Tag: ರಸ್ತೆ ಗುಂಡಿಗಳು

  • ರಸ್ತೆ ಗುಂಡಿ, ತೆರೆದ ಮ್ಯಾನ್‌ಹೋಲ್‌ಗಳಿಗೆ ಬಿದ್ದು ಮೃತಪಡುವವರ ಕುಟುಂಬಕ್ಕೆ 6 ಲಕ್ಷ ಪರಿಹಾರ ನೀಡಿ: ಬಾಂಬೆ ಹೈಕೋರ್ಟ್‌ ಆದೇಶ

    ರಸ್ತೆ ಗುಂಡಿ, ತೆರೆದ ಮ್ಯಾನ್‌ಹೋಲ್‌ಗಳಿಗೆ ಬಿದ್ದು ಮೃತಪಡುವವರ ಕುಟುಂಬಕ್ಕೆ 6 ಲಕ್ಷ ಪರಿಹಾರ ನೀಡಿ: ಬಾಂಬೆ ಹೈಕೋರ್ಟ್‌ ಆದೇಶ

    – ಗಾಯಗೊಂಡವರಿಗೆ 50,000 ದಿಂದ 2.5 ಲಕ್ಷದವರೆಗೆ ಪರಿಹಾರ ಕೊಡಬೇಕು
    – ಸಾವುಗಳಿಗೆ ಅಧಿಕಾರಿಗಳು, ಗುತ್ತಿಗೆದಾರರನ್ನು ಹೊಣೆ ಮಾಡುವ ಎಚ್ಚರಿಕೆ ನೀಡಿದ ಕೋರ್ಟ್‌

    ಮುಂಬೈ: ಮಹಾರಾಷ್ಟ್ರದಲ್ಲಿ ರಸ್ತೆ ಗುಂಡಿಗಳು (Road Potholes) ಅಥವಾ ತೆರೆದ ಮ್ಯಾನ್‌ಹೋಲ್‌ಗಳಿಗೆ ಬಿದ್ದು ಪ್ರಾಣ ಕಳೆದುಕೊಳ್ಳುವವರ ಕುಟುಂಬಕ್ಕೆ 6 ಲಕ್ಷ ಪರಿಹಾರ ನೀಡುವಂತೆ ಪುರಸಭೆ ಅಧಿಕಾರಿಗಳು ಮತ್ತು ರಾಜ್ಯ ಸರ್ಕಾರಕ್ಕೆ ಬಾಂಬೆ ಹೈಕೋರ್ಟ್ (Bombay High Court) ಆದೇಶಿಸಿದೆ.

    ನ್ಯಾಯಮೂರ್ತಿಗಳಾದ ರೇವತಿ ಮೋಹಿತೆ ದೇರೆ ಮತ್ತು ಸಂದೇಶ್ ಡಿ ಪಾಟೀಲ್ ಅವರ ಪೀಠವು, ರಸ್ತೆ ಗುಂಡಿಗಳು ಅಥವಾ ತೆರೆದ ಮ್ಯಾನ್‌ಹೋಲ್‌ಗಳಿಂದ ಗಾಯಗೊಂಡವರಿಗೆ 50,000 ದಿಂದ 2.5 ಲಕ್ಷದವರೆಗೆ ಪರಿಹಾರ ನೀಡಬೇಕು ಎಂದು ಹೇಳಿದೆ. ಸಂವಿಧಾನದ 21 ನೇ ವಿಧಿಯ ಅಡಿಯಲ್ಲಿ ಉತ್ತಮ ಮತ್ತು ಸುರಕ್ಷಿತ ರಸ್ತೆಗಳು ಜನರ ಬದುಕುವ ಹಕ್ಕಿನ ಭಾಗವಾಗಿದೆ ಎಂದು ನ್ಯಾಯಾಲಯ ಹೇಳಿದೆ. ಇದನ್ನೂ ಓದಿ: GBA ರಚನೆ ಕುರಿತು ನೀವು ಎತ್ತಿರುವ ಪ್ರಶ್ನೆ ಸೂಕ್ತವಾಗಿದೆ, ಹೈಕೋರ್ಟ್‌ನಲ್ಲಿ ಪ್ರಶ್ನಿಸಿ: ಅರ್ಜಿದಾರರಿಗೆ ಸುಪ್ರೀಂ ನಿರ್ದೇಶನ

    ನಿವೃತ್ತ ನ್ಯಾಯಮೂರ್ತಿ ಜಿ.ಎಸ್. ಪಟೇಲ್ ಅವರು ಮುಖ್ಯ ನ್ಯಾಯಮೂರ್ತಿಗಳಿಗೆ ಕಳುಹಿಸಿದ ಪತ್ರದ ಆಧಾರದ ಮೇಲೆ 2013 ರಲ್ಲಿ ದಾಖಲಾಗಿದ್ದ ಸ್ವಯಂಪ್ರೇರಿತ ಪ್ರಕರಣದಲ್ಲಿ ಅಡಿಯಲ್ಲಿ ನ್ಯಾಯಾಲಯ ಈ ಆದೇಶವನ್ನು ನೀಡಿದೆ.

    ಕೆಟ್ಟ ಮತ್ತು ಅಸುರಕ್ಷಿತ ರಸ್ತೆಗಳಿಗೆ ಯಾವುದೇ ಸಮರ್ಥನೆ ಇಲ್ಲ. ದೇಶದ ಆರ್ಥಿಕ ರಾಜಧಾನಿಯಾಗಿರುವ ಮುಂಬೈ, ಕೇಂದ್ರ, ರಾಜ್ಯ ಮತ್ತು ಸ್ಥಳೀಯ ಸಂಸ್ಥೆಯ ಆದಾಯಕ್ಕೆ ಹೆಚ್ಚಿನ ಕೊಡುಗೆ ನೀಡುತ್ತದೆ. ವಾಸ್ತವವಾಗಿ, ಎಂಸಿಜಿಎಂ ಏಷ್ಯಾದ ಅತ್ಯಂತ ಶ್ರೀಮಂತ ನಿಗಮಗಳಲ್ಲಿ ಒಂದಾಗಿದೆ. ಕೆಟ್ಟ ರಸ್ತೆಗಳು ಮಾನವ ಜೀವಗಳಿಗೆ ಅಪಾಯವನ್ನುಂಟು ಮಾಡುವುದಲ್ಲದೆ, ಕಂಪನಿಗಳ ಆರ್ಥಿಕ ಆರೋಗ್ಯ ಸೇರಿದಂತೆ ದೇಶದ ಆರ್ಥಿಕತೆಯ ಮೇಲೆ ಪ್ರತಿಕೂಲ ಪರಿಣಾಮಗಳನ್ನು ಬೀರುತ್ತವೆ ಎಂದು ವಿಷಾದಿಸಿತು.

    ತೆರಿಗೆ ಪಾವತಿಸುವ ಸಾರ್ವಜನಿಕರಿಗೆ ಸುರಕ್ಷಿತ ರಸ್ತೆಗಳು ಸೇರಿದಂತೆ ಸರಿಯಾದ ನಾಗರಿಕ ಸೌಲಭ್ಯಗಳನ್ನು ಒದಗಿಸುವುದು ನಾಗರಿಕ ಅಧಿಕಾರಿಗಳು ಮತ್ತು ರಾಜ್ಯ ಸಂಸ್ಥೆಗಳ ಜವಾಬ್ದಾರಿಯಾಗಿದೆ. ಮಹಾರಾಷ್ಟ್ರದಲ್ಲಿ ಮಳೆಗಾಲದಲ್ಲಿ ಗುಂಡಿಗಳು ಮತ್ತು ತೆರೆದ ಮ್ಯಾನ್‌ಹೋಲ್‌ಗಳಿಂದ ಸಾವುಗಳು ಮತ್ತು ಗಂಭೀರ ಗಾಯಗಳು ಸಾಮಾನ್ಯ ಲಕ್ಷಣವಾಗಿದೆ ಎಂದು ಹೇಳಿತು. ಇದನ್ನೂ ಓದಿ: ನಂಜೇಗೌಡಗೆ ತಾತ್ಕಾಲಿಕ ರಿಲೀಫ್‌ – ಶಾಸಕ ಸ್ಥಾನದಿಂದ ಅಸಿಂಧುಗೊಳಿಸಿದ್ದ ಆದೇಶಕ್ಕೆ ಸುಪ್ರೀಂ ತಡೆ

    ಇಂತಹ ಸಾವುಗಳು ಮತ್ತು ಗಾಯಗಳಿಗೆ ನಾಗರಿಕ ಅಧಿಕಾರಿಗಳು ಮತ್ತು ರಸ್ತೆ ನಿರ್ವಹಣೆಯ ಜವಾಬ್ದಾರಿಯನ್ನು ವಹಿಸಿಕೊಂಡಿರುವ ಗುತ್ತಿಗೆದಾರರನ್ನು ಹೊಣೆಗಾರರನ್ನಾಗಿ ಮಾಡುವ ಸಮಯ ಇದು. ಈ ದೀರ್ಘಕಾಲೀನ ಸಮಸ್ಯೆಯನ್ನು ಪರಿಹರಿಸುವಲ್ಲಿ ಅಧಿಕಾರಿಗಳ ಕಡೆಯಿಂದ ನಮಗೆ ಯಾವುದೇ ಗಂಭೀರ ಪ್ರಯತ್ನ ಕಂಡುಬರುವುದಿಲ್ಲ. ನಾಗರಿಕ ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡದ ಹೊರತು, ಈ ದುರಂತ ಸನ್ನಿವೇಶವು ಪ್ರತಿ ವರ್ಷವೂ ಪುನರಾವರ್ತನೆಯಾಗುತ್ತದೆ. ಗುತ್ತಿಗೆದಾರರ ಮೇಲೆ ಮಾತ್ರವಲ್ಲದೆ ಅಧಿಕಾರಿಗಳ ಮೇಲೂ ಹೊಣೆಗಾರಿಕೆಯನ್ನು ನಿಗದಿಪಡಿಸಬೇಕು ಎಂದು ಅಭಿಪ್ರಾಯಪಟ್ಟಿತು.

    ಗುಂಡಿಗಳಿಗೆ ಸಂಬಂಧಿಸಿದ ಸಾವುಗಳು ಮತ್ತು ಗಾಯಗಳಿಗೆ ಕಾರಣರಾದವರನ್ನು ಹಣಕಾಸಿನ ದೃಷ್ಟಿಯಿಂದ ವೈಯಕ್ತಿಕವಾಗಿ ಹೊಣೆಗಾರರನ್ನಾಗಿ ಮಾಡದ ಹೊರತು, ಅವರಿಗೆ ಸಮಸ್ಯೆಯ ಗಂಭೀರತೆ ಅರ್ಥವಾಗುವುದಿಲ್ಲ. ಆದ್ದರಿಂದ, ಗುಂಡಿ ಅಥವಾ ಮ್ಯಾನ್‌ಹೋಲ್ ಅಪಘಾತಗಳ ಬಲಿಪಶುಗಳಿಗೆ ಪರಿಹಾರವನ್ನು ವಿತರಿಸಲು ಪ್ರಾರಂಭಿಸಲು ಅಧಿಕಾರಿಗಳಿಗೆ ಆದೇಶಿಸಿತು. ಆಗ ಮಾತ್ರ ಅದು ಸಂಬಂಧಪಟ್ಟ ಸಂಸ್ಥೆಗಳಿಗೆ ಎಚ್ಚರಿಕೆಯ ಗಂಟೆಯಾಗುತ್ತದೆ ಎಂದು ವಾದಿಸಿತು.

    ಅರ್ಹ ವ್ಯಕ್ತಿಗಳಿಗೆ ಪರಿಹಾರವನ್ನು ಹಕ್ಕು ಸ್ವೀಕರಿಸಿದ ದಿನಾಂಕದಿಂದ ಆರರಿಂದ ಎಂಟು ವಾರಗಳೊಳಗೆ ಪಾವತಿಸಬೇಕು ಮತ್ತು ಪಾವತಿ ವಿಳಂಬವಾದರೆ ಬಡ್ಡಿಯನ್ನು ಪಾವತಿಸಬೇಕಾಗುತ್ತದೆ. ಸಕಾಲದಲ್ಲಿ ಪರಿಹಾರ ಪಾವತಿಸಲು ವಿಫಲವಾದರೆ, ಪುರಸಭೆ ಆಯುಕ್ತರು, ಮುಖ್ಯ ಅಧಿಕಾರಿ, ಜಿಲ್ಲಾಧಿಕಾರಿ, ಸಿಇಒ, ಅಧ್ಯಕ್ಷರು ಅಥವಾ ಪ್ರಧಾನ ಕಾರ್ಯದರ್ಶಿಯವರು ವಿಳಂಬಕ್ಕೆ ವೈಯಕ್ತಿಕವಾಗಿ ಜವಾಬ್ದಾರರಾಗಿರುತ್ತಾರೆ. ಸಂತ್ರಸ್ತರಿಗೆ ಪರಿಹಾರವನ್ನು ನೀಡಿದ ನಂತರ, ಪಾವತಿಸಿದ ಮೊತ್ತವನ್ನು ಗುಂಡಿ ಅಥವಾ ತೆರೆದ ಮ್ಯಾನ್‌ಹೋಲ್‌ಗೆ ಕಾರಣರಾದ ವ್ಯಕ್ತಿಗಳಿಂದ ವಸೂಲಿ ಮಾಡಬಹುದು. ಅದು ಅಧಿಕಾರಿಗಳು, ಎಂಜಿನಿಯರ್‌ಗಳು ಅಥವಾ ಗುತ್ತಿಗೆದಾರರಾಗಿರಬಹುದು ಎಂದು ನ್ಯಾಯಾಲಯ ಹೇಳಿದೆ.

    ಗುಂಡಿ ಅಥವಾ ಮ್ಯಾನ್‌ಹೋಲ್ ಅಪಘಾತಗಳ ವರದಿಗಳನ್ನು ವಿಚಾರಣೆ ಮಾಡುವ ಮತ್ತು ಬಲಿಪಶುಗಳಿಗೆ ಪಾವತಿಸಬೇಕಾದ ಪರಿಹಾರವನ್ನು ನಿರ್ಧರಿಸುವ ಕಾರ್ಯವನ್ನು ಹೊಂದಿರುವ ಸಮಿತಿಗಳನ್ನು ರಚಿಸಬೇಕು. ಈ ಪ್ರಕ್ರಿಯೆಯನ್ನು ಮೇಲ್ವಿಚಾರಣೆ ಮಾಡುವ ಸಮಿತಿಗಳನ್ನು ರಚಿಸುವ ಸದಸ್ಯರು ಸಮಿತಿಯನ್ನು ಸ್ಥಾಪಿಸಲಾದ ಪುರಸಭೆಯ ಪ್ರದೇಶವನ್ನು ಅವಲಂಬಿಸಿ ಬದಲಾಗುತ್ತಾರೆ. ಸಾವು ಅಥವಾ ಅಪಘಾತಕ್ಕೆ ಸಂಬಂಧಿಸಿದ ಮಾಹಿತಿಯನ್ನು ಸ್ವೀಕರಿಸಿದ ಏಳು ದಿನಗಳ ಒಳಗೆ ಈ ಸಮಿತಿಗಳು ಸಭೆ ಸೇರಬೇಕೆಂದು ಆದೇಶಿಸಲಾಗಿದೆ. ನಂತರ, ಸಮಿತಿಯು ಪ್ರತಿ ಹದಿನೈದು ದಿನಗಳಿಗೊಮ್ಮೆ ಅಥವಾ ಅಗತ್ಯವಿದ್ದರೆ ಮುಂಚಿತವಾಗಿ ಸಭೆ ಸೇರಿ, ವಿಶೇಷವಾಗಿ ಮಳೆಗಾಲದ ಅವಧಿಯಲ್ಲಿ ನ್ಯಾಯಾಲಯದ ನಿರ್ದೇಶನಗಳ ಪ್ರಗತಿ, ಅನುಷ್ಠಾನ ಮತ್ತು ಅನುಸರಣೆಯನ್ನು ಮೇಲ್ವಿಚಾರಣೆ ಮಾಡುತ್ತದೆ. ಸಮಿತಿಯು ಸ್ವಯಂಪ್ರೇರಿತವಾಗಿ ಅಥವಾ ಪರಿಹಾರಕ್ಕಾಗಿ ಅರ್ಜಿಗಳನ್ನು ಸ್ವೀಕರಿಸಿದ ನಂತರ ಅಥವಾ ಪತ್ರಿಕಾ ವರದಿಗಳ ಆಧಾರದ ಮೇಲೆ ಪ್ರಕರಣಗಳನ್ನು ವಿಚಾರಣೆಗೆ ಕೈಗೆತ್ತಿಕೊಳ್ಳಬಹುದು ಎಂದು ನ್ಯಾಯಾಲಯವು ಸೇರಿಸಿತು.

    ಪುರಸಭೆ, ಜಿಲ್ಲಾ ಅಥವಾ ಹೆದ್ದಾರಿ ಅಧಿಕಾರಿಗಳು ಅಥವಾ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಇಂತಹ ಅಪಘಾತಗಳ ಬಗ್ಗೆ ಸ್ವೀಕರಿಸುವ ದೂರುಗಳನ್ನು ಸಮಿತಿಗಳಿಗೆ ರವಾನಿಸಬೇಕು. ಅಂತಹ ಯಾವುದೇ ಅಪಘಾತವನ್ನು 48 ಗಂಟೆಗಳ ಒಳಗೆ ಈ ಸಮಿತಿಗಳಿಗೆ ತಿಳಿಸುವಂತೆ ಪೊಲೀಸ್ ಅಧಿಕಾರಿಗಳಿಗೆ ಆದೇಶಿಸಲಾಗಿದೆ. ದೋಷಪೂರಿತ ಅಥವಾ ಗುಣಮಟ್ಟವಿಲ್ಲದ ರಸ್ತೆ ಕಾಮಗಾರಿಗಳನ್ನು ನಿರ್ವಹಿಸಿದ ತಪ್ಪಿತಸ್ಥ ಅಧಿಕಾರಿಗಳು, ಎಂಜಿನಿಯರ್‌ಗಳು ಅಥವಾ ಗುತ್ತಿಗೆದಾರರ ವಿರುದ್ಧ ಕಠಿಣ ಶಿಸ್ತು ಮತ್ತು ದಂಡ ವಿಧಿಸುವಂತೆ ನ್ಯಾಯಾಲಯವು ಆದೇಶಿಸಿದೆ.

    ಯಾವುದೇ ಗುಂಡಿಗಳನ್ನು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದರೆ, ಅದನ್ನು ನಲವತ್ತೆಂಟು ಗಂಟೆಗಳ ಒಳಗೆ ದುರಸ್ತಿ ಮಾಡಬೇಕು ಅಥವಾ ಸರಿಪಡಿಸಬೇಕು. ಹಾಗೆ ಮಾಡಲು ವಿಫಲವಾದರೆ ಅದು ಸಂಪೂರ್ಣ ನಿರ್ಲಕ್ಷ್ಯವಾಗುತ್ತದೆ. ಜವಾಬ್ದಾರಿಯುತ ಅಧಿಕಾರಿಗಳು ಮತ್ತು ಗುತ್ತಿಗೆದಾರರ ವಿರುದ್ಧ ಇಲಾಖಾ ಕ್ರಮಕ್ಕೆ ಕಾರಣವಾಗುತ್ತದೆ ಎಂದು ನ್ಯಾಯಾಲಯ ಎಚ್ಚರಿಸಿದೆ.

  • ಬೆಂಗಳೂರಲ್ಲಿ ಭಾರೀ ಮಳೆಗೆ ಹಲವೆಡೆ ಜಲಾವೃತ – ಗುಂಡಿಬಿದ್ದ ರಸ್ತೆಗಳಲ್ಲಿ ನಿಂತ ನೀರು, ಕೆಟ್ಟು ನಿಂತ ವಾಹನಗಳು

    ಬೆಂಗಳೂರಲ್ಲಿ ಭಾರೀ ಮಳೆಗೆ ಹಲವೆಡೆ ಜಲಾವೃತ – ಗುಂಡಿಬಿದ್ದ ರಸ್ತೆಗಳಲ್ಲಿ ನಿಂತ ನೀರು, ಕೆಟ್ಟು ನಿಂತ ವಾಹನಗಳು

    ಬೆಂಗಳೂರು: ಸಿಲಿಕಾನ್‌ ಸಿಟಿಯಲ್ಲಿ ಮಳೆ ಬಂತು ಅಂದ್ರೆ ವಾಹನ ಸವಾರರು ಈಜುವ ಕಲೆ ಕಲಿಯುವ ಅನಿವಾರ್ಯತೆ ಎದುರಾಗಿದೆ. ಒಂದು ದಿನದ ಹಿಂದಷ್ಟೇ 30 ನಿಮಿಷ ಸುರಿದಿದ್ದ ಮಳೆಯಿಂದಾಗಿ ಹಲವು ರಸ್ತೆಗಳು ರಸ್ತೆಗಳು ಜಲಾವೃತಗೊಂಡಿದ್ದವು. ಇಂದು ಒಂದು ಗಂಟೆಗೂ ಹೆಚ್ಚು ಕಾಲ ಸುರಿದ ಬಳಿಕೆ ಹಲವು ರಸ್ತೆಗಳು ಜಲಾವೃತಗೊಂಡಿವೆ.

    ಗುಂಡಿ ಬಿದ್ದ ರಸ್ತೆಗಳಲ್ಲಿ ಭಾರೀ ಪ್ರಮಾಣದ ನೀರು ಕಟ್ಟಿಕೊಂಡಿದ್ದು, ಅಲ್ಲಲ್ಲಿ ವಾಹನಗಳು ಕೆಟ್ಟುನಿಲ್ಲುವಂತಾಗಿದೆ. ಮೆಜೆಸ್ಟಿಕ್, ಆನಂದ್ ರಾವ್ ಸರ್ಕಲ್, ಶಿವಾನಂದ ಸರ್ಕಲ್, ಮಲ್ಲೇಶ್ವರಂ, ಚಾಮರಾಜಪೇಟೆ, ಕಾರ್ಪರೇಶನ್, ಲಾಲ್‌ಬಾಗ್ ಸೇರಿದಂತೆ ಬೆಂಗಳೂರಿನ ಪ್ರಮುಖ ಭಾಗದಲ್ಲಿ ಭಾರಿ ಮಳೆಯಾಗುತ್ತಿದೆ. ಇತ್ತ ಎಲೆಕ್ಟ್ರಾನಿಕ್ ಸಿಟಿ ಸೇರಿದಂತೆ ಹೊರವಲಯಗಳಲ್ಲೂ ಮಳೆಯಾಗುತ್ತಿದೆ.

    ಗುಂಡಿಬಿದ್ದ ರಸ್ತೆಗಳಲ್ಲಿ ಕಟ್ಟಿಕೊಂಡ ನೀರು
    ಬೆಂಗಳೂರಿನ ಹೃದಯ ಭಾಗದಲ್ಲಿ ರಸ್ತೆಗಳಲ್ಲಿ ನೀರು ತುಂಬಿ ಹರಿಯುತ್ತಿದೆ. ವಾಹನ ಸವಾರರು ಪರದಾಡುತ್ತಿದ್ದಾರೆ. ಗುಂಡಿ ಬಿದ್ದ ರಸ್ತೆಗಳಲ್ಲಿ ಯಾವುದು ಗುಂಡಿ, ಯಾವುದು ರಸ್ತೆ ಅನ್ನೋದೇ ತಿಳಿಯದಾಗಿದೆ. ಫುಟ್ಬಾತ್‌ಗಳ ಮೇಲೂ ನೀರು ತಂಬಿಕೊಂಡಿದೆ. ಹಲವೆಡೆ ಗುಡುಗು ಸಹಿ ಮಳೆಯಾಗುತ್ತಿದೆ. ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.

    ಬೆಂಗಳೂರಲ್ಲಿ ಎಲ್ಲೆಲ್ಲಿ ಮಳೆ?
    ನಗರದ ಎಲೆಕ್ಟ್ರಾನಿಕ್‌ ಸಿಟಿ, ಮಾನ್ಯತಾ ಟೆಕ್ ಪಾರ್ಕ್ ಸುತ್ತಮುತ್ತ, ಸರ್ಜಾಪುರ, ಮಹದೇವಪುರ, ಪೀಣ್ಯ, ದಾಸರಹಳ್ಳಿ, ಕೋರಮಂಗಲ, ಮಲ್ಲೇಶ್ವರ, ಮೆಜೆಸ್ಟಿಕ್, ಎಲೆಕ್ಟ್ರಾನಿಕ್ ಸಿಟಿ, ವಿಪ್ರೋ ಗೇಟ್, ಸರ್ಜಾಪುರ, ಯಶವಂತಪುರ, ಕಾರ್ಪೋರೇಷನ್, ಬಿಟಿಎಂ ಲೇಔಟ್, ವರ್ತೂರು ಬಳಗೆರೆ ಸುತ್ತಮುತ್ತ ಭಾರೀ ಮಳೆಯಾಗುತ್ತಿದೆ. ವಾಹನ ಸವಾರರು ಪರದಾಡಿದ್ದಾರೆ. ಸರ್ಜಾಪುರದಲ್ಲಿ ರಸ್ತೆಯಲ್ಲೇ ನೀರು ನಿಂತು ವಾಹನ ಸವಾರರು ಹಿಡೀ ಶಾಪ ಹಾಕಿದ್ದಾರೆ.

    ಬೆಂಗಳೂರಲ್ಲಿ ಮುಂದಿನ 3 ಗಂಟೆ ಆರೇಂಜ್ ಅಲರ್ಟ್
    ಬೆಂಗಳೂರಿನಲ್ಲಿ ಭಾರಿ ಮಳೆಯಾಗುತ್ತಿದೆ. ಮುಂದಿನ 3 ಗಂಟೆ ಆರೇಂಜ್ ಅಲರ್ಟ್ ನೀಡಲಾಗಿದೆ. ರಾಜ್ಯ ಹವಾಮಾನ ಇಲಾಖೆಯಿಂದ ಮಳೆಯ‌ ಮುನ್ಸೂಚನೆ ನೀಡಿದೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ಚಾಮರಾಜನಗರ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಚಿಕ್ಕಬಳ್ಳಾಪುರ, ಕೊಡಗು ಮತ್ತು ಹಾಸನ ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿದೆ ಎಂದಿದೆ. ಕೆಲವು ಸ್ಥಳಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ.

  • ಬಿಜೆಪಿಯಿಂದ ಗುಂಡಿ ಮುಚ್ಚಿ ಅಭಿಯಾನ: ಹನೂರಿನಲ್ಲಿ ರಸ್ತೆ ಗುಂಡಿಯಲ್ಲಿ ನಾಟಿ ಮಾಡಿ ಆಕ್ರೋಶ

    ಬಿಜೆಪಿಯಿಂದ ಗುಂಡಿ ಮುಚ್ಚಿ ಅಭಿಯಾನ: ಹನೂರಿನಲ್ಲಿ ರಸ್ತೆ ಗುಂಡಿಯಲ್ಲಿ ನಾಟಿ ಮಾಡಿ ಆಕ್ರೋಶ

    ಚಾಮರಾಜನಗರ: ಬಿಜೆಪಿಯಿಂದ ವಿಧಾನಸಭಾ ಕ್ಷೇತ್ರದಲ್ಲಿ ರಸ್ತೆ ಗುಂಡಿ ಅಭಿಯಾನ ಹಿನ್ನೆಲೆ ಗಡಿ ಜಿಲ್ಲೆ ಚಾಮರಾಜನಗರದಲ್ಲೂ ಕೂಡ ಕ್ಷೇತ್ರವಾರು ಬಿಜೆಪಿಯಿಂದ ಗುಂಡಿ ಮುಚ್ಚಿ ಅಭಿಯಾನ ನಡೆಯಿತು.

    ಹನೂರು ಕ್ಷೇತ್ರದ ಬಿಜೆಪಿ ಕಾರ್ಯಕರ್ತರು ಕೊಳ್ಳೇಗಾಲದ ಮಧುವನಹಳ್ಳಿಯಿಂದ ಒಡೆಯರ್ ಪಾಳ್ಯ ಮೂಲಕ ತಮಿಳುನಾಡಿಗೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿಯು ಗುಂಡಿಮಯವಾಗಿದೆ ಎಂದು ರಸ್ತೆಯಲ್ಲಿ ಭತ್ತದ ಪೈರು ನಾಟಿ ಮಾಡಿ ಸರ್ಕಾರ ಹಾಗೂ ಸ್ಥಳೀಯ ಶಾಸಕರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

    ಗುಂಡ್ಲುಪೇಟೆ ಕ್ಷೇತ್ರದಲ್ಲೂ ಕೂಡ ಬಿಜೆಪಿ ಜಿಲ್ಲಾಧ್ಯಕ್ಷ ನಿರಂಜನ್ ಕುಮಾರ್ ನೇತೃತ್ವದಲ್ಲಿ ಗುಂಡ್ಲುಪೇಟೆ ಪಟ್ಟಣದ ಕೊಡಿಹಳ್ಳಿ ಸರ್ಕಲ್ ಬಳಿ ಹೆದ್ದಾರಿ ತಡೆದು ಪ್ರತಿಭಟಿಸಿ ಮಣ್ಣಿನ ಮೂಲಕ ಗುಂಡಿ ಮುಚ್ಚಿ ರಾಜ್ಯ ಸರ್ಕಾರ ಹಾಗೂ ಸ್ಥಳೀಯ ಕಾಂಗ್ರೆಸ್ ಶಾಸಕ ಗಣೇಶ್ ಪ್ರಸಾದ್ ವಿರುದ್ಧ ಧಿಕ್ಕಾರ ಕೂಗಿ ಗುಂಡಿ ಮುಚ್ಚಿ ಕ್ಷೇತ್ರದ ಎಲ್ಲ ಕಡೆಯೂ ಗುಂಡಿ ಮುಚ್ಚುವಂತೆ ಆಗ್ರಹಿಸಿದರು.

    ಸ್ಥಳೀಯ ಶಾಸಕ ಗಣೇಶ್ ಪ್ರಸಾದ್ ಅವರ ಊರು ಹಾಲಹಳ್ಳಿಗೆ ಪದೇ ಪದೆ ರಸ್ತೆ ಮಾಡಿಸುತ್ತಿದ್ದಾರೆ. ಆದರೆ, ಪಕ್ಕದ ಗ್ರಾಮಗಳಿಗೆ ರಸ್ತೆ ಭಾಗ್ಯ ಕಲ್ಪಿಸಿಲ್ಲ ಅಂತಾ ಆಕ್ರೋಶ ವ್ಯಕ್ತಪಡಿಸಿದರು.

  • ಬೆಂಗಳೂರಿನ ರಸ್ತೆಗುಂಡಿಗಳು ಬಿಜೆಪಿ ದುರಾಡಳಿತದ ಫಲ – ಡಿಕೆಶಿ

    ಬೆಂಗಳೂರಿನ ರಸ್ತೆಗುಂಡಿಗಳು ಬಿಜೆಪಿ ದುರಾಡಳಿತದ ಫಲ – ಡಿಕೆಶಿ

    – ರಸ್ತೆಗುಂಡಿ ಮುಚ್ಚುವ ಕೆಲಸಕ್ಕೆ 750 ಕೋಟಿ ಅನುದಾನ ಕೊಟ್ಟಿರುವ ಸಿಎಂ

    ಬೆಂಗಳೂರು: ನಗರದ ರಸ್ತೆ ಗುಂಡಿಗಳು ಬಿಜೆಪಿ (BJP) ಸರ್ಕಾರದ ದುರಾಡಳಿತದ ಫಲ, ರಸ್ತೆಗುಂಡಿಗಳನ್ನು ಮುಚ್ಚಲು ನಾವು ಬದ್ಧರಾಗಿದ್ದೇವೆ. ಇದಕ್ಕಾಗಿಯೇ ಮುಖ್ಯಮಂತ್ರಿಗಳು 750 ಕೋಟಿ ರೂ. ಅನುದಾನ ನೀಡಿದ್ದಾರೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ (DCM DK Shivakumar) ತಿಳಿಸಿದರು.

    ರವೀಂದ್ರ ಕಲಾಕ್ಷೇತ್ರ ಆವರಣದಲ್ಲಿ ಖ್ಯಾತ ಸಾಹಿತಿ ಎಸ್.ಎಲ್ ಬೈರಪ್ಪನವರ (SL Bhyrappa) ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಗರದಲ್ಲಿ ರಸ್ತೆಗುಂಡಿಗಳಿರುವುದು ನಿಜ. ಅವುಗಳನ್ನು ಮುಚ್ಚಲು ನಾವು ಕಾರ್ಯಪ್ರವೃತ್ತರಾಗಿದ್ದೇವೆ. ಎಲ್ಲೆಲ್ಲಿ ರಸ್ತೆಗುಂಡಿಗಳಿವೆ ಎಂದು ಮಾಹಿತಿ ನೀಡಿ ಎಂದು ಸಾರ್ವಜನಿಕರು, ಪೊಲೀಸರಿಗೆ ನಾನೇ ಮನವಿ ಮಾಡಿದ್ದೇನೆ. ಬಿಜೆಪಿ ಸರ್ಕಾರದ ದುರಾಡಳಿತದ ಪರಿಣಾಮವಾಗಿ ಈ ಪರಿಸ್ಥಿತಿ ಬಂದಿದೆ. ನಾವು ಈ ಸಮಸ್ಯೆಯನ್ನು ಬಗೆಹರಿಸುತ್ತೇವೆ. ಬೆಂಗಳೂರಿನ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಯಾವುದೇ ಅನುದಾನ ಕೊಟ್ಟಿಲ್ಲ ಎಂಬುದನ್ನು ಪ್ರತಿಭಟನೆ ಮಾಡುತ್ತಿರುವ ಬಿಜೆಪಿಗರು ಅರ್ಥಮಾಡಿಕೊಳ್ಳಬೇಕು. ನಾವು ಕೇಂದ್ರಕ್ಕೆ ಹೆಚ್ಚಿನ ತೆರಿಗೆ ಪಾವತಿ ಮಾಡುತ್ತಿದ್ದರೂ ಅವರು ಅನುದಾನ ನೀಡಿಲ್ಲ. ಬೊಮ್ಮಾಯಿ ಅವರ ಸರ್ಕಾರದ ಅವಧಿಯಲ್ಲೂ ಕೇಂದ್ರ ಸರ್ಕಾರದಿಂದ ಬೆಂಗಳೂರಿಗೆ ಸೂಕ್ತ ಅನುದಾನ ಸಿಕ್ಕಿಲ್ಲ. ಆದರೂ ನಾವು ಬೆಂಗಳೂರಿನ ಹಿತ ಕಾಪಾಡುತ್ತೇವೆ. ಬಿಜೆಪಿಗರು ಪ್ರತಿಭಟನೆ ಮಾಡಲಿ, ನಮ್ಮ ಕಾರ್ಯಕರ್ತರು ಬಿಜೆಪಿ ಆಡಳಿತದಲ್ಲಿರುವ ಹುಬ್ಬಳ್ಳಿ-ಧಾರವಾಡ ಸೇರಿದಂತೆ ಇತರೆ ಪಾಲಿಕೆಗಳಲ್ಲಿರುವ ರಸ್ತೆಗುಂಡಿ ಸಮಸ್ಯೆ ಬಗ್ಗೆ ಪ್ರತಿಭಟಿಸಲಿದ್ದಾರೆ ಎಂದರು.ಇದನ್ನೂ ಓದಿ: ರಿಸರ್ವ್‌ ಬ್ಯಾಂಕ್‌ ಲೋಗೋ ನೋಡಿ ಖೆಡ್ಡಾಕ್ಕೆ ಬಿದ್ದ ಮಹಿಳೆ – 30 ಲಕ್ಷದ ಆಸೆ ತೋರಿಸಿ 3.71 ಲಕ್ಷ ದೋಚಿದ ವಂಚಕ

    ಭೈರಪ್ಪ ಅವರದ್ದು ನೇರ ನುಡಿ, ಗಟ್ಟಿ ವ್ಯಕ್ತಿತ್ವ:
    1994ರಲ್ಲಿ ಕನಕಪುರದಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನವನ್ನು ನಡೆಸಲಾಗಿತ್ತು. ಆ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ಭೈರಪ್ಪ ಅವರು ವಹಿಸಿಕೊಂಡಿದ್ದರು. ಆ ಸಂದರ್ಭದಲ್ಲಿ ನನಗೆ ಅವರ ಪರಿಚಯವಾಗಿತ್ತು. ಅವರ ಮಾತು, ಬರವಣಿಗೆ ಸದಾ ನೇರನುಡಿಯಿಂದ ಕೂಡಿತ್ತು. ಅಂದು ಬನಶಂಕರಿಯಿಂದ ಮೆರವಣಿಗೆ ಮೂಲಕ ಅವರನ್ನು ಕರೆದೊಯ್ಯಲಾಗಿತ್ತು ಎಂದು ಹೇಳಿದರು.

    ಅವರ ಕಾದಂಬರಿಗಳು ವಿದೇಶಿ ಭಾಷೆಗಳಿಗೆ ಭಾಷಾಂತರವಾಗಿದ್ದು, ಚಲನಚಿತ್ರಗಳಾಗಿಯೂ ಮೂಡಿಬಂದಿವೆ. ಭೈರಪ್ಪ ಅವರಿಗೆ ಮಾಧ್ಯಮಗಳು ಕೂಡ ಅತ್ಯುತ್ತಮ ಗೌರವ ಸಲ್ಲಿಸುತ್ತಿದ್ದು, ಎಲ್ಲಾ ಮಾಧ್ಯಮಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ. ಭೈರಪ್ಪ ಅವರು ತಮ್ಮ ಬರವಣಿಗೆಯಲ್ಲಿ ನಮ್ಮ ಸಂಸ್ಕೃತಿಯನ್ನು ಎತ್ತಿ ಹಿಡಿದಿದ್ದಾರೆ. ಅವರಿಗೆ ರಾಷ್ಟ್ರಪ್ರಶಸ್ತಿ ಸೇರಿದಂತೆ ಪದ್ಮ ಪ್ರಶಸ್ತಿಗಳು ಲಭಿಸಿದೆ. ಇಡೀ ದೇಶದ ಗಣ್ಯರು ಭೈರಪ್ಪ ಅವರ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ. ಅವರ ಸಿದ್ಧಾಂತ, ನಿಲುವು, ನಡೆ ಕೇವಲ ಸಾಹಿತ್ಯ ಲೋಕಕ್ಕೆ ಮಾತ್ರವಲ್ಲ, ಸಮಾಜದ ಎಲ್ಲಾ ವರ್ಗಕ್ಕೆ ಮಾರ್ಗದರ್ಶನವಾಗಿದೆ ಎಂದರು.

    ಬಹಳ ಚಿಕ್ಕ ವಯಸ್ಸಿಗೆ ಸಾಹಿತ್ಯಲೋಕಕ್ಕೆ ಹೆಜ್ಜೆ ಇಟ್ಟು ತಮ್ಮ ಹೋರಾಟ ಆರಂಭಿಸಿದ್ದರು. ಅವರದು ಬಹಳ ಗಟ್ಟಿ ವ್ಯಕ್ತಿತ್ವ. ಮುಖ್ಯಮಂತ್ರಿಗಳು ಕೂಡ ಇವರ ಅಂತಿಮ ದರ್ಶನ ಪಡೆಯಲಿದ್ದು, ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತಿಮ ಸಂಸ್ಕಾರ ಮಾಡಲಾಗುವುದು. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ವೈಯಕ್ತಿಕವಾಗಿ, ಸರ್ಕಾರ ಹಾಗೂ ಪಕ್ಷದ ಪರವಾಗಿ ಪ್ರಾರ್ಥಿಸುತ್ತೇನೆ ಎಂದು ಹೇಳಿದರು.ಇದನ್ನೂ ಓದಿ: ರಾಜಭಾಷೆ ಹೆಸರಲ್ಲಿ ಹಿಂದಿ ಹೇರಿಕೆ: ಫೈವ್‌ಸ್ಟಾರ್‌ ಹೋಟೆಲ್‌ಗೆ ನುಗ್ಗಿದ ಕರವೇ ಕಾರ್ಯಕರ್ತರು

    ಸ್ಮಾರಕ ನಿರ್ಮಾಣ ಮಾಡಬೇಕು ಎಂಬ ಮನವಿ ಬಗ್ಗೆ ಕೇಳಿದಾಗ, ಮನವಿಗಳು ಬಂದಿವೆ, ಈ ವಿಚಾರದಲ್ಲಿ ವೈಯಕ್ತಿಕವಾಗಿ ನಾನು ತೀರ್ಮಾನ ಮಾಡಲು ಆಗುವುದಿಲ್ಲ. ಈ ವಿಚಾರವನ್ನು ಮುಖ್ಯಮಂತ್ರಿಯವರು ಎಲ್ಲರ ಜೊತೆ ಚರ್ಚೆ ಮಾಡಿ ತೀರ್ಮಾನ ಮಾಡುತ್ತಾರೆ. ಇತ್ತೀಚೆಗೆ ಚಿತ್ರರಂಗಕ್ಕೆ ಸಂಬಂಧಿಸಿದ ಕೆಲವು ತೀರ್ಮಾನವನ್ನು ಸಚಿವ ಸಂಪುಟದಲ್ಲಿ ಚರ್ಚಿಸಿ ತೀರ್ಮಾನ ಮಾಡಿದ್ದೇವೆ ಎಂದು ತಿಳಿಸಿದರು.

    ಬಿಹಾರದ ಪಾಟ್ನಾದಲ್ಲಿ ನಡೆದ ಸಿಡಬ್ಲ್ಯೂಸಿ ಸಭೆಯ ನಿರ್ಣಯಗಳ ಕುರಿತು ಕೇಳಿದಾಗ, ಈ ವಿಚಾರವಾಗಿ ನಾನು ಇಂದು ಮಾತನಾಡುವುದಿಲ್ಲ. ನಾವು ಸಂವಿಧಾನಬದ್ಧವಾಗಿ ಸಿಕ್ಕಿರುವ ಒಬ್ಬ ವ್ಯಕ್ತಿಗೆ ಒಂದು ಮತ ಎಂಬ ಹಕ್ಕಿನ ರಕ್ಷಣೆಗೆ ನಾವು ಬದ್ಧವಾಗಿದ್ದೇವೆ ಎಂದರು.ಇದನ್ನೂ ಓದಿ: ಸರ್ಕಾರಕ್ಕೆ ಬುರುಡೆ ಗ್ಯಾಂಗ್‌ನಿಂದ ಮೋಸ – ನನಗೆ ಗೊತ್ತಿಲ್ಲ ಎಂದ ಪರಮೇಶ್ವರ್‌

  • ದೆಹಲಿಯಲ್ಲಿರುವ ಪ್ರಧಾನಿ ಮೋದಿ ನಿವಾಸದ ರಸ್ತೆಯಲ್ಲೂ ಗುಂಡಿಗಳಿವೆ: ಡಿಕೆಶಿ ಕೌಂಟರ್

    ದೆಹಲಿಯಲ್ಲಿರುವ ಪ್ರಧಾನಿ ಮೋದಿ ನಿವಾಸದ ರಸ್ತೆಯಲ್ಲೂ ಗುಂಡಿಗಳಿವೆ: ಡಿಕೆಶಿ ಕೌಂಟರ್

    – ಬಿಜೆಪಿಗೆ ಟೀಕೆಗೆ ಡಿಸಿಎಂ ತಿರುಗೇಟು

    ಬೆಂಗಳೂರು: ದೆಹಲಿಯಲ್ಲಿರುವ ಪ್ರಧಾನಿ ಮೋದಿಯವರ (Narendra Modi) ನಿವಾಸದ ರಸ್ತೆಯಲ್ಲೂ ಗುಂಡಿಗಳಿವೆ. ಇಡೀ ದೇಶದಲ್ಲಿ ಇದೇ ಸ್ಥಿತಿ ಇದೆ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ (DK Shivakumar) ತಿರುಗೇಟು ನೀಡಿದ್ದಾರೆ.

    ಬಿಹಾರಕ್ಕೆ ತೆರಳುವ ಮುನ್ನ ಸದಾಶಿವನಗರದ ನಿವಾಸದಲ್ಲಿ ಮಾತನಾಡಿದ ಅವರು, ಈ ಹಿಂದೆ ಬಿಜೆಪಿ ಆಡಳಿತದಲ್ಲಿ ಸರಿಯಾದ ರಸ್ತೆ ಮಾಡಿದರೆ ಇವತ್ತು ಈ ರೀತಿಯ ಪರಿಸ್ಥಿತಿ ಬರುತ್ತಿಲಿಲ್ಲ ಎಂದಿದ್ದಾರೆ. ಇದನ್ನೂ ಓದಿ: ವಿಮಾನದ ಲ್ಯಾಂಡಿಂಗ್ ಗೇರ್ ಬಳಿ ಅಡಗಿ 2 ಗಂಟೆ ಪ್ರಯಾಣಿಸಿ ಭಾರತಕ್ಕೆ ಬಂದ ಅಫ್ಘಾನ್‌ ಬಾಲಕ!

    ನಮ್ಮ ಜಿಬಿಎ ಅಧಿಕಾರಿಗಳು ಪ್ರತಿನಿತ್ಯ 1,000 ಗುಂಡಿಗಳನ್ನ ಮುಚ್ಚುತ್ತಿದ್ದಾರೆ. ಅವ್ರು ನಾವು ಅದಷ್ಟು ಬೇಗ ಗುಂಡಿಗಳಿಂದ (Potholes) ಮುಕ್ತ ಬೆಂಗಳೂರು ಮಾಡುತ್ತೇವೆ ಅಂತಿದ್ದಾರೆ ಎಂದು ಭರವಸೆಯ ಮಾತುಗಳನ್ನಾಡಿದ್ದಾರೆ.

    ನಾವು ಗುಂಡಿಗಳನ್ನ ಮುಚ್ಚಿಸೋ ಕೆಲಸ ಮಾಡ್ತಾನೆ ಇದ್ದೇವೆ. ಬರೀ ಬೆಂಗಳೂರಿನಲ್ಲಿ ಮಾತ್ರ ಗುಂಡಿಗಳು ಇರೋ ರೀತಿ ಬಿಂಬಿಸಲಾಗ್ತಿದೆ ಎಂದು ದೂರಿದ್ದಾರೆ.

  • ಅಕ್ಟೋಬರ್‌ ಒಳಗೆ ಗುಂಡಿ ಮುಚ್ಚದಿದ್ರೆ ಚೀಫ್‌ ಎಂಜಿನಿಯರ್‌ಗಳೇ ಸಸ್ಪೆಂಡ್‌: ಸಿದ್ದರಾಮಯ್ಯ ಖಡಕ್‌ ವಾರ್ನಿಂಗ್‌

    ಅಕ್ಟೋಬರ್‌ ಒಳಗೆ ಗುಂಡಿ ಮುಚ್ಚದಿದ್ರೆ ಚೀಫ್‌ ಎಂಜಿನಿಯರ್‌ಗಳೇ ಸಸ್ಪೆಂಡ್‌: ಸಿದ್ದರಾಮಯ್ಯ ಖಡಕ್‌ ವಾರ್ನಿಂಗ್‌

    – ಜನರ ಕಷ್ಟ ನಿಮ್ಮ ಕಣ್ಣಿಗೆ ಬೀಳ್ತೀಲ್ವಾ? ನಿಮ್ಮಿಂದ ಸರ್ಕಾರಕ್ಕೆ ಕೆಟ್ಟ ಹೆಸರು; ಸಿಎಂ ಫುಲ್‌ ಗರಂ
    – ಒಟ್ಟು 14,795 ರಸ್ತೆ ಗುಂಡಿಗಳ ಗುರುತು; 8,046 ಗುಂಡಿಗಳು ಮುಚ್ಚಲು ಬಾಕಿ

    ಬೆಂಗಳೂರು: ಬೆಂಗಳೂರು ನಗರ ರಸ್ತೆಗಳ (Bengaluru City Roads) ಸುಧಾರಣೆ ಹಾಗೂ ಸಂಚಾರ ವ್ಯವಸ್ಥೆ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಗೃಹ ಕಚೇರಿ ಕೃಷ್ಣಾದಲ್ಲಿದಂದು ಮಹತ್ವದ ಸಭೆ ನಡೆಯಿತು. ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಸಿದ್ದರಾಮಯ್ಯ (Siddaramaiah) ಅವರು ಎಂಜಿನಿಯರ್‌ಗಳನ್ನ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು.

    ಸಭೆಯಲ್ಲಿ ಸರ್ಕಾರದ ಮುಖ್ಯಕಾರ್ಯದರ್ಶಿ ಶಾಲಿನಿ ರಜನೀಶ್‌ ಅವರಿಂದ ಮಾಹಿತಿ ಪಡೆದ ಸಿಎಂ, ಹಾಳಾಗಿರುವ ನಗರದ ರಸ್ತೆ ಗುಂಡಿಗಳಿಂದ (Potholes) ಜನ ಹೈರಾಣಾಗಿದ್ದಾರೆಂದು ಅಧಿಕಾರಿಗಳ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

    ರಸ್ತೆ ಗುಂಡಿಗಳನ್ನು ಮುಚ್ಚಲು ನಿಮಗೇನು ಕಷ್ಠ? ನಿಮ್ಮಿಂದ ಸರ್ಕಾರಕ್ಕೆ ಕೆಟ್ಟ ಹೆಸರು, ನಾಚಿಕೆ ಆಗುವುದಲ್ಲವೇ ನಿಮ್ಗೆ? ಮಚ್ಚಿರುವ ಗುಂಡಿಗಳೂ ನೆಟ್ಟಗಿಲ್ಲ. ಜನರ ಪ್ರತಿನಿತ್ಯದ ಸಂಕಷ್ಟ ನಿಮ್ಮ ಕಣ್ಣಿಗೆ ಬೀಳುತ್ತಿಲ್ಲವಾ? ತುರ್ತು ಕ್ರಮ ಏಕೆ ತೆಗೆದುಕೊಳ್ಳುತ್ತಿಲ್ಲ? ಪ್ರತಿ ವಾರ್ಡ್‌ನ ಎಂಜಿನಿಯರ್‌ಗಳು, ಮುಖ್ಯ ಎಂಜಿನಿಯಋಗಳು ಏನ್‌ ಮಾಡ್ತಿದ್ದಾರೆ? ಇನ್ನು ಒಂದು ತಿಂಗಳ ಕಾಲಾವಕಾಶ ನೀಡುತ್ತೇವೆ. ರಸ್ತೆ ಗುಂಡಿಗಳನ್ನು ಮುಚ್ಚಲು ಕಟ್ಟುನಿಟ್ಟಿನ ಕ್ರಮ ವಹಿಸಲೇಬೇಕು ಮತ್ತು ರಸ್ತೆಗಳನ್ನು ಸಂಚಾರ ಯೋಗ್ಯ ಮಾಡಲೇಬೇಕು. ರಸ್ತೆ ನಿರ್ವಹಣೆಗೆ ಸೂಕ್ತ ಕ್ರಮ ವಹಿಸದ ಅಧಿಕಾರಿಗಳ ಮೇಲೆ ಮುಲಾಜಿಲ್ಲದೇ ಕಠಿಣ ಕ್ರಮ ಕೈಗೊಳ್ಳಲಾಗುವುದು. ನಾನು ಯಾರ ಮುಖವನ್ನೂ ನೋಡಲ್ಲ. ಗುಂಡಿ ಮುಚ್ಚದಿದ್ದರೇ ಎಲ್ಲ ಚೀಫ್ ಎಂಜಿನಿಯರ್‌ಗಳನ್ನ ಸಸ್ಪೆಂಡ್‌ ಮಾಡಿ ಮನೆಗೆ ಕಳಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

    ಗುತ್ತಿಗೆದಾರರೊಂದಿಗೆ ಶಾಮೀಲಾಗದೇ ಒದಗಿಸಿರುವ ಅನುದಾನಕ್ಕೆ ಉತ್ತಮ ಗುಣಮಟ್ಟದ, ವೈಜ್ಞಾನಿಕವಾದ ಕಾಮಗಾರಿಗಳನ್ನು ಪೂರೈಸಲು ಕ್ರಮ ವಹಿಸಿ. ಮಳೆಗಾಲಕ್ಕೆ ಮುನ್ನವೇ ರಸ್ತೆ ಕಾಮಗಾರಿಗಳನ್ನು ಯಾಕೆ ಮಾಡುತ್ತಿಲ್ಲ? ಮಳೆಗಾಲದಲ್ಲಿಯೇ ಏಕೆ ಪ್ರಾರಂಭಿಸುವಿರಿ? ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ ನೂತನವಾಗಿ ನೇಮಕಗೊಂಡಿರುವ ಆಯುಕ್ತರು ಫೀಲ್ಡ್ ವರ್ಕ್ ಮಾಡಿ, ನಿಗಾ ಇರಿಸಬೇಕು ಎಂದು ತಾಕೀತು ಮಾಡಿದರು.

    ಬಿಡಿಎ, ಬಿಎಂಆರ್ ಸಿಎಲ್, ಜಲಮಂಡಳಿ ಅಧಿಕಾರಿಗಳ ನಡುವೆ ಸಮನ್ವಯವೇ ಇರುವುದಿಲ್ಲ. ರಸ್ತೆ ಗುಂಡಿಗಳನ್ನು ಮುಚ್ಚಲು ಹಾಗೂ ಎಲ್ಲಾ ರಸ್ತೆಗಳನ್ನು ಸಂಚಾರ ಯೋಗ್ಯ ಮಾಡಲು ಒಂದು ತಿಂಗಳ ಗಡುವು ನೀಡಲಾಗುವುದು. ಎಲ್ಲಾ ಇಲಾಖೆಗಳು ಸಮನ್ವಯತೆಯಿಂದ ಕಾರ್ಯ ನಿರ್ವಹಿಸಬೇಕು. ಮುಖ್ಯ ಆಯುಕ್ತರು ಪ್ರತಿ ವಾರ 5 ವಲಯಗಳ ಆಯುಕ್ತರೊಂದಿಗೆ ಸಭೆ ನಡೆಸಿ, ನಿರಂತರ ಸಂಪರ್ಕದಲ್ಲಿರಬೇಕು. ಹಣದ ಕೊರತೆಯಿದ್ದರೆ ಆರ್ಥಿಕ ಇಲಾಖೆಯಿಂದ ಬಿಡುಗಡೆಗೊಳಿಸಲು ಕ್ರಮ ಕೈಗೊಳ್ಳುತ್ತೇವೆ. ಆದ್ಯತೆ ಮೇರೆಗೆ ಕ್ರಮ ವಹಿಸಿ. ಒಂದು ತಿಂಗಳ ನಂತರ ಮತ್ತೆ ಮೌಲ್ಯ ಮಾಪನ ನಡೆಸಲಾಗುವುದು ಎಂದು ಹೇಳಿದರು ಸಿಎಂ

    14,795 ರಸ್ತೆ ಗುಂಡಿಗಳ ಗುರುತು
    ಗ್ರೇಟರ್ ಬೆಂಗಳೂರು ಪ್ರಾಧಿಕಾರದ ರಸ್ತೆ ಜಾಲದಲ್ಲಿ 1,648.43 ಕಿ.ಮೀ ಉದ್ದದ ಆರ್ಟೀರಿಯಲ್ ಮತ್ತು ಸಬ್ ಆರ್ಟೀರಿಯಲ್ ರಸ್ತೆಗಳಿವೆ. 46.61 ಕಿ.ಮೀ ಹೈಡೆನ್ಸಿಟಿ ಕಾರಿಡಾರ್ ರಸ್ತೆಗಳಿವೆ. ಬೆಂಗಳೂರು ಕೇಂದ್ರ, ಬೆಂಗಳೂರು ಪೂರ್ವ, ಪಶ್ಚಿಮ ಉತ್ತರ ಮತ್ತು ದಕ್ಷಿಣ ನಗರಪಾಲಿಕೆಗಳಲ್ಲಿ ಒಟ್ಟು 14,795 ರಸ್ತೆ ಗುಂಡಿಗಳನ್ನು ಗುರುತಿಸಿಲಾಗಿದೆ. ಈಗಾಗಲೇ 6,749 ಗುಂಡಿಗಳನ್ನು ಮುಚ್ಚಲಾಗಿದ್ದು 8,046 ಗುಂಡಿಗಳು ಮುಚ್ಚಲು ಬಾಕಿ ಇವೆ. ಅಕ್ಟೋಬರ್ ಅಂತ್ಯ ವೇಳೆಗೆ ಎಲ್ಲಾ ಗುಂಡಿಗಳನ್ನು ಮುಚ್ಚಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಈಗಾಗಲೇ 108.20 ಕಿ.ಮೀ ಉದ್ದದ ರಸ್ತೆಗಳಲ್ಲಿ ವೈಟ್ ಟಾಪಿಂಗ್ ಕಾಮಗಾರಿ ಪೂರ್ಣಗೊಂಡಿದೆ.‌ 143.68 ಕಿ.ಮೀ ಉದ್ದದ ರಸ್ತೆ ಯಲ್ಲಿ ವೈಟ್ ಟಾಪಿಂಗ್ ಕಾಮಗಾರಿ ಪ್ರಗತಿಯಲ್ಲಿದೆ. 401.63 ಕಿ. ಮೀ ರಸ್ತೆಗಳು ಡಾಂಬರೀಕರಣ ಗೊಂಡಿದ್ದು, 440.92 ಕಿ.ಮೀ ಡಾಂಬರೀಕರಣ ಕಾಮಗಾರಿ ಪ್ರಗತಿಯಲ್ಲಿದೆ. ಒಟ್ಟಾರೆ 584.60 ಕಿ ಮೀ ಉದ್ದದ ರಸ್ತೆಗಳಲ್ಲಿ  ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ ಎಂದು ಸಭೆಗೆ ಅಧಿಕಾರಿಗಳು ಮಾಹಿತಿ ನೀಡಿದರು.

    * ಆರ್ಟೀರಿಯಲ್ ಮತ್ತು ಸಬ್ ಆರ್ಟೀರಿಯಲ್ ರಸ್ತೆಗಳಲ್ಲಿ ಗುಂಡಿಗಳನ್ನು ಮುಚ್ಚಲು 2025-26ರ ಆಯವ್ಯಯದಲ್ಲಿ 18 ಕೋಟಿ ರೂ.ಗಳ ಅನುದಾನ ಒದಗಿಸಲಾಗಿದೆ.
    * ಎಲ್ಲಾ ನಗರ ಪಾಲಿಕೆಗಳಿಗೂ ತುರ್ತು ಕಾಮಗಾರಿ ಕೈಗೊಳ್ಳಲು 25 ಕೋಟಿ ರೂ.ಗಳ ಹಣ ಬಿಡುಗಡೆ ಮಾಡಲಾಗಿದ್ದು, ಪಾಲಿಕೆಗಳಿಂದ ರಸ್ತೆ ಗುಂಡಿಗಳನ್ನು ಮುಚ್ಚಲು ಕ್ರಮ ವಹಿಸಲಾಗಿದೆ.
    * ನೂತನ ತಂತ್ರಜ್ಞಾನ JETPATCHER ಬಳಸಿಕೊಳ್ಳಲು 2.50 ಕೋಟಿ ರೂ.ಗಳ ಮೊತ್ತದ ಟೆಂಡರ್ ಚಾಲ್ತಿಯಲ್ಲಿದ್ದು ಸದರಿ ತಂತ್ರಜ್ಞಾನದಿಂದ ತೇವಾಂಶವಿರುವ ಸಮಯದಲ್ಲಿಯೂ ಗುಂಡಿಗಳನ್ನು ಮುಚ್ಚಬಹುದಾಗಿದೆ.
    * ಐದೂ ಪಾಲಿಕೆಗಳೊಂದಿಗೆ ಸಮನ್ವಯ ಸಾಧಿಸಲು ಒಬ್ಬ ತಾಂತ್ರಿಕ ಸಮನ್ವಯಾಧಿಕಾರಿ ನೇಮಿಸಲು ಕ್ರಮ.
    * ಇಬ್ಬಲೂರು ಜಂಕ್ಷನ್, ಅಗರ, ವೀರಣ್ಣನ ಪಾಳ್ಯ, ನಾಗವಾರ ಮತ್ತು ಹೆಬ್ಬಾಳ ಜಂಕ್ಷನ್‌ಗಳಲ್ಲಿ ಜಲಮಂಡಳಿ ಮತ್ತು ಮೆಟ್ರೋ ಕಾಮಗಾರಿಯಿಂದ ಜಂಕ್ಷನ್ ಹಾಳಾಗಿದ್ದು 400 ಕೋಟಿ ರೂ.ಗಳ ಹೊರವರ್ತುಲ ರಸ್ತೆ ಅಭಿವೃದ್ಧಿ ಯೋಜನೆಯಡಿ ಸಮಗ್ರವಾಗಿ ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ ಎಂದು ಸಿಎಂ ತಿಳಿಸಿದರು.

  • ಬೆಂಗಳೂರಲ್ಲಿ ರಸ್ತೆ ಗುಂಡಿಗಳನ್ನ ಮುಚ್ಚಲು ಡೆಡ್‌ಲೈನ್‌ ಫಿಕ್ಸ್‌ ಮಾಡಿದ ಡಿಸಿಎಂ ಡಿಕೆಶಿ

    ಬೆಂಗಳೂರಲ್ಲಿ ರಸ್ತೆ ಗುಂಡಿಗಳನ್ನ ಮುಚ್ಚಲು ಡೆಡ್‌ಲೈನ್‌ ಫಿಕ್ಸ್‌ ಮಾಡಿದ ಡಿಸಿಎಂ ಡಿಕೆಶಿ

    – ʻಪಬ್ಲಿಕ್‌ ಟಿವಿʼ ನಿರಂತರ ವರದಿ ಬಳಿಕ ಡೆಡ್‌ಲೈನ್‌ ಫಿಕ್ಸ್‌

    ಬೆಂಗಳೂರು: ನಗರದಲ್ಲಿ ಗುಂಡಿ ಗಂಡಾಂತರದ ಬಗ್ಗೆ ʻಪಬ್ಲಿಕ್‌ ಟಿವಿʼ (Public TV) ನಿರಂತರ ವರದಿ ಬಳಿಕ ಡಿಸಿಎಂ ಡಿಕೆ ಶಿವಕುಮಾರ್‌ (DK Shivakumar), ರಸ್ತೆ ಗುಂಡಿಗಳನ್ನ ಮುಚ್ಚಲು ಡೆಡ್‌ಲೈನ್‌ ಫಿಕ್ಸ್‌ ಮಾಡಿದ್ದಾರೆ.

    ಈ ಬಗ್ಗೆ ತಮ್ಮ ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ವೊಂದನ್ನ ಹಂಚಿಕೊಂಡಿದ್ದಾರೆ. ʻಬೆಂಗಳೂರಿನ ರಸ್ತೆ ಗುಂಡಿಗಳ (Road Potholes) ಸಮಸ್ಯೆಯನ್ನು ಬಗೆಹರಿಸಲು ನವೆಂಬರ್ ಒಳಗೆ ರಸ್ತೆ ಗುಂಡಿಗಳನ್ನು ಮುಚ್ಚುವಂತೆ ಗುತ್ತಿಗೆದಾರರಿಗೆ ಅಂತಿಮ ಗಡುವು ನೀಡಲಾಗಿದೆ. ಸ್ವಚ್ಛ ಬೆಂಗಳೂರು ಹಾಗೂ ಸುಗಮ ಸಂಚಾರವೇ ನಮ್ಮ ಗುರಿಯಾಗಿರುವುದರಿಂದ ಆದಷ್ಟು ಬೇಗ ರಸ್ತೆ ಗುಂಡಿಗಳಿಗೆ ಜಿಬಿಎ ಮುಕ್ತಿ ನೀಡಲಿದೆ ಎಂದು ತಿಳಿಸಿದ್ದಾರೆ.

    ಹೆಜ್ಜೆಹೆಜ್ಜೆಗೂ ಗುಂಡಿಗಳು.. ಅಂಕು ಡೊಂಕಿನ ರಸ್ತೆಗಳು!
    ಯೆಸ್‌. ಬೆಂಗಳೂರಿನಲ್ಲಿ ಅದೇಕೋ ಗುಂಡಿ ಗಂಡಾಂತರ ತಪ್ಪುವ ಲಕ್ಷಣವೇ ಕಾಣುತ್ತಿಲ್ಲ. ಹೆಜ್ಜೆ ಹೆಜ್ಜೆಗೂ ಗುಂಡಿಗಳು ಕಣ್ಣಿಗೆ ರಾಚುತ್ತಿವೆ. ವಾಹನ ಸವಾರರು ರಸ್ತೆಯಲ್ಲಿ ಸರ್ಕಸ್ ರೀತಿ ಸಂಚರಿಸುವಂತಾಗಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಂಗಳೂರಿನ ಮಾನವನ್ನ ಗುಂಡಿಗಳು ಹರಾಜು ಹಾಕ್ತಿವೆ. ಬಿಬಿಎಂಪಿಯಿಂದ ಗ್ರೇಟರ್ ಬೆಂಗಳೂರು ಆಗಿ ಬದಲಾದ್ರೂ ರಸ್ತೆಗುಂಡಿಗಳ ಹಾವಳಿ ತಪ್ಪುತ್ತಿಲ್ಲ. ಗ್ರೇಟರ್ ಬೆಂಗಳೂರು ರಸ್ತೆಗುಂಡಿಗಳಲ್ಲೂ ಗ್ರೇಟಾಗಿದೆ ಅನ್ನೋದರಲ್ಲಿ ತಪ್ಪೇನಿಲ್ಲ. ಈ ರಸ್ತೆ ಗುಂಡಿ ವಿಚಾರದಲ್ಲಿ `ಪಬ್ಲಿಕ್ ಟಿವಿ’ ವಿಸ್ತೃತ ವರದಿ ಪ್ರಸಾರ ಮಾಡುತ್ತಲೇ ಬಂದಿದೆ. ಈಗ ರಸ್ತೆ ಗುಂಡಿಯಿಂದ ರೋಸಿ ಹೋಗಿ ಕಂಪನಿಗಳು ಬೆಂಗಳೂರು ತೊರೆಯುವ ಆತಂಕ ಮೂಡಿಸಿವೆ.

    ಬೆಂಗಳೂರು ರಸ್ತೆ ಗುಂಡಿ ವಿರುದ್ಧ ಉದ್ಯಮಿಗಳ ಆಕ್ರೋಶ
    ಬೆಂಗಳೂರು ನಗರದ ರಸ್ತೆ ಗುಂಡಿಗಳ ಬಗ್ಗೆ ಸಣ್ಣ ಮಕ್ಕಳನ್ನ ಕೇಳಿದ್ರೂ ಬೇಸರ ವ್ಯಕ್ತಪಡಿಸ್ತಾರೆ. ಆ ಮಟ್ಟಿಗೆ ನರಕಯಾತನೆ ಬೆಂಗಳೂರಿನ ಜನ ಅನುಭವಿಸುತ್ತಿದ್ದಾರೆ. ಈಗ ರಸ್ತೆ ಗುಂಡಿಗಳಿಂದಾಗಿ ಎಂಎನ್‌ಸಿ ಕಂಪನಿಗಳು ಬೆಂಗಳೂರಿನಿಂದ ದೂರ ದೂರ ಆಗುವ ಆತಂಕ ಮೂಡಿದೆ. ಇದಕ್ಕೆ ಕಾರಣವಾಗಿದ್ದು ಬ್ಲಾಕ್ ಬಕ್ ಕಂಪನಿ ಸಿಇಒ ರಾಜೇಶ್ ಯಬಜಿ ಎಕ್ಸ್ ಖಾತೆಯಲ್ಲಿ ಮಾಡಿದ ಒಂದು ಟ್ವೀಟ್. ದಿನದ ಅರ್ಧ ದಿನ ನಮ್ಮ ಕಂಪನಿ ಸಿಬ್ಬಂದಿ ರಸ್ತೆಯಲ್ಲೇ ಕಳೆಯುವಂತಾಗಿದೆ. ಈಗ ರಸ್ತೆಗುಂಡಿ, ಧೂಳು.. ಟ್ರಾಫಿಕ್ ಜಾಮ್ ಇವೆಲ್ಲದ್ರಿಂದ ಶಿಫ್ಟ್ ಆಗುವಂತಾಗಿದೆ. ಕಳೆದ 5 ವರ್ಷದಿಂದ ಯಾವುದೇ ಬದಲಾವಣೆ ಆಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ರು. ಇನ್ನು ಉದ್ಯಮಿ ಕಿರಣ್ ಮಜುಂದಾರ್ ಶಾ, ಉದ್ಯಮಿ ಮೋಹನ್‌ದಾಸ್ ಪೈ ಸಹ ಟ್ವೀಟ್ ಮಾಡಿ ರಸ್ತೆ ಗುಂಡಿ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

    ಗುಂಡಿ ಮುಚ್ಚಲು ಕೋಟಿ ಕೋಟಿ ರಿಲೀಸ್.. ಏನಾಯ್ತು..?
    ಬೆಂಗಳೂರಿನಲ್ಲಿ ಬರೀ 10 ಸಾವಿರ ಗುಂಡಿ ಇದೆ ಅಂತ ಡಿಸಿಎಂ ಡಿಕೆಶಿ ಹೇಳಿದ್ರು. ಈವರೆಗೆ 6 ಸಾವಿರ ಗುಂಡಿ ಮುಚ್ಚಿದ್ದೇವೆ. 4 ಸಾವಿರ ಗುಂಡಿ ಮುಚ್ಚುತ್ತೇವೆ ಎಂದಿದ್ರು. ಈ ತಿಂಗಳಲ್ಲೇ ಮುಚ್ಚುತ್ತೇವೆ ಅಂದಿದ್ದರು. ಆದರೆ ಬೆಂಗಳೂರಿನಲ್ಲಿ ಹೆಜ್ಜೆಹೆಜ್ಜೆಗೂ ರಸ್ತೆಗುಂಡಿಗಳ ದರ್ಬಾರ್ ನಡೀತಿದೆ. ಹಾಗಾದ್ರೆ ಕೋಟಿ ಕೋಟಿ ಬಿಡುಗಡೆ ಆಗಿದ್ದ ಹಣ ಏನಾಯ್ತು.. ರಸ್ತೆಗುಂಡಿ ಗಳ ಬಗ್ಗೆ ಸರ್ಕಾರಕ್ಕೆ ಇಷ್ಟೊಂದು ನಿರ್ಲಕಷ್ಯನಾ? ಡಿಸಿಎಂ ಡಿಕೆಶಿ ಸರ್ಕಾರಿ ನಿವಾಸದ ಕೂಗಳತೆ ದೂರದಲ್ಲೇ ಗುಂಡಿಬಿದ್ದ ರಸ್ತೆಗಳು ಕಂಡುಬಂದಿವೆ.

    ಈ ಬಗ್ಗೆ ಪಬ್ಲಿಕ್‌ ಟಿವಿ ನಿರಂತರ ವರದಿ ಪ್ರಸಾರ ಮಾಡುತ್ತಿದ್ದಂತೆ ಸರ್ಕಾರ ಎಚ್ಚೆತ್ತುಕೊಂಡಿದೆ.

  • ಮಡಿಕೇರಿ ರಸ್ತೆಗಳು ಗುಂಡಿಮಯ – ದಸರಾ ಹತ್ತಿರ ಬಂದ್ರೂ ಸಿಗದ ದುರಸ್ತಿ ಭಾಗ್ಯ!

    ಮಡಿಕೇರಿ ರಸ್ತೆಗಳು ಗುಂಡಿಮಯ – ದಸರಾ ಹತ್ತಿರ ಬಂದ್ರೂ ಸಿಗದ ದುರಸ್ತಿ ಭಾಗ್ಯ!

    ಮಡಿಕೇರಿ: ಮಂಜಿನ ನಗರಿ ಮಡಿಕೇರಿಯ ಐತಿಹಾಸಿಕ ದಸರಾ (Madikeri Dasara) ಉತ್ಸವಕ್ಕೆ ದಿನಗಣನೆ ಅರಂಭವಾಗಿದೆ. ದಸರಾ ಸಮಿತಿಗಳು ಮಂಟಪ ತಯಾರಿ ಕೆಲಸದಲ್ಲಿ ತೊಡಗಿವೆ. ಆದ್ರೆ ಮಂಟಪಗಳು ಸಾಗುವ ರಸ್ತೆಗಳು ಮಾತ್ರ ಸಂಪೂರ್ಣವಾಗಿ ಗುಂಡಿಮಯವಾಗಿದೆ. ದೇಶ-ವಿದೇಶಗಳಿಂದ ಅಗಮಿಸುವ ಲಕ್ಷಾಂತರ ಪ್ರವಾಸಿಗರು ಈ ಬಾರಿ ಮಡಿಕೇರಿ ನಗರಸಭೆಗೆ ಹಿಡಿಶಾಪ ಹಾಕುವ ಪರಿಸ್ಥಿತಿ ನಿರ್ಮಾಣವಾಗಿದೆ.

    ಹೌದು. ಮಡಿಕೇರಿ ನಗರದಲ್ಲಿ ಎಲ್ಲಿ ನೋಡಿದ್ರೂ ರಸ್ತೆಗಳು ಸಂಪೂರ್ಣ ಗುಂಡಿಮಯವಾಗಿದೆ (Road Potholes). ನಗರದ ಬಡಾವಣೆಯ ರಸ್ತೆಗಳ ಸ್ಥಿತಿಯಂತೂ ಹೇಳ ತೀರದ್ದಾಗಿದೆ. ಎಲ್ಲೆಂದರಲ್ಲಿ ತಗ್ಗು ಗುಂಡಿಗಳಿಂದ ಕೂಡಿರುವ ರಸ್ತೆಯಲ್ಲಿ ವಾಹನ ಸವಾರರು ದಿನ ನಿತ್ಯ ಸರ್ಕಸ್ ಮಾಡುತ್ತಾ ಸವಾರಿ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ. ಐತಿಹಾಸಿಕ ದಸರಾಕ್ಕೆ ದಿನಗಣನೆ ಅರಂಭವಾಗಿದ್ರೂ ಮಳೆಯ ನೇಪ ಹೇಳಿಕೊಂಡು ದಿನ ಕಳೆಯುತ್ತಿರುವ ಮಡಿಕೇರಿ ನಗರಸಭೆ ವಿರುದ್ಧ ನಗರದ ನಿವಾಸಿಗಳು ಅಕ್ರೋಶ ವ್ಯಕಪಡಿಸುತ್ತಿದ್ದಾರೆ.

    ಎಲ್ಲಿಲ್ಲಿ ರಸ್ತೆಗಳು ಗುಂಡಿಮಯ
    ಮಡಿಕೇರಿ ನಗರ ವ್ಯಾಪ್ತಿಗೆ ಒಳಪಡುವ ಅಬ್ಬಿಪಾಲ್ಸ್ ಗೆ ತೆರಳುವ ಮಾರ್ಗ, ಭಗವತಿ ನಗರ ರಸ್ತೆ, ಗೌಳಿಬಿದಿಯ ರಸ್ತೆ ಸೇರಿದಂತೆ ಕೆಲ ಪ್ರಮುಖ ರಸ್ತೆಗಳ ಸ್ಥಿತಿ ತೀರಾ ಹದಗೆಟ್ಟು, ಬೃಹತ್ ಹೊಂಡಗಳೇ ನಿರ್ಮಾಣವಾಗಿದೆ. ಇಲ್ಲಿನ ರಸ್ತೆಯಲ್ಲಿ ಸಂಚರಿಸುವ ವಾಹನಗಳ ಸವಾರರು ಸ್ವಲ್ಪ ಎಚ್ಚರ ತಪ್ಪಿದರೂ ಬಿದ್ದು ಕೈಕಾಲು ಮುರಿದುಕೊಳ್ಳುವಂತಿದೆ. ದ್ವಿಚಕ್ರ ಸೇರಿದಂತೆ ಆಟೋ, ಕಾರು ಇನ್ನಿತರ ವಾಹನಗಳ ಸವಾರರಿಗೆ ನುಂಗಲಾರದ ತುತ್ತಾಗಿದೆ. ಅಲ್ಲದೇ ದಸರಾ ಹಬ್ಬ ಸಮಿಸುತ್ತಿದ್ರು ನಗರಸಭೆ ಆಡಳಿತ ಮಂಡಳಿಯ ಸದಸ್ಯರು ರಸ್ತೆ ಕಾಮಗಾರಿಗಳ ಚಿಂತೆಗೂ ಮುಂದಾಗಿಲ್ಲ.

    ಮಡಿಕೇರಿ ದಸರಾ ಪ್ರಮುಖ ಆಕರ್ಶಣೆಯ ದಶಮಂಟಪಗಳು ರಾಜ ಮಾರ್ಗದಲ್ಲಿ ಬರುವ ರಸ್ತೆಗಳನ್ನು ಇದು ವರೆಗೂ ಸರಿಪಡಿಸುವ ಗೋಜಿಗೂ ಹೋಗಿಲ್ಲ. ಈ ಬಗ್ಗೆ ನಿಮ್ಮ ʻಪಬ್ಲಿಕ್ ಟಿವಿʼ ನಗರಸಭೆಯ ಕಮಿಷನರ್ ರಮೇಶ್ ಅವರನ್ನು ಕೇಳಿದ್ರೆ, ʻದಸರಾ 22 ರಿಂದ ಅರಂಭಗೊಳ್ಳುತ್ತಿದೆ. ಈಗಾಗಲೇ ದಸರಾ ಸಿದ್ಧತೆ ಕಾರ್ಯಗಳ ಮಾಡಲಾಗುತ್ತಿದೆ. ಈಗಾಗಲೇ ಜಿಲ್ಲಾಧಿಕಾರಿಗಳು NDRF ಹಣದಿಂದ 38.ಲಕ್ಷದ 36 ಸಾವಿರ ಹಣ ಬಿಡುಗಡೆ ಮಾಡಿದ್ದಾರೆ. ಟೆಂಡರ್ ಕೂಡ ಕರೆಯಲಾಗಿದೆ. ಮಳೆ ಕೊಂಚ ಬೀಡುವು ನೀಡಿದ್ರೆ ತುರ್ತಾಗಿ ಗುಂಡಿ ಮುಚ್ಚುವ ಕಾರ್ಯಕ್ಕೆ ಮುಂದಾಗುತ್ತೇವೆ. ಅಲ್ಲದೇ ಅಲಂಕಾರ ಮಾಡಲು ಲೈಟಿಂಗ್ ಟೆಂಡರ್ ಕರೆಯಲಾಗಿದೆ. ಆದಷ್ಟು ಬೇಗ ಎಲ್ಲಾ ಕೆಲಸಗಳನ್ನು ಮಾಡಲಾಗುತ್ತದೆ. ದಸರಾ ಆರಂಭಕ್ಕೂ ಮುನ್ನವೇ ಕಾಮಗಾರಿ ಮಾಡಲಾಗುತ್ತದೆ ಭರವಸೆ ನೀಡಿದ್ದಾರೆ.

  • Bengaluru | ರಸ್ತೆ ಗುಂಡಿ ಮುಚ್ಚಲು ಬಿಬಿಎಂಪಿ ಆಯುಕ್ತರಿಗೆ ಡಿಸಿಎಂ 15 ದಿನಗಳ ಗಡುವು

    Bengaluru | ರಸ್ತೆ ಗುಂಡಿ ಮುಚ್ಚಲು ಬಿಬಿಎಂಪಿ ಆಯುಕ್ತರಿಗೆ ಡಿಸಿಎಂ 15 ದಿನಗಳ ಗಡುವು

    ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ವ್ಯಾಪ್ತಿಯ ರಸ್ತೆಗುಂಡಿಗಳನ್ನು ಇನ್ನೂ 15 ದಿನಗಳ ಒಳಗಾಗಿ ಮುಚ್ಚಿ ದುರಸ್ತಿ ಮಾಡಬೇಕು ಎಂದು ಬಿಬಿಎಂಪಿ ಮುಖ್ಯ ಆಯುಕ್ತರಾದ ತುಷಾರ್ ಗಿರಿನಾಥ್ ಅವರಿಗೆ ಡಿಸಿಎಂ ಡಿ.ಕೆ ಶಿವಕುಮಾರ್ (DK Shivakumar) ಅವರು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

    ಈ ಸಂಬಂಧ ಡಿಸಿಎಂ ಡಿ.ಕೆ ಶಿವಕುಮಾರ್ ಕಚೇರಿಯಿಂದ ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಲಾಗಿದೆ. ರಸ್ತೆ ಗುಂಡಿಗಳ (Road Potholes) ಬಗ್ಗೆ ಸಾಕಷ್ಟು ದೂರುಗಳು ಕೇಳಿಬರುತ್ತಿವೆ. ಈ ಬಗ್ಗೆ ತುರ್ತಾಗಿ ಗಮನ ಹರಿಸಬೇಕು ಈಗಾಗಲೇ ʻರಸ್ತೆ ಗುಂಡಿ ಗಮನʼ ಎನ್ನುವ ಆಪ್ ಮೂಲಕ ಸಾರ್ವಜನಿಕರು ರಸ್ತೆ ಗುಂಡಿಗಳ ಫೋಟೋ ತೆಗೆದು ಅಪ್‌ಲೋಡ್‌ ಮಾಡುವ ವ್ಯವಸ್ಥೆ ಮಾಡಲಾಗಿದೆ. ಇದನ್ನೂ ಓದಿ: ಡಿಕೆಶಿ ಓಡಿಸುತ್ತಿದ್ದ ಹಳೇ ಬೈಕ್‌ಗೆ ಹೊಸ ರೂಪ – 1981 ರ ಮಾಡೆಲ್ ಎಝಡಿ ರೋಡ್ ಕಿಂಗ್ ಬೈಕ್

    ನಗರದ ಅನೇಕ ಕಡೆ ರಸ್ತೆ ಹಾಳಾಗಿರುವುದರ ಬಗ್ಗೆ ಇಲ್ಲಿಯೂ ಸಹ ದೂರುಗಳು ಬರುತ್ತಿವೆ. ಮಳೆಗಾಲದ ಕಾರಣಕ್ಕೂ ರಸ್ತೆಗಳು ಗುಂಡಿ ಬೀಳುತ್ತಿರಬಹುದು. ಇದರ ಬಗ್ಗೆಯೂ ಬಿಬಿಎಂಪಿ ಆಯುಕ್ತರು ಗಮನ ಹರಿಸಬೇಕು ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಡಿಸಿಎಂ ಸೂಚನೆ ನೀಡಿದ್ದಾರೆ. ಇದನ್ನೂ ಓದಿ: Gujarat Floods | ಸ್ಕೂಟಿ ಮೇಲೆ ಹೊತ್ತೊಯ್ದು ಮೊಸಳೆ ರಕ್ಷಣೆ – ವೀಡಿಯೋ ವೈರಲ್

    ರಸ್ತೆ ಗುಂಡಿಗಳನ್ನು ಮುಚ್ಚಲು ಗಡುವು ನೀಡಿರುವ 15 ದಿನಗಳ ನಂತರ ಇಡೀ ಬೆಂಗಳೂರು ನಗರವನ್ನು ತಾವೇ ಸ್ವತಃ ಪ್ರದಕ್ಷಿಣೆ ಹಾಕಲಿದ್ದೇನೆ. ಪ್ರತಿ ರಸ್ತೆಗಳನ್ನು ಪರಿಶೀಲನೆ ಮಾಡುತ್ತೇನೆ. ಅಷ್ಟರಲ್ಲಿ ಕೆಲಸ ಮುಗಿಸಿರಬೇಕು ಎಂದು ಬಿಬಿಎಂಪಿ ಮುಖ್ಯ ಆಯುಕ್ತರಿಗೆ ಸೂಚನೆ ನೀಡಲಾಗಿದೆ ಎಂದು ಡಿಸಿಎಂ ತಿಳಿಸಿದ್ದಾರೆ. ಇದನ್ನೂ ಓದಿ: ಉಡುಪಿ | ಸಮುದ್ರದಲ್ಲಿ ಮುಳುಗುತ್ತಿದ್ದ ಮೀನುಗಾರ – ಸತತ 1 ಗಂಟೆ ಕಾರ್ಯಾಚರಣೆ ನಡೆಸಿ ರಕ್ಷಣೆ

  • ರಸ್ತೆಗುಂಡಿಗಳ ಹೆಸ್ರಲ್ಲಿ ಬಿಬಿಎಂಪಿ ಬೊಕ್ಕಸ ಬರಿದು ಮಾಡೋಕ್ಕೆ ನಿಂತ್ರಾ ಅಧಿಕಾರಿಗಳು?

    ರಸ್ತೆಗುಂಡಿಗಳ ಹೆಸ್ರಲ್ಲಿ ಬಿಬಿಎಂಪಿ ಬೊಕ್ಕಸ ಬರಿದು ಮಾಡೋಕ್ಕೆ ನಿಂತ್ರಾ ಅಧಿಕಾರಿಗಳು?

    ಬೆಂಗಳೂರು: ಹೈಕೋರ್ಟ್ ಆದೇಶವನ್ನು ಬಿಬಿಎಂಪಿ ಬಂಡವಾಳ ಮಾಡಿಕೊಂಡಿತೇ ಎನ್ನುವ ಅನುಮಾನ ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿದೆ. ಈಗ ಬಿಬಿಎಂಪಿ ಅಧಿಕಾರಿಗಳು 10 ಕಿ.ಮೀ ರಸ್ತೆ ಗುಂಡಿಗಳನ್ನು ಮುಚ್ಚಲು 1,700 ಕೋಟಿ ರೂ. ಬೇಕಾಗುತ್ತದೆ ಎಂದಿದ್ದಾರಂತೆ.

    ಬೆಂಗಳೂರು ನಗರದ ರಸ್ತೆಗುಂಡಿ ಮುಚ್ಚಿಸಲು ಮುಂದಿನ ಎರಡು ವರ್ಷಕ್ಕೆ 1,700 ಕೋಟಿ ರೂ. ಬೇಕಾಗುತ್ತದೆ ಎಂದು ಬಿಬಿಎಂಪಿ ಅಧಿಕಾರಿಗಳು ಭಾರೀ ಬೇಡಿಕೆ ಇಟ್ಟಿದ್ದಾರಂತೆ. ಈ ಮೂಲಕ ರಸ್ತೆ ಗುಂಡಿ ಮುಚ್ಚುವ ನೆಪದಲ್ಲಿ ಬಿಬಿಎಂಪಿ ಬೊಕ್ಕಸವನ್ನು ಬರಿದು ಮಾಡುವುದಕ್ಕೆ ಅಧಿಕಾರಿಗಳು ಮುಂದಾದ್ರಾ ಎನ್ನುವ ಶಂಕೆ ವ್ಯಕ್ತವಾಗಿದೆ.

    ಬಿಬಿಎಂಪಿ ಅಧಿಕಾರಿಗಳು ನಾಳೆ(ಶನಿವಾರ) ಹೈಕೋರ್ಟ್‍ಗೆ ಎಷ್ಟು ಗುಂಡಿ ಮುಚ್ಚಿದ್ದಾರೆ ಅಂತಾ ಲೆಕ್ಕ ನೀಡಲಿದ್ದಾರೆ. ಈ ವೇಳೆ ಗುಂಡಿ ಮುಚ್ಚಲು ಮುಂದಿನ ಎರಡು ವರ್ಷಕ್ಕೆ ಬೇಕಾಗುವ ವೆಚ್ಚದ ಕುರಿತು ಪ್ರಸ್ತಾಪ ಮಾಡಲಿದ್ದಾರೆ ಎಂದು ಬಿಬಿಎಂಪಿ ಮೂಲಗಳು ತಿಳಿಸಿವೆ.

    ಎಲ್ಲಲ್ಲಿ ಎಷ್ಟು ಗುಂಡಿಗಳು?:
    ರಸ್ತೆ ಗುಂಡಿಗಳ ಕುರಿತು ಕೋರ್ಟ್ ಲೆಕ್ಕ ಕೇಳುತ್ತಿದ್ದಂತೆಯೇ ಆತುರವಾಗಿ ಅಧಿಕಾರಿಗಳು ಕೇವಲ 52 ಅಂತಾ ತಿಳಿಸಿದ್ದರು. ಆದರೆ ಅವುಗಳ ಸಂಖ್ಯೆ ಈಗ 798ಕ್ಕೆ ಏರಿಕೆಯಾಗಿದೆ. ಬಿಬಿಎಂಪಿ ಸೆಪ್ಟೆಂಬರ್ 24ರಿಂದ ಅಕ್ಟೋಬರ್ 1ರವರೆಗೆ ಗುರುತಿಸಿದ ಹೊಸ ಪಟ್ಟಿಯ ಪ್ರಕಾರ ನಗರದಲ್ಲಿ ಹಳೇ ಗುಂಡಿ ಸೇರಿದಂತೆ ಒಟ್ಟು 850 ಗುಂಡಿಗಳಿವೆ.

    ಬೆಂಗಳೂರು ಪೂರ್ವ, ಪಶ್ಚಿಮ, ಬೊಮ್ಮನಹಳ್ಳಿ, ದಾಸರಹಳ್ಳಿ, ಮಹದೇವಪುರ ವಲಯದಲ್ಲಿ ರಸ್ತೆ ಗುಂಡಿಗಳೇ ಇಲ್ಲವೆಂದು ಅಧಿಕಾರಿಗಳು ತಿಳಿಸಿದ್ದಾರೆ. ಇತ್ತ ದಕ್ಷಿಣ ವಲಯದಲ್ಲಿ 183, ರಾಜರಾಜೇಶ್ವರಿ ನಗರ ವಲಯದಲ್ಲಿ 350, ಯಲಹಂಕ ವಲಯದಲ್ಲಿ 71, ಮುಖ್ಯ ರಸ್ತೆಗಳಲ್ಲಿ 194 ಗುಂಡಿಗಳಿವೆ ಅಂತಾ ಬಿಬಿಎಂಪಿ ಲೆಕ್ಕ ಹಾಕಿದೆ. ಈವರೆಗೆ ಕೇವಲ 314 ರಸ್ತೆ ಗುಂಡಿಗಳನ್ನು ಮುಚ್ಚಲಾಗಿದ್ದು, 536 ರಸ್ತೆ ಗುಂಡಿಗಳನ್ನು ಮುಚ್ಚಬೇಕಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದರು.

    ಹೈಕೋರ್ಟ್ ಹೇಳಿದ್ದೇನು?:
    ಬೆಂಗಳೂರು ನಗರದಲ್ಲಿರುವ ರಸ್ತೆ ಗುಂಡಿಗಳನ್ನು ಸೆಪ್ಟೆಂಬರ್ 24ರೊಳಗೆ ಮುಚ್ಚಬೇಕು ಅಂತಾ ಹೈಕೋರ್ಟ್ ಬಿಬಿಎಂಪಿಗೆ ಖಡಕ್ ಎಚ್ಚರಿಕೆ ನೀಡಿತ್ತು. ಬಿಬಿಎಂಪಿ ಮೇಲೆ ಛೀಮಾರಿ ಹಾಕಿದ್ದ ಹೈಕೋರ್ಟ್ ಸರಿಯಾಗಿ ಕೆಲಸ ಮಾಡಲು ಸಾಧ್ಯವಾಗದಿದ್ದರೆ ಬಿಬಿಎಂಪಿಯನ್ನೇ ಮುಚ್ಚಿ ಎಂದು ಚಾಟಿ ಬೀಸಿತ್ತು. ಕಾಂಟ್ರಾಕ್ಟರ್ ಮತ್ತು ಎಂಜಿನಿಯರ್ ಗಳ ಹೆಸರು ಕೊಡಿ ಎಂದು ಕೂಡ ನ್ಯಾಯಾಲಯ ಹೇಳಿತ್ತು. ಇದರಿಂದ ಎಚ್ಚೆತ್ತ ಬಿಬಿಎಂಪಿ ರಾತ್ರಿ-ಹಗಲು ಎನ್ನದೆ ರಸ್ತೆ ಗುಂಡಿಗಳನ್ನು ಮುಚ್ಚಲು ಹರಸಾಹಸ ಪಟ್ಟಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv