Tag: ರಷ್ಯಾ

  • ವಿಶ್ವದಲ್ಲೇ ಮೊದಲು – ಹೆಚ್ಚು ಹಾಲು ಸಿಗಲು ಹಸುವಿನ ಕಣ್ಣಿಗೆ ವಿಆರ್ ಗ್ಲಾಸ್ ಅಳವಡಿಕೆ

    ವಿಶ್ವದಲ್ಲೇ ಮೊದಲು – ಹೆಚ್ಚು ಹಾಲು ಸಿಗಲು ಹಸುವಿನ ಕಣ್ಣಿಗೆ ವಿಆರ್ ಗ್ಲಾಸ್ ಅಳವಡಿಕೆ

    – ವಿಆರ್ ಗ್ಲಾಸ್ ಮೂಲಕ ಬೇಸಿಗೆ ವಾತಾವರಣ ನಿರ್ಮಾಣ
    – ಪ್ರಯೋಗಕ್ಕೆ ಮಿಶ್ರ ಪ್ರತಿಕ್ರಿಯೆ

    ಮಾಸ್ಕೋ: ಬೇಸಿಗೆಯಲ್ಲಿ ದನದ ಆರೋಗ್ಯ ಉತ್ತಮವಾಗಿರಲು ಕೊಟ್ಟಿಗೆಯಲ್ಲಿ ರೈತರು ಫ್ಯಾನ್ ಅಳವಡಿಸಿರುವುದನ್ನು ನೀವು ಓದಿರಬಹುದು. ಆದರೆ ರಷ್ಯಾದ ರೈತರು ಈಗ ಇನ್ನು ಒಂದು ಹೆಜ್ಜೆ ಮುಂದೆ ಹೋಗಿ ಹಾಲಿನ ಉತ್ಪಾದನೆ ಹೆಚ್ಚಿಸಲು ಹಸುವಿಗೆ ವಿಆರ್(ವರ್ಚುಯಲ್ ರಿಯಾಲಿಟಿ) ಕನ್ನಡಕ ಹಾಕಿ ಸುದ್ದಿಯಾಗಿದ್ದಾರೆ.

    ಹೌದು. ಈ ರೀತಿಯ ಪ್ರಯತ್ನ ವಿಶ್ವದಲ್ಲೇ ಮೊದಲಾಗಿದ್ದು, ರಷ್ಯಾ ರಾಜಧಾನಿ ಮಾಸ್ಕೋ ಬಳಿಯ ರುಸ್ಮೋಲೋಕೊದಲ್ಲಿ ರೈತರು ಹಸುವಿಗೆ ಈ ಪ್ರಯೋಗ ಮಾಡಿದ್ದಾರೆ.

    ಈ ವಿಆರ್ ಹೆಡ್‍ಸೆಟ್ ಹಾಕುವುದರಿಂದ ಹಸುವಿನ ಕಣ್ಣಿಗೆ ಬೇಸಿಗೆ ವಾತಾವರಣ ಇರುವ ರೀತಿ ಕಾಣುತ್ತದೆ. ಅಲ್ಲದೆ ಹಸು ಹೊಲ ಗದ್ದೆಗಳಲ್ಲಿ ನಿಂತ ಅನುಭವವನ್ನು ನೀಡುತ್ತದೆ. ಈ ಮೂಲಕ ಹಸುವಿಗೆ ತಾನು ಮನೆಯಲ್ಲಿದ್ದೇನೆ. ಕೂಡಿ ಹಾಕಿದ್ದಾರೆ ಎಂಬ ಕೊರಗಿನಿಂದ ಹೊರ ಬರಲು ಸಹಕಾರಿಯಾಗುತ್ತಿದೆ ಎಂದು ವರದಿಯಾಗಿದೆ. ಇದನ್ನೂ ಓದಿ: ಅಡುಗೆ ಎಣ್ಣೆಯಿಂದ ಬಂಗಾರದ ಬೆಳೆ ತೆಗೆಯುತ್ತಿದ್ದಾರೆ ರಾಯಚೂರಿನ ರೈತರು

    ಮಕ್ಕಳು ವಿಡಿಯೋ ಗೇಮ್ ಆಡುವ ರೀತಿಯಲ್ಲೇ ವಿಆರ್ ಗ್ಲಾಸ್ ತಯಾರಿಸಲಾಗಿದೆ. ಆದರೆ ಹೆಚ್ಚು ಗ್ರಾಫಿಕ್ಸ್‍ಗಳನ್ನು ಬಳಸಿರುವುದಿಲ್ಲ. ಹಸುವಿಗೆ ಪೂರಕ ವಾತಾವರಣ ನಿರ್ಮಾಣವಾಗುವ ರೀತಿಯಲ್ಲಿ ಅಭಿವೃದ್ಧಿ ಪಡಿಸಲಾಗಿದೆ.

    ಈ ಕುರಿತು ಮಾಸ್ಕೋ ಕೃಷಿ ಸಚಿವಾಲಯದ ವಕ್ತಾರರು ಪ್ರತಿಕ್ರಿಯಿಸಿ, ಪ್ರಾಥಮಿಕ ಪರೀಕ್ಷೆಯಲ್ಲಿ ಯಶಸ್ವಿಯಾಗಿದ್ದೇವೆ. ಇದರಿಂದಾಗಿ ಹಸುವಿನ ಆಂತರಿಕ ಕೊರಗು ಕಡಿಮೆಯಾಗಿದೆ. ಅಲ್ಲದೆ ಭಾವನಾತ್ಮಕತೆಯಲ್ಲಿ ಹೆಚ್ಚಳವಾಗಿರುವುದನ್ನು ತಜ್ಞರು ಗಮನಿಸಿದ್ದಾರೆ ಎಂದು ವಿವರಿಸಿದ್ದಾರೆ.

    ವಚ್ರ್ಯುವಲ್ ರಿಯಾಲಿಟಿ ಗ್ಲಾಸ್ ಬೇಸಿಗೆ ಸಮಯದಲ್ಲಿ ಹೊಲ ಗದ್ದೆಗಳು ಹೇಗಿರುತ್ತವೆಯೋ ಅಂತಹ ಚಿತ್ರಣವನ್ನು ಹಸುವಿಗೆ ನೀಡುತ್ತದೆ. ಇದಕ್ಕಾಗಿ ಹಲವು ಅಧ್ಯಯನಗಳನ್ನು ನಡೆಸಲಾಗಿದೆ. ಕನ್ನಡಕದಲ್ಲಿ ಯಾವ ಬಣ್ಣ ಕಾಣಿಸಿದರೆ ದನಗಳಿಗೆ ಇಷ್ಟವಾಗುತ್ತದೆ ಎಂಬುದನ್ನು ಅರಿಯಲಾಗಿದೆ. ಹಸುಗಳಿಗೆ ಹಸಿರು ಹಾಗೂ ನೀಲಿ ಬಣ್ಣಕ್ಕಿಂತ ಕೆಂಪು ಬಣ್ಣ ಇಷ್ಟ ಹೀಗಾಗಿ ಈ ರೀತಿಯ ಬಣ್ಣವನ್ನು ಅಳವಡಿಸಲಾಗಿದೆ. ಮೊದಲ ಹಂತದ ಪರೀಕ್ಷೆಯಲ್ಲಿ ಹಸುವಿನ ಕೊರಗು ಕಡಿಮೆಯಾಗಿರುವುದು ಹಾಗೂ ಭಾವನಾತ್ಮಕತೆ ಹೆಚ್ಚಿರುವುದನ್ನು ತಜ್ಞರು ಗಮನಿಸಿದ್ದಾರೆ ಎಂದು ವಕ್ತಾರರು ಮಾಹಿತಿ ನೀಡಿದರು.

    ವಿಆರ್ ಗ್ಲಾಸ್ ಹಾಕಿದ್ದರಿಂದಲೇ ಹಸು ಹೆಚ್ಚು ಹಾಲು ಕೊಡುತ್ತಿದೆ ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ. ಅಧ್ಯಯನ ಪ್ರಕ್ರಿಯೆ ಪೂರ್ಣಗೊಂಡ ನಂತರ ಈ ಕುರಿತು ಸ್ಪಷ್ಟವಾಗಲಿದೆ ಎಂದು ಅವರು ತಿಳಿಸಿದರು.

    ಜಾನಿ ಟಿಕ್ಕಲ್ ಅವರು ಟ್ವಿಟ್ಟರ್ ನಲ್ಲಿ ಹಸು ವಿಆರ್ ಹೆಡ್‍ಸೆಟ್ ಧರಿಸಿರುವ ಚಿತ್ರಗಳನ್ನು ಅಪ್ಲೋಡ್ ಮಾಡಿದ್ದು, 28 ಸಾವಿರ ಜನ ಲೈಕ್ ಮಾಡಿದ್ದಾರೆ. ಮಾಸ್ಕೋ ಫಾರ್ಮ್ ಹೌಸ್ ವಿಆರ್ ಗ್ಲಾಸ್‍ಗಳನ್ನು ಒಂದು ಉಪಕರಣವಾಗಿ ಬಳಸಲು ಮುಂದಾಗಿದ್ದು, ಹಸುವಿಗೆ ಆಯಾಸ ಕಾಣದಂತೆ, ಸಂತಸದ ವಾತಾವರಣವನ್ನು ನಿರ್ಮಿಸಲು ಸಹಕಾರಿಯಾಗಿದೆ. ಇಂತಹ ಶಾಂತ ವಾತಾವರಣ ಹಸು ಹೆಚ್ಚು ಹಾಲು ಕರೆಯಲು ಸಹಕಾರಿಯಾಗಿದೆ. ಈ ವಿಆರ್ ಹೆಡ್‍ಸೆಟ್ ಹಸುವಿಗೆ ಬೇಸಿಗೆ ವಾತಾವರಣವನ್ನು ತೋರಿಸುತ್ತದೆ ಎಂದು ಜಾನಿ ಟಿಕ್ಕಲ್ ಬರೆದುಕೊಂಡಿದ್ದಾರೆ.

    ವಿಆರ್ ಪ್ರಯೋಗಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹಸುವನ್ನು ಚೆನ್ನಾಗಿ ನೋಡಿಕೊಂಡರೆ ಹಾಲಿನ ಉತ್ಪಾದನೆ ತಾನಾಗಿಯೇ ಹೆಚ್ಚಳವಾಗುತ್ತದೆ. ಕೃತಕವಾದ ವಾತಾವರಣ ನಿರ್ಮಿಸಿ ಹಸುವಿಗೆ ಈ ರೀತಿಯಾಗಿ ಮೋಸ ಮಾಡಿ ನಾವು ಲಾಭ ಮಾಡುವುದು ಸರಿಯಲ್ಲ ಎಂದು ಟೀಕಿಸಿದ್ದಾರೆ.

    ಈ ಸುದ್ದಿಗೆ ನಿಮ್ಮ ಅಭಿಪ್ರಾಯ ಏನು? ಕಮೆಂಟ್ ಮಾಡಿ ಅಭಿಪ್ರಾಯ ತಿಳಿಸಿ.

  • ಚೊಚ್ಚಲ ವಿಶ್ವ ಚಾಂಪಿಯನ್‍ಶಿಪ್‍ನಲ್ಲಿ ಬೆಳ್ಳಿ ಪದಕ ಗೆದ್ದ ಮಂಜು ರಾಣಿ

    ಚೊಚ್ಚಲ ವಿಶ್ವ ಚಾಂಪಿಯನ್‍ಶಿಪ್‍ನಲ್ಲಿ ಬೆಳ್ಳಿ ಪದಕ ಗೆದ್ದ ಮಂಜು ರಾಣಿ

    ಉಲಾನ್ ಉಡೆ (ರಷ್ಯಾ): ರಷ್ಯಾದಲ್ಲಿ ನಡೆಯುತ್ತಿರುವ ವಿಶ್ವ ಬಾಕ್ಸಿಂಗ್ ಚಾಂಪಿಯನ್‍ಶಿಪ್‍ನ 48 ಕೆಜಿ ತೂಕ ವಿಭಾಗದಲ್ಲಿ ಭಾರತದ ಮಹಿಳಾ ಬಾಕ್ಸರ್ ಮಂಜು ರಾಣಿ ಬೆಳ್ಳಿ ಪದಕಕ್ಕೆ ಕೊರಳೊಡಿದ್ದಾರೆ.

    ರಷ್ಯಾದ ಎಕ್ತರಿನಾ ಪಾಲ್ಟಸೆವ್ ವಿರುದ್ಧ ಭಾನುವಾರ ನಡೆದ ಅಂತಿಮ ಪಂದ್ಯದಲ್ಲಿ ಮಂಜು ರಾಣಿ 4-1 ಪಾಯಿಂಟ್ಸ್ ನಿಂದ ಸೋಲೊಪ್ಪಿದ್ದಾರೆ. ಈ ಮೂಲಕ ಬೆಳ್ಳಿ ಪದಕಕ್ಕೆ ತೃಪ್ತರಾಗಿದ್ದಾರೆ. ಇದಕ್ಕೂ ಮುನ್ನ ಶನಿವಾರ ನಡೆದ ಸೆಮಿಫೈನಲ್‍ನಲ್ಲಿ ಮಂಜು ಥೈಲ್ಯಾಂಡ್‍ನ ಸಿ.ರಾಕಾಸತ್ ಅವರನ್ನು ಸೋಲಿಸಿದ್ದರು. ಆ ಪಂದ್ಯವನ್ನು ಮಂಜು 4-1 ಪಾಯಿಂಟ್ಸ್ ನಿಂದ ಗೆದಿದ್ದರು.  ಇದನ್ನೂ ಓದಿ: ಕಂಚಿನ ಪದಕಕ್ಕೆ ಮುತ್ತಿಟ್ಟ ಮೇರಿ ಕೋಮ್

    ಚೊಚ್ಚಲ ವಿಶ್ವ ಚಾಂಪಿಯನ್‍ಶಿಪ್‍ನಲ್ಲೇ ಅಂತಿ ಘಟ್ಟ ತಲುಪಿದ ಭಾರತದ ಎರಡನೇ ಬಾಕ್ಸರ್ ಎಂಬ ಹಿರಿಮೆಗೆ ಮಂಜು ರಾಣಿ ಭಾಜರಾಗಿದ್ದಾರೆ. ಜೊತೆಗೆ ಚೊಚ್ಚಲ ವಿಶ್ವ ಚಾಂಪಿಯನ್‍ಶಿಪ್‍ನಲ್ಲಿ ಬೆಳ್ಳಿ ಪದಕ ಗೆದ್ದ ಮೊದಲ ಭಾರತೀಯ ಮಹಿಳಾ ಬಾಕ್ಸರ್ ಎಂಬ ಹೆಗ್ಗಳಿಕೆಗೆ ಮಂಜು ರಾಣಿ ಪಾತ್ರರಾದರು. 2010ರಲ್ಲಿ ಎಂ.ಸಿ.ಮೇರಿ ಕೋಮ್ ಈ ಸಾಧನೆ ಮಾಡಿದ್ದರು.

    ಹರಿಯಾಣದ ರೋಹ್ಟಕ್ ಮೂಲದ ಮಂಜು ರಾಣಿ ಪ್ರತಿಷ್ಠಿತ ಸ್ಟ್ರಾನ್ಜಾ ಸ್ಮಾರಕ ಪಂದ್ಯಾವಳಿಯಲ್ಲಿ ಈ ವರ್ಷ ಬೆಳ್ಳಿ ಪದಕ ಗೆದ್ದಿದ್ದರು. ಅವರ ತಂದೆ ಗಡಿ ಭದ್ರತಾ ಪಡೆಯ ಅಧಿಕಾರಿಯಾಗಿದ್ದರು. ಆದರೆ ಕ್ಯಾನ್ಸರ್ ನಿಂದ 2010ರಲ್ಲಿ ನಿಧನರಾಗಿದ್ದಾರೆ.

    ವಿಶ್ವ ಬಾಕ್ಸಿಂಗ್ ಚಾಂಪಿಯನ್‍ಶಿಪ್‍ನಲ್ಲಿ ಭಾರತವು 4 ಪದಕಗಳನ್ನು ಗಳಿಸಿದೆ. ಇದಕ್ಕೂ ಮುನ್ನ ಎಂ.ಸಿ ಮೇರಿ ಕೋಮ್, ಜಮುನಾ ಬೊರೊ ಮತ್ತು ಲವ್ಲಿನಾ ಬೊರ್ಗೊಹೈನ್ ಕಂಚಿನ ಪದಕಗಳನ್ನು ಗೆದ್ದಿದ್ದಾರೆ.

  • 6 ಮಂದಿ ರಷ್ಯಾ ಮಹಿಳೆಯರಿಂದ ಪಿತೃಗಳಿಗೆ ಪಿಂಡ ಪ್ರದಾನ

    6 ಮಂದಿ ರಷ್ಯಾ ಮಹಿಳೆಯರಿಂದ ಪಿತೃಗಳಿಗೆ ಪಿಂಡ ಪ್ರದಾನ

    ಪಾಟ್ನಾ: 6 ಮಂದಿ ರಷ್ಯಾದ ಮಹಿಳೆಯರು ಬಿಹಾರದ ಗಯಾದಲ್ಲಿ ಹಿರಿಯರಿಗೆ ಪಿಂಡ ಪ್ರದಾನ ಮಾಡಿದ್ದಾರೆ. ರಷ್ಯಾದ ವಿವಿಧ ಪ್ರದೇಶಗಳಿಂದ ಆಗಮಿಸಿದ ಇವರು ವಿಷ್ಣುಪಾದ ದೇವಾಲಯದ ದೇವಘಾಟ್ ನಲ್ಲಿ ಪಿಂಡ ಪ್ರಧಾನ ಮಾಡಿದ್ದಾರೆ.

    ಪುರೋಹಿತ ಲೋಕನಾಥ್ ಗೌರ್ ಅವರು ಪ್ರತಿಕ್ರಿಯಿಸಿ, ಭಾರತೀಯ ಉಡುಪು ಧರಿಸಿ ರಷ್ಯಾದ ಮಹಿಳೆಯರು ಪಿಂಡ ಪ್ರಧಾನ ಮಾಡಿದರು. ಭಾರತೀಯ ಸಂಸ್ಕೃತಿಯಲ್ಲಿ ನಂಬಿಕೆ ಇಟ್ಟ ಇವರು ಹಿರಿಯರಿಗೆ ಆತ್ಮಕ್ಕೆ ಶಾಂತಿ ಸಿಗಲೆಂದು ನಮ್ಮ ದೇಶಕ್ಕೆ ಬಂದಿದ್ದಾರೆ ಎಂದು ತಿಳಿಸಿದರು.

    ಪಿಂಡ ಪ್ರದಾನ ಮಾಡಿದ ಬಳಿಕ ರಷ್ಯಾದ ಎಲೆನಾ ಮಾತನಾಡಿ, ಭಾರತ ಧರ್ಮ ಹಾಗೂ ಆಧ್ಯಾತ್ಮದ ತವರು ನೆಲ. ಗಯಾಗೆ ಆಗಮಿಸಿದರೆ ನನಗೆ ಮಾನಸಿಕ ನೆಮ್ಮದಿ ಸಿಗುತ್ತದೆ. ನನ್ನ ಪೂರ್ವಜನರ ಆತ್ಮಕ್ಕೆ ಶಾಂತಿ ಸಿಗಲೆಂದು ನಾನು ಇಲ್ಲಿಗೆ ಬಂದಿದ್ದೇನೆ ಎಂದು ಹೇಳಿದರು.

    ಕಳೆದ ವರ್ಷ ರಷ್ಯಾ, ಸ್ಪೈನ್, ಜರ್ಮನಿ, ಚೀನಾ, ಸೇರಿದಂತೆ ಒಟ್ಟು 27 ಮಂದಿ ಆಗಮಿಸಿದ ಪಿಂಡ ಪ್ರದಾನ ಮಾಡಿದ್ದರು. ಪಿತೃಪಕ್ಷದಲ್ಲಿ ಪಿಂಡ ಪ್ರದಾನ ಮಾಡಲೆಂದೇ ಪ್ರತಿ ವರ್ಷ 10 ಲಕ್ಷಕ್ಕೂ ಹೆಚ್ಚು ಜನ ಗಯಾಗೆ ಬರುತ್ತಾರೆ.

    ಏನಿದು ಪಿತೃಪೂಜೆ?
    ವರ್ಷದಲ್ಲಿ ಭಾದ್ರಪದ ಬಹುಳ ಪಾಡ್ಯದಿಂದ ಅಮಾವಾಸ್ಯೆಯವರೆಗಿನ 15 ದಿನಗಳು ಪಿತೃಗಳಿಗೆ ಮೀಸಲಾದ ದಿನವಾಗಿದ್ದು, ಈ ದಿನದಲ್ಲಿ ಅವರ ಅನುಗ್ರಹಕ್ಕಾಗಿ ಆಚರಿಸುವ ಧಾರ್ಮಿಕ ಸಂಪ್ರದಾಯವೇ ಪಿತೃ ಪೂಜೆ. ಈ 15 ದಿನಗಳಲ್ಲಿ ಯಾರು ಪಿತೃಪಕ್ಷ ಕಾರ್ಯಗಳನ್ನು ಮಾಡುತ್ತಾರೋ ಅವರಿಗೆ ಸಕಲ ಇಷ್ಟಾರ್ಥಗಳು ನೆರವೇರುತ್ತದೆ ಎನ್ನುವ ನಂಬಿಕೆ ಇದೆ. 15 ದಿನ ಅನುಕೂಲವಿಲ್ಲದೇ ಇದ್ದರೆ ಕೊನೆಯ ಅಮಾವಾಸ್ಯೆಯ ದಿನ ಪಿತೃ ಸೇವೆ ನಡೆಸಬೇಕು.

  • ಸೋಫಾ ತೆಗೆಸಿ ಎಲ್ಲರೊಂದಿಗೆ ಖುರ್ಚಿಯಲ್ಲಿ ಆಸೀನರಾದ ಮೋದಿ- ವಿಡಿಯೋ

    ಸೋಫಾ ತೆಗೆಸಿ ಎಲ್ಲರೊಂದಿಗೆ ಖುರ್ಚಿಯಲ್ಲಿ ಆಸೀನರಾದ ಮೋದಿ- ವಿಡಿಯೋ

    ನವದೆಹಲಿ: ರಷ್ಯಾ ಪ್ರವಾಸದಲ್ಲಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ತಮ್ಮ ಸರಳತೆಯ ಮೂಲಕ ಮತ್ತೊಮ್ಮೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ. ಪ್ರಧಾನಿಗಳ ಸರಳತೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ವಿಶ್ವದೆಲ್ಲಡೆ ಮೆಚ್ಚುಗೆಯನ್ನು ಪಡೆದುಕೊಂಡಿದೆ.

    ಫೋಟೋ ಸೆಷನ್ ವೇಳೆ ಮೋದಿ ಅವರಿಗಾಗಿ ವಿಶೇಷ ಸೋಫಾ ಹಾಕಲಾಗಿತ್ತು. ಉಳಿದ ಎಲ್ಲ ಗಣ್ಯರಿಗೂ ಖುರ್ಚಿ ಹಾಕಲಾಗಿತ್ತು. ಫೋಟೋ ಸೆಷನ್ ಗೆ ಬಂದ ಪ್ರಧಾನಿಗಳು ಕೂಡಲೇ ಸೋಫಾ ತೆಗೆಯುವಂತೆ ಸೂಚಿಸಿದ್ದಾರೆ. ಪ್ರಧಾನಿಗಳ ಸೂಚನೆಯ ಮೇರೆ ಸೋಫಾ ತೆಗೆದು ಎಲ್ಲರಿಗೆ ಹಾಕಲಾಗಿದ್ದ ಖುರ್ಚಿಯನ್ನು ಹಾಕಿದ ಮೇಲೆಯೇ ಮೋದಿಯವರು ಫೋಟೋ ತೆಗೆಸಿಕೊಂಡರು.

    ಈಸ್ಟರ್ನ್ ಎಕಾನಮಿಕ್ ಫೋರಂನಲ್ಲಿ ಪ್ರಧಾನಿಗಳು ಭಾರತದ ಪೆವಿಲಿಯನ್ ಗೆ ಭೇಟಿ ನೀಡಿದ್ದರು. ಫೋಟೋ ಸೆಷನ್ ವೇಳೆ ಅಧಿಕಾರಿಗಳು ದೇಶದ ಪ್ರಧಾನಿಗಳಿಗೆ ಗೌರವ ನೀಡುವ ಹಿನ್ನೆಲೆಯಲ್ಲಿ ವಿಶೇಷ ವ್ಯವಸ್ಥೆಯನ್ನು ಕಲ್ಪಿಸಿದ್ದರು.

    ಕೇಂದ್ರ ರೈಲ್ವೇ ಸಚಿವ ಪಿಯೂಶ್ ಗೋಯಲ್ ವಿಡಿಯೋವನ್ನು ಟ್ವೀಟ್ ಮಾಡಿಕೊಂಡಿದ್ದಾರೆ. ಪಿಎಂ ಮೋದಿಯವರ ಸರಳತೆ ಕಾಣುವ ಅವಕಾಶ ಮತ್ತೊಮ್ಮೆ ಸಿಕ್ಕಿದೆ. ರಷ್ಯಾದಲ್ಲಿ ತಮಗಾಗಿ ಕಲ್ಪಿಸಿದ್ದ ವಿಶೇಷ ವ್ಯವಸ್ಥೆಯನ್ನು ತಿರಸ್ಕರಿಸಿ, ಉಳಿದವರಂತೆ ಸಾಮಾಣ್ಯ ಖುರ್ಚಿಯಲ್ಲಿ ಆಸೀನರಾದರು ಎಂದು ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ.

    2014ರಲ್ಲಿ ಮೊದಲ ಬಾರಿಗೆ ಪ್ರಧಾನಿಯಾದಾಗ ಮೋದಿಯವರು ವಿಐಪಿ ಪದ್ಧತಿಗೆ ಬ್ರೇಕ್ ಹಾಕಿದ್ದರು. ವಿಐಪಿ ಪದ್ಧತಿ ಶಮನಗೊಳಿಸುವ ಹಿನ್ನೆಲೆಯಲ್ಲಿ ಸರ್ಕಾರಿ ವಾಹನಗಳ ಮೇಲೆ ಕೆಂಪು ದೀಪವನ್ನು ತೆಗೆಯುವಂತೆ ಆದೇಶಿಸಿದ್ದರು. ಸಂಸದರಾಗಿ ಆಯ್ಕೆಯಾಗುವ ಜನಪ್ರತಿನಿಧಿಗಳು ವಿಐಪಿ ಪದ್ಧತಿಯಿಂದ ದೂರ ಉಳಿದು, ಜನರಿಗೆ ಹತ್ತಿರವಾಗಿ ಎಂದು ಸಲಹೆ ನೀಡಿದ್ದರು.

  • ಸೆಕ್ಸ್ ಟೇಪ್ ಲೈವ್ ಮಾಡ್ಕೊಂಡು ಖ್ಯಾತ ಫುಟ್ಬಾಲ್ ಆಟಗಾರ ಎಡವಟ್ಟು

    ಸೆಕ್ಸ್ ಟೇಪ್ ಲೈವ್ ಮಾಡ್ಕೊಂಡು ಖ್ಯಾತ ಫುಟ್ಬಾಲ್ ಆಟಗಾರ ಎಡವಟ್ಟು

    ಮಾಸ್ಕೋ: ಕ್ಯಾಮರೂನ್ ತಂಡದ 25 ವರ್ಷದ ಫುಟ್‍ ಬಾಲ್ ಆಟಗಾರ ಕ್ಲಿಂಟನ್ ಎನ್ ಜೀಕೆ ತನ್ನ ಸೆಕ್ಸ್ ಟೇಪ್ ಲೈವ್ ಮಾಡಿ ಎಡವಟ್ಟು ಮಾಡಿಕೊಂಡಿದ್ದಾರೆ.

    ಕ್ಲಿಂಟನ್ ಅವರು ರಷ್ಯಾದ ಡೈನಮೋ ಮಾಸ್ಕೋ ತಂಡದ ಪರ 5 ವರ್ಷ ಆಡಲು ಕಳೆದ ಗುರುವಾರ ಸಹಿ ಹಾಕಿದ್ದರು. ಒಪ್ಪಂದಕ್ಕೆ ಸಹಿ ಹಾಕಿದ ಬೆನ್ನಲ್ಲೇ ಕ್ಲಿಂಟನ್ ತನ್ನ ಎಡವಟ್ಟಿನಿಂದಾಗಿ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಆಗುತ್ತಿದ್ದಾರೆ.

    ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕ್ಲಿಂಟನ್, ರಷ್ಯಾ ತಂಡದ ಜೊತೆಗಿನ 5 ವರ್ಷದ ಒಪ್ಪಂದಕ್ಕೆ ಸಹಿ ಹಾಕಿದ ಹಿನ್ನೆಲೆಯಲ್ಲಿ ಹೋಟೆಲಿನಲ್ಲಿ ಪರಿಚಯವಿಲ್ಲದ ಮಹಿಳೆಯ ಜೊತೆ ಸಂಭ್ರಮಿಸುತ್ತಿದ್ದೆ. ಈ ವೇಳೆ ನನ್ನ ಸುದ್ದಿಯನ್ನು ಗೂಗಲ್ ನಲ್ಲಿ ನೋಡಲು ಮುಂದಾಗುತ್ತಿದ್ದಾಗ ತಪ್ಪಿ ಸ್ನಾಪ್ ಚಾಟ್ ಲೈವ್ ಸ್ಟ್ರೀಮ್ ಬಟನ್ ಒತ್ತಿದ್ದೆ. ಇದರಿಂದಾಗಿ ಲೈವ್ ಪ್ರಸಾರವಾಗಿದೆ. ಹೆಚ್ಚು ಮದ್ಯ ಸೇವಿಸಿದ ಪರಿಣಾಮ ಲೈವ್ ಆಗಿರುವುದು ಗೊತ್ತಾಗಿರಲಿಲ್ಲ. ನನ್ನನ್ನು ಕ್ಷಮಿಸಿಬಿಡಿ ಎಂದು ಅಭಿಮಾನಿಗಳಲ್ಲಿ ಕೇಳಿಕೊಂಡಿದ್ದಾರೆ.

    ಮದ್ಯದ ಅಮಲು ಇಳಿದ ಬಳಿಕ ಕ್ಲಿಂಟನ್‍ಗೆ ವಿಚಾರ ಗೊತ್ತಾಗಿದ್ದ ವಿಡಿಯೋ ಡಿಲೀಟ್ ಮಾಡಿದ್ದಾರೆ. ಮಾರ್ಸಿಲ್ಲೆ ತಂಡದ ಆಡುತ್ತಿದ್ದ ಕ್ಲಿಂಟನ್ ಈಗ ಡೈನಮೋ ಪರ ಆಡಲು 5.5 ದಶಲಕ್ಷ ಪೌಂಡ್(ಅಂದಾಜು 46 ಕೋಟಿ ರೂ.) ಸಹಿ ಹಾಕಿದ್ದಾರೆ.

  • ರಷ್ಯಾದ ಬ್ಯೂಟಿ ಕ್ವೀನ್‍ಗೆ ತಲಾಖ್ ಕೊಟ್ಟ ಮಲೇಷ್ಯಾದ ಕಿಂಗ್

    ರಷ್ಯಾದ ಬ್ಯೂಟಿ ಕ್ವೀನ್‍ಗೆ ತಲಾಖ್ ಕೊಟ್ಟ ಮಲೇಷ್ಯಾದ ಕಿಂಗ್

    ಕೌಲಾಲಂಪುರ್: ಮದುವೆಯಾದ ವಿಚಾರ ಹೊರಬಂದ ಕೆಲವೇ ತಿಂಗಳಲ್ಲಿ ಮಲೇಷ್ಯಾದ ರಾಜ ರಷ್ಯಾದ ಮಾಜಿ ಬ್ಯೂಟಿ ಕ್ವೀನ್‍ಗೆ ತ್ರಿವಳಿ ತಲಾಖ್ ಮೂಲಕ ವಿಚ್ಛೇದನ ನೀಡಿದ್ದಾರೆ.

    ಇತ್ತೀಚಿಗೆ ಮಾಜಿ ಮಿಸ್ ಮಸ್ಕೋ ರಿಹಾನಾ ಆಕ್ಸಾನಾ ಗೋರ್ಬಟೆಂಕೊ, ತಾನು ಮಲೇಷ್ಯಾದ ರಾಜ ಸುಲ್ತಾನ್ ಮೊಹಮ್ಮದ್ ವಿ ಅವರನ್ನು ಮದುವೆಯಾಗಿದ್ದೇನೆ ಎಂದು ತಮ್ಮ ಜೋಡಿ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕುವ ಮೂಲಕ ತಮ್ಮ ಮದುವೆಯ ಬಗ್ಗೆ ಹೇಳಿದ್ದರು.

    ಈ ವಿವಾಹದ ವಿಚಾರ ಹೊರಬಂದ ಹಿನ್ನೆಲೆಯಲ್ಲಿ ಕಳೆದ ಜನವರಿಯಲ್ಲಿ ಮಲೇಷ್ಯಾದ ದೊರೆ ಸ್ಥಾನದಿಂದ ರಾಜ ಸುಲ್ತಾನ್ ಮೊಹಮ್ಮದ್ ವಿ ಅವರು ಹೊರನಡೆದಿದ್ದರು. ಈ ಮೂಲಕ ಮುಸ್ಲಿಂ ಹೆಚ್ಚಿರುವ ದೇಶಗಳ ಇತಿಹಾಸದಲ್ಲಿ ಪದತ್ಯಾಗ ಮಾಡಿದ ಮೊದಲ ರಾಜ ಎಂಬ ಅಪಕೀರ್ತಿಗೆ ಒಳಗಾಗಿದ್ದರು. ಈಗ ಅವರು ತ್ರಿವಳಿ ತಲಾಖ್ ಮೂಲಕ ತನ್ನ ಪ್ರೀಯತಮೆಗೆ ವಿಚ್ಛೇದನ ನೀಡಿದ್ದಾರೆ.

    ವಿಚ್ಛೇದನದ ಬಗ್ಗೆ ಮಾತನಾಡಿರುವ ರಾಜನ ಪರ ವಕೀಲರಾದ ಸಿಂಗಾಪುರ ಮೂಲದ ಕೊಹ್ ಟಿಯೆನ್ ಹುವಾ “ಮಿಸ್ ರಿಹಾನಾ ಆಕ್ಸಾನಾ ಗೋರ್ಬಟೆಂಕೊ ಅವರಿಗೆ 22 ಜೂನ್ 2019 ರಂದು ಸಿರಿಯಾ ಕಾನೂನುಗಳಿಗೆ ಅನುಗುಣವಾಗಿ ಮೂರು ತಲಾಖ್‍ಗಳಿಂದ ರಾಜ ಸುಲ್ತಾನ್ ಮೊಹಮ್ಮದ್ ವಿ ಅವರು ವಿಚ್ಛೇದನ ನೀಡಿದ್ದಾರೆ” ಎಂದು ಹೇಳಿದ್ದಾರೆ.

    ಈಶಾನ್ಯ ಮಲೇಷ್ಯಾದ ರಾಜ್ಯವಾದ ಕೆಲಾಂಟನ್‍ನಲ್ಲಿರುವ ಇಸ್ಲಾಮಿಕ್ ನ್ಯಾಯಾಲಯವು ಈ ವಿಚ್ಛೇದನಕ್ಕೆ ಪ್ರಮಾಣಪತ್ರವನ್ನು ನೀಡಿದೆ ಎಂದು ವಕೀಲರು ಈ ವಾರದ ಆರಂಭದಲ್ಲಿ ಹೇಳಿದ್ದರು. ಆದರೆ ರಿಹಾನಾ ಆಕ್ಸಾನಾ ಗೋರ್ಬಟೆಂಕೊ ಇದನ್ನು ನಿರಾಕರಿಸಿದ್ದಾರೆ. ಅವರು ನನಗೆ ವಿಚ್ಛೇದನ ನೀಡಿಲ್ಲ ಈ ವಿಚಾರ ನನಗೆ ನ್ಯೂಸ್ ಮೂಲಕ ತಿಳಿದೆ. ನನಗೆ ಅವರು ಎಂದು ನೇರವಾಗಿ ತಲಾಖ್ ಎಂದು ಹೇಳಿಲ್ಲ ಎಂದು ಹೇಳಿದ್ದಾರೆ. ಇದರ ಜೊತೆಗೆ ರಾಜನ ಜೊತೆ ಮತ್ತು ಮೇ ತಿಂಗಳಿನಲ್ಲಿ ಜನಿಸಿದ ಅವರ ಮಗು ಜೊತೆ ಇನ್‍ಸ್ಟಾಗ್ರಾಮ್‍ಗೆ ಫೋಟೋ ಪೋಸ್ಟ್ ಮಾಡುತ್ತಿದ್ದಾರೆ. ಆದರೆ ರಾಜನ ಪರ ವಕೀಲರಾದ ಕೊಹ್ ಟಿಯೆನ್ ಹುವಾ ಅವರು ಅದೂ ರಾಜನಿಗೆ ಜನಿಸಿದ ಮಗು ಅಲ್ಲ. ಅ ಮಗು ರಾಜನಿಗೆ ಜನಿಸಿದೆ ಎಂಬುದಕ್ಕೆ ಯಾವುದೇ ಪುರಾವೆಗಳು ಇಲ್ಲ ಎಂದು ಹೇಳಿದ್ದಾರೆ.

    ರಾಜ ರಾಜ ಸುಲ್ತಾನ್ ಮೊಹಮ್ಮದ್ ವಿ ಅವರು ಮಲೇಷ್ಯಾದ ರಾಜನ ಸ್ಥಾನದಿಂದ ಪದತ್ಯಾಗ ಮಾಡಿದ ನಂತರ ಅ ಸ್ಥಾನಕ್ಕೆ ಕ್ರೀಡಾಪಟು ಸುಲ್ತಾನ್ ಅಬ್ದುಲ್ಲಾ ಸುಲ್ತಾನ್ ಅಹ್ಮದ್ ಶಾ ಅವರನ್ನು ಮಲೇಷ್ಯಾದ ಹೊಸ ರಾಜರನ್ನಾಗಿ ಆಯ್ಕೆಮಾಡಲಾಗಿದೆ.

    ಮಲೇಷ್ಯಾದಲ್ಲಿ ಸಾಂವಿಧಾನಿಕ ರಾಜಪ್ರಭುತ್ವವಿದ್ದು ಪ್ರತಿ 5 ವರ್ಷಗಳಿಗೊಮ್ಮೆ 9 ಮುಸ್ಲಿಂ ಆಡಳಿತ ಹೊಂದಿರುವ ರಾಜಮನೆತನದವರಿಗೆ ಅಧಿಕಾರ ಹಸ್ತಾಂತರವಾಗುತ್ತದೆ.

  • 3 ಸಾವಿರಕ್ಕೂ ಅಧಿಕ ಪುಶ್ ಅಪ್ಸ್ ಮಾಡಿ ಐಶಾರಾಮಿ  ಅಪಾರ್ಟ್‌ಮೆಂಟ್‌  ಗೆದ್ದ 6ರ ಪೋರ

    3 ಸಾವಿರಕ್ಕೂ ಅಧಿಕ ಪುಶ್ ಅಪ್ಸ್ ಮಾಡಿ ಐಶಾರಾಮಿ ಅಪಾರ್ಟ್‌ಮೆಂಟ್‌ ಗೆದ್ದ 6ರ ಪೋರ

    ಮಾಸ್ಕೋ: ವ್ಯಾಯಾಮ ಮಾಡಿದರೆ ಆರೋಗ್ಯಕ್ಕೆ ಒಳ್ಳೆಯದು. ಅದರಲ್ಲೂ ಪುಶ್ ಅಪ್ಸ್ ಮಾಡುವುದರಿಂದ ಸ್ನಾಯುಗಳು ಗಟ್ಟಿಯಾಗಿ ಶಕ್ತಿಯುತವಾಗುತ್ತೆ. ಆದರೆ ರಷ್ಯಾದಲ್ಲಿ 6 ವರ್ಷದ ಬಾಲಕನೊಬ್ಬ ಬ್ರೇಕ್ ಕೊಡದೆ ಬರೋಬ್ಬರಿ 3 ಸಾವಿರಕ್ಕೂ ಅಧಿಕ ಪುಶ್ ಅಪ್ಸ್ ಮಾಡಿ ಐಶಾರಾಮಿ  ಅಪಾರ್ಟ್‌ಮೆಂಟ್‌  ಒಂದನ್ನ ತನ್ನದಾಗಿಸಿಕೊಂಡಿದ್ದಾನೆ.

    ಹೌದು. ಏನಪ್ಪ 6 ವರ್ಷದ ಪುಟಾಣಿ ಹುಡುಗ 3 ಸಾವಿರ ಪುಶ್ ಅಪ್ಸ್ ಮಾಡಿದ್ದಾನಾ ಅಂತ ಶಾಕ್ ಆಗೋದು ಸಾಮಾನ್ಯ. ಆದರೆ ಆಶ್ಚರ್ಯ ಎನಿಸಿದರು ಇದು ಸತ್ಯ. ರಷ್ಯಾದ ನೋವಿ ರೆದಾಂತ್ ನಿವಾಸಿ ಇಬ್ರಾಹಿಂ ಲ್ಯೋನೋವ್(6) ಬಿಡುವಿಲ್ಲದೇ ಬರೋಬ್ಬರಿ 3,270 ಪುಶ್ ಅಪ್ಸ್ ಮಾಡಿ, ಐಷಾರಾಮಿ  ಅಪಾರ್ಟ್‌ಮೆಂಟ್‌  ಗಳಿಸಿದ್ದಾನೆ. ಸದ್ಯ ಬಾಲಕ ಬ್ರೇಕ್ ಫ್ರೀ ಪುಶ್ ಅಪ್ಸ್ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಇದನ್ನು ನೋಡಿದ ನೆಟ್ಟಿಗರು ಬಾಲಕನ ಫಿಟ್ನೆಸ್ ಗೆ ಫಿದಾ ಆಗಿಬಿಟ್ಟಿದ್ದಾರೆ.

    ಇಬ್ರಾಹಿಂ ಹಾಗೂ ಆತನ ತಂದೆ ಇಬ್ಬರೂ ಕ್ರೀಡಾ ಕ್ಲಬ್‍ನ ಸದಸ್ಯರಾಗಿದ್ದು, ಈ ಪುಶ್ ಅಪ್ಸ್ ಸ್ಪರ್ಧೆಗಾಗಿಯೇ ಬಹಳಷ್ಟು ಶ್ರಮಿಸಿದ್ದರು ಎನ್ನಲಾಗಿದೆ. ಇಬ್ರಾಹಿಂ ಲ್ಯೋನೋವ್ ತನಗೆ ಬಂದಿದ್ದ ಎಲ್ಲಾ ಸಮಸ್ಯೆಗಳನ್ನು ಎದುರಿಸಿ ಸತತ 3,270 ಪುಶ್ ಅಪ್ಸ್ ಮಾಡಿ ತನ್ನ ಫಿಟ್ನೆಸ್ ನಿಂದಲೇ ಸ್ಥಳೀಯ ಕ್ರೀಡಾ ಸಂಸ್ಥೆಯ ಗಮನ ಸೆಳೆದಿದ್ದಾನೆ. ಬಾಲಕನ ಫಿಟ್ನೆಸ್ ಕಂಡು ಆಶ್ಚರ್ಯಪಟ್ಟ ಕ್ರೀಡಾ ಸಂಸ್ಥೆ ಇಬ್ರಾಹಿಂಗೆ ದೊಡ್ಡ ಐಶಾರಾಮಿ  ಅಪಾರ್ಟ್‌ಮೆಂಟ್‌  ಒಂದನ್ನು ಉಡುಗೊರೆಯಾಗಿ ನೀಡಿ ಪ್ರೋತ್ಸಾಹಿಸಿದೆ.

    ಚಿಕ್ಕ ವಯಸ್ಸಿನಲ್ಲೆ ಈ ರೀತಿ ಅಸಾಮಾನ್ಯ ಸಾಧನೆ ಮಾಡಿರುವ ಬಾಲಕನ ರಷ್ಯಾ ಬುಕ್ ಆಫ್ ರೆಕಾರ್ಡ್ ನಲ್ಲೂ ದಾಖಲೆ ನಿರ್ಮಿಸಿದ್ದಾನೆ. ಇನ್ನೂ ಆಚ್ಚರಿಯ ಸಂಗತಿ ಏನೆಂದರೆ ಕೇವಲ ಇಬ್ರಾಹಿಂ ಮಾತ್ರವಲ್ಲ ಇಲ್ಲಿನ ಹಲವು ಮಕ್ಕಳು ಈ ರೀತಿ ಪುಶ್ ಅಪ್ಸ್ ಸ್ಪರ್ಧೆಯಲ್ಲಿ ಗೆದ್ದು ಐಶಾರಾಮಿ ಉಡುಗೊರೆಯನ್ನು ಪಡೆದಿದ್ದಾರೆ.

    2018ರಲ್ಲಿ 5 ವರ್ಷದ ಬಾಲಕನೊಬ್ಬ ಬರೋಬ್ಬರಿ 4,150 ಪುಶ್ ಅಪ್ಸ್ ಮಾಡುವ ಮೂಲಕ ಮರ್ಸಿಡೀಸ್ ಕಾರನ್ನು ಗೆದ್ದಿದ್ದನು. ಈ ವೇಳೆ ರಷ್ಯಾದ ಪ್ರಧಾನಿ ಅವರು ಬಾಲಕನಿಗೆ ಈ ಕಾರಿನ ಕೀಯನ್ನು ಹಸ್ತಾಂತರಿಸಿದ್ದರು.

  • 1,300 ಕೋಟಿ ರೂ.ನಲ್ಲಿ ಬ್ರಹ್ಮೋಸ್ ಉದ್ಯಮ ಆರಂಭ – ಈಗ 40 ಸಾವಿರ ಕೋಟಿ ರೂ. ವ್ಯವಹಾರ

    1,300 ಕೋಟಿ ರೂ.ನಲ್ಲಿ ಬ್ರಹ್ಮೋಸ್ ಉದ್ಯಮ ಆರಂಭ – ಈಗ 40 ಸಾವಿರ ಕೋಟಿ ರೂ. ವ್ಯವಹಾರ

    ನವದೆಹಲಿ: ಭಾರತ ಹಾಗೂ ರಷ್ಯಾ ಸಹಯೋಗದಲ್ಲಿ ಬ್ರಹ್ಮೋಸ್ ಕ್ಷಿಪಣಿಯ ಯೋಜನೆಯನ್ನು ಕೇವಲ 1,300 ಕೋಟಿ ರೂ. ಬಂಡವಾಳ ಹೂಡಿ ಆರಂಭಿಸಲಾಗಿತ್ತು. ಆದರೆ ಈಗ 40 ಸಾವಿರ ಕೋಟಿ ರೂ. ವ್ಯವಹಾರ ಮಾಡುವ ಉದ್ಯಮವಾಗಿ ಪರಿವರ್ತನೆಯಾಗಿದೆ.

    ಈ ಕುರಿತು ಮಾಹಿತಿ ನೀಡಿರುವ ಬ್ರಹ್ಮೋಸ್ ಏರೋಸ್ಪೇಸ್ ಸಿಇಒ ಮತ್ತು ವ್ಯವಸ್ಥಾಪಕ ನಿರ್ದೇಶಕ ಸುಧೀರ್ ಮಿಶ್ರಾ ಅವರು, ಸೂಪರ್ ಸಾನಿಕ್ ಕ್ಷಿಪಣಿ ಯೋಜನೆಯಂತೆ ರಷ್ಯಾ ಹಾಗೂ ಭಾರತದ ಜಂಟಿ ಉದ್ಯಮ ಇರಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ನಾವು ಸಂಪತ್ತನ್ನು ಹೆಚ್ಚಿಸಿದ್ದೇವೆ, ಪರಿಸರ ಸಂರಕ್ಷಣೆ ಮಾಡಿದ್ದೇವೆ. ಅಷ್ಟೇ ಅಲ್ಲದೆ ಭಾರತ ಸರ್ಕಾರಕ್ಕೆ ಇಲ್ಲಿಯವರೆಗೂ 4 ಸಾವಿರ ಕೋಟಿ ರೂ.ವನ್ನು ತೆರಿಗೆ ರೂಪದಲ್ಲಿ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಪಾವತಿಸಿದ್ದೇವೆ ಎಂದು ಸುಧೀರ್ ಮಿಶ್ರಾ ತಿಳಿಸಿದ್ದಾರೆ.

    ಮೂಲ ಸೌಕರ್ಯಗಳನ್ನು ಕಲ್ಪಿಸಲು ನಾವು ಆರ್ಥಿಕ ಸಹಾಯವನ್ನು ವಿಸ್ತರಣೆ ಮಾಡಿದ್ದೇವೆ. ಜೊತೆಗೆ ತಂತ್ರಜ್ಞಾನ ಅಭಿವೃದ್ಧಿ ಪಡೆಯಲು ರಷ್ಯಾದ ವಿಜ್ಞಾನಿಗಳ ಸಹಾಯ ಪಡೆದಿದ್ದೇವೆ. ಸದ್ಯ 200 ಕೈಗಾರಿಕೆಗಳು ನಮ್ಮ ವ್ಯವಹಾರದ ಪಾಲುದಾರರಾಗಿದ್ದು, 20 ಸಾವಿರಕ್ಕೂ ಅಧಿಕ ಜನರು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ನಮ್ಮಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಮಿಶ್ರಾ ಮಾಹಿತಿ ನೀಡಿದ್ದಾರೆ.

    ಏನಿದು ಬ್ರಹ್ಮೋಸ್ ಯೋಜನೆ?
    ಭಾರತದ ಡಿಆರ್‍ಡಿಒ ಹಾಗೂ ರಷ್ಯಾದ ಎನ್‍ಪಾಮ್ ಸಂಸ್ಥೆಗಳು ಜಂಟಿಯಾಗಿ ಬ್ರಹ್ಮೋಸ್ ಸರಣಿಯ ಕ್ಷಿಪಣಿಗಳನ್ನು ಅಭಿವೃದ್ಧಿಪಡಿಸುತ್ತಿವೆ. ಭಾರತದ ಬ್ರಹ್ಮಪುತ್ರ ಹಾಗೂ ರಷ್ಯಾದ ಮಾಸ್ಕ್ವಾ ನದಿಗಳ ಹೆಸರನ್ನು ಈ ಯೋಜನೆಗೆ ಇಡಲಾಗಿದೆ. 1998ರಲ್ಲಿ 1,300 ಕೋಟಿ ರೂ. ಬಂಡವಾಳದಲ್ಲಿ ಆರಂಭವಾದ ಬ್ರಹ್ಮೋಸ್ ಕ್ಷಿಪಣಿ ಉದ್ಯಮ ಈಗ 40 ಸಾವಿರ ಕೋಟಿ ವ್ಯವಹಾರ ಮಾಡುವ ಉದ್ಯಮವಾಗಿ ಬೆಳೆದಿದೆ.

    ಬ್ರಹ್ಮೋಸ್ ಕ್ಷಿಪಣಿಗಳನ್ನು ಯುದ್ಧನೌಕೆ, ಜಲಾಂತರ್ಗಾಮಿ, ನೆಲ ಮತ್ತು ಯುದ್ಧ ವಿಮಾನಗಳಿಂದ ಗುರಿಯತ್ತ ಉಡಾವಣೆ ಮಾಡಬಹುದು. ಕ್ಷಿಪಣಿ ನಿರೋಧಕ ವ್ಯವಸ್ಥೆಯನ್ನು ಮೀರಿ ಇದು ಗುರಿ ತಲುಪಬಲ್ಲದು.

    ‘ಭಾರತ ಮತ್ತು ರಷ್ಯಾ ಜಂಟಿಯಾಗಿ ಬ್ರಹ್ಮೋಸ್ ಕ್ಷಿಪಣಿಯನ್ನು ನಿರ್ಮಿಸುತ್ತಿವೆ. ಈಗಿರುವ ಗರಿಷ್ಠ 400 ಕಿ.ಮೀ. ಶ್ರೇಣಿಯನ್ನು 500 ಕಿ.ಮೀ.ಗೆ ಹೆಚ್ಚಿಸಲಾಗುವುದು. ಇದೇ ವೇಳೆ ಕ್ಷಿಪಣಿಯ ವೇಗವನ್ನು ಹೆಚ್ಚಿಸುವ ಅಗತ್ಯವಿದೆ. ಸದ್ಯ ಬ್ರಹ್ಮೋಸ್ ಕ್ಷಿಪಣಿಯ ಗರಿಷ್ಠ ವೇಗ 2.8 ಮ್ಯಾಕ್. ಅದನ್ನು ಮೇಲ್ದರ್ಜೆಗೇರಿಸುವ ಮೂಲಕ ಹೈಪರ್‍ಸೌಂಡ್ ಅಂದರೆ 4.5 ಮ್ಯಾಕ್‍ಗಿಂತಲೂ ಅಧಿಕ ವೇಗದಲ್ಲಿ ಚಲಿಸುವಂತೆ ಮಾಡಲಾಗುವುದು,” ಎಂದು ಕಂಪನಿಯ ಸಹಾಯಕ ವ್ಯವಸ್ಥಾಪಕ ನಿರ್ದೇಶಕ ಅಲೆಕ್ಸಾಂಡರ್ ಮ್ಯಾಕ್ಸಿಚೆವ್ ಅವರು ಏಪ್ರಿಲ್‍ನಲ್ಲಿ ತಿಳಿಸಿದ್ದರು.

    ಅತ್ಯಾಧುನಿಕ ಬ್ರಹ್ಮೋಸ್ ಕ್ಷಿಪಣಿಗಳು ಮುಂದಿನ ನಾಲ್ಕು ವರ್ಷಗಳಲ್ಲಿ ಭಾರತೀಯ ವಾಯುಪಡೆ ಸೇರಲಿವೆ. ಐಎಎಫ್‍ಗಾಗಿಯೇ ‘ಬ್ರಹ್ಮೋಸ್ ಎನ್‍ಜಿ’ಯನ್ನು ಅಭಿವೃದ್ಧಿಪಡಿಸಲಾಗುತ್ತಿದ್ದು, ಇದರ ತೂಕ ಈ ಹಿಂದಿನ 2.5 ಟನ್‍ನಿಂದ 1.5 ಟನ್‍ಗೆ ತಗ್ಗಲಿದೆ. ನೂತನ ಕ್ಷಿಪಣಿಯು ಹೆಚ್ಚು ಹಗುರವಾಗಿ ಇರಲಿದ್ದು, ಈ ಮೂಲಕ ಸುಖೋಯ್ ಸು-30ಎಂಕೆಐ ಮತ್ತು ತೇಜಸ್ ಯುದ್ಧವಿಮಾನಗಳಲ್ಲಿ ಒಂದೇ ಬಾರಿ ಹೆಚ್ಚಿನ ಕ್ಷಿಪಣಿಗಳನ್ನು ಅಳವಡಿಸಬಹುದಾಗಿದೆ ಎಂದು ಮಾಹಿತಿ ನೀಡಿದ್ದರು.

  • ಸ್ಕರ್ಟ್ ಧರಿಸಿ ಕೆಲಸಕ್ಕೆ ಬಂದ್ರೆ ಸಿಗತ್ತೆ ಎಕ್ಸ್​ಟ್ರಾ ಬೋನಸ್

    ಸ್ಕರ್ಟ್ ಧರಿಸಿ ಕೆಲಸಕ್ಕೆ ಬಂದ್ರೆ ಸಿಗತ್ತೆ ಎಕ್ಸ್​ಟ್ರಾ ಬೋನಸ್

    ಮಾಸ್ಕೋ: ಸಾಮಾನ್ಯವಾಗಿ ಹಲವು ಕಂಪನಿಗಳನ್ನು ಮಹಿಳಾ ಸಿಬ್ಬಂದಿ ಫಾರ್ಮಲ್ ಅಥವಾ ಸೆಮಿ ಫಾರ್ಮಲ್ ಉಡುಪುಗಳನ್ನು ಧರಿಸಬೇಕು ಎಂಬ ನಿಯಮವಿರುತ್ತೆ. ಆದರೆ ರಷ್ಯಾದ ಕಂಪನಿಯೊಂದು ಸ್ಕರ್ಟ್ ಅಥವಾ ಶಾರ್ಟ್ ಡ್ರೆಸ್ ಧರಿಸಿ ಕೆಲಸಕ್ಕೆ ಬಂದರೆ ಹೆಚ್ಚುವರಿ ಬೋನಸ್ ನೋಡುತ್ತೇವೆ ಎಂದು ಘೋಷಿಸಿ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಸುದ್ದಿಯಾಗಿದೆ.

    ಹೌದು. ವಿವಿಧ ಕಂಪನಿಗಳು ಮಹಿಳೆಯರ ಮೇಲೆ ಕೆಲಸದ ಸ್ಥಳದಲ್ಲಿ ನಡೆಯುವ ದೌರ್ಜನ್ಯ ತಡೆಯಲು ನಾನಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಆದರೆ ರಷ್ಯಾದ ಅಲ್ಯುಮಿನಿಯಂ ಉತ್ಪಾದಿಸುವ ಟ್ಯಾಟ್‍ಪ್ರೋಫ್ ಹೆಸರಿನ ಕಂಪನಿ ವಿಚಿತ್ರ ಆಫರ್ ಮಹಿಳಾ ಸಿಬ್ಬಂದಿ ಮುಂದಿಟ್ಟಿದೆ.

    `ಫೆಮಿನಿಟಿ ಮ್ಯಾರಥಾನ್’ ಎಂಬ ಅಭಿಯಾನವನ್ನ ಕಂಪನಿ ಆರಂಭಿಸಿದೆ. ಈ ಅಭಿಮಾನದ ವಿಶೇಷತೆ ಏನಪ್ಪಾ ಅಂದರೆ, ಸ್ಕರ್ಟ್ ಅಥವಾ ಮೊಣಕಾಲಿನಿಂದ 5 ಸೆ.ಮೀ ಉದ್ದವಿಲ್ಲದ ಡ್ರೆಸ್ ಧರಿಸಿ ಮಹಿಳಾ ಸಿಬ್ಬಂದಿ ಆಫಿಸ್‍ಗೆ ಬರಬೇಕಾಗುತ್ತದೆ. ಹೌದು ಈ ರೀತಿ ಬಟ್ಟೆ ಧರಿಸಿ ಮಹಿಳಾ ಸಿಬ್ಬಂದಿ ಕೆಲಸಕ್ಕೆ ಬಂದರೆ ನಿತ್ಯ ಅಂದಾಜು 106 ರೂಪಾಯಿ (100 ರೂಬೆಲ್ಸ್) ಎಕ್ಸ್​ಟ್ರಾ ಬೋನಸ್ ನೀಡುವುದಾಗಿ ಕಂಪನಿ ಆಫರ್ ನೀಡಿದೆ.

    ಪುರುಷರಂತೆ ಮಹಿಳೆಯರು ಕೆಲಸದಲ್ಲಿ ಸರಿ ಸಮಾನವಾಗಿ ಕೆಲಸ ಮಾಡುತ್ತಾರೆ. ಆದರಿಂದ ಅವರಿಗೆ ಕಂಪನಿಯಲ್ಲಿ ಉತ್ತಮ ವಾತಾವರಣ ಕಲ್ಪಿಸಿಕೊಡಲು ಈ ಅಭಿಯಾನ ಶುರುಮಾಡಿದ್ದೇವೆ. ಈಗಾಗಲೇ ಈ ಅಭಿಯಾನಕ್ಕೆ 60ಕ್ಕೂ ಹೆಚ್ಚು ಮಂದಿ ಮಹಿಳಾ ಸಿಬ್ಬಂದಿ ಪಾಲ್ಗೊಂಡಿದ್ದಾರೆ ಎಂದು ಕಂಪನಿ ತಿಳಿಸಿದೆ.

    ಅಲ್ಯುಮಿನಿಯಂ ಉತ್ಪಾದಿಸುವ ಟ್ಯಾಟ್‍ಪ್ರೋಫ್ ಎಂಬ ಕಂಪನಿ, ಕರ್ತವ್ಯದ ಸ್ಥಳವನ್ನು ಆಕರ್ಷಣಿಯಗೊಳಿಸಲು ಈ ಕ್ರಮ ಎಂದು ಹೇಳಿಕೊಂಡಿದೆ. ಆದರೆ ಕಂಪನಿಯ ಆಫರ್ ಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಟೀಕೆ ವ್ಯಕ್ತವಾಗಿದೆ. ಈ ಟೀಕೆಗಳನ್ನು ಬದಿಗೊತ್ತಿ ಕಂಪನಿ ಇದೇ ತಿಂಗಳಲ್ಲಿ ಫೆಮಿನಿಟಿ ಎಂಬ ಕಾರ್ಯಕ್ರಮ ಆಯೋಜಿಸಲಿದೆ. ಇದರಲ್ಲಿ ಪುರುಷ ಸಿಬ್ಬಂದಿಗೂ ಕೂಡ ಸ್ಪರ್ಧೆಯನ್ನು ನಡೆಸಲಾಗುತ್ತದೆ ಎಂದು ಕಂಪನಿ ತಿಳಿಸಿದೆ.

  • ಮೋದಿಗೆ ರಷ್ಯಾದ ಅತ್ಯುನ್ನತ ನಾಗರಿಕ ಪ್ರಶಸ್ತಿ: ಇಲ್ಲಿಯವರೆಗೆ ಯಾವೆಲ್ಲ ಪ್ರಶಸ್ತಿ ಸಿಕ್ಕಿದೆ?

    ಮೋದಿಗೆ ರಷ್ಯಾದ ಅತ್ಯುನ್ನತ ನಾಗರಿಕ ಪ್ರಶಸ್ತಿ: ಇಲ್ಲಿಯವರೆಗೆ ಯಾವೆಲ್ಲ ಪ್ರಶಸ್ತಿ ಸಿಕ್ಕಿದೆ?

    ನವದೆಹಲಿ: ಭಾರತ ಹಾಗೂ ರಷ್ಯಾ ನಡುವಿನ ಸಂಬಂಧ ಸುಧಾರಣೆ ಮತ್ತು ವ್ಯೂಹಾತ್ಮಕ ಪಾಲುದಾರಿಕೆ ಮಹತ್ವದ ಪಾತ್ರವಹಿಸಿದ್ದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ರಷ್ಯಾ ಸರ್ಕಾರ ಅತ್ಯುನ್ನತ ನಾಗರಿಕ ಪುರಸ್ಕಾರವಾದ `ಆರ್ಡರ್ ಆಫ್ ಸೇಂಟ್ ಆಂಡ್ರ್ಯೂ ದಿ ಅಪೋಸ್ಟೆಲ್’ ನೀಡಿ ಗೌರವಿಸಿದೆ.

    ಮೋದಿ ಅವರ ಅಸಾಮಾನ್ಯ ಕೊಡುಗೆಯ ಫಲವೆಂಬಂತೆ ಭಾರತ ಮತ್ತು ರಷ್ಯಾ ನಡುವಿನ ವಿಶೇಷ ಮತ್ತು ವ್ಯವಹಾರ ದಕ್ಷ ಪಾಲುದಾರಿಕೆ ಅತ್ಯುನ್ನತ ಮಟ್ಟಕ್ಕೆ ಏರಿದೆ. ಆದ್ದರಿಂದ ಅವರ ಈ ಪರಿಶ್ರಮವನ್ನು ಪರಿಗಣಿಸಿ ಈ ಶ್ರೇಷ್ಠ ಪುರಸ್ಕಾರ ನೀಡಿ ಗೌರವಿಸಲಾಗುತ್ತಿದೆ ಎಂದು ರಷ್ಯಾ ರಾಯಭಾರ ಕಚೇರಿ ತಿಳಿಸಿದೆ.

    ಪ್ರಶಸ್ತಿ ಸಮಾರಂಭವನ್ನು ಸಾಮಾನ್ಯವಾಗಿ ಸೇಂಟ್ ಆಂಡ್ರ್ಯೂ ಹಾಲ್ ನಲ್ಲಿ ಆಯೋಜಿಸಲಾಗುತ್ತದೆ. 1698ರಲ್ಲಿ ರಷ್ಯಾ ಸಾಮ್ರಾಜ್ಯದಲ್ಲಿ ಅತ್ಯುನ್ನತ ಸಾಧನೆಗೈದ ಸಾಧಕರಿಗೆ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತಿತ್ತು. ಬಳಿಕ ಸೋವಿಯತ್ ಆಡಳಿತ ಅವಧಿಯಲ್ಲಿ ಇದನ್ನು ನಿಲ್ಲಿಸಲಾಗಿತ್ತು. ಆದ್ರೆ 1998ರಲ್ಲಿ ಈ ಪ್ರಶಸ್ತಿ ಪುರಸ್ಕಾರವನ್ನು ಪುನಃ ಆರಂಭಿಸಲಾಯಿತು.

    ಇದು ಮೋದಿ ಅವರ ಪರಿಶ್ರಮಕ್ಕೆ ಲಭಿಸಿರುವ ಏಳನೇ ವಿದೇಶಿ ಪುರಸ್ಕಾರವಾಗಿದೆ. `ಆರ್ಡರ್ ಆಫ್ ಸೇಂಟ್ ಆಂಡ್ರ್ಯೂ ದಿ ಅಪೋಸ್ಟೆಲ್’ ಪ್ರಶಸ್ತಿ ಪತ್ರಕ್ಕೆ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರ ಸಹಿ ಇರಲಿದೆ. ಚೀನಾ ಅಧ್ಯಕ್ಷ ಕ್ಸಿ ಜಿನ್‍ಪಿಂಗ್, ಕಜಕಿಸ್ತಾನದ ಅಧ್ಯಕ್ಷ ನುರ್‍ಸುಲ್ತಾನ್ ನಜರ್ ಬಯೋವ್, ಅಜರ್‍ಬೈಜಾನ್ ಅಧ್ಯಕ್ಷ ಗೇಡರ್ ಅಲೀವ್ ಅವರಿಗೂ ಕೂಡ ಈ ಪುರಸ್ಕಾರ ನೀಡಿ ಗೌರವಿಸಲಾಗಿದೆ.

    ಮೋದಿಗೆ ಒಲಿದು ಬಂದ ವಿದೇಶಿ ಪುರಸ್ಕಾರಗಳು:

    1. ಜಾಯೇದ್ ಮೆಡಲ್ ಆಫ್ ಯುಎಇ: ಭಾರತ-ಯುಎಇ ನಡುವೆ ರಚನಾತ್ಮಕ ಸಂಬಂಧ ಸುಧಾರಣೆಗೆ ಶ್ರಮಿಸಿದ್ದಕ್ಕೆ ಕಳೆದ ಏಪ್ರಿಲ್ 4ರಂದು ಈ ಪ್ರಶಸ್ತಿಯನ್ನು ಘೋಷನೆ ಮಾಡಲಾಗಿತ್ತು.

    2. ಸಿಯೋಲ್ ಶಾಂತಿ ಪ್ರಶಸ್ತಿ 2018: ಶ್ರೀಮಂತರು ಮತ್ತು ಬಡವರ ನಡುವಿನ ಆರ್ಥಿಕ ಹಾಗೂ ಸಾಮಾಜಿಕ ಅಂತರ ತಗ್ಗಿಸಲು ಭಾರತ ಮತ್ತು ಜಾಗತಿಕ ಮಟ್ಟದಲ್ಲಿ ಆರ್ಥಿಕ ಅಭಿವೃದ್ಧಿಗೆ ನೀಡಿದ ಕೊಡುಗೆಗಾಗಿ ಮೋದಿ ಅವರಿಗೆ ದಕ್ಷಿಣ ಕೊರಿಯಾ ಸರ್ಕಾರ 2018ರ ಅಕ್ಟೋಬರ್ 24ರಂದು ಈ ಪ್ರಶಸ್ತಿಯನ್ನು ನೀಡಿ ಗೌರವಿಸಿತ್ತು.

    3. ಯುಎನ್ ಚಾಂಪಿಯಸ್ಸ್ ಆಫ್ ಅರ್ಥ್ ಅವಾರ್ಡ್ 2018: ವಿಶ್ವಸಂಸ್ಥೆಯ ಅತಿದೊಡ್ಡ ಪ್ರಶಸ್ತಿ ಎನಿಸಿಕೊಂಡಿರುವ ಚಾಂಪಿಯನ್ಸ್ ಆಫ್ ಅರ್ಥ್ ಪ್ರಶಸ್ತಿಯ ಗೌರವಕ್ಕೆ ಪ್ರಧಾನಿ ನರೇಂದ್ರ ಮೋದಿ ಪಾತ್ರರಾಗಿದ್ದರು. ಈ ಗೌರವವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಫ್ರಾನ್ಸ್ ಅಧ್ಯಕ್ಷ ಇಮ್ಯಾನ್ಯುಯೆಲ್ ಮ್ಯಾಕ್ರಾನ್ ಅವರ ಜೊತೆ ಹಂಚಿಕೊಂಡಿದ್ದರು. ಪಾಲಿಸಿ ಆಫ್ ಲೀಡರ್ಶಿಪ್ ವಿಭಾಗದಲ್ಲಿ ಮೋದಿ ಅವರಿಗೆ ಈ ಗೌರವ ಸಿಕ್ಕಿತ್ತು. ಸೌರಶಕ್ತಿ ಬಳಕೆಗೆ ಉತ್ತೇಜನ ನೀಡುವ ಅಂತಾರಾಷ್ಟ್ರೀಯ ಸೌರ ಮೈತ್ರಿಕೂಟ ಸ್ಥಾಪನೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದಕ್ಕಾಗಿ ಮೋದಿಗೆ ಅಕ್ಟೋಬರ್ 3ರಂದು ವಿಶ್ವಸಂಸ್ಥೆಯ ಮಹಾ ಪ್ರಧಾನ ಕಾರ್ಯದರ್ಶಿ ಆಂಟೊನಿಯೋ ಗುಟೆರೆಸ್ ಅವರು ಈ ಪ್ರಶಸ್ತಿ ನೀಡಿ ಗೌರವಿಸಿದ್ದರು.

    4. ಗ್ರ್ಯಾಂಡ್ ಕಾಲರ್ ಆಫ್ ದಿ ಸ್ಟೇಟ್ ಪ್ಯಾಲೆಸ್ತೀನ್: ಉಭಯ ದೇಶಗಳ ಸಂಬಂಧ ಸುಧಾರಣೆಗೆ ಮೋದಿ ಅವರು ಕೈಗೊಂಡ ಕ್ರಮಗಳನ್ನು ಮೆಚ್ಚಿ ಕಳೆದ ವರ್ಷದ ಫೆಬ್ರವರಿ 10 ರಂದು ಪ್ಯಾಲೆಸ್ತೀನ್ ಅಧ್ಯಕ್ಷ ಮಹಮೂದ್ ಅಬ್ಬಾಸ್ ಈ ಪ್ರಶಸ್ತಿ ನೀಡಿ ಸನ್ಮಾನಿಸಿದ್ದರು.

    5. ಅಮೀರ್ ಅಬ್ದುಲ್ಲಾ ಖಾನ್ ಅವಾರ್ಡ್ ಆಫ್ ಅಫಘಾನಿಸ್ತಾನ: 2016ರ ಜೂನ್‍ನಲ್ಲಿ ಮೋದಿ ಅವರು ಅಫ್ಘನ್-ಭಾರತ ಸ್ನೇಹಸೇತು ಅಣೆಕಟ್ಟೆ ಉದ್ಘಾಟನೆಗೆಂದು ಅಫಘಾನಿಸ್ತಾನಕ್ಕೆ ತೆರಳಿದ್ದಾಗ ಈ ಪುರಸ್ಕಾರವನ್ನು ಅಧ್ಯಕ್ಷ ಅಶ್ರಫ್ ಘನಿ ಪ್ರದಾನ ಮಾಡಿದ್ದರು.

    6. ಕಿಂಗ್ ಅಬ್ದುಲ್ಲಾಜೀಜ್ ಸಾಶ್ ಅವಾರ್ಡ್ ಆಫ್ ಸೌದಿ ಅರೇಬಿಯಾ: ಇದು ಸೌದಿಯ ಅತ್ಯುನ್ನತ ನಾಗರಿಕ ಗೌರವವಾಗಿದ್ದು, ಪ್ರಧಾನಿ ಮೋದಿಗೆ 2016ರ ಏಪ್ರಿಲ್‍ನಲ್ಲಿ ಸೌದಿ ದೊರೆ ಸಲ್ಮಾನ್ ಬಿನ್ ಅಬ್ದುಲಾಜೀಜ್ ಈ ಪ್ರಶಸ್ತಿ ಪ್ರದಾನ ಮಾಡಿದ್ದರು.