Tag: ರವೀನಾ ಖುರಾನಾ

  • 60ನೇ ವಯಸ್ಸಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ‘ಕೈ’ ನಾಯಕ

    60ನೇ ವಯಸ್ಸಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ‘ಕೈ’ ನಾಯಕ

    – ಮುಕುಲ್ ವಾಸ್ಮಿಕ್, ರವೀನಾ ಖುರಾನಾ ವಿವಾಹ

    ನವದೆಹಲಿ: ಕಾಂಗ್ರೆಸ್ಸಿನ 60 ವರ್ಷದ ಹಿರಿಯ ನಾಯಕ ಮುಕುಲ್ ವಾಸ್ನಿಕ್ ಅವರು ತಮ್ಮ ಇಳಿ ವಯಸ್ಸಿನಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

    ಮುಕುಲ್ ವಾಸ್ನಿಕ್ ತಮ್ಮ ಬಹು ಕಾಲದ ಸ್ನೇಹಿತೆ ರವೀನಾ ಖುರಾನಾ ಅವರನ್ನೇ ಶನಿವಾರ ವರಿಸುವ ಮೂಲಕ ಅಧಿಕೃತವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ವಿವಾಹಕ್ಕೆ ಕಾಂಗ್ರೆಸ್ಸಿನ ಹಿರಿಯ ನಾಯಕರಾದ ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, ಕರ್ನಾಟಕದ ರಾಜ್ಯಸಭಾ ಸದಸ್ಯ ಬಿ.ಕೆ ಹರಿಪ್ರಸಾದ್, ರಾಜ್ಯಸಭಾ ಸದಸ್ಯ ಅಹ್ಮದ್ ಪಟೇಲ್ ಸೇರಿದಂತೆ ಇತರರು ಭೇಟಿ ನೀಡಿ ಶುಭ ಕೋರಿದ್ದಾರೆ.

    ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹಾಗೂ ಕೇಂದ್ರದ ಮಾಜಿ ಸಚಿವರೂ ಆಗಿರುವ ಮುಕುಲ್, ಪಂಚತಾರಾ ಹೋಟೆಲಿನಲ್ಲಿ ವಿವಾಹವಾಗಿದ್ದಾರೆ. ಮುಕುಲ್, ಕಾಂಗ್ರೆಸ್ಸಿನಲ್ಲಿ ದಲಿತ ನಾಯಕರಾಗಿ ಗುರುತಿಸಿಕೊಂಡಿದ್ದ ಮಹಾರಾಷ್ಟ್ರದ ಬಾಲಕೃಷ್ಣ ಅವರ ಪುತ್ರರಾಗಿದ್ದಾರೆ.

    ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ವಿವಾಹದ ಫೋಟೋಗಳನ್ನು ತಮ್ಮ ಟ್ವಿಟ್ಟರ್ ನಲ್ಲಿ ಹಂಚಿಕೊಂಡು ಶುಭ ಕೋರಿದ್ದು, ಮುಕುಲ್ ವಾಸ್ನಿಕ್ ಹಾಗೂ ರವೀನಾ ಖುರಾನಾ ಅವರಿಗೆ ಹೃದಯಪೂರ್ವಕ ಶುಭಾಶಯಗಳು. ದಂಪತಿಯಾಗಿ ಹೊಸ ಪ್ರಯಾಣ ಆರಂಭಿಸುತ್ತಿರುವ ನಿಮ್ಮ ಮುಂಬರುವ ವರ್ಷಗಳು ಸಂತೋಷವಾಗಿರಲಿವೆ ಎಂಬುದನ್ನು ಸಾಬೀತುಪಡಿಸಿ ಎಂದು ಹಾರೈಸಿದ್ದಾರೆ.

    ಕಾಂಗ್ರೆಸ್ಸಿನ ಮತ್ತೊಬ್ಬ ನಾಯಕ ಮನೀಶ್ ತಿವಾರಿ ಸಹ ಈ ಕುರಿತು ಟ್ವೀಟ್ ಮಾಡಿದ್ದು, ಮುಕುಲ್ ವಾಸ್ನಿಕ್ ಹಾಗೂ ರವೀನಾ ಖುರಾನಾ ಅವರು ವಿವಾಹವಾಗಿರುವುದು ತುಂಬಾ ಸಂತಸ ತಂದಿದೆ. ನಾನು 1984ರಲ್ಲಿ ಮುಕುಲ್ ವಾಸ್ನಿಕ್ ಅವರನ್ನು ಹಾಗೂ 1985ರಲ್ಲಿ ರವೀನಾ ಅವರನ್ನು ಭೇಟಿ ಮಾಡಿದ್ದೆ. ಅಲ್ಲದೆ ನಾವೆಲ್ಲರೂ ಯುವಜನ ಮತ್ತು ವಿದ್ಯಾರ್ಥಿಗಳ ಉತ್ಸವಕ್ಕೆಂದು ಮಾಸ್ಕೋಗೆ ಹೋಗಿದ್ದೆವು ಎಂದು ನೆನಪುಗಳನ್ನು ಮೆಲುಕು ಹಾಕಿದ್ದಾರೆ. ಅಲ್ಲದೆ ಇಬ್ಬರೂ ವಿವಾಹವಾಗಿರುವುದು ಸಂತಸ ತಂದಿದೆ. ದೇವರ ಆಶೀರ್ವಾದ ನಿಮ್ಮ ಮೇಲಿರಲಿ ಎಂದು ಶುಭ ಕೋರಿದ್ದಾರೆ.