಹಾಡುಗಳು ಹಿಟ್ ಆಗಿವೆ. ಸಿನಿಮಾದಲ್ಲಿ ಜಾನಪದ ಶೈಲಿಯ ಹಾಡುಗಳು ಕಿವಿಗೆ ಇಂಪು ನೀಡುತ್ತವೆ.

    ಜನತಾ ಟಾಕೀಸ್ ನ ಚೊಚ್ಚಲ ಕಾಣಿಕೆಯೇ ಈ ‘ಆನೆ ಬಲ’. ಎ.ವಿ ವೇಣುಗೋಪಾಲ್ ಅಡಕಿಮಾರನಹಳ್ಳಿ ಈ ಸಿನಿಮಾದ ನಿರ್ಮಾಣದ ಹೊಣೆ ಹೊತ್ತಿದ್ದಾರೆ. ಸೂನಗಹಳ್ಳಿ ರಾಜು ನಿರ್ದೇಶನ ಮಾಡಿದ್ದಾರೆ. ಸಾಗರ್ ನಾಯಕನಾಗಿದ್ದು, ರಕ್ಷಿತಾ ನಾಯಕಿಯಾಗಿದ್ದಾರೆ. ಮಲ್ಲರಾಜು, ಉದಯ್ ಕುಮಾರ್, ಮುತ್ತು ರಾಜ್ ಸೇರಿದಂತೆ ಅನೇಕರು ತಾರಾಬಳಗದಲ್ಲಿದ್ದಾರೆ. ಇದೆ ತಿಂಗಳ 28 ರಂದು ಸಿನಿಮಾ ತೆರೆಗೆ ಬರಲು ಸಿದ್ಧವಾಗಿದೆ.

  • ಕೊಟ್ಟಿದ್ದು 10 ನಿಮಿಷ, ಆದ್ರೆ 3 ನಿಮಿಷದಲ್ಲಿ ತಿಂದು ಮುಗಿಸಿದ್ರು

    ಕೊಟ್ಟಿದ್ದು 10 ನಿಮಿಷ, ಆದ್ರೆ 3 ನಿಮಿಷದಲ್ಲಿ ತಿಂದು ಮುಗಿಸಿದ್ರು

    ಚಿಕ್ಕಬಳ್ಳಾಪುರ: ಕೃಷಿ ಮೇಳದಲ್ಲಿ ಆಯೋಜನೆಗೊಂಡಿದ್ದ ರಾಗಿ ಮುದ್ದೆ ತಿನ್ನುವ ಸ್ಪರ್ಧೆ ಇಂದು ಎಲ್ಲರಿಗೂ ಮನರಂಜನೆ ಒದಗಿಸಿದೆ.

    ಸ್ಪರ್ಧೆಯಲ್ಲಿ ಮುದ್ದೆ ತಿನ್ನಲು 10 ನಿಮಿಷ ಸಮಯ ನೀಡಲಾಗಿತ್ತು. ಆದರೆ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಜನರು ಮೂರೇ ನಿಮಿಷದಲ್ಲಿ ಮುದ್ದೆಗಳನ್ನು ತಿಂದು ಬೀಗಿದ್ದಾರೆ. ಈ ವೇಳೆ ಸ್ಪರ್ಧೆಯನ್ನು ಮೂರು ನಿಮಿಷಗಳಿಗೆ ಕಡಿತಗೊಳಿಸಲಾಗಿತ್ತು.

    ಶಿಡ್ಲಘಟ್ಟ ತಾಲೂಕಿನ ಕಾಕಚಚೊಕ್ಕಂಡಹಳ್ಳಿ ಗ್ರಾಮದ ನಾಗೇಶ್ ಕುಮಾರ್ 7 ಮುದ್ದೆಗಳನ್ನು ತಿನ್ನುವ ಮೂಲಕ ಮೊದಲ ಸ್ಥಾನ ಪಡೆದುಕೊಂಡರು. ಉಳಿದಂತೆ ತುಳಸಿ ರಾಮೇಗೌಡ, ಶಿವಪ್ಪ, ಕರಗಪ್ಪ 5 ಮುದ್ದೆಗಳನ್ನ ತಿನ್ನುವ ಮೂಲಕ ನಂತರದ ಸ್ಥಾನಗಳನ್ನು ಪಡೆದುಕೊಂಡರು.

    ಇದೇ ವೇಳೆ 50 ಕೆ.ಜಿ ಮೂಟೆ ಎತ್ತುವ ಸ್ಪರ್ಧೆಯನ್ನು ರೈತರಿಗೆ ಆಯೋಜಿಸಲಾಗಿತ್ತು. ಇದರಲ್ಲಿ 22 ಜನ ರೈತರು ಭಾಗವಹಿಸಿದ್ದು, ಕೆಜಿಎಫ್ ನ ತುಳಸಿರಾಮೇಗೌಡ ಮೊದಲ ಸ್ಥಾನಪಡೆದುಕೊಂಡರೆ, ಮನು ದ್ವಿತೀಯ, ಆಂಜನೇಯರೆಡ್ಡಿ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ. ಒಟ್ಟಾರೆ ಮೇಳದಲ್ಲಿ ಮೂಟೆ ಹೊರುವ ಹಾಗೂ ಮುದ್ದೇ ತಿನ್ನುವ ಸ್ಪರ್ಧೆಗಳು ಎಲ್ಲರ ಗಮನ ಸೆಳೆದವು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ನಾಟಿ ಕೋಳಿ ಸಂಬಾರ್ ಜೊತೆ ರಾಗಿಮುದ್ದೆ ತಿನ್ನೋ ಸ್ಪರ್ಧೆ: ಮೀಸೆ ಹೀರೇಗೌಡ ಚಾಂಪಿಯನ್

    ನಾಟಿ ಕೋಳಿ ಸಂಬಾರ್ ಜೊತೆ ರಾಗಿಮುದ್ದೆ ತಿನ್ನೋ ಸ್ಪರ್ಧೆ: ಮೀಸೆ ಹೀರೇಗೌಡ ಚಾಂಪಿಯನ್

    ಮಂಡ್ಯ: ಸಕ್ಕರೆ ನಾಡಿನ ಗ್ರಾಮೀಣ ಸೊಗಡಿನ ಜನ ರಾಗಿ ಮುದ್ದೆಯನ್ನು ನುಂಗುವುದನ್ನು ಕ್ರೀಡೆಯಾಗಿ ಮಾರ್ಪಾಡು ಮಾಡಿಕೊಂಡಿದ್ದಾರೆ. ಅದ್ದರಿಂದ ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ರಾಗಿ ಮುದ್ದೆ ನುಂಗುವ ಸ್ಪರ್ಧೆಗಳು ಆಗಾಗ ನಡೆಯುತ್ತಲೇ ಇರುತ್ತದೆ. ಭಾನುವಾರ ಮಂಡ್ಯ ತಾಲ್ಲೂಕಿನ ಮಂಗಲ ಗ್ರಾಮದಲ್ಲಿ ಜನತಾ ಟಾಕೀಸ್ ಮತ್ತು ನಮ್ಮ ಹೈಕ್ಳು ತಂಡ ನೆಲದನಿ ಬಳಗ ಆಯೋಜಿಸಿದ್ದ ಜಿಲ್ಲಾ ಮಟ್ಟದ ನಾಟಿ ಕೋಳಿ ಸಾಂಬಾರ್ ನಲ್ಲಿ ರಾಗಿ ಮುದ್ದೆ ನುಂಗುವ ಸ್ಪರ್ಧೆ ಯಾವ ಕ್ರೀಡೆಗೂ ಕಡಿಮೆ ಇಲ್ಲದಂತೆ ನಡೆಯಿತು.

    ಮಂಗಲ ಗ್ರಾಮದ ಶ್ರೀ ಮಾರಮ್ಮನ ದೇವಾಲಯದ ಆವರಣದಲ್ಲಿ ನಡೆದ ಸ್ಪರ್ಧೆಯಲ್ಲಿ 62 ಮಂದಿ ಸ್ಪರ್ಧಾಳುಗಳು ಭಾಗವಹಿಸಿದ್ದರು. ಈ ಪೈಕಿ 20 ನಿಮಿಷದಲ್ಲಿ ಅತಿ ಹೆಚ್ಚು ಮುದ್ದೆ ತಿಂದವರು ವಿಜಯಶಾಲಿಗಳು ಎಂದು ತೀರ್ಪುಗಾರರು ಸಮಯ ನಿಗದಿಪಡಿಸಿದ್ದರು. ಈ ಪೈಕಿ 20 ನಿಮಿಷದಲ್ಲಿ ಶ್ರೀರಂಗಪಟ್ಟಣ ತಾಲ್ಲೂಕಿನ ಅರಕೆರೆ ಗ್ರಾಮದ ಹೀರೇಗೌಡ ಅರ್ಧ ಕೆ.ಜಿ. ತೂಕದ ಆರೂವರೆ ಮುದ್ದೆ ತಿನ್ನುವ ಮೂಲಕ ಸ್ಪರ್ಧೆಯಲ್ಲಿ ಜಯಗಳಿಸಿದರು.

    ಸ್ಪರ್ಧೆಯಲ್ಲಿ ಜಯ ಪಡೆದ ಹೀರೇಗೌಡ ಅವರಿಗೆ ಐದು ಸಾವಿರ ರೂ. ನಗದು ಬಹುಮಾನ ನೀಡಲಾಯಿತು. ಅಂದಹಾಗೇ ಪ್ರಥಮ ಬಹುಮಾನ ಪಡೆದ ಹೀರೇಗೌಡ ಅವರು ರಾಗಿ ಮುದ್ದೆ ನುಂಗುವ ಸ್ಪರ್ಧೆಯಲ್ಲಿ 9 ಬಾರಿ ಪ್ರಥಮ ಬಹುಮಾನ ಪಡೆದಿದ್ದಾರೆ. ಈ ಸ್ಪರ್ಧೆಗೆ ಸೂನಗನಹಳ್ಳಿ ರಾಜು ನಿರ್ದೇಶನದ ಆನೆಬಾಲ ಸಿನಿಮಾ ತಂಡವು ಸಹ ಈ ಸಹಯೋಗ ನೀಡಿದ್ದು, ಆ ಸಿನಿಮಾದಲ್ಲಿ ಪ್ರಥಮ ಬಹುಮಾನ ಪಡೆದವರಿಗೆ ನಟನೆಗೆ ಅವಕಾಶ ಸಹ ಕೊಡಲಾಗುವುದು ಹೇಳಲಾಗಿತ್ತು. ಅದರಂತೆ ಮೊದಲ ಬಹುಮಾನ ವಿಜೇತ ಹೀರೇಗೌಡ ಆನೆಬಾಲ ಸಿನಿಮಾದಲ್ಲಿ ನಟಿಸುವ ಅವಕಾಶ ಪಡೆದಿದ್ದಾರೆ.

    ಇನ್ನು ಸ್ಪರ್ಧೆಯಲ್ಲಿ ಸುರೇಶ್ ಎಂಬವರು ಐದೂವರೆ ಮುದ್ದೆ ತಿಂದು ಮೂರು ಸಾವಿರ ರೂ. ನಗದು ಬಹುಮಾನ ಪಡೆದು ದ್ವಿತೀಯ ಸ್ಥಾನಕ್ಕೆ ತೃಪ್ತಿ ಪಟ್ಟರು. ನಾಲ್ಕೂವರೆ ಮುದ್ದೆ ತಿಂದ ರಾಮಮೂರ್ತಿ ಎರಡು ಸಾವಿರ ರೂ. ನಗದು ಬಹುಮಾನ ಪಡೆದು ತೃತೀಯ ಬಹುಮಾನ ಪಡೆದಿದ್ದಾರೆ. ಈ ಮೂವರು ಸೇರಿದಂತೆ ಹೆಚ್ಚು ಮುದ್ದೆ ತಿಂದ ಇನ್ನು ನಾಲ್ಕು ಮಂದಿಗೆ ಸಮಾಧಾನಕರ ಬಹುಮಾನ ನೀಡಲಾಯಿತು.

    ಈ ವೇಳೆ ಮಾತನಾಡಿದ ಸ್ಪರ್ಧೆ ಆಯೋಜಕರಾದ ಮಂಗಲ ಲಂಕೇಶ್, ಗ್ರಾಮೀಣ ಸೊಗಡಿನ ಕ್ರೀಡೆಗಳ ಪೈಕಿ ರಾಗಿ ಮುದ್ದೆ ತಿನ್ನುವುದು ಸಹ ಒಂದು ಕ್ರೀಡೆಯಾಗಿದ್ದು, ಇಂತಹ ಗ್ರಾಮೀಣ ಸೊಗಡಿನ ರಾಗಿ ಮುದ್ದೆ ನುಂಗುವ ಸ್ಪರ್ಧೆಯನ್ನು ಮತ್ತೆ ಮತ್ತೆ ನಡೆಸುತ್ತೇವೆ ಎಂದು ಹೇಳಿದ್ದಾರೆ.

    ಎಚ್.ಡಿ.ದೇವೇಗೌಡರು ಪ್ರಧಾನಿಯಾದಾಗ ತಮ್ಮ ನೆಚ್ಚಿನ ರಾಗಿ ಮುದ್ದೆ ಸವಿಯಲು ಬೆಂಗಳೂರಿನಿಂದ ರಾಜಧಾನಿ ದೆಹಲಿಗೆ ಬಾಣಸಿಗರನ್ನು ಕರೆದು ಕೊಂಡು ಹೋಗಿದ್ದರು.