Tag: ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ

  • ವಕೀಲರಿಗೆ ಟೋಲ್ ವಿನಾಯತಿ- ವೈರಲ್ ಸುದ್ದಿಯ ಸತ್ಯ

    ವಕೀಲರಿಗೆ ಟೋಲ್ ವಿನಾಯತಿ- ವೈರಲ್ ಸುದ್ದಿಯ ಸತ್ಯ

    ಬೆಂಗಳೂರು: ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವಾಲಯವು ವಕೀಲರಿಗೆ ದೇಶಾದ್ಯಂತ ಟೋಲ್ ಫೀ ವಿನಾಯತಿ ನೀಡಿದೆ ಎಂಬ ಪತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿತ್ತು.

    ಈ ಸಂಬಂಧ ಐಎಎಸ್ ಅಧಿಕಾರಿ, ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಲಾಯದ ಖಾಸಗಿ ಕಾರ್ಯದರ್ಶಿ ಸಂಕೇತ್ ಭೋಂಡ್ವೆ ಅವರು ವಕೀಲ ರವಿಗೌಡ ಅವರಿಗೆ ಡಿಸೆಂಬರ್ 3ರಂದು ಪತ್ರ ಬರೆದಿದ್ದಾರೆ. ಈ ಮೂಲಕ ಡಿಸೆಂಬರ್ 1ರಿಂದ ಅನ್ವಯವಾಗುವಂತೆ ಭಾರತದ ಎಲ್ಲಾ ರಾಜ್ಯಗಳ ವಕೀಲರಿಗೆ ದೇಶಾದ್ಯಂತ ಟೋಲ್ ಫೀ ವಿನಾಯತಿ ನೀಡಲಾಗಿದೆ. ಹೀಗಾಗಿ ವಕೀಲರು ಟೋಲ್ ಪ್ಲಾಜಾಗಳಲ್ಲಿ ತಮ್ಮ ಐಡಿ ಕಾರ್ಡ್ ತೋರಿಸಿದರೆ ಸಾಕು ಎಂದು ಪತ್ರದಲ್ಲಿ ಬರೆಯಲಾಗಿತ್ತು.

    ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯದ ಪತ್ರ ಎನ್ನಲಾಗಿದ್ದ ಪತ್ರವು ವಾಟ್ಸಪ್ ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಆದರೆ ಅಸಲಿಗೆ ಇದು ಸುಳ್ಳು ಪತ್ರವಾಗಿದೆ. ಈ ಸಂಬಂಧ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಟ್ವೀಟ್ ಮೂಲಕ ಡಿಸೆಂಬರ್ 11ರಂದು ಸ್ಪಷ್ಟನೆ ನೀಡಿದ್ದು, ವಕೀಲರಿಗೆ ಟೋಲ್ ಪ್ಲಾಜಾಗಳಲ್ಲಿ ಯಾವುದೇ ರೀತಿಯ ಶುಲ್ಕ ವಿನಾಯತಿ ನೀಡಿಲ್ಲ ಎಂದು ತಿಳಿಸಿದೆ.

    ಈ ಕುರಿತು ಉತ್ತರ ನೀಡುವಂತೆ ಭೋಂಡ್ವೆ ಅವರು ಡಿಸೆಂಬರ್ 3ರಂದು ವಕೀಲ ಆರ್.ಬಾಸ್ಕರದಾಸ್ ಅವರಿಗೆ ಪತ್ರ ಬರೆದಿದ್ದರು. ಸಚಿವಾಲಯ ಕೇಳಿದ್ದ ಪ್ರಶ್ನೆಗಳಿಗೆ ಬಾಸ್ಕರದಾಸ್ ಅವರು ಉತ್ತರಿಸಿದ ಪತ್ರವನ್ನು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ರವಾನಿಸಲಾಗಿದೆ. ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯವು ಮುಂದಿನ ಕ್ರಮ ಜರುಗಿಸಲಿದೆ ಎಂದು ಭೋಡ್ವೆ ತಿಳಿಸಿದ್ದಾರೆ ಎಂದು ವರದಿಯಾಗಿದೆ.