Tag: ರಸ್ತೆ ಸಂಪರ್ಕ

  • ಮಲಪ್ರಭಾ ನದಿಗೆ 25 ಸಾವಿರ ಕ್ಯೂಸೆಕ್ ನೀರು- ಮುಳುಗಡೆ ಭೀತಿಯಲ್ಲಿ 34 ಗ್ರಾಮಗಳು

    ಮಲಪ್ರಭಾ ನದಿಗೆ 25 ಸಾವಿರ ಕ್ಯೂಸೆಕ್ ನೀರು- ಮುಳುಗಡೆ ಭೀತಿಯಲ್ಲಿ 34 ಗ್ರಾಮಗಳು

    – ರಾಯಬಾಗದ ಕುಡಚಿ- ಉಗಾರ ಸೇತುವೆ ಸಹ ಜಲಾವೃತ

    ಬಾಗಲಕೋಟೆ/ಬೆಳಗಾವಿ: ಮಲಪ್ರಭಾ ನದಿಗೆ 25 ಸಾವಿರ ಕ್ಯೂಸೆಕ್ ನೀರು ಬಿಡುತ್ತಿರುವ ಹಿನ್ನೆಲೆ ನದಿ ತೀರ 34 ಹಳ್ಳಿಗಳಲ್ಲಿ ಪ್ರವಾಹದ ಆತಂಕ ಎದುರಾಗಿದೆ. ಇನ್ನೊಂದೆಡೆ ಕೃಷ್ಣಾ ನದಿಯ ನೀರಿನ ಮಟ್ಟ 4 ಅಡಿಗಳಷ್ಟುಇ ಹೆಚ್ಚಾಗಿದ್ದು, ರಾಜ್ಯ ಹೆದ್ದಾರಿಯ ಕುಡಚಿ-ಉಗಾರ ಮಧ್ಯದ ಸೇತುವೆ ಮುಳುಗಡೆಯಾಗಿದೆ. ಭಾರೀ ಮಲೆ ಸುರಿಯುತ್ತಿರುವ ಹಿನ್ನೆಲೆ ನದಿಗಳಲ್ಲಿ ನೀರಿನ ಮಟ್ಟ ಹೆಚ್ಚುತ್ತಲೇ ಇದೆ. ಹೀಗಾಗಿ ನದಿ ಪಾತ್ರದ ಜನತೆ ತೀವ್ರ ಆತಂಕಗೊಂಡಿದ್ದಾರೆ.

    ಮಲಪ್ರಭಾ ನದಿಗೆ 25 ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ನದಿ ತೀರದ 34 ಹಳ್ಳಿಗಳಲ್ಲಿ ಪ್ರವಾಹ ಭೀತಿ ಶುರುವಾಗಿದೆ. ನೀರಿನ ಹರಿವು ಹೆಚ್ಚಾದ ಹಿನ್ನೆಲೆಯಲ್ಲಿ ಬಾದಾಮಿ ತಾಲೂಕಿನ ಗೋವನಕೊಪ್ಪ ಗ್ರಾಮದ ಪಕ್ಕದ ಹಳೆಯ ಸೇತುವೆ ಸಂಪೂರ್ಣ ಮುಳುಗಡೆಯಾಗಿದೆ. ಸೇತುವೆ ಮೇಲೆ 4-5 ಅಡಿಯಷ್ಟು ನೀರು ಹರಿದು ಬರುತ್ತಿದ್ದು, ಗೋವನಕೊಪ್ಪ-ಕೊಣ್ಣೂರ ಮಾರ್ಗದ ರಸ್ತೆ ಸಂಪರ್ಕ ಕಡಿತವಾಗಿದೆ.

    ನೀರಿನ ಹರಿವು ಕ್ಷಣ ಕ್ಷಣಕ್ಕೂ ಹೆಚ್ಚಾಗಿದ್ದು, ನದಿ ಪಕ್ಕದ ಪೇರಲ ಬೆಳೆ ಹಾಗೂ ಇತರೆ ಬೆಳೆಗಳಿರುವ ಜಮೀನುಗಳು ನೀರಿನಿಂದ ಜಲಾವೃತವಾಗಿವೆ. ಸ್ಥಳಕ್ಕೆ ಬಾದಾಮಿ ತಹಶೀಲ್ದಾರ್ ಸುಹಾಸ್ ಇಂಗಳೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

    ಅಲ್ಲದೆ ಉತ್ತರ ಕರ್ನಾಟಕ ಭಾಗದಲ್ಲಿ ಮಳೆ ಅಬ್ಬರ ಮುಂದುವರಿದಿದ್ದರಿಂದ ಕೃಷ್ಣಾ ನದಿ ನೀರಿನ ಮಟ್ಟದಲ್ಲಿ 4 ಅಡಿಗಳಷ್ಟು ಹೆಚ್ಚಳವಾಗಿದೆ. ನೀರು ಹೆಚ್ಚಳದಿಂದ ರಾಜ್ಯ ಹೆದ್ದಾರಿ ಸಂಪರ್ಕ ಕಡಿತವಾಗಿದೆ. ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಕುಡಚಿ- ಉಗಾರ ಮದ್ಯದ ಸೇತುವೆ ಜಲಾವೃತವಾಗಿದ್ದು, ಕಳೆದ ಒಂದು ವಾರದ ಹಿಂದೆ ನೀರು ಕಡಿಮೆಯಾಗಿ ಸಂಚಾರಕ್ಕೆ ಮುಕ್ತವಾತ್ತು. ಇದೀಗ ಕೃಷ್ಣಾ ನದಿಗೆ ನೀರು ಹೆಚ್ಚು ಹರಿದುಬರುತ್ತಿರುವುದರಿಂದ ಮತ್ತೆ ಜಲಾವೃತಗೊಂಡಿದೆ. ಇದು ಜಮಖಂಡಿ-ಮೀರಜ್ ನ ಮುಖ್ಯ ಅಂತರರಾಜ್ಯ ಹೆದ್ದಾರಿಯಾಗಿದೆ.

  • ಗುಡ್ಡ ಕುಸಿತ: ಮಡಿಕೇರಿ-ಸೋಮವಾರಪೇಟೆ ನಡುವಿನ ರಾಜ್ಯ ಹೆದ್ದಾರಿ ಬಂದ್

    ಗುಡ್ಡ ಕುಸಿತ: ಮಡಿಕೇರಿ-ಸೋಮವಾರಪೇಟೆ ನಡುವಿನ ರಾಜ್ಯ ಹೆದ್ದಾರಿ ಬಂದ್

    ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆಗೆ ಮಡಿಕೇರಿ ತಾಲೂಕಿನ ಹಾಲೇರಿ ಗ್ರಾಮದ ರಸ್ತೆ ಮೇಲೆಯೇ ಗುಡ್ಡ ಕುಸಿದು ಪರಿಣಾಮ ರಾಜ್ಯ ಹೆದ್ದಾರಿ ಬಂದ್ ಆಗಿದೆ.

    ಗುಡ್ಡದ ಮಣ್ಣು ಕುಸಿದ ಪರಿಣಾಮ ಮಡಿಕೇರಿ – ಸೋಮವಾರಪೇಟೆ ರಸ್ತೆ ಸಂಚಾರ ಸಂಪೂರ್ಣ ಬಂದ್ ಆಗಿದೆ. ಕಳೆದ ವರ್ಷ ಗುಡ್ಡ ಕುಸಿದಿದ್ದ ಸ್ಥಳದಲ್ಲಿ ಮತ್ತೆ ಗುಡ್ಡ ಕುಸಿದಿದೆ. ಕತ್ತಲಾಗಿರುವ ಹಿನ್ನೆಲೆಯಲ್ಲಿ ಹಾಗೂ ನಿರಂತರ ಮಳೆ ಆಗುತ್ತಿರುವುದರಿಂದ ತೆರವು ಕಾರ್ಯಾಚರಣೆ ನಡೆಸಲು ತೊಡಕಾಗಿದೆ. ನಾಳೆ ಮುಂಜಾನೆ ವೇಳೆಗೆ ರಸ್ತೆ ಮೇಲಿನ ಮಣ್ಣನ್ನು ತೆರವು ಮಾಡುವ ಸಾಧ್ಯತೆ ಇದೆ.

    ಇಂದು ಮುಂಜಾನೆಯಿಂದ ಬಿಡುವು ನೀಡಿದ್ದ ಮಳೆ ಸಂಜೆಯ ವೇಳೆಗೆ ಬಿಟ್ಟು ಬಿಡದೆ ಸುರಿದಿತ್ತು. ಮಳೆಯ ಪರಿಣಾಮ ಗುಡ್ಡ ಕುಸಿತ ಸಂಭವಿಸಿದ್ದು, ಈ ಮಾರ್ಗ ಬಂದ್ ಆಗಿರುವುದರಿಂದ ವಾಹನ ಸವಾರರು ಪರ್ಯಾಯ ಮಾರ್ಗವನ್ನು ಬಳಕೆ ಮಾಡುತ್ತಿದ್ದಾರೆ. ಮಡಿಕೇರಿಯಿಂದ ಸಿಂಕೋನ ಮಾರ್ಗವಾಗಿ ಸೋಮವಾರಪೇಟೆ ತೆರಳಬಹುದಾಗಿದೆ.

  • ಕೊಡಗಿನಲ್ಲಿ ಮುಂದುವರಿದ ಮಳೆ – ಮುಳುಗುವ ಭೀತಿಯಲ್ಲಿ ಕುಶಾಲನಗರ

    ಕೊಡಗಿನಲ್ಲಿ ಮುಂದುವರಿದ ಮಳೆ – ಮುಳುಗುವ ಭೀತಿಯಲ್ಲಿ ಕುಶಾಲನಗರ

    ಮಡಿಕೇರಿ: ರಾಜ್ಯದಲ್ಲಿ ಇಂದು ಕೂಡ ವರುಣನ ಅಬ್ಬರ ಮುಂದುವರಿದಿದ್ದು, ಮಳೆಯ ಅಬ್ಬರಕ್ಕೆ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಮಡಿಕೇರಿ ತಾಲೂಕಿನ ಭೇತ್ರಿ ಹೊಳೆ ಉಕ್ಕಿ ಹರಿಯುತ್ತಿದೆ. ಪರಿಣಾಮ ಮಡಿಕೇರಿ ವಿರಾಜಪೇಟೆ ಸಂಪರ್ಕ ರಸ್ತೆ ಜಲಾವೃತವಾಗಿದ್ದು, ಸೇತುವೆ ಮೇಲೆ ನೀರು ಉಕ್ಕಿ ಹರಿಯುತ್ತಿದೆ.

    ಕಳೆದ ಬಾರಿಯಂತೆ ಈ ವರ್ಷವೂ ಕುಶಾಲನಗರ ಮತ್ತೆ ಮುಳುಗುವ ಭೀತಿಯಲ್ಲಿದೆ. ಕುಶಾಲನಗರ ಕುವೆಂಪು ಬಡಾವಣೆ ಮತ್ತು ಸಾಯಿ ಬಡಾವಣೆಗಳು ಕಳೆದ ಬಾರಿ ಮುಳುಗಡೆಯಾಗಿತ್ತು. ಸದ್ಯ ನೀರು ಕುಶಾಲನಗರದ ತಗ್ಗು ಪ್ರದೇಶದಗಳಿಗೆ ನೀರು ಹರಿದಿದೆ. ಕಾವೇರಿ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿರುವುದರಿಂದ ಸಮಸ್ಯೆ ಉಂಟಾಗಿದೆ. ಗೋಣಿಕೊಪ್ಪದ ಹರಿಶ್ಚಂದ್ರಪುರದ ಬಡಾವಣೆಗೆ ನೀರು ನುಗ್ಗಿ ಹಲವು ಮನೆಗಳು ಜಲಾವೃತವಾಗಿದೆ.

    ಭಾರೀ ಮಳೆಯ ಹಿನ್ನೆಲೆಯಲ್ಲಿ ಜಿಲ್ಲೆಯ ಕೆಲ ಗ್ರಾಮಗಳು ಭಾರೀ ಸಮಸ್ಯೆ ಎದುರಿಸಿದ್ದು, ಸೂರ್ಲಬ್ಬಿ, ಕಿಕ್ಕರಳ್ಳಿ, ಗರ್ವಾಲೆ, ಹಮ್ಮಿಯಾಲ, ಮುಟ್ಲು ಗ್ರಾಮದಲ್ಲಿ ವಿದ್ಯುತ್ ಕಡಿತವಾಗಿದೆ. ವಿದ್ಯುತ್ ಸಂಪರ್ಕ ಕಡಿತವಾಗಿರುವ ಹಿನ್ನೆಲೆಯಲ್ಲಿ ಮೊಬೈಲ್ ನೆಟ್‍ವರ್ಕ್ ಕೂಡ ಸಿಗುತ್ತಿಲ್ಲ ಎಂದು ಸ್ಥಳೀಯರು ಸಾಮಾಜಿಕ ಜಾಲತಾಣ ಮೂಲಕ ಅಧಿಕಾರಿಗಳ ಬಳಿ ಮನವಿ ಮಾಡಿಕೊಂಡಿದ್ದಾರೆ.

    ಕಾವೇರಿ ನದಿ ಉಕ್ಕಿ ಹರಿಯುತ್ತಿರುವುದರಿಂದ ವಿರಾಜಪೇಟೆ ತಾಲ್ಲೂಕಿನ ನಾಪೋಕ್ಲು ಬಳಿಕ ಚೆರಿಯಪರಂಬು ಗ್ರಾಮದ ನೂರಕ್ಕೂ ಅಧಿಕ ಮನೆಗಳು ಜಲಾವೃತವಾಗಿದೆ. ಪರಿಣಾಮ ಗ್ರಾಮದ ಜನರನ್ನು ನಾಪೋಕ್ಲುವಿನ ಪುನರ್ವಸತಿ ಕೇಂದ್ರಕ್ಕೆ ಸ್ಥಳಾಂತರ ಮಾಡಲಾಗಿದೆ.

    ಈ ನಡುವೆ ಕರ್ನಾಟಕ ಕೇರಳ ನಡುವಿನ ಅಂತರಾಜ್ಯ ಹೆದ್ದಾರಿ ಸಂಪರ್ಕ ಕಡಿತವಾಗಿದೆ. ಕುಟ್ಟ-ಕೇರಳ ರಸ್ತೆಯಲ್ಲಿ ಮರ ಬಿದ್ದ ಹಿನ್ನೆಲೆ ವಾಹನ ಸಂಚಾರ ಸ್ಥಗಿತವಾಗಿದ್ದು, ವಿರಾಜಪೇಟೆ ತಾಲ್ಲೂಕಿನ ಪೊನ್ನಂಪೇಟೆಯಲ್ಲಿ ಬಸ್ ಗಳ ನಿಲುಗಡೆ ಮಾಡಲಾಗಿದೆ. 5 ದಿನಗಳ ಹಿಂದೆಯಷ್ಟೇ ಮಾಕುಟ್ಟ ರಸ್ತೆ ಕುಸಿತ ಆಗಿದ್ದ ಪರಿಣಾಮ ಕೇರಳಕ್ಕೆ ತೆರಳುವ ಒಂದು ಮಾರ್ಗ ಬಂದ್ ಆಗಿತ್ತು. ಇಂದು ಮರ ಉರುಳಿಬಿದ್ದು ಇಬ್ಬ ಏಕೈಕ ಮಾರ್ಗವಾದ ಕುಟ್ಟ ಮಾರ್ಗ ಕೂಡ ಬಂದ್ ಆಗಿದೆ. ಕೊಡಗಿನಲ್ಲಿ ಮಳೆ ಮುಂದುವರಿಯುತ್ತಿರುವುದರಿಂದ ನದಿಯಲ್ಲಿ ನೀರಿನ ಮಟ್ಟ ಹೆಚ್ಚಾಗಿದೆ. ಕುಶಾಲನಗರ ಬಳಿಯಿರುವ ರಾಷ್ಟ್ರೀಯ ಹೆದ್ದಾರಿಯ 275ರ ಸೇತುವೆ ಮೇಲೆ ನೀರು ಹರಿಯುವ ಸಾಧ್ಯತೆ ಇದೆ. ಒಂದೊಮ್ಮೆ ಸೇತುವೆ ಜಲಾವೃತವಾದಲ್ಲಿ ಕೊಡಗು, ಮೈಸೂರು ಸಂಪರ್ಕ ಕಡಿತ ಸಾಧ್ಯತೆ ಇದೆ.

  • ಅಪಾಯಕ್ಕೆ ಆಹ್ವಾನ ನೀಡುತ್ತಿದೆ ಚಾರ್ಮಾಡಿ ಘಾಟ್

    ಅಪಾಯಕ್ಕೆ ಆಹ್ವಾನ ನೀಡುತ್ತಿದೆ ಚಾರ್ಮಾಡಿ ಘಾಟ್

    ಮಂಗಳೂರು: ಮಂಗಳೂರಿನಿಂದ ಬೆಂಗಳೂರಿಗೆ ಸಂಪರ್ಕಿಸುವ ಚಾರ್ಮಾಡಿ ಘಾಟಿ ಸಂಪೂರ್ಣ ಕಿತ್ತುಹೋಗಿದ್ದು, ಈ ಮಾರ್ಗದಲ್ಲಿ ಸಂಚರಿಸುವ ವಾಹನ ಚಾಲಕರು ಜೀವ ಕೈಯಲ್ಲಿ ಹಿಡಿದು ಸಂಚಾರಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ.

    ಶಿರಾಡಿ ಘಾಟಿ, ಸಂಪಾಜೆ ಘಾಟಿ ಹೆದ್ದಾರಿ ಬಂದ್ ಆದ ಸಂದರ್ಭದಲ್ಲಿ ಚಾರ್ಮಾಡಿ ಘಾಟಿ ಮಾತ್ರ ಸಂಪರ್ಕ ರಸ್ತೆಯಾಗಿ ಉಳಿದಿತ್ತು. ಇದರಿಂದ ಭಾರೀ ಸಂಖ್ಯೆಯಲ್ಲಿ ವಾಹನಗಳು ಸಂಚರಿಸಿದ ಕಾರಣ ಘಾಟಿ ರಸ್ತೆ ಸಂಪೂರ್ಣ ಹಾಳಾಗಿದೆ. ಅಪಾಯಕಾರಿ ತಿರುವುಗಳಲ್ಲಿ ರಸ್ತೆ ಡಾಂಬರು ಕಿತ್ತು ಹೋಗಿ ಗುಂಡಿಗಳು ಬಿದ್ದಿದೆ.

    ಸದ್ಯ ಶಿರಾಡಿ ಘಾಟ್ ನಲ್ಲಿ ಲಘು ವಾಹನಗಳಿಗೆ ಮಾತ್ರ ಸಂಚಾರಕ್ಕೆ ಅವಕಾಶವಿದ್ದು, 6 ಚಕ್ರದ ಘನ ವಾಹನಗಳು ಚಾರ್ಮಾಡಿ ಘಾಟ್ ಮೂಲಕವೇ ಸಂಚರಿಸುತ್ತಿದೆ. ಚಾರ್ಮಾಡಿ ಘಾಟ್ ಅತ್ಯಂತ ಕಿರಿದಾದ ರಸ್ತೆಯಾಗಿದ್ದರಿಂದ ವಾಹನಗಳು ಅಪಾಯಕಾರಿ ಸನ್ನಿವೇಶದಲ್ಲಿ ಚಾಲನೆ ಮಾಡುವ ಅನಿವಾರ್ಯ ಸೃಷ್ಟಿಯಾಗಿದೆ. ಹೀಗಾಗಿ ಅಪಾಯ ಸಂಭವಿಸುವ ಮುನ್ನ ಕನಿಷ್ಠ ರಸ್ತೆಗೆ ತೇಪೆ ಹಾಕುವ ಕಾರ್ಯ ಮಾಡಬೇಕಿದೆ ಎಂದು ವಾಹನ ಸವಾರರು ಆಗ್ರಹಿಸಿದ್ದಾರೆ.

  • ಮುನಿದ ಕಪಿಲೆ: ನಂಜನಗೂಡು-ಹೆಜ್ಜಿಗೆ ಸೇತುವೆಯಲ್ಲಿ ಬಿರುಕು

    ಮುನಿದ ಕಪಿಲೆ: ನಂಜನಗೂಡು-ಹೆಜ್ಜಿಗೆ ಸೇತುವೆಯಲ್ಲಿ ಬಿರುಕು

    ಮೈಸೂರು: ಕಳೆದ ಮೂರು ದಿನಗಳಿಂದ ಕಪಿಲಾ ನದಿ ರಭಸದಿಂದ ಹರಿಯುತ್ತಿರುವ ಹಿನ್ನೆಲೆಯಲ್ಲಿ ನಂಜಗೂಡು – ಹೆಜ್ಜಿಗೆ ನಡುವೆ ಸಂಪರ್ಕ ಕಲ್ಪಿಸುವ ರಸ್ತೆ ಹಾಗೂ ಸೇತುವೆಯಲ್ಲಿ ಬಿರುಕು ಕಾಣಿಸಿದೆ. ಇದರಿಂದ ಸೇತುವೆ ರಸ್ತೆ ಕುಸಿದು ಬೀಳುವ ಆತಂಕ ಸ್ಥಳೀಯರಲ್ಲಿ ಎದುರಾಗಿದೆ.

    ರಸ್ತೆ ಹಾಗೂ ಸೇತುವೆಯಲ್ಲಿ ಬಿರುಕು ಉಂಟಾಗುತ್ತಿದ್ದಂತೆ ಎಚ್ಚೆತ್ತ ಅಧಿಕಾರಿಗಳು, ಸೇತುವೆ ಮೇಲ್ಭಾಗದಲ್ಲಿ ಭಾರೀ ವಾಹನಗಳು ಸಂಚರಿಸದಂತೆ ನಿರ್ಬಂಧ ಹೇರಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ ಸರ್ಕಾರದ ಕೊನೆ ಅವಧಿಯಲ್ಲಿ ಈ ಸೇತುವೆ ಉದ್ಘಾಟನೆ ಆಗಿತ್ತು. ಕಳಪೆ ಕಾಮಗಾರಿಯಿಂದಾಗಿಯೇ ಸೇತುವೆ ಹಾಗೂ ರಸ್ತೆಯಲ್ಲಿ ಬಿರುಕು ಉಂಟಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಇದನ್ನೂ ಓದಿ: ಕಬಿನಿ ಜಲಾಶಯದಿಂದ ದಾಖಲೆ ಪ್ರಮಾಣದಲ್ಲಿ ನೀರು ಹೊರಕ್ಕೆ

    ರಾಷ್ಟ್ರೀಯ ಹೆದ್ದಾರಿ ಬಂದ್:
    ಕಪಿಲಾ ನದಿಯಿಂದ ಸುಮಾರು 80 ಸಾವಿರ ಕ್ಯೂಸೆಕ್ಸ್ ನೀರು ಬಿಡುಗಡೆ ಮಾಡಿರುವುದರಿಂದ ಮೈಸೂರು-ಊಟಿ ರಾಷ್ಟ್ರೀಯ ಹೆದ್ದಾರಿ ರಸ್ತೆ ಸಂಪರ್ಕ ಕಳೆದ ಎರಡು ದಿನಗಳಿಂದ ಸಂಪೂರ್ಣ ಕಡಿತಗೊಂಡಿದೆ. ತಮಿಳುನಾಡಿಗೆ ಸಂಪರ್ಕ ಕಲ್ಪಿಸುವ ನಂಜನಗೂಡಿನ ರಾಷ್ಟ್ರೀಯ ಹೆದ್ದಾರಿ 766 ರಸ್ತೆ ಮೇಲೆ ನೀರು ಹರಿದು ಹೋಗುತ್ತಿದ್ದು, ರಸ್ತೆ ಸಂಪರ್ಕ ಕಡಿತಗೊಂಡಿರುವುದರಿಂದ ವಾಹನ ಸವಾರರು ಇತರೇ ಮಾರ್ಗಗಳತ್ತ ತೆರಳಿ ಪ್ರಯಾಣ ಮುಂದುವರಿಸಿದ್ದಾರೆ. ಈ ಕುರಿತು ಪರ್ಯಾಯ ಮಾರ್ಗಗಳನ್ನು ಅಧಿಕಾರಿಗಳು ಸೂಚಿಸಿದ್ದಾರೆ. ಇದನ್ನೂ ಓದಿ: ಕಪಿಲಾ ನದಿ ಪ್ರವಾಹ: ಮೈಸೂರು-ಊಟಿ ರಾಷ್ಟ್ರೀಯ ಹೆದ್ದಾರಿ ಸಂಪೂರ್ಣ ಬಂದ್

    ಕಬಿನಿ ಜಲಾನಯನ ಪ್ರದೇಶದಲ್ಲಿ ಪ್ರವಾಹ ಉಂಟಾಗಿದ್ದು, ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ಕಬಿನಿ ಜಲಾಶಯದಿಂದ ಬರೋಬ್ಬರಿ 80 ಸಾವಿರ ಕ್ಯೂಸೆಕ್ಸ್ ನೀರು ಹೊರಕ್ಕೆ ಯಾವುದೇ ಕ್ಷಣದಲ್ಲಿ ಮತ್ತಷ್ಟು ಜಲಾಶಯಕ್ಕೆ ಒಳಹರಿವು ಸಾಧ್ಯತೆ ಇದೆ. ಆದ್ದರಿಂದ ನದಿ ಪಾತ್ರದ ಜನರು ಎಚ್ಚರಿಕೆಯಿಂದಿರುವಂತೆ ಸೂಚನೆ ನೀಡಲಾಗಿದೆ. ಆದರೆ ಇದೇ ಮೊದಲ ಬಾರಿಗೆ ಕಪಿಲಾ ನದಿ ದಾಖಲೆ ರೂಪದಲ್ಲಿ ಉಕ್ಕಿ ಹರಿಯುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews