Tag: ರಷ್ಯಾ

  • ಡಾಲರ್‌ಗೆ ಗುದ್ದು ಕೊಡಲು ʻಬ್ರಿಕ್ಸ್‌ʼ ಕರೆನ್ಸಿ – ಭಾರತಕ್ಕೆ ಏನು ಲಾಭ?

    ಡಾಲರ್‌ಗೆ ಗುದ್ದು ಕೊಡಲು ʻಬ್ರಿಕ್ಸ್‌ʼ ಕರೆನ್ಸಿ – ಭಾರತಕ್ಕೆ ಏನು ಲಾಭ?

    ಇತ್ತೀಚೆಗೆ ವಿಶ್ವದ ದೊಡ್ಡಣ್ಣ ಅಮೆರಿಕದ 47ನೇ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಡೊನಾಲ್ಡ್‌ ಟ್ರಂಪ್‌ (Donald Trump) ತನ್ನ ದೇಶದ ಏಳಿಗೆಗಾಗಿ ವಿದೇಶಗಳಿಗೆ ತೆರಿಗೆ ವಿಧಿಸುವ ಕಾರ್ಯಕಾರಿ ಆದೇಶಕ್ಕೆ ಸಹಿ ಹಾಕಿದರು. ಈ ಬೆನ್ನಲ್ಲೇ ಅಮೆರಿಕನ್ನು ಕುಗ್ಗಿಸಲು ಬ್ರಿಕ್ಸ್‌ ರಾಷ್ಟ್ರಗಳ ಒಕ್ಕೂಟ ಪ್ಲ್ಯಾನ್‌ ಮಾಡಿವೆ.

    ಹೌದು. ಕಳೆದ ಅಕ್ಟೋಬರ್‌ 22 ರಿಂದ 24 ರವರೆಗೆ ರಷ್ಯಾದಲ್ಲಿ ನಡೆದ ಬ್ರಿಕ್ಸ್‌ (BRICS) ಶೃಂಗಸಭೆಯಲ್ಲಿ ಹಲವು ದೇಶಗಳ ಮಧ್ಯೆ ಹಲವು ಒಪ್ಪಂದಗಳಿಗೆ ಮಾತುಕತೆ ನಡೆದಿತ್ತು. ಈ ಎಲ್ಲಾ ಒಪ್ಪಂದಗಳ ಮಧ್ಯೆ ಹೆಚ್ಚು ಗಮನ ಸೆಳೆದ ವಿಚಾರ ಯಾವುದು ಎಂದರೆ ʻಡಿ ಡಾಲರೈಸೇಶನ್‌ʼ. ಡಾಲರ್‌ ಅಂದರೆ ಅಮೆರಿಕದ ಕರೆನ್ಸಿ ಎಂದು ಎಲ್ಲರಿಗೂ ಗೊತ್ತಿದೆ, ಅದು ವಿಶ್ವದ ಕರೆನ್ಸಿಯೂ ಆಗಿದೆ. ವಿಶ್ವದ ಎಲ್ಲಾ ವ್ಯವಹಾರಗಳು ಡಾಲರ್‌ನಲ್ಲೇ ನಡೆಯುತ್ತಿದೆ. ಹಾಗಾಗಿ ಡಾಲರ್‌ ಮಾನ್ಯತೆ ತಗ್ಗಿಸುವ ಪ್ರಯತ್ನಕ್ಕೆ ಬಿಕ್ಸ್‌ ಒಕ್ಕೂಟ ಮುಂದಾಗಿವೆ. ಹಾಗಾಗಿ ಭಾರತ, ರಷ್ಯಾ ಮತ್ತಿತರ ಬ್ರಿಕ್ಸ್‌ ರಾಷ್ಟ್ರಗಳು ವ್ಯವಹಾರಗಳಲ್ಲಿ ಸ್ಥಳೀಯ ಕರೆನ್ಸಿಗಳನ್ನೇ ಬಳಸಲು ಈ ಶೃಂಗಸಭೆಯಲ್ಲಿ ತೀರ್ಮಾನಿಸಲಾಗಿತ್ತು. ಅಷ್ಟೇ ಅಲ್ಲದೇ ಬ್ರಿಕ್ಸ್‌ ಕರೆನ್ಸಿಯೊಂದನ್ನು (BRICS currency) ತರಲು ಸಿದ್ಧತೆ ಕೂಡ ನಡೆದಿತ್ತು.

    ಬ್ರಿಕ್ಸ್‌ ಒಕ್ಕೂಟ ಡಾಲರ್‌ಗೆ ಸೆಡ್ಡು ಹೊಡೆಯಲು ಯೋಜನೆ ರೂಪಿಸಿದ ಬೆನ್ನಲ್ಲೇ ಟ್ರಂಪ್‌ ವಿದೇಶಗಳಿಗೆ ಶೇ.100 ರಷ್ಟು ಸುಂಕ ವಿಧಿಸುವ ಎಚ್ಚರಿಕೆ ನೀಡಿದ್ದರು. ಈ ಬೆನ್ನಲ್ಲೇ ಭಾರತದ ವಿದೇಶಾಂಗ ಸಚಿವ ಎಸ್‌. ಜೈಶಂಕರ್‌ ಡಾಲರ್‌ಗೆ ಪ್ರತಿಯಾಗಿ ಯಾವುದೇ ಕರೆನ್ಸಿ ತರಲು ʻಬ್ರಿಕ್ಸ್‌ʼ ಸಿದ್ಧವಾಗಿಲ್ಲ ಎಂದು ಹೇಳಿದ್ದರು. ಟ್ರಂಪ್‌ ವಿದೇಶಗಳಿಗೆ ತೆರಿಗೆ ವಿಧಿಸುವ ಕಾರ್ಯಕಾರಿ ಆದೇಶಕ್ಕೆ ಸಹಿ ಹಾಕುತ್ತಿದ್ದಂತೆ ಮತ್ತೆ ʻಡಿ ಡಾಲರೈಸೇಷನ್‌ʼ ವಿಚಾರ ಮುನ್ನೆಲೆಗೆ ಬಂದಿದೆ.

    ಎಲ್ಲದಕ್ಕಿಂತ ಮುಖ್ಯವಾಗಿ ಅಮೆರಿಕವನ್ನು ಮಣಿಸಲು ಎದುರುನೋಡುತ್ತಿರುವ ಚೀನಾ ಈ ವಿಚಾರದಲ್ಲಿ ಹೆಚ್ಚು ಉತ್ಸುಕವಾಗಿದೆ. ಅದಕ್ಕಾಗಿ ಭಾರತ, ಬ್ರೆಜಿಲ್‌, ದಕ್ಷಿಣ ಆಫ್ರಿಕಾ ಹಾಗೂ ರಷ್ಯಾ ಜೊತೆಗೂ ಮಾತುಕತೆ ನಡೆಸಿದೆ. ಭಿನ್ನಾಭಿಪ್ರಾಯಗಳನ್ನು ಸೌಹಾರ್ಧಯುತವಾಗಿ ಕೆಲಸ ಮಾಡಲು ಚೀನಾ ʻಬ್ರಿಕ್ಸ್‌ʼಗೆ ಕರೆ ನೀಡಿದೆ ಎಂಬುದಾಗಿ ಫೆಡರೇಶನ್ ಆಫ್ ಇಂಡಿಯನ್ ಎಕ್ಸ್‌ಪೋರ್ಟ್ ಆರ್ಗನೈಸೇಶನ್ಸ್ (FIEO) ನ ಮಹಾನಿರ್ದೇಶಕ ಮತ್ತು ಸಿಇಒ ಅಜಯ್ ಸಹಾಯ್ ಹೇಳಿದ್ದಾರೆ. ಅಷ್ಟಕ್ಕೂ ಇಲ್ಲಿ ಡಿ-ಡಾಲರೈಸೇಶನ್‌ ಬಂದಿದ್ದು ಯಾಕೆ? ಡಿ- ಡಾಲರೈಸೇಶನ್‌ನಿಂದ ಜಾಗತಿಕ ಆರ್ಥಿಕತೆಯಲ್ಲಾಗುವ ಬದಲಾವಣೆಯೇನು? ಭಾರತಕ್ಕೆ ಆಗುವ ಲಾಭ ಮತ್ತು ನಷ್ಟಗಳೇನು? ಎಂಬುದನ್ನು ತಿಳಿಯಲು ಮುಂದೆ ಓದಿ….

    ಏನಿದು ಬ್ರಿಕ್ಸ್‌?

    ಬ್ರಿಕ್ಸ್’ (BRICS) ಎಂಬುದು ಬ್ರೆಜಿಲ್, ರಷ್ಯಾ, ಇಂಡಿಯಾ, ಚೀನಾ ಮತ್ತು ದಕ್ಷಿಣ ಆಫ್ರಿಕಾ ಎಂಬುದರ ಸಂಕ್ಷಿಪ್ತ ರೂಪ. ಜಾಗತಿಕವಾದ ಆರ್ಥಿಕ ಅಭಿವೃದ್ಧಿ ಮತ್ತು ಸಹಕಾರಗಳಿಗೆ ಸಂಬಂಧಿಸಿದಂತೆ ಬೆಳೆಯುತ್ತಿರುವ ಆರ್ಥಿಕ ಶಕ್ತಿಗಳ ನಡುವಿನ ಮೈತ್ರಿಕೂಟವನ್ನು ಇದು ಪ್ರತಿನಿಧಿಸುತ್ತದೆ. ಮೊದಲ ಶೃಂಗಸಭೆಯು 2009 ರಲ್ಲಿ ರಷ್ಯಾದ ಒಕ್ಕೂಟದಲ್ಲಿ ನಡೆದಿತ್ತು. ಆಗ ಜಗತ್ತಿನಾದ್ಯಂತ 20ಕ್ಕೂ ಹೆಚ್ಚು ರಾಷ್ಟ್ರಗಳು ಬ್ರಿಕ್ಸ್‌ನ ಸದಸ್ಯತ್ವವನ್ನು ಕೋರಿ ಅರ್ಜಿಗಳನ್ನು ಸಲ್ಲಿಸಿದ್ದರೆ, ಇತರ 15ಕ್ಕೂ ಹೆಚ್ಚು ದೇಶಗಳು ಬ್ರಿಕ್ಸ್‌ನ ಭಾಗವಾಗುವ ಆಸಕ್ತಿಯನ್ನು ವ್ಯಕ್ತಪಡಿಸಿದ್ದವು.

    ಡಾಲರ್‌ ವಿಶ್ವದ ಕರೆನ್ಸಿಯಾಗಿದ್ದು ಹೇಗೆ?

    ʻಡಿ-ಡಾಲರೈಸೇಶನ್ʼ ಬಗ್ಗೆ ತಿಳಿದುಕೊಳ್ಳುವ ಮೊದಲು ಡಾಲರ್‌ ವಿಶ್ವದ ಕರೆನ್ಸಿಯಾಗಿದ್ದು ಹೇಗೆ ಅಂತ ನೋಡೋಣ… ಡಾಲರ್‌ ವಿಶ್ವದ ಕರೆನ್ಸಿಯಾಗಿ ಹೊರ ಹೊಮ್ಮಿದ್ದು ಹೇಗೆ ಎನ್ನುವುದಕ್ಕೆ ಮೂರು ಪ್ರಮುಖ ಕಾರಣ ನೀಡಬಹುದು.

    1. 2ನೇ ಮಹಾಯುದ್ಧದ ಸಮಯದಲ್ಲಿ ವಿಶ್ವದಲ್ಲೇ ಅಮೆರಿಕದಲ್ಲಿ ಚಿನ್ನ ಸಂಗ್ರಹ ಜಾಸ್ತಿ ಇತ್ತು. ಅಷ್ಟೇ ಅಲ್ಲದೇ ಆರ್ಥಿಕವಾಗಿಯೂ, ಮಿಲಿಟರಿ ಎಲ್ಲಾ ಕ್ಷೇತ್ರದಲ್ಲಿ ಅಮೆರಿಕ ಪವರ್‌ಫುಲ್‌ ದೇಶವಾಗಿ ಹೊರಹೊಮ್ಮಿತ್ತು. ಈ ಕಾರಣಕ್ಕೆ 1944 ರಲ್ಲಿ Bretton Woods ಒಪ್ಪಂದಕ್ಕೆ ಸಹಿ ಹಾಕಿದ ಪರಿಣಾಮ ಡಾಲರ್‌ನಲ್ಲೇ ವ್ಯವಹಾರ ನಡೆಸಲು ಅಮೆರಿಕದ ಮಿತ್ರ ಪಡೆಗಳು ಒಪ್ಪಿಕೊಂಡಿದ್ದವು.

    2. ಎರಡನೇ ಕಾರಣ ಕಚ್ಚಾ ತೈಲದ ಜೊತೆಗಿನ ಡಾಲರ್‌ ಒಪ್ಪಂದ. 2ನೇ ಮಹಾಯುದ್ಧದ ಬಳಿಕ ತನ್ನಲ್ಲಿರುವ ತೈಲ ಬಾವಿಗಳ ಮೇಲೆ ಬಾಂಬ್‌ ದಾಳಿಯಾಗಬಹುದು ಎಂಬ ಹೆದರಿಕೆ ಸೌದಿ ಅರೇಬಿಯಾಗಿ ಆಯ್ತು. ಈ ವೇಳೆ ಸೌದಿ ಸಹಾಯಕ್ಕೆ ಅಮೆರಿಕ ಬಂತು. ನಿಮ್ಮ ಎಲ್ಲಾ ಕಚ್ಚಾ ತೈಲ ಘಟಕಗಳಿಗೆ ನಾವು ರಕ್ಷಣೆ ನೀಡುತ್ತೇವೆ, ಆದರೆ ವ್ಯವಹಾರವನ್ನು ಡಾಲರ್‌ನಲ್ಲೇ ಮಾಡಬೇಕು ಎಂದು ಷರತ್ತು ವಿಧಿಸಿತು. ಈ ಷರತ್ತಿಗೆ ಸೌದಿ ಒಪ್ಪಿ 1974ರಲ್ಲಿ ಸಹಿ ಹಾಕಿತು. ಇದರ ಪರಿಣಾಮ ಈಗಲೂ ಕಚ್ಚಾ ತೈಲ ವ್ಯವಹಾರ ಡಾಲರ್‌ನಲ್ಲೇ ನಡೆಯುತ್ತಿದೆ.

    3. ಮೂರನೇ ಕಾರಣ ಸ್ವಿಫ್ಟ್‌ ಬ್ಯಾಂಕ್‌ ನೆಟ್‌ವರ್ಕ್‌. Bretton Woods ಒಪ್ಪಂದವನ್ನು ಅಮೆರಿಕ ರದ್ದುಗೊಳಿಸಿದ ನಂತರ 1973ರಲ್ಲಿ ಬೆಲ್ಜಿಯಂನಲ್ಲಿ Society for Worldwide Interbank Financial Telecommunications ಅಥವಾ SWIFT ಜನ್ಮ ತಾಳಿತು. ಇದು ಅಂತಾರಾಷ್ಟ್ರೀಯ ನಗದು ವ್ಯವಹಾರಗಳ ಸಂಸ್ಥೆಯಾಗಿದ್ದು, ವಿವಿಧ ದೇಶಗಳ ನಡುವೆ ವೇಗವಾಗಿ ನಗದು ವ್ಯವಹಾರ ನಡೆಯಲು ನೆರವಾಗುವಂತಹ ವ್ಯವಸ್ಥೆ ಸ್ವಿಫ್ಟ್‌ನಲ್ಲಿದೆ.

    ಇಲ್ಲೂ ಡಾಲರನ್ನೇ ಯಾಕೆ ಪರಿಗಣಿಸಿಲಾಯಿತು ಎನ್ನುವುದಕ್ಕೂ ಕಾರಣವಿದೆ. ಈ ಸಂದರ್ಭದಲ್ಲಿ ಅಮೆರಿಕ ಮತ್ತು ರಷ್ಯಾ ಮಧ್ಯೆ ಶೀತಲ ಸಮರ ನಡೆಯುತ್ತಿತ್ತು. ಭವಿಷ್ಯದಲ್ಲಿ ಯುರೋಪ್‌ ದೇಶಗಳ ಮೇಲೆ ಯಾರೇ ಆಕ್ರಮಣ ಮಾಡಿದರೂ ನಾನು ರಕ್ಷಣೆ ನೀಡುತ್ತೇನೆ ಎಂದು ಅಮೆರಿಕ ಭರವಸೆ ನೀಡಿತ್ತು. ಈ ಕಾರಣಕ್ಕೆ ಯುರೋಪ್‌ ರಾಷ್ಟ್ರಗಳು ಸ್ವಿಫ್ಟ್‌ ನೀತಿಯನ್ನು ಒಪ್ಪಿಕೊಂಡವು. ಈ ಎಲ್ಲಾ ಕಾರಣದಿಂದ ಏನೂ ಮಾಡದೇ ರಾಜತಾಂತ್ರಿಕ ಪ್ರಭಾವ ಬಳಸಿ ಮೀಸಲು ನಿಧಿಯಿಂದಾಗಿ ಅಮೆರಿಕ ವಿಶ್ವದಲ್ಲೇ ಅತಿ ದೊಡ್ಡ ಆರ್ಥಿಕತೆ ಹೊಂದಿದ ದೇಶವಾಗಿ ಹೊರಹೊಮ್ಮಿತ್ತು.

    ಡಿ-ಡಾಲರೈಸೇಶನ್‌ ಬಂದಿದ್ದು ಯಾಕೆ?

    ಡಿ-ಡಾಲರೈಸೇಶನ್‌ ಬಂದಿದ್ದು ಯಾಕೆ ಎನ್ನುವ ಪ್ರಶ್ನೆಗೆ ಉತ್ತರ ʻರಷ್ಯಾ-ಉಕ್ರೇನ್‌ ಯುದ್ಧʼ. ಉಕ್ರೇನ್‌ ಮೇಲೆ ದಾಳಿ ನಡೆಸಿದ್ದಕ್ಕೆ ಪ್ರತೀಕಾರವಾಗಿ ಅಮೆರಿಕ ಮತ್ತು ಯುರೋಪ್‌ ರಷ್ಯಾವನ್ನು ಸ್ವಿಫ್ಟ್‌ ಬ್ಯಾಂಕ್‌ ನೆಟ್‌ವರ್ಕ್‌ನಿಂದ ಹೊರಗಿಟ್ಟಿತು. ಅಮೆರಿಕ ರಷ್ಯಾದ ಡಾಲರ್‌ ಖಾತೆಯನ್ನು ಫ್ರೀಜ್‌ ಮಾಡಿತು. ಪರಿಣಾಮ ರಷ್ಯಾಗೆ ಡಾಲರ್‌ನಲ್ಲಿ ಆಮದು ಮತ್ತು ರಫ್ತು ಮಾಡಲು ಸಾಧ್ಯವಾಗಲಿಲ್ಲ. ದಿಢೀರ್‌ ನೀಡಿದ ಶಾಕ್‌ನಿಂದ ರಷ್ಯಾಗೆ ಬಹಳ ಸಮಸ್ಯೆಯಾಯಿತು. ಯಾವಾಗ ರಷ್ಯಾವನ್ನು ಸ್ವಿಫ್ಟ್‌ ಬ್ಯಾಂಕ್‌ನಿಂದ ಹೊರಗಡೆ ಇಡಲಾಯಿತೋ ಆವಾಗ ಅಭಿವೃದ್ಧಿ ಹೊಂದುತ್ತಿರುವ ದೇಶಗಳು ತಮ್ಮದೇ ಕರೆನ್ಸಿಯಲ್ಲಿ ವ್ಯವಹಾರ ನಡೆಸಲು ಆಸಕ್ತಿ ತೋರಿಸಿದವು. ಯಾಕೆಂದರೆ ಮುಂದೊಮ್ಮೆ ಅಮೆರಿಕ ಮತ್ತು ಯುರೋಪ್‌ ರಾಷ್ಟ್ರಗಳ ವಿರೋಧ ಕಟ್ಟಿಕೊಂಡರೆ ನಮ್ಮ ರಾಷ್ಟ್ರವನ್ನು ಸ್ವಿಫ್ಟ್‌ ಬ್ಯಾಂಕ್ ನೆಟ್‌ವರ್ಕ್‌ನಿಂದ ಹೊರಗಡೆ ಇಡುವುದಿಲ್ಲ ಎನ್ನುವುದಕ್ಕೆ ಗ್ಯಾರಂಟಿ ಏನು? ಈ ಕಾರಣಕ್ಕೆ ಈಗ ಬ್ರಿಕ್ಸ್‌ ಕರೆನ್ಸಿ ತರಲು ಮಾತುಕತೆ ನಡೆಸುತ್ತಿದೆ.

    ಬ್ರಿಕ್ಸ್‌ ಕರೆನ್ಸಿ ಹೇಗಿರುತ್ತೆ?

    ಬ್ರಿಕ್ಸ್‌ ಕರೆನ್ಸಿಯ ಪ್ರಸ್ತಾಪವನ್ನು 2022ರ ಶೃಂಗಸಭೆಯಲ್ಲಿ ರಷ್ಯಾ ಮೊದಲು ಪ್ರಸ್ತಾಪಿಸಲಾಗಿತ್ತು. ನಂತರದ ದಿನಗಳಲ್ಲಿ ಡಾಲರ್‌ ಯಾಕೆ ವಿಶ್ವದ ಕರೆನ್ಸಿಯಾಗಬೇಕು ಎಂಬ ವಿಚಾರಗಳು ಚರ್ಚೆಗೆ ಬಂತು. ನಂತರ ಭಾರತ ರಷ್ಯಾ, ಚೀನಾ, ಬ್ರೆಜಿಲ್‌ಗಳು ರಷ್ಯಾದ ಜೊತೆ ಸ್ಥಳೀಯ ಕರೆನ್ಸಿಯಲ್ಲೇ ವ್ಯವಹಾರ ನಡೆಸುತ್ತಿದೆ. ಇತ್ತೀಚೆಗೆ ಕಾಜಾನ್‌ನಲ್ಲಿ ನಡೆದ ಶೃಂಗಸಭೆಯಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಅವರು ಬ್ರಿಕ್ಸ್‌ ನೋಟ್‌ ಹಿಡಿದುಕೊಂಡಿದ್ದರು. ಈ ನೋಟು ದೊಡ್ಡ ಸುದ್ದಿಯಾಗುತ್ತಿದ್ದಂತೆ ಬ್ರಿಕ್ಸ್‌ ಕರೆನ್ಸಿಯ ಬಗ್ಗೆ ಚರ್ಚೆ ಹೆಚ್ಚಾಯಿತು. ಆ ಬಳಿಕ ಕಳವಳಗೊಂಡಿದ್ದ ಟ್ರಂಪ್‌ ಅಧಿಕಾರ ಸ್ವೀಕಾರಕ್ಕೂ ಮೊದಲೇ 100% ಸುಂಕ ವಿಧಿಸುವ ಎಚ್ಚರಿಕೆ ಕೊಟ್ಟಿದ್ದರು.

    ಈಗ ಚರ್ಚೆ ಆಗುತ್ತಿರುವ ಬ್ರಿಕ್ಸ್‌ ಕರೆನ್ಸಿ ಡಿಜಿಟಲ್‌ ಕರೆನ್ಸಿ ಆಗಿದ್ದು ಬ್ಲಾಕ್‌ಚೈನ್ ಆಧಾರಿತ ಪಾವತಿ ವ್ಯವಸ್ಥೆ ಇರಲಿದೆ ಎಂದು ವರದಿಯಾಗಿದೆ. ಸದ್ಯ ಈಗ ಇಂಟರ್‌ನ್ಯಾಷನ್‌ ಹಣಕಾಸಿನ ಗೇಟ್‌ವೇ ಯಾವುದು ಅಂದರೆ ಸಿಫ್ಟ್‌ ಬ್ಯಾಂಕಿಂಗ್‌ ನೆಟ್‌ವರ್ಕ್‌. ಇದೇ ರೀತಿಯ ನೆಟ್‌ವರ್ಕ್‌ ಒಂದನ್ನು ಸ್ಥಾಪಿಸಲು ಬ್ರಿಕ್ಸ್‌ ರಾಷ್ಟ್ರಗಳು ಮುಂದಾಗುತ್ತಿವೆ. ಸದ್ಯಕ್ಕೆ ಈ ಬ್ರಿಕ್ಸ್‌ ಕರೆನ್ಸಿ ಮಾತುಕತೆಯ ಹಂತದಲ್ಲಿದೆ ಅಷ್ಟೇ. ಟ್ರಂಪ್‌ ಕಾರ್ಯಕಾರಿ ಆದೇಶಕ್ಕೆ ಸಹಿ ಹಾಕಿದ ನಂತರ ಚೀನಾ ಈ ವಿಚಾರದಲ್ಲಿ ಹೆಚ್ಚು ಉತ್ಸುಕವಾಗಿದೆ.

    ಸದ್ಯ ಒಂದೊಂದು ದೇಶಗಳಲ್ಲಿ ಒಂದೊಂದು ಕರೆನ್ಸಿ ಇದೆ. ಬ್ರೆಜಿಲ್‌ನಲ್ಲಿ ʻರಿಯಾಲ್‌ʼ, ರಷ್ಯಾದಲ್ಲಿ ʻರುಬೆಲ್‌ʼ, ಭಾರತದಲ್ಲಿ ʻರೂಪಾಯಿʼ, ಚೀನಾದಲ್ಲಿ ʻಯುವಾನ್‌ʼ, ದಕ್ಷಿಣ ಆಫ್ರಿಕಾದಲ್ಲಿ ʻರಾಂಡ್‌ʼ ಇದೆ. ಒಂದೊಂದು ದೇಶದಲ್ಲಿ ಒಂದೊಂದು ಕರೆನ್ಸಿ ಇರುವ ಕಾರಣ ಎಲ್ಲ ದೇಶಗಳಿಗೆ ಒಂದು ದೇಶದ ಕರೆನ್ಸಿಯನ್ನು ಅಪ್ಲೈ ಮಾಡಲು ಸಾಧ್ಯವಾಗುವುದಿಲ್ಲ. ಇದಕ್ಕಾಗಿ ಹೊಸ ಕರೆನ್ಸಿ ಬರಬೇಕು. ಇದಕ್ಕಾಗಿ ʻಬ್ರಿಕ್ಸ್‌ʼ ಮುಂದಾಗಿದೆ. ಆದ್ರೆ ಬ್ರಿಕ್ಸ್‌ ಕರೆನ್ಸಿ ಹೇಗಿರಲಿದೆ ಅನ್ನೋದು ಇಲ್ಲಿಯವರೆಗೆ ಅಧಿಕೃತವಾಗಿ ತಿಳಿದುಬಂದಿಲ್ಲ.

    ಭಾರತಕ್ಕೆ ಏನು ಲಾಭ?

    ಸದ್ಯ ಈಗ ವಿಶ್ವದಲ್ಲಿ ಎಲ್ಲಿಯಾದರೂ ಯುದ್ಧ, ಅಮೆರಿಕದ ಫೆಡರಲ್‌ ರಿಸರ್ವ್‌ ಕೈಗೊಳ್ಳುವ ನಿರ್ಧಾರದಿಂದ ಡಾಲರ್‌ ಮೌಲ್ಯ ಏರಿಳಿತವಾಗುತ್ತದೆ. ಡಾಲರ್‌ ಮೌಲ್ಯ ಏರಿಕೆಯಾದರೆ ಭಾರತ ಆಮದು ಮಾಡಿಕೊಳ್ಳುವ ವಸ್ತುಗಳ ಬೆಲೆ ಜಾಸ್ತಿಯಾಗುತ್ತದೆ. ಇದರ ನೇರ ಪರಿಣಾಮ ಗ್ರಾಹಕರಿಗೆ ತಟ್ಟುತ್ತದೆ. ವಸ್ತುಗಳ ಬೆಲೆ ಏರಿಕೆಯಾಗುತ್ತದೆ. ಭಾರತ ಸದ್ಯ ಅತಿ ಹೆಚ್ಚು ಆಮದು ಮಾಡಿಕೊಳ್ಳುವ ವಸ್ತು ಯಾವುದು ಎಂದರೆ ಕಚ್ಚಾ ತೈಲ. ಕಚ್ಚಾ ತೈಲವನ್ನು ಪೂರೈಸುವ 3 ದೊಡ್ಡ ರಾಷ್ಟ್ರಗಳಾದ ರಷ್ಯಾ, ಯುಎಇ, ಇರಾನ್‌ ಬ್ರಿಕ್ಸ್‌ ಸದಸ್ಯ ದೇಶಗಳಾಗಿವೆ. ಹೀಗಾಗಿ ಡಾಲರ್‌ ಬದಲು ಬ್ರಿಕ್ಸ್‌ ಕರೆನ್ಸಿಯಲ್ಲಿ ವ್ಯವಹಾರ ನಡೆಸಿದರೆ ಅಗ್ಗದಲ್ಲಿ ತೈಲ ಸಿಗಲಿದೆ.

    ಅಮೆರಿಕ, ಪಾಶ್ಚಿಮಾತ್ಯ ದೇಶಗಳಿಗೆ ಬೀಳುತ್ತಾ ಗುದ್ದು?

    2ನೇ ಮಹಾಯುದ್ಧದ ನಂತರ ಯುಎಸ್‌ಎಸ್‌ಆರ್‌ ಮತ್ತು ಯುಎಸ್‌ಎ ಮಧ್ಯೆ ಶೀತಲ ಸಮರ ಆರಂಭವಾಯಿತು. ಈ ನಡುವೆ ಪಾಶ್ಚಿಮಾತ್ಯ ದೇಶಗಳು ಅಭಿವೃದ್ಧಿಯಾದವು. ಇದೆಲ್ಲದರ ಪರಿಣಾಮ ಅಮೆರಿಕ ಮತ್ತು ಪಾಶ್ಚಿಮಾತ್ಯ ದೇಶಗಳು ಏಷ್ಯಾ, ದಕ್ಷಿಣ ಆಫ್ರಿಕಾ ಮತ್ತು ದಕ್ಷಿಣ ಅಮೆರಿಕದ ಮೇಲೆ ತಮ್ಮ ಪ್ರಭಾವ ಬೀರಲು ಆರಂಭಿಸಿದವು. ಅವರಿಗೆ ಏನಾದರೂ ಸಮಸ್ಯೆಯಾದರೆ ಅದು ಜಾಗತಿಕ ಸಮಸ್ಯೆ ಆಗುತ್ತದೆ. ಅದೇ ಬೇರೆ ದೇಶಗಳಲ್ಲಿ ಯಾವುದಾದರೂ ಸಮಸ್ಯೆಯಾದರೆ ಅದು ಸಮಸ್ಯೆ ಅಲ್ಲ ಎಂದು ಭಾವಿಸುತ್ತದೆ. ಬಹುತೇಕ ಸಂದರ್ಭದಲ್ಲಿ ಅಮೆರಿಕದ ಹೇಳಿದ ಮಾತುಗಳೇ ಫೈನಲ್‌ ಆಗುತ್ತವೆ. ಬೇರೆ ದೇಶಗಳು ತಿರುಗಿ ಬಿದ್ದರೆ ಅವುಗಳ ಮೇಲೆ ನಿರ್ಬಂಧ ಹೇರುತ್ತವೆ. ಇಲ್ಲಿಯವರೆಗೆ ಈ ರೀತಿ ಮಾಡಿಯೇ ಬೆದರಿಸುತ್ತಿದ್ದವು. ಆದರೆ ಇನ್ನು ಮುಂದೆ ಈ ಬೆದರಿಕೆಗಳಿಗೆ ಬಗ್ಗುವುದಿಲ್ಲ ಎಂದು ಬ್ರಿಕ್ಸ್‌ ದೇಶಗಳು ಸಂದೇಶ ಸಾರಿವೆ.

    ಸದ್ಯ ಹೊಸ ಕರೆನ್ಸಿ ವಿಚಾರದಲ್ಲಿ ಈಗಾಗಲೇ ರಷ್ಯಾ, ಬ್ರೆಜಿಲ್‌, ದಕ್ಷಿಣಾ ಆಫ್ರಿಕಾದ ಒಪ್ಪಿಗೆ ಸೂಚಿಸಿದ್ದು, ಭಾರತದ ನಿಲುವಿಗಾಗಿ ಚೀನಾ ಕಾಯುತ್ತಿದೆ. ಒಟ್ಟಿನಲ್ಲಿ ಬ್ರಿಕ್ಸ್‌ ಒಕ್ಕೂಟ ಮತ್ತಷ್ಟು ಬಲಗೊಂಡರೆ ಅಮೆರಿಕ ಮತ್ತು ಪಾಶ್ಚಿಮಾತ್ಯ ದೇಶಗಳ ಏಕಸ್ವಾಮ್ಯಕ್ಕೆ ಪೆಟ್ಟು ಬೀಳುವುದು ನಿಶ್ಚಿತ.

  • ಯುದ್ಧವನ್ನು ಕೊನೆಗೊಳಿಸದಿದ್ದರೆ ಮತ್ತಷ್ಟು ನಿರ್ಬಂಧ, ಸುಂಕ – ಪುಟಿನ್‌ಗೆ ಟ್ರಂಪ್‌ ಬೆದರಿಕೆ

    ಯುದ್ಧವನ್ನು ಕೊನೆಗೊಳಿಸದಿದ್ದರೆ ಮತ್ತಷ್ಟು ನಿರ್ಬಂಧ, ಸುಂಕ – ಪುಟಿನ್‌ಗೆ ಟ್ರಂಪ್‌ ಬೆದರಿಕೆ

    ವಾಷಿಂಗ್ಟನ್‌: ಉಕ್ರೇನ್ (Ukraine) ವಿರುದ್ಧ ಮೂರು ವರ್ಷಗಳಿಂದ ನಡೆಯುತ್ತಿರುವ ಯುದ್ಧವನ್ನು ಕೊನೆಗೊಳಿಸದೇ ಇದ್ದರೆ ರಷ್ಯಾದ (Russia) ಮೇಲೆ ಹೆಚ್ಚಿನ ನಿರ್ಬಂಧ ಮತ್ತು ಆಮದು ಮಾಡಿಕೊಳ್ಳುವ ವಸ್ತುಗಳ ಮೇಲೆ ಹೆಚ್ಚಿನ ಸುಂಕ ವಿಧಿಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ (Donald Trump) ಬೆದರಿಕೆ ಹಾಕಿದ್ದಾರೆ

    ಅಧ್ಯಕ್ಷ ಪದವಿ ಸ್ವೀಕರಿಸಿದ ಮೂರನೇ ದಿನವೇ ತಮ್ಮ ಸಾಮಾಜಿಕ ಜಾಲತಾಣ ಮಾಧ್ಯಮ ಟ್ರುಥ್‌ನಲ್ಲಿ ಟ್ರಂಪ್‌ ಅವರು ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ (Vladimir Putin) ಹೆಸರನ್ನು ಉಲ್ಲೇಖಿಸಿಯೇ ಪೋಸ್ಟ್‌ ಮಾಡಿದ್ದಾರೆ.

    ನಾವು ಒಪ್ಪಂದ ಮಾಡಿಕೊಳ್ಳದಿದ್ದರೆ ಶೀಘ್ರವೇ ಅಮೆರಿಕ ಮತ್ತು ಇತರ ದೇಶಗಳಿಗೆ ಮಾರಾಟ ಮಾಡುವ ರಷ್ಯಾದ ಯಾವುದೇ ವಸ್ತುವಿನ ಮೇಲೆ ಹೆಚ್ಚಿನ ತೆರಿಗೆ ವಿಧಿಸುವುದನ್ನು ಬಿಟ್ಟು ನನಗೆ ಬೇರೆ ದಾರಿಯಿಲ್ಲ ಎಂದು ಬರೆದಿದ್ದಾರೆ.

    ನಾನು ಅಧ್ಯಕ್ಷನಾಗಿದ್ದರೆ ಈ ಯುದ್ಧ ಆರಂಭಿಸಲು ಬಿಡುತ್ತಿರಲಿಲ್ಲ. ಈಗ ನಾವು ಕೊನೆಗೊಳಿಸೋಣ. ಈಗ ಒಪ್ಪಂದ ಮಾಡಿಕೊಳ್ಳುವ ಸಮಯವಿದು. ಇನ್ನು ಮುಂದೆ ಯಾವುದೇ ಯುದ್ಧಕ್ಕೆ ಜನರು ಬಲಿಯಾಗಬಾರದು ಎಂದಿದ್ದಾರೆ. ಇದನ್ನೂ ಓದಿ: ಜನ್ಮತಃ ಪೌರತ್ವ ಕಾಯ್ದೆ ರದ್ದತಿಗೆ ಅಮೆರಿಕದಲ್ಲೇ ಆಕ್ರೋಶ – 18,000 ಭಾರತೀಯರು ಗಡಿಪಾರಾಗ್ತಾರಾ?

    ನಾನು ರಷ್ಯಾವನ್ನು ನೋಯಿಸಲು ಬಯಸುವುದಿಲ್ಲ. ನಾನು ರಷ್ಯಾದ ಜನರನ್ನು ಪ್ರೀತಿಸುತ್ತೇನೆ ಮತ್ತು ಅಧ್ಯಕ್ಷ ಪುಟಿನ್ ಅವರೊಂದಿಗೆ ಯಾವಾಗಲೂ ಉತ್ತಮ ಸಂಬಂಧವನ್ನು ಹೊಂದಿದ್ದೇನೆ. ಎರಡನೇ ಮಹಾಯುದ್ಧವನ್ನು ಗೆಲ್ಲಲು ರಷ್ಯಾ ನಮಗೆ ಸಹಾಯ ಮಾಡಿತ್ತು. ಈ ಯುದ್ಧದಲ್ಲಿ ಸುಮಾರು 6 ಕೋಟಿ ಜನರು ಪ್ರಾಣಕಳೆದುಕೊಂಡರು ಎಂಬುದನ್ನು ಮರೆಯಬಾರದು ಎಂದರು.

    ನಾನು ಚುನಾವಣೆಯಲ್ಲಿ ಗೆದ್ದರೆ ರಷ್ಯಾ ಉಕ್ರೇನ್‌ ಯುದ್ಧವನ್ನು ಕೊನೆಗೊಳಿಸುತ್ತೇನೆ ಎಂದು ಡೊನಾಲ್ಡ್‌ ಟ್ರಂಪ್‌ ಅವರು ತಮ್ಮ ಚುನಾವಣಾ ಪ್ರಚಾರದಲ್ಲಿ ಪದೇ ಪದೇ ಹೇಳುತ್ತಿದ್ದರು.

  • ರಷ್ಯಾದ ತೈಲ ವ್ಯಾಪಾರದ ಮೇಲೆ ಬೈಡೆನ್‌ ಹೊಸ ನಿರ್ಬಂಧ – ಭಾರತಕ್ಕೆ ಬೀಳುತ್ತಾ ಹೊಡೆತ?

    ರಷ್ಯಾದ ತೈಲ ವ್ಯಾಪಾರದ ಮೇಲೆ ಬೈಡೆನ್‌ ಹೊಸ ನಿರ್ಬಂಧ – ಭಾರತಕ್ಕೆ ಬೀಳುತ್ತಾ ಹೊಡೆತ?

    ಮೆರಿಕದ ಅಧ್ಯಕ್ಷ ಸ್ಥಾನಕ್ಕೆ ವಿದಾಯ ಹೇಳುವ ಹೊತ್ತಿನಲ್ಲೇ ಜೋ ಬೈಡೆನ್ (Joe Biden) ರಷ್ಯಾದ ಮೇಲೆ ಗಧಾಪ್ರಹಾರ ಮಾಡಿದ್ದಾರೆ. ಉಕ್ರೇನ್ ಮೇಲೆ ಯುದ್ಧ ನಡೆಸುತ್ತಿರುವ ರಷ್ಯಾವನ್ನು ಆರ್ಥಿಕವಾಗಿ ಮತ್ತಷ್ಟು ಕುಗ್ಗಿಸಲು ಹೊಸ ನಿರ್ಬಂಧಗಳನ್ನು ವಿಧಿಸಿದ್ದಾರೆ. ಜಗತ್ತಿನಲ್ಲೇ ಅತಿ ದೊಡ್ಡ ತೈಲ ರಫ್ತುದಾರ ರಾಷ್ಟçಗಳಲ್ಲಿ ರಷ್ಯಾವು ಒಂದು. ಈ ರಾಷ್ಟ್ರವನ್ನು ತೈಲ ವ್ಯಾಪಾರದಲ್ಲೇ ಕಟ್ಟಿಹಾಕಲು ಬೈಡೆನ್ ಮುಂದಾಗಿದ್ದಾರೆ. ಈ ನಿಟ್ಟಿನಲ್ಲಿ ಅಮೆರಿಕ ಹಾಕಿರುವ ನಿರ್ಬಂಧ ಸಹಜವಾಗಿ ರಷ್ಯಾದ ಗೆಳೆಯರಂತೆಯೇ ಇರುವ ಚೀನಾ ಮತ್ತು ಭಾರತದ ಮೇಲೂ ಪರಿಣಾಮ ಬೀರಿದೆ. ವಿಶ್ವದ ದೊಡ್ಡಣ್ಣನ ವರ್ತನೆಗೆ ಈ ಎರಡೂ ರಾಷ್ಟçಗಳು ಅಸಮಾಧಾನಗೊಂಡಿವೆ. ಪ್ರಮುಖ ಸಂಪನ್ಮೂಲವಾಗಿರುವ ತೈಲ ಆಮದಿಗೆ ಭಾರತ, ಚೀನಾ ಮುಂದೇನು ಮಾಡುತ್ತವೆ ಎಂಬುದು ಸದ್ಯದ ಕುತೂಹಲ.

    ರಷ್ಯಾದ (Russia) ಮೇಲೆ ಅಮೆರಿಕ ವಿಧಿಸಿರುವ ಹೊಸ ನಿರ್ಬಂಧಗಳೇನು? ಜೋ ಬೈಡೆನ್ ನಿರ್ಬಂಧ ಹೇರಿದ್ಯಾಕೆ? ಇದರಿಂದ ಚೀನಾ, ಭಾರತದ ಮೇಲಾಗುವ ಪರಿಣಾಮಗಳೇನು?.. ಎಂಬಿತ್ಯಾದಿ ಪ್ರಶ್ನೆಗಳಿಗೆ ಮಾಹಿತಿ ಇಲ್ಲಿದೆ.

    ರಷ್ಯಾದ ತೈಲ ಉತ್ಪಾದಕರು, ಟ್ಯಾಂಕರ್‌ಗಳಿಗೆ ನಿರ್ಬಂಧ
    ವಿಶ್ವದ ಎರಡನೇ ಅತಿದೊಡ್ಡ ತೈಲ ರಫ್ತುದಾರ ದೇಶ ರಷ್ಯಾ. ಈ ದೇಶದ 2 ತೈಲ ಉತ್ಪಾದಕರಾದ ಗಾಜ್‌ಪ್ರೊಮ್ ನೆಫ್ಟ್, ಸುರ್ಗುಟ್ನೆಫ್ಟೆಗಾಸ್ ಮತ್ತು ರಷ್ಯಾದ ತೈಲವನ್ನು ಸಾಗಿಸುವ 183 ಹಡಗುಗಳ ಮೇಲೆ ಯುಎಸ್ ಹೊಸ ನಿರ್ಬಂಧಗಳನ್ನು ಹೇರಿದೆ. ಕಳೆದ ವಾರ ನಿರ್ಬಂಧಗಳ ಕುರಿತು ಬೈಡೆನ್ ಘೋಷಣೆ ಮಾಡಿದ್ದಾರೆ. ಉಕ್ರೇನ್ ಮೇಲಿನ ಯುದ್ಧಕ್ಕೆ ರಷ್ಯಾಗೆ ಪ್ರಮುಖ ಆದಾಯ ಮೂಲವಾಗಿರುವ ಕ್ಷೇತ್ರವನ್ನೇ ಗುರಿಯಾಗಿಸಿ ಅಮೆರಿಕ ಈ ನಿರ್ಧಾರ ಪ್ರಕಟಿಸಿದೆ. ‘ರಷ್ಯಾದ ತೈಲ ಮತ್ತು ದ್ರವೀಕೃತ ನೈಸರ್ಗಿಕ ಅನಿಲ ವಲಯಗಳ ಮೇಲೆ ನಿರ್ಬಂಧ ಹೇರಲು ಇದು ಸಹಕಾರಿಯಾಗಲಿದೆ’ ಬೈಡೆನ್ ತಿಳಿಸಿದ್ದಾರೆ. ಈ ವಲಯಗಳು ರಷ್ಯಾದ ಆರ್ಥಿಕತೆಯ ಚಾಲಕರು ಎಂದು ಭಾವಿಸಲಾಗಿದೆ. ಅದಕ್ಕೆ ಕಡಿವಾಣ ಹಾಕುವುದೇ ಯುಎಸ್ ಉದ್ದೇಶವಾಗಿದೆ.

    ಭಾರತ-ಚೀನಾಗೆ ರಷ್ಯಾ ತೈಲ
    ಪಾಶ್ಚಿಮಾತ್ಯ ನಿರ್ಬಂಧಗಳು ಮತ್ತು 2022 ರಲ್ಲಿ ಗ್ರೂಪ್ ಆಫ್ ಸೆವೆನ್ ದೇಶಗಳು ಹೇರಿದ ಬೆಲೆಯ ಮಿತಿಯಿಂದಾಗಿ ಯೂರೋಪ್‌ನಿಂದ ಏಷ್ಯಾಗೆ ರಷ್ಯಾದ ತೈಲ ವ್ಯಾಪಾರವನ್ನು ಬದಲಾಯಿಸಲಾಗಿತ್ತು. ಆಗಿನಿಂದ ಹೆಚ್ಚಿನ ಟ್ಯಾಂಕರ್‌ಗಳನ್ನು ಭಾರತ (India) ಮತ್ತು ಚೀನಾಗೆ (China) ತೈಲ ರವಾನಿಸಲು ಬಳಸಲಾಯಿತು. ಕೆಲವು ಟ್ಯಾಂಕರ್‌ಗಳು ಇರಾನ್‌ನಿಂದ ತೈಲವನ್ನು ರವಾನಿಸಿದ್ದವು.

    ಭಾರತದ ಮೇಲೆ ಎಫೆಕ್ಟ್ ಏನು?
    ಬೈಡೆನ್ ಆಡಳಿತವು ವಿಧಿಸಿದ ಹೊಸ ನಿರ್ಬಂಧಗಳು, ರಷ್ಯಾದೊಂದಿಗೆ ವ್ಯವಹಾರದಲ್ಲಿ ತೊಡಗಿರುವ ಘಟಕಗಳನ್ನೂ ಟಾರ್ಗೆಟ್ ಮಾಡಿವೆ. ರಷ್ಯಾದ ಎರಡು ದೊಡ್ಡ ಗ್ರಾಹಕರಾದ ಭಾರತ ಮತ್ತು ಚೀನಾದೊಂದಿಗಿನ ತೈಲ ವ್ಯಾಪಾರಕ್ಕೆ ಅಡ್ಡಿಪಡಿಸಲಿದೆ. ಗಾಜ್‌ಪ್ರೊಮ್ ನೆಫ್ಟ್, ಸುರ್ಗುಟ್ನೆಫ್ಟೆಗಾಸ್ ದಿನಕ್ಕೆ 1 ಮಿಲಿಯನ್ ಬ್ಯಾರೆಲ್‌ಗಳಿಗಿಂತ ಹೆಚ್ಚು ತೈಲವನ್ನು ಉತ್ಪಾದಿಸುತ್ತವೆ. ಇದು ವರ್ಷಕ್ಕೆ 23 ಶತಕೋಟಿ ಡಾಲರ್ ಮೌಲ್ಯದ್ದಾಗಿದೆ. ಈ ಎರಡು ಕಂಪನಿಗಳ ಮೇಲಿನ ನಿರ್ಬಂಧಗಳು ಭಾರತ ಮತ್ತು ಚೀನಾದಲ್ಲಿನ ತೈಲ ಸಂಸ್ಕರಣಾಗಾರರ ಕಳವಳಕ್ಕೆ ಕಾರಣವಾಗಿವೆ.

    ಹೊಸ ನಿರ್ಬಂಧಗಳು ಭಾರತೀಯ ತೈಲ ಸಂಸ್ಕರಣಾಗಾರಗಳಿಗೆ ರಷ್ಯಾದ ಸರಬರಾಜನ್ನು ಸಂಪೂರ್ಣವಾಗಿ ಅಡ್ಡಿಪಡಿಸಲು ಸಾಧ್ಯವಿಲ್ಲ. ಆದರೆ, ಪರಿಣಾಮ ಬೀರುವುದಂತೂ ಖಚಿತ. ರಷ್ಯಾದ ಬದಲಿಗೆ ಪಶ್ಚಿಮ ಏಷ್ಯಾ ಮತ್ತು ಆಫ್ರಿಕನ್ ದೇಶಗಳಿಂದ ಹೆಚ್ಚಿನ ತೈಲವನ್ನು ಪಡೆಯಲು ಭಾರತೀಯ ಕಂಪನಿಗಳ ಮೇಲೆ ಒತ್ತಡ ಸೃಷ್ಟಿಯಾಗಲಿದೆ. ಅಮೆರಿಕದ ನಿರ್ಬಂಧಗಳು ತೈಲ ಬೆಲೆ ಹೆಚ್ಚಳಕ್ಕೆ ಕಾರಣವಾಗಬಹುದು. ಇದರಿಂದ ಎರಡೂ ದೇಶಗಳ ಸರಕು ಸಾಗಣೆ ವೆಚ್ಚ ಹೆಚ್ಚಳ ಆಗಬಹುದು.

    ಭಾರತದ ಪ್ಲ್ಯಾನ್ ಏನು?
    ಅಮೆರಿಕದ ನಿರ್ಬಂಧಗಳು ಭಾರತದ ಮೇಲೆ ತಕ್ಷಣದ ಪರಿಣಾಮ ಬೀರುವುದಿಲ್ಲ. ಮುಂದಿನ ಎರಡು ತಿಂಗಳಿಗೆ ಅಗತ್ಯವಿರುವ ಕಚ್ಚಾ ತೈಲವನ್ನು ಈಗಾಗಲೇ ಹಡಗುಗಳಲ್ಲಿ ಸಾಗಾಣಿಕೆಗೆ ಲೋಡ್ ಮಾಡಲಾಗಿದೆ. ಇದು ಭಾರತಕ್ಕೆ ಪೂರೈಕೆಯಾಗುವುದರಿಂದ, ತೈಲದ ಅಲಭ್ಯತೆಯಲ್ಲಿ ತಕ್ಷಣವೇ ಪರಿಣಾಮ ಬೀರುವುದಿಲ್ಲ ಎಂದು ಸರ್ಕಾರ ಹೇಳಿದೆ. ಜನವರಿ 10 ರ ಮೊದಲು ಕಾಯ್ದಿರಿಸಿದ ರಷ್ಯಾದ ತೈಲ ಸರಕುಗಳನ್ನು ನಿರ್ಬಂಧಗಳ ನಿಯಮಕ್ಕೆ ಅನುಗುಣವಾಗಿ ಬಂದರುಗಳಲ್ಲಿ ಬಿಡುಗಡೆ ಮಾಡಲು ಭಾರತಕ್ಕೆ ಅವಕಾಶ ನೀಡಲಾಗಿದೆ.

    ಯುನೈಟೆಡ್ ಸ್ಟೇಟ್ಸ್ ಮತ್ತು ಚೀನಾ ನಂತರ ಭಾರತವು ವಿಶ್ವದ ಮೂರನೇ ಅತಿದೊಡ್ಡ ಕಚ್ಚಾ ತೈಲ ಗ್ರಾಹಕವಾಗಿದೆ. ಹೀಗಾಗಿ, ಭಾರತವನ್ನು ತಲುಪಲು ರಷ್ಯಾ ಮಾರ್ಗಗಳನ್ನು ಕಂಡುಕೊಳ್ಳುತ್ತದೆ ಎಂದು ಭಾರತ ಸರ್ಕಾರದ ಅಧಿಕಾರಿಗಳು ಭಾವಿಸಿದ್ದಾರೆ. ಭಾರತದ ಕಂಪನಿಗಳು ಪಾಲನ್ನು ಹೊಂದಿರುವ ರಷ್ಯಾದ ವೋಸ್ಟಾಕ್ ತೈಲ ಯೋಜನೆಯ ಮೇಲೆ ಹೊಸ ಯುಎಸ್ ನಿರ್ಬಂಧಗಳ ಪರಿಣಾಮಗಳ ಬಗ್ಗೆ ಭಾರತ ಪರಿಶೀಲಿಸುತ್ತಿದೆ ಎಂದು ವರದಿಯಾಗಿದೆ.

    ಭಾರತದ ತೈಲ ಬೆಲೆಗಳ ಮೇಲೆ ಬೀಳುತ್ತಾ ಎಫೆಕ್ಟ್?
    ಎರಡು ತಿಂಗಳಲ್ಲಿ ವಿಂಡ್-ಡೌನ್ ಅವಧಿ (ಒಪ್ಪಂದದ ಅವಧಿ ಮುಗಿದ ನಂತರದ ದಿನಗಳು) ಮುಗಿದ ನಂತರವೇ ನಿರ್ಬಂಧಗಳ ಪರಿಣಾಮ ಕಂಡುಬರುವ ಸಾಧ್ಯತೆಯಿದೆ. ಆದರೆ, ಆಗಲೂ ಭಾರತಕ್ಕೆ ತೈಲ ಪೂರೈಕೆ ಸಮಸ್ಯೆಯಾಗುವುದಿಲ್ಲ. ಪೆಟ್ರೋಲಿಯಂ ರಫ್ತು ಮಾಡುವ ದೇಶಗಳ ಸಂಘಟನೆ (ಒಪೆಕ್) ದಿನಕ್ಕೆ 3 ಮಿಲಿಯನ್ ಬ್ಯಾರೆಲ್‌ಗಳ ಬಿಡಿ ಸಾಮರ್ಥ್ಯವನ್ನು ಹೊಂದಿದೆ. ಆದರೆ ಯುಎಸ್, ಕೆನಡಾ, ಬ್ರೆಜಿಲ್ ಮತ್ತು ಗಯಾನಾ ಮುಂತಾದ ಒಪೆಕ್ ಅಲ್ಲದ ಪೂರೈಕೆದಾರರು ಸುಲಭವಾಗಿ ಬ್ಯಾರೆಲ್‌ಗಳನ್ನು ಸೇರಿಸಬಹುದು.

    ತೈಲ ದರಗಳ ಹೆಚ್ಚಳವು ಹೆಚ್ಚು ಕಾಲ ಉಳಿಯಬಾರದು. ಮಧ್ಯಪ್ರಾಚ್ಯ ಪೂರೈಕೆದಾರರೊಂದಿಗೆ ಪೂರೈಕೆ ಒಪ್ಪಂದಗಳನ್ನು (2025/26 ವಾರ್ಷಿಕ ಒಪ್ಪಂದ) ಅಂತಿಮಗೊಳಿಸಲು ಮಾತುಕತೆಗೆ ಭಾರತೀಯ ರಿಫೈನರ್‌ಗಳು ಮುಂದಾಗಿದ್ದಾರೆ. ಮಾರುಕಟ್ಟೆಯನ್ನು ಅವಲಂಬಿಸಿ, ಅವರಿಂದ ಹೆಚ್ಚುವರಿ ಬ್ಯಾರೆಲ್‌ಗಳನ್ನು ಪಡೆದುಕೊಳ್ಳಬಹುದು.

    4 ತಿಂಗಳ ಗರಿಷ್ಠ ಮಟ್ಟಕ್ಕೆ ತೈಲ ಬೆಲೆ
    ಸೋಮವಾರ ತೈಲ ಬೆಲೆಗಳು 2% ನೊಂದಿಗೆ ನಾಲ್ಕು ತಿಂಗಳ ಗರಿಷ್ಠ ಮಟ್ಟಕ್ಕೆ ಏರಿಕೆ ಕಂಡಿದೆ. ರಷ್ಯಾದ ತೈಲದ ಮೇಲೆ ವ್ಯಾಪಕವಾದ ಯುಎಸ್ ನಿರ್ಬಂಧಗಳು ಭಾರತ ಮತ್ತು ಚೀನಾದಲ್ಲಿ ಖರೀದಿದಾರರಲ್ಲಿ, ಇತರ ಪೂರೈಕೆದಾರರನ್ನು ಹುಡುಕಲು ಒತ್ತಡ ಸೃಷ್ಟಿಸಿವೆ. ಬ್ರೆಂಟ್ ಫ್ಯೂಚರ್ಸ್ 1.25 ಡಾಲರ್ ಅಥವಾ 1.6% ನಷ್ಟು ಏರಿಕೆಯಾಗಿ ಬ್ಯಾರೆಲ್‌ಗೆ 81.01 ಡಾಲರ್‌ಗೆ ಸ್ಥಿರವಾಯಿತು. ಆದರೆ, ಯುಎಸ್ ವೆಸ್ಟ್ ಟೆಕ್ಸಾಸ್ ಇಂಟರ್ಮೀಡಿಯೇಟ್ (ಡಬ್ಲ್ಯೂಟಿಐ) ಕಚ್ಚಾ ತೈಲ 2.25 ಡಾಲರ್ ಅಥವಾ 2.9% ನಷ್ಟು ಏರಿಕೆಯಾಗಿ 78.82 ಕ್ಕೆ ಸ್ಥಿರವಾಯಿತು ಎಂದು ವರದಿಯಾಗಿದೆ.

    ರಷ್ಯಾ ಮೇಲಿನ ನಿರ್ಬಂಧದ ಪರಿಣಾಮಗಳೇನು?
    ಶುಕ್ರವಾರ ಯುಎಸ್ ಘೋಷಿಸಿದ ನಿರ್ಬಂಧಗಳು ರಷ್ಯಾದ ಇಂಧನ ವ್ಯಾಪಾರದ ಮೇಲೆ ಇನ್ನೂ ಹೆಚ್ಚು ಆಕ್ರಮಣಕಾರಿಯಾಗಿದೆ. ನೂತನ ಅಮೆರಿಕ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಅಧಿಕಾರ ವಹಿಸಿಕೊಂಡ ತಕ್ಷಣ ಉಕ್ರೇನ್ ಸಂಘರ್ಷವನ್ನು ತ್ವರಿತವಾಗಿ ಕೊನೆಗೊಳಿಸುವುದಾಗಿ ಪ್ರತಿಜ್ಞೆ ಮಾಡಿದ್ದಾರೆ. ಹೀಗಾಗಿ, ಬೈಡೆನ್ ಹೇರಿರುವ ನಿರ್ಬಂಧಗಳನ್ನು ಟ್ರಂಪ್ ಉಳಿಸಿಕೊಳ್ಳುತ್ತಾರಾ ಅಥವಾ ಕೈಬಿಡುತ್ತಾರಾ ಎಂಬುದು ಕುತೂಹಲ ಮೂಡಿಸಿದೆ.

    ಬೈಡೆನ್ ಅವರ ನಿರ್ಬಂಧದ ಕ್ರಮವು ಜಾಗತಿಕ ಮಾರುಕಟ್ಟೆಗಳನ್ನು ಅಸ್ಥಿರಗೊಳಿಸುತ್ತದೆ. ಮಾಸ್ಕೋ ಪ್ರಭಾವವನ್ನು ಕಡಿಮೆ ಮಾಡಲು ಸಾಧ್ಯವಿರುವ ಎಲ್ಲವನ್ನೂ ಅಮೆರಿಕ ಮಾಡುತ್ತಿದೆ ಎಂದು ಕ್ರೆಮ್ಲಿನ್ ತಿಳಿಸಿದೆ. ನಿರ್ಬಂಧಗಳಿಗೆ ಅನುಸಾರ, ಯುಎಸ್ ಪೆಟ್ರೋಲಿಯಂ ಸೇವಾ ಕಂಪನಿಗಳು ಫೆಬ್ರವರಿ 27 ರೊಳಗೆ ರಷ್ಯಾದಲ್ಲಿ ಕಾರ್ಯಾಚರಣೆಯನ್ನು ನಿಲ್ಲಿಸಬೇಕಾಗುತ್ತದೆ. ಬ್ಲೂಮ್‌ಬರ್ಗ್ ವರದಿಯ ಪ್ರಕಾರ, ಉಕ್ರೇನ್ ಅನ್ನು ಕ್ರೆಮ್ಲಿನ್ ಆಕ್ರಮಿಸಿದ ನಂತರವೂ ಕನಿಷ್ಠ ಎರಡು ಯುಎಸ್-ಮೂಲದ ಜಾಗತಿಕ ಪೂರೈಕೆದಾರರು ರಷ್ಯಾದೊಂದಿಗೆ ತೈಲ ವ್ಯಾಪಾರ ಮುಂದುವರಿಸಿದ್ದಾರೆ.

    ಆದರೂ, ಯುಎಸ್‌ನ ವ್ಯಾಪಕವಾದ ನಿರ್ಬಂಧಗಳು ಕಚ್ಚಾ ತೈಲವನ್ನು ಪೂರೈಸುವ ಮಾಡುವ ರಷ್ಯಾದ ಸಾಮರ್ಥ್ಯದ ಮೇಲೆ ಯಾವುದೇ ತಕ್ಷಣದ ಪರಿಣಾಮ ಬೀರುವ ಸಾಧ್ಯತೆಯಿಲ್ಲ. ಏಕೆಂದರೆ ಹಿಂದೆ ವಿದೇಶಿ ಹೂಡಿಕೆದಾರರ ಒಡೆತನದ ಕಂಪನಿಗಳು ಸೇರಿದಂತೆ ದೇಶೀಯ ಪೂರೈಕೆದಾರರು ದೇಶದಲ್ಲಿ ಹೆಚ್ಚಿನ ತೈಲ ವ್ಯವಹಾರ ನಡೆಸಿದ್ದಾರೆ. ರಷ್ಯಾದ ತೈಲ ಮಾರುಕಟ್ಟೆಯ ಸುಮಾರು 15% ಮಾತ್ರ ವಿದೇಶಿ ತಂತ್ರಜ್ಞಾನಗಳನ್ನು ಅವಲಂಬಿಸಿದೆ. ಯುಎಸ್ ನಿರ್ಬಂಧಗಳಿಂದ ಆರ್ಕ್ಟಿಕ್ ಮೀಸಲುಗಳಲ್ಲಿ ರಷ್ಯಾದ ಆಕ್ರಮಣ ಮತ್ತು ಕಡಲಾಚೆಯ ಕ್ಷೇತ್ರಗಳ ಅಭಿವೃದ್ಧಿ ನಿಧಾನವಾಗಬಹುದು.

  • ಆರೋಗ್ಯಕರ ಮಗುವಿಗೆ ಜನ್ಮ ನೀಡುವ 25 ವರ್ಷದೊಳಗಿನ ಯುವತಿಯರಿಗೆ ಬಂಪರ್‌ ಬಹುಮಾನ!

    ಆರೋಗ್ಯಕರ ಮಗುವಿಗೆ ಜನ್ಮ ನೀಡುವ 25 ವರ್ಷದೊಳಗಿನ ಯುವತಿಯರಿಗೆ ಬಂಪರ್‌ ಬಹುಮಾನ!

    ಮಾಸ್ಕೋ: ದೇಶದಲ್ಲಿ ಜನನ ಪ್ರಮಾಣ ಹೆಚ್ಚಿಸಲು ಚೀನಾ, ಜಪಾನ್‌ ಮಾದರಿಯಲ್ಲೇ ರಷ್ಯಾ (Russia) ಸಹ ಹೊಸ ಹೊಸ ಮಾರ್ಗಗಳನ್ನು ಹುಡುಕುತ್ತಿದೆ. ಈಗಾಗಲೇ ‌ಜನಸಂಖ್ಯಾ ಹೆಚ್ಚಳಕ್ಕೆ ʻಸೆಕ್ಸ್‌ ಸಚಿವಾಲಯʼ ಸ್ಥಾಪಿಸಲು ಮುಂದಾಗಿರುವ ಪುಟಿನ್‌ ನೇತೃತ್ವದ ಸರ್ಕಾರ (Russian Government) ಈಗ ಹೊಸದೊಂದು ಆಫರ್‌ ಘೋಷಣೆ ಮಾಡಿದೆ.

    ಹೌದು.. ಆರೋಗ್ಯಕರ ಮಗುವಿಗೆ ಜನ್ಮ ನೀಡುವ 25 ವರ್ಷದೊಳಗಿನ ವಿದ್ಯಾರ್ಥಿನಿಯರಿಗೆ (Female Students) 1 ಲಕ್ಷ ರುಬೆಲ್ಸ್‌ (ಸುಮಾರು 81,000 ರೂ.) ಪ್ರೋತ್ಸಾಹ ಧನ ನೀಡುವ ಯೋಜನೆಯನ್ನು ಪರಿಚಯಿಸಿದೆ. ಸದ್ಯಕ್ಕೆ ಇಡೀ ದೇಶಾದ್ಯಂತ ಈ ಯೋಜನೆಯನ್ನು ಜಾರಿಗೊಳಿಸಲಾಗಿಲ್ಲ, ರಷ್ಯಾದ ಕರೇಲಿಯಾ ಎಂಬ ಪ್ರದೇಶದಲ್ಲಿ ಮಾತ್ರ ಜಾರಿಗೆ ತರಲಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ದನ್ನೂ ಓದಿ: ಲಾಸ್ ಏಂಜಲೀಸ್‌ನಲ್ಲಿ ಕಾಡ್ಗಿಚ್ಚು – 15,000 ಎಕ್ರೆ ಪ್ರದೇಶಕ್ಕೆ ಬೆಂಕಿ, ಐವರು ಸಜೀವ ದಹನ

    ಈ ಯೋಜನೆಗೆ ಅರ್ಜಿ ಸಲ್ಲಿಸಲು ಬಯಸುವವರು ಸ್ಥಳೀಯ ವಿಶ್ವವಿದ್ಯಾಲಯ ಅಥವಾ ಖಾಸಗಿ ಕಾಲೇಜುಗಳಲ್ಲಿ ಪೂರ್ಣ ಸಮಯದ ವಿದ್ಯಾರ್ಥಿಗಳಾಗಿರಬೇಕು. 25 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿರಬೇಕು ಹಾಗೂ ಕರೇಲಿಯಾ ಪ್ರದೇಶದ ನಿವಾಸಿಗಳೇ ಆಗಿರಬೇಕು ಎಂಬ ಷರತ್ತುಗಳನ್ನು ವಿಧಿಸಲಾಗಿದೆ.

    ಕಳೆದ ವರ್ಷ ರಷ್ಯಾದಲ್ಲಿ ಜನನ ಪ್ರಮಾಣವು ಸಾರ್ವಕಾಲಿಕ ಕನಿಷ್ಠ ಮಟ್ಟ ತಲುಪಿದೆ. 2024ರ ಮೊದಲಾರ್ಧದಲ್ಲಿ 5,99,600 ಮಕ್ಕಳ ಜನನವಾಗಿದ್ದು, 2023ರ ಅವಧಿಗಿಂತಲೂ 16,000 ಮಕ್ಕಳ ಜನನ ಕಡಿಮೆಯಾಗಿದೆ ಎಂದು ವರದಿಗಳು ಉಲ್ಲೇಖಿಸಿವೆ. ದನ್ನೂ ಓದಿ: ಜನಸಂಖ್ಯೆ ಹೆಚ್ಚಳಕ್ಕೆ ರಷ್ಯಾದಲ್ಲಿ ʻಸೆಕ್ಸ್‌ ಸಚಿವಾಲಯʼ ಸ್ಥಾಪನೆಗೆ ಪ್ಲ್ಯಾನ್‌ – ಭಾರತದಲ್ಲಿ ಏನಾಗ್ತಿದೆ?

    ಕೆಲ ದಿನಗಳ ಹಿಂದೆಯಷ್ಟೇ ಭಾರತದಲ್ಲಿ ಆಂಧ್ರ ಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಹೆಚ್ಚು ಮಕ್ಕಳನ್ನು ಹೊಂದುವಂತೆ ಜನರಲ್ಲಿ ಮನವಿ ಮಾಡಿದ್ದರು, 2 ಅಥವಾ ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿದವರಿಗೆ ಮಾತ್ರ ಸ್ಥಳೀಯ ಚುನಾವಣೆಗಳಲ್ಲಿ ಸ್ಪರ್ಧಿಸುವ ಅವಕಾಶ ನೀಡುವಂತಹ ಹೊಸ ಕಾನೂನು ರೂಪಿಸುವುದಾಗಿಯೂ ಘೋಷಣೆ ಮಾಡಿದ್ದರು. ಈ ಬೆನ್ನಲ್ಲೇ ತಮಿಳುನಾಡು ಸಿಎಂ ಎಂ.ಕೆ ಸ್ಟಾಲಿನ್‌, ನಮ್ಮ ಪೂರ್ವಜರು 16 ಬಗೆಯ ಸಂಪತ್ತನ್ನು ಹೊಂದುವಂತೆ ಆಶೀರ್ವದಿಸುವ ಬದಲಾಗಿ ʻ16 ಮಕ್ಕಳನ್ನು ಹೊಂದುವಂತೆ ಆಶೀರ್ವದಿಸಬೇಕಾದ ಅನಿವಾರ್ಯತೆ ಇದೆʼ ಎಂದು ಜನಸಂಖ್ಯೆ ಹೆಚ್ಚಳದ ಬಗ್ಗೆ ಹೇಳಿದ್ದರು.

    ಇನ್ನೂ ಜನಸಂಖ್ಯೆ ನಿಯಂತ್ರಿಸಲು ಚೀನಾ, 80ರ ದಶಕದಲ್ಲಿ ‘ಒಂದು ಮಗುವಿನ ನೀತಿ’ಯನ್ನು ಜಾರಿಗೆ ತಂದಿತ್ತು. ಆದ್ರೆ ವೃದ್ಧರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆ ಒಂದು ಮಗುವಿನ ನೀತಿಯನ್ನು ರದ್ದುಗೊಳಿಸಿ, ʻಎರಡು ಮಗು’ ಮತ್ತು ನಂತರ ‘ಮೂರು ಮಗು’ ನೀತಿಯನ್ನು ಜಾರಿಗೆ ತರಲಾಯಿತು. ಇದೀಗ ಹೆಚ್ಚುಮಕ್ಕಳನ್ನು ಹೊಂದಲು ಪ್ರೋತ್ಸಾಹಿಸುತ್ತಿರುವ ಚೀನಾ, ಹೆಚ್ಚು ಮದುವೆಗಳಿಗೆ ಪ್ರೋತ್ಸಾಹ ನೀಡುತ್ತಿದೆ. ಅಲ್ಲದೇ ಯುವಕ-ಯುವತಿಯರು ಪ್ರೀತಿಯಲ್ಲಿ ತೊಡಗುವಂತೆ ಮಾಡಲು ಕಾಲೇಜುಗಳಲ್ಲಿ ವಿಶೇಷ ಕೋರ್ಸ್‌ ಸಹ ಆರಂಭಿಸಿದೆ ಎಂದು ವರದಿಗಳಿಂದ ತಿಳಿದುಬಂದಿದೆ. ದನ್ನೂ ಓದಿ: 20 ವರ್ಷಗಳಿಂದ ಪಾಳುಬಿದ್ದಿದ್ದ ಮನೆಯ ಫ್ರಿಡ್ಜ್‌ನಲ್ಲಿತ್ತು ಮಾನವನ ತಲೆಬುರುಡೆ, ಅಸ್ಥಿಪಂಜರ!

  • 9/11 ದಾಳಿಯಂತೆ ರಷ್ಯಾ ಬಹುಮಹಡಿ ಕಟ್ಟಡಗಳ ಮೇಲೆ ಡ್ರೋನ್‌ ದಾಳಿ

    9/11 ದಾಳಿಯಂತೆ ರಷ್ಯಾ ಬಹುಮಹಡಿ ಕಟ್ಟಡಗಳ ಮೇಲೆ ಡ್ರೋನ್‌ ದಾಳಿ

    ಮಾಸ್ಕೋ: ಅಮೆರಿಕ ವಿಶ್ವ ವಾಣಿಜ್ಯ ಕಟ್ಟಡಕ್ಕೆ (The World Trade Center Attack) ವಿಮಾನ ಗುದ್ದಿಸಿ ಹೇಗೆ ದಾಳಿ ಮಾಡಲಾಗಿತ್ತೋ ಅದೇ ರೀತಿಯಾಗಿ ಈಗ ರಷ್ಯಾದಲ್ಲಿನ (Russia) ಗಗನಚುಂಬಿ ಕಟ್ಟಡಗಳ ಮೇಲೆ ಡ್ರೋನ್‌ ದಾಳಿಯಾಗಿದೆ.

    ಶನಿವಾರ ಹಲವಾರು ಸ್ಫೋಟಕಗಳನ್ನು ತುಂಬಿದ ಡ್ರೋನ್‌ಗಳು (Drone) ಕಜಾನ್‌ನಲ್ಲಿ (Kazan) ಕಟ್ಟಡಗಳಿಗೆ ಅಪ್ಪಳಿಸಿವೆ. ಡ್ರೋನ್‌ ಗುದ್ದಿದ ರಭಸಕ್ಕೆ ಬೆಂಕಿ ಹೊತ್ತಿಕೊಂಡ ದೃಶ್ಯಗಳು ಮೊಬೈಲ್‌ನಲ್ಲಿ ಸೆರೆಯಾಗಿವೆ. ಕಟ್ಟಡದಿಂದ ನಿವಾಸಿಗಳನ್ನು ಕೂಡಲೇ ಸ್ಥಳಾಂತರಿಸಲಾಗಿದ್ದು ಇಲ್ಲಿಯವರೆಗೆ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.


    ಕಜಾನ್‌ನಲ್ಲಿ ಮೂರು ಕಾಮಿಕೇಜ್ ಡ್ರೋನ್‌ಗಳು ವಸತಿ ಎತ್ತರದ ಕಟ್ಟಡಗಳನ್ನು ಹೊಡೆದವು ಎಂದು ವರದಿಯಾಗಿದೆ. ದಾಳಿಯ ನಂತರ, ಕಜಾನ್ ವಿಮಾನ ನಿಲ್ದಾಣದ ಎಲ್ಲಾ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

    ಫೆಬ್ರವರಿ 2022 ರಲ್ಲಿ ರಷ್ಯಾ-ಉಕ್ರೇನ್ (Russia -Ukraine) ಸಂಘರ್ಷದ ಪ್ರಾರಂಭದ ನಂತರ ಹಲವು ಬಾರಿ ಉಕ್ರೇನ್‌ ಕಡೆಯಿಂದ ಡ್ರೋನ್‌ಗಳನ್ನು ಮಾಸ್ಕೋ ಸೇರಿದಂತೆ ಹಲವು ನಗರಗಳತ್ತ ಬಿಡಲಾಗಿತ್ತು. ಈ ಪೈಕಿ ಹಲವು ಡ್ರೋನ್‌ಗಳನ್ನು ಹೊಡೆದು ಹಾಕಿದ್ದರೆ ಕೆಲವು ಯುಎವಿಗಳು ಮಾತ್ರ ಗುರಿಯನ್ನು ತಲುಪಲು ಸಾಧ್ಯವಾಗಿತ್ತು.

    ಗುರುವಾರ, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಯುದ್ಧವನ್ನು ಕೊನೆಗೊಳಿಸುವ ಬಗ್ಗೆ ತನ್ನ ಮತ್ತು ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡುವೆ ಮಾತುಕತೆ ನಡೆದರೆ ಉಕ್ರೇನ್‌ನಲ್ಲಿ ರಾಜಿ ಮಾಡಿಕೊಳ್ಳಲು ರಷ್ಯಾ ಸಿದ್ಧವಾಗಿದೆ ಎಂದು ಹೇಳಿದರು. ಉಕ್ರೇನಿಯನ್ ಅಧಿಕಾರಿಗಳೊಂದಿಗೆ ಮಾತುಕತೆಯನ್ನು ಪ್ರಾರಂಭಿಸಲು ಯಾವುದೇ ಷರತ್ತುಗಳಿಲ್ಲ ಎಂದು ಅವರು ತಿಳಿಸಿದ್ದರು.

     

  • ಕ್ಯಾನ್ಸರ್‌ ಲಸಿಕೆ ಅಭಿವೃದ್ಧಿಪಡಿಸಿದ ರಷ್ಯಾ – ಮುಂದಿನ ವರ್ಷದಿಂದಲೇ ಎಲ್ಲಾ ನಾಗರಿಕರಿಗೂ ಫ್ರೀ!

    ಕ್ಯಾನ್ಸರ್‌ ಲಸಿಕೆ ಅಭಿವೃದ್ಧಿಪಡಿಸಿದ ರಷ್ಯಾ – ಮುಂದಿನ ವರ್ಷದಿಂದಲೇ ಎಲ್ಲಾ ನಾಗರಿಕರಿಗೂ ಫ್ರೀ!

    – ವೈದ್ಯಕೀಯ ವಿಜ್ಞಾನದಲ್ಲಿ ರಷ್ಯಾ ಸಾಧನೆ

    ಮಾಸ್ಕೋ:‌ ವೈದ್ಯಕೀಯ ವಿಜ್ಞಾನ ಕ್ಷೇತ್ರದಲ್ಲಿ ರಷ್ಯಾ ಮಹತ್ತರ ಸಾಧನೆ ಮಾಡಿದೆ. ರಷ್ಯಾದ ಆರೋಗ್ಯ ಸಚಿವಾಲಯವು (Russian Ministry of Health) ಕ್ಯಾನ್ಸರ್‌ ಲಸಿಕೆ ಅಭಿವೃದ್ಧಿಪಡಿಸಿರುವುದಾಗಿ ಘೋಷಿಸಿದ್ದು, ತನ್ನ ದೇಶದ ನಾಗರಿಕರಿಗೆ ಉಚಿತವಾಗಿ ಸಿಗಲಿದೆ ಎಂಬುದಾಗಿ ಹೇಳಿಕೊಂಡಿದೆ.

    ಹೌದು. ಕ್ಯಾನ್ಸರ್ ಲಸಿಕೆ (mRNA ಲಸಿಕೆ) ತಯಾರಿಸುವಲ್ಲಿ ನಾವು ಯಶಸ್ವಿಯಾಗಿದ್ದೇವೆ ಎಂದು ರಷ್ಯಾದ ಆರೋಗ್ಯ ಸಚಿವಾಲಯದ ವಿಕಿರಣಶಾಸ್ತ್ರ ವೈದ್ಯಕೀಯ ಸಂಶೋಧನಾ ಕೇಂದ್ರದ ನಿರ್ದೇಶಕ ಆಂಡ್ರೇ ಕಪ್ರಿನ್ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಅವರು ತೆರಿಗೆ ವಿಧಿಸಿದ್ರೆ ನಾವು ಅವರ ಮೇಲೆ ಅಷ್ಟೇ ತೆರಿಗೆ ಹಾಕ್ತೀವಿ: ಭಾರತಕ್ಕೆ ಟ್ರಂಪ್‌ ಸಂದೇಶ

    ಮುಂದಿನ ವರ್ಷದಿಂದಲೇ ರಷ್ಯಾದ ನಾಗರಿಕರಿಗೆ ಈ ಕ್ಯಾನ್ಸರ್‌ ಲಸಿಕೆಯನ್ನು (Cancer Vaccine) ಉಚಿತವಾಗಿ ನೀಡಲಾಗುವುದು ಎಂದಿರುವ ಆಂಡ್ರೇ, ರಷ್ಯಾದ ಈ ಆವಿಷ್ಕಾರ ಶತಮಾನದ ಅತಿದೊಡ್ಡ ಆವಿಷ್ಕಾರವೆಂದು ಬಣ್ಣಿಸಿದ್ದಾರೆ. ಅಲ್ಲದೇ ಲಸಿಕೆಯ ಕ್ಲಿನಿಕಲ್ ಪ್ರಯೋಗಗಳು ಇದು ಗೆಡ್ಡೆಯ ಬೆಳವಣಿಗೆಯನ್ನು ತಡೆಯಲು ಸಹಾಯ ಮಾಡುತ್ತದೆ ಎಂದು ತೋರಿಸಿದೆ ಎಂದು ವಿವರಿಸಿದ್ದಾರೆ.

    ಈ ವರ್ಷಾರಂಭದಲ್ಲೇ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ (Vladimir Putin) ಅವರು ಕ್ಯಾನ್ಸರ್‌ ಲಸಿಕೆ ತಯಾರಿಸಲು ರಷ್ಯಾ ಬಹಳ ಸಮೀಪದಲ್ಲಿದೆ ಎಂದು ಹೇಳಿದ್ದರು. ಇದನ್ನೂ ಓದಿ: ಎರಡೇ ವರ್ಷದಲ್ಲಿ ವಿಶ್ವದ ಅತಿದೊಡ್ಡ ಕಾರು ರಫ್ತುದಾರನಾಗಿ ಹೊರಹೊಮ್ಮಿದ ಚೀನಾ! 

    mRNA ಲಸಿಕೆ ಅಂದ್ರೆ ಏನು?
    mRNA ಅಥವಾ ಮೆಸೆಂಜರ್‌ ಆರ್‌ಎನ್‌ಎ ಎಂಬುದು ಮಾನವನ ಆನುವಂಶಿಕ ಸಂಕೇತದ ಒಂದು ಸಣ್ಣ ಭಾಗವಾಗಿದೆ. ಇದು ನಮ್ಮ ಜೀವಕೋಶಗಳಲ್ಲಿ ಪ್ರೋಟೀನ್‌ಗಳನ್ನು ಉತ್ಪಾದಿಸುತ್ತದೆ. ವೈರಸ್‌ ಅಥವಾ ಬ್ಯಾಕ್ಟೀರಿಯಾವು ನಮ್ಮ ದೇಹವನ್ನು ಆಕ್ರಮಿಸಿದಾಗ, ಅದರ ವಿರುದ್ಧ ಹೋರಾಡಲು ಸಹಾಯಕವಾಗುವ ಪ್ರೋಟೀನ್‌ಗಳನ್ನು ಉತ್ಪಾದಿಸಲು mRNA ಸಹಾಯ ಮಾಡುತ್ತದೆ ಎಂದು ತಜ್ಞರು ಹೇಳಿದ್ದಾರೆ.

    ಈ ಲಸಿಕೆಯಿಂದ ನಮ್ಮ ದೇಹದ ಪ್ರತಿರಕ್ಷಣಾ ವ್ಯವಸ್ಥೆಯು ಅಗತ್ಯವಾದ ಪ್ರೋಟೀನ್‌ಗಳನ್ನು ಪಡೆಯುತ್ತವೆ, ಪ್ರತಿಕಾಯ (ಆಂಟಿಬಾಡಿ) ರೂಪುಗೊಳ್ಳುತ್ತವೆ. ಇದರೊಂದಿಗೆ ರೋಗನಿರೋಧಕ ಶಕ್ತಿತಯೂ ಬಲಗೊಳ್ಳುತ್ತದೆ. ಕ್ಯಾನ್ಸರ್‌ ಲಸಿಕೆಯು mRNA ತಂತ್ರಜ್ಞಾನ ಆಧರಿಸಿದ ಮೊದಲ ಲಸಿಕೆಯಾಗಿದೆ. ಇದನ್ನೂ ಓದಿ: ಸ್ಪೇಸ್‌ನಲ್ಲೇ ಕ್ರಿಸ್ಮಸ್ ಸಂಭ್ರಮ – ಸಾಂತಾಕ್ಲಾಸ್ ಆದ ಸುನಿತಾ ವಿಲಿಯಮ್ಸ್!

    ಭಾರತದಲ್ಲಿ ಕ್ಯಾನ್ಸರ್‌ ಸ್ಥಿತಿ ಹೇಗಿದೆ?
    2022ರಲ್ಲಿ ಭಾರತದಲ್ಲಿ 14.13 ಲಕ್ಷ ಹೊಸ ಕ್ಯಾನ್ಸರ್‌ ಪ್ರಕರಣಗಳು ವರದಿಯಾಗಿತ್ತು. ಈ ಪೈಕಿ 7.22 ಲಕ್ಷ ಮಹಿಳೆಯರು, 6.91 ಲಕ್ಷ ಪುರುಷರು ಕ್ಯಾನ್ಸರ್‌ ರೋಗಕ್ಕೆ ತುತ್ತಾಗಿದ್ದರು. 2022ರಲ್ಲಿ 9.16 ಲಕ್ಷ ರೋಗಿಗಳು ಕ್ಯಾನ್ಸರ್‌ನಿಂದ ಸಾವನ್ನಪ್ಪಿದ್ದರು. ಬಳಿಕ ಮುಂದಿನ 5 ವರ್ಷಗಳಲ್ಲಿ ಭಾರತದಲ್ಲಿ ಕ್ಯಾನ್ಸರ್‌ ರೋಗಿಗಳ ಸಂಖ್ಯೆ ಶೇ.12 ರಷ್ಟು ಹೆಚ್ಚಾಗಲಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಅಂದಾಜಿಸಿರುವುದಾಗಿ ವರದಿಯಾಗಿತ್ತು.

    ಗ್ಲೋಬಲ್ ಕ್ಯಾನ್ಸರ್ ಅಬ್ಸರ್ವೇಟರಿಯ ಮಾಹಿತಿ ಪ್ರಕಾರ, ಸ್ತನ, ಪ್ರಾಸ್ಟೇಟ್ ಮತ್ತು ಥೈರಾಯ್ಡ್ ಕ್ಯಾನ್ಸರ್ ಕಾಯಿಲೆಯು 50ಕ್ಕಿಂತ ಕಡಿಮೆ ವಯಸ್ಸಿನವರಲ್ಲಿ ಕಾಣಿಸಿಕೊಳ್ಳುವುದು ಸಾಮಾನ್ಯವಾಗಿದೆ. ಭಾರತದಲ್ಲಿ ಅತಿ ಹೆಚ್ಚು ಸ್ತನ, ಬಾಯಿ, ಗರ್ಭಕೋಶ ಮತ್ತು ಶ್ವಾಸಕೋಶದ ಕ್ಯಾನ್ಸರ್ ಪ್ರಕರಣಗಳು ವರದಿಯಾಗುತ್ತಿವೆ ಎಂದು ವರದಿ ಹೇಳಿದೆ.

  • ಕಣ್ಮರೆಯಾಗಿದ್ದ ವಿಮಾನ ಮಾಸ್ಕೋದಲ್ಲಿ ಲ್ಯಾಂಡ್‌ – ಪದಚ್ಯುತ ಸಿರಿಯಾ ಅಧ್ಯಕ್ಷ ಅಸ್ಸಾದ್‌ಗೆ ಪುಟಿನ್‌ ರಾಜಾಶ್ರಯ

    ಕಣ್ಮರೆಯಾಗಿದ್ದ ವಿಮಾನ ಮಾಸ್ಕೋದಲ್ಲಿ ಲ್ಯಾಂಡ್‌ – ಪದಚ್ಯುತ ಸಿರಿಯಾ ಅಧ್ಯಕ್ಷ ಅಸ್ಸಾದ್‌ಗೆ ಪುಟಿನ್‌ ರಾಜಾಶ್ರಯ

    ಮಾಸ್ಕೋ: ಪದಚ್ಯುತ ಸಿರಿಯಾದ (Syria) ಅಧ್ಯಕ್ಷ, ಸರ್ವಾಧಿಕಾರಿ ಬಶರ್ ಅಲ್-ಅಸ್ಸಾದ್ (Bashar al-Assad) ಮತ್ತು ಕುಟುಂಬಕ್ಕೆ ರಷ್ಯಾ (Russia) ರಾಜಾಶ್ರಯ (Asylum) ನೀಡಿದೆ. ಉಗ್ರರು ರಾಜಧಾನಿ ಡಮಾಸ್ಕಸ್‌ ವಶಪಡೆಯುತ್ತಿದ್ದಂತೆ ಭಾನುವಾರ ಮುಂಜಾನೆ ಸಿರಿಯಾ ತೊರೆದ ಅವರು ಮಾಸ್ಕೋಗೆ ಬಂದಿದ್ದಾರೆ ಎಂದು ರಷ್ಯಾದ ಮಾಧ್ಯಮಗಳು ವರದಿ ಮಾಡಿವೆ.

    ಮಾನವೀಯ ಆಧಾರದ ಮೇಲೆ ರಷ್ಯಾ (Russia) ಅವರಿಗೆ ಆಶ್ರಯ ನೀಡಿದೆ ಎಂದು ವರದಿಯಾಗಿದೆ. ರಷ್ಯಾ ಮೊದಲಿನಿಂದಲೂ ಅಸ್ಸಾದ್ ಸರ್ಕಾರದ ಬೆಂಬಲಕ್ಕೆ ನಿಂತಿತ್ತು. ಐಸಿಸ್‌ ಉಗ್ರರನ್ನು ಮಟ್ಟ ಹಾಕಲು ರಷ್ಯಾ ಅಸ್ಸಾದ್‌ಗೆ ಬೆಂಬಲ ನೀಡಿತ್ತು.  ಉಕ್ರೇನ್‌ ಮೇಲಿನ ದಾಳಿಯ ಸಮಯದಲ್ಲಿ ಅಸ್ಸಾದ್‌ ರಷ್ಯಾವನ್ನು ಬೆಂಬಲಿಸಿದ್ದರು. ಇದನ್ನೂ ಓದಿ: ಸಿರಿಯಾದಲ್ಲಿ ಭಾರತೀಯ ಪ್ರಜೆಗಳು ಸೇಫ್‌ – ರಾಯಭಾರ ಕಚೇರಿಯಿಂದ ಮಾಹಿತಿ

    ಭಾನುವಾರ ಮುಂಜಾನೆ ಡಮಾಸ್ಕಸ್‌ನಿಂದ ಟೇಕಾಫ್‌ ಆದ ವಿಮಾನ ದಾರಿ ಮಧ್ಯೆ ಪಥವನ್ನು ಬದಲಾಯಿಸಿತ್ತು. ಅಷ್ಟೇ ಅಲ್ಲದೇ ವಿಮಾನ ಎತ್ತರವು ತಗ್ಗಿತ್ತು ದಿಢೀರ್‌ ಕಣ್ಮರೆಯಾಗಿತ್ತು. ಹೀಗಾಗಿ ವಿಮಾನ ಪತನ ಹೊಂದಿದ್ಯಾ ಎಂಬ ಪ್ರಶ್ನೆ ಎದ್ದಿತ್ತು. ಆದರೆ ಈಗ ವಿಮಾನ ಸುರಕ್ಷಿತವಾಗಿ ರಷ್ಯಾದಲ್ಲಿ ಲ್ಯಾಂಡ್‌ ಆದ ಬಗ್ಗೆ ಖಚಿತ ಮಾಹಿತಿ ಲಭ್ಯವಾಗಿದೆ.

    ಶತ್ರುಗಳಿಗೆ ಸುಳಿವು ಸಿಗಬಾರದು ಎಂಬ ಕಾರಣಕ್ಕೆ ಉದ್ದೇಶ ಪೂರ್ವಕವಾಗಿಯೇ ವಿಮಾನದ ಟ್ರಾನ್ಸ್‌ಪಾಂಡರ್ ಅನ್ನು ಸ್ವಿಚ್ ಆಫ್ ಮಾಡಲಾಗಿತ್ತು. ಹೀಗಾಗಿ ವಿಮಾನಗಳನ್ನು ಟ್ರ್ಯಾಕ್‌ ಮಾಡುವ ವೆಬ್‌ಸೈಟ್‌ಗಳಿಗೆ ಈ ಮಾಹಿತಿ ಲಭ್ಯವಾಗಿರಲಿಲ್ಲ.

     

  • ಮೇಕ್ ಇನ್ ಇಂಡಿಯಾದಿಂದ ಉದ್ಯಮಗಳಿಗೆ ಭಾರತದ ನಾಯಕತ್ವ ಉತ್ತೇಜನ ನೀಡಿದೆ: ಪುಟಿನ್ ಶ್ಲಾಘನೆ

    ಮೇಕ್ ಇನ್ ಇಂಡಿಯಾದಿಂದ ಉದ್ಯಮಗಳಿಗೆ ಭಾರತದ ನಾಯಕತ್ವ ಉತ್ತೇಜನ ನೀಡಿದೆ: ಪುಟಿನ್ ಶ್ಲಾಘನೆ

    ಮಾಸ್ಕೋ: ಮೇಕ್ ಇನ್ ಇಂಡಿಯಾ (Make in India) ಮೂಲಕ ಸಣ್ಣ ಮತ್ತು ದೊಡ್ಡ ಗಾತ್ರದ ಉದ್ಯಮಗಳಿಗೆ ಭಾರತದ ನಾಯಕತ್ವ ಉತ್ತೇಜನ ನೀಡುತ್ತಿದೆ ಎಂದು ಭಾರತ ಸರ್ಕಾರ ಹಾಗೂ ನಾಯಕತ್ವವನ್ನು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin) ಶ್ಲಾಘಿಸಿದ್ದಾರೆ.

    ಮಾಸ್ಕೋದಲ್ಲಿ (Moscow) ವಿಟಿಬಿ ಹೂಡಿಕೆ ಕುರಿತು ನಡೆದ ಕಾರ್ಯಕ್ರಮದಲ್ಲಿ ಭಾರತದ `ಮೇಕ್ ಇನ್ ಇಂಡಿಯಾ’ ಬಗ್ಗೆ ಮಾತನಾಡಿದರು.ಇದನ್ನೂ ಓದಿ: ಅಮ್ಮ ಲೀಲಾವತಿಗಾಗಿ ಸ್ಮಾರಕ ನಿರ್ಮಿಸಿದ ವಿನೋದ್‌ ರಾಜ್‌

    ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರಧಾನಿಯವರ ಮೇಕ್ ಇನ್ ಇಂಡಿಯಾ ಯೋಜನೆಗಾಗಿ ರಷ್ಯಾ ತನ್ನ ಉತ್ಪಾದನಾ ಘಟಕವನ್ನು ಭಾರತದಲ್ಲಿ ಸ್ಥಾಪಿಸಲು ಸಿದ್ಧತೆಯನ್ನು ನಡೆಸಿದೆ. ಇದಕ್ಕೆಲ್ಲಾ ಭಾರತದ ನಾಯಕತ್ವವೇ ಕಾರಣ. ಹೀಗಾಗಿ, ಭಾರತವು ತನ್ನ ಹಿತಾಸಕ್ತಿಗಳ ಈಡೇರಿಕೆಗಾಗಿ ಹೆಚ್ಚಿನ ಆದ್ಯತೆ ನೀಡುತ್ತದೆ ಎಂದು ಒತ್ತಿ ಹೇಳಿದರು.

    ಭಾರತೀಯ ನಾಯಕತ್ವದಿಂದಾಗಿ ಭಾರತ (India) ಸರ್ಕಾರವು ಸ್ಥಿರವಾದ ಪರಿಸ್ಥಿತಿಗಳನ್ನು ಸೃಷ್ಟಿಸಿಕೊಳ್ಳುತ್ತಿದೆ. ಜೊತೆಗೆ ಭಾರತದಲ್ಲಿನ ಹೂಡಿಕೆಗಳು ಲಾಭದಾಯಕವೆಂದು ನಾವು ನಂಬುತ್ತೇವೆ ಎಂದು ತಿಳಿಸಿದರು.

    ಗ್ರಾಹಕ ಸರಕುಗಳು, ಐಟಿ, ಉನ್ನತ ತಂತ್ರಜ್ಞಾನ ಮತ್ತು ಕೃಷಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ರಷ್ಯಾದ ಸಾಧನೆಯನ್ನು ಉಲ್ಲೇಖಿಸಿ, ಪಾಶ್ಚಾತ್ಯ ಬ್ರಾಂಡ್‌ಗಳನ್ನು ಬದಲಿಸುವ ಮೂಲಕ ಹೊಸ ರಷ್ಯಾದ ಬ್ರ‍್ಯಾಂಡ್‌ಗಳು ಯಶಸ್ಸು ಗಳಿಸಿದೆ. ಇದು ಆಮದು ಪರ್ಯಾಯ ಕಾರ್ಯಕ್ರಮದ ಭಾಗವಾಗಿ ವಿಶೇಷ ಪ್ರಸ್ತುತತೆಯನ್ನು ಹೊಂದಿದೆ. ಇನ್ನೂ ಕೃಷಿಯಲ್ಲಿ ತಯಾರಕರ ಮತ್ತು ಉತ್ಪಾದಕರ ಸಂಖ್ಯೆಯು ಬೆಳೆಯುತ್ತಲೇ ಇದೆ. 1988ರಲ್ಲಿ, ಸೋವಿಯತ್ ಒಕ್ಕೂಟವು ಯುಎಸ್‌ಡಿ 35 ಶತಕೋಟಿಗೆ ಧಾನ್ಯವನ್ನು ಆಮದು ಮಾಡಿಕೊಂಡಿತ್ತು. ಕಳೆದ ವರ್ಷ, ಯುಎಸ್‌ಡಿ 66 ಶತಕೋಟಿಯಷ್ಟು ಧಾನ್ಯವನ್ನು ರಫ್ತು ಮಾಡಿದ್ದೇವೆ. ಇದು ನಮ್ಮ ರೈತರ ಅರ್ಹತೆಯಾಗಿದೆ. ರಷ್ಯಾ ಒಕ್ಕೂಟದ ಎಲ್ಲಾ ಕ್ಷೇತ್ರಗಳಲ್ಲಿ, ಹೈಟೆಕ್ ಸೇರಿದಂತೆ, ಉತ್ಪನ್ನಗಳನ್ನು ಮಾರಾಟ ಮಾಡಲು ಮತ್ತು ರಫ್ತು ಮಾಡಲು ಅವಕಾಶಗಳನ್ನು ವಿಸ್ತರಿಸುವ ತೀವ್ರ ಅವಶ್ಯಕತೆಯಿದೆ ಎಂದರು.

    ಇದೇ ವೇಳೆ, ಉದ್ಯಮಗಳ ಬೆಳವಣಿಗೆಯನ್ನು ಬೆಂಬಲಿಸಲು ಬ್ರಿಕ್ಸ್ ರಾಷ್ಟ್ರಗಳ ಸಹಕಾರಕ್ಕಾಗಿ ಪುಟಿನ್ ಕರೆ ನೀಡಿದರು. ಮುಂದಿನ ವರ್ಷ ಬ್ರೆಜಿಲ್‌ನಲ್ಲಿ ನಡೆಯಲಿರುವ ಶೃಂಗಸಭೆಯಲ್ಲಿ ಸಹಯೋಗಕ್ಕಾಗಿ ಪ್ರಾಥಮಿಕ ಕ್ಷೇತ್ರಗಳನ್ನು ಮೌಲ್ಯಮಾಪನ ಮಾಡಲು ಸದಸ್ಯ ರಾಷ್ಟ್ರಗಳಿಗೆ ವಿನಂತಿಸಿದರು.ಇದನ್ನೂ ಓದಿ: ಪ್ರವೀಣ್‌ ನೆಟ್ಟಾರು ಹತ್ಯೆ ಕೇಸ್‌ – NIAಯಿಂದ 16 ಕಡೆ ದಾಳಿ

  • ಉಕ್ರೇನ್‌ ಮೇಲೆ ರಷ್ಯಾದ ICBM ದಾಳಿ – 60 ವರ್ಷಗಳ ಇತಿಹಾಸದಲ್ಲೇ ಯುದ್ಧಕ್ಕೆ ಕ್ಷಿಪಣಿ ಮೊದಲ ಬಳಕೆ

    ಉಕ್ರೇನ್‌ ಮೇಲೆ ರಷ್ಯಾದ ICBM ದಾಳಿ – 60 ವರ್ಷಗಳ ಇತಿಹಾಸದಲ್ಲೇ ಯುದ್ಧಕ್ಕೆ ಕ್ಷಿಪಣಿ ಮೊದಲ ಬಳಕೆ

    ಮಾಸ್ಕೋ: ಉಕ್ರೇನ್‌ ಮೇಲೆ ಇಂಟರ್‌-ಕಾಂಟಿನೆಂಟಲ್‌ ಬ್ಯಾಲಿಸ್ಟಿಕ್‌ ಕ್ಷಿಪಣಿಯನ್ನು (ICBM) ರಷ್ಯಾ ಉಡಾಯಿಸಿದೆ. 60 ವರ್ಷಗಳಲ್ಲೇ ಯುದ್ಧದಲ್ಲಿ ಈ ಕ್ಷಿಪಣಿಯನ್ನು ಮೊದಲ ಬಾರಿಗೆ ಬಳಕೆ ಮಾಡಲಾಗಿದೆ.

    ಉಕ್ರೇನ್‌ನ (Ukraine) ಡಿನಿಪ್ರೊದಲ್ಲಿ ಮೂಲಸೌಕರ್ಯವನ್ನು ಗುರಿಯಾಗಿಸಲು ಮಾಸ್ಕೋ ಮಲ್ಟಿಪಲ್ ಇಂಡಿಪೆಂಡೆಂಟ್ಲಿ ಟಾರ್ಗೆಟೆಬಲ್ ರೀ-ಎಂಟ್ರಿ ವೆಹಿಕಲ್ಸ್ (ಎಂಐಆರ್‌ವಿ) ಪ್ರಯೋಗಿಸಲಾಗಿದೆ. ಇದು ತಂತ್ರಜ್ಞಾನದ ಮೊದಲ ಬಳಕೆಯಾಗಿದೆ. ಇದನ್ನೂ ಓದಿ: ಅಮೆರಿಕ ನಿರ್ಮಿತ ದೀರ್ಘ ಶ್ರೇಣಿಯ ಕ್ಷಿಪಣಿಗಳಿಂದ ರಷ್ಯಾ ಮೇಲೆ ಉಕ್ರೇನ್‌ ದಾಳಿ

    ICBMಗಳು 5,500 ಕಿಲೋಮೀಟರ್‌ಗಿಂತಲೂ ಹೆಚ್ಚು ವ್ಯಾಪ್ತಿಯನ್ನು ಹೊಂದಿವೆ. ಪರಮಾಣು, ರಾಸಾಯನಿಕ ಮತ್ತು ಜೈವಿಕ ಸಿಡಿತಲೆಗಳನ್ನು ಸಾಗಿಸಲು ನಿರ್ಮಿಸಲಾಗಿದೆ. ಇದು ಸಾಂಪ್ರದಾಯಿಕ ಸಿಡಿತಲೆಯನ್ನು ಸಹ ಸಾಗಿಸಬಲ್ಲದು. ಇದನ್ನು ರಷ್ಯಾ RS-26 ರುಬೆಜ್, ಬ್ಯಾಲಿಸ್ಟಿಕ್ ಕ್ಷಿಪಣಿಯಲ್ಲಿ ಬಳಸಿದೆ ಎಂದು ವರದಿಯಾಗಿದೆ. ಉಕ್ರೇನ್‌ನಲ್ಲಿ ಹಾನಿಗೊಳಗಾದ ಸ್ಥಳದಿಂದ 1,000 ಕಿಮೀ ದೂರದಲ್ಲಿರುವ ರಷ್ಯಾದ ಅಸ್ಟ್ರಾಖಾನ್ ಪ್ರದೇಶದಿಂದ ಕ್ಷಿಪಣಿಯನ್ನು ಉಡಾವಣೆ ಮಾಡಲಾಗಿದೆ.

    ಐಸಿಬಿಎಂಗಳ ಉಡಾವಣೆಯ ಕುರಿತು ರಷ್ಯಾ ಪ್ರತಿಕ್ರಿಯಿಸಲು ನಿರಾಕರಿಸಿದೆ. ಆದರೂ, ಕೀವ್‌ ಅದರ ಬಳಕೆಯನ್ನು ದೃಢಪಡಿಸಿದೆ. ಹೊಸ ಅಣ್ವಸ್ತ್ರ ನೀತಿಗೆ ರಷ್ಯಾ (Russia) ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ (Vladimir Putin) ಸಹಿ ಹಾಕಿದ ಬೆನ್ನಲ್ಲೇ ಉಕ್ರೇನ್‌ ಮೇಲೆ ಕ್ಷಿಪಣಿ ಉಡಾವಣೆಯಾಗಿದೆ. ಇದನ್ನೂ ಓದಿ: 1,000 ದಿನ ಪೂರೈಸಿದ ರಷ್ಯಾ-ಉಕ್ರೇನ್‌ ಯುದ್ಧ; ಪರಮಾಣು ಶಸ್ತ್ರಾಸ್ತ್ರ ಬಳಕೆ ಎಚ್ಚರಿಕೆ ನೀಡಿದ ಪುಟಿನ್‌

    ದೀರ್ಘ ಶ್ರೇಣಿಯ ಎಟಿಎಸಿಎಂಎಸ್‌ ಕ್ಷಿಪಣಿಗಳನ್ನು ರಷ್ಯಾ ಮೇಲೆ ಉಡಾಯಿಸಲು ಈಚೆಗೆ ಉಕ್ರೇನ್‌ಗೆ ಅಮೆರಿಕ ಅನುಮತಿ ನೀಡಿತ್ತು. ಅದರ ಬೆನ್ನಲ್ಲೇ ಉಕ್ರೇನ್‌ ಕ್ಷಿಪಣಿಗಳನ್ನು ರಷ್ಯಾ ಮೇಲೆ ಉಡಾಯಿಸಿತು.

  • ಶೀಘ್ರದಲ್ಲೇ ಭಾರತಕ್ಕೆ ವ್ಲಾಡಿಮಿರ್ ಪುಟಿನ್ ಭೇಟಿ

    ಶೀಘ್ರದಲ್ಲೇ ಭಾರತಕ್ಕೆ ವ್ಲಾಡಿಮಿರ್ ಪುಟಿನ್ ಭೇಟಿ

    ಮಾಸ್ಕೋ: ರಷ್ಯಾ (Russia) ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin) ಶೀಘ್ರದಲ್ಲೇ ಭಾರತಕ್ಕೆ ಭೇಟಿ ನೀಡಲಿದ್ದಾರೆ ಎಂದು ಕ್ರೆಮ್ಲಿನ್ ವಕ್ತಾರ ಡಿಮಿಟ್ರಿ ಪೆಸ್ಕೋವ್ ತಿಳಿಸಿದ್ದಾರೆ.

    ವ್ಲಾಡಿಮಿರ್ ಪುಟಿನ್ ಅವರ ಭಾರತ ಭೇಟಿಯ ನಿರ್ದಿಷ್ಟ ದಿನಾಂಕ ಪ್ರಕಟಿಸಲು ರಷ್ಯಾ ಸಕಲ ಸಿದ್ಧತೆಯನ್ನು ಪ್ರಾರಂಭಿಸಿದೆ. ಶೀಘ್ರದಲ್ಲೇ ನಾವು ಅವರ ಭೇಟಿಯ ನಿಖರವಾದ ದಿನಾಂಕಗಳನ್ನು ತಿಳಿಸುತ್ತೇವೆ. ಪ್ರಧಾನಿ ಮೋದಿಯವರು (Narendra Modi) ರಷ್ಯಾಕ್ಕೆ ಎರಡು ಬಾರಿ ಭೇಟಿ ನೀಡಿದ್ದರು. ಈಗ ಉಭಯ ದೇಶಗಳ ಸಂಬಂಧ ವೃದ್ಧಿಗಾಗಿ ನಮ್ಮ ಅಧ್ಯಕ್ಷರು ಭಾರತಕ್ಕೆ ಭೇಟಿ ನೀಡಲಿದ್ದಾರೆ ಎಂದು ಅವರು ತಿಳಿಸಿದ್ದಾರೆ,

    ಉಕ್ರೇನ್‌ನಲ್ಲಿ ಮೇಲಿನ ಯುದ್ಧಾಪರಾಧಗಳಿಗಾಗಿ ಪುಟಿನ್‌ಗೆ ಅಂತಾರಾಷ್ಟ್ರೀಯ ಕ್ರಿಮಿನಲ್ ಕೋರ್ಟ್ (ಐಸಿಸಿ) ಬಂಧನ ವಾರಂಟ್ ಜಾರಿ ಮಾಡಿದೆ. ಇದಾದ ಬಳಿಕ ICCಯು ಪುಟಿನ್ ಮತ್ತು ಮಕ್ಕಳ ಹಕ್ಕುಗಳ ರಷ್ಯಾದ ಕಮಿಷನರ್ ಮಾರಿಯಾ ಲ್ವೋವಾ-ಬೆಲೋವಾ ಇಬ್ಬರ ವಿರುದ್ಧವೂ ಯುದ್ಧ ಅಪರಾಧಗಳಿಗಾಗಿ ಬಂಧನ ವಾರಂಟ್‌ಗಳನ್ನು ಹೊರಡಿಸಿತು.

    ನ್ಯಾಯಾಲಯದ ಬೈಂಡಿಂಗ್ ಒಪ್ಪಂದದ ಅಡಿಯಲ್ಲಿ ICC ವಾರಂಟ್ ಹೊರಡಿಸಲಾಗಿದೆ. ಈ ಇಬ್ಬರು ICC ಯ ಸದಸ್ಯ ರಾಷ್ಟ್ರಗಳಿಗೆ ಭೇಟಿ ನೀಡಿದರೆ ಅವರನ್ನು ಬಂಧಿಸಬೇಕು ಎಂಬ ಕಾನೂನಿದೆ. ಆದಾಗ್ಯೂ, ಭಾರತವು ಈ ಒಪ್ಪಂದಕೆ ಸಹಿ ಮಾಡಿಲ್ಲ.

    ಕಳೆದ ತಿಂಗಳು, ಪ್ರಧಾನಿ ನರೇಂದ್ರ ಮೋದಿ ಅವರು ಬ್ರಿಕ್ಸ್ (ಬ್ರೆಜಿಲ್, ರಷ್ಯಾ, ಭಾರತ, ಚೀನಾ, ದಕ್ಷಿಣ ಆಫ್ರಿಕಾ) ರಾಷ್ಟ್ರಗಳ ಗುಂಪಿನ ನಾಯಕರ ವಾರ್ಷಿಕ ಶೃಂಗಸಭೆಗಾಗಿ ರಷ್ಯಾದ ಕಜಾನ್‌ಗೆ ಭೇಟಿ ನೀಡಿದ್ದರು. ಶೃಂಗಸಭೆಯ ಹಿನ್ನೆಲೆಯಲ್ಲಿ ಉಭಯ ನಾಯಕರು ದ್ವಿಪಕ್ಷೀಯ ಸಭೆ ನಡೆಸಿದ್ದರು.