ಸಿಮ್ಲಾ: ಹಿಮಾಚಲ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿದ್ದು, ಅಲ್ಲಿನ ಸುಮಾರು 670ಕ್ಕೂ ಹೆಚ್ಚು ರಸ್ತೆಗಳು, ಸೇತುವೆಗಳು ಮಳೆಗೆ ಕುಸಿದು ಬಿದ್ದಿದೆ. ಈ ಹಿನ್ನೆಲೆ ಹಲವೆಡೆ ರಸ್ತೆ ಸಂಪರ್ಕ ಕಡಿತಗೊಂಡಿದೆ. ಕುಸಿದ ರಸ್ತೆಗೆ ಕಬ್ಬಿಣದ ಪೈಪ್ ಇಟ್ಟು, ಅದರ ಮೇಲೆ ಕಾರೊಂದು ಹೋಗಲು ಜನರು ಸಹಾಯ ಮಾಡಿದ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.
ಚಂಬಾ ಜಿಲ್ಲೆಯಲ್ಲಿ ಸುರಿದ ಭಾರೀ ಮಳೆಗೆ ಸೇತುವೆ ಕೊಚ್ಚಿಹೋಗಿರುವ ಹಿನ್ನೆಲೆ ಮಣಿಮಹೇಶ್ ಯಾತ್ರೆಯನ್ನು ಸ್ಥಗಿತಗೊಳಿಸಲಾಗಿದೆ. ಹಾಗೆಯೇ ಯಾತ್ರೆಗೆ ಬಂದಿದ್ದ ಯಾತ್ರಿಕರು ರಸ್ತೆ ಸಂಪರ್ಕವಿಲ್ಲದೆ ತಮ್ಮ ಊರಿಗಳಿಗೆ ವಾಪಸ್ ಹೋಗಲಾಗದೆ ಒದ್ದಾಡುತ್ತಿದ್ದಾರೆ. ರಸ್ತೆ ಸಂಪರ್ಕವಿಲ್ಲದೆ ಜನರು ಜೀವವನ್ನು ಪಣಕ್ಕಿಟ್ಟು, ಸಾಹಸ ಮಾಡಿ ರಸ್ತೆಗಳನ್ನು ದಾಟುತ್ತಿದ್ದಾರೆ ಎನ್ನುವುದಕ್ಕೆ ವಿಡಿಯೋವೊಂದು ಸಾಕ್ಷಿಯಾಗಿದೆ.

ಚಂಬಾ ಜಿಲ್ಲೆಯ ಡ್ರೆಕರಿ ಪ್ರದೇಶದಲ್ಲಿ ಮಳೆಗೆ ರಸ್ತೆಗಳು ಕುಸಿದುಬಿದ್ದಿವೆ. ಒಂದೆಡೆ ಭಾರೀ ಕಂದಕ, ಇನ್ನೊಂದೆಡೆ ಬೃಹತ್ ಬೆಟ್ಟವಿದ್ದು, ರಸ್ತೆಯ ಮುಕ್ಕಾಲುಭಾಗ ಕಂದಕಕ್ಕೆ ಕುಸಿದು ಬಿದ್ದಿದೆ. ಇದರಿಂದ ವಾಹನ ಸಂಚಾರಕ್ಕೆ ಬ್ರೇಕ್ ಬಿದ್ದಿದೆ. ಆದರೆ ಈ ಮಾರ್ಗ ಬಿಟ್ಟರೆ ಮುಂದೆ ಸಾಗಲು ಬೇರೆ ಪರ್ಯಾಯ ಮಾರ್ಗವಿಲ್ಲ. ಹೀಗಾಗಿ ಪ್ರಯಾಣಿಕರು ಕಂಗಾಲಾಗಿದ್ದಾರೆ.
ಬೇರೆ ದಾರಿಯಿಲ್ಲದೆ ಕಾಲು ಭಾಗ ಉಳಿದಿರುವ ರಸ್ತೆಯನ್ನೇ ದಾಟಲು ಪ್ರಯಾಣಿಕರು ಮುಂದಾಗಿದ್ದು, ಪರಿಹಾರವೊಂದನ್ನು ಅವರೇ ಕಂಡುಕೊಂಡಿದ್ದಾರೆ. ಕುಸಿದು ಹೋಗಿರುವ ರಸ್ತೆಯ ಎರಡೂ ತುದಿಗಳಿಗೆ ಕಬ್ಬಿಣದ ಮೂರ್ನಾಲ್ಕು ಪೈಪ್‍ಗಳನ್ನು ಇಟ್ಟು, ಅದರ ಮೇಲೆ ಕಾರುಗಳನ್ನು ನಿಧಾನವಾಗಿ ಸಾಗಿಸಿ ರಸ್ತೆ ದಾಟುವಂತೆ ವ್ಯವಸ್ಥೆ ಮಾಡಿಕೊಂಡು ಸಂಚರಿಸುತ್ತಿದ್ದಾರೆ.
ಆಗಸ್ಟ್ 22ರಂದು ಈ ಘಟನೆ ನಡೆದಿದ್ದು, ಈಗ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ವಿಡಿಯೋದಲ್ಲಿ ಒಂದು ಕಾರು ಈ ಕಬ್ಬಿಣದ ಪೈಪ್‍ಗಳ ಮೇಲೆ ಸಾಗಿ ರಸ್ತೆ ದಾಟುತ್ತಿದೆ. ಇದಕ್ಕೆ ಜನರು ಸಹಾಯ ಮಾಡುತ್ತಿರುವ ದೃಶ್ಯಗಳು ಸೆರೆಯಾಗಿದೆ. ಜೋಡಿಸಿಟ್ಟಿರುವ ಪೈಪ್‍ಗಳು ಸ್ಪಲ್ಪ ಅಲ್ಲಾಡಿದರೂ ವಾಹನ ಕಂದಕಕ್ಕೆ ಪಲ್ಟಿಯಾಗುವ ಸಾಧ್ಯತೆ ಇತ್ತು. ಆದರೂ ಕೂಡ ಜೀವವನ್ನು ಪಣಕ್ಕಿಟ್ಟು ಕಾರಿನ ಚಾಲಕ ಈ ಸಾಹಯ ಮಾಡಿ, ಕಾರನ್ನು ದಾಟಿಸಿದ್ದಾನೆ.
ಸದ್ಯ ರಾಜ್ಯದಲ್ಲಿ ಮಳೆಗೆ ಸಂಕಷ್ಟಕ್ಕೆ ಸಿಲುಕಿರುವ ಮಂದಿಯನ್ನು ರಕ್ಷಣೆ ಮಾಡಲು, ಅವರನ್ನು ಸುರಕ್ಷಿತ ಪ್ರದೇಶಗಳಿಗೆ ರವಾನಿಸಲು ಪೊಲೀಸ್ ಇಲಾಖೆ ಸಿಬ್ಬಂದಿ, ಎನ್‍ಡಿಆರ್‍ಎಫ್ ತಂಡ, ಸೇನಾ ಸಿಬ್ಬಂದಿ ಹಾಗೂ ಜಿಲ್ಲಾಡಳಿತ ಕಾರ್ಯ ನಿರ್ವಹಿಸುತ್ತಿದೆ.