Tag: ರಷ್ಯಾ

  • ಮುಂದಿನ 2 ವರ್ಷದಲ್ಲಿ ಟೋಲ್‌ ಪ್ಲಾಜಾಗಳಿಂದ ಮುಕ್ತವಾಗಲಿದೆ ಭಾರತ

    ಮುಂದಿನ 2 ವರ್ಷದಲ್ಲಿ ಟೋಲ್‌ ಪ್ಲಾಜಾಗಳಿಂದ ಮುಕ್ತವಾಗಲಿದೆ ಭಾರತ

    – ಜಾರಿಯಾಗಲಿದೆ ಜಿಪಿಎಸ್‌ ಆಧಾರಿತ ವ್ಯವಸ್ಥೆ
    – ರಷ್ಯಾ ಸರ್ಕಾರದ ಸಹಾಯದಿಂದ ಜಾರಿ

    ನವದೆಹಲಿ: ಮುಂದಿನ 2 ವರ್ಷದಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಟೋಲ್‌ ಪ್ಲಾಜಾಗಳು ಇರುವುದಿಲ್ಲ ಎಂದು ಕೇಂದ್ರ ಸಾರಿಗೆ ಚಿವ ನಿತಿನ್‌ ಗಡ್ಕರಿ ಹೇಳಿದ್ದಾರೆ.

    ಹೌದು. ಸದ್ಯ ಈಗ ಕೆಲ ಕಿಲೋ ಮೀಟರ್‌ ಅಂತರದಲ್ಲಿ ಟೋಲ್‌ ಪ್ಲಾಜಾಗಳು ಇವೆ. ದುಡ್ಡಿನ ಮೂಲಕ ಪಾವತಿ ತಪ್ಪಿಸಲು ಫಾಸ್ಟ್‌ ಟ್ಯಾಗ್‌ ಬಂದಿದೆ. ಆದರೂ ವಾಹನಗಳು ಸರದಿಯಲ್ಲಿ ನಿಲ್ಲುವುದು ನಿಂತಿಲ್ಲ. ಆದರೆ ಇನ್ನು ಮುಂದೆ ವಾಹನಗಳು ಟೋಲ್‌ಗಳಲ್ಲಿ ನಿಲ್ಲದೇ ಸರಗವಾಗಿ ಸಂಚರಿಸುವ ವ್ಯವಸ್ಥೆ ಜಾರಿಯ ಬಗ್ಗೆ ಗಡ್ಕರಿ ಸುಳಿವು ನೀಡಿದ್ದಾರೆ.

    ಅಸೋಚಾಮ್ ಸಂಸ್ಥಾಪನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇಶಾದ್ಯಂತ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಜಿಪಿಎಸ್‌ ಆಧಾರಿತ ಟೋಲ್‌ ವ್ಯವ್ಯಸ್ಥೆ ಜಾರಿ ಮಾಡುವ ಸಂಬಂಧ ಸಿದ್ಧತೆ ನಡೆಸುತ್ತಿದೆ. ಈ ವ್ಯವಸ್ಥೆ ಜಾರಿಯಾದರೆ ಟೋಲ್‌ ಹಣ ನೇರವಾಗಿ ಬ್ಯಾಂಕ್‌ ಖಾತೆಯಿಂದ ಜಮೆಯಾಗುತ್ತದೆ ಎಂದು ವಿವರಿಸಿದರು.

    ಜಿಪಿಎಸ್‌ ವ್ಯವಸ್ಥೆ ಜಾರಿ ಸಂಬಂಧ ನಾವು ಈಗಾಗಲೇ ಜಿಪಿಎಸ್‌ ಆಧಾರಿತ ವ್ಯವಸ್ಥೆ ಜಾರಿ ಸಂಬಂಧ ರೂಪುರೇಷೆಯನ್ನು ಅಂತಿಮಗೊಳಿಸಲಾಗಿದೆ. ರಷ್ಯಾ ಸರ್ಕಾರದ ಸಹಾಯದೊಂದಿಗೆ ವ್ಯವಸ್ಥೆಯನ್ನು ಜಾರಿಗೊಳಿಸಲಾಗುವುದು ಎಂದು ಹೇಳಿದರು.

    ಇತ್ತೀಚಿನ ಹೊಸ ಪ್ರಯಾಣಿಕ ಮತ್ತು ವಾಣಿಜ್ಯ ವಾಹನಗಳು ಜಿಪಿಎಸ್ ಒಳಗೊಂಡಿರುತ್ತವೆ. ಹಳೆಯ ವಾಹನಗಳಿಗೂ ಜಿಪಿಎಸ್ ಅಳವಡಿಸುವ ಬಗ್ಗೆ ಸರ್ಕಾರ ಕ್ರಮಗಳನ್ನು ಕೈಗೊಳ್ಳುವ ಸಾಧ್ಯತೆ ಇದೆ. ಮುಂದಿನ ಎರಡು ವರ್ಷದಲ್ಲಿ ಭಾರತದಲ್ಲಿ ಟೋಲ್ ಬೂತ್ ರಹಿತ ಹೆದ್ದಾರಿಗಳು ಇರಲಿದೆ. ವಾಹನಗಳನ್ನು ಜಿಪಿಎಸ್‌ ವ್ಯವಸ್ಥೆ ಮೂಲಕ ಟ್ರ್ಯಾಕ್ ಮಾಡಲಾಗುವುದು. ವಾಹನ ಮಾಲೀಕರ ಬ್ಯಾಂಕ್ ಖಾತೆಯಿಂದ ಬಾಕಿ ಟೋಲ್ ಹಣ ಪಾವತಿಯಾಗಲಿದೆ ಎಂದರು.

    ಈ ವ್ಯವಸ್ಥೆ ಜಾರಿಯಾದರೆ ಐದು ವರ್ಷದಲ್ಲಿ ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಆದಾಯ 1.34 ಲಕ್ಷ ಕೋಟಿಗೆ ಏರಿಕೆ ಆಗಲಿದೆ. ಈ ಹಣಕಾಸು ವರ್ಷದಲ್ಲಿ 34 ಸಾವಿರ ಕೋಟಿ ರೂ. ಆದಾಯ ಬರುವ ನಿರೀಕ್ಷೆಯಿದೆ ಎಂದು ಹೇಳಿದರು.

    ಫಾಸ್ಟ್‌ ಟ್ಯಾಗ್‌ ಕಡ್ಡಾಯ ಮಾಡಿರುವ ಕಾರಣ ಟೋಲ್‌ ಸಂಗ್ರಹ ಹೆಚ್ಚಾಗುತ್ತಿದೆ. ಕಳೆದ ವರ್ಷ ಒಂದು ದಿನದಲ್ಲಿ 70 ಕೋಟಿ ರೂ. ಸಂಗ್ರಹವಾಗಿದ್ದರೆ ಈ ವರ್ಷ ಇದು 92 ಕೋಟಿ ರೂಗಳಿಗೆ ಏರಿಕೆಯಾಗಿದೆ.

    2020ರ ಜನವರಿ 1ರಿಂದ ಎಲ್ಲ 4 ಚಕ್ರದ ವಾಹನಗಳಿಗೆ ಫಾಸ್ಟ್‌ ಟ್ಯಾಗ್‌ ಅಳವಡಿಕೆಯನ್ನು ಕಡ್ಡಾಯ ಮಾಡಲಾಗಿದೆ. ಇದನ್ನೂ ಓದಿ: ಜನವರಿ 1ರಿಂದ 4 ಚಕ್ರದ ವಾಹನಗಳಿಗೆ ಫಾಸ್ಟ್‌ ಟ್ಯಾಗ್‌ ಕಡ್ಡಾಯ. ಫಾಸ್ಟ್‌ ಟ್ಯಾಗ್‌ನಲ್ಲಿ ಹಣ ಹೇಗೆ ಪಾವತಿಯಾಗುತ್ತದೆ?

  • ಸ್ನಾನದ ವೇಳೆ ಬಾತ್‍ಟಬ್‍ನಲ್ಲಿ ಬಿದ್ದ ಐ ಫೋನ್ – 24ರ ಯುವತಿಯ ಸಾವು

    ಸ್ನಾನದ ವೇಳೆ ಬಾತ್‍ಟಬ್‍ನಲ್ಲಿ ಬಿದ್ದ ಐ ಫೋನ್ – 24ರ ಯುವತಿಯ ಸಾವು

    – ಸಾವಿನ ಬಳಿಕ ಪೊಲೀಸರಿಂದ ಸಾರ್ವಜನಿಕರಿಗೆ ಎಚ್ಚರಿಕೆ ಸಂದೇಶ

    ಮಾಸ್ಕೋ: ಬಾತ್‍ಟಬ್ ನಲ್ಲಿ ಐಫೋನ್ ಬಿದ್ದಿದ್ದರಿಂದ ವಿದ್ಯುತ್ ಪ್ರವಹಿಸಿ 24 ವರ್ಷದ ಯುವತಿ ಸಾವನ್ನಪ್ಪಿರುವ ಘಟನೆ ರಷ್ಯಾದ ಅರ್ಖಾಂಗೆಲ್ಕಸ್ ನಗರದಲ್ಲಿ ನಡೆದಿದೆ.

    ಓಲೆಸ್ಯಾ ಸೆಮೆನೋವಾ ಮೃತ ಯುವತಿ. ಸ್ನಾನಕ್ಕೂ ಮುನ್ನ ತನ್ನ ಐ ಫೋನ್ -8 ಚಾರ್ಜಿಂಗ್ ಹಾಕಿದ್ದರು. ಚಾರ್ಜಿಂಗ್ ಹಾಕಿದ್ದ ಮೊಬೈಲ್ ವೈಯರ್ ನಿಂದ ಕಳಚಿ ಬಾತ್‍ಟಬ್ ನೊಳಗೆ ಬಿದ್ದಿದೆ. ಮೊಬೈಲ್ ನಿಂದ ಹರಿದ ವಿದ್ಯುತ್ ನಿಂದ ಓಲೆಸ್ಯಾ ಮೃತಪಟ್ಟಿದ್ದಾಳೆ. ಅಲೆಸ್ಯಾಳ ಮೃತದೇಹವನ್ನ ಮೊದಲು ಆಕೆಯ ಗೆಳತಿ ಡಾರಿಯಾ ನೋಡಿ ಎಮೆರ್ಜೆನ್ಸಿ ನಂಬರ್ ಗೆ ಕರೆ ಮಾಡಿ ಸಹಾಯ ಕೇಳಿದ್ದಾಳೆ.

    ಸ್ಥಳಕ್ಕಾಗಮಿಸಿದ ವೈದ್ಯರು ಅಲೆಸ್ಯಾ ಮೃತಪಟ್ಟಿರೋದನ್ನ ಖಚಿತ ಪಡಿಸಿದ್ದಾರೆ. ಅಲೆಸ್ಯಾ ಅರ್ಖಾಂಗೆಲ್ಕಸ್ ನಗರದ ಬಟ್ಟೆ ಮಳಿಗೆಯಲ್ಲಿ ಕೆಲಸ ಮಾಡಿಕೊಂಡು ಗೆಳತಿ ಜೊತೆ ವಾಸವಾಗಿದ್ದಳು. ಅಲೆಸ್ಯಾ ಮೃತದೇಹ ಹಳದಿ ಬಣ್ಣಕಕ್ಕೆ ತಿರುಗಿತ್ತು. ಆಕೆಯ ನಾಡಿ ಬಡಿತ ಸಹ ನಿಂತಿತ್ತು ಎಂದು ಡಾರಿಯಾ ಹೇಳಿದ್ದಾಳೆ.

    ಪೊಲೀಸರಿಂದ ಎಚ್ಚರಿಕೆ ಸಂದೇಶ: ಅಲೆಸ್ಯಾ ಸಾವಿನ ಬಳಿಕ ಪೊಲೀಸರು ಸಾರ್ವಜನಿಕ ಪ್ರಕಟನೆ ಹೊರಡಿಸಿ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ. ಮೊಬೈಲ್ ನೀರಿನಲ್ಲಿ ಬಂದ್ರೆ ಅದು ಹಾಳಾಗುತ್ತೆ ಎಂದು ನಿಮಗೆ ತಿಳಿದಿರುತ್ತೆ. ಕೆಲ ಮೊಬೈಲ್ ಗಳು ನೆಟ್‍ವರ್ಕ್ ಜೊತೆ ಸಂಪರ್ಕದಲ್ಲಿದ್ದ ವೇಳೆ ನೀರಿನಲ್ಲಿ ಬಿದ್ದರೆ ವಿದ್ಯುತ್ ಪ್ರವಹಿಸುತ್ತದೆ. ಹಾಗಾಗಿ ಸಣ್ಣ ತಪ್ಪುಗಳಿಂದ ಜೀವವೇ ಹೋಗುತ್ತದೆ ಎಂದು ಎಚ್ಚರಿಕೆ ಸಂದೇಶ ರವಾನಿಸಿದೆ.

    ಈ ಘಟನೆಗೂ ಮುನ್ನ 15 ವರ್ಷದ ಎನಾ ಸಾವು ಇದೇ ರೀತಿ ಸಂಭವಿಸಿತ್ತು. ಕಳೆದ ವರ್ಷ ಪೋಕರ್ ಸ್ಟಾರ್ ಲಿಲಿಯಾ ನೊವಿಕೊವಾ ಸಹ ವಿದ್ಯುತ್ ಶಾಕ್ ತಗುಲಿ ಸಾವನ್ನಪ್ಪಿದ್ದರು.

  • ಕೆಂಪು ಬಣ್ಣಕ್ಕೆ ತಿರುಗಿದ ನದಿ ನೀರು – ಸಾರ್ವಜನಿಕರಲ್ಲಿ ಆತಂಕ

    ಕೆಂಪು ಬಣ್ಣಕ್ಕೆ ತಿರುಗಿದ ನದಿ ನೀರು – ಸಾರ್ವಜನಿಕರಲ್ಲಿ ಆತಂಕ

    – ದಿನದಿಂದ ದಿನಕ್ಕೆ ಬದಲಾಗ್ತಿದೆ ಬಣ್ಣ
    – ಬಣ್ಣ ಬದಲಾಗಲು ಕಾರಣವೇನು?

    ಮಾಸ್ಕೋ: ನದಿ ನೀರಿನ ಬಣ್ಣ ಕೆಂಪು ಬಣ್ಣಕ್ಕೆ ತಿರುಗಿದ್ದು, ಸ್ಥಳೀಯರನ್ನು ಬೆಚ್ಚಿಬೀಳಿಸಿರುವ ಘಟನೆ ರಷ್ಯಾದಲ್ಲಿ ನಡೆದಿದೆ.

    ನದಿಯ ನೀರಿನ ಬಣ್ಣ ದಿನದಿಂದ ದಿನಕ್ಕೆ ಬದಲಾಗುತ್ತಿದೆ. ಬೀಟ್ರೂಟ್ ನಂತೆ ಕೆಂಪು ಬಣ್ಣಕ್ಕೆ ತಿರುಗಿದೆ. ಇದ್ದಕ್ಕಿದ್ದಂತೆ ನೀರಿನ ಬಣ್ಣ ಬದಲಾಯಿಸಿಕೊಂಡಿರುವ ನದಿಗಳ ಪೈಕಿ ಇಸ್ಕಿಟಿಮ್ಕಾ ನದಿಯೂ ಒಂದಾಗಿದೆ. ನದಿಗೆ ಸೇರುವ ಮಾಲಿನ್ಯಕಾರಕದಿಂದ ಈ ಬದಲಾವಣೆಯಾಗಿದೆ ಎಂದು ಹೇಳಲಾಗುತ್ತಿದೆ.

    ಇಂಡಸ್ಟ್ರಿಯಲ್ ನಗರವಾದ ಕೆಮೆರೋವೋದಲ್ಲಿ ನದಿ ನೀರಿನ ಬಣ್ಣ ಕೆಂಪು ಬಣ್ಣಕ್ಕೆ ತಿರುಗುತ್ತಿದ್ದಂತೆ ಸ್ಥಳೀಯರು ಗಾಬರಿಗೊಂಡಿದ್ದಾರೆ. ನೀರಿಗೆ ಕೆಲವು ಕೆಮಿಕಲ್ಸ್‍ಗಳು ಬಂದು ಸೇರುವುದರಿಂದ ನೀರಿನ ಬಣ್ಣ ಬದಲಾಗುತ್ತಿದೆ ಎನ್ನಲಾಗುತ್ತಿದೆ. ಆ ಪ್ರದೇಶದಲ್ಲಿ ಯಾವ ಜೀವಜಂತೂಗಳೂ ಕೂಡ ನೀರಿಗೆ ಇಳಿಯದಂತೆ ಅಲ್ಲಿನ ಜನರು ಎಚ್ಚರಿಕೆ ವಹಿಸುತ್ತಿದ್ದಾರೆ.

    ಚರಂಡಿ ಬ್ಲಾಕ್ ಆಗಿದ್ದರಿಂದ ನೀರಿನ ಬಣ್ಣ ಬದಲಾಗಿದೆ. ನಾವು ಈ ಸಮಸ್ಯೆಯನ್ನು ಬಗೆಹರಿಸಲು ಕೆಲಸ ಮಾಡುತ್ತಿದ್ದೇವೆ. ಆದರೆ ಯಾವ ಕೆಮಿಕಲ್ ನಿಂದ ನೀರಿನ ಬಣ್ಣ ಬದಲಾಗುತ್ತಿದೆ ಎಂಬುದು ತಿಳಿಯುತ್ತಿಲ್ಲ ಎಂದು ಕೆಮೆರೋವೋದ ಉಪ ಗವರ್ನರ್ ಆಂಡ್ರೇ ಪನೋವ್ ತಿಳಿಸಿದ್ದಾರೆ.

    ರಷ್ಯಾದಲ್ಲಿ ಈ ಮೊದಲು ನರೋ – ಫೋಮಿನ್ಸ್ಕ್ ನದಿಗೆ ಕೆಮಿಕಲ್ ಸೇರಿ ಕೆಂಪು ಬಣ್ಣಕ್ಕೆ ತಿರುಗಿತ್ತು. ಈ ವರ್ಷದ ಆರಂಭದಲ್ಲಿ ಗ್ವೋಝ್ಡ್‍ನ್ಯಾ ನದಿಗೂ ಇದೇ ತರ ರಾಸಾಯನಿಕ ಸೇರಿ ನೀರು ಬೇರೆ ಬಣ್ಣಕ್ಕೆ ಬಂದಿತ್ತು. ಇದೀಗ ಇಸ್ಕಿಟಿಮ್ಕಾ ನದಿಯ ನೀರಿನ ಬಣ್ಣ ಬದಲಾಗುತ್ತಿರುವುದು ಜನರಲ್ಲಿ ಆತಂಕ ಸೃಷ್ಟಿಮಾಡಿದೆ.

  • ಬೆಂಗಳೂರಿನ ಪೀಣ್ಯದ ಕಂಪನಿಗೆ ಸಿಕ್ತು 590 ಕೋಟಿ ರೂ. ರಕ್ಷಣಾ ಯೋಜನೆ

    ಬೆಂಗಳೂರಿನ ಪೀಣ್ಯದ ಕಂಪನಿಗೆ ಸಿಕ್ತು 590 ಕೋಟಿ ರೂ. ರಕ್ಷಣಾ ಯೋಜನೆ

    ಬೆಂಗಳೂರು: 590 ಕೋಟಿ ರೂ. ಮೊತ್ತದ ರಕ್ಷಣಾ ಯೋಜನೆಯನ್ನು ಬೆಂಗಳೂರು ಮೂಲದ ಪೀಣ್ಯದ ಕಂಪನಿ ಪಡೆದುಕೊಂಡಿದೆ.

    ಅಲ್ಫಾ ಡಿಸೈನ್‌ ಟೆಕ್ನಾಲಜೀಸ್‌ ಕಂಪನಿ ಕೆಲ ದಿನಗಳ ಹಿಂದೆ ಪಿಚೋರಾ ಕ್ಷಿಪಣಿ ಮತ್ತು ರೇಡಾರ್‌ ವ್ಯವಸ್ಥೆಯ ಉನ್ನತೀಕರಣ, ಡಿಜಟಲೀಕರಣ ಸಂಬಂಧ ರಕ್ಷಣಾ ಸಚಿವಾಲಯದ ಜೊತೆ ಸಹಿ ಹಾಕಿದೆ.

    30 ವರ್ಷದ ಹಿಂದಿನ ಪಿಚೋರಾ ಕ್ಷಿಪಣಿ ಮತ್ತು ರೇಡಾರ್‌ ವ್ಯವಸ್ಥೆ ಭಾರತೀಯ ವಾಯುಸೇನೆಯಲ್ಲಿದ್ದು ಈಗ ಇದು ಹಳೆಯದಾಗಿದೆ. ಭಾರತೀಯ ವಾಯುಸೇನೆ ಈ ವ್ಯವಸ್ಥೆಯನ್ನು ಉನ್ನತೀಕರಿಸಲು ಟೆಂಡರ್‌ ಕರೆದಿತ್ತು. ಇದನ್ನೂ ಓದಿ: ರಫೇಲ್‌ ಡೀಲ್‌ – ಆಫ್‌ಸೆಟ್‌ ನಿಯಮವನ್ನೇ ಕೈಬಿಟ್ಟ ಸರ್ಕಾರ

    ಅಲ್ಫಾ ಡಿಸೈನ್‌ ಟೆಕ್ನಾಲಜೀಸ್‌ ಕಂಪನಿಯ ಮುಖ್ಯಸ್ಥ ಮತ್ತು ನಿರ್ದೇಶಕ ನಿವೃತ್ತ ಕರ್ನಲ್‌ ಎಚ್‌ಎಸ್‌ ಶಂಕರ್‌ ಪ್ರತಿಕ್ರಿಯಿಸಿ, ಮುಂದಿನ 4 ವರ್ಷದಲ್ಲಿ ರಷ್ಯಾದ ಸಹಕಾರದೊಂದಿಗೆ ಈ ಯೋಜನೆಯನ್ನು ಪೂರ್ಣಗೊಳಿಸಲಾಗುವುದು ಎಂದು ತಿಳಿಸಿದ್ದಾರೆ.

    ಇದು ರಾಷ್ಟ್ರೀಯ ಮಹತ್ವ ಪಡೆದ ಯೋಜನೆಯಾಗಿದೆ. ಶೀಘ್ರವೇ ಮುಂದೆ ಅಲ್ಫಾ ಡಿಸೈನ್‌ ಮತ್ತು ಇತರೇ ಭಾರತದ ಕಂಪನಿಗಳು ಈಗಲೂ ಬಳಕೆಯಲ್ಲಿರುವ ಹಲವು ವರ್ಷಗಳ ಹಿಂದಿನ ರೇಡಾರ್‌ ಮತ್ತು ಕ್ಷಿಪಣಿ ವ್ಯವಸ್ಥೆಯನ್ನು ಉನ್ನತೀಕರಿಸಲಿವೆ. ಹೊಸ ವ್ಯವಸ್ಥೆಯನ್ನು ಖರೀದಿಸುವ ಬದಲು ಈಗ ಇರುವ ವ್ಯವಸ್ಥೆಯನ್ನು ಮೇಲ್ದರ್ಜೆಗೆ ಏರಿಸಿದರೆ ಖರ್ಚು ಕಡಿಮೆ ಎಂದು ಕರ್ನಲ್‌ ಎಚ್‌ಎಸ್‌ ಶಂಕರ್‌ ತಿಳಿಸಿದರು.

    ಉನ್ನತೀಕರಣ ಮಾಡಬೇಕಾದರೆ ಹಲವು ಸಾಧನಗಳು ಸ್ವದೇಶದಲ್ಲೇ ತಯಾರಾಗಬೇಕು. ವಿಶೇಷವಾಗಿ ರೇಡಾರ್‌ ಟ್ರಾನ್ಸ್‌ಮಿಟರ್‌, ಥರ್ಮಲ್‌ ಇಮೇಜ್‌ ಬೇಸ್ಡ್‌ ಎಲೆಕ್ಟ್ರೋ ಆಪ್ಟಿಕಲ್‌ ಸಿಸ್ಟಂ, ಸಂವಹನ ಸಾಧನಗಳು, ಕಂಟ್ರೋಲ್‌ ಕ್ಯಾಬಿನ್‌, ಕೇಬಲ್‌ ಇತ್ಯಾದಿಗಳನ್ನು ತಯಾರಿಸಬೇಕಾಗುತ್ತದೆ.

    ಈ ಯೋಜನೆಯ ಅನ್ವಯ ಅಲ್ಫಾ ಡಿಸೈನ್‌ ಕಂಪನಿ 16 ಪಿಚೋರಾ ಕ್ಷಿಪಣಿ ವ್ಯವಸ್ಥೆಯನ್ನು ಉನ್ನತೀಕರಿಸಲಿದೆ. ಈ ಯೋಜನೆ ಯಶಸ್ವಿಯಾದ ಬಳಿಕ ಮತ್ತೆ 8 ವ್ಯವಸ್ಥೆಯನ್ನು ಮೇಲ್ದರ್ಜೆಗೆ ಏರಿಸುವ ಉತ್ಸಾಹವನ್ನು ಕಂಪನಿ ತೋರಿಸಿದೆ.

    ಪಿಚೋರಾ ಕ್ಷಿಪಣಿಯನ್ನು 1961ರಲ್ಲಿ ರಷ್ಯಾ ಅಭಿವೃದ್ಧಿ ಪಡಿಸಿದ್ದು, ಈಗಲೂ ಹಲವು ದೇಶಗಳ ವಾಯುಸೇನೆಗಳು ಈ ಕ್ಷಿಪಣಿಯನ್ನು ಬಳಕೆ ಮಾಡುತ್ತಿವೆ. ಭಾರತ ಈಗ ಮೇಕ್‌ ಇನ್‌ ಇಂಡಿಯಾ ಯೋಜನೆಯ ಅಡಿಯಲ್ಲಿ ಸ್ವದೇಶಿ ಕಂಪನಿಗೆ ಕ್ಷಿಪಣಿಯನ್ನು ಮೇಲ್ದರ್ಜೆಗೆ ಏರಿಸಲು ಮುಂದಾಗುತ್ತಿದೆ.

  • ಚೀನಾದ ಯುದ್ಧ ವಿಮಾನವನ್ನು ಹೊಡೆದುರುಳಿಸಿದ ತೈವಾನ್‌?

    ಚೀನಾದ ಯುದ್ಧ ವಿಮಾನವನ್ನು ಹೊಡೆದುರುಳಿಸಿದ ತೈವಾನ್‌?

    ತೈಪೆ: ತಂಟೆಕೋರ ಚೀನಾಗೆ ಭಾರೀ ಹಿನ್ನಡೆಯಾಗಿದ್ದು‌, ತೈವಾನ್ ಭೂ ಪ್ರದೇಶದಲ್ಲಿ ಚೀನಾದ ಯುದ್ಧ ವಿಮಾನವೊಂದು ಪತನಗೊಂಡಿದೆ.

    ರಷ್ಯಾ ನಿರ್ಮಿತ ಸುಖೋಯ್‌ 35 ವಿಮಾನ ತೈವಾನ್‌ನ ಕರಾವಳಿ ಪ್ರದೇಶದ ಗುವಾಂಗ್ಸಿ ಎಂಬಲ್ಲಿ ಬಿದ್ದಿದೆ. ಈ ವಿಮಾನ ಯಾವ ಕಾರಣಕ್ಕೆ ಬಿದ್ದಿದೆ ಎಂಬುದಕ್ಕೆ ಅಧಿಕೃತವಾಗಿ ಯಾವುದೇ ಮಾಹಿತಿ ಸಿಕ್ಕಿಲ್ಲ.

    https://twitter.com/NewsLineIFE/status/1301775622658637826

    ಸಾಮಾಜಿಕ ಜಾಲತಾಣದಲ್ಲಿ ವಾಯುಗಡಿ ಉಲ್ಲಂಘಿಸಿ ತನ್ನ ಭೂ ಪ್ರದೇಶದಲ್ಲಿ ಹಾರಾಟ ಮಾಡಿದ್ದಕ್ಕೆ ತೈವಾನ್‌ನ ವಾಯು ರಕ್ಷಣಾ ವ್ಯವಸ್ಥೆಯು ಹೊಡೆದುರುಳಿಸಿದೆ ಎಂದು ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಯುದ್ಧ ವಿಮಾನ ಹೊತ್ತಿ ಉರಿಯುತ್ತಿರುವ ವಿಡಿಯೋ ಈಗ ವೈರಲ್‌ ಆಗಿದೆ.

    ತೈವಾನ್‌ ವಿಮಾನವನ್ನು ಹೊಡೆದು ಹಾಕಿದ್ಯಾ ಅಥವಾ ತಾಂತ್ರಿಕ ಕಾರಣದಿಂದ ವಿಮಾನ ಪತನಗೊಂಡಿದ್ಯಾ ಎಂಬುವುದು ಇನ್ನು ಸ್ಪಷ್ಟವಾಗಿಲ್ಲ. ಎರಡು ಸರ್ಕಾರಗಳು ಈ ವಿಚಾರಕ್ಕೆ ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ. ಸಾಧಾರಣವಾಗಿ ಸುಖೋಯ್‌ ಅತ್ಯಾಧುನಿಕ ವಿಮಾನವಾಗಿದ್ದು ಮಿಗ್‌ ರೀತಿ ಪತನವಾಗುವ ಸಾಧ್ಯತೆ ಕಡಿಮೆ.

    https://twitter.com/AseemRuhel/status/1301783068869644288

    ಈ ಕುರಿತು ಟ್ವಿಟರ್‌ನಲ್ಲಿಯೂ ಭಾರಿ ಚರ್ಚೆಯಾಗುತ್ತಿದ್ದು, #Taiwan ಹಾಗೂ #Su-35 ಹ್ಯಾಷ್‌ಟ್ಯಾಗ್‌ಗಳು ಟ್ರೆಂಡ್ ಆಗಿವೆ.

  • ಪಾಕ್‍ಗೆ ಶಸ್ತ್ರಾಸ್ತ್ರ ನೀಡಲ್ಲ ಎಂದ ರಷ್ಯಾ – ಭಾರತಕ್ಕೆ ದೊಡ್ಡ ಗೆಲುವು

    ಪಾಕ್‍ಗೆ ಶಸ್ತ್ರಾಸ್ತ್ರ ನೀಡಲ್ಲ ಎಂದ ರಷ್ಯಾ – ಭಾರತಕ್ಕೆ ದೊಡ್ಡ ಗೆಲುವು

    – ಭಾರತದ ಮನವಿಗೆ ಸ್ಪಂದಿಸಿ ರಷ್ಯಾ ನಿರ್ಧಾರ

    ಮಾಸ್ಕೋ: ಭಯೋತ್ಪಾದನೆಯನ್ನು ಹತ್ತಿಕ್ಕುವ ನಿಟ್ಟಿನಲ್ಲಿ ಭಾರತಕ್ಕೆ ಮತ್ತೊಂದು ಬಹುದೊಡ್ಡ ಗೆಲುವು ಲಭಿಸಿದ್ದು, ಪಾಕಿಸ್ತಾನಕ್ಕೆ ಶಸ್ತ್ರಾಸ್ತ್ರ ಪೂರೈಕೆ ಮಾಡಬಾರದು ಎಂಬ ಭಾರತ ಮನವಿಯನ್ನು ರಷ್ಯಾ ಪುರಸ್ಕರಿಸಿದೆ. ಪಾಕಿಸ್ತಾನಕ್ಕೆ ಯಾವುದೇ ರೀತಿಯ ಶಸ್ತ್ರಾಸ್ತ್ರಗಳನ್ನು ಪೂರೈಸುವುದಿಲ್ಲ ಎಂದು ಹೇಳಿದೆ.

    ಭಾರತದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಗುರುವಾರ ಸಂಜೆ ಮಾಸ್ಕೋದಲ್ಲಿ ಜನರಲ್ ಸರ್ಜರಿ ಶೋಯಿಗು ಅವರನ್ನು ಭೇಟಿ ಮಾಡಿ ಈ ಕುರಿತು ಚರ್ಚಿಸಿದ್ದಾರೆ. ಈ ವೇಳೆ ಪಾಕಿಸ್ತಾನಕ್ಕೆ ಯಾವುದೇ ರೀತಿಯ ಶಸ್ತ್ರಾಸ್ತ್ರ ಪೂರೈಸುವುದಿಲ್ಲ. ಹಿಂದಿನ ನೀತಿಯನ್ನೇ ಮುಂದುವರಿಸುತ್ತೇವೆ ಎಂದು ರಷ್ಯಾ ಸ್ಪಷ್ಟಪಡಿಸಿದೆ.

    ಮಾತುಕತೆ ವೇಳೆ ರಷ್ಯಾ ತನ್ನ ನೀತಿಯನ್ನು ಪುನರುಚ್ಛರಿಸಿದ್ದು, ಪಾಕಿಸ್ತಾನಕ್ಕೆ ಶಸ್ತ್ರಾಸ್ತ್ರ ಪೂರೈಸುವುದಿಲ್ಲ. ಭಾರತದ ಮನವಿಯನ್ನು ಪುರಸ್ಕರಿಸುತ್ತೇವೆ ಎಂದು ಮೂಲಗಳನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ವರದಿ ಮಾಡಿದೆ.

    ಭಾರತ ರಕ್ಷಣಾ ಸಚಿವಾಲಯ ಸಹ ಈ ಕುರಿತು ಸ್ಪಷ್ಟಪಡಿಸಿತ್ತು. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹಾಗೂ ಜನರಲ್ ಶೋಯಿಗು ನಡುವೆ ಸುಮಾರು ಒಂದು ಗಂಟೆಗೂ ಅಧಿಕ ಕಾಲ ಸಭೆ ನಡೆದಿದ್ದು, ಮಾಸ್ಕೋದ ರಷ್ಯನ್ ರಕ್ಷಣಾ ಸಚಿವಾಲಯದಲ್ಲಿ ನಡೆದಿತ್ತು ಎಂದು ಈ ಹಿಂದೆ ತಿಳಿಸಿತ್ತು.

    ಸಭೆಯಲ್ಲಿ ಉಭಯ ದೇಶಗಳ ನಡುವೆ ಸಹಕಾರ ಹಾಗೂ ಸಂಬಂಧದ ಕುರಿತು ನಡೆದಿದ್ದು, ಎರಡು ದೇಶಗಳ ರಕ್ಷಣಾ ವಿಭಾಗಕ್ಕೆ ಶಕ್ತಿ ತುಂಬುವುದು ಹಾಗೂ ಎರಡೂ ದೇಶಗಳ ನಡುವೆ ಸಹಕಾರ, ಸಂಬಂಧ ವೃದ್ಧಿ ಕುರಿತು ಮಾತುಕತೆ ನಡೆಸಿದ್ದಾರೆ.

    ಸಭೆ ಬಳಿಕ ಟ್ವೀಟ್ ಮಾಡಿದ್ದ ರಾಜನಾಥ್ ಸಿಂಗ್, ರಷ್ಯಾದ ರಕ್ಷಣಾ ಸಚಿವ ಜನರಲ್ ಸೆರ್ಗೆ ಶೋಯಿಗು ಅವರೊಂದಿಗೆ ಅದ್ಭುತ ಸಭೆ ನಡೆದಿದ್ದು, ವಿವಿಧ ವಿಚಾರಗಳ ಕುರಿತು ಚರ್ಚೆ ನಡೆಸಿದೆವು. ರಕ್ಷಣಾ ವಿಭಾಗದ ಕುರಿತು ಆಳವಾಗಿ ಚರ್ಚೆ ನಡೆಸಿದ್ದೇವೆ. ಎರಡೂ ದೇಶಗಳ ನಡುವೆ ಸ್ನೇಹ, ಸಂಬಂಧ ವೃದ್ಧಿಸುವ ಕುರಿತು ಚರ್ಚೆ ನಡೆಸಿದ್ದೇವೆ ಎಂದು ತಿಳಿಸಿದ್ದಾರೆ.

  • ಮಹಿಳೆಯ ಹೊಟ್ಟೆಯಲ್ಲಿ 4 ಅಡಿ ಹಾವು ಪತ್ತೆ- ವಿಡಿಯೋ

    ಮಹಿಳೆಯ ಹೊಟ್ಟೆಯಲ್ಲಿ 4 ಅಡಿ ಹಾವು ಪತ್ತೆ- ವಿಡಿಯೋ

    – ಬಾಯಿಯಿಂದ ಜೀವಂತವಾಗಿ ಬಂದ ನಾಗಪ್ಪ
    – ಹೇಗೆ ಹೊಟ್ಟೆ ಸೇರಿತ್ತು ಗೊತ್ತಾ?

    ಮಾಸ್ಕೋ: ಮಹಿಳೆಯ ಹೊಟ್ಟೆಯಿಂದ ಸುಮಾರು 4 ಅಡಿ ಉದ್ದದ ಹಾವನ್ನು ತೆಗೆಯುವುದನ್ನು ನೋಡಿದರೇನೆ ಒಂದು ಕ್ಷಣ ಹೃದಯ ಬಡಿತವೇ ಹೆಚ್ಚಾಗುತ್ತೆ. ಇಂತಹದ್ದೊಂದು ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    ಮಹಿಳೆಯ ಹೊಟ್ಟೆಯೊಳಗೆ ಸುಮಾರು 4 ಅಡಿ ಉದ್ದದ ಹಾವು ಪತ್ತೆಯಾಗಿರುವ ಘಟನೆ ರಷ್ಯಾದ ಡಾಗೆಸ್ಥಾನ್‍ನ ಲೆವಾಶಿಯಲ್ಲಿ ನಡೆದಿದೆ. ವೈದ್ಯರು ಮಹಿಳೆಯ ಬಾಯಿಯಿಂದ ಬರೋಬ್ಬರಿ ನಾಲ್ಕು ಅಡಿ ಉದ್ದದ ಹಾವನ್ನು ಹೊರ ತೆಗೆದಿದ್ದಾರೆ. ಹೊಟ್ಟೆ ನೋವಿನಿಂದ ಮಹಿಳೆ ಒದ್ದಾಡುತ್ತಿದ್ದರು. ನಂತರ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆರಂಭದಲ್ಲಿ ವೈದ್ಯರಿಗೂ ಈ ಕುರಿತು ಏನೂ ತಿಳಿದಿಲ್ಲ. ನಂತರ ಪರೀಕ್ಷೆ ನಡೆಸಿದಾಗ ಹೊಟ್ಟೆಯಲ್ಲಿ ಏನೋ ಇದೆ ಎಂಬುದು ಅರಿವಾಗಿದೆ. ನಂತರ ಮಹಿಳೆಗೆ ಅರವಳಿಕೆ ನೀಡಿ ಪ್ರಜ್ಞಾಹೀನಗೊಳಿಸಿದ್ದಾರೆ.

    ಬಾಯಿಯಿಂದ ಟ್ಯೂಬ್ ಹಾಕಿ ಏನಿದೆ, ಇದರಿಂದ ತೆಗೆಯಬಹುದೇ ಎಂದು ಟ್ಯೂಬ್ ಹಾಕಿ ಪರಿಶೀಲಿಸಿದ್ದಾರೆ. ಈ ವೇಳೆ ಹಾವು ಬುಸ್ ಎಂದು ಹೊರ ಬಂದಿದೆ. ಇದನ್ನು ನೋಡಿದ ವೈದ್ಯೆ ಒಂದು ಕ್ಷಣ ಗಾಬರಿಯಾಗಿದ್ದಾರೆ. ಹಾವನ್ನು ಹೊಟ್ಟೆಯಿಂದ ಹೊರ ತೆಗೆಯುವ ಸಂಪೂರ್ಣ ಚಿತ್ರಣವನ್ನು ವಿಡಿಯೋ ಮಾಡಲಾಗಿದೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗಿದೆ.

    ಹಾವು ಹೊಟ್ಟೆ ಹೊಕ್ಕಿದ್ದು ಹೇಗೆ?
    ತೋಟದ ಮನೆಯಲ್ಲಿ ಮಹಿಳೆ ಮಲಗಿದಾಗ ಬಾಯಿ ತೆರೆದಿದ್ದು, ಈ ವೇಳೆ ಸಮೀಪಕ್ಕೆ ಬಂದ ಹಾವು ಬಿಲದಂತೆ ಕಂಡ ಬಾಯಿಯಲ್ಲೇ ಹೊಕ್ಕಿದೆ. ಮಹಿಳೆ ಎದ್ದ ತಕ್ಷಣ ಭಾರೀ ಪ್ರಮಾಣ ಹೊಟ್ಟೆ ನೋವು ಕಾಣಿಸಿಕೊಂಡಿದ್ದು, ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ವೇಳೆ ವೈದ್ಯರು ಹಾವನ್ನು ಹೊರ ತೆಗೆದಿದ್ದಾರೆ. ಆದರೆ ಹಾವಿನ ಹಾಗೂ ಮಹಿಳೆಯ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.

  • ಗೆಳೆಯನ ಕಾಪಾಡಲು ಹೋಗಿ ಆತನೂ ಸೇರಿ ನಾಲ್ವರು ಮೆಡಿಕಲ್ ವಿದ್ಯಾರ್ಥಿಗಳ ದುರ್ಮರಣ

    ಗೆಳೆಯನ ಕಾಪಾಡಲು ಹೋಗಿ ಆತನೂ ಸೇರಿ ನಾಲ್ವರು ಮೆಡಿಕಲ್ ವಿದ್ಯಾರ್ಥಿಗಳ ದುರ್ಮರಣ

    – ವಾಕ್ ಮಾಡ್ತಿದ್ದಾಗ ನದಿಗೆ ಬಿದ್ದ ಸ್ನೇಹಿತ
    – ರಷ್ಯಾದಿಂದ ಬಂದ ವಿದ್ಯಾರ್ಥಿಗಳ ಮೃತದೇಹ

    ಚೆನ್ನೈ: ನಾಲ್ವರು ವೈದ್ಯಕೀಯ ವಿದ್ಯಾರ್ಥಿಗಳು ರಷ್ಯಾದ ನದಿಯೊಂದರಲ್ಲಿ ಮುಳುಗಿ ಸಾವನ್ನಪ್ಪಿದ್ದರು. ಇದೀಗ ನಾಲ್ವರ ಮೃತದೇಹಗಳನ್ನು ಶುಕ್ರವಾರ ಕುಟುಂಬಗಳಿಗೆ ಹಸ್ತಾಂತರಿಸಲಾಗಿದೆ. ನಾಲ್ವರು ವಿದ್ಯಾರ್ಥಿಗಳು ತಮಿಳುನಾಡಿನವರಾಗಿದ್ದು, ಆಗಸ್ಟ್ 8 ರಂದು ರಷ್ಯಾದ ವೋಲ್ಗಾ ನದಿಯಲ್ಲಿ ಮುಳುಗಿ ಸಾವನ್ನಪ್ಪಿದ್ದರು.

    ಶುಕ್ರವಾರ ಮೃತದೇಹಗಳನ್ನು ಕಾರ್ಗೋ ವಿಮಾನದ ಮೂಲಕ ಚೆನ್ನೈಗೆ ಬಂದಿವೆ. ಅವರ ಕುಟುಂಬದವರು ಮೃತದೇಹವನ್ನು ಪಡೆಯಲು ವಿಮಾನ ನಿಲ್ದಾಣದಲ್ಲಿದ್ದರು. ಅಲ್ಲದೇ ವಿಮಾನ ಬಂದಾಗ ಬಿಜೆಪಿ ರಾಜ್ಯ ಅಧ್ಯಕ್ಷ ಎಲ್. ಮುರುಗನ್ ವಿಮಾನ ನಿಲ್ದಾಣದಲ್ಲಿದ್ದರು ಎಂದು ವರದಿಯಾಗಿದೆ.

    ಏನಿದು ಪ್ರಕರಣ?
    ಆಗಸ್ಟ್ 8 ರಂದು ಮನೋಜ್ ಆನಂದ್ (22), ಆರ್.ವಿಘ್ನೇಶ್ (22), ಆಶಿಕ್ (22) ಮತ್ತು ಸ್ಟೀಫನ್ ಲೆಬಾಕು (20) ಸೇರಿದಂತೆ 11 ವಿದ್ಯಾರ್ಥಿಗಳು ರಷ್ಯಾದ ವೋಲ್ಗಾ ನದಿಯ ಬಳಿ ವಾಕ್ ಮಾಡಲು ಹೋಗಿದ್ದರು. ನಾಲ್ವರಲ್ಲಿ ಓರ್ವ ಕಾಲು ಜಾರಿ ನದಿಗೆ ಬಿದ್ದಿದ್ದಾನೆ. ಮುಳುಗುತ್ತಿರುವ ತಮ್ಮ ಸ್ನೇಹಿತನಿಗೆ ಸಹಾಯ ಮಾಡಲು ಇತರರು ಪ್ರಯತ್ನಿಸಿದ್ದಾರೆ. ಆದರೆ ನಾಲ್ವರು ನದಿಯಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಉಳಿದ ವಿದ್ಯಾರ್ಥಿಗಳು ರಷ್ಯಾದ ತುರ್ತು ಸೇವೆಗಳಿಗೆ ಫೋನ್ ಮಾಡಿ ತಿಳಿಸಿದ್ದರು.

    ಮುಳುಗಿದ ನಾಲ್ವರು ವಿದ್ಯಾರ್ಥಿಗಳು ರಷ್ಯಾದ ವೋಲ್ಗೊಗ್ರಾಡ್ ವೈದ್ಯಕೀಯ ವಿಶ್ವವಿದ್ಯಾಲಯದಲ್ಲಿ ಮೆಡಿಕಲ್ ವ್ಯಾಸಂಗ ಮಾಡುತ್ತಿದ್ದರು. ಆಶಿಕ್, ಮನೋಜ್ ಮತ್ತು ವಿಘ್ನೇಶ್ ಮೂವರು ಇನ್ನೂ ಕೆಲವು ತಿಂಗಳಲ್ಲಿ ಎಂಡಿ ಪದವಿ ಮುಗಿಸುತ್ತಿದ್ದರು. ಇನ್ನೂ ಸ್ಟೀಫನ್ ಎರಡನೇ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದನು. ಆಶಿಕ್ ತಿರುಪ್ಪೂರು ಜಿಲ್ಲೆಯ ಧರಪುರಂ ಮೂಲದವನಾಗಿದ್ದರೆ, ಮನೋಜ್ ಆನಂದ್ ಸೇಲಂ ಜಿಲ್ಲೆಯ ತಲೈವಾಸಲ್ ಮೂಲದವನು. ವಿಘ್ನೇಶ್ ಕಡಲೂರು ಜಿಲ್ಲೆಯ ತಿಟ್ಟಕ್ಕುಡಿ ಮತ್ತು ಸ್ಟೀಫನ್ ಚೆನ್ನೈ ಮೂಲದವನು ಎಂದು ತಿಳಿದುಬಂದಿದೆ.

    ಈ ಹಿಂದೆಯೇ ನಾಲ್ವರು ವಿದ್ಯಾರ್ಥಿಗಳ ಕುಟುಂಬದವರು ಮೃತದೇಹವನ್ನು ತಮ್ಮ ಮನೆಗಳಿಗೆ ತರಲು ಸಹಾಯ ಮಾಡುವಂತೆ ರಾಜ್ಯ ಸರ್ಕಾರವನ್ನು ಕೋರಿದ್ದರು. ನಂತರ ಇದಕ್ಕೆ ವ್ಯವಸ್ಥೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಭರವಸೆ ನೀಡಿದ್ದರು. ಅಷ್ಟೇ ಅಲ್ಲದೇ ಮುಖ್ಯಮಂತ್ರಿ ಎಡಪ್ಪಾಡಿ ಕೆ.ಪಳನಿಸ್ವಾಮಿ ಮತ್ತು ಉಪಮುಖ್ಯಮಂತ್ರಿ ಕೂಡ ಕುಟುಂಬದವರನ್ನ ಸಂಪರ್ಕಿಸಿ ಮೃತದೇಹಗಳನ್ನು ತಮಿಳುನಾಡಿಗೆ ಮರಳಿ ತರಲು ಎಲ್ಲ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಭರವಸೆ ನೀಡಿದ್ದರು.

  • ರಷ್ಯಾದ ವಿರೋಧ ಪಕ್ಷದ ನಾಯಕನಿಗೆ ವಿಷ ಪ್ರಾಶನ – ಕೋಮಾಗೆ ಜಾರಿದ ನಾಯಕ

    ರಷ್ಯಾದ ವಿರೋಧ ಪಕ್ಷದ ನಾಯಕನಿಗೆ ವಿಷ ಪ್ರಾಶನ – ಕೋಮಾಗೆ ಜಾರಿದ ನಾಯಕ

    ಮಾಸ್ಕೋ: ರಷ್ಯಾದ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ ಅವರನ್ನು ಪ್ರಬಲವಾಗಿ ಟೀಕಿಸುತ್ತಿದ್ದ ವಿಪಕ್ಷ ನಾಯಕ ಏಕಾಏಕಿ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದು ಕೋಮಾದಲ್ಲಿದ್ದಾರೆ.

    ರಷ್ಯಾ ಆಫ್‌ದ ಫ್ಯೂಚರ್‌ನ ನಾಯಕ ಅಲೆಕ್ಸಿ ನವಲ್ನಿ (44) ಸೈಬೀರಿಯಾದ ಟೋಮ್ಸ್‌ನಿಂದ ಮಾಸ್ಕೋಗೆ ವಿಮಾನದಲ್ಲಿ ಬರುತ್ತಿದ್ದಾಗ ಅಸ್ವಸ್ಥಗೊಂಡಿದ್ದಾರೆ. ಸದ್ಯ ಅವರು ಸೈಬೀರಿಯಾದ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಅಲೆಕ್ಸಿ ನವಲ್ನಿ ಆರೋಗ್ಯವಾಗಿದ್ದರು. ಅವರಿಗೆ ಆಹಾರದಲ್ಲಿ ವಿಷವನ್ನು ನೀಡಿರುವ ಸಾಧ್ಯತೆಯಿದೆ ಎಂದು ನವಲ್ನಿ ಅವರ ವಕ್ತಾರೆ ಕಿರಾ ಯರ್ಮೈಶ್‌ ಗಂಭೀರ ಆರೋಪ ಮಾಡಿದ್ದಾರೆ.

    ಮಾಸ್ಕೋಗೆ ಬರುತ್ತಿದಾಗ ದಿಢೀರ್‌ ಆರೋಗ್ಯದಲ್ಲಿ ಸಮಸ್ಯೆ ಕಾಣಿಸಿದೆ. ಹೀಗಾಗಿ ವಿಮಾನವನ್ನು ತುರ್ತು ಲ್ಯಾಂಡಿಗ್‌ ಮಾಡಿ ನವಲ್ನಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

    ನವಲ್ನಿ ಅವರು ಬೆಳಗ್ಗೆ ಚಹಾ ಮಾತ್ರ ಸೇವಿಸಿದ್ದಾರೆ. ಹೀಗಾಗಿ ಚಹಾದಲ್ಲಿ ವಿಷ ಹಾಕಿರುವ ಸಾಧ್ಯತೆಯಿದೆ ಎಂದು ವಕ್ತಾರೆ ಸಂಶಯ ವ್ಯಕ್ತ ಪಡಿಸಿದ್ದಾರೆ. ವಕ್ತಾರೆಯ ಆರೋಪದ ಹಿನ್ನೆಲೆಯಲ್ಲಿ ಈಗ ಕೆಫೆಯಲ್ಲಿರುವ ಸಿಸಿಟಿವಿ ಪರೀಶಲನೆ ನಡೆಸಲಾಗುತ್ತಿದೆ.

    ಆಸ್ಪತ್ರೆಯ ವೈದ್ಯರು ಮಾಧ್ಯಮಗಳ ಜತೆಗೆ ಮಾತನಾಡಿ ಅಲೆಕ್ಸಿ ನವಲ್ನಿ ಅವರಿಗೆ ವಿಷ ಪ್ರಾಶನ ಮಾಡಲಾಗಿದೆ ಎಂಬ ಅಂಶ ಇದುವರೆಗೆ ದೃಢಪಟ್ಟಿಲ್ಲ ಎಂದು ಹೇಳಿದ್ದಾರೆ.

    ಪುಟಿನ್‌ ನೇತೃತ್ವದ ಯುನೈಟೆಡ್‌ ರಷ್ಯಾ ಪಕ್ಷ ಕಳ್ಳರು ಮತ್ತು ವಂಚರ ಪಕ್ಷವೆಂದು ದೂರಿದ್ದ ನವಲ್ನಿ ಭ್ರಷ್ಟಾಚಾರದ ಆರೋಪ ಮಾಡಿದ್ದರು. 2011ರಲ್ಲಿ ಅವರನ್ನು ಬಂಧಿಸಿ 15 ದಿನಗಳ ಕಾಲ ಜೈಲಿನಲ್ಲಿ ಇರಿಸಲಾಗಿತ್ತು. 2013ರಲ್ಲಿ ಪ್ರಕರಣವೊಂದರಲ್ಲಿ ಶಿಕ್ಷೆ ಅನುಭವಿಸಿದ್ದರು.

  • ವಿಶ್ವದ ಮೊದಲ ಕೊರೊನಾ ಲಸಿಕೆ ಅಭಿವೃದ್ಧಿ – ರಷ್ಯಾ ಅಧ್ಯಕ್ಷ ಪುಟಿನ್‌ ಘೋಷಣೆ

    ವಿಶ್ವದ ಮೊದಲ ಕೊರೊನಾ ಲಸಿಕೆ ಅಭಿವೃದ್ಧಿ – ರಷ್ಯಾ ಅಧ್ಯಕ್ಷ ಪುಟಿನ್‌ ಘೋಷಣೆ

    – ಲಸಿಕೆ ಹಾಕಿಸಿಕೊಂಡ ಪುಟಿನ್‌ ಪುತ್ರಿ
    – ಆಗಸ್ಟ್‌ ಅಂತ್ಯಭಾಗದಲ್ಲಿ ಲಸಿಕೆ ಉತ್ಪಾದನೆ

    ಮಾಸ್ಕೋ: ಕೊರೊನಾ ಸಂಕಷ್ಟ ನಡುವೆ ಇಡೀ ವಿಶ್ವಕ್ಕೆ ಶುಭ ಸುದ್ದಿಯೊಂದು ಕೇಳಿ ಬಂದಿದೆ.‌ ವಿಶ್ವದ ಮೊದಲ‌ ಕೊರೊನಾ ಲಸಿಕೆ ಅಭಿವೃದ್ಧಿ ಪಡಿಸಿರುವುದಾಗಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಪ್ರಕಟಿಸಿದ್ದಾರೆ.

    ಮಾನವರ ಮೇಲೆ ಮೂರು ಹಂತಗಳ ಪ್ರಯೋಗ ಅಂತ್ಯವಾಗಿದ್ದು ಉತ್ತಮ ಫಲಿತಾಂಶ ಬಂದಿದೆ. ಲಸಿಕೆ ಪಡೆದವರ ಮೇಲೆ ಯಾವುದೇ ಅಡ್ಡ ಪರಿಣಾಮ ಬೀರದ ಹಿನ್ನೆಲೆಯಲ್ಲಿ ಲಸಿಕೆಯನ್ನು ಅಧಿಕೃತವಾಗಿ ರಷ್ಯಾ ಆರೋಗ್ಯ ಸಚಿವಾಲಯ ನೋಂದಣಿ ಮಾಡಿಕೊಂಡಿದೆ ಎಂದು ಪುಟಿನ್ ಹೇಳಿದ್ದಾರೆ.

    ರಷ್ಯಾ ರಕ್ಷಣಾ ಸಚಿವಾಲಯ ಮತ್ತು ಮಾಸ್ಕೋದ ಗಮೇಲಿಯಾ ಸಂಶೋಧನಾ ಸಂಸ್ಥೆ ಜಂಟಿಯಾಗಿ ಈ ಲಸಿಕೆಯನ್ನು ಅಭಿವೃದ್ಧಿಪಡಿಸಿದ್ದು, ಸದ್ಯ ನೋಂದಣಿಯಾಗಿರುವ ಲಸಿಕೆಯನ್ನು ಮೊದಲ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಪುತ್ರಿ ಗೆ ನೀಡಲಾಗಿದೆ.

    ಜೂನ್ 18 ರಿಂದ‌ ಕ್ಲಿನಿಕಲ್ ಪರೀಕ್ಷೆಗಳನ್ನು ಆರಂಭಿಸಲಾಗಿತ್ತು. ಜೂನ್ 18 ರಂದು ಮೊದಲ ಹಂತದಲ್ಲಿ 18 ಮಂದಿಯ ಮೇಲೆ ಹಾಗೂ ಜೂನ್ 23 ರಂದು 20 ಸ್ವಯಂ ಸೇವಕರ ಮೇಲೆ ಲಸಿಕೆ ಪ್ರಯೋಗ ನಡೆಸಲಾಗಿತ್ತು. ಪ್ರಯೋಗಕ್ಕೆ ಒಳಗಾದವರ ಪೈಕಿ ಮೊದಲ ಗುಂಪು ಜುಲೈ 15 ಮತ್ತು ಎರಡನೇ ಗುಂಪು ಜುಲೈ 20 ರಂದು ಡಿಸ್ಚಾರ್ಜ್ ಮಾಡಲಾಗಿತ್ತು. ಎರಡು ಹಂತಗಳಲ್ಲಿ ಯಾವುದೇ ಅಡ್ಡ ಪರಿಣಾಮಗಳು ಕಾಣಿಸಿಕೊಳ್ಳದ ಕಾರಣ ಮೂರನೇ ಹಂತದಲ್ಲಿ 38 ಮಂದಿಯ ಮೇಲೆ ಪರೀಕ್ಷೆ ನಡೆಸಿ ರಷ್ಯಾ ಈಗ ಯಶಸ್ವಿಯಾಗಿದೆ.

    ಅಗಸ್ಟ್ ತಿಂಗಳ ಅಂತ್ಯ ಭಾಗದಿಂದ ಇದರ ಲಸಿಕೆ ಉತ್ಪಾದನೆ ಕಾರ್ಯ ಆರಂಭವಾಗಲಿದ್ದು ಸೆಪ್ಟೆಂಬರ್ ವೇಳೆಗೆ ಮೊದಲ ಹಂತದ ಉತ್ಪಾದನೆ ಸಿದ್ದವಾಗಲಿದೆ. ಅಕ್ಟೋಬರ್ ವೇಳೆಗೆ ರಷ್ಯಾದಲ್ಲಿ ಸ್ಥಳೀಯ ಬಳಕೆಗೆ ಈ ವ್ಯಾಕ್ಸಿನ್ ಸಿಗಲಿದೆ ಎಂದು ತಜ್ಞರು ಹೇಳಿದ್ದಾರೆ.

    ಈ ವಾರ ದೇಶವು ವಿಶ್ವದ ಮೊದಕ ಕೋವಿಡ್ ಲಸಿಕೆ ಬಿಡುಗಡೆಯನ್ನು ಗಮಲೇಯ ಸಂಶೋಧನಾ ಸಂಸ್ಥೆ ಮತ್ತು ರಷ್ಯಾದ ರಕ್ಷಣಾ ಸಚಿವಾಲಯ ಜಂಟಿಯಾಗಿ ನೆರವೇರಿಸಲಿದೆ ಎಂದು ಒಲೆಗ್ ಗ್ರಿಡ್ನೆವ್ ಹೇಳಿರುವುದಾಗಿ ಸ್ಪುಟ್ನಿಕ್ ಸುದ್ದಿ ಸಂಸ್ಥೆ ವರದಿ ಮಾಡಿತ್ತು.

    ಆಗಸ್ಟ್ 3 ರಂದು, ಲಸಿಕೆಯ ಕ್ಲಿನಿಕಲ್ ಪ್ರಯೋಗಗಳಲ್ಲಿ ಭಾಗವಹಿಸುವವರ ‘ಅಂತಿಮ ವೈದ್ಯಕೀಯ ಪರೀಕ್ಷೆ’ ಬರ್ಡೆಂಕೊ ಮುಖ್ಯ ಮಿಲಿಟರಿ ಕ್ಲಿನಿಕಲ್ ಆಸ್ಪತ್ರೆಯಲ್ಲಿ ನಡೆದಿತ್ತು ಎಂದು ರಷ್ಯಾದ ರಕ್ಷಣಾ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿತ್ತು. ಲಸಿಕೆ ಪಡೆದುಕೊಂಡ ಎಲ್ಲಾ ಸ್ವಯಂಸೇವಕರು ಸ್ಪಷ್ಟ ರೋಗನಿರೋಧಕ ಪ್ರತಿಕ್ರಿಯೆಯನ್ನು ಹೊಂದಿದ್ದಾರೆಂದು ಫಲಿತಾಂಶಗಳು ಸ್ಪಷ್ಟವಾಗಿ ಬಂದಿದೆ.  ಸ್ವಯಂಸೇವಕರ ಕೆಲಸದಲ್ಲಿ ಯಾವುದೇ ಅಡ್ಡಪರಿಣಾಮಗಳು ಅಥವಾ ಅಸಹಜತೆ ಕಾಣಿಸಿಲ್ಲ ಎಂದು ಸಚಿವಾಲಯ ತಿಳಿಸಿತ್ತು.

    ಭಾರತಕ್ಕೆ ರಷ್ಯಾ ಲಸಿಕೆ?
    ರಷ್ಯಾದಲ್ಲಿ ಅಭಿವೃದ್ಧಿಗೊಂಡಿರುವ ಲಸಿಕೆ ಭಾರತಕ್ಕೂ ಆಮದಾಗುವ ಸಾಧ್ಯತೆಗಳಿದೆ. ಅದಕ್ಕೂ ಮೊದಲು ರಷ್ಯಾ ಲಸಿಕೆಗೆ ವಿಶ್ವ ಆರೋಗ್ಯ ಸಂಸ್ಥೆ ಅನುಮೋದನೆ ನೀಡಬೇಕಿದೆ‌.

    ಪ್ರಧಾನಿ ನರೇಂದ್ರ ಮೋದಿ ಹಾಗೂ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಉತ್ತಮ ಸಂಬಂಧ ಹೊಂದಿರುವ ಹಿನ್ನಲೆ ಭಾರತಕ್ಕೂ ಆಮದಾಗುವ ಸಾಧ್ಯತೆಗಳಿದೆ ಎಂದು ಹೇಳಲಾಗುತ್ತಿದೆ. ಭಾರತದಲ್ಲಿ ಬಳಕೆಗೂ ಮುನ್ನ ರಷ್ಯಾ ವ್ಯಾಕ್ಸಿನ್ ಕ್ಲಿನಿಕಲ್ ಪರೀಕ್ಷೆಗಳಲ್ಲಿಗೆ ಮತ್ತೊಮ್ಮೆ ಒಳಪಡಬೇಕಿದ್ದು ಭಾರತದಲ್ಲೂ ಯಾವುದೇ ಅಡ್ಡ ಪರಿಣಾಮಗಳು ಬೀರದಿದ್ದಲ್ಲಿ ಅಧಿಕೃತ ಬಳಕೆಗೆ ಅವಕಾಶ ನೀಡುವ ಸಾಧ್ಯತೆಗಳಿದೆ. ಈ ಎಲ್ಲ ಪ್ರತಿಕ್ರಿಯೆಗಳು ವರ್ಷದ ಕೊನೆಯಲ್ಲಿ ನಡೆಯಬಹುದು ಎಂದು ಹೇಳಲಾಗುತ್ತಿದೆ.