Tag: ರವಿಶಾಸ್ತ್ರಿ

  • ಟೀಂ ಇಂಡಿಯಾ ಕೋಚ್ ರವಿಶಾಸ್ತ್ರಿಗೆ ಎಷ್ಟು ಸಂಬಳ ಸಿಗುತ್ತೆ?

    ಟೀಂ ಇಂಡಿಯಾ ಕೋಚ್ ರವಿಶಾಸ್ತ್ರಿಗೆ ಎಷ್ಟು ಸಂಬಳ ಸಿಗುತ್ತೆ?

    ಮುಂಬೈ: ಟೀಂ ಇಂಡಿಯಾ ಕೋಚ್ ಆಗಿ ನೇಮಕವಾಗಿರುವ ರವಿಶಾಸ್ತ್ರಿ ಅವರಿಗೆ ಬಿಸಿಸಿಐ ವಾರ್ಷಿಕವಾಗಿ 7 ಕೋಟಿ ರೂ. ಹಣವನ್ನು ಸಂಭಾವನೆಯಾಗಿ ನೀಡಲಿದೆ.

    ಮಾಧ್ಯಮವೊಂದು ಬಿಸಿಸಿಐ ಮೂಲಗಳನ್ನು ಆಧರಿಸಿ ವರದಿ ಮಾಡಿದ್ದು, ರವಿಶಾಸ್ತ್ರಿ 7 ಕೋಟಿ ರೂ.ನಿಂದ 7. 5 ಕೋಟಿ ಒಳಗಡೆ ವಾರ್ಷಿಕವಾಗಿ ಸಂಬಳವನ್ನು ಪಡೆಯಲಿದ್ದಾರೆ ಎಂದು ತಿಳಿಸಿದೆ.

    ಅನಿಲ್ ಕುಂಬ್ಳೆ ಮೇ ತಿಂಗಳಿನಲ್ಲಿ ಬಿಸಿಸಿಐ ಸಭೆಯಲ್ಲಿ ಎಷ್ಟು ಬೇಡಿಕೆ ಇಟ್ಟಿದ್ದರೋ ಅಷ್ಟು ಸಂಬಳವನ್ನು ರವಿಶಾಸ್ತ್ರಿ ಅವರು ಪಡೆಯಲಿದ್ದಾರೆ. ಆದರೆ ಈ ಸಂಬಳ 7.5 ಕೋಟಿ ರೂ. ಜಾಸ್ತಿ ಇರಲ್ಲ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ರವಿಶಾಸ್ತ್ರಿ ಈ ಹಿಂದೆ ಮಾರ್ಗದರ್ಶಕರಾಗಿದ್ದಾಗಲೂ ಅವರಿಗೆ ಸಂಬಳ 7.5 ಕೋಟಿ ರೂ. ಒಳಗಡೆ ಇತ್ತು. ಭಾರತ ಎ ತಂಡ ಮತ್ತು 19 ವರ್ಷದ ಒಳಗಿನ ತಂಡದ ಕೋಚ್ ಆಗಿರುವ ರಾಹುಲ್ ದ್ರಾವಿಡ್ ಅವರಿಗೆ ಮೊದಲ ವರ್ಷ 4.5 ಕೋಟಿ ರೂ. ಸಂಭಾವನೆ ನೀಡಿದ್ದರೆ ಎರಡನೇ ವರ್ಷ 4.5 ಕೋಟಿ ರೂ. ಸಂಭಾವನೆ ನೀಡಲಾಗಿತ್ತು. ಈಗ ವಿದೇಶದಲ್ಲಿ ನಡೆಯುವ ಪಂದ್ಯಗಳಿಗೆ ದ್ರಾವಿಡ್ ಅವರನ್ನು ಬ್ಯಾಟಿಂಗ್ ಸಲಹೆಗಾರನ್ನಾಗಿ ನೇಮಿಸಲಾಗಿದೆ.

    ಬೌಲಿಂಗ್ ಕೋಚ್ ಆಗಿ ನೇಮಕವಾಗಿರುವ ಜಹೀರ್ ಖಾನ್ ಅವರಿಗೆ ಎಷ್ಟು ಸಂಭಾವನೆ ಎನ್ನುವುದು ನಿಗದಿಯಾಗಿಲ್ಲ. ಅವರು ಎಷ್ಟು ದಿನ ತಂಡದ ಜೊತೆ ಇರುತ್ತಾರೆ ಆ ಅವಧಿಗೆ ಸಂಬಳ ನೀಡಲು ಬಿಸಿಸಿಐ ಮುಂದಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. ಕಳೆದ ವರ್ಷ ಜಹೀರ್ ಖಾನ್ ಅವರು 100 ದಿನಕ್ಕೆ ವಾರ್ಷಿಕವಾಗಿ 4 ಕೋಟಿ ರೂ. ಸಂಭಾವನೆ ನೀಡಬೇಕೆಂದು ಬೇಡಿಕೆ ಇಟ್ಟಿದ್ದರು. ಈ ಬೇಡಿಕೆಯನ್ನು ಬಿಸಿಸಿಐ ತಿರಸ್ಕರಿಸಿತ್ತು.

    ಬ್ಯಾಟಿಂಗ್ ಕೋಚ್, ಆಟಗಾರರಿಗೆ ಸಂಬಳ ಎಷ್ಟು?
    ಟೀಂ ಇಂಡಿಯಾದ ಬ್ಯಾಟಿಂಗ್ ಕೋಚ್ ಸಂಜಯ್ ಬಂಗಾರು ಅವರಿಗೆ ಪ್ರತಿ ತಿಂಗಳು 15 ಲಕ್ಷ ರೂ. ಸಂಬಳವನ್ನು ಬಿಸಿಸಿಐ ನಿಗದಿ ಮಾಡಿದೆ. ಎರಡು ವರ್ಷಗಳ ಕಾಲ ಹಿರಿಯರ ತಂಡದ ಜೊತೆ ಇದ್ದ ಇವರು ಸಂಬಳವನ್ನು ಹೆಚ್ಚಳ ಮಾಡುವಂತೆ ಈ ಹಿಂದೆಯೇ ಮನವಿ ಸಲ್ಲಿಸಿದ್ದರು. ಮಾರ್ಚ್ ನಲ್ಲಿ ಇವರ ಮನವಿ ಪುರಸ್ಕೃತವಾಗಿದ್ದು ಶೇ.50 ರಷ್ಟು ಸಂಬಳ ಏರಿಕೆಯಾಗಿತ್ತು.

    ಈ ಹಿಂದೆ ಇದ್ದ ಬಿಸಿಸಿಐ ಆಡಳಿತ ಮಂಡಳಿ ಶೇ.100 ರಷ್ಟು ಸಂಬಳ ಏರಿಕೆಯ ಪ್ರಸ್ತಾಪನ್ನು ಒಪ್ಪಿತ್ತು. ಆದರೆ ಕಳೆದ ತಿಂಗಳು ಶೇ.25ರಷ್ಟು ಸಂಬಳ ಏರಿಸಲು ಬಿಸಿಸಿಐ ನಿರ್ಧರಿಸಿತ್ತು. ಬಿಸಿಸಿಐ ಈ ನಿರ್ಧಾರಕ್ಕೆ ಸಿಬ್ಬಂದಿಯಿಂದ ವಿರೋಧ ವ್ಯಕ್ತವಾಗಿತ್ತು. ಈಗ ಕೋಚ್ ಅನಿಲ್ ಕುಂಬ್ಳೆ ಸುಪ್ರೀಂ ನೇಮಿಸಿದ್ದ ಆಡಳಿತ ಸಮಿತಿಯ ಜೊತೆ ಸಭೆ ನಡೆಸಿ ಶೇ.50ರಷ್ಟು ಸಂಬಳವನ್ನು ಏರಿಸಿದ್ದರು.

    ಮಾರ್ಚ್ ತಿಂಗಳಿನಲ್ಲಿ ಆಟಗಾರರ ಸಂಭಾವನೆ ಮತ್ತು ಪಂದ್ಯದ ಶುಲ್ಕವನ್ನು ಆಡಳಿತ ಮಂಡಳಿ ದುಪ್ಟಟ್ಟು ಮಾಡಿತ್ತು. 2016ರ ಅಕ್ಟೋಬರ್ 1ರಿಂದ ಪರಿಷ್ಕೃತ ಸಂಭಾವನೆ ಮತ್ತು ಶುಲ್ಕ ಜಾರಿಗೆ ಬರಲಿದೆ.

    ಎಷ್ಟಿತ್ತು? ಈಗ ಎಷ್ಟು ಆಗಿದೆ?
    `ಎ’ ದರ್ಜೆಯಲ್ಲಿರುವ ಆಟಗಾರರು ಈ ಮೊದಲು ಕೋಟಿ ರೂ. ಪಡೆಯುತ್ತಿದ್ದರೆ ಈಗ ಆ ಮೊತ್ತವು 2 ಕೋಟಿ ರೂ.ಗೆ ಏರಿಕೆಯಾಗಿದೆ. ಬಿ ದರ್ಜೆ ಮತ್ತು ಸಿ ದರ್ಜೆಗಳ ಆಟಗಾರರು ಕ್ರಮವಾಗಿ 50 ಲಕ್ಷ ರೂ. ಮತ್ತು 25 ಲಕ್ಷ ರೂ. ಪಡೆಯುತ್ತಿದ್ದರು. ಅವರು ಇನ್ನು ಮುಂದೆ ಕ್ರಮವಾಗಿ 1 ಕೋಟಿ ರೂ. ಮತ್ತು 50 ಲಕ್ಷ ರೂ. ಹಣವನ್ನು ಪಡೆಯಲಿದ್ದಾರೆ.

    ಟೆಸ್ಟ್ ಪಂದ್ಯದಲ್ಲಿ ಆಡುವ ಆಟಗಾರರು ಶುಲ್ಕವನ್ನು 7.50 ಲಕ್ಷದಿಂದ 15 ಲಕ್ಷಕ್ಕೆ ಹೆಚ್ಚಿಸಲಾಗಿದ್ದರೆ, ಏಕದಿನ ಮತ್ತು ಟ್ವೆಂಟಿ 20 ಪಂದ್ಯಗಳಲ್ಲಿ ಆಡುವವರ ಶುಲ್ಕವನ್ನು ಕ್ರಮವಾಗಿ 6 ಲಕ್ಷ ರೂ. ಮತ್ತು 3 ಲಕ್ಷ ರೂ.ಗಳಿಗೆ ಹೆಚ್ಚಿಸಲಾಗಿದೆ.

    ಎ ದರ್ಜೆ:
    ವಿರಾಟ್ ಕೊಹ್ಲಿ, ಮಹೇಂದ್ರಸಿಂಗ್ ಧೋನಿ, ಆರ್. ಆಶ್ವಿನ್, ಅಜಿಂಕ್ಯ ರಹಾನೆ, ಚೇತೇಶ್ವರ್ ಪೂಜಾರ, ರವೀಂದ್ರ ಜಡೇಜ, ಮುರಳಿ ವಿಜಯ್.

    ಬಿ ದರ್ಜೆ:
    ರೋಹಿತ್ ಶರ್ಮಾ, ಕೆ.ಎಲ್. ರಾಹುಲ್, ಭುವನೇಶ್ವರ್ ಕುಮಾರ್, ಮೊಹಮ್ಮದ್ ಶಮಿ, ಇಶಾಂತ್ ಶರ್ಮಾ, ಉಮೇಶ್ ಯಾದವ್, ವೃದ್ಧಿಮಾನ್ ಸಹಾ, ಜಸ್‍ಪ್ರೀತ್ ಬೂಮ್ರಾ, ಯುವರಾಜ್ ಸಿಂಗ್.

    ಸಿ ದರ್ಜೆ:
    ಶಿಖರ್ ಧವನ್, ಅಂಬಟಿ ರಾಯುಡು, ಅಮಿತ್ ಮಿಶ್ರಾ, ಕೇದಾರ್ ಜಾಧವ್, ಯಜುವೇಂದ್ರ ಚಾಹಲ್, ಪಾರ್ಥಿವ್ ಪಟೇಲ್, ಜಯಂತ್ ಯಾದವ್, ಮನೀಷ್ ಪಾಂಡೆ, ಅಕ್ಷರ್ ಪಟೇಲ್, ಕರುಣ್ ನಾಯರ್, ಹಾರ್ದಿಕ್ ಪಾಂಡ್ಯ, ಆಶಿಶ್ ನೆಹ್ರಾ, ಮನದೀಪ್ ಸಿಂಗ್, ಧವಳ್ ಕುಲಕರ್ಣಿ, ಶಾರ್ದೂಲ್ ಠಾಕೂರ್, ರಿಷಭ್ ಪಂತ್.