Tag: ರಹಸ್ಯ ಕಾರ್ಯಾಚರಣೆ

  • ಐಫೋನ್ ಬಳಸಿ ಈಗ ರಹಸ್ಯವಾಗಿ ಬೇರೆಯವರ ಮಾತುಗಳನ್ನು ಕೇಳಬಹುದು

    ಐಫೋನ್ ಬಳಸಿ ಈಗ ರಹಸ್ಯವಾಗಿ ಬೇರೆಯವರ ಮಾತುಗಳನ್ನು ಕೇಳಬಹುದು

    ಪಲ್ ಐಫೋನ್‌ನ ಲೈವ್ ಲಿಸನ್ ಫೀಚರ್ ಬಳಸಿಕೊಂಡು ಗೋಡೆ ಹಿಂಬದಿಯ ಅಥವಾ ಗುಟ್ಟಾಗಿ ನಡೆಸುತ್ತಿರುವ ಚರ್ಚೆಯನ್ನು ಆಲಿಸಲು ಬಳಸಬಹುದು ಎಂಬುದು ತಿಳಿದು ಬಂದಿದೆ. ಟಿಕ್‌ಟಾಕ್ ಬಳಕೆದಾರ ದಲಿಲಮೌಹಿಬ್ ಐಫೋನಿನ ಈ ವಿಶೇಷ ಅನುಭವವನ್ನು ವಿವರಿಸಿದ್ದಾನೆ.

    ಐ ಫೋನ್‌ನ ಏರ್‌ಪಾಡ್‌ಗಳಿಂದ ನೀವು ರಹಸ್ಯ ಕಾರ್ಯಾಚರಣೆಯನ್ನು ಸುಲಭವಾಗಿ ಮಾಡಬಹುದು. ಬೇರೆ ಕೋಣೆಯಲ್ಲಿ ಜನರು ಸಂಭಾಷಣೆಯನ್ನು ನಡೆಸುತ್ತಿರುವ ವೇಳೆ ನೀವು ನಿಮ್ಮ ಫೋನ್ ಮರೆತು ಬಂದರೆ ಮತ್ತೊಂದು ಕೋಣೆಯಲ್ಲಿ ನಿಮ್ಮ ಏರ್‌ಪಾಡ್‌ಗಳ ಮೂಲಕ ಮರೆತು ಬಂದಿರುವ ಕೋಣೆಯಲ್ಲಿ ಏನು ಸಂಭಾಷಣೆ ನಡೆಯುತ್ತಿದೆ ಎಂಬುದನ್ನು ತಿಳಿದುಕೊಳ್ಳಬಹುದು ಎಂದಿದ್ದಾನೆ.

    ಹೌದು! ಐ ಫೋನ್‌ನ ಲೈವ್ ಲಿಸನ್ ಫೀಚರ್ ಮತ್ತೊಂದು ಕೋಣೆಯಲ್ಲಿದ್ದರೂ ಆ ಕೋಣೆಯ ರಹಸ್ಯ ಮಾತುಕತೆಯನ್ನು ಆಲಿಸಬಹುದು. ಆಪಲ್ ಗದ್ದಲದ ವಾತಾವರಣದಲ್ಲಿ ಚರ್ಚೆಯನ್ನು ಕೇಳಲು ಅಥವಾ ಅತೀ ಸಣ್ಣ ಧ್ವನಿಯ ಮಾತನ್ನು ಕೇಳಿಸಿಕೊಳ್ಳಲು ಈ ಫೀಚರ್ ಅನ್ನು ವಿನ್ಯಾಸಗೊಳಿಸಲಾಗಿದೆ. ಇದನ್ನೂ ಓದಿ: ಜಾಹೀರಾತಿನಲ್ಲಿ ಸಹಾಯವಾಣಿ ನಂಬರ್ ತಪ್ಪಾಗಿದ್ದಕ್ಕೆ ಮಹಿಳೆಗೆ ಎಡಬಿಡದೇ ಬಂತು 4,500 ಫೋನ್‌ ಕಾಲ್‌!

    ಬಳಕೆದಾರರು ತಮ್ಮ ಐಫೋನ್, ಐಪ್ಯಾಡ್ ಅಥವಾ ಐಪಾಡ್‌ಗಳನ್ನು ಮೈಕ್ರೋಫೋನ್‌ಗಳಾಗಿ ಮಾರ್ಪಡಿಸಬಹುದು. ಇದಕ್ಕಾಗಿ ಲೈವ್ ಲಿಸನ್ ಅನ್ನು ಬಳಸಿಕೊಂಡು ಏರ್ ಪಾಡ್ಸ್, ಏರ್ ಪಾಡ್ಸ್ ಪ್ರೋ, ಏರ್ ಪಾಡ್ಸ್ ಮ್ಯಾಕ್ಸ್, ಪವರ್ ಬೀಟ್ಸ್ ಪ್ರೋ ಅಥವಾ ಬೀಟ್ಸ್ ಫಿಟ್ ಪ್ರೋಗೆ ಸಂಪರ್ಕಗೊಳಿಸಬೇಕು.

    ಈ ಫೀಚರ್‌ನಲ್ಲಿ ಜನರ ಸಂಭಾಷಣೆ ಜೋರಾಗಿ ಹಾಗೂ ಸ್ಪಷ್ಟವಾಗಿ ಕೇಳಿಸುತ್ತದೆ. ಮುಖ್ಯವಾಗಿ ಶ್ರವಣ ದೋಷವಿರುವ ಜನರಿಗೆ ಇದನ್ನು ವಿನ್ಯಾಸ ಮಾಡಲಾಗಿದೆ. ಆದರೆ ಈ ಫೀಚರ್ ಬ್ಲೂಟೂತ್ ಸಂಪರ್ಕದ ವ್ಯಾಪ್ತಿಗೆ ಮಾತ್ರ ಸೀಮಿತವಾಗಿರುತ್ತದೆ. ಇದನ್ನೂ ಓದಿ: ಆಪಲ್ ಉದ್ಯೋಗಿಗಳು ಆಫಿಸ್‌ಗೆ ಮರಳುವ ಪ್ಲ್ಯಾನ್ ಕ್ಯಾನ್ಸಲ್ – WFH ಮುಂದುವರಿಕೆ

    ಯಾರಾದರೂ ನಿಮ್ಮ ವಿರುದ್ಧ ಪಿತೂರಿಯಿಂದ ಈ ಫೀಚರ್ ಅನ್ನು ಬಳಸಿಕೊಂಡಿದ್ದಾರೆಯೇ ಎಂದು ತಿಳಿದುಕೊಳ್ಳಲು ಸಾಧ್ಯವಿದೆ. ಐಫೋನ್‌ನಲ್ಲಿ ಲೈವ್ ಲಿಸನ್ ಸಕ್ರಿಯ ಗೊಳಿಸಿದ್ದರೆ, ಅದರ ಪರದೆಯ ಮೇಲಿನ ಎಡ ಮೂಲೆಯಲ್ಲಿ ಮೈಕ್ರೊಫೋನ್ ಐಕಾನ್ ಕಾಣಿಸಿಕೊಳ್ಳುತ್ತದೆ.

  • ಲೋಕಲ್‍ನಲ್ಲಿ ಫಾರಿನ್ ಕಿಕ್- ಗೂಡಂಗಡಿ, ಪಾನ್ ಬೀಡಾ ಶಾಪ್‍ನಲ್ಲಿ ಡೀಲರ್ಸ್!

    ಲೋಕಲ್‍ನಲ್ಲಿ ಫಾರಿನ್ ಕಿಕ್- ಗೂಡಂಗಡಿ, ಪಾನ್ ಬೀಡಾ ಶಾಪ್‍ನಲ್ಲಿ ಡೀಲರ್ಸ್!

    – ಪಬ್ಲಿಕ್ ಟಿವಿಯ ರಹಸ್ಯ ಕ್ಯಾಮೆರಾದಲ್ಲಿ ಬಯಲು

    ಬೆಂಗಳೂರು: ಲೋಕಲ್ ಅಂಗಡಿಯಲ್ಲಿ ಫಾರಿನ್ ಕಿಕ್. ನಿಮ್ಮನೆ ಹುಡ್ಗರನ್ನು ನಶೆಯ ಲೋಕದಲ್ಲಿ ಬೀಳಿಸೋಕೆ ರೆಡಿ ಇದ್ದಾರೆ ಕಿರಾತಕರು. ಬೆಂಗಳೂರಿನಲ್ಲಿ ಫಾರಿನ್ ಕಿಕ್ ಮಜಾ ತೋರಿಸಿ ಅಮಲಿನ ಲೋಕಕ್ಕೆ ಬೀಳಿಸಿ ಖೆಡ್ಡಾ ತೋಡುವ ದಿ ಮೋಸ್ಟ್ ಡೇಂಜರಸ್ ಗ್ಯಾಂಗ್ ಪಬ್ಲಿಕ್ ಟಿವಿಯ ರಹಸ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ.

    ನಿಮ್ಮನೆ ಮಕ್ಕಳಿಗೆ ಲೋಕಲ್ ಸಿಗರೇಟ್ ಮಾತ್ರವಲ್ಲ ಕಿಕ್ ಕೊಡುವ, ನಶೆಯ ಲೋಕದಲ್ಲಿ ತೇಲಿಸುವ ಒಂದು ಬಾರಿ ಧಮ್ ಹೊಡೆದ್ರೆ ರುಚಿ ಹತ್ತಿಸಿಕೊಳ್ಳುವ ಅಮಲಿನ ಫಾರಿನ್ ಬ್ರಾಂಡ್ ಸಿಗರೇಟ್ ಬೆಂಗಳೂರಿನ ಗಲ್ಲಿ ಗಲ್ಲಿಯಲ್ಲಿ ಬಿಕರಿಯಾಗ್ತಿದೆ. ಅಚ್ಚರಿಯಂದ್ರೆ ಇವರ್ಯಾರು ಹೊರಗಡೆ ಮಾರಾಟ ಮಾಡಲ್ಲ. ಯಾಕೆಂದ್ರೆ ಇದು ನಿಷೇಧಿತ ಸಿಗರೇಟು ಆಗಿದ್ದು, ಹೀಗಾಗಿ ಅಕ್ರಮವಾಗಿ ಮಾರಾಟ ಮಾಡುತ್ತಿದ್ದಾರೆ. ಹೊರಗಡೆ ವೀಳ್ಯದೆಲೆ, ಅಡಿಕೆ ಇಟ್ಕೊಂಡು ಕುಟ್ಟುವ ಪಾನ್ ಬೀಡಾ ಅಂಗಡಿಯವನು ಇಲ್ಲಿ ಕೋಟಿ ಗಟ್ಲೆ ಲೆಕ್ಕದಲ್ಲಿ ಇಂಟರ್ ನ್ಯಾಷನಲ್ ಬ್ರಾಂಡ್ ನ ಫಾರಿನ್ ಕಿಕ್ ಸಿಗರೇಟಿನ ಡೀಲ್‍ದಾರರಾಗಿದ್ದಾರೆ. ಮೆಜೆಸ್ಟಿಕ್ ಗಾಂಧಿನಗರದ ಗಲ್ಲಿಲಿ ಒಂದ್ ರೌಂಡ್ ಹೊಡ್ದಾಗ ಈ ಕಿಕ್ ಕಿರಾತಕರು ಪಬ್ಲಿಕ್ ಟಿವಿಯ ಕ್ಯಾಮೆರಾಕ್ಕೆ ಸೆರೆ ಸಿಕ್ಕಿದ್ದಾರೆ.

    ಪ್ರತಿನಿಧಿ: ಮಾಂಡ್ ಸಿಗರೇಟ್ ಇದ್ಯಾ
    ಪಾನ್ ಶಾಪ್‍ನವನು: ಎಷ್ಟ್ ಬೇಕು
    ಪ್ರತಿನಿಧಿ: ಒಂದು ಪ್ಯಾಕ್
    ಪಾನ್ ಶಾಪ್‍ನವನು: ಫುಲ್ ಬಾಕ್ಸ್ ಆದ್ರೇ ತಂದುಕೊಡ್ತೀನಿ
    ಪ್ರತಿನಿಧಿ: ಯಾವುದೆಲ್ಲ ಸಿಗುತ್ತೆ?
    ಪಾನ್ ಶಾಪ್‍ನವನು: ನಿಮ್ಗೆ ಯಾವುದು ಬೇಕು..?
    ಪ್ರತಿನಿಧಿ: ಮಾಂಡ್ ಸಿಗುತ್ತಾ?
    ಪಾನ್ ಶಾಪ್‍ನವನು: ಅದು ಬಿಟ್ಟು ಬೆಂಝನ್, ಎಸ್ಸೆ ಇದೆಲ್ಲ ಸಿಗುತ್ತೆ.
    ಪ್ರತಿನಿಧಿ: ತಗೊಂಡು ಹೋಗಬಹುದಾ
    ಪಾನ್ ಶಾಪ್‍ನವನು: ಹಾ
    ಪ್ರತಿನಿಧಿ: ಕಾಲೇಜ್ ಹತ್ರ ಮಾರಾಬಹುದಾ

    ಪಾನ್ ಶಾಪ್‍ನವನು: ಅದು ನಿಮ್ಗೆ ಬಿಟ್ಟಿದ್ದು ಎಲ್ಲಿ ಮಾರಬೇಕು ಅಂತ. ನಾನು ಹೇಗೆ ಹೇಳಲಿ, ಎಲ್ಲಿ ಮಾರ್ತೀರಾ..?
    ಪ್ರತಿನಿಧಿ: ನಾಗರಬಾವಿಯಲ್ಲಿ ಅಂಗಡಿ ಇಡೋಣ ಅಂತ
    ಪಾನ್ ಶಾಪ್‍ನವನು: ಹಾ ಮಾರಬಹುದು
    ಪ್ರತಿನಿಧಿ: ಇಂಪೋರ್ಟ್ ಮಾಡೋ ಸಿಗರೇಟ್ ಎಲ್ಲಾ ಮಾರೋದು ಅಂತ ವಿದ್ಯಾರ್ಥಿಗಳು ಹೆಚ್ಚು ಅದನ್ನು ಕೇಳ್ತಾರಲ್ಲ, ಎಷ್ಟು ಟೈಂ ಬೇಕು? ನೀವೇ ಕೊಡ್ತೀರಾ?
    ಪಾನ್ ಶಾಪ್‍ನವನು: ಕೊಡೋಣ
    ಪ್ರತಿನಿಧಿ: ನಿಮ್ದೇನಾ ಗೋಡೌನ್? ಹೋಲ್ ಸೇಲ್ ಕೊಡ್ತೀರಾ
    ಪಾನ್ ಶಾಪ್‍ನವನು: ಹೋಲ್ ಸೇಲ್
    ಪ್ರತಿನಿಧಿ: ಯಾವುದ್ದೆಲ್ಲ ಕೊಡ್ತಿಲ್ಲ
    ಪಾನ್ ಶಾಪ್‍ನವನು: ಬೆಂಝನ್, ಡೆವಿಲ್ ಡಾನ್
    ಪ್ರತಿನಿಧಿ: ಕಿಕ್ ಬರೋದು ಯಾವುದಿದೆ?
    ಪಾನ್ ಶಾಪ್‍ನವನು: ಕಿಂಗ್ ಎಡ್ವರ್ಡ್ ಇದೆ

    ಪ್ರತಿನಿಧಿ: ನಿಮ್ಮ ನಂಬರ್ ಕೊಡಿ, ಅದು ಕಿಕ್ ಬರುತ್ತೆ.. ಅಲ್ವಾ
    ಪಾನ್ ಶಾಪ್ ನವನು: ಹಾ ಬರುತ್ತೆ.
    ಪ್ರತಿನಿಧಿ: ವಿದ್ಯಾರ್ಥಿಗಳು ಕೇಳ್ತಾರಲ್ಲ ಕಿಕ್ ಬರೊದು ಅಂದ್ರೆ ಖುಷಿಯಾಗ್ತಾರೆ, ಮಿಕ್ಸ್ ಮಾಡಿದ್ರೆ ಕಿಕ್ ಬರೋ ಸಿಗರೇಟ್ ಇರುತ್ತಲ್ಲ.
    ಪಾನ್ ಶಾಪ್‍ನವನು: ಕಿಕ್ ಬರೋಕೆ ಮಿಕ್ಸ್ ಮಾಡಿ ಮಾರಬೇಕಾಗಿಲ್ಲ.. ಕೆಲವು ಸಿಗರೇಟ್‍ನ್ನೇ ಮಾರಿದ್ರೆ ಸಾಕು, ಮಿಕ್ಸ್ ಬೇಕಾಗಿಲ್ಲ.

    ಗಾಂಜಾದ ಕಿಕ್‍ಗಿಂತ ಡಬಲ್ ಕಿಕ್ ಇರುವ ಈ ಸಿಗರೇಟುಗಳನ್ನು ಕಾಸಿನ ಆಸೆಗೆ ಬಿದ್ದು ಸೇಲ್ ಮಾಡುತ್ತಾರೆ. ಇನ್ನೊಂದು ಟ್ರಿಕ್ಸ್ ಇದೆ. ಕೆಲವು ವ್ಯಾಪಾರಿಗಳು ಸುಖಾಸುಮ್ಮನೆ ಬಂದವರಿಗೆಲ್ಲ ಫಾರಿನ್ ಬ್ಯಾನ್ಡ್ ಸಿಗರೇಟ್ ಮಾರಲ್ಲ. ರೆಗ್ಯೂಲರ್ ಕಸ್ಟಮರ್ ಬಂದಾಗ ಥಟ್ ಅಂತ ಎತ್ತಿಕೊಡ್ತಾರೆ. ಅದನ್ನೇ ಒಬ್ಬ ಬೀಡಂಗಡಿಯವನು ಬಾಯಿ ಬಿಟ್ಟಿದ್ದಾನೆ.

    ಪ್ರತಿನಿಧಿ: ಫಾರಿನ್ ಸಿಗರೇಟ್ ಇದ್ಯಯಣ್ಣ
    ಬೀಡ ಅಂಗಡಿಯವನು: ಇಲ್ಲಣ್ಣ ಈಗ ಮಾರಲ್ಲ
    ಪ್ರತಿನಿಧಿ: ಹಾ ಹೌದಾ
    ಬೀಡ ಅಂಗಡಿಯವನು: ಅಯ್ಯೋ ರೇಡ್ ಮಾಡಿದ್ದಾರೆ. ನಾವು ರೆಗ್ಯೂಲರ್ ಕಸ್ಟಮರ್‍ಗೆ ಕೊಡ್ತೀವಿ ಅಷ್ಟೇ.

    ಪ್ರತಿನಿಧಿ: ಈಗ ಕೊಡಲ್ವಾ
    ಬೀಡ ಅಂಗಡಿಯವನು: ಪರಿಚಯದ ರೆಗ್ಯೂಲರ್ ಕಸ್ಟಮರ್‍ಗೆ ಸೇಲ್ ಮಾಡ್ತೀವಿ ಅಷ್ಟೇ. ನಿಮ್ಗೆ ಕೊಡಲ್ಲ

    ಕಿಕ್‍ನ ರುಚಿ ತೋರಿಸಿ ಅವರನ್ನು ಧಮ್ ಲೋಕದೊಳಗೆ ಕರೆದುಕೊಂಡು ಹೋಗಿ ಮತ್ತೆ ಅವರಿಗಷ್ಟೇ ಸಪ್ಲೈ ಮಾಡ್ತಾರಂತೆ. ಇದೇ ವೇಳೆ ಮೇನ್ ಡೀಲರ್ ಅವ್ನ ಕುಟುಂಬಸ್ಥನೊಬ್ಬ ಎಂಟ್ರಿ ಕೊಟ್ಟ. ಆಗ ಆತ ಸತ್ಯ ಬಾಯಿಬಿಟ್ಟಿದ್ದಾನೆ.

    ಪಾನ್ ಶಾಪ್‍ನವನು: ನಿಮ್ಗೆ ಸಿಗರೇಟ್ ಬೇಕಾ..?
    ಪ್ರತಿನಿಧಿ: ಗೂಗಲ್‍ನಲ್ಲಿ ಹುಡ್ಕಿ ನಾನು ಹೇಳ್ತೀನಿ
    ಪಾನ್ ಶಾಪ್‍ನವನು: ಎಸ್ಸೆಲೇಟ್, ಮರ್ಲ್‍ಬೋರ್, ವೈಟ್ ಟೈಗರ್, ಮಾಂಡ್
    ಪ್ರತಿನಿಧಿ: ಅದಲ್ಲಣ್ಣ ಕಾಲೇಜ್ ಹುಡುಗ್ರು ಕೇಳೋದು
    ಪಾನ್ ಶಾಪ್‍ನವನು: ಏಳೆಂಟು ಐಟಂ ರೆಗ್ಯೂಲರ್ ಕೇಳ್ತಾರೆ. ಎಸ್ಸೆ ಗೋಲ್ಡ್, ಎಸ್ಸೆಲೈಟ್, ಬೆನ್ಶನ್ ರೆಗ್ಯೂಲರ್, ಡೆವಿಡ್, ಸಿಗಾರ್
    ಪ್ರತಿನಿಧಿ: ಸಿಗಾರ್ ಸಿಗುತ್ತಾ
    ಪಾನ್ ಶಾಪ್‍ನವನು: ಸಿಗಾರ್ ಸಿಗುತ್ತೆ, ತಗೊಂಡು ಹೋಗಿ ಎಲ್ಲಾ ಹೊರಗಡೆ ಅಷ್ಟೇ. 150 ಸಿಂಗಲ್, ಎಂಟುಸಾವಿರ ಫುಲ್. ಸ್ವಲ್ಪ ಕಡಿಮೆ ಮಾಡೋಣ

    ಪ್ರತಿನಿಧಿ: ಸಿಗರೇಟ್ ಡಿಸ್ ಪ್ಲೇ ಇಲ್ವಾ
    ಪಾನ್ ಶಾಪ್‍ನವನು: ಹೇ ಅದೆಲ್ಲ ಇಡೋಕೆ ಆಗಲ್ಲ, ಇಡೋ ಹಾಗಿಲ್ಲ.
    ಪ್ರತಿನಿಧಿ: ತೋರಿಸಬಹುದಾ..
    ಪಾನ್ ಶಾಪ್‍ನವನು: ಅದನ್ನು ತೋರಿಸೋಕೆ ಆಗಲ್ಲ ಗೋಡೌನ್ ಇರುತ್ತೆ, ದುಡ್ಡು ಕೊಟ್ಟರಷ್ಟೇ ನಿಮ್ಗೆ ಮಾಲ್
    ಪ್ರತಿನಿಧಿ: ಎಲ್ಲಿರುತ್ತೆ
    ಪಾನ್ ಶಾಪ್‍ನವನು: ಚಿಕ್ಕಪೇಟೆನಲ್ಲಿ. ಅವರೆದೆಲ್ಲ ದೊಡ್ಡ ದೊಡ್ಡ ಬ್ಯುಸಿನೆಸ್ ನೀವು ಹೋದ್ರೆ ಕೊಡಲ್ಲ, ನಾನೇ ತಂದು ಕೊಡ್ತೇನೆ
    ಪ್ರತಿನಿಧಿ: ಈಗ ಇಷ್ಟು ಐಟಂ ಹೇಳಿದ್ವಲ್ಲ ಅದಕ್ಕೆ ಎಷ್ಟಾಗುತ್ತೆ?
    ಪಾನ್ ಶಾಪ್ ನವನು: ಬಿಲ್ ಟೈಂನಲ್ಲಿ ಹೇಳ್ತೀವಿ. ಬಂಡಲ್‍ಗೆ ಒಂದೊಂದು ರೇಟ್ ಇರುತ್ತೆ. ಎಂಟು ಸಾವಿರ ಇರುತ್ತೆ. ಹತ್ತು ಆಗುತ್ತೆ.
    ಪ್ರತಿನಿಧಿ: ಕಿಕ್ ಬರುತ್ತಾ..?
    ಪಾನ್ ಶಾಪ್ ನವನು: ಹಂಡ್ರೆಡ್ ಪರ್ಸೆಂಟ್ ಕಿಕ್ ಬರುತ್ತೆ. ಒಂದ್ಸಲ ಕಸ್ಟಮರ್ ಇದನ್ನು ಶುರುಮಾಡಿದ್ರೆ ಮತ್ತೆ ಬಿಡಲ್ಲ.

    ನಿಜ ಒಂದ್ಸಲ ಸೇದಿದ್ರೇ ಮತ್ತೆ ಮತ್ತೆ ಸೇದುವ ಚಟ ಹತ್ತಿಸೋ ಡೆಡ್ಲಿ ಸಿಗರೇಟು ಇದು. ನಶೆಯ ಅಫೀಮು ಇದ್ದಂತೆ. ಅದೇ ಕಾರಣಕ್ಕೆ ಕೆಲ ಫಾರಿನ್ ಸಿಗರೇಟ್‍ನ್ನು ಬ್ಯಾನ್ ಮಾಡಿದ್ದಾರೆ. ಜೊತೆಗೆ ಮಲೆಶಿಯಾ ಬಾಂಗ್ಲಾ ಸೌದಿ ಸೇರಿದಂತೆ ನಾನಾ ದೇಶದಿಂದ ಕಿಕ್ ಹತ್ತಿಸೋ ಸಿಗರೇಟು ಟ್ಯಾಕ್ಸ್ ಕಟ್ಟದೇ ಭಾರತಕ್ಕೆ ನುಸುಳುತ್ತೆ. ಅದರಲ್ಲೂ ಮಹಾನಗರಿ ಬೆಂಗಳೂರು ಇವರ ಟಾರ್ಗೆಟ್. ಇಲ್ಲಿನ ಕಾಲೇಜು ವಿದ್ಯಾರ್ಥಿಗಳು ಬ್ಯುಸಿನೆಸ್‍ಮ್ಯಾನ್‍ಗಳು ಎಲ್ಲರಿಗೂ ಈ ಖಯಾಲಿ ಹುಟ್ಟಿಸಿಬಿಡ್ತಾರೆ.

    ಒಟ್ಟಿನಲ್ಲಿ ಕಸ್ಟಮ್ಸ್ ಅಧಿಕಾರಿಗಳು, ಆಹಾರ ಇಲಾಖೆ ಈ ಬಗ್ಗೆ ಎಚ್ಚೆತ್ತುಕೊಂಡು ಕಿಕ್ ಕಿರಾತಕರಿಗೆ ಪಾಠ ಕಲಿಸಬೇಕಾಗಿದೆ.

  • ಬೆಂಗಳೂರಿನಲ್ಲಿ ನಕಲಿ ಡೆಂಟಲ್ ಡಾಕ್ಟರ್ಸ್ ಹಾವಳಿ!

    ಬೆಂಗಳೂರಿನಲ್ಲಿ ನಕಲಿ ಡೆಂಟಲ್ ಡಾಕ್ಟರ್ಸ್ ಹಾವಳಿ!

    – ಬೀದಿಬದಿಯೇ ಕೊಡ್ತಾರೆ ಟ್ರೀಟ್‍ಮೆಂಟ್
    – ಐದೇ ನಿಮಿಷದಲ್ಲಿ ಜೋಡಣೆಯಾಗುತ್ತೆ ಹಲ್ಲು

    ಬೆಂಗಳೂರು: ರಾಜಧಾನಿಯಲ್ಲಿ ನಕಲಿ ದಂತ ವೈದ್ಯರ ಹಾವಳಿ ತಾಂಡವವಾಡುತ್ತಿದ್ದು, ಮಾತಲ್ಲೇ ಮರುಳು ಮಾಡಿ ಕಡಿಮೆ ಬೆಲೆಗೆ ಹಲ್ಲು ಜೋಡಿಸುತ್ತಾರೆ. ಸ್ವಲ್ಪ ಯಾಮಾರಿದರೂ ಈ ನಕಲಿ ಡೆಂಟಲ್ ಡಾಕ್ಟರ್ಸ್ ಸಾಯಿಸಿಬಿಡುತ್ತಾರೆ. ಪಬ್ಲಿಕ್ ಟಿವಿ ನಡೆಸಿದ ರಹಸ್ಯ ಕಾರ್ಯಾಚರಣೆಯಲ್ಲಿ ನಕಲಿ ವೈದ್ಯರ ಕರ್ಮಕಾಂಡ ಬೆಳಕಿಗೆ ಬಂದಿದೆ.

    ಯಾವುದೇ ಇಲಾಖೆಯ ಅನುಮತಿ ಪಡೆಯದೇ ಈ ನಕಲಿ ಡಾಕ್ಟರ್ಸ್ ಫುಟ್ ಪಾತ್‍ನಲ್ಲೇ ಚಿಕಿತ್ಸೆ ಕೊಡುತ್ತಿದ್ದಾರೆ. ನಗರದ ಕೆ.ಆರ್ ಮಾರ್ಕೆಟ್ ನಲ್ಲಿ ಡೆಂಟಲ್ ಕ್ಲಿನಿಕ್ ಗಳನ್ನು ನಡೆಸುತ್ತಿದ್ದಾರೆ. ಇದನ್ನೆಲ್ಲ ಕುಲ ಕಸುಬನ್ನಾಗಿ ಮಾಡಿಕೊಂಡಿರುವ ಕೆಲ ಆಸಾಮಿಗಳು ಫುಟ್ ಪಾತ್ ನಲ್ಲೇ ವ್ಯಾಪಾರ ನಡೆಸುತ್ತಿದ್ದಾರೆ.

    ಪಬ್ಲಿಕ್ ಟಿವಿ ಪ್ರತಿನಿಧಿ ನಕಲಿ ದಂತವೈದ್ಯರೊಂದಿಗೆ ನಡೆಸಿದ ಸಂಭಾಷಣೆ ಇಂತಿದೆ.
    ಪ್ರತಿನಿಧಿ: ರೆಗ್ಯೂಲರ್ ಇರ್ತಿರಾ
    ನಕಲಿ ಡಾಕ್ಟರ್: ಕಾರ್ಡ್ ತೊಗೊಂಡ್ರಾ..
    ಪ್ರತಿನಿಧಿ: ಲಾಸ್ಟ್ ಟೈಮ್ ಮಾಡ್ಸಿದ್ದೆ. ಬಿಚ್ಚೋಗಿತ್ತು
    ನಕಲಿ ಡಾಕ್ಟರ್: ಅದು ಕೆಲ್ಸ ಇದೆ ಮಾಡ್ಬೇಕು. ಅರ್ಧ ಘಂಟೆಯಲ್ಲಿ ಮಾಡ್ತೀನಿ. ಒಳಗಡೆ ಕಂಬಿ ಲಾಕ್ ಮಾಡಿ ಕೊಡ್ತೀನಿ
    ಪ್ರತಿನಿಧಿ: ಎಷ್ಟಾಗುತ್ತೆ ಅಂತ ಹೇಳಿದ್ರಿ
    ನಕಲಿ ಡಾಕ್ಟರ್: ಸಾವಿರ ರೂಪಾಯಿ
    ಪ್ರತಿನಿಧಿ: ಬರೀ ಕ್ಯಾಪ್ ಅಷ್ಟೆ
    ನಕಲಿ ಡಾಕ್ಟರ್: ಹಲ್ಲು ನೋಡಿಲ್ಲ ನಿಮ್ಗೆ. ಬರೀ ಹೋಲ್ಸ್ ಗೆ ಅಂತ. ಈ ಹಲ್ಲಿಗೆ ಫುಲ್ ಉಜ್ಜು ಬಿಟ್ಟು ಹಾಕಿಕೊಡ್ತೀನಿ
    ಪ್ರತಿನಿಧಿ: ಕೊಡಿ.. ಯಾವುದು ಇದು
    ನಕಲಿ ಡಾಕ್ಟರ್: ಸಿರಾಮಿಕ್ ಹಲ್ಲು. 28 ಹಲ್ಲು ಬರುತ್ತೆ.
    ಪ್ರತಿನಿಧಿ: ನೀವು ಎಲ್ಲಿಂದ ತರ್ತೀರಿ
    ನಕಲಿ ಡಾಕ್ಟರ್: ನಾವು ತರ್ಸೋದು ಅಣ್ಣ
    ಪ್ರತಿನಿಧಿ: ಡೆಂಟಲ್ ಆಸ್ಪತ್ರೆಗೆ ಹೋದ್ರೆ
    ನಕಲಿ ಡಾಕ್ಟರ್: ಅಲ್ಲಿ ನಿಮಗೆ ಸ್ಟೀಲ್ ಕ್ಯಾಪ್ ಹಾಕ್ತಾರೆ
    ಪ್ರತಿನಿಧಿ: ನೀವು ಯಾವ ಪೌಡರ್ ಹಾಕ್ತೀರಿ.
    ನಕಲಿ ಡಾಕ್ಟರ್: ನಮ್ದು ಏನಿದ್ರೂ ಅಶ್ವಿನಿ ಲಿಕ್ವಿಡ್ ಪೌಡರ್
    ನಕಲಿ ಡಾಕ್ಟರ್: ನಾವು ನಿಮ್ಗೆ ಚೆನ್ನಾಗಿ ಮಾಡಿದ್ರೆ, ಬೇರೆಯವ್ರನ್ನ ಕಳಿಸ್ತೀರಾ. ಕೊಲ್ಕತ್ತಾದಿಂದ ಹುಡ್ಕೊಂಡು ಬರ್ತಾರೆ ನನ್ನ
    ಪ್ರತಿನಿಧಿ: ಹೌದಾ..ಮೆಟರಿಯಲ್ ಬೇರೆ ಕಡೆಯಿಂದ ತರ್ತೀರಾ
    ನಕಲಿ ಡಾಕ್ಟರ್: ನಾನೇ ಹೋಗಿ ತೊಗೊಂಡು ಬರ್ತೀನಿ. ಒಂದು ಕಡೆ ಬರುತ್ತೆ
    ಪ್ರತಿನಿಧಿ: ಆಸ್ಪತ್ರೆಗಳಿಂದ ನಿಮಗೆ ಅನುಮತಿ ಇರುತ್ತಾ. ಅವ್ರಿಗೆ ನಿಮಗೆ ಪರಿಚಯ
    ನಕಲಿ ಡಾಕ್ಟರ್: ಆ ರೀತಿ ಏನೂ ಇಲ್ಲ. ಅರ್ಜೆಂಟ್ ಮದುವೆ, ಸಮಾರಂಭಗಳಿಗೆ ಹೋಗಬೇಕಾದಾಗ ಹಾಕಿ, ತೆಗೆಯೋದು ಫಿಟ್ಟಿಂಗ್ ಮಾಡಿಕೊಡ್ತೀನಿ
    ಪ್ರತಿನಿಧಿ: ನಾನು ಎರಡು ಸಲ ಮೋಸ ಹೋಗಿದ್ದೀನಿ ಭಾಯ್
    ನಕಲಿ ಡಾಕ್ಟರ್: ಕುಂತು ಮಾಡೋಕೆ ಐದು ನಿಮಿಷನೂ ಆಗಲ್ಲ. ನಾನು ಕಾಸುಗೆ ಯೋಚನೆ ಮಾಡಿದ್ರೆ, ಯಾವಾಗೋ ಕಳಿಸಿದ್ದೆ ನಿಮಗೆ
    ಪ್ರತಿನಿಧಿ: ನಿಮ್ಮ ಕೆಲಸದಲ್ಲಿ ನಂಬಿಕೆ ಅಷ್ಟೆ, ಎಟಿಎಂ ಗೆ ಹೋಗು ಬರೋಣ
    ನಕಲಿ ಡಾಕ್ಟರ್: ಬನ್ನಿ ಸಾರ್. ಯಾವಾಗ ಟೈಮ್ ಇರುತ್ತೆ ಆಗ ಬನ್ನಿ.
    ಪ್ರತಿನಿಧಿ: ಹುಮ್.
    ನಕಲಿ ಡಾಕ್ಟರ್: ನಾಲ್ಕೈದು ಜನ ಇದ್ರೆ ನಿಮ್ ಮನೆಗೂ ಬರ್ತಿನಿ. ನಾಲ್ಕೈದು ಜನ ಲೇಡಿಸ್ ಇದ್ರುನೂ ಮನೆ ಹತ್ರನೇ ಬಂದು ಮಾಡಿ ಹೋಗ್ತೀನಿ
    ಪ್ರತಿನಿಧಿ: ಎಕ್ಸ್ಟ್ರಾ ಚಾರ್ಜ್ ತೊಗೊತೀರಾ
    ನಕಲಿ ಡಾಕ್ಟರ್: ಎಲ್ಲಾ ಲೆಕ್ಕ ಅಷ್ಟೆ. ಮೂರು ನೂರು, ನಾಲ್ಕು ನೂರು, ಐನೂರು. ಬನ್ನಿ ಅಣ್ಣ ಮಾಡಿಕೊಡ್ತೀನಿ
    ಪ್ರತಿನಿಧಿ: ಸರಿ. ನಂಬರ್ ಇದೆ ಕಾಲ್ ಮಾಡ್ತೀನಿ

    ಕೇವಲ ಫುಟ್ ಪಾತ್ ಮಾತ್ರವಲ್ಲದೇ ಮನೆಗೂ ಬಂದು ಚಿಕಿತ್ಸೆ ನೀಡುತ್ತೇವೆ ಎಂದು ನಕಲಿ ಡಾಕ್ಟರ್ಸ್ ಹೇಳುತ್ತಿದ್ದು, ನಾಲ್ಕೈದು ಜನ ಇದ್ದರೆ ಹೋಮ್ ಡೆಲಿವರಿ ಕೂಡ ಮಾಡ್ತಾರಂತೆ. ಒಬ್ಬರ ಬಾಯಿಗೆ ಇಟ್ಟಿರುವ ಸಲಕರಣೆಗಳನ್ನು ಸರಿಯಾಗಿ ಶುಚಿ ಮಾಡದೆ, ಮತ್ತೊಬ್ಬರ ಬಾಯಿಗೆ ಇಟ್ಟು ಹಲ್ಲು ಜೋಡಿಸುತ್ತಾರೆ. ಹೀಗೆ ಮಾಡುವುದರಿಂದ ಹೆಚ್‍ಐವಿ ಕೂಡ ಬರುವ ಸಾಧ್ಯತೆಗಳಿರುತ್ತೆ ಎಂದು ತಜ್ಞ ವೈದ್ಯರು ಆತಂಕ ವ್ಯಕ್ತಪಡಿಸಿದ್ದಾರೆ.

    ಇಲ್ಲಿ ಚಿಕಿತ್ಸೆ ನೀಡುವವರು ಕುಲ ಕಸುಬನ್ನು ವೃತ್ತಿಯನ್ನಾಗಿ ಮಾಡಿಕೊಂಡಿದ್ದು, ಯಾವುದೇ ಮೆಡಿಕಲ್ ಶಿಕ್ಷಣವನ್ನು ಪಡೆದಿಲ್ಲ. ಮುಖ್ಯವಾಗಿ ಕರ್ನಾಟಕ ಸ್ಟೇಟ್ ಡೆಂಟಲ್ ಕೌನ್ಸಿಲ್ ನಲ್ಲಿ ಅನುಮತಿ ಪಡೆದು ಡೆಂಟಲ್ ಕ್ಲಿನಿಕನ್ನು ಓಪನ್ ಮಾಡಬೇಕಾಗುತ್ತೆ. ಆದರೆ ಈ ಡಾಕ್ಟರ್ಸ್ ಯಾರ ಅನುಮತಿಯನ್ನೂ ಪಡೆದಿಲ್ಲ. ಆದ್ರೂ ರಾಜರೋಷವಾಗಿ ಬ್ಯೂಸಿನೆಸ್ ಮಾಡುತ್ತಿದ್ದಾರೆ. ನಗರದ ಕೆ.ಆರ್.ಮಾರ್ಕೆಟ್‍ನಲ್ಲಿರುವ ಮತ್ತೊಂದು ಡೆಂಟಲ್ ಕ್ಲಿನಿಕ್‍ನ ನಕಲಿ ಡೆಂಟಲ್ ಡಾಕ್ಟರ್ಸ್ ಮಾತು ಇಂತಿದೆ.

    ಪ್ರತಿನಿಧಿ: ಹಲ್ಲು ಸ್ಪೇಸ್ ಇದೆ. ಹಾಕಿ ಕೊಡ್ತೀರಾ
    ನಕಲಿ ಡಾಕ್ಟರ್: ಯಾರಿಗೆ
    ಪ್ರತಿನಿಧಿ: ನಮ್ಗಲ್ಲ. ನಮ್ ಹುಡ್ಗನಿಗೆ
    ನಕಲಿ ಡಾಕ್ಟರ್: ಎಲ್ಲಿದ್ದಾರೆ..?
    ಪ್ರತಿನಿಧಿ: ಆ ಹುಡ್ಗ ಇಲ್ಲ. ಕರ್ಕೊಂಡು ಬರುತ್ತೀವಿ. ಎಷ್ಟಾಗುತ್ತೆ..?
    ನಕಲಿ ಡಾಕ್ಟರ್: ಇನ್ನೂರು, ಮುನ್ನೂರು, ನಾನ್ನೂರು ಅಷ್ಟೆ.
    ಪ್ರತಿನಿಧಿ: ನೀವೇ ಕೊಡುತ್ತೀರಾ..?
    ನಕಲಿ ಡಾಕ್ಟರ್: ಕರ್ಕೊಂಡು ಬನ್ನಿ. ಮಾಡಿ ಕೊಡ್ತೀನಿ..

    ಹಲ್ಲು ಜೋಡಿಸುವಾಗ, ತೆಗೆಯುವಾಗ ಯಾವುದೇ ಮುನ್ನೆಚ್ಚರಿಕೆ ತೆಗೆದುಕೊಳ್ಳುತ್ತಿಲ್ಲ. ಸ್ವಲ್ಪ ಎಡವಟ್ಟು ಆದ್ರು, ಹಲ್ಲಿನ ಚಿಗುರೇ ಛಿದ್ರ ಛಿದ್ರವಾಗುವ ಸಾಧ್ಯತೆಗಳಿವೆ. ಸಾಮಾನ್ಯವಾಗಿ ಅನುಮತಿ ಪಡೆದು ನಡೆಸುವ ಡೆಂಟಲ್ ಆಸ್ಪತ್ರೆಗಳಲ್ಲಿ ಹಲ್ಲು ಜೋಡಿಸುವಾಗ, ತೆಗೆಯುವಾಗ, ಅದರ ಮಾಪನ, ಅಳತೆಯನ್ನು ಲ್ಯಾಬ್‍ಗೆ ಕಳುಹಿಸಿ ಚಿಕಿತ್ಸೆ ಶುರು ಮಾಡುತ್ತಾರೆ. ಆದರೆ ಇಲ್ಲಿ ಮಾತ್ರ ಬರೀ ಐದೇ ನಿಮಿಷದಲ್ಲಿ ಗಮ್ ಲಿಕ್ವಿಡ್ ಹಾಕಿ ಹಲ್ಲು ಜೋಡಿಸಿ ಕೊಡುತ್ತಾರೆ. ಇದು ಅಕ್ರಮ ಅಂತ ಗೊತ್ತಿದ್ದರು ಸಂಬಂಧಪಟ್ಟ ಪಾಲಿಕೆಯ ಆರೋಗ್ಯಧಿಕಾರಿಗಳು ಮಾತ್ರ ಗಾಢ ನಿದ್ರೆಯಲ್ಲಿದ್ದಾರೆ. ಈ ನಕಲಿ ವೈದ್ಯರು ಪೊಲೀಸರಿಗೆ ಪ್ರತಿದಿನ ಮಾಮೂಲು ನೀಡಿ ದಂಧೆ ನಡೆಸುತ್ತಿದ್ದಾರೆ ಎಂಬ ಆರೋಪಕೊಳ್ಳಿ ಬಂದಿದೆ. ಈಗಲಾದರೂ ಸಂಬಂಧಪಟ್ಟ ಅಧಿಕಾರಿಗಲು ಎಚ್ಚೆತ್ತುಕೊಂಡು ಶಿಸ್ತು ಕ್ರಮ ಕೈಗೊಳ್ಳಬೇಕಿದೆ.

  • ಚಾಕ್ಲೇಟ್ ಅಂಗಡಿಯಲ್ಲಿ ಎಣ್ಣೆ ಮಾರಾಟ- ಪಬ್ಲಿಕ್ ಟಿವಿ ಸ್ಟಿಂಗ್‍ನಲ್ಲಿ ಬಯಲು

    ಚಾಕ್ಲೇಟ್ ಅಂಗಡಿಯಲ್ಲಿ ಎಣ್ಣೆ ಮಾರಾಟ- ಪಬ್ಲಿಕ್ ಟಿವಿ ಸ್ಟಿಂಗ್‍ನಲ್ಲಿ ಬಯಲು

    – ಕುಡುಕರ ಅಡ್ಡೆಯಾಗ್ತಿದೆ ಶಾಲಾ ಆವರಣ

    ಯಾದಗಿರಿ: ಶಾಲಾ ವ್ಯಾಪ್ತಿಯಿಂದ 100 ಮೀ. ದೂರದಲ್ಲಿ ಮದ್ಯ, ಪಾನ್ ಮಸಾಲಾ, ತಂಬಾಕು ಮಾರಾಟ ಮಾಡಬೇಕು ಎಂಬ ನಿಯಮವಿದೆ. ಅಲ್ಲದೆ ಅನುಮತಿ ಇಲ್ಲದೆ ಮದ್ಯ ಮಾರಾಟ ಮಾಡುವುದು ಸಹ ಅಪರಾಧ. ಆದರೆ ಯಾದಗಿರಿ ಜಿಲ್ಲೆಯಲ್ಲಿ ಮಾತ್ರ ಇಂತಹ ನಿಯಮಗಳಿಗೆ ಯಾರೂ ಕೇರ್ ಮಾಡಲ್ಲ. ಈ ವಿಚಾರ ಪಬ್ಲಿಕ್ ಟಿವಿ ನಡೆಸಿದ ರಹಸ್ಯ ಕಾರ್ಯಾಚರಣೆಯಲ್ಲಿ ಬಯಲಾಗಿದೆ.

    ಶಾಲೆ ಅಂದ್ರೆ ದೇಗುಲಕ್ಕೆ ಸಮಾನ. ಇಲ್ಲಿ ನಿತ್ಯ ಸಾವಿರಾರು ವಿದ್ಯಾರ್ಥಿಗಳು ಜ್ಞಾನಾರ್ಜನೆಗಾಗಿ ಬರುತ್ತಾರೆ. ಶಿಕ್ಷಕರು ದೇವರ ಸಮಾನರಾಗಿ ಮಕ್ಕಳಿಗೆ ಬೋಧಿಸ್ತಾರೆ. ಆದರೆ ಈಗ ಹಣಕ್ಕಾಗಿ ಸರ್ಕಾರಗಳು, ಜಿಲ್ಲಾಡಳಿತ ಯಾವ ಮಟ್ಟಕ್ಕೂ ಇಳಿಯುತ್ತವೆ ಅನ್ನೋದಕ್ಕೆ ಈ ಕಾರ್ಯಾಚರಣೆಯೇ ನಿದರ್ಶನವಾಗಿದೆ.

    ಯಾದಗಿರಿಯಲ್ಲಿರೋ ಶಾಲಾ ಆವರಣ ಈಗ ಕುಡುಕರ ಅಡ್ಡೆಯಾಗುತ್ತಿದೆ. ಇಲ್ಲಿ ಯಾವುದೇ ಕಾನೂನನ್ನು ಲೆಕ್ಕಿಸದೇ, ಅಕ್ರಮ ಮದ್ಯ ಮಾರಾಟದ ದಂಧೆ ಜೋರಾಗಿಯೇ ನಡೆಯುತ್ತಿದೆ. ನಾರಾಯಣಪುರ ಠಾಣೆ ವ್ಯಾಪ್ತಿಗೆ ಬರುವ ಹೊರಹಟ್ಟಿ ಎಂಬಲ್ಲಿನ ಶಾಲೆಯಲ್ಲಿ ಶಾಲಾ ಮಕ್ಕಳಿಗೆ ಚಾಕ್ಲೇಟ್ ಮಾರೋ ಅಂಗಡಿಯಲ್ಲಿ ಅಕ್ರಮ ಮದ್ಯ ಮಾರಾಟ ದಂಧೆ ರಾಜಾರೋಷವಾಗಿ ನಡೆಯುತ್ತಿದೆ. ಒಂದು ಕಡೆ ಶಾಲಾ ಮಕ್ಕಳಿಗೆ ಚಾಕ್ಲೇಟ್ ಮಾರಾಟ ಮಾಡಿ, ಮತ್ತೊಂದು ಕಡೆ ಎಣ್ಣೆ ಮಾರಾಟ ಮಾಡುತ್ತಿದ್ದಾರೆ.

    ರಹಸ್ಯ ಕಾರ್ಯಾಚರಣೆ-1
    ಸ್ಥಳ: ಶಾಲೆಯ ಬಳಿ
    ಪ್ರತಿನಿಧಿ: ಕ್ವಾಟರ್ ಸಿಗುತ್ತಾ…?
    ವ್ಯಾಪಾರಿ: ಇಲ್ಲ… ಯಾವುದೂ ಇಲ್ಲ… ಯಾವ ಊರು ನಿಮ್ದು..?
    ಪ್ರತಿನಿಧಿ: ಸಿಗುತ್ತೆ ಅಂತ ಯಾರೋ ಅಂದ್ರು..
    ವ್ಯಾಪಾರಿ: ಯಾವ ಊರು ನಿಮ್ಮದು..?
    ಪ್ರತಿನಿಧಿ: ಇಲ್ಲಿ ಸಿಗುತ್ತೆ ಅಂತ ಹೇಳಿದ್ರು.. ನಾವು ಶಾಲೆಗೆ ಫೋಟೋ ತೆಗೆದುಕೊಳ್ಳಲು ಬಂದಿದ್ದೀವಿ…

    ವ್ಯಾಪಾರಿ: ನಾವು ಕಳ್ಳತನದಿಂದ ಮಾರುತ್ತಿದ್ದೀವಿ.. ಅದಕ್ಕಾಗಿ ಕೇಳಿದ್ವಿ..
    ವ್ಯಾಪಾರಿ: ಮಕ್ಕಳೇ ಹೋಗಿ ಹೋಗಿ ನೀವ್…. ನಾವ್ ಏನೋ ಮಾಡಕತ್ತೀವಿ..
    ಪ್ರತಿನಿಧಿ: ಯಾವು ಯಾವು ಸಿಗುತ್ತೆ..?
    ವ್ಯಾಪಾರಿ: ಹೈವಾರ್ಡ್ಸ್…. ಅದು ಬಿಟ್ಟರೆ ಮತ್ಯಾವುದೂ ಇಲ್ಲ…

    ಡಿಸಿ ಮನೆ ಹಿಂದೆಯೇ ಕುಡುಕರ ಸಾಮ್ರಾಜ್ಯ!
    ಯಾದಗಿರಿ ನಗರದ ಹೃದಯ ಭಾಗದಲ್ಲಿ ಮತ್ತು ಡಿಸಿ ಅವರ ಸರ್ಕಾರಿ ಮನೆಯಿಂದಿನ ಗಾಂಧಿನಗರದಲ್ಲಿ ರಾತ್ರಿಯಾದ್ರೆ ಸಾಕು ಮನೆಮನೆಯಲ್ಲಿ ಅಕ್ರಮ ಮದ್ಯ ಮಾರಾಟದ್ದೇ ಸಾಮ್ರಾಜ್ಯ ನಿರ್ಮಾಣವಾಗುತ್ತದೆ. ಇಲ್ಲಿ ಮಧ್ಯರಾತ್ರಿ ಹೋಗಿ ಮನೆ ಬಾಗಿಲು ಬಡಿದು ಎಣ್ಣೆ ಕೊಡಿ ಅಂದ್ರೆ ತಕ್ಷಣ ಕೊಡುತ್ತಾರೆ. ಕೇವಲ ಅಕ್ರಮ ಮದ್ಯ ಮಾತ್ರವಲ್ಲ ಬ್ಯಾನ್ ಆದ ಮತ್ತುಭರಿತ ಪದಾರ್ಥವಾದ ಸ್ಪಿರಿಟ್ ಮಿಥೇನಿಯಂ ಸಹ ಸಿಗುತ್ತದೆ.

    ರಹಸ್ಯ ಕಾರ್ಯಾಚರಣೆ-02
    ಸ್ಥಳ: ಗಾಂಧಿನಗರ, ಯಾದಗಿರಿ
    ಪ್ರತಿನಿಧಿ: ಇದೇನು…?
    ಮನೆಯವರು: ಕುಡಿಬೇಕು.. ಇದನ್ನಾ ನೆಕ್ಕಬೇಕು… ವಾಂತಿ ಬರಲ್ಲಾ ಚೆನ್ನಾಗಿರುತ್ತೆ ತಗೊಳ್ಳಿ.. ನಾನು ಸುಳ್ಳು ಹೇಳ್ತಿಲ್ಲ.. ಕುಡಿಯುವಾಗ ಇದನ್ನು ತಗೆದುಕೊಳ್ಳಬೇಕು ವಾಂತಿ ಬರಲ್ಲ…
    ಪ್ರತಿನಿಧಿ: ಯಾವುದು ಇದೆ…?
    ಮನೆಯವರು: ಓರಿಜಿನಲ್ ಚಾಯ್ಸ್, ಎಂಸಿ ರಮ್…
    ಪ್ರತಿನಿಧಿ: ಅವರೆಡು ಬಿಟ್ಟು ಮತ್ಯಾವುದೂ ಇಲ್ವಾ..? ವಿಸ್ಕಿ ಇದೆಯಾ ನೋಡಿ..
    ಮನೆಯವರು: ಇಲ್ಲ ಸರ್.. ಎಂಸಿ ರಮ್ ಮಾತ್ರ ಇದೆ…

    ಪ್ರತಿನಿಧಿ: ಏನಿದೆ
    ಮನೆಯವರು: ಎಂಸಿ ರಮ್
    ಪ್ರತಿನಿಧಿ: ಏನೇನಿದೆ..?
    ಮನೆಯವರು: ಏನು ಬೇಕು ಹೇಳಿ ನಮಗೆ ನಿದ್ದೆ ಬರುತ್ತಿದೆ.
    ಪ್ರತಿನಿಧಿ: ವಿಸ್ಕಿ ಇದೆಯಾ ಅಂತ ಕೇಳ್ದೆ
    ಮನೆಯವರು: ಐಬಿ ಇದೆ.. 230 ಆಗುತ್ತೆ
    ಪ್ರತಿನಿಧಿ: ಅದನ್ನೇ ಕೊಡಿ..

    ಈ ಅಕ್ರಮ ಮದ್ಯಮಾರಾಟ ದಂಧೆಗೆ ಪೊಲೀಸ್ ಇಲಾಖೆಯ ಕೆಲ ಅಧಿಕಾರಿಗಳು ಸಹಕಾರ ನೀಡುತ್ತಿದ್ದಾರೆ ಎಂಬ ಮಾತುಗಳು ಕೂಡ ಕೇಳಿ ಬರುತ್ತಿದೆ. ಇದೇ ಹೊರಹಟ್ಟಿ ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟದ ಮೇಲೆ ದಾಳಿ ಮಾಡಿ, ಕೇಸು ದಾಖಲಿಸಿದ್ದ ಚಂದ್ರು ಮತ್ತು ಗೋವಿಂದ ಎಂಬ ಇಬ್ಬರು ಪೊಲೀಸ್ ಪೇದೆಗಳನ್ನು ಹಿರಿಯ ಅಧಿಕಾರಿಗಳು ರಾತ್ರೋರಾತ್ರಿ ಎತ್ತಂಗಡಿ ಮಾಡಿದ್ದಾರೆ. ಪೇದೆಗಳು ಹಿಡಿದು ತಂದಿದ್ದ ವಾಹನವನ್ನು ಸುಳ್ಳು ದಾಖಲೆ ಸೃಷ್ಟಿ ಮಾಡಿ ಬಿಟ್ಟು ಕಳುಹಿಸಿದ್ದಾರೆ ಎನ್ನಲಾಗಿದೆ.

    ಒಟ್ಟಿನಲ್ಲಿ ಇತ್ತೀಚಿನ ದಿನಗಳಲ್ಲಿ ಯುವ ಸಮುದಾಯ ಮದ್ಯ ಚಟಕ್ಕೆ ಬಲಿಯಾಗಿ ತಮ್ಮ ಜೀವನವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಈಗ ಇಂತಹ ಅಕ್ರಮ ಮಾರಾಟದಿಂದ ಇನ್ನಷ್ಟು ಜನ ಯುವಕರು ದಾರಿ ತಪ್ಪುವುದು ಖಚಿತ. ಇದರ ನಡುವೆ ಇಂತಹ ಕಾನೂನು ಬಾಹಿರ ವ್ಯವಸ್ಥೆ ವಿರುದ್ಧ ಧ್ವನಿ ಎತ್ತಿದ ಸ್ವತಃ ಪೊಲೀಸ್ ಪೇದೆಗಳನ್ನು ಅವರ ಇಲಾಖೆ ಅಡಗಿಸಿದ್ರೆ ಜನಸಾಮಾನ್ಯರ ಪರಿಸ್ಥಿತಿ ಹೇಗೆ ಎಮದು ಸಾರ್ವಜನಿಕರು ಅನುಮಾನ ವ್ಯಕ್ತಪಡಿಸಿದ್ದಾರೆ.

  • ಮಾಂಸಪ್ರಿಯರೇ ಚಿಕನ್ ಕಬಾಬ್ ತಿನ್ನೋ ಮೊದಲು ಎಚ್ಚರ

    ಮಾಂಸಪ್ರಿಯರೇ ಚಿಕನ್ ಕಬಾಬ್ ತಿನ್ನೋ ಮೊದಲು ಎಚ್ಚರ

    – ಬೆಂಗ್ಳೂರಿನ ಕರಾಳ ಮಾಂಸ ಮಾರಾಟ ದಂಧೆ ಬಯಲು
    – ತಾಜಾ ಕೋಳಿ ಜೊತೆ ಸತ್ತ ಕೋಳಿ ಸೇರಿಸಿ ಮಾರಾಟ

    ಬೆಂಗಳೂರು: ಮಾಂಸ ಪ್ರಿಯರೇ ನೀವು ತಿನ್ನೋ ಕೋಳಿ ಬಗ್ಗೆ ಗೊತ್ತಾದರೆ ಅಯ್ಯೋ ಇಷ್ಟು ದಿನ ಇದನ್ನ ನಾವು ತಿಂದಿದ್ದು ಎಂದು ಶಾಕ್ ಆಗುತ್ತೀರ. ಸಿಲಿಕಾನ್ ಸಿಟಿಯಲ್ಲಿ ಸತ್ತ ಕೋಳಿಗಳ ಕರಾಳ ಮಾರಾಟ ದಂಧೆ ನಡೆಯುತ್ತಿರುವ ವಿಚಾರ ಪಬ್ಲಿಕ್ ಟಿವಿ ರಹಸ್ಯ ಕಾರ್ಯಾಚರಣೆಯಲ್ಲಿ ಬಯಲಾಗಿದೆ.

    ರಾಜ್ಯ ರಾಜಧಾನಿಯ ಹಲವು ಕಡೆ ನಿಮಗೆ ಗೊತ್ತಿಲ್ಲದೆ ಸತ್ತು ಒಂದೆರಡು ದಿನ ಆಗಿರುವ ಕೋಳಿಗಳನ್ನ ಮಾರಾಟ ಮಾಡುತ್ತಿದ್ದಾರೆ. ಈ ಬಗ್ಗೆ ಮಾಹಿತಿ ಕಲೆ ಹಾಕಿದ ಪಬ್ಲಿಕ್ ಟಿವಿ ರಹಸ್ಯ ಕಾರ್ಯಚರಣೆ ನಡೆಸಿತ್ತು. ಆಗ ಈ ದಂಧೆಯ ಕರಾಳ ಮುಖ ಅನಾವರಣಗೊಂಡಿದೆ.

    ಪಬ್ಲಿಕ್ ಟಿವಿ ತಂಡ ಮೊದಲಿಗೆ ಮಾಹಿತಿಯಂತೆ ಹೆಗ್ಗನಹಳ್ಳಿಯ ಚಿಕನ್ ಸೆಂಟರ್‌ಗೆ ಹೋಗಿದ್ದು, ನಮ್ನ ಪ್ರತಿನಿಧಿ ಕಬಾಬ್ ಅಂಗಡಿ ಹೊಸದಾಗಿ ಪ್ರಾರಂಭ ಮಾಡ್ತಿದ್ದೀವಿ, ಚಿಕನ್ ಬೇಕಿತ್ತು, ಎಷ್ಟು ರೇಟ್ ಎಂದು ವಿಚಾರಿಸಿದ್ದಾರೆ. ಆಗ ಅಲ್ಲಿದ್ದ ಚಿಕನ್ ಅಂಗಡಿ ವ್ಯಾಪಾರಿ ಕೂಡಲೇ 50 ರೂಪಾಯಿ ಎಂದು ಹೇಳಿದ. ಬಳಿಕ 200 ರೂಪಾಯಿ ಆಸುಪಾಸಿನಲ್ಲಿರುವ ಚಿಕನ್ ಬೆಲೆ ಹೇಗೆ 50 ರೂಪಾಯಿಗೆ ಸಿಗುತ್ತೆ ಅಂದಾಗ ಅನುಮಾನ ಬಂದು, ವಿಚಾರವನ್ನು ಕೆದುಕುತ್ತಾ ಹೋದಾಗ ಒಂದೊಂದೆ ಸತ್ತ ಕೋಳಿ ದಂಧೆ ಬಯಲಾಯಿತು.

    ಮೊದಲಿಗೆ ಅಂಗಡಿಯವನು ಮಾಂಸ ತೆಗೆದು ಕೋಳಿ ಬಾಡಿ 50 ರೂಪಾಯಿ, ನಮಗೆ ಅದೇ ರೀತಿ ಬರುತ್ತೆ ಎಂದಿದ್ದಾನೆ. ಅಲ್ಲಿಗೆ ಈ ಸತ್ತ ಕೋಳಿ ಮಾರಾಟದ ಜಾಲ ದೊಡ್ಡದಿದೆ ಅನ್ನೊದು ಗೊತ್ತಾದ ಬಳಿಕ ಅಲ್ಲಿಂದ ನೇರವಾಗಿ ಸಿಟಿ ಮಾರುಕಟ್ಟೆಯ ಮಾಂಸದ ಅಂಗಡಿಗೆ ತಂಡ ತೆರಳಿತು.

    ಕೆ.ಆರ್ ಮಾರ್ಕೆಟಿನಲ್ಲಿರುವ ಮಾಂಸದ ಮಾರುಕಟ್ಟೆಯಿಂದ ಹಲವು ಕಡೆಗಳಿಗೆ ದೊಡ್ಡ ಮಟ್ಟದಲ್ಲಿ ಮಾಂಸ ಸರಬರಾಜಾಗುತ್ತದೆ. ಅಲ್ಲಿಯೂ ಕಬಾಬ್ ಅಂಗಡಿಗೆ ಚಿಕನ್ ಬೇಕು ಎಂದು ಕೇಳಿದಾಗ, ಅಲ್ಲಿ ಒಬ್ಬೊಬ್ಬರು ಒಂದೊಂದು ದರ ಹೇಳಿದರು. ಯಾವಾಗ ನಾವು 50 ರೂಪಾಯಿಗೆ ಚಿಕನ್ ಸಿಗುತ್ತೆ ಎಂದು ಹೇಳಿದಾಗ, ಓ ಅಲ್ಲಿ ಸಿಗುತ್ತೆ ನೋಡಿ ಎಂದು ವಿಳಾಸ ತೋರಿಸಿದರು. ಆಗ ವಿಳಾಸಕ್ಕೆ ತೆರಳಿ, ವಿಧವಿಧ ಮಾಂಸದ ತುಂಡು ಮಾಡುತ್ತಿದ್ದ ವ್ಯಕ್ತಿಯನ್ನ ಮಾತನಾಡಿಸಿದಾಗ ಆತ ನಾಜೂಕಾಗಿ ಎಲ್ಲವನ್ನೂ ಹೇಳಲು ಶುರು ಮಾಡಿದ. “40 ರೂಪಾಯಿಗೆ ಒಂದು ಕೆಜಿ ಕೋಳಿ ಮಾಂಸ ಸಿಗುತ್ತೆ. ನಾಳೆ ಬೆಳಗ್ಗೆ ಬನ್ನಿ. ನೂರಾರು ಕೆಜಿ ಸತ್ತ ಕೋಳಿಯ ಮಾಂಸಕ್ಕೆ ಬೇಡಿಕೆ ಇದೆ. ಒಂದೊಂದು ಹೋಟೆಲಿಗೂ 50-60 ಕೆಜಿ ಕೊಡುತ್ತೇವೆ” ಎಂದು ಹೇಳಿದ್ದಾನೆ.

    ಪ್ರತಿದಿನ 300, 400 ಕೆಜಿ ಬರುತ್ತೆ. ಬೋಗ್ ರಾಜ್ ಫ್ಯಾಕ್ಟರಿಯಿಂದ, ಕೋಲಾರ್ ರಸ್ತೆಯಿಂದ ಈ ಕೋಳಿಗಳು ಬರುತ್ತೆ. ಕೋಳಿ ಬಾಡಿ 40 ರೂಪಾಯಿಗೆ ಒಂದು ಕೆಜಿ ಸಿಗುತ್ತೆ. ಕಟ್ ಮಾಡಿ ತೋರಿಸ್ತೀನಿ ನೋಡಿ. ನೋಡೋಕೆ ಸತ್ತ ಹಾಗೆ ಕಾಣುತ್ತೆ ಕಟ್ ಮಾಡಿದ ಬಳಿಕ ಗೊತ್ತಾಗಲ್ಲ. ಬೇಕಿದ್ದರೆ ಈ ಮಾಂಸದ ಜೊತೆಗೆ ಸ್ವಲ್ಪ ತಾಜಾ ಮಾಂಸವನ್ನು ಮಿಕ್ಸ್ ಮಾಡಿ ಏನೂ ಗೊತ್ತಾಗಲ್ಲ. 300 ಕೆಜಿ ಏನು ಎಷ್ಟು ಬೇಕಾದರು ಮಾಂಸ ಸಿಗುತ್ತೆ ಎಂದಿರುವುದು ರಹಸ್ಯ ಕಾರ್ಯಾಚರಣೆ ವಿಡಿಯೋದಲ್ಲಿ ಸೆರೆಯಾಗಿದೆ.

    ಅಷ್ಟೇ ಅಲ್ಲದೆ ಸತ್ತ ಕೋಳಿ ಎಂದು ಜನರಿಗೆ ತಿಳಿಯುವುದಿಲ್ಲವೇ ಎಂದು ಪ್ರಶ್ನಿಸಿದಾಗ, ಏನೂ ತಿಳಿಯಲ್ಲ, ಸತ್ತ ಕೋಳಿ ಮಾಂಸದ ಜೊತೆ ತಾಜಾ ಕೋಳಿ ಮಾಂಸ ಸೇರಿಸಿ ಮಾರಾಟ ಮಾಡುತ್ತೇವೆ. ನಿಮಗೆ ಎಷ್ಟು ಕೆ.ಜಿ ಮಾಂಸವಾದರೂ ಸಿಗುತ್ತೆ. ಹೀಗೆ ಮಿಶ್ರಣ ಮಾಡಿ ಕೊಟ್ಟರೆ ಯಾರಿಗೂ ತಿಳಿಯುವುದಿಲ್ಲ. ರುಚಿಯಲ್ಲಿ ಏನು ವ್ಯತ್ಯಾಸ ಬರಲ್ಲ. ಶೇ.10 ಬೇರೆ ರೀತಿ ಅನಿಸಬಹುದು. ಅದಕ್ಕೆ ವೆನಿಗರ್ ಅಲ್ಲಿ ಚಿಕನ್ ತೊಳೆದು, ಉಪ್ಪು ಖಾರ ಚೆನ್ನಾಗಿ ಹಾಕಿದರೆ ಗೊತ್ತಾಗಲ್ಲ. ಬೆಳಗ್ಗೆ ಬಂದು ನೋಡಿ ಒಬ್ಬೊಬ್ರು 50ರಿಂದ 60 ಕೆಜಿ ಸತ್ತ ಕೋಳಿ ಮಾಂಸ ತೆಗೆದುಕೊಂಡು ಹೋಗುತ್ತಾರೆ ಎಂದು ಸತ್ಯಾಂಶ ಬಾಯಿಬಿಟ್ಟಿದ್ದಾನೆ.

    ಯಾವ ಭಯವೂ ಇಲ್ಲದೇ ನಮಗೆ ಮಾರಾಟ ಆಗಬೇಕಷ್ಟೇ ಎಂದು ವ್ಯಾಪಾರಿಗಳು, ದಂಧೆ ನಡೆಸುವವರು ಸತ್ತು ಒಂದೆರಡು ದಿನ ಆದ ಕೋಳಿಗಳನ್ನ ಮಾರಾಟ ಮಾಡುತ್ತಿದ್ದಾರೆ. ಇನ್ನು ಅಂಗಡಿಯವರು ಕಡಿಮೆ ಹಣಕ್ಕೆ ಕೋಳಿ ಸಿಗುತ್ತೆ ಅಂತ ತಂದು ಮಾರುತ್ತಾರೆ. ಕೂಡಲೇ ಆರೋಗ್ಯ ಸಚಿವರು ಈ ಬಗ್ಗೆ ಗಮನಹರಿಸಿ, ಈ ರೀತಿ ಜನರ ಆರೋಗ್ಯಕ್ಕೆ ಮಾರಕವಾಗುವವರ ವಿರುದ್ಧ ಕ್ರಮ ಕೈಗೊಳ್ಳಬೇಕಿದೆ.

    https://www.youtube.com/watch?v=ru7PDerT2bM

  • ಬಿಎಸ್ಸಿ ಓದಿ ಡಾಕ್ಟರ್ ಆಗಾವ್ನೆ: ಇವ್ನ ಹತ್ರ ಸೂಜಿ ಚುಚ್ಚುಸ್ಕೊಂಡೋರು ಒಮ್ಮೆ ಈ ವಿಡಿಯೋ ನೋಡಿ

    ಬಿಎಸ್ಸಿ ಓದಿ ಡಾಕ್ಟರ್ ಆಗಾವ್ನೆ: ಇವ್ನ ಹತ್ರ ಸೂಜಿ ಚುಚ್ಚುಸ್ಕೊಂಡೋರು ಒಮ್ಮೆ ಈ ವಿಡಿಯೋ ನೋಡಿ

    ಮಾರುತೇಶ್ ಹುಣಸನಹಳ್ಳಿ
    ಬೆಂಗಳೂರು: ನಗರದಾದ್ಯಂತ ನಕಲಿ ವೈದ್ಯರುಗಳ ಹಾವಳಿ ದಿನೇ ದಿನೇ ಹೆಚ್ಚುತ್ತಿದ್ದು, ಇಲ್ಲೊಬ್ಬ ಆಸಾಮಿ ಬಿಎಸ್ಸಿ ಮಾಡಿಕೊಂಡು ಡಾಕ್ಟರ್ ಆಗಿ ವೈದ್ಯಕೀಯ ಸೇವೆ ನೀಡುತ್ತಿದ್ದಾನೆ.

    ಈತ ಓದಿರೋದು ಬಿಎಸ್ಸಿ, ಮಾಡ್ತಿರೋದು ಡಾಕ್ಟರ್ ಕೆಲಸ, ಯಾವ ಎಂಬಿಬಿಎಸ್ ಓದಿರುವ ವೈದ್ಯರಿಗಿಂತ ಕಮ್ಮಿ ಇಲ್ಲದೆ ಈ ನಕಲಿ ವೈದ್ಯ ಚಿಕಿತ್ಸೆ ನೀಡುತ್ತಿದ್ದ. ಪಬ್ಲಿಕ್ ಟಿವಿ ನಡೆಸಿದ ರಹಸ್ಯ ಕಾರ್ಯಾಚರಣೆಯಲ್ಲಿ ನಕಲಿ ವೈದ್ಯನ ಬಂಡವಾಳ ಬಟಾಬಯಲಾಗಿದೆ.

    ಕೃಷ್ಣ ಅಲಿಯಾಸ್ ಡಾಕ್ಟರ್ ಕೃಷ್ಣ ಎಂಬಾತನೇ ನಕಲಿ ವೈದ್ಯ. ಈತ ನಗರದ ಕುರುಬರಹಳ್ಳಿ ಸರ್ಕಲ್ ಬಳಿ ಕೃಷ್ಣಾ ಕ್ಲಿನಿಕ್ ಅನ್ನು ನಡೆಸಿಕೊಂಡು ಬರುತ್ತಿದ್ದಾನೆ. ತನ್ನ ತಂದೆ ಡಾ. ಗೋಪಾಲ್ ಅವರ ಪ್ರಮಾಣಪತ್ರಗಳನ್ನು ಬಳಸಿ, ತಾನೇ ವೈದ್ಯನೆಂದು ಅಮಾಯಕ ಜನರಿಗೆ ಚಿಕಿತ್ಸೆ ನೀಡುತ್ತಿದ್ದಾನೆ. ಅಲ್ಲದೇ ಜನರಿಗೆ ಇಂಜೆಕ್ಷನ್ ಹಾಗೂ ಮಾತ್ರೆಗಳನ್ನು ಬರೆದುಕೊಡುತ್ತಿದ್ದಾನೆ.

    ರಹಸ್ಯ ಕಾರ್ಯಾಚರಣೆಯಲ್ಲಿ ಬಯಲಾದ ನಕಲಿ ವೈದ್ಯನ ಅಸಲಿಯತ್ತು ನೋಡಿ:

    ಸ್ಟಿಂಗ್ ಆಪರೇಷನ್ – 1

    ಪಬ್ಲಿಕ್ ಟಿವಿ: ನಿಮ್ದು ಏನ್ ಸರ್ ಕ್ವಾಲಿಫಿಕೇಷನ್..?
    ನಕಲಿ ವೈದ್ಯ ಕೃಷ್ಣ: ನಂದು ಬಿಎಸ್ಸಿ ಆಗಿದೆ.
    ಪಬ್ಲಿಕ್ ಟಿವಿ: ಮತ್ತೆ ನೀವು ಟ್ರೀಟ್‍ಮೆಂಟ್ ಮಾಡಬಹುದಾ..? ಇಂಜೆಕ್ಷನ್ ಕೊಡಬಹುದಾ..?
    ನಕಲಿ ವೈದ್ಯ ಕೃಷ್ಣ: ಅವ್ರು ಹೇಳಿದ್ರು ಕೊಡ್ತೀನಿ.
    ಪಬ್ಲಿಕ್ ಟಿವಿ: ನೀವು ಸರ್ಟಿಫೈಡ್ ಆಗಿದ್ದೀರಾ..? ಇಲ್ಲಾ ಟ್ರೈನಿಂಗ್ ಏನಾದರೂ ಮಾಡಿದ್ದೀರಾ..?
    ನಕಲಿ ವೈದ್ಯ ಕೃಷ್ಣ: ಒಂದು ಆರ್‍ಎಂಸಿ ಸರ್ಟಿಫಿಕೇಟ್ ಇದೆ.
    ಪಬ್ಲಿಕ್ ಟಿವಿ: ನರ್ಸಿಂಗ್ ಟ್ರೈನಿಂಗ್ ಏನಾದ್ರೂ ಆಗಿದ್ಯಾ..?
    ನಕಲಿ ವೈದ್ಯ ಕೃಷ್ಣ: ಆ ತರಹ ಏನೂ ಇಲ್ಲ.
    ಪಬ್ಲಿಕ್ ಟಿವಿ: ನಾವು ಎಂತೆಂಥಾ ಡಾಕ್ಟರ್‍ಗಳನ್ನು ತೋರಿಸಿರ್ತೀವಿ ನಿಮಗೆ ಗೊತ್ತಲ್ವಾ..? ಫೇಕ್ ಡಾಕ್ಟರ್ಸ್ ಹೆಂಗೆಗೆ ಟ್ರೀಟ್ ಮಾಡ್ತಾರೆ ಅಂತ..?
    ನಕಲಿ ವೈದ್ಯ ಕೃಷ್ಣ: ನಾವು ಟ್ರೀಟ್ ಮಾಡಿಲ್ಲ. ಅವ್ರು ಹೇಳಿದ್ದನ್ನ ನಾವ್ ಮಾಡಿದ್ದೀವಿ (ಅಪ್ಪ ಹೇಳಿದ್ದನ್ನು)
    ಪಬ್ಲಿಕ್ ಟಿವಿ: ಅದು ತಪ್ಪಲ್ವಾ..?
    ನಕಲಿ ವೈದ್ಯ ಕೃಷ್ಣ: ಅವ್ರು ಹೇಳಿದ್ದನ್ನ ನಾನ್ ಮಾಡಿದ್ದೀನಿ. ಅವ್ರು ಗೈಡ್ ಮಾಡುತ್ತಾರೆ. ನಾನು ಮಾಡಿದ್ದೀನಿ.
    ಪಬ್ಲಿಕ್ ಟಿವಿ: ಅವ್ರು ಇವತ್ತ್ ಬಂದಿದ್ದಾರೆ, ನಾವು ಬರ್ತೀವಿ ಅಂತ ಅವ್ರನ್ನ ಕರೆಸಿದ್ದೀರೇನೋ ಗೊತ್ತಿಲ್ಲ.
    ನಕಲಿ ವೈದ್ಯ ಕೃಷ್ಣ: ಇಲ್ಲ.. ಇಲ್ಲ..
    ಪಬ್ಲಿಕ್ ಟಿವಿ: ನಮ್ಗೆ ಗೊತ್ತು ನೀವೇ ಇಂಜೆಕ್ಷನ್ ಕೊಡ್ತೀರಾ, ಚೀಟಿ ಬರೆಯೋದು ನೀವೇ.

    ಸ್ಟಿಂಗ್ ಆಪರೇಷನ್ – 2

    ಪಬ್ಲಿಕ್ ಟಿವಿ: ಇದು ಸಿಕ್ಕಾಪಟ್ಟೆ ನೋವು, ಎರಡೂ ಕಾಲಲ್ಲೂ.. ನಡೆಯೋಕೆ ಆಗಲ್ಲ ಸರ್.
    ನಕಲಿ ವೈದ್ಯ ಕೃಷ್ಣ: ತೆಗೆಸಿದ್ದೀನಿ ಅಂತೀರಾ, ಅದೇನ್ ಹಂಗೆ ಇದ್ಯಲ್ಲ.
    ಪಬ್ಲಿಕ್ ಟಿವಿ: ಊರಿಂದ ಬಂದ್ನಲ್ಲ ಅದ್ಕೆ.
    ನಕಲಿ ವೈದ್ಯ ಕೃಷ್ಣ: ಎಲ್ಲಿ ಯಾವ ಊರು?
    ಪಬ್ಲಿಕ್ ಟಿವಿ: ತುಮಕೂರು
    ನಕಲಿ ವೈದ್ಯ ಕೃಷ್ಣ: ತೆಗೆಸಿರೋದು ಸರಿ, ಏನ್ ತೆಗೆದಿದ್ದಾರೆ ಅವ್ರು? ಎಲ್ಲ ಹಂಗೆ ಇದೆಯಲ್ಲ. ಏನ್ ತೆಗೆದಿದ್ದಾರೆ..? ತೆಗೆಯೋದು ಅಂದ್ರೆ ಏನ್ ಗೊತ್ತಾ..? ಇಂಜೆಕ್ಷನ್ ಕೊಟ್ಟು ಅಷ್ಟು ಕಟ್ ಮಾಡಿ ತೆಗೀಬೇಕು. ಅಲ್ನೋಡಿ ಹೆಂಗಿದೆ ಅದು.
    ಪಬ್ಲಿಕ್ ಟಿವಿ: ಹೂಂ..
    ನಕಲಿ ವೈದ್ಯ ಕೃಷ್ಣ: ನೋವಿಗೆ ಬೇಕಾದ್ರೆ ಇಂಜೆಕ್ಷನ್ ಕೊಡಬಹುದು. ಈ ಬ್ಯಾಂಡೆಂಡ್ ತರಹ ಬರುತ್ತೆ. ಅದನ್ನ ಹಚ್ಚಿ. ಮೂರು ದಿನಕ್ಕೆ ಒಂದ್ಸಾರಿ ಚೇಂಜ್ ಮಾಡ್ತಾ ಇರಿ. ಅದು ಮೆತ್ತಗಾಗಿ ಉದುರಿ ಹೋಗುತ್ತೆ. ಅಲ್ಲಿ ತನಕ ಚೇಂಜ್ ಮಾಡಬೇಕು. 15 ಆಗಬಹುದು. 20 ಆಗಬಹುದು. ನೋವಿಗೆ ಬೇಕಿದ್ರೆ ನಾನು ಇಂಜೆಕ್ಷನ್ ಕೊಡ್ತೀನಿ.
    ಪಬ್ಲಿಕ್ ಟಿವಿ: ನೋವು ಸಿಕ್ಕಾಪಟ್ಟೆ ಇದೆ.
    ನಕಲಿ ವೈದ್ಯ ಕೃಷ್ಣ: ನೋವಿಗೆ ಮಾತ್ರೆ ಎಲ್ಲಾ ಆಗಲ್ಲ. ಇಂಜೆಕ್ಷನ್ ಕೊಡ್ತೀನಿ.
    ಪಬ್ಲಿಕ್ ಟಿವಿ: ಇಂಜೆಕ್ಷನ್ ಎಲ್ಲಾ ಬೇಡ ಸರ್. ಮಾತ್ರೆ ಕೊಡಿ ಸಾಕು.
    ನಕಲಿ ವೈದ್ಯ ಕೃಷ್ಣ: ಬೆಳಗ್ಗೆ ಒಂದು, ರಾತ್ರಿ ಒಂದು ಮಾತ್ರೆ ನೋವಿಗೆ, 50 ರೂಪಾಯಿ ಚೇಂಜ್ ಕೊಡಿ. ಮೆಡಿಸಿನ್ ತಗೊಂಡು ಬಂದು ಕೊಡಿ.

    ಈತನ ವಿರುದ್ಧ ರಹಸ್ಯ ಕಾರ್ಯಾಚರಣೆಗಿಳಿದ, ನಮ್ಮ ಕ್ಯಾಮೆರಾಮೆನ್ ಒಬ್ಬರು ಈತನ ಬಳಿಗೆ ಚಿಕಿತ್ಸೆಗೆಂದು ಹೋದರು. ಈ ಮೊದಲು ಅವರು 28 ಸಾವಿರ ಖರ್ಚು ಮಾಡಿ ಪಾದದ ಗೆಡ್ಡೆ ತೆಗೆಸಿಕೊಂಡಿದ್ದರು. ಇದನ್ನು ಪರೀಕ್ಷಿಸಿದ ನಕಲಿ ವೈದ್ಯ ಕೃಷ್ಣ ಸರಿಯಾಗಿ ಆಪರೇಷನ್ ಮಾಡಿಲ್ಲ, ಮತ್ತೆ ಇದನ್ನು ಕಟ್ ಮಾಡ್ಬೇಕು ಅಂತ ಹೇಳಿದ, ಅಲ್ಲದೇ ನೋವಿಗೆ ಇಂಜೆಕ್ಷನ್ ಕೊಡ್ತೀನಿ, ಅಂಥ ಸಿರಿಂಜ್ ತೆಗೆದುಕೊಳ್ಳಲು ಮುಂದಾದ, ಆಗ ಈತನ ಸಹವಾಸ ಬೇಡ ಅಂತ ಕೇವಲ ಮಾತ್ರೆ ಬರೆದುಕೊಡಿ ಸಾಕು ಅಂದ್ವಿ, ಅಲ್ಲದೇ ಬೇರೆ ವೈದ್ಯರ ಸಲಹೆಯನ್ನೂ ಈತನೇ ಬರೆದು ಕೊಡುತ್ತಾನೆ. ನಕಲಿ ವೈದ್ಯನು ಎಲ್ಲದಕ್ಕೂ ಸ್ಟಿರಾಯ್ಡ್ ಕೊಡುತ್ತಾನೆ ಎನ್ನುವ ಆರೋಪವು ಇವನ ಮೇಲಿದೆ. ಈ ಕುರಿತು ಆರೋಗ್ಯ ಸಚಿವರಾದ ಶಿವಾನಂದ ಪಾಟೀಲರು ಈತನ ವಿರುದ್ಧ ಕ್ರಮ ತೆಗೆದುಕೊಳ್ತಾರಾ ಎಂಬುದನ್ನು ಕಾದು ನೋಡಬೇಕಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಹಳ್ಳ ಹಿಡಿದ ಸುವರ್ಣ ಆರೋಗ್ಯ ಕರ್ನಾಟಕ ಸ್ಕೀಂ: ಪಬ್ಲಿಕ್ ಸ್ಟಿಂಗ್‍ನಲ್ಲಿ ಬಯಲಾಯ್ತು ಆಸ್ಪತ್ರೆಗಳ ಬಂಡವಾಳ!- ವಿಡಿಯೋ ನೋಡಿ

    ಹಳ್ಳ ಹಿಡಿದ ಸುವರ್ಣ ಆರೋಗ್ಯ ಕರ್ನಾಟಕ ಸ್ಕೀಂ: ಪಬ್ಲಿಕ್ ಸ್ಟಿಂಗ್‍ನಲ್ಲಿ ಬಯಲಾಯ್ತು ಆಸ್ಪತ್ರೆಗಳ ಬಂಡವಾಳ!- ವಿಡಿಯೋ ನೋಡಿ

    ಪವಿತ್ರ ಕಡ್ತಲ
    ಬೆಂಗಳೂರು: ಇತ್ತೀಚೆಗೆ ಸಮ್ಮಿಶ್ರ ಸರ್ಕಾರ ಬಡವರಿಗಾಗಿಯೇ ಜಾರಿಗೊಳಿಸಿದ್ದ ಸುವರ್ಣ ಆರೋಗ್ಯ ಕರ್ನಾಟಕ ಯೋಜನೆಯು ಹಳ್ಳ ಹಿಡಿದಿದ್ದು, ಬಡವರಿಗೆ ನೀಡಬೇಕಾಗಿದ್ದ ಉಚಿತ ಸೇವೆಗಳು ಎಲ್ಲಾ ಖಾಸಗಿ ಆಸ್ಪತ್ರೆಗಳಲ್ಲಿ ಹೇಳ ಹೆಸರಿಲ್ಲದೇ ಕಣ್ಮರೆಯಾಗಿದೆ.

    ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಜಾರಿಗೆ ತಂದಿದ್ದ ಸುವರ್ಣ ಆರೋಗ್ಯ ಕರ್ನಾಟಕ ಯೋಜನೆಯು ಹೇಗೆ ಜನರ ಆರೋಗ್ಯವನ್ನು ಕಸಿದುಕೊಂಡಿದೆ ಎನ್ನುವುದು ಪಬ್ಲಿಕ್ ಟಿವಿಯ ರಹಸ್ಯ ಕಾರ್ಯಾಚರಣೆಯಲ್ಲಿ ಬಯಲಾಗಿದೆ.

    ಹೌದು, ಕಾಯಿಲೆಗಳು ಬಡತನ ಸಿರಿತನ ನೋಡದೇ ಎಲ್ಲರಿಗೂ ಬರುತ್ತವೆ. ಈ ಹಿಂದೆ ಕರ್ನಾಟಕದಲ್ಲಿ ಬಡಜನರಿಗೆ ಖಾಸಗಿ ಆಸ್ಪತ್ರೆಯಲ್ಲಿಯೂ ಉಚಿತವಾಗಿ ವೈದ್ಯಕೀಯ ಸೌಲಭ್ಯ ಪಡೆಯುವುದಕ್ಕೆ ಏಳು ಯೋಜನೆಗಳು ಜಾರಿಯಲ್ಲಿತ್ತು. ಆದರೆ ನೂತನವಾಗಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಹಾಗೂ ಜೆಡಿಎಸ್ ಸಮ್ಮಿಶ್ರ ಸರ್ಕಾರವು ನಾಲ್ಕು ತಿಂಗಳ ಹಿಂದೆ ಎಲ್ಲವನ್ನು ವಿಲೀನ ಮಾಡಿ ಸುವರ್ಣ ಆರೋಗ್ಯ ಕರ್ನಾಟಕ ಎಂಬ ಯೋಜನೆಯನ್ನು ಜಾರಿತಂದಿತ್ತು.

    ಈ ಯೋಜನೆಯಲ್ಲಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ದೊರೆಯದೇ ಇದ್ದಾಗ, ಖಾಸಗಿ ಆಸ್ಪತ್ರೆಗೆ ಹೋಗಬಹುದಾಗಿತ್ತು. ಅಲ್ಲದೇ ತುರ್ತು ಪರಿಸ್ಥಿತಿಯಲ್ಲಿ ಖಾಸಗಿ ಆಸ್ಪತ್ರೆಗೆ ನೇರವಾಗಿ ಹೋಗಬಹುದೆಂದು ನಿಯಾಮಳಿಯನ್ನು ಸಿದ್ದಪಡಿಸಿತ್ತು. ಬಿಪಿಎಲ್ ಕಾರ್ಡ್ ಬಳಕೆದಾರರಿಗೆ ಸಂಪೂರ್ಣ ಉಚಿತ ಹಾಗೂ ಎಪಿಎಲ್ ಕಾರ್ಡುದಾರರು ಆಸ್ಪತ್ರೆಯ ಶುಲ್ಕದ 30%ರಷ್ಟು ಮಾತ್ರ ಪಾವತಿಸಬೇಕು ಎಂದು ಯೋಜನೆ ತಿಳಿಸಿತ್ತು.

    ಇಂತಹ ಯೋಜನೆಗಳನ್ನು ಮುಖ್ಯಮಂತ್ರಿ ಹಾಗೂ ಆರೋಗ್ಯ ಸಚಿವರ ಭಾಷಣಗಳಲ್ಲಿ ಕೇಳಲು ಚಂದವೆನಿಸುತ್ತಿದೆ. ಆದರೆ ಈ ಯೋಜನೆಯ ಕುರಿತು ಪಬ್ಲಿಕ್ ಟಿವಿ ರಹಸ್ಯ ಕಾರ್ಯಾಚರಣೆ ನಡೆಸಿದಾಗ ಇದರ ಅಸಲಿ ಮುಖ ಹೊರಬಿದ್ದಿದೆ. ಸಮ್ಮಿಶ್ರ ಸರ್ಕಾರವು ಜನರಿಗೆ ಕೊಟ್ಟ ಹಸಿ ಹಸಿ ಭರವಸೆಯು ಕಾರ್ಯಾಚರಣೆಯಲ್ಲಿ ಹುಸಿಯಾಗಿದೆ. ಇಂತಹ ಆರೋಗ್ಯ ಯೋಜನೆಗಳನ್ನು ನಂಬಿಕೊಂಡು ಆಸ್ಪತ್ರೆಗಳಿಗೆ ಬಡವರು ಹೋದರೆ ಅವರಿಗೆ ಕಷ್ಟ ಗ್ಯಾರಂಟಿ.

    ಪಬ್ಲಿಕ್ ಟಿವಿ ನಡೆಸಿದ ರಹಸ್ಯ ಕಾರ್ಯಾಚರಣೆಯಲ್ಲಿ ಆಸ್ಪತ್ರೆಗಳು ಯೋಜನೆಯ ಬಗ್ಗೆ ಏನು ಹೇಳಿದವು ಎಂಬುದನ್ನು ನೋಡಿ:

    ಸ್ಟಿಂಗ್ ಆಪರೇಷನ್ – 1
    ಸ್ಥಳ : ಪ್ರಸಿದ್ಧ ಖಾಸಗಿ ಆಸ್ಪತ್ರೆ, ಹೆಬ್ಬಾಳ.

    ಪ್ರತಿನಿಧಿ : ಸುವರ್ಣ ಆರೋಗ್ಯ ಕರ್ನಾಟಕ ಸ್ಕಿಂ ಇದ್ಯಾ?
    ಆಸ್ಪತ್ರೆಯವರು: ಕಾರ್ಡ್ ಇದ್ಯಾ?
    ಪ್ರತಿನಿಧಿ : ಇಲ್ಲಿ ಅಪ್ಲೈ ಆಗುತ್ತಾ?
    ಆಸ್ಪತ್ರೆಯವರು: ನಮ್ಮಲ್ಲಿ ಅಪ್ಲೈ ಆಗಲ್ಲ, ಈಗ ಯಾವ ಸರ್ಕಾರಿ ಸ್ಕೀಂ ಇಲ್ಲ. ಕಾರ್ಡ್ ಇದ್ರೆ 20 ಪರ್ಸೆಂಟ್ ಡಿಸ್ಕೌಂಟ್ ಸಿಗುತ್ತೆ ಅಷ್ಟೇ.
    ಪ್ರತಿನಿಧಿ : ಎಮರ್‌ಜೆನ್ಸಿನಲ್ಲಿ ಫ್ರೀಯಾಗಿ ಸಿಗುತ್ತಲ್ಲ, ಆರೋಗ್ಯ ಕರ್ನಾಟಕ ಸ್ಕಿಂ!
    ಆಸ್ಪತ್ರೆಯವರು: ಆ ಥರ ಯಾವುದು ಇಲ್ಲ. ರಾಷ್ಟ್ರೀಯ ಸುರಕ್ಷಾ ಭೀಮಾ ಯೋಜನೆ, ಯಶಸ್ವಿನಿ ಕಾರ್ಡ್ ಇರುತ್ತಲ್ಲ ಆ ಕಾರ್ಡ್ ಇರಬೇಕು, ಆದ್ರೇ ಆ ಸ್ಕೀಂ ನಮ್ಮಲ್ಲಿ ಇಲ್ಲ. ಒನ್ಲಿ 20 ಪರ್ಸೆಂಟ್ ಅಷ್ಟೇ ಡಿಸ್ಕೌಂಟ್ ಸಿಗೋದು.
    ಪ್ರತಿನಿಧಿ : ಓ….. ಫುಲ್ ಫ್ರೀ ಇರಲ್ವಾ?
    ಆಸ್ಪತ್ರೆಯವರು: ಅಷ್ಟೆಲ್ಲಾ ಇಲ್ಲ, ನಮ್ಮಲ್ಲಿ ಯಾವ ಸರ್ಕಾರಿ ಸ್ಕಿಂ ಇಲ್ಲ, ನಾವು ಸರ್ಕಾರದ ಜೊತೆ ಎಂಒಯು(ಸರ್ಕಾರದ ಜೊತೆ ಒಡಂಬಡಿಕೆ) ಸಹಿ ಹಾಕಿಲ್ಲ, ಸಹಿ ಹಾಕಿದ ಆಸ್ಪತ್ರೆಯಲ್ಲಿ ಮಾತ್ರ ನಿಮ್ಗೆ ಈ ಬೆನಿಫಿಟ್ ಸಿಗುತ್ತೆ.

    ಸ್ಟಿಂಗ್ ಆಪರೇಷನ್ – 2
    ಸ್ಥಳ – ಖಾಸಗಿ ಆಸ್ಪತ್ರೆ, ಸಂಪಿಗೆ ರಸ್ತೆ, ಮಲ್ಲೇಶ್ವರಂ.

    ಪ್ರತಿನಿಧಿ : ಸುವರ್ಣ ಆರೋಗ್ಯ ಕರ್ನಾಟಕ ಇದ್ಯಾ?
    ಆಸ್ಪತ್ರೆಯವರು: ಹಾ….ಯಾವುದು?
    ಪ್ರತಿನಿಧಿ : ಸುವರ್ಣ ಆರೋಗ್ಯ ಕರ್ನಾಟಕ, ಗೌವರ್ನಮೆಂಟ್ ಹೆಲ್ತ್ ಸ್ಕೀಂ?
    ಆಸ್ಪತ್ರೆಯವರು: ಇಲ್ಲಿ ಯಾವುದೇ ಸರ್ಕಾರಿ ಸ್ಕೀಂ ಇಲ್ಲ. ಆರೋಗ್ಯ ಕರ್ನಾಟಕ ಇಲ್ಲ. ಅನೌನ್ಸ್ ಆಗಿಲ್ಲ ನಮ್ಮಲ್ಲಿ ಇನ್ನು.
    ಪ್ರತಿನಿಧಿ : ಎಮರ್‌ಜೆನ್ಸಿಗೂ ಸಿಗಲ್ವಾ?
    ಆಸ್ಪತ್ರೆಯವರು: ಇಲ್ಲ.

    ಸ್ಟಿಂಗ್ ಆಪರೇಷನ್ – 3
    ಸ್ಥಳ: ಖಾಸಗಿ ಆಸ್ಪತ್ರೆ, ಮಲ್ಲೇಶ್ವರಂ.

    ಪ್ರತಿನಿಧಿ : ಮೇಡಂ ಆರೋಗ್ಯ ಕರ್ನಾಟಕ ಸ್ಕೀಂ ಇದ್ಯಯಲ್ಲ ಇಲ್ಲಿ?
    ಸಿಬ್ಬಂದಿ : ಇಲ್ಲ. ಸರ್ಕಾರಿ ಸ್ಕೀಂ ಯಾವುದೂ ಇಲ್ಲ.
    ಪ್ರತಿನಿಧಿ : ಎಮರ್‌ಜೆನ್ಸಿನಲ್ಲೂ ಸರ್ಕಾರಿ ಹೆಲ್ತ್ ಸ್ಕೀಂ ಅಪ್ಲಿಕೇಬಲ್ ಆಗಲ್ವಾ?
    ಸಿಬ್ಬಂದಿ : ಇಲ್ಲಿ ಹೆಲ್ತ್ ಸ್ಕೀಂ ಇಲ್ವೇ ಇಲ್ಲ.

    ಸಾಕಷ್ಟು ಬ್ರಾಂಚ್ ಹೊಂದಿರುವ ಈ ಖಾಸಗಿ ಆಸ್ಪತ್ರೆಗಳ ಜೊತೆ ಸರ್ಕಾರ ಆರೋಗ್ಯ ಕರ್ನಾಟಕ ಸೇವೆ ನೀಡೋದಕ್ಕೆ ಇನ್ನು ಒಪ್ಪಂದಕ್ಕೆ ಮುಂದಾಗಿಲ್ಲ, ಅಥವಾ ಮನವೊಲಿಸುವ ಕೆಲಸವನ್ನು ಮಾಡಿಲ್ಲ. ಇನ್ನು ಆರೋಗ್ಯ ಕರ್ನಾಟಕದ ವೆಬ್‍ಸೈಟ್‍ನಲ್ಲಿ ಸೇವೆ ಲಭ್ಯವಿರುವ ಮಾರ್ಗೋಸಾ ರಸ್ತೆಯ ಖಾಸಗಿ ಆಸ್ಪತ್ರೆಯಲ್ಲಿ ವಿಚಾರಿಸಿದರೆ ಅಲ್ಲಿನ ಸಿಬ್ಬಂದಿ ನೀಡಿದ ಉತ್ತರ ನಮ್ಮನ್ನೆ ದಂಗಾಗಿಸಿತ್ತು.

    ಸ್ಟಿಂಗ್ ಆಪರೇಷನ್ – 4
    ಸ್ಥಳ : ಖಾಸಗಿ ಆಸ್ಪತ್ರೆ, ಮಾರ್ಗೋಸಾ ರಸ್ತೆ, ಮಲ್ಲೇಶ್ವರಂ

    ಪ್ರತಿನಿಧಿ : ಆರೋಗ್ಯ ಕರ್ನಾಟಕ ಸ್ಕೀಂ ಇದ್ಯಾ ಇಲ್ಲಿ?
    ಸಿಬ್ಬಂದಿ : ಇಲ್ಲ…ಇಲ್ಲಿ.
    ಪ್ರತಿನಿಧಿ : ಆದ್ರೇ ಲಿಸ್ಟ್ ನಲ್ಲಿ ತೋರಿಸ್ತಾ ಇದೆ ನಿಮ್ಮ ಆಸ್ಪತ್ರೆ.
    ಸಿಬ್ಬಂದಿ : ಹಾ…ಇದೆ, ಆದ್ರೆ ಸದ್ಯಕ್ಕೆ ಸಿಗ್ತಿಲ್ಲ, ಹೊಸದು ಆರೋಗ್ಯ ಕರ್ನಾಟಕ ಅಲ್ವಾ? ಅದು ಪೋರ್ಟಲ್‍ನಲ್ಲಿ ಏನೋ ಪ್ರಾಬ್ಲಂ ಆಗ್ತಿದೆ. ಅದಕ್ಕೆ ಈ ಸ್ಕೀಂ ನಿಲ್ಲಿಸಿದ್ವಿ. ಯಾವುದು ತಗೋತಾ ಇಲ್ಲ, ಇಲ್ಲಿ ಪ್ರೈವೇಟ್ ಇನ್ಶೂರೆನ್ಸ್ ಇದೆ ನೋಡಿ ನಮ್ಮದೇ.
    ಪ್ರತಿನಿಧಿ : ಅದು ನಿಮ್ಮ ಆಸ್ಪತ್ರೆದು ಅಲ್ವಾ
    ಸಿಬ್ಬಂದಿ : ಹಾ ಹೌದು, ಆರೋಗ್ಯ ಕರ್ನಾಟಕ ಪ್ರಾಬ್ಲಂ ಆಗಿದೆ ತಗೋತಾ ಇಲ್ಲ
    ಪ್ರತಿನಿಧಿ : ಯಾವಾಗ ಆಗಬಹುದು?
    ಸಿಬ್ಬಂದಿ : ಗೊತ್ತಿಲ್ಲ ಜೂನ್‍ನಿಂದಲೇ ಪ್ರಾಬ್ಲಂ ಆಗಿದೆ.


    ಸ್ಟಿಂಗ್ ಆಪರೇಷನ್ – 5
    ಸ್ಥಳ : ಆರೋಗ್ಯ ಕರ್ನಾಟಕ ಕಾರ್ಡ್ ವಿತರಣಾ ಕೇಂದ್ರ, ಸಂಪಿಗೆ ರೋಡ್, ಮಲ್ಲೇಶ್ವರಂ

    ಪ್ರತಿನಿಧಿ : ಆರೋಗ್ಯ ಕರ್ನಾಟಕ ಕಾರ್ಡ್ ಇಷ್ಯೂ ಇಲ್ಲೇ ಅಲ್ವಾ ಮಾಡೋದು?
    ಸಿಬ್ಬಂದಿ : ಹಾ ಹೌದು, ಆದ್ರೇ ಈಗ ಕ್ಲೋಸ್ ಆಗಿದೆ.
    ಪ್ರತಿನಿಧಿ : ಕ್ಲೋಸ್ ಆಗಿದ್ಯಾ? ಅಷ್ಟು ಬೇಗ?
    ಸಿಬ್ಬಂದಿ : ಮುಗಿದಿದೆ, ಬೆಳಗ್ಗೆ ಬನ್ನಿ ಟೋಕನ್ ಇಷ್ಯೂ ಮಾಡ್ತಾರೆ. ನೂರು ಜನ್ರಿಗೆ ಅಷ್ಟೇ ಮಾಡಿಕೊಡೋದು.
    ಪ್ರತಿನಿಧಿ : ಆಗಿದ್ಯಾ ಈಗ ನೂರು ಕಾರ್ಡ್.
    ಸಿಬ್ಬಂದಿ : ಹಾ ಆಗಿದೆ, ಬೇರೆ ದಿನ ಇನ್ನೂರು ಮಾಡ್ತೀವಿ, ಇವತ್ತು ನೂರು ಕಾರ್ಡ್ ಅಷ್ಟೇ ನಾಳೆ ಬನ್ನಿ

    ಸೆಂಟರ್ ತೆರೆದು ಎರಡು ಗಂಟೆ ಕೂಡ ಆಗಿಲ್ಲ, ಆಗಲೇ ನೂರು ಕಾರ್ಡ್ ವಿತರಿಸಿದ್ದೇವೆ ಎಂದು ಬಂಡಲ್ ಬಿಟ್ಟ ಅಲ್ಲಿನ ಸಿಬ್ಬಂದಿ ಕಿವಿಗೆ ಇಯರ್ ಫೋನ್ ಸಿಗಿಸಿಕೊಂಡು ಸಾಂಗ್ ಕೇಳೋದ್ರಲ್ಲಿ ಬ್ಯೂಸಿಯಾಗಿದ್ದ. ನಮ್ಮ ಮುಂದಿನ ಮಾತನ್ನು ಕೇಳುವಷ್ಟು ತಾಳ್ಮೆ ಆತನಿಗೆ ಇರಲಿಲ್ಲ.

    ನೋಡಿ ಇದು ಆರೋಗ್ಯ ಕರ್ನಾಟಕದ ಅಸಲಿ ಹಣೆಬರಹ. ರಾಜ್ಯದ ಜನರಿಗೆ ಕೇಂದ್ರದ ಆಯುಷ್ಮಾನ್ ಭಾರತವನ್ನು ರಾಜ್ಯ ಸರ್ಕಾರ ತಪ್ಪಿಸಿದೆ. ಇತ್ತ ಆರೋಗ್ಯ ಕರ್ನಾಟಕವೂ ರಾಜ್ಯದ ಜನರ ಪಾಲಿಗೆ ದಕ್ಕುತ್ತಿಲ್ಲ. ವಿಧಾನಸೌಧದಲ್ಲಿ ಕೂತು ಎಲ್ಲ ಸರಿಯಿದೆ ಅಂತಾ ಬಡಾಯಿ ಕೊಚ್ಚಿಕೊಳ್ಳುವ ಆರೋಗ್ಯ ಸಚಿವರು ಕೂಡಲೇ ಫೀಲ್ಡಿಗಿಳಿದು ಪರಿಶೀಲನೆಗೆ ಬರಬೇಕು. ಆಗಲೇ ನಿಮಗೆ ಅಸಲಿ ಸತ್ಯ ಗೊತ್ತಾಗುತ್ತೆ. ಇಲ್ಲದೇ ಹೋದರೆ ಬಡವರ ಆರೋಗ್ಯ ಭಾಗ್ಯ ಕಸಿದುಕೊಳ್ಳುವ ಶಾಪ ನಿಮಗೆ ತಟ್ಟುತ್ತದೆ. ದಯವಿಟ್ಟು ಆರೋಗ್ಯ ವಿಚಾರದಲ್ಲಿ ಚೆಲ್ಲಾಟವಾಡಬೇಡಿ ಇದು ಪಬ್ಲಿಕ್ ಟಿವಿ ಕಳಕಳಿ. ಇದನ್ನೂ ಓದಿ: ಆಯುಷ್ಮಾನ್ ಭಾರತ್ ಯೋಜನೆ ಸದ್ಯಕ್ಕೆ ಕರ್ನಾಟಕಕ್ಕೆ ಒಳಪಡಲ್ಲ!

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://www.youtube.com/watch?v=H6_XYSZLZu8