Tag: ರಾಕ್ ಪೈಥಾನ್

  • ಬೆಂಗಳೂರಿನ ಮನೆಗೆ ನುಗ್ಗಿತು ಅಪರೂಪದ ಹಾವು

    ಬೆಂಗಳೂರಿನ ಮನೆಗೆ ನುಗ್ಗಿತು ಅಪರೂಪದ ಹಾವು

    ಬೆಂಗಳೂರು: ಅರಣ್ಯ ನಾಶದಿಂದಾಗಿ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಅಪರೂಪದ ಹಾವುಗಳು ಕಾಣಿಸಿಕೊಳ್ಳುತ್ತಿವೆ. ಸಿಲಿಕಾನ್ ಸಿಟಿ ಬೆಂಗಳೂರು ನಗರವಾಸಿಗಳ ಮನೆಯೊಳಗೆ ಅದೂ ಮಧ್ಯರಾತ್ರಿ ಬೃಹತ್ ಗಾತ್ರದ ಹಾವೊಂದು ಕಂಡ ತಕ್ಷಣ ಮನೆಯವರು ಬೆಚ್ಚಿಬಿದ್ದಿದ್ದಾರೆ.

    ಅದೂ ಸಾಮಾನ್ಯ ಹಾವಲ್ಲ ದಟ್ಟಾರಣ್ಯಗಳಲ್ಲಿ ಹೆಚ್ಚಾಗಿ ವಾಸ ಮಾಡುವ ಇಂಡಿಯನ್ ರಾಕ್ ಪೈಥಾನ್ ಜಾತಿಯ ಬೃಹತ್ ಹೆಬ್ಬಾವು. ಹೌದು ಆರ್.ಆರ್ ನಗರ ವಲಯ ವ್ಯಾಪ್ತಿಯ ವಾರ್ಡ್ ನಂ 198 ತಲಘಟ್ಟಪುರದ ಮನೆಯ ಕಂಪೌಂಡ್ ಒಳಗೆ ಈ ಬೃಹತ್ ಹೆಬ್ಬಾವು ಸೇರಿಕೊಂಡಿತ್ತು. ರಾತ್ರಿ ಹನ್ನೆರಡು ಗಂಟೆಗೆ ಹೆಬ್ಬಾವು ಕಂಡ ತಕ್ಷಣ ಭಯಬಿದ್ದು ಪಾಲಿಕೆ ಸಹಾಯವಾಣಿಗೆ ಕರೆ ಮಾಡಿದ್ದಾರೆ.

    ತಕ್ಷಣ ಬಿಬಿಎಂಪಿ ಉಪ ಅರಣ್ಯ ಸಂರಕ್ಷಕರ ಅನುಮತಿ ಪಡೆದು, ಪಾಲಿಕೆ ವನ್ಯಜೀವಿ ಸಂರಕ್ಷಕರಾದ ಪ್ರಸನ್ನ ಕುಮಾರ್ ಹೆಬ್ಬಾವನ್ನು ರಕ್ಷಿಸಿದ್ದಾರೆ. ಬಳಿಕ ಪಾಲಿಕೆ ವನ್ಯಜೀವಿ ತುರ್ತು ವಾಹನದ ಮೂಲಕ ಪುನರ್ವಸತಿ ಕೇಂದ್ರಕ್ಕೆ ನೀಡಿ, ಆರೋಗ್ಯ ತಪಾಸಣೆ ನಡೆಸಿ ಆರೋಗ್ಯವಾಗಿದ ಹಿನ್ನೆಲೆಯಲ್ಲಿ ವಾಪಸ್ ಅರಣ್ಯಕ್ಕೆ ಬಿಡಲು ಮುಂದಾಗಿದ್ದಾರೆ.

    ಒಟ್ಟಿನಲ್ಲಿ ಈ ಇಂಡಿಯನ್ ರಾಕ್ ಪೈಥಾನ್ ಬಹಳ ದಪ್ಪ ಹಾಗೂ ಉದ್ದ ಬೆಳೆಯುವ ಹೆಬ್ಬಾವು ಜಾತಿಯಾಗಿದ್ದು, ಬಹಳ ಅಪರೂಪದ ಪ್ರಭೇಧವಾಗಿದೆ. ನಗರದಲ್ಲಿ ಸಿಕ್ಕಿರುವುದು ತುಂಬಾ ಅಪರೂಪ ಮತ್ತು ವಿಶೇಷವಾಗಿದೆ.

  • ಹೆಬ್ಬಾವಿನೊಂದಿಗೆ ಸೆಲ್ಫಿ- ಕೂದಲೆಳೆ ಅಂತರದಲ್ಲಿ ಅರಣ್ಯಾಧಿಕಾರಿ ಪಾರು!

    ಹೆಬ್ಬಾವಿನೊಂದಿಗೆ ಸೆಲ್ಫಿ- ಕೂದಲೆಳೆ ಅಂತರದಲ್ಲಿ ಅರಣ್ಯಾಧಿಕಾರಿ ಪಾರು!

    ಕೋಲ್ಕತ್ತಾ: ಜನರನ್ನು ಮನರಂಜಿಸೋಕೆ ಹೋಗಿ ಅರಣ್ಯ ಇಲಾಖೆಯ ಸಿಬ್ಬಂದಿಯೋರ್ವ ಪ್ರಾಣಕ್ಕೆ ಸಂಚಕಾರ ತಂದುಕೊಂಡಿದ್ದ ಘಟನೆ ಪಶ್ಚಿಮಬಂಗಾಳದಲ್ಲಿ ನಡೆದಿದೆ.

    ಹೆಬ್ಬಾವಿನೊಂದಿಗೆ ಸೆಲ್ಫಿ ತೆಗೆದುಕೊಳ್ಳುವ ಮೂಲಕ ಜನರನ್ನು ಮನರಂಜಿಸಲು ಹೋಗಿ ಅಪಾಯವನ್ನು ತನ್ನ ಮೈಮೇಲೆ ಎಳೆದುಕೊಂಡಿದ್ದರು. ಸಹೋದ್ಯೋಗಿಯ ಸಮಯಪ್ರಜ್ಞೆಯಿಂದಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

    ಜಲ್ಪೈಗುರಿ ಹಳ್ಳಿಗಾಡಿನ ಜನತೆ ಅರಣ್ಯ ಅಧಿಕಾರಿಗಳಿಗೆ ಕರೆಮಾಡಿ, ತಮ್ಮ ಮೇಕೆಗಳನ್ನು ರಾಕ್ ಪೈಥಾನ್ ಹೆಬ್ಬಾವು ತಿಂದು ಹಾಕುತ್ತಿದೆ ಎಂದು ದೂರು ನೀಡಿದ್ದರು. ಹೆಬ್ಬಾವನ್ನು ಹಿಡಿಯಲು ಅರಣ್ಯ ಇಲಾಖೆಯ ಸಿಬ್ಬಂದಿ ಹಳ್ಳಿಗೆ ಧಾವಿಸಿ, 18 ಅಡಿ ಉದ್ದದ ಸುಮಾರು 40 ಕೆ.ಜಿ ತೂಕದ ಹಾವನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದರು.

    ಈ ಸಂದರ್ಭದಲ್ಲಿ ಸೆಲ್ಫಿ ಕ್ರೇಜ್ ಇದ್ದ ಅರಣ್ಯಾಧಿಕಾರಿ ಹೆಬ್ಬಾವನ್ನು ತಮ್ಮ ಕೊರಳಿಗೆ ಹಾಕಿಕೊಂಡು ಸೇರಿದ್ದ ಜನರೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಮುಂದಾಗಿದ್ದರು. ಆಗ ಹೆಬ್ಬಾವು ಅಧಿಕಾರಿಯ ಕೊರಳಿಗೆ ಹಿಂದಿನಿಂದ ಬಿಗಿಯಾಗಿ ಸುತ್ತಿಕೊಳ್ಳಲಾರಂಭಿಸಿತ್ತು.

    ಕೂಡಲೇ ಅರಣ್ಯಾಧಿಕಾರಿ “ಹಾವಿನ ಬಾಲವನ್ನು ಹಿಡಿ” ಎಂದು ಕಿರುಚುತ್ತಾ ಜನರಿಂದ ದೂರ ಓಡಿದರು. ಇದನ್ನು ನೋಡುತ್ತಲೇ ಸುತ್ತಲಿದ್ದ ಜನರೆಲ್ಲ ಅಲ್ಲಿಂದ ದೂರ ಓಡಿಹೋದರು. ಕೂಡಲೇ ಎಚ್ಚೆತ್ತ ಅವರ ಸಹಾಯಕ ಅಧಿಕಾರಿ ತಮ್ಮ ಪ್ರಾಣವನ್ನೂ ಲೆಕ್ಕಿಸದೇ ಹಾವನ್ನು ಅವರ ಕುತ್ತಿಗೆಯಿಂದ ಬಿಡಿಸಿದ್ದಾರೆ.

    ಈ ಘಟನೆಯನ್ನು ನೋಡುತ್ತಿದ್ದ ಜನರ ಪ್ರಾಣವೇ ಬಾಯಿಗೆ ಬಂದಂತಾಗಿತ್ತು. ಕೆಲವರು ಅರಣ್ಯಾಧಿಕಾರಿಯ ಶೌರ್ಯದ ಕುರಿತು ಗುಣಗಾನ ಮಾಡಿದ್ರೆ, ಇನ್ನು ಕೆಲವರು ಅದನ್ನು ಟೀಕಿಸಿದರು. ಕೆಲ ಸಮಯದ ನಂತರ ಹಾವನ್ನು ಸುರಕ್ಷಿತವಾಗಿ ಕಾಡಿನೊಳಕ್ಕೆ ಬಿಡಲಾಯಿತು.