Tag: ರಷ್ಯಾ

  • ವ್ಯಕ್ತಿ ಹೊಟ್ಟೆಯಲ್ಲಿ 1ಕೆ.ಜಿ ಮೊಳೆ, ಬೋಲ್ಟ್, ಸ್ಕ್ರೂ ನೋಡಿ ವೈದ್ಯರು ಶಾಕ್

    ವ್ಯಕ್ತಿ ಹೊಟ್ಟೆಯಲ್ಲಿ 1ಕೆ.ಜಿ ಮೊಳೆ, ಬೋಲ್ಟ್, ಸ್ಕ್ರೂ ನೋಡಿ ವೈದ್ಯರು ಶಾಕ್

    ಮಾಸ್ಕೋ: ವ್ಯಕ್ತಿಯೋರ್ವನ ಹೊಟ್ಟೆಯಿಂದ 1ಕಿಲೋಗ್ರಾಂಗಿಂತಲೂ ಹೆಚ್ಚು ಮೊಳೆಗಳು, ಬೋಲ್ಟ್‌ಗಳು, ತಿರುಪು ಇರುವುದನ್ನು ಕಂಡು ವೈದ್ಯರು ಶಾಕ್ ಆಗಿದ್ದಾರೆ.

    ಹೌದು, ಮದ್ಯವ್ಯಸನನಾಗಿದ್ದ ವ್ಯಕ್ತಿ, ಮದ್ಯ ಸೇವನೆಯನ್ನು ತ್ಯಜಿಸಿದ ನಂತರ ಲೋಹದಂತಹ ವಸ್ತುಗಳನ್ನು ಸೇವಿಸಲು ಆರಂಭಿಸಿದ್ದಾನೆ. ಆದರೆ ನಂತರ ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಆತನನ್ನು ಬಾಲ್ಟಿನ್ ನಗರದ ಕ್ಲೈಪೆಡಾದಲ್ಲಿರುವ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದನ್ನೂ ಓದಿ:  ರೈತರ ಮೇಲೆ ವಾಹನ ಹತ್ತಿಸಿದ ವೀಡಿಯೋ ಲಭ್ಯ- ಅಜಯ್ ಮಿಶ್ರಾ ಪುತ್ರನ ವಿರುದ್ಧ ಕೊನೆಗೂ FIR

    Nail bolt

    ಈ ವೇಳೆ ವ್ಯಕ್ತಿ ಹೊಟ್ಟೆಯನ್ನು ಎಕ್ಸ್ ರೇ ಮಾಡಿದ ವೈದ್ಯರಿಗೆ 4 ಇಂಚಿರುವ ಆತನ ಹೊಟ್ಟೆಯಲ್ಲಿ ಲೋಹದ ತುಂಡುಗಳಿರುವ ವಿಚಾರ ತಿಳಿದುಬಂದಿದೆ. ಮನುಷ್ಯ ದೇಹದಲ್ಲಿ ಇಷ್ಟೆಲ್ಲಾ ಇದ್ದರೂ ಆತ ಇದ್ದಾನೆ ಎಂದರೆ ಇದು ಸಾಮಾನ್ಯವಾದಂತಹ ಪ್ರಕರಣವಲ್ಲ. ಇದೊಂದು ವಿಭಿನ್ನವಾದಂತಹ ಪ್ರಕರಣ ಎಂದು ವೈದ್ಯರು ತಿಳಿಸಿದ್ದಾರೆ.

    ನಂತರ ಸತತ ಮೂರಗಂಟೆಗಳ ಎಲ್ಲಾ ಲೋಹದ ವಸ್ತುಗಳನ್ನು ಹೊರ ತೆಗೆಯುವ ಮೂಲಕ ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಈ ಕುರಿತಂತೆ ವೈದ್ಯ ಸರುನಾಸ್ ಡೈಲಿಡೆನಾ, ಎಕ್ಸ್ ರೇ ಬಳಿಕ ಮೂರು ಗಂಟೆಗಳ ಕಾಲ ಶಸ್ತ್ರ ಚಿಕಿತ್ಸೆ ನಡೆಸಿ, ವ್ಯಕ್ತಿಯ ಹೊಟ್ಟೆಯಿಂದ ಎಲ್ಲಾ ವಿದೇಶಿ ಲೋಹಗಳನ್ನು ಹೊರತೆಗೆಯಲಾಯಿತು. ಈ ವೇಳೆ ಸಣ್ಣ, ಸಣ್ಣ ಲೋಹಗಳನ್ನು ಹೊಟ್ಟೆಯಿಂದ ಹೊರತೆಗೆಯಲಾಗಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ:  ಜನಸಂದಣಿ ಮಧ್ಯೆಯೇ ಮಹಿಳೆ ಬರ್ಬರ ಹತ್ಯೆ – ಬೆಚ್ಚಿಬಿದ್ದ ದೆಹಲಿ ಮಂದಿ

    ಈ ಸಂಬಂಧ ಕ್ಲೈಪೆಡಾ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಆಲ್ಗಿರ್ದಾಸ್ ಸ್ಪೆಪಾವಿಸಿಯಸ್ ನಾವು ಈ ರೀತಿಯ ಪ್ರಕರಣವನ್ನು ಇಲ್ಲಿಯವರೆಗೂ ನೋಡೆ ಇಲ್ಲ. ಕಳೆದ ಒಂದು ತಿಂಗಳ ಹಿಂದೆ ಮದ್ಯಸೆವನೆಯನ್ನು ನಿಲ್ಲಿಸಿದ ನಂತರ ಲೋಹಗಳನ್ನು ನುಂಗಲು ವ್ಯಕ್ತಿ ಆರಂಭಿಸಿದ. ಇದೀಗ ವ್ಯಕ್ತಿ ಸ್ಥಿತಿ ಸ್ಥಿರವಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾನೆ ಎಂದು ತಿಳಿಸಿದ್ದಾರೆ.

  • ಮುಂಬೈ ಮಾಜಿ ಪೊಲೀಸ್ ಆಯುಕ್ತ ನಾಪತ್ತೆ, ರಷ್ಯಾಗೆ ಪರಾರಿ?

    ಮುಂಬೈ ಮಾಜಿ ಪೊಲೀಸ್ ಆಯುಕ್ತ ನಾಪತ್ತೆ, ರಷ್ಯಾಗೆ ಪರಾರಿ?

    ಮುಂಬೈ: ಮುಂಬೈ ನಗರದ ಮಾಜಿ ಪೊಲೀಸ್ ಆಯುಕ್ತ ಪರಮ್ ಬೀರ್ ಸಿಂಗ್ ನಾಪತ್ತೆಯಾಗಿದ್ದು ರಷ್ಯಾಗೆ ಪರಾರಿಯಾಗಿದ್ದಾರೆ ಎಂದು ವರದಿಯಾಗಿದೆ.

    ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಆರೋಪಿಯಾಗಿರುವ ಪರಮ್ ಬೀರ್ ಸಿಂಗ್ ಎಲ್ಲಿದ್ದಾರೆ ಎನ್ನುವುದು ನಿಗೂಢವಾಗಿದೆ.

    ಬಗ್ಗೆ ಪ್ರತಿಕ್ರಿಯಿಸಿರುವ ಮಹಾರಾಷ್ಟ್ರದ ಗೃಹ ಸಚಿವ ದಿಲೀಪ್ ವಾಲ್ಸೆ ಪಾಟೀಲ್, ಪರಮ್ ಬೀರ್ ಸಿಂಗ್ ಎಲ್ಲಿದ್ದಾರೆ ಎನ್ನುವುದು ರಾಜ್ಯ ಸರ್ಕಾರ ಅಥವಾ ತನಿಖಾ ಸಂಸ್ಥೆಗಳಿಗೆ ತಿಳಿದಿಲ್ಲ. ಹಲವು ಬಾರಿ ನೋಟಿಸ್ ನೀಡಿದರೂ ತನಿಖಾ ಅಧಿಕಾರಿಗಳ ಮುಂದೆ ಹಾಜರಾಗದ ಹಿನ್ನೆಲೆಯಲ್ಲಿ ಲುಕೌಟ್ ನೋಟಿಸ್ ಜಾರಿ ಮಾಡಲಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ: ನನ್ನ ಮಗಳ ಸಾವಿಗೆ ತೆಲುಗು ನಟ ಕಾರಣ- ಸೌಜನ್ಯ ತಂದೆ ದೂರು 

    ಕೇಂದ್ರ ಗೃಹ ಸಚಿವಾಲಯದ ಜೊತೆ ಅವರನ್ನು ಹುಡುಕುವ ಕೆಲಸ ಮಾಡುತ್ತಿದ್ದೇವೆ. ಸರ್ಕಾರಿ ಅಧಿಕಾರಿಯಾಗಿ, ಅವರು ಸರ್ಕಾರದ ಅನುಮತಿಯಿಲ್ಲದೆ ವಿದೇಶಕ್ಕೆ ಹೋಗಲು ಸಾಧ್ಯವಿಲ್ಲ ಎಂದರು.

    ಮಹಾರಾಷ್ಟ್ರದ ಗೃಹ ಸಚಿವರಾದ ಅನಿಲ್ ದೇಶ್ ಮುಖ್ ಪ್ರತಿ ತಿಂಗಳು 100 ಕೋಟಿ ರು. ಹಫ್ತಾ ಕೇಳುತ್ತಾರೆಂದು ಮುಖ್ಯಮಂತ್ರಿ ಉದ್ಧವ್ ಠಾಕ್ರೆಗೆ ಪರಮ್ ಬೀರ್ ಸಿಂಗ್ ದೂರು ನೀಡಿದ್ದರು. ಮುಕೇಶ್ ಅಂಬಾನಿ ಮನೆ ಮುಂದೆ ಬಾಂಬ್ ಇಟ್ಟ ಸಚಿನ್ ವಾಜೆ ಅವರನ್ನು ಬಳಸಿಕೊಂಡು ಹಫ್ತಾ ವಸೂಲಿ ಮಾಡುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದರು. ಫೆಬ್ರವರಿ ಮಧ್ಯಭಾಗದಲ್ಲಿ ಅಂದರೆ ಫೆಬ್ರವರಿ 6ರಿಂದ 16ರ ಮಧ್ಯೆ ಅನಿಲ್ ದೇಶ್‍ಮುಖ್ ಅವರು ಕೆಲವು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ ಎಂದು ಪರಮ್ ಬೀರ್ ಸಿಂಗ್ ಪತ್ರದಲ್ಲಿ ದೂರಿದ್ದರು.

    ಈ ಪತ್ರ ಬೆಳಕಿಗೆ ಬಂದ ಬೆನ್ನಲ್ಲೇ ಬಿಜೆಪಿ ಮಹಾರಾಷ್ಟ್ರ ಸರ್ಕಾರದ ವಿರುದ್ಧ ಭಾರೀ ಟೀಕೆ ಮಾಡತೊಡಗಿತು. ಮಾಜಿ ಸಿಎಂ ದೇವೇಂದ್ರ ಫಡ್ನಾವೀಸ್ ದಾಖಲೆಗಳ ಮೇಲೆ ದಾಖಲೆಗಳನ್ನು ಬಿಡುಗಡೆ ಮಾಡಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದರು. ಟೀಕೆ ಜಾಸ್ತಿ ಆಗುತ್ತಿದ್ದಂತೆ ಅನಿಲ್ ದೇಶ್ ಮುಖ್ ರಾಜೀನಾಮೆ ಮಂತ್ರಿ ಸ್ಥಾನಕ್ಕೆ ನೀಡಿದ್ದರು. ಈ ಪ್ರಕರಣದ ತನಿಖೆಯನ್ನು ಸಿಬಿಐ ನಡೆಸುತ್ತಿದ್ದು ಪರಮ್ ಬೀರ್ ಪ್ರಮುಖ ಸಾಕ್ಷಿಯಾಗಿದ್ದಾರೆ.

    ಮುಂಬೈ ಪೊಲೀಸರು ಪರಮ್ ಬಿರ್ ಸಿಂಗ್ ವಿರುದ್ಧ ಜೂನ್ ತಿಂಗಳಿನಲ್ಲಿ 4 ಎಫ್‍ಐಆರ್ ದಾಖಲಿಸಿದ್ದಾರೆ. ಬಿಲ್ಡರ್ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಸುಲಿಗೆ, ವಂಚನೆ, ನಕಲಿ ಮತ್ತು ಕ್ರಿಮಿನಲ್ ಪಿತೂರಿ ಆರೋಪದ ಅಡಿ ಎಫ್‍ಐಆರ್ ದಾಖಲಾಗಿದೆ.

  • ಗಡ್ದಧಾರಿಯಾಗಿ ರಷ್ಯಾದ ಬೀದಿಯಲ್ಲಿ ಸಲ್ಮಾನ್ ಅಲೆದಾಟ – ಫೋಟೋ ವೈರಲ್

    ಗಡ್ದಧಾರಿಯಾಗಿ ರಷ್ಯಾದ ಬೀದಿಯಲ್ಲಿ ಸಲ್ಮಾನ್ ಅಲೆದಾಟ – ಫೋಟೋ ವೈರಲ್

    ಮುಂಬೈ: ಬಾಲಿವುಡ್ ಬ್ಯಾಡ್ ಬಾಯ್ ನಟ ಸಲ್ಮಾನ್ ಖಾನ್ ಸದಾ ಯಂಗ್ ಆ್ಯಂಡ್ ಎನರ್ಜಿಟಿಕ್ ಆಗಿ ಹ್ಯಾಂಡ್‍ಸಮ್ ಲುಕ್‍ನಲ್ಲಿ ಕಾಣಿಸಿಕೊಳ್ಳುತ್ತಾರೆ. ಸಲ್ಲು ಏನೇ ಸ್ಟೈಲ್ ಮಾಡಿದರೂ ಅದು ಬಾಲಿವುಡ್‍ನಲ್ಲಿ ಟ್ರೆಂಡ್ ಸೆಟ್ ಮಾಡಿಬಿಡುತ್ತದೆ. ಸದ್ಯ ಸಲ್ಮಾನ್‍ಖಾನ್ ಗಡ್ಡ ಬಿಟ್ಟುಕೊಂಡು ರಷ್ಯಾದ ಬೀದಿಯಲ್ಲಿ ಅಲೆದಾಡುತ್ತಿರುವ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

    ಹೌದು, ಬಾಲಿವುಡ್ ಬ್ಯಾಚುಲರ್ ಎಂದೇ ಫೇಮಸ್ ಆಗಿರುವ ಸಲ್ಮಾನ್ ಖಾನ್ ಹಾಗೂ ಕತ್ರಿನಾ ಕೈಫ್ ಅಭಿನಯದ ಬಹು ನಿರೀಕ್ಷಿತ ಟೈಗರ್-3 ಸಿನಿಮಾದ ಶೂಟಿಂಗ್ ರಷ್ಯಾದಲ್ಲಿ ನಡೆಯುತ್ತಿದೆ. ಸದ್ಯ ಈ ಸಿನಿಮಾದ ಶೂಟಿಂಗ್ ವೇಳೆ ಸಲ್ಮಾನ್ ಖಾನ್ ಕೆಂಪು ಬಣ್ಣದ ಉದ್ದ ದಾಡಿ ಮತ್ತು ಉದ್ದ ಕೂದಲು ಬಿಟ್ಟುಕೊಂಡು ರಷ್ಯಾದ ಬೀದಿಯಲ್ಲಿ ಓಡಾಡಿದ್ದಾರೆ. ಈ ನ್ಯೂ ಲುಕ್‍ನಲ್ಲಿ ಸಲ್ಮಾನ್ ಖಾನ್ ಸಖತ್ ವಿಭಿನ್ನವಾಗಿ ಕಾಣಿಸಿಕೊಂಡಿದ್ದು, ಅವರ ಗುರುತೆ ಸಿಗದಂತೆ ಬದಲಾಗಿದ್ದಾರೆ. ಇದೇ ವೇಳೆ ಅಭಿಮಾನಿಯೊಬ್ಬರು ಸಲ್ಮಾನ್ ಕಾನ್ ಜೊತೆ ಫೋಟೋ ಕ್ಲಿಕ್ಕಿಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಇದೀಗ ಈ ಫೋಟೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಇದನ್ನೂ ಓದಿ:ಸಲ್ಮಾನ್ ಖಾನ್‍ಗೆ ಮಂಡಿಯೂರಿ ಧನ್ಯವಾದ ತಿಳಿಸಿದ ರಾಖಿ ಸಾವಂತ್

    ಏಕ್ ತಾ ಟೈಗರ್, ಟೈಗರ್ ಜಿಂದಾ ಹೈ ಸಿನಿಮಾದ ನಂತರ ಸಲ್ಮಾನ್ ಖಾನ್ ಹಾಗೂ ಕತ್ರಿನಾ ಕೈಫ್ ಟೈಗರ್-3 ಸಿನಿಮಾದಲ್ಲಿ ಒಟ್ಟಾಗಿ ಅಭಿನಯಿಸುತ್ತಿದ್ದು, ಈ ಸಿನಿಮಾದಲ್ಲಿ ಸಲ್ಮಾನ್ ಏಜೆಂಟ್ ಪಾತ್ರದಲ್ಲಿ ಕಾಣಿಸಿಕೊಳ್ಳಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಚಿತ್ರಕ್ಕೆ ನಿರ್ದೇಶಕ ಅಲಿ ಅಬ್ಬಾಸ್ ಜಾಫರ್ ಆ್ಯಕ್ಷನ್ ಕಟ್ ಹೇಳಿದ್ದಾರೆ. ವಿಶೇಷವೆಂದರೆ ಈ ಸಿನಿಮಾದ ಅಥಿತಿ ಪಾತ್ರದಲ್ಲಿ ಬಾಲಿವುಡ್ ಕಿಂಗ್ ಖಾನ್ ಶಾರೂಖ್ ಕೂಡ ಅಭಿನಯಿಸಲಿದ್ದಾರೆ ಎಂಬ ಸುದ್ದಿ ಇದೆ.  ಇದನ್ನೂ ಓದಿ: ದಕ್ಷಿಣ ಭಾರತದ ಸಿನಿಮಾಗಳತ್ತ ಮುಖ ಮಾಡಿದ ಸಲ್ಮಾನ್ ಖಾನ್

  • ನಾಲ್ಕು ಕಾರ್, ಒಂದು ಹೆಲಿಕಾಪ್ಟರ್ ನಲ್ಲಿ ನಗದು ಹೊತ್ತೊಯ್ದ ಅಶ್ರಫ್ ಘನಿ

    ನಾಲ್ಕು ಕಾರ್, ಒಂದು ಹೆಲಿಕಾಪ್ಟರ್ ನಲ್ಲಿ ನಗದು ಹೊತ್ತೊಯ್ದ ಅಶ್ರಫ್ ಘನಿ

    – ಏರ್ ಪೋರ್ಟ್ ನಲ್ಲಿಯೇ ಉಳಿದ ಅರ್ಧ ಹಣ

    ಕಾಬೂಲ್: ತಾಲಿಬಾನಿಗಳಿಗೆ ಅಧಿಕಾರ ಹಸ್ತಾಂತರಿಸಿ ಮಾಜಿ ಅಧ್ಯಕ್ಷ ಅಶ್ರಫ್ ಘನಿ ದೇಶ ತೊರೆಯುವಾಗ ನಾಲ್ಕು ಕಾರ್ ಮತ್ತು ಒಂದು ಹೆಲಿಕಾಪ್ಟರ್ ನಲ್ಲಿ ಅಪಾರ ಪ್ರಮಾಣದ ನಗದು ತೆಗೆದುಕೊಂಡು ಹೋಗಿರುವ ಬಗ್ಗೆ ವರದಿಯಾಗಿದೆ. ಆದ್ರೆ ಎಲ್ಲವೂ ಹಣ ತೆಗೆದುಕೊಂಡ ಹೋಗಲಾಗದೇ ಕೆಲ ನಗದನ್ನು ಕಾಬೂಲ್ ವಿಮಾನ ನಿಲ್ದಾಣದಲ್ಲಿಯೇ ಬಿಟ್ಟುಹೋಗಿರೋದು ರಷ್ಯಾದ ರಾಯಭಾರಿ ಕಚೇರಿ ದೃಢಪಡಿಸಿದೆ.

    ತಾಲಿಬಾನಿಗಳು ಸಹ ವಿಮಾನ ನಿಲ್ದಾಣದಲ್ಲಿ ಅಪಾರ ಪ್ರಮಾಣದ ನಗದು ಪತ್ತೆಯಾಗಿರೋದನ್ನು ಹೇಳಿಕೊಂಡಿದ್ದರು. ಇದು ಸುಮಾರು 50 ಲಕ್ಷ ಡಾಲರ್ ಎಂದು ಹೇಳಲಾಗುತ್ತಿದ್ದು, ಆದ್ರೆ ಈ ವರದಿಯನ್ನು ದೃಢಪಡಿಸಿರಲಿಲ್ಲ. ಇದೀಗ ಕಾಬೂಲ್ ನಲ್ಲಿರುವ ರಷ್ಯಾದ ರಾಯಭಾರಿ ಕಚೇರಿ ಈ ಸುದ್ದಿಯನ್ನು ಖಚಿತಪಡಿಸಿದೆ. ಅಫ್ಘಾನಿಸ್ತಾನ ತಾಲಿಬಾನಿಗಳ ಕೈ ವಶವಾದ್ರೂ ತನ್ನ ರಾಯಭಾರಿ ಕಚೇರಿಯನ್ನು ಮುಚ್ಚದಿರಲು ರಷ್ಯಾ ನಿರ್ಧರಿಸಿದೆ. ನಾವು ತಾಲಿಬಾನಿಗಳ ಚಲನವಲನಗಳನ್ನು ಇಲ್ಲಿಂದಲೇ ಗಮನಿಸುತ್ತೇವೆ. ಅಂದ್ರೆ ಅವರ ಸರ್ಕಾರವನ್ನು ಒಪ್ಪಿಕೊಂಡಂತೆ ಅಲ್ಲ ಎಂದು ಸ್ಪಷ್ಟಪಡಿಸಿದೆ.

    ಈ ಕುರಿತು ಮಾಹಿತಿ ನೀಡಿರುವ ಕಾಬೂಲ್ ನಲ್ಲಿರುವ ದೂತವಾಸ ಕಚೇರಿಯ ವಕ್ತಾರೆ ನಿಕಿತಾ ಐಚಿಂಕೋ, ಭಾನುವಾರವೇ ಘನಿ ದೇಶ ತೊರೆದಿದ್ದಾಯ್ತು. ಹೋಗುವಾಗ ನಾಲ್ಕು ಕಾರ್ ಮತ್ತು ಹೆಲಿಕಾಪ್ಟರ್ ನಲ್ಲಿ ನಗದು ರವಾನಿಸಲಾಗಿತ್ತು. ಆದ್ರೆ ಏಕಕಾಲದಲ್ಲಿ ಅಷ್ಟು ನಗದು ತೆಗೆದುಕೊಂಡ ಹೋಗಲಾರದ ಘಣಿ ಕೆಲ ಹಣವನ್ನು ವಿಮಾನ ನಿಲ್ದಾಣದಲ್ಲಿ ಬಿಟ್ಟು ಹೋಗಿರುವ ಬಗ್ಗೆ ಖಚಿತ ಮಾಹಿತಿ ಲಭ್ಯವಾಗಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ತಾಲಿಬಾನಿಗಳಿಗೆ ಹೆದರಿ 1 ವಿಮಾನದಲ್ಲಿ ಪ್ರಯಾಣಿಸಲು ಮುಗಿಬಿದ್ದ ನೂರಾರು ಜನ

    ಅಶ್ರಫ್ ಘನಿ ಮತ್ತು ಮಾಜಿ ಉಪಾಧ್ಯಕ್ಷ ಸಾಲೇಹ ಭಾನುವಾರವೇ ತಮ್ಮ ದೇಶದ ಜನತೆಯನ್ನು ಬಿಟ್ಟು ಅಫ್ಘಾನಿಸ್ತಾನ ತೊರೆದಿದ್ದರು. ಈ ವೇಳೆ ಇಬ್ಬರ ಜೊತೆ ಆಪ್ತರು ಮಾತ್ರ ಪ್ರಯಾಣಿಸಿದ್ದಾರೆ ಎನ್ನಲಾಗಿದೆ. ಆದ್ರೆ ಕಾಬೂಲ್ ನಿಂದ ಯಾವ ವಿಮಾನದಿಂದ ಎಲ್ಲಿಗೆ ಹೋದ್ರು ಎಂಬುದರ ಬಗ್ಗೆ ಇದುವರೆಗೂ ಖಚಿತ ಮಾಹಿತಿ ಲಭ್ಯವಾಗಿಲ್ಲ. ಕೆಲ ಮಾಧ್ಯಮಗಳ ಪ್ರಕಾರ ಘನಿ ತಜಕೀಸ್ತಾನ ಎಂದು ಹೇಳುತ್ತಿದ್ರೆ, ಕೆಲವರ ಪ್ರಕಾರ ಅಮೆರಿಕ ತಲುಪಿರುವ ಬಗ್ಗೆ ಅನುಮಾನಗಳು ವ್ಯಕ್ತವಾಗಿವೆ. ಇದನ್ನೂ ಓದಿ: ರಕ್ತಪಾತ ತಡೆಗಾಗಿ ದೇಶ ತೊರೆದೆ- ಅಫ್ಘಾನಿಸ್ತಾನದ ಅಧ್ಯಕ್ಷ ಅಶ್ರಫ್ ಘನಿ

    ಅಶ್ರಫ್ ಘನಿ ಹೇಳಿದ್ದೇನು?:
    ನನಗೆ ಕಠಿಣ ಸವಾಲು ಎದುರಾಗಿತ್ತು. ತಾಲಿಬಾನಿಗಳನ್ನು ಎದುರಿಸಲು ನಿಂತಿದ್ದೆ. ಅವರೆಲ್ಲರೂ ಶಸ್ತ್ರಸಜ್ಜಿ ತರಾಗಿ ರಾಷ್ಟ್ರಪತಿ ಭವನ ಪ್ರವೇಶಿಸಲು ಸಿದ್ಧರಾಗಿದ್ದರು. ನಾನು ಅಫ್ಘಾನಿಸ್ತಾನದಿಂದ ದೂರ ಹೋಗಬೇಕೆಂಬುವುದು ಅವರ ಡಿಮ್ಯಾಂಡ್ ಆಗಿತ್ತು. ಕಳೆದ 20 ವರ್ಷಗಳಿಂದ ದೇಶದ ಜನರ ರಕ್ಷಣೆಯಲ್ಲಿ ತೊಡಗಿಕೊಂಡಿದ್ದೇನೆ. ಒಂದು ವೇಳೆ ಅವರ ಡಿಮ್ಯಾಂಡ್ ಒಪ್ಪದಿದ್ರೆ ಯುದ್ಧವೇ ನಡೆಯತ್ತಿತ್ತು. ಈ ಯುದ್ಧದಲ್ಲಿ ನೂರಾರು ಜನ ಪೊಲೀಸರು ಹುತಾತ್ಮರಾಗುತ್ತಿದ್ದರು. ರಕ್ತ ಹರಿಸೋದು ನನಗೆ ಇಷ್ಟವಿರಲಿಲ್ಲ. ಅವರ ಬೇಡಿಕೆಯಂತೆ ಆಧಿಕಾರ ಹಸ್ತಾಂತರಿಸಿ ದೇಶ ತೊರೆದೆ. ಇಲ್ಲವಾದಲ್ಲಿ 60 ಲಕ್ಷ ಜನಸಂಖ್ಯೆಯುಳ್ಳು ಈ ನಗರ ದೊಡ್ಡ ದುರಂತಕ್ಕೆ ಸಾಕ್ಷಿಯಾಗುತ್ತಿತ್ತು ಎಂದು ಹೇಳಿದ್ದಾರೆ.  ಇದನ್ನೂ ಓದಿ: ಅಫ್ಘಾನಿಸ್ತಾನದ ಸ್ಥಿತಿ ಘನಘೋರ – ವಿಮಾನದಿಂದ ಬಿದ್ದು ಮೂವರು ಸಾವು

    https://www.youtube.com/watch?v=ckd3p_Ra2VI

  • ರಷ್ಯಾದಲ್ಲಿ ಬಸ್ ಸ್ಫೋಟ – ಮಹಿಳೆ ಸಾವು, 17 ಮಂದಿಗೆ ಗಾಯ

    ರಷ್ಯಾದಲ್ಲಿ ಬಸ್ ಸ್ಫೋಟ – ಮಹಿಳೆ ಸಾವು, 17 ಮಂದಿಗೆ ಗಾಯ

    ಮಾಸ್ಕೋ: ಮಧ್ಯ ರಷ್ಯಾದ ವೊರೊನೆಜ್ ನಗರದಲ್ಲಿ ಗುರುವಾರ ಸಂಜೆ ಸಂಭವಿಸಿದ ಬಸ್ಸಿನ ಸ್ಫೋಟದಲ್ಲಿ ಓರ್ವ ಮಹಿಳೆ ಸಾವನ್ನಪ್ಪಿದ್ದು, ಸುಮಾರು 17 ಮಂದಿ ಗಾಯಗೊಂಡಿದ್ದಾರೆ. ಅಲ್ಲದೇ ಗಾಯಗೊಂಡವರ ಸ್ಥಿತಿ ಗಂಭೀರವಾಗಿದೆ ಎಂದು ಸ್ಥಳೀಯ ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.

    ಇದು ಭಯೋತ್ಪಾದಕರು ನಡೆಸಿರುವ ಕೃತ್ಯವೋ ಎಂಬ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಬಸ್ಸಿನಲ್ಲಿ 35 ಜನ ಪ್ರಯಾಣಿಕರಿದ್ದರು ಎಂದು ಬಸ್ ಚಾಲಕ ತಿಳಿಸಿದ್ದಾರೆ. ಸದ್ಯ ಘಟನೆಯಲ್ಲಿ ಗಾಯಗೊಂಡವರ ಸಂಖ್ಯೆ 18ಕ್ಕೇರಿದ್ದು, ಅವರಲ್ಲಿ ಓರ್ವ ಮಹಿಳೆ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎಂದು ವೊರೊನೆಜ್ ಗವರ್ನರ್ ಅಲೆಕ್ಸಾಂಡರ್ ಗುಸೆವ್ ಹೇಳಿದ್ದಾರೆ.

    ಬಸ್ ಶಾಪಿಂಗ್ ಸೆಂಟರ್ ಬಳಿ ಇರುವ ನಿಲ್ದಾಣದಲ್ಲಿ ಸ್ಫೋಟಗೊಂಡಿದ್ದು, ದಾರಿಹೋಕರೊಬ್ಬರು ತಮ್ಮ ಮೊಬೈಲ್‍ನಲ್ಲಿ ವೀಡಿಯೋ ಮಾಡಿ, ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ವೀಡಿಯೋದಲ್ಲಿ ಬಸ್ ಸ್ಫೋಟಗೊಂಡು ಮೇಲ್ಛಾವಣಿ ಹಾಗೂ ಕಿಟಕಿಗಳು ಕಿತ್ತುಹೋಗುವುದನ್ನು ಕಾಣಬಹುದಾಗಿದೆ. ಇದನ್ನೂ ಓದಿ:BJP ಜೊತೆಗೆ ಟ್ವಿಟ್ಟರ್ ಕೈಜೋಡಿಸಿ ಪ್ರಜಾತಂತ್ರ ಹತ್ತಿಕ್ಕುವ ಕೃತ್ಯದಲ್ಲಿ ತೊಡಗಿದೆ: ಪ್ರಿಯಾಂಕಾ ಗಾಂಧಿ

  • ಪ್ರವಾಸಿಗರನ್ನು ಹೊತ್ತೊಯ್ಯುತ್ತಿದ್ದ ಹೆಲಿಕಾಪ್ಟರ್ ಪತನ – 8 ಮಂದಿ ನಾಪತ್ತೆ

    ಪ್ರವಾಸಿಗರನ್ನು ಹೊತ್ತೊಯ್ಯುತ್ತಿದ್ದ ಹೆಲಿಕಾಪ್ಟರ್ ಪತನ – 8 ಮಂದಿ ನಾಪತ್ತೆ

    ಮಾಸ್ಕೋ: ಮೂವರು ಸಿಬ್ಬಂದಿ ಹಾಗೂ 13 ಮಂದಿ ಪ್ರವಾಸಿಗರನ್ನು ಕರೆದೊಯ್ಯುತ್ತಿದ್ದ Mi-8 ಹೆಲಿಕಾಪ್ಟರ್ ರಷ್ಯಾದ ಕಮ್ಚಟ್ಕಾ ಪ್ರದೇಶದಲ್ಲಿ ಪತನಗೊಂಡಿದೆ.

    ಮೂಲಗಳ ಪ್ರಕಾರ ಹೆಲಿಕಾಪ್ಟರ್‌ನಲ್ಲಿದ್ದ 8 ಮಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಮತ್ತು ಉಳಿದ ಎಂಟು ಮಂದಿ ನಾಪತ್ತೆಯಾಗಿದ್ದಾರೆ. ನಾಪತ್ತೆಯಾದವರಿಗಾಗಿ ಹುಡುಕಾಟ ನಡೆಸಲಾಗುತ್ತಿದ್ದು, ತಕ್ಷಣಕ್ಕೆ ಅವರ ಬಗ್ಗೆ ಯಾವುದೇ ಮಾಹಿತಿ ಲಭ್ಯವಿಲ್ಲ.

    ಆಗಸ್ಟ್ 12ರ ಬುಧವಾರ ಕ್ರೊನೊಟ್ಸ್ಕಿ ನೇಚರ್ ರೀಸರ್ವ್ ಬಳಿ ವಿಟಜ್-ಏರೋ ವಿಮಾನಯಾನ ಸಂಸ್ಥೆಯ Mi-8 ಹೆಲಿಕಾಪ್ಟರ್ ಅಪಘಾತಕ್ಕೀಡಾಗಿದೆ ಎಂಬ ಮಾಹಿತಿ ದೊರೆತಿದೆ ಎಂದು ರಷ್ಯಾದ ತುರ್ತು ಸಚಿವಾಲಯ ತಿಳಿಸಿದೆ. ಸದ್ಯ ಕಮ್ಚಟ್ಕಾದ ಗವರ್ನರ್ ವ್ಲಾಡಿಮಿರ್ ಸೊಲೊಡೋವ್ ಅಪಘಾತ ಸ್ಥಳಕ್ಕೆ ವೈದ್ಯಕೀಯ ಹಾಗೂ ತುರ್ತು ಸೇವಾ ಸಿಬ್ಬಂದಿಯೊಟ್ಟಿಗೆ ಭೇಟಿ ನೀಡಿದ್ದರು. ಜೊತೆಗೆ ಪ್ರಾದೇಶಿಕ ಅಭಿಯೋಜಕರು ವಿಮಾನ ಸುರಕ್ಷತಾ ನಿಯಮಗಳ ಉಲ್ಲಂಘನೆಯ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

    ಅಪಘಾತಕ್ಕೀಡಾದ ಹೆಲಿಕಾಪ್ಟರ್‌ನನ್ನು 37 ವರ್ಷಗಳ ಹಿಂದೆ ನಿರ್ಮಾಣ ಮಾಡಲಾಗಿದ್ದು, ಇತ್ತೀಚೆಗಷ್ಟೇ ಈ ಹೆಲಿಕಾಪ್ಟರ್ ನಿರ್ವಹಿಸಲು ಉತ್ತಮ ಸ್ಥಿತಿಯಲ್ಲಿದೆ ಎಂದು ತಿಳಿಸಲಾಗಿತ್ತು. ಇದನ್ನೂ ಓದಿ:ವಿದ್ಯುತ್ ಕಂಬಕ್ಕೆ ಬೈಕ್ ಡಿಕ್ಕಿ – ಸವಾರ ಸ್ಥಳದಲ್ಲಿಯೇ ಸಾವು

  • ಟ್ರಾಫಿಕ್ ಪೊಲೀಸ್ ಮನೆಯಲ್ಲಿ ಚಿನ್ನದ ಶೌಚಾಲಯ

    ಟ್ರಾಫಿಕ್ ಪೊಲೀಸ್ ಮನೆಯಲ್ಲಿ ಚಿನ್ನದ ಶೌಚಾಲಯ

    ರಷ್ಯಾ: ಟ್ರಾಫಿಕ್ ಪೊಲೀಸ್‍ ಭವ್ಯವಾದ ಬಂಗಲೆ, ಮನೆಯಲ್ಲಿ ಚಿನ್ನದ ಶೌಚಾಲಯವನ್ನು ಕಂಡು ತನಿಖಾ ಅಧಿಕಾರಿಗಳು ಶಾಕ್ ಆಗಿರುವ ಘಟನೆ ರಷ್ಯಾದಲ್ಲಿ ನಡೆದಿದೆ.

    ರಷ್ಯಾದ ಸಂಚಾರ ಪೊಲೀಸ್ ಮುಖ್ಯಸ್ಥ ಕರ್ನಲ್ ಅಲೆಕ್ಸಿ ಸಪೊನೊವ್ ವಿರುದ್ಧ ಭ್ರಷ್ಟಚಾರದ ಆರೋಪ ಕೇಳಿ ಬಂದಿತ್ತು. ಕೂಡಲೇ ಪೊಲೀಸ್ ತನಿಖಾ ತಂಡವೊಂದು ಇವರ ಮನೆ ಮೇಲೆ ದಾಳಿ ನಡೆಸಿದೆ. ಈ ವೇಳೆ ಭವ್ಯ ಬಂಗಲೆ, ಬಂಗಾರದ ಶೌಚಾಲಯ ಇರುವುದು ತಿಳಿದು ಬಂದಿದೆ. ಇದನ್ನೂ ಓದಿ: ಸಚಿವ ಸ್ಥಾನಕ್ಕಾಗಿ ಬಿಎಸ್‍ವೈ ನಿವಾಸದಲ್ಲಿ ಶಾಸಕರ ಲಾಬಿ

    ಈ ಐಷಾರಾಮಿ ಬಂಗಲೆಯಲ್ಲಿ ಕೋಟ್ಯಂತರ ರೂಪಯಿ ಮೌಲ್ಯದ ಚಿನ್ನದ ಶೌಚಾಲಯ, ದುಬಾರಿ ಅಲಂಕಾರಿಕ ವಸ್ತುಗಳು ಪತ್ತೆಯಾಗಿವೆ. ಮನೆಯ ನೆಲಹಾಸನ್ನು ಅಮೃತಶಿಲೆಗಳಿಂದ ವಿನ್ಯಾಸಮಾಡಲಾಗಿದೆ. ತನಿಖಾ ಅಧಿಕಾರಿಗಳು ಮನೆಯಲ್ಲಿರುವ ಕೆಲವು ಬೆಲೆ ಬಾಳುವ ವಸ್ತು, ಕೆಲವು ದಾಖಲೆಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ತನಿಖಾ ತಂಡ, ಪ್ರಕರಣ ಸಂಬಂಧ ಕರ್ನಲ್ ಅಲೆಕ್ಸಿ ಸಪೊನೊವ್ ಸೇರಿದಂತೆ ಆರು ಮಂದಿಯನ್ನು ಬಂಧಿಸಿದ್ದಾರೆ.

  • ಜೋಕಾಲಿಯಿಂದ 6,300 ಅಡಿ ಕೆಳಗೆ ಬಿದ್ದ ಮಹಿಳೆಯರು- ವೀಡಿಯೋ ವೈರಲ್

    ಜೋಕಾಲಿಯಿಂದ 6,300 ಅಡಿ ಕೆಳಗೆ ಬಿದ್ದ ಮಹಿಳೆಯರು- ವೀಡಿಯೋ ವೈರಲ್

    ಮಾಸ್ಕೋ: ಜೋಕಾಲಿಯಾಡುತ್ತಿದ್ದ ವೇಳೆ ಮಹಿಳೆಯರಿಬ್ಬರು ಬೆಟ್ಟದ ಮೇಲ್ಭಾಗದಿಂದ ಕೆಳಗೆ ಬಿದ್ದಿರುವ ಅಪಾಯಕಾರಿ ವೀಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

    ಈ ಘಟನೆ ರಷ್ಯಾದ ರಿಪಬ್ಲಿಕ್ ಆಫ್ ಡಾಗೆಸ್ತಾನ್‍ನ ಸುಲಕ್ ಕ್ಯಾನ್ಯನ್ ನಲ್ಲಿ ನಡೆದಿದ್ದು, ವೀಡಿಯೋದಲ್ಲಿ ಇಬ್ಬರು ಮಹಿಳೆಯರು ಬೆಟ್ಟದ ತುದಿಯಲ್ಲಿ ಜೋಕಾಲಿಯಾಡುತ್ತಿರುವುದನ್ನು ಕಾಣಬಹುದಾಗಿದೆ.

    ಇಬ್ಬರು ಮಹಿಳೆಯರು ಜೋಕಾಲಿ ಆಡಬೇಕೆಂದು ನಿರ್ಧರಿಸಿ ಜೋಕಾಲಿ ಮೇಲೆ ಕುಳಿತುಕೊಂಡಾಗ ಹಿಂದಿನಿಂದ ವ್ಯಕ್ತಿಯೊಬ್ಬರು ಜೋಕಾಲಿಯನ್ನು ತಳ್ಳುತ್ತಿರುತ್ತಾರೆ. ಈ ವೇಳೆ ಇದ್ದಕ್ಕಿದಂತೆ ಜೋಕಾಲಿ ತಿರುಗಿ ಇಬ್ಬರು 6,300 ಅಡಿಯಿಂದ ಕೆಳಗೆ ಬಿದ್ದಿದ್ದಾರೆ. ಸದ್ಯ ಅದೃಷ್ಟವಶತ್ ಇಬ್ಬರಿಗೂ ಸಣ್ಣ-ಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.

    ಮಹಿಳೆಯರಿಬ್ಬರು ಘಟನೆ ವೇಳೆ ಗಾಬರಿಯಾಗಿದ್ದು, ಅಷ್ಟು ಎತ್ತರದಿಂದ ಬಿದ್ದಿದ್ದರೂ ಸದ್ಯ ಇಬ್ಬರಿಗೂ ಯಾವುದೇ ಅನಾಹುತ ಸಂಭವಿಲ್ಲ ಹಾಗೂ ಯಾವುದೇ ಗಂಭೀರ ಗಾಯಗಳಾಗಿಲ್ಲ. ಜೋಕಾಲಿಯಾಡುವ ವೇಳೆ ಬೇಕಾದ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದ ಕಾರಣ ಮಹಿಳೆಯರು ಬಿದ್ದಿದ್ದಾರೆ ಎಂದು ಡಾಗೆಸ್ತಾನ್ ಪ್ರವಾಸೋದ್ಯಮ ಸಚಿವಾಲಯ ತಿಳಿಸಿದೆ. ಇದನ್ನೂ ಓದಿ:ಇಂಜಿನೀಯರ್ ಬಾಳಿಗೆ ಆಸರೆಯಾದ ನರೇಗಾ – ಹೆಚ್ಚಿನ ವಿದ್ಯಾಭ್ಯಾಸಕ್ಕೆ ಕೂಲಿ ಹಣ ಬಳಕೆ

  • ರಷ್ಯಾ ಪ್ರವಾಸದೊಂದಿಗೆ ಲಸಿಕೆ – ಏನಿದು ವ್ಯಾಕ್ಸಿನ್ ಟೂರಿಸಂ? ಬೆಲೆ ಎಷ್ಟು?

    ರಷ್ಯಾ ಪ್ರವಾಸದೊಂದಿಗೆ ಲಸಿಕೆ – ಏನಿದು ವ್ಯಾಕ್ಸಿನ್ ಟೂರಿಸಂ? ಬೆಲೆ ಎಷ್ಟು?

    ನವದೆಹಲಿ: ಭಾರತದಲ್ಲಿ ಲಸಿಕೆ ಕೊರತೆ ಕಾಡುತ್ತಿರುವ ಬೆನ್ನಲ್ಲೇ ಹಲವು ಭಾರತೀಯರು ವಿದೇಶದಲ್ಲಿ ಲಸಿಕೆ ಹಾಕಿಸಿಕೊಂಡು ಬರಲು ಯೋಜನೆ ರೂಪಿಸುತ್ತಿದ್ದಾರೆ. ಇದರ ಬೆನ್ನಲ್ಲೇ ರಷ್ಯಾ ಭರ್ಜರಿ ಆಫರ್ ನೀಡಿದ್ದು, ಲಸಿಕೆ ಪ್ರವಾಸೋದ್ಯಮದ ಪರಿಕಲ್ಪನೆಯನ್ನು ಜಾರಿಗೆ ತಂದಿದೆ.

    ದೆಹಲಿಯ ಟ್ರಾವೆಲ್ ಏಜೆನ್ಸಿಯೊಂದು ವ್ಯಾಕ್ಸಿನ್ ಟೂರಿಸಂ ಪ್ಯಾಕೇಜ್ ಘೊಷಿಸಿದೆ. ಇದರಲ್ಲಿ 24 ದಿನಗಳ ರಷ್ಯಾ ಪ್ರವಾಸ ಸೇರಿದಂತೆ ರಷ್ಯಾದ ಸ್ಪುಟ್ನಿಕ್-ವಿ ಲಸಿಕೆಯ ಎರಡೂ ಡೋಸ್ ಹಾಕಿಸಿಕೊಳ್ಳಬಹುದಾಗಿದೆ. ಎರಡೂ ಡೋಸ್ ವ್ಯಾಕ್ಸಿನ್ ಪಡೆಯಲು 21 ದಿನಗಳ ಅಂತರವಿದ್ದು, ಈ ಸಮಯದಲ್ಲಿ ಪ್ರಯಾಣಿಕರು ರಷ್ಯಾ ಪ್ರವಾಸ ಮಾಡಬಹುದಾಗಿದೆ. 24 ದಿನಗಳ ಈ ಪ್ರವಾಸಕ್ಕೆ 1.29 ಲಕ್ಷ ರೂ. ದರವನ್ನು ನಿಗದಿ ಮಾಡಲಾಗಿದೆ.

    ಟ್ರಾವೆಲ್ ಏಜೆನ್ಸಿ ಅಧಿಕಾರಿಯ ಹೇಳಿಕೆಯನ್ನಾಧರಿಸಿ ಈ ಕುರಿತು ವರದಿ ಮಾಡಲಾಗಿದ್ದು, ಮಾಸ್ಕೋದಲ್ಲಿ ಲ್ಯಾಂಡ್ ಆದ ಮರುದಿನವೇ ಪ್ರಯಾಣಿಕರಿಗೆ ಸ್ಪುಟ್ನಿಕ್-ವಿ ಲಸಿಕೆಯ ಮೊದಲ ಡೋಸ್ ನೀಡಲಾಗುತ್ತದೆ. ಬಳಿಕ 2ನೇ ಡೋಸ್ ಲಸಿಕೆ ಪಡೆಯಲು 21 ದಿನಗಳ ಅಂತರವಿದ್ದು, ಈ ವೇಳೆ ರಷ್ಯಾ ಪ್ರವಾಸ ಮಾಡಬಹುದು. 2ನೇ ಡೋಸ್ ಲಸಿಕೆ ಪಡೆದು, ಭಾರತಕ್ಕೆ ಮರಳಬಹುದಾಗಿದೆ.

    ವಿಶ್ವದ ಮೊದಲ ಕೊರೊನಾ ವ್ಯಾಕ್ಸಿನ್ ಅಭಿವೃದ್ಧಿ ಪಡಿಸಿರುವುದಾಗಿ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ 2020ರ ಆಗಸ್ಟ್ 11 ರಂದು ಘೋಷಿಸಿದ್ದರು. ಪುಟಿನ್ ಪುತ್ರಿ ಮರಿಯಾ ಪುಟಿನ್‍ಗೆ ಮೊದಲ ಸ್ಪುಟ್ನಿಕ್ ಲಸಿಕೆ ನೀಡಲಾಗಿತ್ತು. ಉತ್ತಮ ಪರಿಣಾಮ ಬೀರಿದ್ದು, ಸಮೃದ್ಧವಾಗಿ ಆಂಟಿಬಾಡಿಗಳು(ಪ್ರತಿಕಾಯಗಳು) ಉತ್ಪತ್ತಿಯಾಗಿ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಿ ಸೋಂಕನ್ನು ನಿಯಂತ್ರಣಕ್ಕೆ ಈ ಲಸಿಕೆ ತರುತ್ತದೆ ಎಂದು ವರದಿಯಾಗಿದೆ. ಮಾಸ್ಕೋದಲ್ಲಿರುವ ಸೆಚನೋವ್ ವಿವಿಯ ಗಮಾಲಿಯಾ ಸಂಶೋಧನಾ ಕೇಂದ್ರ ಮತ್ತು ರಷ್ಯಾ ರಕ್ಷಣಾ ಸಚಿವಾಲಯ ಈ ಲಸಿಕೆಯನ್ನು ಅಭಿವೃದ್ಧಿ ಪಡಿಸಿದೆ.

  • ರಾಯಚೂರು ಮೂಲದ ಕಂಪನಿಯಿಂದ ಕೋವಿಡ್ ಲಸಿಕೆ ಉತ್ಪಾದನೆ

    ರಾಯಚೂರು ಮೂಲದ ಕಂಪನಿಯಿಂದ ಕೋವಿಡ್ ಲಸಿಕೆ ಉತ್ಪಾದನೆ

    – ಸ್ಪುಟ್ನಿಕ್ ವಿ ಲಸಿಕೆ ತಯಾರಿಕೆಗೆ ರಷ್ಯಾ ಜೊತೆ ಒಪ್ಪಂದ
    – ವರ್ಷಕ್ಕೆ 100 ಮಿಲಿಯನ್ ಡೋಸ್ ಉತ್ಪಾದನೆಗೆ ಯೋಜನೆ
    – ಎರಡು ತಿಂಗಳಲ್ಲಿ ರಾಜ್ಯದಲ್ಲೇ ತಯಾರಾಗಲಿದೆ ಲಸಿಕೆ

    ರಾಯಚೂರು: ರಷ್ಯಾ ಮೂಲದ ಸ್ಪುಟ್ನಿಕ್ ವಿ ಕೋವಿಡ್ ಲಸಿಕೆ ಇನ್ನು ಮುಂದೆ ರಾಜ್ಯದಲ್ಲೇ ತಯಾರಾಗಲಿದೆ. ರಾಯಚೂರು ಮೂಲದ ಶಿಲ್ಪಾ ಮೆಡಿಕೇರ್ ಲಿಮಿಟೆಡ್ ಕಂಪನಿ ರಾಜ್ಯದಲ್ಲಿ ಲಸಿಕೆ ಉತ್ಪಾದಿಸಲಿದೆ. ಲಸಿಕೆಯ ಭಾರತೀಯ ಮಾರುಕಟ್ಟೆ ಭಾಗೀದಾರ ಕಂಪನಿ ಡಾ.ರೆಡ್ಡಿಸ್ ಲ್ಯಾಬೋರೇಟರಿಸ್ ಜೊತೆ ಮಾತುಕತೆ ಪೂರ್ಣಗೊಂಡಿದ್ದು ಶಿಲ್ಪಾ ಮೆಡಿಕೇರ್ ಲಿಮಿಟೆಡ್ ಫಾರ್ಮಾ ಕಂಪನಿ ಲಸಿಕೆ ಉತ್ಪಾದನೆಗೆ ಒಪ್ಪಂದ ಮಾಡಿಕೊಂಡಿದೆ.

    ಬೇಡಿಕೆಗೆ ಅನುಗುಣವಾಗಿ ಲಸಿಕೆ ಪೂರೈಕೆ ಹಾಗೂ ಬೆಲೆ ತಗ್ಗಿಸಲು ದೇಶಿಯ ಕಂಪನಿಗಳೊಂದಿಗೆ ಲಸಿಕೆ ಉತ್ಪಾದನೆಗಾಗಿ ರಷಿಯನ್ ಡೈರೆಕ್ಟ್ ಇನ್ವೆಸ್ಟ್‍ಮೆಂಟ್ ಫಂಡ್(ಆರ್‌ಡಿಐಎಫ್) 6 ಭಾರತೀಯ ಫಾರ್ಮಾ ಕಂಪನಿಗಳೊಂದಿಗೆ ಒಪ್ಪಂದ ಮಾಡಿಕೊಂಡಿದೆ. ರಾಯಚೂರಿನ ಶಿಲ್ಪಾ ಮೆಡಿಕೇರ್ ಲಿ, ಹೆಟೆರೋ ಡ್ರಗ್ಸ್, ವರ್ಚೊ ಲ್ಯಾಬೋರೇಟರಿಸ್, ಪನಾಸಿಯಾ ಬಯೋಟೆಕ್, ಗ್ಲ್ಯಾಂಡ್ ಫಾರ್ಮಾ ಮತ್ತು ಸ್ಟೆಲ್ಲಿಸ್ ಬಯೋಫಾರ್ಮಾ ಜೊತೆ ಒಪ್ಪಂದ ಮಾಡಿಕೊಳ್ಳಲಾಗಿದೆ.

    ಶಿಲ್ಪಾ ಮೆಡಿಕೇರ್ ಲಿಮಿಟೆಡ್ ತನ್ನ ಧಾರವಾಡದ ಯುನಿಟ್‍ನಲ್ಲಿ ಲಸಿಕೆ ಉತ್ಪಾದನೆಗೆ ತಯಾರಿ ನಡೆಸಿದೆ. ಧಾರವಾಡದ ಯುನಿಟ್ ವರ್ಷಕ್ಕೆ 100 ರಿಂದ 200 ಮಿಲಿಯನ್ ಡೋಸ್ ಲಸಿಕೆ ಉತ್ಪಾದನಾ ಸಾಮಥ್ರ್ಯ ಹೊಂದಿದ್ದು. 100 ಮಿಲಿಯನ್ ಡೋಸ್ ತಯಾರಿಕೆ ಗುರಿಯಿಟ್ಟುಕೊಳ್ಳಲಾಗಿದೆ. ಮುಂದಿನ ಎರಡು ತಿಂಗಳಲ್ಲಿ ಮೊದಲ ಡೋಸ್ ಲಸಿಕೆ ತಯಾರಾಗಲಿದೆ ಅಂತ ಶಿಲ್ಪಾ ಮೆಡಿಕೇರ್ ಲಿಮಿಟೆಡ್ ಕಂಪನಿ ವ್ಯವಸ್ಥಾಪಕ ನಿರ್ದೇಶಕ ವಿಷ್ಣುಕಾಂತ್ ಬತೋಡ ತಿಳಿಸಿದ್ದಾರೆ.

    ಈಗಾಗಲೇ ರಷ್ಯಾದಿಂದ ಭಾರತಕ್ಕೆ ಎರಡು ಬ್ಯಾಚ್ ಸ್ಪುಟ್ನಿಕ್ ವಿ ಲಸಿಕೆ ಬಂದಿದೆ. ಮೇ 1 ರಂದು 1.5 ಲಕ್ಷ ಡೋಸ್ ಮೊದಲ ಬ್ಯಾಚ್, ಮೇ 14 ರಂದು 60 ಸಾವಿರ ಡೋಸ್ ಎರಡನೇ ಬ್ಯಾಚ್ ಸ್ಪುಟ್ನಿಕ್ ವಿ ಲಸಿಕೆ ಭಾರತಕ್ಕೆ ಬಂದಿದ್ದು, ಹೈದರಾಬಾದ್‍ನ ಡಾ.ರೆಡ್ಡಿಸ್ ಲ್ಯಾಬ್ ಲಸಿಕೆ ಪಡೆದುಕೊಂಡಿದೆ. ಒಂದು ಡೋಸ್‍ನ ಬೆಲೆ 995 ರೂ ಇದ್ದು, ಜನ ಸಾಮಾನ್ಯರಿಗೆ ದುಬಾರಿಯಾಗಲಿದೆ. ಹೀಗಾಗಿ ಆರ್‌ಡಿಐಎಫ್ ಜೊತೆ ಒಪ್ಪಂದ ಮಾಡಿಕೊಂಡಿರುವ ರೆಡ್ಡಿಸ್ ಲ್ಯಾಬ್ ಸ್ಥಳೀಯವಾಗಿ ಉತ್ಪಾದನೆಗೆ ಒತ್ತುನೀಡಿದ್ದು. ದೇಶಿಯ 6 ಕಂಪನಿಗಳಿಗೆ ಲಸಿಕೆ ತಯಾರಿಕೆಗೆ ಅವಕಾಶ ಮಾಡಿಕೊಟ್ಟಿದೆ.

    ಶೇಕಡಾ 15 ರಷ್ಟು ಪ್ರಮಾಣದ ಲಸಿಕೆಯನ್ನು ರಷ್ಯಾದಿಂದ ಆಮದು ಮಾಡಿಕೊಂಡು, ಉಳಿದ ಬೇಡಿಕೆಯನ್ನು ಪೂರೈಸಲು ದೇಶಿಯ ಕಂಪನಿಗಳಲ್ಲೇ ಲಸಿಕೆ ತಯಾರಿಸಲು ಯೋಜಿಸಲಾಗಿದೆ. ಶಿಲ್ಪಾ ಮೆಡಿಕೇರ್ ಲಿಮಿಟೆಡ್ ಸುಸಜ್ಜಿತ ಲಸಿಕೆ ತಯಾರಿಕೆ ಘಟಕವನ್ನು ಧಾರವಾಡದಲ್ಲಿ ಹೊಂದಿದ್ದು ಶೀಘ್ರದಲ್ಲೇ ಕಾರ್ಯಾರಂಭಿಸಲಿದೆ.