Tag: ರಷ್ಯಾ

  • 3 ದಿನ ರಷ್ಯಾ ಪ್ರವಾಸಕ್ಕೆ ತೆರಳಲಿದ್ದಾರೆ ರಾಜನಾಥ್ ಸಿಂಗ್

    3 ದಿನ ರಷ್ಯಾ ಪ್ರವಾಸಕ್ಕೆ ತೆರಳಲಿದ್ದಾರೆ ರಾಜನಾಥ್ ಸಿಂಗ್

    ನವದೆಹಲಿ: ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು, ರಷ್ಯಾಗೆ ಮೂರು ದಿನಗಳ ಪ್ರವಾಸಕ್ಕೆ ತೆರಳುತ್ತಿದ್ದಾರೆ.

    ಜೂ. 24ರಂದು ರಷ್ಯಾದ ಮಾಸ್ಕೋದಲ್ಲಿ ನಡೆಯುವ “ವಿಕ್ಟರಿ ಡೇ ಪೆರೇಡ್”ನಲ್ಲಿ ಭಾಗಿಯಾಗಲು ರಾಜ್‍ನಾಥ್ ಸಿಂಗ್ ಅವರು ಹೋಗಲಿದ್ದಾರೆ. 2ನೇ ಮಹಾಯುದ್ಧದ ವಿಜಯದ 75ನೇ ವಾರ್ಷಿಕೋತ್ಸವ ರಷ್ಯಾ ಹಮ್ಮಿಕೊಂಡಿದ್ದು, ಈ ಕಾರ್ಯಕ್ರಮಕ್ಕೆ ಭಾರತದ ಪರವಾಗಿ ರಾಜನಾಥ್ ಸಿಂಗ್ ಹೋಗಲಿದ್ದಾರೆ.

    ಜರ್ಮನಿ ವಿರುದ್ಧ ಎರಡನೇ ಮಹಾಯುದ್ಧ ಜಯಿಸಿದ ಸಂಭ್ರಮದ ಅಂಗವಾಗಿ ರಷ್ಯಾ ಈ ಕಾರ್ಯಕ್ರಮವನ್ನು ಆಯೋಜಿಸಿದೆ. ಈ ಕಾರ್ಯಕ್ರಮಕ್ಕೆ ರಷ್ಯಾ ದೇಶದ ರಕ್ಷಣಾ ಸಚಿವ ಸೆರ್ಗೆ ಶೋಯಿಗು ಅವರು ಭಾರತದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ಆಹ್ವಾನಿಸಿದ್ದರು. ಈ ಆಹ್ವಾನದ ಮೇರೆಗೆ ಭಾರತೀಯ ಸೇನೆಯ 3 ವಿಭಾಗಗಳ 75 ಸೈನಿಕರು ಸೇರಿ ರಾಜನಾಥ್‍ಸಿಂಗ್ ಅವರು ಕೂಡ ಮೂರು ದಿನ ರಷ್ಯಾಗೆ ಹೋಗಲಿದ್ದಾರೆ.

    ಈ ಕಾರ್ಯಕ್ರಮ ಮೇ 9ರಂದು ನಡೆಯಬೇಕಿತ್ತು. ಆದರೆ ಕೊರೊನಾ ವೈರಸ್ ಲಾಕ್‍ಡೌನ್‍ನಿಂದ ಮುಂದಕ್ಕೆ ಹೋಗಿತ್ತು. ಹೀಗಾಗಿ ಈ ಕಾರ್ಯಕ್ರಮವನ್ನು ಜೂನ್ 24ರಂದು ನಡೆಸಲು ರಷ್ಯಾ ತೀರ್ಮಾನ ಮಾಡಿದೆ. ಜೂನ್ 24ರಂದು ನಡೆಯುವ ವಿಕ್ಟರಿ ಡೇ ಪೆರೇಡ್‍ಗಾಗಿ ಸೋಮವಾರ ರಷ್ಯಾಗೆ ತೆರಳುತ್ತಿರುವ ರಾಜನಾಥ್ ಸಿಂಗ್ ಅವರ ಪ್ರಯಾಣ ಸುರಕ್ಷಿತವಾಗಿರಲಿ ಎಂದು ಬಯಸುತ್ತೇನೆ ಎಂದು ರಷ್ಯಾದ ರಾಯಭಾರಿ ನಿಕೋಲಾಯ್ ಕುಡಾಶೇವ್ ಅವರು ಟ್ವೀಟ್ ಮಾಡಿದ್ದಾರೆ.

  • ವಿಶ್ವವ್ಯಾಪಿ 50 ಲಕ್ಷ ಗಡಿ ದಾಟಿದ ಕೊರೊನಾ ಸೋಂಕಿತರ ಸಂಖ್ಯೆ

    ವಿಶ್ವವ್ಯಾಪಿ 50 ಲಕ್ಷ ಗಡಿ ದಾಟಿದ ಕೊರೊನಾ ಸೋಂಕಿತರ ಸಂಖ್ಯೆ

    ನವದೆಹಲಿ: ಇಡೀ ವಿಶ್ವವನ್ನು ಬೆಂಬಿಡದೇ ಕಾಡುತ್ತಿರುವ ಮಹಾಮಾರಿ ಕೊರೊನಾ ವೈರಸ್‍ಗೆ 5,000,599 ಮಂದಿ ತುತ್ತಾಗಿದ್ದಾರೆ.

    50 ಲಕ್ಷ ಸೋಂಕಿತರ ಪೈಕಿ ಈಗಾಗಲೇ 19,70,918 ಮಂದಿ ಗುಣಮುಖರಾಗಿದ್ದು, 3,25,156 ಮಂದಿ ಸಾವನ್ನಪ್ಪಿದ್ದಾರೆ. ಸದ್ಯ 27,04,525 ಸಕ್ರಿಯ ಪ್ರಕರಣಗಳಿದ್ದು, 26,59,096(ಶೇ. 98ರಷ್ಟು) ಸಣ್ಣ ಪ್ರಮಾಣದ ಸೋಂಕಿನ ಲಕ್ಷಣಗಳಿದ್ದವರು ಚೇತರಿಸಿಕೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ. ಇನ್ನು 45,429(ಶೇ. 2ರಷ್ಟು) ಮಂದಿ ತೀವ್ರ ನಿಗಾ ಘಟಕದಲ್ಲಿದ್ದು, ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ.

    ವಿಶ್ವಾದ್ಯಾಂತ ಕೊರೊನಾ ಪೀಡಿತ ರಾಷ್ಟ್ರಗಳ ಪೈಕಿ ಅಮೆರಿಕ ಮೊದಲ ಸ್ಥಾನದಲ್ಲಿದೆ. ಅಮೆರಿಕದಲ್ಲಿ 15,70,583 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. 3,08,705 ಮಂದಿ ರಷ್ಯಾದಲ್ಲಿ ಸೋಂಕಿಗೆ ತುತ್ತಾಗಿದ್ದು, ರಷ್ಯಾ ಎರಡನೇ ಸ್ಥಾನದಲ್ಲಿದೆ. ಸ್ಪೇನ್ ಸದ್ಯ ಮೂರನೇ ಸ್ಥಾನದಲ್ಲಿದ್ದು, 2,78,803 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ.

    ಭಾರತದಲ್ಲೂ ಕೊರೊನಾ ಪೀಡಿತರ ಸಂಖ್ಯೆ ಲಕ್ಷದ ಗಡಿ ದಾಟಿದ್ದು, ಈ ವರೆಗೂ 1,07,021 ಮಂದಿ ಸೋಂಕಿಗೆ ತುತ್ತಾಗಿದ್ದಾರೆ. ಈ ಪೈಕಿ 3,303 ಮಂದಿ ಸಾವನ್ನಪ್ಪಿದರೇ 42,379 ಮಂದಿ ಗುಣಮುಖರಾಗಿದ್ದಾರೆ.

  • ದೇಶದಲ್ಲಿ ಒಂದೇ ದಿನ 1,400 ಮಂದಿಗೆ ಕೊರೊನಾ

    ದೇಶದಲ್ಲಿ ಒಂದೇ ದಿನ 1,400 ಮಂದಿಗೆ ಕೊರೊನಾ

    – 28 ಸಾವಿರ ದಾಟಿದ ಸೋಂಕಿತರ ಸಂಖ್ಯೆ
    – ವಿಶ್ವದಲ್ಲಿ 30 ಲಕ್ಷಕ್ಕೂ ಹೆಚ್ಚು ಜನರಿಗೆ ಕೊರೊನಾ, 2 ಲಕ್ಷ ಸಾವು

    ನವದೆಹಲಿ: ದೇಶಾದ್ಯಂತ ಕೊರೊನಾ ರಣಕೇಕೆ ಮುಂದುವರಿದಿದ್ದು, ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 1,400 ಮಂದಿಗೆ ಸೋಂಕು ತಗುಲಿದ್ದು, ಬಾಧಿತರ ಸಂಖ್ಯೆ 28 ಸಾವಿರದ ಗಡಿ ದಾಟಿದೆ. ಇದುವರೆಗೂ 886 ಮಂದಿ ಸಾವನ್ನಪ್ಪಿದ್ದಾರೆ.

    ಕೊರೊನಾ ಸೋಂಕಿನಿಂದ ದೇಶದಲ್ಲಿ 6,573 ಮಂದಿ ಗುಣಮುಖರಾಗಿದ್ದು, ಚೇತರಿಕೆಯ ಪ್ರಮಾಣ ಶೇ.22.17ಕ್ಕೆ ಏರಿಕೆಯಾಗಿದೆ. ಕಳೆದ 28 ದಿನಗಳಿಂದ ದೇಶದ 16 ಜಿಲ್ಲೆಗಳಲ್ಲಿ ಹೊಸ ಪ್ರಕರಣಗಳು ಕಂಡುಬಂದಿಲ್ಲ. ಕಳೆದ 14 ದಿನಗಳಿಂದ 85 ಜಿಲ್ಲೆಗಳಲ್ಲಿ ಹೊಸ ಪ್ರಕರಣ ಬೆಳಕಿಗೆ ಬಂದಿಲ್ಲ. ಆದರೆ ಕೇರಳದಲ್ಲಿ 25 ಮಂದಿಗೆ ಸೊಂಕು ಹೇಗೆ ಹಬ್ಬಿದೆ ಎಂದು ಗೊತ್ತಾಗುತ್ತಿಲ್ಲ. ಹೀಗಾಗಿ ಕೊರೊನಾ ಮೂರನೇ ಹಂತ ತಲುಪಿದೆಯೇ ಎಂಬ ಆತಂಕ ಕೇರಳದ ಜನತೆಗೆ ಎದುರಾಗಿದೆ.

    ಇಂದು ಸಹ ಮಹಾರಾಷ್ಟ್ರದಲ್ಲಿ ಹೆಚ್ಚು ಪ್ರಕರಣಗಳು ಪತ್ತೆಯಾಗಿದ್ದು, 440 ಹೊಸ ಪ್ರಕರಣಗಳು ಕಂಡುಬಂದಿವೆ. ಈ ಮೂಲಕ ಸೋಂಕಿತರ ಸಂಖ್ಯೆ 8,068ಕ್ಕೆ ಏರಿದೆ. ಒಂದೇ ದಿನ 19 ಜನ ಸಾವನ್ನಪ್ಪಿದ್ದಾರೆ. ಮಹಾರಾಷ್ಟ್ರದಲ್ಲಿ ಈ ವರೆಗೆ ಒಟ್ಟು 342 ಜನ ಕೊರೊನಾದಿಂದ ಸಾವನ್ನಪ್ಪಿದ್ದಾರೆ. ಗುಜರಾತ್‍ನಲ್ಲಿಯೂ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗಿದ್ದು, ಒಂದೇ ದಿನ 230 ಪ್ರಕರಣಗಳು ಪತ್ತೆಯಾಗಿವೆ. ಸೋಂಕಿತರ ಸಂಖ್ಯೆ 3,301ಕ್ಕೆ ಏರಿಕೆಯಾಗಿದೆ. ಒಂದೇ ಸಿನ 18 ಜನ ಸಾವನ್ನಪ್ಪಿದ್ದಾರೆ. ಒಟ್ಟು 151 ಜನ ಅಸುನೀಗಿದ್ದಾರೆ.

    ಕಳೆದ ಎರಡ್ಮೂರು ದಿನಗಳಿಂದ ನಿಯಂತ್ರಣದಲ್ಲಿದ್ದ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಇಂದು ಒಂದೇ ದಿನ 293 ಪ್ರಕರಣಗಳು ಪತ್ತೆಯಾಗಿವೆ. 54 ಜನ ಸಾವನ್ನಪ್ಪಿದ್ದಾರೆ. ಒಟ್ಟು 2,918 ಜನರಿಗೆ ಸೋಂಕು ತಗುಲಿದೆ.

    ವಿಶ್ವದೆಲ್ಲೆಡೆ ದಿನದಿನಕ್ಕೂ, ಕ್ಷಣಕ್ಷಣಕ್ಕೂ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದು, ಇದೀಗ 30 ಲಕ್ಷಕ್ಕೂ ಹೆಚ್ಚು ಜನರನ್ನು ಬಾಧಿಸಿದೆ. ಇದುವರೆಗೆ 2 ಲಕ್ಷಕ್ಕೂ ಹೆಚ್ಚು ಜನರನ್ನು ಈ ಹೆಮ್ಮಾರಿ ಬಲಿ ಪಡೆದಿದೆ. ಸುಮಾರು 9 ಲಕ್ಷದಷ್ಟು ಜನ ಸೋಂಕಿನಿಂದ ಗುಣಮುಖರಾಗಿದ್ದು, 19 ಲಕ್ಷ ಮಂದಿ ಈ ಕ್ರೂರ ರೋಗದಿಂದ ಬಳಲುತ್ತಿದ್ದಾರೆ. ಪ್ರಪಂಚದಾದ್ಯಂತ 3ನೇ 1ರಷ್ಟು ಸೋಂಕಿತರು ಅಮೆರಿಕದಲ್ಲೇ ಇರುವುದು ವಿಶ್ವದ ದೊಡ್ಡಣ್ಣನಿಗೆ ಭಾರಿ ಏಟು ಕೊಟ್ಟಿದೆ. ಅಮೆರಿಕಾ ಒಂದರಲ್ಲೇ 55 ಸಾವಿರಕ್ಕೂ ಹೆಚ್ಚು ಜನ ಈ ರೋಗದಿಂದ ಮೃತಪಟ್ಟಿರುವುದು ಕೊರೊನಾದ ಭೀಕರತೆಯನ್ನು ಸ್ಪಷ್ಟಪಡಿಸುತ್ತಿದೆ. ಅಮೆರಿಕದಲ್ಲಿ ಸೋಂಕಿತರ ಸಂಖ್ಯೆ 9,90,021ಕ್ಕೆ ಏರಿದೆ. ರಷ್ಯಾ ಕೂಡ ಕೊರೊನಾ ಕಬಂಧ ಬಾಹುವಿನಲ್ಲಿ ಸಿಲುಕಿದ್ದು ಇಂದು ಒಂದೇ ದಿನ 6 ಸಾವಿರ ಜನರಲ್ಲಿ ಸೋಂಕು ಪತ್ತೆಯಾಗಿದೆ.

  • ಮತ್ತೆ ಮೋದಿ ಕೈ ಹಿಡಿದ ಕಚ್ಚಾ ತೈಲ – ಒಂದೇ ದಿನ ಭಾರೀ ಇಳಿಕೆ, ದರ ಸಮರ ಆರಂಭ

    ಮತ್ತೆ ಮೋದಿ ಕೈ ಹಿಡಿದ ಕಚ್ಚಾ ತೈಲ – ಒಂದೇ ದಿನ ಭಾರೀ ಇಳಿಕೆ, ದರ ಸಮರ ಆರಂಭ

    ನವದೆಹಲಿ: ಕಚ್ಚಾ ತೈಲ ಮತ್ತೆ ಪ್ರಧಾನಿ ನರೇಂದ್ರ ಮೋದಿ ಅವರ ಕೈ ಹಿಡಿದಿದೆ. ಕುಸಿಯುತ್ತಿರುವ ದೇಶದ ಆರ್ಥಿಕತೆಯನ್ನು ಮೇಲಕ್ಕೆ ಎತ್ತಲು ಸರ್ಕಾರ ನಾನಾ ಕ್ರಮಗಳನ್ನು ಕೈಗೊಳ್ಳುತ್ತಿರುವ ಬೆನ್ನಲ್ಲೇ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಭಾರೀ ಇಳಿಕೆ ಕಂಡಿದೆ.

    ಕೊರೊನಾ ವೈರಸ್ ದಾಳಿಯಿಂದ ಜಾಗತಿಕ ಮಾರುಕಟ್ಟೆಯ ಮೇಲೆ ಪರಿಣಾಮ ಬೀರಿದ್ದು ಬೇಡಿಕೆ ಇಳಿಕೆಯಾದ ಹಿನ್ನೆಲೆಯಲ್ಲಿ ತೈಲ ದರ ಇಳಿಕೆಯಾಗುತ್ತಲೇ ಇತ್ತು. ಈ ದರವನ್ನು ಸ್ಥಿರಗೊಳಿಸುವ ಸಂಬಂಧ ಮತ್ತೆ ಶೇ.4ರಷ್ಟು ಉತ್ಪಾದನೆ ತಗ್ಗಿಸುವ ಕುರಿತಾಗಿ 14 ಸದಸ್ಯರನ್ನು ಒಳಗೊಂಡಿರುವ ಪೆಟ್ರೋಲಿಯಂ ರಫ್ತು ರಾಷ್ಟ್ರಗಳ ಸಂಘಟನೆ(ಒಪೆಕ್) ಮುಂದಾಗಿತ್ತು. ಮಾರ್ಚ್ ತಿಂಗಳಿಗೆ ಒಪ್ಪಂದ ಕೊನೆಯಾಗಲಿರುವ ಹಿನ್ನೆಲೆಯಲ್ಲಿ ಮತ್ತೆ ಮುಂದುವರಿಸುವಂತೆ ಸೌದಿ ಅರೆಬೀಯಾ ಮಾತುಕತೆಗೆ ಮುಂದಾಗಿತ್ತು. ಆದರೆ ಮತ್ತೆ ಒಪ್ಪಂದ ನಡೆಸಲು ನಾವು ಸಿದ್ಧರಿಲ್ಲ ಎಂದು ರಷ್ಯಾ ಹೇಳಿದ ಬೆನ್ನಲ್ಲೇ ಈಗ ತೈಲ ಉತ್ಪಾದನೆ ನಡೆಸುವ ರಾಷ್ಟ್ರಗಳ ಮಧ್ಯೆ ದರ ಸಮರ ಆರಂಭಗೊಂಡಿದೆ.

    ಒಪೆಕ್ ರಾಷ್ಟ್ರಗಳು ಈಗ ಪ್ರತಿದಿನ ಉತ್ಪಾದನೆಯಾಗುತ್ತಿರುವ ತೈಲ ಪ್ರಮಾಣವನ್ನು ಇಳಿಸಲು ಮಾತುಕತೆ ನಡೆಸಿತ್ತು. ಏಪ್ರಿಲ್ ನಿಂದ ಪ್ರತಿದಿನ ಶೇ.1.5 ದಶಲಕ್ಷ ಬ್ಯಾರೆಲ್ (ಶೇ.4ರಷ್ಟು) ಇಳಿಸಿ ಮುಂದಿನ ಡಿಸೆಂಬರ್ ವರೆಗೆ ಈ ಪ್ರಮಾಣದಲ್ಲೇ ತೈಲ ಉತ್ಪಾದನೆ ನಡೆಸಲು ಪ್ರಸ್ತಾಪವನ್ನು ಮುಂದಿಟ್ಟಿತ್ತು. ಆದರೆ ಈ ಪ್ರಸ್ತಾಪವನ್ನು ರಷ್ಯಾ ತಿರಸ್ಕರಿಸಿದ್ದರಿಂದ ಗಲ್ಫ್ ರಾಷ್ಟ್ರಗಳು ಉತ್ಪಾದನೆಯನ್ನು ಹೆಚ್ಚಿಸಿ ದರವನ್ನು ಇಳಿಕೆ ಮಾಡಿದೆ.

    ಸೋಮವಾರ ಕಚ್ಚಾ ತೈಲದ ಬೆಲೆಯನ್ನು ಸೌದಿ ಅರೇಬಿಯಾ ಇಳಿಕೆ ಮಾಡಿದೆ. ವಿಶ್ವದ ಅತಿ ದೊಡ್ಡ ತೈಲ ಉತ್ಪಾದಕಾ ರಾಷ್ಟ್ರವಾಗಿರುವ ಸೌದಿ ಅರೇಬಿಯಾ ಏಪ್ರಿಲ್ ನಿಂದ ಈಗ ಇರುವ ಉತ್ಪಾದನೆಗಿಂತ ಹೆಚ್ಚುವರಿಯಾಗಿ ಪ್ರತಿದಿನ 10 ದಶಲಕ್ಷ ಬ್ಯಾರೆಲ್ ಕಚ್ಚಾ ತೈಲ ಉತ್ಪಾದಿಸುವುದಾಗಿ ಹೇಳಿಕೊಂಡಿದೆ. ಈ ನಿರ್ಧಾರ ಪ್ರಕಟವಾದ ಬೆನ್ನಲ್ಲೇ ತೈಲ ಬೆಲೆ ಶೇ.31 ರಷ್ಟು ಇಳಿಕೆಯಾಗಿದೆ. ಪರಿಣಾಮ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ 35.75 ಡಾಲರ್(2,647 ರೂ.) ಬೆಲೆಯಲ್ಲಿ ಮಾರಾಟವಾಗುತ್ತಿದ್ದ 1 ಬ್ಯಾರೆಲ್ ಬ್ರೆಂಟ್ ಕಚ್ಚಾ ತೈಲ ಈಗ 31.02 ಡಾಲರಿಗೆ(2,295 ರೂ.) ತಲುಪಿದೆ. ಜುಲೈ 2008ರಲ್ಲಿ ಒಂದು ಬ್ಯಾರೆಲ್ ಕಚ್ಚಾ ತೈಲದ ಬೆಲೆ 148 ಡಾಲರ್(10,960 ರೂ.) ದರಕ್ಕೆ ಏರಿಕೆ ಆಗಿತ್ತು.

    ಚೀನಾದಲ್ಲಿ ಈಗಾಗಲೇ ಕೆಲ ದಿನಗಳಿಂದ ಉತ್ಪಾದನೆ ಸ್ಥಗಿತಗೊಂಡಿದೆ. ಇದರ ಜೊತೆ ದಕ್ಷಿಣ ಕೊರಿಯಾ, ಇಟಲಿಯಲ್ಲಿ ಕೊರೊನಾ ಭಾರೀ ಪ್ರಮಾಣದಲ್ಲಿ ಹಬ್ಬುತ್ತಿದೆ. ಯುರೋಪ್, ಏಷ್ಯಾ ರಾಷ್ಟ್ರಗಳಿಗೆ ಭೀತಿ ಎದುರಾದ ಹಿನ್ನೆಲೆಯಲ್ಲಿ ಈ ಬಾರಿ ತೈಲದ ಬೇಡಿಕೆ ಮತ್ತಷ್ಟು ಇಳಿಕೆಯಾಗುವ ಸಾಧ್ಯತೆಯಿದೆ.

    2016ರಲ್ಲಿ ಅಮೆರಿಕದ ಶೇಲ್ ತೈಲ ಉತ್ಪಾದನೆ ತಗ್ಗಿಸಲು ಸೌದಿ ಅರೇಬಿಯಾ, ರಷ್ಯಾ ಮತ್ತು ಮಧ್ಯಪ್ರಾಚ್ಯದ ಇತರ ಉತ್ಪಾದಕ ದೇಶಗಳು ಏಷ್ಯಾದ ಮಾರುಕಟ್ಟೆಗೆ ಕಡಿಮೆ ಬೆಲೆಯಲ್ಲಿ ತೈಲವನ್ನು ಪೊರೈಕೆ ಮಾಡಿದ್ದವು. ಈಗ ಈ ಒಪ್ಪಂದದಿಂದ ಹಿಂದೆ ಸರಿದ ರಷ್ಯಾಕ್ಕೆ ಪಾಠ ಕಲಿಸಲು ಸೌದಿ ಭಾರೀ ಪ್ರಮಾಣದಲ್ಲಿ ಉತ್ಪಾದನೆ ಮಾಡಲು ಮುಂದಾಗಿದೆ. ಬೆಲೆ ಕಡಿಮೆ ಮಾಡಿದರೆ ಖರೀದಿಸಲು ಬೇಡಿಕೆ ಹೆಚ್ಚಾಗುವುದರಿಂದ ಯುರೋಪ್ ಮತ್ತು ಏಷ್ಯಾದಲ್ಲಿ ರಷ್ಯಾ ಜೊತೆಗೆ ಪೈಪೋಟಿ ನಡೆಸಿ ಮಾರುಕಟ್ಟೆಯನ್ನು ತನ್ನತ್ತ ಸೆಳೆಯಲು ಸೌದಿ ಮುಂದಾಗಿದೆ.

    ಕೊರೊನಾ ವೈರಸ್ ದಾಳಿಯಿಂದ ಇಡೀ ವಿಶ್ವದಲ್ಲಿ ಈಗ ಉತ್ಪಾದನೆ ಕಡಿಮೆಯುತ್ತಿದ್ದು, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ದರ ನಿರಂತರವಾಗಿ ಇಳಿಕೆಯಾಗುತ್ತಿದೆ. ವ್ಯಾಪಾರ, ವಾಣಿಜ್ಯ ಚಟುವಟಿಕೆಗಳು ಮಂದಗತಿಯಲ್ಲಿರುವುದರಿಂದ ತೈಲದ ಬೇಡಿಕೆ ಇಳಿದಿದ್ದು, ಬೆನ್ನಿಗೇ ದರವೂ ಇಳಿಕೆಯಾಗುತ್ತಿದೆ. ಎಷ್ಟು ಇಳಿಕೆಯಾಗಿದೆ ಎಂದರೆ 2018ರ ಆಗಸ್ಟ್ ನಲ್ಲಿ ಒಂದು ಬ್ಯಾರೆಲ್ ಕಚ್ಚಾ ತೈಲದ ಬೆಲೆ 72 ಡಾಲರ್ ಇತ್ತು. ಚೀನಾ ಅಮೆರಿಕ ವಾಣಿಜ್ಯ ಸಮರ ಮತ್ತಷ್ಟು ಹೆಚ್ಚಾಗಿದ್ದರಿಂದ ಕಳೆದ ವರ್ಷ ಒಂದು ಬ್ಯಾರೆಲ್ ಕಚ್ಚಾ ತೈಲದ ಬೆಲೆ 58 ಡಾಲರ್ ತಲುಪಿತ್ತು.

    ಭಾರತಕ್ಕೆ ಲಾಭ ಹೇಗೆ?
    ಚೀನಾ, ಅಮೆರಿಕದ ನಂತರ ವಿಶ್ವದಲ್ಲೇ ಅತಿ ಹೆಚ್ಚು ತೈಲವನ್ನು ಆಮದು ಮಾಡುತ್ತಿರುವ ದೇಶ ಭಾರತವಾಗಿದ್ದು, ದೇಶದ ಆರ್ಥಿಕತೆ ಮೇಲೆ ತೈಲ ದರ ಭಾರೀ ಪ್ರಭಾವ ಬೀರುತ್ತದೆ. ಭಾರತವು ತನ್ನ ಬೇಡಿಕೆಯ ಶೇ.80ರಷ್ಟು ತೈಲವನ್ನು ಆಮದು ಮಾಡಿಕೊಳ್ಳುತ್ತಿದೆ. ಹೀಗಾಗಿ ತೈಲ ದರದಲ್ಲಿ ಇಳಿಕೆಯಾದರೆ ಆಮದು ಹೊರೆಯೂ ಕಡಿಮೆಯಾಗಲಿದೆ. ರಫ್ತು ವಹಿವಾಟಿನ ನಡುವಣ ಅಂತರವಾದ ಚಾಲ್ತಿ ಖಾತೆ ಕೊರತೆಯೂ ಇಳಿಕೆಯಾಗಲಿದೆ.

    2014ರಲ್ಲಿ ಮೊದಲ ಬಾರಿಗೆ ಪ್ರಧಾನಿ ಮೋದಿ ಅಧಿಕಾರ ಸ್ವೀಕರಿಸುವ ಸಂದರ್ಭದಲ್ಲಿ ಒಂದು ಬ್ಯಾರೆಲ್ ಕಚ್ಚಾ ತೈಲದ ಬೆಲೆ 108 ಡಾಲರ್(ಅಂದಾಜು 7,750 ರೂ.) ಇತ್ತು. ಮೋದಿ ಸರ್ಕಾರ ಮೂರನೇ ವರ್ಷದ ಅವಧಿಯಲ್ಲಿ 48 ಡಾಲರ್(3,400 ರೂ.) ಬೆಲೆಗೆ ಇಳಿಕೆಯಾಗಿತ್ತು. ಈಗ ಎರಡನೇ ಅವಧಿಯ ಮೊದಲ ವರ್ಷದಲ್ಲಿ ಒಂದು ಬ್ಯಾರೆಲ್ ಕಚ್ಚಾ ತೈಲದ ಬೆಲೆ 31 ಡಾಲರ್ ತಲುಪಿದೆ. ಈ ದರ ಹಲವು ತಿಂಗಳ ಕಾಲ ಸ್ಥಿರವಾಗಬಹುದು ಅಥವಾ ಮತ್ತಷ್ಟು ದರ ಕಡಿಮೆಯಾಗಬಹುದು ಎನ್ನುವ ವಿಶ್ಲೇಷಣೆ ಕೇಳಿ ಬಂದಿದೆ.

    ಪ್ರಸ್ತುತ ಒಂದು ಲೀಟರ್ ಪೆಟ್ರೋಲ್ ಮೇಲೆ ಕೇಂದ್ರ ಸರ್ಕಾರ 17.98 ರೂ. ಅಬಕಾರಿ ಸುಂಕ ಹಾಕಿದರೆ ಒಂದು ಲೀಟರ್ ಡೀಸೆಲ್ ಮೇಲೆ 13.83 ರೂ. ಇದೆ. ಈ ಹಿಂದೆ ದರ ಇಳಿಕೆಯಾದಾಗ ಸರ್ಕಾರ ಅಬಕಾರಿ ಸುಂಕ ಹೆಚ್ಚಿಸಿತ್ತು. ಈಗ ಭಾರೀ ಇಳಿಕೆಯಾದ ಹಿನ್ನೆಲೆಯಲ್ಲಿ ದರ ಮತ್ತೆ ಅಬಕಾರಿ ಸುಂಕ ಏರಿಕೆ ಮಾಡುತ್ತಾ ಎನ್ನುವ ಪ್ರಶ್ನೆ ಎದ್ದಿದೆ.

    ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ಅಬಕಾರಿ ಸುಂಕದಿಂದ 2018-19ರ ಹಣಕಾಸು ವರ್ಷದಲ್ಲಿ ಸರ್ಕಾರ 2.579 ಕೋಟಿ ರೂ. ಆದಾಯ ಸಂಗ್ರಹಿಸಿತ್ತು. 2013-14ರ ಅವಧಿಯಲ್ಲಿ 88,600 ಕೋಟಿ ರೂ. ಸಂಗ್ರಹಿಸಿದ್ದರೆ 2017-18ರ ಅವಧಿಯಲ್ಲಿ 2,016 ಕೋಟಿ ಆದಾಯ ಸಂಗ್ರಹಿಸಿತ್ತು. ಅಬಕಾರಿ ಸುಂಕವನ್ನು ಹೆಚ್ಚಿಸುವ ಮೂಲಕ ಸಂಗ್ರಹವನ್ನು ಹಣವನ್ನು ಸಾಮಾಜಿಕ ಅಭಿವೃದ್ಧಿ ಯೋಜನೆಗಳಿಗೆ ಬಳಸಲಾಗುವುದು ಎಂದು ಕೇಂದ್ರ ಸರ್ಕಾರ ಸಮರ್ಥನೆ ನೀಡಿತ್ತು.

  • ರಷ್ಯಾ, ಪೋಲೆಂಡ್ ಹಿಂದಿಕ್ಕಿ ಅರ್ಮೇನಿಯಾದ ರಕ್ಷಣಾ ಟೆಂಡರ್ ಗೆದ್ದ ಭಾರತ

    ರಷ್ಯಾ, ಪೋಲೆಂಡ್ ಹಿಂದಿಕ್ಕಿ ಅರ್ಮೇನಿಯಾದ ರಕ್ಷಣಾ ಟೆಂಡರ್ ಗೆದ್ದ ಭಾರತ

    ನವದೆಹಲಿ: ರಕ್ಷಣಾ ವಲಯದಲ್ಲಿ ಇಲ್ಲಿಯವರೆಗೆ ಅಭಿವೃದ್ಧಿ ಹೊಂದಿದ ರಾಷ್ಟ್ರಗಳೇ ಮುಂಚೂಣಿಯಲ್ಲಿ ಇರುತ್ತಿತ್ತು. ಆದರೆ ಈಗ ನಿಧಾನವಾಗಿ ಭಾರತವೂ ಈ ಕ್ಷೇತ್ರದಲ್ಲಿ ಪ್ರವೇಶಿಸುತ್ತಿದ್ದು, ಇದೇ ಮೊದಲ ಬಾರಿಗೆ ಯುರೋಪ್ ರಾಷ್ಟ್ರವಾದ ಅರ್ಮೇನಿಯಾದ ಶಸ್ತ್ರಾಸ್ತ್ರ ಟೆಂಡರ್ ಗೆದ್ದುಕೊಂಡಿದೆ.

    ಶಸ್ತ್ರಾಸ್ತ್ರ ಪತ್ತೆ ಮಾಡುವ ರೇಡಾರ್ ಖರೀದಿ ಸಂಬಂಧ ಅರ್ಮೇನಿಯಾ ಟೆಂಡರ್ ಆಹ್ವಾನಿಸಿತ್ತು. ಈ ಟೆಂಡರ್ ನಲ್ಲಿ ರಷ್ಯಾ, ಪೋಲೆಂಡ್ ಸಹ ಭಾಗವಹಿಸಿತ್ತು. ಆದರೆ ಭಾರತ ಈ ಎರಡು ದೇಶಗಳನ್ನು ಹಿಂದಿಕ್ಕಿ 40 ದಶಲಕ್ಷ ಡಾಲರ್(289.27 ಕೋಟಿ ರೂ.) ಟೆಂಡರ್ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

    ಮೇಕ್ ಇನ್ ಇಂಡಿಯಾ ಯೋಜನೆ ಅಡಿಯಲ್ಲಿ ಕೇಂದ್ರ ಸರ್ಕಾರ ಈಗಾಗಲೇ ರಕ್ಷಣಾ ಸಲಕರಣೆಗಳನ್ನು ತಯಾರಿಕೆಗೆ ಪ್ರೋತ್ಸಾಹ ನೀಡುತ್ತಿದೆ. ಈಗ ಟೆಂಡರ್ ಗೆದ್ದಿರುವುದು ಮೇಕ್ ಇನ್ ಇಂಡಿಯಾಗೆ ಸಿಕ್ಕ ದೊಡ್ಡ ಯಶಸ್ಸು ಎಂದೇ ವಿಶ್ಲೇಷಿಸಲಾಗುತ್ತಿದೆ.

    ಅರ್ಮೇನಿಯಾದ ರಕ್ಷಣಾ ಅಧಿಕಾರಿಗಳು ರಷ್ಯಾ ಹಾಗೂ ಪೋಲ್ಯಾಂಡ್ ದೇಶಗಳು ಅಭಿವೃದ್ಧಿ ಪಡಿಸಿದ ರೇಡಾರ್ ಗಳನ್ನು ಪರೀಕ್ಷಿಸಿದ್ದರು. ಆದರೆ ಅಂತಿಮವಾಗಿ ಭಾರತ ಅಭಿವೃದ್ಧಿ ಪಡಿಸಿರುವ 4 ‘ಸ್ವಾತಿ’ ರೇಡಾರ್ ಗಳನ್ನು ಖರೀದಿಸಲು ಒಪ್ಪಿಗೆ ನೀಡಿದ್ದಾರೆ ಎಂದು ವರದಿಯಾಗಿದೆ.

    ಸ್ವಾತಿ ವಿಶೇಷತೆ ಏನು?
    ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ(ಡಿಆರ್‍ಡಿಒ) ಮತ್ತು ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್(ಬಿಇಎಲ್) ಸಂಸ್ಥೆಗಳು ಈ ಶಸ್ತ್ರಾಸ್ತ್ರ ಪತ್ತೆ ಹಚ್ಚು ರೇಡಾರ್ ಅಭಿವೃದ್ಧಿ ಪಡಿಸಿದೆ. 50- ಕಿ.ಮೀ ದೂರದ ವ್ಯಾಪ್ತಿ ಪ್ರದೇಶ ಮಾರ್ಟಾರ್, ಶೆಲ್ ರಾಕೆಟ್  ದಾಳಿಯನ್ನು ನಿಖರವಾಗಿ ಪತ್ತೆ ಮಾಡುವ ಸಾಮರ್ಥ್ಯ ‘ಸ್ವಾತಿ’ಗಿದೆ.

    2019ರ ವಿಶ್ವಸಂಸ್ಥೆ ಸಾಮಾನ್ಯ ಅಧಿವೇಶನದ ಸಂದರ್ಭದಲ್ಲಿ ಪ್ರಧಾನಿ ಮೋದಿ ಅರ್ಮೇನಿಯಾದ ಪ್ರಧಾನಿ ನಿಕೋಲ್ ಪಶಿನಿಯನ್ ಜೊತೆ ಮಾತುಕತೆ ನಡೆಸಿದ್ದರು.

    ಉರಿ ಮೇಲಿನ ದಾಳಿಯ ಬಳಿಕ ನಡೆದ ಮೊದಲ ಸರ್ಜಿಕಲ್ ಸ್ಟ್ರೈಕ್ ವೇಳೆ ಮಾಧ್ಯಮಗಳು ಕೇಳಿದ್ದ ಪ್ರಶ್ನೆಗೆ ರಕ್ಷಣಾ ಸಚಿವರಾಗಿದ್ದ ದಿವಂಗತ ಮನೋಹರ್ ಪರಿಕ್ಕರ್, ಪಾಕಿಸ್ತಾನದ ಗುಂಡಿನ ದಾಳಿಯನ್ನು ಗುರುತಿಸಲು ಶಸ್ತ್ರಾಸ್ತ್ರ ಪತ್ತೆಹಚ್ಚುವ ರೇಡಾರ್ ‘ಸ್ವಾತಿ’ ಅನ್ನು ಬಳಸಲಾಗಿತ್ತು. ಈ ರೇಡಾರ್ ಅನ್ನು ಮೂರು ತಿಂಗಳ ನಂತರ ಸೇನೆಗೆ ಸೇರ್ಪಡೆಗೊಳಿಸಲಾಗಿತ್ತು. ಸ್ವಾತಿಯ ನೆರವಿನಿಂದ ಪಾಕ್ ಸೇನೆಯ 40 ಫಿರಂಗಿಗಳನ್ನು ನಾಶಪಡಿಸಲಾಗಿತ್ತು ಎಂದು ಅವರು ವಿವರಿಸಿದ್ದರು.

     

  • ಕೊಡಗಿನ ವರನಿಗೆ ರಷ್ಯಾದ ‘ಮಿಲನ’

    ಕೊಡಗಿನ ವರನಿಗೆ ರಷ್ಯಾದ ‘ಮಿಲನ’

    ಮಡಿಕೇರಿ: ಕೊಡಗಿನ ಯುವಕ ಹಾಗೂ ರಷ್ಯಾದ ಯುವತಿ ಹಿಂದೂ ಸಂಪ್ರದಾಯದಂತೆ ಸಪ್ತಪದಿ ತುಳಿದು ಸತಿ-ಪತಿಯಾದ ವಿಶೇಷ ಪ್ರಸಂಗ ನಡೆದಿದೆ.

    ಸೋಮವಾರಪೇಟೆಯ ಜಾನಕಿ ಕನ್‍ವೆನ್ಷನ್ ಹಾಲ್ ಈ ಅಪರೂಪದ ಮಂಗಳ ಕಾರ್ಯಕ್ಕೆ ಸಾಕ್ಷಿಯಾಗಿದೆ. ಸೊಮವಾರಪೇಟೆ ಸಮೀಪದ ನಂದಿಗುಂದ ಗ್ರಾಮದ ಚಿನ್ನಪ್ಪ ಮತ್ತು ಪುಷ್ಪ ದಂಪತಿಯ ಪುತ್ರ ಜಯಚಂದನ್ ರಷ್ಯಾದ ಮಾಸ್ಕೊ ವಿಶ್ವವಿದ್ಯಾನಿಲಯದಲ್ಲಿ ಯೋಗ ತರಬೇತುದಾರರಾಗಿದ್ದಾರೆ. ಇವರೊಂದಿಗೆ ಮಾಸ್ಕೊ ರಾಜ್ಯದ ಯುವತಿ ಮಿಲನಾ ಅವರು ಯೋಗ ತರಬೇತಿ ನೀಡುತ್ತಿದ್ದು, ಪರಸ್ಪರ ಪ್ರೀತಿಸಿ ಹಸೆಮಣೆಯೇರುವ ತೀರ್ಮಾನಕ್ಕೆ ಬಂದಿದ್ದರು.

    ಗುರು, ಹಿರಿಯರು, ನೆಂಟರಿಷ್ಟರು ಮತ್ತು ಆಪ್ತರ ಸಮ್ಮುಖದಲ್ಲಿ ಭಾನುವಾರ ಹಿಂದೂ ಸಂಪ್ರದಾಯದಂತೆ ವಿವಾಹವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ರಷ್ಯಾದ ಯುವತಿಗೆ ಭಾರತೀಯ ಸಂಸ್ಕೃತಿಯ ಅಚಾರ ವಿಚಾರದ ಬಗ್ಗೆ ಹೆಚ್ಚಿನ ಒಲವು ಇದ್ದು, ಭಾರತದ ಹುಡುಗನನ್ನು ಮದುವೆ ಮಾಡಿಕೊಳ್ಳುವ ಆಸೆ ಇತ್ತು. ಈ ಕುರಿತು ಹುಡುಗನ ಮನೆಯವರೊಂದಿಗೆ ಹೇಳಿಕೊಂಡಿದ್ದರು. ನಂತರ ಇಬ್ಬರ ಮನೆಯಲ್ಲೂ ಒಪ್ಪಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

  • ಭಾರತದ ದೇಗುಲಗಳು, ಸಂಸ್ಕೃತಿ ನನ್ನನ್ನು ಆಕರ್ಷಿಸಿದೆ – ವಿದೇಶಿ ಮಹಿಳೆಯಿಂದ ಗುಣಗಾನ

    ಭಾರತದ ದೇಗುಲಗಳು, ಸಂಸ್ಕೃತಿ ನನ್ನನ್ನು ಆಕರ್ಷಿಸಿದೆ – ವಿದೇಶಿ ಮಹಿಳೆಯಿಂದ ಗುಣಗಾನ

    ಬೆಂಗಳೂರು: ಸರ್ವಜನಾಂಗದ ಶಾಂತಿಯ ಬೀಡಾಗಿರುವ ಭಾರತ ವಿದೇಶಿಗರ ನೆಚ್ಚಿನ ನಾಡು. ಭಾರತದ ಸಂಸ್ಕೃತಿ, ಸಂಪ್ರದಾಯಗಳು ಎಂತವರನ್ನೂ ಕೂಡ ಆಕರ್ಷಿಸುತ್ತದೆ. ಇದೇ ಆಕರ್ಷಣೆಗೊಳಗಾಗಿ ರಷ್ಯಾದ ಮಹಿಳೆಯೊಬ್ಬಳು ಭಾರತಕ್ಕೆ ಬಂದಿದ್ದು, ಭಾರತದ ದೇಗುಲಗಳಿಗೆ ಭೇಟಿ ನೀಡಿ, ಇಲ್ಲಿನ ಸಂಪ್ರದಾಯ, ಸಂಸ್ಕೃತಿಗಳ ಬಗ್ಗೆ ತಿಳಿದುಕೊಳ್ಳುವ ಪ್ರಯತ್ನ ನಡೆಸುತ್ತಿದ್ದಾರೆ.

    ಇವತ್ತು ಬೆಂಗಳೂರಿನ ಮೈಸೂರು ರಸ್ತೆಯಲ್ಲಿರುವ ಗಾಳಿ ಅಂಜನೇಯ ದೇವಸ್ಥಾನದಲ್ಲಿ ರಷ್ಯಾದ ಅನಾನ್ ವಿಶೇಷ ಪೂಜೆಯನ್ನ ಸಲ್ಲಿಸಿ, ದೇವಸ್ಥಾನದಲ್ಲಿದ್ದ ಭಕ್ತರ ಗಮನ ಸೆಳೆದರು.

    ಕಳೆದ ಕೆಲ ತಿಂಗಳುಗಳಿಂದ ಅನಾನ್ ಭಾರತದ ಪ್ರವಾಸ ಕೈಗೊಂಡಿದ್ದು, ಪ್ರಮುಖ ದೇವಸ್ಥಾನಗಳಿಗೆ ಭೇಟಿ ನೀಡಿ, ಆ ದೇಗುಲಗಳ ಮಹತ್ವ ಇತಿಹಾಸದ ಬಗ್ಗೆ ತಿಳಿದುಕೊಳ್ಳುತ್ತಿದ್ದಾರೆ. ಇವತ್ತು ಅನಾನ್ ಮೈಸೂರು ರಸ್ತೆಯಲ್ಲಿರುವ ಗಾಳಿ ಅಂಜನೇಯನ ದೇವಸ್ಥಾನಕ್ಕೆ ಬಂದಾಗ ಅಲ್ಲಿನ ಅರ್ಚಕರು, ಸಂಪ್ರದಾಯದಂತೆ ಪೂಜೆ ಮಾಡಿದ ಬಳಿಕ ಹಣೆಗೆ ತಿಲಕ ಹಚ್ಚಿ, ಹೂವಿನ ಹಾರ ಹಾಕಿ, ದೇವಸ್ಥಾನದ ಪಾರಂಪರಿಕ ಇತಿಹಾಸವನ್ನ ವಿವರಿಸಿದರು.

    ಭಾರತದ ದೇವಾಲಯಗಳು ಮತ್ತು ಇಲ್ಲಿನ ಸಂಸ್ಕೃತಿಗಳು ನನ್ನನ್ನು ಆಕರ್ಷಿಸಿದೆ. ಈ ಹಿನ್ನೆಲೆಯಲ್ಲಿ ದೇವಾಲಯದ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳುತ್ತಿದ್ದೇನೆ ಎಂದು ಅವರು ಪ್ರತಿಕ್ರಿಯಿಸಿದರು.

  • ಬೆಂಜ್ ಕಾರನ್ನು ಹೆಲಿಕಾಪ್ಟರ್‌ನಿಂದ ಎಸೆದು ಕೋಪ ತೀರಿಸಿಕೊಂಡ ಮಾಲೀಕ

    ಬೆಂಜ್ ಕಾರನ್ನು ಹೆಲಿಕಾಪ್ಟರ್‌ನಿಂದ ಎಸೆದು ಕೋಪ ತೀರಿಸಿಕೊಂಡ ಮಾಲೀಕ

    ಮಾಸ್ಕೋ: ಎರಡು ಕೋಟಿ ಬೆಲೆ ಬಾಳುವ ಮರ್ಸಿಡಿಸ್ ಬೆಂಜ್ ಎಸ್‍ಯುವಿ ಕಾರನ್ನು ಮಾಲೀಕನೊಬ್ಬ 1 ಸಾವಿರ ಅಡಿ ಎತ್ತರದಿಂದ ಎಸೆದು ತನ್ನ ಕೋಪವನ್ನು ತೀರಿಸಿಕೊಂಡಿದ್ದಾನೆ.

    ರಷ್ಯಾದ ಇಗೊರ್ ಮೊರಾಜ್ 2.70 ಲಕ್ಷ ಡಾಲರ್ (ಅಂದಾಜು 2 ಕೋಟಿ ರೂ.) ನೀಡಿ ಮರ್ಸಿಡಿಸ್ ಬೆಂಜ್ ಎಎಂಜಿ ಜಿ63 ಕಾರನ್ನು ಖರೀದಿ ಮಾಡಿದ್ದ. ಬೆಂಜ್ ಕಾರಿನ ಮಾಲೀಕನಾಗುವ ಕನಸು ನನಸು ಆಗಿದ್ದರೂ ಕಾರಿನಲ್ಲಿ ತಾಂತ್ರಿಕ ದೋಷ ಇತ್ತು. ಹಾಗಾಗಿ ಕಾರನ್ನು ಹೆಲಿಕಾಪ್ಟರ್ ನಲ್ಲಿ 1000 ಅಡಿ ಎತ್ತರಕ್ಕೆ ತೆಗೆದುಕೊಂಡು ಹೋಗಿ ಅಲ್ಲಿಂದ ಅದನ್ನು ಕೆಳಗೆ ಬೀಳಿಸಿ ಸಂಪೂರ್ಣವಾಗಿ ದ್ವಂಸ ಮಾಡಿದ್ದಾನೆ.

    ಕಾರನ್ನು ಗ್ಯಾರೆಜ್‍ಗೆ ಬಿಟ್ಟರೆ ಮ್ಯೆಕಾನಿಕ್ ಕೂಡ ಕೆಲ ತಾಂತ್ರಿಕ ತೊಂದರೆಗಳು ಸರಿಯಾಗುವುದಿಲ್ಲ ಎಂದು ಹೇಳುತ್ತಿದ್ದ. ಬಹಳ ಕನಸು ಕಟ್ಟಿಕೊಂಡು ಕಾರನ್ನು ತೆಗೆದುಕೊಂಡ ನನಗೆ ಬಹಳ ನಿರಾಸೆಯಾಗಿತ್ತು, ಆದ್ದರಿಂದ ನಾನು ಈ ಕಾರನ್ನು 1000 ಅಡಿ ಎತ್ತರದಿಂದ ಬೀಳಿಸಿದ್ದೇನೆ ಎಂದು ಹೇಳಿದ್ದಾನೆ. ಈ ವಿಚಾರದ ಬಗ್ಗೆ 7 ನಿಮಿಷಗಳ ವಿಡಿಯೋ ಮಾಡಿ ಯೂಟ್ಯೂಬ್‍ಗೆ ಆಪ್ಲೋಡ್ ಮಾಡಿರುವ ಮೊರಾಜ್, ಈ ವಿಡಿಯೋದಲ್ಲಿ ಕಾರು ಖರೀದಿಸಿದ ನಂತರ ಕಾರು ಹೆಚ್ಚು ಸಮಯ ಗ್ಯಾರೆಜ್‍ನಲ್ಲೇ ಇತ್ತು ಎಂದು ಹೇಳಿದ್ದಾನೆ.

    ರಷ್ಯಾದ ಮಾಧ್ಯಮವೊಂದು ಸುದ್ದಿ ಮಾಡಿದ್ದು, ಕಾರಿನಲ್ಲಿ ಯಾವ ರೀತಿಯ ತೊಂದರೆಯು ಇರಲಿಲ್ಲ. ಬದಲಿಗೆ ಇಗೊರ್ ಮೊರಾಜ್ ಬಹಳ ಶೋಕಿ ವ್ಯಕ್ತಿಯಾಗಿದ್ದು, ಆತ ತನ್ನ ಗೆಳಯರ ಜೊತೆ ಚಾಲೆಂಜ್ ಕಟ್ಟಿಕೊಂಡು ಕಾರನ್ನು ಹೆಲಿಕಾಪ್ಟರ್ ಮೂಲಕ ಮೇಲೆ ತೆಗೆದುಕೊಂಡು ಹೋಗಿ ಕೆಳಗೆ ಬೀಳಿಸಿದ್ದಾನೆ. ಅದನ್ನು ಸಂಪೂರ್ಣ ವಿಡಿಯೋ ಮಾಡಿ ಯೂಟ್ಯೂಬ್ ಗೆ ಹಾಕಿದ್ದಾನೆ ಎಂದು ವರದಿ ಮಾಡಿದೆ.

    ಇಗೊರ್ ಮೊರಾಜ್‍ಗೆ ಯೂಟ್ಯೂಬ್‍ಗೆ ಆಪ್ಲೋಡ್ ಮಾಡಿರುವ ವಿಡಿಯೋವನ್ನು 5 ಲಕ್ಷ ಜನ ವೀಕ್ಷಿಸಿದ್ದು, ಈ ಘಟನೆಯ ಸಂಬಂಧ ರಷ್ಯಾದ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ಮಾಡುತ್ತಿದ್ದಾರೆ.

    ಕಾರಿನ ವಿಶೇಷತೆ ಏನು?
    ಮರ್ಸಿಡಿಸ್-ಎಎಂಜಿ ಜಿ 63 ಅನ್ನು 2018 ರಲ್ಲಿ ಬಿಡುಗಡೆ ಮಾಡಲಾಗಿದ್ದು, ಇದು 4.0-ಲೀಟರ್ ಬೈ-ಟರ್ಬೊ ವಿ 8 ಪೆಟ್ರೋಲ್ ಎಂಜಿನ್ ಹೊಂದಿದೆ. 585 ಬಿಹೆಚ್‍ಪಿ ಪವರ್ ಅನ್ನು ಉತ್ಪಾದಿಸುತ್ತದೆ. ಕಾರಿನ ಹೊಸ ಆವೃತ್ತಿಯು 9-ಸ್ಪೀಡ್ ಆಟೋಮ್ಯಾಟಿಕ್ ಎಎಂಜಿ ಸ್ಪೀಡ್‍ಶಿಫ್ಟ್ ಟ್ರಾನ್ಸ್ ಮಿಷನ್ ಹೊಂದಿದೆ. ಕಾರು ಕೇವಲ 4.5 ಸೆಕೆಂಡುಗಳಲ್ಲಿ 0 ರಿಂದ ಗಂಟೆಗೆ 100 ಕಿ.ಮೀ ವೇಗವನ್ನು ಕ್ರಮಿಸುವ ಸಾಮಥ್ರ್ಯವನ್ನು ಹೊಂದಿದೆ. ಎಎಂಜಿ ಜಿ 63 ಗಂಟೆಗೆ 220 ಕಿ.ಮೀ ವೇಗದಲ್ಲಿ ಚಲಿಸುವ ಸಾಮರ್ಥ್ಯ ಹೊಂದಿದೆ.

  • 6 ಜನ ಅಂಗರಕ್ಷಕರೊಂದಿಗೆ ಶೌಚಾಲಯಕ್ಕೆ ಹೋದ ರಷ್ಯಾ ಅಧ್ಯಕ್ಷ: ವಿಡಿಯೋ ವೈರಲ್

    6 ಜನ ಅಂಗರಕ್ಷಕರೊಂದಿಗೆ ಶೌಚಾಲಯಕ್ಕೆ ಹೋದ ರಷ್ಯಾ ಅಧ್ಯಕ್ಷ: ವಿಡಿಯೋ ವೈರಲ್

    ಪ್ಯಾರಿಸ್: ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಆರು ಜನ ಅಂಗರಕ್ಷಕರೊಂದಿಗೆ ಶೌಚಾಲಯಕ್ಕೆ ಹೋದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

    ಪ್ಯಾರಿಸ್‍ನಲ್ಲಿ ಉಕ್ರೇನ್ ಶೃಂಗಸಭೆ ನಡೆಯುತ್ತಿದ್ದು, ರಷ್ಯಾದ ಅಧ್ಯಕ್ಷ 76 ವರ್ಷದ ಪುಟಿನ್ ಕೂಡ ಭಾಗವಹಿಸಿದ್ದರು. ಪ್ಯಾರಿಸ್‍ನ ಎಲ್‍ಸಿ ಪ್ಯಾಲೇಸ್‍ನಲ್ಲಿ ಪುಟಿನ್ ಅವರು ಶೌಚಾಲಯಕ್ಕೆ ಹೋಗಿದ್ದರು. ಈ ವೇಳೆ ಅವರೊಂದಿಗೆ ಐವರು ಅಂಗರಕ್ಷಕರು ಶೌಚಾಲಯದ ಒಳಗೆ ಹೋಗಿದ್ದರೆ, ಒಬ್ಬ ಹೊರಗೆ ನಿಂತಿದ್ದರು.

    ಶೌಚಾಲಯದಿಂದ ಪುಟಿನ್ ಹೊರಗೆ ಬರುವ ಮುನ್ನ ಮೂರು ಜನ, ಪುಟಿನ್ ಅವರ ಹಿಂದೆ ಇಬ್ಬರು ಹೊರ ಬಂದ ದೃಶ್ಯವನ್ನು ಸ್ಥಳದಲ್ಲಿದ್ದ ವ್ಯಕ್ತಿಯೊಬ್ಬರು ಸೆರೆ ಹಿಡಿದಿದ್ದಾರೆ. ಬಳಿಕ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಸದ್ಯ ಈ ವಿಡಿಯೋ ವೈರಲ್ ಆಗುತ್ತಿತ್ತು. ನೆಟ್ಟಿಗರು ತಮ್ಮದೆ ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ.

    ಉಕ್ರೇನ್ ಶಾಂತಿ ಶೃಂಗಸಭೆಯಲ್ಲಿ ನಾಲ್ಕು ದೇಶಗಳ ಮುಖ್ಯಸ್ಥರು ಭಾಗವಹಿಸಿದ್ದರು. ಅವರಲ್ಲಿ ವ್ಲಾಡಿಮಿರ್ ಪುಟಿನ್, ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್, ಜರ್ಮನ್ ಚಾನ್ಸೆಲರ್ ಏಂಜೆಲಾ ಮರ್ಕೆಲ್ ಮತ್ತು ಉಕ್ರೇನ್ ಅಧ್ಯಕ್ಷ ವೊಲೊಡಿಮೈರ್ ಜೆಲೆನ್ಸ್ಕಿ ವಿವಿಧ ವಿಚಾರವಾಗಿ ಮಾತುಕತೆ ನಡೆಸಿದ್ದಾರೆ.

    ವಿವಾದದಲ್ಲಿ ಭಾಗಿಯಾಗಿರುವ ಒತ್ತೆಯಾಳುಗಳನ್ನು ಉಭಯ ದೇಶಗಳು ಬಿಡುಗಡೆ ಮಾಡುವುದಾಗಿ ರಷ್ಯಾ ಮತ್ತು ಉಕ್ರೇನ್ ಒಪ್ಪಿಕೊಂಡಿವೆ. ಇದಲ್ಲದೆ, ಮುಂದಿನ ವರ್ಷದ ಮಾರ್ಚ್ ಅಂತ್ಯದ ವೇಳೆಗೆ ಉಕ್ರೇನ್‍ನ ಮೂರು ಪ್ರದೇಶಗಳಲ್ಲಿ ಮಿಲಿಟರಿ ಪಡೆಗಳನ್ನು ಕೊನೆಗೊಳಿಸುವುದಾಗಿಯೂ ರಷ್ಯಾ ಭರವಸೆ ನೀಡಿದೆ.

  • ಏ ವತನ್ ಹಿಂದಿ ಗೀತೆ ಹಾಡಿದ ರಷ್ಯನ್ ಸೈನಿಕರು

    ಏ ವತನ್ ಹಿಂದಿ ಗೀತೆ ಹಾಡಿದ ರಷ್ಯನ್ ಸೈನಿಕರು

    ನವದೆಹಲಿ: ದೇಶಭಕ್ತಿಗೆ ಯಾವುದೇ ಗಡಿ, ಭಾಷೆಯ ಮಿತಿ ಇಲ್ಲ ಎನ್ನುವಂತೆ ರಷ್ಯನ್ ಕೆಡೆಟ್ಸ್ ‘ಆಯೆ ವತನ್’ ಹಿಂದಿ ಗೀತೆಯನ್ನು ಒಟ್ಟಿಗೆ ಹೇಳುವ ಮೂಲಕ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.

    ಸಂತಸದಿಂದ ರಷ್ಯನ್ ಕೆಡೆಟ್‍ಗಳು ಈ ಗೀತೆಯನ್ನು ಹಾಡಿದ್ದು, ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ದೇಶದ ಪ್ರಸಿದ್ಧ ದೇಶಭಕ್ತಿಗೀತೆಯನ್ನು ಹಾಡುವ ಮೂಲಕ ರಷ್ಯನ್ ಯುವ ಕೆಡೆಟ್‍ಗಳು ಮೆಚ್ಚುಗೆಗೆ ಪಾತ್ರವಾಗಿದ್ದು, ಅವರಿಗೆ ಭಾರತೀಯ ಸೇನೆಯ ಹಿರಿಯ ಅಧಿಕಾರಿ ಸಹ ಸಾಥ್ ನೀಡಿದ್ದಾರೆ.

    1965ರಲ್ಲಿ ಬಿಡುಗಡೆಯಾದ ಶಹೀದ್ ಚಿತ್ರದ ಗೀತೆ ಇದಾಗಿದೆ. ಅದೇ ಗೀತೆಯನ್ನು ರಷ್ಯನ್ ಕೆಡೆಟ್‍ಗಳು ಏ ವತನ್, ಏ ವತನ್, ಹಮ್ಕೊ ತೇರಿ ಕಸಮ್, ತೆರಿ ರಾಹೋನ್ ಮೇನ್ ಜಾನ್ ತಕ್ ಲುಟಾ ಜಾಯೆಂಗೆ’ ಎಂದು ಸುಂದರವಾಗಿ ಹಾಡಿದ್ದಾರೆ.

    ಈ ಗೀತೆಯನ್ನು ಗಾಯಕ ಮೊಹಮ್ಮದ್ ರಫಿ ಅವರು ಹಾಡಿದ್ದು, ಸಿನಿಮಾದಲ್ಲಿ ಭಗತ್ ಸಿಂಗ್‍ರನ್ನು ಗಲ್ಲಿಗೇರಿಸುವ ಮುನ್ನ ತನ್ನ ಸಹಚರ ಮಾಮ್ರೆಡ್‍ಗಳೊಂದಿಗೆ ಈ ಗೀತೆಯನ್ನು ಹಾಡುತ್ತಾರೆ. ಇದೀಗ ರಷ್ಯನ್ ಕೆಡೆಟ್‍ಗಳು ಈ ಹಾಡು ಹಾಡುವ ಮೂಲಕ ಟ್ವಿಟ್ಟರ್‍ನಲ್ಲಿ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.

    ಲೆಫ್ಟಿನೆಂಟ್ ಕರ್ನಲ್ ಎನ್.ತ್ಯಾಗರಾಜನ್ ಅವರು ಈ ವಿಡಿಯೋ ಟ್ವೀಟ್ ಮಾಡಿದ್ದು, ಹಲವರು ಇದಕ್ಕೆ ಕಮೆಂಟ್ ಮಾಡಿದ್ದಾರೆ. ರಷ್ಯನ್ ಆರ್ಮಿ ಕೆಡೆಟ್‍ಗಳು ಆಯೆ ವತನ್ ಹಾಡು ಹಾಡುವ ಮೂಲಕ ಈ ನನ್ನ ದಿನವನ್ನು ಅದ್ಭುತವಾಗಿಸಿದ್ದಾರೆ ಎಂದು ಕಮೆಂಟ್ ಮಾಡಿದ್ದಾರೆ.

    ಈ ವಿಡಿಯೋವನ್ನು ರಷ್ಯಾ ರಾಜಧಾನಿ ಮಾಸ್ಕೋದ ಇಂಡಿಯನ್ ಎಂಬಸಿಯಲ್ಲಿ ಸೇನೆಯ ಸಲಹೆಗಾರರಾಗಿರುವ ಬ್ರಿಗೇಡಿಯರ್ ರಾಜೇಶ್ ಪುಷ್ಕರ್ ಅವರು ಹಂಚಿಕೊಂಡಿದ್ದು, ಇದಕ್ಕೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಾಗಿನಿಂದ ರಷ್ಯಾ ನಮ್ಮ ಎದುರಾಳಿಯಾಗಿದೆ. ಈ ರೀತಿ ಬೆಂಬಲ ನೀಡುತ್ತಿರುವುದು ಸಂತಸ ತಂದಿದೆ ಎಂದು ಹಲವು ಕಮೆಂಟ್ ಮಾಡಿದ್ದಾರೆ.