Tag: ರಾಂಧವ

  • ಕಣ್ಣೆವೆ ಮಿಟುಕಿಸದಂತೆ ನೋಡಿಸಿಕೊಳ್ಳೋ ಚೆಂದದ ಚಿತ್ರ ರಾಂಧವ!

    ಕಣ್ಣೆವೆ ಮಿಟುಕಿಸದಂತೆ ನೋಡಿಸಿಕೊಳ್ಳೋ ಚೆಂದದ ಚಿತ್ರ ರಾಂಧವ!

    ಬೆಂಗಳೂರು: ಬಿಗ್ ಬಾಸ್ ಶೋ ಆದ ನಂತರ ಭುವನ್ ಪೊನ್ನಣ್ಣ ನಾಯಕನಾಗಿ ನಟಿಸಿರೋ ಮೊದಲ ಚಿತ್ರ ರಾಂಧವ. ಸುನೀಲ್ ಆಚಾರ್ಯ ನಿರ್ದೇಶನದ ಈ ಚಿತ್ರ ಅಖಂಡ ಎರಡು ವರ್ಷಗಳ ಕಾಲ ಚಿತ್ರೀಕರಣಗೊಂಡಿತ್ತು. ಆ ಹಂತದ ತುಂಬೆಲ್ಲ ತುಂಬು ಭರವಸೆಯನ್ನು ಪ್ರೇಕ್ಷಕರಲ್ಲಿ ತುಂಬುತ್ತಾ ಬಂದಿದ್ದ ಈ ಚಿತ್ರವೀಗ ತೆರೆ ಕಂಡಿದೆ. ಇದರ ವಿಶೇಷವಾದ, ಅಪರೂಪದ ಕಥೆ, ಯಾರೂ ಊಹಿಸಲಾಗದಂಥಾ ತಿರುವುಗಳು ಮತ್ತು ಭುವನ್ ಪೊನ್ನಣ್ಣರ ಮನಸೋರೆಗೊಳ್ಳುವ ಅಭಿನಯದೊಂದಿಗೆ ಪ್ರೇಕ್ಷಕರನ್ನು ಸಂಪೂರ್ಣ ಖುಷಿಯ ಮೂಡಿಗೆ ಜಾರಿಸುವಷ್ಟು ಅದ್ದೂರಿಯಾಗಿಯೇ ರಾಂಧವ ಮೂಡಿ ಬಂದಿದೆ.

    ನಿರ್ದೇಶಕ ಸುನೀಲ್ ಆಚಾರ್ಯ ಮತ್ತು ನಾಯಕ ಭುವನ್ ಪೊನ್ನಣ್ಣರ ಪಾಲಿಗೂ ಇದು ಮೊದಲ ಚಿತ್ರ. ಆದರೆ ಇದು ಇವರಿಬ್ಬರ ಮೊದ ಚಿತ್ರ ಅನ್ನೋ ಸಣ್ಣ ಸುಳಿವೂ ಕೂಡಾ ಇಡೀ ಚಿತ್ರದಲ್ಲಿ ಎಲ್ಲಿಯೂ ಕಂಡು ಬರುವುದಿಲ್ಲ. ಸುನೀಲ್ ಪಳಗಿದ ನಿರ್ದೇಶಕನಂತೆ ಕಾರ್ಯ ನಿರ್ವಹಿಸಿದ್ದರೆ, ಭುವನ್ ಅದೆಷ್ಟೋ ವರ್ಷಗಳಿಂದ ನಾಯಕನಾಗಿ ನಟಿಸುತ್ತಾ ಬಂದವರೇನೋ ಎಂಬ ಫೀಲ್ ಹುಟ್ಟಿಸುವಂತೆ ಎಲ್ಲ ಶೇಡುಗಳ ಪಾತ್ರಕ್ಕೂ ಜೀವ ತುಂಬಿದ್ದಾರೆ. ಹೀಗೆ ಹೊಸಬರ ಚಿತ್ರವೆಂದ ಮೇಲೆ ಅಲ್ಲಿ ಹೊಸತನ ಮತ್ತು ಹೊಸಾ ಪ್ರಯೋಗಗಳು ಒಂಚೂರಾದರೂ ಇದ್ದೇ ಇರುತ್ತದೆಂಬ ನಂಬಿಕೆ ಇರುತ್ತದೆ. ಆದರೆ ಇಡೀ ರಾಂಧವ ಚಿತ್ರವೇ ಹೊಸನದೊಂದಿಗೆ, ಹೊಸಾ ಪ್ರಯೋಗಗಳೊಂದಿಗೆ ಮೂಡಿ ಬಂದಿದೆ ಅನ್ನೋದು ನಿಜವಾದ ವಿಶೇಷ. ಅದುವೇ ಈ ಸಿನಿಮಾದ ನಿಜವಾದ ಶಕ್ತಿಯೂ ಹೌದು.

    ನಿರೀಕ್ಷೆಯಂತೆಯೇ ಇಲ್ಲಿ ಭುವನ್ ಮೂರು ಶೇಡುಗಳ ಪಾತ್ರಗಳಲ್ಲಿ ನಟಿಸಿದ್ದಾರೆ. ಆದರೆ ಸಿನಿಮಾ ಬಿಚ್ಚಿಕೊಳ್ಳೋದು ರಾಬರ್ಟ್ ಎಂಬ ಪಕ್ಷಿ ಶಾಸ್ತ್ರಜ್ಞನ ಪಾತ್ರದ ಮೂಲಕ. ಮಹಾ ಮೌನ ಧರಿಸಿಕೊಂಡಂತಿರೋ ಈ ಪಾತ್ರ ಪಕ್ಷಿಗಳ ಅಧ್ಯಯನ ನಡೆಸೋದೇ ತನ್ನ ಪರಮ ಗುರಿ, ಅದೇ ಬದುಕೆಂದುಕೊಂಡಿರುವಂಥಾದ್ದು. ಇಂಥಾ ರಾಬರ್ಟ್ ವಿಶೇಷವಾದ ಗೂಬೆಯೊಂದರ ಬಗ್ಗೆ ಅಧ್ಯಯನ ನಡೆಸುವ ಹುಚ್ಚಿಗೆ ಬೀಳುತ್ತಾನೆ. ಆ ಗೂಬೆಯನ್ನು ಬೆಂಬತ್ತಿಕೊಂಡು ಒಡೆಯನ ಸಮುದ್ರ ಎಂಬ ಪ್ರದೇಶದ ದಟ್ಟ ಕಾಡಿನ ಒಂಟಿ ಮನೆ ಸೇರಿಕೊಳ್ಳುತ್ತಾನೆ.

    ಹೀಗೆ ಗೂಬೆಯ ಬಗ್ಗೆ ಅಧ್ಯಯನ ಮಾಡಲು ತೆರಳುವ ರಾಬರ್ಟ್‍ಗೆ ವಿಚಿತ್ರವಾದೊಂದು ಕನಸು ಸದಾ ಕಾಡುತ್ತಿರುತ್ತದೆ. ಆತ ಒಡೆಯನಸಮುದ್ರ ಪ್ರದೇಶಕ್ಕೆ ಹೋದಾಗ ಅಲ್ಲಿ ಆ ಕನಸಿಗೆ ವಾಸ್ತವವೆಂಬಂಥಾ ಲಿಂಕುಗಳು ಬೆಸೆಯುತ್ತಾ ಹೋಗುತ್ತದೆ. ಅಲ್ಲಿಂದಲೇ ಕಥೆ ಕಣ್ಣೆವೆ ಮಿಟುಕಿಸಲೂ ಆಗದಂಥಾ ಕುತೂಹಲದೊಂದಿಗೆ ರೋಚಕವಾಗಿ ಬಿಚ್ಚಿಕೊಳ್ಳುತ್ತದೆ. ಆ ಬಳಿಕವೇ ಭುವನ್ ರಾಜ ರಾಂಧವನಾಗಿ, ರಾಣಾ ಆಗಿ, ಪ್ರೇಮಿಯಾಗಿ ಕಂಗೊಳಿಸುತ್ತಾರೆ. ಆ ಹಾದಿಯಲ್ಲಿ ಯಾರ ಎಣಿಕೆಗೂ ಸಿಗಯದಂಥಾ, ಏನನ್ನೂ ಅಂದಾಜಿಸಲಾಗದಂಥಾ ಟ್ವಿಸ್ಟುಗಳೊಂದಿಗೆ ಕಥೆ ಕದಲುತ್ತದೆ. ಹಾಗಾದರೆ ರಾಬರ್ಟ್‍ಗೆ ಬೀಳುತ್ತಿದ್ದ ಕನಸೇನು, ಒಡೆಯನ ಸಮುದ್ರದ ಕಾಡಿನಲ್ಲಿ ಆತನೆದುರು ನಿಂತ ವಾಸ್ತವಗಳು ನಿಜವಾದವುಗಳಾ ಅನ್ನೋದರ ಸುತ್ತಾ ಅಪರೂಪದ ಕಥೆ ಚಲಿಸುತ್ತದೆ.

    ಇದರ ಕಥೆ ಅದೆಷ್ಟು ಕ್ಲಿಷ್ಟದಾಯಕವಾದದ್ದೆಂದರೆ ಇಲ್ಲಿ ಒಂದೆಳೆ ಮಿಸ್ ಆದರೂ ಇಡೀ ಚಿತ್ರವೇ ಸೂತ್ರ ತಪ್ಪಿದಂತಾಗುತ್ತದೆ. ಆದರೆ ಅದೆಲ್ಲವನ್ನೂ ಸುನೀಲ್ ಆಚಾರ್ಯ ಎಚ್ಚರಿಕೆಯಿಂದ ನಿಭಾಯಿಸಿದ್ದಾರೆ. ತಾನೊಬ್ಬ ಭರವಸೆಯ ನಿರ್ದೇಶಕನಾಗಿ ನೆಲೆ ನಿಲ್ಲಬಲ್ಲ ಪ್ರತಿಭೆ ಅನ್ನೋದನ್ನೂ ಅವರು ಸ್ಪಷ್ಟಪಡಿಸಿದ್ದಾರೆ. ಇನ್ನು ಭುವನ್ ಅವರಂತೂ ಪ್ರತೀ ಫ್ರೇಮಿನಲ್ಲಿಯೂ ಅಚ್ಚರಿದಾಯಕವಾಗಿ ನಟಿಸಿದ್ದಾರೆ. ಎಲ್ಲರ ಮೆಚ್ಚುಗೆಯನ್ನೂ ಗಳಿಸಿಕೊಂಡಿದ್ದಾರೆ. ಇದು ಕನ್ನಡದ ಪಾಲಿಗೆ ಅತ್ಯಂತ ಅಪರೂಪದ ಚಿತ್ರ. ಸಿದ್ಧಸೂತ್ರಗಳನ್ನು ಮೀರುತ್ತಲೇ ಕಮರ್ಶಿಯಲ್ ಜಾಡನ್ನು ಕಾಪಾಡಿಕೊಂಡಿರೋ ಈ ಚಿತ್ರವನ್ನು ಮಿಸ್ ಮಾಡದೇ ನೋಡಿ.

    ರೇಟಿಂಗ್: 3.5/5

  • ಹಾಡಾಗಿ ಪ್ರೇಕ್ಷಕರ ಮನಸನ್ನಾವರಿಸಿದ ರಾಂಧವ!

    ಹಾಡಾಗಿ ಪ್ರೇಕ್ಷಕರ ಮನಸನ್ನಾವರಿಸಿದ ರಾಂಧವ!

    ಬೆಂಗಳೂರು: ಪೌರಾಣಿಕ ಮತ್ತು ಆಧುನಿಕ ಕಥೆಗಳ ಮಹಾಸಂಗಮದಂತೆ ಕಾಣಿಸುತ್ತಿರೋ ರಾಂಧವ ಆರಂಭದಲ್ಲಿ ಎರಡು ಟ್ರೈಲರ್‍ಗಳ ಮೂಲಕ ಗಮನ ಸೆಳೆದಿತ್ತು. ಅದರ ಜೊತೆಗೆ ಈಗ ಹಾಡುಗಳು ಕೂಡ ಎಲ್ಲರನ್ನು ಸೆಳೆಯುತ್ತಿವೆ. ಈ ಸಿನಿಮಾದ ಹಾಡುಗಳೆಲ್ಲ ವಾರದ ಹಿಂದಷ್ಟೇ ಬಿಡುಗಡೆಯಾಗಿವೆ. ಇದೀಗ ಪ್ರೇಕ್ಷಕರೆಲ್ಲ ಈ ಹಾಡುಗಳನ್ನು ಮೆಚ್ಚಿ ಕೊಂಡಾಡುತ್ತಿದ್ದಾರೆ. ಚಿತ್ರರಂಗದ ಕಡೆಯಿಂದಲೂ ಅಂಥಾದ್ದೇ ಅಭಿಪ್ರಾಯಗಳು ತೇಲಿ ಬರುತ್ತಿವೆ.

    ಹಾಗೆ ಎಲ್ಲ ಹಾಡುಗಳೂ ಗೆದ್ದಿರೋದರಿಂದ ಚಿತ್ರತಂಡ ಕೂಡ ಹೊಸ ಭರವಸೆ ತುಂಬಿಕೊಂಡಿದೆ. ಸುನೀಲ್ ಆಚಾರ್ಯ ನಿರ್ದೇಶನದ ರಾಂಧವ ಹಾಡುಗಳಿಗೆ ಸಂಗೀತ ಸಂಯೋಜನೆ ಮಾಡಿದವರು ಶಶಾಂಕ್ ಶೇಷಗಿರಿ. ಇವರು ಈಗಾಗಲೇ ಗಾಯಕರಾಗಿ ಬಹು ಬೇಡಿಕೆ ಹೊಂದುತ್ತಲೇ ಈ ಸಿನಿಮಾ ಮೂಲಕ ಸಂಗೀತ ನಿರ್ದೇಶಕರಾಗಿಯೂ ಹೊರಹೊಮ್ಮಿದ್ದಾರೆ.

    ಶಶಾಂಕ್ ಈಗಾಗಲೇ ಕನ್ನಡದಲ್ಲಿ ನಾನೂರ ಎಂಬತ್ತಕ್ಕೂ ಹೆಚ್ಚು ಹಾಡುಗಳನ್ನು ಹಾಡುವ ಮೂಲಕ ಮುಖ್ಯ ಗಾಯಕರಾಗಿ ಗುರುತಿಸಿಕೊಂಡಿದ್ದಾರೆ. ಚಿಕ್ಕ ವಯಸ್ಸಿನಿಂದಲೂ ಸಂಗೀತದ ಬಗ್ಗೆ ಅಪಾರವಾದ ಆಸಕ್ತಿ ಹೊಂದಿ, ಅದರ ಬಹುತೇಕ ಪ್ರಾಕಾರಗಳ ಸಂಗೀತವನ್ನೂ ಅಭ್ಯಸಿಸಿಕೊಂಡಿರುವವರು ಶಶಾಂಕ್ ಶೇಷಗಿರಿ. ಇದೀಗ ಅವರು ರಾಂಧವ ಮೂಲಕ ಸಂಗೀತ ನಿರ್ದೇಶಕರಾಗಿ ಹೊಸ ಯಾನ ಆರಂಭಿಸಿದ್ದಾರೆ. ಇದರಲ್ಲಿ ಆರಂಭಿಕವಾಗಿಯೇ ಗೆದ್ದಿದ್ದಾರೆ. ಯಾಕೆಂದರೆ ಈ ಹಾಡುಗಳ ಬಗ್ಗೆ ಕೇಳುಗರ ಕಡೆಯಿಂದ ಒಳ್ಳೆ ಅಭಿಪ್ರಾಯಗಳೇ ಕೇಳಿ ಬರುತ್ತಿವೆ.

  • ಸುನೀಲ್ ಆಚಾರ್ಯರ ಮೊದಲ ಕನಸಿನಂಥಾ ರಾಂಧವ!

    ಸುನೀಲ್ ಆಚಾರ್ಯರ ಮೊದಲ ಕನಸಿನಂಥಾ ರಾಂಧವ!

    ಬೆಂಗಳೂರು: ಈ ಕಲೆ, ಅದರ ಮೇಲಿನ ವ್ಯಾಮೋಹದ ಸೆಳೆತ ಸಮ್ಮೋಹಕವಾದದ್ದು. ಅದು ಎಲ್ಲೋ ಇದ್ದವರನ್ನೂ ಕೂಡಾ ತನ್ನ ತೆಕ್ಕೆಗೆ ಸೆಳೆದುಕೊಳ್ಳುವ ಮಾಯೆಯಂಥಾದ್ದು. ಅದಕ್ಕೆ ಚಿತ್ರರಂಗದಲ್ಲಿ ದಂಡಿ ದಂಡಿ ಉದಾಹರಣೆಗಳು ಸಿಗುತ್ತವೆ. ಬದುಕಿನ ಅನಿವಾರ್ಯತೆಗೆ ಸಿಕ್ಕು ಎಲ್ಲೋ ಕಳೆದು ಹೋದವರನ್ನು ಕೂಡಾ ಸಿನಿಮಾ ಮಾಯೆ ತನ್ನ ಕೇಂದ್ರಕ್ಕೆ ಹೇಗಾದರೂ ಸೆಳೆದುಕೊಂಡು ಬಿಡುತ್ತದೆ. ಇದೀಗ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಾ ಆಗಸ್ಟ್ 23ರಂದು ಬಿಡುಗಡೆಗೆ ರೆಡಿಯಾಗಿರುವ ರಾಂಧವ ಚಿತ್ರದ ನಿರ್ದೇಶಕ ಸುನೀಲ್ ಆಚಾರ್ಯ ಕೂಡಾ ಅದೇ ಸಾಲಿನಲ್ಲಿ ಸಾಗಿ ಬಂದವರು.

    ತಮ್ಮ ತಂದೆಯ ಬಟ್ಟೆ ಅಂಗಡಿ ಉದ್ಯಮವನ್ನು ನೋಡಿಕೊಳ್ಳುತ್ತಲೇ ಅದರಲ್ಲಿ ಕಳೆದು ಹೋಗುವಂತಿದ್ದ ಸುನೀಲ್ ಆಚಾರ್ಯರನ್ನು ಕೈ ಹಿಡಿದು ಕರೆತಂದಿರೋದು ಸಿನಿಮಾ ಎಂಬ ಮಾಯೆಯೇ. ಆಷ್ಟಕ್ಕೂ ಅವರನ್ನು ಆರಂಭಿಕವಾಗಿ ಸೆಳೆದುಕೊಂಡಿದ್ದು ಬರವಣಿಗೆಯ ಹುಚ್ಚು. ಅದರ ಸೆಳೆತಕ್ಕೆ ಬಿದ್ದ ಅವರು ಒಂದು ಕಾದಂಬರಿ ಬರೆಯಲು ಆರಂಭಿಸಿದ್ದರು. ಹಾಗೆ ಒಂದಿಡೀ ಕಾದಂಬರಿ ಬರೆದು ಮುಗಿಸಿದ್ದ ಸುನೀಲ್ ಅದನ್ನು ಗೆಳೆಯರಿಗೆ ತೋರಿಸಿದಾಗ ಇದನ್ನು ಸಿನಿಮಾ ಮಾಡಬೇಕೆಂಬ ಒತ್ತಾಯ ಕೇಳಿ ಬಂದಿತ್ತು. ಒಂದಷ್ಟು ಕಾಲ ಆಲೋಚಿಸಿದ ನಂತರ ಸುನೀಲ್ ಅದಕ್ಕಾಗಿ ತಯಾರಿ ಆರಂಭಿಸಿದ್ದರು.

    ಸಿನಿಮಾ ನೋಡೋ ಆಸಕ್ತಿಯ ಹೊರತಾಗಿ ಆ ಕ್ಷಣದಲ್ಲಿ ಸುನೀಲ್‍ಗೆ ಯಾವ ಅನುಭವವೂ ಇರಲಿಲ್ಲ. ಆದರೆ, ಒಂದೊಳ್ಳೆ ಸಿನಿಮಾ ಮಾಡಲು ಬೇಕಾದ ರೂಪುರೇಷೆಗಳು ರೆಡಿಯಿದ್ದವು. ತಿಂಗಳುಗಟ್ಟಲೆ ಸ್ಕ್ರಿಪ್ಟ್ ವರ್ಕ್ ಮಾಡಿದ ಸುನೀಲ್ ಅವರಿಗೆ ಮಡದಿ, ತಂಗಿಯೂ ಬೆಂಬಲಕ್ಕೆ ನಿಂತಿದ್ದರು. ಗೆಳೆಯರೂ ಕೂಡಾ ಒಂದಷ್ಟು ಸಲಹೆಗಳೊಂದಿಗೆ ಒಪ್ಪ ಓರಣ ಮಾಡಲು ಸಹಾಯ ಮಾಡಿದ್ದರು. ಇಂಥಾ ಶ್ರದ್ಧೆಯಿಂದಲೇ ರಾಂಧವ ಸುನೀಲ್ ಅವರ ಮೊದಲ ಚಿತ್ರವೆಂದರೆ ನಂಬಲಾಗದಷ್ಟು ಅಚ್ಚುಕಟ್ಟಾಗಿ ಮೂಡಿ ಬಂದಿದೆಯಂತೆ.

  • ರಾಂಧವನನ್ನು ಮೆರೆಸಿದ ಚೆಂದದ ಟ್ರೈಲರ್!

    ರಾಂಧವನನ್ನು ಮೆರೆಸಿದ ಚೆಂದದ ಟ್ರೈಲರ್!

    ಬೆಂಗಳೂರು: ಸುನೀಲ್ ಆಚಾರ್ಯ ನಿರ್ದೇಶನದ ಚೊಚ್ಚಲ ಚಿತ್ರ ರಾಂಧವ. ಈಗಾಗಲೇ ಈ ಸಿನಿಮಾದ ಎರಡು ಟ್ರೈಲರ್‍ಗಳು ಹೊರ ಬಂದಿವೆ. ಅದರಲ್ಲಿನ ಮೇಕಿಂಗ್, ದೃಶ್ಯಗಳಲ್ಲಿನ ಅಚ್ಚುಕಟ್ಟುತನ, ಹೊಸಾ ಥರದ ಕಥೆಯ ಸುಳಿವಿನ ಮೂಲಕವೇ ಈ ಟ್ರೈಲರ್‍ಗಳು ಪ್ರೇಕ್ಷಕರ ವಲಯದಲ್ಲಿ ಮೆರೆಸಿವೆ. ಇದು ನಿರ್ದೇಶಕ ಸುನೀಲ್ ಮತ್ತು ನಾಯಕ ಭುವನ್ ಸೇರಿದಂತೆ ಚಿತ್ರತಂಡದ ಬಹುತೇಕರ ಪಾಲಿಗೆ ಮೊದಲ ಚಿತ್ರ. ಆದರೆ ರಾಂಧವ ಪಳಗಿದ ತಂಡದಿಂದ ರೂಪುಗೊಂಡಂತೆ ಮೂಡಿ ಬಂದಿರೋದರ ಹಿಂದೆ ಅಗಾಧ ಪರಿಶ್ರಮವಿದೆ.

    ಅಂಥಾ ವೃತ್ತಿಪರತೆ ಮತ್ತು ಕ್ರಿಯಾಶೀಲ ಕಾರ್ಯವೈಖರಿ ರಾಂಧವ ಚಿತ್ರದ ಎರಡು ಟ್ರೈಲರ್ ಮೂಲಕವೇ ಜಾಹೀರಾಗಿದೆ. ಅಖಂಡ ಎರಡು ವರ್ಷಗಳ ಶ್ರಮ ಮತ್ತು ಆ ಹಾದಿಯಲ್ಲಿ ಎದುರಾದ ಸವಾಲುಗಳೇ ಈ ಸಿನಿಮಾ ಮತ್ತಷ್ಟು ಅಂದವಾಗಿ ಮೂಡಿ ಬರಲು ಸಾಧ್ಯವಾಗಿಸಿದೆ ಅನ್ನೋದು ಚಿತ್ರತಂಡದ ಅನಿಸಿಕೆ. ಯಾವ ಗಿಮಿಕ್ಕುಗಳಿಗೂ ಆಸ್ಪದವಿಲ್ಲದೇ ಕೇವಲ ಗುಣಮಟ್ಟದ ಮೂಲಕ ಮಾತ್ರವೇ ಸದ್ದು ಮಾಡೋ ಚಿತ್ರಗಳು ಸೋತ ಇತಿಹಾಸವಿಲ್ಲ. ಈ ನಿಟ್ಟಿನಲ್ಲಿ ಹೇಳೋದಾದರೆ, ರಾಂಧವನ ಮುಂದೆ ಪುಷ್ಕಳವಾದೊಂದು ಗೆಲುವು ನಗುತ್ತಿದೆ.

    ರಾಂಧವ ಶುರುವಾಗಿ ಎರಡು ವರ್ಷಗಳ ಕಾಲ ಚಿತ್ರೀಕರಣ ನಡೆಸಿಕೊಂಡಿದೆ. ಆರಂಭ ಕಾಲದಲ್ಲಿ ಈ ಚಿತ್ರ ಯಾಕಿಷ್ಟು ತಡವಾಗುತ್ತಿದೆ ಎಂಬ ಪ್ರಶ್ನೆ ಹಲವರನ್ನು ಕಾಡಿತ್ತು. ಆದರೆ ಇದರ ಎರಡು ಟ್ರೈಲರ್ ಗಳು ಬಿಡುಗಡೆಯಾದ ನಂತರ ತಾನೇ ತಾನಾಗಿ ಜನ ತಮ್ಮ ಪ್ರಶ್ನೆಗಳಿಗೆ ಉತ್ತರ ಕಂಡುಕೊಂಡಿದ್ದಾರೆ. ಯಾಕೆಂದರೆ ಆ ಎರಡು ವರ್ಷಗಳ ಕಾಲ ಚಿತ್ರತಂಡ ಅದೆಂಥಾ ಶ್ರಮ ಹಾಕಿದೆ ಅನ್ನೋದು ಈ ಟ್ರೈಲರ್ ಗಳ ಮೂಲಕವೇ ಅನಾವರಣಗೊಂಡಿತ್ತು. ಈ ಮೂಲಕ ರಾಂಧವ ಕನ್ನಡ ಚಿತ್ರರಂಗದಲ್ಲಿ ಹೊಸ ದಾಖಲೆ ಸೃಷ್ಟಿಸೋ ನಿರೀಕ್ಷೆಗಳೂ ಎಲ್ಲೆಡೆ ತುಂಬಿಕೊಂಡಿದೆ.

  • ಅದ್ಭುತ ಕಥೆಯ ಸುಳಿವು ಬಿಚ್ಚಿಟ್ಟ ರಾಂಧವ ಟ್ರೇಲರ್!

    ಅದ್ಭುತ ಕಥೆಯ ಸುಳಿವು ಬಿಚ್ಚಿಟ್ಟ ರಾಂಧವ ಟ್ರೇಲರ್!

    ಬೆಂಗಳೂರು: ಮೊದಲ ಪ್ರಯತ್ನವೊಂದರಲ್ಲಿ ಯಾವುದೇ ಸಿನಿಮಾವಾದರೂ ಕಾಲೂರಿ ನಿಲ್ಲುವುದೇ ಕಷ್ಟ. ಅಂಥಾದ್ದರಲ್ಲಿ ಯಾವ ಸ್ಟಾರ್ ಸಿನಿಮಾಗಳಿಗೂ ಕಡಿಮೆಯಿಲ್ಲದಂತೆ ಅಬ್ಬರಿಸೋದೆಂದರೆ ಅದೊಂದು ಪವಾಡವೇ. ಅಂಥಾದ್ದೊಂದು ಪವಾಡವನ್ನು ವಾಸ್ತವದಲ್ಲಿಯೇ ಸೃಷ್ಟಿಸೋದರಲ್ಲಿ ರಾಂಧವ ಚಿತ್ರತಂಡ ಈಗಾಗಲೇ ಗೆದ್ದಿದೆ. ಇದೇ ಇಪ್ಪತ್ಮೂರನೇ ತಾರೀಕಿನಂದು ತೆರೆಗಾಣಲಿರೋ ಈ ಚಿತ್ರದ ಟ್ರೇಲರ್ ಇದೀಗ ಬಿಡುಗಡೆಗೊಂಡಿದೆ. ಬಿಡುಗಡೆಯ ಕಡೆಯ ಕ್ಷಣಗಳಲ್ಲಿ ಅದ್ಭುತ ಕಥಾಹಂದರದ ಸುಳಿವು ಬಿಚ್ಚಿಡುತ್ತಲೇ ನಿಗೂಢ ಅಂಶಗಳನ್ನು ಬಚ್ಚಿಟ್ಟುಕೊಂಡಿರೋ ಈ ಟ್ರೇಲರ್ ನೋಡಿದ ಪ್ರತಿಯೊಬ್ಬರೂ ಥ್ರಿಲ್ ಆಗಿದ್ದಾರೆ.

    ಸುನಿಲ್ ಆಚಾರ್ಯ ನಿರ್ದೇಶನದ ಚೊಚ್ಚಲ ಚಿತ್ರ ರಾಂಧವ. ಬಿಗ್‍ಬಾಸ್ ಖ್ಯಾತಿಯ ಭುವನ್ ಪೊನ್ನಣ್ಣರಿಗೂ ನಾಯಕನಾಗಿ ಇದು ಮೊದಲ ಹಾಗೂ ಮಹತ್ತರ ಸಿನಿಮಾ. ಎರಡು ವರ್ಷಗಳಿಗೂ ಹೆಚ್ಚು ಕಾಲದ ನಿರಂತರ ಶ್ರಮ, ಶ್ರದ್ಧೆಯ ಫಲವಾಗಿ ಈ ಚಿತ್ರವೀಗ ಗೆಲುವಿನ ಸ್ಪಷ್ಟ ಸೂಚನೆಯೊಂದಿಗೆ ಥೇಟರಿನ ಹಾದಿಯಲ್ಲಿದೆ. ಈವರೆಗೂ ರಾಂಧವನ ಟೀಸರ್, ಟ್ರೇಲರ್‍ಗಳು ಬಂದಿವೆ. ಆದರೆ ಅದರಲ್ಲಿ ಕಥೆಯ ಬಗ್ಗೆ ಯಾವ ಸುಳಿವನ್ನೂ ಕೂಡಾ ಬಿಟ್ಟುಕೊಟ್ಟಿರಲಿಲ್ಲ. ಆದರೆ ಈಗ ಬಿಡುಗಡೆಯಾಗಿರೋ ಟ್ರೇಲರ್‍ನಲ್ಲಿ ಕಥೆಯ ಬಗ್ಗೆ ಒಂದು ಅಂದಾಜು ಮೂಡಿಕೊಳ್ಳುತ್ತದೆ. ಆದರೆ ಕಥೆ ಸಾಗೋ ಪಥ ಮಾತ್ರ ನಿಗೂಢ. ಇದುವೇ ಈ ಟ್ರೇಲರ್‍ನ ಶಕ್ತಿ ಎನ್ನಲಡ್ಡಿಯಿಲ್ಲ.

    ಈ ಟ್ರೇಲರ್ ನಲ್ಲಿಯೇ ಭುವನ್ ಪೊನ್ನಣ್ಣರ ಅಭಿನಯದ ಝಲಕ್‍ಗಳೂ ಅನಾವರಣಗೊಂಡಿವೆ. ಪಕ್ಷಿತಜ್ಞ ರಾಬರ್ಟ್ ಗೂಬೆಯೊಂದರ ಬೆಂಬಿದ್ದು ಒಡೆಯನ ಸಮುದ್ರ ಸಂಸ್ಥಾನಕ್ಕೆ ಹೋದಾಗ ಅಲ್ಲೆದುರಾಗೋ ವಿಚಿತ್ರ ಜಗತ್ತು, ಆತನನ್ನು ಕಾಡೋ ಜನ್ಮಾಂತರಗಳ ಪ್ರಶ್ನೆಗಳೊಂದಿಗೆ ಒಂದಷ್ಟು ಪಾತ್ರಗಳನ್ನೂ ಕೂಡಾ ಈ ಟ್ರೇಲರ್ ಕಾಣಿಸಿದೆ. ಈ ಮೂಲಕ ಮತ್ತಷ್ಟು ಪ್ರೇಕ್ಷರನ್ನೂ ರಾಂಧವ ತಲುಪಿಕೊಂಡಿದ್ದಾನೆ. ಈ ಟ್ರೇಲರ್‍ನೊಂದಿಗೆ ಈ ಚಿತ್ರ ಭರ್ಜರಿಯಾಗಿಯೇ ಪ್ರೇಕ್ಷಕರತ್ತ ದಾಪುಗಾಲಿಟ್ಟಿದೆ. ಇದನ್ನು ಕಂಡ ಎಲ್ಲರೊಳಗೂ ಬೇಗನೆ ಈ ಸಿನಿಮಾ ನೋಡಬೇಕೆಂಬ ಬಯಕೆ ಹುಟ್ಟುವಂತಿದೆ. ಅದು ರಾಂಧವನ ಗೆಲುವಿನ ಲಕ್ಷಣವಾಗಿಯೂ ಕಾಣಿಸುತ್ತಿದೆ.

  • ಉತ್ತರಕರ್ನಾಟಕದ ಸಂತ್ರಸ್ತರ ನೆರವಿಗೆ ನಿಂತ ರಾಂಧವ ತಂಡ!

    ಉತ್ತರಕರ್ನಾಟಕದ ಸಂತ್ರಸ್ತರ ನೆರವಿಗೆ ನಿಂತ ರಾಂಧವ ತಂಡ!

    ಬೆಂಗಳೂರು: ರಾಜ್ಯಾದ್ಯಂತ ಮಳೆ ಕೊಂಚ ಕಡಿಮೆಯಾಗಿದ್ದರೂ ಪ್ರವಾಹಪೀಡಿತ ಪ್ರದೇಶಗಳ ಸ್ಥಿತಿಗತಿ ಇನ್ನೂ ಸುಧಾರಿಸಿಕೊಂಡಿಲ್ಲ. ಅಲ್ಲಿಗೆ ಎಲ್ಲ ದಿಕ್ಕುಗಳಿಂದ ನೆರವಿನ ಹಸ್ತ ಚಾಚಿಕೊಂಡಿದ್ದರೂ ಕೂಡಾ ಅಲ್ಲಿನ ಅನೇಕ ಪ್ರದೇಶಗಳತ್ತ ಈ ಕ್ಷಣಕ್ಕೂ ದೃಷ್ಟಿ ಬಿದ್ದಿರೋದು ಕಡಿಮೆ. ಇಂಥಾ ಪ್ರದೇಶಗಳಲ್ಲಿನ ಜನರನ್ನು ತಲುಪುವ ಉದ್ದೇಶದೊಂದಿಗೇ ಸರಿಯಾದೊಂದು ಪ್ಲ್ಯಾನು ಮಾಡಿಕೊಂಡು ರಾಂಧವ ಚಿತ್ರತಂಡ ಸಹಾಯಹಸ್ತ ಚಾಚಿದೆ. ಇಡೀ ರಾಂಧವ ಚಿತ್ರತಂಡ ಈ ಕಾರ್ಯದಲ್ಲಿ ಕೈ ಜೋಡಿಸಿದೆ. ಇದೀಗ ಭುವನ್ ನೇತೃತ್ವಲ್ಲಿ ಈ ತಂಡ ಇದೀಗ ಚಿಕ್ಕೋಡಿಯತ್ತ ಹೊರಟಿದೆ.

    ಎಲ್ಲರ ಗಮನವೂ ಪ್ರವಾಹದಿಂದ ತತ್ತರಿಸಿರೋ ಉತ್ತರ ಕರ್ನಾಟಕದ ಕೆಲ ಭಾಗಗಳತ್ತು ಕೀಲಿಸಿಕೊಂಡಿದೆ. ಆದರೆ ಅದೆಷ್ಟು ಜನ ಅದೇನೇ ಪ್ರಯತ್ನ ಪಟ್ಟರೂ ಪ್ರವಾಹದಿಂದ ಕಂಗಾಲಾಗಿರುವ ಎಲ್ಲ ಪ್ರದೇಶಗಳತ್ತ ತಲುಪಲಾಗುತ್ತಿಲ್ಲ. ಇದೀಗ ಕರ್ನಾಟಕದ ವಿವಿಧ ದಿಕ್ಕುಗಳಿಂದಲೂ ಉತ್ತರಕರ್ನಾಟಕದತ್ತ ನೆರವು ಹರಿದು ಬರುತ್ತಿದೆ. ಆದರೆ ಅದೆಲ್ಲವೂ ಒಂದೇ ಪ್ರದೇಶಗಳತ್ತ ಜಮೆಯಾದರೆ ಪ್ರಯೋಜನವಾಗೋದಿಲ್ಲ. ಹೀಗೆ ಸಹಾಯದ ಅವಶ್ಯಕತೆ ತೀವ್ರವಾಗಿರೋ ಒಂದಷ್ಟು ಪ್ರದೇಶಗಳನ್ನು ರಾಂಧವ ತಂಡ ಗುರುತು ಮಾಡಿಕೊಂಡಿದೆ. ಅಲ್ಲಿನ ಜನರಿಗೆ ಅಗತ್ಯವಿರೋ ಕೆಲ ವಸ್ತುಗಳೊಂದಿಗೆ ಗೋಕಾಕ್‍ನತ್ತ ಹೊರಟಿದೆ.

    ಹಾಗೆ ಗೋಕಾಕ್‍ಗೆ ತೆರಳಿ ಅಲ್ಲಿಂದ ಚಿಕ್ಕೋಡಿ, ನಿಪ್ಪಾಣಿ ಮುಂತಾದ ಪ್ರದೇಶಗಳತ್ತ ಹೋಗಿ ಅಲ್ಲಿನ ಸಂತ್ರಸ್ತರೊಂದಿಗೆ ಬೆರೆತು ಮಾಹಿತಿ ಕಲೆ ಹಾಕಲಿದೆ. ಆ ಜನರಿಗೆ ಯಾವ ಸಾಮಾಗ್ರಿಗಳ ಅಗತ್ಯವಿದೆ ಅನ್ನೋದನ್ನು ಮನಗಂಡು ಬೆಂಗಳೂರಿನಲ್ಲಿರೋ ತಮ್ಮ ತಂಡಕ್ಕೆ ಮಾಹಿತಿ ರವಾನಿಸಲಿದೆ. ಅಲ್ಲಿಂದ ಬೇಗನೆ ಅಂಥಾ ವಸ್ತುಗಳನ್ನು ತರಿಸಿಕೊಂಡು ಪ್ರವಾಹ ಪೀಡಿತರಿಗೆ ನೆರವಾಗೋ ಉದ್ದೇಶದೊಂದಿಗೆ ರಾಂಧವ ತಂಡ ಅಖಾಡಕ್ಕಿಳಿದಿದೆ.

    ಇದೇ ತಿಂಗಳ 23ರಂದು ರಾಂಧವ ಚಿತ್ರ ಬಿಡುಗಡೆಯಾಗಲಿದೆ. ಇಂಥಾ ಹೊತ್ತಿನಲ್ಲಿ ಇಡೀ ಚಿತ್ರತಂಡವೇ ಒತ್ತಡದಲ್ಲಿರುತ್ತದೆ. ಆದರೆ ಆ ಎಲ್ಲ ಒತ್ತಡಗಳನ್ನೂ ಬದಿಗಿರಿಸಿ ಪ್ರವಾಹದಿಂದ ಬದುಕು ಕಳೆದುಕೊಂಡವರ ನೆರವಿಗೆ ಧಾವಿಸಿರೋ ರಾಂಧವ ತಂಡದ ಕ್ರಮ ಮೆಚ್ಚಿಕೊಳ್ಳುವಂಥಾದ್ದು. ಅದೇನೇ ಕಷ್ಟವಿದ್ದರೂ ಸಿನಿಮಾಗಳನ್ನು ನೋಡಿ ಗೆಲ್ಲಿಸೋ ಜನರ ಸಂಕಷ್ಟಗಳಿಗೆ ಸ್ಪಂದಿಸಬೇಕಾದ್ದು ಕರ್ತವ್ಯ ಎಂಬುದನ್ನು ಈ ಮೂಲಕ ರಾಂಧವ ತಂಡ ಕಾರ್ಯರೂಪದಲ್ಲಿಯೇ ತೋರಿಸಿಕೊಟ್ಟು ಮೆಚ್ಚುಗೆಗೆ ಪಾತ್ರವಾಗಿದೆ.

  • ರಾಂಧವನಿಗಾಗಿ ಗೃಹಬಂಧನ ವಿಧಿಸಿಕೊಂಡಿದ್ದರಂತೆ ಭುವನ್!

    ರಾಂಧವನಿಗಾಗಿ ಗೃಹಬಂಧನ ವಿಧಿಸಿಕೊಂಡಿದ್ದರಂತೆ ಭುವನ್!

    ಬೆಂಗಳೂರು: ಬಿಗ್ ಬಾಸ್ ಖ್ಯಾತಿಯ ಭುವನ್ ಪೊನ್ನಣ್ಣ ನಾಯಕನಾಗಿ ನಟಿಸುತ್ತಿರುವ ಮೊದಲ ಚಿತ್ರ ರಾಂಧವ. ಯಾರೇ ಆದರೂ ಮೊದಲ ಹೆಜ್ಜೆಯಲ್ಲಿಯೇ ನಿರ್ವಹಿಸಲು ಹಿಂದೇಟು ಹಾಕುವಂಥಾ ಪಾತ್ರಗಳೊಂದಿಗೇ ಭುವನ್ ಪ್ರೇಕ್ಷಕರ ಮುಂದೆ ಬರಲು ರೆಡಿಯಾಗಿದ್ದಾರೆ. ಸುನಿಲ್ ಆಚಾರ್ಯ ನಿರ್ದೇಶನದ ಈ ಚಿತ್ರದಲ್ಲಿ ಭುವನ್ ಮೂರು ಶೇಡ್‍ಗಳ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಒಂದಕ್ಕಿಂತ ಒಂದು ಭಿನ್ನವಾಗಿರುವ ಈ ಪಾತ್ರಗಳಿಗೆ ಅವರು ರೆಡಿಯಾದ ರೀತಿಯೇ ಒಂದು ಮಜವಾದ ಕಥೆ.

    ಹಾಗಂತ ಭುವನ್ ಹೀಗೆ ಇಂಥಾ ಪಾತ್ರಗಳಿಗೆ ಅಣಿಗೊಂಡಿದ್ದರ ಹಿಂದೆ ಬರೀ ಚೇತೋಹಾರಿ ಅನುಭವಗಳು ಮಾತ್ರವೇ ಇಲ್ಲ. ಅಲ್ಲಿ ಸಂಕಟದ, ಮನೋವ್ಯಾಕುಲದ ಅನುಭವಗಳೂ ದಂಡಿಯಾಗಿವೆ. ಇಂಥಾ ಒಂದಷ್ಟು ಅನುಭವಗಳನ್ನು ಖುದ್ದು ಭುವನ್ ಹಂಚಿಕೊಂಡಿದ್ದಾರೆ. ರಾಂಧವದಲ್ಲಿ ಭುವನ್ ಪಾತ್ರಕ್ಕೆ ಒಟ್ಟು ಮೂರು ಶೇಡುಗಳಿವೆ. ಅದರಲ್ಲಿ ರಾಬರ್ಟ್, ರಾಜ ರಾಂಧವ ಮತ್ತು ರಾಣಾ ಎಂಬ ಶೇಡುಗಳಿಗೆ ಭುವನ್ ತಿಂಗಳ ಕಾಲ ರೆಡಿಯಾಗಿದ್ದಾರೆ.

    ಅದರಲ್ಲಿಯೂ ರಾಬರ್ಟ್ ಪಾತ್ರ ಭುವನ್ ನಿಜವಾದ ವ್ಯಕ್ತಿತ್ವಕ್ಕೆ ತದ್ವಿರುದ್ಧವಾದ ಪಾತ್ರ. ರಾಬರ್ಟ್ ಪಕ್ಷಿ ಶಾಸ್ತ್ರಜ್ಞ. ಆತ ಮಾತಾಡೋದೇ ಕಡಿಮೆ. ಎಲ್ಲ ಭಾವನೆಗಳನ್ನೂ ಕೂಡಾ ಎಕ್ಸ್ ಪ್ರೆಷನ್ ಮೂಲಕವೇ ತೋರಿಸಿ ಮೌನವಾಗಿರೋದು ಆ ಪಾತ್ರದ ವಿಶೇಷತೆ. ಅದನ್ನು ಸೀದಾ ಸೆಟ್ಟಿಗೆ ಹೋಗಿ ನಿರ್ವಹಿಸೋದು ಸಾಧ್ಯವಿಲ್ಲ. ಅದಕ್ಕೆ ಸಾಕಷ್ಟು ತಯಾರಿ ಬೇಕೆಂಬುದು ಭುವನ್‍ಗೆ ಮನವರಿಕೆಯಾಗಿತ್ತು. ಆದ್ದರಿಂದಲೇ ಮೌನವನ್ನು ಮನನ ಮಾಡಿಕೊಳ್ಳಲು ತಿಂಗಳುಗಳ ಕಾಲ ಏಕಾಂತದಲ್ಲಿರಲು ಅವರು ನಿರ್ಧರಿಸಿದ್ದರು.

    ಇದರನ್ವಯ ಮನೆಯೊಳಗೆ ಬಂಧಿಯಾದ ಭುವನ್ ಮೂರೂವರೆ ತಿಂಗಳ ಕಾಲ ಹೊರಗೇ ಬಂದಿರಲಿಲ್ಲ. ಹೆಚ್ಚಾಗಿ ಯಾರೊಂದಿಗೂ ಸಂಪರ್ಕದಲ್ಲಿರಲಿಲ್ಲ. ಅಡುಗೆ ಮಾಡಿ ಹಾಕುವವರೊಬ್ಬರು ಬಿಟ್ಟರೆ ಬೇರ್ಯಾರೂ ಅವರ ಸಂಪರ್ಕದಲ್ಲಿರಲಿಲ್ಲ. ಪ್ರತೀ ದಿನ ಗೆಳೆಯರೊಂದಿಗೆ ಕಲೆತು ಖುಷಿಗೊಳ್ಳುತ್ತಿದ್ದ ಭುವನ್‍ಗೆ ಮೂರೂವರೆ ತಿಂಗಳಾಗೋ ಹೊತ್ತಿಗೆಲ್ಲ ಹುಚ್ಚು ಹಿಡಿಯುವಂಥಾ ಪರಿಸ್ಥಿತಿ ಬಂದೊದಗಿತ್ತು. ಆದರೆ ಹಾಗೆ ಹೊರ ಬರೋ ಹೊತ್ತಿಗೆಲ್ಲ ಭುವನ್ ರಾಬರ್ಟ್ ಪಾತ್ರವಾಗಿ ಬದಲಾಗಿದ್ದರಂತೆ. ಇಂಥಾ ತಯಾರಿಯೊಂದಿಗೇ ರಾಬರ್ಟ್ ಪಾತ್ರ ಪರಿಣಾಮಕಾರಿಯಾಗಿ ಮೂಡಿ ಬಂದಿದೆಯಂತೆ.

  • ರಾಂಧವನಿಗೆ ಪರಭಾಷೆಗಳಲ್ಲಿಯೂ ಬೇಡಿಕೆ!

    ರಾಂಧವನಿಗೆ ಪರಭಾಷೆಗಳಲ್ಲಿಯೂ ಬೇಡಿಕೆ!

    ಪೌರಾಣಿಕ ಹಾಗೂ ಆಧುನಿಕ ಕಥೆಗಳ ಮಹಾಸಂಗಮದ ಸುಳಿವಿನೊಂದಿಗೇ ಭರ್ಜರಿ ಟಾಕ್ ಕ್ರಿಯೇಟ್ ಮಾಡಿರೋ ಚಿತ್ರ ರಾಂಧವ. ಬಿಗ್ ಬಾಸ್ ಭುವನ್ ಪೊನ್ನಣ್ಣ ನಾಯಕನಾಗಿ ನಟಿಸಿರೋ ಈ ಚಿತ್ರ ಇದೇ ಆಗಸ್ಟ್ ಹದಿನೈದರಂದು ಬಿಡುಗಡೆಯಾಗುತ್ತಿದೆ. ಕನ್ನಡದ ಪ್ರೇಕ್ಷಕರಂತೂ ರಾಂಧವನ ಜೊತೆಗೇ ಸ್ವಾತಂತ್ರ್ಯದ ಸಂಭ್ರಮಾಚರಣೆ ಮಾಡಲು ನಿರ್ಧರಿಸಿದ್ದಾರೆ. ಇದೇ ಹೊತ್ತಿನಲ್ಲಿ ಪರಭಾಷೆಗಳಿಂದ ಡಬ್ಬಿಂಗ್ ಮತ್ತು ರೀಮೇಕ್ ಹಕ್ಕುಗಳಿಗಾಗಿ ಭಾರೀ ಬೇಡಿಕೆಯೂ ಶುರುವಾಗಿದೆ.

    ಕನ್ನಡದಲ್ಲಿ ಮಾತ್ರವಲ್ಲ, ಪರಭಾಷಾ ಚಿತ್ರರಂಗಗಳಲ್ಲಿಯೂ ಪೌರಾಣಿಕ ಕಥಾ ಹಂದರದ ಹತ್ತಿರ ಹೋಗೋ ಸಾಹಸ ಮಾಡುವವರು ಕಡಿಮೆ. ಆದರೆ ಅಂಥಾ ಚಿತ್ರಗಳಿಗಾಗಿ ಪ್ರೇಕ್ಷಕರು ಮಾತ್ರ ಸದಾ ಹಂಬಲಿಸುತ್ತಿರುತ್ತಾರೆ. ಈ ಕಾರಣದಿಂದಲೇ ರಾಂಧವ ಕನ್ನಡದ ಗಡಿ ದಾಟಿ ಬೇರೆ ಭಾಷೆಗಳಲ್ಲಿಯೂ ಹವಾ ಸೃಷ್ಟಿಸಿದೆ. ಈಗಾಗಲೇ ಇದರಲ್ಲಿ ಭುವನ್ ಪೊನ್ನಣ್ಣ ನಿರ್ವಹಿಸಿರೋ ಪಾತ್ರದ ಸುಳಿವು, ದೃಷ್ಯ ಶ್ರೀಮಂತಿಕೆ ಕಂಡು ಪರಭಾಷಾ ಚಿತ್ರರಂಗದ ಮಂದಿ ಬೆರಗಾಗಿದ್ದಾರೆ. ಬೇರೆ ಬೇರೆ ಬಾಷೆಗಳಿಂದ ನಿರ್ಮಾಪಕ ಸನತ್ ಕುಮಾರ್ ಅವರಿಗೆ ಕರೆಗಳು ಬರುತ್ತಿವೆ. ಆದರೆ ಸದ್ಯಕ್ಕವರು ಯಾವುದಕ್ಕೂ ಪ್ರತಿಕ್ರಿಯಿಸುತ್ತಿಲ್ಲ.

    ರಾಂಧವ ಕನ್ನಡದ ಹೆಮ್ಮೆಯ ಚಿತ್ರವಾಗಿ ದಾಖಲಾಗುತ್ತದೆಂಬ ಲಕ್ಷಣ ಆರಂಭದಿಂದಲೂ ಕಾಣಿಸುತ್ತಿದೆ. ಇದೀಗ ಪರಭಾಷೆಗಳಿಂದ ಕೇಳಿ ಬರುತ್ತಿರುವ ಡಬ್ಬಿಂಗ್ ಮತ್ತು ರೀಮೇಕ್ ರೈಟ್ಸ್ ಗಾಗಿನ ಬೇಡಿಕೆ ಅದನ್ನು ನಿಜವಾಗಿಸುವ ಲಕ್ಷಣದಂತೆಯೂ ಕಾಣಿಸುತ್ತಿದೆ. ರಾಂಧವನನ್ನು ಹೊಸಬರೇ ಸೇರಿ ರೂಪಿಸಿದ್ದರೂ ಅದರ ಛಾಯೆ ಈವರೆಗಿನ ಕೆಲಸ ಕಾರ್ಯಗಳಲ್ಲಿ ಎಲ್ಲಿಯೂ ಕಾಣಿಸಿಲ್ಲ. ಅದೆಷ್ಟೋ ವರ್ಷಗಳಿಂದ ಚಿತ್ರರಂಗದಲ್ಲಿ ಪಳಗಿದವರಂತೆಯೇ ಸುನಿಲ್ ಆಚಾರ್ಯ ಈ ಸಿನಿಮಾವನ್ನು ಕಟ್ಟಿ ಕೊಟ್ಟಿದ್ದಾರೆ. ಅಂತೂ ರೀಮೇಕ್ ಮತ್ತು ಡಬ್ಬಿಂಗ್ ರೈಟ್ಸ್ ಗಳು ದೊಡ್ಡ ಮೊತ್ತಕ್ಕೆ ಮಾರಾಟವಾಗೋ ಸಾಧ್ಯತೆಗಳಿವೆ.

  • ಆಡಿಯೋ ಲಾಂಚ್ ಮೂಲಕ ಐತಿಹಾಸಿ ಹೆಜ್ಜೆಯಿಟ್ಟ ರಾಂಧವ!

    ಆಡಿಯೋ ಲಾಂಚ್ ಮೂಲಕ ಐತಿಹಾಸಿ ಹೆಜ್ಜೆಯಿಟ್ಟ ರಾಂಧವ!

    ಬೆಂಗಳೂರು: ಸುನೀಲ್ ಆಚಾರ್ಯ ನಿರ್ದೇಶನದ ರಾಂಧವ ಚಿತ್ರ ಇದೇ ಆಗಸ್ಟ್ ಹದಿನೈದರಂದು ಬಿಡುಗಡೆಯಾಗಲು ರೆಡಿಯಾಗಿದೆ. ಭುವನ್ ಪೊನ್ನಣ್ಣ ನಾನಾ ಗೆಟಪ್ಪುಗಳಲ್ಲಿ ಕಾಣಿಸಿಕೊಂಡಿರೋ ರೀತಿ, ಕಥೆಯ ಬಗ್ಗೆ ಚಿತ್ರತಂಡ ಜಾಹೀರು ಮಾಡಿರೋ ಒಂದಷ್ಟು ಸುಳಿವುಗಳ ಮೂಲಕವೇ ರಾಂಧವ ಬಹುನಿರೀಕ್ಷಿತ ಚಿತ್ರವಾಗಿ ದಾಖಲಾಗಿದೆ. ಇನ್ನೇನು ಬಿಡುಗಡೆಗೆ ಒಂದಷ್ಟು ದಿನಗಳು ಬಾಕಿಯಿರುವಾಗಲೇ ರಾಂಧವನ ಆಡಿಯೋ ಲಾಂಚ್ ಮಾಡಲಾಗಿದೆ. ಈ ಕಾರ್ಯಕ್ರಮದ ಮೂಲಕವೇ ಚಿತ್ರತಂಡ ಐತಿಹಾಸಿಕ ಹೆಜ್ಜೆಯೊಂದರ ಮೂಲಕ ಗಮನ ಸೆಳೆದಿದೆ.

    ಸಿನಿಮಾಗಳ ಯಾವುದೇ ಸಮಾರಂಭವಿದ್ದರೂ ಅಲ್ಲಿ ತಾರೆಯರದ್ದೇ ಕಾರುಬಾರು. ಆಡಿಯೋ ಬಿಡುಗಡೆಯಂಥಾದ್ದಕ್ಕೂ ಸ್ಟಾರ್‍ಗಳನ್ನು ಮಾತ್ರವೇ ಕರೆಸುವಂಥಾ ಪರಿಪಾಠವೂ ಬೆಳೆದು ಬಂದಿದೆ. ಆದರೆ ರಾಂಧವ ತಂಡ ಆಡಿಯೋ ಬಿಡುಗಡೆ ಮಾಡಿಸಿರೋದು ಈ ನಾಡಿನ ಅನ್ನದಾತರಾದ ರೈತರು ಮತ್ತು ದೇಶ ಕಾಯಲು ಬದುಕನ್ನೇ ಮುಡಿಪಾಗಿಟ್ಟಿರುವ ಯೋಧರಿಂದ. ಈ ಮೂಲಕ ರಾಂಧವ ಚಿತ್ರತಂಡ ಹೊಸ ಪರಂಪರೆಗೆ ನಾಂದಿ ಹಾಡಿದೆ.

    ಹೀಗೆ ಹೊಸ ರೀತಿಯಲ್ಲಿ, ರೈತರು ಮತ್ತು ಯೋಧರು ಬಿಡುಗಡೆಗೊಳಿಸಿರೋ ರಾಂಧವ ಚಿತ್ರದ ಹಾಡುಗಳಿಗೆ ಪ್ರೇಕ್ಷಕರ ಕಡೆಯಿಂದ ಉತ್ತಮ ಪ್ರತಿಕ್ರಿಯೆಗಳೇ ಬರುತ್ತಿವೆ. ಈವರೆಗೂ ಗಾಯಕರಾಗಿದ್ದ ಶಶಾಂಕ್ ಶೇಷಗಿರಿ ತಮ್ಮ ಗೆಳೆಯ ಸುನೀಲ್ ಆಚಾರ್ಯ ನಿರ್ದೇಶನ ಮಾಡಿರೋ ಈ ಚಿತ್ರದ ಮೂಲಕ ಸಂಗೀತ ನಿರ್ದೇಶಕರಾಗಿಯೂ ಬಡ್ತಿ ಹೊಂದಿದ್ದಾರೆ. ಈ ಮೊದಲ ಹೆಜ್ಜೆಯಲ್ಲಿಯೇ ತಾಜಾತನದಿಂದ ಕೂಡಿರುವ ಸಂಗೀತದ ಪಟ್ಟುಗಳೊಂದಿಗೆ ಹಾಡುಗಳನ್ನು ಕಟ್ಟಿ ಕೊಡುವ ಮೂಲಕ ಭರವಸೆಯನ್ನೂ ಮೂಡಿಸಿದ್ದಾರೆ. ನಿರ್ದೇಶಕ ಸುನೀಲ್ ಆಚಾರ್ಯರ ಕಥೆಗೆ, ಕಲ್ಪನೆಗೆ ಪೂರಕವಾಗಿ ಮೂಡಿ ಬಂದಿರೋ ಈ ಹಾಡುಗಳು ಸೂಪರ್ ಹಿಟ್ ಆಗುವತ್ತ ಮುನ್ನುಗ್ಗುತ್ತಿವೆ.

  • ಮಗುವಿಗೆ ಭುವನ್ ಹೆಸರಿಟ್ಟ ಅಭಿಮಾನಿ!

    ಮಗುವಿಗೆ ಭುವನ್ ಹೆಸರಿಟ್ಟ ಅಭಿಮಾನಿ!

    ಬೆಂಗಳೂರು: ಬಿಗ್ ಬಾಸ್ ಶೋ ಸ್ಪರ್ಧಿಯಾಗಿದ್ದಾಗಲೇ ತಮ್ಮ ಸ್ನೇಹಮಯ ವ್ಯಕ್ತಿತ್ವ, ಪರರ ಬಗೆಗಿನ ಕಾಳಜಿ ಮತ್ತು ಹೆಣ್ಣು ಮಕ್ಕಳನ್ನು ಗೌರವಿಸೋ ಮನಸ್ಥಿತಿಗಳ ಮೂಲಕ ಜನರ ಮನ ಗೆದ್ದಿದ್ದರು ಭುವನ್. ಇದೀಗ ಅವರು ರಾಂಧವ ಎಂಬ ಚಿತ್ರದ ಮೂಲಕ ನಾಯಕ ನಟನಾಗಿ ಪಾದಾರ್ಪಣೆ ಮಾಡಲು ರೆಡಿಯಾಗಿದ್ದಾರೆ. ಈ ಹಂತದಲ್ಲಿಯೇ ಜನ ಅವರನ್ನು ಆರಾಧಿಸುತ್ತಿರೋ ಪರಿ ನಿಜಕ್ಕೂ ಅಚ್ಚರಿದಾಯಕವಾಗಿದೆ. ಅದೆಷ್ಟೋ ಮಂದಿ ಭುವನ್ ಹೆಸರನ್ನೇ ತಮ್ಮ ಮಗುವಿಗೂ ಇಡುತ್ತಿದ್ದಾರೆ!

    ತುಮಕೂರಿನಲ್ಲಿಯೂ ಇತ್ತೀಚೆಗೆ ಒಂದು ಮಗುವಿನ ನಾಮಕರಣ ಸಮಾರಂಭ ನೆರವೇರಿದೆ. ಆ ಮಗುವಿಗೂ ಭುವನ್ ಎಂದೇ ಹೆಸರಿಡಲಾಗಿದೆ. ವಿಶೇಷವೆಂದರೆ, ಈ ಮಗುವಿನ ನಾಮಕರಣ ಸಮಾರಂಭಕ್ಕೆ ಖುದ್ದು ಭುವನ್ ಅವರೇ ತೆರಳಿದ್ದಾರೆ. ತಮ್ಮದೇ ಹೆಸರಿನ ಮಗುವನ್ನೆತ್ತಿಕೊಂಡು ಮುದ್ದಾಡಿ ಹರಸಿ ಬಂದಿದ್ದಾರೆ.

    ಇದು ನಿಜಕ್ಕೂ ಅಚ್ಚರಿ ಹುಟ್ಟಿಸುವಂಥಾ ವಿದ್ಯಮಾನ. ಹೀಗೆ ಜನ ತಮ್ಮ ಮಕ್ಕಳಿಗೇ ಭುವನ್ ಹೆಸರಿಡಲು ಪ್ರೇರೇಪಿಸಿರೋದು ಅವರ ವ್ಯಕ್ತಿತ್ವವೇ. ಸಾಮಾನ್ಯವಾಗಿ ಹೀರೋ ಆಗಿ ನೆಲೆ ಕಂಡುಕೊಂಡ ನಂತರವಷ್ಟೇ ಓರ್ವ ಕಲಾವಿದನ ಮೇಲೆ ಇಂಥಾ ಕ್ರೇಜ್ ಹುಟ್ಟಿಕೊಳ್ಳುತ್ತೆ. ಆದರೆ ಭುವನ್ ಅಭಿನಯದ ಬಹು ನಿರೀಕ್ಷಿತ ಚಿತ್ರ ಇನ್ನಷ್ಟೇ ಬಿಡುಗಡೆಯಾಗಬೇಕಿದೆ. ಆದರೆ ಅದಾಗಲೇ ಭುವನ್ ರಿಯಲ್ ಹೀರೋ ಆಗಿ ಬಿಟ್ಟಿದ್ದಾರೆ.

    ಸುನೀಲ್ ಆಚಾರ್ಯ ನಿರ್ದೇಶನದ ರಾಂಧವ ಚಿತ್ರ ಭುವನ್ ಅವರನ್ನು ಮುಖ್ಯ ನಾಯಕನನ್ನಾಗಿ ನೆಲೆಗಾಣಿಸೋ ಎಲ್ಲ ಲಕ್ಷಣಗಳೂ ಕಾಣಿಸುತ್ತಿವೆ. ಈ ಚಿತ್ರದ ವಿಶೇಷವಾದ ಹಾಡೊಂದು ಇಂದು ಕೇಳಲು ಸಿಗಲಿದೆ. `ಈ ಧರೆಯ ಸೊಬಗು ನಮ್ಮ ನಾಡು’ ಎಂಬ ಹಾಡು ಇಂದು ಸಂಜೆ ಆರು ಘಂಟೆಗೆ ಬಿಡುಗಡೆಯಾಗಲಿದೆ.