Tag: ರಷ್ಯಾ

  • ಭಾರತದ ವಿದ್ಯಾರ್ಥಿಯ ಚಿಕಿತ್ಸಾ ವೆಚ್ಚವನ್ನು ಸರ್ಕಾರ ಭರಿಸಲಿದೆ: ಎಂಇಎ

    ಭಾರತದ ವಿದ್ಯಾರ್ಥಿಯ ಚಿಕಿತ್ಸಾ ವೆಚ್ಚವನ್ನು ಸರ್ಕಾರ ಭರಿಸಲಿದೆ: ಎಂಇಎ

    ನವದೆಹಲಿ: ಉಕ್ರೇನ್‍ನಲ್ಲಿ, ರಷ್ಯಾ ಸೈನಿಕರ ಗುಂಡಿನ ದಾಳಿಗೆ ಗಾಯಗೊಂಡಿರುವ ಭಾರತದ ವಿದ್ಯಾರ್ಥಿಯ ಚಿಕಿತ್ಸಾ ವೆಚ್ಚವನ್ನು ಸರ್ಕಾರ ಭರಿಸಲಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹೇಳಿದೆ.

    ಉಕ್ರೇನ್‍ನ ರಾಜಧಾನಿ ನಗರ ಕೀವ್‍ನಲ್ಲಿ ರಷ್ಯಾದ ಗುಂಡಿನ ದಾಳಿಗೆ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಭಾರತೀಯ ಮೂಲದ ವಿದ್ಯಾರ್ಥಿ ಹರ್ಜೊತ್ ಸಿಂಗ್‍ನ ವೈದ್ಯಕೀಯ ವೆಚ್ಚವನ್ನು ಭಾರತ ಸರ್ಕಾರ ಭರಿಸಲಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ(MEA) ತಿಳಿಸಿದೆ.

    ಮೊನ್ನೆ ಫೆಬ್ರವರಿ 27ರಂದು 31 ವರ್ಷದ ಹರ್ಜೊತ್ ಸಿಂಗ್ ತನ್ನಿಬ್ಬರು ಸ್ನೇಹಿತರೊಂದಿಗೆ ಪಶ್ಚಿಮ ಉಕ್ರೇನ್‍ನಲ್ಲಿರುವ ಎಲ್ವಿವ್ ನಗರಕ್ಕೆ ಯುದ್ಧಪೀಡಿತ ಕೀವ್ ನಗರದಿಂದ ಹೋಗಲು ಕ್ಯಾಬ್ ಹತ್ತಿದ್ದರು. ಈ ವೇಳೆ ಅವರ ಎದೆಭಾಗ ಸೇರಿದಂತೆ ದೇಹದ ಮೇಲೆ ನಾಲ್ಕು ಬುಲ್ಲೆಟ್ ಬಿದ್ದಿದೆ. ಹರ್ಜೊತ್ ಸಿಂಗ್ ದೆಹಲಿ ಮೂಲದವರು. ಈ ಘಟನೆ ಬಗ್ಗೆ ನಮಗೆ ಅರಿವಿದೆ. ನಮ್ಮ ರಾಯಭಾರಿಗಳು ಅವರ ಕುಟುಂಬಸ್ಥರ ಜೊತೆ ಸಂಪರ್ಕದಲ್ಲಿದ್ದೇವೆ. ಕೀವ್ ನ ಆಸ್ಪತ್ರೆಯಲ್ಲಿ ಹರ್ಜೊತ್ ಸಿಂಗ್ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವಿದೇಶಾಂಗ ಇಲಾಖೆ ವಕ್ತಾರ ಅರಿಂದಮ್ ಬಗ್ಚಿ ತಿಳಿಸಿದ್ದಾರೆ. ಇದನ್ನೂ ಓದಿ: ಮೈಸೂರಿನಲ್ಲಿದೆ ಕಾಡುವ ಕಥನ: ಕೇವಲ ಪ್ರೀತಿಕಥೆಯಲ್ಲ ರೋಚಕತೆಯೂ ಇಲ್ಲುಂಟು

    ಭಾರತವು ಮೊನ್ನೆ  ಪೋಲೆಂಡ್ ಮೂಲಕ ಉಕ್ರೇನ್‍ಗೆ ಔಷಧಿಗಳು ಮತ್ತು ಇತರ ಪರಿಹಾರ ಸಾಮಗ್ರಿಗಳನ್ನು ಒಳಗೊಂಡಿರುವ ಮಾನವೀಯ ನೆರವಿನ ಮೊದಲ ಭಾಗವನ್ನು ಕಳುಹಿಸಿದೆ. ಉಕ್ರೇನ್‍ನ ಗಡಿಯಲ್ಲಿ ನೆರೆದಿರುವ ಜನರಿಗೆ ಯುದ್ಧ ಪೀಡಿತ ರಾಷ್ಟ್ರದಿಂದ ನಿರ್ಗಮಿಸಲು ಸಹಾಯ ಮಾಡಲು ಭಾರತವು ನೆರವು ನೀಡಲು ನಿರ್ಧರಿಸಿದೆ. ಇದನ್ನೂ ಓದಿ: ಮೈಸೂರಿನಲ್ಲಿದೆ ಕಾಡುವ ಕಥನ: ಕೇವಲ ಪ್ರೀತಿಕಥೆಯಲ್ಲ ರೋಚಕತೆಯೂ ಇಲ್ಲುಂಟು

  • ‘ಆಪರೇಷನ್ ಗಂಗಾ’ ನೆನಪಿಗಾಗಿ ಮಗಳಿಗೆ ಗಂಗಾ ಅಂತ ಹೆಸರಿಡ್ತೀನಿ: ಉಕ್ರೇನ್‍ನಿಂದ ವಾಪಸಾದ ಭಾರತೀಯ

    ‘ಆಪರೇಷನ್ ಗಂಗಾ’ ನೆನಪಿಗಾಗಿ ಮಗಳಿಗೆ ಗಂಗಾ ಅಂತ ಹೆಸರಿಡ್ತೀನಿ: ಉಕ್ರೇನ್‍ನಿಂದ ವಾಪಸಾದ ಭಾರತೀಯ

    ವಾರ್ಸಾ: ಉಕ್ರೇನ್‍ನ ಕೀವ್‌ನಲ್ಲಿ ಸಿಲುಕಿದ್ದ ಕೇರಳದ ವ್ಯಕ್ತಿಯನ್ನು ಹಾಗೂ ಆತನ ಪತ್ನಿಯನ್ನು ʼಆಪರೇಷನ್ ಗಂಗಾʼದಡಿಯಲ್ಲಿ ಭಾರತ ರಕ್ಷಿಸಿದ್ದಕ್ಕೆ ತಮ್ಮ ಮಗುವಿಗೆ ಗಂಗಾ ಎಂಬ ಹೆಸರನ್ನು ಇಡಲು ನಿರ್ಧರಿಸಿದ್ದಾರೆ.

    ಅಭಿಜಿತ್ ಕೇರಳದ ನಿವಾಸಿ. ರಷ್ಯಾ ದಾಳಿಗೆ ಪುಟ್ಟ ರಾಷ್ಟ್ರ ಉಕ್ರೇನ್ ನಲುಗಿ ಹೋಗಿದೆ. ಅಲ್ಲಿನ ಕೀವ್ ನಗರದಲ್ಲಿ ಅಭಿಜಿತ್ ಪುಟ್ಟದಾದ ರೆಸ್ಟೋರೆಂಟ್‍ನ್ನು ಇಟ್ಟುಕೊಂಡಿದ್ದರು. ಆದರೆ ರಷ್ಯಾ ದಾಳಿಯಿಂದಾಗಿ ಅಭಿಜಿತ್ ಹಾಗೂ ಅವರ ಗರ್ಭಿಣಿ ಪತ್ನಿಯು ಉಕ್ರೇನ್‌ಲ್ಲಿ ಸಿಲುಕಿದ್ದರು. ನಂತರ ಅವರನ್ನು ರಕ್ಷಿಸಿ, ಸುರಕ್ಷಿತವಾಗಿ ಪೋಲೆಂಡಿಗೆ ಕರೆತರಲಾಯಿತು.

    ಈ ಬಗ್ಗೆ ಮಾತನಾಡಿದ ಅವರು, ದಾಳಿಯಿಂದ ಸುರಕ್ಷಿತವಾಗಿ ಪಾರಾದ ಬಗ್ಗೆ ಸಂತೋಷ ವ್ಯಕ್ತಪಡಿಸಿ, ನನ್ನ ಪತ್ನಿ ಒಂಬತ್ತು ತಿಂಗಳ ಗರ್ಭಿಣಿ. ಇದರಿಂದಾಗಿ ಪೋಲೆಂಡ್‍ನಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದಾಳೆ. ಪತ್ನಿ ಹಾಗೂ ಮಗು ಇಬ್ಬರು ಆರೋಗ್ಯವಾಗಿದ್ದಾರೆ ಎಂದು ಆಸ್ಪತ್ರೆಯಲ್ಲಿ ತಿಳಿಸಿದ್ದಾರೆ. ಮಾರ್ಚ್ 26ಕ್ಕೆ ಮಗು ಜನಿಸುವ ನಿರೀಕ್ಷೆಯಿದೆ ಎಂದರು.

    ಇದೇ ವೇಳೆ ಅವರು ಭಾರತ ಸರ್ಕಾರ ಪ್ರಾರಂಭಿಸಿದ ರಕ್ಷಣಾ ಕಾರ್ಯಾಚರಣೆಯ ಆಪರೇಷನ್ ಗಂಗಾ ಹೆಸರಿನ ನೆನಪಿಗಾಗಿ ನನ್ನ ಮಗುವಿಗೆ ಗಂಗಾ ಎಂದು ಹೆಸರಿಡುತ್ತೇನೆ ಎಂದಿದ್ದಾರೆ. ವೈದ್ಯಕೀಯ ಸುರಕ್ಷತೆಯ ಕಾರಣದಿಂದಾಗಿ ಪೋಲೆಂಡ್‍ನ ಆಸ್ಪತ್ರೆಯಲ್ಲಿ ಪತ್ನಿಯೂ ಇರಬೇಕಾದ ಕಾರಣದಿಂದಾಗಿ ಅವರನ್ನು ಬಿಟ್ಟು ತಾವೊಬ್ಬರೇ ಭಾರತಕ್ಕೆ ಬರುವುದಾಗಿ ತಿಳಿಸಿದರು. ಇದನ್ನೂ ಓದಿ: ನವೀನ್ ಮೃತದೇಹ ಪಡೆಯಲು ಎಲ್ಲ ಪ್ರಯತ್ನ: ಬಸವರಾಜ ಬೊಮ್ಮಾಯಿ

    ನಾನು ಉಕ್ರೇನ್‍ನಿಂದ ಪೋಲೆಂಡ್‍ಗೆ ಬರಲು ಒಂದು ಪೈಸೆ ಖರ್ಚು ಮಾಡಿಲ್ಲ. ಎಲ್ಲವನ್ನು ಭಾರತ ಸರ್ಕಾರವೇ ನೋಡಿಕೊಂಡಿದೆ ಎಂದು ಸಂತಸ ವ್ಯಕ್ತಪಡಿಸಿದರು. ಇದನ್ನೂ ಓದಿ: ಕೈಕೊಟ್ಟಿತೆ ನ್ಯಾಟೋ- ರಷ್ಯಾ ಬಾಂಬ್‌ ದಾಳಿ ತಡೆಗೆ ಉಕ್ರೇನ್‌ ಮನವಿ ತಿರಸ್ಕಾರ

    ಉಕ್ರೇನ್‍ನಲ್ಲಿ ಸಿಲುಕಿರುವ ಭಾರತದ ಪ್ರಜೆಗಳನ್ನು ರಕ್ಷಿಸಲು ಸರ್ಕಾರ ಆಪರೇಷನ್ ಗಂಗಾವನ್ನು ಪ್ರಾರಂಭಿಸಿದೆ. ಭಾರತದ ಏರ್ ಫೋರ್ಸ್‍ನವರು ಇದರಲ್ಲಿ ಪಾಲ್ಗೊಂಡು ಪ್ರಜೆಗಳನ್ನು ರಕ್ಷಿಸುವ ಕಾರ್ಯ ಚುರುಕುಗೊಳಿಸಿದ್ದಾರೆ.

  • ಉಕ್ರೇನ್‍ನಿಂದ ಹಿಂತಿರುಗಿದ ವಿದ್ಯಾರ್ಥಿಗಳಿಗೆ ಕಾಲೇಜುಗಳಲ್ಲಿ ಅನುಮತಿ ನೀಡಿ – ಪ್ರಧಾನಿಗೆ ಐಎಂಎ ಪತ್ರ

    ಉಕ್ರೇನ್‍ನಿಂದ ಹಿಂತಿರುಗಿದ ವಿದ್ಯಾರ್ಥಿಗಳಿಗೆ ಕಾಲೇಜುಗಳಲ್ಲಿ ಅನುಮತಿ ನೀಡಿ – ಪ್ರಧಾನಿಗೆ ಐಎಂಎ ಪತ್ರ

    ನವದೆಹಲಿ: ಯುದ್ಧ ಪೀಡಿತ ಉಕ್ರೇನ್‍ನಿಂದ ಹಿಂತಿರುಗಿರುವ ವೈದ್ಯಕೀಯ ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಭಾರತೀಯ ವೈದ್ಯಕೀಯ ಸಂಘ(ಐಎಂಎ) ಶುಕ್ರವಾರ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಕಳುಹಿಸಿದೆ.

    ಉಕ್ರೇನ್‍ನಲ್ಲಿ ವೈದ್ಯಕೀಯ ವ್ಯಾಸಂಗ ಮಾಡುತ್ತಿದ್ದ ಭಾರತೀಯ ವಿದ್ಯಾರ್ಥಿಗಳ ಭವಿಷ್ಯ ಇದೀಗ ಅನಿಶ್ಚಿತತೆಗೊಂಡಿದೆ. ಅವರೀಗ ದುರದೃಷ್ಟಕರ ಬಲಿಪಶುಗಳಾಗಿ ಹೊರಹೊಮ್ಮಿದ್ದಾರೆ ಎಂದು ಪತ್ರದಲ್ಲಿ ಬರೆಯಲಾಗಿದೆ. ಇದನ್ನೂ ಓದಿ: ಒಂದೇ ಹಳಿಯಲ್ಲಿ ಎರಡು ರೈಲು – ಅಪಾಯದಿಂದ ಪಾರಾಗುವ ಹೊಸ ತಂತ್ರಜ್ಞಾನ ಪರೀಕ್ಷೆ ಯಶಸ್ವಿ

    ಉಕ್ರೇನ್‍ನಿಂದ ಭಾರತಕ್ಕೆ ಹಿಂದಿರುಗಿರುವ ವಿದ್ಯಾರ್ಥಿಗಳು ತಮ್ಮ ಉಳಿದ ವ್ಯಾಸಂಗವನ್ನು ಭಾರತೀಯ ವೈದ್ಯಕೀಯ ಕಾಲೇಜುಗಳಲ್ಲಿ ಮುಂದುವರಿಸಲು ಅವಕಾಶ ನೀಡುವಂತೆ ಕೋರಲಾಗಿದೆ. ಸ್ಥಳಾಂತರಗೊಂಡಿರುವ ವಿದ್ಯಾರ್ಥಿಗಳು ದೇಶದಲ್ಲಿರುವ ವೈದ್ಯಕೀಯ ಕಾಲೇಜುಗಳಲ್ಲಿ ವ್ಯಾಸಂಗವನ್ನು ಮುಂದುವರಿಸಲು ಅನುಕೂಲ ಮಾಡುವಂತೆ ಶಿಫಾರಸು ಮಾಡಿದೆ.

    ಉಕ್ರೇನ್‍ನಲ್ಲಿ ಪದವಿಯನ್ನು ಪ್ರಾರಂಭಿಸಿ, ಭಾರತದಲ್ಲಿ ವ್ಯಾಸಂಗವನ್ನು ಪೂರ್ಣಗೊಳಿಸಿದ್ದಲ್ಲಿ ವಿದ್ಯಾರ್ಥಿಗಳು ಭಾರತೀಯ ವೈದ್ಯಕೀಯ ಪದವೀಧರರಾಗಿಯೇ ಇರುತ್ತಾರೆ. ಅವರಿಗೆ ವಿದೇಶದ ಪ್ರಗತಿಪತ್ರವನ್ನು ನೀಡಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಇದನ್ನೂ ಓದಿ: ಮಹಿಳೆಯರ ಮೇಲೆ ರಷ್ಯಾ ಸೈನಿಕರಿಂದ ಅತ್ಯಾಚಾರ: ಉಕ್ರೇನ್‌ ಸಚಿವ ಆರೋಪ

    ಫೆಬ್ರವರಿ 24ರಂದು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಉಕ್ರೇನ್ ಮೇಲೆ ದಾಳಿ ನಡೆಸಿದಾಗಿನಿಂದ ಉಕ್ರೇನ್‍ನ ವಾಯುನೆಲೆಯನ್ನು ಮುಚ್ಚಲಾಗಿದೆ. ಯುದ್ಧ ಪೀಡಿತ ದೇಶದಲ್ಲಿ ಭಾರತದ ಸಾವಿರಾರು ವೈದ್ಯಕೀಯ ವಿದ್ಯಾರ್ಥಿಗಳು ಸಿಲುಕಿಕೊಂಡಿದ್ದು, ಅವರನ್ನು ಉಕ್ರೇನ್‍ನ ಗಡಿ ದೇಶಗಳಿಗೆ ತಲುಪಿಸಿ ಅಲ್ಲಿಂದ ಭಾರತಕ್ಕೆ ಏರ್‍ಲಿಫ್ಟ್ ಮಾಡಲಾಗುತ್ತಿದೆ.

  • ತಮ್ಮ ಹಡಗನ್ನೇ ಸ್ಫೋಟಿಸಿಕೊಂಡ ಉಕ್ರೇನ್ ಸೇನೆ!

    ತಮ್ಮ ಹಡಗನ್ನೇ ಸ್ಫೋಟಿಸಿಕೊಂಡ ಉಕ್ರೇನ್ ಸೇನೆ!

    ಕೀವ್: ಉಕ್ರೇನ್ ಮೇಲೆ ರಷ್ಯಾ ಯುದ್ಧ ಶುರು ಮಾಡಿ ಇವತ್ತಿಗೆ ಒಂಬತ್ತನೇ ದಿನ. ಈ ನಡುವೆ ಉಕ್ರೇನ್‍ನ ಹಡಗೊಂದನ್ನು ಉಕ್ರೇನ್ ಸೈನಿಕರೇ ಸ್ಫೋಟಿಸಿ ಮುಳುಗಿಸಿದ್ದಾರೆ.

    ರಷ್ಯಾ ಸೇನೆ ಕಂಡುಕೇಳರಿಯದ ರೀತಿಯಲ್ಲಿ ಉಕ್ರೇನ್ ಮೇಲೆ ಬಾಂಬ್, ಕ್ಷಿಪಣಿ ದಾಳಿ ನಡೆಸ್ತಿವೆ. ಈ ಹಿನ್ನೆಲೆ ಖಾರ್ಕೀವ್, ಚೆರ್ನಿಹೀವ್, ಸುಮಿ, ಕೀವ್ ನಗರಗಳು ತತ್ತರಿಸಿದ್ದು, ಸ್ಮಶಾನದಂತಾಗಿಬಿಟ್ಟಿವೆ. ಸದ್ಯ ರಷ್ಯಾ ಆರ್ಮಿ ಕೀವ್‍ನಿಂದ 20 ಮೈಲಿ ದೂರದಲ್ಲಿ ಬೀಡುಬಿಟ್ಟಿದೆ. ಮುಂದಿನ ಆದೇಶಕ್ಕಾಗಿ ಕಾಯ್ತಿದೆ. ಇದನ್ನೂ ಓದಿ: 16 ಗಂಟೆ ಟ್ರಾನ್‍ನಲ್ಲೇ ನಿಂತುಕೊಂಡೆ ಪ್ರಯಾಣ ಮಾಡಿದ್ದೇವೆ: ನೋವು ಹಂಚಿಕೊಂಡ ವಿದ್ಯಾರ್ಥಿಗಳು!

    ಜಾಪೋರಿಷಿಯಾ ಸಮೀಪದ ಎನರ್ವೋದರ್ ನಗರ ವಶಕ್ಕೆ ಪಡೆಯಲು ಮುಂದಡಿ ಇಟ್ಟಿದೆ. ಭಾರೀ ಸಾವು-ನೋವು, ಆರ್ಥಿಕ ನಷ್ಟ ಉಂಟಾಗ್ತಿದ್ದರೂ, ರಷ್ಯಾ ಸೇನೆ ವಿರುದ್ಧ ಉಕ್ರೇನ್ ಪಡೆಗಳು ಹಿಂದಡಿಯಿಟ್ಟಿಲ್ಲ. ತೀವ್ರ ಸ್ವರೂಪದಲ್ಲಿ ತಿರುಗೇಟು ನೀಡುತ್ತಿವೆ. ಗೆರಿಲ್ಲಾ ಮಾದರಿಯ ಯುದ್ಧವ್ಯೂಹದ ಮೂಲಕ ರಷ್ಯಾ ಪಡೆಗಳನ್ನು ಎದಿರುಸುತ್ತಿವೆ. ಕಂಡಕಂಡದಲ್ಲಿ ರಷ್ಯಾದ ಯುದ್ಧ ಟ್ಯಾಂಕ್‍ಗಳಿಗೆ ಬೆಂಕಿ ಹಚ್ಚುತ್ತಿವೆ.

    ಕೀವ್ ಜೂನಲ್ಲಿನ ಪ್ರಾಣಿಗಳನ್ನು ಬೇರೆಡೆಗೆ ಸ್ಥಳಾಂತರಿಸಲಾಗಿದೆ. ಈ ಮಧ್ಯೆ ಉಕ್ರೇನ್‍ನ ಹಡಗೊಂದನ್ನು ಉಕ್ರೇನ್ ಸೈನಿಕರೇ ಸ್ಫೋಟಿಸಿ ಮುಳುಗಿಸಿದ್ದಾರೆ. ಮೊದಲು ಇದನ್ನು ನ್ಯಾಟೋ ಸದಸ್ಯ ರಾಷ್ಟ್ರ ಎಸ್ಟೋನಿಯಾಗೆ ಸೇರಿದ ಹಡಗು ಎಂದು ಹೇಳಲಾಗಿತ್ತು. ಈಗ ಉಕ್ರೇನ್‌ ನೌಕಾ ಸೇನೆಯವರೇ ನೌಕೆಯನ್ನುಸ್ಫೋಟಿಸಿ ಮುಳುಗಿಸಿದ್ದಾರೆ. ಒಂದು ವೇಳೆ ಈ ನೌಕೆ ರಷ್ಯಾ ಸೇನೆಗೆ ಸಿಕ್ಕಿದರೆ ವಿಜಯಿ ಆಗಿದ್ದೇವೆ ಎಂದು ಹೇಳಿಕೊಳ್ಳುವ ಸಾಧ್ಯತೆ ಇತ್ತು. ಶತ್ರು ರಾಷ್ಟ್ರಕ್ಕೆ ಮಾಹಿತಿ ಸುಲಭವಾಗಿ ಸಿಗುವ ಸಾಧ್ಯತೆ ಇತ್ತು. ಈ ಕಾರಣಕ್ಕೆ ಉಕ್ರೇನ್‌ ಸೇನೆಯೇ ಹಡಗನ್ನು ಸ್ಫೋಟಗೊಳಿಸಿದೆ ಎಂದು ವರದಿಯಾಗಿದೆ.

    ಇದೇ ನಡೆದರೇ ಮೂರನೇ ಮಹಾ ಯುದ್ಧ ಶುರುವಾಗಲಿದೆ ಎಂಬ ಮಾತು ಕೇಳಿಬಂದಿತ್ತು. ಈ ಮಧ್ಯೆ ರಷ್ಯಾ-ಉಕ್ರೇನ್ ನಡ್ವೆ ಮಧ್ಯಸ್ಥಿಕೆ ವಹಿಸಲು ಸಿದ್ಧ ಎಂದು ಸೌದಿ ರಾಜ ಮೊಹ್ಮದ್ ಬಿನ್ ಸಲ್ಮಾನ್ ಪ್ರಕಟಿಸಿದ್ದಾರೆ. ಅತ್ತ ರಷ್ಯಾದಲ್ಲಿ ಫೇಸ್‍ಬುಕ್, ಟ್ವಿಟ್ಟರ್ ಮೇಲೆ ನಿಷೇಧ ಹೇರಲಾಗಿದೆ. ಸೇನೆ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಿದ್ರೇ ಜೈಲಿಗೆ ಕಳಿಸುವ ಹೊಸ ಕಾಯ್ದೆಯನ್ನು ರಷ್ಯಾದಲ್ಲಿ ಜಾರಿ ಮಾಡಲಾಗಿದೆ. ಇದನ್ನೂ ಓದಿ: ಉಪ್ಪು ಹುಳಿ ಖಾರ ಇಲ್ಲದ, ಯಾರದ್ದೋ ಒತ್ತಡದಿಂದ ಓದಿದ ಬಜೆಟ್: ಕುಮಾರಸ್ವಾಮಿ

  • ದಯವಿಟ್ಟು ನನ್ನನ್ನು ಭಾರತಕ್ಕೆ ಕರೆಸಿಕೊಳ್ಳಿ: ಉಕ್ರೇನ್‍ನಲ್ಲಿ ಗುಂಡು ತಗುಲಿದ ವಿದ್ಯಾರ್ಥಿ

    ದಯವಿಟ್ಟು ನನ್ನನ್ನು ಭಾರತಕ್ಕೆ ಕರೆಸಿಕೊಳ್ಳಿ: ಉಕ್ರೇನ್‍ನಲ್ಲಿ ಗುಂಡು ತಗುಲಿದ ವಿದ್ಯಾರ್ಥಿ

    ಕೀವ್: ಉಕ್ರೇನ್‍ನಲ್ಲಿ ಗುಂಡು ತಗುಲಿ ಗಾಯಗೊಂಡಿದ್ದ ವಿದ್ಯಾರ್ಥಿ ಇದೀಗ ಪ್ರಾಣಾಪಾಯದಿಂದ ಪಾರಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ದೆಹಲಿ ಮೂಲದ ವಿದ್ಯಾರ್ಥಿ ಹರ್ಜೋತ್ ಸಿಂಗ್ ಗುಂಡು ತಗುಲಿದ ಭೀಕರ ಸನ್ನಿವೇಶದ ಬಗ್ಗೆ ಆಸ್ಪತ್ರೆಯಲ್ಲಿ ವಿವರಿಸಿದ್ದಾರೆ.

    ಇದು ಫೆಬ್ರವರಿ 27ರಂದು ನಡೆದ ಘಟನೆ. ನಾನು ಹಾಗೂ ನನ್ನ ಇಬ್ಬರು ಸ್ನೇಹಿತರು ಕ್ಯಾಬ್‍ನಲ್ಲಿ ಪ್ರಯಾಣಿಸುತ್ತಿದ್ದಾಗ 3 ರಿಂದ 4 ಜನರು ನಮ್ಮ ಮೇಲೆ ಗುಂಡಿನ ದಾಳಿ ನಡೆಸಿದ್ದರು. ಇದರಿಂದ ನನಗೆ ಅನೇಕ ಗುಂಡುಗಳು ತಗುಲಿ ಗಾಯಗಳಾಗಿದ್ದವು ಎಂದು ಹರ್ಜೋತ್ ತಿಳಿಸಿದರು. ಇದನ್ನೂ ಓದಿ: ಮತ್ತೊಬ್ಬ ಭಾರತೀಯ ವಿದ್ಯಾರ್ಥಿಗೆ ಗುಂಡೇಟು- ಆಸ್ಪತ್ರೆಗೆ ದಾಖಲು

    ನನಗೆ ಮಾರ್ಚ್ 2ರಂದು ಪ್ರಜ್ಞೆ ಬಂದಿತ್ತು. ಪ್ರಜ್ಞೆ ಬಂದ ತಕ್ಷಣ ನಾನು ನನ್ನ ಮನೆಯವರಿಗೆ ಕರೆ ಮಾಡಿದ್ದೆ. ಸದ್ಯ ದೇವರು ನನಗೆ ಹೊಸ ಜೀವನವನ್ನು ನೀಡಿದ್ದಾರೆ. ನಾನು ಭಾರತಕ್ಕೆ ಹಿಂದಿರುಗಲು ಬಯಸುತ್ತೇನೆ. ಈ ಅಮೂಲ್ಯ ಜೀವನವನ್ನು ನನ್ನ ಕುಟುಂಬದೊಂದಿಗೆ ಕಳೆಯಲು ಬಯಸುತ್ತೇನೆ ಎಂದು ಹೇಳಿದರು. ಇದನ್ನೂ ಓದಿ: ಮೋದಿ 5ನೇ ಸಭೆ – ಉಕ್ರೇನ್‍ನಿಂದ 18 ಸಾವಿರ ಮಂದಿ ಸ್ವದೇಶಕ್ಕೆ

    ಹರ್ಜೋತ್ ಸದ್ಯ ಪ್ರಾಣಾಪಾಯದಿಂದ ಪಾರಾಗಿದ್ದು ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ. ಉಕ್ರೇನ್‍ನಿಂದ ತವರಿಗೆ ಕರೆಸಿಕೊಳ್ಳುವಂತೆ ಹರ್ಜೋತ್ ಭಾರತ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

  • ಮೋದಿ 5ನೇ ಸಭೆ – ಉಕ್ರೇನ್‍ನಿಂದ 18 ಸಾವಿರ ಮಂದಿ ಸ್ವದೇಶಕ್ಕೆ

    ಮೋದಿ 5ನೇ ಸಭೆ – ಉಕ್ರೇನ್‍ನಿಂದ 18 ಸಾವಿರ ಮಂದಿ ಸ್ವದೇಶಕ್ಕೆ

    ನವದೆಹಲಿ: ಆಪರೇಶನ್ ಗಂಗಾ ಕಾರ್ಯಾಚರಣೆಯ ಅಂಗವಾಗಿ ಯುದ್ಧಗ್ರಸ್ಥ ಉಕ್ರೇನ್‍ನಿಂದ ಭಾರತೀಯರನ್ನು ಕರೆತರುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ 5ನೇ ಉನ್ನತ ಮಟ್ಟದ ಸಭೆ ನಡೆಸಿದರು.

    ಸಭೆಯಲ್ಲಿ ವಿದೇಶಾಂಗ ಸಚಿವ ಎಸ್ ಜೈಶಂಕರ್ ಹಾಗೂ ವಿದೇಶಾಂಗ ಕಾರ್ಯದರ್ಶಿ ಹರ್ಷವರ್ಧನ್ ಶ್ರಿಂಗ್ಲಾ ಭಾರತೀಯರ ಸ್ಥಳಾಂತರ ಕಾರ್ಯಾಚರಣೆಯ ಪ್ರಗತಿಯ ಬಗ್ಗೆ ಮಾಹಿತಿ ನೀಡಿದರು. ಇದನ್ನೂ ಓದಿ: ರಷ್ಯಾ ಯುದ್ಧ ಇಡೀ ಯೂರೋಪ್‌ ಭದ್ರತೆಗೆ ಪೆಟ್ಟು ನೀಡಿದೆ: ಬ್ರಿಟಿಷ್‌ ಪ್ರಧಾನಿ ಕಳವಳ

    ಯುದ್ಧ ಪ್ರಾರಂಭವಾದಾಗಿನಿಂದ 18,000 ಕ್ಕೂ ಹೆಚ್ಚು ಭಾರತೀಯರನ್ನು ಬಿಡುಗಡೆ ಮಾಡಲಾಗಿದೆ ಎಂದು ಪ್ರಧಾನಿ ಮೋದಿಗೆ ವಿವರಿಸಿದರು. ಒಡೆಸ್ಸಾ ಹಾಗೂ ಸುಮಿ ಪ್ರದೇಶಗಳಲ್ಲಿ ಸಿಲುಕಿರುವ ಭಾರತೀಯರ ಪರಿಸ್ಥಿತಿ ಹಾಗೂ ಅವರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸುವ ಮಾರ್ಗಗಗಳ ಬಗ್ಗೆ ತಿಳಿಸಿಲಾಯಿತು.

    ಸಭೆಯಲ್ಲಿ ವಿದೇಶಾಂಗ ಸಚಿವ ಎಸ್ ಜೈಶಂಕರ್, ವಾಣಿಜ್ಯ ಸಚಿವ ಪಿಯೂಷ್ ಗೋಯಲ್, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್, ಪ್ರಧಾನಿ ಪ್ರಧಾನ ಕಾರ್ಯದರ್ಶಿ ಪಿಕೆ ಮಿಶ್ರಾ, ಸಂಪುಟ ಕಾರ್ಯದರ್ಶಿ ರಾಜೀವ್ ಗೌಬಾ, ವಿದೇಶಾಂಗ ಕಾರ್ಯದರ್ಶಿ ಹರ್ಷವರ್ಧನ್ ಶ್ರಿಂಗ್ಲಾ ಹಾಗೂ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು. ಇದನ್ನೂ ಓದಿ: ಬಾಹ್ಯಾಕಾಶ ರಾಕೆಟ್‌ನಿಂದ ಅಮೆರಿಕ, ಜಪಾನ್‌ ಧ್ವಜ ತೆಗೆದು ಭಾರತ ಧ್ವಜ ಉಳಿಸಿಕೊಂಡ ರಷ್ಯಾ- Video Viral

    ಉಕ್ರೇನ್ ಗಡಿ ದೇಶಗಳಿಗೆ ಭಾರತದಿಂದ ನಾಲ್ಕು ಕೇಂದ್ರ ಸಚಿವರು ತೆರಳಿದ್ದು, ಇದೀಗ ಭಾರತೀಯರನ್ನು ಕರೆತರುವ ಪ್ರಕ್ರಿಯೆ ಚುರುಕುಗೊಂಡಿದೆ. ಅಧಿಕಾರಿಗಳು ಉಕ್ರೇನ್‍ನ ಉಜ್ಹೋರೋಡ್‍ಗೆ ಸಮೀಪವಿರುವ ವೈಸ್ನೆ ನೆಮೆಕೆಯಲ್ಲಿ ಹೊಸ ಚೆಕ್‍ಪಾಯಿಂಟ್ ಗುರುತಿಸಿದ್ದಾರೆ. ಭಾರತೀಯ ವಿದ್ಯಾರ್ಥಿಗಳಿಗೆ ಹಂಗೇರಿಯ ಬುಡಾಪೆಸ್ಟ್‍ಗೆ ಹೋಗುವ ಬದಲು ಸ್ಲೋವಾಕಿಯಾಗೆ ತೆರಳಲು ಸಲಹೆ ನೀಡಲಾಗಿದೆ. ಭಾರತೀಯರನ್ನು ಕರೆತರಲು ಮಾಡಲಾದ ವ್ಯವಸ್ಥೆಯನ್ನು ಪರೀಕ್ಷಿಸಲು ಕೇಂದ್ರ ಸಚಿವ ಕಿರಣ್ ರಿಜಿಜು ಖುದ್ದಾಗಿ ಸ್ಥಳಕ್ಕೆ ಭೆಟಿ ನೀಡಿದ್ದಾರೆ.

  • 16 ಗಂಟೆ ರೈಲಿನಲ್ಲೇ ನಿಂತುಕೊಂಡೆ ಪ್ರಯಾಣ ಮಾಡಿದ್ದೇವೆ: ನೋವು ಹಂಚಿಕೊಂಡ ವಿದ್ಯಾರ್ಥಿಗಳು!

    16 ಗಂಟೆ ರೈಲಿನಲ್ಲೇ ನಿಂತುಕೊಂಡೆ ಪ್ರಯಾಣ ಮಾಡಿದ್ದೇವೆ: ನೋವು ಹಂಚಿಕೊಂಡ ವಿದ್ಯಾರ್ಥಿಗಳು!

    ಮಡಿಕೇರಿ: ಉಕ್ರೇನ್-ರಷ್ಯಾ ದೇಶಗಳ ನಡುವೆ ನಡೆಯುತ್ತಿರುವ ಯುದ್ಧ ಇಂದು 9ನೇ ದಿನಕ್ಕೆ ಕಾಲಿಟ್ಟಿದೆ. ಸಾವಿರಾರು ಭಾರತೀಯರು ಯುದ್ಧ ಪೀಡಿತ ಪ್ರದೇಶವನ್ನು ಕಂಡು ಆತಂಕದಲ್ಲಿ ದಿನ ಕಳೆಯುತ್ತಿದ್ದಾರೆ. ಮಕ್ಕಳ ಪರಿಸ್ಥಿತಿ ಕಂಡು ಪೋಷಕರು ಕಂಗಾಲು ಆಗಿದ್ದಾರೆ. ಇನ್ನೂ ಕೆಲ ಪೋಷಕರು ಮಕ್ಕಳಿಗೆ ಧೈರ್ಯ ತುಂಬಿ ಯುದ್ಧ ಪೀಡಿತ ಪ್ರದೇಶದಿಂದ ಹೊರಡುವ ಪ್ರಯತ್ನ ಮಾಡಿ ಎಂದು ಹೇಳುತ್ತಿದ್ದಾರೆ. ಇದರಿಂದ ಅಲ್ಲಿರುವ ವಿದ್ಯಾರ್ಥಿಗಳು ಹೈ ರಿಸ್ಕ್ ತೆಗೆದುಕೊಂಡು ತಾಯ್ನಾಡಿಗೆ ಬರಲು ಮುಂದಾಗಿದ್ದಾರೆ.

    ಕೊಡಗು ಜಿಲ್ಲೆಯ ನಾಲ್ವರು ವಿದ್ಯಾರ್ಥಿಗಳು ಹೈ ರಿಸ್ಕ್ ತೆಗೆದುಕೊಂಡು ಉಕ್ರೇನ್ ಖಾರ್ಕಿವ್ ನಗರದಿಂದ ಸ್ವಂತ ರಿಸ್ಕ್ ನಲ್ಲಿ  ತಾಯ್ನಾಡಿಗೆ ಆಗಮಿಸಿದ್ದಾರೆ. ಹೌದು, ಫೆಬ್ರವರಿ 23 ರಲ್ಲಿ ಉಕ್ರೇನ್ ರಷ್ಯಾ ದೇಶಗಳಲ್ಲಿ ಆರಂಭವಾದ ಯುದ್ಧ ಇಂದಿಗೂ ಮುಗಿದಿಲ್ಲ. ಎಂಬಿಬಿಎಸ್ ವಿದ್ಯಾಭ್ಯಾಸ ಮಾಡಲು ಹೋದ ಕರ್ನಾಟಕ ವಿದ್ಯಾರ್ಥಿಗಳು ಈ ಯುದ್ಧವನ್ನು ಕಂಡು ಕಂಗಾಲು ಆಗಿದ್ದಾರೆ. ಹೇಗಾದರೂ ಮಾಡಿ ತಮ್ಮ ತಾಯ್ನಾಡಿಗೆ ಹೋಗಬೇಕು ಎಂದು ಕಾಲ್ನಡಿಗೆಯಲ್ಲೇ ಕೆಲ ವಿದ್ಯಾರ್ಥಿಗಳು ಬರುತ್ತಿದ್ದಾರೆ. ಇದನ್ನೂ ಓದಿ: ಉತ್ತರಕನ್ನಡದ ಕರಾವಳಿ ಭಾಗಕ್ಕೆ ಬಜೆಟ್‍ನಲ್ಲಿ ಸಿಕ್ಕಿದ್ದೇನು?

    ಕೊಡಗು ಜಿಲ್ಲೆಯ 19 ವಿದ್ಯಾರ್ಥಿಗಳ ಪೈಕಿ ಈಗಾಗಲೇ ಜಿಲ್ಲೆಗೆ 4 ವಿದ್ಯಾರ್ಥಿಗಳು ಹೈ ರಿಸ್ಕ್ ತೆಗೆದುಕೊಂಡು ತಮ್ಮ ಊರಿಗೆ ಮರಳಿದ್ದಾರೆ. ಕೊಡಗಿನ ಕುಶಾಲನಗರದ ಇಬ್ಬರು ವಿದ್ಯಾರ್ಥಿಗಳಾದ ಚಂದನ್ ಗೌಡ ಹಾಗೂ ಲಿಖಿತ್ ಹೈ ರಿಸ್ಕ್ ತೆಗೆದುಕೊಂಡು ಜಿಲ್ಲೆಗೆ ಇಂದು ಆಗಮಿಸಿದ್ದಾರೆ. ಅಷ್ಟೇ ಅಲ್ಲದೆ ಉಕ್ರೇನ್ ನಲ್ಲಿ ನಡೆದ ಕರಾಳ ದಿನಗಳ ಬಗ್ಗೆ ಪಬ್ಲಿಕ್ ಟಿವಿಯೊಂದಿಗೆ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ.

    ನಾವು ಅಲ್ಲಿಂದ ಬರುವಾಗ ನಮ್ಮ ಸ್ವಂತ ರಿಸ್ಕ್ ನಲ್ಲಿ ಬಂದಿದ್ದೇವೆ. ಊಟ ತಿಂಡಿ ಇಲ್ಲದೆ ಸುಮಾರು 16 ಗಂಟೆ ರೈಲಿನಲ್ಲೇ ನಿಂತುಕೊಂಡೆ ಪ್ರಯಾಣ ಮಾಡಿದ್ದೇವೆ. ಉಕ್ರೇನ್‍ನಲ್ಲಿ ಇರುವಾಗ ಅಲ್ಲಿಯ ಯುದ್ಧದ ಭೀಕರತೆ ಬಗ್ಗೆ ನೆನೆಸಿಕೊಂಡರೇ ಈಗಾಲೂ ನಮಗೆ ಭಯವಾಗುತ್ತದೆ. ಅಲ್ಲಿ ನಡೆಯುತ್ತಿದ್ದ ಯುದ್ಧದ ಶಬ್ದಗಳು ಈಗಲೂ ಇಲ್ಲೇ ಯುದ್ಧ ನಡೆಯುತ್ತಿದೆ ಅನಿಸುತ್ತದೆ. ಆ ಶಾಕ್ ನಿಂದ ಹೋರ ಬರಲು ಕೆಲ ದಿನಗಳು ಬೇಕು ಎಂದ ವಿದ್ಯಾರ್ಥಿಗಳು.

    ತಮ್ಮ ರೂಂನಲ್ಲಿ ಜೊತೆಯಾಗಿದ್ದ ಮೃತ ನವೀನ್ ಅವರ ಬಗ್ಗೆ ನೆನೆಪು ಮಾಡಿಕೊಂಡು ಇದ್ದಾರೆ ತುಂಬಾ ನೋವು ಆಗುತ್ತದೆ. ಕಳೆದ ಎರಡು ವರ್ಷ ನವೀನ್ ನಾವು ಒಟ್ಟಿಗೆ ಇದ್ದೆವು. ಅವನ ಅಗಲಿಕೆ ಕೂಡ ನಮಗೆ ಬಹಳ ಬೇಸರ ತಂದಿದೆ. ಖಾರ್ಕಿವ್ ಪ್ರದೇಶದ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುತ್ತಿದೆ. ನಮ್ಮ ಯುನಿವರ್ಸಿಟಿ ಪಕ್ಕದ ಸಾಕಷ್ಟು ಯುನಿವರ್ಸಿಟಿಗಳು ಈಗಾಗಲೇ ನಾಮಾವಶೇಷವಾಗಿದೆ. ನಮ್ಮ ಯೂನಿವರ್ಸಿಟಿ ಉಳಿಯುತ್ತೋ ಅನ್ನೋದು ಕೂಡ ಗೊತ್ತಿಲ್ಲಾ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಇದನ್ನೂ ಓದಿ: ‘ಕೊನೆಗೂ ಸಾಧಿಸಿದ್ವಿ’ – ರಷ್ಯಾ ಟ್ಯಾಂಕ್ ತೆಗೆದುಕೊಂಡು ಜಾಲಿ ರೈಡ್ ಮಾಡಿದ ಉಕ್ರೇನಿ ಪ್ರಜೆಗಳು!

    ಸದ್ಯ ನಾವು ತಾಯ್ನಾಡಿಗೆ ಬಂದಿದ್ದೇವೆ. ಇದು ಬಹಳ ಸಂತೋಷ ತಂದಿದೆ. ನಮ್ಮ ಜೊತೆ ಇರುವ ಅನೇಕ ಸ್ನೇಹಿತರು ಅಲ್ಲಿಯೇ ಇದ್ದಾರೆ. ಅವರು ಬಂದರೆ ಮತ್ತಷ್ಟು ಖುಷಿಯಾಗುತ್ತದೆ ಎಂದು ವಿದ್ಯಾರ್ಥಿಗಳು ತಿಳಿಸಿದರು.

  • ಪುಟಿನ್ ನಮ್ಮ ಚಿಕ್ಕಪ್ಪ, ಯುದ್ಧ ನಡೆಯಲ್ಲ – ಸರ್ಕಾರದ ಸೂಚನೆಯನ್ನು ಲೇವಡಿ ಮಾಡಿದ್ದ ವಿದ್ಯಾರ್ಥಿಗಳು

    ಪುಟಿನ್ ನಮ್ಮ ಚಿಕ್ಕಪ್ಪ, ಯುದ್ಧ ನಡೆಯಲ್ಲ – ಸರ್ಕಾರದ ಸೂಚನೆಯನ್ನು ಲೇವಡಿ ಮಾಡಿದ್ದ ವಿದ್ಯಾರ್ಥಿಗಳು

    ಬೆಂಗಳೂರು: ಉಕ್ರೇನ್‍ನಿಂದ ವಿದ್ಯಾರ್ಥಿಗಳು ಭಾರತದಲ್ಲಿ ಲ್ಯಾಂಡ್ ಆಗುತ್ತಿದ್ದಂತೆ ಒಂದು ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ.

    ಪುಟಿನ್ ನಮ್ಮ ಚಿಕ್ಕಪ್ಪ ಇದ್ದಂತೆ. ಉಕ್ರೇನ್ ಮೇಲೆ ರಷ್ಯಾ ದಾಳಿ ಮಾಡುವುದಿಲ್ಲ. ಮಾಧ್ಯಮಗಳು ಟಿಆರ್‌ಪಿಗಾಗಿ ಯುದ್ಧದ ವರದಿ ಮಾಡುತ್ತಿವೆ ಎಂದು ಹೇಳಿ ವ್ಯಂಗ್ಯಮಾಡಿದ್ದಾರೆ.

    ರಷ್ಯಾ ದಾಳಿ ಮಾಡುವ ಸಾಧ್ಯತೆ ಹೆಚ್ಚಿದ್ದ ಕಾರಣ ಉಕ್ರೇನ್‍ನಲ್ಲಿರುವ ಭಾರತದ ರಾಯಭಾರ ಕಚೇರಿ ಫೆ. 15 ರಂದೇ ದೇಶವನ್ನು ತೊರೆಯುವಂತೆ ವಿದ್ಯಾರ್ಥಿಗಳಿಗೆ ಸೂಚಿಸಿತ್ತು. ಆದರೆ ವಿದ್ಯಾರ್ಥಿಗಳು ಈ ಸೂಚನೆಯನ್ನು ಧಿಕ್ಕರಿಸಿ ಇಲ್ಲಿ ಏನು ನಡೆಯುವುದಿಲ್ಲ. ನಾವೆಲ್ಲ ನೃತ್ಯ, ಹಾಡನ್ನು ಹಾಡಿ ಎಂಜಾಯ್ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ. 2 ವಾರದ ಹಿಂದೆ ಈ ವಿಡಿಯೋ ಅಪ್ಲೋಡ್ ಆಗಿದ್ದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ವಿಡಿಯೋದಲ್ಲಿ ಏನಿದೆ?
    ಭಾರತೀಯ ಮೂಲದ ವೈದ್ಯಕೀಯ ವಿಧ್ಯಾರ್ಥಿಯೊಬ್ಬ ಸಾಮಾಜಿಕ ಜಾಲತಾಣದಲ್ಲಿ ವೀಡಿಯೋವೊಂದನ್ನು ಹಂಚಿಕೊಂಡಿದ್ದಾನೆ. ವೀಡಿಯೋದಲ್ಲಿ ವಿದ್ಯಾರ್ಥಿಯು ಉಕ್ರೇನ್‍ನವೊಂದು ಪ್ರತಿಷ್ಠಿತ ವೈದ್ಯಕೀಯ ಕಾಲೇಜಿಗೆ ತೆರಳಿದ್ದಾನೆ. ಅಲ್ಲಿಯ ಕೆಲ ಭಾರತೀಯ ವಿದ್ಯಾರ್ಥಿಗಳೊಂದಿಗೆ ಚಿಕ್ ಚಾಟ್ ಮಾಡಿದ ಅವನು, ಉಕ್ರೇನ್‍ನಲ್ಲಿ ನಮಗೆ ಯಾವುದೇ ರೀತಿಯ ಸಮಸ್ಯೆಯಾಗಿಲ್ಲ. ಫೆಬ್ರವರಿ 16ರಿಂದ ನಮಗೆ ಯಾವುದೇ ಸಮಸ್ಯೆ ಆಗಿಲ್ಲ. ನಾವೆಲ್ಲರೂ ಅಂದು ತರಗತಿಗೆ ತೆರಳಿ ಪಾಠ ಕೇಳಿ, ಆರಾಮವಾಗಿ ಮನೆಗೆ ತೆರಳಿ ವಿಶ್ರಾಂತಿ ಪಡೆದಿದ್ದೇವೆ ಸಮಯ ಹೋಗಿದ್ದೇ ಗೊತ್ತಾಗಿಲ್ಲ ಎಂದಿದ್ದಾಳೆ.

    ರಷ್ಯಾವು ಉಕ್ರೇನ್‍ನಿಂದ ಟ್ಯಾಂಕರ್‌ಗಳನ್ನು ಹಿಂಪಡೆದ ವಿಚಾರವಾಗಿ ಮಾತನಾಡಿದ ಅವಳು, ಹಾಗೇನಿಲ್ಲ ಮಾಧ್ಯಮಗಳಿಗೆ ಮಾಡೋಕೆ ಬೇರೆನು ಕೆಲಸವಿಲ್ಲ. ಇಂತಹ ಕೆಲ ವಿಚಾರಗಳು ಸಿಕ್ಕರೆ ಟಿಆರ್‌ಪಿಗೋಸ್ಕರ್ ಏನೇನಾದರೂ ಮಾಡತ್ತಾರೆ. ಅವರಿಗೆ ಮಾಡೋಕೆ ಬೇರೆ ಯಾವ ಸುದ್ದಿಯಿಲ್ಲ. ಅದಕ್ಕೆ ಏನೇನೂ ಸುಳ್ಳು ಸುದ್ದಿ ಹಬ್ಬಿಸುತ್ತಾರೆ ಎಂದಳು. ಇದೇ ವೇಳೆ ವೀಡಿಯೋದಲ್ಲಿ ಮತ್ತೋರ್ವ ವಿದ್ಯಾರ್ಥಿನಿ ಮಾತನಾಡಿ, ಎನು ಆಗಿಲ್ಲ ಆದರೆ ಮನೆಯಲ್ಲಿ ಪೋಷಕರು ಸ್ವಲ್ಪ ಭಯಪಡುತ್ತಿದ್ದಾರೆ ಎಂದಳು.

    ಮತ್ತೊಬ್ಬ ವಿದ್ಯಾರ್ಥಿ ಮಾತನಾಡಿ, ಉಕ್ರೇನ್‍ನಲ್ಲಿ ಯಾವುದೇ ಯುದ್ಧವೇ ಆಗಿಲ್ಲ. ರಷ್ಯಾದವರು ಉಕ್ರೇನ್ ಮೇಲೆ ದಾಳಿ ನಡೆಸುತ್ತಾರೆಂದು ಕಾಯುತ್ತಾ ಕುಳಿತ್ತಿದ್ದೆವು. ನನಗೆ ಯುದ್ಧ ನೋಡುವ ಆಸೆ ತುಂಬಾ ಇತ್ತು. ರಷ್ಯಾದ ಪುಟಿನ್‍ಗೆ ನಾನು ಕರೆ ಮಾಡಿ ಯುದ್ಧ ಬೇಡ ಎಂದು ಹೇಳಿದ್ದೇನೆ. ಪುಟಿನ್ ನಮ್ಮ ಚಿಕ್ಕಪ್ಪ ಇದ್ದಂತೆ ಎಂದು ವ್ಯಂಗ್ಯವಾಡಿದ್ದಾನೆ.

    ಮತ್ತೊಬ್ಬ ವಿದ್ಯಾರ್ಥಿ ಮಾತನಾಡಿ, ಯುದ್ಧ ಏನೋ ನಡಿಯುತ್ತಿದೆ ನಡೆಯಲಿ ಬಿಡಿ. ಮುಖ್ಯವಾಗಿ ಹೇಳುವದಾದರೆ ಇಡೀ ದೇಶವೇ ಇಷ್ಟೊಂದು ಇಕ್ಕಟ್ಟಿನ ಪರಿಸ್ಥಿತಿಯಲ್ಲಿದೆ ಆದರೆ ನಮ್ಮ ವಿಶ್ವವಿದ್ಯಾಲಯದಿಂದ ಯಾರಿಗೆ ಡ್ಯಾನ್ಸ್ ಹಾಗೂ ಹಾಡಲು ಬರುತ್ತೆ ಹೇಳಿ ಎಂದು ಕೆಲವು ಸೂಚನೆಗಳು ಬರುತ್ತಿದ್ದವು ಎಂದು ಹೇಳಿದ್ದಾನೆ. ಅಷ್ಟೇ ಅಲ್ಲದೇ ವೀಡಿಯೋದ ಕೊನೆಯಲ್ಲಿ ಇಲ್ಲಿ ನಮಗೆ ಇಲ್ಲದ ಸಮಸ್ಯೆ ನಿಮಗ್ಯಾಕೆ ಎಂದು ಪ್ರಶ್ನಿಸಿ ಅಹಂಕಾರ ಮೆರೆದಿದ್ದಾರೆ.‌

  • ಖಾರ್ಕಿವ್‍ನಿಂದ ಮರಳಿದ ಮುಂಡಗೋಡಿನ ಸ್ನೇಹಾ

    ಖಾರ್ಕಿವ್‍ನಿಂದ ಮರಳಿದ ಮುಂಡಗೋಡಿನ ಸ್ನೇಹಾ

    ಕಾರವಾರ: ಉಕ್ರೇನ್‍ನ ಖಾರ್ಕಿವ್‍ನಲ್ಲಿ ಸಿಲುಕಿದ್ದ ಉತ್ತರಕನ್ನಡ ಜಿಲ್ಲೆಯ ಮುಂಡಗೋಡಿನ ಸ್ನೇಹಾ ಹೊಸಮನಿ ಇಂದು ದೆಹಲಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದು, ದೆಹಲಿ ಕರ್ನಾಟಕ ಭವನಕ್ಕೆ ತೆರಳಿದ್ದಾರೆ.

    ಸ್ನೇಹಾರೊಂದಿಗೆ 15ಕ್ಕೂ ಅಧಿಕ ಮಂದಿ ಕನ್ನಡಿಗರು ದೆಹಲಿಗೆ ಆಗಮಿಸಿದ್ದು, ಇಂದು ದೆಹಲಿಯಿಂದ ಬೆಂಗಳೂರಿಗೆ ತೆರಳಿ ಭಾನುವಾರ ಊರಿಗೆ ಮರಳಲಿದ್ದಾರೆ ಎಂದು ಕುಟುಂಬದವರು ಮಾಹಿತಿ ನೀಡಿದ್ದಾರೆ.

    ಸ್ನೇಹಾ ಅವರು ಉಕ್ರೆನ್‍ನ ಖಾರ್ಕಿವ್‍ನಲ್ಲಿ ನಾಲ್ಕನೇ ವರ್ಷದ ವೈದ್ಯಕೀಯ ಶಿಕ್ಷಣ ಪಡೆಯುತ್ತಿದ್ದು, ಉಕ್ರೇನ್‍ನ ಖಾರ್ಕಿವ್‍ನಲ್ಲಿ ಸಿಲುಕಿಕೊಂಡಿದ್ದರು. ಕೇಂದ್ರ ಗೃಹ ಇಲಾಖೆ ಹಾಗೂ ಉಕ್ರೇನ್ ಭಾರತೀಯ ರಾಯಭಾರಿ ಕಚೇರಿ ಸೂಚನೆಯಂತೆ ರುಮೇನಿಯಾಕ್ಕೆ ತನ್ನ ಸ್ನೇಹಿತರೊಂದಿಗೆ ಪ್ರಯಾಣ ಬೆಳಸಿದ್ದರು. ರುಮೇನಿಯಾ ಗಡಿಯಿಂದ ಭಾರತಕ್ಕೆ ಮರಳಿರುವ ಅವರು ಭಾನುವಾರ ಮನೆಗೆ ತೆರಳಲಿದ್ದಾರೆ.  ಇದನ್ನೂ ಓದಿ: ಮತ್ತೊಬ್ಬ ಭಾರತೀಯ ವಿದ್ಯಾರ್ಥಿಗೆ ಗುಂಡೇಟು- ಆಸ್ಪತ್ರೆಗೆ ದಾಖಲು

    ಕಳೆದ ಒಂದು ವಾರದಿಂದ ಉಕ್ರೇನ್ ಮೇಲೆ ರಷ್ಯಾ ದಾಳಿ ನಡೆಸುತ್ತಿದೆ. ಅದರಲ್ಲೂ ಉಕ್ರೇನ್‍ನ ಪ್ರಮುಖ ನಗರಗಳಾದ ಕೀವ್ ಮತ್ತು ಖಾರ್ಕಿವ್ ದಾಳಿಗೆ ತತ್ತರಿಸಿಹೋಗಿದೆ. ಅಲ್ಲಿನ ಭಾರತೀಯ ವಿದ್ಯಾರ್ಥಿಗಳು ಪ್ರಸ್ತುತ ಯುದ್ಧ ಪೀಡಿತ ದೇಶ ಉಕ್ರೇನ್‍ನಿಂದ ಪಲಾಯನ ಮಾಡುತ್ತಿದ್ದಾರೆ. ಭಾರತಕ್ಕೆ ಸುರಕ್ಷಿತವಾಗಿ ಮರಳಲು ಪೋಲೆಂಡ್‍ನ ಗಡಿಯನ್ನು ತಲುಪಲು ಪ್ರಯತ್ನಿಸುತ್ತಿದ್ದಾರೆ. ಕೇಂದ್ರ ಸಚಿವರಾದ ಹರ್ದೀಪ್ ಸಿಂಗ್ ಪುರಿ, ಜ್ಯೋತಿರಾದಿತ್ಯ ಎಂ ಸಿಂಧಿಯಾ, ಕಿರಣ್ ರಿಜಿಜು ಮತ್ತು ಜನರಲ್ (ನಿವೃತ್ತ) ವಿಕೆ ಸಿಂಗ್ ಉಕ್ರೇನ್‍ಗೆ ಹೊಂದಿಕೊಂಡಿರುವ ದೇಶಗಳಲ್ಲಿರುವ ಭಾರತೀಯರನ್ನು ಸ್ಥಳಾಂತರಿಸುವ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಇದನ್ನೂ ಓದಿ: ನಾನೇನು ಕಚ್ಚುವುದಿಲ್ಲ, ಮತ್ತೇಕೆ ನಿಮಗೆ ಭಯ? – ಪುಟೀನ್‍ಗೆ ವ್ಯಂಗ್ಯ ಮಾಡಿದ ಉಕ್ರೇನ್ ಅಧ್ಯಕ್ಷ

  • ಮತ್ತೊಬ್ಬ ಭಾರತೀಯ ವಿದ್ಯಾರ್ಥಿಗೆ ಗುಂಡೇಟು- ಆಸ್ಪತ್ರೆಗೆ ದಾಖಲು

    ಮತ್ತೊಬ್ಬ ಭಾರತೀಯ ವಿದ್ಯಾರ್ಥಿಗೆ ಗುಂಡೇಟು- ಆಸ್ಪತ್ರೆಗೆ ದಾಖಲು

    ಕೀವ್: ಉಕ್ರೇನ್‍ನ ಕೀವ್‍ನಲ್ಲಿ ಮತ್ತೊಬ್ಬ ಭಾರತೀಯ ವಿದ್ಯಾರ್ಥಿಗೆ ಗುಂಡು ತಗುಲಿದೆ ಎಂದು ಕೇಂದ್ರ ಸಚಿವ ವಿ.ಕೆ ಸಿಂಗ್ ಮಾಹಿತಿ ನೀಡಿದ್ದಾರೆ.

    ಕೀವ್‍ನಲ್ಲಿ ಮತ್ತೊಬ್ಬ ವಿದ್ಯಾರ್ಥಿಗೆ ಗುಂಡು ತಗುಲಿದೆ ಎನ್ನುವ ಮಾಹಿತಿ ಸಿಕ್ಕಿದೆ. ಕೂಡಲೆ ಆತನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಎಲ್ಲರೂ ಸುರಕ್ಷಿತ ಸ್ಥಳಕ್ಕೆ ಶಿಫ್ಟ್ ಮಾಡುವ ಕೆಲಸ ನಡೆಯುತ್ತಿದೆ. ಗಾಯಾಗೊಂಡಿರುವ ವಿದ್ಯಾರ್ಥಿ ಯಾರು? ಎನ್ನುವ ಮಾಹಿತಿ ಇಲ್ಲ. ಹೆಚ್ಚಿನ ಮಾಹಿತಿ ತಿಳಿದು ಬರಬೇಕಾಗಿದೆ. ಇದನ್ನೂ ಓದಿ: ನಾನೇನು ಕಚ್ಚುವುದಿಲ್ಲ, ಮತ್ತೇಕೆ ನಿಮಗೆ ಭಯ? – ಪುಟೀನ್‍ಗೆ ವ್ಯಂಗ್ಯ ಮಾಡಿದ ಉಕ್ರೇನ್ ಅಧ್ಯಕ್ಷ

    ಪ್ರತಿಯೊಬ್ಬರೂ ಕೀವ್ ತೊರೆಯಬೇಕು ಎಂಬ ಆದ್ಯತೆಯ ಮೇಲೆ ಭಾರತೀಯ ರಾಯಭಾರ ಕಚೇರಿ ಈ ಹಿಂದೆಯೇ ತೆರವುಗೊಳಿಸಿತ್ತು. ಕೆಲವು ದಿನಗಳ ಹಿಂದೆ ರಷ್ಯಾ, ಉಕ್ರೇನ್ ಮೇಲೆ ನಡೆಸಿದ ಶೆಲ್ ದಾಳಿಗೆ ಕರ್ನಾಟಕದ ವಿದ್ಯಾರ್ಥಿ ನವೀನ್ ಸದಾವನ್ನಪ್ಪಿದ್ದಾರೆ. ಇದೀಗ ಒಬ್ಬ ವಿದ್ಯಾರ್ಥಿಗೆ ಗುಂಡು ತಗುಲಿದ್ದು, ಚಿಕಿತ್ಸೆ ನೀಡಲಾಗುತ್ತಿದೆ ಎನ್ನುವ ಮಾಹಿತಿ ಸಿಕ್ಕಿದೆ. ಇದನ್ನೂ ಓದಿ: ಗಡಿಗಳಲ್ಲಿ ಹೆಣ್ಮಕ್ಕಳ ಮೇಲೆ ಸೈನಿಕರಿಂದ ಹಲ್ಲೆ – ಕರಾಳತೆ ಬಿಚ್ಚಿಟ್ಟ ವಿದ್ಯಾರ್ಥಿನಿಯರು

    ನಾಗರಿಕ ವಿಮಾನಯಾನ ಸಚಿವಾಲಯದ (ಮೊಸಿಎ) ರಾಜ್ಯ ಸಚಿವ (ಎಂಒಎಸ್) ಜನರಲ್ ವಿ.ಕೆ ಸಿಂಗ್ ಪೋಲೆಂಡ್‍ನ ರ್ಜೆಸ್ಜೋವ್ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಹೆಚ್ಚಿನ ಮಾಹಿತಿಯನ್ನು ಬಹಿರಂಗಪಡಿಸಿದರು. ಯುದ್ಧದ ಸಂದರ್ಭದಲ್ಲಿ, ಗನ್‍ನಲ್ಲಿರುವ ಬುಲೆಟ್ ಎದುರಿರುವ ಯಾರು, ಧರ್ಮ, ರಾಷ್ಟ್ರೀಯತೆಯನ್ನು ನೋಡುವುದಿಲ್ಲ ಎಂದಿದ್ದಾರೆ. ಇದನ್ನೂ ಓದಿ: ಉಕ್ರೇನ್‍ನಲ್ಲಿರುವ ಅತೀ ದೊಡ್ಡ ಅಣುಸ್ಥಾವರದ ಮೇಲೆ ರಷ್ಯಾ ದಾಳಿ

    ವಿದ್ಯಾರ್ಥಿಗಳು ಪ್ರಸ್ತುತ ಯುದ್ಧ ಪೀಡಿತ ದೇಶ ಉಕ್ರೇನ್‍ನಿಂದ ಪಲಾಯನ ಮಾಡುತ್ತಿದ್ದಾರೆ. ಭಾರತಕ್ಕೆ ಸುರಕ್ಷಿತವಾಗಿ ಮರಳಲು ಪೋಲೆಂಡ್‍ನ ಗಡಿಯನ್ನು ತಲುಪಲು ಪ್ರಯತ್ನಿಸುತ್ತಿದ್ದಾರೆ. ಕೇಂದ್ರ ಸಚಿವರಾದ ಹರ್ದೀಪ್ ಸಿಂಗ್ ಪುರಿ, ಜ್ಯೋತಿರಾದಿತ್ಯ ಎಂ ಸಿಂಧಿಯಾ, ಕಿರಣ್ ರಿಜಿಜು ಮತ್ತು ಜನರಲ್ (ನಿವೃತ್ತ) ವಿಕೆ ಸಿಂಗ್ ಉಕ್ರೇನ್‍ಗೆ ಹೊಂದಿಕೊಂಡಿರುವ ದೇಶಗಳಲ್ಲಿರುವ ಭಾರತೀಯರನ್ನು ಸ್ಥಳಾಂತರಿಸುವ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಇದನ್ನೂ ಓದಿ: ರಷ್ಯಾ ದಾಳಿಗೆ ಮೃತಪಟ್ಟ ಕನ್ನಡಿಗ ನವೀನ್ ಮೃತದೇಹ ಪತ್ತೆ