Tag: ರಷ್ಯಾ ಜೆಟ್

  • ಫಸ್ಟ್‌ ಟೈಂ ನೇರ ಮುಖಾಮುಖಿ – ಅಮೆರಿಕ ಡ್ರೋನ್‍ಗೆ ರಷ್ಯಾದ ಯುದ್ಧ ವಿಮಾನ ಡಿಕ್ಕಿ

    ಫಸ್ಟ್‌ ಟೈಂ ನೇರ ಮುಖಾಮುಖಿ – ಅಮೆರಿಕ ಡ್ರೋನ್‍ಗೆ ರಷ್ಯಾದ ಯುದ್ಧ ವಿಮಾನ ಡಿಕ್ಕಿ

    ವಾಷಿಂಗ್ಟನ್‌/ ಮಾಸ್ಕೋ: ಉಕ್ರೇನ್‌ (Ukraine) ವಿರುದ್ಧ ಯುದ್ಧ ಆರಂಭವಾದ ಬಳಿಕ ಮೊದಲ ಬಾರಿಗೆ ಅಮೆರಿಕ (USA) ಮತ್ತು ರಷ್ಯಾ (Russia) ಮುಖಾಮುಖಿಯಾಗಿದೆ. ರಷ್ಯಾದ Su-27 ಜೆಟ್ ಫೈಟರ್ ಕಪ್ಪು ಸಮುದ್ರದ ಮೇಲೆ ಅಮೆರಿಕದ MQ-9 ರೀಪರ್ (MQ-9 Reaper) ಡ್ರೋನ್‍ಗೆ ಡಿಕ್ಕಿ ಹೊಡೆದಿದೆ ಎಂದು ಯುಎಸ್ ಮಿಲಿಟರಿಯ ಯುರೋಪಿಯನ್ ಕಮಾಂಡ್ ತಿಳಿಸಿದೆ.

    ನಮ್ಮ MQ-9 ಡ್ರೋನ್‌ ಅಂತಾರಾಷ್ಟ್ರೀಯ ವಾಯುಪ್ರದೇಶದಲ್ಲಿ ಎಂದಿನಂತೆ ಕಾರ್ಯಾಚರಣೆ ನಡೆಸುತ್ತಿತ್ತು. ಅದನ್ನು ರಷ್ಯಾದ ಜೆಟ್ ತಡೆಹಿಡಿದು ಹೊಡೆದುರುಳಿಸಿದೆ. ಇದರ ಪರಿಣಾಮವಾಗಿ ಡ್ರೋನ್‌ ಪತನಗೊಂಡಿದೆ ಎಂದು ಅಮೆರಿಕ ಹೇಳಿದೆ.

     

    ಬ್ರಸೆಲ್ಸ್‌ನಲ್ಲಿರುವ ನ್ಯಾಟೋ ರಾಜತಾಂತ್ರಿಕರು ಘಟನೆಯನ್ನು ದೃಢಪಡಿಸಿದ್ದಾರೆ. ಕಣ್ಗಾವಲು ಮಾಡಲು ಅಮೆರಿಕ MQ-9 ಬಳಸುತ್ತಿದೆ. ರಷ್ಯಾದ ನೌಕಾ ಪಡೆಗಳ ಮೇಲೆ ಕಣ್ಣಿಟ್ಟು ಕಪ್ಪು ಸಮುದ್ರದ ಮೇಲೆ ದೀರ್ಘಕಾಲ ಕಾರ್ಯನಿರ್ವಹಿಸುತ್ತಿತ್ತು. ಇದನ್ನೂ ಓದಿ: ಅಮೆರಿಕನ್ ಬ್ಯಾಂಕ್ ದಿವಾಳಿ – ಮಾಧ್ಯಮಗಳ ಪ್ರಶ್ನೆ ನಿರ್ಲಕ್ಷಿಸಿ ಹೊರನಡೆದ ಬೈಡನ್

    ಅಮೆರಿಕದ ಆರೋಪವನ್ನು ರಷ್ಯಾ ತಿರಸ್ಕರಿಸಿದೆ. MQ-9 ಡ್ರೋನ್‌ ರಷ್ಯಾದ ಗಡಿಯ ಬಳಿ ಹಾರಾಟ ನಡೆಸುತ್ತಿತ್ತು. ಈ ಹಿನ್ನೆಲೆಯಲ್ಲಿ ನಾವು ಎಚ್ಚರಿಕೆ ನೀಡಿದೆವು. ಈ ವೇಳೆ ಡ್ರೋನ್‌ ಎತ್ತರದಲ್ಲಿ ಸಂಚರಿಸುತ್ತಿದ್ದ ಕಾರಣ ನಿಯಂತ್ರಣ ಮಾಡಲು ಸಾಧ್ಯವಾಗದೇ ಪತನಗೊಂಡು ನೀರಿನ ಮೇಲೆ ಬಿದ್ದಿದೆ ಎಂದು ತಿಳಿಸಿದೆ.

    ಏನಿದು MQ-9 ರೀಪರ್?
    MQ-9 ರೀಪರ್ ಒಂದು ದೊಡ್ಡ ಮಾನವರಹಿತ ವಿಮಾನವಾಗಿದ್ದು ಇದನ್ನು ಇಬ್ಬರು ವ್ಯಕ್ತಿಗಳು ದೂರದಿಂದಲೇ ನಿರ್ವಹಿಸಬಹುದು. ಇದು ನೆಲದ ನಿಯಂತ್ರಣ ಕೇಂದ್ರ ಮತ್ತು ಉಪಗ್ರಹ ಉಪಕರಣಗಳನ್ನು ಒಳಗೊಂಡಿದೆ ಮತ್ತು 66-ಅಡಿ (20-ಮೀಟರ್) ರೆಕ್ಕೆಗಳನ್ನು ಹೊಂದಿದೆ.

    ಇರಾಕ್ ಮತ್ತು ಅಫ್ಘಾನಿಸ್ತಾನದ ಯುದ್ಧಗಳ ಸಮಯದಲ್ಲಿ ಇದನ್ನು ಕಣ್ಗಾವಲು ಇಡಲು ಬಳಸಲಾಗಿತ್ತು. ಎಂಟು ಲೇಸರ್-ನಿರ್ದೇಶಿತ ಕ್ಷಿಪಣಿಗಳನ್ನು ಸಾಗಿಸಬಲ್ಲದು ಮತ್ತು ಸುಮಾರು 24 ಗಂಟೆಗಳ ಕಾಲ ಹಾರಾಟ ಮಾಡುವ ಸಾಮರ್ಥ್ಯವನ್ನು ಹೊಂದಿದೆ.

    36 ಅಡಿ ಉದ್ದ, 12 ಅಡಿ ಎತ್ತರ ಮತ್ತು ಸುಮಾರು 4,900 ಪೌಂಡ್ (11 ಮೀಟರ್ ಉದ್ದ, 4 ಮೀಟರ್ ಎತ್ತರ ಮತ್ತು 2,200 ಕಿಲೋಗ್ರಾಂ) ತೂಗುತ್ತದೆ. ಇದು 50,000 ಅಡಿ (15 ಕಿಲೋಮೀಟರ್) ಎತ್ತರದಲ್ಲಿ ಹಾರಬಲ್ಲದು ಮತ್ತು ಸುಮಾರು 1,400 ನಾಟಿಕಲ್ ಮೈಲುಗಳ (2,500 ಕಿಲೋಮೀಟರ್) ವ್ಯಾಪ್ತಿಯನ್ನು ಹೊಂದಿದೆ.

    2007 ರಲ್ಲಿ ಮೊದಲ ಬಾರಿಗೆ ರೀಪರ್‌ ಕಾರ್ಯನಿರ್ವಹಿಸಲು ಆರಂಭಿಸಿತು. ಪ್ರತಿ ರೀಪರ್ ಸುಮಾರು 32 ಮಿಲಿಯನ್ ಡಾಲರ್‌( ಅಂದಾಜು 263 ಕೋಟಿ ರೂ.) ವೆಚ್ಚವಾಗುತ್ತದೆ.