Tag: ರವಿ ಕಟಪಾಡಿ

  • ಸೀ ಫೋಕ್ ಎಂಬ ವಿಭಿನ್ನ ವೇಷ ಧರಿಸಲಿದ್ದಾರೆ ಪಬ್ಲಿಕ್ ಹೀರೋ ರವಿ ಕಟಪಾಡಿ!

    ಸೀ ಫೋಕ್ ಎಂಬ ವಿಭಿನ್ನ ವೇಷ ಧರಿಸಲಿದ್ದಾರೆ ಪಬ್ಲಿಕ್ ಹೀರೋ ರವಿ ಕಟಪಾಡಿ!

    ಉಡುಪಿ: ಜೀವನ ಸಾಗಿಸಲು ಮನುಷ್ಯ ನಾನಾ ತರದ ವೇಷಗಳನ್ನು ಹಾಕುತ್ತಾನೆ. ಕುಟುಂಬದೊಳಗೆ ಒಂದು ವೇಷ, ಸಮಾಜದಲ್ಲಿ ಬೇರೆಯೇ ಒಂದು ವೇಷ. ಹೀಗೆ ಹಲವು ಪಾತ್ರಗಳನ್ನು ನಿರ್ವಹಣೆ ಮಾಡುತ್ತಾನೆ. ಈ ಎಲ್ಲಾ ವೇಷಗಳು ಬದುಕಿಗಾಗಿ.. ಹೊಟ್ಟೆಗಾಗಿ ಆಗಿರುತ್ತದೆ.

    ಹೌದು. ಉಡುಪಿ (Udupi) ಜಿಲ್ಲೆ ಕಾಪು ತಾಲೂಕಿನ ರವಿ ಕಟಪಾಡಿ (Ravi Katapadi) ಅವರು ಪ್ರತಿ ವರ್ಷ ಶ್ರೀ ಕೃಷ್ಣ ಜನ್ಮಾಷ್ಟಮಿಗೆ (Krishna Janmastami) ವಿಭಿನ್ನ ವೇಷಗಳನ್ನು ತೊಡುತ್ತಾರೆ. ಕಳೆದ ಏಳು ವರ್ಷಗಳಿಂದ ನಿರಂತರವಾಗಿ ವಿಭಿನ್ನ ವೇಷಭೂಷಣ ತೊಟ್ಟು ಅಷ್ಟಮಿ ಮತ್ತು ವಿಟ್ಲಪಿಂಡಿ ಮಹೋತ್ಸ ದಿನ ಒಂದು ಉದ್ದೇಶ ಇಟ್ಟುಕೊಂಡು ಜನರ ಮಧ್ಯೆ ಹೋಗುತ್ತಾರೆ. ರವಿ ಹಾಕುವ ವೇಷ ಸ್ವಂತಕ್ಕಲ್ಲ, ಪರರ ಹಿತಕ್ಕಾಗಿ ಹಾಗೂ ಕಷ್ಟದ ಪರಿಹಾರಕ್ಕಾಗಿ ಆಗಿರುತ್ತದೆ.

    ರವಿ ಈವರೆಗೆ ಏಳು ವಿಭಿನ್ನ ವೇಷಗಳನ್ನು ತೊಟ್ಟಿದ್ದು ಒಂದು ಕೋಟಿ ಹದಿಮೂರು ಲಕ್ಷ 70 ಸಾವಿರ ರುಪಾಯಿ ಜನರಿಂದ ಸಂಗ್ರಹಿಸಿದ್ದಾರೆ. ಒಂದು ರೂಪಾಯಿ ಸ್ವಂತ ಖರ್ಚಿಗೆ ಇಟ್ಟುಕೊಳ್ಳದ ರವಿ, ಎಲ್ಲವನ್ನೂ 113 ಅನಾರೋಗ್ಯ ಪೀಡಿತ ಕುಟುಂಬಗಳಿಗೆ ದಾನ ಮಾಡಿದ್ದಾರೆ. ಈ ಬಾರಿ ಮತ್ತೊಂದು ವಿಭಿನ್ನ ವೇಷದ ಮುಂದೆ ಪ್ರತ್ಯಕ್ಷ ಆಗಲಿದ್ದಾರೆ.  ಇದನ್ನೂ ಓದಿ: ‘ಜವಾನ್’ ರಿಲೀಸ್‌ಗೆ 2 ದಿನ ಬಾಕಿ- ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ಶಾರುಖ್ ಖಾನ್

    ಸಮಾಜ ಸೇವೆ ಮಾಡಿ ನೊಂದವರ ಮುಖದಲ್ಲಿ ನಗು ಮೂಡಿಸಿದ ರವಿ ಮನಸ್ಸಿಗೆ ಈ ಬಾರಿ ನೋವಾಗಿದೆ. ವೇಷ ಹಾಕಿ ಸಂಗ್ರಹಿಸಿದ ಹಣದಿಂದ ಕೋಟಿ ರೂಪಾಯಿಯ ಮನೆ ಕಟ್ಟಿಸಿಕೊಳ್ಳುತ್ತಿದ್ದಾನೆ ಎಂದು ಕೆಲವರು ಕುಹಕವಾಡಿದ್ದಾರೆ. ಈ ಬಾರಿ ನಾನು ವೇಷ ಹಾಕುವುದಿಲ್ಲ ಎಂದು ರವಿ ನಿರ್ಧರಿಸಿದ್ದರು. ರವಿ ಫ್ರೆಂಡ್ಸ್ ಮೀಟಿಂಗ್ ಮಾಡಿ ಊರ ಬಾಯಿ ಮುಚ್ಚಿಸಲು ಸಾಧ್ಯವಿಲ್ಲ. ನಮ್ಮ ಕೆಲಸ ನಾವು ಮಾಡೋಣ ಎಂದು ಈ ಬಾರಿಯೂ ವೇಷ ಹಾಕಲು ನಿರ್ಧರಿಸಿದ್ದಾರೆ.

    ನಮ್ಮ ಪಬ್ಲಿಕ್ ಹೀರೋ ರವಿ ಕಟಪಾಡಿ ಈ ಬಾರಿ ಸೀ ಫೋಕ್ (Sea Folk)  ಎಂಬ ಹಾಲಿವುಡ್ ಮೂವಿಯ ಒಂದು ಫಿಕ್ಷನ್ ಪಾತ್ರವನ್ನು ಹೋಲುವ ವೇಷ ಹಾಕಲಿದ್ದಾರೆ. ಕುಂದಾಪುರ ಮೂಲದ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಎರಡು ವರ್ಷದ ಮಗುವಿಗೆ ರವಿ ಸಹಾಯ ಮಾಡುವ ಮಾತು ನೀಡಿದ್ದಾರೆ. ಚಿಕಿತ್ಸೆಗೆ 15 ಲಕ್ಷ ರೂಪಾಯಿ ಬೇಕಾಗಿದ್ದು, ರವಿ ತನ್ನ ಕೈಲಾದ ಸಹಾಯ ಮಾಡಲಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ವೇಷಧರಿಸಿ 72 ಲಕ್ಷ ರೂ. ದಾನ ಮಾಡಿದ್ದ ರವಿ ಕಟಪಾಡಿ ಈ ಬಾರಿ ಡಾರ್ಕ್ ಅಲೈಟ್ ಲುಕ್‍ನಲ್ಲಿ ಪ್ರತ್ಯಕ್ಷ

    ವೇಷಧರಿಸಿ 72 ಲಕ್ಷ ರೂ. ದಾನ ಮಾಡಿದ್ದ ರವಿ ಕಟಪಾಡಿ ಈ ಬಾರಿ ಡಾರ್ಕ್ ಅಲೈಟ್ ಲುಕ್‍ನಲ್ಲಿ ಪ್ರತ್ಯಕ್ಷ

    ಉಡುಪಿ: ಕಷ್ಟದಲ್ಲಿರುವವರಿಗೆ ಸಹಾಯ ಮಾಡಲು ಲಕ್ಷಾಂತರ ರೂಪಾಯಿ ಹಣ ಇರಬೇಕು ಎಂದೇನಿಲ್ಲ. ಒಳ್ಳೆಯ ಮನಸಿದ್ದರೆ ಸಾಕು. ಉಡುಪಿಯ ರವಿ ಕಟಪಾಡಿ ಶ್ರೀಕೃಷ್ಣ ಜನ್ಮಾಷ್ಟಮಿ ದಿನ ವೇಷಹಾಕಿ ಕಳೆದ ಆರು ವರ್ಷದಲ್ಲಿ 72 ಲಕ್ಷ ರೂಪಾಯಿ ದಾನ ಮಾಡಿದ್ದಾರೆ. ಈ ಬಾರಿ ಹಾಲಿವುಡ್ ಸಿನಿಮಾದ ಡಾರ್ಕ್ ಅಲೈಟ್ ವೇಷದಲ್ಲಿ ರವಿ ಪ್ರತ್ಯಕ್ಷ ಆಗಲಿದ್ದಾರೆ.

    ಸಾಂಕ್ರಾಮಿಕ ಕೊರೊನಾ ನಡುವೆಯೇ ಶ್ರೀಕೃಷ್ಣ ಜನ್ಮಾಷ್ಟಮಿ ಬಂದಿದೆ. ಅದ್ದೂರಿ ಅಷ್ಟಮಿ ಆಚರಣೆಗೆ ಉಡುಪಿ ಜಿಲ್ಲಾಡಳಿತ ಅವಕಾಶ ಕೊಟ್ಟಿಲ್ಲ. ಅಷ್ಟಮಿ ದಿನ ಸಾವಿರಾರು ಜನ ವೇಷ ಧರಿಸುತ್ತಿದ್ದರು, ಆದರೆ ಈ ಬಾರಿಯೂ ಅದಕ್ಕೆ ಚಾನ್ಸ್ ಇಲ್ಲ. ನಮ್ಮ ಪಬ್ಲಿಕ್ ಹೀರೋ, ಸಮಾಜಸೇವಕ ಉಡುಪಿಯ ರವಿ ಕಟಪಾಡಿಗೆ ಸ್ಪೆಷಲ್ ಅವಕಾಶ ಕೊಡಲಾಗಿದೆ. ಹಾಲಿವುಡ್ ಸಿನಿಮಾದ ಫ್ಯಾಂಟಸಿ ವೇಷ ಡಾರ್ಕ್ ಅಲೈಟ್ ಆಗಿ ಎರಡು ದಿನ ರವಿ ಉಡುಪಿಯಲ್ಲಿ ಓಡಾಡಲಿದ್ದಾರೆ. ಇದನ್ನೂ ಓದಿ: ಬಿಗ್ ಬಿ ಮುಂದೆ ಕರೋಡ್ ಪತಿ ಸೀಟಲ್ಲಿ ಕುಳಿತ ಉಡುಪಿಯ ರವಿ ಕಟಪಾಡಿ!

    ಈ ಕುರಿತು ಪಬ್ಲಿಕ್ ಟಿವಿ ಜೊತೆ ಮಾತನಾಡಿದ ರವಿ ಕಟಪಾಡಿ, ಕಳೆದ ಬಾರಿ ಧನಸಹಾಯ ಮಾಡಲು ಆಗಿರಲಿಲ್ಲ. ಮನಸ್ಸಿಗೆ ಬಹಳ ಬೇಸರವಾಗಿತ್ತು. ಈ ಬಾರಿ ಮತ್ತೆ ಶ್ರೀಕೃಷ್ಣಜನ್ಮಾಷ್ಟಮಿ ಬಂದಿದೆ. ನಾಲ್ಕು ಮಕ್ಕಳಿಗೆ ಸಹಾಯ ಮಾಡಬೇಕು ಎಂದು ನಿರ್ಧಾರ ಮಾಡಿದ್ದೆವು. ಆ ನಂತರ ಎರಡು ಕುಟುಂಬಗಳು ನಮ್ಮನ್ನು ಸಂಪರ್ಕ ಮಾಡಿದವು. ಅವರಿಗೂ ಸಹಾಯ ಮಾಡುತ್ತೇವೆ. ಕೊರೊನಾ ಕಾಲದಲ್ಲೂ ನಮಗೆ ಅವಕಾಶ ಕೊಟ್ಟ ಜಿಲ್ಲಾಡಳಿತಕ್ಕೆ ಧನ್ಯವಾದ. ಜನರ ಬಳಿಗೆ ಬರುತ್ತೇವೆ ನಿಮ್ಮ ಕೈಲಾದ ಸಹಾಯ ಮಾಡಿ ಎಂದು ರವಿ ವಿನಂತಿ ಮಾಡಿಕೊಂಡರು.

    ವೃತ್ತಿಯಲ್ಲಿ ಮೇಸ್ತ್ರಿ ಕೆಲಸ ಮಾಡುವ ರವಿ ಕಟಪಾಡಿ ಪ್ರತಿವರ್ಷ ಶ್ರೀಕೃಷ್ಣ ಜನ್ಮಾಷ್ಟಮಿಗೆ ವೇಷಧರಿಸಿ ಅನಾರೋಗ್ಯ ಪೀಡಿತ ಮಕ್ಕಳಿಗೆ ಸಹಾಯ ಮಾಡುತ್ತಾರೆ. ಕಳೆದ ಆರು ವರ್ಷದಲ್ಲಿ ಬರೋಬ್ಬರಿ 72 ಲಕ್ಷ ರೂಪಾಯಿಯನ್ನು ಸುಮಾರು 33 ಮಕ್ಕಳಿಗೆ ನೀಡಿದ್ದಾರೆ. ಬಿಗ್ ಬಿ ನಡೆಸುವ ಕರೋಡ್ ಪತಿಯಲ್ಲಿ ಬಂದ ಎಂಟು ಲಕ್ಷ ರೂಪಾಯಿಯನ್ನು ಪೂರ್ತಿಯಾಗಿ ಕಷ್ಟದಲ್ಲಿರುವವರಿಗೆ ಕೊಟ್ಟಿದ್ದಾರೆ. ಅಂತರಾಷ್ಟ್ರೀಯ ಮಟ್ಟದ ವೆಬ್ ಸೈಟ್ ಗಳಲ್ಲಿ ಬಂದ ಹಣದಲ್ಲಿ ಒಂದು ರೂಪಾಯಿಯನ್ನು ರವಿ ಇಟ್ಟುಕೊಂಡಿಲ್ಲ. ಕಳೆದ ಬಾರಿ ಕೊರೊನಾ ಸಾಂಕ್ರಾಮಿಕ ವಿಪರೀತ ಇದ್ದ ಕಾರಣ ರವಿ ಜನಜಾಗೃತಿಗಾಗಿ ವೇಷ ಹಾಕಿದ್ದರು. ಧನಸಂಗ್ರಹ ಮಾಡಿರಲಿಲ್ಲ. ಈ ಬಾರಿ ಜಿಲ್ಲಾಡಳಿತ ರವಿ ಕಟಪಾಡಿ ಅವರಿಗೆ ಸ್ಪೆಷಲ್ ಪರ್ಮಿಷನ್ ಕೊಟ್ಟಿದೆ. ರವಿ ಫ್ರೆಂಡ್ಸ್ ಕಟಪಾಡಿ ಆರು ಮಕ್ಕಳಿಗೆ ಸಹಾಯ ಮಾಡುವ ನಿರ್ಧಾರ ಮಾಡಿದ್ದಾರೆ.

    ರವಿ ಫ್ರೆಂಡ್ಸ್ ಸದಸ್ಯ ಕಾರ್ತಿಕ್ ಮಾತನಾಡಿ, ಆರು ವರ್ಷದಿಂದ ಈ ಸೇವೆಯನ್ನು ಮಾಡುತ್ತಿದ್ದೇವೆ. ರವಿ ಕಟಪಾಡಿ ಕೂಲಿ ಕೆಲಸ ಮಾಡಿ ಜೀವನ ಮಾಡುವವರು, ಅವರೂ ಕಷ್ಟದಲ್ಲಿದ್ದಾರೆ. ಆದರೆ ಇನ್ನೊಬ್ಬರ ಕಷ್ಟಕ್ಕೆ ಮಾಡುವ ಸಹಾಯದಿಂದ ಅವರು ಸಂತೃಪ್ತಿ ಪಡೆಯುತ್ತಾರೆ. ನಮಗೂ ಅದೇ ಖುಷಿ. ನಾಲ್ಕು ದಿನ ನಿರಂತರ ಶ್ರಮ ಪಡುತ್ತೇವೆ. ರವಿ ಆಹಾರ ಇಲ್ಲದೆ ಎರಡು ದಿನ ಉಪವಾಸವಿದ್ದು ವೇಷ ಹಾಕುತ್ತಾರೆ ಎಂದರು. ಇದನ್ನೂ ಓದಿ: ವರ್ಷಕ್ಕೊಮ್ಮೆ ವೇಷ ಬದಲಿಸೋ ರವಿ ಕಟಪಾಡಿ- ವೇಷ ಹಾಕಿ 35 ಲಕ್ಷ ಸಹಾಯ

    ರವಿ ಫ್ರೆಂಡ್ಸ್ ತಂಡದ ಎಲ್ಲರಿಗೂ ಕೊರೊನಾ ಟೆಸ್ಟ್ ಮಾಡಲಾಗಿದೆ. ವ್ಯಾಕ್ಸಿನ್ ಪಡೆದವರಿಗೆ ಮಾತ್ರ ತಂಡದಲ್ಲಿ ಅವಕಾಶ ಕೊಡಲಾಗಿದೆ. ಆಗಸ್ಟ್ 30 ಮತ್ತು 31 ರಂದು ಉಡುಪಿ, ಕಾಪು-ಮಲ್ಪೆ ವ್ಯಾಪ್ತಿಯಲ್ಲಿ ಓಡಾಡಿ ಧನಸಂಗ್ರಹ ಮಾಡಲಿದ್ದಾರೆ. ಸಂಗ್ರಹವಾಗುವ ಒಂದೊಂದು ರೂಪಾಯಿ ಕಷ್ಟದಲ್ಲಿರುವ ಕುಟುಂಬಗಳ ಪಾಲಾಗಲಿದೆ.

  • ತುಳುವಿನಲ್ಲಿ ಮಾತಾಡಿ ಮೋಡಿ ಮಾಡಿದ ಬಾಲಿವುಡ್ ಬಿಗ್ ಬಿ

    ತುಳುವಿನಲ್ಲಿ ಮಾತಾಡಿ ಮೋಡಿ ಮಾಡಿದ ಬಾಲಿವುಡ್ ಬಿಗ್ ಬಿ

    ಉಡುಪಿ: ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ತುಳು ಭಾಷೆಯಲ್ಲಿ ಮಾತನಾಡಿ, ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾರೆ. ಅಮಿತಾಭ್ ಬಚ್ಚನ್ ಗೆ ತುಳು ಕಲಿಸಿದ್ದು ಮತ್ತ್ಯಾರು ಅಲ್ಲ ಉಡುಪಿಯ ಸಮಾಜಸೇವಕ, ಪಬ್ಲಿಕ್ ಹೀರೋ ರವಿ ಕಟಪಾಡಿ.

    ಹೌದು. ಹಿಂದಿಯ ಕೌನ್ ಬನೇಗ ಕರೊಡ್ ಪತಿಯ ಕರ್ಮವೀರ ವಿಭಾಗಕ್ಕೆ ಉಡುಪಿಯ ಸಮಾಜಸೇವಕ, ಪಬ್ಲಿಕ್ ಹೀರೋ ರವಿ ಕಟಪಾಡಿ ಈ ಬಾರಿ ಆಯ್ಕೆಯಾಗಿದ್ದರು. ಕಲಾವಿದ ಅನುಪಮ್ ಖೇರ್ ಜೊತೆ ರವಿ ಅವರು ಹಾಟ್ ಸೀಟಲ್ಲಿ ಕುಳಿತು ಅಮಿತಾಭ್ ಅವರ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ.

    ಪ್ರಶ್ನೋತ್ತರ ಸಂದರ್ಭದಲ್ಲಿ ಅಮಿತಾಭ್ ಬಚ್ಚನ್, ರವಿ ಕಟಪಾಡಿ ಅವರ ಜೀವನ, ಕಷ್ಟ, ಸೇವೆ ಬಗ್ಗೆ ಮಾತನಾಡುತ್ತಾ ಭಾಷೆ ಸಂಸ್ಕೃತಿಯನ್ನು ಕೆದಕಿದ್ದಾರೆ. ಈ ಸಂದರ್ಭದಲ್ಲಿ ತುಳು ಭಾಷೆಯ ಬಗ್ಗೆ ರವಿ ಕಟಪಾಡಿ ಹೇಳಿದ್ದಾರೆ. ಕುತೂಹಲಗೊಂಡ ಅಮಿತಾಭ್ ಬಚ್ಚನ್ ಅವರಿಗೆ ರವಿ ಕಟಪಾಡಿ ತುಳುವಿನಲ್ಲಿ ಒಂದು ವಾಕ್ಯವನ್ನು ಹೇಳಿದ್ದಾರೆ. ಅಮಿತಾಭ್ ಅದನ್ನು ರಿಪೀಟ್ ಮಾಡಿದ್ದಾರೆ.

    ಉಡುಪಿ ಮತ್ತು ಮಂಗಳೂರಿನ ಎಲ್ಲರಿಗೂ ನನ್ನ ನಮಸ್ಕಾರಗಳು ಎಂದು ಹೇಳಿದ್ದಾರೆ. ತುಳು ಭಾಷೆಯನ್ನು ಮಾತನಾಡುವವರಂತೆ ಯಾವುದೇ ಉಚ್ಛಾರ ತಪ್ಪು ಇಲ್ಲದೆ ಅಮಿತಾ ಬಚ್ಚನ್ ಅನುಕರಣೆ ಮಾಡಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಈ ವೀಡಿಯೋ ತುಣುಕು ಕರಾವಳಿಯ 2 ಜಿಲ್ಲೆಗಳಲ್ಲಿ ಜನಜನಿತವಾಗಿದೆ. ವಾಟ್ಸಪ್ ಫೇಸ್ಬುಕ್ ಗಳಲ್ಲಿ ಜನ ಈ ವೀಡಿಯೋ ತುಣುಕನ್ನು ಶೇರ್ ಮಾಡುತ್ತಿದ್ದಾರೆ.

    ಅಮಿತಾಭ್ ಅವರನ್ನು ನೋಡಿದ್ದು ಅವರ ಜೊತೆ ಮಾತನಾಡಿದ್ದು ನನ್ನ ಜೀವನದ ಮರೆಯಲಾಗದ ಘಟನೆ. ಅಷ್ಟಮಿಯಂದು ವೇಷಧರಿಸಿ 28 ಮಕ್ಕಳಿಗೆ 54 ಲಕ್ಷ ರೂಪಾಯಿ ದಾನ ಮಾಡಿದಾಗ ಸಿಕ್ಕ ಖುಷಿಯೇ ಕೌನ್ ಬನೇಗ ಕರೋಡ್ ಪತಿ ಕಾರ್ಯಕ್ರಮದಲ್ಲೂ ಸಿಕ್ಕಿತು ಎಂದು ರವಿ ಕಟಪಾಡಿ ಸಂತಸ ವ್ಯಕ್ತಪಡಿಸಿದ್ದಾರೆ.

  • ಬಿಗ್ ಬಿ ಮುಂದೆ ಕರೋಡ್ ಪತಿ ಸೀಟಲ್ಲಿ ಕುಳಿತ ಉಡುಪಿಯ ರವಿ ಕಟಪಾಡಿ!

    ಬಿಗ್ ಬಿ ಮುಂದೆ ಕರೋಡ್ ಪತಿ ಸೀಟಲ್ಲಿ ಕುಳಿತ ಉಡುಪಿಯ ರವಿ ಕಟಪಾಡಿ!

    – ವೇಷ ಧರಿಸಿ ಅನಾರೋಗ್ಯಕ್ಕೀಡಾದ ಮಕ್ಕಳಿಗೆ ದಾನ

    ಉಡುಪಿ: ಪಬ್ಲಿಕ್ ಹೀರೋ, ಸಮಾಜಸೇವಕ ಉಡುಪಿಯ ರವಿ ಕಟಪಾಡಿ ಅವರು ಹಿಂದಿ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಪ್ರಸಿದ್ಧ ಕರೋಡ್ ಪತಿ ರಿಯಾಲಿಟಿ ಶೋದಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

    ಅರವಿ ಕಟಪಾಡಿ ಅವರು ಉಡುಪಿ ಶ್ರೀಕೃಷ್ಣ ಮಠದ ಅಷ್ಟಮಿ ಸಂದರ್ಭ ಪ್ರತಿವರ್ಷ ವಿಭಿನ್ನ ವೇಷಗಳನ್ನು ಧರಿಸಿ ಬಂದ ಹಣವನ್ನು ಅನಾರೋಗ್ಯ ಪೀಡಿತ ಮಕ್ಕಳಿಗಾಗಿ ದಾನ ನೀಡುತ್ತಾ ಬಂದಿದ್ದಾರೆ. ಈ ಮೂಲಕ ಕಳೆದ ಒಂದು ದಶಕದಿಂದ ಸಮಾಜಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಬಡತನದ ಜೀವನ ನಡೆಸುವ ರವಿ ಕಟಪಾಡಿ, ಸಿಮೆಂಟ್ ಸೆಂಟ್ರಿಂಗ್ ಕೆಲಸ ಮಾಡುತ್ತಾರೆ. ಪ್ರತಿವರ್ಷ ವೇಷ ಧರಿಸಿ ಸಂಗ್ರಹವಾದ ಲಕ್ಷಾಂತರ ರೂಪಾಯಿ ದೇಣಿಗೆಯನ್ನು ಏಳೆಂಟು ಮಕ್ಕಳಿಗೆ ನೀಡುತ್ತಾ ಬಂದಿದ್ದಾರೆ.

    ಇದೀಗ ರವಿ ಕಟಪಾಡಿಯವರ ವಿಭಿನ್ನ ಸೇವೆಯನ್ನು ಪರಿಗಣಿಸಿ ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ನಡೆಸಿಕೊಡುವ ಕಾರ್ಯಕ್ರಮದ ಕರ್ಮವೀರ್ ವಿಭಾಗದಲ್ಲಿ ಈ ಬಾರಿ ಸ್ಪರ್ಧಿಸುವ ಅವಕಾಶ ಸಿಕ್ಕಿದೆ. ಜನವರಿ 15 ರಂದು ಈ ಕಾರ್ಯಕ್ರಮ ಪ್ರಸಾರವಾಗಲಿದೆ. ರವಿ ಮತ್ತು ಅನುಪಮ್ ಕೇರ್ ಎಷ್ಟು ಗೆದ್ದಿದ್ದಾರೆ ಅಂತ ನಾಳೆ ಗೊತ್ತಾಗಲಿದೆ, ಅಲ್ಲಿವರೆಗೆ ಆ ವಿಚಾರ ನಿಯಮದಂತೆ ಗೌಪ್ಯವಾಗಿರಲಿದೆ.

    ಹಿಂದಿ ನಟ ಅನುಪಮ್ ಖೇರ್ ಮತ್ತು ರವಿ ಕಟಪಾಡಿ ಜೋಡಿಯಾಗಿ ಕರೋಡ್ ಪತಿಯಲ್ಲಿ ಸ್ಪರ್ಧೆ ಮಾಡುತ್ತಿದ್ದಾರೆ. ಖಾಸಗಿ ವಾಹಿನಿಯಿಂದ ರವಿಗೆ ಆಫರ್ ಬಂದಾಗ ನನಗೆ ಹಿಂದಿ ಭಾಷೆ ಬರುವುದಿಲ್ಲ. ಪ್ರಶ್ನೆ ಎಲ್ಲಾ ಅರ್ಥ ಆಗಲಿಕ್ಕಿಲ್ಲ. ಭಾಷೆಯ ಸಮಸ್ಯೆಯಾಗುತ್ತದೆ. ನನಗೆ ನರ್ವಸ್ ಆಗುತ್ತದೆ ಎಂದು ಹಿಂಜರಿದಿದ್ದರು. ರವಿಯ ಗೆಳೆಯರು ಮನವೊಲಿಸಿದ ನಂತರ ಸ್ಪರ್ಧಿಸಲು ಒಪ್ಪಿದ್ದು ಮುಂಬೈಗೆ ರವಿ ತೆರಳಿದ್ದಾರೆ.

    ಈವರೆಗೆ 52 ಲಕ್ಷ ರೂಪಾಯಿ ದಾನ ಮಾಡಿದ್ದಾರೆ. ಸನ್ಮಾನ ಮಾಡಿ, ಮನೆ ಕಟ್ಟಲು ಮಂಗಳೂರಿನ ಬರ್ಕೆ ಫ್ರೆಂಡ್ಸ್ ಎರಡು ಲಕ್ಷ ರುಪಾಯಿ ಕೊಟ್ಟಿದ್ದರು. ಅನಾರೋಗ್ಯ ಅಂತ ಬಂದಿದ್ದ ಒಂದು ಕುಟುಂಬಕ್ಕೆ ಆ ಹಣವನ್ನು ಕೂಡ ರವಿ ದಾನ ಮಾಡಿದ್ದಾರೆ. ಪಬ್ಲಿಕ್ ಟಿವಿ ಜೊತೆ ಮಾತನಾಡಿದ ರವಿ ಕಟಪಾಡಿ, ನಾನು, ತಾಯಿ 45 ವರ್ಷ ಹಿಂದಿನ ಮನೆಯಲ್ಲಿ ಇದ್ದೇವೆ. ಸಮಾಜದಲ್ಲಿ ಸಂಕಷ್ಟದಲ್ಲಿರುವವರ ಕಷ್ಟ ನೋಡಿದರೆ ನಮ್ಮದೇನು ದೊಡ್ಡ ವಿಷಯವಲ್ಲ ಅಂತ ಹೇಳಿದ್ರು. ಅಮಿತಾಭ್ ಬಚ್ಚನ್ ಮುಂದೆ ಕುಳಿತುಕೊಳ್ಳುವ ಅವಕಾಶ ಸಿಕ್ಕಿದ್ದು ಒಂದು ಭಾಗ್ಯ ಅಂತ ಹೇಳಿದರು.

  • ವರ್ಷಕ್ಕೊಮ್ಮೆ ವೇಷ ಬದಲಿಸೋ ರವಿ ಕಟಪಾಡಿ- ವೇಷ ಹಾಕಿ 35 ಲಕ್ಷ ಸಹಾಯ

    ವರ್ಷಕ್ಕೊಮ್ಮೆ ವೇಷ ಬದಲಿಸೋ ರವಿ ಕಟಪಾಡಿ- ವೇಷ ಹಾಕಿ 35 ಲಕ್ಷ ಸಹಾಯ

    – ವಿದೇಶ ಸೇರಿದ್ರೂ ನೋವಿಗೆ ಮಿಡಿದ ಉಡುಪಿ ಯುವಕನ ಕಥೆ

    ಉಡುಪಿ: ಸಮಾಜ ಸೇವೆ ಮಾಡಬೇಕಾದರೆ ಸಿಕ್ಕಾಪಟ್ಟೆ ದುಡ್ಡು ಬೇಕಾಗಿಲ್ಲ. ಇನ್ನೊಬ್ಬರಿಗೆ ಸಹಾಯ ಮಾಡುವ ಮನಸ್ಸಿದ್ದರೆ ಸಾಕು. ಇದಕ್ಕೆ ಸಾಕ್ಷಿ ಎಂಬಂತೆ ಉಡುಪಿಯ ರವಿ ಅವರು ದುಡಿಯುವುದಕ್ಕೆ ದೇಶ ಬಿಟ್ಟು ವಿದೇಶ ಸೇರಿದ್ದರು. ಮಸ್ಕತ್‍ಗೆ ಹೋಗಿ ಇನ್ನೂ ಒಂದು ವರ್ಷ ಆಗಿಲ್ಲ. ಮತ್ತೆ ಊರಿಗೆ ಬಂದು ವೇಷ ಹಾಕಿ ಧನ ಸಂಗ್ರಹ ಮಾಡಿದ್ದಾರೆ.

    ಕೂಲಿ ಕಾರ್ಮಿಕರಾಗಿರೋ ರವಿ ಕಟಪಾಡಿಯವರ ಊರು ಉಡುಪಿ. ಸದ್ಯ ಮಸ್ಕತ್‍ನಲ್ಲಿ ಎಸಿ ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿದ್ದಾರೆ. ಸಂಸಾರ ತೂಗಿಸುವಷ್ಟು ಸಂಬಳ ದುಡಿಯುತ್ತಿದ್ದರೂ ಸಮಾಜ ಸೇವೆ ಮಾಡುವ ಮನಸ್ಸು ಇವರಿಗಿದೆ. ವಿದೇಶ ಸೇರಿ ವರ್ಷ ಆಗುವುದರೊಳಗೆ ಊರಿಗೆ ಬಂದಿದ್ದರು. ಪ್ರತಿ ವರ್ಷ ವಿಭಿನ್ನ ಗೆಟಪ್‍ಗೆ ಹೆಸರಾಗಿರುವ ರವಿ ಅವರು, ಈ ಬಾರಿಯ ಕೃಷ್ಣಜನ್ಮಾಷ್ಟಮಿಗೆ ವ್ಯಾಂಪೈರ್ ವೇಷ ಧರಿಸಿ ಜನರ ಮುಂದೆ ಪ್ರತ್ಯಕ್ಷವಾಗಿದ್ದರು.

    ವ್ಯಾಂಪೈರ್ ವೇಷ ಧರಿಸಬೇಕೆಂದು ನಿರ್ಧರಿಸಿದ್ದೆವು. ಸುಮಾರು 5 ಮಕ್ಕಳಿಗೆ ಸಹಾಯ ಮಾಡಬೇಕೆಂದುಕೊಂಡಿದ್ದೆವು. ನಾವು ವೇಷವನ್ನು 9 ವರ್ಷದಿಂದ ಹಾಕುತ್ತಿದ್ದೇವೆ. ಆದರೆ 5 ವರ್ಷದಿಂದ ಹಣ ಸಂಗ್ರಹಿಸಿ 38 ಲಕ್ಷದವರೆಗೂ ಅನಾರೋಗ್ಯ ಪೀಡಿತ ಮಕ್ಕಳಿಗೆ ಹಣ ಕೊಟ್ಟಿದ್ದೇವೆ. ಇದರಿಂದ ನನಗೆ ತುಂಬಾ ಖುಷಿಯಾಗಿದೆ ಎಂದು ಸಮಾಜ ಸೇವಕ ರವಿ ಕಟಪಾಡಿ ಹೇಳಿದರು.

    ಹಾಲಿವುಡ್‍ನ ಇಮ್ಯಾಜಿನರಿ ಕ್ಯಾರೆಕ್ಟರ್  ಗಳಂದರೆ ರವಿಗೆ ಇಷ್ಟ. ಭಯ ಹುಟ್ಟಿಸುವ ವೇಷ ಹಾಕಿ ರವಿ ಕಟಪಾಡಿ ತಂಡ ಉಡುಪಿ ಮತ್ತು ಕಾಪು ತಾಲೂಕಿನಲ್ಲೆಲ್ಲಾ ಓಡಾಡುತ್ತದೆ. ಸುಮಾರು ನೂರು ಹುಡುಗರು ತಿಂಗಳ ಪರಿಶ್ರಮ ಹಾಕಿ ಧನ ಸಂಗ್ರಹ ಮಾಡಿದ್ದಾರೆ. ವರ್ಷಕ್ಕೆ ಐದಾರು ಮಂದಿಗೆ ಸಹಾಯ ಮಾಡಿದ್ದಾರೆ. ಈಗಾಗಲೇ ವೇಷ ಹಾಕಿ 35 ಲಕ್ಷಕ್ಕೂ ಹೆಚ್ಚು ಮೊತ್ತವನ್ನು ಫಲಾನುಭವಿಗಳ ಸಹಾಯಕ್ಕೆ ಕೊಟ್ಟಿದ್ದಾರೆ ಎಂದು ರವಿ ಗೆಳೆಯರ ಬಳಗದ ಸದಸ್ಯ ಮಹೇಶ್ ಶೆಣೈ ತಿಳಿಸಿದರು.

    ರವಿ ವೇಷ ಹಾಕಲು ಭಾರತಕ್ಕೆ ಹೋಗುತ್ತಿರುವುದು ಗೊತ್ತಾಗಿ ಮಸ್ಕತ್‍ನ ಗೆಳೆಯರು ಸುಮಾರು ಒಂದೂವರೆ ಲಕ್ಷ ರೂಪಾಯಿಯನ್ನು ರವಿಯ ಕೈಗಿತ್ತಿದ್ದರು. ಊರಿಗೆಲ್ಲಾ ಲಕ್ಷಾಂತರ ರೂಪಾಯಿ ಸಹಾಯ ಮಾಡಿದ್ದಾರೆ. ಎರಡು ದಿನ ಅನ್ನಾಹಾರ ಬಿಟ್ಟು ವೇಷ ತೊಟ್ಟು ಅನಾರೋಗ್ಯ ಪೀಡಿತರ ಚಿಕಿತ್ಸೆಗೆ ಸ್ಪಂದಿಸುವ ರವಿ ಕಟಪಾಡಿಗೆ ಕೆಲಸದ ಅವಶ್ಯಕತೆ ಇದೆ. ಕೆಲಸ ಸಿಕ್ಕಿಲ್ಲಾಂದರೆ, ಯಾರೂ ಕೆಲಸ ಕೊಟ್ಟಿಲ್ಲಾಂದರೆ ಮತ್ತೆ ಮಸ್ಕತ್‍ಗೆ ಹೋಗುತ್ತೇನೆ ಎಂದಿದ್ದಾರೆ.