Tag: ರಾಗಿ

  • ಆರೋಗ್ಯಕರ ರಾಗಿ ಇಡ್ಲಿ ಹೀಗೆ ಮಾಡಿ

    ಆರೋಗ್ಯಕರ ರಾಗಿ ಇಡ್ಲಿ ಹೀಗೆ ಮಾಡಿ

    ರಾಗಿ ಇಡ್ಲಿ ಎಂಬುದು ಆರೋಗ್ಯಕರ ಇಡ್ಲಿಯ ಒಂದು ವಿಧಾನ. ಸಾಮಾನ್ಯವಾಗಿ ರಾಗಿ ಗಂಜಿ, ರಾಗಿ ದೋಸೆ, ರಾಗಿ ಮುದ್ದೆ ಹಾಗೂ ರಾಗಿ ರೊಟ್ಟಿಯನ್ನು ಮಾಡುತ್ತಾರೆ ಇವುಗಳ ಪೈಕಿ ರಾಗಿ ಇಡ್ಲಿ ಮಾಡುವವರು ತುಂಬಾ ಕಡಿಮೆ. ಇದನ್ನು ಮಕ್ಕಳಿಗೆ ಇಷ್ಟವಾಗುವ ರೀತಿಯಲ್ಲಿ ಮಾಡಬಹುದು. ಅದಲ್ಲದೇ ಇದರಲ್ಲಿ ಸ್ಟಫ್ಡ್‌ ರೀತಿಯಲ್ಲಿಯೂ ಮಾಡಬಹುದು. ರಾಗಿ ಹಿಟ್ಟು, ಉದ್ದಿನ ಬೇಳೆ ಮತ್ತು ಇತರ ಪದಾರ್ಥಗಳಿಂದ ಇದನ್ನು ತಯಾರಿಸಲಾಗುತ್ತದೆ. ಇದು ಕ್ಯಾಲ್ಸಿಯಂ, ಕಬ್ಬಿಣ ಮತ್ತು ನಾರಿನಾಂಶದಿಂದ ಸಮೃದ್ಧವಾಗಿದೆ.

    ಬೇಕಾಗುವ ಸಾಮಗ್ರಿಗಳು
    ರಾಗಿ ಕಾಳು
    ಇಡ್ಲಿ ಅಕ್ಕಿ
    ಉದ್ದಿನ ಬೇಳೆ
    ಮೆಂತ್ಯ ಕಾಳು
    ದಪ್ಪ ಅವಲಕ್ಕಿ
    ಉಪ್ಪು
    ಎಣ್ಣೆ

    ಮಾಡುವ ವಿಧಾನ
    ಒಂದು ಪಾತ್ರೆಯಲ್ಲಿ ಉದ್ದಿನ ಬೇಳೆ ಮತ್ತು ಮೆಂತ್ಯ ಕಾಳುಗಳನ್ನು ಹಾಕಿ 5-6 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿಡಿ. ಇನ್ನೊಂದು ಪಾತ್ರೆಯಲ್ಲಿ ರಾಗಿ ಕಾಳು ಮತ್ತು ಇಡ್ಲಿ ಅಕ್ಕಿಯನ್ನು ಚೆನ್ನಾಗಿ ತೊಳೆದು 5-6 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿಡಿ. ಮೊದಲು ನೆನೆಸಿದ ಉದ್ದಿನ ಬೇಳೆ ಮತ್ತು ಮೆಂತ್ಯವನ್ನು ಮಿಕ್ಸಿಯಲ್ಲಿ ಹಾಕಿ, ಸ್ವಲ್ಪ ನೀರು ಸೇರಿಸಿ ನುಣುಪಾದ, ನೊರೆಬರುವ ಹಿಟ್ಟಿನ ರೀತಿಯಲ್ಲಿ ರುಬ್ಬಿಕೊಳ್ಳಿ. ಇದಾದ ಬಳಿಕ ಅಕ್ಕಿ ಹಾಗೂ ರಾಗಿಯನ್ನು ಚೆನ್ನಾಗಿ ರುಬ್ಬಿಕೊಳ್ಳಿ. ಬಳಿಕ ಉದ್ದಿನ ಬೇಳೆ ಮತ್ತು ರಾಗಿ-ಅಕ್ಕಿ ಮಿಶ್ರಣವನ್ನು ಒಂದು ದೊಡ್ಡ ಪಾತ್ರೆಯಲ್ಲಿ ಹಾಕಿ, ಉಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಈ ಹಿಟ್ಟನ್ನು 8-10 ಗಂಟೆಗಳ ಕಾಲ ಮುಚ್ಚಿಡಿ.

    ಇಡ್ಲಿ ಪಾತ್ರೆಯಲ್ಲಿ ನೀರು ಹಾಕಿ ಬಿಸಿ ಮಾಡಿ. ಇಡ್ಲಿ ತಟ್ಟೆಗಳಿಗೆ ಎಣ್ಣೆ ಅಥವಾ ತುಪ್ಪವನ್ನು ಸವರಿ, ಹಿಟ್ಟನ್ನು ಹಾಕಿ. ಸುಮಾರು 10-12 ನಿಮಿಷಗಳ ಕಾಲ ಹಬೆಯಲ್ಲಿ ಬೇಯಿಸಿ. ರಾಗಿ ಇಡ್ಲಿಯನ್ನು ಬಿಸಿ ಇರುವಾಗಲೇ ತೆಂಗಿನಕಾಯಿ ಚಟ್ನಿ ಅಥವಾ ಸಾಂಬಾರ್ ಜೊತೆ ಸವಿಯಿರಿ. ಈ ಹಿಟ್ಟನ್ನು ದೋಸೆ ಮತ್ತು ಉತ್ತಪ್ಪ ಮಾಡಲು ಕೂಡ ಬಳಸಬಹುದು

  • ಗ್ಯಾರಂಟಿ ಎಫೆಕ್ಟ್ – ಮಹಿಳಾ ಕಾರ್ಮಿಕರು ಸಿಗದೇ ರೈತರ ಪರದಾಟ

    ಗ್ಯಾರಂಟಿ ಎಫೆಕ್ಟ್ – ಮಹಿಳಾ ಕಾರ್ಮಿಕರು ಸಿಗದೇ ರೈತರ ಪರದಾಟ

    – ರಾಗಿ ಕಟಾವು ಯಂತ್ರಗಳಿಗೆ ಭಾರೀ ಬೇಡಿಕೆ
    – ಹಳ್ಳಿಗಳಲ್ಲಿ ಕೂಲಿ ಕೆಲಸಕ್ಕೆ ಬರುತ್ತಿಲ್ಲ ಮಹಿಳೆಯರು

    ಚಿಕ್ಕಬಳ್ಳಾಪುರ: ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ಮಹಿಳೆಯರಂತೂ ಪುಲ್ ಖುಷಿಯಾಗಿದ್ದಾರೆ. ಆದರೆ ಇದೇ ಗ್ಯಾರಂಟಿ ಈಗ ಇನ್ನೊಂದು ಕಡೆದ ರೈತರ ಸಮಸ್ಯೆಗಳಿಗೂ ಕಾರಣವಾಗುತ್ತಿದೆ.

    ಈಗ ಹಳ್ಳಿಗಾಡಿನಲ್ಲಿ ರಾಗಿ ಕಟಾವು ಮಾಡಿ ಮನೆ ತುಂಬಿಸಿಕೊಳ್ಳುವ ಸಮಯ. ಆದರೆ ಗ್ಯಾರಂಟಿ ಯೋಜನೆಗಳ ಪರಿಣಾಮದಿಂದ ಗ್ರಾಮೀಣ ಭಾಗದಲ್ಲಿ ಕೃಷಿ ಕಾಯಕ ಮಾಡಲು ಕೂಲಿಯಾಳುಗಳು ಸಿಗುತ್ತಿಲ್ಲ ಎಂದು ರೈತರು ನೋವು ತೋಡಿಕೊಂಡಿದ್ದಾರೆ.

    ರಾಗಿ ಕಟಾವು ಮಾಡುವ ಸಮಯದಲ್ಲಿ ಇಲ್ಲಿಯವರೆಗೆ ಕಾರ್ಮಿಕರ ಸಮಸ್ಯೆ ಆಗುತ್ತಿರಲಿಲ್ಲ. ಆದರೆ ಈ ಬಾರಿ ಬಹಳಷ್ಟು ಸಮಸ್ಯೆ ಆಗುತ್ತಿದೆ. ಹೀಗಾಗಿ ಈ ಬಾರಿ ರಾಗಿ ಕಟಾವಿಗೆ ದುಬಾರಿ ಯಂತ್ರದ ಮೊರೆ ಹೋಗುವ ಸ್ಥಿತಿ ನಿರ್ಮಾಣವಾಗಿದೆ. ಭತ್ತ ಕತ್ತರಿಸುವ ಯಂತ್ರಗಳನ್ನು ತರಿಸಿ, ಅರೆಬರೆ ಫಸಲನ್ನು ಮನೆಗೆ ತುಂಬಿಸಿಕೊಳ್ಳುತ್ತಿದ್ದೇವೆ ಎಂದು ರೈತರಾದ ನರಸಿಂಹಮೂರ್ತಿ ಹೇಳಿದ್ದಾರೆ. ಇದನ್ನೂ ಓದಿ: 30,000 ಕೊಟ್ರೆ ಕೆಲಸ, 40,000 ಕೊಟ್ರೆ ಟ್ರ‍್ಯಾಕ್ ಟೆಸ್ಟ್ ಪಾಸ್ – KSRTC ಚಾಲಕರ ಹೊರಗುತ್ತಿಗೆ ನೌಕರಿಯಲ್ಲೂ ಗೋಲ್ಮಾಲ್?

    ಚಂಡಮಾರುತದಿಂದ ಜಡಿ ಮಳೆ ಆಗುತ್ತಿದ್ದು ರಾಗಿ ಕಟಾವಿಗೆ ಕೊಡಬಾರದ ಕಾಟ ಕೊಡುತ್ತಿದೆ. ಕಾರ್ಮಿಕರಿದ್ದರೆ ಸರಿಯಾದ ಸಮಯದಲ್ಲಿ ಫಸಲು ತೆಗೆಯಬಹುದಿತ್ತು. ಆದರೆ ಕಾರ್ಮಿಕರು ಸಿಗದ ಕಾರಣ ಬಂದ ಬೆಳೆ ಹಾಳಾಗದೇ ಇರಲು ರೈತರು ಈಗ ಕಟಾವು ಯಂತ್ರಗಳ ಮೊರೆ ಹೋಗುತ್ತಿದ್ದಾರೆ. ಇದರಿಂದಾಗಿ ಈಗ ಕಟಾವು ಯಂತ್ರಗಳಿಗೆ ಭಾರೀ ಬೇಡಿಕೆ ಬಂದಿದೆ.

    ಮಹಿಳೆಯರಿಗೆ ತಿಂಗಳಿಗೆ 2 ಸಾವಿರ ರೂ. ಬರುತ್ತಿದೆ. ರಾಜ್ಯಾದ್ಯಂತ ಬಸ್ಸಿನಲ್ಲಿ ಉಚಿತವಾಗಿ ಓಡಾಡಬಹುದು. ಸರ್ಕಾರಿಂದಲೇ ಅಕ್ಕಿ ಸಹ ಉಚಿತವಾಗಿ ಸಿಗುತ್ತಿದೆ. ವಿದ್ಯುತ್‌ ಬಿಲ್‌ ಸಹ ಪಾವತಿಸುವ ಅಗತ್ಯವಿಲ್ಲ. ಈ ಕಾರಣದಿಂದ ಈಗ ಗ್ರಾಮೀಣ ಭಾಗದಲ್ಲಿ ಕೆಲಸಕ್ಕೆ ಜನ ಸಿಗುತ್ತಿಲ್ಲ ಎಂದು ರೈತರಾದ ಅಶ್ವತ್ಥಪ್ಪ ಬೇಸರ ತೋಡಿಕೊಂಡಿದ್ದಾರೆ.

    ರಾಗಿ ಕಟಾವು ಮಾಡುವ ಯಂತ್ರಕ್ಕೆ ಭಾರೀ ಬೇಡಿಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲಾಡಳಿತ ರಾಗಿ ಕಟಾವು ಯಂತ್ರಗಳಿಗೆ ಒಂದು ಗಂಟೆಗೆ 2,700 ರೂ. ದರ ನಿಗದಿಮಾಡಿದೆ. ದರ ನಿಗದಿಯಾಗಿದ್ದರೂ ಬೇಡಿಕೆ ಜಾಸ್ತಿ ಇರುವ ಹಿನ್ನೆಲೆಯಲ್ಲಿ ಯಂತ್ರಗಳ ಮಾಲೀಕರು ರೈತರ ಬಳಿ ಹೆಚ್ಚು ಹಣ ಪಡೆದು ರಾಗಿ ಕಟಾವು ಮಾಡಿಕೊಡುತ್ತಿದ್ದಾರೆ ಎಂಬ ದೂರುಗಳು ಸಹ ಬರುತ್ತಿವೆ.

  • ಬಿಜೆಪಿಯನ್ನು ನಾಯಿ, ಇಲಿ ಎಂದು ಟೀಕಿಸಿದ ಖರ್ಗೆ ಜೊತೆ ಊಟ ಮಾಡಿದ ಮೋದಿ

    ಬಿಜೆಪಿಯನ್ನು ನಾಯಿ, ಇಲಿ ಎಂದು ಟೀಕಿಸಿದ ಖರ್ಗೆ ಜೊತೆ ಊಟ ಮಾಡಿದ ಮೋದಿ

    ನವದೆಹಲಿ: ಬಿಜೆಪಿಯನ್ನು (BJP) ನಾಯಿ ಹಾಗೂ ಇಲಿ ಎಂದು ಟೀಕಿಸಿದ್ದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅವರೊಂದಿಗೆ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರಿಂದು ಔತಣ ಕೂಟದಲ್ಲಿ ಭಾಗಿಯಾಗಿ ಸಿರಿಧಾನ್ಯ ಖಾದ್ಯ ಭೋಜನ ಸವಿದಿದ್ದಾರೆ.

    2023ರ ರಾಗಿ ವರ್ಷದ ಅಂಗವಾಗಿ ಸಂಸತ್ತಿನಲ್ಲಿ ಕೃಷಿ ಸಚಿವ ನರೇಂದ್ರ ತೋಮರ್ (Narendra Tomar) ಅವರು ಆಯೋಜಿಸಿದ್ದ ಸಿರಿಧಾನ್ಯ ಖಾದ್ಯ ಭೋಜನ ಕೂಟದಲ್ಲಿ ಭಾಗವಹಿಸಿದ್ದರು. ಈ ವೇಳೆ ಉಪರಾಷ್ಟ್ರಪತಿ ಜಗದೀಪ್ ಧನಕರ್, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ (HD Devegowda) ಹಾಗೂ ಇತರ ಸಂಸದರೂ ಹಾಜರಿದ್ದರು.

    ಔತಣ ಕೂಟದಲ್ಲಿ ಖಿಚಡಿ, ರಾಗಿ ದೋಸೆ, ರಾಗಿ ರೊಟ್ಟಿ, ಜೋಳದ ರೊಟ್ಟಿ, ಹಲ್ದಿ ಸಬ್ಜಿ, ಬಾಜ್ರಾ, ಕುರ್ಮಾ ಹಾಗೂ ರಾಗಿಯಿಂದ ಸಿಹಿ ತಿನಿಸುಗಳನ್ನು ಸಿದ್ಧಪಡಿಸಲಾಗಿತ್ತು. ವಿಶೇಷ ಖಾದ್ಯಗಳನ್ನು ತಯಾರಿಸಲು ಕರ್ನಾಟಕದಿಂದ ಬಾಣಸಿಗರನ್ನು ಕರೆತರಲಾಗಿತ್ತು. ಇದನ್ನೂ ಓದಿ: ಈ ದೇಶಕ್ಕಾಗಿ BJP ನಾಯಕನ ಮನೆ ನಾಯಿಯೂ ಸತ್ತಿಲ್ಲ – ಕೋಲಾಹಲ ಎಬ್ಬಿಸಿದ ಖರ್ಗೆ ಹೇಳಿಕೆ

    ಬಳಿಕ ಪ್ರಧಾನಿ ಮೋದಿ ಅವರು, 2023 ಅನ್ನು ಅಂತಾರಾಷ್ಟ್ರೀಯ ಸಿರಿಧಾನ್ಯ ವರ್ಷವೆಂದು ಆಚರಿಸಲು ತಯಾರಿ ನಡೆಸುತ್ತಿರುವಾಗ, ಸಂಸತ್ತಿನಲ್ಲಿ ಸಿರಿಧಾನ್ಯ ಭೋಜನಕೂಟದಲ್ಲಿ ಭಾಗವಹಿಸಿದ್ದೇವೆ. ಪಕ್ಷಾತೀತವಾಗಿ ಭಾಗವಹಿಸುತ್ತಿರುವುದು ಸಂತಸ ತಂದಿದೆ ಎಂದು ಹೇಳಿಕೊಂಡಿದ್ದಾರೆ. ಅಲ್ಲದೇ ಊಟದ ಕೆಲವು ಚಿತ್ರಗಳನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಪ್ರಧಾನಿ ವಿರುದ್ಧ ಸುಳ್ಳು ಸುದ್ದಿ ಪ್ರಸಾರ – 33 ಲಕ್ಷ ಚಂದಾದಾರರಿದ್ದ 3 ಯೂಟ್ಯೂಬ್ ಚಾನೆಲ್ ಪತ್ತೆ

    ಪ್ರಧಾನಿ ನರೇಂದ್ರ ಮೋದಿಯವರ ಉಪಕ್ರಮದ ಮೇರೆಗೆ ವಿಶ್ವಸಂಸ್ಥೆಯು 2023ನೇ ವರ್ಷವನ್ನು ಅಂತರರಾಷ್ಟ್ರೀಯ ರಾಗಿ ವರ್ಷ ಎಂದು ಘೋಷಿಸಿದೆ. ಭಾರತ ಸರ್ಕಾರವು 2018ರಲ್ಲಿ ರಾಗಿಯನ್ನು ಪೌಷ್ಠಿಕ ಧಾನ್ಯವೆಂದು ಘೋಷಿಸಿತ್ತು. ಜೊತೆಗೆ ಪೋಷಣ್ ಮಿಷನ್ ಅಭಿಯಾನದಲ್ಲಿ ಸೇರಿಸಲಾಯಿತು. ರಾಷ್ಟ್ರೀಯ ಆಹಾರ ಭದ್ರತಾ ಮಿಷನ್ ಅಡಿಯಲ್ಲಿ 14 ರಾಜ್ಯಗಳ 212 ಜಿಲ್ಲೆಗಳಲ್ಲಿ ರಾಗಿಗಾಗಿ ಪೌಷ್ಟಿಕ ಏಕದಳ ಘಟಕವನ್ನು ಅಳವಡಿಸಲಾಗಿದೆ.

    `ಭಾರತ್ ಜೋಡೋ ಯಾತ್ರೆ’ ರ‍್ಯಾಲಿಯನ್ನು ಟೀಕಿಸಿದ್ದ ಬಿಜೆಪಿ ವಿರುದ್ಧ ಮಲ್ಲಿಕಾರ್ಜುನ ಖರ್ಗೆ ಅವರು ಹರಿಹಾಯ್ದಿದ್ದರು. ಸ್ವಾತಂತ್ರ‍್ಯ ಹೋರಾಟಕ್ಕಾಗಿ ಬಿಜೆಪಿಯ ಒಂದು ನಾಯಿ ಕೂಡ ಸತ್ತಿಲ್ಲ ಎಂದು ಟೀಕಿಸಿದ್ದರು. ಇದರಿಂದ ಮಂಗಳವಾರ ಸಂಸತ್ ಅಧಿವೇಶನದಲ್ಲಿ ಕೋಲಾಹಲ ಸೃಷ್ಟಿಯಾಯಿತು. ಖರ್ಗೆ ಅವರ ಹೇಳಿಕೆಯನ್ನು ಖಂಡಿಸಿದ ಬಿಜೆಪಿ, ರಾಜ್ಯಸಭೆ ಕಲಾಪದ ವೇಳೆ ಕ್ಷಮೆ ಕೋರುವಂತೆ ಖರ್ಗೆ ಅವರನ್ನು ಒತ್ತಾಯಿಸಿತು. ಆದರೆ, ಸಂಸತ್ತಿನ ಹೊರಗೆ ಆಡಿದ ಮಾತುಗಳಿಗೆ ಕ್ಷಮೆ ಕೋರುವುದಿಲ್ಲ ಎಂದು ಖರ್ಗೆ ಹೇಳಿದ್ದಕ್ಕೆ ಭಾರೀ ಗಲಾಟೆಯೇ ನಡೆದಿತ್ತು.

    Live Tv
    [brid partner=56869869 player=32851 video=960834 autoplay=true]

  • ರಾಗಿ ಖರೀದಿ ಕೇಂದ್ರದಲ್ಲಿ ಗೋಲ್‌ಮಾಲ್ – ಕೇಂದ್ರಕ್ಕೆ ಬೀಗ ಜಡಿದ ರೈತರು

    ರಾಗಿ ಖರೀದಿ ಕೇಂದ್ರದಲ್ಲಿ ಗೋಲ್‌ಮಾಲ್ – ಕೇಂದ್ರಕ್ಕೆ ಬೀಗ ಜಡಿದ ರೈತರು

    ದಾವಣಗೆರೆ: ರಾಗಿಯ ಬೆಂಬಲ ಬೆಲೆ ಖರೀದಿ ಕೇಂದ್ರದ ಅವ್ಯವಸ್ಥೆ ಖಂಡಿಸಿ ದಾವಣಗೆರೆಯಲ್ಲಿ ರೈತರು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ.

    ಸರ್ಕಾರದಿಂದ ರೈತರಿಗಾಗಿ ಖರೀದಿ ಕೇಂದ್ರಗಳನ್ನು ತೆರೆದರೆ ಅದು ಕೇವಲ ದಲ್ಲಾಳಿಗಳಿಗೆ ಮಾತ್ರ ಲಾಭ. ರೈತರು ಏನಾದರೂ ನೊಂದಣಿ ಮಾಡಿಕೊಳ್ಳಲು ಹೋದರೆ ಸಾಕು, ಸರ್ವರ್ ಬ್ಯುಸಿ ಬರುತ್ತಿದೆ. ಕೇವಲ ಸಣ್ಣ ರೈತರಿಗಷ್ಟೇ ಖರೀದಿ ಕೇಂದ್ರ ಉಪಯೋಗವಾಗುತ್ತಿದ್ದು, ದೊಡ್ಡ ರೈತರನ್ನು ನಿರ್ಲಕ್ಷಿಸಲಾಗಿದೆ. ಸಣ್ಣ ರೈತರ ಹೆಸರನ್ನು ದಲ್ಲಾಳಿಗಳು ಉಪಯೋಗಿಸಿಕೊಂಡು ಅಕ್ರಮ ನೊಂದಣಿ ಮಾಡುತ್ತಿದ್ದಾರೆ ಎಂದು ರೈತರು ಆರೋಪಿಸಿದ್ದಾರೆ.

    ದಾವಣಗೆರೆ ಎಪಿಎಂಸಿ ಮಾರುಕಟ್ಟೆ ಆವರಣದ ರಾಗಿ ಬೆಂಬಲ ಬೆಲೆ ಖರೀದಿ ಕೇಂದ್ರಕ್ಕೆ ನುಗ್ಗಿದ ಆಲೂರು, ಮಲ್ಲಾಪುರ, ರೈತರು, ರೈತಮುಖಂಡ ಹುಚ್ಚವ್ವನಹಳ್ಳಿ ಮಂಜುನಾಥ್ ಬಣದ ಕಾರ್ಯಕರ್ತರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಳೆದ ಎರಡು ದಿನಗಳಿಂದ ಸರ್ವರ್ ಸಮಸ್ಯೆ ಇದೆ ಎಂದು ಹೇಳಿದ ರೈತರು ದಲ್ಲಾಳಿಗಳು ಕೊಟ್ಟ ರೈತರ ಲಿಸ್ಟ್ ಅನ್ನು ಪ್ರೂಟ್ ಐಡಿಯಲ್ಲಿ ಅಪ್ಲೋಡ್ ಮಾಡಿದ್ದಾರೆ. ಇದರಲ್ಲಿ ಅಡಿಕೆ, ಗುಲಾಬಿ ತೋಟವಿರುವ ರೈತರೂ ಇದ್ದಾರೆ. ಜಿಪಿಎಸ್ ಮಾಡುವಾಗ ರಾಗಿ ಬೆಳೆ ಬೆಳೆದ ರೈತರನ್ನು ಬಿಟ್ಟು ಬೇರೆಯವರ ಹೆಸರನ್ನು ಅಪ್ಲೋಡ್ ಮಾಡಲಾಗಿದೆ. ಆದ ಕಾರಣ ಬೆಂಬಲ ಬೆಲೆ ಖರೀದಿ ಕೇಂದ್ರದಲ್ಲಿ ಪಾರದರ್ಶಕತೆ ಕಾಪಾಡಬೇಕೆಂದು ರೈತರು ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ಅಪ್ಪು ನೆನಪಿನಾರ್ಥ ಸುಸಜ್ಜಿತ ಬಸ್ ತಂಗುದಾಣ ನಿರ್ಮಿಸಿದ ಮಳಮಾಚನಹಳ್ಳಿ ಗ್ರಾಮಸ್ಥರು

    ದೊಡ್ಡ ರೈತರು ಜಿಲ್ಲೆಯಲ್ಲಿ ಸಾಕಷ್ಟು ರಾಗಿ ಬೆಳೆದಿದ್ದಾರೆ. ಪ್ರತಿ ಕ್ವಿಂಟಾಲ್‌ಗೆ 3,377 ರೂ. ನಿಗದಿಪಡಿಸಲಾಗಿದ್ದು, ಹೊರಗಿನ ಮಾರುಕಟ್ಟೆಯಲ್ಲಿ ಕೇವಲ 1,500-1,800 ರೂ.ಗೆ ಮಾರಾಟವಾಗುತ್ತಿದೆ. ಮುಂಗಾರು ಬೆಳೆಗೆ ಮಾತ್ರ ಅವಕಾಶ ನೀಡಿದ್ದು, ಹಿಂಗಾರಿನಲ್ಲಿ ಬಂದಿರುವ ರಾಗಿಯನ್ನು ಏನು ಮಾಡಬೇಕೆಂದು ರೈತರು ಆಕ್ರೋಶ ವ್ಯಕ್ತಪಡಿಸಿ, ನಗರದ ಪಿಬಿ ರಸ್ತೆ ತಡೆದು ಸಂಚಾರ ಅಸ್ತವ್ಯಸ್ತವಾಗುವಂತೆ ಮಾಡಿದ್ದಾರೆ.

    2 ಗಂಟೆಗೂ ಹೆಚ್ಚು ಕಾಲ ರಸ್ತೆ ತಡೆದ ಆಲೂರು, ಮಲ್ಲಾಪುರ, ಹಳೇ ಬೇತೂರು ಗ್ರಾಮದ ರೈತರು ದಾವಣಗೆರೆ ಜಿಲ್ಲಾಧಿಕಾರಿ ಸ್ಥಳಕ್ಕೆ ಭೇಟಿ ನೀಡುವಂತೆ ಆಗ್ರಹಿಸಿದರು. ಸಾರಿಗೆ ಸಂಚಾರ ವ್ಯತ್ಯಯವಾಗಿದ್ದರಿಂದ ಪೊಲೀಸರು ಮತ್ತು ಪ್ರತಿಭಟನೆ ನಿರತ ರೈತರೊಡನೆ ಮಾತಿನ ಚಕಮಕಿ ನಡೆಯಿತು. ಸ್ಥಳಕ್ಕೆ ಎಸಿ ಹಾಗೂ ಕೃಷಿ ಇಲಾಖೆ ಜಂಟಿ ನಿರ್ದೇಶಕರು ಭೇಟಿ ನೀಡಿ, ರೈತರ ಮನವೊಲಿಸಿ ಪೋರ್ಟಲ್ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದರು. ಪ್ರೂಟ್ ಐಡಿಯಲ್ಲಿ ಪಾರದರ್ಶಕತೆ ಕಾಪಾಡದ ಹೊರತು ಯಾರಿಂದಲೂ ರಾಗಿ ಖರೀದಿಸದಂತೆ ರೈತರು ಒತ್ತಾಯ ಮಾಡಿದರು. ಇದನ್ನೂ ಓದಿ: ಹಿರಿಯ ನಟಿ ತಾರಾ ತಾಯಿ ಪುಷ್ಪಾ ವಿಧಿವಶ

    ಸರ್ಕಾರದ ಆದೇಶದಂತೆ 2021-22ನೇ ಸಾಲಿನ ಮುಂಗಾರು ಋತುವಿನಲ್ಲಿ ರೈತರಿಂದ ಬೆಂಬಲ ಬೆಲೆ ಯೋಜನೆಯಡಿ ರಾಗಿ ಖರೀದಿ ಕೆಂದ್ರಗಳನ್ನು ತೆರೆಯಲಾಗಿದೆ. ಜಿಲ್ಲೆಯ ಎಲ್ಲಾ ತಾಲೂಕುಗಳ ಎಪಿಎಂಸಿ ಪ್ರಾಂಗಣದಲ್ಲಿ ರೈತರ ನೋಂದಣಿ ಮತ್ತು ರಾಗಿ ಖರೀದಿ ಪ್ರಕ್ರಿಯೆ ಪ್ರಾರಂಭಿಸಲಾಗಿದೆ. ದಾವಣಗೆರೆ, ಹರಿಹರ, ಚನ್ನಗಿರಿ, ಜಗಳೂರು ಮತ್ತು ಹೊನ್ನಾಳಿ ತಾಲೂಕುಗಳಲ್ಲಿ ರಾಗಿ ಮಾರಾಟ ಮಾಡಲು ಬಾಕಿ ಇರುವ ರೈತರು ಕೃಷಿ ಇಲಾಖೆಯಿಂದ ಪಡೆದುಕೊಂಡಿರುವ ‘ಪ್ರೂಟ್ ಐಡಿ’ಯೊಂದಿಗೆ ಆಯಾ ತಾಲೂಕಿನ ಖರೀದಿ ಕೇಂದ್ರಕ್ಕೆ ಹೋಗಿ ನೋಂದಣಿ ಮಾಡಿಸಿಕೊಂಡು ರಾಗಿ ಮಾರಾಟ ಮಾಡತಕ್ಕದ್ದು ಎಂದು ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    ಸರ್ಕಾರದ ಆದೇಶದಲ್ಲಿ ಸೂಚಿಸಿರುವಂತೆ ಸಣ್ಣ ಮತ್ತು ಅತಿ ಸಣ್ಣ ರೈತರಿಂದ ಪ್ರತಿ ಕ್ವಿಂಟಾಲ್‌ಗೆ 3,377 ರೂ. ದರದಲ್ಲಿ ಖರೀದಿಸಲಾಗುವುದು. ಪ್ರತಿ ರೈತರಿಂದ ಉತ್ಪಾದನೆಗೆ ಅನುಗುಣವಾಗಿ ಪ್ರತಿ ಎಕರೆಗೆ 10 ಕ್ವಿಂಟಾಲ್‌ನಂತೆ ಗರಿಷ್ಠ 20 ಕ್ವಿಂಟಾಲ್ ರಾಗಿಯನ್ನು ಖರೀದಿಸಲಾಗುವುದು. ಉತ್ತಮ ಗುಣಮಟ್ಟದ ರಾಗಿ ಮಾತ್ರ ಖರೀದಿ ಮಾಡಲಾಗುವುದು. ರಾಜ್ಯದಲ್ಲಿ 1.14 ಲಕ್ಷ ಮೆಟ್ರಿಕ್ ಟನ್ ರಾಗಿಯನ್ನು ಖರೀದಿ ಮಾಡಲು ಅವಕಾಶ ಕಲ್ಪಿಸಿದ್ದು, 1.14 ಲಕ್ಷ ಮೆಟ್ರಿಕ್ ಟನ್ ರಾಗಿ ಖರೀದಿಗೆ ನೋಂದಣಿಯಾದ ಕೂಡಲೇ ಖರೀದಿ ಪ್ರಕ್ರಿಯೆ ಸ್ಥಗಿತಗೊಳ್ಳಲಿದೆ ಎಂದು ತಿಳಿಸಿದ್ದಾರೆ.

  • ವಿಧಾನಸಭೆಗೆ ರಾಗಿ ತಂದ ಶಾಸಕ: ಇಬ್ರಾಹಿಂ ನೋಡಿ ಕಿಚಾಯಿಸಿದ ಸಿದ್ದು

    ವಿಧಾನಸಭೆಗೆ ರಾಗಿ ತಂದ ಶಾಸಕ: ಇಬ್ರಾಹಿಂ ನೋಡಿ ಕಿಚಾಯಿಸಿದ ಸಿದ್ದು

    ಬೆಂಗಳೂರು: ರಾಗಿ ಖರೀದಿ ಸಮಸ್ಯೆ ಬಗ್ಗೆ ಸರ್ಕಾರ ಸ್ಪಷ್ಟ ಉತ್ತರ ಕೊಡಬೇಕು ಎಂದು ಆಗ್ರಹಿಸಿ ಕುಣಿಗಲ್ ಶಾಸಕ ರಂಗನಾಥ್ ಅವರು ವಿಧಾನ ಸಭೆಗೆ ರಾಗಿಯನ್ನೇ ತಂದಿದ್ದರು.

    ಈ ಕುರಿತು ವಿಧಾನ ಸಭೆಯಲ್ಲಿ ಮಾತನಾಡಿದ ಅವರು, ರಾಗಿ ಸಮಸ್ಯೆಯನ್ನು ಸರ್ಕಾರ ನಿರ್ಲಕ್ಷ್ಯ ಮಾಡುತ್ತಿದೆ ಅಂತ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದ ರಂಗನಾಥ್ ಅವರು ರಾಗಿ ಎಂಬ ಭಿತ್ತಿಪತ್ರ ತೋರಿಸಿದರು. ಬಳಿಕ ಕವರ್‌ನಲ್ಲಿ ಇದ್ದ ರಾಗಿಯನ್ನು ಹೊರ ತೆಗೆದು ಕೈಯಲ್ಲಿ ಹಿಡಿದು ರಾಗಿ ರಾಗಿ ಎಂದು ಕೂಗಿ ಪ್ರತಿಭಟಿಸಿದರು. ಇದನ್ನೂ ಓದಿ: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಎಲ್ಲ ವರ್ಗದ ಜನ ಅಧಿಕಾರಕ್ಕೆ ಬಂದಂತೆ: ಡಿಕೆಶಿ

    ಈ ವೇಳೆ ಸಿಎಂ ಬಂದ ಬಳಿಕ ಮಾತುಕತೆ ನಡೆಸುತ್ತೇನೆ. ನಂತರ ರಾಗಿ ಖರೀದಿ ಸಮಸ್ಯೆ ಬಗ್ಗೆ ಸ್ಪಷ್ಟವಾದ ಉತ್ತರ ಕೊಡಿಸುತ್ತೇನೆ ಎಂದು ಸ್ಪೀಕರ್ ಭರವಸೆ ನೀಡಿದ ಬಳಿಕ ಧರಣಿ ವಾಪಸ್ ಪಡೆದರು. ಇದನ್ನೂ ಓದಿ: ಮಹಿಳೆಯರು ಸ್ವಾವಲಂಬಿಗಳಾಗಿ ಜೀವಿಸಲು ಮುಂದಾಗಿ: ಮಂಜಮ್ಮ ಜೋಗತಿ

    ಇನ್ನೊಂದೆಡೆ ವಿಧಾನಸಭೆಯ ಮೊಗಸಾಲೆಯಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಇಬ್ರಾಹಿಂ ಮುಖಾಮುಖಿಯಾಗಿದ್ದರು. ಈ ವೇಳೆ ಸಿದ್ಧರಾಮಯ್ಯ, ಇಬ್ರಾಹಿಂ ನೋಡಿ ಹಾಸ್ಯ ರೂಪದಲ್ಲಿ ಕಿಚಾಯಿಸಿದ್ದಾರೆ. ಏನ್ ಈ ಕಡೆ ಬಂದಿದ್ದೀಯಾ. ಗುಟುರು ಹಾಕುತ್ತಾ ಇದ್ದೀಯಾ ಅಂತಾ ಇಬ್ರಾಹಿಂ ಕಾಲೆಳೆದರು. ಅಲ್ಲಿ ಏನು ಇರಲಿಲ್ಲ. ಅದಕ್ಕೆ ಈ ಕಡೆ ಬಂದೆ ಎಂದು ಇಬ್ರಾಹಿಂ ಹೇಳಿದರು. ಓಹೋ ಅಲ್ಲಿ ಏನೂ ಇಲ್ಲವಾ ಎಂದು ಸಿದ್ದರಾಮಯ್ಯ ನಕ್ಕು ಹೊರನಡೆದರು.

  • ಮೋದಿಗೆ ಪತ್ರ ಬರೆದ ಸಿದ್ದರಾಮಯ್ಯ

    ಮೋದಿಗೆ ಪತ್ರ ಬರೆದ ಸಿದ್ದರಾಮಯ್ಯ

    ಬೆಂಗಳೂರು: ರಾಗಿ ಖರೀದಿ ಮೇಲಿನ ನಿರ್ಬಂಧ ತೆರವುಗೊಳಿಸುವಂತೆ ಮನವಿ ಮಾಡಿ ಕಾಂಗ್ರೆಸ್ ಪಕ್ಷದ ನಾಯಕ ಸಿದ್ದರಾಮಯ್ಯ, ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.

    ರಾಗಿ ಖರೀದಿಯನ್ನು ಎಂಎಸ್‍ಪಿ ದರದಲ್ಲಿ ಹೆಚ್ಚಿಸಲು, ನೋಂದಣಿ ಸಮಯವನ್ನು ವಿಸ್ತರಿಸಲು ಮತ್ತು ರೈತರ ಅನುಕೂಲಕ್ಕಾಗಿ ಖರೀದಿಸಲು ಇರುವ ನಿರ್ಬಂಧಗಳನ್ನು ತೆಗೆದುಹಾಕಲು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಒತ್ತಾಯಿಸಿ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.

    ಪತ್ರದಲ್ಲಿ ಏನಿದೆ?: ಇಡೀ ವರ್ಷ ಪದೇ ಪದೇ ಸುರಿದ ಮಳೆಯ ನಡುವೆಯೂ ರಾಗಿ, ಭತ್ತ ಮುಂತಾದ ಬೆಳೆಗಳನ್ನು ಕೊಯಿಲು ಮಾಡಿ ಮಾರುಕಟ್ಟೆಗೆ ತರುತ್ತಿದ್ದಾರೆ. ಸರ್ಕಾರವು ಈ ವರ್ಷ ಜನವರಿ 1 ರಿಂದ ರಾಗಿಯನ್ನು ಬೆಂಬಲ ಬೆಲೆ ಯೋಜನೆಯಡಿ ಖರೀದಿಸಲು ನೋಂದಣಿ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ. ದಕ್ಷಿಣ ಕರ್ನಾಟಕದ ಬೆಂಗಳೂರು ಗ್ರಾಮಾಂತರ, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ, ಮಂಡ್ಯ, ಮೈಸೂರು, ತುಮಕೂರು, ಹಾಸನ, ಚಿತ್ರದುರ್ಗ, ಚಿಕ್ಕಮಗಳೂರು, ಚಾಮರಾಜನಗರ, ಬೆಂಗಳೂರು ನಗರ ಜಿಲ್ಲೆಗಳ ಪ್ರಮುಖ ಬೆಳೆಯಾದ ರಾಗಿಯನ್ನು ಬೆಳೆಯುತ್ತಾರೆ. ಇದನ್ನೂ ಓದಿ: ಅಶ್ವಿನಿ ಪುನೀತ್ ರಾಜ್‍ಕುಮಾರ್ ತಂದೆ ಹೃದಯಾಘಾತದಿಂದ ನಿಧನ

    ಕೃಷಿ ಇಲಾಖೆಯ ಅಂದಾಜಿನ ಪ್ರಕಾರ ನಮ್ಮ ರೈತರು ಈ ವರ್ಷ ಸುಮಾರು 19.35 ಲಕ್ಷ ಎಕರೆ ಪ್ರದೇಶದಲ್ಲಿ ಬೆಳೆದಿದ್ದಾರೆ. ಕೃಷಿ ಇಲಾಖೆಯ ದಾಖಲೆಗಳ ಪ್ರಕಾರ ಎಕರೆಗೆ ಕನಿಷ್ಟ 1 ಟನ್ ಎಂದರೂ ಸುಮಾರು 19.3 ಲಕ್ಷ ಟನ್ ಟನ್ ರಾಗಿ ಇಳುವರಿ ಬರುತ್ತದೆ. ಈ ವರ್ಷ ನಿರಂತರವಾಗಿ ಸುರಿದ ಮಳೆಯಿಂದಾಗಿ 4.5 ಲಕ್ಷ ಟನ್ ರಾಗಿಯು ಮಳೆಯ ಪಾಲಾದರೂ 15 ಲಕ್ಷ ಟನ್ ರಾಗಿ ರೈತರ ಕೈಯಲ್ಲಿದೆ, ಹಾಗಾಗಿ ರೈತರು ಬೆಂಬಲ ಬೆಲೆಯಡಿ ರಾಗಿಯನ್ನು ಮಾರಾಟ ಮಾಡಲು ಉತ್ಸಾಹ ತೋರಿಸುತ್ತಿದ್ದಾರೆ.

    ಸರ್ಕಾರಗಳು ಪದೇ ಪದೇ ರೈತರ ಆದಾಯ ದ್ವಿಗುಣ ಗೊಳಿಸಲಾಗುವುದು ಎಂದು ಹೇಳಲಾಗುತ್ತದೆ. ಆದರೆ ರೈತರ ಆದಾಯ ಹೆಚ್ಚಾಗುವ ಬದಲು ಕಡಿಮೆಯಾಗುತ್ತಿದೆ. ಅದರಲ್ಲೂ ಮಳೆಯಾಶ್ರಿತ ಪ್ರದೇಶಗಳಲ್ಲಿ ಬೆಳೆಯುವ ರಾಗಿಯು ಲಾಭದಾಯಕ ಬೆಳೆಯಲ್ಲ. ಖರ್ಚು ಹೆಚ್ಚು ಲಾಭ ಕಡಿಮೆ. ಸರ್ಕಾರಗಳು ಈ ರೀತಿಯ ಬೆಳೆಗಳಿಗೆ ಹೆಚ್ಚು ಬೆಲೆಯನ್ನು ನಿಗಧಿಪಡಿಸಿ ರೈತರು ಮಾರುಕಟ್ಟೆಗೆ ತರುವಷ್ಟು ಉತ್ಪನ್ನವನ್ನೂ ಖರೀದಿಸಬೇಕು. ರಾಗಿ, ಜೋಳದಂಥ ಮಳೆಯಾಶ್ರಿತ ಬೆಳೆಗಳನ್ನು ಬೆಂಬಲಿಸಬೇಕಾದ ಅನಿವಾರ್ಯತೆ ಇದೆ, ಏಕೆಂದರೆ ಈ ಬೆಳೆಗಳು ಹೆಚ್ಚು ನೀರನ್ನು ಬಯಸುವುದಿಲ್ಲ. ಇದನ್ನೂ ಓದಿ: ಅಪ್ಪುವಿನಂತೆ ಸಾವಿನಲ್ಲೂ ಸಾರ್ಥಕತೆ ಮೆರೆದ ಮಾವ ರೇವನಾಥ್

    ಸರ್ಕಾರಗಳು ಈ ರೈತರಿಗೆ ಸಬ್ಸಿಡಿಗಳನ್ನೇನೂ ನೀಡುತ್ತಿಲ್ಲ. ಈ ಬೆಳೆಗಳನ್ನು ಬೆಳೆಯುವುದರಿಂದ ನಿಸರ್ಗದ ರಕ್ಷಣೆಯೂ ಆಗುತ್ತದೆ. ಔಷಧ, ಕೀಟನಾಶಕ, ರಾಸಾಯನಿಕಗಳಿಲ್ಲದೆ ಬೆಳೆಯುವ ರಾಗಿ, ಜೋಳ ಮುಂತಾದ ಬೆಳೆಗಳು ನಿಸರ್ಗಸ್ನೇಹಿಯಾಗಿವೆ. ಹೀಗಾಗಿ ಇವುಗಳನ್ನು ಬೆಳೆಯಲು ಪ್ರೋತ್ಸಾಹಿಸಬೇಕು. ಆದರೆ ರಾಗಿಗೆ ಈಗ ದೊರೆಯುತ್ತಿರುವ ಬೆಲೆಯು ಯಾವುದಕ್ಕೂ ಸಾಲುವುದಿಲ್ಲ. ರಾಗಿಗೆ ನೀಡುತ್ತಿರುವ ಬೆಂಬಲ ಬೆಲೆ ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಒಂದು ಕ್ವಿಂಟಾಲಿಗೆ ಕೇವಲ 82 ರೂಪಾಯಿಗಳಷ್ಟು ಮಾತ್ರ ಏರಿಕೆ ಮಾಡಲಾಗಿದೆ.

    ಕಳೆದ ವರ್ಷ ಒಂದು ಕ್ವಿಂಟಾಲಿಗೆ 3295 ರೂ ನೀಡುತ್ತಿದ್ದರೆ ಈ ವರ್ಷ 3377 ಗಳಿಗೆ ಏರಿಕೆ ಮಾಡಲಾಗಿದೆ. ಆದರೆ ರೈತರು 2019-20 ರಲ್ಲಿ ಟ್ರಾಕ್ಟರ್ನಲ್ಲಿ ಒಂದು ಗಂಟೆ ಹೊಲ ಉಳಲು 750 ರೂಪಾಯಿ ನೀಡುತ್ತಿದ್ದರೆ ಈ ವರ್ಷ 1250-1300 ರೂ ನೀಡಬೇಕಾಗಿದೆ. ಬೆಳೆಯನ್ನು ಕಟಾವು ಮಾಡುವ ಯಂತ್ರಕ್ಕೆ ಕೂಡ ಗಂಟೆಗೆ ಸುಮಾರು 750 ರೂಪಾಯಿಗಳಷ್ಟು ಹೆಚ್ಚಾಗಿದೆ. ಪೆಟ್ರೋಲ್, ಡೀಸೆಲ್ ಸೇರಿದಂತೆ ಎಲ್ಲ ಅವಶ್ಯ ವಸ್ತುಗಳ ಬೆಲೆ ಏರಿಕೆಯಾಗಿವೆ. ಇದೆಲ್ಲದರಿಂದಾಗಿ ರೈತರು ಬೆಳೆಗಳನ್ನು ಬೆಳೆಯಲು ಉತ್ಪಾದನಾ ವೆಚ್ಚ ಸಿಕ್ಕಾಪಟ್ಟೆ ಹೆಚ್ಚಾಗಿದೆ. ಡಾ.ಸ್ವಾಮಿನಾಥನ್ ಅವರ ವರದಿಯಲ್ಲಿನ ಸೂತ್ರಗಳನ್ನು ಪೂರ್ತಿಯಾಗಿ ಅಳವಡಿಸಿದರೆ ಒಂದು ಕ್ವಿಂಟಾಲ್ ರಾಗಿಗೆ ಈಗ ನಿಗಧಿಪಡಿಸಿರುವ ಬೆಂಬಲ ಬೆಲೆಯ ಎರಡರಷ್ಟನ್ನು ರೈತರಿಗೆ ನೀಡಬೇಕಾಗುತ್ತದೆ. ಇದನ್ನೂ ಓದಿ: ಕೇವಲ 13 ಗಂಟೆಯಲ್ಲಿ 135 ಕಿ.ಮೀ ಬಂದ ಎತ್ತಿನ ಚಕ್ಕಡಿ – ಎತ್ತುಗಳಿಗೆ ಅದ್ಧೂರಿ ಸ್ವಾಗತ

    ಆದರೂ ರೈತರು ನಿಗಧಿಪಡಿಸಿರುವ ಬೆಂಬಲ ಬೆಲೆಯಾದರೂ ತಮ್ಮ ಬೆಳೆಗಳಿಗೆ ಸಿಗಲಿ ಎಂದು ಆಶಿಸುತ್ತಿದ್ದಾರೆ. ಏಕೆಂದರೆ ಮುಕ್ತ ಮಾರುಕಟ್ಟೆಯಲ್ಲಿ ರಾಗಿಯ ಬೆಲೆ ಪ್ರತಿ ಕ್ವಿಂಟಾಲಿಗೆ 1800 ರೂಪಾಯಿಗಳಿಂದ 2180 ರೂಪಾಯಿಗಳಷ್ಟೆ ಇದೆ. ಪ್ರಧಾನಿ ಮೋದಿಯವರ ಸರ್ಕಾರ ಈ ಬಾರಿ ರಾಜ್ಯದ ರೈತರಿಂದ ಕೇವಲ 2.10 ಲಕ್ಷ ಟನ್ ರಾಗಿಯನ್ನು ಮಾತ್ರ ಖರೀದಿಸುವಂತೆ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿದೆ. ಈ ಸೂಚನೆಯನ್ನು ಆಧರಿಸಿ ರಾಜ್ಯದ ಬಿಜೆಪಿ ಸರ್ಕಾರವು ರೈತರಿಂದ ರಾಗಿ ಖರೀದಿಸಲು ವಿಪರೀತ ನಿಬಂಧನೆಗಳನ್ನು ವಿಧಿಸಿದೆ. ಅದರಲ್ಲಿ ಸಣ್ಣ ರೈತರಿಂದ ಮಾತ್ರ ಕೇವಲ 20 ಕ್ವಿಂಟಾಲ್ ರಾಗಿಯನ್ನು ಮಾತ್ರ ಖರೀದಿ ಮಾಡಲಾಗುವುದೆಂದು ತಿಳಿಸಿ ಆದೇಶ ಹೊರಡಿಸಿದೆ. ಯೂಕಲಿಪ್ಟಸ್ ಬೆಳೆಯನ್ನು ಬೆಳೆಯುತ್ತಿದ್ದ ರೈತರು ಕಳೆದ ಎರಡು ವರ್ಷಗಳಿಂದ ಈಚೆಗೆ ತಮ್ಮ ಹೊಲಗಳಲ್ಲಿ ಬೆಳೆದಿದ್ದ ಬೆಳೆಯನ್ನು ತೆಗೆದು ಹಾಕಿ ರಾಗಿ ಬೆಳೆಯಲಾರಂಭಿಸಿದ್ದಾರೆ. ಹಾಗಾಗಿ ಸಹಜವಾಗಿಯೆ ರಾಗಿಯ ಉತ್ಪಾದನೆ ಹೆಚ್ಚಾಗಿದೆ. ಇದನ್ನೂ ಓದಿ: ಈ ಅಪರೂಪದ ಕೃತಿಯ ದರ್ಶನ ಪಡೆದರೆ ಮಾನವನ ಎಲ್ಲ ಸಂಕಷ್ಟ ದೂರ!

    ದೊಡ್ಡಬಳ್ಳಾಪುರ ಮುಂತಾದ ಕಡೆ ರೈತರು, ರೈತ ಸಂಘದವರು ರಾಗಿ ಖರೀದಿಗೆ ವಿಧಿಸಿರುವ ನಿಬಂಧನೆಗಳನ್ನು ತೆಗೆದು ಹಾಕುವಂತೆ ಪ್ರತಿಭಟನೆಗಳನ್ನು ನಡೆಸುತ್ತಿದ್ದಾರೆ. ಕಳೆದ ವರ್ಷ ಸುಮಾರು 4.7 ಲಕ್ಷ ಟನ್ ಗಳಷ್ಟು ರಾಗಿಯನ್ನು ಬೆಂಬಲ ಬೆಲೆ ಯೋಜನೆಯಡಿ ಖರೀದಿಸಿದರೆ ಈ ಬಾರಿ ರಾಜ್ಯದಿಂದ ಕೇವಲ 2.10 ಲಕ್ಷ ಟನ್ ರಾಗಿಯನ್ನು ಖರೀದಿಸಲು ಮಾತ್ರ ರಾಜ್ಯಕ್ಕೆ ಅನುಮತಿ ನೀಡಲಾಗಿದೆ. ಇದನ್ನೂ ಓದಿ:  ಚುನಾವಣೆ ನಂತರ ಪಂಜಾಬ್‌ನಲ್ಲಿ ಕಾಂಗ್ರೆಸ್ ನಿರ್ನಾಮ: ಅಮರಿಂದರ್ ಸಿಂಗ್

    ರೈತರು 15 ಲಕ್ಷ ಟನ್ ರಾಗಿ ಬೆಳೆದರೆ ಅವರು ತಮ್ಮ ಸ್ವಂತ ಬಳಕೆಗೆ ಶೇ.50 ರಷ್ಟನ್ನು ಬಳಸುತ್ತಾರೆಂದರೆ ಉಳಿದದ್ದನ್ನು ಅವರು ಮಾರಲೇಬೇಕು. ಸರ್ಕಾರ ಬೆಂಬಲ ಬೆಲೆ ಯೋಜನೆಯಡಿ ರೈತರ ಉತ್ಪನ್ನಗಳನ್ನು ಖರೀದಿಸದಿದ್ದರೆ ಮುಕ್ತ ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಾರೆ. ಮಾರುಕಟ್ಟೆಯಲ್ಲಿ ಬೆಲೆಗಳು ಬಿದ್ದು ಹೋಗುತ್ತವೆ. ಹೀಗಾದರೆ ರೈತರ ಹಿತಾಸಕ್ತಿಯನ್ನು ಕಾಪಾಡುವುದು ಹೇಗೆ? ರೈತರ ಆದಾಯ ದ್ವಿಗುಣಗೊಳ್ಳುವುದು ಹೇಗೆ? ಬೆಂಬಲ ಬೆಲೆ ಯೋಜನೆಯಡಿ ಖರೀದಿ ಮಾಡುವುದನ್ನು ನಿಲ್ಲಿಸಿದೆ. ಮುಕ್ತ ಮಾರುಕಟ್ಟೆಯಲ್ಲಿ ಈಗಾಗಲೆ ರಾಗಿಯ ಬೆಲೆ ಕಡಿಮೆಯಾಗಿ ಈಗ ಕೇವಲ 1800 ರೂ.ಗಳಿಂದ 2180 ರೂವರೆಗೆ ಮಾತ್ರ ಮಾರಾಟವಾಗುತ್ತಿದೆ. ಇದನ್ನೂ ಓದಿ:  ಸರ್ಕಾರದ ಯೋಜನೆಗಳು ಯಶಸ್ವಿಯಾಗಲು ಜನರ, ಅಧಿಕಾರಿಗಳ ಸಹಕಾರ ಮುಖ್ಯ: ವಿ.ಸೋಮಣ್ಣ

    ಇದರಿಂದ ಪ್ರತಿ ಕ್ವಿಂಟಾಲ್‍ಗೆ ರೈತರಿಗೆ ಸರಾಸರಿ 1377 ರೂಗಳಷ್ಟು ನಷ್ಟವಾಗುತ್ತಿದೆ. ಈ ಲೆಕ್ಕದಲ್ಲಿ ನೋಡಿದರೆ ಮಾರುಕಟ್ಟೆಗೆ 8 ಲಕ್ಷ ಟನ್ ರಾಗಿ ಬಂದರೆ 2.1 ಲಕ್ಷ ಟನ್ನನ್ನು ಬೆಂಬಲ ಬೆಲೆಯಡಿ ಖರೀದಿಸಲಾಗುತ್ತಿದೆ. ಉಳಿಕೆ 6 ಟನ್ ರಾಗಿ ಬೆಳೆದ ರೈತರಿಗೆ ಕನಿಷ್ಟ 1000 ಕೋಟಿ ನಷ್ಟವಾಗುತ್ತದೆ. ಆದ್ದರಿಂದ ಈ ಕೂಡಲೆ ರಾಗಿಯನ್ನು ಖರೀದಿಸಲು ವಿಧಿಸಿರುವ ನಿರ್ಬಂಧಗಳನ್ನು ತೆಗೆದು ಹಾಕಬೇಕು. ರೈತರು ಎಷ್ಟು ಕ್ವಿಂಟಾಲ್ ಖರೀದಿ ಕೇಂದ್ರಗಳಿಗೆ ತರುತ್ತಾರೊ ಅಷ್ಟನ್ನೂ ಖರೀದಿಸಬೇಕು. ಇಂದೇ ಕೇಂದ್ರ ಸರ್ಕಾರದ ಮೇಲೆ ಒತ್ತಡ ತಂದು ಕೇವಲ 2.10 ಲಕ್ಷ ಟನ್ ಖರೀದಿಸಲು ವಿಧಿಸಿರುವ ನಿರ್ಬಂಧವನ್ನು ತೆಗೆದು ಹಾಕಬೇಕೆಂದು ಒತ್ತಾಯಿಸಬೇಕು. ಸ್ಥಗಿತಗೊಳಿಸಿರುವ ನೋಂದಣಿ ಕೇಂದ್ರಗಳನ್ನು ಕೂಡಲೆ ಪುನರಾರಂಭಿಸಬೇಕು. ರಾಗಿ, ಭತ್ತ ಮುಂತಾದ ಉತ್ಪನ್ನಗಳಿಗೆ ನಿಗಧಿಗೊಳಿಸಿರುವ ಬೆಲೆಯನ್ನು ಹೆಚ್ಚಿಸಬೇಕೆಂದು ಆಗ್ರಹಿಸುತ್ತೇನೆ ಎಂದು ಪತ್ರ ಬರೆದು ಮನವಿ ಮಾಡಿದ್ದಾರೆ.

  • ಸರ್ಕಾರದ ವಿರುದ್ಧ ಕೋಟೆನಾಡಿನ ರೈತರ ಆಕ್ರೋಶ

    ಸರ್ಕಾರದ ವಿರುದ್ಧ ಕೋಟೆನಾಡಿನ ರೈತರ ಆಕ್ರೋಶ

    ಚಿತ್ರದುರ್ಗ: ರಾಗಿ ಖರೀದಿಸಿ ಬೆಂಬಲ ಬೆಲೆ ಹಣ ನೀಡಲು ಮೀನಾಮೇಷ ಏಣಿಸುತ್ತಿರುವ ಸರ್ಕಾರದ ವಿರುದ್ಧ ಕೋಟೆನಾಡಿನ ರೈತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

    ಬರದನಾಡು ಚಿತ್ರದುರ್ಗ ಜಿಲ್ಲೆಯ ಪ್ರಮುಖ ಆಹಾರ ಬೆಳೆ ಎನಿಸಿರುವ ರಾಗಿ ಬೆಳೆದ ರೈತರು, ಸರ್ಕಾರ ಸೂಚಿಸಿದಂತೆ ಬೆಂಬಲಬೆಲೆ ಸಿಗುವುದೆಂಬ ಆಸೆಯಿಂದ ಆಹಾರ ಪಡಿತರಕ್ಕಾಗಿ ತಮ್ಮ ರಾಗಿ ಬೆಳೆಯನ್ನು ಸರ್ಕಾರಕ್ಕೆ ಮಾರಾಟ ಮಾಡಿದ್ದಾರೆ. ಆದ್ರೆ ಈವರೆಗೆ ಅನ್ನದಾತರಿಗೆ ಬೆಂಬಲ ಬೆಲೆಯ ಹಣವನ್ನು ಸರ್ಕಾರ ನೀಡಿಲ್ಲ. ಈ ಬಾರಿ ಬರದನಾಡಲ್ಲಿ ಸುರಿದ ಉತ್ತಮ ಮಳೆಯಿಂದಾಗಿ ಹೊಲದಲ್ಲಿ ಬಿತ್ತನೆ ಮಾಡಲು ಚಿತ್ರದುರ್ಗ ಜಿಲ್ಲೆಯ ರೈತರು ಸಜ್ಜಾಗಿದ್ದಾರೆ. ಸಂಕಷ್ಟದ ವೇಳೆಯೂ ರಾಗಿ ಬೆಳೆದು ಸರ್ಕಾರಕ್ಕೆ ಮಾರಾಟ ಮಾಡಿದರು ಸಹ ಕೈನಲ್ಲಿ ಕಾಸಿಲ್ಲದೇ ಬೀಜ ಗೊಬ್ಬರ ತರಲು ಹಣವಿಲ್ಲದಂತಾಗಿ ಅನ್ನದಾತರು ಪರದಾಡುವಂತಾಗಿದೆ. ಇದನ್ನೂ ಓದಿ:  45 ವರ್ಷ ಮೇಲ್ಪಟ್ಟ 6 ಲಕ್ಷಕ್ಕೂ ಹೆಚ್ಚು ಮಂದಿಗೆ ವ್ಯಾಕ್ಸಿನೇಷನ್ – ಬೆಂಗಳೂರು ವರದಿ ಬಿಡುಗಡೆ

    ಕಳೆದ ವರ್ಷ ಲಕ್ಷಾಂತರ ಜನ ರೈತರು ರಾಗಿಯನ್ನು ಬೆಳೆದಿದ್ದರು. ಸರ್ಕಾರದ ಮನವಿಯಂತೆ  ಕ್ವಿಂಟಾಲ್‍ಗೆ 3250 ರೂಪಾಯಿ ಬೆಂಬಲ ಬೆಲೆ ಸಿಗುವುದೆಂಬ ಆಸೆಯಿಂದ ಸರ್ಕಾರದ ಖರೀದಿ ಕೇಂದ್ರದಲ್ಲಿ ಮಾರಾಟ ಮಾಡಿ ಸರ್ಕಾರದಿಂದ ಹಣ ಬರುವುದೆಂಬ ನಿರೀಕ್ಷೆಯಿಂದ ಈ ಬಾರಿ ಶೇಂಗಾ, ಈರುಳ್ಳಿ ಬಿತ್ತನೆ ಮಾಡಲು ಜಮೀನನ್ನು ಸಜ್ಜುಗೊಳಿಸಿ ಕಾಯುತ್ತಿದ್ದಾರೆ. ರಾಗಿಯನ್ನು ಮಾರಾಟ ಮಾಡಿ ನಾಲ್ಕೈದು ತಿಂಗಳುಗಳು ಕಳೆದಿವೆ. ಆದರೆ ನಯಾಪೈಸೆ ರಾಗಿ ಖರೀದಿ ಹಣ ರೈತರ ಖಾತೆಗೆ ಸರ್ಕಾರದಿಂದ ಬಂದಿಲ್ಲ. ಹೀಗಾಗಿ ಸರ್ಕಾರದ ನಿರ್ಲಕ್ಷದ ವಿರುದ್ಧ ಕೋಟೆನಾಡಿನ ಅನ್ನದಾತರು ಕಿಡಿಕಾರಿದ್ದಾರೆ.

    ಆಹಾರ ಇಲಾಖೆ ಅಧಿಕಾರಿಗಳಿಗೆ ರೈತರು ದುಂಬಾಲು ಬಿದ್ದಿದ್ದಾರೆ. ಆದರೆ ಯಾವುದೇ ಪ್ರಯೋಜನ ಆಗಿಲ್ಲ. ಸರ್ಕಾರದಿಂದ ಹಣ ಬಿಡುಗಡೆ ಆಗಿಲ್ಲ ಅಂತ ಸುಲಭವಾಗಿ ಹೇಳುತಿದ್ದಾರೆ. ಹೀಗಾಗಿ ರೈತರ ಆಕ್ರೋಶ ಮುಗಿಲು ಮುಟ್ಟಿದೆ. ರೈತನ ಜಮೀನಿನ ಮೇಲೆ ಬ್ಯಾಂಕ್ ನೀಡುವ ಸಾಲಕ್ಕೆ ಒಂದು ದಿನ ವಿಳಂಬವಾದರೂ ದಿನದಿಂದ ದಿನಕ್ಕೆ ನೊಟೀಸ್, ಬೆದರಿಕೆ ಹಾಕುವ ಸರ್ಕಾರ ರೈತನಿಂದ ಖರೀದಿಸಿದ ರಾಗಿ ಬೆಳೆಗೆ ಹಣ ನೀಡದಿರೋದು ವಿಪರ್ಯಾಸವಾಗಿದೆ ಎಂದು ರೈತರು ಹೇಳುತ್ತಿದ್ದಾರೆ.

  • ರಾಗಿ ಸೇವನೆಯಿಂದ ಆರೋಗ್ಯಕ್ಕೆ ಸಿಗಲಿದೆ ಹಲವಾರು ಪ್ರಯೋಜನ

    ರಾಗಿ ಸೇವನೆಯಿಂದ ಆರೋಗ್ಯಕ್ಕೆ ಸಿಗಲಿದೆ ಹಲವಾರು ಪ್ರಯೋಜನ

    ಸಿರಿಧಾನ್ಯಗಳಲ್ಲಿ ಒಂದಾಗರುವ ರಾಗಿಯನ್ನು ನಿತ್ಯದ ಆಹಾರ ಕ್ರಮದಲ್ಲಿ ಬಳಕೆ ಮಾಡಿದರೆ ಆರೋಗ್ಯಕ್ಕೆ ಹಲವು ಲಾಭಗಳು ಸಿಗುತ್ತದೆ. ಇದು ದೇಹಕ್ಕೆ ತಂಪು ಮತ್ತು ಶಕ್ತಿಯನ್ನು ನೀಡುವುದರ ಜೊತೆಗೆ ಹಲವು ರೋಗಗಳನ್ನು ನಿವಾರಿಸುವ ಶಕ್ತಿ ರಾಗಿಗೆ ಇದೆ. ನಮ್ಮ ಆಹಾರ ಪದ್ದತಿಯಲ್ಲಿ ರಾಗಿ ಬಳಕೆ ಮಾಡುವುದರಿಂದ ಹಲವಾರು ಲಾಭಗಳು ಸಿಗಲಿದೆ.

    ಪ್ರಯೋಜನ ಏನು?
    * ಬಿಸಿಲಿನ ಬೇಗೆ ಪ್ರಾರಂಭವಾಗಿದೆ. ಮುಂಜಾವಿನಲ್ಲಿ ಟಿ ಮಾಡಿ ಕುಡಿಯುವ ಬದಲಾಗಿ ರಾಗಿ ಗಂಜಿಯನ್ನು ಸೇವಿಸಿದರೆ ದೇಹಕ್ಕೆ ತಂಪು ಮತ್ತು ಆರೋಗ್ಯಕರವಾಗಿರುತ್ತದೆ.

    * ಬೇರೆ ಧಾನ್ಯಗಳಿಗಿಂತ ಕೊಬ್ಬಿನಾಂಶವು ತುಂಬಾ ಕಡಿಮೆ ಇರುತ್ತದೆ. ದೇಹಕ್ಕೆ ಅಗತ್ಯ ಇರುವ ಒಳ್ಳೆಯ ಕೊಬ್ಬನ್ನು ನೀಡುತ್ತದೆ.

    * ರಾಗಿಯು ಹೊಟ್ಟೆ ತುಂಬಿದಂತೆ ಮಾಡುವುದರ ಜೊತೆಗೆ ತಂಪನ್ನು ನೀಡುತ್ತದೆ.

    * ತೂಕ ಇಳಿಸಿಕೊಳ್ಳಲು ಬಯಸುವವರು ಅನ್ನ, ಗೋಧಿ ಬದಲಿಗೆ ರಾಗಿ ಬಳಕೆ ಮಾಡಬಹುದು.

    * ಮಕ್ಕಳಿಗೆ ಆಹಾರ ಕ್ರಮದಲ್ಲಿ ರಾಗಿ ನೀಡಿದರೆ ಅದರಿಂದ ಮೂಳೆಗಳು ಬಲಗೊಳ್ಳುವುದು ಮತ್ತು ಹಲ್ಲುಗಳು ಕೂಡ ಬಲಿಷ್ಠವಾಗುತ್ತದೆ.

    * ರಾಗಿ ಜ್ಯೂಸ್, ದೋಸೆ, ರೊಟ್ಟಿ ಸೇವನೆಯಿಂದ ರಾಗಿಯಲ್ಲಿರುವ ಟ್ರೈಪ್ಟೊಫಾನ್ ಅಂಶ ನಿದ್ರಾಹೀನತೆ ಕಡಿಮೆ ಮಾಡಿ ಆರೋಗ್ಯಕಾರಿ ನಿದ್ರೆ ನೀಡುತ್ತದೆ.

    * ಬೆಳೆಯುವ ಮಕ್ಕಳಿಗೆ ರಾಗಿ ನೀಡಿದರೆ ದೇಹಕ್ಕೆ ಬೇಕಾಗಿರುವ ಕ್ಯಾಲ್ಸಿಯಂ, ಪ್ರೋಟಿನ್ ಜೊತೆಗೆ ಪೋಷಕಾಂಶಗಳನ್ನು ಒದಗಿಸುವ ಅಂಶವನ್ನು ಹೊಂದಿದೆ.

    * ರಾಗಿಯಲ್ಲಿರುವ ಅಮಿನೋ ಆಮ್ಲವು ನೈಸರ್ಗಿಕ ಖಿನ್ನತೆ ನಿವಾರಣೆ ಹಾಗೂ ಮೈಗ್ರೇನ್ ಸಮಸ್ಯೆ ಎದುರಿಸುತ್ತಿರುವವರಿಗೆ ಇದು ಒಳ್ಳೆಯದಾಗಿದೆ.

    * ರಾಗಿಯಲ್ಲಿ ಇರುವಂತಹ ನಾರಿನಾಂಶವು ಜೀರ್ಣಕ್ರಿಯೆ ಸಮಸ್ಯೆಗಳನ್ನು ನಿವಾರಣೆ ಮಾಡುತ್ತದೆ.

  • ಪಡಿತರದಲ್ಲಿ ರಾಗಿ, ಜೋಳ – ಕೇಂದ್ರ ಸಚಿವರ ಜೊತೆ ಉಮೇಶ್ ಕತ್ತಿ ಚರ್ಚೆ

    ಪಡಿತರದಲ್ಲಿ ರಾಗಿ, ಜೋಳ – ಕೇಂದ್ರ ಸಚಿವರ ಜೊತೆ ಉಮೇಶ್ ಕತ್ತಿ ಚರ್ಚೆ

    ನವದೆಹಲಿ: ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಉಮೇಶ್ ಕತ್ತಿ ಅವರು ನವದೆಹಲಿಯಲ್ಲಿಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ರಾಜ್ಯ ಸಚಿವ ರಾವ್ ಸಾಹೇಬ್ ದಾನ್ವೆ ಅವರನ್ನು ಭೇಟಿಯಾಗಿ ರಾಜ್ಯದ ಪಡಿತರ ವ್ಯವಸ್ಥೆಯ ಸ್ಥಿತಿಗತಿ ಬಗ್ಗೆ ಹಾಗೂ ಪಡಿತರ ವ್ಯವಸ್ಥೆಯಲ್ಲಿ ರಾಗಿ ಮತ್ತು ಜೋಳ ವಿತರಣೆ ಬಗ್ಗೆ ಚರ್ಚಿಸಿದರು.

    ಪ್ರಸ್ತುತ ಪಡಿತರ ಸರಬರಾಜು ವ್ಯವಸ್ಥೆಯಲ್ಲಿ ಅಕ್ಕಿ ಮತ್ತು ಗೋಧಿಯನ್ನು ವಿತರಣೆ ಮಾಡಲಾಗುತ್ತಿದೆ. ಅಕ್ಕಿ ಮತ್ತು ಗೋಧಿ ವಿತರಣೆಯನ್ನು ಕಡಿತಗೊಳಿಸಿ, ಕಡಿತಗೊಳಿಸಿದ ಪ್ರಮಾಣಕ್ಕೆ ಪರ್ಯಾಯವಾಗಿ ರಾಗಿ-ಜೋಳ ಸ್ಥಳೀಯ ಧಾನ್ಯಗಳನ್ನು ವಿತರಿಸಲು ಅವಕಾಶ ಮಾಡಿಕೊಡಬೇಕೆಂಬ ಪ್ರಮುಖ ಬೇಡಿಕೆಯ ಮನವಿ ಪತ್ರವನ್ನು ಸಲ್ಲಿಸಲಾಯಿತು.

    ಭೌಗೋಳಿಕವಾಗಿ ಸ್ಥಳೀಯ ಜನರ ಆಹಾರ ಪದ್ಧತಿಗೆ ಅನುಸಾರವಾಗಿ ಪಡಿತರ ವ್ಯವಸ್ಥೆಯನ್ನು ವಿತರಣೆ ಮಾಡಬೇಕಾಗುತ್ತದೆ. ಪ್ರಸ್ತುತ ಅಕ್ಕಿ ಮತ್ತು ಗೋಧಿಯನ್ನು ಮಾತ್ರ ಸರಬರಾಜು ಮಾಡಲಾಗುತ್ತಿದೆ. ಭೌಗೋಳಿಕ ಆಹಾರ ಪದ್ಧತಿಗೆ ವಿರುದ್ಧವಾಗಿ ಒಂದೇ ವಿಧದ ಆಹಾರ ಸೇವನೆಯಿಂದ ಜನರ ಆರೋಗ್ಯದ ಮೇಲೂ ಪರಿಣಾಮ ಬೀರುತ್ತಿದೆ ಹಾಗೂ ಒಂದು ಪ್ರದೇಶದ ರೈತರಿಗೆ ಮಾತ್ರ ಲಾಭವಾಗುತ್ತಿದ್ದು, ಸ್ಥಳೀಯ ರೈತರು ಬೆಳೆದ ಬೆಳೆಗಳಿಗೆ ಸರಿಯಾದ ಬೆಲೆ ಲಭಿಸುತ್ತಿಲ್ಲ, ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಅಕ್ಕಿ, ಗೋಧಿ ಪ್ರಮಾಣವನ್ನು ಕಡಿತಗೊಳಿಸಿ, ಕಡಿತಗೊಳಿಸಿದ ಪ್ರಮಾಣದ ಸಬ್ಸಿಡಿ ದರವನ್ನು ಕರ್ನಾಟಕದ ಆಹಾರ ಪದ್ದತಿಯಲ್ಲಿ ಬಳಸುವ ರಾಗಿ, ಜೋಳ, ಸ್ಥಳೀಯ ಧಾನ್ಯಗಳ ಖರೀದಿಗೆ ಅವಕಾಶ ನೀಡಬೇಕೆಂದು ಮನವಿ ಮಾಡಲಾಯಿತು.

    ಮನವಿ ಕುರಿತು ಸಕಾರಾತ್ಮಕವಾಗಿ ಸ್ಪಂದಿಸಿದ ಕೇಂದ್ರ ಸಚಿವ ರಾವ್ ಸಾಹೇಬ್ ದಾನ್ವೆ, ಕರ್ನಾಟಕ ಆಹಾರ ಇಲಾಖೆಯ ಅಲೋಚನೆ ಜನರ ಹಿತದೃಷ್ಟಿಯಿಂದ ಅತ್ಯುತ್ತಮವಾದದ್ದು, ಇದರ ಅನುಷ್ಠಾನಕ್ಕೆ ಚಾಲ್ತಿಯಲ್ಲಿರುವ ನೀತಿಯನ್ನು ಬದಲಾವಣೆ ಮಾಡಬೇಕು. ಈ ಬಗ್ಗೆ ಉನ್ನತ ಮಟ್ಟದ ಸಭೆಯಲ್ಲಿ ಚರ್ಚಿಸಿ ಹೊಸ ಪಾಲಿಸಿ ಅನುಷ್ಠಾನಕ್ಕೆ ಕ್ರಮವಹಿಸಲಾಗುವುದೆಂದು ತಿಳಿಸಿದರು.

    ಈ ವೇಳೆ ಸಂಸದ ಅಣ್ಣಾ ಸಾಹೇಬ್ ಜೊಲ್ಲೆ, ಇಲಾಖೆಯ ಕಾರ್ಯದರ್ಶಿ ಬಿ.ಹೆಚ್. ಅನಿಲ್ ಕುಮಾರ್, ಕೇಂದ್ರದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

  • ಪಡಿತರದಲ್ಲಿ ಜೋಳ, ರಾಗಿ, ಕಡಲೆ, ಹೆಸರು ಸೇರಿ ಸ್ಥಳೀಯ ಆಹಾರ ವಿತರಣೆ: ಸಚಿವ ಕತ್ತಿ

    ಪಡಿತರದಲ್ಲಿ ಜೋಳ, ರಾಗಿ, ಕಡಲೆ, ಹೆಸರು ಸೇರಿ ಸ್ಥಳೀಯ ಆಹಾರ ವಿತರಣೆ: ಸಚಿವ ಕತ್ತಿ

    ಬೆಳಗಾವಿ: ಆಹಾರ ಭದ್ರತೆ ಯೋಜನೆಯಡಿ ಪಡಿತರದಲ್ಲಿ ಸ್ಥಳೀಯ ಆಹಾರ ವಿತರಣೆಗೆ ಆದ್ಯತೆ ನೀಡಲಾಗುವುದು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಉಮೇಶ್ ಕತ್ತಿ ತಿಳಿಸಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉತ್ತರ ಕರ್ನಾಟಕದಲ್ಲಿ ಅಕ್ಕಿ ಜೊತೆಗೆ ಜೋಳ, ಕಡಲೆ, ಹೆಸರು ಬೇಳೆ ವಿತರಿಸಲಾಗುವುದು. ದಕ್ಷಿಣ ಕರ್ನಾಟಕದಲ್ಲಿ ಅಕ್ಕಿ, ರಾಗಿ, ಕಡಲೆ, ಹೆಸರು ಬೇಳೆ ವಿತರಿಸಲಾಗುವುದು. ಎಪ್ರಿಲ್ ಒಂದರಿಂದ ಈ ಯೋಜನೆ ಜಾರಿಗೆ ತರಲು ಯೋಜಿಸಲಾಗಿದೆ. ಇದರಿಂದ ಕಾಳಸಂತೆಗೆ ಅಕ್ಕಿ ಸರಬರಾಜು ಆಗುವುದು ತಪ್ಪಲಿದೆ ಎಂದು ತಿಳಿಸಿದರು.

    ಪ್ರತಿವರ್ಷ ಪಂಜಾಬ್ ನಿಂದ ರಾಜ್ಯಕ್ಕೆ ಅಕ್ಕಿ ಸರಬರಾಜು ಆಗುತ್ತಿತ್ತು. ಕರ್ನಾಟಕದಲ್ಲೇ ಸಾಕಷ್ಟು ಭತ್ತ ಬೆಳೆಯುತ್ತಿದ್ದು, ಇಲ್ಲೇ ಖರೀದಿಸುವ ಯೋಜನೆ ಇದೆ. ಕೇಂದ್ರದ ಆಹಾರ ನಾಗರಿಕ ಸರಬರಾಜು ಸಚಿವರ ಜೊತೆಗೆ ಚರ್ಚಿಸಿ ಈ ಕುರಿತು ನಿರ್ಧರಿಸಲಾಗುವುದು. ಇದರಿಂದ ಅನ್ನಭಾಗ್ಯ ಅಕ್ಕಿ ಕಾಳಸಂತೆಗೆ ಹೋಗುವುದನ್ನು ತಡೆಯಬಹುದಾಗಿದೆ. ಕಾಳಸಂತೆಗೆ ಅಕ್ಕಿ ಸಾಗಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

    ರಾಜ್ಯದಲ್ಲಿ ಅನಧಿಕೃತ ಪಡಿತರ ಚೀಟಿ ರದ್ಧತಿಗೆ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದ್ದು, ಪಡಿತರ ರದ್ಧತಿ ಸಂಬಂಧ ಬೆಳಗಾವಿ ಜಿಲ್ಲೆಯಲ್ಲಿ ಸಮೀಕ್ಷೆ ನಡೆಸುವಂತೆ ಸೂಚಿಸಲಾಗಿದೆ. ತಹಶಿಲ್ದಾರ್, ಪಿಡಿಒ ಒಳಗೊಂಡ ಸಮಿತಿ ರಚಿಸಿ ಸರ್ವೆ ಮಾಡಲಾಗುವುದು. ಮಾರ್ಚ್ 31 ರೊಳಗೆ ಅನಧಿಕೃತ ಕಾರ್ಡ್‍ಗಳ ವರದಿ ಕೈ ಸೇರಲಿದೆ. ಬಳಿಕ ಅನಧಿಕೃತ ಪಡಿತರ ಚೀಟಿ ರದ್ದುಗೊಳಿಸಲಾಗುವುದು. ಅನಧಿಕೃತ ಪಡಿತರ ಪತ್ತೆ ಸಮರ್ಪಕವಾಗದಿದ್ದರೆ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು.